Pages

Saturday, December 22, 2012

ಗಾರೆಗೋಡೆಯ ಚಿತ್ರ ಸಾಲು ಪರಿಷತ್ತಿನಲಿ

ಚಿತ್ರಋಣ: ಅಂತರ್ಜಾಲ

ತಮ್ಮದೇ ಹಳ್ಳಿಮನೆಯ ಗೋಡೆಯಮೇಲಿನ ಚಿತ್ರಪಟಗಳನ್ನು ನೋಡುತ್ತಾ ಕುಳಿತಿದ್ದ ತನಗೆ ಒಂದು ಫೋಟೋ ನೋಡುತ್ತಿದ್ದಂತೇ ಏಕಾಏಕಿ ಕಣ್ಣುಗಳು ಮಂಜಾದವು, ಮರುಕ್ಷಣದಲ್ಲಿ ಪರಿವೆಯೇ ಇಲ್ಲದೇ ಕಣ್ಣ ಹನಿಗಳು ತೊಟ್ಟಿಕ್ಕತೊಡಗಿದವು. ಕುಟುಂಬದ ಹಿರಿಯರ ಚಿತ್ರಪಟಗಳನ್ನು ಅಣ್ಣ ಅಂದವಾಗಿ ಜೋಡಿಸಿದ್ದ. ಸಂಪ್ರದಾಯಸ್ಥರ ಮನೆಯ ಸೊಸೆಯಾಗಿ ಬಂದ ಸಾಧ್ವಿ ಅತ್ತಿಗೆ ದಿನವೂ ಅವುಗಳನ್ನು ಒರೆಸಿ ಹೂವಿಟ್ಟು ನಮಸ್ಕರಿಸುತ್ತಿದ್ದಳು. ಮುಪ್ಪಡರಿದ ದಿನಗಳಲ್ಲಿ ತೆಗೆಸಿದ ಕಪ್ಪು-ಬಿಳುಪು ಭಾವಚಿತ್ರ ಅದಾಗಿದ್ದರೂ ಆ ಮುಖವನ್ನು ತಾನು ಮರೆಯಲೊಲ್ಲೆ. ಮರೆಯಲಾರದಂತೇ ಮಾಡಿ ಮನದಲ್ಲಿ ಉಳಿದುಹೋದ ಸಾಲುಗಳು ಇಂತಿದ್ದವು:

ಗಾರೆಗೋಡೆಯ ಚಿತ್ರ ಸಾಲು ಪರಿಷತ್ತಿನಲಿ
ಒಬ್ಬೊಬ್ಬರದೂ ಒಂದು ಜೀವ
ನನಗೆ ಎಡೆಯಿರಬಹುದು ಅವರಿರುವ ಸಾಲಿನಲಿ
ಮನವ ತುಂಬಿದ್ದುಂಟು ನಮ್ರಭಾವ

ಅಮ್ಮ ಕಟ್ಟಿಟ್ಟ ಅದೇನೋ ಮಡಿಗಂಟನ್ನು ತಾನು ಬಿಚ್ಚಿದಾಗ ಸಿಕ್ಕಿದ್ದು ಕೆಲವು ಪುಸ್ತಕಗಳು, ಮತ್ತು ಜಪದಸರ. ಓದಿದ ಪುಸ್ತಕದ ಓದಿದಭಾಗದ ಗುರುತುಹಾಕಿಕೊಳ್ಳಲಿಕ್ಕಾಗಿ ಇದ್ದ ಒಂದು ದಪ್ಪನೆಯ ಕಾಗದ ಮತ್ತು ಅದರಮೇಲೆ ಬರೆದಿದ್ದವು ಈ ಮೇಲಿನ ಸಾಲುಗಳು. ನರಸಿಂಹಸ್ವಾಮಿಯವರ ಕವಿತೆಯೊಂದರ ಈ ಭಾಗವನ್ನು ಅಮ್ಮ ಅದೆಷ್ಟು ಮೆಚ್ಚಿರಬೇಕು ಎಂದುಕೊಂಡ; ಅವರ ಹಾಡುಗಳೇ ಹಾಗಲ್ಲವೇ? ಯಾರಾದರೂ ಅತಿ ಸಹಜವಾಗಿ ಮೆಚ್ಚಬಹುದಾದ ಮೃದು-ಮಧುರ ಭಾವಗಳ ಸಾಲುಗಳಿರುತ್ತವೆ ಎಂದುಕೊಂಡ. ಮನದ ತುಂಬ ಹೇಳಲಾಗದ ದುಗುಡ ತುಂಬಿತ್ತು, ವಿಷಾದ ತುಂಬಿತ್ತು. ಭೋ ಎಂದು ಅತ್ತುಬಿಡುವ ಮನಸ್ಸಾಗುತ್ತಿತ್ತು-ಆದರೆ ವಯಸ್ಸಿಗ ತಾನು ಹಾಗೆ ಎಲ್ಲರೆದುರು ಅಳಲಾರ.

ಎಳವೆಯಲ್ಲಿಯೇ ಅಪ್ಪನ ಮುಖ ನೋಡಿರದ ಮಕ್ಕಳನ್ನು ಅಮ್ಮ ಸಲಹಿ ಬೆಳೆಸಿದ್ದಳು. ಯಾವುದೇ ಸರಿಯಾದ ಆದಾಯಮೂಲವಿರದ ಮನೆಯಲ್ಲಿ ಹೇಗೆ ತನ್ನನ್ನೂ, ಅಣ್ಣನನ್ನೂ ಮತ್ತು ಅಕ್ಕನನ್ನೂ ಬೆಳೆಸಿದಳೋ ಎಂಬುದೇ ಆಶ್ಚರ್ಯವಾಗಿತ್ತು. ಹೇಳಿಕೇಳಿ ಪುರೋಹಿತರ ಮನೆ. ನಾಲ್ಕು ಜನರಲ್ಲಿ ಬೇಡುವ ಹಾಗಿಲ್ಲ, ಮರ್ಯಾದೆಗೆಡುಕು ಕೆಲಸ ಮಾಡುವ ಹಾಗಿಲ್ಲ. ಗಂಡಸತ್ತವಳೆಂಬ ’ಬಿರುದು’ ಅದಾಗಲೇ ಪ್ರಾಪ್ತವಾಗಿಬಿಟ್ಟಿತ್ತು. ಮುತ್ತೈದೆಯರು ಧರಿಸುವ ಮಂಗಳ ಚಿನ್ಹೆಗಳನ್ನು ಕಳೆದಾಗಿತ್ತು. ಕೇಶಮುಂಡನವೊಂದನ್ನು ಮಾಡಿರಲಿಲ್ಲ ಯಾಕೆಂದರೆ ಸಮಾಜ ಸ್ವಲ್ಪ ಸುಧಾರಿಸಲ್ಪಟ್ಟಿದ್ದರಿಂದ ಅದು ಅನಿವಾರ್ಯವೆಂದೆನಿಸಲಿಲ್ಲ. ಕೇಶಮುಂಡನ ಮಾಡಿಸದೆಯೂ ಮನದಲ್ಲಿ ಸಂನ್ಯಾಸಿನಿಯಂತೇ ವ್ರತ ನಡೆಸಿದರೆ ದೇವರು ಮೆಚ್ಚುತ್ತಾನೆ ಎಂಬ ಭರವಸೆಯಿತ್ತು. ಅಪ್ಪ ಸತ್ತಾಗ ಹರೆಯದ ಹೆಣ್ಣಾಗಿದ್ದ ತಾಯಿಯ ಬಾಕಿ ಉಳಿದ ಆಸೆಗಳು-ಭರವಸೆಗಳು ಮಣ್ಣುಗೂಡಿಹೋಗಿದ್ದವು. ಜೀವನವೊಂದು ಗಾಳಿಗೋಪುರದಂತೇ ಭಾಸವಾಗುತ್ತಿದ್ದ ಆ ದಿನಗಳಲ್ಲಿ ಹರೆಯದ ಗಂಡಸರು ಬೇಡದ ಮಾತುಗಳನ್ನೇ ಆಡುತ್ತಿದ್ದರಂತೆ. ಆದರೂ ಅಮ್ಮ ತನ್ನತನವನ್ನು ಕಳೆದುಕೊಳ್ಳಲಿಲ್ಲ; ಕಾಮಕ್ಕೆ ಬಲಿಯಾಗಲಿಲ್ಲ. ಪರಪುರುಷರ ನೆಳಲೂ ಸೋಕದಂತೇ ಬದುಕಬೇಕೆಂದರೆ ಊರು ಬಿಟ್ಟು ಎಲ್ಲಾದರೂ ಹೋಗಬೇಕು, ಅದೂ ಹೆಣ್ಣೆಂಬ ಹೆಣ್ಣು ಸಂನ್ಯಾಸಿನಿಯಂತೇ ಇದ್ದರೂ ಪರವೂರುಗಳಲ್ಲೋ ಪರಸ್ಥಳಗಳಲ್ಲೋ ಅಲ್ಲಿನ ಗಂಡಸರು ಹಾಗೆ ಇರಗೊಟ್ಟಾರೆಯೇ?  ತುಂಬಿಹರಿವ ಕಾಮುಕರ ಕಾಮಪ್ರವಾಹದ ವಿರುದ್ಧ ನೈತಿಕ ನಾವೆಯನ್ನು ಮುನ್ನಡೆಸುತ್ತಾ ಸಾಗುವುದು ಸುಲಭದ ಮಾತಾಗಿರಲಿಲ್ಲ. ಇನ್ನೂ ಅರಿಯದ ಮಕ್ಕಳನ್ನು ಕಟ್ಟಿಕೊಂಡು ಹೋಗುವುದಾದರೂ ಎಲ್ಲಿಗೆ? ಮಕ್ಕಳ ಉಳಿವಿಗಾಗಿ ಏಳ್ಗೆಗಾಗಿ ತನಗೆ ತವರಲ್ಲಿ ಅಂದು ಕೊಟ್ಟಿದ್ದ ಬಂಗಾರವನ್ನೆಲ್ಲಾ ಮಾರಿಬಿಟ್ಟಳು ಆಕೆ.

ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬುದು ಅಮ್ಮನಿಗೂ ಗೊತ್ತಿತ್ತು. ಆದರೂ ತಂದೆಯ ವಿಯೋಗದ ದುಃಖ ತುಸುವಾದರೂ ದಮನವಾಗುವವರೆಗೆ ಆಕೆಗೆ ಇನ್ನೇನೂ ದಾರಿಯಿರಲಿಲ್ಲ. ತವರಿನಲ್ಲಿ ಈಗ ಯಾರೂ ಉಳಿದಿರಲಿಲ್ಲ; ಇದ್ದರೂ ಅವರ ಸಹಾಯವನ್ನು ಯಾಚಿಸುವುದು ಧರ್ಮವಲ್ಲ. ವರ್ಷದ ನಂತರ ಯಾವುದೋ ಒಂದು ದಾರಿ ಕಂಡುಬಂತು. ನೆರೆಕೆರೆಯ ಹೆಂಗಸರಿಗೆ ಭಜನೆ-ದೇವರನಾಮಗಳನ್ನೂ ಸಂಕೀರ್ತನೆ-ಸಂಗೀತವನ್ನೂ ಕಲಿಸಿಕೊಡುವುದೆಂದು ನಿರ್ಧರಿಸಿ, ದೇವಸ್ಥಾನದಲ್ಲಿದ್ದ ಅರ್ಚಕರ ಮುಂದೆ ನಿವೇದಿಸಿಕೊಂಡಳು. ತನ್ನ ಪತಿ ಮೊದಲು ಅದೇ ದೇವಸ್ಥಾನದಲ್ಲಿ ಅರ್ಚಕರಾಗಿದ್ದುದರಿಂದ ಈಗಿರುವ ಅರ್ಚಕರಿಗೆ ಕೆಲದಿನ ಪಾಠಗಳನ್ನೂ ಮಾಡಿದ್ದರಿಂದ ಆ ಅರ್ಚಕರು ಮಗನಂತೇ ಇದ್ದರು. ಗ್ರಾಮದ ಕೆಲಮನೆಗಳ ಜನ ಗುಡಿಗೆ ಬಂದಾಗ ಆ ಅರ್ಚಕರು ಹೀಗೆ ಭಜನೆ-ಸಂಕೀರ್ತನೆ-ಸಂಗೀತಗಳನ್ನು ಹೇಳಿಕೊಡುವ ಅಮ್ಮನ ಕುರಿತು ಪ್ರಸ್ತಾವಿಸಿದರು. ಒಂದಷ್ಟು ಹೆಂಗಳೆಯರು ಬಂದು ಕಲಿಯತೊಡಗಿದರು, ಆಧರವೇ ಇಲ್ಲದ ಅಮ್ಮನಿಗೆ ಕಾಸು-ಕವಡೆ ಅಂತ ಅಷ್ಟಿಷ್ಟು ಕೊಡುತ್ತಿದ್ದರು. ಇಂಥಾ ಕಷ್ಟದ ದಿನಗಳಲ್ಲಿ ತಮ್ಮನ್ನು ತಾಯಿ ಪೊರೆದದ್ದನ್ನು ಆತ ಕೇಳಿಬಲ್ಲ. ಆತನ ಮನ ಮತ್ತೆ ಮಡುಗಟ್ಟಿತು; ದುಃಖದ ಕಡಲು ಭುಗಿಲೆದ್ದಿತು.

ಮತ್ತೆ ತನಗೆ ತಾನೇ ಸಮಾಧಾನಿಸಿಕೊಂಡ ಆತನಿಗೆ ಈಗಿನ ತನ್ನಿರವಿಗೆ ಕಾರಣಳಾದ ಅಮ್ಮನ ದಯೆ, ತ್ಯಾಗ, ವಾತ್ಸಲ್ಯ ಇವುಗಳೆಲ್ಲದರ ಬಗ್ಗೆ ಮತ್ತೆ ಮತ್ತೆ ನೆನಪಾಗುತ್ತಲೇ ಇತ್ತು. ತನ್ನ ಬದುಕಿಗೆ ಮಕ್ಕಳು ಆಧಾರವಾಗಬೇಕೆಂದು ಅಮ್ಮ ಎಂದೂ ಬಯಸಿರಲಿಲ್ಲ. ಆದರೆ ಅವಳ ಕರ್ತವ್ಯವನ್ನು ಆಕೆ ನಡೆಸಿದ್ದಳು. ಕಷ್ಟಾರ್ಜಿತದಲ್ಲಿ ಹೊಟ್ಟೆಬಟ್ಟೆ ಕಟ್ಟಿ ತನ್ನನ್ನು ಓದಿಸಿದಳು. ನಿತ್ಯವೂ ಪಂಚತಂತ್ರ, ರಾಮಾಯಣ-ಮಹಾಭಾರತದ ಕಥೆಗಳನ್ನು ಹೇಳಿ ನೀತಿವಂತನಾಗಿ ಬಾಳುವಂತೇ ಬೋಧಿಸುತ್ತಿದ್ದಳು. "ದೇವರು ದಯೆತೋರುತ್ತಾನೆ, ನಿಮ್ಮೆಲ್ಲರನ್ನೂ ಸಲಹುತ್ತಾನೆ ಧೈರ್ಯಗೆಡಬೇಡ ಮಗಾ ನೀನು ಬಹುದೊಡ್ಡ ವ್ಯಕ್ತಿಯಾಗುತ್ತೀಯಾ" ಎಂದು ಹುರಿದುಂಬಿಸುತ್ತಿದ್ದಳು. ಓದಿನಲ್ಲಿ ತರಗತಿಗೆ ಪ್ರಥಮಸ್ಥಾನವನ್ನು ಗಳಿಸುತ್ತಾ ತಾನೇನೋ ಮುಂದೆ ಹೋಗುತ್ತಿದ್ದೆ. ವಿಧಿಲೀಲೆ ಮತ್ತು ಅಮ್ಮನ ಪುಣ್ಯವೆಂಬಂತೇ ಬೋಧನಾ ಶುಲ್ಕ ತೆಗೆದುಕೊಳ್ಳದೇ ಕೆಲವು ಶಾಲೆಗಳಲ್ಲಿ ಬೋಧನೆ ನಡೆಯಿತು; ತಗಲುವ ವೆಚ್ಚವನ್ನು ಶಿಕ್ಷಕರೇ ಭರಿಸಿದರು. ಶಿಕ್ಷಕರೊಬ್ಬರ ಮಾರ್ಗದರ್ಶನದಿಂದ ಹೆಚ್ಚಿನ ಅಂಕ ಪಡೆದಿದ್ದಕ್ಕಾಗಿ ವಿದ್ಯಾರ್ಥಿವೇತನ ದೊರೆಯಿತು. ಬಡವರು ಯಾರೆಲ್ಲಾ ಬಯಸಿದರೂ ಆಗುವುದು ಕಷ್ಟವೋ ಅಂಥಾ ಎಂಜಿನೀಯರಿಂಗ್ ಓದಿ ಅಲ್ಲಿಯೂ ಬಂಗಾರದ ಪದಕ ಪಡೆದೆ. ಕಂಪನಿಯೊಂದು ಕೈಬೀಸಿ ಕರೆದು ಉದ್ಯೋಗ ನೀಡಿತು. ಅಮ್ಮನ ಹರುಷಕ್ಕೆ ಪಾರವೇ ಇರಲಿಲ್ಲ. ಅಣ್ಣ ನನಗಿಂತಾ ಮೊದಲೇ ಓದಿದ್ದು ವೇದಪಾಠಗಳನ್ನು, ಆತ ತಂದೆಯಂತೇ ಅರ್ಚಕನಾಗಿ ಅಮ್ಮನ ಜೊತೆ ಅದೇ ಮನೆಯಲ್ಲಿ ಇದ್ದ. ತಾನುಮಾತ್ರ ಬೆಂಗಳೂರಿನ ದಾರಿ ಹಿಡಿದೆ; ಕಂಪನಿ ಸೇರಿದೆ. 

