Pages

Monday, April 30, 2012

ಯೋಚಿಸಲೊ೦ದಿಷ್ಟು...೫೦


ಐವತ್ತರ ಸ೦ಭ್ರಮದಲ್ಲಿ ಮತ್ತೊ೦ದಿಷ್ಟು.... ಹೆಚ್ಚು !
ಈ ಸರಣಿಯ ೫೦ ನೇ ಕ೦ತಿನ ಪ್ರಕಟಣೆಗೆ  ಪ್ರೋತ್ಸಾಹ ನೀಡಿ, ಎಲ್ಲಾ ೫೦ ಕ೦ತುಗಳನ್ನೂ  ಹೊಸ ಕ೦ತುಗಳೆ೦ಬ೦ತೆ ಓದಿ, ಅಭಿಪ್ರಾಯಿಸಿದ  ವೇದಸುಧೆಯ ಎಲ್ಲಾ  ಖಾಯ೦ ಹಾಗೂ ಹವ್ಯಾಸೀ   ಓದುಗ ಬಳಗಕ್ಕೆ,  ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಎಲ್ಲಾ ಕ೦ತುಗಳ೦ತೆ ಈ  ಸುವರ್ಣ ಕ೦ತನ್ನೂ ನಿಮ್ಮದೆ೦ಬ೦ತೆ ಓದಿ, ಅಭಿಪ್ರಾಯಿಸಬೇಕೆ೦ದು ಆಶಿಸುವ,
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

“ ನಾನು ಪ್ರಾಣ ತೆರಲು ಸಿಧ್ಧಿನಿರಲಿಕ್ಕೆ ಹಲಾವಾರು ಕಾರಣಗಳಿವೆ, ಆದರೆ ಪ್ರಾಣ ತೆಗೆಯಲು ಸಿಧ್ಧನಿರಲು ಯಾವ ಕಾರಣವೂ ಇಲ್ಲ “ – ಗಾ೦ಧೀಜಿ.
೧) ನಮಗಿರಬೇಕಾದದ್ದು:
ಅ.  ಪರಮಾತ್ನನಲ್ಲಿ ಸ೦ಪೂರ್ಣ ನಿಷ್ಠೆ,                                                     
ಬ. ಆತ್ಮದಲ್ಲಿ ದೃಢತೆ- ಪರಿಪಕ್ವವಾದ ಆಲೋಚನೆ,
ಕ.  ದಿವ್ಯವಾದ ಗುಣ ಹಾಗೂ ಬುಧ್ಧಿ  -  ಶ್ರೇಷ್ಠವಾದ  ಸ೦ಸ್ಕಾರ,
ಡ. ದೃಷ್ಟಿಯಲ್ಲಿ ಪಾವಿತ್ರತೆ,-  ಮಾತಿನಲ್ಲಿ ಮಧುರತೆ,
ಇ.  ಕಾರ್ಯ  ಕೌಶಲ್ಯ,-  ಸರಳ ನೇರ ವ್ಯವಹಾರ,
ಪ. ಸೇವೆಯಲ್ಲಿ ನಮ್ರತೆ- ಸ್ನೇಹದಲ್ಲಿ ಆತ್ಮೀಯತೆ

೨) . ಪ್ರಜ್ಞೆ ಇಲ್ಲಧ ಪ್ರತಿಭೆ – ಗುರಿ ಇಲ್ಲದ ಸಾಧನೆ ಎರಡೂ  ವ್ಯರ್ಥವೇ !
೩. ಗುಣವಿಲ್ಲದ ರೂಪವೂ ವ್ಯರ್ಥವೇ! ಅ೦ತೆಯೇ ಹಣವು ಉಪಯೋಗಕ್ಕೆ ಬಾರದಿದ್ದರೆ ಅಥವಾ ಇದ್ದ ಹಣವನ್ನು ಉಪಯೋಗಿಸದಿದ್ದರೆ ಅದೂ ವ್ಯರ್ಥವೇ !
೪. ಕ್ರೋಧ ಬುಧ್ಧಿಯನ್ನು ನಾಶಗೊಳಿಸಿದರೆ, ಮೋಹವು ಮರ್ಯಾದೆಯನ್ನು ನಾಶಗೊಳಿಸುತ್ತದೆ !
೫. ಲ೦ಚವು ಗೌರವವನ್ನು ನಾಶಗೊಳಿಸಿದರೆ, ಅಹ೦ಕಾರವು ಜ್ಞಾನವನ್ನು ನಾಶಗೊಳಿಸುತ್ತದೆ !
೬. ಮತ್ತೊಬ್ಬರು ನಮ್ಮನ್ನು ಅರಿಯುವುದಕ್ಕಿ೦ತ ಮೊದಲೇ ನಾವೇ ಅವರನ್ನು ಅರಿತುಕೊಳ್ಳುವುದು ಉತ್ತಮ.
೭.  ಆಗುವುದೆಲ್ಲಾ ಒಳ್ಳೆಯದೇ ಆಗುತ್ತದೆ ಎ೦ಬ ನಿಶ್ಚಿ೦ತೆ ನಮ್ಮ  ಜೀವನದ ಮೊದಲ ಆದ್ಯತೆಯಾದಾಗ, ಚಿ೦ತೆಗಳಿಲ್ಲದ ಜೀವನ ನಮ್ಮದಾಗುತ್ತದೆ.
೭. ಪ್ರತಿಭಟನೆ ಸಹ್ಯವೇ! ಆದರೆ ಮತ್ತೊಬ್ಬರನ್ನು ಅಥವಾ ಅವರ ವಸ್ತುಗಳನ್ನು ನಾಶಗೊಳಿಸಿ ಅಲ್ಲ !
೮. ಮೌನ ಮಾತಾದಾಗ ಕಣ್ಣೀರು ಹೆಪ್ಪುಗಟ್ಟುತ್ತದೆ ! ತೀವ್ರ ದು:ಖಿತಗೊ೦ಡಾಗ ಹೆಪ್ಪುಗಟ್ಟಿರುವ ಕಣ್ಣೀರನ್ನು ಮನಸೋ ಇಚ್ಛೆ ಹರಿಯ ಬಿಡಬೇಕು.
೯. ಬಾಳೊ೦ದು ನ೦ದನ.. ಸ೦ತಸ ನೆಲೆ ನಿ೦ತಾಗ ! ಗಳಿಸಿರುವ ಸ೦ತಸವನ್ನು ಕಾಪಿಟ್ಟುಕೊಳ್ಳುವುದು ನಮ್ಮ ಕೈಯಲ್ಲಿದೆ !
೧೦. ಮಕ್ಕಳಿಗೆ ಶಿಸ್ತನ್ನು ಹೇರುವುದು ಉತ್ತಮವೇ! ಆದರೆ ಅವರ ಕೈ-ಕಾಲುಗಳನ್ನು ಸರಪಳಿಯಲ್ಲಿ ಬ೦ಧಿಸಿ ಅಲ್ಲ !
೧೧. ಬೆಳೆಯುವ ಮಕ್ಕಳ ಹಿ೦ದೆ ನಮ್ಮ ತೀವ್ರ ನಿಗಾವಿರಲೇಬೇಕು! ಆದರೆ ಅವರ ಪ್ರತಿಯೊ೦ದೂ ಚಟುವಟಿಕೆಗಳನ್ನು ನಿರ್ಬ೦ಧಿಸಿ ಯಾ ಪ್ರಶ್ನಿಸಿ ಅಲ್ಲ !
೧೨. ಸನ್ನಿವೇಶಗಳಿಗೆ ತಕ್ಕ೦ತೆ ಕೆಲವರ ಮೌನ ಶಾ೦ತಿಯನ್ನು ನೀಡಿದರೆ ಕೆಲವರ ಮೌನ ನೋವನ್ನು ನೀಡುತ್ತದೆ !
೧೩. ಒಮ್ಮೆ ಆಯ್ಕೆ ಮಾಡಿಕೊ೦ಡ ಮೇಲೆ ಹೊ೦ದಿಕೊಳ್ಳಲೇಬೇಕು !
೧೪. ನಮ್ಮೊ೦ದಿಗೆ ನಾವು ಒಳ್ಳೆಯದಾಗಿ ಇರುವುದು  ಒಮ್ಮೊಮ್ಮೆ ಇನ್ನೊಬ್ಬರೊ೦ದಿಗೆ ಒಳ್ಳೆಯತನದಿ೦ದ ವರ್ತಿಸುವುದಕ್ಕಿ೦ತಲೂ ಹೆಚ್ಚು ಕಷ್ಟ !
೧೫. ಎಷ್ಟೇ ನಗುವ ಸನ್ನಿವೇಶಗಳು ಹಾಗೂ ನಗಿಸುವ ಜನರಿದ್ದರೂ ನಮ್ಮೊ೦ದಿಗೆ ಇರಬೇಕಿತ್ತೆ೦ದು ಬಯಸುವ ವ್ಯಕ್ತಿ  ನಮ್ಮ ಜೊತೆ ಇರದಿದ್ದಲ್ಲಿ  ನಾವು ಮನ:ಪೂರ್ವಕವಾಗಿ ನಗಲಾರೆವು ! “ ಅವನು/ಅವಳು/ಅವರು ಇದ್ದಿದ್ದರೆ ಚೆನ್ನಾಗಿತ್ತು “ ಎ೦ಬ ಅನಿಸಿಕೆ ಉ೦ಟಾಗದೇ ಇರದು
೧೬. ನಮ್ಮಲ್ಲಿನ  ಬದಲಾವಣೆಯನ್ನು ಒಪ್ಪಿಕೊ೦ಡಷ್ಟು/ಸಮರ್ಥಿಸಿಕೊ೦ಡಷ್ಟು ಸುಲಭವಾಗಿ ಇನ್ನೊಬ್ಬರಲ್ಲಿನ ಬದಲಾವಣೆ ಹಾಗೂ ಆ ಬದಲಾವಣೆಗಾಗಿ ಅವರ ಸಮರ್ಥನೆಯನ್ನು ನಾವು ಒಪ್ಪಿಕೊಳ್ಳಲಾರೆವು !
೧೭.  ಬದಲಾವಣೆಯೇ ಜಗದ ನಿಯಮವೆ೦ಬ ಅರಿವಿದ್ದರೂ ಬದಲಾವಣೆಯನ್ನು ಸುಲಭವಾಗಿ ನಮ್ಮ ಮನಸು ಒಪ್ಪಿಕೊಳ್ಳುವುದಿಲ್ಲ !
೧೮. ಕೆಲವರು ನಮ್ಮ ಜೀವನದಲ್ಲಿ ಒಳ್ಳೆಯ ಪಾಠವನ್ನು ಕಲಿಸಿದರೆ,  ಕೆಲವರು ಒಳ್ಳೆಯ ನೆನಪುಗಳನ್ನು ಬಿಟ್ಟು ಹೋಗುತ್ತಾರೆ !
೧೯. ಏಕಾ೦ತವನ್ನೇ ಅತಿ ಹೆಚ್ಚಾಗಿ ಅಪ್ಪಿಕೊಳ್ಳುತ್ತಾ  ಹೋದರೆ ಕೆಲವೊಮ್ಮೆ ನಮ್ಮ ನೆರಳೇ ನಮ್ಮನ್ನು ಹೆದರಿಸುತ್ತದೆ !
೨೦. ಮಿತವ್ಯಯಿಗಳಾಗಿರಬೇಕು ಆದರೆ ಜಿಪುಣರಾಗಿರಬಾರದು. ಅ೦ತೆಯೇ ದಾನಿಗಳಾಗಿರಬೇಕೇ ವಿನ: ದಾನದ ಗುಣದಿ೦ದ ದರಿದ್ರರಾಗಬಾರದು !
೨೧. ಅಪಾತ್ರರಿಗೆ ಯಾವ ರೀತಿಯ ದಾನವೂ ಸಲ್ಲದು ! ಪಡೆದುಕೊಳ್ಳುವವನ ಅರ್ಹತೆಯ ಮೇಲೆಯೇ ನಮ್ಮ ದಾನವು ಸಾರ್ಥಕವೆನಿಸಿಕೊಳ್ಳುವುದು !
೨೨. ಶೂರತನವಿರಬೇಕು.. ಶೂರತ್ವದೊ೦ದಿಗೆ ಕಟುಕತನವನ್ನು ಬೆರೆಸಬಾರದು !
೨೩. ಪರರ ಮೇಲಿನ ಅನುಕ೦ಪ ಒಳ್ಳೆಯದೇ . ಆದರೆ ಅದರಿ೦ದಲೇ ನಾವು ಜೀವನದಲ್ಲಿ ಮೋಸಹೋಗಬಹುದು !
೨೪. ತಾಳ್ಮೆ ಒಳ್ಳೆಯದೇ. ಆದರೆ ನಮ್ಮ ಜೀವನವನ್ನೇ ಸುಡುವಷ್ಟು ತಾಳ್ಮೆ ಯಾವ ವಿಚಾರದಲ್ಲಿಯೂ ತೋರಬಾರದು !
೨೫. ಸ್ಠಾನಕ್ಕೆ/ಪದಕ್ಕೆ ನಾವು ಅನಿವಾರ್ಯವಾಗಬೇಕೇ ವಿನ: ಸ್ಠಾನವೇ ನಮ್ಮ ಜೀವನದಲ್ಲಿ ಅನಿವಾರ್ಯವಾಗಬಾರದು !
೨೬ .  ಅವಶ್ಯಕತೆ ಎ೦ಬುದು ಅನಿವಾರ್ಯತೆಯಾದಾಗ ಮನುಷ್ಯ ಆ ಸಾಧನೆಗಾಗಿ ಯಾವ ದಾರಿಯನ್ನು ತುಳಿಯಲೂ ಬೇಸರಿಸುವುದಿಲ್ಲ!
೨೭. ಕುಲವೆ೦ಬ ಕಳೆಯ ಕಲೆಯಿ೦ದ ಬಳಲುತ್ತಿರುವವರಾರೂ ಕುಲೀನರಲ್ಲ ! ( ಮಾಯೆ-೪)
೨೮. “ ಎಷ್ಟು ಮಾಡಿದೆ “ ಎನ್ನುವುದಕ್ಕಿ೦ತಲೂ “ ಏನನ್ನು ಮಾಡಿದೆ “ ಎನ್ನುವುದೇ ಮುಖ್ಯ !
೨೯. ಮತ್ತೊಬ್ಬರನ್ನು ತುಳಿದು ಸಾಧಿಸುವುದೇನೂ ಇಲ್ಲ !   ಬೆ೦ಕಿಯಲ್ಲಿಯೇ  ಹೂವು ಅರಳಬೇಕು !
೩೦.  ಪ್ರಜಾಪೀಡಕರು  ಮತ್ತು ಕೊಲೆಗಡುಕರು  ಒಮ್ಮೆ ಅಜೇಯರಾಗಿ ಕಾಣುತ್ತಾರಾದರೂ, ಅ೦ತಿಮವಾಗಿ ಅವರು ಯಾವಾಗಲೂ ಕೆಳಗೆ ಬೀಳುತ್ತಾರೆ ! ಇತಿಹಾಸದುದ್ದಕ್ಕೂ ಸತ್ಯ ಹಾಗೂ ಪ್ರೇಮದ ಮಾರ್ಗವೇ ಗೆದ್ದಿದೆ ! – ಗಾ೦ಧೀಜಿ

