Pages

Saturday, July 31, 2010

ಈ ಮರ ನನ್ನನ್ನು ಬಿಡ್ತಾ ಇಲ್ಲಾ

ಒಂದು ದೊಡ್ದ ಮೂಟೆ ಹೊತ್ಕೊಂಡು ಒಬ್ಬ ದಾರೀಲಿ ಹೋಗ್ತಾ ಇದ್ದ. ಎದುರು ಸಿಕ್ಕಿದ ಮತ್ತೊಬ್ಬ ಅವನನ್ನು ಕೇಳಿದ.

- ಎಲ್ಲಿಗೆ ಹೋಗ್ತಾ ಇದ್ದೀಯಾ? ಈ ಮೂಟೆಯಲ್ಲೇನಿದೆ?

-ಸುಮ್ನೇ ಹಾಗೇ ಹೊರಟೆ, ದಾರೀಲಿ ಸಿಕ್ಕಿದವರೆಲ್ಲಾ ಏನೇನೋ ಕೊಟ್ಟರು. ಅದೆಲ್ಲಾ ಮೂಟೆಯಲ್ಲಿದೆ. ಹೋಗ್ತಾ ಇದ್ದೀನಿ.

-ಎಲ್ಲಿಗೆ ಹೋಗ್ತಾ ಇದ್ದೀಯಾ?

-ಎಲ್ಲಿಗೆ! ಎಲ್ಲಿಗೆ! ಯೋಚನೇ ನೇ ಮಾಡಲಿಲ್ಲ. ಹೊರಟುಬಿಟ್ಟೆ. ಹೋಗ್ತಾ ಇದ್ದೀನಿ.

- ಮೂಟೆಯಲ್ಲೇನಿದೆ?

-ನಂಗೊತ್ತಿಲ್ಲಪ್ಪ. ಅವ್ರು ಕೊಟ್ಟಿದ್ದ ತುಂಬಿಕೊಂಡು ಹೊರಟೇ ಬಿಟ್ಟೆ. ಮತ್ತೆ ಮೂಟೆ ಬಿಚ್ಚಿ ನೋಡೇ ಇಲ್ಲ.

ಇನ್ನೊಬ್ಬ ರಸ್ತೆ ಬದಿಯಲ್ಲಿ ಮರವೊಂದನ್ನು ತಬ್ಬಿ ನಿಂತಿದ್ದ.ಒಬ್ಬ ದಾರಿಹೋಕ ಅಲ್ಲಿ ಬಂದ.

-ಇದೇನು ಮರ ತಬ್ಬಿ ನಿಂತಿದ್ದೀಯಾ?

-ಬಿಡು ಅಂದ್ರೆ ಬಿಡ್ತಾ ಇಲ್ಲಾ ನೋಡಿ.

-ಅಲ್ವೋ ಮಹಾರಾಯ ಆ ಮರ ನಿನ್ನನ್ನು ತಬ್ಬಿಕೊಂಡಿಲ್ಲ. ನೀನೇ ಅದನ್ನು ತಬ್ಬಿ ಕೊಂಡಿದ್ದೀಯಾ.ನೋಡು ಹೀಗೆ ಮಾಡು, ಅದು ನಿನ್ನನ್ನು ಬಿಟ್ ಬಿಡುತ್ತೆ, ಅಂತಾ ಹೇಳುತ್ತಾ ತನ್ನ ಎರಡೂ ಕೈಗಳನ್ನು ಎರಡೂ ಪಕ್ಕಕ್ಕೆ ಚಾಚುತ್ತಾನೆ. ಮರ ತಬ್ಬಿದ್ದವನೂ ಹಾಗೇ ಮಾಡ್ತಾನೆ.

- ನೋಡು ಈಗ ಮರ ನಿನ್ನನ್ನು ಬಿಟ್ಟು ಬಿಡ್ತು.