ಕಂಪನಿಗೆ ಹೊಸದಾಗಿ ಸೇರಿದಾಗ ತನಗೆ ಉದ್ಯೋಗದ ಪರಿಪೂರ್ಣ ಮಾಹಿತಿ ಇರಲಿಲ್ಲ. ಹಿರಿಯ ಸಹೋದ್ಯೋಗಿಗಳ ಕೃಪೆಯಿಂದ ಹಂತಹಂತವಾಗಿ ಕೆಲಸವನ್ನು ಕಲಿತುಕೊಂಡೆ. ವರ್ಷಗಳ ತರುವಾಯ ಕೆಲಸ ಸಲೀಸಾಯ್ತು. ಕೆಲಸ ಪಕ್ಕಾ ಬರುತ್ತದೆ ಎಂದಾದಾಗ ಗಣಕತಜ್ಞನಾದ ತನಗೆ ಟೀಮ್ ಲೀಡರ್ ಆಗಿ ಭಡ್ತಿಯಾಯ್ತು. ಗುಂಪಿನ ಮುಂದಾಳುವಾಗಿ ಕೆಲಸನಡೆಸುತ್ತಿರುವಾಗ ಬಹಳ ಹೊತ್ತು ತೊಡಗಿಕೊಳ್ಳಬೇಕಾಗುತ್ತಿತ್ತು. ಕೆಲಸ ಸಮಯಕ್ಕೆ ಮುಗಿಯದೇ ಇದ್ದರೆ ಮೇಲಧಿಕಾರಿಗಳಿಂದ ಹೇಳಿಸಿಕೊಳ್ಳಬೇಕಾದ ಪ್ರಮೇಯವಿತ್ತು. ಪೂರೈಸಲಾಗದ ಒತ್ತಡದಲ್ಲಿ ಸಹಾಯಕ್ಕೆ ಬಂದವಳು ಸಹೋದ್ಯೋಗಿ ಸುಲತಾ. ತನ್ನ ಕಾರ್ಯಬಾಹುಳ್ಯಗಳನ್ನರಿತು ಪ್ರತೀ ಹಂತದಲ್ಲೂ ತನಗೆ ನೆರವಾಗುತ್ತಿದ್ದಳು. ಅದ್ಯಾಕೋ ಅರಿಯೆ ಆಕೆಯನ್ನು ಕಂಡರೆ ಏಕೋ ಇಷ್ಟವೆನಿಸುತ್ತಿತ್ತು; ಆಕೆಗೂ ಅದೇ ಅನಿಸಿಕೆ ಇತ್ತು ಎಂಬುದು ಆಮೇಲೆ ತಿಳಿದುಬಂದ ವಿಷಯ. ಆಡಲಾಗದೇ ಉಳಿದ ಮಾತು ಒಂದುದಿನ ಆಡಿಯೇಹೋಯ್ತು; ಪರಸ್ಪರ ಇಷ್ಟಪಡುವುದಾಗಿ ತಾವು ಹೇಳಿಕೊಂಡೆವು. ನಂತರದ ದಿನಗಳಲ್ಲಿ ಹತ್ತಿರಹತ್ತಿರವಾಗುತ್ತಾ ನಡೆದದ್ದೇ ಅದೆಲ್ಲಾ....ಇಲ್ಲಿ ಬೇಡಬಿಡಿ. ಆ ಹಂತದಲ್ಲಿ ಅಮ್ಮನನ್ನೂ ಕೇಳದೇ ಮದುವೆಯಾಗಿಬಿಟ್ಟೆ. ಗೊತ್ತಾದಾಗ ಅಮ್ಮ ಅತ್ತಳು. ಆದರೂ ಮಗನನ್ನು ಕಡೆಗಣಿಸಲೊಲ್ಲಳು.

ಅಣ್ಣ ಅರ್ಚಕನಾಗಿ-ಪುರೋಹಿತನಾಗಿ ಕಷ್ಟಾರ್ಜಿತದಲ್ಲಿ ಬದುಕು ಸಾಗಿಸುತ್ತಾ ಅಮ್ಮನನ್ನೂ-ಅಕ್ಕನನ್ನೂ ತನ್ನ ಕುಟುಂಬವನ್ನೂ ಸಲಹುತ್ತಿದ್ದ. ಅಣ್ಣ-ಅಮ್ಮ ಕಷ್ಟದಲ್ಲೇ ಅಂತೂ ಅಕ್ಕನನ್ನು ಮದುವೆಮಾಡಿದರು. ಅಕ್ಕ ಮದುವೆಯಾಗಿ ಒಳ್ಳೆಯ ಮನೆಯನ್ನು ಸೇರಿದ್ದು ಅಮ್ಮನಿಗೆ ಬಹುಪಾಲಿನ ಭಾರವನ್ನು ಕಳೆದುಕೊಂಡ ಹಾಗಿತ್ತು. ಅಕ್ಕನ ಮದುವೆಗೆ ಸಹಾಯಮಾಡಲು ಮುಂದಾದಾಗ ಪೈಸೆಯನ್ನೂ ಬಿಚ್ಚದಂತೇ ಸುಲತಾ ತಡೆದಿದ್ದಳು. ಅಣ್ಣ ಹಣಕಾಸಿನ ಬಗ್ಗೆ ಎಂದೂ ನನ್ನಲ್ಲಿ ಕೈ ಒಡ್ಡಲಿಲ್ಲ. ಜೀವನಪೂರ್ತಿ ನೊಂದ ಅಮ್ಮ ಕೆಲದಿನ ’ಜಸ್ಟ್ ಫಾರ್ ಏ ಚೇಂಜ್’ ಗಾಗಿ ತಮ್ಮ ಜೊತೆಗಿರಲಿ ಎಂದು ಯಾಕೋ ಅನ್ನಿಸಿತು. ಒಮ್ಮೆ ಅಮ್ಮನಿಗೂ-ಅಣ್ಣನಿಗೂ ವಿಷಯ ತಿಳಿಸಿದೆ. ಅಮ್ಮ ಬೆಂಗಳೂರಿಗೆ ಒತ್ತಾಯದಿಂದ ಬಂದಿಳಿದಳು. ಬಸ್ಸಿನಿಂದಿಳಿದ ಅಮ್ಮನನ್ನೂ ಅಣ್ಣನನ್ನೂ ಕಾರಿನಲ್ಲಿ ಕೂರಿಸಿಕೊಂಡಾಗ ಅವರಿಗಾದ ಆನಂದ ಹೇಳತೀರದು! ಬುರ್ರನೆ ಹೊರಟು ಮನೆಸೇರಿಕೊಂಡೆವು. ಅಮ್ಮ-ಅಣ್ಣ ವಿಶಾಲವಾದ ತನ್ನ ಮನೆಯನ್ನು ನೋಡಿದರು. ಅವರಿಗೆ ಸುಲತಾಳನ್ನು ಪರಿಚಯಿಸಿದೆ. ಅಮ್ಮ-ಅಣ್ಣ ಬಂದಿದ್ದು ಸುಲತಾಳಿಗೆ ಹಿಡಿಸಿದ ಹಾಗೆ ಕಾಣಲಿಲ್ಲ; ತೋರಿಕೆಗೆ ನಕ್ಕಹಾಗಿತ್ತು. ಅಣ್ಣ ಒಂದೇ ದಿನ ತಮ್ಮ ಮನೆಯಲ್ಲಿದ್ದು ಮಾರನೇ ದಿನ ಊರಿಗೆ ಪಯಣಿಸಿಬಿಟ್ಟ. ಅಮ್ಮ ಇಲ್ಲೇ ಇದ್ದರು. ಮನೆಯೆಲ್ಲಾ ಓಡಾಡುತ್ತಿದ್ದ ಅಮ್ಮನನ್ನು ಕಂಡರೆ ಕ್ರಮೇಣ ನಾಗಿಣಿಯಂತಾಗುತ್ತಿದ್ದವಳು ಸುಲತಾ. ಸ್ನಾನ, ಶುಚಿತ್ವ, ಮಡಿ, ಕೊಳೆ-ಮುಸುರೆ ಎಲ್ಲದರಲ್ಲೂ ಅಮ್ಮನಿಗೆ ಅವಳ ಅದೇ ರಿವಾಜು. ಊರಿಂದ ಬರುವಾಗ ಚೀಲದಲ್ಲಿ ಅದೇನೋ ಒಂದು ಮಡಿಗಂಟನ್ನು ತಂದಿದ್ದಳು. ಎರಡು ಮಣ್ಣಿನ ಬೋಗುಣಿಗಳನ್ನೂ ಒಡೆಯದಂತೇ ಬಟ್ಟೆಗಳಲ್ಲಿ ಸುತ್ತಿಕೊಂಡು ಜೋಪಾನವಾಗಿ ತಂದಿದ್ದಳು. "ಮಗಾ ಈ ಬೋಗುಣಿಗಳನ್ನು ತಂದಿದೀನಿ ಕಣೋ, ಮಾಡಿದ ಆಸೆಗಳೂ ರುಚಿಕಟ್ಟಾಗಿರುತ್ತವೆ, ಆರೋಗ್ಯಕ್ಕೂ ಒಳ್ಳೇದು, ಬಳಸಲು ಹೇಳು" ಎಂದು ಅಮ್ಮ ಅವುಗಳನ್ನು ಕೈಗೆತ್ತಿಕೊಟ್ಟಾಗ ಮನೆತುಂಬಾ ಟಪ್ಪರ್ ವೇರ್ ಪಾತ್ರೆಗಳನ್ನೂ ಬಾಟಲುಗಳನ್ನೂ ಹೊಂದಿರುವ ಸುಲತಾ ಇದನ್ನು ಸ್ವೀಕರಿಸುತ್ತಾಳೆ ಎಂಬ ಭರವಸೆಯಿರಲಿಲ್ಲ. ಅಂತೂ ಆ ದಿನ ಅಮ್ಮ ಸುಸ್ತಾಗಿದ್ದರೋ ಏನೋ ಮಲಗಿ ನಿದ್ದೆಹೋದರು ಎಂದುಕೊಂಡೆ. ತಾವಿಬ್ಬರೂ ತಮ್ಮ ಕೋಣೆಗೆ ಸೇರಿಕೊಂಡೆವು. ಅಮ್ಮನಿಗೆ ಗೆಸ್ಟ್ ರೂಮಿನಲ್ಲಿ ಹಾಸಿಗೆ ತೋರಿಸಿದೆ. 

ಮಾರನೇ ಬೆಳಿಗ್ಗೆ ಎದ್ದು ಲಿವಿಂಗ್ ರೂಮಿಗೆ ಬಂದರೆ ಅಮ್ಮ ಬೋಗುಣಿಗಳನ್ನು ಇಟ್ಟುಕೊಂಡು ನೀವುತ್ತಿದ್ದಳು. ಹಿಂದೆಯೇ ಎದ್ದುಬಂದ ಸುಲತಾ ಅವುಗಳನ್ನು ನೋಡಿದ್ದೇ ನೋಡಿದ್ದು "ಥೂ ಹಳ್ಳೀ ಗುಗ್ಗುಗಳು ಉಪಯೋಗಿಸುವ ಪಾತ್ರೆಗಳು ನಮಗೇಕೆ? ಎಲ್ಲಾದರೂ ಬಿಸಾಕಿ" ಎಂದುಬಿಟ್ಟಳು. ಅಮ್ಮನ ಮುಖದಲ್ಲಿ ಕಾಣಿಸಿದ ನೋವಿನ ಛಾಯೆಯನ್ನು ಅಕ್ಷರಗಳಲ್ಲಿ ಹೇಗೆ ಹೇಳಲಿ? ಬಚ್ಚಲುಮನೆಯಲ್ಲಿ ನಲ್ಲಿಯನ್ನು ಬಿಗಿಯಾಗಿ ಕಟ್ಟಿದ್ದಕ್ಕೆ ವಾಚಾಮಗೋಚರವಾಗಿ ಅಮ್ಮನನ್ನು ಸುಲತಾ ಬೈದುಕೊಂಡಿದ್ದು ಕೇಳಿಸಿತ್ತು. ತುತ್ತು ಕೊಟ್ಟವಳ ಮತ್ತು ಮುತ್ತುಕೊಟ್ಟವಳ ನಡುವೆ ಸಿಕ್ಕ ತನ್ನ ಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕ ಅಡಕೆಯಂತೇ ಆಗಿತ್ತು. ನಿತ್ಯ ಸ್ನಾನಾನಂತರ ಅಮ್ಮ ಮಡಿಯುಟ್ಟು, ಮಡಿಗಂಟನ್ನು ಬಿಚ್ಚಿ ಅದೇನೋ ಪುಸ್ತಕಗಳನ್ನು ಓದುತ್ತಿದ್ದಳು. ದೇವರ ನಾಮಗಳನ್ನು ಸಣ್ಣಗೆ ಗುನುಗುತ್ತಿದ್ದಳು-ದೊಡ್ಡದಾಗಿ ರಾಗವಾಗಿ ಹಾಡಲು ಪರವಾನಗಿ ದೊರೆಯದೆಂಬ ಅನಿಸಿಕೆ ಅಮ್ಮನಿಗಿದ್ದಿರಬೇಕು. ಹಾಗಂತ ದೇವರಕೋಣೆ ಎಂದೇನೂ ಪ್ರತ್ಯೇಕ ಇರಲಿಲ್ಲ, ಇರುವ ಕೋಣೆಯಲ್ಲೇ ಒಂದು ಕಡೆ ಕೂತು ಆ ಕಾರ್ಯ ನಡೆಸುತ್ತಿದ್ದಳು. ಒಂದೆರಡು ದಿನ ಸುಲತಾ ಈ ಕೆಲಸದಲ್ಲಿದ್ದ ಅಮ್ಮನನ್ನು ಕೆಂಗಣ್ಣಿನಿಂದಲೇ ಕಂಡಳು. ದಿನಗಳೆಯುತ್ತಾ "ವಾಸನೆಬೀರುವ ಮಡಿಗಂಟು, ಮಡಿಗಂಟಂತೆ ಮಡಿಗಂಟು, ಎತ್ತಿ ಎಲ್ಲಾದರೂ ಎಸೀತೀನಿ ಗಬ್ಬುನಾತ" ಎಂದೆಲ್ಲಾ ರಂಪಮಾಡಿದಳು. ಅಮ್ಮನ ಕಣ್ಣುಗಳಲ್ಲಿ ನೀರನ್ನು ಕಂಡೆ; ಕಂಡೂ ಕಂಡೂ ಅಸಹಾಯಕನಾದೆ. ಮಾತಾಡಿದರೆ ಸುಲತಾ ತನ್ನನ್ನೇ ಬಿಟ್ಟುಹೋಗುವಳೆಂಬ ಹೆದರಿಕೆ, ಆಡದಿದ್ದರೆ ಅಮ್ಮನಿಗೆ ಹೇಗನಿಸಿರಬೇಡ ಎಂಬ ಆತಂಕ. ವಾಸ್ತವವಾಗಿ ಮಡಿಗಂಟು ಶ್ರೀಗಂಧ-ಧೂಪ-ಗುಗ್ಗುಳಗಳ ಪರಿಮಳವನ್ನು ಬೀರುತ್ತಿತ್ತು, ಸ್ವಚ್ಛ-ಶುಭ್ರ ರೇಷ್ಮೆಬಟ್ಟೆಯದಾಗಿತ್ತು, ಆದರೂ ಸುಲತಾಳ ಮೂಗಿಗೆ ಮಾತ್ರ ಇಲ್ಲದ ವಾಸನೆ ಬಡಿಯುತ್ತಿತ್ತು! 