ಯೋಚಿಸಲೊ೦ದಿಷ್ಟು...೫೦

Wednesday, April 25, 2012

ವಾಸ್ತು.                  ಈಗ ವಾರದ ಹಿಂದೆ ನಾನು ನನ್ನ ಮಿತ್ರನ ಜೊತೆ ಮಾತನಾಡುವಾಗ, "ಅವನ ೨೫ ವರ್ಷ ಹಳೆಯ ಮನೆಯನ್ನು ಕೆಡವಿ ಬೇರೆಮನೆ ನಿರ್ಮಾಣ ಮಾಡಬೇಕೆಂಬ ಪ್ರಸ್ತಾಪ ಮನೆಯಲ್ಲಿ ಪ್ರಾರಂಭವಾಗಿದೆ, ಇದು ನನ್ನನ್ನು ಚಿಂತೆಗೆ ಈಡುಮಾಡಿದೆ" ಎಂದು ತನ್ನ ಅಳಲನ್ನು ತೋಡಿಕೊಂಡ.  ಇದಕ್ಕೆ ಏನು ಕಾರಣವೆಂದರೆ "ಒಬ್ಬ ವಾಸ್ತು ಪಂಡಿತರು ಬಂದು ಮನೆಯ ದಿಕ್ಕು, ಮನೆಯೊಳಗಿನ ವಿನ್ಯಾಸ ಸರಿ ಇಲ್ಲವೆಂದು, ಈ ಮನೆಯ ವಾಸ್ತುವನ್ನು ಸರಿಯಾಗಿ ಬದಲಾಯಿಸಿದಲ್ಲಿ ಅರೋಗ್ಯ ನೆಮ್ಮದಿ ಮತ್ತು ಸಂತೋಷ ಸಿಗುವುದೆಂದು ಹೇಳಿಹೋದ ಕ್ಷಣದಿಂದ ನಮ್ಮ ಮನೆಯ ಆರೋಗ್ಯವೇ ಹಾಳಾಗಿ ಹೋಗಿದೆ" ಎಂದು ಮತ್ತೂ ಮಾತು ಸೇರಿಸಿದ.  "ಪ್ರತಿನಿತ್ಯ,  ಮನೆಯನ್ನು ಯಾವಾಗ ಒಡೆಸುವುದು?  ಎಂಬ ಪ್ರಶ್ನೆ ಮನೆಯಲ್ಲಿ ಎಲ್ಲರೂ ಕೇಳುತ್ತಾರೆ.  ಹಣ ಎಲ್ಲಿಂದ ಹೊಂದಿಸುವುದು ಈ ಪ್ರಶ್ನೆಗೆ ಉತ್ತರವಿಲ್ಲ." ಎಂದು ತನ್ನ ಮನೆಯ ವಾತಾವರಣದ ಬಗ್ಗೆ ಬೇಸರದಿಂದ ನುಡಿದ.  ಈ ಮಾತು ಕೇಳಿದ ಮೇಲೆ ನನ್ನ ಮನದಲ್ಲಿ ಹೊರಟ ವಿಚಾರ ಲಹರಿ.
           ಹೌದು! ಈಗ ವಾಸ್ತು ಮತ್ತು ವಾಸ್ತು ಪಂಡಿತರ ಕಾಟ ಸ್ವಲ್ಪ ಜಾಸ್ತಿಯೇ ಎಂದು ಹೇಳಬಹುದು. ಹಲವಾರು ವರ್ಷಗಳಿಂದ ಬದುಕಿ ಬಾಳಿದ ಮನೆಯ ವಾಸ್ತುವಿನ ವಸ್ತುಸ್ತಿತಿ ಇದ್ದಕ್ಕೆ ಇದ್ದಹಾಗೆ ಹೇಗೆ ಬದಲಾಗಲು ಸಾಧ್ಯ? ವಾಸ್ತುವಿನ ಪರಿಣಾಮದಿಂದಾಗಿ ಮನೆಯ ಕಿಟಕಿ ಬಾಗಿಲುಗಳೇ ವೈರಿಗಳಾಗುತ್ತವೆ, ಅಡುಗೆ ಬಚ್ಚಲು ಮನೆಗಳೇ ಪರಮ ದ್ವೇಷಿಗಳಾಗುತ್ತವೆ,  ಮನೆಯ ಗೋಡೆಗಳೇ ಹೆದರಿಕೆ ಹುಟ್ಟಿಸುತ್ತವೆ.  ಬದುಕು ಅಸಹನೀಯವಾಗುತ್ತಿದೆ.   ಈಗ ನಾವು ಒಮ್ಮೆ  ಸಮಾಧಾನ ಚಿತ್ತದಿಂದ ಯೋಚಿಸೋಣ.  ಇದು ಸತ್ಯವೇ? ಇದು ಸಾಧ್ಯವೇ?  ಸತ್ಯವಾದರೆ ಅದೇನು? ಸಾಧ್ಯವಾಗುವುದಾದರೆ ಯಾವುದು? ಈ ಮನೆಯಲ್ಲಿ ಬದಲಾಗಬೇಕಾದದ್ದು ಏನು? ಏಕೆ?  ಆರೋಗ್ಯ, ಸಂಪಾದನೆ, ಸಾಮರಸ್ಯ  ಚೆನ್ನಾಗಿರಬೇಕಾದರೆ ಏನು ಬದಲಾಗಬೇಕು? ಮನೆಯಲ್ಲಿರುವ ಕಿಟಕಿ ಬಾಗಿಲುಗಳೇ? ಈ ಮನೆಯಲ್ಲಿ ಇರುವ ವಾಸ್ತುದೋಷವನ್ನು ಸರಿಪಡಿಸಿದರೆ ಇವೆಲ್ಲವೂ ಸರಿಯಾಗುವುದೆಂಬುವುದು ಯಾವುದರ ಆಧಾರದಲ್ಲಿ ನಿಂತಿದೆ?  ಈಗ ಇಲ್ಲಿ ಕೆಲಸ ಮಾಡಬೇಕಾದದ್ದು ನಮ್ಮ ದೃಢ ಸಂಕಲ್ಪವೋ? ಅಥವಾ ಮನೆಯ ಕಿಟಕಿ ಬಾಗಿಲುಗಳೋ?
                 ಈಗ ಹೀಗೆ ಯೋಚಿಸೋಣ!  ವಾಸ್ತು ಪಂಡಿತರು ಹೇಳುವಂತಹ ಬದಲಾವಣೆಗಳನ್ನು ಮಾಡುವುದೇ ಆದರೆ, ಅಲ್ಲಿ ಆರೋಗ್ಯ, ಸಂಪಾದನೆ ಮತ್ತು ಸಾಮರಸ್ಯ ಹೆಚ್ಚಾಗಬೇಕಲ್ಲವೇ?        ಹಾಗಾದರೆ,  ಇಲ್ಲಿ ನಮ್ಮ ಬುದ್ಧಿಮತ್ತೆ ಮತ್ತು ಪ್ರಯತ್ನ ಬೇಡವೇ? ಬೇಕು ಎನ್ನುವುದಾದರೆ ವಾಸ್ತು ಪಂಡಿತರು ಹೇಳುವ ಬದಲಾವಣೆಗಳ ಮಹತ್ವ ಎಷ್ಟು? ನಮ್ಮ ಪ್ರಯತ್ನ ಮತ್ತು ಬುದ್ಧಿಶೀಲತೆಯ ಮಹತ್ವ ಎಷ್ಟು?   ಪ್ರಯತ್ನ ಮತ್ತು ಬುದ್ಧಿವಂತಿಕೆ ಎಂದೂ ಮುಂದೆ ಸಾಗುವ ಧೀರರು!  ಮಿಕ್ಕದ್ದೆಲ್ಲ ಹಿಂದೆಯೇ! ಒಂದನ್ನು ಗಮನಿಸಬೇಕು, ವಾಸ್ತು ಪಂಡಿತರು ಹೇಳುವ ಹಾಗೆ ಎಲ್ಲವನ್ನು ಮಾಡಿ ಕೆಲಸ ಮುಗಿಯಿತೆಂದು ಕೈ ಕಟ್ಟಿ ಕುಳಿತರೆ ಸಂತೋಷ, ಸಾಮರಸ್ಯ ಅರೋಗ್ಯ ಇತ್ಯಾದಿಗಳೆಲ್ಲ ಮೇಲಿಂದ ಉದುರುವುದಿಲ್ಲ, ಅಥವಾ ವಾಸ್ತು ಪುರುಷ ಎಲ್ಲವನ್ನು ನೀಡುವ ಕಾಮಧೆನುವು ಅಲ್ಲ.ಇದು ಮನನ  ಮಾಡಬೇಕಾದ ಸಂಗತಿ ಎನಿಸುವುದಿಲ್ಲವೇ?
                    ಒಂದು ಮನೆಯನ್ನು ನಿರ್ಮಾಣ ಮಾಡಬೇಕಾದರೆ ಎಲ್ಲೆಲ್ಲಿ ಏನೇನು ಇರಬೇಕು? ಏನು ಇರಬಾರದು? ಎಂಬುದು ಆ ಮನೆಯ ಮಾಲಿಕನ ಸ್ವತಂತ್ರ ವಿಚಾರಕ್ಕೆ ಬಿಟ್ಟ ಸಂಗತಿ.ಎಲ್ಲಿ ನೀರಿನ ತೊಟ್ಟಿ ಇದ್ದರೆ ತನ್ನ ಮನೆಯೊಡತಿಗೆ ಅನುಕೂಲ?  ಎಲ್ಲಿ ಅಡುಗೆ ಮನೆ ಇದ್ದರೆ ಚಂದ? ಎಲ್ಲಿ ರೂಮು ಹಾಲು ಇದ್ದರೆ ಅನುಕೂಲ ಇತ್ಯಾದಿಗಳು ಮನೆಯ ಮಾಲಿಕನ ಅಗತ್ಯ ಮತ್ತು ಇಷ್ಟಕ್ಕೆ ಬಿಟ್ಟ ವಿಷಯ.  ಇಂತಹ ವಿಚಾರದಲ್ಲಿ ಸ್ವಲ್ಪ ಹೀಗೆ ಯೋಚಿಸ ಬಹುದು.ಸೂರ್ಯನ ರಶ್ಮಿ ಯಾವ ಹೊತ್ತಿನಲ್ಲಿ ಎಷ್ಟು ,ಎಲ್ಲಿ ಹೆಚ್ಚು ಬೀಳುತ್ತದೆ? ಯಾವ ದಿಕ್ಕಿನಲ್ಲಿ ಮಳೆಗಾಲದಲ್ಲಿ ಮಳೆಯ ಇರಚಲು ಹೊಡೆಯುತ್ತದೆ? ಯಾವ ದಿಕ್ಕಿನಲ್ಲಿ ಗಾಳಿ ಹೆಚ್ಚು  ಎಂಬುದನ್ನು ಗಮನಿಸಿ, ಇದರಿಂದಾಗುವ ಅನುಕೂಲ, ಅನಾನುಕೂಲ ಗಮನಿಸಿ ಮನೆಯ ವಿನ್ಯಾಸದ ನಿರ್ಧಾರವನ್ನು ಮಾಡಬಹುದು. ಗೃಹ ನಿರ್ಮಾಣದ ಸಮಯದಲ್ಲಿ ಹೆಚ್ಚು ಗಾಳಿ ಬೆಳಕು ಬರುವಂತೆ ಮನೆಯ ಸುತ್ತಲು ಜಾಗ ಬಿಟ್ಟರೆ ಆರೋಗ್ಯಕ್ಕೆ ಒಳ್ಳೆಯದು. ಎಲ್ಲೂ ನೀರು ನಿಲ್ಲದಂತೆ ಹರಿದು ಹೋಗುವ ಅಥವಾ ಇಂಗಿಸುವ ವ್ಯವಸ್ತೆ ಮಾಡಿದರೆ ಸೊಳ್ಳೆ ಮತ್ತು ಇನ್ನಿತರ ಸಾಂಕ್ರಾಮಿಕ ರೋಗದ ಭೀತಿಯಿಲ್ಲ. ಮನೆಯ ಮುಂಭಾಗ  ಹಿಂಭಾಗದಲ್ಲಿ ಗಿಡಗಳನ್ನು ಬೆಳೆಸುವ ಅನುಕೂಲವಾದರೆ ಆರೋಗ್ಯಕ್ಕೆ ಮತ್ತು ಪ್ರಕೃತಿಗೆ ಹಿತಕರ. ಇಂತಹ ಇನ್ನೂ ಹಲವಾರು ವಿಚಾರಗಳ ಬಗ್ಗೆ ಚಿಂತನೆ ನಡೆಸಿ ಅಳವಡಿಸಿಕೊಳ್ಳಲು ಸಾಧ್ಯವಾದರೆ ಅನುಕೂಲ ನಮಗೆ.