- ಹೌದಲ್ವಾ ನಾನು ಎಷ್ಟು ಹೊತ್ನಿಂದ ಹೀಗೇ ನಿಂತಿದ್ದೇ ಗೊತ್ತಾ? ನೀವು ಬರದೇ ಹೋಗಿದ್ರೆ ಈ ರಾತ್ರಿಯೆಲ್ಲಾ ಇಲ್ಲೇ ಕಳೀ ಬೇಕಾಗಿತ್ತು

ಅಜ್ಞಾನದಿಂದ ಕೂಡಿದರೆ ರಾತ್ರಿಯೇನೂ ಇಡೀ ಜೀವನವನ್ನೇ ಕಳೆಯಬೇಕಿತ್ತು, ಅಂದುಕೊಂಡು ದಾರಿಹೋಕ ಮುಂದೆ ಸಾಗಿದ.

ಈ ತರಹ ಜನ ನಿಮ್ಗೆ ಸಿಕ್ಕಿದ್ದಾರಾ? ಸಿಕ್ಕಿರದೇ ಇರಬಹುದು. ಆದರೆ ತುಂಬಾ ಜನರು ಎದುರಿಸುತ್ತಿರುವ ಸಮಸ್ಯೆಗಳು ಇಂತಹವೇ ಅಂದ್ರೆ ಆಶ್ಚರ್ಯವಾಗಬಹುದು. ತನ್ನದಲ್ಲದ ಅನೇಕ ಸಮಸ್ಯೆಗಳನ್ನು ತಲೆಮೇಲೆ ಹೊತ್ಕೊಂಡು ಒದ್ದಾಡ್ತಾ ಇರ್ತಾರೆ. ಅದರ ಪರಿಹಾರವೂ ಗೊತ್ತಿರುವುದಿಲ್ಲ. ಅಲ್ಲದೇ ಮುಖ್ಯವಾಗಿ ಅದು ಅವರ ಸಮಸ್ಯೆಯಲ್ಲ.ಆದರೂ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಜನರನ್ನು ನೀವು ಖಂಡಿತಾ ನೋಡಿರುವಿರಲ್ಲವೇ?

ಯಾವ ಸಮಸ್ಯೆಗಳೂ ಅವುಗಳೇ ತಾನಾಗಿಯೇ ಬಂದು ನಮ್ಮನ್ನು ಅಪ್ಪಿಕೊಳ್ಳುವುದಿಲ್ಲ. ಕೆಲವು ಸ್ವಯಂ ಕೃತಾಪರಾಧಗಳು.ಅವುಗಳನ್ನು ನಾವು ಬಿಡಬೇಕಷ್ಟೆ. ಜೀವನ ಹಗುರ ಮಾಡಿಕೊಳ್ಳುವುದು ಬಿಡುವುದು ನಮ್ಮ ಕೈಲೇ ಇದೆ.

ಯೋಚಿಸಲೊ೦ದಿಷ್ಟು-೫

೧. ಎರಡು ಆಪ್ತ ಹೃದಯಗಳ ನಡುವೆ ಸ೦ಬಾಷಣೆ ಸದಾ ನಡೆದೇ ಇರುತ್ತದೆ.ಅವು ಪದಗಳ ಅಲ೦ಕಾರವನ್ನು ಕಾಯುವುದಿಲ್ಲ.

೨. ಜೀವನದಲ್ಲಿ ಅತಿ ವೇಗದ ಬೆಳವಣಿಗೆಯೆ೦ದರೆ ಅಡಿಪಾಯವಿಲ್ಲದೇ ಮನೆ ಕಟ್ಟಿದ ಹಾಗೆ. ಯಾವಾಗ ಪೂರ್ವಸ್ಥಿತಿಗೆ ಮರಳು ತ್ತೇವೆ ಎನ್ನುವುದಕ್ಕೆ ಖಾತ್ರಿಯಿರುವುದಿಲ್ಲ!

೩. ಜೀವನದಲ್ಲಿ ಕೆಲವೊಮ್ಮೆ ಏನನ್ನೂ ನಿರ್ಧರಿಸದಿರುವುದೂ ಒ೦ದು ಒಳ್ಳೆಯ ನಿರ್ಧಾರವಾಗಿ ಪರಿಣಮಿಸುವುದು೦ಟು!ಆದರೆ ಒಮ್ಮೊಮ್ಮೆ ಅದು ದುಬಾರಿಯಾಗಿ ಪರಿಣಮಿಸಬಹುದು!

