ನಮ್ಮೂರಿನ ಶಂಕರಮಠದಲ್ಲಿ ಪ್ರತಿ ಸೋಮವಾರ ಸಂಜೆ ಭಜನೆ ನಡೆಯುತ್ತಿತ್ತು.ಸಣ್ಣವರಿದ್ದಾಗ ನಾವು, ಅಂದರೆ ಅಮ್ಮ ಮತ್ತು ಮೂವರು ಮಕ್ಕಳು ಅಲ್ಲಿಗೆ ಹೋಗ್ತಿದ್ವಿ.ಹಾಂ, ನಾವೇನೋ ತುಂಬಾ ದೊಡ್ಡ ಭಕ್ತರು, ಪರಮ ಅದ್ವೈತಿಗಳು ಅನ್ನೋ ನಿರ್ಧಾರಕ್ಕೆ ಬರಬೇಡಿ.ನಾವಲ್ಲಿಗೆ ಹೋಗುತ್ತಿದ್ದ ಕಾರಣವೇ ಬೇರೆ. ಭಜನೆ ಆದ ಮೇಲೆ, ಸ್ವಸ್ತಿ ವಾಚನ (ಅಷ್ಟಾವಧಾನ ಅಂತಲೂ ಕರೆಯೋದನ್ನ ಕೇಳಿದ್ದೇನೆ ) ಅಂತ ಮಾಡ್ತಾರೆ. "ದೇವ ದೇವೋತ್ತಮ, ದೇವತಾ ಸಾರ್ವಭೌಮ ..." ಮತ್ತಿನ್ನೇನೋ ಹೇಳಿ ಕೊನೆಗೆ, "ಋಗ್ವೇದ ಪ್ರಿಯ ಋಗ್ವೇದ ಸೇವಾಮವಧಾರ್ಯ " ಅಂತ ಶುರು ಮಾಡಿ, ಎಲ್ಲ ವೇದ, ಸಂಗೀತ, ಮತ್ತೊಮ್ಮೆ ಭಜನೆ ಸೇವೆ ಮಾಡ್ತಾರೆ. ವೇದ ಮಂತ್ರಗಳನ್ನ ರಾಗವಾಗಿ ಹಾಡ್ತಾರೆ, ಚೆನ್ನಾಗಿರತ್ತೆ ಕೇಳಕ್ಕೆ. ಆ ದಿನ ಸಂಗೀತ ಸೇವೆ ಮಾಡೋರು ಹಾಡ ಬಲ್ಲವರಾಗಿದ್ದಾರೆ ಸಂಗೀತ ಸೇವೇನೂ ಚೆನ್ನಾಗಿರತ್ತೆ.
ಭಜನೆ ಸುಮಾರು ೬ ಘಂಟೆ ಹೊತ್ತಿಗೆ ಶುರುವಾಗ್ತಿತ್ತೇನೋ. ಹೇಗೆ ಶುರುಮಾಡ್ತಿದ್ರು, ಯಾವ ಭಜನೆಇಂದ ಶುರುಮಾಡ್ತಿದ್ರು ನಂಗೊತ್ತಿಲ್ಲ. ಯಾಕಂದ್ರೆ, ಮನೆ ಕೆಲಸ ತೀರಿಸಿ, ನಮ್ಮ ಹೋಂವರ್ಕ್ ಮುಗಿಸಿ ಅಮ್ಮ ನಮ್ಮನ್ನ ಎಳ್ಕೊಂಡು ಹೋಗೋ ಹೊತ್ತಿಗೆ, ಕೊನೆದೋ, ಇಲ್ಲ ಅದರ ಮುಂಚಿಂದೋ ಭಜನೆ ನಡಿತಿರ್ತಿತ್ತು. ಅಮ್ಮ ಗುಡಿಗೆ ಒಂದೆರಡು ಸುತ್ತು ಬಂದು, ಭಜನೆ ಕೇಳಕ್ಕೆ ಕೂತರೆ, ನಾವು ಸುಮ್ಮನೆ ಆ ಕಡೆ ಈ ಕಡೆ ನೋಡ್ತಾ, ಯಾರಾದರೂ ವಾರಿಗೆಯವರು ಸಿಕ್ಕರೆ ಹರಟುತ್ತಾ ಇರ್ತಿದ್ವಿ.
