Pages

Friday, January 27, 2012

ಶ್ರೀ ರಮಣ ಮಹರ್ಷಿಗಳ ಪ್ರಾಣಿ ಪ್ರೇಮ


                 


  ಶ್ರೀ ಭಗವಾನರ ಆಶ್ರಯದಲ್ಲಿ ಹಲವಾರು ಪ್ರಾಣಿ, ಪಶು ಮತ್ತು ಪಕ್ಷಿಗಳು ಇದ್ದವು. ಇವುಗಳೆಲ್ಲ ಮಹರ್ಷಿಗಳ ಜೊತೆಯಲ್ಲಿ ಆನಂದದಿಂದ ವಿಹರಿಸುತ್ತಿದ್ದವು. ಹಸು,ನಾಯಿ, ಮಂಗ,ಇಣಚಿ ಮತ್ತು ನವಿಲು ಮುಂತಾದವುಗಳು ರಮಣ ಆಶ್ರಮದಲ್ಲಿ ಅತಿಥಿಗಳಂತೆ ಇದ್ದವು. ಶ್ರೀ ಭಗವಾನರು ಈ ಪ್ರಾಣಿಗಳನ್ನು ಮತ್ತು ಭಕ್ತರನ್ನು ಸಮಾನ ದೃಷ್ಟಿಯಿಂದ ನೋಡುತ್ತಿದ್ದರು.  ಪ್ರತಿನಿತ್ಯ ಮಹರ್ಷಿಗಳು ಊಟಕ್ಕೆ ಕೂರುವ ಮುನ್ನ " ಮಕ್ಕಳಿಗೆ ಆಹಾರ ಕೊಟ್ಟು ಆಗಿದೆಯೇ?" ಎಂದು ಆಶ್ರಮದ ನಾಯಿಯ ಬಗ್ಗೆ ವಿಚಾರಿಸುತ್ತಿದ್ದರು. " ಲಕ್ಷ್ಮಿಗೆ ಅವಳ ಅನ್ನ  ಕೊಟ್ಟರೆ?" ಎಂದು ಆಕಳವಿಚಾರದಲ್ಲಿ ಮಾತನಾಡುತ್ತಿದ್ದರು. ಭೋಜನದ ಸಮಯದಲ್ಲಿ ನಾಯಿಗಳಿಗೆ, ಹಸುಗಳಿಗೆ ಮತ್ತು ಅಲ್ಲಿ ನೆರೆದಿರುತ್ತಿದ್ದ ಭಿಕ್ಷುಕರಿಗೆ ಉಣಬಡಿಸಿದ ನಂತರ ಭಕ್ತರಿಗೆ ಊಟವಾಗುತ್ತಿತು. ಆ ಸಮಯದಲ್ಲಿ ಮಹರ್ಷಿಗಳು ಭಕ್ತರೆಲ್ಲರೊಡನೆ ಕೂತು ಊಟಮಾಡುತ್ತಿದ್ದರು. ಇದು ಅಲ್ಲಿಯ ಸಾಮಾನ್ಯ ನಿಯಮವಾಗಿತ್ತು. ಎಲ್ಲರಲ್ಲಿಯೂ ಸಮನಾಗಿ ಹಂಚಲಾಗದ ಯಾವುದನ್ನು ಮಹರ್ಷಿಗಳು ಸ್ವೀಕರಿಸದೆ ನಿರಾಕರಿಸುತ್ತಿದ್ದರು. ಭಗವಾನರಿಗೆ ನವಿಲುಗಳೆಂದರೆ  ಅಚ್ಚುಮೆಚ್ಚು,  ಅವುಗಳು ಕೇಕೆ ಹಾಕುವಂತೆ ಕೂಗಿ ಕರೆದು ಪ್ರೀತಿಯಿಂದ ಬೇಳೆ, ಕಾಳು,ಅಕ್ಕಿ ಮತ್ತು ಮಾವಿನಹಣ್ಣುಗಳನ್ನೂ ನೀಡುತ್ತಿದ್ದರು. ಇಣಚಿಗಳಿಗೆ  ಒಂದು ಪ್ರತ್ಯೇಕ ಕರಂಡಿಕೆ ಇಟ್ಟು ಅದರಲ್ಲಿ ಬೇಳೆ ಕಾಳುಗಳನ್ನೂ ತುಂಬಿ ಮಹರ್ಷಿಗಳ ಮಂಚದ ಸಮೀಪದಲ್ಲಿಯೇ ಇಡುತ್ತಿದ್ದರು. ಇಣಚಿಗಳು ಕಿಟಕಿಯೊಳಗಿಂದ ಬಂದು ಮಹರ್ಷಿಗಳ ಸಮೀಪದಲ್ಲಿ ಸಾವಕಾಶವಾಗಿ ತಿಂದು ಹೋಗುತ್ತಿದ್ದವು. ಶ್ರೀ ಭಗವಾನರ ಕೃಪೆಗೆ ಪಾತ್ರವಾದ ಎಲ್ಲ ಪಶು, ಪ್ರಾಣಿಗಳು ಸುಖವಾಗಿ ಸಂತೃಪ್ತವಾಗಿ ಕಾಲಕಳೆಯುತ್ತಿದ್ದವು.

                                ಶ್ರೀ ಭಗವಾನರ ಜೀವನದಲ್ಲಿ ಒಂದು ಘಟನೆ ನಡೆಯಿತು. ಭಗವಾನರ ಬಳಿ ಬರುತ್ತಿದ್ದ ಇಣಚಿಯನ್ನು ರಕ್ಷಿಸುವ ಸಲುವಾಗಿ ತಮ್ಮ ಎಲುಬು ಮುರಿತ  ಅನುಭವಿಸಿದರು.  ಒಮ್ಮೆ ಗಿರಿಯ ಮೇಲಿಂದ ಆಶ್ರಮದ ಕಡೆಗೆ ಮೆಟ್ಟಿಲು ಇಳಿದು ಬರುವಾಗ ಇಣಚಿಯೊಂದು ಭಗವಾನರ ಪಾದದ ಕಡೆಯಿಂದ ನೆಗೆದು ಓಡಿತು. ಇದನ್ನು ಕಂಡ ನಾಯಿಯೊಂದು ಇಣಚಿಯನ್ನು ಹಿಡಿಯಲು ಬೆನ್ನಟ್ಟಿತು. ಇದನ್ನು ಕಂಡ ಮಹಷಿಗಳು ನಾಯಿಯನ್ನು ಕೂಗಿ ಕರೆದರೂ ಕೇಳಿಸಿಕೊಳ್ಳದೆ ಓಡಿತು. ಆಗ ಮಹರ್ಷಿಗಳು ತಮ್ಮ ಕೈಲಿದ್ದ ಕೋಲನ್ನು ಇಣಚಿ ಮತ್ತು ನಾಯಿಯ ಮಧ್ಯೆ ಬೀಸಿ ಒಗೆದರು. ಆಗ ನಾಯಿ ಬೆದರಿ ದೂರ ಓಡಿದ ಕಾರಣ, ಇಣಚಿ ಪ್ರಾಣ ಉಳಿಯಿತು . ಹೀಗೆ ಮಾಡುವ ಸಮಯದಲ್ಲಿ ಮಹರ್ಷಿಗಳು ಆಯ ತಪ್ಪಿ ಕೆಳಗೆ ಬಿದ್ದು ಬಿಟ್ಟರು. ಅವರು ಬಿದ್ದಾಗ ಕೊರಳ ಪಟ್ಟಿಯ ಎಲುಬು ಮುರಿದು ಹೋಯಿತು.  ನೋವಿನಿಂದ ಏಳಲಾಗದ್ದಿದ್ದರು ಇಣಚಿಯನ್ನು ನಾಯಿಯಿಂದ ರಕ್ಷಿಸಿದ್ದಕ್ಕೆ ತೃಪ್ತಿ ಪಟ್ಟರು.