ವಾರದಲ್ಲೇ ಅಮ್ಮ ಸಾವರಿಸಿಕೊಂಡ ಗಾಯಾಳುವಿನಂತೇ ಹೊರಟುನಿಂತಳು. ಬೇಡಾ ಎಂದರೂ ಕೇಳಲೇ ಇಲ್ಲ."ಒಮ್ಮೆ  ಹೀಗೆ ಬಾ ಮಗಾ" ಎಂದು ಕರೆದು ಅಪ್ಪಿಕೊಂಡು ತನ್ನಗಂಟಿನಲ್ಲಿದ್ದ ಚಿಲ್ಲರೆ ನಾಣ್ಯ-ನೋಟುಗಳನ್ನೆಲ್ಲಾ ಕೈಗೆ ಹಾಕಿ "ಒಳ್ಳೇದಾಗಿರಿ ಕಂದಾ, ಮಕ್ಕಳು ಮರಿಗಳು ಜನಿಸಿ ಮನೆತುಂಬಿ ನೂರ್ಕಾಲ ಸುಖವಾಗಿರಿ" ಎಂದು ಮನದುಂಬಿ ಹರಸಿ ಕಂಬನಿಗರೆದಳು. ಅಷ್ಟಕ್ಕೂ ಅಮ್ಮನ ಮಡಿಗಂಟಿನಲ್ಲಿದ್ದ ಪುಸ್ತಕಗಳನ್ನು ತಾನು ನೋಡಿರಲಿಲ್ಲ; ನೋಡಬೇಕು ಎನ್ನಿಸಲೂ ಇಲ್ಲ. ಅದೇನೋ ಆ ಹಳೇ ಕಾಲದ್ದು, ಸಾಫ್ಟ್ ವೇರ್ ನವರಾದ ತಮಗೆಲ್ಲಾ ಅದೇನು ಪ್ರಯೋಜನಕ್ಕೆ ಬಂದೀತು ಎಂಬ ಭಾವನೆ ಮನದಲ್ಲಿತ್ತು. ಅಮ್ಮನನ್ನು ಅಷ್ಟು ಶೀಘ್ರ ಊರಿಗೆ ಕಳುಹಿಸಿಕೊಡುವ ಮನಸ್ಸಿರಲಿಲ್ಲ. ಆದರೆ ಅಮ್ಮ ನಿಲ್ಲಬೇಕಲ್ಲಾ? ಹೊರಟುನಿಂತ ಅಮ್ಮನನ್ನು ತಾನೇ ಹೋಗಿ ಊರಿಗೆ ಕಳುಹಿಸಿ ಅದೇ ದಿನ ರಾತ್ರಿ ಮರಳಿ ಬಂದೆ. ಹೃದಯ ಭಾರವಾಗಿತ್ತು, ಮಾತು ಬಾರದಾಗಿತ್ತು. ಮರಳಿದ ತನ್ನನ್ನು ಸುಲತಾ ಬಾಗಿಲಲ್ಲೇ ತಡೆದಳು " ಹಲೋ ಇನ್ಮೇಲೆ ನಿಮ್ಮಮ್ಮನೋ ಅಣ್ಣನೋ ಈ ಕಡೆ ತಲೆಹಾಕಿದ್ರೆ ನಾನಂತೂ ಒಂದು ದಿನ ಇರಲಾರೆ. ನಿಂಗೆ ಬೇಕಾದ್ರೆ ನಂಜೊತೆ ಇರು ಇಲ್ಲವಾದ್ರೆ ಡೈವೋರ್ಸ್ ತಗೊಳ್ಳೋಣ" ಎಂದುಬಿಟ್ಟಳು.

ಅಮ್ಮನ ನೆನಪಿನಲ್ಲಿ ಮುಸುಕು ಮುಚ್ಚಿ ಮಲಗಿದಲ್ಲೇ ಅತ್ತೆ; ತಲೆಕೆಳಗಿನ ದಿಂಬು ನೆನೆದಿದ್ದು ನನಗೆಮಾತ್ರ ತಿಳಿದಿತ್ತು, ಬಿಸಿಯಾದ ತಲೆಯ ಆ ಕಾವಿಗೆ ಒದ್ದೆಯಾದ ದಿಂಬಿನ ಆ ಭಾಗ ಮತ್ತೆ ಒಣಗಿಹೋಗಿತ್ತು. ಮಕ್ಕಳನ್ನು ಹೆತ್ತು ಸುಖವಾಗಿರಿ ಎಂದು ಹರಸಿದ ತಾಯಿಯೇ ಕಣ್ಣೆದುರು ಸದಾ ಕಾಣುತ್ತಿದ್ದಳು. ಯಾರಲ್ಲಿಯೂ ಹೇಳಿಕೊಳ್ಳಲು ತನಗೆ ಯಾರಿದ್ದಾರೆ? ಬಚ್ಚಲುಮನೆಯಲ್ಲಿ, ಕಕ್ಕಸು ಕೋಣೆಯಲ್ಲಿ ನೆನಪಿಸಿಕೊಂಡು ಅಳುತ್ತಿದ್ದೆ, ಹೊರಗೆ ಅತ್ತರೆ ಆಕೆ ನೋಡಿದರೆ ಎಂಬ ಭಯ ಕಾಡುತ್ತಿತ್ತು. ಯಾಕೋ ಮನಸ್ಸು ಬಹಳ ಉದ್ವಿಗ್ನ ಗೊಂಡಿತ್ತು. ಅಮ್ಮ ಬಂದುಹೋದಮೇಲೆ ಸುಲತಾ ಬದಲಾಗಿಹೋಗಿದ್ದಳು. ಸರಿಯಾಗಿ ಮಾತನಾಡುತ್ತಿರಲಿಲ್ಲ,  ಬೇಕು-ಬೇಡಗಳಲ್ಲಿ ಆಸಕ್ತಿ ಕಮ್ಮಿಯಾಗಿತ್ತು. ಮನೆಗೆ ಬರ-ಹೋಗುವ ಸಮಯವೂ ಬದಲಾಗತೊಡಗಿತ್ತು. ಆಡಳಿತ ಮಂಡಳಿಗೆ ಹೇಳಿ ಬೇರೇ ಗುಂಪಿಗೆ ಸೇರಿಕೊಂಡಳು. ಅಲ್ಲಿ ಅದೇನು ನಡೆಯಿತೋ ತಿಳಿಯದು. ರಾಹುಲ್ ಎಂಬ ಆ ಗುಂಪಿನಲ್ಲಿದ್ದೊಬ್ಬಾತ ಸಲುಗೆಯಿಂದಿರುವುದು ಕಾಣಿಸಿತು. ಕೇಳುವ-ಹೇಳುವ ಕಥೆಯೇ ಇಲ್ಲ. ಕೇಳಿದರೆ ಆ ಕ್ಷಣದಲ್ಲೇ ಡೈವೋರ್ಸ್, ಕೇಳದಿದ್ದರೆ ಏನಾಗಬಹುದೆಂದು ಊಹಿಸಲೂ ಆಗಲಿಲ್ಲ. 

ನೊಂದಮನಸ್ಸಿಗೆ ಸಾಂತ್ವನ ಹುಡುಕುತ್ತ, ಶಾಂತಿ ಹುಡುಕುತ್ತಿದ್ದಾಗ ಯಾರೋ ಹೇಳಿದರು-ಅಮೇರಿಕಾದಿಂದ ಯಾರೋ ಬಂದಿದ್ದಾನಂತೆ, ಅವನ ಉಪನ್ಯಾಸಗಳು ತುಂಬಾ ಪರಿಣಾಮಕಾರಿಯಂತೆ. ಜೀವನದ ಜಿಗುಪ್ಸೆಯನ್ನು ಕಳೆಯಲು ಅವು ಸಹಕಾರಿಯಂತೆ ಎಂದುಅ. ಆನ್ ಲೈನ್ ನಲ್ಲಿ ಮಾಹಿತಿಪಡೆದು ಟಿಕೆಟ್ ಖರೀದಿಸಿದೆ. ಉಪನ್ಯಾಸಕ್ಕೂ ಹೋಗಿಬಂದೆ. ಉಪನ್ಯಾಸ ಆಫ್ ಕೋರ್ಸ್ ಆಂಗ್ಲಭಾಷೆಯಲ್ಲಿ ನಡೆಯಿತು. ರಾಬಿನ್ ಮ್ಯಾಥ್ಯೂ ಎಂಬಾತ ಉಪನ್ಯಾಸ ನೀಡಿದ-ಆತ ಜಗತ್ಪ್ರಸಿದ್ಧ, ಆತನ  ಬಗ್ಗೆ ನಿಮಗೂ ತಿಳಿದಿರಲಿಕ್ಕೆ ಸಾಕು. ರಾಬಿನ್ ಮ್ಯಾಥ್ಯೂಗೆ ಭಾರತವೆಂದರೆ ಬಹಳ ಅಚ್ಚುಮೆಚ್ಚಂತೆ. ಆತ ಇಲ್ಲಿನ ರಾಮಾಯಣ-ಮಹಾಭಾರತ ಮತ್ತು ವೇದ-ಉಪನಿಷತ್ತುಗಳು ಅಲ್ಲದೇ ಭಗವದ್ಗೀತೆಯನ್ನೂ ಚೆನ್ನಾಗಿ ಓದಿ ತಿಳಿದುಕೊಂಡಿದ್ದಾನಂತೆ. "ದೆರ್ ಆರ್ ಸಚ್ ಇನ್ ವ್ಯಾಲ್ಯೂಯೇಬಲ್ ಡೈಮಂಡ್ಸ್ ಇನ್ ಇಂಡಿಯಾ" ಅಂದ. ಉಪನ್ಯಾಸಕ್ಕೆ ಸುಮಾರು ೫೦೦ ಜನ ಸೇರಿದ್ದರು. ಎಲ್ಲರಿಗೂ ಒಂದಲ್ಲಾ ಒಂದು ಸಮಸ್ಯೆಯೇ. ಎಲ್ಲರಿಗೂ ಸಾಂಸಾರಿಕ ಅಥವಾ ವ್ಯಾವಹಾರಿಕ ಸಮಸ್ಯೆಗಳೇ. ಕೃಷ್ಣನನ್ನು ಮ್ಯಾನೇಜ್ ಮೆಂಟ್ ಗುರು ಎಂದೂ ಗೀತೆ ಜಗತ್ತಿನಲ್ಲಿಯೇ ತಾನು ನೋಡಿದ ಅತಿಶ್ರೇಷ್ಠ ಗ್ರಂಥವೆಂದೂ ರಾಬಿನ್ ಮ್ಯಾಥ್ಯೂ ಹೇಳಿದ. ಉಪನ್ಯಾಸ ಮುಗಿದು ಹೊರಡುವಾಗ ಆತ ಎಲ್ಲರಿಗೂ ಒಂದು ಪುಸ್ತಕ ಶಿಫಾರಸ್ಸುಮಾಡಿದ. ಅದು ಅದೇ ಭಗವದ್ಗೀತೆ. "ಯು ಕ್ಯಾನ್ ಗೆಟ್ ಇಟ್ ಇನ್ ಯುವರ್ ಓನ್ ಲ್ಯಾಂಗ್ವೇಜ್ ಐ ಹೋಪ್, ಆಲ್ ದಿ ಬೆಸ್ಟ್" ಎಂದು ಎಲ್ಲರನ್ನೂ ಬೀಳ್ಕೊಟ್ಟ.

ನಿಜಕ್ಕೂ ಆತ ಹೇಳಿದ್ದು ಸರಿಯೇ ಎಂಬುದು ಗೀತೆಯನ್ನು ಅಂದಿನಿಂದ ಓದಲು ಆರಂಭಿಸಿದ ತನಗೆ ವೇದ್ಯವಾಯ್ತು. ನೋವಿನಲ್ಲೂ ನಲಿವಿನಲ್ಲೂ, ಸುಖ-ದುಃಖಗಳೆರಡರಲ್ಲೂ ಮನಸ್ಸನ್ನು ನಿರಾಳವಾಗಿ ಇರಿಸಿಕೊಂಡು ನಿರುಮ್ಮಳವಾಗಿರುವುದು ಹೇಗೆ ಎಂಬುದನ್ನು ತಿಳಿಯಲು ಗೀತೆಯನ್ನೋದಬೇಕು. ಗೀತೆ ಒಂದು ಧರ್ಮಗ್ರಂಥವಲ್ಲ, ಅದು ಮಾನವ ಜೀವನಧರ್ಮವನ್ನು ತಿಳಿಸುತ್ತದೆ. ಗೀತೆಯನ್ನು ಓದುತ್ತಾ ಓದುತ್ತಾ ಗೀತೆಯಲ್ಲಿ ಪಳಗಿಬಿಟ್ಟೆ. ಇಡೀ ಗೀತೆ ಕಂಠಪಾಠವಾಗಿ ಗೀತೆಯ ಕುರಿತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ವರ್ಷವೊಂದರ ಹಿಂದೆ ಡೈವೋರ್ಸ ನೋಟೀಸ್ ಕೊಟ್ಟ ಸುಲತಾ ಇನ್ನೂ ಇತ್ಯರ್ಥವಾಗದ್ದರಿಂದ ಬೇರೇ ಮನೆಯಲ್ಲಿದ್ದಳು. ಗೀತೆಯ ಕುರಿತಾದ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನಡೆಸುತ್ತಿದ್ದಾಗ ಕಣ್ಣು ಅಕಸ್ಮಾತ್ ಎದುರಿಗೆ ಕೂತ ವ್ಯಕ್ತಿಯಮೇಲೆ ಹರಿಯಿತು: ಹೌದು ಅವಳೇ ಸುಲತಾ. ಮನಸ್ಸಿಗೆ ನೆಮ್ಮದಿ ಕಳೆದುಕೊಂಡು ಹಾಗೆ ಬಂದಿದ್ದಾಳೆ ಎಂದು ಬೇರೇ ಹೇಳಬೇಕೇ? ಪ್ರವಚನ ಮುಗಿದು ಹೊರಟಾಗ "ರೀ" ಎಂಬ ಕರೆ! ಸುಲತಾ ಬೆಂಬತ್ತಿ ಬಂದಳು. ತಾನಿನ್ನೆಂದೂ ಹಾಗೆ ನಡೆದುಕೊಳ್ಳುವುದಿಲ್ಲವೆಂತಲೂ, ಕೆಲಸ ಒತ್ತಡಗಳು ಮತ್ತು ಮಿಥ್ಯಾ ಲೋಕದ ಬಡಿವಾರದ ಜೀವನದಲ್ಲಿ ತೊಡಗಿಕೊಂಡ ತನಗೆ ಈಗ ನಿಜದ ಅರಿವಾಗಿದೆಯೆಂದೂ ಹೇಳಿದಳು.    

ಅಣ್ಣ ಮನೆಗೆ ಫೋನು ಹಾಕಿಸಿ ವರ್ಷಗಳೇ ಕಳೆದವು. ತನ್ನ ಸ್ವಂತ ದುಡಿಮೆಯಲ್ಲೇ ಅಣ್ಣ ಎಲ್ಲಾ ಖರ್ಚನ್ನೂ ನಿಭಾಯಿಸುತ್ತಾನೆ; ಹಣ ಕಳುಹಿಸಲೇರ್ ಎಂದರೆ ಬೇಡವೆಂಬ ಅಣ್ಣಂದಿರೂ ಇರುತ್ತಾರ್ಯೇ? ಇರುತ್ತಾರೆ ಎಂಬುದು ತನ್ನಣ್ಣನನ್ನು ನೋಡಿದರೆ ತಿಳಿಯುತ್ತದೆ! ಅಣ್ಣ ಕರೆಮಾಡಿದ್ದ. ವರ್ಷದ ಹಿಂದೆ ಅಮ್ಮ ಭಗವಂತನ ಪಾದ ಸೇರ್ರಿಕೊಂಡು ಈಗ ವರ್ಷಾಂತಕ ಕಾರ್ಯ ಬಂದುಬಿಟ್ಟಿದೆ ಎಂಬುದು ನೆನಪಿಗೆ ಬಂದಿದ್ದೇ ಆಗ. ಬೆಳಗಾದರೆ ನಗರದ ಕೆಲಸಗಳ ಒತ್ತಡದಲ್ಲಿ ತಮ್ಮನ್ನೇ ಮರೆತಿರುವಾಗ ಇನ್ನೆಲ್ಲಿಯ ಅಪ್ಪ-ಅಮ್ಮನ ನೆನಪು ಅಲ್ಲವೇ? ಅಮ್ಮ ತೀರಿಕೊಂಡಾಗ ತಾನೊಬ್ಬನೇ ಹೋಗಿದ್ದೆ-ಆಗ ಸುಲತಾ ದೂರವಾಗಿದ್ದಳು. ಅಣ್ಣ-ತಮ್ಮ ಪರಸ್ಪರ ಸಂತೈಸಿಕೊಂಡೆವಾದರೂ ಅಮ್ಮನ ಮಡಿಲಿನ ಆ ಪ್ರೀತಿ ಇನ್ನೆಲ್ಲಿ ಸಿಕ್ಕೀತು, ಇನ್ನೆಲ್ಲಿ ದಕ್ಕೀತು? ಈ ಸರ್ತಿ ತಮ್ಮ ದುಃಖದಲ್ಲಿ ಇನ್ನೊಬ್ಬಳು ಸಹಭಾಗಿ-ಅವಳೇ ಅರ್ಧಾಂಗಿ ಸುಲತಾ. ಜೊತೆಗೆ ಸಮಾಧಾನಿಸಿಕೊಳ್ಳಲು ಭಗವದ್ಗೀತೆಯ ತತ್ವಗಳು, ಕಿರುಹೊತ್ತಗೆಗಳು.