ಈಗ ಮುಖ್ಯ ವಿಷಯ, ನಾವು ಅಟ್ಲೀಸ್ಟ್ ನಾನು ಮಠಕ್ಕೆ ಹೋಗುತಿದ್ದುದು ಗೊಜ್ಜವಲಕ್ಕಿಗೆ! ಸಾಮಾನ್ಯವಾಗಿ ಸ್ಮಾರ್ತ ಸಂಪ್ರದಾಯದ ಮಠಗಳಲ್ಲಿ ಅದರಲ್ಲೂ ಶಂಕರಮಠಗಳಲ್ಲಿ ಗೊಜ್ಜವಲಕ್ಕಿಯನ್ನ ಪ್ರಸಾದವಾಗಿ ಕೊಡ್ತಾರೆ.ಕೆಲವು ಕಡೆ ಹುಳಿಯವಲಕ್ಕಿ ಅಂತಲೂ ಅಂತಾರೆ. ಈರುಳ್ಳಿ ಬಳಸದೆ ಇರೋ ದಿನಗಳಲ್ಲಿ, ಮನೇಲೂ ಮಾಡ್ತಾರೆ. ಆದ್ರೆ, ಮನೇದು ಮಠದಲ್ಲಿ ಮಾಡಿರೋ ಅಷ್ಟು ಚೆನ್ನಾಗಿರಲ್ಲ. ಇಂತಿಪ್ಪ ಗೊಜ್ಜವಲಕ್ಕಿಗಾಗಿ ನಾನು ಸ್ವಲ್ಪ ವರ್ಷ ಮಠಕ್ಕೆ ಹೋಗುತ್ತಿದ್ದೆ. ಹೋದಮೇಲೆ ಬರಿ ಅದನಷ್ಟೇ ಇಸ್ಕೊಂಡು ಬರಕ್ಕೆ ಆಗಲ್ಲ ಅಲ್ಲ, ಅದ್ಕೆ ಈ ಸ್ವಸ್ತಿ ವಾಚನ ಸೇವೆ ಕೇಳ್ತಿದ್ದೆ.
ನಮ್ಮೂರಿನ ಮಠ ಅಂಥಾ ದೊಡ್ದದೆನಿರಲಿಲ್ಲ ಆಗ. ಸಾಧಾರಣವಾಗಿತ್ತು. ಎಲ್ಲ ದೇವಳಗಳಂತೆ ಮಠದಲ್ಲೂ ಕೆಲವು ದೊಡ್ಡ ಫೋಟೋ ಹಾಕಿದ್ದರು. ಯಾವ್ಯಾವ್ದೋ ಸ್ವಾಮಿಗಳು, ಮೂರು ಚಿಲ್ರೆ ಕೋಟಿ ದೇವರುಗಳು, ಯಂತ್ರಗಳು ಇನ್ನೇನೆನಿತ್ತೋ ನೆನಪಿಲ್ಲ. ಆದ್ರೆ ನಂಗೆ ಅಲ್ಲಿ ಒಂದ್ ಫೋಟೋ ತುಂಬಾ ಇಷ್ಟ ಆಗ್ತಿತ್ತು. ಆ ವ್ಯಕ್ತಿನ ನೋಡ್ತಾ ಇದ್ರೆ ನೋಡ್ತಾನೆ ಇರ್ಬೇಕು ಅನ್ಸೋದು. ಯಾರೋ ಕಾಷಾಯ ವಸ್ತ್ರ ಧಾರಿ. ಹೆಸರು ಬರೆದಿತ್ತೇನೋ ಆದ್ರೆ ನೆನಪಿಲ್ಲ.