                  ಎಲ್ಲಕ್ಕಿಂತ ಹೆಚ್ಚಾಗಿ ಮನೆಯ ಬಗ್ಗೆ ಎಷ್ಟು ಕಾಳಜಿ  ವಹಿಸುತ್ತೆವೋ ಅಷ್ಟೇ ಮನದ ಬಗ್ಗೆಯೂ ಕಾಳಜಿ ಬೇಕು. ಸದ್ಗ್ರುಹವಾಗಬೇಕಾದರೆ  ಸದಾಚಾರ, ಸದ್ವಿಚಾರ, ಸತ್ಯಧರ್ಮ ಪಾಲನೆಯಾಗಬೇಕು.  ನಾವು ಚಿಂತೆಗಿಂತ ಚಿಂತನೆ ಜಾಸ್ತಿ ಮಾಡಬೇಕು. ಅಕ್ಕಪಕ್ಕದವರೊಡನೆ ಮಧುರ ಭಾವನೆ ಇರಬೇಕು. ಮನೆಯ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸದ ಜೊತೆಜೊತೆಗೆ ಒಳ್ಳೆಯ ನಡತೆಯನ್ನು ಕಲಿಸಲು ಸಹಾಯಕವಾಗುವಂತಹ ವಾತಾವರಣ ನಮ್ಮ ಮನೆಯಲ್ಲಿ ಸೃಷ್ಟಿಯಾಗಬೇಕು. ಸ್ನೇಹಭಾವ, ನಿಯಮಪಾಲನೆ, ಸದಾಚಾರ ಇತ್ಯಾದಿಗಳು ನಮ್ಮ ಅರೋಗ್ಯ ಮತ್ತು ಜೀವನೋತ್ಸಾಹವನ್ನು  ಹೆಚ್ಚಿಸುತ್ತದೆ ಎಂಬುದನ್ನು ಮನಗಾಣಬೇಕು. ಯಾವ ಮನೆಯಲ್ಲಿ ಕಷ್ಟ ನಿಷ್ಟುರಗಳಿಲ್ಲ?   ಯಾವ ಮನೆಗಳಲ್ಲಿ ರೋಗ ರುಜಿನಗಳಿಲ್ಲ?  ಯಾವ ಮನೆಗಳಲ್ಲಿ ಸಾವು ನೋವುಗಳಿಲ್ಲ? ಇದನ್ನೆಲ್ಲಾ ಎದುರಿಸುವ ಮನೋಸ್ತೈರ್ಯ ಮತ್ತು ದೃಢ ವಿಶ್ವಾಸ ನಮ್ಮದಾಗಬೇಕು. ಪರಸ್ಪರ ವಿಶ್ವಾಸ ಮತ್ತು ನಂಬಿಕೆಗಳು  ಗಟ್ಟಿಯಾಗಬೇಕು.  ಮೂಡ ನಂಬಿಕೆ ಮತ್ತು ಅಪನಂಬಿಕೆ ನಮ್ಮಿಂದ ದೂರವಾಗಬೇಕು. ಎಲ್ಲಕ್ಕಿಂತ ಮಿಗಿಲಾಗಿ, ಮನೆಯಲ್ಲಿರುವ ಆಚಾರ ವಿಚಾರಗಳು ಮನೆಯ ಒಡತಿಯಾದ   ಗೃಹಣಿ ಮತ್ತು ಗೃಹಸ್ತನ ಧರ್ಮ ಮಾತ್ರ ಸಂತೋಷಮಯ, ಆರೋಗ್ಯವಂತ ಬಾಳಿಗೆ ಅತಿಮುಖ್ಯವೇ ಹೊರತು ನಿರ್ಜೀವವಾದ ಕಿಟಕಿ- ಬಾಗಿಲುಗಳಾಗಲಿ ಅಥವಾ ದಿಕ್ಕಾಗಲಿ ಅಲ್ಲ.

                      ಇದಕ್ಕೆ ನೀವೇನು ಹೇಳುತ್ತಿರಾ?

ಹೆಚ್ ಏನ್ ಪ್ರಕಾಶ್

Monday, April 23, 2012

ಯೋಚಿಸಲೊ೦ದಿಷ್ಟು...೪೯೧. ನಡೆಯಲೇಬೇಕಾದ ವಿಧಿಯನ್ನು ಯಾರೂ ತಪ್ಪಿಸಲಾರರು! ಹಕ್ಕಿಯ ಬಾಲದಲ್ಲಿ ಬೆ೦ಕಿಯಿದ್ದರೆ ಅದು ಎಲ್ಲೆಲ್ಲಿ ಹಾರಿದರೂ ಅಲ್ಲೆಲ್ಲಾ ಅಪಾಯ ತಪ್ಪಿದ್ದಲ್ಲ!
೨.ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ!- ದ.ರಾ.ಬೇ೦ದ್ರೆ
೩. ಅನ್ಯರು ತಪ್ಪು ಕ೦ಡುಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕೆ೦ಬ ಹಠವಾದಿ ಯಾವುದನ್ನೂ ಮಾಡಲಾರ!
೪. ಈ ದೇಶದ ಭವಿಷ್ಯ ದೇಶಭಕ್ತರೆ೦ಬ ದರೋಡೆಕೋರರಿಗೆ ಮೀಸಲಾಗಿದೆ.ಇವರಲ್ಲಿ ಯಾವ ತೆರನ ದರೋಡೆಕೋರರ ಗು೦ಪು ಮು೦ದೆ ಬರುತ್ತದೆ ಎ೦ದು ಹೇಳುವುದು ಕಷ್ಟ!- ಡಾ||ಶಿವರಾಮ ಕಾರ೦ತರು.
೫. ಉರುವಲಿನಲ್ಲಿ ಬೆ೦ಕಿ ಇರುವುದನ್ನು ತಿಳಿದವನು ಜ್ಣ್ಯಾನಿಯಾದರೆ, ಆ ಬೆ೦ಕಿಯನ್ನು ಬಳಸಿಕೊ೦ಡು ಅಡುಗೆ ಮಾಡಿದವನು ವಿಜ್ಣ್ಯಾನಿ!- ಪರಮಹ೦ಸರು
೬. ಹಣದಿ೦ದ ಹಣದ ಹಸಿವು ಹೆಚ್ಚಾಗುತ್ತದೆಯೇ ವಿನ: ತೃಪ್ತಿ ಸಿಗಲಾರದು!
೭. ವ್ಯಥೆ ಪಡುವವನು ಯಾವತ್ತಿಗೂ ವ್ಯಥೆ ಪಡುತ್ತಲೇ ಇರುವನಾದರೆ, ಸ೦ತಸದಿ೦ದಿರುವವನು ಯಾವಾಗಲೂ ಸ೦ತಸದಿ೦ದಲೇ ಇರುತ್ತಾನೆ!
೮.ನಮ್ಮ ಸಾಧನೆ ಜಗತ್ತಿಗೇ ನಮ್ಮನ್ನು ಪರಿಚಯಿಸಿದರೆ, ನಮ್ಮ ವೈಫಲ್ಯವೆ೦ಬುದು ನಮಗೇ ಜಗತ್ತನ್ನು ಪರಿಚಯಿಸುತ್ತದೆ!
೯.  ನಿರಾಶಾವಾದಿಗಳಾಗುವ ಮುನ್ನ ಎಲ್ಲರೂ ಆಶಾವಾದಿಗಳೇ!
೧೦. ಅಸಹಾಯಕ ಪರಿಸ್ಥಿತಿಯನ್ನು ತಲುಪುವುದಕ್ಕಿ೦ತ ಮೊದಲಾದರೂ ನಮ್ಮ ಸಾಮರ್ಥ್ಯದ ಅರಿವು ನಮಗಾಗಲೇಬೇಕು!
೧೧. ಕೊನೆಯಿಲ್ಲದ  ಕನಸುಗಳನ್ನು ಕಟ್ಟಿಕೊ೦ಡರೆ ಮಾತ್ರವೇ “ ನಮ್ಮಿ೦ದೇನೂ ಆಗುವುದಿಲ್ಲ“ ಎ೦ಬ ಪರಿಸ್ಥಿತಿಯನ್ನು  ತಲುಪುವುದಿಲ್ಲ!
೧೨. ನಾವು ಎಷ್ಟೇ ಎತ್ತರವನ್ನು ತಲುಪಿದರೂ  ಆ ಅಗೋಚರ ಶಕ್ತಿಯ ಮು೦ದೆ ಮಕ್ಕಳ ಹಾಗೆ ಕೈಕಟ್ಟಿ ನಿಲ್ಲಲೇಬೇಕು!
೧೩. ಎಲ್ಲರಿಗಿ೦ತಲೂ ತಾನೇ ಹೆಚ್ಚು ಬುಧ್ಧಿವ೦ತನೆ೦ದು ಭಾವಿಸುವವನು ಉಳಿದವರಿಗಿ೦ತಲೂ ಬಲು ಬೇಗ ಮೋಸ ಹೋಗುತ್ತಾನೆ!
೧೪.ಅಹ೦ಕಾರಿಯು ಸದಾ ಸ೦ಶಯದ ಸ್ವಭಾವದವನಾಗಿರುತ್ತಾನೆ.
೧೫. ಖ್ಯಾತಿ ಎನ್ನುವುದು  ಎ೦ದೂ ನೀಗದ ಬಾಯಾರಿಕೆ!

Tuesday, April 17, 2012

ಲೈಂಗಿಕ ಶಿಕ್ಷಣ- ವೇದದಲ್ಲಿ ಏನಿದೆ? - ವೇದಸುಧೆ » Vedasudhe


.

ಲೈಂಗಿಕ ಶಿಕ್ಷಣ- ವೇದದಲ್ಲಿ ಏನಿದೆ? - ವೇದಸುಧೆ » Vedasudhe
[ಈ ಕೊಂಡಿಯಲ್ಲಿ ಶರ್ಮರ ಧ್ವನಿ ಕೇಳಿ]

  ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರು ಅತ್ಯಂತ ಸರಳವಾಗಿ ನೇರವಾಗಿ ವೇದದ ವಿಚಾರಗಳನ್ನು ತಿಳಿಸ ಬಲ್ಲಂತವರು. ವೇದ ಎಂದರೆ ಕೇವಲ ಮಂತ್ರಗಳೇ? ಕೇವಲ ಯಜ್ಞ ಯಾಗಾದಿಗಳಿಗೆ ಮಾತ್ರ ವೇದ ಮಂತ್ರಗಳ ಉಪಯೋಗವೇ?

      ವೇದ ಜ್ಞಾನ ಯಾರಿಗೆ ಬೇಡ? ಸಮಾಜದ ಸ್ವಾಸ್ಥ್ಯ ಕಾಪಾಡಲು ವೇದದಲ್ಲಿ ಹಲವು ಸೂತ್ರಗಳಿವೆ. ವೇದವನ್ನು ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಅದರ ಉಪಯೋಗದ ಅರ್ಥವಾಗುತ್ತೆ. ವೇದಸುಧೆಯಲ್ಲಿ ಶ್ರೀ ಶರ್ಮರು ಮಾನವ ಜೀವನದ ಅಭ್ಯುದಯಕ್ಕೆ ನೆರವಾಗುವ ಅಂಶಗಳನ್ನು ವೇದದ ಆಧಾರದಲ್ಲಿ ಆಗಿದಾಗ್ಗ್ಯೆ ವಿವರಿಸುವರಿದ್ದಾರೆ. ಈಗಾಗಲೇ ಇಂತಹ ಹಲವು ಆಡಿಯೋ ಕ್ಲಿಪ್ ಗಳನ್ನು ನೀವು ಶರ್ಮರ ಪುಟದಲ್ಲಿ ಕೇಳಬಹುದು.ಈ ಸಂಚಿಕೆಯಲ್ಲಿ ಅತ್ಯಂತ ಗಂಭೀರ ಸವಾಲಾಗಿರುವ ಲೈಂಗಿಕ ಶಿಕ್ಲಣದ ಬಗ್ಗೆ ಶ್ರೀ ಶರ್ಮರು ವಿವರಣೆ ನೀಡಿದ್ದಾರೆSaturday, April 14, 2012

ವಿವೇಕ ಚೂಡಾಮಣಿ -ಭಾಗ -೨೦
मूलम् - ಮೂಲ:

अयं स्व्भावस्स्व्त एव यत्पर श्रमापनोदप्रवणं महात्मनाम् ।
सुधांशुरेष स्वयमर्क - कर्कश-प्रभाभितत्पा-मवति क्षितिं किल ॥೩೯।


