Pages

Sunday, September 11, 2016

ಮುಕ್ತಿಪಥ



      ಆದಿಗುರು ಶ್ರೀ ಶಂಕರಾಚಾರ್ಯ ವಿರಚಿತ 'ಸಾಧನಾಪಂಚಕಮ್' ಒಬ್ಬ ಸಾಧಕ ಅನುಸರಿಸಬೇಕಾದ ರೀತಿ-ನೀತಿಗಳನ್ನು ತಿಳಿಸುವ ಅಪೂರ್ವ ರಚನೆ. ಪರಮ ಸತ್ಯದ ದರ್ಶನ ಮಾಡಿಸುವ ಶ್ರೇಯಸ್ಕರ, ಸನ್ಮಾರ್ಗದ ಪಥವನ್ನು ತೋರಿಸುವ ಈ ಪಂಚಕದಲ್ಲಿ ಒಂದೊಂದರಲ್ಲಿ 8 ಸೂತ್ರಗಳಂತೆ ಒಟ್ಟು  40 ಸೂತ್ರಗಳನ್ನು ಅಳವಡಿಸಲಾಗಿದೆ. ಇದರ ಕನ್ನಡ ಭಾವಾನುವಾದವನ್ನು ಮೂಢನ ಮುಕ್ತಕಗಳ ರೂಪದಲ್ಲಿ ಸಹೃದಯರ ಮಂದಿಟ್ಟಿರುವೆ. ಮೂಲ ಕೃತಿಯನ್ನೂ ಇಲ್ಲಿ ಅವಗಾಹನೆಗೆ ಮಂಡಿಸಿದೆ.  
     ಮುಕ್ತಿಪಥ 
(ಆದಿಗುರು ಶ್ರೀ  ಶಂಕರಾಚಾರ್ಯರ ಸಾಧನಾ ಪಂಚಕದ 
ಕನ್ನಡ ಭಾವಾನುವಾದ - ಮೂಢನ ಮುಕ್ತಕಗಳ ರೂಪದಲ್ಲಿ)
ನಿತ್ಯ ವೇದಾಧ್ಯಯನ ಮಾಡುವವನಾಗಿ
ವೇದೋಕ್ತ ಕರ್ಮಗಳ ಪಾಲಿಸುವನಾಗಿ |
ಈಶಾರಾಧನೆಯಾಗೆ ಕರ್ಮಗಳು ಸಕಲ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧ || 

ಹಾದಿ ತಪ್ಪಿಸುವ ಕರ್ಮಗಳ ತ್ಯಜಿಸಿ
ಅಂತರಂಗದ ಕೊಳೆಯ ತೊಳೆದುಹಾಕಿ |
ಹೊರಸುಖದ ದೋಷವನು ಗುರುತಿಸುವನಾಗೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೨ ||

ನಿನ್ನ ನಿಜರೂಪವನು ತಿಳಿಯಲೆಣಿಸಿರಲು
ಮೋಹ ಸಂಕಲೆಯ ಕಳೆಯಹೊರಟಿರಲು |
ಜ್ಞಾನಿಗಳ ಸಂಗದಲಿ ನಿಜವನರಿಯುತಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೩ ||

ಪರಮಾತ್ಮನಲಿ ಭಕ್ತಿ ಧೃಢವಾಗಿ ತಾನಿರಲು
ಶಾಂತಿ ಮತ್ತಿತರ ಗುಣಗಳನೆ ಪಡೆದಿರಲು |
ಸ್ವಾರ್ಥಪರ ಕರ್ಮದಲಿ ಆಸಕ್ತಿ ತ್ಯಜಿಸಿದೊಡೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೪ ||

ಸದ್ವಿದ್ಯದಾತರಲಿ ಆಶ್ರಯವ ಪಡೆದಿರಲು
ಸದ್ಗುರು ಪಾದಸೇವೆಯನು ನಿತ್ಯ ಗೈದಿರಲು |
ತಿಳಿಯಲುಜ್ಜುಗಿಸೆ ಓಂಕಾರದರ್ಥವನು 
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೫ ||

ಉಪನಿಷದ್ವಾಕ್ಯಗಳು ಸುಮನನವಾಗಿರಲು
ವಾಕ್ಯಾಂತರಾರ್ಥದ ಜಿಜ್ಞಾಸೆ ಮಾಡುತಲಿ |
ಉನಿಷದ್ವಾಕ್ಯವದೆ ನಿಜಜ್ಞಾನವೆನಿಸಿರಲು
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೬ || 

ವಿತಂಡವಾದದೊಡೆ ಇರಿಸಿ ಅಂತರವ
ಉಪನಿಷತ್ತಿನ ಪಥವೆ ನಿನ್ನ ಪಥವೆನಿಸಿರಲು |
ಬ್ರಹ್ಮಾನುಭವದಲ್ಲಿ ಒಂದಾಗಿ ಸಾಗುತಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೭ ||