                                 ಇನ್ನೊಮ್ಮೆ  ಭಗವಾನರು  ಗುಡ್ಡದ  ಮೇಲೆ  ಕುಳಿತಿದ್ದರು.  ಅವರ ಜೊತೆ ನಾಲ್ಕಾರು ಜನ ಭಕ್ತರೂ  ಇದ್ದರು.  ಈ ಸಮಯದಲ್ಲಿ ಒಂದು ಹಾವು ಭಗವಾನರ ಕಾಲ ಮೇಲೆ ಏರಿತು. ಆಗ ಭಗವಾನರು ಅಲುಗಾಡಲು ಇಲ್ಲ, ಯಾವುದೇ ರೀತಿಯಲ್ಲಿ ಭಯಭೀತರಾಗಲು ಇಲ್ಲ. ಏರಿದ ಹಾವು ಒಂದೆರಡು ಕ್ಷಣದಲ್ಲಿ ಇಳಿದು ತನ್ನಷ್ಟಕ್ಕೆ ತಾನು ಹರಿದು ಹೋಯಿತು. ಆಗ ಹತ್ತಿರದಲ್ಲಿದ್ದ ಭಕ್ತರು ಭಯಭೀತರಾಗಿ ಹೆದರಿ ನಡುಗಿದರು. ಒಬ್ಬ ಭಕ್ತ " ಹಾವು ನಿಮ್ಮ ಮೇಲೆ ಹರಿದು ಹೋಗುವಾಗ ನಿಮಗೇನೂ ಅನಿಸಲಿಲ್ಲವೇ?" ಎಂದು ಪ್ರಶ್ನಿಸಿದ.  ಆಗ ಮಹರ್ಷಿಗಳು ನಸುನಕ್ಕು "ತಣ್ಣಗೆ, ಮೆತ್ತಗೆ" ಎಂದು ಉತ್ತರಿಸಿದರು.  ಮಹರ್ಷಿಗಳು ಎಂದಿಗೂ  ಹಾವುಗಳನ್ನು  ಕೊಲ್ಲಲು  ಬಿಡುತ್ತಿರಲಿಲ್ಲ . " ನಾವುಗಳು  ಅವುಗಳ ಜಾಗದಲ್ಲಿ ಮನೆ ಮಾಡಿಕೊಂಡಿದ್ದೇವೆ.  ಅವುಗಳಿಗೆ ಕಷ್ಟ ಕೊಡುವುದಕ್ಕೆ ನಮಗೇನು ಅಧಿಕಾರ ಇದೆ?  ಅವು ನಮಗೇನು ತೊಂದರೆ ಕೊಡಲು ಬರುವುದಿಲ್ಲ.  ನಮಗೆ ನಾವೇ ಹೆದರಿ ಅವುಗಳಿಗೆ ತೊಂದರೆ ಕೊಡುತ್ತೇವೆ."  ಎನ್ನುತ್ತಿದ್ದರು.                           