ಅಯಂ ಸ್ವಭಾವಃ ಸ್ವತ ಏವ ಯತ್ಪರ-ಶ್ರಮಾಪನೋದ -ಪ್ರವಣಂ  ಮಹಾತ್ಮನಾಮ್ |
ಸುಧಾಂಶುರೇಷ ಸ್ವಯಮರ್ಕ-ಕರ್ಕಶ-ಪ್ರಭಾಽಭಿತಪ್ತಾಮವತಿ ಕ್ಷಿತಿಂ ಕಿಲ ||೩೯||

ಪ್ರತಿಪದಾರ್ಥ :

(ಸ್ವತಃ ಏವ = ತಾವಾಗಿಯೇ, ಪರಶ್ರಮಾಪನೋದ-ಪ್ರವಣಂ ಯತ್ = ಇತರರ ಕಷ್ಟ(ಶ್ರಮ)ಪರಿಹಾರದಲ್ಲಿ ಪ್ರವೃತ್ತಿಯು ಯಾವುದೋ, ಅಯಂ = ಇದು ಮಹಾತ್ಮರ, ಸ್ವಭಾವಃ = ಸಹಜಗುಣ, ಅರ್ಕ-ಕರ್ಕಶಪ್ರಭಾ-ಅಭಿತಪ್ತಾಂ = ಸೂರ್ಯನ ಪ್ರಖರವಾದ ಬಿಸಿಲಿನಿಂದ ಬೆಂದಿರುವ, ಕ್ಷಿತಿಂ = ಭೂಮಿಯನ್ನು, ಏಷಃ ಸುಧಾಂಶುಃ = ಈ ಚಂದ್ರಮನು, ಸ್ವಯಂ = ತಾನೇ, ಅವತಿ ಕಿಲ = ರಕ್ಷಿಸುವನಲ್ಲವೆ ? )

ತಾತ್ಪರ್ಯ :

ಇತರರ ಕಷ್ಟವನ್ನು, ಬೇನೆಗಳನ್ನು ಪರಿಹರಿಸುವುದರಲ್ಲಿ ತಾವಾಗಿಯೇ ಮುನ್ನುಗುವುದು ಮುಂದಾಲೋಚಿಸುವುದು ಮಹಾತ್ಮರು ಜ್ಞಾನಿಗಳೆನಿಸಿಕೊಂಡವರ ಸಹಜಗುಣವು.  ನೇಸರನ ತುಂಬ ಚುರುಕಾದ ಬಿಸಿಲಿನಿಂದ ಬೇಯುವ ಭೂಮಿಯನ್ನು ತಿಂಗಳನು ತಾನೇ ತನ್ನ  ಬೆಳಕಿನಿಂದ ತಂಪಾಗಿಸುವುದಿಲ್ಲವೆ ? .

ವಿವರಣೆ :

ಕಬ್ಬಿನಲ್ಲಿ ಸಿಹಿಯು ಏಕಿರಬೇಕು ಎಂಬ ಪ್ರಶ್ನೆಯೇ ಅಸಂಗತವಾಗಿಬಿಡುತ್ತದೆ. ಸಕ್ಕರೆಯಲ್ಲಿ ಸಿಹಿಯ ಕಾರಣವನ್ನು ಹುಡುಕಿದಂತೆ !.  ಕಬ್ಬಿನಲ್ಲಿ ಸಿಹಿಯು ಇರುವುದು ಹುಟ್ಟಿನಿಂದಲೇ ಬಂದುದಾಗಿರುತ್ತದೆ.  ಹಾಗೆಯೇ ಬ್ರಹ್ಮಜ್ಞಾನಿಗಳೆನಿಸಿಕೊಂಡವರು ಲೋಕದ ಸಂಕಟಕ್ಕೆ ತಾವಾಗಿಯೇ ಯಾವ ಪ್ರಚೋದನೆಗೂ ಒಳಗಾಗದೆ ಮರುಗುವ ಮತ್ತು ಕಷ್ಟವನ್ನು ಹೋಗಲಾಡಿಸುವ ಸಹಜಗುಣವನ್ನು ಹೊಂದಿರುತ್ತಾರೆ.

ಆಕ್ಷೇಪ :      ನಿಮಿತ್ತವಿಲ್ಲದೆ ಪ್ರವೃತ್ತಿಯೂ ಇಲ್ಲ ಅಲ್ಲವೆ ?
ಸಮಾಧಾನ : ರವಿ-ಚಂದ್ರರು ಯಾವ ನಿಮಿತ್ತದಿಂದ (ಕಾರಣದಿಂದ) ಧರೆಗೆ ಬೆಳಕನೀಯುತ್ತಿದ್ದಾರೆ ? ಈ ಪ್ರಕ್ರಿಯೆಯು ದಿನವೂ ಅನಿಮಿತ್ತವಾಗಿಯೇ ನೆಡೆಯುತ್ತಿದೆ.

ನೇಸರನ ಪ್ರಖರವಾದ ಕಿರಣಗಳು ಭೂಮಿಯನ್ನು ದಿನವೆಲ್ಲಾ ಕಾಯಿಸಿದರೆ ಇರುಳಿನಲ್ಲಿ ಚಂದ್ರನು ತನ್ನ ಸೊಬಗಿನ ಬೆಳಕಿನಿಂದ ಧರೆಯನ್ನು ತಂಪಾಗಿಸುತ್ತಾನೆ. ಇಬ್ಬರಿಗೂ ಯಾವ ಕಾರ್ಯ-ಕಾರಣಗಳೂ ಇಲ್ಲಿ ಇರುವುದಿಲ್ಲ. ಪ್ರಕೃತಿಯಲ್ಲಿನ ಸಹಜಕ್ರಿಯೆಗಳಂತೆ ಮಹಾತ್ಮರಾದವರೂ ಸಹ ಅನ್ಯರಿಗಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.  ದ.ರಾ. ಬೇಂದ್ರೆಯವರು ಹೇಳುವಂತೆ " ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ " ಎಂಬ ಭಾವವು ಇಲ್ಲಿ ಕಂಡುಬರುತ್ತದೆ. ಕರ್ಮಗಳೆಂಬ ಬಿರುಬಿಸಿಲಿನಲ್ಲಿ ಬೆಂದು ನೊಂದು ಬರುವ ಅಪೇಕ್ಷಿಯನ್ನು, ಜ್ಞಾನಿಯು ತತ್ವವೆಂಬ ತಿಂಗಳ ಬೆಳಕಿನಿಂದ ಸಂತೈಸುತ್ತಾನೆ. ಕಾರಿರುಳೆಂಬ ರಕ್ಕಸಿಯು ತೊಲಗಿದ ನಂತರ ಬೆಳಕೆಂಬ ಅಮೃತವು ಸಹಜವಾಗಿ ಬರುತ್ತದೆ. ಅಜ್ಞಾನವನ್ನು ತೊಡೆದು ಹಾಕುವುದಷ್ಟೇ ಗುರುವಿನ ಕೆಲಸ. ಜ್ಞಾನ ಪ್ರಾಪ್ತಿಯ ನಂತರ ಗುರುವೂ ಇಲ್ಲಿ ನಗಣ್ಯ !. ಇರುಳೇ ಇರದಿದ್ದರೆ ’ಹಗಲು ಬರುತ್ತದೆ’ ಎಬುದಕ್ಕೆ ಅರ್ಥವುಂಟೆ ? . ಮುಂದಿನದೆಲ್ಲವೂ ಸ್ವಾನುಭವದಿಂದಲೆ ಬರುವಂತಹುದು. ಜ್ಞಾನಿಗೆ ಯಾವ ನಿಮಿತ್ತವೂ ಇರುವುದಿಲ್ಲ.  ಮಾಗಿದ ಹಣ್ಣು ತಂತಾನೇ ಬೀಳುವಂತೆ ಮಹಾತ್ಮರೂ ಸಹ ಅನಿಮಿತ್ತವಾಗಿ ಲೋಕವನ್ನು ರಕ್ಷಿಸುತ್ತಾರೆ ಎಂದು ಆಚಾರ್ಯರು ವಿವರಿಸಿರುತ್ತಾರೆ.

मूलम् - ಮೂಲ

ब्रम्हानन्द-रसानुभूति-कलितैः पूतैः सुशीतैः सितैः
युष्मद्वाक्कल शोज्झितैः श्रुतिसुखैः वाक्यामृतैः सेचय ।
संतप्तं भवतापदावदहन-ज्वालाभिरेनं प्रभो
धन्यास्ते भवदिक्षण-क्षणगतेः पात्रिकृताः स्वीकृताः ॥४೦॥

ಬ್ರಹ್ಮಾನಂದ- ರಸಾನುಭೂತಿ-ಕಲಿತೈಃ ಪೂತೈಃ ಸುಶೀತೈರ್ಹಿತೈಃ(ಸಿತೈಃ)
ಯುಷ್ಮದ್-ವಾಕ್ಕಲಶೋಜ್ಝಿತೈಃಶ್ರುತಿಸುಖೈರ್ವಾಕ್ಯಾಮೃತೈಃ ಸೇಚಯ|
ಸಂತಪ್ತಂ ಭವತಾಪ -ದಾವದಹನ -ಜ್ವಾಲಾಭಿರೇನಂ ಪ್ರಭೋ
ಧನ್ಯಾಸ್ತೇ ಭವದೀಕ್ಷಣ -ಕ್ಷಣಗತೇಃ ಪಾತ್ರೀಕೃತಾಃ ಸ್ವೀಕೃತಾಃ || ೪೦||

ಪ್ರತಿಪದಾರ್ಥ :

(ಪ್ರಭೋ = ಹೇ ಗುರುವೆ, ಭವತಾಪ-ದಾವದಹನ-ಜ್ವಾಲಾಭಿಃ= ಸಂಸಾರವೆಂಬ ಕಾಳ್ಗಿಚ್ಚಿನ ಜ್ವಾಲೆಗಳಿಂದ, ಸಂತಪ್ತಂ = ಬೆಂದಿರುವ, ಏನಂ = ಈ (ನನ್ನನ್ನು), ಬ್ರಹ್ಮಾನಂದ -ರಸಾನುಭೂತಿ-ಕಲಿತೈಃ = ತನ್ನರಿವಿನ (ಬ್ರಹ್ಮಾನಂದದ) ಅನುಭವದಿಂದ ಕೂಡಿರುವ- ಮಧುರವಾಗಿರುವ, ಪೂತೈಃ= ಅಪ್ಪಟವಾದ(ಶುದ್ಧವಾದ), ಸುಶೀತೈಃ = ತಂಪಾಗಿರುವ (ಶೀತಲವಾಗಿರುವ), ಹಿತೈಃ = ಒಳ್ಳೆಯದಾದ(ಹಿತವಾಗಿರುವ), ಯುಷ್ಮತ್-ವಾಕ್-ಕಲಶ-ಉಜ್ಝಿತೈಃ = ನಿಮ್ಮ ಮಾತುಗಳೆಂಬ ಕಲಶದಿಂದ ಹೊರಹೊಮ್ಮಿರುವ, ಶ್ರುತಿಸುಖೈಃ = ಕೇಳಲು ಇಂಪಾಗಿರುವ, ವಾಕ್ಯಾಮೃತೈಃ = ನಲ್ನುಡಿಗಳೆಂಬ ಅಮೃತಧಾರೆಗಳಿಂದ, ಸೇಚಯ = ತೋಯಿಸು (ಚಿಮುಕಿಸು), ಭವತ್-ಈಕ್ಷಣ-ಕ್ಷಣ-ಗತೇ = ನಿನ್ನ ಕಟಾಕ್ಷದ ಕ್ಷಣಮಾತ್ರ -ಪ್ರಸರಣೆಗೆ, ಪಾತ್ರೀ-ಕೃತಾಃ = ಪಾತ್ರರಾಗಿರುವ, ಸ್ವೀಕೃತಾಃ = ಒಪ್ಪಿಗೆಯಾಗಿರುವ, ತೇ = ಅವರು(ಅಪೇಕ್ಷಿಯು), ಧನ್ಯಾಃ = ಧನ್ಯರು.)

ತಾತ್ಪರ್ಯ :

ಹೇ ಗುರುವೆ, ಸಂಸಾರತಾಪತ್ರಯವೆಂಬ ಕಾಳ್ಗಿಚ್ಚಿನಿಂದ ಬೆಂದಿರುವ ನೊಂದಿರುವ ನನ್ನನ್ನು ಬ್ರಹ್ಮಾನಂದ -ರಸಾನುಭವದಿಂದ ಕೂಡಿರುವ ಮಧುರವಾಗಿರುವ ಕೇಳಲು ಇಂಪಾಗಿರುವ ನಿಮ್ಮ ಮಾತೆಂಬ ಕಲಶದಿಂದ ಹೊರಹೊಮ್ಮಿರುವ ನಲ್ನುಡಿಗಳಿಂದ-ಉಪದೇಶಾಮೃತದಿಂದ ತೋಯಿಸಿರಿ-ಚಿಮುಕಿಸಿರಿ; ಇಂತಹ ನಿಮ್ಮ ಕಟಾಕ್ಷದ ಕ್ಷಣಮಾತ್ರದ ಪ್ರಸರಣೆಗೆ ಪಾತ್ರರಾಗಿ ಒಪ್ಪಿಗೆಯಾಗಿರುವವರೇ ಧನ್ಯರು !.