ಸಮಯ ಸರಿದಂತೆ, ಗೊಜ್ಜವಲಕ್ಕಿಗಾಗಿ ಮಠಕ್ಕೆ ಹೋಗೋದು ಒಂಥರಾ ಮುಜುಗರ ಅನ್ನಿಸಿ, ನಾವ್ ಬಿಟ್ವಿ. ಆದ್ರೆ ಗೊಜ್ಜವಲಕ್ಕಿ ಮಾತ್ರ ಸಿಗ್ತಿತ್ತು, ಅಮ್ಮ ಹೋಗಿ ತರೋರು. ಮತ್ತೆ ನಾನು ತುಂಬಾ ವರ್ಷಗಳಾದ ಮೇಲೆ ಆ ಚಿತ್ರಲ್ಲಿದ್ದ ವ್ಯಕ್ತಿಯ ಬಗ್ಗೆ ಕೇಳಿದೆ, ಮತ್ತೆ ಫೋಟೋ ನೋಡಿದೆ. ಈ ಸಾರ್ತಿ ಅವರ ಹೆಸರು ನೆನಪಿತ್ತು, ಅವರೇ ಚಂದ್ರಶೇಖರ ಭಾರತಿ ಸ್ವಾಮಿಗಳು.
ಶೃಂಗೇರಿಯ ಗುರು ಪೀಠವನ್ನೆರಿದವರು. ಆದರೆ ಅವರು ಅದಕೂ ಹೆಚ್ಚ್ಚು ಪ್ರಸಿಧ್ಧರಾಗಿರುವುದು ಅವದೂತ ಸ್ಥಿತಿಗೇರಿದ ಗುರುಗಳೆಂದು. ಹಲವಾರು ಜನ ಅವರನ್ನು ತಮ್ಮ ಗಳೆಂದು ಸ್ವೀಕರಿಸಿ ಉನ್ನತಿಹೊಂದಿದ್ದಾರೆ. ಅವರಲ್ಲಿ ಮಹಾನ್ ಲೇಖಕ ದೇವುಡು,ಇತ್ತೀಚಿನ ಅವದೂತರಾದ ಸಕ್ಕರೆ ಪಟ್ಟಣ ಅವದೂತರು ಸೇರಿದ್ದಾರೆಂದು ಕೇಳಿದ್ದೇನೆ.
ಅವರ ಚಿತ್ರ ನೋಡಿ, ಅವರ ಸಾನಿಧ್ಯದಲ್ಲಿ ಏನೊಂದೂ ಮಾತಿಲ್ಲದೆ, ಶಾಂತಿ ಹೊಂದಿದವರು ಬೇಕಾದಷ್ಟು ಜನ. ರಮಣ ಮಹರ್ಷಿಗಳ ಸನ್ನಿಧಿಯಲ್ಲೂ ತುಂಬಾ ಜನಕ್ಕೆ ಈ ಅನುಭವವಾಗಿದೆಯಂತೆ. ಚಂದ್ರಶೇಖರ ಭಾರತಿಗಳು ಅವದೂತ ಪ್ರಜ್ಞೆ ತಲುಪಿದವರೆಂದು ಕೆಲವರೆಂದರೆ, ಎಷ್ಟೋ ಜನ ಅವರಿಗೆ ಬುಧ್ಧಿ ಭ್ರಮಣೆಯಾಗಿದೆ ಅಂತ ಚಿಕಿತ್ಸೆ ಕೊಡಿಸೋಕೆ ಹೊರಟಿದ್ರಂತೆ.