                                  ಭಗವಾನರ ಪ್ರಾಣಿಪ್ರೇಮ ಎಷ್ಟಿತ್ತೆಂದರೆ, ತಮ್ಮ ಕೊನೆಯ ದಿನಗಳಲ್ಲಿ ಭಯಾನಕ ನೋವಿನಿಂದ ನರಳುತಿದ್ದರೂ,  ಪ್ರಾಣಿ, ಪಶು, ಪಕ್ಷಿಗಳ ಮೇಲಿನ ವಿಚಾರಣೆಯನ್ನು ಬಿಡುತ್ತಿರಲಿಲ್ಲ. ಹತ್ತಿರದಲ್ಲಿ  ಶುಶ್ರೂಷೆ  ಮಾಡುತ್ತಿದ್ದ  ವೈದ್ಯರು ಹೇಳುವಂತೆ "ಅಂತಹ ನೋವಿನಲ್ಲೂ  ಭಗವಾನರು ಕೊಂಬೆಯ ಮೇಲೆ ಕುಳಿತ ನವಿಲಿನ ಕೇಕೆಯ ಶಬ್ದಕ್ಕೆ ಸ್ಪಂದಿಸಿ ಅದಕ್ಕೆ ಆಹಾರ ಕೊಡಲಾಯಿತೆ?"  ಎಂದು ವಿಚಾರಿಸುತ್ತಿದ್ದರು. ಆಶ್ರಮದಲ್ಲಿ ಇರುವ ಎಲ್ಲಾ ಪ್ರಾಣಿಗಳ ನೆನಪಿಗೆ   ಮಹರ್ಷಿಗಳು ಅಪರೂಪದ ಸ್ಮಾರಕಗಳನ್ನು ನಿರ್ಮಾಣ ಮಾಡಿಸಿದ್ದಾರೆ.  ಆಶ್ರಮದಲ್ಲಿದ್ದ ಒಂದು ಚಿಗರೆ, ಕಾಗೆ, ನಾಯಿ , ಮಂಗ, ಹಸು ಹೀಗೆ ತಮ್ಮೊಡನೆ ಇದ್ದ ಈ ಎಲ್ಲಾ ಜೀವಿಗಳಿಗೆ ಪ್ರತ್ಯೇಕ ಸಮಾಧಿಗಳಿವೆ.  ಅವುಗಳ ಮೇಲೆ ಮೃತ ಪ್ರಾಣಿಗಳ ಚಿತ್ರಗಳನ್ನು ಬಿಡಿಸಿ, ಅವುಗಳ ಮೇಲೆ ಶ್ರೀ ಭಗವಾನರಿಂದ ರಚಿತವಾದ ಮರಣ ಲೇಖನವನ್ನು ಕೆತ್ತಿಸಲಾಗಿದೆ. ಭಗವಾನರ ಪ್ರಕಾರ ಈ ಎಲ್ಲಾ ಜೀವಿಗಳಿಗೆ ಮುಕ್ತಿ ಲಭ್ಯವಾಗಿದೆ. ಇಂತಹ ಪ್ರಾಣಿ ಪ್ರೇಮವನ್ನು ಸಮನಾಗಿ ಭಕ್ತರೊಂದಿಗೆ ಹಂಚಿಕೊಂಡ ಅಪರೂಪದ ಸಾಧನೆಗೆ  ನಿದರ್ಶನ.
                                   "ಮನುಷ್ಯ   ತಾನು ಬದುಕಿದ್ದಷ್ಟು ಸಮಯದಲ್ಲಿ ಕೈಗೊಂಡ ಸತ್ಕರ್ಮ ಅಥವಾ ದುಷ್ಕರ್ಮ ಇವೆರಡರ ಜಮಾ ಬಾಕಿಗಳ ಅವಲಂಬಿಸಿ ಪುನಃ ಜನ್ಮ ತಾಳುತ್ತಾನೆ " ಎಂದು ಹಿಂದೂ ಧರ್ಮ ಪ್ರತಿಪಾದಿಸುತ್ತದೆ. ಇದನ್ನು ಶ್ರೀ ಶಂಕರಾಚಾರ್ಯರು " ಯಾರು ಆತ್ಮ ಸಾಕ್ಷಾತ್ಕಾರದಿಂದ ತನ್ನ ಭಿನ್ನ ವ್ಯಕ್ತಿತ್ವದ ಭ್ರಾಂತಿಯನ್ನು ಕಳೆದುಕೊಂಡಿರುವುದಿಲ್ಲವೋ ಅವನು  ಮರಣಾ ನಂತರ ತನ್ನ ಶೇಷ ಭಾಗದ ಕರ್ಮದ ತೀರಿಕೆಗಾಗಿ ಪುನಃ ಜನ್ಮ ತಾಳುತ್ತಾನೆ  " ಎಂದು ಹೇಳಿರುತ್ತಾರೆ.  ಇದನ್ನೇ ಭಗವಾನರು " ಪ್ರಗತಿಯನ್ನು ಸಾಧಿಸುವುದು  ಮತ್ತು ಕರ್ಮವನ್ನು ಆಚರಿಸುವುದು ಮನುಷ್ಯ ಜೀವನದಲ್ಲಿ ಮಾತ್ರವೇ ಶಕ್ಯವೆಂದು ಸಾಮಾನ್ಯವಾಗಿ ನಂಬಲಾಗುತ್ತದೆ.  ಆದರೆ, ತಮ್ಮ ತಮ್ಮ ಕರ್ಮಗಳನ್ನು ಕ್ಷಯಿಸಲು  ಮಾನವರಂತೆ  ಪ್ರಾಣಿಗಳಿಗೂ ಕೂಡಾ ಸಾಧ್ಯ."  ಎಂಬ ಅಭಿಪ್ರಾಯವನ್ನು ವ್ಯಕ್ತ ಮಾಡಿತ್ತಾ, ಭಗವಾನರು "ಪ್ರಾಣಿಗಳಿಗೂ  ಮುಕ್ತಿ  ಸಾಧ್ಯ" ಎಂದೇ  ಪ್ರತಿಪಾದಿಸುತ್ತಿದ್ದರು.       ಇನ್ನೊಂದು ಸಂಭಾಷಣೆಯಲ್ಲಿ ಭಗವಾನರು " ಯಾವ ಜೀವಾತ್ಮರುಗಳು ಈ  ದೇಹಗಳಲ್ಲಿ  ವಾಸಿಸುವರೆಂಬುದನ್ನು ಮತ್ತು ತಮ್ಮ ಅಪೂರ್ಣವಾದ ಕರ್ಮದ ಯಾವ ಭಾಗವನ್ನು ಪೂರ್ಣಗೊಳಿಸಲು ಅವರು ಯಾರ  ಸಹವಾಸವನ್ನು ಮಾಡುತ್ತಿದ್ದಾರೆಂಬುದನ್ನು  ನಾವು ಅರಿಯೆವು. ಇದಕ್ಕೆ ಈ ಪ್ರಾಣಿಗಳೇ ಸಾಕ್ಷಿ "  ಎಂದು ಹೇಳಿದ್ದರು. ಪ್ರಾಣಿಗಳೂ  ಮುಕ್ತಿಯನ್ನು ಪಡೆಯುತ್ತವೆಂದು ಶ್ರೀ ಶಂಕಾರಾಚಾರ್ಯರು ಕೂಡಾ ಖಚಿತ ಪಡಿಸಿದ್ದಾರೆ.  ಜಡಭರತ ಮುನಿಯು ತಾನು ಸಾಕಿದ ಚಿಗರೆಯ ಬಗ್ಗೆ ತನ್ನ ಮರಣ ಕಾಲದಲ್ಲಿ ಕ್ಷಣಿಕವಾದ ವಿಚಾರ ತರಂಗದ ಮೂಲಕ ಭಾಧೆಗೆ ಒಳಗಾದನೆಂದು ಮತ್ತು ತನ್ನ ಈ ಕೊನೆಯ ಅಭಿಲಾಷೆಯನ್ನು ಪೂರೈಸಲು ಆತನು ಪುನಃ ಚಿಗರೆಯಾಗಿ ಜನ್ಮ ತಾಳಬೇಕಾಯಿತೆಂದು ಪುರಾಣ ಕಥೆಯಲ್ಲಿ ಉಲ್ಲೇಖಿಸಲಾಗಿದೆ.

                                      ಓಂ ನಮೋ ಭಗವತೇ ರಮಣಾಯ.


