Pages

Monday, November 30, 2015

ಲೌಕಿಕದಲ್ಲಿದ್ದು ಅಲೌಕಿಕ ಚಿಂತನೆ ಭಾಗ-1

ದಿನಾಂಕ 25.11.2015 ರಂದು ಹಾಸನ ಹೊಯ್ಸಳನಗರದ ಈಶಾವಾಸ್ಯಮ್ ನಲ್ಲಿ ವೇದಭಾರತೀ ಸಂಸ್ಥೆಯು ಆಯೋಜಿಸಿದ್ದ ಬೆಂಗಳೂರಿನ ಪೂಜ್ಯ ಶ್ರೀನಾರಾಯಣಾನಂದ ಸರಸ್ವತೀ ಸ್ವಾಮಿಗಳವರ ಉಪನ್ಯಾಸದ ಬರಹರೂಪದ ಮೊದಲ ಕಂತು
ಉಳಿದ ಎರಡು ಕಂತುಗಳನ್ನು ಮುಂದಿನ ಸೋಮವಾರಗಳಲ್ಲಿ ಕ್ರಮವಾಗಿ ಪ್ರಕಟಿಸಲಾಗುವುದು
[ಬರಹ ರೂಪಕ್ಕೆ : ಶ್ರೀ ಭೈರಪ್ಪಾಜಿ, ಸಂಸ್ಕೃತ ಉಪನ್ಯಾಸಕರು]


ಸಾಮಾನ್ಯವಾಗಿ ಅಲೌಕಿಕವೆಂದರೆ, ನಮಗೆ ನಿಲುಕದ್ದು ಎಂಬ ಅಭಿಪ್ರಾಯವಿದೆ. ಆದರೆ ಇದು ಇದು ಕಬ್ಬಿಣದ ಕಡಲೆಯೇನಲ್ಲ. ಅತ್ಯಂತ ಸುಲಭ ಮತ್ತು ಸರಳ. ನಮಗೆ ಯಾವುದು ಅತ್ಯಂತ ಸುಲಭ ಹಾಗೂ ಸರಳವೋ ಅದನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಯಾವುದು ಅತ್ಯಂತ ಸಮೀಪದಲ್ಲಿದೆಯೋ ಅದನ್ನು ನೋಡುವುದು ಕಷ್ಟ. ಯಾವುದು ಅತ್ಯಂತ ಪ್ರಕಾಶಮಾನವಾಗಿದೆಯೋ ಅದನ್ನು ನಾವು ಗ್ರಹಿಸುವುದು ಕಷ್ಟ. ಉದಾಹರಣೆಗೆ ಸೂರ್ಯದೇವ ಅತ್ಯಂತ ಪ್ರಕಾಶಮಯ. ನಮಗೆ ನೋಡಲು ಕಷ್ಟ ಅಲ್ಲವೇ ? ನಾವೇನಾದರು ಸೂರ್ಯನನ್ನು ದಿಟ್ಟಿಸಿ ನೋಡಲು ಹೋದರೆ ದೃಷ್ಟಿಯನ್ನೇ ಕಳೆದು ಕೊಳ್ಳಬೇಕಾಗುತ್ತದೆ ಅಲ್ಲವೇ ? ಅತ್ಯಂತ ಪ್ರಕಾಶಮಯ, ಅವನನ್ನು ದಿಟ್ಟಿಸಿ ನೋಡಲು ಸಾಧ್ಯವಿಲ್ಲ. ಹಾಗೆಯೇ ಭಗವಂತನ ಅಸ್ತಿತ್ವ ಅತ್ಯಂತ ಸಮೀಪ ಆದರೆ ನೋಡಲು ಆಗುವುದಿಲ್ಲ. ಹೇಗೆ ನೋಡಲು ಸಾಧ್ಯವಿಲ್ಲವೆಂದರೆ ಉದಾಹರಣೆಗೆ ನಮ್ಮ ಕಣ್ಣನ್ನು ನಾವೇ ಸ್ವತಃ ನೋಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಕಣ್ಣಿನ ಮೂಲಕ ಎಲ್ಲವನ್ನು ನೋಡುತ್ತೇವೆ. ಸ್ವತಃ ಕಣ್ಣನ್ನು ನೋಡಲು ಸಾಧ್ಯವಿಲ್ಲ ನಮಗೆ. ಯಾವುದೇ ಮಾಧ್ಯಮವಿಲ್ಲದೆ, ದರ್ಪಣ, ಕನ್ನಡಿ, ಮತ್ತು ಇತ್ಯಾದಿಗಳಿಲ್ಲದೆ ನಮ್ಮ ಕಣ್ಣುಗಳನ್ನು, ನೇತ್ರಗಳನ್ನು ನಾವೇ ನೋಡಿಕೊಳ್ಳಬೇಕು. ಹೇಗೆ ನೋಡಿಕೊಳ್ಳುವುದು ? ಲೋಕವನ್ನು ಕಣ್ಣುಗಳಿಂದ ನೋಡುತಿದ್ದೇವೆ. ಕಣ್ಣುಗಳಿಂದ ನೋಡುತ್ತಿದ್ದೇವೆ ಎನ್ನುವುದು ಅಲೌಕಿಕ. ಕಿಂಚಿತ್ ನಮ್ಮ ಭಾವನೆಯಲ್ಲಿ ಆಲೋಚನೆಯಲ್ಲಿ ಸ್ವಲ್ಪ ನಾವು ಜಾಗೃತೆಯನ್ನು ವಹಿಸಬೇಕಷ್ಟೆ ಅತ್ಯಂತ ಸುಲಭ ಸರಳ. 
ಒಬ್ಬರು ಆಶ್ರಮಕ್ಕೆ ಬಂದಿದ್ದರು. “ ಸ್ವಾಮೀಜಿ ನನಗೆ ಅತ್ಯಂತ ಉತ್ಸಾಹ ಬಂದು ಬಿಟ್ಟಿದೆ. ವೈರಾಗ್ಯ ತನ್ನಷ್ಟಕ್ಕೆ ತಾನೆ ಏನು ಉಕ್ಕಿ ಹರಿಯುತ್ತಿದೆ. ನೀವು ಏನೇನು ಕಾರ್ಯ ಹೇಳುತ್ತೀರೋ ಎಲ್ಲಾ ಮಾಡ್ತೇನೆ ನಾನು. ಅಹರ್ನಿಶಂ ಸೇವಾಮಹೇ. ಹಗಲೂ ರಾತ್ರಿ ಅನ್ನದೆ ಸೇವೆ ಮಾಡ್ತೇನೆ. ನೀವು ಹೇಳಿದರೆ ಸಾಕು ಇಂತದ್ದು ಅಂತ. ಮಾಡ್ತೇನೆ ನಾನು” ನಾವು ಹೇಳಿದೆವು. ಮಾರಾಯ್ರೆ ತಾವು ಏನು ಮಾಡದೆ ಸುಮ್ಮನೆ ಕೂತರೆ ಸಾಕಾಗಿದೆ. ಅದೇ ದೊಡ್ಡ ಸೇವೆ. ಅವರು ಹೇಳ್ತಾರೆ. ಸ್ವಾಮೀಜಿ ಅದೇ ದೊಡ್ಡ ಕಷ್ಟ. ಸುಮ್ಮನೆ ಕುಳಿತು ಕೊಳ್ಳುವುದು ಕಷ್ಟ ನನಗೆ ನೀವು ಏನಾದರು ಹೇಳಿ ಮಾಡ್ತೀನಿ. ಸುಮ್ಮನೆ ಕೂತ್ಕೋ ಅಂದ್ರೆ ನೋಡಿ ಅದು ಬಹಳ ಕಷ್ಟವಾಗುತ್ತೆ. ನೀವು ನೋಡಿ ಸುಮ್ಮನೆ ಕೂತ್ಕೊಳೋದು ಅಂದ್ರೆ ಏನು ಮಾಡೋದಿದೆ ? ಮಾಡಲು ಅಲ್ಲಿ ಏನಿಲ್ಲ. ಸುಮ್ಮನೆ ಕೂಡ್ರಪ್ಪ ಅಂದರೆ ಬಹಳ ಕಷ್ಟವಾಗುತ್ತೆ “ ನೀವೇನಾದ್ರು ಹೇಳಿ ಅದನ್ನು ಮಾಡ್ತೇನೆ. ಅಕಸ್ಮಾತ್ ಕೆಲಸ ಇಲ್ಲವಾ ? ಈ ಕುರ್ಚಿ ಒರೆಸು ಅಂದ್ರೆ ಒರೆಸ್ತೀನಿ” ನಾವು ಹೇಳಿದೆವು, ಏನು ಬೇಡಪ್ಪ ಸುಮ್ಮನೆ ಕೂತ್ಕೋ, ಅವರು ಹೇಳಿದರು, ಕಷ್ಟ ಸ್ವಾಮೀಜಿ ಬಹಳ ಕಷ್ಟ. 


ಆದ್ದರಿಂದ ಅತ್ಯಂತ ಸುಲಭ, ಆದ್ರೆ ನೋಡಿ ಅತ್ಯಂತ ಕಠಿಣ. ಆದರಿಂದ ಲೋಕದಲ್ಲಿ ಎರಡು ರೀತಿಯಾದಂತಹ ಜನರಿದ್ದಾರೆ. ಒಬ್ಬರು ನಾಸ್ತಿಕರು. ಇನ್ನೊಬ್ಬರು ಆಸ್ತಿಕರು. ಸಾಮಾನ್ಯವಾಗಿ ನಾವು ನಿಘಂಟನ್ನು ನೋಡಿದರೆ. ಸ್ತಿಕ ಅಂದ್ರೆ ದೇವರಲ್ಲಿ ನಂಬಿಕೆಯಿಲ್ಲದವಾ ಅಂತ ಸಾಮಾನ್ಯವಾಗಿ ಹೇಳಿಬಿಡ್ತಾರೆ. ಆದರೆ ವೇದದಲ್ಲಿ ಆ ರೀತಿಯ ಅರ್ಥ ಇಲ್ಲ. ನಾಸ್ತಿಕ ಯಾರು ಅಂತ ಹೇಳಿದ್ರೆ ಯಾರು ವೇದವನ್ನು ಪ್ರಮಾಣವಾಗಿ ಸ್ವೀಕರಿಸುವುದಿಲ್ಲವೋ ಅವನು ನಾಸ್ತಿಕ. ನಮ್ಮ ಶಾಸ್ತ್ರದಲ್ಲಿ ಮೂರು ವರ್ಗ ಇದೆ ನಾಸ್ತಿಕರಲ್ಲಿ. ೧) ಚಾರ್ವಾಕರು, ೨) ಬೌದ್ಧರು, ೩) ಜೈನರು ಈ ಮೂರು ಜನರನ್ನು ನಾಸ್ತಿಕರು ಅನ್ನುವ ಪಟ್ಟಿಯಲ್ಲಿ ಸೇರಿಸ್ತಾರೆ. ದೇವರನ್ನ ನಂಬುವರಲ್ಲ ಅಂತ ಅರ್ಥ ಅಲ್ಲ. ನಂಬ್ತಾರೆ. ಆದರೆ ವೇದವನ್ನು ಪ್ರಮಾಣವಾಗಿ ಸ್ವೀಕರಿಸುವುದಿಲ್ಲ. ಆದ್ದರಿಂದಲೇ ಅವರು ನಾಸ್ತಿಕರು. ನ ಅಸ್ತಿ ಇತಿ ಮನ್ಯತೇ | ಇಲ್ಲ ಅಂತ ಹೇಳ್ತಾರೆ, ವೇದವನ್ನು ನಂಬೋದಿಲ್ಲ ಅವರು. ಇನ್ನು ಷಡ್ದರ್ಶನಗಳಿವೆ. ಅವು ವೇದವನ್ನು ಪ್ರಮಾಣವಾಗಿ ಸ್ವೀಕಾರ ಮಾಡುತ್ತವೆ ಆಸ್ತಿಕರು, ಅಸ್ತಿ, ಅಸ್ತಿ, ಅಸ್ತಿ ಇತಿ ಕಥ್ಯತೇ | ಆಸ್ತಿಕರು, ಏನು ಅಸ್ತಿ ಅಂತ ಹೇಳ್ತಾರೆ ? ಏನು ಇದೆ ಅಂತ ಹೇಳ್ತಾರೆ ? ಅಸ್ತಿ ಇತಿ ಮನ್ಯತೇ | ಇದೆ ಅಂತ ಏನು ಇದೆ ? ಮಾನವನ ಒಂದು ಇಂದ್ರಿಯಕ್ಕೆ ನಿಲುಕದಂತ ಒಂದು ವಸ್ತು ಇದೆ. ದಿವ್ಯ ಅದ್ಭುತವಾದ ಒಂದು ಶಕ್ತಿ ಇದೆ. ಈ ಲೋಕ ಮಾತ್ರವಲ್ಲ ಬ್ರಹ್ಮಾಂಡವನ್ನು ನಡೆಸುತ್ತಿರುವ ಒಂದು ಶಕ್ತಿ ಇದೆ. ನಾವೆಲ್ಲರೂ ಅದನ್ನು ನಂಬಿದ್ದೇವೆ. ಇಂದ್ರಿಯಗಳಿಗೆ ಗೋಚರವಾಗಿಲ್ಲ ಅದು, ಗೋಚರವಾಗಲಿಕ್ಕೆ ಸಾಧ್ಯವಿಲ್ಲ ಅದು. ಇಂದ್ರಿಯಾತೀವಾಗಿರುವಂತದ್ದು ಅದು. ಕಣ್ಣಿಂದ ಕಿವಿಗಳಿಂದ ಅಥವಾ ನಮ್ಮ ಯಾವುದೇ ಇಂದ್ರಿಯಗಳಿಂದ ಅದನ್ನು ಅನುಭವಿಸಲು ಸಾಧ್ಯವಿಲ್ಲ. ನಿದ್ದೆಯಲ್ಲಿ ಶೂನ್ಯದ ಅವಸ್ಥೆಯಲ್ಲಿರುತ್ತೇವೆ. ನೋಡಿ ಅದು ಬ್ರಹ್ಮಾನಂದ ಸ್ಥಿತಿ. ಬ್ರಹ್ಮೈಕ್ಯದ ಸ್ಥಿತಿ. ಅದಕ್ಕೆ ಯಾರೋ ಒಬ್ಬರು ಹಿರಿಯರು ಹೇಳ್ತಾ ಇದ್ದರು. ನಾವು ನಿದ್ರೆ ಮಾಡಿದರೆ ಅದು ಅಲ್ಪ ಕಾಲದ ಮರಣ. ನಾವು ಸುಧೀರ್ಘವಾದ ನಿದ್ರೆ ಮಾಡಿದರೆ ಅದು ಮರಣ. ಅಲ್ಪ ಮರಣ ನಿದ್ರೆ. ಸುಧೀರ್ಘ ನಿದ್ರೆ ಮರಣ. ಎಷ್ಟು ಸೊಗಸಾಗಿ ಹೇಳಿದರು ನೋಡಿ. ಆ ಅಲ್ಪ ಮರಣದ ನಿದ್ರೆಯಲ್ಲಿ ಹೇಗೆ ಇರುತ್ತೇವೆ ನೋಡಿ, ಆಗ ಬ್ರಹ್ಮೈಕ್ಯದ ಸ್ಥಿತಿಯಲ್ಲಿರುತ್ತೇವೆ. ಯಾರನ್ನಾದರೂ ಎಬ್ಬಿಸಿ ಕೇಳಿ. ಏನಪ್ಪಾ ಹೇಗಿತ್ತು ? ಅವರು ಹೇಳ್ತಾರೆ. ಹೇಗಿತ್ತು..... ಅಹಂ ಕಿಮಪಿ ನ ಜಾನಾಮಿ | ನನಗೇನು ಗೊತ್ತಾಗಲಿಲ್ಲ. ಆದರೆ ಒಂಥರಾ ಒಂಥರಾ ಸುಖವಾಗಿತ್ತು. ಸುಖವಾಗಿತ್ತು ? ಆದರೆ ಏನು ಗೊತ್ತಾಗಿಲ್ಲ ಅಂತ ಹೇಳ್ತೀರಿ. ಮತ್ತೆ ಸುಖವಾಗಿದ್ದೆ ಅಂತ ಹೇಳ್ತೀರಿ ? ಅಲ್ಲ ಅದೇನೋ ಒಂಥರಾ ಎಲ್ಲ ಮರೆತಿದ್ದೆ ನಾನು. ನಾನು ಯಾರು ಎಂಬುದನ್ನು ಕೂಡ ಮರೆತಿದ್ದೆ. ವಿಚಾರ ಮಾಡಿ. ಆತ ಆಸ್ತಿಕ. ಸತ್ಯದ ಅವಸ್ಥೆಯಲ್ಲಿರುತ್ತಾನೆ. ಅದಕ್ಕೆ ಮಾಂಡೂಕ್ಯ ಉಪನಿಷತ್ತಿನಲ್ಲಿ ಹೇಳ್ತಾರೆ. ಹೇಗೆ ನಾವು ನಿದ್ರಾ ಸ್ಥಿತಿಯಲ್ಲಿದ್ದೆವೋ ಅದೇ ರೀತಿ ಜಾಗೃತಾವಸ್ಥೆಯಲ್ಲಿದ್ದರೆ ಅಲೌಕಿಕ ಚಿಂತನೆಯಲ್ಲಿದ್ದೇವೆ ಅಂತ ಅರ್ಥ. 

