Pages

Tuesday, July 19, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೩:

ಇಂದ್ರ ಕ್ರತುಂ ನ ಆ ಭರ ಪಿತಾ ಪುತ್ರೇಭ್ಯೋ ಯಥಾ |
ಶಿಕ್ಷಾ ಣೋ ಅಸ್ಮಿನ್ ಪುರುಹೂತ ಯಾಮನಿ ಜೀವಾ ಜ್ಯೋತಿರಶೀಮಹಿ ||
(ಋಕ್. ೭.೩೨.೨೬.)

[ಇಂದ್ರ] ಓ ಶಕ್ತಿಮಾನ್ ಪ್ರಭೋ! [ಯಥಾ ಪಿತಾ ಪುತ್ರೇಭ್ಯಃ] ಯಾವ ರೀತಿ ತಂದೆಯು ತನ್ನ ಮಕ್ಕಳಿಗೆ ತುಂಬಿಕೊಡುತ್ತಾನೋ ಅದೇ ರೀತಿ, [ ನಃ ಕ್ರತುಂ ಆಭರ] ನಮಗೆ ಉತ್ತಮ ಆಲೋಚನೆಗಳನ್ನು ತುಂಬಿಕೊಡು. [ಜೀವಾಃ] ಜೀವರಾದ ನಾವು, [ಜ್ಯೋತಿಃ ಆಶೀಮಹಿ] ಜ್ಯೋತಿಯನ್ನು ಸೇವಿಸೋಣ.
ಈ ಜ್ಯೋತಿ, ಜೀವನಪಥವನ್ನು ಬೆಳಗುವ ನಿರ್ಮಲಜ್ಞಾನ ಎಂಬುದನ್ನು ನೆನಪಿಟ್ಟರೆ, ವೈದಿಕ ಧರ್ಮದ ಸೌಂದರ್ಯ ವ್ಯಕ್ತವಾಗುತ್ತದೆ. ಈ ಜಾನ, ಪ್ರಾಕೃತಿಕ ಜಗತ್ತಿನಿಂದಾರಂಭಿಸಿ, ಪರಮಾತ್ಮನವರೆಗಿನ ಸಮಸ್ತ ತತ್ತ್ವಗಳನ್ನೂ ಯಥಾವತ್ತಾಗಿ ಅರಿಯುವುದೇ ಆಗಿದೆ. ಈ ಬಗೆಯ ಅರಿವಿಲ್ಲದೆ, ಮಾನವಜೀವನದ ವಿಕಾಸವಾಗುವುದು ಹಾಗೂ ಅವನು ತನ್ನ ಗುರಿಯನ್ನು ಮುಟ್ಟುವುದು ಅಸಂಭವ. ಅದಕ್ಕಾಗಿಯೇ ವೈದಿಕ ಧರ್ಮೀಯರು ಪ್ರತಿದಿನವೂ ಮಾಡುವ ಸಂಧ್ಯಾವಂದನೆಯಲ್ಲಿ ನಾವು ಈ ಮಂತ್ರವನ್ನು ಕಾಣುತ್ತೇವೆ:-


ಉದ್ವಯಂ ತಮಸಸ್ಪರಿ ಸ್ವಃ ಪಶ್ಯಂತ ಉತ್ತರಮ್ |
ದೇವಂ ದೇವತ್ರಾ ಸೂರ್ಯಮಗನ್ಮ ಜ್ಯೋತಿರುತ್ತಮಮ್ ||
(ಯಜು. ೩೫.೧೪.)

