Pages

Thursday, June 24, 2010

ಮನದ ಮಾತು


ವೇದಸುಧೆಯ ಅಭಿಮಾನಿಗಳಿಗೆ ಕೃತಜ್ಞತೆಗಳನ್ನು ತಿಳಿಸುವುದಕ್ಕಾಗಿ ನಾಲ್ಕು ಮಾತನಾಡಬೇಕೆನಿಸಿದೆ. ಶ್ರೀ ಸುಧಾಕರ ಶರ್ಮರು ೬-೭ ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಪುರುಷಸೂಕ್ತದ ಬಗ್ಗೆ ಮಾಡಿದ್ದ ಉಪನ್ಯಾಸದ ಕ್ಯಾಸೆಟ್ ನ್ನು ನನ್ನ ಮಿತ್ರ ವಿಶ್ವನಾಥಶರ್ಮರು ನನಗೆ ಕೊಟ್ಟು ಕೇಳಿಸಿದ್ದರು. ವೇದವನ್ನು ಇಷ್ಟು ಸರಳವಾಗಿ ವಿವರಿಸಿದ ಅವರ ಮಾತಿನ ಶೈಲಿ ನನ್ನನ್ನು ಆಕರ್ಶಿಸಿತು. ಅದನ್ನು ಎಂ.ಪಿ-೩ ಕ್ಕೆ ಕನ್ವರ್ಟ್ ಮಾಡಿ "ಎಲ್ಲರಿಗಾಗಿ ವೇದ" ಎಂಬ ತಲೆಬರಹದೊಡನೆ ನನ್ನ ಮಿತ್ರರಿಗೆಲ್ಲಾ ಮೇಲ್ ಮಾಡಿ ಹಲವರಿಗೆ ಕೇಳಿಸಿದೆ. ಅಷ್ಟೇ ಅಲ್ಲ ಅದರ ಬರಹ ರೂಪವನ್ನು ಸಂಪದ ಹಾಗೂ ವಿಸ್ಮಯನಗರಿ ಗಳಲ್ಲಿ ಪ್ರಕಟಿಸಿದೆ.ಅನೇಕ ಮಿತ್ರರ ಪ್ರೋತ್ಸಾಹ ನನಗೆ ಸ್ಪೂರ್ತಿಯಾಗಿ ಅದನ್ನು ಬಿನ್ ಫೈರ್ ಡಾಟ್ ಕಾಮ್ ಎಂಬ ತಾಣಕ್ಕೆ ಪೇರಿಸಿ ಅದರ ಕೊಂಡಿಗಳನ್ನು ಸ್ನೇಹಿತರಲ್ಲಿ ಹಂಚಿಕೊಂಡೆ.ಹೀಗೆ ಶರ್ಮರ ಧ್ವನಿಯನ್ನು ಹಲವರು ಅಂತರ್ಜಾಲದಲ್ಲಿ ಕೇಳುವಂತಾಯ್ತು. ೨೩.೯.೨೦೦೯ ರಂದು ಸುಧಾಕರ ಶರ್ಮರನ್ನು ಹಾಸನಕ್ಕೆ ಕರೆಸಿ ನವರಾತ್ರಿ ಕಾರ್ಯಕ್ರಮದಲ್ಲಿ ಅವರ ಉಪನ್ಯಾಸವನ್ನು ಏರ್ಪಡಿಸಿದೆ. ಹಾಸನದ ಜನತೆಯು ಅವರ ಉಪನ್ಯಾಸವನ್ನು ಮೆಚ್ಚಿಕೊಂಡಿದ್ದರಿಂದ ಖುಷಿಗೊಂಡೆ. ಇದೆಲ್ಲದರಿಂದ ಹತ್ತಿರವಾಗಿದ್ದ ಶ್ರೀ ಸುಧಾಕರ ಶರ್ಮರು ವೇದಭಾಷ್ಯ ಬಿಡುಗಡೆ ಸಮಾರಂಭದಲ್ಲಿ " ಅಂತರ್ಜಾಲದಲ್ಲಿ ವೇದ" ಎಂಬ ವಿಚಾರವಾಗಿ ಮಾತನಾಡಲು ನನ್ನನ್ನು ಆಹ್ವಾನಿಸಿದ್ದರು. ವೇದ ಪ್ರಚಾರಕ್ಕಾಗಿ ನಾನು ಮಾಡಿರುವುದಾದರೂ ಏನು? ನನ್ನನ್ನು ಕರೆದುಬಿಟ್ಟಿದ್ದಾರಲ್ಲಾ! ಸರಿ ಏನಾದರೂ ನನ್ನ ಕೈಲಾದದ್ದನ್ನು ಮಾಡೋಣವೆಂದು ೬.