ಈ ಆಸ್ತಿಕ ನಾಸ್ತಿಕ ಭೇದದಲ್ಲಿ ಲೋಕದ ಜನರಿದ್ದಾರೆ. ಅಲೌಕಿಕ ಅಂದರೆ ಅರ್ಥ ಏನು ? ಈ ಲೋಕಕ್ಕೂ ಮಿಗಿಲಾಗಿರುವಂತದ್ದು. ಇಂಗ್ಲಿಷ್ ನಲ್ಲಿ ಹೇಳ್ತೇವೆ. ಹಿಯರ್ ಅಂಡ್ ಹಿಯರ್ ಆಫ್ಟರ್ [ಇಲ್ಲಿ ಮತ್ತು ಇಲ್ಲಿಂದಾಚೆ] ಯಾರೂ ಕೂಡ ಇದೂವರೆಗೆ ಇಲ್ಲಿಂದಾಚೆ ಹೋದವರು ಈ ಲೋಕದಿಂದ ಹೋದವರು ವಾಪಸ್ಸು ಬಂದು ನಮಗೆ ರಿಪೋರ್ಟ್ ಕೊಟ್ಟಿಲ್ಲ. ಓ ನೋಡಪ್ಪ ಅಲ್ಲಿ ಇದ್ದೀನಿ ನಾನು ಅಂತಾ ಯಾರೂ ತಿಳಿಸಿಲ್ಲ.ಹೋದರೆ ಹೋದಂತೆ, ಮತ್ತೆ ಅವರು ಎಲ್ಲಿದ್ದಾರೋ? ಯಾವ ಲೋಕ ಸೇರಿಕೊಂಡಿದ್ದಾರೋ ? ಯಾವ ಸ್ಥಾನವನ್ನು ಪಡೆದುಕೊಂಡಿದ್ದಾರೋ ? ಏನೂ ಗೊತ್ತಿಲ್ಲ. ರಹಸ್ಯವಾಗಿದೆ ಅದು. ಆದರಿಂದಲೇ ನಾವು ವೇದಪ್ರಮಾಣವನ್ನು ತೆಗೆದು ಕೊಂಡಾಗ ಹೇಗೆ ಜೀವಿಸಬೇಕು ಅನ್ನೋದನ್ನ ಕಲಿಯೋದು ಮಾತ್ರವಲ್ಲ. ಹೇಗೆ ಜೀವಿಸಿದರೆ ಹೇಗೆ ಪ್ರಾಪ್ತಿಯಾಗುತ್ತೆ ಅನ್ನೋದು ಕೂಡ ವೇದದಲ್ಲಿದೆ. ಏಕೆಂದರೆ ಅದನ್ನು ಮಾನವನು ಹೇಳೋಕೆ ಸಾಧ್ಯವಿಲ್ಲ. ಮಾನವ ಶರೀರ ಬಿಟ್ಟರೆ ಬಿಟ್ಟ ಹಾಗೆ. ವಾಪಸ್ಸು ಬಂದು ಹೇಳೋದಿಲ್ಲ. ಆದ್ದರಿಂದ ಅಲೌಕಿದಲ್ಲಿ ಹೇಗಿರುತ್ತೇ ಯಾರು ತಿಳಿದಿಲ್ಲ. ಶಾಸ್ತ್ರಮೇವ ಪ್ರಮಾಣಂ | ವಿಚಾರ ಮಾಡಿ ಆದ್ದರಿಂದ ಜೀವನವನ್ನ ಯಾವ ರೀತಿ ನಡೆಸಬೇಕು ಅನ್ನೊದರಲ್ಲಿ ವೇದ ಪ್ರಮಾಣ ಇದೆ. ಯಾವ ರೀತಿ ನಡೆಸಿದರೆ ಏನು ಅದರಿಂದ ಪರಿಣಾಮ ಅನ್ನೋದು ವೇದದಲ್ಲಿದೆ. ಆದ್ದರಿಂದ ನಾವು ಶಾಸ್ತ್ರಾಧಾರಿತವಾಗಿ ಜೀವನವನ್ನು ನಡೆಸಿದಾಗ ಲೋಪದೋಷಗಳು ಉಂಟಾಗುವುದಿಲ್ಲ. ವಿಚಾರ ಮಾಡಿ. ಆದರೆ ಸಾಮಾನ್ಯವಾಗಿ ನಾವು ಚಿಂತನೆ ಮಾಡಿದಾಗ ಪಾರಮಾರ್ಥಿಕ ಚಿಂತನೆ ನಮಗೆ ಎಲ್ಲೋ ಯತ್ಕಿಂಚಿತ್ ಆಗಬಹುದಷ್ಟೆ. ಶೇಕಡ ೯೯ ರಷ್ಟು ನಮ್ಮ ಚಿಂತನೆ ವ್ಯಾವಹಾರಿಕ ದೃಷ್ಟಿಯಲ್ಲೇ ಇರುತ್ತೇ. ಇಲ್ಲೇ ಸಂಚಾರ ಮಾಡ್ತಾ ಇರುತ್ತೇ. ಇದರಿಂದ ಮೇಲೆ ಹೋಗಲಿಕ್ಕೆ ಸಾಧ್ಯಾವಾಗುವುದಿಲ್ಲವೇನೋ ಅನ್ನುವಷ್ಟು ವ್ಯಾವಹಾರಿಕದಲ್ಲಿ ಮುಳುಗಿರುತ್ತೇವೆ ನಾವು. 
ಲೋಕ ಅಂದರೇನು ? ಅಥವಾ ಲೌಕಿಕ ಎಂದರೇನು ? ಅಲೌಕಿಕ ಎಂದರೇನು ? ಸರಳ ರೀತಿಯಲ್ಲಿ ವಿಚಾರ ಮಾಡೋಣ. ಎಲ್ಲಿ ನಾನು ಅನ್ನುವ ಪಟ್ಟಿಯಲ್ಲಿ ಏನೋನು ಬರುತ್ತೋ ಅದರಲ್ಲಿ ನಾವಿದ್ದರೆ ಅದು ಲೌಕಿಕ. ಎಲ್ಲಿ ನಾನು ಅನ್ನುವ ಪಟ್ಟಿಯಲ್ಲಿ ನಾವಿಲ್ಲವೋ ಅದು ಅಲೌಕಿಕ. ಅದೇನು ? ಅರ್ಥ ಮಾಡಿಕೊಳ್ಳುವುದು ಕಷ್ಟವಾಯ್ತಲ್ವಾ? ಇನ್ನು ಸರಳ ಮಾಡೋಣ. ನನ್ನ ಪುಸ್ತಕ, ನನ್ನ ಕೈಗಡಿಯಾರ, ನನ್ನ ಮೈಕ್ರೋಫೋನ್, ನನ್ನ ಒಂದು ಕಟ್ಟಡ, ನನ್ನ ಮಗ, ನನ್ನ ಹೆಂಡತಿ, ನನಗೆ ಸಂಬಂಧ ಪಟ್ಟಿದ್ದು, ಎಲ್ಲೆಲ್ಲಿ ನನಗೆ ಸಂಬಂದಪಟ್ಟಿದೆಯೋ ನಾವು ಲೋಕದಲ್ಲಿದ್ದೇವೆ ಅಂತ ಅರ್ಥ. ಅಲೌಕಿಕಕ್ಕೇ ಅಮೇಲೆ ಬರೋಣ, ಈ ಲೋಕದಲ್ಲಿ ಇನ್ನು ಸ್ವಲ್ಪ ಆಳವಾಗಿ ಮುಳುಗಿ ಆಮೇಲೆ ಎದ್ದು ಬರೋಣ. ಈಗ ನೋಡಿ ಎಷ್ಟು ಸುಲಭ ಅರ್ಥ ಮಾಡಿಕೊಳ್ಳೋದು. ನಾನೊಂದು ವಜ್ರದ ಕೈಗಡಿಯಾರವನ್ನು ಎಷ್ಟೋ ಕೋಟ್ಯಾಂತರ ಬೆಲೆಯನ್ನ ಕೊಟ್ಟು ಕೊಂಡಿದ್ದೇನೆ, ಎಂದು ಭಾವಿಸಿ. ವಜ್ರದ ಕೈಗಡಿಯಾರ. ಯಾರದದು ? ನನ್ನದು!! ಎಲ್ಲರಿಗೂ ತೋರಿಸ್ತೀನಿ! ಅವರು ನೋಡಲೇಬೇಕು ನೋಡದಿದ್ದರೆ ಏನು ಪ್ರಯೋಜನ!!! ಅದನ್ನ ನಾನು ಎಲ್ಲರಿಗೂ ತೋರಿಸ್ತಾ ಬರ್ತೇನೆ. ನೋಡಿ ನೋಡಿ ವಜ್ರದ ಕೈಗಡಿಯಾರ, ನೀವು ಮಾತಾಡ್ಕೋತೀರಿ ಏನು ಸ್ವಾಮಿಗಳಪ್ಪ ಅಯ್ಯೋ ವಜ್ರದ ಕೈಗಡಿಯಾರ. ಎಲ್ಲರಿಗೂ ಹೊಟ್ಟೆ ಉರೀಬೇಕು. ಆಗ ನನಗೆ ಖುಷಿ ನೋಡಿ ನೋಡಿ. ಆಗ ಯಾರೋ ಕೇಳ್ತಾರೆ ನಮ್ಮನ್ನ ನಾನು ಕೋಟ್ಯಾದೀಶ್ವರ. ಸ್ವಾಮೀಜಿ ನಿಮಗ್ಯಾಕದು ನಮಗೆ ಕೊಟ್ಟು ಬಿಡಿ. ನಾನು ತೆಗೆದು ಕೊಳ್ಳುತ್ತೇನೆ ಆಯ್ತು ಇನ್ನೇನು ತಗೋಳಿ ಅಂತ ನಾನು ಕೊಡ್ತೇನೆ, ಕೊಟ್ಟ ಕೂಡಲೇ ಅದಕ್ಕೆ ಏನು ಬೆಲೆ ಇದೆ ಅದು ನನ್ನ ಅಕೌಂಟಿಗೆ ಜಮಾ ಆಗಿ ಬಿಟ್ಟಿರುತ್ತೆ. ಕೊಟ್ಟಾಗಿದೆ. ಈಗ ವಜ್ರದ ಕೈಗಡಿಯಾರ ಯಾರದ್ದು ? ನನ್ನದಾಗಿದೆಯೇ ಅದು ? ನನ್ನದಾಗಿಲ್ಲ ಮಾರಿಬಿಟ್ಟಿದ್ದೇನೆ. ಮಾರಿ ಆದ ಮೇಲೆ ಕೊಡುಕೊಂಡ ಆಕೋಟ್ಯಾಧಿಪತಿ ಮಾರನೆ ದಿನವೇ ನನಗೆ ಮೊಬೈಲ್ ನಲ್ಲಿ ಪೋನ್ ಮಾಡ್ತಾರೆ. ಸ್ವಾಮಿಜಿ, ನೀವು ಕೊಟ್ಟರಲ್ಲ ವಜ್ರದ ಕೈಗಡಿಯಾರ ಕಳೆದು ಹೋಯ್ತು 
-ಆಹೌದಾ ನಾನೇನು ಮಾಡ್ಲಿ ? ನೀವು ಕಳೆದು ಕೊಂಡಿದ್ದು ಏನೂ ಆಗಿಲ್ಲವೆಂಬಂತೆ ನಾನು ಉತ್ತರಿಸುತ್ತೇನೆ. ಒಂದು ವೇಳೆ ವಜ್ರದ ಕೈಗಡಿಯಾರ ಇನ್ನೂ ನನ್ನದೂ ಅನ್ನೋ ಪಟ್ಟಿಯಲ್ಲಿ ಇದ್ದು ಅದನ್ನ ಕಳೆದು ಕೊಂಡಿದ್ದರೆ ನನ್ನ ಅವಸ್ಥೆ ನೀವು ನೋಡೋಕಾಗೋದಾ ? ಯಾಕಂದ್ರೆ ನನ್ನ ಅವಸ್ಥೇ ನಾನು ಕೂಡ ನೋಡಿಕೊಳ್ಳಲಾಗುವುದಿಲ್ಲ ಕನ್ನಡಿಯಲ್ಲಿ. ಅಷ್ಟು ಕರಗಿ ಹೋಗಿಬಿಡ್ತಿದ್ದೆ ನಾನು. ಆದರೀಗ ಮಾರಿ ಬಿಟ್ಟಿದ್ದೀನಿ. ಈಗದು ನನ್ನದು ಅನ್ನೋ ಪಟ್ಟಿಯಲ್ಲಿ ಇಲ್ಲ.
ವಿಚಾರ ಮಾಡಿ. ಯಾವುದು ನನ್ನದಲ್ಲ ಅನ್ನೊ ಪಟ್ಟಿಯಿಂದ ತೆಗೆದು ಹಾಕಿಬಿಡಿ ನೀವು ಆಗ ಅಲೌಕಿದಲ್ಲಿರುತ್ತೀರಿ. ಯಾವುದನ್ನೇ ತಗೊಳ್ಳಿ ನೀವು. ನಾನು ಸುಮ್ಮನೆ ವಜ್ರದ ಕೈಗಡಿಯಾರದ ಉದಾಹರಣೆ ಕೊಟ್ಟೆ. ಅದಕ್ಕೆ ಯಾವುದನ್ನೇ ಜೋಡಿಸಿಕೊಳ್ಳಿ. ನನ್ನದು ಅನ್ನೋ ಪಟ್ಟಿಯಲ್ಲಿ ಯಾರನ್ನೂ ಯಾವ ವಸ್ತುವನ್ನು ಸೇರಿಸಿಕೊಳ್ಳಬಾರದು. ನೀವು ಬಹಳ ಸುಖವಾಗಿರ್ತೀರಿ. ಎಲ್ಲಿ ನಾವು ಲೋಕದಲ್ಲಿ ಅಂಟಿಕೊಂಡಿರುತ್ತೇವೆಯೋ ಆಗ ನನ್ನದು ಅನ್ನೋ ಪಟ್ಟಿಯಲ್ಲಿ ಇರುತ್ತದೆ. ವಿಚಾರ ಮಾಡಿ ಇದು ಲೌಕಿಕ ಚಿಂತನೆ. ನಂದು, ನನ್ನದು, ನಾನು, ಮಮ, ಅಹಂ ಇತಿ ಇವೆರಡು ಇದ್ದು ಬಿಟ್ಟರೆ ನಾವು ಲೋಕದಲ್ಲೇ ಇರುತ್ತೇವೆ. ಅದಕ್ಕೆ ನಾವು ಅಗ್ನಿಹೋತ್ರವನ್ನು ಮಾಡಬೇಕಾದರೆ ನಾವು ಹೇಳುತ್ತೇವೆ. ಅಗ್ನಯೇ ಸ್ವಾಹಾ | ಅಗ್ನಯೇ ಇದಂ ನ ಮಮ | ಅಂದರೆ ನಾನು ಹವಿಸ್ಸನ್ನು ಹಾಕುತ್ತಾ ಇದ್ದೀನಿ. ಯಾವುದೊಂದರ ಅಪೇಕ್ಷೆಗಲ್ಲ. 

