Pages

Friday, February 11, 2011

ವೇದಸುಧೆ ವಾರ್ಷಿಕೋತ್ಸವದ ಒಂದು ವೀಡಿಯೋ ಕ್ಲಿಪ್


Untitled from hariharapurasridhar on Vimeo.

ವೇದೋಕ್ತ ಜೀವನ ಪಥ: ಜೀವಾತ್ಮ ಸ್ವರೂಪ -4

ಭಗವಂತನ ಪ್ರೇರಣೆಯಂತೆಯೇ ಜೀವಾತ್ಮರು ಬೇರೆ ಬೇರೆ ಶರೀರಗಳಲ್ಲಿ ಜನ್ಮವೆತ್ತುತ್ತಾರೆ. ಕೇಳಿರಿ:-


ಅನಚ್ಛಯೇ ತುರಗಾತು ಜೀವಮೇಜತ್ ಧೃವಂ ಮಧ್ಯ ಆ ಹಸ್ತ್ಯಾನಾಮ್ |
ಜೀವೋ ಮೃತಸ್ಯ ಚರತಿ ಸ್ವಧಾಭಿರಮರ್ತ್ಯೋ ಮರ್ತ್ಯೇನಾ ಸಯೋನಿಃ || (ಋಕ್. ೧.೧೬೪.೩೦.)


     [ತುರಗಾತು] ವೇಗಶಾಲಿಯೂ [ಧೃವಮ್] ಧೃಢವೂ ಆದ ಪರಮಾತ್ಮ ತತ್ವವು, [ಅನತ್] ಎಲ್ಲರಿಗೂ ಜೀವದಾನ ಮಾಡುತ್ತಿದೆ. [ಶಯೇ] ಅಂತಃಸ್ಥಿತವಾಗಿದೆ. [ಜೀವಮ್] ಜೀವಾತ್ಮನನ್ನು [ಆಪಸ್ತ್ಯಾನಾಂ ಮಧ್ಯೇ] ಲೋಕಲೋಕಾಂತರಗಳ ನಡುವೆ [ಏಜತ್] ಪ್ರವೇಶಗೊಳಿಸುತ್ತದೆ. [ಮೃತಸ್ಯ ಜೀವಃ] ಮೃತನಾದವನ ಜೀವಾತ್ಮವು [ಅಮರ್ತ್ಯಃ] ಸ್ವತಃ ಅಮರವಾಗಿದ್ದು [ಮರ್ತ್ಯೇನಾ ಸಂಯೋನಿಃ] ಮೃತ್ಯುವಿಗೀಡಾಗುವ ಶರೀರದೊಂದಿಗೆ ಸಹಜೀವಿಯಾಗಿ [ಸ್ವಧಾಭಿಃ] ತನಗೆ ಪ್ರಾರಬ್ಧ ರೂಪದಲ್ಲಿ ಲಭಿಸಿದ ಅನ್ನ-ಜಲಗಳೊಂದಿಗೆ, [ಚರತಿ] ಸಂಚರಿಸುತ್ತದೆ.
     ಇದು ವೇದೋಕ್ತವಾದ ಸತ್ಯ. ಇದೆಂದಿಗೂ ಸುಳ್ಳಾಗಲಾರದು. ಈ ರೀತಿ ಜನ್ಮವೆತ್ತಿ ಅದೆಷ್ಟು ಸಾರಿ ಜಗತ್ತಿಗೆ ಬರುತ್ತಾರೋ, ಅಮರರಾದ ಜೀವಾತ್ಮರು. ಋಗ್ವೇದದ ಈ ಮಂತ್ರವೂ ಮನನೀಯವೇ ಆಗಿದೆ.


ಅಪಶ್ಯಂ ಗೋಪಾಮನಿಪದ್ಯಮಾನಮಾ ಚ ಪರಾ ಪಥಿಭಿಶ್ಚರಂತಮ್ |
ಸ ಸಧ್ರೀಚೀಃ ಸ ವಿಷೂಚೀರ್ವಸಾನ ಆ ವರೀವರ್ತಿ ಭುವನೇಷ್ವಂತಃ || (ಋಕ್. ೧.೧೬೪.೩೧.)