ವಿವರಣೆ :

ಹೀಗೆ ಶಿಷ್ಯನಾಗುವವನು ಗುರುವಿನ ಮುಂದೆ ನಿವೇದಿಸಿಕೊಳ್ಳುತ್ತಾ ತನ್ನನ್ನು ಸಂಸಾರದ ಜಂಜಡಗಳಿಂದ ಪಾರುಮಾಡಿ ಎಂದು ಕೇಳಿಕೊಳ್ಳುತ್ತಾನೆ. ಆ ಗುರುವಾದರೂ ಸ್ವತಃ ಬ್ರಹ್ಮಜ್ಞಾನಿಯೇ ಆಗಿರುತ್ತಾನೆ. ಬ್ರಹ್ಮಾನಂದದ ರಸಾನುಭವದಲ್ಲಿ ಮಿಂದಿರುತ್ತಾರೆ. ಗುರುವಿನ ತತ್ವೋಪದೇಶವು ಇಂಪಾದ ಸಂಗೀತದಂತಿರುತ್ತದೆ. ಇಂತಹ ಉಪದೇಶಾಮೃತವನ್ನು ನನಗೆ ಚಿಮುಕಿಸಿ ಎಂದು ಅಪೇಕ್ಷಿಯು ವಿನಂತಿಸುತ್ತಾನೆ. ಇಂತಹ ಕ್ಷಣಮಾತ್ರದ ಘಟನೆಗೆ ಪಾತ್ರರಾಗುವವರೇ ಧನ್ಯರು ಎಂದು ಆಚಾರ್ಯರು ವಿವರಿಸುತ್ತಾರೆ. ಗುರೂಪದೇಶವು ಅಜ್ಞಾನವನ್ನು ತೊಡೆದು ಹಾಕುವುದರಿಂದ ಅದು ಅಪ್ಪಟವಾದು (ಪೂತೈಃ) ಅಥವಾ ಪವಿತ್ರವಾದುದು ಮತ್ತು ರಜಸ್ಸು ಮತ್ತು ತಮಸ್ಸನ್ನು ಹೋಗಲಾಡಿಸಿ ಸತ್ವಗುಣಮಾರ್ಗವೊಂದನ್ನೆ ಹೊಂದಿಸುವುದರಿಂದ ಅದು ನಿರ್ಮಲವಾದುದು (ಸಿತೈಃ) ಎಂದು ಶ್ರೀ ಚಂದ್ರಶೇಖರ ಭಾರತಿಗಳು ವ್ಯಾಖ್ಯಾನಿಸಿರುತ್ತಾರೆ.
ಬ್ರಹ್ಮಜ್ಞಾನಕ್ಕೆ ಸ್ವಾನುಭವವೇ ಮುಖ್ಯವಾದರೂ ಗುರುವಿಲ್ಲದ ಗುರೂಪದೇಶವಿಲ್ಲದ ಜ್ಞಾನವು ವ್ಯರ್ಥವೆಂದೇ ತಿಳಿಯಬೇಕಾಗುತ್ತದೆ. ಗುರುವು catalyst (ವೇಗವರ್ಧಕ) ನಂತೆ ಕಾರ್ಯ ನಿರ್ವಹಿಸುತ್ತಾರೆ. ಉಪದೇಶವು ಮುಗಿದ ನಂತರ ಶಿಷ್ಯನು ಜ್ಞಾನಿಯೇ ಆಗಿರುತ್ತಾನೆ. ಶ್ರವಣಮಾತ್ರದಿಂದಲೇ (ಶ್ರುತಿ ಸುಖೈಃ) ಬ್ರಹ್ಮದ ಆನಂದವು ಲಭಿಸುವುದರಿಂದ ಮುಂದೆ ಉಪದೇಶದ ಅಗತ್ಯವಿಲ್ಲದೆ ಮನನ ಮತ್ತು ನಿಧಿಧ್ಯಾಸನಗಳಿಂದ ಬ್ರಹ್ಮದ ಅನುಭವವನ್ನು ಪಡೆಯುತ್ತಾನೆ ಎಂದು ಆಚಾರ್ಯರು ವಿವರಿಸುತ್ತಾರೆ.
ಗುರೂಪದೇಶವೆಂದರೆ ವೇದಾಂತದ ಅರ್ಥ ವಿಚಾರಗಳನ್ನು ತಿಳಿಯುವುದು ಚರ್ಚಿಸುವುದು ಮತ್ತು ಜ್ಞಾನಪ್ರಾಪ್ತಿಯ ನಂತರ ವಿಚಾರ-ಚರ್ಚೆಗಳನ್ನು ಬದಿಗಿಟ್ಟು ಬ್ರಹ್ಮಾನುಭವದಲ್ಲಿ ತೊಡಗುವುದು ಎಂದು ಹೇಳುತ್ತಾರೆ.
"ವೇದಾಂತದ ಅರಿವಿಲ್ಲದ ಜ್ಞಾನವೂ ವ್ಯರ್ಥ ಜ್ಞಾನಪ್ರಾಪ್ತಿಯ ನಂತರ ವೇದಾಂತವೂ ವ್ಯರ್ಥ" ಎಂದು ರಮಣಮಹರ್ಷಿಗಳು ಒಂದೆಡೆ ಹೇಳುತ್ತಾರೆ. (’ಜ್ಞಾನ ಬಂದಮೇಲೆ ವೇದಾಂತ ಏಕಪ್ಪಾ ? ತಲೆ ಚಚ್ಕೋಳೋಕೆ !’ ಎನ್ನುತ್ತಾರೆ ರಮಣರು) .
ಆಚಾರ್ಯರು ಜ್ಞಾನದ ಪಾರಮ್ಯದಲ್ಲಿ ಕರ್ಮವನ್ನು ಕಡೆಗಣಿಸಿದ್ದಾರೆ ಎಂಬ ಆಕ್ಷೇಪಗಳು ಅಲ್ಲಲ್ಲಿ ಬರುತ್ತಿರುತ್ತದೆ. ವಾಸ್ತವದಲ್ಲಿ ಶಂಕರರು ಕರ್ಮಕ್ಕೆ ಸಲ್ಲಬೇಕಾದ ಎಲ್ಲ ಗೌರವವನ್ನೂ ನೀಡಿದ್ದಾರೆ. ಅದನ್ನು ಆಚಾರ್ಯರ ಕೃತಿಗಳ ಅಧ್ಯಯನದಿಂದಲೇ ಕಂಡುಕೊಳ್ಳಬಹುದು. ಕರ್ಮದಲ್ಲಿ ಹೊಂದಾಣಿಕೆಯು ಬರುವಂತೆ ಜ್ಞಾನದಲ್ಲಿ ಯಾವ ಹೊಂದಾಣಿಕೆಯೂ ಬರುವುದಿಲ್ಲ.  ಪಕ್ಕದ ಮನೆಯವರು ತಿರುಪತಿಗೆ ಹೊರಟಿದ್ದಾರೆ ಎಂದರೆ ನಾವೂ ನೂರು ರೂಪಾಯಿ ಕೊಟ್ಟು ನಮ್ಮದೂ ಒಂದು ನಮಸ್ಕಾರ ಹಾಕಿ ಬನ್ನಿ ಎಂದು ಸವರಿಸಿ ಕುಳಿತಲ್ಲೇ ಗೋವಿಂದ ಎನ್ನಬಹುದು !. ಹಿರಿಯರ ಕಾರ್ಯಗಳನ್ನು ಮಾಡುವಾಗ (ಶ್ರಾದ್ಧಾದಿಗಳು) ಅನಿರ್ವಾಹ ಪಕ್ಷದಲ್ಲಿ ಸಂಬಂಧಿಕರಿಂದ ಅಂತಹ ಕರ್ಮಗಳನ್ನು ಮಾಡಿಸುವ ಅವಕಾಶವೂ ಉಂಟು. ಪಕ್ಕದಲ್ಲಿ ಇರದಿದ್ದರೂ ಅವರ ಹೆಸರು-ಕುಲ-ಗೋತ್ರಗಳನ್ನು ಹೇಳಿ ಕಾರ್ಯಗಳನ್ನು ನೆಡೆಸಬಹುದು ನೆಡೆಯಿಸುತ್ತಿದ್ದೇವೆ. ಇಂತಹ ಹೊಂದಾಣಿಕೆಗಳ ಗೊಂದಲದಲ್ಲಿ ಕರ್ಮದ ಬಲವು ಕಡಿಮೆಯಾಗುತ್ತದೆ. ಆದರೆ ಜ್ಞಾನವು ವಿಚಾರದಿಂದ ಮತ್ತು ಸ್ವಾನುಭದಿಂದ ಮಾತ್ರವೇ ಬರುವಂತಹುದಾದುದರಿಂದ ಹೊಂದಾಣಿಕೆಯ ಪ್ರಶ್ನೆಯೇ ಬರುವುದಿಲ್ಲ. ಹೋಟೆಲಿನ ಮಾಣಿಯು ಬಗೆಬಗೆಯ ತಿನಿಸುಗಳ ಪಟ್ಟಿಯನ್ನು ವದರಿದ ಮಾತ್ರಕ್ಕೆ ನಮ್ಮ ಹೊಟ್ಟೆ ತುಂಬಿಬಿಡುತ್ತದಯೆ ? ನಾವೇ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕಾಗುತ್ತದೆ.  ವದರುವ ಕೆಲಸವನ್ನು ಯಾರು ಬೇಕಾದರೂ ಮಾಡಬಹುದು ಆದರೆ ತಿನ್ನುವುದು ಮಾತ್ರ ಸ್ವಾನುಭವದ ಕೆಲಸ !.

ಮುಂದೆ ಗುರು-ಶಿಷ್ಯರ ಸಂವಾದದ ಮೂಲಕ ಬ್ರಹ್ಮವಿದ್ಯೆಯ ಆರಂಭವನ್ನು ತಿಳಿಯೋಣ.

ವಂದನೆಗಳು.

Thursday, April 12, 2012

          ಈಗಾಗಲೇ ರಾತ್ರಿ ಗಂಟೆ  ಎಂಟು ಮುಕ್ಕಾಲು . ನನಗೆ ಆಶ್ಚರ್ಯವಾಗ್ತಿದೆ, ವೇದಸುಧೆಯಲ್ಲಿ ಇಂದು ಯಾರೂ ಏನೂ  ಬರೆದಿಲ್ಲ. ಆದರೆ ಈವರಗೆ ಇಂದು ಒಂದುನೂರ ಇಪ್ಪತ್ತೊಂದು     ಜನ ವೇದಸುಧೆಯನ್ನು ವೀಕ್ಷಿಸಿದ್ದಾರೆ. ಈಗ ಏಳು ಜನರು ವೀಕ್ಷಿಸುತ್ತಾ ಇದ್ದಾರೆ. ನನಗೆ ಇನ್ನು ಸಾಮಾನ್ಯವಾಗಿ ಒಂದು ತಿಂಗಳು ಪುರಸೊತ್ತು ಇರುವುದಿಲ್ಲ. ಮಗನ ಮದುವೆ  ಒತ್ತಡಗಳು. ಏನಾದರೂ ಶೆಡ್ಯೂಲ್ ಮಾಡೋಣ ಎಂದರೆ ಆ ಸೌಕರ್ಯ ಬ್ಲಾಗಿಗಿಲ್ಲ.  ವೇದಸುಧೆ  ವೆಬ್ ಸೈಟ್ ನಲ್ಲಾದರೂ  ಕಗ್ಗದ ಒಂದೊಂದು ಮುಕ್ತಕಗಳನ್ನಾದರೂ ಕೇಳಿಸುವ ಅವಕಾಶ ಮಾಡಿದ್ದೇನೆ. ಅದಕ್ಕಾಗಿ  ಯಾವ  ದೊಡ್ಡ  ಪ್ರಯತ್ನ ಮಾಡಬೇಕಾಗಿರಲಿಲ್ಲ.  ಮೂರು ನಾಲ್ಕು ನಿಮಿಷಗಳ ಆಡಿಯೋ ಆದರೂ ಕೂಡ ಅಗತ್ಯವಾಗಿ ಕೇಳಲೇ ಬೇಕಾಗಿರುವ  ಆಡಿಯೋ ಗಳನ್ನೂ  ವೇದಸುಧೆ ಡಾಟ್ ಕಾಂ ನಲ್ಲಿ  ಶೆಡ್ಯೂಲ್ ಮಾಡಿರುವೆ.  ಇಲ್ಲಿ  ನನ್ನಿಂದ  ಇನ್ನು ಒಂದು ತಿಂಗಳು ಅಪರೂಪಕ್ಕೆ  ಒಂದೊಂದು ಪೋಸ್ಟ್  ಪ್ರಕಟವಾಗಬಹುದು. ಇನ್ನುಳಿದ ಲೇಖಕರು ಮನಸ್ಸು ಮಾಡಿದರೆ ಅವರ ಲೇಖನಗಳು ಪ್ರಕಟವಾಗಬಹುದು. ಆದರೂ ಆಸಕ್ತಿಯಿಂದ ವೀಕ್ಷಿಸುತ್ತಿರುವ  ವೇದಸುಧೆಯ  ಹಿತೈಷಿಗಳಿಗೆ  ಈ ಒಂದು ತಿಂಗಳು ನನ್ನಿಂದ ಅಷ್ಟಾಗಿ  ನೀಡಲು ಸಾಧ್ಯವಾಗಲಾರದು. ಆದಕ್ಕಾಗಿ ನಿಮ್ಮಲ್ಲಿ ಕ್ಷಮೆ ಕೋರುತ್ತಾ, ನಿಮ್ಮ ಸಹಕಾರ ಎಂದಿನಂತಿರಲಿ, ಎಂದು ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇನೆ.
-ಹರಿಹರಪುರಶ್ರೀಧರ್
ಸಂಪಾದಕ 

Tuesday, April 10, 2012

ಆ ಹುಡುಗರೆಲ್ಲಾ ಮೂವತ್ತು ವರ್ಷದ ಒಳಗಿನವರು!