Friday, November 27, 2015

ಆದರ್ಶ ಪುರೋಹಿತರಾಗೋಣ!


     ಹೀಗೆ ಹೇಳಿದಾಕ್ಷಣ ಹುಬ್ಬೇರಿಸುತ್ತೀರಿ ಎಂಬುದು ಗೊತ್ತು. ಏಕೆಂದರೆ ಪುರೋಹಿತ ಎಂದಾಕ್ಷಣ ಸಾಮಾನ್ಯವಾಗಿ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ಪೂಜೆ-ಪುನಸ್ಕಾರಗಳನ್ನು ಮಾಡುವ ಒಬ್ಬ  ಅರ್ಚಕನದೇ ಆಗಿರುತ್ತದೆ. ಮತ್ತೊಂದು ಕಾರಣವೂ ಇದೆ. ಬುದ್ಧಿಜೀವಿಗಳೆನಿಸಿಕೊಂಡವರು ಸಾಮಾನ್ಯವಾಗಿ 'ಪುರೋಹಿತಶಾಹಿ' ಎಂಬ ಪದವನ್ನು ಒಂದು ವರ್ಗದವರನ್ನು ದೂಷಿಸಲು ಕಾರಣವಾಗಿಯೋ, ಅಕಾರಣವಾಗಿಯೋ ಸುಲಭವಾಗಿ ಬಳಸುವ ಪದವಾಗಿದೆ. ಇಂದು ಅನೇಕ ಪದಗಳು ಮೂಲ ಅರ್ಥದಲ್ಲಿ ಬಳಕೆಯಾಗದೆ ವಿರುದ್ಧಾರ್ಥದಲ್ಲಿ ಬಳಕೆಯಾಗುತ್ತಿರುವುದು ವಿಪರ್ಯಾಸ. ಜಾತಿಯ ಬಲದಲ್ಲೇ ರಾಜಕಾರಣ ಮಾಡುತ್ತಿರುವವರು ಜಾತ್ಯಾತೀತತೆಯ ಮಾತನಾಡುತ್ತಾರೆ. ಯಾವುದಾದರೂ ಒಂದು ಕೋಮನ್ನು ದ್ವೇಷಿಸುವುದೇ ಬಂಡವಾಳವಾಗಿರುವವರು ಕೋಮು ಸೌಹಾರ್ದತೆಯ  ಮಾತನಾಡುತ್ತಾರೆ. ಕೋಟ್ಯಾಧೀಶರಾದರೂ, ಅಧಿಕಾರಸ್ಥಾನದಲ್ಲಿದ್ದು ಇತರರನ್ನು ನಿಯಂತ್ರಿಸುವ ಶಕ್ತಿಯಿರುವವರೂ ಹಿಂದುಳಿದವರು, ದಲಿತರು, ಶೋಷಿತರು ಎನಿಸಿಕೊಳ್ಳುವವರಿದ್ದಾರೆ. ಕಡುಬಡವರಾಗಿದ್ದರೂ ಹುಟ್ಟಿನ ಜಾತಿಯ ಕಾರಣ ಮುಂದುವರೆದವರು ಎಂದೆನಿಸಿಕೊಂಡವರಿದ್ದಾರೆ. ಮೂಲ ಅರ್ಥ ಕಳೆದುಕೊಂಡು ಸವಕಲಾಗಿರುವ ಪದಗಳ ಸಾಲಿನಲ್ಲಿ ಸೇರಿರುವ ಈ 'ಪುರೋಹಿತ' ಪದದ ಮೂಲ ಅರ್ಥ ಕುರಿತು ವಿಶ್ಲೇಷಿಸುವುದೇ ಈ ಲೇಖನದ ಉದ್ದೇಶವಾಗಿದೆ.
     ಮೂಲ ಸಂಸ್ಕೃತ ಪದವಾದ ಪುರೋಹಿತ ಎಂಬ ಪದದ ಶಬ್ದಾರ್ಥ 'ಪುರಸ್' ಎಂದರೆ ಮುಂದೆ 'ಹಿತ' ಎಂದರೆ ಇಡಲ್ಪಟ್ಟವನು ಅರ್ಥಾತ್ ಮುಂದೆ ಇರಿಸಲ್ಪಟ್ಟವನು, ಅಗ್ರಣಿ, ಮುಂದಿರುವವನು ಎಂದು. ಒಬ್ಬ ವ್ಯಕ್ತಿ ಪುರೋಹಿತನೆಂದು ಗೌರವಿಸಲ್ಪಡಬೇಕಾದರೆ ಆತನಲ್ಲಿ ವಿಶೇಷವಾದ ಜ್ಞಾನ ಮತ್ತು ಗುಣಗಳು ಇರಬೇಕಾಗುತ್ತದೆ. ಸಂದಿಗ್ಧ ಸಂದರ್ಭಗಳಲ್ಲಿ, ಸಮಸ್ಯೆಗಳು ಎದುರಾದ ಸಂದರ್ಭಗಳಲ್ಲಿ ಅದಕ್ಕೆ ಸೂಕ್ತ ಪರಿಹಾರಗಳನ್ನು, ಸಮಸ್ಯೆಗಳಿಂದ ಹೊರಬರುವ ಮಾರ್ಗೋಪಾಯಗಳನ್ನು ತಿಳಿಸಬಲ್ಲ ಶಕ್ತಿ ಆತನಲ್ಲಿರಬೇಕಾಗುತ್ತದೆ. ಮುಂದಿರುವುದರಿಂದ ಹಿಂದೆ ಇರುವವರಿಗೆ ಆತ ಸಹಜವಾಗಿ ಮಾರ್ಗದರ್ಶಕನಾಗಿರಬೇಕಾಗುತ್ತದೆ. ಇತರರಿಗೆ ಬುದ್ಧಿ ಹೇಳಬೇಕಾದರೆ ಆತ ಸ್ವತಃ ಜ್ಞಾನವಂತ, ಶೀಲವಂತ, ಚಾರಿತ್ರ್ಯವಂತನಾಗಿರಬೇಕಾಗುತ್ತದೆ. ಇಂತಹ ಗುಣಗಳಿರುವವರು ಮಾತ್ರ ನೈಜ ಪುರೋಹಿತರೆನಿಸಿಕೊಳ್ಳಬಲ್ಲರು. ಪಂಡಿತರು ಎಂಬ ಪದ ಸಮಾನಾರ್ಥವನ್ನು ಕೊಡುವುದಾಗಿದೆ. ಗುರುಗಳು, ಸಾಧು-ಸಂತರು, ಸರ್ವರ ಹಿತವನ್ನು ಬಯಸುವವರೆಲ್ಲರೂ ಪುರೋಹಿತರೇ ಆಗುತ್ತಾರೆ. ಇದಕ್ಕೆ ಯಾವುದೇ ಜಾತಿಯ ಕಟ್ಟಾಗಲೀ, ಲೇಪವಾಗಲೀ ಇಲ್ಲವೆಂಬುದಕ್ಕೆ ಇತಿಹಾಸದಲ್ಲಿ ಅಸಂಖ್ಯ ಉದಾಹರಣೆಗಳಿವೆ. ವಿಶ್ವಾಮಿತ್ರ, ವಸಿಷ್ಠ, ವ್ಯಾಸ, ವಾಲ್ಮೀಕಿ ಮುಂತಾದ ಅನೇಕ ಋಷಿಮುನಿಗಳು ಒಂದು ಜಾತಿಯ ಎಲ್ಲೆಗೆ ಸೇರಿದವರಲ್ಲವೆಂಬುದನ್ನು ನೆನಪಿನಲ್ಲಿಡಬೇಕಿದೆ.
     ಹೆಮ್ಮೆಯ ವಿಜಯನಗರ ಸಂಸ್ಥಾನದ ರೂವಾರಿ ವಿದ್ಯಾರಣ್ಯರು ಕಲಿಕೆಯ ಕೊನೆಯ ಹಂತದಲ್ಲಿದ್ದಾಗ ಗುರು ವಿದ್ಯಾತೀರ್ಥರು ಇತರ ಶಿಷ್ಯರಿಗೆ ಕೇಳಿದಂತೆ ಶಿಷ್ಯ ಮಾಧವನಿಗೂ (ಅರ್ಚಕರ ಮಗನಾಗಿದ್ದ ವಿದ್ಯಾರಣ್ಯರ ಪೂರ್ವಾಶ್ರಮದ ಹೆಸರು) ಕೇಳಿದ್ದರು: "ಮಾಧವ, ನೀನು ಮುಂದೆ ಏನಾಗಬೇಕೆಂದಿರುವೆ?"
ಮಾಧವ ಉತ್ತರಿಸಿದ್ದ: "ಗುರುಗಳೇ, ಮನುಷ್ಯನಲ್ಲಿ ನಾನು ಎಂಬ ಅಹಮಿಕೆ ಇರುವವರೆಗೆ, ಏನನ್ನಾದರೂ ಸಾಧಿಸುವುದು ಕಷ್ಟ. ದೇವರ ಇಚ್ಛೆ ಇದ್ದರೆ, ಕಾಣುವ ದೇವರಾದ ಮನುಕುಲದ ಸೇವೆಗಾಗಿ, ಮೌಢ್ಯದ ಕಾರಣದಿಂದ ಮಲಗಿರುವ ದೇಶದ ಜಾಗೃತಿಗಾಗಿ ನನ್ನ ಜೀವನವನ್ನು ಉಪಯೋಗಿಸುವೆ. ನನ್ನ ದೇಶ ಮತ್ತು ಧರ್ಮದ ರಕ್ಷಣೆಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ನನ್ನ ಜೀವನ ಮುಡುಪಿಡಬೇಕೆಂದಿದ್ದೇನೆ."
ಈ ಉತ್ತರದಿಂದ ಆನಂದಿತರಾದ ಗುರುಗಳು ಅವನನ್ನು ಆಲಂಗಿಸಿಕೊಂಡು, "ಮಗು, ಇತರರ ಒಳಿತಿಗೆ ಕೆಲಸ ಮಾಡುವುದು, ದೇಶ, ಧರ್ಮ, ಸ್ವಾತಂತ್ರ್ಯದ ಸಲುವಾಗಿ ಜೀವನ ಮೀಸಲಿಡುವುದು ಪವಿತ್ರವಾದುದು. ನಿನ್ನ ಆದರ್ಶದ ಪಾಲನೆಯಲ್ಲಿ ಯಶಸ್ವಿಯಾಗು. ನಿನ್ನ ಸೇವೆಯಿಂದ ಜಗತ್ತಿಗೆ ಒಳಿತಾಗಲಿ" ಎಂದು ಹೃತ್ಪೂರ್ವಕವಾಗಿ ಆಶೀರ್ವದಿಸಿದ್ದರು. ಮುಂದಿನದು ಇತಿಹಾಸ. ಹಕ್ಕ-ಬುಕ್ಕರನ್ನು ಮುಂದಿಟ್ಟುಕೊಂಡು ದೇಶ ಮತ್ತು ಧರ್ಮದ ಹಿತ ಕಾಪಾಡುವ ಧ್ಯೇಯದ ವಿಜಯನಗರ ಸಂಸ್ಥಾನ ಸ್ಥಾಪಿಸಿದರು. ವಿದ್ಯಾರಣ್ಯರು ಕೇವಲ ಮಾರ್ಗದರ್ಶಕರಾಗಿ ಉಳಿದರು. ಇದು ಆದರ್ಶ ಪುರೋಹಿತನ ಲಕ್ಷಣ.