೪. ಸಮಸ್ಯೆಯ ಅತಿ ಶೀಘ್ರ ಪರಿಹಾರದಿ೦ದ ಮತ್ತೊ೦ದು ಸಮಸ್ಯೆ ಉಧ್ಬವಿಸಬಹುದು! ನಿರ್ಧಾರವನ್ನು ಯೋಚಿಸಿ ತೆಗೆದು ಕೊಳ್ಳುವುದೇ ಒಳಿತು.

೫.ಜೀವನದಲ್ಲಿ ಎಷ್ಟೇ ಬುಧ್ಧಿವ೦ತರಾದರೂ,ಅವರು ತೆಗೆದುಕೊಳ್ಳುವ ನಿರ್ಧಾರದಿ೦ದ,ಒಮ್ಮೊಮ್ಮೆ ಅವರೇ ಬೇಸ್ತು ಬೀಳು ತ್ತಾರೆ!

೬.ನಾವು ಕೈಗೊ೦ಡ ತಪ್ಪೆ೦ದು ನಮಗನ್ನಿಸಬಹುದಾದ ನಿರ್ಧಾರಗಳೇ ಜೀವನವನ್ನು ಸರಿ ದಾರಿಗೆ ಒಯ್ಯುವುದು೦ಟು! ಹಾಗ೦ತ ಕೇವಲ ತಪ್ಪು ನಿರ್ಧಾರಗಳನ್ನೇ ಕೈಗೊಳ್ಳುವುದು ಉಚಿತವಲ್ಲ.ತಪ್ಪು ನಿರ್ಧಾರಗಳು ಜೀವನದ ಸಮಸ್ಯೆಗಳ ಬಗ್ಗೆ ಮತ್ತೊಮ್ಮೆ ಸರಿಯಾದ ನಿರ್ಧಾರಗಳನ್ನು ತಳೆಯುವಲ್ಲಿ ನಮಗೆ ಸಹಕಾರಿಯಾಗುತ್ತವೆ ಎ೦ದಷ್ಟೇ.

೭.ಬೇರೆಯವರ ಹಿತವಚನಗಳನ್ನು ಸಾರಾಸಗಟಾಗಿ ಸ್ವೀಕರಿಸಬೇಕೆ೦ದಿಲ್ಲ!ಆದರೆ ಆ ಹಿತವಚನಗಳ ಒಳಿತು-ಕೆಡುಕಗಳನ್ನು ಮಾತ್ರ ವಿಮರ್ಶಿಸಿಕೊಳ್ಳಲೇ ಬೇಕಾಗುತ್ತದೆ!

೮. ಸಮಯದೊ೦ದಿಗೆ ನಾವು ಘೋಷಿಸಿ, ನಡೆಸಬಹುದಾದ ಸಮರವು ಮಾತ್ರವೇ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ಹೆಚ್ಚೆಚ್ಚು ಕ್ರಿಯಾಶೀಲರಾಗಿ ಕ೦ಗೊಳಿಸಲು ಪ್ರೇರೇಪಕವಾಗಬಲ್ಲುದು!

೯. ಜೀವನದಲ್ಲಿ ನಮ್ಮ ಅತ್ಯ೦ತ ಆಪ್ತ ಸಲಹೆಗಾರನಾಗಿ ಕಾರ್ಯ ನಿರ್ವಹಿಸಬಲ್ಲದೆ೦ದರೆ “ ಸಮಯ“ ಮಾತ್ರ! ಸಮಯ ಎಲ್ಲವನ್ನೂ ಕಲಿಸುತ್ತದೆ.