೨.೨೦೧೦ ರಂದು"ವೇದಸುಧೆ"ಯನ್ನು ಆರಂಭಿಸಿದೆ. ಬ್ಲಾಗ್ ಮೂಲಕ ಶರ್ಮರ "ಎಲ್ಲರಿಗಾಗಿ ವೇದ "ಉಪನ್ಯಾಸವನ್ನು ಹಲವರಿಗೆ ಕೇಳಿಸಬೇಕೆಂಬ ಮಹದಾಸೆಯಿಂದ ಆರಂಭವಾದ ಬ್ಲಾಗ್ ನಲ್ಲಿ ಬಿನ್ ಫೈರ್ ಡಾಟ್ ಕಾಮ್ ನಲ್ಲಿನ ಕೊಂಡಿಯನ್ನು ನೀಡಿದೆ. ಹಲವರಿಗೆ ಕೊಂಡಿ ತೆರೆಯಲಾಗದೆ ಅದನ್ನು ತೆರೆಯುವುದು ಹೇಗೆಂಬ ಶಿಶುಪಾಠ ವನ್ನು ಬ್ಲಾಗ್ ನಲ್ಲಿ ಬರೆದೆ. ಅಂತರ್ಜಾಲದ ಉಪಯೋಗ ಹೇಗೆ ಪಡೆಯಬೇಕೆಂಬ ಸಂಪೂರ್ಣ ಜ್ಞಾನವಿಲ್ಲದಿದ್ದರೂ ಮಕ್ಕಳಾಟದಂತೆ ನನ್ನ ಪ್ರಯತ್ನ ಸಾಗುತ್ತಿತ್ತು. ಆನಂತರ ಹುಡುಕಾಟ ಆರಂಭವಾಯ್ತು. ಅದರಲ್ಲಿ ಒಂದಿಷ್ಟು ಯಶಸ್ಸೂ ಸಿಕ್ಕಿದೆ. ವೇದದ ಬಗ್ಗೆ ಕೇವಲ ಸದ್ಭಾವನೆ ಇದ್ದು ವೇದದ ಪ್ರಥಮ ಪಾಠವೂ ಆಗದ ನನ್ನಂತಹ ಸಾಮಾನ್ಯನು ಆರಂಭಿಸಿದ ಬ್ಲಾಗ್ ಕೇವಲ ನಾಲ್ಕು ತಿಂಗಳುಗಳಲ್ಲಿ ಐದು ಸಾವಿರ ಇಣುಕುಗಳನ್ನು ಕಂಡಿದೆ! ಎಂದರೆ , ವೇದದ ಬಗ್ಗೆ ಜನರಿಗಿರುವ ಆಸಕ್ತಿಯನ್ನು ಕಂಡು ಆಶ್ಚರ್ಯವಾಗಿದೆ. ಸಂಪದದ ಮೂಲಕ ಅಂತರ್ಜಾಲ ತಾಣಗಳ ಸಂಪರ್ಕಕ್ಕೆ ಬಂದ ನನಗೆ ಜನರ ಅಭಿರುಚಿಯ ಪರಿಚಯ ಅಲ್ಪ ಸ್ವಲ್ಪ ಇದೆ. ಸಂಪದದಲ್ಲಿ ಸಾಕಷ್ಟು ಲೇಖನಗಳನ್ನು ಬರೆದಿರುವ ನಾನು ಧರ್ಮ, ಸಂಸ್ಕೃತಿ, ಸಮಾಜ..ಇತ್ಯಾದಿ ವಿಷಯಗಳಬಗ್ಗೆ ಲೇಖನಗಳನ್ನು ಬರೆದಾಗ ಹೆಚ್ಚೆಂದರೆ ೩೦೦ ಇಣುಕುಗಳನ್ನು ಕಂಡರೆ ಅದೊಂದು ಉತ್ತಮ ಬರಹವೆಂದೇ ಹೇಳುವ ಪರಿಸ್ಥಿತಿ ಕಂಡಿದ್ದೇನೆ. ಆದರೆ ಜನರನ್ನು ಕೆರಳಿಸುವ ಲೇಖನಗಳಾದರೆ ಸಾವಿರಾರು ಇಣುಕುಗಳು,ನೂರಾರು ಪ್ರತಿಕ್ರಿಯೆಗಳು ಸಾಮಾನ್ಯವಾಗಿರುತ್ತದೆ. ಇಂತಹ ಪರಿಸ್ಥಿತಿ ಇರುವಾಗ ವೇದಸುಧೆಗೆ ನಾಲ್ಕು ತಿಂಗಳಲ್ಲಿ ಐದು ಸಹಸ್ರ ಇಣುಕುಗಳಾಗಿವೆ!!