     ಹಿಂದಿನ ರಾಜ-ಮಹಾರಾಜರುಗಳ ಆಸ್ಥಾನದಲ್ಲಿ ರಾಜಪುರೋಹಿತರುಗಳು ಇರುತ್ತಿದ್ದರು. ಅವರುಗಳು ಧಾರ್ಮಿಕ ಆಚರಣೆಗಳ ಕುರಿತಲ್ಲದೆ, ಸಮಸ್ಯೆಗಳು ಬಂದಾಗ ಅವನ್ನು ಎಲ್ಲಾ ದೃಷ್ಟಿಯಿಂದ ನೋಡಿ ಸೂಕ್ತ ಪರಿಹಾರ ರೂಪಿಸುವಲ್ಲಿ ರಾಜರಿಗೆ ನೆರವಾಗುತ್ತಿದ್ದರು. ಚಾಣಕ್ಯ, ಸಮರ್ಥ ಗುರು ರಾಮದಾಸರು ಮುಂತಾದ ನೂರಾರು ಮಾರ್ಗದರ್ಶಕರ ನೆರವಿನಿಂದ ಸನಾತನ ಸಂಸ್ಕೃತಿ ಜೀವಂತವಾಗಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡ, ಸಾವಿರಾರು ಜನರಿಗೆ ಪ್ರೇರೇಪಣೆ ನೀಡಿದ ಸಾಧು-ಸಂತರ ಸಂಖ್ಯೆ ಗಣನೀಯವಾಗಿದೆ. ಒಮ್ಮೆ ಮಹರ್ಷಿ ದಯಾನಂದ ಸರಸ್ವತಿಯವರ ಶಿಷ್ಯ ಸ್ವಾಮಿ ಶ್ರದ್ಧಾನಂದರ ಆಶ್ರಮಕ್ಕೆ ಬ್ರಿಟಿಷ್ ಪೋಲಿಸರು ನುಗ್ಗಿ ತಪಾಸಣೆ ನಡೆಸಿದ್ದರು. ಅವರಿಗೆ ಅಲ್ಲಿ ಬಾಂಬುಗಳನ್ನು ತಯಾರಿಸಲಾಗುತ್ತಿದೆಯೆಂಬ ಗುಮಾನಿ ಇತ್ತಂತೆ. ಹುಡುಕಿದರೂ ಏನೂ ಸಿಗದೆ ಪೋಲಿಸರು ವಾಪಸಾಗಿದ್ದರು. ನಂತರದಲ್ಲಿ ಶ್ರದ್ಧಾನಂದರು ಅಲ್ಲಿದ್ದ ತಮ್ಮ ಶಿಷ್ಯರನ್ನು ಉದ್ದೇಶಿಸಿ "ಕಣ್ಣ ಮುಂದೆಯೇ ಇದ್ದ ಜೀವಂತ ಬಾಂಬುಗಳನ್ನು ಪೋಲಿಸರು ಗುರುತಿಸದೇ ಹೋದರಲ್ಲಾ!" ಎಂದು ತಮಾಷೆ ಮಾಡಿದ್ದರು. ಅಲ್ಲಿ ತಯಾರಾಗುತ್ತಿದ್ದುದು ಕೃತಕ ಬಾಂಬುಗಳಲ್ಲ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಬಲ್ಲ ಜೀವಂತ ಶಿಷ್ಯರ ರೂಪದಲ್ಲಿನ ಬಾಂಬುಗಳು! ಭಾರತದ ಹಿರಿಮೆಯನ್ನು ಜಗತ್ತಿಗೆ ಸಾರಿದ ವಿವೇಕಾನಂದರು ನಮ್ಮ ಸಂಸ್ಕೃತಿಯ ಪುರೋಹಿತರು! ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ದಾರ್ಶನಿಕತೆ, ವಿದ್ವತ್ತುಗಳಿಗೆ ಹೆಸರಾದ ಸರ್ ಎಂ. ವಿಶ್ವೇಶ್ವರಯ್ಯ, ಡಿವಿಜಿ, ಡಾ. ರಾಧಾಕೃಷ್ಣನ್, ಅಬ್ದುಲ್ ಕಲಾಂ ಮುಂತಾದವರು, ನಾಡು-ನುಡಿಗಳಿಗೆ ಜೀವ ಸವೆಸಿದ ಅಸಂಖ್ಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಗ್ರಣಿಗಳಾಗಿದ್ದು ಇತರರಿಗೆ ಮಾರ್ಗದರ್ಶಿಯಾಗಿದ್ದುದನ್ನು ಸ್ಮರಿಸಬೇಕು. ಇಂತಹವರು ನಿಜ ಪುರೋಹಿತರು, ಪುರದ ಹಿತ ಬಯಸುವವರು!
     ಪುರೋಹಿತನಾದವನ ಗುರುತರವಾದ ಹೊಣೆಗಾರಿಕೆ ಎಂದರೆ ಎಡವದೆ ನಡೆಯಬೇಕಾಗಿರುವುದು ಮತ್ತು ತಿಳಿದ ಜ್ಞಾನವನ್ನು ಸಮಾಜಕ್ಕೆ ತಿಳಿಸಿಕೊಡುವುದಾಗಿರುತ್ತದೆ. ಅಗ್ರಣಿಯಾದವನೇ ಎಡವಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವುದಲ್ಲದೆ ಪುರೋಹಿತರೆಲ್ಲರೂ ಅಂತಹವರೇ ಎಂಬ ಭಾವನೆ ಮೂಡಲು ಕಾರಣವಾಗುತ್ತದೆ. ಕೆಸರೆರಚಲು ಕಾಯುತ್ತಿರುವ ಜನರು ಮತ್ತು ಮಾಧ್ಯಮಗಳವರು ಇದಕ್ಕೆ ನೀರೆರೆಯುತ್ತಾರೆ. ನಿತ್ಯಾನಂದ, ರಾಘವೇಶ್ವರರ ಉದಾಹರಣೆಗಳು ಇಲ್ಲಿ ಪ್ರಸ್ತುತವೆನಿಸುತ್ತವೆ. ಕಾವಿ ಧರಿಸಿದವರೆಲ್ಲರೂ ಸಂತರಾಗಲಾರರು ಮತ್ತು ಸಂತರಾಗಲು ಕಾವಿಯನ್ನೇ ಧರಿಸಬೇಕೆಂದಿಲ್ಲ.  ತಿಳಿದ ಜ್ಞಾನವನ್ನು ಆಸಕ್ತರಿಗೆ ಹಂಚದಿರುವುದು ಸಹ 'ಅಸ್ತೇಯ'(ಕಳ್ಳತನ)ವೆನಿಸುತ್ತದೆ. 'ಸರ್ವೇ ಭವನ್ತು ಸುಖಿನಃ ಸರ್ವೇ ಸಂತು ನಿರಾಮಯಾಃ| ಸರ್ವೇ ಭದ್ರಾಣಿ ಪಶ್ಶಂತು ಮಾ ಕಶ್ಚಿತ್ ದುಃಖಭಾಗ್ಭವೇತ್||'  ಎಂದು ಸಾರುವ ನೈಜ ಪುರೋಹಿತರು ನಾವಾಗೋಣ.
-ಕ.ವೆಂ.ನಾಗರಾಜ್.

Wednesday, November 25, 2015

ಹಾಸನದ ವೇದಭಾರತೀ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ನಾರಾಯಣಾನಂದ ಸರಸ್ವತೀ ಸ್ವಾಮೀಜಿಯವರು ಉಪನ್ಯಾಸ ಮಾಡಿದರು

[ಪೂಜ್ಯ ಶ್ರೀ ನಾರಾಯಣಾನಂದ ಸರಸ್ವತೀ ಸ್ವಾಮೀಜಿಯವರು ಹಾಸನದ ವೇದಭಾರತಿಯಲ್ಲಿ ದಿನಾಂಕ 25.11.2015 ರಂದು ನಡೆಸಿಕೊಟ್ಟ ಉಪನ್ಯಾಸನ ಮೊದಲ ಕಂತು. ಉಪನ್ಯಾಸದ ಬರಹರೂಪವನ್ನು ಸಿದ್ಧಪಡಿಸಿದವರು ಸಂಸ್ಕೃತ ಶಿಕ್ಷಕರಾದ ಶ್ರೀ ಭೈರಪ್ಪಾಜಿ]
ಉಪನ್ಯಾಸದ  ಆಡಿಯೋ  ಮೊದಲ ಕಂತು ಕೆಳಗಿನ ಕೊಂಡಿಯಲ್ಲಿ ಲಭ್ಯ
http://www.vedasudhe.com/wp-content/uploads/2015/11/Astika-Nastika.mp3