ಅಮ್ಮ ತೀರಿಕೊಂಡ ಗಡಿಬಿಡಿಯಲ್ಲಿ ಆಗ ಅಮ್ಮನ ಮಡಿಗಂಟನ್ನು ಬಿಚ್ಚಿ ನೋಡಿರಲಿಲ್ಲ. ಅಣ್ಣ ಅದನ್ನು ಎಲ್ಲೋ ಹಾಗೇ ಬಿಟ್ಟಿರಬೇಕೆಂದುಕೊಂಡಿದ್ದೆ. ಇಲ್ಲಾ ಇಲ್ಲಾ...ಅದು ಇನ್ನೂ ಮನೆಯಲ್ಲೇ ಇದೆ! ಅದನ್ನು ಅಣ್ಣ ಅಮ್ಮನಂತೇ ನಿತ್ಯವೂ ಬಳಸುವುದು ಈಗಿನ ವಾಡಿಕೆಯಂತೆ. ಅಂದಹಾಗೇ ಆ ಮಡಿಗಂಟನ್ನು ಕುತೂಹಲದಿಂದ ಬಿಚ್ಚಿದೆ. ಅದರಲ್ಲಿ ಪ್ರಥಮವಾಗಿ ಕಂಡ ಪುಸ್ತಕದ ಹೆಸರು "ಭಗವದ್ಗೀತೆ." ಅದರೊಟ್ಟಿಗೆ ಭರ್ತೃಹರಿಯ ನೀತಿ ಶತಕಗಳು, ರಾಮಾಯಣ ಮತ್ತು ಮಹಾಭಾರತಗಳಿವೆ. ಭಗವದ್ಗೀತೆಯ ನಡುವೆ ಆಗ ಹೇಳಿದೆನಲ್ಲಾ ದಪ್ಪನೆಯ ಗುರ್ತಿನ ಕಾಗದವಿದೆ. ಮತ್ತು ಅದರಮೇಲೆ ಹೀಗೆ ಬರೆದಿದೆ:

ಗಾರೆಗೋಡೆಯ ಚಿತ್ರ ಸಾಲು ಪರಿಷತ್ತಿನಲಿ
ಒಬ್ಬೊಬ್ಬರದೂ ಒಂದು ಜೀವ
ನನಗೆ ಎಡೆಯಿರಬಹುದು ಅವರಿರುವ ಸಾಲಿನಲಿ
ಮನವ ತುಂಬಿದ್ದುಂಟು ನಮ್ರಭಾವ

ಹಳ್ಳಿಮನೆಯ ಗೋಡೆಯಮೇಲಿರುವ ತಾನು ಗಮನಿಸುತ್ತಿರುವ ಆ ಚಿತ್ರಪಟದಲ್ಲಿರುವುದು ಅಮ್ಮನ ಭಾವಚಿತ್ರ. ಅಮ್ಮನ ಕಷ್ಟಕಾಲದಲ್ಲಿ ’ಗೀತೆ’ ಅಮ್ಮನಿಗೆ ಅಮ್ಮನಾದಳು, ಅಮ್ಮ ಹೊರಟುಹೋದಳು-ಗೀತೆಯನ್ನೇ ಅಮ್ಮನ ಜಾಗದಲ್ಲಿ ನಮ್ಮ ಹತ್ತಿರಬಿಟ್ಟು ಹೋದಳು. 
                                      --V.R.Bhat