ಚಿಕಿತ್ಸೆ ಮಾಡಲು ಬೆಂಗಳೂರಿನ ಸರಕಾರೀ ಮಾನಸ ಆಸ್ಪತ್ರೆಯ ಮುಖ್ಯಾಧಿಕಾರಿಗಳಾದ ಡಾ. ಎಂ. ವಿ . ಗೋವಿಂದಸ್ವಾಮಿ ಮತ್ತು ಮನಃಶಾಸ್ತ್ರ ವಿಭಾಗದ ಮುಖ್ಯಸ್ತರಾಗಿದ್ದ ಡಾ. ಸಿ. ಕೆ. ವಾಸುದೇವ ರಾಯರು ಮೈಸೂರು ಮಹಾರಾಜರ ಅಪ್ಪಣೆಯ ಮೇರೆಗೆ ಶೃಂಗೇರಿಗೆ ಬಂದರು. ಆಗ ಸ್ವಾಮಿಗಳು ಸದಾ ಅಂತರ್ಮುಖರಾಗೆ ಇರುತ್ತಿದ್ದರು. ಹೆಚ್ಚು, ಜನ ಸಂಪರ್ಕದಲ್ಲೇ ಇರಲಿಲ್ಲ, ಬಂದವರು ಮನೋ ವಿಜ್ಞಾನಿ ಅಂತಲೂ ಅವರಿಗೆ ತಿಳಿಸಿರಲಿಲ್ಲ.
ವೈದ್ಯರು ಅವರನ್ನು ಮಾತಾಡಿಸುವ ಹಾಗಿರಲಿಲ್ಲ , ಹತ್ತಿರದಿಂದ ಕಂಡು ವಿವರಗಳನ್ನು ಸಂಗ್ರಹಿಸುವಂತಿರಲಿಲ್ಲ, ಮದ್ದು ಕೊಡುವಂತಿರಲಿಲ್ಲ (ಸ್ವಾಮಿಗಳು ಎಷ್ಟೋ ಬಾರಿ ಮದ್ದು ತೆಗೆದುಕೊಂಡಿರಲಿಲ್ಲ, ಆಹಾರದಲ್ಲಿ ಬೆರೆಸಿ ಕೊಟ್ಟರೆ ಆಹಾರವನ್ನೇ ಮುಟ್ಟುತ್ತಿರಲಿಲ್ಲ). ಹೀಗಿದ್ದಾಗ ಡಾಕ್ಟರ್ ಗೋವಿಂದ ಸ್ವಾಮಿ ಯವರು ಶೃಂಗೇರಿ ಒಂದು ವಾರ ಇದ್ದು ಹೊರಡಲನುವಾದಾಗ, ಸ್ವಾಮಿಗಳು ಕೇಳಿದರಂತೆ "ಏಕೆ ಹೊರಟು ಬಿಟ್ಟಿರಿ, ಬಂದ ಕೆಲಸವಾಯಿತೋ?". ಡಾಕ್ಟರಿಗೆ ಏನು ಹೇಳಬೇಕೋ ತಿಳಿಯದಾದಾಗ ಸ್ವಾಮಿಗಳೇ, " ನಮ್ಮನ್ನು ಪರೀಕ್ಷೆ ಮಾಡಿಯಾಯಿತೋ? ನಿಮ್ಮ ಚಿಕಿತ್ಸೆಗೆ ಒಳಪಡುವ ರೋಗವೇ ಇದು?" ಎಂದು ಪ್ರಶ್ನೆ ಮಾಡಿ ತಾವೇ " ಇದು ನಮ್ಮ ಪ್ರಾರಬ್ಧ ಇದನ್ನು ಅನುಭವಿಸಿಯೇ ತೀರಬೇಕು. ನೀವು ಏನನ್ನು ತಾನೇ ಮಾಡಬಲ್ಲಿರಿ ? ಹೋಗಿ ಬನ್ನಿ. ನಿಮಗೆ ದೇವರು ಒಳ್ಳೆಯದು ಮಾಡುತ್ತಾನೆ. " ಎಂದು ಫಲ ಮಂತ್ರಾಕ್ಷತೆ ಕೊಟ್ಟರಂತೆ. ಡಾಕ್ಟರು ಮಾಧ್ವರಾಗಿದ್ದು, ಸ್ವಾಮಿಗಳನ್ನು ಮೆಚ್ಚಿಸಲೋಸುಗ ಅಂದು ವಿಭೂತಿ ಧರಿಸಿದ್ದರಂತೆ. ಅದ ಕಂಡು ಸ್ವಾಮಿಗಳು, "ಬೇರೆಯವರನ್ನು ಮೆಚ್ಚಿಸಲು ನಿಮ್ಮ ಆಚಾರವನ್ನು ಬಿಡಬಾರದು, ನಿಮ್ಮ ಆಚಾರದಲ್ಲಿ ನೀವಿದ್ದಾಗಲೇ ನಮಗೆ ಸಂತೋಷ" ಅಂದರಂತೆ.