ನಾಸ್ತಿಕ ಯಾರು ಅಂತ ಹೇಳಿದ್ರೆ ಯಾರು ವೇದವನ್ನು ಪ್ರಮಾಣವಾಗಿ ಸ್ವೀಕರಿಸುವುದಿಲ್ಲವೋ ಅವನು ನಾಸ್ತಿಕ. ದೇವರನ್ನ ನಂಬುವರಲ್ಲ ಅಂತ ಅರ್ಥ ಅಲ್ಲ. ನಂಬ್ತಾರೆ. ಆದರೆ ವೇದವನ್ನು ಪ್ರಮಾಣವಾಗಿ ಸ್ವೀಕರಿಸುವುದಿಲ್ಲ. ಆದ್ದರಿಂದಲೆ ಅವರು ನ ಅಸ್ತಿ ಇತಿ ಮನ್ಯತೇ | ಇಲ್ಲ ಅಂತ ಹೇಳ್ತಾರೆ ವೇದವನ್ನು ನಂಬೋದಿಲ್ಲ ಅವರು. ಇನ್ನು ಷಡ್ದರ್ಷನಗಳಿವೆ. ಅವು ವೇದವನ್ನು ಪ್ರಮಾಣವಾಗಿ ಸ್ವೀಕಾರ ಮಾಡುತ್ತವೆ. ಆಸ್ತಿಕರು, ಅಸ್ತಿ, ಅಸ್ತಿ, ಅಸ್ತಿ ಇತಿ ಕಥ್ಯತೇ | ಆಸ್ತಿಕರು, ಏನು ಇದೆ ಅಂತ ಹೇಳ್ತಾರೆ ? ಅಸ್ತಿ ಇತಿ ಮನ್ಯತೆ | ಇದೆ ಅಂತ ಏನು ಇದೆ ? ಮಾನವನ ಒಂದು ಇಂದ್ರಿಯಕ್ಕೆ ನಿಲುಕದಂತ ಒಂದು ವಸ್ತು ಇದೆ. ದಿವ್ಯ ಅದ್ಭುತವಾದ ಒಂದು ಶಕ್ತಿ ಇದೆ. ಈ ಲೋಕ ಮಾತ್ರವಲ್ಲ ಬ್ರಹ್ಮಾಂಡವನ್ನು ನಡೆಸುತ್ತಿರುವ ಒಂದು ಶಕ್ತಿ ಇದೆ. ನಾವೆಲ್ಲರೂ ಅದನ್ನು ನಂಬಿದ್ದೇವೆ.​ ಅದು ಇಂದ್ರಿಯಗಳಿಗೆ ಗೋಚರವಾಗುವುದಿಲ್ಲ. ಅದು​ ಗೋಚರವಾಗಲಿಕ್ಕೆ ಸಾಧ್ಯವಿಲ್ಲ.ಇಂದ್ರಿಯಾತೀವಾಗಿರುವಂತದ್ದು ಅದು. ಕಣ್ಣಿಂದ ಕಿವಿಗಳಿಂದ ಅಥವಾ ನಮ್ಮ ಯಾವುದೇ ಇಂದ್ರಿಯಗಳಿಂದ ಅದನ್ನು ಅನುಭವಿಸಲಿಕ್ಕೆ ಸಾಧ್ಯವಿಲ್ಲ. ನಿದ್ದೆಯಲ್ಲಿ ಶೂನ್ಯದ ಅವಸ್ಥೆಯಲ್ಲಿರುತ್ತೇವೆ. ನೋಡಿ ಅದು ಬ್ರಹ್ಮಾನಂದಸ್ಥಿತಿ. ಬ್ರಹ್ಮೈಕ್ಯದ ಸ್ಥಿತಿ. ಅದಕ್ಕೆ ಯಾರೋ ಒಬ್ಗರು ಹಿರಿಯರು ಹೇಳ್ತಾ ಇದ್ದರು. ನಾವು ನಿದ್ರೆ ಮಾಡಿದರೆ ಅದು ಅಲ್ಪ ಕಾಲದ ಮರಣ. ನಾವು ಸುಧೀರ್ಘವಾದ ನಿದ್ರೆ ಮಾಡಿದರೆ ಅದು ಮರಣ. ಅಲ್ಪ ಮರಣ ನಿದ್ರೆ. ಸುಧೀರ್ಘ ನಿದ್ರೆ ಮರಣ. ಎಷ್ಟು ಸೊಗಸಾಗಿ ಹೇಳಿದರು ನೋಡಿ. ಆ ಅಲ್ಪ ಮರಣದ ನಿದ್ರೆಯಲ್ಲಿ ​ ಹೇಗೆ ಇರುತ್ತೇವೆ ನೋಡಿ. ಆಗ ಬ್ರಹ್ಮೈಕ್ಯದ ಸ್ಥಿತಿಯಲ್ಲಿರುತ್ತೇವೆ. ಯಾರನ್ನಾದರೂ ಎಬ್ಬಿಸಿ ಕೇಳಿ. ಏನಪ್ಪಾ ಹೇಗಿತ್ತು ?​ ಅಂದರೆ​ ಅವರು ಹೇಳ್ತಾರೆ. ಹೇಗಿತ್ತು..... ಅಹಂ ಕಿಮಪಿ ನ ಜಾನಾಮಿ | ನನಗೇನು ಗೊತ್ತಾಗಲಿಲ್ಲ. ಆದರೆ ಒಂಥರಾ ಒಂಥರಾ ಸುಖವಾಗಿತ್ತು. ಸುಖವಾಗಿತ್ತು ? ಆದರೆ ಏನು ಗೊತ್ತಾಗಿಲ್ಲ ಅಂತ ಹೇಳ್ತೀರಿ. ಮತ್ತೆ ಸುಖವಾಗಿದ್ದೆ ಅಂತ ಹೇಳ್ತೀರಿ ? ಅಲ್ಲ ಅದೇನೋ ಒಂಥರಾ ಎಲ್ಲ ಮರೆತಿದ್ದೆ ನಾನು. ನಾನು ಯಾರು ಎಂಬುದನ್ನು ಕೂಡ ಮರೆತಿದ್ದೆ. ವಿಚಾರ ಮಾಡಿ. ಆತ ಆಸ್ತಿಕ. ಸತ್ಯದ ಅವಸ್ಥೆಯಲ್ಲಿರುತ್ತಾನೆ. ಅದಕ್ಕೆ ಮಾಂಡೂಕ್ಯ ಉಪನಿಷತ್ತಿನಲ್ಲಿ ಹೇಳ್ತಾರೆ. ಹೇಗೆ ನಾವು ನಿದ್ರಾ ಸ್ಥಿತಿಯಲ್ಲಿದ್ದೆವೋ ಅದೇ ರೀತಿ ಜಾಗೃತಾವಸ್ಥೆಯಲ್ಲಿದ್ದರೆ ಅಲೌಕಿಕ ಚಿಂತನೆಯಲ್ಲಿದ್ದೇವೆ ಅಂತ ಅರ್ಥ. ಮತ್ತೊಮ್ಮೆ ಹೇಳ್ತೇವೆ. ನಿದ್ರೆಯ ಅವಸ್ಥೆಯಲ್ಲಿ ಹೇಗಿರುತ್ತೇವೆಯೋ ಅದೇ ಅವಸ್ಥೆಯನ್ನು ಜಾಗೃತ ಅವಸ್ಥೆಯಲ್ಲಿ ಅನುಭವಿಸಿದಾಗ ಅದು ಅಲೌಕಿಕವಾದಂತಹ ಸ್ಥಿತಿ. ಅರ್ಥ ಆಯ್ತಲ್ಲ ?
ಈ ಆಸ್ತಿಕ ನಾಸ್ತಿಕ ಭೇದದಲ್ಲಿ ಲೋಕದ ಜನರಿದ್ದಾರೆ. ಅಲೌಕಿಕ ಅಂದರೆ ಅರ್ಥ ಏನು ? ಈ ಲೋಕಕ್ಕೂ ಮಿಗಿಲಾಗಿರುವಂತದ್ದು. ಇಂಗ್ಲಿಷ್ ನಲ್ಲಿ ಹೇಳ್ತೇವೆ. Here and hereafter ಇಲ್ಲಿ ಮತ್ತು ಇಲ್ಲಿಂದಾಚೆ ಯಾರೂ ಕೂಡ ಇದೂವರೆಗೆ ಇಲ್ಲಿಂದಾಚೆ ಹೋದವರು ಈ ಲೋಕದಿಂದ ಹೋದವರು ವಾಪಸ್ಸು ಬಂದು ನಮಗೆ ರಿಪೋರ್ಟ್ ಕೊಟ್ಟಿಲ್ಲ. ಓ ನೋಡಪ್ಪ ಅಲ್ಲಿ ಇದ್ದೀನಿ ನಾನು. ಅಲ್ಲಿದ್ದೆ. No past tense, no present tense ಅಲ್ಲಿ. ಹೋದರೆ ಹೋದಾಗೆ. ಮತ್ತೆ ಅವರು ಎಲ್ಲಿದ್ದಾರೋ ? ಯಾವ ಲೋಕ ಸೇರಿಕೊಂಡಿದ್ದಾರೋ ? ಯಾವ ಹುದ್ದೆ ? ಯಾವ ಸ್ಥಾನವನ್ನು ಪಡೆದುಕೊಂಡಿದ್ದಾರೋ ? ಏನು ಗೊತ್ತಿಲ್ಲ. ರಹಸ್ಯವಾಗಿದೆ ಅದು. ಆದರಿಂದಲೇ ನಾವು ವೇದಪ್ರಮಾಣವನ್ನು ತೆಗೆದು ಕೊಂಡಾಗ ಹೇಗೆ ಜೀವಿಸಬೇಕು ಅನ್ನೋದನ್ನ ಕಲಿಯೋದು ಮಾತ್ರವಲ್ಲ. ಹೇಗೆ ಜೀವಿಸಿದರೆ ಹೇಗೆ ಪ್ರಾಪ್ತಿಯಾಗುತ್ತೆ ಅನ್ನೋದು ಕೂಡ ವೇದದಲ್ಲಿದೆ. ಏಕೆಂದರೆ ಅದನ್ನು ಮಾನವನು ಹೇಳೋಕೆ ಸಾಧ್ಯವಿಲ್ಲ. ಮಾನವ ಶರೀರ ಬಿಟ್ಟರೆ ಬಿಟ್ಟ ಹಾಗೆ. ವಾಪಸ್ಸು ಬಂದು ಹೇಳೋದಿಲ್ಲ.
Wednesday, November 11, 2015

ನಟೇಶ ಭಟ್ ಆಗುಂಬೆ
ನಿ(ನ)ಮ್ಮ ವೇದಸುಧೆಯಲ್ಲಿನ ವೇದದ(ವೇಂದಾಂತದ) ಮೂಲ ಚಿಂತನೆಗಳು ಎಲ್ಲಾ ಕಾಲಕು ಸಾಧುವಾದದ್ದು. ಇಂತಹ ಚಿಂತಕರು ಹಾಗು ಚಿಂತನೆಗಳು ಸಮಾಜದ ಮೂಲೆ ಮೂಲೆಗೆ ಪ್ರಸರಿಸಬೇಕು ವಂಬುದು ನನ್ನ ಅನಿಸಿಕೆ.ಹಳೆ ಬೇರು  ಹೊಸ  ಚಿಗರು  ಮೂಡಿರಲು ಮರ ಸೊಗಸು,  ಹಾಗೇಯೆ ವೇದ ವೆಂಬ ಮರಕ್ಕೆ ಶ್ರುತಿ ಮತ್ತು ಸ್ಮೃತಿ ಗಳ ಮೆಳೈಕೆಯ ವಿಚಾರಗಳು ಮನುಜಕುಲಕ್ಕೆ ಜ್ಞಾನದೀವಿಗೆ ಆಗಲಿದೆ. ನಿಮ್ಮ ಸತ್ಕಾರ್ಯ ಸಾಧುವಾದುದ್ದೆ ಆಗಿದೆ. ವೇದಪುರುಷ ನಿಮಗೆ ವೇದಸುಧೆಯನ್ನು ಸದಾನಿಡುವ ಶಕ್ತಿನೀಡಿ ಆಜ್ಞಾನದ ಕತ್ತಲೆಯಲ್ಲಿ ಇರುವ ಭಾರತದ ವೈದಿಕಸಂಸ್ಕ್ರತಿಯಾನ್ನು ಮರೆಯುತ್ತಿರುವವರಿಗೆ ಜ್ಞಾನದ ದೀಪದ ಮೂಲಕ ದಾರಿ ತೋರುವಂತಾಗಲಿ.
 ವೇದಸುಧೆಯ ಒದುಗ ನಟೇಶ ಭಟ್ ಆಗುಂಬೆ

Monday, November 9, 2015

ಆ ಹಳ್ಳಿಯ ಅವಿದ್ಯಾವಂತ ಮುದುಕಿಯ ನಡೆಯು ವೇದಕ್ಕನುಗುಣವಾಗಿಯೇ ಇದೆ-ಅಲ್ಲವೇ?


ಆ ತಾಯಿ ಹಳ್ಳಿ ಮುದುಕಿ ಗಂಡನ ಶವದ ಮುಂದೆ ಕುಳಿತಿದ್ದಳು. ಮಗಳು ರೋಧಿಸುತ್ತಿದ್ದಳು " ಅಪ್ಪಾ! ನೀನು ಹೋಗಿ ಬಿಟ್ಯೆಲ್ಲಾ!! ಇನ್ನು ತೌರಮನೆಗೆ ನಾನು ಹ್ಯಾಗ್ ಬರಲಿ? ನನ್ನ ಸುಖ -ದುಃಖ ಕೇಳೋರ್ಯಾರು? -ಹೆಣ್ಣು ಮಗಳ ರೋದನ ಮುಗಿಲು ಮುಟ್ಟಿತ್ತು. ಎಷ್ಟಾದರೂ ಹೆಣ್ಣು ಮಕ್ಕಳಿಗೆ ಅಪ್ಪನ ಬಗ್ಗೆ ಬಲು ವಾಂಚಲ್ಯ.