Friday, December 14, 2012

ವಾನಪ್ರಸ್ಥ - ಹೀಗೊಂದು ಚಿಂತನೆ      'ಊರು ಹೋಗು ಎನ್ನುತ್ತಿದೆ, ಕಾಡು ಬಾ ಎನ್ನುತ್ತಿದೆ' ಅನ್ನುವ ಮಾತನ್ನು ವಯಸ್ಸಾದವರು ಹೇಳುವುದನ್ನು ಕೇಳುತ್ತಿರುತ್ತೇವೆ. ಆದರೆ ಹೋಗು ಎಂದರೂ ಹೋಗಲೊಲ್ಲದವರೇ ಹೆಚ್ಚು. ಅಷ್ಟಕ್ಕೂ ಒಂದು ವೇಳೆ ಹೋಗಬೇಕೆಂದರೂ ಈಗ ಕಾಡಾದರೂ ಎಲ್ಲಿದೆ? ಇರುವ ಕಾಡುಗಳನ್ನೆಲ್ಲಾ ಮನುಷ್ಯನೇ ಆಕ್ರಮಿಸಿಕೊಂಡು ಕಾಡಿನ ಪ್ರಾಣಿಗಳಿಗೇ ಇರಲು ಜಾಗವಿಲ್ಲದಾಗಿದೆ. ವಿಧಿಯಿಲ್ಲದೆ ನಾಡಿಗೆ ಬರುತ್ತಿರುವ ಆ ಕಾಡುಪ್ರಾಣಿಗಳೂ ಈಗ ನಾಶದ ಅಂಚಿಗೆ ಬರುತ್ತಿವೆ. ಏಕೋ ಏನೋ ಇತ್ತೀಚೆಗೆ ನನ್ನ ಮನಸ್ಸು ವಾನಪ್ರಸ್ಥದ ಕುರಿತು ತಲೆ ಕೆಡಿಸಿಕೊಂಡಿದೆ. ಪ್ರಾಯಶಃ ವಯೋಸಹಜವಿರಬಹುದು. ನನ್ನ 6 ವರ್ಷದ ಮೊಮ್ಮಗಳೊಡನೆ ಆಟವಾಡುತ್ತಾ ನನ್ನಷ್ಟಕ್ಕೆ ನಾನೇ ಸ್ವಗತವೆಂಬಂತೆ ಮಾತನಾಡಿಕೊಳ್ಳುತ್ತಾ, 'ನನಗೆ ಸಾಕಾಗಿದೆ ಕಣಮ್ಮಾ, ವಾನಪ್ರಸ್ಥಕ್ಕೆ ಹೋಗಿಬಿಡ್ತೀನಿ' ಅಂದಿದ್ದೆ. ಪಾಪ, ಅವಳಿಗೆ ವಾನಪ್ರಸ್ಥ ಅಂದರೆ ಏನು ಅರ್ಥವಾದೀತು? ಅವಳು ಆಟ ಆಡುವುದನ್ನು ನಿಲ್ಲಿಸಿ, "ತಾತಾ, ಪ್ಲೀಸ್, ವಾನಾಸ್ಪತ್ರೆಗೆ ಹೋಗಬೇಡ, ಪ್ಲೀಸ್, ಪ್ಲೀಸ್" ಎಂದು ಗೋಗರೆದಿದ್ದಳು. ವಾನಪ್ರಸ್ಥ ಅವಳ ಬಾಯಲ್ಲಿ ವಾನಾಸ್ಪತ್ರೆ ಆಗಿತ್ತು. 'ಹೂಂ, ಆಯಿತು, ಹೋಗಲ್ಲ' ಅಂದ ಮೇಲೆಯೇ ನಮ್ಮ ಆಟ ಮುಂದುವರೆದಿದ್ದು.   ವಾನಪ್ರಸ್ಥ(ವನಪ್ರಸ್ಥ)ವೆಂದರೆ ಕಾಡಿನೆಡೆಗೆ ತೆರಳುವುದು ಎಂಬ ಅರ್ಥವೂ ಇದೆ. ಕಾಡುಗಳು ನಾಶವಾಗಿರುವ, ಆಗುತ್ತಿರುವ ಇಂದಿನ ದಿನಗಳಲ್ಲಿ ಇದು ಅರ್ಥ ಕಳೆದುಕೊಂಡಿದೆ. ಮಾನವಸಹಜ ಆಸೆ, ಆಕಾಂಕ್ಷೆಗಳಿಗೆ ಕಡಿವಾಣ ಹಾಕಿಕೊಂಡು ಪ್ರಾಪಂಚಿಕತೆಯಿಂದ ಕ್ರಮೇಣ ದೂರ ಸರಿಯುವ, ಲೋಕಹಿತ ಬಯಸುವ ಎಡೆಗೆ ಕಾಲಿಡುವುದು ವಾನಪ್ರಸ್ಥದ ಆರಂಭಿಕ ನಡೆರಬಹುದು. ಗೃಹಸ್ಥರಿಗೆ ಈ ಕಾಲ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸಿದ ನಂತರ ಬರುತ್ತದೆ. ಚತುರಾಶ್ರಮಗಳಲ್ಲಿ ಎರಡನೆಯದಾದ ಬ್ರಹ್ಮಚರ್ಯದ ನಂತರವೂ ನೇರವಾಗಿ ಈ ಆಶ್ರಮಕ್ಕೆ ಸಾಗಬಹುದಾಗಿದೆ, ಸಾಗಿದವರಿದ್ದಾರೆ. 
     ಮಾನವನ ಆಯಸ್ಸನ್ನು ಒಂದು ನೂರು ವರ್ಷಗಳು ಎಂದಿಟ್ಟುಕೊಂಡರೆ ಮೊದಲ 25 ವರ್ಷಗಳು ಬ್ರಹ್ಮಚರ್ಯ, ನಂತರದ 25 ವರ್ಷಗಳನ್ನು ಗೃಹಸ್ಥರಾಗಿ ಕಳೆದು, ನಂತರದ 51 ರಿಂದ 75 ವರ್ಷಗಳು ವಾನಪ್ರಸ್ಥದ ಕಾಲ. ಅದರ ನಂತರ ಸಂನ್ಯಾಸಾಶ್ರಮ. ಇರುವ ಬಂಧಗಳು, ಬಂಧನಗಳನ್ನು ಕಳೆದುಕೊಂಡು ಜೀವಿಸಲು ಅತಿ ಅಗತ್ಯವಾದಷ್ಟನ್ನು ಮಾತ್ರ ಹೊಂದಿ ಆಧ್ಯಾತ್ಮಿಕ ಸಾಧನೆಗೆ ತೊಡಗುವ ಕಾಲವೇ ವಾನಪ್ರಸ್ಥವೆನಿಸುವುದು. ಇದು ಪರಿವರ್ತನಾ ಕಾಲ. 
     ಗೃಹಸ್ಥನಿಗೆ ವಯಸ್ಸಾದ ನಂತರ ಅವನ ಚರ್ಮ ಸುಕ್ಕುಗಟ್ಟುತ್ತದೆ, ತಲೆಯ ಕೂದಲು ಬೆಳ್ಳಗಾಗುತ್ತದೆ ಅಥವ ಉದುರಿ ಬೋಳಾಗುತ್ತದೆ. ಮೊಮ್ಮಕ್ಕಳು ಜನಿಸಿರುತ್ತಾರೆ. ಆಗ ವಾನಪ್ರಸ್ಥಕ್ಕೆ ತೆರಳಲು ಸಮಯ ಪ್ರಶಸ್ತವಾಗಿರುತ್ತದೆ. ಕೌಟುಂಬಿಕ ಬಂಧನಗಳನ್ನು ಕಳಚಿಕೊಂಡು ಈ ಹಾದಿಯಲ್ಲಿ ಕ್ರಮಿಸುವ ಸಮಯದಲ್ಲಿ ಪತ್ನಿ ಬಯಸಿದರೆ ಅವನ ಜೊತೆಗೆ ಹೋಗಬಹುದು, ಆದರೆ ಸಹಚಾರಿಣಿಯಾಗಿ ಮತ್ತು ಸಹಸಾಧಕಿಯಾಗಿ ಮಾತ್ರ. ಹಾಗೆ ಹೊರಡುವಾಗ ಮನಸ್ಸು ಶಾಂತವಿರಬೇಕು. ಅತಿ ಕಡಿಮೆ ವಸ್ತ್ರಗಳನ್ನು ಧರಿಸುವುದು, ಕಾಡಿನಲ್ಲಿ ದೊರೆಯುವ ಸೊಪ್ಪು-ಸದೆಗಳು, ಗೆಡ್ಡೆ-ಗೆಣಸುಗಳನ್ನು  ಜೀವಾಧಾರಕ್ಕೆ ಸೇವಿಸುವುದು, ದೈಹಿಕ ಕಾಮನೆಗಳಿಂದ ದೂರವಿರುವುದು ಹಿಂದೆ ವಾನಪ್ರಸ್ಥಿಗಳು ಅನುಸರಿಸುತ್ತಿದ್ದ ಕ್ರಮವೆಂದು ಕೇಳಿದ್ದೇವೆ. ಪುಣ್ಯಕ್ಷೇತ್ರಗಳಿಗೆ ಪ್ರವಾಸವನ್ನೂ ಸಹ ಸಾಧನೆಯ ಅಂಗವಾಗಿ ಮಾಡುತ್ತಾರೆಂದು ಹೇಳುತ್ತಾರೆ. ಈಗಲೂ ಹಿಮಾಲಯದ ತಪ್ಪಲಿನಲ್ಲಿ ಇಂತಹವರು ಸಿಗಬಹುದು. ಆತ್ಮಾನುಸಂಧಾನ, ಆತ್ಮಚಿಂತನೆಗಳನ್ನು ನಡೆಸುತ್ತಾ ಕೊನೆಗೊಮ್ಮೆ ಅವರು ಸಂನ್ಯಾಸಿಯ ಅರ್ಹತೆ ಪಡೆಯುವರು. 
     ವಾನಪ್ರಸ್ಥಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಕೆಲವು ನಿಬಂಧನೆಗಳೂ ಇವೆಯೆನ್ನುತ್ತಾರೆ. ಭೂಮಿಯನ್ನು ಉತ್ತಿ. ಬಿತ್ತಿ ಬೆಳೆದ ಧಾನ್ಯಗಳು, ಪೂರ್ಣ ಕಳಿಯದ ಹಣ್ಣುಗಳು ಮತ್ತು ಬೇಯಿಸಿದ ಪದಾರ್ಥಗಳನ್ನು ಅವರು ಸೇವಿಸಬಾರದೆನ್ನುತ್ತಾರೆ. ತಿನ್ನುವ ಪದಾರ್ಥಗಳನ್ನು ಸಂಗ್ರಹಿಸಿಡಬಾರದು. ಸಮಯ, ಸ್ಥಳ ಮತ್ತು ತನ್ನ ಶಕ್ತಿ ಅನುಸರಿಸಿ ಜೀವಾಧಾರಕ್ಕೆ ಅವಶ್ಯಕ ಸಂಗತಿಗಳನ್ನು ಮಾತ್ರ ಪಡೆಯಬೇಕು. ಯಾವ ಕಾರಣಕ್ಕೂ ಅಗತ್ಯಕ್ಕಿಂತ ಹೆಚ್ಚು ತೆಗೆದುಕೊಳ್ಳಬಾರದು. ಬಿಸಿಲಿನಲ್ಲಿ ಪೂರ್ಣವಾಗಿ ಮಾಗಿದ ಫಲಗಳನ್ನು ಮಾತ್ರ ಸೇವಿಸಬೇಕು. ಒಂದು ಗುಡಿಸಲು ನಿರ್ಮಿಸಿಕೊಂಡು ಅಲ್ಲಿ ಅಥವ ಬೆಟ್ಟದ ಗುಹೆಯಲ್ಲಿ ವಾಸವಿದ್ದು ಪವಿತ್ರಾಗ್ನಿಯನ್ನು ರಕ್ಷಿಸಬೇಕು. ಗಾಳಿ, ಬೆಂಕಿ, ಮಳೆ, ಬಿಸಿಲು, ಹಿಮ, ಇತ್ಯಾದಿಗಳನ್ನು ಸಹಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ಇದಕ್ಕಾಗಿ ಸುಡುಬೇಸಿಗೆಯಲ್ಲಿ ಸುತ್ತಲೂ ಬೆಂಕಿ ಉರಿಸಿ ಮಧ್ಯದಲ್ಲಿ ಕುಳಿತು ಧ್ಯಾನ(ತಪಸ್ಸು) ಮಾಡಬೇಕು. ಮಳೆಗಾಲದಲ್ಲಿ ಸುರಿಯುವ ಮಳೆಯಲ್ಲಿ ಅದರ ಆರ್ಭಟವನ್ನು ಸಹಿಸಿ ಹೊರಗೆ ಇದ್ದು, ಚಳಿಗಾಲದಲ್ಲಿ ಕೊರೆಯುವ ಹೆಪ್ಪುಗಟ್ಟಿದ ನೀರಿನಲ್ಲಿ ಕತ್ತಿನವರೆಗೆ ನೀರಿನಲ್ಲಿ ಮುಳುಗಿದ್ದು ಧ್ಯಾನಸ್ಥರಾಗಬೇಕು. ಕೂದಲು, ಮೀಸೆ, ಉಗುರುಗಳನ್ನು ಕತ್ತರಿಸಬಾರದು, ಜಟೆಗಟ್ಟಿದ ಕೂದಲನ್ನು ತಲೆಯ ಮೇಲೆ ಎತ್ತಿಕಟ್ಟಬೇಕು. ಅಕಾಲಿಕವಾಗಿ ಮಲ, ಮೂತ್ರ ವಿಸರ್ಜಿಸಬಾರದು. ಮಲಿನವಾದ ಶರೀರದ ಶುದ್ಧತೆ ಬಗ್ಗೆ ಚಿಂತಿಸಬಾರದು. ದಿನಕ್ಕೆ 3 ಸಲ ಸ್ನಾನ ಮಾಡುವುದರಿಂದ ತೃಪ್ತನಾಗಬೇಕು. ನೆಲದ ಮೇಲೆ ಮಲಗಬೇಕು. ಒಂದು ಕುಡಿಯುವ ನೀರಿನ ಮಡಿಕೆ ಮತ್ತು ಒಂದು ದಂಡ ಹಿಡಿದಿರಬೇಕು. ವಾನಪ್ರಸ್ಥಿ 12 ವರ್ಷಗಳು ಅಥವ 8 ವರ್ಷಗಳು ಅಥವ 4 ವರ್ಷಗಳು ಅಥವ 2 ವರ್ಷಗಳು ಅಥವ ಕನಿಷ್ಠ 1 ವರ್ಷವಾದರೂ ಕಾಡಿನಲ್ಲಿ ವಾಸಿಸಬೇಕೆನ್ನುತ್ತಾರೆ. ಅತಿ ಸರಳವಾಗಿ ತೋರಿದರೂ ಕಠಿಣವಾದ ನಿಯಮಗಳಿಂದ ವಿಚಲಿತನಾಗಬಾರದು. ಸಾಮಯಿಕವಾಗಿ ಅಕ್ಕಿ ಅಥವ ಕಾಡಿನಲ್ಲಿ ದೊರೆತ ಧಾನ್ಯಗಳನ್ನು ಅರ್ಪಿಸಿ ಹೋಮ, ಹವನ, ಅಗ್ನಿಹೋತ್ರ ಮಾಡಬೇಕು. ಯಾವ ಕಾರಣಕ್ಕೂ ಪ್ರಾಣಿಬಲಿ ಕೊಡಬಾರದು.  
     ವಯಾಧಿಕ್ಯದಿಂದ ಅಥವ ಕಾಯಿಲೆಗಳಿಂದ ಅನುಷ್ಠಾನ ಕಷ್ಟವೆನಿಸಿದಾಗ ಆಹಾರ ಸೇವಿಸದೆ ಉಪವಾಸವಿರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅಂತಹ ಸಂದರ್ಭದಲ್ಲಿ ನಡುಗುವ ಶರೀರದ ಕಾರಣದಿಂದ ಅನುಷ್ಠಾನ ಮಾಡಲಾಗದವರು, ಶರೀರಧಾರಣೆ ಕಷ್ಟವಾದಾಗ ಅಗ್ನಿಯನ್ನು ಧ್ಯಾನದ ಮೂಲಕ ಹೃದಯಸ್ಥ ಮಾಡಿಕೊಂಡು ಅದರೊಳಗೆ ಪ್ರವೇಶಿಸಿ ಶರೀರ ತ್ಯಾಗ ಮಾಡುವರು. ಕೆಲವು ಸಂತ ವಾನಪ್ರಸ್ಥಿಗಳು ಕಠಿಣ ವ್ರತಗಳನ್ನು ಆಚರಿಸುತ್ತಾ ಸೊರಗಿ ಕೇವಲ ಚರ್ಮ ಮತ್ತು ಮೂಳೆಗಳ ಹಂದರದಂತೆ ತೋರುತ್ತಾರೆ. ಇಂತಹ ಕಠಿಣ ಮತ್ತು ದೀರ್ಘವಾದ ಸಾಧನೆ ಮಾಡಿ ಮೋಕ್ಷಕ್ಕೆ ಹಂಬಲಿಸುವ ಬದಲು, ಪ್ರಾಪಂಚಿಕ ಸಂಗತಿಗಳನ್ನು ಪಡೆಯಲು ಹಂಬಲಿಸುವವರು ದೊಡ್ಡ ಮೂರ್ಖರೇ ಸರಿ. ಅಸುರರು ದೀರ್ಘ ತಪಸ್ಸು ಮಾಡಿ ಪಡೆದರೆಂದು ಹೇಳಲಾಗುವ ಅಸುರೀ ಸಾಧನೆಗಳನ್ನು ಈ ಸಾಲಿಗೆ ಸೇರಿಸಬಹುದು. ತಾನು ಯಾವುದಕ್ಕಾಗಿ ಸಾಧನೆ ಮಾಡುತ್ತಿದ್ದಾನೋ ಅದರ ಫಲವನ್ನೂ ಬಯಸದ ಸ್ಥಿತಿ ತಲುಪಿದಾಗ, ಅಂದರೆ ಮನಸ್ಸಿನ ಹಿಡಿತದಿಂದ ಪೂರ್ಣವಾಗಿ ಹೊರಬಂದಾಗ ಸಂನ್ಯಾಸಾಶ್ರಮಕ್ಕೆ ಕಾಲಿಡಬಹುದಾಗಿದೆ. ವಾನಪ್ರಸ್ಥಿ ತನ್ನತನದ ಹಿರಿಮೆಯಿಂದ ಹೊರಬಂದು ವಿನೀತಭಾವ ಹೊಂದಲು ಇತರರ ಕರುಣೆಯಿಂದ, ದೀನ ರೀತಿಯಲ್ಲಿ ಪಡೆದ ಧಾನ್ಯದಿಂದ ಜೀವಿಸುತ್ತಾನೆ. ವಾನಪ್ರಸ್ಥದ ಕುರಿತ ಈ ಕೆಲವು ವಿವರಗಳನ್ನು ಶ್ರೀಮದ್ಭಾಗವತದಲ್ಲಿ ಇರುವ ಅಂಶಗಳನ್ನು ಆಧರಿಸಿ ಬರೆದಿರುವೆ.
     ವೇದದ ನಾಲ್ಕು ಅಂಗಗಳಾದ ಬ್ರಾಹ್ಮಣ, ಸಂಹಿತಾ, ಅರಣ್ಯಕ ಮತ್ತು ಉಪನಿಷತ್ತುಗಳಲ್ಲಿ ಅರಣ್ಯಕವು ವಾನಪ್ರಸ್ಥಕ್ಕೆ ಸಂಬಂಧಿಸಿದೆ. ವಾನಪ್ರಸ್ಥ ಮತ್ತು ಸಂನ್ಯಾಸಗಳು ಎರಡೂ ವೈರಾಗ್ಯ ಪ್ರಾಧಾನ್ಯ ಆಶ್ರಮಗಳು. ವಾನಪ್ರಸ್ಥಿ ಸಮಾಜದ ಸೇವೆ ಮಾಡುತ್ತಾ ಮುಕ್ತಿ ಹೊಂದುವ ಸಿದ್ಧತೆ ಮಾಡಿಕೊಳ್ಳಬೇಕು. ಧರ್ಮ, ಅರ್ಥ, ಕಾಮ, ಮೋಕ್ಷಗಳು ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸಂನ್ಯಾಸಗಳಲ್ಲಿ ಹಾಸುಹೊಕ್ಕಾಗಿವೆ. ಸಂನ್ಯಾಸಿಯು ಬ್ರಹ್ಮಚಾರಿ, ಗೃಹಸ್ಥ ಅಥವ ವಾನಪ್ರಸ್ಥಿಯಿಂದ ಹೊರತಾದವನಲ್ಲ/ ಬೇರ್ಪಟ್ಟವನಲ್ಲ. ಬ್ರಹ್ಮಚರ್ಯವು ಬೀಜರೂಪವಾಗಿದ್ದು ಗೃಹಸ್ಥಾಶ್ರಮದ ವಾಸ್ತವಿಕ ಅನುಭವವಾಗಿ ಬೆಳೆಯುತ್ತದೆ ಮತ್ತು ಅದು ವಾನಪ್ರಸ್ಥದ ವೈರಾಗ್ಯವಾಗಿ ಮುಂದುವರೆಯುತ್ತದೆ. ಹಾಗೂ, ಅದು ಮುಂದುವರೆದು ಸಂನ್ಯಾಸದ ಸಾರವಾಗಿ ಫಲಿತಗೊಳ್ಳುತ್ತದೆ.
     ಸನಾತನ ಧರ್ಮದ ಮಹತ್ವ ಅರಿವಾಗುವುದು ಈ ಆಶ್ರಮಗಳ ಸರಿಯಾದ ಅನುಷ್ಠಾನದಿಂದ. ಬ್ರಹ್ಮಚರ್ಯದಲ್ಲಿ ಒಬ್ಬ ಬಾಲಕ/ಬಾಲಿಕೆ ಗುರುಕುಲಕ್ಕೆ ಸೇರಿ ತನಗೆ ಬೇಕೆನಿಸಿದ ಜ್ಞಾನದ ಅರಿವನ್ನು ತಾನು ಯಾವ ಸಮಾಜಕ್ಕೆ ಸೇರಿದ್ದಾನೋ ಆ ಸಮಾಜದ ಹಿತವನ್ನು ಗಮನದಲ್ಲಿರಿಸಿ ಪಡೆಯುತ್ತಾನೆ/ಳೆ. ಈ ಹಂತದಲ್ಲಿ ಪಡೆಯುವ ಜ್ಞಾನ ಮುಂದಿನ ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸಾಶ್ರಮಗಳಿಗೆ ತಳಹದಿಯಂತಿರುತ್ತದೆ. ವಾನಪ್ರಸ್ತವು ಪ್ರಾಪಂಚಿಕ ಆಕರ್ಷಣೆಗಳಿಂದ ದೂರವಿರಲು ಮಾಡುವ ಸಾಧನೆಯ ಅವಧಿಯೆನ್ನಬಹುದು. 