ಆದರೂ ವೇದಸುಧೆಯು ನಾಲ್ಕು ತಿಂಗಳು ತುಂಬಿದ ಶಿಶು. ಅದಿನ್ನೂ ಬೆಳೆಯಬೇಕಿದೆ -ಎಂಬ ಅರಿವು ವೇದಸುಧೆಬಳಗಕ್ಕಿದೆ. ಮಕ್ಕಳನ್ನು ಲಾಲಿಸುವುದು ಹಿರಿಯರ ಸಹಜ ಗುಣ. ಅದರಂತೆ ಈಗ ನಡೆದಿದೆ. ಆದರೆ ಮಗು ಬೆಳೆದಂತೆ ಅದಕ್ಕೆ ಶಿಕ್ಷೆ ಕಟ್ಟಿಟ್ಟ ಬುತ್ತಿ.ಅದು ಹಿರಿಯರ ಜವಾಬ್ದಾರಿ ಕೂಡ. ಇದೆಲ್ಲವನ್ನೂ ನಿರೀಕ್ಷಿಸಿಯೇ ವೇದಸುಧೆಯು ತನ್ನ ಅಂಬೆಗಾಲನ್ನು ಇಡುತ್ತಿದೆ. ಅಂಬೆಗಾಲಿಡುವಾಗ ಬೀಳದಿದ್ದರೂ ನಡೆಯುವಾಗ ಬೀಳದೆ ನಡೆಯನ್ನು ಕಲಿಯಲಾರದು. ಅಂತೂ ಬಿದ್ದು-ಎದ್ದು ನಡಿಗೆಯನ್ನು ಕಲಿಯುವಾಗ ಕೈ ಹಿಡಿದು ನಡೆಸುವ ದೊಡ್ದವರು ಇದ್ದೇ ಇರುತ್ತಾರೆಂಬ ಭರವಸೆಯು ವೇದಸುಧೆಗೆ ಇದೆ. ಕೈ ಹಿಡಿದು ನಡೆಸುತ್ತಿರುವ ಎಲ್ಲರಿಗೂ ವೇದಸುಧೆಯು ಕೃತಜ್ಞತೆಗಳನ್ನು ಸಲ್ಲಿಸುತ್ತಾ ಇದೇ ಪ್ರೀತಿಯು ಮುಂದೂ ಇರಲಿ, ಎಂದು ಆಶಿಸುತ್ತದೆ.ವೇದಸುಧೆಯ ಆರಂಭದಲ್ಲಿ ಅದಕ್ಕೆ ರೂಪವನ್ನು ಕೊಟ್ಟ ಶ್ರೀ ವಿ.ಆರ್. ಭಟ್, ಸಲಹೆಗಳನ್ನು ನೀಡಿದ ಶ್ರೀ ವಿಶಾಲ್, ಪೂಜಾ ವಿಧಾನ ಡಾಟ್ ಕಾಮ್ ತಾಣದ "ಶ್ರೀ" ಹಾಗೂ ವೇದಸುಧೆಯ ಆರಂಭಕ್ಕೆ ಕಾರಣ ಕರ್ತರಾದ ವೇದಾಧ್ಯಾಯೀ ಸುಧಾಕರ ಶರ್ಮರಿಗೆ ಕೃತಜ್ಞತೆಗಳು ಸಲ್ಲುತ್ತದೆ. ಶ್ರೀ ಶರ್ಮರಿಂದ ಸ್ಪೂರ್ತಿ ಪಡೆದು ವೇದಸುಧೆಯು ಆರಂಭವಾಗಿದೆಯಾದರೂ ಅನೇಕ ವಿಚಾರಗಳಲ್ಲಿ ತಾತ್ವಿಕ ಬಿನಾಭಿಪ್ರಾಯಗಳಿದ್ದೂ ಸಹ ಲಭ್ಯವಾಗುವ ಶರ್ಮರ ಎಲ್ಲಾ ಉಪನ್ಯಾಸಗಳನ್ನು ಪ್ರಕಟಿಸುತ್ತದೆ.ಅಲ್ಲದೆ ಎಲ್ಲೆಲ್ಲಿ ವೇದದ ಬಗೆಗೆ ಲೇಖನಗಳು, ಆಡಿಯೋಗಳು ಲಭ್ಯವಾಗುತ್ತದೋ ಅದೆಲ್ಲವನ್ನೂ ಪ್ರಕಟಿಸುವ ಕೆಲಸವನ್ನು ಮಾಡುತ್ತಲೇ ಸಾಗುತ್ತದೆ. ಎಲ್ಲಾ ಓದುಗರೂ
ವೇದಸುಧೆಯಲ್ಲಿ ಬರೆಯಬೇಕೆಂಬುದು ವೇದಸುಧೆಯ ಅಪೇಕ್ಷೆ. ಮತ್ತೊಮ್ಮೆ ಎಲ್ಲಾ ಅಭಿಮಾನಿಗಳಿಗೂ ಕೃತಜ್ಞತೆಗಳು.
-ಹರಿಹರಪುರಶ್ರೀಧರ್
[ವೇದಸುಧೆ ಬಳಗದ ಪರವಾಗಿ]