ಸ್ವಲ್ಪ ಹೊತ್ತು ಮಗಳು ಅಳುವುದನ್ನು ಕೇಳಿದ ತಾಯಿ ಮಗಳನ್ನು ತಬ್ಬಿಕೊಂಡಳು"ಸುಮ್ಕಿರು ಮಗ, ಅವ್ನು ಒಂಟು ಬಿಟ್ಟಾ ಅಂದ್ರೆ ಈ ಜೀವ ಬದುಕಿಲ್ವಾ? ನನ್ನ ಕೈಲಿ ಸಕ್ತಿ ಇರೋವರ್ಗೂ ಕೂಲಿನಾರೂ ಮಾಡಿ ನಿಂಗೆ ಗೌರಿಕಾಯಿ ಕೊಡ್ತೀನಿ.ಬಿಡಾಕಿಲ್ಲ, ಸುಮ್ಕಿರು ಅಳ್ ಬ್ಯಾಡ. ಆ ಮಗಿನ್ ಕಡೆ ನೋಡು, ಆ ಮಗಿಗ್ ಏನಾದ್ರೂ ಕುಡ್ಯಕ್ಕಾರು ಕೊಡು"

ಅಯ್ಯಪ್ಪ! ಆ ತಾಯಿ ಅಲ್ಲಿರೋ ತನ್ ಮಕ್ಕಳಿಗೆಲ್ಲಾ ಸಾಂತ್ವನ ಹೇಳುತ್ತಿದ್ದಳು.ಅವಳ ಗಂಡು ಮಕ್ಕಳೂ ಕೂಡ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ " ಏಳ್ಲಾ ಮಗ, ಮಾಡ ಜಬಾಬ್ದಾರಿ ಮಾಡು"
-ಈ ಮಾತು ಕೇಳುವಾಗ ನನಗೆ ವೇದಮಂತ್ರ ಒಂದರ ನೆನಪಾಯ್ತು

ಮಾ ಗತಾನಾಮಾ ದಿಧೀಥಾ ಯೇ ನಯಂತಿ ಪರಾವತಮ್|
ಆ ರೋಹ ತಮಸೋ ಜ್ಯೋತಿರೇಹ್ಯಾ ತೇ ಹಸ್ತೌರಭಾಮಹೇ
[ಅಥರ್ವ ವೇದ ಕಾಂಡ-೮, ಸೂಕ್ತ-೧ , ಮಂತ್ರ- ೮ ]


ಅರ್ಥ:-
ಹೇ ಜೀವಾತ್ಮನೇ, ಶರೀರಧಾರಿಯಾದ ಪುರುಷನೇ,
ಯೇ ಪರಾವತಮ್ = ಯಾರು ಪರಲೋಕವನ್ನು
ನಯಂತಿ = ತಲುಪಿರುತ್ತಾರೋ ಅವರಿಗಾಗಿ
ಮಾ ದೀಧೀಥಾಃ = ನೀನು ನೆನೆನೆನೆದು ಹಂಬಲಿಸುತ್ತಾ ಕೂಡದಿರು
ಗತಾನಾಮ್ ಮಾ ಆ ದಿಧೀಥಾಃ = ಗತಿಸಿದವರ ಬಗ್ಗೆ ದುಃಖಿಸುತ್ತಾ ಕೂಡದಿರು
ತಮಃ ಆರೋಹ = ತಮಸ್ಸಿನಿಂದ ಮೇಲೇಳು
ಜ್ಯೋತಿಃ ಆ ಇಹಿ = ಬೆಳಕಿನತ್ತ ಪಯಣಿಸು
ತೇ ಹಸ್ತೌ ರಭಾಮಹೇ = ನಿನ್ನ ಕೈಗಳನ್ನೆತ್ತಿ ನಾವು ಹಿಡಿದು ಉದ್ಧರಿಸುತ್ತೇವೆ
ಭಾವಾರ್ಥ:-
ಹೇ ಜೀವಾತ್ಮನೇ, ಶರೀರಧಾರಿಯಾದ ಪುರುಷನೇ,ಯಾರು ಪರಲೋಕವನ್ನು ತಲುಪಿರುತ್ತಾರೋ ಅವರಿಗಾಗಿ ನೀನು ನೆನೆನೆನೆದು ಹಂಬಲಿಸುತ್ತಾ ಕೂಡದಿರು, ಗತಿಸಿದವರ ಬಗ್ಗೆ ದು:ಖಿಸುತ್ತಾ ಕೂಡದಿರು. ತಮಸ್ಸಿನಿಂದ ಮೇಲೇಳು ಬೆಳಕಿನತ್ತ ಪಯಣಿಸು ನಿನ್ನ ಕೈಗಳನ್ನೆತ್ತಿ ನಾವು ಹಿಡಿದು ಉದ್ಧರಿಸುತ್ತೇವೆ.

ಈ ಮಂತ್ರವು ಗತಿಸಿದವರ ಬಗ್ಗೆ ದು:ಖಿಸುವುದನ್ನು ಅಜ್ಞಾನವೆಂದೇ ಹೇಳುತ್ತದೆ. ವೇದದ ಈ ಮಾತನ್ನು ಅರಗಿಸಿಕೊಳ್ಳುವುದು ಕಷ್ಟವೇ ಹೌದು. ಹಾಗಾದರೆ ಗತಿಸಿದವರ ಬಗ್ಗೆ ದುಃಖಿಸಬಾರದೇ? ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಅವನ ಸಂಬಂಧಿಕರು ಶೋಕಿಸದಿದ್ದರೆ ಸುತ್ತಮುತ್ತಲ ಜನರಾದರೂ ಏನೆಂದಾರು? ಇವರಿಗೆ ಮನುಷ್ಯತ್ವವೇ ಇಲ್ಲವೇ? ಇಷ್ಟೇನಾ ಸಂಬಂಧ? ಇವರ ಮುಖದಲ್ಲಿ ದುಃಖದ ಛಾಯೆಯೇ ಇಲ್ಲವಲ್ಲಾ!!

ನಾವು ಅತ್ಯಂತ ಮಹತ್ವಉಳ್ಳ ಈ ವಿಷಯದ ಬಗ್ಗೆ ಅತ್ಯಂತ ಗಂಭೀರವಾಗಿ ವಿಚಾರ ಮಾಡಬೇಕು. ಸತ್ತವರ ಬಗ್ಗೆ ಶೋಕಿಸುತ್ತಾ ಕೂರುವುದು ಅಜ್ಞಾನವೆಂದು ವೇದವು ಹೇಳುವುದು ಸತ್ಯವಾಗಿದೆ. ನಾವು ಶವದ ಮುಂದೆ ಕುಳಿತು ಅಳುವುದರಿಂದ ಪ್ರಯೋಜನವಾದರೂ ಏನು? ನಮ್ಮೊಳಗಿನ ದುಃಖವು ಕಡಿಮೆಯಾಗಬಹುದು ನಿಜ. ಆದರೆ ನಮಗೆ ದುಃಖವಾಗಿರುವುದನ್ನೇ ವೇದವು ತಮಸ್ಸು ಎಂದು ಹೇಳುತ್ತದೆ. ಈ ಕತ್ತಲಿನಿಂದ ಬೆಳಕಿನ ಕಡೆಗೆ ಅರ್ಥಾತ್ ಜ್ಞಾನದ ಕಡೆಗೆ ಪಯಣಿಸು ನಿನ್ನ ಕೈಗಳನ್ನು ನಾನು ಹಿಡಿದು ಮೇಲೆತ್ತುತ್ತೇನೆಂದು ಭಗವಂತನು ನುಡಿಯುತ್ತಾನೆ.

ಸಾವು ಯಾರ ವಯಸ್ಸನ್ನೂ ಕೇಳುವುದಿಲ್ಲ. ಆದರೆ ವಯಸ್ಸಾದಮೇಲೆ ಬರುವುದು ಸಹಜ ಸಾವು. ಹೆತ್ತ ಅಪ್ಪ-ಅಮ್ಮನನ್ನು ಅವರ ವೃದ್ಧಾಪ್ಯದಲ್ಲಿ ನೋಡಿಕೊಳ್ಳಬೇಕಾದ್ದು ಮಕ್ಕಳ ಕರ್ತವ್ಯ. ಮಕ್ಕಳು ವೃದ್ಧ ತಂದೆ-ತಾಯಿಯರ ಸೇವೆಮಾಡುತ್ತಿರುವಾಗ ಸಹಜವಾಗಿ ಸಾವು ಬಂದರೆ ಮಕ್ಕಳು ಅಳುತ್ತಾ ಕುಳಿತುಕೊಳ್ಳುವ ಅವಶ್ಯಕತೆ ಇಲ್ಲ. ಬದುಕಿದ್ದಾಗ ತಂದೆ-ತಾಯಿಯರ ಸೇವೆ ಮಾಡಿದ ಸಮಾಧಾನವಿರುತ್ತದೆ. ಆದರೆ ಸೇವೆ ಮಾಡಬೇಕಾದಾಗ ಸೇವೆ ಮಾಡದೆ ಅಪ್ಪ-ಅಮ್ಮ ಸತ್ತಾಗ ಮೃತದೇಹದ ಮುಂದೆ ಕುಳಿತು ಕಣ್ಣೀರು ಹಾಕಿದರೇನು ಪ್ರಯೋಜನ? ಆಗ ನಿರ್ವಹಿಸಬೇಕಾದ ಜವಾಬ್ದಾರಿಯೇ ಬೇರೆ. ಮೃತದೇಹವನ್ನು ಪಂಚಭೂತಗಳಲ್ಲಿ ಲೀನವಾಗಿಸಲು ಅಗತ್ಯವಾದ ಅಂತ್ಯಸಂಸ್ಕಾರ ಕ್ರಿಯೆಗಳು. ಅಷ್ಟೆ
                 ಪುನರಪಿ ಜನನಮ್-ಪುನರಪಿ ಮರಣಮ್ ಪುನರಪಿ ಜನನೀ ಜಠರೇ ಶಯನಮ್, ಇಹಸಂಸಾರೇ ಬಹುದುಸ್ತಾರೇ ಕೃಪಯಾ ಪಾರೇ ಪಾಹಿ ಮುರಾರೇ,ಭಜಗೋವಿಂದಮ್, ಭಜಗೋವಿಂದಮ್, ಗೋವಿಂದಮ್ ಭಜ ಮೂಢಮತೇ-ಎಂದು ಶಂಕರರು ಹೇಳುತ್ತಾರೆ.
                        ಮತ್ತೆ ಹುಟ್ಟುವುದು ಮತ್ತೆ ಸಾಯುವುದು ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ರೀತಿಯ ಸಂಸಾರಕ್ಕೆ ಪಾರವೇ ಇಲ್ಲ. ಬಹಳ ಸುಲಭವಾಗಿ ಈ ಹುಟ್ಟು-ಸಾವುಗಳ ಚಕ್ರದಿಂದ ಹೊರಬರಲಾಗುವುದಿಲ್ಲ.ಆದ್ದರಿಂದ ಹುಟ್ಟಿರುವಾಗ ಆ ಭಗವಂತನ ಸ್ಮರಣೆಯನ್ನು ಮಾಡು, ಎಂದು ಶಂಕರರು ಹೇಳುತ್ತಾರೆ.

ಅಂದರೆ ಹುಟ್ಟು-ಸಾವುಗಳನ್ನು ಯಾರೂ ತಪ್ಪಿಸುಕೊಳ್ಳಲು ಸಾಧ್ಯವೇ ಇಲ್ಲ. ಹುಟ್ಟಿದವನು ಸಾಯಲೆ ಬೇಕು. ಸತ್ತವನು ಹುಟ್ಟಲೇ ಬೇಕು. ಈ ಹುಟ್ಟು ಸಾವುಗಳೆಲ್ಲಾ ಜಡ ಶರೀರಕ್ಕೇ ಹೊರತೂ ಆತ್ಮಕ್ಕಲ್ಲ. ಆದ್ದರಿಂದ ಶೋಕಿಸುವ ಅಗತ್ಯವಿಲ್ಲ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಈ ಮಾತುಗಳನ್ನು ಕೇಳಿ..
[ಸಾಂಖ್ಯಾಯೋಗ ಶ್ಲೋಕ - ೨೭]
ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ |
ತಸ್ಮಾದಪರಿಹಾರ್ಯೇರ್ಥೇ ನತ್ವಂ ಶೋಚಿತು ಮರ್ಹಸಿ ||

ಹುಟ್ಟಿದವನಿಗೆ ಮರಣವು ನಿಶ್ಚಯವು ಮತ್ತು ಸತ್ತವನಿಗೆ ಜನ್ಮವು ನಿಶ್ಚಯವು. ಆದುದರಿಂದ ಪರಿಹರಿಸಲಾಗದ ಈ ವಿಷಯದಲ್ಲಿ ನೀನು ಶೋಕಿಸಬಾರದು