-ಹೆಚ್.ಏನ್.ಪ್ರಕಾಶ್

ಭಾವೀ ಶಿಕ್ಷಕರಿಗಾಗಿ ಉಪನ್ಯಾಸ

ಮೊನ್ನೆ ನಡೆದ ಗಣರಾಜ್ಯೋತ್ಸವದ ನಿಮಿತ್ತ ಹಾಸನದ ಏನ್.ಡಿ.ಆರ್.ಕೆ.    ಬಿಎಡ್  ಕಾಲೇಜಿನಲ್ಲಿ  ವೇದಸುಧೆಯ ಸಂಪಾದಕರಾದ ಶ್ರೀ ಹರಿಹರಪುರಶ್ರೀಧರ ರಿಂದ   ಭಾವೀ  ಶಿಕ್ಷಕರಿಗಾಗಿ ಒಂದು ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಅದರ ಆಡಿಯೋ ಇಲ್ಲಿದೆ. ಮಕ್ಕಳಲ್ಲಿ  ಆತ್ಮಸ್ಥೈರ್ಯವನ್ನು ಜಾಗೃತಿಗೊಳಿಸಲು ಮತ್ತು  ಸನ್ನಡತೆ ಯನ್ನು ಕಲಿಸಲು ಶಿಕ್ಷಕರಿಗೆ ಹೇಳಿದ ಮಾತುಗಳು  ಮಕ್ಕಳ ಪೋಷಕರಿಗೂ ಅನುಕೂಲವಾದೀತು ಎಂಬ ಉದ್ಧೇಶದಿಂದ ಇಲ್ಲಿ ಪ್ರಕಟಿಸಲಾಗಿದೆ. ಉಪನ್ಯಾಸಕರಾದ ಶ್ರೀ ಶ್ರೀಕಂಠ ರಿಂದ  ದೇಶಭಕ್ತಿ ಗೀತೆಯೊಡನೆ ಆರಂಭವಾದ  ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮೋಹನ್ ಕುಮಾರ್ ವಹಿಸಿದ್ದರು. ಉಪನ್ಯಾಸದ ಮುಂಚೆ ಗಣರಾಜ್ಯೋತ್ಸವದ ಕುರಿತಂತೆ ಕನ್ನಡ, ಆಂಗ್ಲ ಮತ್ತು ಹಿಂದಿ ಭಾಷೆಗಳಲ್ಲಿ ವಿದ್ಯಾರ್ಥಿಗಳು ಉತ್ತಮವಾದ ಪ್ರಬಂಧವನ್ನು ಮಂಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. 

Wednesday, January 25, 2012

ಅಗ್ನಿಹೋತ್ರಕಳೆದ ಒಂದು ವರ್ಷದಿಂದ ಅಗ್ನಿಹೋತ್ರ  ಮಾಡುತ್ತಿರುವ ನನಗೆ ಅಗ್ನಿಹೊತ್ರವು ತುಂಬಾ ಇಷ್ಟವಾಗಲು ಅದರ ಸರಳ ಪ್ರಯೋಗ, ಮತ್ತು  ಎಲ್ಲಾ ಕ್ರಿಯೆಗಳಿಗೂ ಅರ್ಥ ತಿಳಿದು ಮಾಡುತ್ತಿರುವುದು ಸಂತೋಷವನ್ನು ಕೊಟ್ಟಿದೆ. ಮುಂದೊಂದು ದಿನ  ೧೦ ನಿಮಿಷದ ವೀಡಿಯೋ ಚಿತ್ರೀಕರಿಸಿ ಪ್ರಕಟಿಸುವೆ. 


Saturday, January 21, 2012

ಸಿರಿಭೂವಲಯ ಪರಿಚಯ ಕೃತಿಗಳ ಲೋಕಾರ್ಪಣೆ ಸಮಾರಂಭದ ದೃಶ್ಯಾವಳಿ ಮತ್ತು ಕೆಲವು ಆಡಿಯೋ ಕ್ಲಿಪ್ ಗಳು

ದಿನಾಂಕ 20.1.2012  ರಂದು ಹಾಸನದ "ಈಶಾವಾಸ್ಯಮ್" ಸಭಾಂಗಣದಲ್ಲಿ ಬಿಡುಗಡೆಯಾದ ಅತ್ಯಂತ ಪ್ರಾಚೀನ ಅಂಕಕಾವ್ಯ ಸಿರಿಭೂವಲಯ ಗ್ರಂಥದ ಪರಿಚಯ ಕೃತಿಗಳ ಸಮಾರಂಭದ ಕೆಲವು ದೃಶ್ಯಗಳು ಮತ್ತು ಕೆಲವು ಆಡಿಯೋ ಕ್ಲಿಪ್ ಗಳು ಇಲ್ಲಿವೆ. ಬರುವ ದಿನಗಳಲ್ಲಿ ಸಮಾರಂಭದಲ್ಲಿ ಮಾತನಾಡಿದ ಎಲ್ಲರ ಭಾಷಣವನ್ನೂ ಪ್ರಕಟಿಸಲಾಗುವುದು. ಇದೊಂದು ಕುತೂಹಲಕಾರಿ ವಿಷಯವಾಗಿರುವುದರಿಂದ ವೇದಸುಧೆಯ ಅಭಿಮಾನಿಗಳು ಕೃತಿಪರಿಚಯದ ಮತ್ತು ಮುಂದೆ ಪ್ರಕಟವಾಗಲಿರುವ ಕೃತಿಯ ಕರ್ತೃ ಶ್ರೀ ಸುಧಾರ್ಥಿ ಹಾಸನ ಇವರ ಮಾತುಗಳನ್ನೂ ಇಲ್ಲಿ ಕೇಳಬಹುದಾಗಿದೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತವಿದೆ. ನಿಮ್ಮ ಸಂದೇಹಗನ್ನು ಬರೆದು ವೇದಸುಧೆಗೆ ತಿಳಿಸಿದರೆ ಶ್ರೀ ಸುಧಾರ್ಥಿಯವರು ನಿಮ್ಮ ಸಂದೇಹಗಳಿಗೆ ಉತ್ತರಿಸುವರು.