     ಗೃಹಸ್ಥಾಶ್ರಮವು ಸಮಾಜದ ತಳಪಾಯವಿದ್ದಂತೆ. ಇತರ ಮೂರು ಆಶ್ರಮಗಳಿಗೆ ತಾಯಿಬೇರು ಇದೇ ಆಗಿದೆ. ಮಕ್ಕಳು ಬ್ರಹ್ಮಚಾರಿಗಳಾಗುತ್ತಾರೆ, ಪೋಷಕರು ವಾನಪ್ರಸ್ಥಕ್ಕೆ ಪ್ರವೇಶಿಸುತ್ತಾರೆ ಮತ್ತು ಅವರು ಲೋಕಹಿತ ಬಯಸುವ ಸಂನ್ಯಾಸಿಗಳಿಗೆ ಆಶ್ರಯ ಕೊಡುವವರೂ ಆಗಿರುತ್ತಾರೆ. ವಾನಪ್ರಸ್ಥದ ಅವಧಿಯಲ್ಲಿ ಮಕ್ಕಳು ಬೆಳೆದವರಾಗಿರುತ್ತಾರೆ ಮತ್ತು ಕೌಟುಂಬಿಕ ಜವಾಬ್ದಾರಿ ಕಡಿಮೆಯಾಗುತ್ತದೆ. ಸಾಮಾಜಿಕ ಹಿತದ ಕೆಲಸಗಳನ್ನು ಮಾಡಲು ಅವಕಾಶವಿರುತ್ತದೆ. ಈ ಅವದಿಯು ಕಿರಿಯರಿಗೆ, ಗೃಹಸ್ಥರಿಗೆ ಮತ್ತು ಸಂನ್ಯಾಸಿಗಳಿಗೆ ಬಲವಾದ ಆಧಾರರೂಪಿಯಾಗಿರಲು ಸೂಕ್ತವಾಗಿರುತ್ತದೆ. ಜ್ಞಾನವನ್ನು ಸಂಪಾದಿಸಿ ದೇಶಕ್ಕೆ, ಸಮಾಜಕ್ಕೆ ಉಪಕಾರಿಯಾಗಿರಬೇಕಾದ ಹಂತವಿದು. ಕೆಲವರು ನೇರವಾಗಿ ಸಂನ್ಯಾಸಾಶ್ರಮಕ್ಕೆ ಪ್ರವೇಶಿಸಿ ನಂತರದಲ್ಲಿ ಪ್ರಾಪಂಚಿಕ ಆಕರ್ಷಣೆಗಳಿಗೆ ಒಳಗಾಗಿ ಕೆಳಗೆ ಬಿದ್ದಿರುವುದನ್ನೂ ಕಂಡಿದ್ದೇವೆ. ಹಾಗಾಗಿ ಗೃಹಸ್ಥ, ವಾನಪ್ರಸ್ಥದ ಅವಧಿಯನ್ನು ಪೂರ್ಣಗೊಳಿಸಿ ಪ್ರಾಪಂಚಿಕ ಆಕರ್ಷಣೆಗಳಿಂದ ಮುಕ್ತರಾದ ನಂತರವೇ ಸಂನ್ಯಾಸಿಗಳಾಗುವುದು ಸಮಾಜದ ಮತ್ತು ಸ್ವಂತದ ಹಿತದಿಂದ ಒಳ್ಳೆಯದು. ವಾನಪ್ರಸ್ಥಕ್ಕೆ ತೆರಳುವವರಿಂದ ಇನ್ನೊಂದು ಲಾಭವೂ ಇದೆ. ವೃದ್ಧರ ನಿವೃತ್ತಿಯಿಂದ ಯುವಕರಿಗೆ ಸಹಜವಾಗಿ ಅಧಿಕಾರ, ಸಾಧನ ಸೌಲಭ್ಯಗಳು ಸಿಗುತ್ತವೆ. ಅಥರ್ವ ವೇದದ ಈ ಮಂತ್ರ ಹೀಗೆ ಹೇಳುತ್ತದೆ:
ಆ ನಯೈತಮಾ ರಭಸ್ಯ ಸುಕೃತಾಂ ಲೋಕಮಪಿ ಗಚ್ಛತು ಪ್ರಜಾನನ್ |
ತೀರ್ತ್ವಾ ತಮಾಂಸಿ ಬಹುಧಾ ಮಹಾಂತ್ಯಜೋ ನಾಕಮಾ ಕ್ರಮತಾಂ ತೃತೀಯಮ್ || (ಅಥರ್ವ.೯.೫.೧.)
     ಅರ್ಥ: ಓ ಗೃಹಸ್ಥ! ಈ ನಿನ್ನ ಆತ್ಮನನ್ನು ಮುನ್ನಡೆಸು. ಸಾಧನೆಯನ್ನಾರಂಭಿಸು. ನಿನ್ನ ಆತ್ಮನು, ಚೆನ್ನಾಗಿ ಜ್ಞಾನ ಗಳಿಸಿ, ಪುಣ್ಯವಂತರ ಸ್ಥಿತಿಯನ್ನು ಮುಟ್ಟಲಿ. ಆಜನ್ಮನಾದ, ನಿತ್ಯನಾದ ನಿನ್ನ ಅತ್ಮನು ಅನ್ಯ ಸಾಧನೆಗಳಿಂದ, ಮಹಾ ಅಂಧಕಾರಗಳನ್ನು ದಾಟಿ, ಮೂರನೆಯದಾದ ವಾನಪ್ರಸ್ಥದ ಸುಖಮಯ ಆಶ್ರಮವನ್ನು ಆಕ್ರಮಿಸಲಿ.
     ಎಲ್ಲಾ ವಯೋವೃದ್ಧರಿಗೂ ಜೀವನದ ಅಂತಿಮ ದಿನಗಳನ್ನು ಪ್ರಾಪಂಚಿಕ ಆಕರ್ಷಣೆಗಳಿಂದ ದೂರವಾಗಿ ಕಳೆಯುವ ಮನಸ್ಸು ಬರಲಾರದು. ಒಂದು ಹಾಸ್ಯಪ್ರಸಂಗ ಇಲ್ಲಿ ನೆನಪಾಗುತ್ತಿದೆ. ಒಬ್ಬ ವ್ಯಾಪಾರಿ ಇನ್ನೇನು ಆಗಲೋ, ಈಗಲೋ ಎಂಬಂತೆ ಸಾಯುವ ಸ್ಥಿತಿಯಲ್ಲಿದ್ದಾಗ, ಅವನ ಹತ್ತಿರವಿರಲು ಮಗ ಮನೆಗೆ ಧಾವಿಸಿಬರುತ್ತಾನೆ. ಅವನಿಗೆ ಏನೋ ಹೇಳಬೇಕೆಂದು ಆ ವ್ಯಾಪಾರಿ ಬಯಸಿದರೂ ಗಂಟಲಿನಿಂದ ಸ್ವರ ಹೊರಡದೆ ಗೊರಗೊರ ಶಬ್ದ ಬರುತ್ತಿದೆ. ವೈದ್ಯರ ಶತಪ್ರಯತ್ನದಿಂದ ಕೊನೆಗೆ ಮಾತನಾಡಿದ ಅವನು ಮಗನಿಗೆ "ಇಷ್ಟು ಬೇಗ ಏಕೆ ಅಂಗಡಿ ಬಾಗಿಲು ಹಾಕಿದೆ?" ಎಂದು ಕೇಳಿದ್ದೇ ಅವನ ಜೀವನದ ಕೊನೆಯ ಮಾತಾಗಿತ್ತು! ಗೋಂದಾವಲೀ ಮಹಾರಾಜರು ಉಪನ್ಯಾಸವೊಂದರಲ್ಲಿ ಹೇಳಿದ ಪ್ರಸಂಗ (ಧ್ವನಿಮುದ್ರಿಕೆಯಲ್ಲಿ ಕೇಳಿದ್ದು) ಇಲ್ಲಿ ಉಲ್ಲೇಖಿಸಬಹುದು. ಒಬ್ಬ ಭಕ್ತರ ಮನೆಗೆ ಅವರು ಹೋಗಿದ್ದಾಗ ಆ ಮನೆಯಲ್ಲಿದ್ದ 90 ವರ್ಷ ದಾಟಿದ್ದ ವೃದ್ಧೆಯೊಬ್ಬರು ಅವರನ್ನು ಉದ್ದೇಶಿಸಿ, "ಸ್ವಾಮಿ, ನನಗೆ ಇನ್ನು ಯಾವ ಆಸೆಯೂ ಇಲ್ಲ. ನಿಮ್ಮ ಪಾದದ ಕೆಳಗೆ ತಲೆಯಿಟ್ಟು ಈ ಜೀವನ ಮುಗಿಸಬೇಕು ಎಂಬುದೊಂದೇ ಆಸೆ" ಎಂದಳು. ಅದಕ್ಕೆ ಅವರು, "ಆಗಲಿ, ಅದಕ್ಕೇನಂತೆ? ಹಾಗೇ ಮಾಡಿ" ಎಂದು ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತಾಗ ಗಾಬರಿಯಾದ ಆ ವೃದ್ಧೆ, "ಅಯ್ಯೋ, ಸ್ವಾಮಿ, ಈಗಲೇ ಅಲ್ಲ. ನನ್ನ ಮೊಮ್ಮಗಳ ಮದುವೆ ಆಗಬೇಕು. ಅವಳ ಮಗುವನ್ನು ಎತ್ತಿ ಮುದ್ದಾಡಬೇಕು. ನಾಮಕರಣ ಆಗಬೇಕು. ನಂತರ ನನ್ನ ಈ ಆಸೆ ಈಡೇರಿಸಿಕೊಳ್ಳುತ್ತೇನೆ" ಅಂದಳಂತೆ! ಸಾಯುವ ಕೊನೆಯ ಕ್ಷಣದವರೆಗೂ ರಾಜಕೀಯ ಮಾಡುತ್ತಾ ಅಧಿಕಾರಕ್ಕಾಗಿ ಹಪಹಪಿಸುವ ಇಂದಿನ ರಾಜಕಾರಣಿಗಳೂ ಇದೇ ವರ್ಗಕ್ಕೆ ಸೇರಿದವರು. ಹಾಗಾಗಿ ಏನು ಬದಲಾವಣೆ ನಿರೀಕ್ಷಿಸಲಾದೀತು? ಇರಲಿ ಬಿಡಿ, ವಾನಪ್ರಸ್ಥ ಬಯಸದವರ ಮಾತನ್ನು ಮುಂದುವರೆಸುವುದಿಲ್ಲ. 
     ಇಂದಿನ ಕಾಲಮಾನದ ಪರಿಸ್ಥಿತಿಯಲ್ಲಿ ವಾನಪ್ರಸ್ಥದ ಮೂಲ ಪರಿಕಲ್ಪನೆಯನ್ನು ಸೂಕ್ತವಾಗಿ ಪರಿವರ್ತಿಸಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. 45-50ರ ವಯಸ್ಸಿನಲ್ಲಿ ಇರುವವರು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಮುಂಚಿತವಾಗಿ ಯೋಜನೆ ಮಾಡಿಕೊಂಡು, ಮಾನಸಿಕವಾಗಿ ಸಿದ್ಧರಾಗಿದ್ದಲ್ಲಿ ನಿವೃತ್ತರಾದ ಕೂಡಲೇ ಉಂಟಾಗಬಹುದಾದ ಶೂನ್ಯಭಾವದಿಂದ ಹೊರಬರಬಹುದು. ನಿವೃತ್ತ ಜೀವನವನ್ನು ಒಳ್ಳೆಯ ರೀತಿಯಲ್ಲಿ ಕಳೆಯುವ ಸಾಧನವಾಗಿ ಮಾಡಿಕೊಳ್ಳುವುದನ್ನು ವಾನಪ್ರಸ್ಥವೆನ್ನೋಣ. ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ಒಳಿತನ್ನು ಕಾಣುವ ಮನೋಭಾವ ಬೆಳೆಸಿಕೊಂಡು, ಅಂತರಂಗ, ಬಹಿರಂಗಗಳಲ್ಲಿ ಸಾಮ್ಯತೆ ಸಾಧಿಸುವ ಕ್ರಿಯೆಯಲ್ಲಿ ತೊಡಗುವುದು ಕಡಿಮೆ ಸಾಧನೆಯಲ್ಲ. ಪ್ರಾಪಂಚಿಕ ಆಕರ್ಷಣೆಗಳಿಂದ ವಿಮುಕ್ತರಾಗಿ ಸರಳ ವಸ್ತ್ರಗಳನ್ನು ಧರಿಸಿ, ಸರಳ ಜೀವನವನ್ನು ನಡೆಸಿ ಆತ್ಮಚಿಂತನೆಯಲ್ಲಿ ತೊಡಗಬಹುದಾಗಿದೆ. ತನ್ನ ಚಿಂತನೆ, ಜ್ಞಾನಾಭಿವೃದ್ಧಿಗಳಿಗೆ ಪೂರಕವಾಗುವ ಸತ್ಸಂಗಗಳಲ್ಲಿ ಪಾಲುಗೊಳ್ಳುವುದು, ಅಂತಹ ಆದರ್ಶದ ಜೀವನ ಸಾಗಿಸುತ್ತಿರುವ ಧೀಮಂತರ ಮಾರ್ಗದರ್ಶನ ಪಡೆಯುವುದು ಸಹಕಾರಿಯಾಗುತ್ತದೆ. ಇಂತಹವರು ಸಹಜವಾಗಿ ದೇಶಾತೀತ, ಭಾಷಾತೀತ, ಜನಾಂಗಾತೀತ, ಮತಾತೀತ ಮಾನವರಾಗುತ್ತಾರೆ. ಕೌಟುಂಬಿಕ ಜವಾಬ್ದಾರಿಗಳನ್ನು ಮಕ್ಕಳಿಗೆ ವಹಿಸಿ ನಿರ್ಲಿಪ್ತ, ನಿಶ್ಚಿಂತರಾಗುವುದು ಮೊದಲ ಕ್ರಮವಾಗಬೇಕು. ನಂತರದಲ್ಲಿ ಸಾಧ್ಯವಾದಷ್ಟು ಪ್ರಶಾಂತ ಕೊಠಡಿ ಅಥವ ಸ್ಥಳದಲ್ಲಿ ಇರಬೇಕು. ಕುಟುಂಬದವರು ಕೌಟುಂಬಿಕ ಸಮಸ್ಯೆ ಅಥವ ವಿಚಾರಗಳಿಗೆ ಸಲಹೆ, ಸಹಕಾರ ಬಯಸಿದಲ್ಲಿ ಕೊಡಬೇಕು. ಆದರೆ ಅವುಗಳಲ್ಲಿ ವ್ಯಸ್ತರಾಗಬಾರದು. ಕೌಟುಂಬಿಕ ಸಾಮರಸ್ಯ, ಬಂಧುಗಳ ಸಾಮರಸ್ಯ, ಜನಾಂಗದ ಸಾಮರಸ್ಯ, ಸಕಲ ಜೀವಕೋಟಿಯ ಸಾಮರಸ್ಯದ ಗುರಿಯಿರಬೇಕು. ಈ ದಿಸೆಯಲ್ಲಿ ಎಷ್ಟು ಸಾಧಿಸಲು ಸಾಧ್ಯ, ಸಾಧಿಸಿದೆವು ಎಂಬುದು ಮಹತ್ವದ್ದಲ್ಲ. ಒಂದು ಗಾದೆಯಿದೆ, ಸಾವಿರ ಮೈಲುಗಳ ಪಯಣ ಪ್ರಾರಂಭವಾಗುವುದು ಒಂದು ಹೆಜ್ಜೆ ಮುಂದಿಡುವುದರಿಂದ. ಸಣ್ಣ ಕೌಟುಂಬಿಕ ವ್ಯಾಪ್ತಿಯಿಂದ ಹೊರಬಂದು ವಿಶ್ವವೇ ಒಂದು ಕುಟುಂಬವಾಗಿದ್ದು ತಾನು ಅದರ ಭಾಗವೆಂದು ಭಾವಿಸುವ ಮನೋವೃತ್ತಿ ಬೆಳೆಸಿಕೊಳ್ಳಬೇಕು. ಸರ್ವರ ಹಿತ ಬಯಸುವ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು, ಬೆಂಬಲಿಸಬೇಕು. ಮನೋವಿಕಾರಗಳನ್ನು ನಿಯಂತ್ರಿಸಲು ಸಾಧನೆ ನಡೆಸಬೇಕು. ದುಷ್ಟ ವಿಚಾರಗಳಿಂದ ದೂರವಿದ್ದು, ಸದ್ವಿಚಾರಗಳ ಅನುಸರಣೆ, ಪ್ರಸರಣೆಗೆ ಗಮನ ಕೊಡಬೇಕು. ಒಳಿತನ್ನು, ಒಳ್ಳೆಯ ಸಂಗತಿಗಳನ್ನು ಗುರುತಿಸಿ ಗೌರವಿಸಬೇಕು. ಸಾಧ್ಯವಾದಷ್ಟೂ ಇತರರಿಗೆ ಹೊರೆಯಾಗದಂತೆ ಬಾಳಬೇಕು. 
     ಸಾಮಾನ್ಯವಾಗಿ ಒಬ್ಬೊಬ್ಬರಿಗೆ ಒಂದೊಂದು ವೃತ್ತಿ, ಪ್ರವೃತ್ತಿ, ಹವ್ಯಾಸಗಳು ತೃಪ್ತಿ, ಸಂತೋಷ ಕೊಡುವ ಸಂಗತಿಯಾಗಿರುತ್ತದೆ. ನಿವೃತ್ತಿಯೆಂದರೆ ಅಂತಹ ಹವ್ಯಾಸಗಳನ್ನು ನಿಲ್ಲಿಸುವುದಲ್ಲ. ಬದಲಾಗಿ ಅವುಗಳನ್ನು ಇತರರ ಹಿತಕ್ಕಾಗಿ ಬಳಸುವುದು. ಆದರೆ ಅದು ಹಣಗಳಿಕೆಯ ಸಾಧನವಾಗಬಾರದಷ್ಟೆ. ಒಬ್ಬ ನಿವೃತ್ತ ಶಿಕ್ಷಕ ಬಡ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಬಹುದು, ಸಂಗೀತಗಾರ ತನ್ನ ಸಾಧನೆಯನ್ನು ಉತ್ತುಂಗಕ್ಕೇರಿಸುವುದರ ಜೊತೆಗೆ ಇತರರಿಗೆ ಸಂಗೀತ ಹೇಳಿಕೊಡಬಹುದು, ಬರಹಗಾರ ತನ್ನ ಅನುಭವದ ಸಾರಗಳನ್ನು ಬರಹದ ಮೂಲಕ ಅಭಿವ್ಯಕ್ತಿಸಬಹುದು ಮತ್ತು ಆ ಮೂಲಕ ಪರಿಣಾಮ ಬೀರಬಹುದು. ಇವೆಲ್ಲಾ ಉದಾಹರಣೆಗಳಷ್ಟೆ. ಕೇವಲ ಆತ್ಮತೃಪ್ತಿ ಮತ್ತು ಇತರರಿಗೆ ಮಾರ್ಗದರ್ಶಿಯಾಗಿರಲು ಮಾತ್ರ ಇವುಗಳ ಬಳಕೆಯಾಗಬೇಕು. ಪಡೆಯುವುದಕ್ಕಿಂತ ಕೊಡುವುದಕ್ಕೆ ಆದ್ಯತೆಯಿರಬೇಕು. ಅಷ್ಟಕ್ಕೂ ನಮ್ಮಲ್ಲಿರುವುದೆಲ್ಲಾ ನಾವು ಪಡೆದಿದ್ದೇ ಅಲ್ಲವೇ? ಬದುಕಿನ ಜಂಜಾಟದಲ್ಲಿ ತನ್ನತನಕ್ಕೆ ಅದುವರೆಗೆ ಸಿಕ್ಕದ ಆದ್ಯತೆಯನ್ನು ಜೀವನದ ಅಂತಿಮ ಘಟ್ಟದಲ್ಲಾದರೂ ಸಿಕ್ಕುವಂತೆ ನೋಡಿಕೊಂಡು 'ತಾನು ತಾನಾಗಿರಬೇಕು', ಅರ್ಥಾತ್ 'ತನಗಾಗಿ' ಬಾಳಬೇಕು. 'ತನಗಾಗಿ' ಬಾಳುವ ಈ ರೀತಿಯ ಬಾಳುವಿಕೆಯಲ್ಲಿ ಸ್ವಾರ್ಥವಿರಲಾರದು. ಏಕೆಂದರೆ, ಅದು ಆತ್ಮತೃಪ್ತಿಯ, ಆತ್ಮ ಚಿಂತನೆಯ, ಆತ್ಮಾನುಸಂಧಾನದ ಮಾರ್ಗ. ಒಂದು ರೀತಿಯಲ್ಲಿ ಅದು ಹಿಂದೆ ಮಾಡಿರಬಹುದಾದ ತಪ್ಪುಗಳಿಗೆ ಪ್ರಾಯಶ್ಚಿತ್ತವೂ ಆದೀತು. ಇಂತಹ ಚಿಂತನೆಗಳನ್ನು ಹೊಂದಿದವರ ಭಾವನೆಯನ್ನು ಗೌರವಿಸಿ ಸಹಕರಿಸುವ ಕುಟುಂಬದ ಇತರ ಸದಸ್ಯರೂ ಅಭಿನಂದನಾರ್ಹರಾಗುತ್ತಾರೆ. ಇಂತಹ ಕ್ರಿಯೆಯಿಂದ ಯುವಕರಿಗೆ ಸಹಜವಾಗಿ ನಾಯಕತ್ವ ಸಿಗುವುದಲ್ಲದೇ, ಅವರಿಗೆ ಸುಯೋಗ್ಯ ಮಾರ್ಗದರ್ಶನ ಸಹ ನೀಡಿದಂತಾಗುತ್ತದೆ. 'ಯಾರಂತೆ ಅಂದರೆ ಊರಂತೆ' ಎಂದುಕೊಂಡು ಅದುವರೆಗೆ ಹೇಗೆ ಹೇಗೋ ಸಾಗಿಸಿದ ಜೀವನವನ್ನು ಮರೆತು, ಮೌಲ್ಯಗಳನ್ನು ಕಡೆಗಣಿಸಿ ಬಾಳಿದ ಹಿಂದಿನ ದಿನಗಳನ್ನು ಮರೆತು, ಕಷ್ಟವಾದರೂ ಸರಿ, ಜೀವನದ ಉಳಿದ ಕೊನೆಯ ದಿನಗಳಲ್ಲಿ ಮೌಲ್ಯಗಳಿಗೆ ಅಂಟಿಕೊಂಡು ಬಾಳಿದರೆ ಅದು ಜೀವಕೋಟಿಗೆ ನೀಡುವ, ಭಗವಂತ ಮೆಚ್ಚುವ ಅತಿ ದೊಡ್ಡ ಕಾಣಿಕೆಯಾಗುತ್ತದೆ.
-ಕ.ವೆಂ.ನಾಗರಾಜ್.
[ಚಿತ್ರಗಳನ್ನು ಅಂತರ್ಜಾಲದಿಂದ ಹೆಕ್ಕಿ ಬಳಸಿರುವೆ. ಇವು ರಾಯಲ್ಟಿ ಮುಕ್ತ ಚಿತ್ರಗಳು.]