     [ಆ ಚ ಪರಾ ಚ ಪಥಿಭಿಃ ಚರಂತಮ್] ಆ ಮಾರ್ಗ ಈ ಮಾರ್ಗಗಳಿಂದ ಸಂಚರಿಸುವ [ಆನಿಪದ್ಯಮಾನಮ್] ಅವಿನಾಶಿಯಾದ [ಗೋಪಾಮ್] ಇಂದ್ರಿಯಗಳ ಪಾಲಕನಾದ ಜೀವಾತ್ಮನನ್ನು [ಆಪಶ್ಯಮ್] ನಾನು ನೋಡುತ್ತಿದ್ದೇನೆ. [ಸಃ] ಅವನು [ಸಧ್ರೀಚೀಃ] ನೇರವಾಗಿ ನಿಂತು ನಡೆಯುವ ಶರೀರಗಳನ್ನೂ [ಸಃ[ ಅವನೇ [ವಿಷೂಚೀಃ] ತೆವಳಿಕೊಂಡು ಹೋಗುವ ಶರೀರಗಳನ್ನೂ [ವಸಾನಃ] ನೆಲೆಗೊಳಿಸುತ್ತಾ [ಭುವನೇಷು ಅಂತಃ] ಲೋಕಗಳ ಒಳಕ್ಕೆ [ಆ ಪರೀವರ್ತಿ] ಬಂದು ಹೋಗಿ ಮಾಡುತ್ತಿರುತ್ತಾನೆ.
     ಇದೀಗ ಸ್ಪಷ್ಟ ತತ್ತ್ವ ದರ್ಶನ. ಅಥರ್ವವೇದದ ಇನ್ನೆರಡು ಮಂತ್ರಗಳನ್ನು ಉದ್ಧರಿಸಿದರೆ ಜೀವಾತ್ಮನ ನಿಜವಾದ ಸ್ವರೂಪ ಪಾಠಕರ ಚಿತ್ತಭಿತ್ತಿಗಳ ಮೇಲೆ ಸ್ಫುಟವಾಗಿ ಅಂಕಿತವಾಗುತ್ತದೆ.


ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ |
ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ || (ಅಥರ್ವ.೧೦.೮.೨೭)


     ಓ ಜೀವಾತ್ಮನ್! [ತ್ವಂ ಸ್ತ್ರೀ] ನೀನು ಸ್ತ್ರೀಯಾಗಿದ್ದೀಯೆ. [ತ್ವಂ ಪುಮಾನ್ ಅಸಿ] ನೀನು ಪುರುಷನಾಗಿದ್ದೀಯೆ. [ತ್ವಂ ಕುಮಾರಃ] ನೀನು ಕುಮಾರನಾಗಿದ್ದೀಯೆ. [ಉತ ವಾ] ಮತ್ತು [ಕುಮಾರೀ] ಕುಮಾರಿಯಾಗಿದ್ದೀಯೆ. [ತ್ಮ್] ನೀನು [ಜೀರ್ಣಃ] ವೃದ್ಧನಾಗಿ [ದಂಡೇನ ವಂಚಸಿ] ಕೋಲನ್ನೂರಿ ತಡವರಿಸುತ್ತಾ ನಡೆಯುತ್ತೀಯೆ. [ತ್ವಮ್] ನೀನು [ಜಾತಃ] ಜನ್ಮವೆತ್ತಿ [ವಿಶ್ವತೋಮುಖಃ ಅಸಿ] ಎಲ್ಲೆಡೆಯೂ ಮುಖ ಮಾಡುತ್ತೀಯೆ.
     ಪರಮಾತ್ಮನೆಂತೋ ಜೀವಾತ್ಮನೂ ಅಂತೆಯೇ ಲಿಂಗರಹಿತನು. ಆದರೆ ಧರಿಸಿದ ಶರೀರದ ದೃಷ್ಟಿಯಿಂದ ಸ್ತ್ರೀ ಅಥವಾ ಪುರುಷ, ಕುಮಾರ ಅಥವಾ ಕುಮಾರೀ ಎನ್ನಿಸಿಕೊಳ್ಳುತ್ತಾನೆ.