ಶ್ರೀ ಕೈಪಾ ಶೇಷಾದ್ರಿ, ಶ್ರೀ ಸಿ.ಎಸ್.ಕೃಷ್ಣಸ್ವಾಮಿ,ಮತ್ತು ಶ್ರೀ ಸುಧಾರ್ಥಿ-ಹಾಸನ
ಸಭೆಯ ಮುಂದಿನಸಾಲಿನಲ್ಲಿ  ಕನ್ನಡಸಾಹಿತ್ಯ ಪರಿಷತ್    ಜಿಲ್ಲಾಧ್ಯಕ್ಷರಾದ        ಶ್ರೀ ಉದಯರವಿ, ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀ ಪ್ರಭಾಕರ್ ಕೃತಿಯ ಹಿಂದಿಯ ಅನುವಾದಕಮತ್ತು    ವಿದ್ವಾಂಸರಾದ ಶ್ರೀ ರಾಮಣ್ಣ ಶ್ರೀಮತಿ  ಶಾರದಮ್ಮನವರು

ಶ್ರೀ ರಾಮಣ್ಣ    ದಂಪತಿಗಳಿಗೆ ಸನ್ಮಾನ 

ಶ್ರೀ ಪ್ರಭಾಕರರಿಂದ ರಾಮಣ್ಣನವರ ಪರಿಚಯ 

ಪ್ರಾಧ್ಯಾಪಕರಾದ ಶ್ರೀ ನಾರಾಯಣ ಪ್ರಸಾದ್ ರಿಂದ ಕೃತಿ ಪರಿಚಯ ಶ್ರೀ ಸದಾನಂದರಿಂದ ಸಿರಿಭೂವಲಯದ ಬಗ್ಗೆ  ಅನಿಸಿಕೆ                   ಹರಿಹರಪುರ ಶ್ರೀಧರ್  ಅವರಿಂದ ಧನ್ಯವಾದ ಸಮರ್ಪಣೆ 
 

Monday, January 16, 2012

ಸಿರಿಭೂವಲಯ ಪರಿಚಯ ಕೃತಿಗಳ ಲೋಕಾರ್ಪಣೆ
ಹಾಸನಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು 
ವೇದಸುಧೆ ಅಂತರ್ಜಾಲ ತಾಣ 
ಸಂಯುಕ್ತಾಶ್ರಯದಲ್ಲಿ 


ಸುಧಾರ್ತಿ,ಹಾಸನ-ಇವರು ರಚಿಸಿರುವ 
ಸಿರಿಭೂವಲಯ ಪರಿಚಯ ಕೃತಿಗಳ ಲೋಕಾರ್ಪಣೆ 


ಸ್ಥಳ: ಈಶಾವಾಸ್ಯಂ, ಹೊಯ್ಸಳನಗರ ಮುಖ್ಯರಸ್ತೆ, ಹೊಯ್ಸಳನಗರ, ಹಾಸನ 

ದಿನಾಂಕ: 20.01.2012 ಶುಕ್ರವಾರ ಬೆಳಿಗ್ಗೆ 10.00ಕ್ಕೆ 


ಅಧ್ಯಕ್ಷತೆ
ಶ್ರೀ ಸಿ.ಎಸ್.ಕೃಷ್ಣಸ್ವಾಮಿ, ಪ್ರಾಂಶುಪಾಲರು
ಶ್ರೀರಾಮಕೃಷ್ಣ ವಿದ್ಯಾಲಯ, ಹಾಸ ನ


ಕೃತಿಗಳ ಲೋಕಾರ್ಪಣೆ:
ಡಾ. ಸುಬ್ಬುಕೃಷ್ಣ
ಸಂಶೋಧನಾಧಿಕಾರಿ.
ಭಾರತೀಯ ಭಾಷಾ ಸಂಸ್ಥಾನ, ಮೈಸೂರು.

ಕೃತಿ ಪರಿಚಯ:
ಪ್ರೊ. ನಾರಾಯಣ ಪ್ರಸಾದ್
ಪ್ರಾಧ್ಯಾಪಕರು, ಸರ್ಕಾರಿ ವಿಜ್ಞಾನ  ಮಹಾವಿದ್ಯಾಲಯ ,ಹಾಸನ 

ಪದ್ಯವಾಚನ:
ಶ್ರೀಮತಿ ಶಾರದಮ್ಮ, ಬೆಂಗಳೂರು

ಮುಖ್ಯ ಅತಿಥಿಗಳು:
ಶ್ರೀ ಮಲ್ಲಿಕಾರ್ಜುನ ಮಳಲಿ,ಎಂ.ಎ.
11111 ವಚನಗಳ ಸರದಾರ 

ಗುರುವಂದನೆ:
ವಿದ್ವಾನ್  ಎಸ.ರಾಮಣ್ಣನವರಿಗೆ

ಲೋಕಾರ್ಪನೆಯಾಗಲಿರುವ ಕೃತಿಗಳು:
                                                    1. ಸಿರಿಭೂವಲಯದ ಒಂದು ಮಿ೦ಚು ನೋಟ
                                                    2. ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತಾ 
                                                    3. ಸಿರಿಭೂವಲಯ ಕೀ ಏಕ್   ಝಾ೦ಕಿ 
                                                      [ಹಿಂದೀ ಭಾವಾನುವಾದ ವಿದ್ವಾನ್ ಶ್ರೀ ಎಸ.ರಾಮಣ್ಣ ]

ವಿಶ್ವದ ಪ್ರಾಚೀನ ಅ೦ಕ ಕಾವ್ಯ
ಸಿರಿಭೂವಲಯದ ಪರಿಚಯ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ  ವೇದಸುಧೆಯು  ಕೈ ಜೋಡಿಸಿದೆ,
 ಆಸಕ್ತ ರೆಲ್ಲರಿಗೆ ಹಾರ್ದಿಕ ಸ್ವಾಗತವಿದೆ.
----------------------------------------------------------------


ಸಿರಿಭೂವಲಯದ ಬಗೆಗೆ  ಬೇಲೂರಿನ ಡಾ. ಶ್ರೀವತ್ಸ ಎಸ್.ವಟಿ ಯವರೊಡನೆ ನಡೆದ ಸಂಭಾಷಣೆ ಇಲ್ಲಿದೆ.

--


ಶ್ರಾದ್ಧದ ಬಗೆಗೆ ವೇದದಲ್ಲಿ ಏನು ಹೇಳಿದೆ?

ಸುಧಾಕರ ಶರ್ಮರೇ ಹಾಗೆ. ವಿಷಯಗಳನ್ನು ಅತಿ ಸರಳವಾಗಿ ಅತ್ಯಂತ ದೃಢತೆಯಿಂದ ಹೇಳುತ್ತಾರೆ. ಇಂದು ಅವರು ಶ್ರಾದ್ಧ ಕರ್ಮದ ಬಗ್ಗೆ ಮಾತನಾಡಿದ್ದಾರೆ.ಕೇಳಿ. ತಲೆ ತಲಾಂತರದಿಂದ ನಡೆಸಿಕೊಂಡು ಬರುತ್ತಿರುವ ಅನೇಕ ಆಚರಣೆಗಳಿಗೆ ಅರ್ಥ ವಿಲ್ಲವೆಂದು ಗೊತ್ತಾದಾಗ ಸ್ವಲ್ಪ ಗಾಭರಿಯಾಗುತ್ತೆ. ಆದರೆ ನಮ್ಮ ಆರೋಗ್ಯಕರ ಬದುಕಿಗೆ ಅಗತ್ಯವಾದ ಸತ್ಯವಾದ ಸರಳವಾದ ವೇದದ ಮಾರ್ಗವನ್ನು ತೋರಿಸುವಾಗ ನಾವು ವಿಮರ್ಷೆಮಾಡಬೇಕಲ್ಲವೇ?