ಇನ್ನೊಮ್ಮೆ ಅವರು ಬೆಂಗಳೂರಿನ ಶಂಕರ ಮಠಕ್ಕೆ ಬಂದಿದ್ದಾಗ ನಡೆದ ಘಟನೆ. ಸ್ವಾಮಿಗಳು ಸಕೇಶಿ ವಿಧವೆಯರಿಗೆ ತೀರ್ಥ ಕೊಡುವ ಹಾಗಿರಲಿಲ್ಲ. ಸ್ವಾಮಿಗಳು ಅಲ್ಲಿದ್ದ ಎಲ್ಲರಿಗೂ ತೀರ್ಥ ಕೊಟ್ಟ ಮೇಲೆ ಅಲ್ಲೊಬ್ಬ ಹೆಂಗಸು ಅಳುತ್ತಾ ಕೂತಿದ್ದರಂತೆ. ಸ್ವಾಮಿಗಳು ತಮ್ಮ ಸಹಾಯಕರಿಗೆ ವಿಚಾರಿಸಲು ಹೇಳಿದರು, ಆಕೆ ಸಕೇಶಿ ವಿಧವೆಯಾಗಿದ್ದು , ತೀರ್ಥ ಪಡೆವ ಅವಕಾಶದಿಂದ ವಂಚಿತರಾಗಿದ್ದಕ್ಕೆ ಎಂದು ತಿಳಿದಾಗ ಆಕೆಯನ್ನ ಕರೆಸಿ ತೀರ್ಥ ಕೊಟ್ಟು ಕಳುಹಿದರಂತೆ. ಎಲ್ಲರಲ್ಲೂ ಆತ್ಮನ, ಪರಮಾತ್ಮನ ಕಂಡ ಆ ಮಹಾ ಮಹಿಮರಿಗೆ ನಮನ
ಒಮ್ಮೆ ಶೃಂಗೆರಿಯಲ್ಲಿ ಭಾರೀ ಮಳೆ, ಸ್ವಾಮಿಗಳು ಇದ್ದಕ್ಕಿದ್ದಂತೆ ತಮ್ಮ ಸಹಾಯಕರನ್ನು ಕರೆದು ಭಕ್ತರೊಬ್ಬರ ಮನೆಗೆ ಹೋಗಿ ನೋಡಿ ಬಾ, ಮನೆ ಕುಸಿಯುತ್ತಿದೆ ಅಂದರಂತೆ. ಮಳೆಯಲ್ಲಿ ಹೋಗುವುದೋ ಬೇಡವೋ ಎಂಬ ವಿಚಾರ ಮಾಡಿ ಸಹಾಯಕರು ಆ ಮನೆ ತಲುಪುವಷ್ಟರಲ್ಲಿ ಗೋಡೆ ಕುಸಿದತ್ತಂತೆ, ಸಹಾಯಕರು ತಪ್ಪಿನರಿವಾಗಿ ಕುಸಿದಾಗ ಹಿಂದಿಂದ ಅದೇ ಭಕ್ತರು
ಬಂದು "ನಾನು ಮಲಗಿದ್ದೆ ಯಾಕೋ ಗುರುಗಳು ಹೊರ ಹೋಗು ಎಂದಂತಾಗಿ ಹೊರ ಬಂದೆ ಗೋಡೆ ಕುಸಿಯಿತು " ಅಂದರಂತೆ.
ಇಂಥ ಹಲವಾರು ತರ್ಕಕ್ಕೆ ಸಿಲುಕದ ಅನುಭವಗಳು ಗುರುವಿನ ಸಾನಿಧ್ಯದಲ್ಲಿ ಭಕ್ತರಿಗೆ ಈಗಲೂ ಆಗುತ್ತಿರುತ್ತವೆ.