ದೇಹೀ ನಿತ್ಯ ಮವಧ್ಯೋಯಂ ದೇಹೇ ಸರ್ವಸ್ಯ ಭಾರತ |
ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹಸಿ ||
[ಸಾಂಖ್ಯಾಯೋಗ ಶ್ಲೋಕ - ೩೦]
ಎಲ್ಲರ ದೇಹದಲ್ಲೂ ಇರುವ ಈ ಆತ್ಮನು ಎಂದಿಗೂ ನಾಶವಾಗುವುದಿಲ್ಲ. ಆದ್ದರಿಂದ ನೀನು ಸಮಸ್ತ ಪ್ರಾಣಿಗಳನ್ನು ಕುರಿತು ಶೋಕಿಸಬಾರದು. ಹೀಗೆ ಸಾವಿನ ಬಗ್ಗೆ ವೇದವು ಏನು ಹೇಳಿದೆಯೋ ಅದನ್ನೇ ಶ್ರೀ ಕೃಷ್ಣನೂ ಹೇಳಿದ್ದಾನೆ. ಶಂಕರಾಚಾರ್ಯರೂ ಹೇಳಿದ್ದಾರೆ.
ಗತಿಸಿದವರ ಬಗ್ಗೆ ಶೋಕಿಸದಿರು,ತಮಸ್ಸಿನಿಂದ ಮೇಲೇಳು, ನಿನ್ನ ಕೈ ಹಿಡಿದು ನಾನು ಮೇಲೆತ್ತುತ್ತೇನೆ- ಎಂಬ ಭಗವಂತನ ಮಾತು ನಮಗೆ ಧೈರ್ಯವನ್ನು ಕೊಡುವಂತಹದ್ದು. ತನ್ನ ಚಿಕ್ಕ ಪ್ರಾಯದಲ್ಲಿ ಪತಿಯನ್ನು ಕಳೆದುಕೊಂಡು ಚಿಕ್ಕಪುಟ್ಟ ಮಕ್ಕಳೊಡನೆ ಒಬ್ಬ ಸ್ತ್ರೀ ಬದುಕಬೇಕಾದ ಅನಿವಾರ್ಯ ಪರಿಸ್ಥಿಗಳು ಬಂದಿರುವ ಹಲವು ಉಧಾಹರಣೆಗಳನ್ನು ಕಾಣಬಹುದು. ಆ ಸಂದರ್ಭದಲ್ಲಿ ತಾಯಿಯಾದವಳು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕೋ ಅಥವಾ ಸತ್ತ ಪತಿಯ ಬಗ್ಗೆ ಶೋಕಿಸುತ್ತಾ ಕುಳಿತುಕೊಳ್ಳಬೇಕೋ. ಇಂತಹ ಸಂದರ್ಭದಲ್ಲಿ ವೇದವು ನಮಗೆ ಸಹಾಯಕ್ಕೆ ಬರುತ್ತದೆ. ಇಂತಹಾ ದು:ಖದ ಸ್ಥಿತಿಯಲ್ಲೂ ತಾಯಿಯಾದವಳು ಮಕ್ಕಳ ಅಭ್ಯುದಯದ ಬಗ್ಗೆ ಯೋಚಿಸಬೇಕೇ ಹೊರತೂ ಸತ್ತ ಪತಿಯ ಬಗ್ಗೆ ದು:ಖಿಸುತ್ತಾ ಕುಳಿತುಕೊಳ್ಳಕೂಡದು. ಅಂತಹಾ ತಮಸ್ಸಿನಿಂದ ಹೊರ ಬರಲು ವೇದವು ಕರೆಕೊಡುತ್ತದೆ. ಸಮಾಜದಲ್ಲಿ ತನ್ನ ಬಗ್ಗೆ ಜನರು ಏನು ಅಂದುಕೊಂಡಾರೋ ಎಂಬ ಭೀತಿಯಲ್ಲಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುವ ಅನೇಕ ಸ್ತ್ರೀಯರನ್ನು ಸಮಾಜದಲ್ಲಿ ಕಾಣಬಹುದು. ಅಂತಹಾ ಸೋದರಿಯರಿಗೆಲ್ಲಾ ವೇದವು ಮಾನಸಿಕವಾಗಿ ಶಕ್ತಿಯನ್ನು ತುಂಬುತ್ತದೆ.

ಒಬ್ಬ ವ್ಯಕ್ತಿಯ ಸಾವಿನಿಂದ ಕುಟುಂಬದವರು ಶೋಕಸಾಗರದಲ್ಲಿ ಮುಳುಗಿದಾಗ ಅಂತವರಿಗೆ ವೇದವು ಹೇಳುತ್ತದೆ.. . . .
ಮೈತಂ ಪಂಥಾಮನು ಗಾ ಭೀಮ ಏಷ ಯೇನ ಪೂರ್ವಂ ನೇಯಥ ತಂ ಬ್ರವೀಮಿ|
ತಮ ಏತತ್ ಪುರುಷ ಮಾ ಪ್ರ ಪತ್ಥಾ ಭಯಂ ಪರಸ್ತಾದಭಯಂ ತೇ ಅರ್ವಾಕ್ ||

[ಅಥರ್ವ ವೇದ ಕಾಂಡ-೮, ಸೂಕ್ತ-೧, ಮಂತ್ರ-೧೦]

ಅನ್ವಯಾರ್ಥ:
ಏತಮ್ ಪಂಥಾನಮ್ ಮಾ ಅನುಗಾಃ = ಈ ಪಲಾಯನವಾದದ ಮಾರ್ಗವನ್ನು ಅನುಸರಿಸದಿರು
ಭೀಮ ಏಷ: = ಇದು ಭಯಾನಕವಾಗಿದೆ
ಯೇನ ಪೂರ್ವಮ್ ನ ಇಯಥ = ಯಾವ ಮಾರ್ಗದಲ್ಲಿ ನೀನು ಮೊದಲಿನಿಂದಲೂ ಹೋಗಿಲ್ಲವೋ
ತಮ್ ಬ್ರಮೀಮಿ = ಅದನ್ನು ಕುರಿತು ನಿನಗೆ ಹೇಳುತ್ತೇನೆ
ಏತತ್ ತಮಃ = ಈ ಮೌಢ್ಯದ ಮಾರ್ಗವು ತಮಸ್ಸಿನಿಂದ ತುಂಬಿದೆ
ಪುರುಷ = ಹೇ ಜೀವ ಪುರುಷನೇ
ಮಾ ಪ್ರಪತ್ಥಾಃ = ನೀನು ಕತ್ತಲೆಯಲ್ಲಿ ಹೋಗದಿರು,ಕೆಳಗೆ ಬೀಳದಿರು [ಏಕೆಂದರೆ]
ಪರಸ್ಥಾತ್ ಭಯಮ್ = ಅದರಾಚೆಗೆ ಭಯವಿದೆ
ತೇ ಅರ್ವಾಕ್ ಅಭಯಮ್ = ಮುಂದೆ ಮುನ್ನಡೆದರೆ ನಿನಗೆ ಅಭಯವಿದೆ,ಬೆಳಕಿದೆ.
ಭಾವಾರ್ಥ:-
ಯಾರೇ ಸತ್ತರೂ ದುಃಖಿಸಿ ಕೂರುವಂತಹ ಪಲಾಯನ ವಾದವನ್ನು ಅನುಸರಿಸಬೇಡ.ಏಕೆಂದರೆ ಆ ಮಾರ್ಗವು ಆತ್ಮಘಾತಕವೂ, ಭಯಕಾರವೂ ಆದುದಾಗಿದೆ. ನಿರ್ಭಯವಾದ ಸ್ವಚ್ಚ ಬೆಳಕಿನಲ್ಲಿ ಮುನ್ನಡೆದೆಯಾದರೆ ಅಲ್ಲಿ ಅಭಯವೂ ಇದೆ, ಬೆಳಕೂ ಇದೆ.
                ಈ ವೇದ ಮಂತ್ರದ ಅರ್ಥವನ್ನು ಅರಿಯುತ್ತಾ ಹೋದಂತೆ ರೋಮಾಂಚನವಾಗದಿರದು. ಯಾವುದೇ ದುಃಖದ ಸಮಯದಲ್ಲಿ ಶೋಕಿಸುತ್ತಾ ಕುಳಿತರೆ ಆ ಪರಿಸ್ಥಿತಿಯು ಸರಿಹೋಗುವುದಿಲ್ಲ.ಬದಲಿಗೆ ಭಯವು ಹೆಚ್ಚಾಗುತ್ತದೆ. ತನ್ನ ಬದುಕಿನ ಬಗ್ಗೆ ಬೇಸರಮೂಡುತ್ತದೆ. ಇದನ್ನೇ ವೇದವು ತಮಸ್ಸು ಎನ್ನುತ್ತದೆ. ಬದಲಿಗೆ ದುಃಖಿಸದೆ ಮುಂದೆ ಮುನ್ನಡೆದರೆ ದಾರಿ ಕಾಣುತ್ತದೆ, ಪರಿಸ್ಥಿಯನ್ನು ಮೆಟ್ಟಿ ನಿಲ್ಲುವಂತಹ ಸಾಮರ್ಥ್ಯವು ತಾನೇ ತಾನಾಗಿ ಬರುತ್ತದೆ. ನಾನು ಕೈ ಹಿಡಿದು ಮೇಲೆತ್ತುತ್ತೇನೆ ಎಂಬ ಭಗವಂತನ ಅಭಯದ ಮಾತು ಎಷ್ಟು ಶಕ್ತಿಯನ್ನು ಕೊಡುತ್ತದೆ! ಅಲ್ಲವೇ?

ಆ ಹಳ್ಳಿಯ ಅವಿದ್ಯಾವಂತ ಮುದುಕಿಯ ನಡೆಯು ವೇದಕ್ಕನುಗುಣವಾಗಿಯೇ ಇದೆ-ಅಲ್ಲವೇ?

ಈ ಸಂದರ್ಭದಲ್ಲಿ ಹತ್ತಿರದ ಹಂಪಾಪುರದಲ್ಲೇ ಇಪ್ಪತ್ತು ವಯಸ್ಸಿನ ಮಗನನ್ನು ಕಳೆದುಕೊಂಡು ತಾಯಿಯು ಅವನ ಕೊರಗಿನಲ್ಲಿ ಹಾಸಿಗೆ ಹಿಡಿದಾಗ RSS ಪ್ರಚಾರಕರೊಬ್ಬರ ಸಲಹೆಯಂತೆ ನಾಲ್ಕು ಹಸುಗಳನ್ನು ಸಾಕಲು ಆರಂಭಿಸಿದವರು, ಈಗ ಗೋಶಾಲೆಯನ್ನೇ ನಡೆಸುತ್ತಾ ಗೋವುಗಳಲ್ಲೇ ಮಗನನ್ನು ಕಂಡು ಗೋ ಸೇವೆ ಮಾಡಿಕೊಂಡು ಸಮಾಜ ಮುಖಿ ಕೆಲಸದಲ್ಲಿ ಪೂರ್ಣ ತೊಡಗಿಸಿಕೊಂಡಿದ್ದಾರೆ.ಕಳೆದ ಕೆಲವು ದಿನಗಳಲ್ಲಿ ನನ್ನ ಸಂಬಂಧಿಗಳು ಮೂರು ಜನ ಕ್ಯಾಲಿಕಟ್ ಬೀಚ್ ನಲ್ಲಿ ಸಮುದ್ರದ ಅಲೆಗೆ ಸಿಕ್ಕಿ ಕೊನೆಯುಸಿರೆಳೆದರು. ಒಂದು ಮನೆಯ ಇಬ್ಬರು ಅಳಿಯಂದಿರು ಮತ್ತು ಒಬ್ಬ ಮೊಮ್ಮಗ. ಆ ಅತ್ತೆ-ಮಾವ ಮೌನವಾಗಿ ಎಲ್ಲವನ್ನೂ ಸಹಿಸಿದರೆ ಅಪ್ಪ-ಅಮ್ಮಂದಿರು ಕಂಗಾಲಾಗಿದ್ದರು. ಎಲ್ಲರಿಗೂ ವೇದದ ಹಾದಿಯೊಂದೇ ಪರಿಹಾರ. ಭಗವಂತನ ಮೇಲಿನ ಅಚಲ ನಂಬಿಕೆಯೇ ಅವರನ್ನೆಲ್ಲಾ ಮಕ್ಕಳ ಅಗಲುವಿಕೆಯ ನೋವಿನಿಂದ ಪಾರುಮಾಡಬೇಕು.

Tuesday, November 3, 2015

ನಿಮ್ಮ ಪಾತ್ರವೇನು?

ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ನಮ್ಮ ದೇಶದ ಯುವ ಸಂಪತ್ತಿನ ಬಗ್ಗೆ ಬಲು ವಿಶ್ವಾಸ ಹೊಂದಿದ್ದಾರೆ. ಇದೀಗ ಕಾಲ ಪಕ್ವವಾಗಿದೆ. ಯುವ ಮಿತ್ರರೇ, ನಿಮಗೆ ಈಗ ಪಂಥಾಹ್ವಾನವಿದೆ. ನಮ್ಮ ದೇಶದ ಸಂಸ್ಕೃತಿ, ಪರಂಪರೆ, ಆಚರಣೆಗಳನ್ನು ವಿಶ್ವದೆತ್ತರಕ್ಕೆ ಕೊಂಡುಯ್ಯುವ ಹೊಣೆ ನಿಮ್ಮ ಹೆಗಲ ಮೇಲಿದೆ. ಈಗ ನಿಮಗೆ ಸತ್ವ ಪರೀಕ್ಷೆಯ ಕಾಲ. ಧರ್ಮ ವಿರೋಧಿಗಳು, ಭಾರತದ ವಿರೋಧಿಗಳು ನಮ್ಮ ಧರ್ಮ, ಸಂಸ್ಕೃತಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಒಂದು ಸಣ್ಣ ಮೌಢ್ಯವನ್ನು ಹಿಡಿದು ಇಡೀ ಧರ್ಮವನ್ನು ವಿರೋಧಿಸುವ ಶಡ್ಯಂತ್ರ ನಡೆದಿದೆ. ಹೌದು, ಮೌಢ್ಯದ ವಿಚಾರದಲ್ಲಿ ನಾವೇಕೆ ಹೊಂದಾಣಿಕೆ ಮಾಡಿಕೊಳ್ಳಬೇಕು? ಅನ್ಯಮತಗಳ ವಿಚಾರ ಹಾಗಿರಲಿ. ಹಿಂದುಸಮಾಜದಲ್ಲಿ ಇಂದಿನ ಕಾಲಕ್ಕೆ ಬಾಹಿರವಾದ ಆಚರಣೆಗಳಿದ್ದರೆ ಅದನ್ನೇಕೆ ಬುಡ ಸಮೇತ ಕಿತ್ತುಹಾಕಬಾರದು? ಧರ್ಮವಿರೋಧಿಗಳ ಹಲ್ಲಿಗೆ ಆಹಾರವಾಗುವ ಯಾವ ಸಂಗತಿಗಳಿದ್ದರೂ ಅದನ್ನು ಬೇರು ಸಮೇತ ಕಿತ್ತು ಹಾಕಲೇ ಬೇಕು. ನಮ್ಮ ಮನೆಯನ್ನು ಅಚ್ಚುಕಟ್ಟಾಗಿ ಗುಡಿಸಿಕೊಂಡು, ಆನಂದವಾಗಿರಬೇಡವೇ? ಇಂತಾ ಸ್ವಚ್ಚತಾ ಆಂದೋಳನದಲ್ಲಿ ನಿಮ್ಮ ಪಾತ್ರವೇನು?