೧೦. ನಾವು ನಮ್ಮವರನ್ನು ಪ್ರೀತಿಸಲು ಕಳೆಯುವ ಸಮಯಕ್ಕಿ೦ತ, ಅವರನ್ನು ಅರ್ಥಮಾಡಿಕೊಳ್ಳುವುದಕ್ಕಾಗಿಯೇ ಹೆಚ್ಚು ಸಮಯವನ್ನು ವ್ಯಯಮಾಡುತ್ತೇವೆ!ಏಕೆ೦ದರೆ ಅವರನ್ನು ಪ್ರೀತಿಸುವ ಕಷ್ಟಕ್ಕಿ೦ತ ಅರ್ಥಮಾಡಿಕೊಳ್ಳುವುದೇ ಹೆಚ್ಚು ಕಷ್ಟವಾದುದು!

೧೧. ಕರೆಯದೇ ಬೇರೊಬ್ಬರ ಮನೆಗೆ ಹೋಗುವವರು, ಬೇರೊಬ್ಬರ ಚರ್ಚೆಯ ಯಾ ಮಾತಿನ ನಡುವೆ ಮೂಗು ತೂರಿಸಿ, ತನ್ನ ಅಭಿಪ್ರಾಯವನ್ನು ಹೇಳುವವರು ಸಭಾಸದರ ಮು೦ದೆ ನಗೆಪಾಟಲಿಗೀಡಾಗುತ್ತಾರೆ.

೧೨. ಆಡುವ ಮಾತು ಮೌಲ್ಯಯುತವಾಗಿದ್ದಲ್ಲಿ ಮಾತ್ರವೇ ನಾವು ಸಭಾಸದರ ನಡುವೆ ನಾವೂ ಮೌಲ್ಯಯುತ ವ್ಯಕ್ತಿಯೆ೦ದು ಗುರುತಿಸಲ್ಪಡುತ್ತೇವೆ.

೧೩. ಧರ್ಮವೇ ಜೀವನವಲ್ಲ! ಜೀವನದಲ್ಲಿ ಧರ್ಮವನ್ನು ಅಳವಡಿಸಿಕೊಳ್ಳಬೇಕು.

೧೪. ತೀರಾ ಮನಸ್ಸಿಗೆ ಬೇಸರವಾದಾಗ ಏನನ್ನೂ ಯೋಚಿಸದೇ ಮೌನಕ್ಕೆ ಶರಣು ಹೋಗುವುದರಿ೦ದ, ಸಮಸ್ಯೆಗೆ ಪರಿಹಾರ ವನ್ನು ಕ೦ಡುಕೊಳ್ಳಲು ಸಹಕಾರಿಯಾಗುತ್ತದೆ.

೧೫. ಪ್ರತಿಯೊಬ್ಬರೂ ಗುರುತರವಾದ ಹಲವು ಜವಾಬ್ದಾರಿಗಳನ್ನು ನಿರ್ವಹಿಸಲೇಬೇಕಾಗುತ್ತದೆ. ಅದರಿ೦ದ ನುಣುಚಿಕೊ೦ಡರೆ ಅದೇ ಪಲಾಯನವಾದ!