ಉತೈಷಾಂ ವಿತೋತ ವಾ ಪುತ್ರ ಏಷಾಮುತೈಷಾಂ ಜ್ಯೇಷ್ಠ ಉತ ವಾ ಕನಿಷ್ಠಃ |
ಏಕೋ ಹ ದೇವೋ ಮನಸಿ ಪ್ರವಿಷ್ಟಃ
ಪ್ರಥಮೋ ಜಾತಃ ಸ ಉ ಗರ್ಭೇ ಅಂತಃ || (ಅಥರ್ವ.೧೦.೮.೨೮)


     [ಉತ] ಮತ್ತು [ಏಷಾಂ ಪಿತಾ] ಇವರ ತಂದೆ [ಉತ ವಾ] ಅಥವಾ [ಏಷಾಂ ಪುತ್ರಃ] ಇವರ ಮಗ [ಉತ] ಅಥವಾ [ಏಷಾಂ ಜ್ಯೇಷ್ಠಃ] ಇವರ ಅಣ್ಣ [ಉತ ವಾ] ಅಥವಾ [ಕನಿಷ್ಠಃ] ತಮ್ಮ [ಹ] ನಿಜವಾಗಿ [ಏಕ ದೇವಃ] ಒಬ್ಬನೇ ಜ್ಞಾನವಂತ ಚೇತನನು [ಮನಸಿ ಪ್ರವಿಷ್ಟಃ] ಮನಃಕಾಮನೆಯ ಒಳಹೊಕ್ಕಿದ್ದಾನೆ. [ಪ್ರಥಮಃ] ಆ ಶ್ರೇಷ್ಠ ಆತ್ಮನು [ಜಾತಃ] ಜನ್ಮವೆತ್ತಿದನು. [ಸ ಉ] ಅವನೇ ಮತ್ತೆ [ಗರ್ಭೇ ಅಂತಃ] ಗರ್ಭದಲ್ಲಿ ಪ್ರವೇಶ ಮಾಡಿದ್ದಾನೆ.
     ಪಾಠಕರಿಗೆ ಈಗ ಜೀವಾತ್ಮನ ವಿಷಯದಲ್ಲಿ ಒಂದು ಸ್ಪಷ್ಟ ಕಲ್ಪನೆ ಬಂದಿರಬಹುದು. ಹೀಗೆಯೇ ಜನ್ಮವೆತ್ತುತ್ತಾ, ಎತ್ತುತ್ತಾ ಕ್ರಮಕ್ರಮವಾಗಿ ವಿಕಾಸ ಹೊಂದಿ, ಪರಿಶುದ್ಧ ಧರ್ಮದ ಆಚರಣೆಯಿಂದ ವಿಶುದ್ಧ ಜ್ಞಾನ ಗಳಿಸಿ, ನಿಜವಾದ ಭಗವದುಪಾಸನೆ ಮಾಡಿ, ಸತ್ಕರ್ಮನಿಷ್ಠನಾಗಿ, ಪೂರ್ಣ ಪವಿತ್ರತೆಯನ್ನು ಗಳಿಸಿ, ಕೊನೆಗೆ ಮೋಕ್ಷ ಪಡೆಯುತ್ತಾನೆ. ಮೋಕ್ಷದ ಸ್ವರೂಪವೇನೆಂಬುದನ್ನು ಪಾಠಕರು ಮುಂದೆ ಓದುವರು. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯಾಂಶವಿದೆ. ಆ ದೇವಪುತ್ರನನ್ನು ನಂಬು, ಈ ದೇವದೂತನಿಗೆ ಶರಣಾಗು, ಈಮತಹ ಸಾಧು-ಸಂತರ ಸೇವೆ ಮಾಡು, ಅವರ ದಯೆಯಿಂದ, ಅವರ ಮಧ್ಯಸ್ತಿಕೆಯಿಂದ ದೇವರು ನಿನಗೆ ಮೋಕ್ಷ ನೀಡುವನು - ಈ ಮೊದಲಾದ ಅರ್ಥರಹಿತವಾದ, ಪಾಮರಕೋಟಿಯ ಕಣ್ಣಿಗೆ ಮಣ್ಣೆರಚುವ, ಆತ್ಮಘಾತುಕವಾದ ಟೊಳ್ಳು ಸಿದ್ಧಾಂತಗಳನ್ನು ವೇದಗಳು ಒಪ್ಪುವುದಿಲ್ಲ.

ಓದುಗರ ಉತ್ಸಾಹ ಕಡಿಮೆಯಾಗಿದೆಯೇ?