ಆ ಹುಡುಗರೆಲ್ಲಾ ಮೂವತ್ತು ವರ್ಷದ ಒಳಗಿನವರು.ಮದುವೆ ಮನೆಯಲ್ಲಿ ಹರಟೆ ಹೊಡೀತಾ ಕುಳಿತಿದ್ದರು. ಬೇಡವೆಂದರೂ ಹರಟೆಯ ಮಾತುಗಳು ನನ್ನ ಕಿವಿಯಮೇಲೂ ಬೀಳುತ್ತಿತ್ತು. ಅಷ್ಟು ಜೋರಾಗಿತ್ತು. ಒಬ್ಬ ಹೇಳ್ತಾನೆ" ನಮ್ಮ ದೇಶ 400 ವರ್ಷದಷ್ಟು ಹಿಂದುಳಿದಿದೆ. ಫಾರಿನ್ ಕಂಟ್ರೀಸ್ ಎಷ್ಟು ಮುಂದುವರೆದಿವೆಗೊತ್ತಾ? ನಮ್ಮ ದೇಶದಲ್ಲಿ ಹೆಚ್ಚೆಂದರೆ 100 ಕಿಲೋ ಮೀಟರ್ ಸ್ಪೀಡ್ ನಲ್ಲಿ ಕಾರ್ ಓಡಿಸಬಹುದು. ಫಾರಿನ್ ಕಂಟ್ರೀಸ್ ನಲ್ಲಿ 400-500 ಕಿಲೋ ಮೀಟರ್ ಸ್ಪೀಡ್ ನಲ್ಲಿ ಹೋಗಬಹುದು ಗೊತ್ತಾ? ಅಮೇರಿಕಾ ನೋಡ್ರೀ, ಜಪಾನ್ ನೋಡ್ರೀ, ಚೈನಾ............
ನಮ್ಮ ದೇಶದಷ್ಟು ಗಲೀಜ್ ದೇಶ ಇನ್ನೊಂದಿಲ್ಲ. ನಾನ್ ಸೆನ್ಸ್. ಎಲ್ಲಿಂದರಲ್ಲಿ ಕಸಾ ಹಾಕ್ತಾರೆ. ಉಗುಳ್ತಾರೆ, ಛೇ! ಛೇ!!
ನನಗೆ ನಾನು ಇಂಡಿಯನ್ ಅನ್ನೋಕೆ ನಾಚಿಕೆ ಯಾಗುತ್ತೆ!!
ಅಲ್ಲಿಯವರೆಗೆ ನನಗೂ ಅವರ ಮಾತಿಗೂ ಸಂಬಂಧ ಇಲ್ಲಾ ಅಂತಾ ಕುಳಿತಿದ್ದವನಿಗೆ ಅವನ ಕೊನೆ ಸಾಲು ಕೇಳಿದ ತಕ್ಷಣ ನನ್ನ ಕೋಪ ನೆತ್ತಿಗೇರಿತು...ತಡೆಯಲಾಗಲಿಲ್ಲ...
ರೀ ಮಿಸ್ಟರ್, ಸಾಕ್ ಮಾಡ್ರೀ. ಎಲ್ಲಾ ಕಿವಿ ನೆಟ್ಟಿಗೆ ಮಾಡಿಕೊಂಡ್ ಕೇಳ್ತಾ ಇದಾರೆ ಅಂತಾ ಬಾಯಿಗೆ ಬಂದಹಾಗೆ ಮಾತನಾಡ್ ತಿದೀ ರಲ್ರೀ, ನಮ್ಮ ದೇಶದ ನ್ಯೂನತೆಗಳ ಪಟ್ಟಿ    ನಿಮ್ಮ ಹತ್ತಿರ ಇರೋಹಾಗೆ, ನಮ್ಮ ದೇಶದ ವೈಭವದ ಬಗ್ಗೆ ನಿಮಗೆ ಏನಾದ್ರೂ ಗೊತ್ತಿದೆ ಏನ್ರೀ?


ಅಲ್ಲಾ ಸಾರ್, ನನಗೆ ಬೇರೆ ದೇಶ ನೋಡೀ ನಮ್ಮ ದೇಶದ ಬಗ್ಗೆ ಒಂತರಾ ಗಿಲ್ಟೀ  ಫೀಲಿಂಗ್ ಇದೆ ಸಾರ್....


" ರೀ ಯಾವ ದೇಶದ ಬಗ್ಗೆ ಇಡೀ ಪ್ರಪಂಚ ನಮಗೆ ಏನಾದ್ರೂ ಇಲ್ಲಿ ಸಿಗುತ್ತಾ ಅಂತಾ ಕಾತುರದಿಂದ ಕಾಯ್ತಾ ಇದೆ! ಅಂತಾ ದೇಶದ ಬಗ್ಗೆ ನಿಮಗೆ ನಾಚಿಕೆ ಯಾಗುತ್ತಾ?


ಏನ್ಸಾರ್ ಅಂತಾದ್ದು?


" ಅದು ನಮ್ಮ ಸಂಸ್ಕೃತಿ, ಪರಂಪರೆ" ಎಷ್ಟು ದೇಶಗಳಿಂದ ನಮ್ಮ ದೇಶಕ್ಕೆ ಬಂದು " ನಮಗೆ ವೇದ ಕಲಿಸಿಕೊಡಿ. ಯೋಗ ಕಲಿಸಿ ಕೊಡಿ, ಸಂಸ್ಕೃತ ಕಲಿಸಿಕೊಡಿ, ಅಂತಾ ...ಬಾಯ್ ಬಾಯ್ ಬಿಡ್ತಾ ಇದಾರೆ! ಗೊತ್ತಾ ?!
ನೀವು ನಮ್ಮ ದೇಶದ ಬಗ್ಗೆ ಇಷ್ಟು ತೆಗಳ್ತಾ ಇದೀರಲ್ಲಾ, ಅದರ ಪರಿಹಾರಕ್ಕೆ ನೀವೇನು ಮಾಡಿದೀರಿ?


ಅಷ್ಟು ಹೊತ್ತಿಗೆ ಯಾಕೋ ತಮ್ನ್ನ ತಪ್ಪಿನ ಅರಿವು ಅವನಿಗಾಗಿತ್ತೆಂದು ಕಾಣುತ್ತೆ ಅವನ ಗುಂಪೆಲ್ಲಾ ಬಾಯ್ ಮುಚ್ಚಿದ್ದರು. ಕೊನೆಗೆ ಆ ಹುಡುಗ ಹೇಳಿದ " ನಾನು ನನ್ನ ದೇಶಕ್ಕೆ ಏನು ಮಾಡ್ತೀನಿ, ಅಂತಾ ಮಾಡಿದ ಮೆಲೆ ನಿಮಗೆ ಹೇಳ್ತೀನಿ, ಸಾರ್. ನನಗೆ ನಿಜವಾಗಿ ನಮ್ಮ ದೇಶಕ್ಕೆ ಏನಾದ್ರೂ ಒಳ್ಳೆಯದು ಮಾಡಬೇಕೆಂಬ ಆಸೆ ಇದೆ."


..............


ಯಾಕೋ ನನ್ನ ಮಾತು ಸ್ವಲ್ಪ ಗಟ್ಟಿಯಾಯ್ತು, ಎನಿಸಿ ಸುಮ್ಮನಾದೆ. ಪಾಪ! ಇಡೀ ದಿನ ಆ ಹುದುಗ ಏನೋ ತಪ್ಪು ಮಾಡಿಬಿಟ್ಟೆ , ಅಂತಾ ಸಪ್ಪ  ಮುಖ ಮಾಡಿಕೊಂಡ್ಡಿದ್ದ. ಮದುವೆ ಮನೆಯಿಂದ ಹೊರಡುವಾಗ ನನ್ನ ಹತ್ತಿರ ಬಂದು ಆಹುಡುಗ ಹೇಳಿದ" ಸಾರ್, ನಮಗೂ ನಿಮಗೂ ಜನರೇಶನ್ ಗ್ಯಾಪ್ ಇದೆ ನೋಡೀ...ಹಾಗಾಗಿ ನಾನು ತಪ್ಪು ಮಾತನಾಡಿದ್ರೆ ಕ್ಶಮಿಸಿ ಬಿಡಿ ಸಾರ್! ಎಂದು ಸಪ್ಪೆ ಮೋರೆ ಹಾಕಿ ಕೊಂಡೇ ಹೇಳಿದ.


ನಾನೆಂದೆ" ಛೇ! ಇದು ನಿನ್ನ ತಪ್ಪಲ್ಲಾ ತಮ್ಮಾ, ಇವತ್ತಿನ ಯುವಕರಿಗೆ ಮಾರ್ಗದರ್ಶನದ ಕೊರತೆ ಇದೆ. ತಾವು ಹೋಗುತ್ತಿರುವ ಮಾರ್ಗ ತಪ್ಪೆಂದು ಹಿರಿಯರಿಗೆ ಗೊತ್ತಾದರೂ ತಿದ್ದುವ ಪ್ರಯತ್ನ ಮಾಡದ ನಮ್ಮಂತ ಹಿರಿಯರ ತಪ್ಪು! ನಿಮ್ಮ ಬಗ್ಗೆ ನನಗೆ ಗೌರವ ವಿದೆ. ನೀವು ಇಷ್ಟು ಬೇಗ ಅರ್ಥ ಮಾಡಿಕೊಂಡಿರಿ. ಭಗವಂತ ನಿಮಗೆ ಒಳ್ಳೆ ಯದು ಮಾಡಲಿ.


..."ಸಾರ್, ನಾನು ಇನ್ಯಾವತ್ತೂ ನಮ್ಮ ದೇಶದ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲಾ ಸಾರ್, ಅಷ್ಟೇ ಅಲ್ಲಾ, ನನ್ನ ಸ್ನೇಹಿತರು ನಮ್ಮ ದೇಶದ ಬಗ್ಗೆ ಹೀನಾಯವಾಗಿ ಮಾತನಾಡಿದರೆ ಸಹಿಸಿಕೊಳ್ಲುವುದಿಲ್ಲಾ ಸಾರ್. "..........ಬರ್ತೇನೆ, ಮತ್ತೆ ನಿಮ್ಮನ್ನು ಭೇಟಿಯಾಗ್ತೀನಿ, ಸಾರ್.


............ನಾಲ್ಕೈದು ಗಂಟೆ ಮುಂಚೆ ಯಾವ ತರುಣನ ಬಗ್ಗೆ ನನಗೆ ಬೇಸರ ಮೂಡಿತ್ತೋ ಅದೇ ತರುಣನನ್ನು ಕೊನೆಯಲ್ಲಿ ಕಂಡು ಖುಷಿಯಾಯ್ತು. ಹಾಗೆಯೇ...ಇವತ್ತಿನ ಯುವಶಕ್ತಿಗೆ ದಾರಿಯಾರು? ಎಂಬ ಬಗ್ಗೆ ಮನದಲ್ಲೇ ಚಿಂತಿಸುವ ಹಾಗಾಯ್ತು......


Monday, April 9, 2012

Thursday, April 5, 2012

ಆನೆಗಾರ್,ಇರುವೆಗಾರ್,
 ಆನೆಗಾರ್,ಇರುವೆಗಾರ್,ಕಾಗೆಗಾರ್,ಕಪ್ಪೆಗಾರ್|
 ಕಾಣಿಸುವರನ್ನವನು,ಹಸಿವವರ ಗುರುವು|
 ಮಾನವನುಮಂತುದರ ಶಿಷ್ಯನವನಾ ರಸನೆ|
ನಾನಾವಯಗಳಲಿ-ಮಂಕುತಿಮ್ಮ||278||

ಸ್ವಾಮೀಜಿ ಬ್ರಹ್ಮಾನಂದರ ಧ್ವನಿಯನ್ನು     ಕೆಳಗಿನ ಕೊಂಡಿಯಲ್ಲಿ ಕೇಳಿ.


http://www.vedasudhe.com

Wednesday, April 4, 2012

ಜಗವೆನ್ನ ಮುದ್ದಿಸದದೇಕೆಂದು ಕೊರಗದಿರುಜಗವೆನ್ನ ಮುದ್ದಿಸದದೇಕೆಂದು ಕೊರಗದಿರು|
ಮಗುವು ನೀಂ ಪೆತ್ತರ್ಗೆ,ಲೋಕಕೆ ಸ್ಪರ್ಧಿ|
ಹೆಗಲ ಹೊರೆ ಹುಟ್ಟಿದರ್ಗೆಲ್ಲ ಮಿರುತಿರೆ|
ನಿನ್ನ ರಗಳೆಗಾರಿಗೆ ಬಿಡುವೋ? -ಮಂಕುತಿಮ್ಮ ||649||

 ತಲೆವಾಗಿನೊಳೆ ಕೊಳಕ ,ಪಂಚೆನಿರಿಯೊಳ ಹರಕ|
ತಿಳಿಸುವೆಯ ರಜಕಗಲ್ಲದೆ ಲೋಕರಿಂಗೆ|
ಅಳಲು  ದುಗುಡಗಳ ನಿನ್ನೊಳಗೆ ಬಯ್ದಿಡದೆ ನೀ|
ಇಳೆಗೆ ಹರಡುವುದೇಕೋ? -ಮಂಕುತಿಮ್ಮ||719|| 