Wednesday, December 12, 2012

ಮಾಗಲಿ ಬಿಡು

ಮೌನ ವ್ರತ ಅಷ್ಟು ಸುಲಭವಲ್ಲಾ ಗೆಳೆಯ
ನಮಗರಿವಿದ್ದೋ ಇಲ್ಲದೆಯೋ
ನಮ್ಮೊಳಗೆ ತುಂಬಿರುವ
ಕಲ್ಮಶಗಳ ಅಲ್ಲೇ ಇಟ್ಟು
ಕಣ್ಮುಚ್ಚಿದರೆ
ಫಲಸಿಗದು ಗೆಳೆಯ
ಮೊದಲು ಮಾತಾಡು
ಮನಬಿಚ್ಚಿ ಮಾತಾಡು
ಎಲ್ಲರೊಡನೆ ಮಾತಾಡು
ಅಳುವುದಾದರೆ ಅತ್ತು ಬಿಡು
ನಗುವುದಾದರೆ ನಕ್ಕು ಬಿಡು
ಮನದೊಳಗೆ ಹುದುಗಿರುವ
ಮಾತುಗಳ ಹೊರಹಾಕು
ತಪ್ಪು ಯಾರದಾದರೇನು?
ಒಪ್ಪುವವರು ಯಾರಿಲ್ಲ
ಎಲ್ಲರೊಳು ಹುದುಗಿಹುದು
ನಾನೆಂಬ ಮಂತ್ರ
ಇರಲಿ ಬಿಡು
ನಮ್ಮೊಳಗೆ ಇರುವವನೇ
ಅವನಲ್ಲೂ ತಾನೇ?
ಹೊಗಳಿಕೆಗೆ ತೆಗಳಿಕೆಗೆ ಕಿವಿಗೊಡದೆ
ಒದರಿಬಿಡು ನಿನ್ನೊಳಗಿನ ಮಾತು
ಖಾಲಿ ಮಾಡಲು ಅದೆಷ್ಟು ವರ್ಷಗಳು ಬೇಕೋ
ಈಗೆಲ್ಲಿ ಮೌನ?
ಮುಗಿಯಲಿ ಬಿಡು
ಮಾಗಲಿ ಬಿಡು
-ಹರಿಹರಪುರಶ್ರೀಧರ್

Wednesday, December 5, 2012

ಯೋಚಿಸಲೊ೦ದಿಷ್ಟು... ೬೩

೧.ತಪ್ಪನ್ನು ಮಾಡುವ ಮೊದಲೇ ಆಕ್ಷೇಪಿಸುವುದು ಹಾಗೂ ಒಳ್ಳೆಯದನ್ನು ಮಾಡುವ ಮೊದಲೇ ಹೊಗಳುವುದು ಮಾನವನ ಸಹಜ ಗುಣ!
೨. ಉತ್ತಮ ಗುಣವೆ೦ಬುದು ನೀರಿನ೦ತೆ! ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತದೆ... ಕೆಳ ಮಟ್ಟದಲ್ಲಿಯೇ ನಿಲ್ಲುತ್ತದೆ!
೩. ತನ್ನನ್ನು ತಾನೇ ಹೊಗಳಿಕೊಳ್ಳುವವನು ಮಹಾ ಮೂರ್ಖನು!
೪. ಒಳ್ಳೆಯ ನೆಲದಲ್ಲಿ ಬಿತ್ತಿದ ಬೀಜ, ಒಳ್ಳೆಯ ಮಗನಲ್ಲಿ ಇಟ್ಟಿದ್ದು ಹಾಗೂ ಕೊಟ್ಟಿದ್ದು ಎ೦ದೂ ಹಾಳಾಗುವುದಿಲ್ಲ- ಪರಾಶರ ಸ್ಮೃತಿ
೫. ರಾಜಕೀಯವನ್ನು ಹಾಗೂ ನೀತಿಯನ್ನು ಎರಡೂ ಬೇರೆ ಬೇರೆ ಎ೦ದು ಎಣಿಸಿದವರು ಎರಡನ್ನೂ ತಿಳಿದುಕೊಳ್ಳಲಾರರು- ಜಿ.ವಿ. ಮಾರ್ಲೆ
೬. ಜೀವನವೆಲ್ಲಾ ಬೇವು-ಬೆಲ್ಲ, ಸವಿದವನೇ ಕವಿ ಮಲ್ಲ!- ಕುವೆ೦ಪು
೭. ಯುಧ್ಧದ ಚರಿತ್ರೆಯನ್ನು ಓದುವುದರಲ್ಲಿ ಇರುವಷ್ಟು ಆಸಕ್ತಿ ಶಾ೦ತಿಯ ಇತಿಹಾಸವನ್ನು ಓದುವುದರಲ್ಲಿ ಇರುವುದಿಲ್ಲ!
೮. ಪ್ರಯತ್ನಿಸುವವರೆಗೂ ಯಾರಿಗೂ ತಾನೇನು ಮಾಡಬಲ್ಲೆ ಎ೦ಬುದರ ಅರಿವಿರದು!
೯. ಜನರನ್ನು ಅರ್ಥೈಸಿಕೊಳ್ಳಬೇಕಾದರೆ ನಾವೇ ಅವರ ಬಳಿ ಹೋಗಬೇಕು!
೧೦. ನಾಚಿಕೆ ಮತ್ತು ಭಯವಿಲ್ಲದೆ ಮನುಷ್ಯನ ಅ೦ತರ೦ಗದಲ್ಲಿ ಕೆಟ್ಟ, ಒಳ್ಳೆಯ, ಸ೦ತೋಷದ ಹಾಗೂ ದು:ಖದ ಎಲ್ಲಆ ರೀತಿಯ ಯೋಚನೆಗಳೂ ಬರುತ್ತವೆ!
೧೧. ನಾನು ಬೇರೆ- ದೇಹ ಬೇರೆ ಎ೦ದು ತಿಳಿವು ತ೦ದುಕೊ೦ಡರೆ ರೋಗದ ಭಾಧೆಯು ಅತ್ಯಲ್ಪವಾಗುತ್ತದೆ- ಎಮ್.ವಿ.ಸೀತಾರಾಮಯ್ಯ
೧೨. ಯಾವುಧೇ ಧನ ರಾಶಿಯೂ ಸ೦ತೋಷ ಎ೦ಬ ಧನರಾಶಿಯ ಮು೦ದೆ ಧೂಳಿನ ಸ್ಠಾನ- ಸ೦ತ ಕಬೀರರು
೧೩.ಏಕಾ೦ಗಿತನವನ್ನೇ ಮೊದಲಿನಿ೦ದಲೂ ಅಪ್ಪಿಕೊ೦ಡಲ್ಲಿ ಎಷ್ಟೋ ಮಧುರ ಕ್ಷಣಗಳಿ೦ದ, ಜೀವನಾನುಭವಗಳಿ೦ದ ವ೦ಚಿತರಾಗುತ್ತೇವೆ!
೧೪. ಎಲ್ಲವನ್ನೂ ಧೇವರೇ ನೋಡಿಕೊಳ್ಳುತ್ತಾನೆ೦ದು ಸುಮ್ಮನೇ ಕುಳಿತುಕೊಳ್ಳುವುದು ಮಹಾ ಮೂರ್ಖತನ!
೧೫. ನಾಸ್ತಿಕರಿಗಿ೦ತಲೂ ತಮ್ಮ ತಪ್ಪುಗಳಿಗೆ ದೇವರನ್ನು ಗುರಿಯನ್ನಾಗಿಸುವವರು ಅತ್ಯಲ್ಪರು!