"ನಮಸ್ಕಾರ ಶ್ರೀಧರ್ ಸರ್,
ವಾರ್ಷಿಕೋತ್ಸವ ಆದಮೇಲೆ ಓದುಗರ ಉತ್ಸಾಹ ಕಡಿಮೆಯಾಗಿರುವಂತಿದೆ, ಯಾರೂ ಕಾಮೆಂಟ್ ಮಾಡುತ್ತಲೇ ಇಲ್ಲ. ಯಾಕೆ ಸಾರ್?"
ಇಂದು ಹೀಗೊಂದು ಕರೆ ಬಂತು. ಮಾತುಗಳಲ್ಲಿ ಕಳಕಳಿ ಇತ್ತು. ಕಾಮೇಂಟ್ ಬಂದರೆ ಬರೆಯುವವರಿಗೆ ಉತ್ಸಾಹ ಹೆಚ್ಚುತ್ತದೆನ್ನುವುದು ಅವರ ಮಾತಿನ ಅರ್ಥ. ನಾನು ಮಿತ್ರರಿಗೆ ಉತ್ತರಿಸಿದೆ." ವೇದಸುಧೆಯಲ್ಲಿ ಕಾಮೆಂಟ್ ಮಾಡಬೇಕಾದರೆ ಸ್ವಲ್ಪ ಯೋಚಿಸಬೇಕಾಗುತ್ತದೆ. " ಚೆನ್ನಾಗಿದೆ" ಎಂದು ಬರೆದರೆ ನಮಗೆ ಸಂತೋಷವಾಗುತ್ತಾದರೂ ಬರೆದಿಲ್ಲವೆಂದರೆ ಖಂಡಿತವಾಗಿ ಬೇಸರವಾಗುವುದಿಲ್ಲ. ಕಾರಣ  ನಿತ್ಯವೂ ನೂರಾರು ಜನರು ವೇದಸುಧೆಯನ್ನು ಓದುತ್ತಿರುವುದು ನಮ್ಮ ಅರಿವಿಗೆ    ಬರುತ್ತಲೇ ಇದೆ.ಒಂದು ವೇಳೆ ಓದುಗರ ಸಂಖ್ಯೆ ೧೦-೨೦ ಕ್ಕೆ ಕುಸಿದರೆ ಆಗ  ಇಷ್ಟೊಂದು ಸಮಯ ವ್ಯರ್ಥವಾಗುತಿದೆಯೇ? ಎಂದು ಸ್ವಲ್ಪ ತಲೆಕೆಡಸಿಕೊಳ್ಳಬೇಕಾಗುತ್ತದೆ. ಹಾಗಾಗಿಲ್ಲವಲ್ಲಾ! ಆದ್ದರಿಂದ  ಒದುತ್ತಿರುವವರಲ್ಲಿ  ಒಂದಿಷ್ಟು ಸದ್ವಿಚಾರಗಳನ್ನು ಹಂಚಿಕೊಳ್ಳಲೇ ಬೇಕಾಗುತ್ತದೆಂದು ತಿಳಿಸಿ ಸಮಾಧಾನ ಪಡಿಸಿದೆ.
ಹೌದು, ಮನರಂಜನಾತಾಣಗಳಲ್ಲಿ ಬರೆಯುವಂತೆ ವೇದಸುಧೆಯಲ್ಲಿ ಬರೆಯಲಾಗುವುದಿಲ್ಲ. ಆದರೂ ಗಂಭೀರವಾದ ವಿಷಯಗಳನ್ನೂ ಓದುತ್ತಿರುವ ನಿಮಗೆಲ್ಲರಿಗೂ ಧನ್ಯವಾದಗಳು,
-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ

ದಾನ ಕೊಡುವಾಗ ಮತ್ತು ತೆಗೆದುಕೊಳ್ಳುವಾಗ ಅನುಸರಿಸಬೇಕಾದ ನಿಯಮಗಳೇನು?