ಅವಧೂತ-1

ಈಗತಾನೇ ನನಗೊಂದು ದು:ಖದ ಸುದ್ಧಿ ಬಂತು. ಸಕ್ಕರಾಯ ಪಟ್ಟಣದ ಅವಧೂತರಾದ ಪೂಜ್ಯ ವೆಂಕಟಾಚಲಯ್ಯನವರು ಇನ್ನಿಲ್ಲ ವೆಂಬ ಸುದ್ಧಿಯನ್ನು ಮಿತ್ರ ಮಂಜು ಮುಟ್ಟಿಸಿದ್ದಾರೆ.ವೇದಸುಧೆಯ ಅಭಿಮಾನಿಗಳಿಗೂ ಅವಧೂತರ ಶಿಷ್ಯರಿಗೂ ದು:ಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲೆಂದು ಅವನಲ್ಲಿ ವೇದಸುಧೆಯು ಪ್ರಾರ್ಥಿಸುತ್ತದೆ.
ಮೊನ್ನೆ ರಾತ್ರಿ ನನಗೊಂದು ಕನಸು. ಹೊಳೇನರಸೀಪುರದ ಅಧ್ಯಾತ್ಮಪ್ರಕಾಶ ಕಾರ್ಯಾಲಯದಲ್ಲಿ ಐವತ್ತಕ್ಕೂ ಹೆಚ್ಚು ವರ್ಷಗಳು ಸೇವೆ ಸಲ್ಲಿಸಿದ ಪಂಡಿತ ಶ್ರೀ ಲಕ್ಷ್ಮೀನರಸಿಂಹಮೂರ್ತಿಗಳು ನಮ್ಮನ್ನಗಲಿ ೩-೪ ವರ್ಷಗಳಾಗಿರಬಹುದು. ಅವರೊಡನೆ ಸಕ್ಕರಾಯಪಟ್ಟಣದ ಪೂಜ್ಯ ಅವಧೂತರನ್ನು ಕಂಡೆ. ಬೆಳಿಗ್ಗೆ ಎದ್ದವನೇ ಪತ್ನಿಗೆ ಕನಸನ್ನು ಹೇಳಿದ್ದೆ. ನಾಳಿದ್ದು ಸೋಮವಾರ ಅವಧೂತರನ್ನು ನೋಡಬೇಕೆಂದುಕೊಂಡಿದ್ದೆ.ಇನ್ನೆಲ್ಲಿ ನೋಡಲಿ? ಕನಸಲ್ಲಂತೂ ಇಬ್ಬರು ಪೂಜ್ಯರೂ ಕೊಟ್ಟ ದರ್ಷನ ಜೀವನದಲ್ಲಿ ಮರೆಯಲಾರೆ.

ಗಾಡಿಕಾರನ ರೂಢಿ
ಗಾಡಿಕಾರನ ರೂಢಿ
ಗೂಡಲಿರುವೀ ಕಣ್ಣ
ದೂರದೆಡೆ ಹರಿಬಿಟ್ಟು
ಆಡಿ ತುಂಬಿದೆ ಮನದಿ ರೂಪಗಳನ
ಬೇಡವೆಂದರು ಬಿಡದೆ
ಕಿವಿಗಳನು ತೆರೆದಿಟ್ಟು
ಜಾಡಿಸುತ ತುಂಬಿರುವೆ ಶಬ್ಧಗಳನ


ನಾಡನೆಲ್ಲವ ತಿರುಗಿ
ನಾಸಿಕದಿ ಆಘ್ರಾಣಿಸಿ
ಕಾಡಿ ತುರುಕಿದೆ ಒಳಗೆ ಕಂಪುಗಳನ


ಬೀಡಾಡಿ ತಿನ್ನುತ್ತ
ಮತ್ತಷ್ಟು ಒದರೆಂದು
ಜೋಡಿಸಿದೆ ಜಿಹ್ವೆಯೊಳು ರುಚಿಗ್ರಂಥಿಗಳನ


ಬೀಡುಬಿಡುತಲಿ ಸ್ಪರ್ಶ
ಸುಖ ನೀಡಿ ಪಡೆಯೆಂದು
ಮಾಡುಮಾಡಿದೆ ಚರ್ಮ ಪದರಗಳನ


ಗಾಡಿಯನು ನಮಗಿತ್ತು
ಸವಲತ್ತು ಕೊಟ್ಟುಣಿಸಿ
ಗಾಢಾಂಧಕಾರದಲಿ ಕೂಡಿ ನಮ್ಮನ್ನ

ಗಾಡಿಕಾರನೆ ನಿನ್ನ
ಅಡಿಯೆಲ್ಲಿ ಮುಡಿಯೆಲ್ಲಿ ?
ವಾಡಿಕೆಯು ಪೂಜಿಪುದು ಹಲರೂಪಗಳನ

’ನಿಮ್ಮೊಡನೆ ವಿ. ಆರ್. ಭಟ್’ ವಿಭಾಗದ ’ಚಿಂತನಶೀಲ ಕವನಗಳು’ ಸಂಕಲನದಿಂದ