ಗರ್ವದಲಿ ಮೆರೆಯದಿರು ಎಂದೆಂದಿಗು
ಶರೀರವಿದು ನೀನಲ್ಲ ನೆನಪಿಟ್ಟಿರು |
ತಿಳಿದವರ ಕೂಡೆ ವಾದವನು ಮಾಡದಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೮ ||

ಹಸಿವು ರೋಗಗಳ ಪರಿಹರಿಸಿಕೊಳಬೇಕು
ದಿನನಿತ್ಯದಾಹಾರ ಔಷಧಿಯೊಲಿರಬೇಕು |
ರುಚಿಯಾದ ಭೋಜನವ ಬಯಸದಿರಲಾಗಿ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೯ || 

ತಾನಾಗಿ ಬಂದುದೇ ಪರಮಾನ್ನವೆನಬೇಕು
ಶೀತೋಷ್ಣ ಆದಿಗಳ ಸಹಿಸಿಕೊಳಬೇಕು |
ಅನುಚಿತ ಮಾತುಗಳನಾಡದಿರೆ ಮನುಜ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೦ || 

ನಿರ್ಲಿಪ್ತಭಾವವನು ಹೊಂದಿದವನಾಗಿ
ನಿಂದಾಪನಿಂದೆಗಳ ಗಣಿಸದಿರಬೇಕು |   
ಏಕಾಂತದಲಿ ಸುಖವನರಸುತಿರಲಾಗಿ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೧ ||

ಪರಮಾತ್ಮನಲಿ ಚಿತ್ತ ಲೀನವಿರಿಸಲುಬೇಕು
ಎಲ್ಲೆಲ್ಲು ಅವನನ್ನೆ ಕಾಣುತಿರಬೇಕು |
ಜಗವಿದು ಮನಸಿನಾಟವೆಂದೆಣಿಸುತಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೨ ||

ಪೂರ್ವಕರ್ಮಗಳ ಫಲವನನುಭವಿಸಬೇಕು
ಒದಗುವ ಫಲದಿಂದ ಹೆದರದಿರಬೇಕು |
ಕರ್ಮಫಲವನನುಭವಿಸಿ ಕಳೆದಿರಲು
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೩ || 

ಬ್ರಹ್ಮಾನುಭವದಲ್ಲಿ ಅಚಲನಾಗಿರುತಿರಲು
ಪರಮಾನಂದವದು ಸನಿಹದಲಿರದೇನು |
ಆದಿಗುರು ಶಂಕರರು ತೋರಿರುವ ಮಾರ್ಗ
ಮನುಜಕುಲಕಿದು ಉತ್ತಮವು ಮೂಢ || ೧೪ ||
-ಕ.ವೆಂ.ನಾಗರಾಜ್.
***************
'ಸಾಧನಾ ಪಂಚಕಮ್'
ವೇದೋ ನಿತ್ಯಮಧೀಯತಾಂ ತದುದಿತಂ ಕರ್ಮ ಸ್ವನುಷ್ಠೀಯತಾಂ
ತೇನೇಶಸ್ಯ ವಿಧೀಯತಾಂ ಅಪಚಿತಿಃ ಕಾಮ್ಯೇ ಮತಿಸ್ತ್ಯಜತಾಮ್ |
ಪಾಪೌಘಃ ಪರುಧೂಯತಾಂ ಭವಸುಖೇ ದೋಷೋsನುಸಂಧೀಯತಾಂ
ಆತ್ಮೇಚ್ಛಾ ವ್ಯವಸೀಯತಾಂ ನಿಜಗೃಹಾತ್ ತೂರ್ಣಂ ವಿನಿರ್ಗಮ್ಯತಾಮ್ || ೧ ||

ಸಂಗಃಸತ್ಸು ವಿಧೀಯತಾಂ ಭಗವತೋ ಭಕ್ತಿರ್ದೃಢಾsಧೀಯತಾಂ 
ಶಾಂತ್ಯಾದಿಃ ಪರಿಚೀಯತಾಂ ದೃಢತರಂ ಕರ್ಮಾಶು ಸನ್ತ್ಯಜ್ಯತಾಮ್ |
ಅದ್ವಿದ್ವಾಬುಪಸೃಪ್ಯತಾಂ ಪ್ರತಿದಿನಂ ತತ್ಪಾದುಕಾ ಸೇವ್ಯತಾಂ
ಬ್ರಹ್ಮೈಕಾಕ್ಷರಮರ್ಥ್ಯತಾಂ ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್ || ೨ ||