ಅದೀನಾಃ ಸ್ಯಾಮ ಶರದಃ ಶತಮ್ (ಯಜುರ್ವೇದ.36.24.) - ನೂರು ವರ್ಷಗಳ ಕಾಲ ದೈನ್ಯತೆಯಿಲ್ಲದೆ ಬಾಳೋಣ ಎಂಬುದು ವೈದಿಕ ಪ್ರಾರ್ಥನೆ. ಸಂಸ್ಕೃತ ಸುಭಾಷಿತಗಳ ಮೂಲ ಇಲ್ಲಿದೆ! ಯಜ್ಞದಲ್ಲಿ ಮಾತು ಮಾತಿಗೂ "ಇದಂ ನ ಮಮ" ಎನ್ನುತ್ತಾ "ಕೊಡಬೇಕು. ಕೊಟ್ಟಿದ್ದೇನೆ, ಇದು ನನ್ನದಲ್ಲ" ಎಂಬ ಭಾವನೆಯಿಂದ ಕೊಡಬೇಕು ಎಂಬ ಶಿಕ್ಷಣವಿದೆ. ಇಲ್ಲೊಂದು ನಿಯಮ - ಕೊಟ್ಟಿದ್ದನ್ನು ತಕ್ಷಣ ಮರೆಯಬೇಕು, ಪಡೆದದ್ದನ್ನು ಎಂದಿಗೂ ಮರೆಯಬಾರದು. (ಇಲ್ಲಿ ಎಷ್ಟು ಎಂಬ ಪ್ರಮಾಣ Quantity ಮುಖ್ಯವೇ ಅಲ್ಲ). ಕೊಡುವಾಗ, ತೆಗೆದುಕೊಳ್ಳುವಾಗ ಅನುಸರಿಸಬೇಕಾದ ನಿಯಮವನ್ನು ನಮ್ಮ ಗುರುಗಳು ತಿಳಿಸುತ್ತಿದ್ದರು. ಮುಖ್ಯವಾಗಿ ಎರಡನ್ನು ನೋಡಬೇಕು - ಒಂದು ಉದಾರತೆ ಮತ್ತೊಂದು ಸಾಮರ್ಥ್ಯ. ಕೊಡುವಾಗ - ಉದಾರತೆಯಿಂದ ಸಾಮರ್ಥ್ಯವಿದ್ದಷ್ಟೂ ಕೊಡಬೇಕು. ಸಾಮರ್ಥ್ಯ ಮೀರಿ ಕೊಡಲು ಸಾಲ-ಸೋಲ ಮಾಡಬಾರದು. ಅಂತೆಯೇ ಇರುವಾಗ ಜಿಪುಣತನ ಮಾಡಬಾರದು. ತೆಗೆದುಕೊಳ್ಳುವಾಗ - ಕೊಡುವವರು ಉದಾರತೆಯಿಂದ ಕೊಡುತ್ತಿದ್ದಾರೆಯೇ ಅಥವಾ ಇನ್ನಾವುದೋ ಒತ್ತಡಕ್ಕೆ ಸಿಲುಕಿ ಕೊಡುತ್ತಿದ್ದಾರೆಯೇ ನೋಡಬೇಕು. ಕೊಡುತ್ತಿರುವುದು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಇದೆಯೋ ಅಥವಾ ಹೆಚ್ಚಿದೆಯೋ, ಕಡಿಮೆಯಿದೆಯೋ ಪರೀಕ್ಷಿಸಬೇಕು. ಎಲ್ಲಿ ಉದಾರತೆ ಅರ್ಥಾತ್ ಕೊಡುವ ಮನಸ್ಸಿದೆಯೋ ಮತ್ತು ಕೊಡುತ್ತಿರುವುದು ಅವರ ಸಾಮರ್ಥ್ಯಕ್ಕೆ ಸರಿಯಾಗಿದೆಯೋ ನೋಡಿ ಸ್ವೀಕರಿಸಬೇಕು. ಯಾವುದರಲ್ಲೇ ವ್ಯತ್ಯಾಸವಾಗಿದ್ದರೂ ತೆಗೆದುಕೊಳ್ಳಬಾರದು.  ನ ಪಾಪತ್ವಾಯ ರಾಸೀಯ (ಋಗ್ವೇದ.7.32.18.) - ನನ್ನ ದಾನಗಳು ಪಾಪಕ್ಕಾಗಿ ಬಳಸಲ್ಪಡದಿರಲಿ.

ಮೂಢಮನ

ರಚನೆ: ಕವಿನಾಗರಾಜ್
ಗಾಯನ: ಶ್ರೀಮತಿ ಲಲಿತಾರಮೇಶ್

Untitled from hariharapurasridhar on Vimeo.