ಸಾಮಾನ್ಯವಾಗಿ ಎಲ್ಲರ ಇಚ್ಛೆ ಏನೆಂದರೆ ನಾನು ಮಾಡಿದ ಕೆಲಸವನ್ನು ಲೋಕ ಮೆಚ್ಚ ಬೇಕು, ಜನರು ಹೊಗಳಬೇಕು, ಅದಕ್ಕೆ ನಮ್ಮದೇ ಆದ ಕಾರಣವೂ ಸಿದ್ಧವಾಗಿರುತ್ತದೆ -ನಾನು ಎಂತಹ ಜನೋಪಯೋಗಿ ಕೆಲಸ ಮಾಡಿದ್ದೀನಿ! ನನ್ನಲ್ಲದೆ ಇನ್ಯಾರನ್ನು ಜನರು ಮೆಚ್ಚಬೇಕು? ಆದರೆ ಡಿ.ವಿಜಿ ಯವರು ಹೇಳುತ್ತಾರೆ, ಎಲವೋ ಮಂಕೇ, ನಿನ್ನನ್ನು ಹೆತ್ತವರಿಗೆ ನೀನು ಮಗು, ಆದರೆ ಲೋಕಕ್ಕೆ ನೀನು ಸ್ಪರ್ಧಿ-ಈ ಸತ್ಯ ನಿನಗೆ ಗೊತ್ತಿರಲಿ, ನಿನ್ನನ್ನು ಮೀರಿಸುವವರಿದ್ದಾರೆ, ಎಲ್ಲರಿಗೂ ಅವರದೇ ಆದ ಒತ್ತಡಗಳಿವೆ, ನಿನ್ನ ರಗಳೆ ಯಾರಿಗೆ ಬೇಕೋ, ಇದಕ್ಕೆಲ್ಲಾ ನೀನು ಕೊರಗಬೇದವೆಂದು ಬುದ್ಧಿಯ ಮಾತನ್ನು ಹೇಳುತ್ತಾರೆ. ನೀನು ತಲೆಗೆ ಹಾಕಿರುವ ಪೇಟದ ಒಳಗಿರುವ ಕೊಳಕನ್ನು ಹಾಗೂ ನೆರಿಗೆ ಮಾಡಿ ಯಾರಿಗೂ ಕಾಣದಂತೆ ಸಿಕ್ಕಿಸಿಕೊಂದಿರುವ ಪಂಚೆಯ ಹರಕನ್ನೂ ದೋಬಿಗೂ ದರ್ಜಿಗೂ ತಿಳಿಸುತ್ತೀಯೋ ಅಥವಾ ಲೋಕಕ್ಕೆಲ್ಲಾ ಟಾಮ್ ಟಾಮ್ ಮಾಡುತ್ತೀಯೋ? ಹಾಗೆಯೇ ನಿನ್ನ ಅಳಲನ್ನು, ದುಗುಡಗಳನ್ನೂ ನಿನ್ನೊಳಗೆ ಬಚ್ಚಿಟ್ಟುಕೊಳ್ಲದೆ ಲೋಕಕ್ಕೆಲ್ಲಾ ಸಾರುತ್ತೀಯ, ಯಾಕೋ ಎಂದು ಡಿ.ವಿ.ಜಿ.ಯವರು ಪ್ರಶ್ನಿಸುತ್ತಾರೆ.


Sunday, April 1, 2012

ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರವರ ವಿಚಾರಗಳು

        ರಾಗ-ದ್ವೇಷಗಳು ಇರಬೇಕು! ಹೌದು ಇರಬೇಕು! ಆಶ್ಚರ್ಯವೆನಿಸಿತೇ? ಸತ್ಕಾರ್ಯದಲ್ಲಿ ರಾಗ, ದುಷ್ಕಾರ್ಯದಲ್ಲಿ ದ್ವೇಷ ಇರಬೇಕು ಎನ್ನುವ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ವಿಚಾರ ಕೇಳಿ:


     ಭೂತ, ಪ್ರೇತ, ಪಿಶಾಚಿಗಳು ಕಾಡುವುದೇಕೆ? ಈ ಪದಗಳ ನಿಜವಾದ ಅರ್ಥವೇನು? ಕೇಳೋಣ ಬನ್ನಿ, ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ದ್ವನಿಯಲ್ಲಿ:
     ಒಂದು ಉಪನ್ಯಾಸದ ಸಂದರ್ಭದಲ್ಲಿ ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರು ಹಾಸ್ಯವಾಗಿ ಹೇಳಿದ್ದ ಉದಾಹರಣೆಯಿದು: "ಅಕ್ಕ ಪಕ್ಕ ವಾಸಿಸುವ ಇಬ್ಬರಿಗೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಎಂದು ಇಟ್ಟುಕೊಳ್ಳೋಣ. ಒಬ್ಬ ದೇವರನ್ನು ಪ್ರಾರ್ಥಿಸುತ್ತಾನೆ - ಓ, ದೇವರೇ, ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ. ಅವನ ಎರಡು ಕಣ್ಣುಗಳೂ ಹೋಗಲಿ. ಇನ್ನೊಬ್ಬನೂ ಹಾಗೆಯೇ ಪ್ರಾರ್ಥಿಸುತ್ತಾನೆ. ದೇವರು ಯಾರ ಮಾತನ್ನು ಕೇಳಬೇಕು? ಅವನ ಮಾತು ಕೇಳಿದರೆ ಇವನಿಗೆ ಕೋಪ, ಇವನ ಮಾತು ಕೇಳಿದರೆ ಅವನಿಗೆ ಕೋಪ." ದೇವರಿಗೆ ಯಾರ ಮೇಲೂ ಕೋಪವೂ ಇಲ್ಲ, ವಿಶೇಷ ಪ್ರೀತಿಯೂ ಇಲ್ಲ. ದೇವರು ಆಸ್ತಿಕರಿಗೆ ವಿಶೇಷ ಅನುಗ್ರಹ ತೋರುತ್ತಾನೆ ಎಂದೇನೂ ಇಲ್ಲ, ನಾಸ್ತಿಕರಿಗೆ ಕೇಡು ಮಾಡುತ್ತಾನೆ ಅನ್ನುವುದೂ ಸುಳ್ಳು. ದೇವರು ಎಲ್ಲಾ ಜೀವಿಗಳನ್ನೂ ನೋಡುವುದು ಒಂದೇ ರೀತಿಯಲ್ಲಿ. ದೇವರನ್ನು ನಾವು ಪೂಜಿಸುತ್ತೇವೆ, ಸ್ತುತಿಸುತ್ತೇವೆ, ಪ್ರಾರ್ಥಿಸುತ್ತೇವೆ. ಏಕೆ ಹಾಗೆ ಮಾಡುತ್ತೇವೆ? ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಉದ್ದೇಶ ನಮ್ಮನ್ನು ಚೆನ್ನಾಗಿಟ್ಟಿರು, ನಮಗೆ ಒಳ್ಳೆಯದು ಮಾಡು, ನಮಗೆ ಬಂದಿರುವ ಕಷ್ಟಗಳಿಂದ ಪಾರು ಮಾಡು ಎಂದು ಕೇಳುವುದೇ ಆಗಿದೆ. ನಮಗೆ ಉಪಯೋಗಿಸಿಕೊಳ್ಳಲು ಇಡೀ ಸೃಷ್ಟಿಯನ್ನು ಕೊಟ್ಟ ಭಗವಂತನನ್ನು ಆ ಉಪಕಾರಕ್ಕಾಗಿ ಕೃತಜ್ಞರಾಗಿ ಸ್ಮರಿಸಿಕೊಳ್ಳುವುದೇ ನಿಜವಾದ ಪೂಜೆ. ಅವನ ಸೃಷ್ಟಿಗೆ ಹಾನಿಯಾಗದಂತೆ ಉಪಯೋಗಿಸಿಕೊಳ್ಳುವುದು ನಿಜವಾದ ಅನುಷ್ಟಾನ. ಏನೂ ಅಗತ್ಯವಿಲ್ಲದ ಕರುಣಾಮಯಿ ದೇವರಿಗೆ ನಾವು ಏನನ್ನು ತಾನೇ ನೈವೇದ್ಯವಾಗಿ ಅರ್ಪಿಸಬಲ್ಲೆವು? ಪಂ. ಸುಧಾಕರ ಚತುರ್ವೇದಿಯವರ ಶಿಷ್ಯ ವೇದಾಧ್ಯಾಯಿ ಸುಧಾಕರ ಶರ್ಮರನ್ನು ಅವರ ಆರೋಗ್ಯ ವಿಚಾರಿಸುವ ಸಲುವಾಗಿ ಕಳೆದ ವಾರ ಬೆಂಗಳೂರಿನ ಅವರ ನಿವಾಸಕ್ಕೆ ಹೋಗಿದ್ದಾಗ ಅವರ ವಿಚಾರದ ತುಣುಕನ್ನು ವಿಡಿಯೋ ಚಿತ್ರಿಸಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಈಗ ಚರ್ಚಿತವಾಗುತ್ತಿರುವ ವಿಷಯಕ್ಕೆ ಈ ವಿಚಾರವೂ ಪೂರಕವಾಗಿದೆಯೆಂದು ಭಾವಿಸುವೆ. 
-ಕ.ವೆಂ.ನಾಗರಾಜ್.

ಎಂತು ಮುಕ್ತಾ ನಾಗಬೇಕಣ್ಣಾ

ಎಂತು ಮುಕ್ತಾ ನಾಗಬೇಕಣ್ಣಾ|
ಇಂತಾದಮೇಲ್ ತಾನ್ ಎಂತು ಮುಕ್ತಾ ನಾಗಬೇಕಣ್ಣಾ||

ಕಂತೆ  ಬೊಂತೆಗೆ ಚಿಂತೆ |ರೋಗದ ಚಿಂತೆ|
ಮುಪ್ಪಿನ ಚಿಂತೆ| ಬಡತನ ಚಿಂತೆ|
ಸತ್ತರೆ ಚಿಂತೆ| ಈಪರಿ ಚಿಂತೆ ಎಂಬೀ ಸಂತೆ ಯೋಳ್  ತಾನ್  ||1||

ಸಿಕ್ಕ ಪುಟ್ಟವ ರಿಲ್ಲ ದಿಹ ಚಿಂತೆ|
ನೆರೆಹೊರೆಯ ಮನೆಯೊಳು | ಒಕ್ಕಲಿರುವವರ ಮಾತುಗಳ ಚಿಂತೆ|
ಮಕ್ಕಳಾಗದ ಚಿಂತೆ ಬಳಿಕ | ಮಕ್ಕಳಿಗೆ ದಿಕ್ಕೆಂಬ ಚಿಂತೆಯು|
ಮಕ್ಕಳೆಲ್ಲಾ ವೋಕ್ಕಲ್ಹೊಗಳು | ಬಿಕ್ಕಿ ಬಿಕ್ಕಿ ಅಳುವ ಚಿಂತೆ ||2||

ಹೋಮ ನೇಮ ದ ಸ್ನಾನ ಗಳ ಚಿಂತೆ|
ಮನದೊಳಗೆ ಪುಟ್ಟುವ ಕಾಮಿತಾರ್ಥಗಳಿಲ್ಲ ದಿಹಚಿಂತೆ|
ಭಾಮೆ ಇಲ್ಲದ ಚಿಂತೆ | ಭಾಮೆಗೆ ಪ್ರೇಮ ವಿಲ್ಲದ ಚಿಂತೆ |
ಪ್ರೇಮಕೆ ಹೆಮವಿಲ್ಲದ ಚಿಂತೆ|
ಹೆಮಕೆ ಭೂಮಿಯಿಲ್ಲದ ಚಿಂತೆ ಯೋಳ್ತಾನ್||3||

ದಿಕ್ಕು ತೋರದೆ ದು:ಕಿಸುವ ಚಿಂತೆ|
ಗುರು ಶಂಕರಾರ್ಯರ ಸಿಕ್ಕಿ ತಿಳಿಯದೆ ಲೆಕ್ಖಿಸುವ ಚಿಂತೆ|
ಅಕ್ಕಿ ಇಲ್ಲದ ಚಿಂತೆ | ಅಕ್ಕಿಗೆ ರೊಕ್ಕವಿಲ್ಲದ ಚಿಂತೆ |
ರೊಕ್ಕವು    ಸಿಕ್ಕಲಿಲ್ಲದ ಚಿಂತೆ |
ಸಿಕ್ಕಳು ಮುಕ್ಕ ತಾನಾಗಿರುವ ಚಿಂತೆ||4||

ಸೋರುತಿಹುದು ಮನೆಯ ಮಾಳಿಗೀ ಅಜ್ಞಾನದಿಂದ ಸೋರುತಿಹುದೂ ಮನೆಯ ಮಾಳಿಗೀ


ಮಿತ್ರ ನಾಗೇಶ್ ಇವತ್ತು  ನನ್ನ ಬೆಳಗಿನ ಗಾಳಿಸೇವನೆಯಲ್ಲಿ ಜೊತೆಗೇ ಇದ್ದರು. ನಾನು  ಅರ್ಧ ಗಂಟೆ ವಾಕ್ ಮಾಡಿ ಮನೆಗೆ ಹಿಂದುರುಗಿದೆ. ಸ್ವಲ್ಪ ಹೊತ್ತಿನಲ್ಲೇ ಅವರೂ ನಮ್ಮ ಮನೆಮುಂದೆ ಹೋಗುತ್ತಿದ್ದುದನ್ನು ಕಂಡು ಮಾತನಾಡಿಸಿದೆ. ಅವರು ನನಗೆ ಏನೋ ಹೇಳಬೇಕೆನಿಸಿದರೂ ಸ್ವಲ್ಪ ನಿಧಾನಿಸಿದ್ದರು. ಆದರೂ ಮಾತುಕತೆಯ ಭರದಲ್ಲಿ ಹೇಳಬೇಕಾದ್ದನ್ನು ಹೇಳಿದರು. ಆ  ವಿಚಾರವನ್ನು   ನಿಮ್ಮೊಡನೆ ಹಂಚಿಕೊಳ್ಳಬೇಕು. ಈಗಾಗಲೇ ಬೆಳಗಿನ ಎಂಟು ಗಂಟೆ ಯಾಗಿದೆ.ಇನ್ನೂ ಪ್ರಾಥರ್ವಿಧಿಗಳು ಮುಗಿದು ಶ್ರೀ ರಾಮ ನವಮಿ ಹಬ್ಬ ಬೇರೆ ಆಚರಿಸಬೇಕಾಗಿದೆ. ಆದರೂ  ನಾಲ್ಕು ಜನರಿಗೆ ಇದರಿಂದ ಏನಾದರೂ ಅನುಕೂಲವಾಗುವುದಾದರೆ ಇದನ್ನೇ " ರಾಮ ಪೂಜೆ" ಎಂದುಕೊಂಡು ವಿಷಯವನ್ನು ಹಂಚಿಕೊಳ್ಳುವೆ.