ವಾಕ್ಯಾರ್ಥಶ್ಚ ವಿಚಾರ್ಯತಾಂ ಶ್ರುತಿಶಿರಃ ಪಕ್ಷಃ ಸಮಾಶ್ರೀಯತಾಂ
ದುಸ್ತರ್ಕಾತ್ ಸುವಿರಮ್ಯತಾಂ ಶ್ರುತಿಮತಸ್ತರ್ಕೋsನುಸಂಧೀಯತಾಮ್ |
ಬ್ರಹ್ಮಾಸ್ಮೀತಿ ವಿಭಾವ್ಯತಾಂ ಅಹರಹರ್ಗರ್ವಃ ಪರಿತ್ಯಜ್ಯತಾಂ
ದೇಹೇsಹಂ ಮತಿರುಝ್ಯುತಾಂ ಬುಧಜನೈರ್ವಾದಃ ಪರಿತ್ಯಜ್ಯತಾಮ್ || ೩ ||

ಕ್ಷುದ್ ವ್ಯಾಧಿಶ್ಚ ಚಿಕಿತ್ಸ್ಯತಾಂ ಪ್ರತಿದಿನಂ ಭಿಕ್ಷೌಷಧಂ ಭುಜ್ಯತಾಂ
ಸ್ವಾದ್ಯನ್ನಂ ನ ತು ಯಾಚ್ಯತಾಂ ವಿಧಿವಶಾತ್ ಪ್ರಾಪ್ತೇನ ಸಂತುಷ್ಟತಾಮ್ |
ಶೀತೋಷ್ಣಾದಿ ವಿಷಹ್ಯತಾಂ ನ ತು ವೃಥಾ ವಾಕ್ಯಂ ಸಮುಚ್ಚಾರ್ಯತಾಂ
ಔದಾಸೀನ್ಯಮಭೀಷ್ಟತಾಂ ಜನಕೃಪಾನೈಷ್ಠುರ್ಯಮುತ್ ಸೃಜ್ಯತಾಮ್ || ೪ ||

ಏಕಾಂತೇ ಸುಖಮಾಸ್ಯತಾಂ ಪರತರೇ ಚೇತಃ ಸಮಾಧೀಯತಾಂ
ಪೂರ್ಣಾತ್ಮಾ ಸುಸಮೀಕ್ಷತಾಂ ಜಗದಿದಂ ತದ್ಭಾದಿತಂ ದೃಶ್ಯತಾಮ್ |
ಪ್ರಾಕ್ಕರ್ಮ ಪ್ರವಿಲಾಪ್ಯತಾಂ ಚಿತಿಬಲಾನ್ನಾಪ್ಯುತ್ತರೈಃ ಶ್ಲಿಷ್ಯತಾಂ
ಪ್ರಾರಬ್ಧಂ ತ್ವಿಹ ಭುಜ್ಯತಾಂ ಅಥ ಪರಬ್ರಹ್ಮಾತ್ಮನಾ ಸ್ಥೀಯತಾಮ್ || ೫ ||