ಯುವ ಲೇಖಕರಾದ ಶ್ರೀ ಈಶ್ವರಚಂದ್ರ ಜೋಯಿಸ್ ಇವರಿಗೆ ವೇದಸುಧೆ ಬಳಗದ ಸ್ವಾಗತ

  ಯುವ ಲೇಖಕರಾದ ಶ್ರೀ ಈಶ್ವರಚಂದ್ರ ಜೋಯಿಸ್ ಇವರಿಗೆ  ವೇದಸುಧೆ ಬಳಗದ  ಸ್ವಾಗತ.


PhD Research ScholarTirupathi, India

Monday, November 2, 2015

ಗೋವಂಶ ಉಳಿಸಿ, ಬೆಳಸಿ, ಗೋವನ್ನು ರಕ್ಷಿಸಿ-ಎನ್ನುವುದು BJP ಶ್ಲೋಗನ್ ಆಗಬೇಕೇ?


ಅಬ್ಬಾ!ಒಂದುಕಾಲದಲ್ಲಿ ಸೂರ್ಯೋದಯಕ್ಕೆ ಮುಂಚೆ ಹಾಸಿಗೆಯಿಂದೆದ್ದು ಮನೆಯ ಒಂದು ಭಾಗದಲ್ಲಿರುತ್ತಿದ್ದ ಕೊಟ್ಟಿಗೆಯಲ್ಲಿನ ಗೋವುಗಳ ದರ್ಶನ ಮಾಡಿ ಮುಖ ತೊಳೆದು , ಸೂರ್ಯೋದಯ   ವಾಗುತ್ತಿದ್ದಂತೆ ಮನೆಯ ಹೊರಗೆ ಸೂರ್ಯದೇವನಿಗೆ ಕೈ ಮುಗಿದು ಆರಂಭವಾಗುತ್ತಿದ್ದ ದಿನಚರಿ!! ಇದು ಸಾಮಾನ್ಯವಾಗಿ  ನಮ್ಮ ಎಲ್ಲಾ ಹಳ್ಳಿ ರೈತರ ಜೀವನ ಪದ್ದತಿ! ಸೋಮವಾರಗಳಲ್ಲಿ ಎತ್ತಿನ ಬದಲು ಪತಿಪತ್ನಿಯರೇ ನೊಗ ಹೊತ್ತು ಭೂಮಿ ಉಳುತ್ತಿದ್ದುದು ಸಾಮಾನ್ಯ ದೃಶ್ಯ!
ಗೋವೆಂದರೆ ಅಷ್ಟು ಭಕ್ತಿ. ಗೋಮಾತಾ ಪ್ರತ್ಯಕ್ಷ ದೇವತೆ. ಯಾರಿಗೆ ಈ ವಿಷಯ ಗೊತ್ತಿಲ್ಲ? ಸಿದ್ರಾಮಯ್ಯನವರಿಗೆ ಗೊತ್ತಿಲ್ಲವೇ? ಉಳಿದ ರಾಜಕಾರಣಿಗಳಿಗೆ ಗೊತ್ತಿಲ್ಲವೇ?
ರಾಜಕೀಯಕ್ಕಾಗಿ ಏನೆಲ್ಲಾ ಮಾತಾಡ್ತಾರೆ? ಏನೆಲ್ಲಾ ಮಾಡ್ತಾರೆ?
ರಸ್ತೆಯಲ್ಲಿ ಸಹಭೋಜನ ಮಾಡಿ-ಅಲ್ಲಿ ಗೋಮಾಂಸ ತಿನ್ನುತ್ತಾರೆ! ಪುರಭವನದೆದುರು, ಜಿಲ್ಲಾಧಿಕಾರಿಗಳ ಕಚೇರಿ ಎದಿರು ಗೋಮಾಂಸದೂಟಮಾಡುತ್ತಾರೆ!!
ಛೆ! ಛೇ!!
ಇದೇನಿದು? ಏನಾಯ್ತು ಈ ರಾಜಕಾರಣಿಗಳಿಗೆ?
ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ. ಕಾಂಗ್ರೆಸ್ಸಿನ ನಮ್ಮ ಮುಖ್ಯ ಮಂತ್ರಿ ಹೇಳ್ತಾರೆ- " ಇದುವರೆವಿಗೆ ನಾನು ಗೋಮಾಂಸ ತಿಂದಿಲ್ಲ. BJP ಯವರಿಗೆ ಬುದ್ಧಿ ಕಲಿಸಲು ಗೋಮಾಂಸವನ್ನು ತಿನ್ನುವೆ. ಹಂದಿ ಮಾಂಸವನ್ನೂ ತಿನ್ನುವೆ.
ಸ್ವಾಮಿ, ಮುಖ್ಯಮಂತ್ರಿಗಳೇ
ನೀವು ಮುಖ್ಯಮಂತ್ರಿಗಳಾಗಲು ಕರ್ನಾಟಕದ ಮತದಾರ ಕಾರಣ. BJP ಯವರಿಗೆ ಚಾಲೆಂಜ್ ಮಾಡಲು ಗೋಮಾಂಸ ತಿನ್ನುತ್ತೇನೆಂದರೆ ಅದರರ್ಥವೇನು? ಸಾಮಾನ್ಯಮತದಾರನ ಭಾವನೆಗೆ ಅದೆಷ್ಟು ಪೆಟ್ಟು ಬೀಳುತ್ತದೆಂದು ಯೋಚಿಸಿದ್ದೀರಾ?
ಈಗಾಗಲೇ ನಮ್ಮ ಸಾಮಾಜಿಕ ಸ್ವಾಸ್ಥ್ಯ ಹದಗೆಟ್ಟಿರುವುದು ಸಾಲದೇ? ಇನ್ನೂ ಅದೆಷ್ಟು ಹದಗೆಡಬೇಕು? ನಾಡಹಸು ಎತ್ತುಗಳ ವಂಶ ಕೊನೆಯಾದರೆ ಅದೆಂತಹ ಘೋರಪರಿಣಾಮ ಬೀರುತ್ತದೆಂಬ ವಿವೇಚನೆ ನಿಮಗಿದೆಯೇ?
ದನಗಳ ಗೊಬ್ಬರದಿಂದ ಬೆಳೆಯುತ್ತಿದ್ದ ಬೆಳೆ ಹೇಗಿರುತ್ತಿತ್ತು?
ಮನೆಯಲ್ಲಿ ಒಂದು ಜೊತೆ ಎತ್ತು ಒಂದು ಕರಾವಿನ ಹಸು ಇದ್ದರೆ ಒಂದು ಎಕರೆ ಜಮೀನಿನಲ್ಲಿ ರೈತ ಎಷ್ಟು ಆನಂದವಾಗಿ ಬಾಳ್ಮೆ ನಡೆಸುತ್ತಿದ್ದರು!!
ಜೋಡೆತ್ತಿನ ಗಾಡಿ!!
ನೇಗಿಲಿನಿಂದ ಉಳುಮೆ!!
ದನಗಳ ಗೊಬ್ಬರ!
ಕರಾವಿನ ಹಸು!!
ಈ  ವಾಕ್ಯಗಳು ನೆನಪಾದಾಗ ನಿಮ್ಮ ಕಣ್ಣು ತೇವಗೊಳ್ಳಲಿಲ್ಲವೆಂದರೆ ಈ ನೆಲದ ವಾಸನೆ ಮರೆತು ಹೋಗಿದೆ ಎಂದೇ ಭಾವಿಸಬೇಕಾಗುತ್ತದೆ!!
ಇದೇ ನಾಡದನಗಳ ಸಗಣಿ, ಗಂಜಲಗಳು ಹಲವಾರು ರೋಗಗಳಿಗೆ ರಾಮಬಾಣ!! ಎನ್ನುವುದು ಇತ್ತೀಚಿನ ಸಂಶೋಧನೆ!!!!
ಆದರೆ ಇದೇ ನಾಡದನಗಳ ಉಸಿರಿನ ವಾಸನೆಯಿಂದಲೇ ಮನೆಯಲ್ಲಿ ಆರೋಗ್ಯ ನೆಲೆಸುತ್ತಿತ್ತು! ಎಂಬುದು ನಮ್ಮ ಹಿರಿಯರ ಅನುಭವ!!
ಸ್ವಾಮಿ,
ನಿಮ್ಮ  ರಾಜಕಾರಣಕ್ಕಾಗಿ ಸಮಾಜದ ಸ್ವಾಸ್ಥ್ಯವನ್ನು ನಾಶಮಾಡಬೇಡಿ.
ಇಡೀ ವಿಶ್ವವು ನಮ್ಮ ಕಡೆ ನೋಡುತ್ತಿದೆ! ಎಂಬ ಎಚ್ಚರ ನಿಮಗೂ ಇರಲಿ. ವಿಶ್ವವು ನಮ್ಮನ್ನು ಗೌರವಿಸಲು  ಪ್ರಮುಖ ಕಾರಣ ಏನೆಂಬುದರ ಅರಿವು ನಿಮಗಿಲ್ಲವೇ?
ಇಂದಿನ ಯುವಕರಿಗೆ ಈ ನೆಲದ ಮಣ್ಣಿನ ವಾಸನೆ ಗೊತ್ತಿಲ್ಲ. ಅದೆಲ್ಲಾ ರಾಸಾಯನಿಕ ಗೊಬ್ಬರದಿಂದ ಗಬ್ಬೆದ್ದು ಹೋಗಿದೆ! ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಿಂದ ನಮ್ಮ ನಿಜ ಸಂಸ್ಕೃತಿಯ ಅರಿವೇ ಇಲ್ಲವಾಗಿದೆ.
ಇಂದಿನ ನನ್ನ ಪ್ರೀತಿಯ ಯುವ ಮಿತ್ರರೇ!

ನಾವೆಲ್ಲಾ ಅಮ್ಮನ ಹಾಲು ಕುಡಿದದ್ದು ಒಂದೆರಡು ವರ್ಷ. ಆಮೇಲೇ?
 ಮನೆಯಲ್ಲಿರುತ್ತಿದ್ದ ನಾಡಹಸುವಿನ ಕೆಚ್ಚಲಿಗೆ ಬಾಯಿಹಾಕಿ ಚಪ್ಪರಿಸಿದವರು ನಾವು!!
ನಮ್ಮ    ಆಯುಶ್ಯ ಇನ್ನೇನು ಮುಗಿಯುತ್ತಾ ಬಂತು!  ನಮ್ಮ   ತಲೆಮಾರು ಮಾಯವಾಗುದಕ್ಕೆ ಮುಂಚೆಯೇ  ನಮ್ಮ ಗತವೈಭವಗಳೆಲ್ಲಾ ಮಾಯವಾಗುತ್ತಿವೆ!!
ಓಹ್! ಗತ ವೈಭವ ಎಂದಾಗ ನೀವು ಅಣಕಿಸುತ್ತೀರ, ಅಲ್ವಾ?
ಹೌದು, ಇಂದಿನಂತೆ ಕಂಪ್ಯೂಟರ್, ಮೊಬೈಲ್, ಟಿ.ವಿ. ನಮ್ಮ ಕಾಲದಲ್ಲಿರಲಿಲ್ಲ. ಕಾರ್ ಗಳ ಓಡಾಟವೂ ಇರಲಿಲ್ಲ.
ಜೊತೆ ಜೊತೆಗೆ  ನಮ್ಮ ಕಾಲದಲ್ಲಿ ಮಕ್ಕಳು ಕನ್ನಡಕ ಹಾಕುತ್ತಿರಲಿಲ್ಲ!
ಬಿ.ಪಿ. ಶುಗರ್  ಖಾಯಿಲೆ ಗೊತ್ತಿರಲಿಲ್ಲ!!
ಅಂದಿನ ಕಾಲದಲ್ಲಿ  ತಿಂಗಳಲ್ಲಿ    ಒಂದು ಕ್ವಿಂಟಾಲ್ ಅಕ್ಕಿ ಖರ್ಚಾಗುತ್ತಿದ್ದ ಮನೆಯಲ್ಲಿ ಇಂದು 10 ಕೆ.ಜಿ. ಅಕ್ಕಿ ಖರ್ಚಾಗುತ್ತಿಲ್ಲ.
ಅಂದು ಹಸಿವಿತ್ತು. ಆರೋಗ್ಯವಿತ್ತು. ಅನ್ನ ರುಚಿಸುತ್ತಿತ್ತು
ಇಂದು ಹಸಿವಿಲ್ಲ. ಆರೋಗ್ಯವಿಲ್ಲ. ಅನ್ನ ರುಚಿಸುವುದಿಲ್ಲ!!
ಇದು ಸತ್ಯವೋ? ಸುಳ್ಳೋ ನೀವೇ ಹೇಳಿ. ನಿಮಗೆ ಊಹಿಸಲು ಕಷ್ಟವಾದೀತು. ಬದುಕಿದ್ದರೆ  ನಿಮ್ಮ       ಅಜ್ಜ-ಅಜ್ಜಿ ಅಥವಾ ನಿಮ್ಮ ಅಪ್ಪ-ಅಮ್ಮನನ್ನು ಕೇಳಿ. ಸತ್ಯವನ್ನು ತಿಳಿದುಕೊಳ್ಳಿ.
ಗೋವಂಶ ಉಳಿಸಿ, ಬೆಳಸಿ, ಗೋವನ್ನು ರಕ್ಷಿಸಿ-ಎನ್ನುವುದು BJP ಶ್ಲೋಗನ್ ಆಗಬೇಕೇ? ಇನ್ನುಳಿದ ಪಕ್ಷಗಳು ಈ ನೆಲದ ಸಂಸ್ಕೃತಿಯ ವಿರೋಧಿಗಳೇ?