ವೇದೋಕ್ತ ವಿವಾಹ


ಈ ಲೇಖನವು ಒಂದು ವರ್ಷದ ಹಿಂದೆ ಪ್ರಕಟವಾಗಿತ್ತು. ಓದುಗರು ಈಗಲೂ ಈ ಲೇಖನವನ್ನು ಹುಡುಕಿ  ಓದುತ್ತಿರುವುದರಿಂದ ಪುನ: ಪ್ರಕಟಿಸಲಾಗಿದೆ.
-ಸಂಪಾದಕ 


ಸುಮಾರು ಎರಡು  ವರ್ಷದ ಹಿಂದಿನ ಘಟನೆ. ಅವನ ಹೆಸರು ಸುನಿಲ, ಓರ್ವ ಸ್ಫುರದ್ರೂಪಿ ಹಿಂದೂ ತರುಣ, ಹಾಸನ ಮೂಲದವನು. ಅವಳು ಒಲಿವಿಯ, ಮನಮೋಹಕ ಚೆಲುವಿನ ಕ್ರಿಶ್ಚಿಯನ್ ನವಯುವತಿ, ಮಂಗಳೂರಿನ ಕಡೆಯವಳು. ಇಬ್ಬರಿಗೂ ಪರಿಚಯವಾಯಿತು, ಮಾತುಕಥೆಗಳಾದವು, ಪ್ರೇಮಾಂಕುರವಾಯಿತು. ಮದುವೆಯಾಗಲು ನಿರ್ಧರಿಸಿದರು. ಜಾತಿ ಬೇರೆಯಾದ್ದರಿಂದ ಎರಡೂ ಮನೆಯವರು ಪ್ರಾರಂಭದಲ್ಲಿ ಒಪ್ಪದಿದ್ದರೂ ಅವರ ಧೃಢ ನಿರ್ಧಾರದಿಂದಾಗಿ ಒಪ್ಪಿಗೆ ಸಿಕ್ಕಿತು. ಸುನಿಲನಪೂರ್ಣ ಸರಿಹೊಂದಿಸುಇಚ್ಛೆಯಂತೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಒಲಿವಿಯ ಸಮ್ಮತಿಸಿದಳು.

ವೇದೋಕ್ತ ರೀತಿಯಲ್ಲಿ ಮದುವೆಯಾಗಲು ನಿರ್ಧರಿಸಿ ಬೆಂಗಳೂರಿನ ವೇದಾಧ್ಯಾಯಿ ಸುಧಾಕರ ಶರ್ಮರನ್ನು ಭೇಟಿಯಾದರು. ಅವರು ಒಲಿವಿಯಳನ್ನು ಆಕೆ ಇನ್ನುಮುಂದೆ ಸುನಿಲನಂತೆ ಸಸ್ಯಾಹಾರಿಯಾಗಿರಲು ಸಾಧ್ಯವೇ ಎಂದು ವಿಚಾರಿಸಿದರು. ಆಕೆಗೆ ತಕ್ಷಣಕ್ಕೆ ಉತ್ತರಿಸಲಾಗಲಿಲ್ಲ. ಶರ್ಮರು ಹೇಳಿದರು -"ಆಹಾರ ಪದ್ಧತಿ ಬದಲಾಯಿಸಲು ನನ್ನ ಒತ್ತಾಯವಿಲ್ಲ. ಆದರೆ ಸಸ್ಯಾಹಾರಿಯಾಗಲು ನಿರ್ಧರಿಸಿದರೆ ಮಾತ್ರ ನಾನು ಮದುವೆ ಮಾಡಿಸುವೆ. ಇಲ್ಲದಿದ್ದರೆ ಬೇರೆಯವರ ಮಾರ್ಗದರ್ಶನದಲ್ಲಿ ಮದುವೆಯಾಗಬಹುದು. ನಿರ್ಧಾರವನ್ನು ಈ ಕೂಡಲೇ ತೆಗೆದುಕೊಳ್ಳಬೇಕಿಲ್ಲ. ನಿಧಾನವಾಗಿ ಯೋಚಿಸಿದ ನಂತರದಲ್ಲಿ ತಿಳಿಸಿ". ನಂತರ ತಿಳಿಸುವುದಾಗಿ ಹೋದ ಅವರು ಕೆಲವು ದಿನಗಳ ನಂತರ ಮತ್ತೆ ಬಂದು ಶರ್ಮರನ್ನು ಭೇಟಿ ಮಾಡಿದರು. ಒಲಿವಿಯ ಇನ್ನುಮುಂದೆ ಸಸ್ಯಾಹಾರಿಯಾಗಿರಲು ನಿರ್ಧರಿಸಿದ್ದಳು.  ಹಾಸನದ ಸುವರ್ಣ ರೀಜೆನ್ಸಿ ಹೋಟೆಲಿನ ಪಾರ್ಟಿಹಾಲಿನಲ್ಲಿ ವೇದೋಕ್ತ ರೀತಿಯಲ್ಲಿ ಮದುವೆಗೆ ವೇದಿಕೆ ಸಜ್ಜಾಯಿತು. ಸಭಾಭವನ ಬಂಧು-ಮಿತ್ರರೊಂದಿಗೆ ತುಂಬಿತ್ತು. ನನಗೆ ಅವರ ಪರಿಚಯವಿಲ್ಲದಿದ್ದರೂ ಶ್ರೀ ಸುಧಾಕರ ಶರ್ಮರವರಿಂದ ವಿಷಯ ತಿಳಿದ ನಾನು ಅಂತರ್ಜಾತೀಯ ಹಾಗೂ ವೇದೋಕ್ತ ರೀತಿಯ ವಿವಾಹ ಹೇಗಿರುತ್ತದೆ ಎಂದು ತಿಳಿಯುವ ಕುತೂಹಲದಿಂದ ಆ ವಿವಾಹಕ್ಕೆ ನಾನೂ ಸಾಕ್ಷಿಯಾದೆ. ಮದುವೆ ಗಂಡು ಸುನಿಲ ಪಂಚೆ-ಶಲ್ಯ ಹೊದ್ದು ಸಿದ್ಧನಾಗಿದ್ದ. ಬಾಬ್ ಕಟ್ಟಿನ ಹುಡುಗಿ ಒಲಿವಿಯ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದಳು. ಅವರ ಜೋಡಿ ಹೇಳಿ ಮಾಡಿಸಿದಂತಿತ್ತು.