ಚಿದಾನಂದರೂಪಃ ಶಿವೋ ಹಮ್ , ಶಿವೋಹಮ್

ಶಂಕರರ ಅಹಂ ನಿರ್ವಿಕಲ್ಪೋ..............ಚಿದಾನಂದರೂಪಃ ಶಿವೋ ಹಮ್ , ಶಿವೋಹಮ್

ಶ್ಲೋಕವನ್ನು ಕೇಳುತ್ತಾ ಅದರ ಅರ್ಥದ ಬಗ್ಗೆ ಚಿಂತನೆ ನಡೆಸುತ್ತಾ ಧ್ಯಾನ ಮಾಡಿದಾಗ ನಮ್ಮ ನಿಜ ಅಸ್ತಿತ್ವ ಏನೆಂಬ ಬಗ್ಗೆ ಸ್ವಲ್ಪವಾದರೂ ಅರಿವುಂಟಾಗುತ್ತದೆ.
ಇಂತಾ ಒಂದು ಪ್ರಯೋಗವನ್ನು ಸತತವಾಗಿ ಒಂದು ತಿಂಗಳು ಮಾಡಿ, ನಿಮ್ಮೆಲ್ಲಾ ಯೋಗಾಭ್ಯಾಸವಾದನಂತರ ಏಳು ನಿಮಿಷಗಳ ಈ ಶ್ಲೋಕವನ್ನು ಕೇಳುತ್ತಾ ಧ್ಯಾನಮಾಡಿ. ಧ್ಯಾನದ ಸ್ಥಿತಿಯಲ್ಲಿ ಶ್ಲೋಕದ ಅರ್ಥವನ್ನು ಅರಿತುಕೊಳ್ಳುವ ಪ್ರಯತ್ನವನ್ನು ಮಾಡಿ. ಅಲ್ಪಸ್ವಲ್ಪವಾದರೂ ಅರ್ಥವಾಗದೇ ಇರದು.
ನಾನು ಎಂದರೆ ಕೇವಲ ಶರೀರ, ನಾನು ಎಂದರೆ ಪತ್ನಿಗೆ ಕೇವಲ ಪತಿ, ಮಕ್ಕಳಿಗೆ ಕೇವಲ ತಂದೆ/ತಾಯಿ, ನಾನು ಎಂದರೆ ಕೈ-ಕಾಲು, ರುಂಡ ಮುಂಡಗಳಿರುವ, ಪಂಚೇಂದ್ರಿಯ ಗಳನ್ನು ಹೊಂದಿರುವ, ಮನಸ್ಸು, ಬುದ್ಧಿ, ಅಹಂಕಾರ ವನ್ನು ಹೊಂದಿರುವ ಈ ಶರೀರ............. ಈ ರೀತಿಯ ಭಾವನೆಗಳಿರುವುದರಿಂದ ನಮ್ಮನ್ನು ಅರಿಷಡ್ವರ್ಗಗಳಾದ , ಕಾಮ,ಕ್ರೋಧ,ಲೋಭ, ಮೋಹ, ಮದ ಮತ್ಸರಗಳು ಕಾಡುತ್ತವೆ. ಶರೀರದ ವ್ಯಾಧಿಗಳು ಕಾಡುತ್ತವೆ...ಇಂತಾ ಸ್ಥಿತಿಯಲ್ಲಿ ನಾವು ದೇಹಭಾದಲ್ಲಿದ್ದೀವೆಂದು ಅರ್ಥ.


ಆದರೆ ಇವೆಲ್ಲಾ ಇದ್ದೂ ನನ್ನೊಳಗೆ ಒಂದು ಚೈತನ್ಯವಿದೆ. ಆ ಚೈತನ್ಯವಿಲ್ಲದೆ ಈ ಶರೀರ ಕೊರಡು! ಆ ಚೈತನ್ಯದಿಂದಲೇ ನನ್ನ ಎಲ್ಲಾ ಚಟುವಟಿಕೆಗಳು! ಎಂಬುದರ ಅರಿವುಂಟಾದಾಗ ನನ್ನ ನಿಜಸ್ವರೂಪದ ಅರಿವುಂಟಾಗುತ್ತದೆ. ನನ್ನ ನಿಜಸ್ವರೂಪವೇನು?
ಚಿದಾನಂದರೂಪಃ ಶಿವೋ ಹಮ್ , ಶಿವೋಹಮ್...ಎನ್ನುತಾರೆ ಶಂಕರರು. ನಾನು ಯಾವಾಗಲೂ ಆನಂದ ಸ್ವರೂಪನಾದ ಶಿವನೇ ನಾನು ಎಂಬ ಅರಿವು ಜಾಗೃತವಾದರೆ ನಮ್ಮ ದೇಹಬಾಧೆ ನಮ್ಮನ್ನು ಕಾಡಿಸುವುದಿಲ್ಲ. ವ್ಯಾಧಿ ಶರೀರಕ್ಕೋ? ಮನಸ್ಸಿಗೋ? ನಮ್ಮ ಶರೀರದಲ್ಲಿ ಯಾವುದೇ ನೋವಿರಲಿ ನಮಗೆ ಇಷ್ಟವಾಗುವ ಭಜನೆಯನ್ನೋ, ಹಾಡನ್ನೋ ಕೇಳುತ್ತಾ ಕುಳಿತರೆ ನೋವು ಮರೆತೇ ಹೋಗುತ್ತದೆ. ಹಾಗಾದರೆ ಶರೀರದ ನೋವು ವಾಸಿಯಾಯ್ತೆ. ಇಲ್ಲ. ಅದು ಶರೀರಕ್ಕೆ ಇದ್ದೇ ಇದೆ. ಆದರೆ ನಮ್ಮ ಮನಸ್ಸು ಆ ಕಡೆ ಗಮನ ಕೊಡಲೇ ಇಲ್ಲ. ಪರಿಣಾಮ ನೋವು ನಮ್ಮನ್ನು ಬಾಧಿಸಲೇ ಇಲ್ಲ. ಇನ್ನು ಸಾಕ್ಷಾತ್ ಶಿವನು ನಾನೇ ಎಂಬ ಭಾವ ಬಂದು ಬಿಟ್ಟರೆ ಆಗ ಸಿಗುವ ಆನಂದ ಬಣ್ಣಿಸಲು ಸಾಧ್ಯವಿಲ್ಲ.ಧ್ಯಾನದಿಂದ ಈ ಸ್ಥಿತಿ ಲಭ್ಯವಾಗಬೇಕು. ಆಗ ನಮ್ಮನ್ನು ಯಾವ ರೋಗವೂ ಕಾಡಲಾರದು.