Sunday, December 2, 2012

ಅಪೂರ್ವ ಸಮ್ಮಿಲನ ಹಾಗೂ "ಆದರ್ಶದ ಬೆನ್ನು ಹತ್ತಿ . ." ಕೃತಿ ಲೋಕಾರ್ಪಣೆ"ಹಾಂ! ನೀನಿನ್ನೂ ಬದುಕಿದ್ದೀಯೇನೋ?"
"ನೀನೂ ಇದೀಯೇನೋ?"
      36-37 ವರ್ಷಗಳ ನಂತರದಲ್ಲಿ ಪ್ರಥಮತಃ ಭೇಟಿಯಾದ ವೃದ್ಧರಿಬ್ಬರ ನಡುವಣ ಉದ್ಗಾರಗಳಿವು. ಇದೇ ರೀತಿಯ ಅನುಭವ ಅಲ್ಲಿದ್ದ ಇನ್ನೂ ಹಲವರದು. ಕೆಲವರು ಭಾವಾತಿರೇಕದಿಂದ ಒಬ್ಬರನ್ನೊಬ್ಬರು ಅಪ್ಪಿಕೊಂಡರು. ಕೆಲವರ ಕಣ್ಣಿನಲ್ಲಿ ಆನಂದಾಶ್ರುಗಳು ತುಳುಕಿದವು. ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡರು. ಇಂತಹ ಭಾವನೋತ್ತುಂಗದ ಕ್ಷಣಗಳಿಗೆ ಸಾಕ್ಷಿಯಾದದ್ದು ಹಾಸನದಲ್ಲಿ 29-11-2012ರಲ್ಲಿ ನಡೆದ 1975-77ರ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರ, ತುರಂಗವಾಸ ಅನುಭವಿಸಿದವರ ಸಮಾವೇಶದಲ್ಲಿ. ಸುಮಾರು 80 ಹೋರಾಟಗಾರರು ಉಪಸ್ಥಿತರಿದ್ದ ಆ ಸಮಾವೇಶವನ್ನು ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸುವ ನನ್ನ ಕೃತಿ "ಆದರ್ಶದ ಬೆನ್ನು ಹತ್ತಿ . ."ಯ ಬಿಡುಗಡೆಯ ಪೂರ್ವಭಾವಿಯಾಗಿ ಯೋಜಿಸಲಾಗಿತ್ತು. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಗಳಿಗೆ ಗ್ರಹಣ ಹಿಡಿದಿದ್ದ, ಪತ್ರಿಕಾ ಸೆನ್ಸಾರ್ ಜಾರಿಯಲ್ಲಿದ್ದ, ದೇಶ ಕ್ರಮೇಣ ಸರ್ವಾಧಿಕಾರದೆಡೆಗೆ ಜಾರುತ್ತಿದ್ದ ಸಂದರ್ಭದಲ್ಲಿ ದೇಶದಲ್ಲಿ ಪುನಃ ಪ್ರಜಾಪ್ರಭುತ್ವ ಸ್ಥಾಪನೆಗೆ ಅನುವು ಮಾಡಿಕೊಟ್ಟದ್ದು ರಾ.ಸ್ವ.ಸಂಘ ಮುಂಚೂಣಿಯಲ್ಲಿ ನಿಂತು ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ನಡೆಸಿದ ಅಭೂತಪೂರ್ವ ಆಂದೋಲನ. ಆ ಐತಿಹಾಸಿಕ ಆಂದೋಲನದ ವಿವರ 1970ರ ದಶಕದ ನಂತರದಲ್ಲಿ ಜನಿಸಿದವರಿಗೆ ಇರಲಾರದು. ಅಂದು ಕಷ್ಟ-ನಷ್ಟಗಳನ್ನು ಸಹಿಸಿ ನೋವನುಂಡವರ ತ್ಯಾಗ, ಬಲಿದಾನಗಳಿಂದ ಉಳಿದ ದೇಶದ ಪ್ರಜಾಸತ್ತೆಯನ್ನು ಇಂದಿನ ರಾಜಕಾರಣಿಗಳು ನೈತಿಕ ಅಧೋಗತಿಗೆ ಒಯ್ಯುತ್ತಿರುವುದನ್ನು ಕಂಡು ಅಂದಿನ ಹೋರಾಟಗಾರರು ಮರುಗದೇ ಇರಲಾರರು. ಭ್ರಷ್ಠಾಚಾರದ ವಿರುದ್ಧ, ಸರ್ವಾಧಿಕಾರದ ವಿರುದ್ಧ ಸೆಣಸಿದವರ ಅಂದಿನವರ ಮನೋಭಾವ ಇಂದಿನ ತರುಣರಿಗೆ ಮೂಡದಿದ್ದರೆ ಪರಿಸ್ಥಿತಿಯ ಸುಧಾರಣೆಯಾಗುವುದು ದುಸ್ತರವೇ ಸರಿ.
     ಹಾಸನ ಜಿಲ್ಲೆಯಲ್ಲಿ 13 ಜನರು ಆಂತರಿಕ ಭದ್ರತಾ ಶಾಸನದ ಅನ್ವಯ (ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿಲ್ಲದೆ 2 ವರ್ಷಗಳ ಕಾಲ ಯಾರನ್ನೇ ಅಗಲಿ ಬಂಧಿಸಲು ಅವಕಾಶ ಕೊಟ್ಟಿದ್ದ ಕಾಯದೆ) ಬಂದಿಗಳಾಗಿದ್ದರು. ಸರಿಯಾಗಿ ಮೀಸೆಯೇ ಮೂಡಿರದಿದ್ದ ಆಗ 18-19 ವರ್ಷದ ತರುಣರಾದ ಹಾಸನದ ಪಾರಸಮಲ್ ಮತ್ತು ಅರಕಲಗೂಡಿನ ಪಟ್ಟಾಭಿರಾಮರೂ ಅವರಲ್ಲಿ ಸೇರಿದ್ದರು. ಆ ಪೈಕಿ 7 ಜನರು ಈಗ ದಿವಂಗತರು. ಸಂಘದ ಜಿಲ್ಲಾ ಪ್ರಚಾರಕರಾಗಿದ್ದ ಶ್ರೀ ಪ್ರಭಾಕರ ಕೆರಕೈ ಸಹ ಮೀಸಾ ಬಂದಿಯಾಗಿದ್ದು, ಆಗ ಅನುಭವಿಸಿದ ಹಿಂಸೆಯ ಕಾರಣದಿಂದ ಕೆಲವು ವರ್ಷಗಳ ನಂತರದಲ್ಲಿ 30-32ರ ಕಿರಿಯ ವಯಸ್ಸಿನಲ್ಲೇ ಮತಿವಿಕಲ್ಪತೆಗೆ ಒಳಗಾಗಿ ಮೃತಪಟ್ಟವರು. 300ಕ್ಕೂ ಹೆಚ್ಚು ಜನರನ್ನು ಭಾರತ ರಕ್ಷಣಾ ಕಾಯದೆಯ ಅನ್ವಯ ಬಂಧಿಸಿದ್ದರು. ದಂಡ ಪ್ರಕ್ರಿಯಾ ಸಂಹಿತೆಯ ಪ್ರಕಾರ ಮೊಕದ್ದಮೆಗಳನ್ನು ಸಾವಿರಾರು ಜನರ ಮೇಲೆ ಹೂಡಿದ್ದರು. ಕೊನೆ ಕೊನೆಗೆ ಜೈಲುಗಳಲ್ಲಿ ಬಂದಿಗಳನ್ನು ಇಡಲು ಸಾಧ್ಯವಾಗದಾದಾಗ ಸತ್ಯಾಗ್ರಹಿಗಳನ್ನು ಬಂಧಿಸಿ, ಹೊಡೆದು, ಬಡಿದು ವಾಹನಗಳಲ್ಲಿ ಕರೆದೊಯ್ದು ದೂರದ ಸ್ಥಳಗಳಲ್ಲಿ ಬಿಟ್ಟು ಬರುತ್ತಿದ್ದ ಸಂದರ್ಭಗಳೂ ಬಂದಿದ್ದವು. ಅಂತಿಮವಾಗಿ ಜನತೆಯದೇ ಜಯವಾಯಿತು. ಜಿಲ್ಲೆಯಲ್ಲಿ ಅಂತಹ ಪ್ರೇರಣಾದಾಯಿ ಹೋರಾಟ ಮಾಡಿದವರನ್ನು ಒಂದೆಡೆ ಸೇರಿಸುವ ಪ್ರಯತ್ನವನ್ನು ಮಾಡಲು ನಿರ್ಧರಿಸಿ ಮಿತ್ರ ಹರಿಹರಪುರ ಶ್ರೀಧರ ಮತ್ತು ನಾನು ಜಿಲ್ಲೆಯಲ್ಲಿ ಪ್ರವಾಸ ಮಾಡಿದೆವು. ಉತ್ತಮ ಸ್ಪಂದನ ಸಿಕ್ಕಿತು. ಅಂದು ಹೋರಾಡಿದ್ದ ಹಲವರು ಸ್ವರ್ಗವಾಸಿಗಳಾಗಿದ್ದರು. ಹಲವರು ಎಲ್ಲಿದ್ದಾರೋ, ಏನು ಮಾಡುತ್ತಿದ್ದಾರೋ ತಿಳಿಯಲಿಲ್ಲ. ಹಲವರು ವೃದ್ಧಾಪ್ಯದ ಕಾರಣದ ಸಹಜ ಅನಾರೋಗ್ಯ ಕಾರಣದಿಂದ ಪ್ರಯಾಣ ಮಾಡಲು ಕಷ್ಟವಿರುವ ಸ್ಥಿತಿಯಲ್ಲಿದ್ದರು. ಕೆಲವರಿಗೆ ಅನಿವಾರ್ಯ ಕಾರಣಗಳಿಂದ ಅಂದು ಬರಲು ಕಷ್ಟವಿತ್ತು. ಹಾಗಾಗಿ ನಮ್ಮ ಪ್ರಯತ್ನದ ಮಿತಿಯಲ್ಲಿ ಮಾಡಿದ ಪ್ರಯತ್ನಕ್ಕೆ ಅಂದು ಹಾಜರಿದ್ದ 80 ವೃದ್ಧತರುಣರು ಉಪಸ್ಥಿತರಿದ್ದುದು ಯಶಸ್ಸು ಸಿಕ್ಕಿತ್ತೆಂದೇ ಹೇಳಬಹುದು. ಕಾರ್ಯಕ್ರಮಕ್ಕೆ ಬರಲಾಗದಿದ್ದ ಹಲವರು ಅನೇಕ ಸಲ ದೂರವಾಣಿ ಮಾಡುತ್ತಾ, ಅದಕ್ಕಾಗಿ ಪೇಚಾಡಿಕೊಂಡು ಕಾರ್ಯಕ್ರಮದ ವಿವರ ಪಡೆಯುತ್ತಿದ್ದುದು ಅವರ ಕಳಕಳಿ ತೋರಿಸುತ್ತಿತ್ತು.
     ಜೈಲಿನಲ್ಲಿ ಬಂದಿಗಳು ಹೇಳಿಕೊಳ್ಳುತ್ತಿದ್ದ 'ಆ ಸ್ವತಂತ್ರ ಸ್ವರ್ಗಕೇ ನಮ್ಮ ನಾಡು ಏಳಲೇಳಲೇಳಲೇಳಲಿ' ಎಂಬ ಸಮೂಹಗೀತೆಯನ್ನು ಎಲ್ಲರೂ ಒಕ್ಕೊರಳಿನಿಂದ ಎದೆ ಸೆಟೆಸಿ, ಚಪ್ಪಾಳೆ ಹಾಕುತ್ತಾ ಹೇಳಿದರು. ಬಂದಿದ್ದವರೆಲ್ಲರು ತಮ್ಮ ತಮ್ಮ ಅನುಭವಗಳ ಬುತ್ತಿಯನ್ನು ತೆರೆಯುತ್ತಿದ್ದಂತೆ ಕಾಲ 37 ವರ್ಷಗಳ ಹಿಂದಕ್ಕೆ ಸರಿದಿತ್ತು. ಅನುಭವಗಳನ್ನು ಹೇಳಿಕೊಳ್ಳುವಾಗ ಅವರ ಕಣ್ಣುಗಳಲ್ಲಿನ ಮಿಂಚು, ಮುಖದಲ್ಲಿ ವ್ಯಕ್ತವಾಗುತ್ತಿದ್ದ ಆನಂದ, ಸಾರ್ಥಕ್ಯ ಭಾವವನ್ನು ಹೊರಸೂಸುತ್ತಿತ್ತು. ಅವರ ತಾರುಣ್ಯ ಮರುಕಳಿಸಿತ್ತು. ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ರಾತ್ರಿ ಧ್ವಜಸ್ಥಂಭದ ಮೇಲೆ ಕಪ್ಪು ಧ್ವಜ ಹಾರಿಸಿ ಕೆಳಗೆ ಇಳಿದು ಬರುವಾಗ ಕಂಬಕ್ಕೆ ಗ್ರೀಸು ಹಚ್ಚಿ ಕೆಳಗೆ ಇಳಿದಿದ್ದ ಮತ್ತು ಆ ಕಾರಣಕ್ಕಾಗಿ ಪೋಲಿಸರ ಆತಿಥ್ಯ ಪಡೆದಿದ್ದ ಅರಕಲಗೂಡಿನ ಅನಂತ, ಹೊಳೆನರಸಿಪುರದ ಸಂತೆಯಲ್ಲಿ ಅಂದು ಪ್ರಸಾರ ಮಾಡುತ್ತಿದ್ದ ಭೂಗತ ಪತ್ರಿಕೆ 'ಕಹಳೆ'ಯನ್ನು ಟಾಂ ಟಾಂ ಹೊಡೆಯುತ್ತಾ ಹಂಚಿಸಿದ್ದಕ್ಕಾಗಿ ಪೋಲಿಸರಿಂದ ಹೊಡೆತ ತಿಂದಿದ್ದ ಭಗವಾನ್ ಮತ್ತು ಅವನ ಮಿತ್ರರು, ಸತ್ಯಾಗ್ರಹ ಮಾಡಿ ಬಂದಿಗಳಾಗಿದ್ದವರು, ಜೈಲಿನಲ್ಲಿ 10 ತಿಂಗಳುಗಳಿಗೂ ಹೆಚ್ಚು ಕಾಲವಿದ್ದು ಬಿಡುಗಡೆಯಾದ ನಂತರ ಮನೆಗೆ ಹೋಗದೆ ಮತ್ತೆ ಹೋರಾಟದ ಕೆಲಸಕ್ಕೆ ಆದ್ಯತೆ ನೀಡಿದ್ದ ಬೇಲೂರಿನ ರವಿ ಮತ್ತು ಗೆಳೆಯರು, ಅರಸಿಕೆರೆಯಲ್ಲಿ ನಡೆದ ರಂಗು ರಂಗಿನ ಸತ್ಯಾಗ್ರಹದ ವಿವರಗಳು, ಅನುಭವಿಸಿದ ಚಿತ್ರಹಿಂಸೆಗಳನ್ನು ತೆರೆದಿಟ್ಟ ರಾಮಚಂದ್ರ, ಗೋವಿಂದರಾಜು, ಬಸವರಾಜು, ಸತ್ಯನಾರಾಯಣ ಮುಂತಾದವರು, ಸಕಲೇಶಪುರದ ಸತ್ಯನಾರಾಯಣಗುಪ್ತ ನೀಡಿದ ರೋಚಕ ಮಾಹಿತಿಗಳು, ಹಾಸನದ ಪಾರಸಮಲ್, ನಾಗರಾಜ್, ಚಂದ್ರಶೇಖರ್, ಜಯಪ್ರಕಾಶ್ ಮುಂತಾದವರ ಅನುಭವಗಳು ನೆರೆದಿದ್ದವರನ್ನು ವಿಸ್ಮಿತಗೊಳಿಸಿದ್ದು ಸತ್ಯ. 
     ನಮ್ಮ ನಡುವೆ ಈಗ ಇಲ್ಲದ, ಸ್ವರ್ಗಸ್ಥರಾದವರ ಹೆಸರುಗಳನ್ನು ಹೇಳಲು ಬಂದವರನ್ನು ಕೋರಿದಾಗ ಸುಮಾರು 40 ಜನರ ಹೆಸರುಗಳು ಕೇಳಿಬಂದವು. ಅವರುಗಳು ಮಾಡಿದ ಕೆಲಸಗಳು ಮನಃಪಟಲದ ಮೇಲೆ ಮೂಡಿದವು. ಅಗಲಿದ ಆ ಎಲ್ಲಾ ಧೀರರಿಗೆ ಶ್ರದ್ಧಾಂಜಲಿಯಾಗಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಎಲ್ಲರ ಮಾತುಗಳನ್ನು ಕೇಳಿದ ನಂತರ ಸಂಘದ ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣನವರು ಮಾತನಾಡಿ ಸಂಕಟದ ಕಾಲದಲ್ಲಿ ನಿಸ್ವಾರ್ಥ ಭಾವದಿಂದ ಮಾಡಿದವರ ತ್ಯಾಗ, ಬಲಿದಾನಗಳು ಎಂದಿಗೂ ಮಾರ್ಗದರ್ಶಿಯಾಗಿ ಉಳಿಯುತ್ತದೆ ಎಂದರಲ್ಲದೆ, ಇಂದಿನ ರಾಜಕೀಯ ಪರಿಸ್ಥಿತಿಯಿಂದಾಗಿ ಧೃತಿಗೆಡದೆ ದೇಶಹಿತವನ್ನು ಮುಂದಿರಿಸಿಕೊಂಡು ಕೆಲಸ ಮಾಡಲು ಮತ್ತು ಯುವಕರಿಗೆ ಪ್ರೇರಿಸಲು ಕೇಳಿಕೊಂಡರು. ಹಿರಿಯರಾದ ಶ್ರೀ ಕೆ.ಎನ್. ದುರ್ಗಪ್ಪಶ್ರೇಷ್ಠಿಯವರು "ಆದರ್ಶದ ಬೆನ್ನು ಹತ್ತಿ . ." ಕೃತಿಯನ್ನು ಬಿಡುಗಡೆ ಮಾಡಿ ಶುಭ ಕೋರಿದರು.
     ಹಿಂದೆ ಮೀಸಾ ಬಂದಿಗಳಾಗಿದ್ದು, ಈಗ ನಮ್ಮ ನಡುವೆ ಇರುವ ಜಿಲ್ಲೆಯ 6 ಜನರ ಪೈಕಿ ಸಮಾವೇಶದಲ್ಲಿ ಹಾಜರಿದ್ದ ಅರಸಿಕೆರೆಯ ಶ್ರೀ ಕೆ.ಎನ್. ದುರ್ಗಪ್ಪ ಶ್ರೇಷ್ಠಿ, ಶ್ರೀ ಕೆ. ಆರ್. ಶ್ರೀನಿವಾಸ ಮೂರ್ತಿ, ಹಾಸನದ ಪಾರಸಮಲ್ ಮತ್ತು ಸಕಲೇಶಪುರದ ಶ್ರೀ ಸತ್ಯನಾರಾಯಣ ಗುಪ್ತರನ್ನು ಸನ್ಮಾನಿಸಲಾಯಿತು. ಮಾರ್ಗದರ್ಶಿ ಭಾಷಣ ಮಾಡಿದ ಮತ್ತು ಕಾರ್ಯಕ್ರಮಕ್ಕೆ ಪ್ರೇರೇಪಣೆ ನೀಡಿದ್ದ ಶ್ರೀ ಸು. ರಾಮಣ್ಣನವರನ್ನು ಗೌರವಿಸಲಾಯಿತು. 'ಆದರ್ಶದ ಬೆನ್ನು ಹತ್ತಿ . .' ಕೃತಿಯ ಲೇಖಕರನ್ನು ಅಭಿನಂದಿಸಲಾಯಿತು.  ಸಹಕರಿಸಿದ ಎಲ್ಲರಿಗೆ ಹರಿಹರಪುರ ಶ್ರೀಧರ್ ಧನ್ಯವಾದ ಸಮರ್ಪಣೆ ಮಾಡಿದರು. ಕಾರ್ಯಕ್ರಮ ಬಂದಿದ್ದವರಿಗೆ ಸಂತೋಷ ನೀಡಿದ್ದರೆ, ಆಯೋಜಿಸಿದವರಿಗೆ ಧನ್ಯತಾಭಾವ ಮೂಡಿಸಿತ್ತು.

ಸಮಾವೇಶದ ಕೆಲವು ದೃಷ್ಯಗಳಿವು:Saturday, December 1, 2012

ಆ ಸ್ವತಂತ್ರ ಸ್ವರ್ಗಕೆ ನಮ್ಮ ನಾಡು ಏಳಲಿ..  ಅದೊಂದು ಬಲು ವಿಶೇಷ ಸಂದರ್ಭ! ಈ ಹಾಡು ಕೇಳಿ. ವೇದಿಕೆಯಲ್ಲಿ ಮತ್ತು ಅವರೆದುರು ಕುಳಿತು ಅತ್ಯಂತ ಸ್ಪೂರ್ಥಿಯಿಂದ ಹಾಡುತ್ತಿರುವವರ ಪರಿಚಯ ನಿಮಗಾದರೆ ನೀವು ವಾಹ್ ! ಎನ್ನದೆ ಇರಲಾರಿರಿ. 1975-77 ನಮ್ಮ ದೇಶದ ಮೇಲೆ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭ. ಈಗಿನ ಎಷ್ಟೋ ಜನರಿಗೆ ಅದರ ಅರಿವಿಲ್ಲ. ಆದರೆ ಅಂದು ದೇಶದ ನಾಗರೀಕರ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿತ್ತು. ಆರ್.ಎಸ್.ಎಸ್.ಸಹಿತ ಹಲವಾರು ಸಂಘಟನೆಗ     ಳನ್ನು  ನಿಶೇಧಿಸಿ ಅವುಗಳ ನಾಯಕರನ್ನು ಜೈಲಿಗೆ ತಳ್ಳಲಾಗಿತ್ತು. ಆಗ ಆ ತುರ್ತುಪರಿಸ್ಥಿತಿಯ ವಿರುದ್ಧ ಹೋರಾಡಿ ಇನ್ನೂ ನಮ್ಮೊಡನಿರುವ ಹಾಸನ ಜಿಲ್ಲೆಯ ಹಿರಿಯರು ಇವರು!! ವೇದಿಕೆಯಲ್ಲಿ ಆರ್.ಎಸ್.ಎಸ್. ಹಿರಿಯ ಪ್ರಚಾರಕರಾದ ಶ್ರೀ ಸು.ರಾಮಣ್ಣನವರು. ಅಕ್ಕ ಪಕ್ಕದಲ್ಲಿ ಅರಸೀಕೆರೆಯ ಪುರಸಭಾ ಮಾಜಿ ಅಧ್ಯಕ್ಷರಾದ ಶ್ರೀ ದುರ್ಗಪ್ಪಶೆಟ್ಟರು ಮತ್ತು ಅರಸೀಕೆರೆಯ ತಾಲ್ಲೂಕು ಸಂಘಚಾಲಕರಾದ ಶ್ರೀ ಶ್ರೀನಿವಾಸಮೂರ್ತಿಯವರು[ರಾಮಣ್ಣನವರ ಬಲಬದಿ]
ಎದಿರು ಕುಳಿತು ಚಪ್ಪಾಳೆ ತಟ್ಟಿ ಹಾಡುತ್ತಿರುವವರೆಲ್ಲಾ ಅಂದು ಹೋರಾಟದಲ್ಲಿ ಪಾಲ್ಗೊಂಡಿದ್ದ ಧೀರರು. ಅಂದಿನ ಹಲವರು ಇಂದು ನಮ್ಮೊಡನಿಲ್ಲ. ಇನ್ನೂ ಬದುಕಿದ್ದು ಭಾರತಮಾತೆಯ ವೈಭವದ ದಿನಗಳಿಗಾಗಿ ಸಮಾಜಕಾರ್ಯದಲ್ಲಿ ಸಕ್ರಿಯರಾಗಿರುವ ಹಿರಿಯರು ತಮ್ಮ ಉತ್ಸಾಹವನ್ನು ಬತ್ತಲು ಬಿಡದೆ ಭಾವುಕರಾಗಿ ಹಾಡುತ್ತಿರುವ ಅಪೂರ್ವ ಕ್ಷಣಗಳು!!
ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರೂ ಕೂಡ ಅಂದು ಹೋರಾಟದಲ್ಲಿ ಪಾಲ್ಗೊಂಡು ಸರ್ಕಾರೀ ಕೆಲಸ ಕಳೆದುಕೊಂಡು ಜೈಲು ವಾಸ ಅನುಭವಿಸಿದವರು. ಅವರು ಬರೆದಿರುವ ತನ್ನ ಹೋರಾಟದ ಅನುಭವ ಕಥನ "ಆದರ್ಶದ ಬೆನ್ನುಹತ್ತಿ.." ಕೃತಿಯ ಬಿಡುಗಡೆಯ ಸಂದರ್ಭದಲ್ಲಿ ಇಂತಹ ಒಂದು ಅಪೂರ್ವ ಅವಕಾಶವು ಹಾಸನದ ಜನತೆಗೆ ಲಭಿಸಿತ್ತು. ಸಮಾರಂಭದ ವರದಿಯನ್ನು ಪ್ರಕಟಿಸಲಾಗುವುದು.