ಪ್ರಾರಂಭದಲ್ಲಿ ಶ್ರೀ ಶರ್ಮರು ದೇವರು ಮತ್ತು ಜಾತಿ ಕುರಿತು ನೀಡಿದ ವಿವರಣೆ ಮನ ಮುಟ್ಟುವಂತಿತ್ತು. ದೇವರು ಎಲ್ಲಾ ಜೀವಿಗಳಿಗೂ ಒಬ್ಬನೇ, ಬೇರೆ ಬೇರೆ ಜಾತಿಗಳವರಿಗೆ ಬೇರೆ ಬೇರೆ ದೇವರಿಲ್ಲ, ಅಲ್ಲದೆ ಮನುಷ್ಯರಿಗೆ, ಪ್ರಾಣಿಗಳಿಗೆ, ಗಿಡ-ಮರಗಳಿಗೆ ಪ್ರತ್ಯೇಕ ದೇವರುಗಳಿಲ್ಲವೆಂದ ಅವರು ಜಾತಿಗಳ ಸೃಷ್ಟಿ ಮನುಷ್ಯರು ಮಾಡಿಕೊಂಡದ್ದು ಎಂದರು. ಮದುವೆಯ ನಿಜವಾದ ಅರ್ಥವನ್ನು ವಿವರಿಸಿದ ಅವರು ಮದುವೆ ಅನ್ನುವುದು ಸುಖದಾಂಪತ್ಯ ನಡೆಸಲು ಬೇಕಾದ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಂಸ್ಕಾರ, ಮಾರ್ಗದರ್ಶನ ನೀಡುವ ಸರಳ ಸಮಾರಂಭ ಎಂದರು. ವೇದೋಕ್ತ ರೀತಿಯ ವಿವಾಹ ವಿಧಿಯಲ್ಲಿ ಭಗವಂತನ ಪ್ರಾರ್ಥನೆ, ಪಾಣಿಗ್ರಹಣ, ಯಜ್ಞ, ಪ್ರತಿಜ್ಞಾಮಂತ್ರ ಪಠಣ, ಲಾಜಾಹೋಮ. ಸಪ್ತಪದಿ ಮತ್ತು ಆಶೀರ್ವಾದಗಳು ಒಳಗೊಂಡಿರುತ್ತವೆ ಎಂದರು. ಬೆಂಗಳೂರಿನ ಕೃಷ್ಣಮೂರ್ತಿಯವರು ಪುರೋಹಿತರಾಗಿ ಕಾರ್ಯ ನಿರ್ವಹಿಸಿದರು. ಆ ಪುರೋಹಿತರು ಇತರ ಪುರೋಹಿತರಂತೆ ಇರದೆ, ಪಂಚೆ, ಜುಬ್ಬಾ ಮತ್ತು ಹೆಗಲ ಮೇಲೆ ಒಂದು ವಸ್ತ್ರ ಹಾಕಿಕೊಂಡಿದ್ದರು. ನಾವು ಸಾಮಾನ್ಯವಾಗಿ ನೋಡುವ ಮದುವೆಗಳಲ್ಲಿ ಪುರೋಹಿತರು ಅವರ ಪಾಡಿಗೆ ಅವರು ಮಂತ್ರಗಳನ್ನು ಹೇಳುತ್ತಿದ್ದರೆ ಅದನ್ನು ಬೇರೆಯವರು ಇರಲಿ, ಮದುವೆಯಾಗುವ ಗಂಡೂ-ಹೆಣ್ಣೂ ಸಹ ಅದನ್ನು ಕೇಳುವುದಿಲ್ಲ, ಮಂತ್ರದ ಅರ್ಥವೂ ಅವರಿಗೆ ಗೊತ್ತಿರುವುದಿಲ್ಲ, ಹೇಳುವ ಪುರೋಹಿತರಿಗೂ ತಿಳಿದಿರುತ್ತೋ ಇಲ್ಲವೋ!