ಸಾಧನೆಯ ಮೆಟ್ಟಿಲೆರುತ್ತಾ, ಎಲ್ಲ ಲೌಕಿಕ ಲೆಕ್ಕಾಚಾರಗಳ ತೊರೆದ ಅವರು ತಮ್ಮ ರುದ್ರಾಕ್ಷಿ ಮಾಲೆಗಳನ್ನೂ ತೊರೆದಿದ್ದರು. ಅಂಥಾ ಒಂದು ಚಿತ್ರ ಶೃಂಗೆರಿಯಲ್ಲಿದೆ.
ಎಲ್ಲ ತೊರೆದು ಸನ್ಯಾಸದ ಉನ್ನತ ಶಿಖರವೆರಿದ ಗುರುವಿನ ಬಗ್ಗೆ ಬರೆಯುವಷ್ಟು ಜ್ಞಾನ ನನಗಿಲ್ಲ. ಅವರ ಬಗ್ಗೆ ಬರೆದಷ್ಟೂ ಕಡಿಮೆಯೇ.
ಮೊನ್ನೆ ಗುರು ಪೌರ್ಣಿಮೆ, ಅರಿವಿನ ದೀಪ ಹಚ್ಚಿದ ಎಲ್ಲ ಗುರುಗಳಿಗೂ ನಮನ.
ಅದಿನ್ನೆಷ್ಟು ಕತ್ತಲೆ ತುಂಬಿದೆ
ಅವನಿಯೊಡಲಲ್ಲಿ ?
ಅಸಂಖ್ಯಾತ ಗುರುವರೇಣ್ಯರು
ಹುಟ್ಟಿಯೂ ಸ್ವಾರ್ಥ ತುಂಬಿಹುದಿಲ್ಲಿ
ಎಷ್ಟೋ ಸೀತೆಯರು ರಾವಣನ
ಬಂಧಿಗಳು, ಊರ್ಮಿಳೆಯ ಬಚ್ಚಲಿಂದ
ಹರಿಯುತ್ತಿರುವುದು ಕೊಚ್ಚೆಯೋ, ಕಣ್ಣೀರೋ
ತಿಳಿಯದಾಗಿದೆಯಲ್ಲ !
ಮತ್ತೆ ಬರಬೇಕೆ
ಮರ್ಯಾದ ಪುರುಷೋತ್ತಮ?
ಮತ್ತೊಂದು ಅವತಾರದಿಂದ,
ಮುಗಿಯಬಹುದೇ ಈ ವಿನಾಶ?
ಎಲ್ಲಿ ನೋಡಿದರಲ್ಲಿ ಶಕುನಿ, ಧುರ್ಯೋಧನರು
ಪಾಂಚಾಲಿಯ ರೋಧನ ಕೇಳುವವರಾರು? ಕುಂತಿಯ
ಕಂಬನಿಗೆ ಕರವಾಗುವವರಾರು? ದಿನವೂ ಅಭಿಮನ್ಯುವಿನ
ಕೊಲೆಯಾಗುತ್ತಿದೆಯಲ್ಲ !
ಮತ್ತೊಮ್ಮೆ ಹುಟ್ಟಬೇಕೆ
ಶಾಂಘಧನ್ವ ?
ಮತ್ತೊಂದು ಗೀತೆಯಿಂದ
ನೀಗಬಹುದೇ ಜಗದ ತಮ?
ಸಂಭಿಸುವ ಕಾಲ ಸನ್ನಿಹಿತವಾಗಲಿ
ಲೋಕದೆಲ್ಲ ಕತ್ತಲೆ ನೀಗಲಿ
-N.P.Swarna
ಚಂದ್ರಶೇಖರ ಭಾರತಿಗಳ ಬಗ್ಗೆ ಮಾಹಿತಿಗೆ ಆಧಾರ : ಶಾರದ ಪೀಠದ ಮಾಣಿಕ್ಯ - ಸಾ.ಕೃ. ರಾಮಚಂದ್ರ ರಾವ್