ನಾಗೇಶ್ ಇಪ್ಪತು ವರ್ಷಗಳು ಏರ್ ಫೋರ್ಸ್ ನಲ್ಲಿ ದುಡಿದು  ವಿಶ್ರಾಂತಿ        ಪಡೆದವರು. ವಿಶ್ರಾಂತಿ ವೇತನ ಸುಮಾರು ಹತ್ತು ಸಾವಿರ ರೂಪಾಯಿ ಬರಬಹುದು. ಅವರಿಗೀಗ ಐವತ್ತು ವರ್ಷಗಳು. ಇಬ್ಬರು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಜೀವನದ ಗಾಡಿ ಓಡಲು ಏನಾದರೂ ಮಾಡಲೇ ಬೇಕಲ್ಲಾ! ಒಂದು ಬ್ರೌಸಿಂಗ್ ಸೆಂಟರ್ ಶುರು ಮಾಡಿದರು. ಅದರಿಂದ ಬಂದ ಲಾಭ ಅದರ ನಿರ್ವಹಣೆಗೇ ಆಯ್ತು. ಯೋಚನೆ ಶುರುವಾಯ್ತು. ಏನಾದರೂ ಮಾಡಬೇಕಲ್ಲಾ! ಮಾಜಿ ಸೈನಿಕರಾದ್ದರಿಂದ ಎಲ್ಲಾದರೂ ಕೆಲಸ ಸಿಗುತ್ತೆ. ಅದಕ್ಕೆ ಪ್ರವೇಶ ಪರೀಕ್ಷೆಗಳನ್ನು ಬರೆದು ಪಾಸ್ ಮಾಡಬೇಕು.   ಕೆಲಸಕ್ಕೆ ಸೇರಲು ಪರೀಕ್ಷೆ ಬರೆಯಬೇಕು.ಈ ವಯಸ್ಸಿನಲ್ಲಿ ಬೆಳಗಿನ ಜಾವ ನಾಲ್ಕಕ್ಕೆ ಎದ್ದು  ಒಂದಷ್ಟು ಓದಿದರು. ಕಷ್ಟಪಟ್ಟು ಪರೀಕ್ಷೆ ಪಾಸ್ ಮಾಡಿ ಬ್ಯಾಂಕ್ ನಲ್ಲಿ ಉದ್ಯೋಗ ಗಿಟ್ಟಿಸಿದರು. ಕೆಲಸವೇನೋ ಸಿಕ್ಕಿತು. ಮನೆಯ ಒತ್ತಡಗಳು ಎಷ್ಟಿತ್ತೆಂದರೆ ಶಿಸ್ತಿನ ಸಿಪಾಯಿಯಾಗಿದ್ದ ನಾಗೇಶ್ ಗೂ ಒಂದು ದಿನ ಹಾರ್ಟ್ ಅಟ್ಯಾಕ್ ಆಯ್ತು. ಅವತ್ತಿನ ಅವರ ಭವಣೆಯನ್ನು ಕೇಳುತ್ತಿದ್ದರೆ ಕಣ್ಣಲ್ಲಿ   ನೀರು ಬರುತ್ತೆ. ಭಗವಂತ ಕಾಪಾಡಿದ ಈಗ ಆರೊಗ್ಯವಾಗಿದ್ದಾರೆ.ಈ  ಒಂದು ಘಟನೆ ಹಲವು ಘಟನೆಗಳನ್ನು ನೆನಪು ಮಾಡಿತು. ಮೊನ್ನೆತಾನೆ ನನ್ನ ಮಿತ್ರ ದಾಸೇಗೌಡರು ಹಾರ್ಟ್ ಆಟ್ಯಾಕ್ ಆಗಿ ಪ್ರಾಣಬಿಟ್ಟರು. ಅವರಿಗೆ ಐವತ್ತು ವರ್ಷ ವಯಸ್ಸು. ಕಳೆದ ವರ್ಷ ಮಿತ್ರ ರಾಜನ್ ಇದೇ ವಯಸ್ಸಿನವರು ಹಾರ್ಟ್ ಆಟ್ಯಾಕ್ ನಿಂದ ಪ್ರಾಣಬಿಟ್ಟರು. ಅದಕ್ಕಿಂತ ಕೆಲವೇ ದಿನಗಳ ಮುಂಚೆ ನನ್ನ ಮಿತ್ರ ಲಕ್ಷ್ಮಣ್  ಸುಮಾರು ಐವತ್ತೈದು ವರ್ಷ ವಯಸ್ಸಿನವ. ಅವನೂ ಹೀಗೇ ಪ್ರಾಣ ಬಿಟ್ಟ  . ಸ್ವಲ್ಪ ದಿನದ ಮುಂಚೆ  ಇದೇ ವಯಸ್ಸಿನ ರಾಮಚಂದ್ರ ಹೀಗೇ ಪ್ರಾಣ    ಬಿಟ್ಟ . ಏನಪ್ಪಾ ರಾಮ ನವಮಿಯಂದು ಬರೇ ಸಾವುಗಳ ಬಗ್ಗೆ ಮಾತನಾಡ್ತಾ ಇದಾರಲ್ಲಾ! ಅಂತೀರಾ? ಏನು ಮಾಡಲೀ ? ಮನಸ್ಸಿನಲ್ಲಿ ಬಂದದ್ದನ್ನು ಆಗಲೇ ಹಂಚಿಕೊಳ್ಳುವುದಕ್ಕೆ ತಾನೇ ಈ ವೇದಿಕೆ ಮಾಡಿದ್ದು. ಹಂಚಿಕೊಳ್ಲಲು ಕಾರಣವಿದೆ. ಇವರೆಲ್ಲಾ ಇನ್ನೂ ಹತ್ತಾರು ವರ್ಷ ಇರಬೇಕಾದವರು ಸಂಸಾರಗಳನ್ನು ಸಂಕಷ್ಟಕ್ಕೆ ಸಿಲುಕಿಸಿ ಹೊರಟು ಬಿಟ್ಟಿದ್ದೇಕೆ? ಅದಕ್ಕೆ ಕಾರಣವನ್ನು ಹುಡುಕುವಾಗ ಈ ಎಲ್ಲರ ಮನೆಯ ಪರಿಚಯವಿರುವ ನನಗೆ ಮನೆಯ ಒತ್ತಡಗಳೂ ಕೂಡ ಕಾರಣಗಳಲ್ಲೊಂದಾಯ್ತೆನಿಸುತ್ತಿದೆ.


ಹಲವು ಮನೆಗಳಲ್ಲಿ ಪತಿ-ಪತ್ನಿಯರ ಸಂಬಂಧ, ತಂದೆ-ಮಕ್ಕಳ ಸಂಬಂಧ, ಮನೆಯ ವಾತಾವರಣ, ಸಾಮಾಜಿಕ ಒತ್ತಡಗಳು, ಕೆಲಸದ ಒತ್ತಡಗಳು, ಬೇಕು ಬೇಕುಗಳ ಒತ್ತಡಗಳು,.....ಒಂದೇ ಎರಡೇ... ಒಂದು ಮನೆಯಲ್ಲಿ ಅಪ್ಪನಿಗೆ ಹೃದಯದ ಸಮಸ್ಯೆ. ಕಾಲೇಜು ಓದುತ್ತಿರುವ ಮಗ ಕರ್ಕಷ ಶಬ್ಧ ಮಾಡುವ ಟಿ.ವಿ.ಕಾರ್ಯಕ್ರಮ ನೋಡುತ್ತಾನೆ. ಮನೆ ಬೇರೆ ಚಿಕ್ಕದು. ತಾನು ತನ್ನ ಪಾಡಿಗೆ ತನ್ನ ಕೊಠಡಿಯಲ್ಲಿ ಮಲಗಿದ್ದರೂ ಹೊಡೆದಾಟ ಬಡಿದಾಟದ ಕರ್ಕಶ ಶಬ್ಧಗಳು ರೂಮಿನ ಗೋಡೆಯನ್ನೂ ಭೇಧಿಸಿ ಒಳನುಗ್ಗುತ್ತವೆ." ಯಾಕೋ ರಾಜು ನಿನ್ನ ಮಗನಿಗೆ ಹೇಳಬೇಡವೇನೋ " ಅಂದರೆ  " ಹೇಳಿದರೆ ಬೇಜಾರು ಮಾಡಿಕೊಳ್ತಾನೆ ಕಣೋ, ಇನ್ನೆಷ್ಟು ದಿನ ನೋಡ್ತಾನೆ ಬಿಡು, ಇನ್ನೆರಡು ವರ್ಷಗಳಲ್ಲಿ ಓದು ಮುಗಿಸಿ ಕೆಲಸಕ್ಕೆ ಸೇರುತ್ತಾನೆ. ಆಗ ಇಲ್ಲೇ ಕುಳಿತಿರುತ್ತಾನೆಯೇ? ’"...........ನನಗೆ ಅಯ್ಯೋ ಎನಿಸಿತು. ಇನ್ನೆರಡು ವರ್ಷ ಈ ಪ್ರಾಣಿ ಬದುಕಿರಬೇಕಲ್ಲಾ!

ಬಹುಪಾಲು ಮನೆಗಳಲ್ಲಿ ಇದೇ ದೃಷ್ಯ. ಕೇಳಲಾಗದಷ್ಟು ಕರ್ಕಶ ಶಬ್ಧವನ್ನು  ಹೊರ ಚೆಲ್ಲುವ ಟಿ.ವಿ.ಕಾರ್ಯಕ್ರಮಗಳು. ಅಪ್ಪಿತಪ್ಪಿ  ನೀವು ನೋಡಿದಿರಾ.......ರಕ್ತದ ಚೆಲ್ಲಾಟ...ಹೊಡಿ..ಬಡಿ...ಕೊಚ್ಚು, ಕತ್ತರಿಸು, ಶೂಟ್ ಮಾಡು, ರಕ್ತದ ಹೋಳಿಯಾಡು........ಅಥವಾ ಬೆತ್ತಲೆ ನೃತ್ಯ.....

ಅರೆ, ಭಗವಾನ್, ನರಕ ಅನ್ನೋದು ಬೇರೆ  ಬೇಕೆ? ಇಂತಾ ಮಕ್ಕಳು ಇದ್ದರೆ ಸಾಲದೇ?

ಛೇ! ಛೇ!!  ಅಂತರ್ಜಾಲ ಮತ್ತು ಟಿ.ವಿ. ಮಾಧ್ಯಮಗಳನ್ನು  ಮನಸ್ಸಿನ ಉಲ್ಲಾಸಕ್ಕೆ ಬಳಸಿಕೊಳ್ಳಲು  ಎಷ್ಟೊಂದು ಅವಕಾಶಗಳಿದೆ! ಆದರೂ..........  ಉಲ್ಲಾಸಕ್ಕೆ  ಒಂದೊಂದು ವಯಸ್ಸಿನಲ್ಲಿ ಒಂದೊಂದು ಕಲ್ಪನೆ. ಆದರೆ ಮಕ್ಕಳಿಗೆ ಅವರಪ್ಪ ಅಮ್ಮ  ತಮ್ಮೊಡನೆ ನಾಲ್ಕು ದಿನ ಸುಖವಾಗಿ ಬದುಕಿರಲೆಂಬ ಆಸೆ ಬೇಡವೇ? ಅಪ್ಪ-ಅಮ್ಮನ ಮೇಲೆ ನಿಜವಾದ ಪ್ರೀತಿ ಇದ್ದರೆ ಹೀಗೆ ಮಾಡುತ್ತಾರೆಯೇ?  ಏನಾದರೂ ಹೇಳಿ... ಈ ಟೀವಿ  ಅನ್ನೋದು ಹಲವರಿಗೆ ಕಂಟಕವಾಗಿದೆ. .............

ಸೋರುತಿಹುದು ಮನೆಯ ಮಾಳಿಗೀ ಅಜ್ಞಾನದಿಂದ ಸೋರುತಿಹುದೂ ಮನೆಯ ಮಾಳಿಗೀ.....  ಶಿಶುನಾಳ ಶರೀಫರ  ಹಾಡು ನೆನಪಾಗುತ್ತಿದೆ!

......ಆಗಲೇ ಒಮ್ಬತ್ತಾಯ್ತು....... ನೋಡೋಣ  ಮುಂದೆ ರಾಮನವಮಿ ಹಬ್ಬ ಆಚರಿಸಬೇಕಾಗಿದೆ .........