[ವಯಮ್] ನಾವು, [ತಮಸಃ ಪರಿ] ಅಂಧಕಾರದಿಂದ ಮೇಲೆದ್ದು, [ಉತ್] ಜಗದುತ್ಪತ್ತಿಗೆ ಉಪಾದಾನವಾದ ಪ್ರಕೃತಿಯನ್ನೂ, [ಉತ್ತರಂ ಸ್ವಃ] ಅದಕಿಂತ ಶ್ರೇಷ್ಠನಾದ, ಸುಖರೂಪನಾದ ಜೀವಾತ್ಮನನ್ನೂ, [ಪಶ್ಶಂತಃ] ನೋಡುತ್ತಾ, [ದೇವತ್ರ] ವಿದ್ವನ್ಮಂಡಲದಲ್ಲಿ [ಉತ್ತಮಂ ಜ್ಯೋತಿಃ] ಸರ್ವಶ್ರೇಷ್ಠನಾದ ಜ್ಞಾನಸ್ವರೂಪನೂ, [ದೇವಂ ಸೂರ್ಯಮ್] ಪ್ರಕಾಶಮಯನೂ, ಸರ್ವಧಾತೃವೂ ಆದ ವಿಶ್ವಸಂಚಾಲಕ ಪ್ರಭುವನ್ನು, [ಅಗನ್ಮ] ಸಾಕ್ಷಾತ್ಕಾರ ಮಾಡಿಕೊಳ್ಳೋಣ.
ಪ್ರಕೃತಿಯ ಜ್ಞಾನದಿಂದ ಇಹಲೋಕದ ಸುಧಾರಣೆ; ಸ್ವಂತ ಆತ್ಮನ ಜ್ಞಾನದಿಂದ ತನ್ನ ವ್ಯಕ್ತಿಗತ ಸುಧಾರಣೆ ಹಾಗೂ ಪರಮಾತ್ಮ ಜ್ಞಾನದಿಂದ ಮೋಕ್ಷಸಾಧನೆ - ಹೀಗೆ ಮಾನವಜೀವನದ ಸಾಫಲ್ಯ ಸಿದ್ಧಿಸುತ್ತದೆ. ವೇದೋಕ್ತವಾದ ಈ ಜ್ಞಾನ ಕೇವಲ ಆಧ್ಯಾತ್ಮಿಕ ವಿಷಯಗಳಿಗೆ ಮಾತ್ರ ಸಂಬಂಧಿಸಿದುದಲ್ಲ; ಕೇವಲ ದಾರ್ಶನಿಕ ಉಗ್ಗಡಣೆಯಲ್ಲ; ಈ ಪ್ರಪಂಚದಲ್ಲಿ ಸಾಂಸಾರಿಕ ಜೀವನವನ್ನು ಉತ್ತಮ ಮಟ್ಟಕ್ಕೇರಿಸಲು ಸುಖೋತ್ಕರ್ಷದ ಪ್ರಾಪ್ತಿಗಾಗಿ ವೈಜ್ಞಾನಿಕ ಆವಿಷ್ಕಾರಗಳನ್ನೂ, ಇತರ ಸಾಮಾಜಿಕ - ಆರ್ಥಿಕ - ರಾಜಕೀಯ - ಪಾರಿವಾರಿಕ ಹಾಗೂ ವೈಜ್ಞಾನಿಕ ಜೀವನಗಳನ್ನು ಉನ್ನತಗೊಳಿಸುವ ಸಾಧನವಾದ ಲೌಕಿಕ ಜ್ಞಾನವನ್ನೂ ಒಳಗೊಂಡಿದೆ ಎಂಬುದನ್ನು ಯಾರೂ ಮರೆಯಬಾರದು. ಪ್ರಾಪಂಚಿಕ ಅಥವಾ ಭೌತಿಕವಿದ್ಯೆಗೆ ತಿಲಾಂಜಲಿಯಿತ್ತು, ಕೇವಲ ಆಧ್ಯಾತ್ಮಿಕ ವಿದ್ಯೆಯನ್ನೇ ಸಾಧಿಸಲು ಹೊರಟವರು, ಆಧ್ಯಾತ್ಮಿಕ ವಿದ್ಯೆಗೆ ತಿಲಾಂಜಲಿಯಿತ್ತು ಕೇವಲ ಭೌತಿಕ ವಿದ್ಯೆಗೆ ಗಮನ ಕೊಡುವವರಿಗಿಂತ ಹೆಚ್ಚು ಗಾಢವಾದ ಅಂಧಕಾರದಲ್ಲಿ ಬೀಳುವರು ಎಂದು ಯಜುರ್ವೇದ ಹೇಳುತ್ತದೆ. ಕೊನೆಗೆ,


ಸಂಭೂತಿಂ ಚ ವಿನಾಶಂ ಚ ಯಸ್ತದ್ವೇದೋಭಯಂ ಸಹ |
ವಿನಾಶೇನ ಮೃತ್ಯುಂ ತೀರ್ತ್ವಾ ಸಂಭೂತ್ಯಾಮೃತಮಶ್ನುತೇ ||
(ಯಜು. ೪೦.೧೧.)


ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಂ ಸಹ |
ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಮೃತಮಶ್ನುತೇ ||
(ಯಜು.೪೦.೧೪.)

[ಸಂಭೂತಿಮ್] ಉತ್ಕೃಷ್ಟವಾದ ತತ್ತ್ವವಾದ ಪರಮಾತ್ಮನನ್ನೂ, [ಚ] ಮತ್ತು, [ವಿನಾಶಂಚ] ನಾಶವಾನ್ ಜಗತ್ತನ್ನೂ, [ಯಃ] ಯಾವನು, [ತತ್ ಉಭಯಂ ಸಹ] ಎರಡನ್ನೂ ಜೊತೆಯಲ್ಲಿಯೇ, [ವೇದ] ತಿಳಿಯುತ್ತಾನೋ ಅವನು, [ವಿನಾಶೇನ] ನಾಶವಾನ್ ಜಗತ್ತಿನ ಜ್ಞಾನದಿಂದ, [ಮೃತ್ಯುಂ ತೀರ್ತ್ವಾ] ಮರ್ತ್ಯಲೋಕವನ್ನು ದಾಟಿ, [ಸಂಭೂತ್ಮಾ] ಉತ್ಕೃಷ್ಟನಾದ ಪರಮಾತ್ಮನ ಜ್ಞಾನದಿಂದ, [ಅಮೃತಂ ಅಶ್ನುತೇ] ಅಮರತ್ವವನ್ನು ಪಡೆಯುತ್ತಾನೆ.
[ವಿದ್ಯಾಂ ಚ] ಆಧ್ಯಾತ್ಮಿಕ ವಿದ್ಯೆಯನ್ನೂ [ಅವಿದ್ಯಾಂ ಚ] ಭೌತಿಕ ವಿದ್ಯೆಯನ್ನೂ. [ಯಃ] ಯಾವನು, [ತತ್ ಉಭಯಂ ಸಹ] ಎರಡನ್ನೂ ಜೊತೆಯಲ್ಲಿಯೇ, [ವೇದ] ತಿಳಿಯುತ್ತಾನೋ ಅವನು, [ಅವಿದ್ಯಯಾ] ಭೌತಿಕ ವಿದ್ಯೆಯಿಂದ, [ಮೃತ್ಯುಂ ತೀರ್ತ್ವಾ] ಮರ್ತ್ಯಲೋಕವನ್ನು ದಾಟಿ, [ವಿದ್ಯಯಾ] ವಿದ್ಯೆಯಿಂದ [ಅಮೃತಂ ಅಶ್ನುತೇ] ಅಮರತ್ವವನ್ನು ಪಡೆಯುತ್ತಾನೆ.
ಈ ಮಂತ್ರಗಳ ಮೇಲೆ ಟೀಕೆ ಅನಾವಶ್ಯಕ. ವೈದಿಕ ಧರ್ಮ ಜ್ಞಾನಾಶ್ರಿತ ಧರ್ಮ. ಇದರಲ್ಲಿ ಅಜ್ಞಾನಕ್ಕೆಡೆಯಿಲ್ಲ. ಈ ಜ್ಞಾನ ಸರ್ವವಿಷಯಾಚ್ಛಾದಕ, ಶಾಶ್ವತ ತತ್ತ್ವಗಳ ಹಾಗೂ ಅಶಾಶ್ವತ ತತ್ತ್ವಗಳ ನಿರ್ಭ್ರಾಂತ ಜ್ಞಾನ ಪಡೆದೇ ಮಾನವನು ಆದರ್ಶಮಾನವನಾಗಿ, ಇಹಪರಗಳೆರಡರಲ್ಲೂ ಸಾಧಿಸಿಕೊಳ್ಳುವನು. ಅಂಧವಿಶ್ವಾಸಕ್ಕೆ, ಅಜ್ಞಾನದ ಆಡಳಿತಕ್ಕೆ ವೈದಿಕ ಧರ್ಮದಲ್ಲಿ ಸೂಜಿಯ ಮೊನೆಯಷ್ಟೂ ಜಾಗವಿಲ್ಲ.
************************