ಪುರೋಹಿತರು ಮಂತ್ರಗಳನ್ನು ಹೇಳುತ್ತಿದ್ದರೆ ಅದರ ಅರ್ಥವನ್ನು ಕನ್ನಡದಲ್ಲಿ ಶರ್ಮರವರು ವಿವರಿಸಿ ಹೇಳುತ್ತಿದ್ದರು. ಮದುವೆಯ ವಿಧಿ-ವಿಧಾನಗಳ ನಿಜವಾದ ಪರಿಚಯ ಎಲ್ಲರಿಗೂ ಆದದ್ದು ವಿಶೇಷ. ಒಲಿವಿಯ ಸಸ್ಯಾಹಾರಿಯಾಗಿರಲು ನಿರ್ಧರಿಸಿದ ವಿಷಯ ಘೋಷಿಸಲಾಯಿತು. ವಧೂವರರು ಪೂರ್ಣ ಆಸಕ್ತಿಯಿಂದ ಕಲಾಪದಲ್ಲಿ ಭಾಗಿಯಾದರು, ನಾವೂ ಅಂತಹ ವಿಶೇಷವನ್ನು ಕಂಡು ಸಂತೋಷಿಸಿದೆವು. ವರನಿಂದ "ಜ್ಞಾನಪೂರ್ವಕವಾಗಿ ನಾನು ನಿನ್ನ ಕೈ ಹಿಡಿಯುತ್ತಿದ್ದೇನೆ, ನೀನೂ ಅಷ್ಟೆ. ನಾವಿಬ್ಬರೂ ಪ್ರಸನ್ನರಾಗಿ ಬಾಳೋಣ, ಉತ್ತಮ ಸಂತತಿಯನ್ನು ಪಡೆಯೋಣ. ಮುಪ್ಪಿನ ಕಾಲದವರೆಗೂ ಜೊತೆಯಾಗಿರೋಣ, ಪರಸ್ಪರ ಸುಪ್ರಸನ್ನರೂ, ಪರಸ್ಪರರಲ್ಲೇ ಆಸಕ್ತರೂ ಆಗಿ, ನೂರು ವರ್ಷಗಳ ಕಾಲ ಪ್ರೇಮದಿಂದ, ಆನಂದದಿಂದ, ಪ್ರಿಯವಚನಗಳನ್ನೇ ಆಡುತ್ತಾ ಬಾಳೋಣ" ಎಂಬ ಪ್ರತಿಜ್ಞಾ ವಚನ ಘೋಷಣೆ ಮಾಡಿಸಲಾಯಿತು. ಪ್ರತಿಯಾಗಿ ವಧುವೂ ಉತ್ತರವಾಗಿ ತನ್ನ ಬದ್ಧತೆಯನ್ನು ಘೋಷಿಸಿದಳು.ಸಪ್ತಪದಿಯ ಮಹತ್ವ ತಿಳಿಸಿ ನೆರವೇರಿಸಲಾಯಿತು. ಅನ್ನಾಹಾರಗಳ, ಇಚ್ಛಾಶಕ್ತಿಗಳ ಸಲುವಾಗಿ ಮೊದಲ ಜೋಡಿಹೆಜ್ಜೆ, ಬಲ, ಆರೋಗ್ಯಗಳ ಸಲುವಾಗಿ ಎರಡನೆಯ ಜೋಡಿಹೆಜ್ಜೆ, ಸಾಧನ-ಸಂಪತ್ತಿನ ಸಲುವಾಗಿ ಮೂರನೆಯ ಜೋಡಿಹೆಜ್ಜೆ, ಸುಖ-ಆನಂದಗಳಿಗಾಗಿ ನಾಲ್ಕನೆಯ ಜೋಡಿಹೆಜ್ಜೆ, ಉತ್ತಮ ಸಂತಾನಕ್ಕಾಗಿ ಐದನೆಯ ಜೋಡಿಹೆಜ್ಜೆ, ನಿಯಮಿತ ಜೀವನಕ್ಕಾಗಿ ಆರನೆಯ ಜೋಡಿಹೆಜ್ಜೆ ಮತ್ತು ಸ್ನೇಹಕ್ಕಾಗಿ ಏಳನೆಯ ಜೋಡಿಹೆಜ್ಜೆಗಳನ್ನಿರಿಸಿದ ನಂತರ ವಧೂವರರು ದಂಪತಿಗಳೆನಿಸಿದರು. ಬಂದವರು ಮನಃಪೂರ್ವಕವಾಗಿ ದಂಪತಿಗಳಿಗೆ ಶುಭ ಹಾರೈಸಿದರು. ಈ ಸಮಾರಂಭ ವೀಕ್ಷಿಸಿದ ನನಗೆ ಎಲ್ಲರೂ ಈರೀತಿ ಅರ್ಥಪೂರ್ಣ ಸಂಸ್ಕಾರ ಪಡೆಯುವ ವಿವಾಹಗಳನ್ನು ನಡೆಸಿದರೆ ಎಷ್ಟು ಚೆನ್ನ ಎಂದು ಅನ್ನಿಸಿತು. ಆ ಸಂದರ್ಭದಲ್ಲಿ ತೆಗೆದಿದ್ದ ಕೆಲವು ಫೋಟೋಗಳನ್ನು ನೋಡುತ್ತಿದ್ದಾಗ ನೆನಪು ಮರುಕಳಿಸಿತು, ಈ ಲೇಖನವಾಗಿ ಹೊರಬಂದಿತು.
*************************
-ಕ.ವೆಂ.ನಾಗರಾಜ್. 

ಶ್ರಾದ್ಧ ....................ಒಂದಷ್ಟು ಹರಟೆ


      ಹುಟ್ಟು ಅಂದಮೇಲೆ  ಸಾವು ನಿಶ್ಚಿತ. ಹುಟ್ಟಿನೊಂದಿಗೆ ಪ್ರಾರಂಭವಾಗುವ ಜೀವನ ಯಾತ್ರೆ  ಮರಣದೊಂದಿಗೆ  ಮುಗಿಯುತ್ತವೆ. ಅಂತ್ಯಸಂಸ್ಕಾರ ನಡೆಯುತ್ತವೆ . ನಂತರದಲ್ಲಿ  ಮೃತ ವ್ಯಕ್ತಿಗೆ ಹಲವಾರು ಸಂಸ್ಕಾರಗಳು ನಡೆಯುತ್ತವೆ. ಸತ್ತ ದಿನದಿಂದ ಹದಿನಾಲ್ಕು ದಿನಗಳವರೆಗೆ ಹಲವಾರು  ರೀತಿಯ ಕರ್ಮಗಳನ್ನು ಅವರವರ ಪದ್ದತಿಗನುಸಾರವಾಗಿ ಮತ್ತು ಸಂಪ್ರದಾಯದಂತೆ ಮಾಡುತ್ತಾರೆ. ಮೃತ ವ್ಯಕ್ತಿಯ ಮಕ್ಕಳು ಸಾಮಾನ್ಯವಾಗಿ ಈ ಕರ್ಮವನ್ನು ಮಾಡುತ್ತಾರೆ.ನಂತರದಲ್ಲಿ ಪ್ರತಿ ವರ್ಷ ಮೃತರ ನೆನಪಿನಲ್ಲಿ ಶ್ರಾದ್ಧ  ಕರ್ಮಅಥವಾ ತಿಥಿ ಎಂಬ  ಹೆಸರಿನಲ್ಲಿ  ಆಚರಣೆ ಮಾಡುವುದು ರೂಡಿಯಲ್ಲಿದೆ.
                                  ಈ ದೇಹಕ್ಕೆ ಅಂತ್ಯ ಸಂಸ್ಕಾರವಾದ ಮೇಲೆ ಶ್ರಾದ್ಧ  ಅಥವಾ ತಿಥಿ ಎನ್ನುವ ಕರ್ಮ ಬೇಕೇ? ಏಕೆ ಬೇಕು? ಅಂತ್ಯವಾದ ಮೇಲೆ ಶ್ರಾದ್ಧ  ಯಾರಿಗೆ? ಇದರ ಅವಶ್ಯಕತೆ ಏನು? ಎಂದು  ಹಲವರು  ಪ್ರಶ್ನೆ ಮಾಡುತ್ತಾರೆ . ಇನ್ನು ಹಲವರು "ವ್ಯಕ್ತಿ ಜೀವಂತ ಇದ್ದಾಗ ಅವರನ್ನು ಚೆನ್ನಾಗಿ ನೋಡಿಕೊಳ್ಳದೆ, ಗೊಳುಹಾಕಿ ಕೊಂಡು ಸತ್ತ ನಂತರ ನೂರಾರು ಜನರಿಗೆ ಊಟ ಹಾಕಿದರೇನು ಬಂತು?  ಇರುವಷ್ಟು ದಿನ ತಂದೆ ತಾಯಿಯನ್ನು ಪ್ರೀತಿಯಿಂದ ನೋಡಿಕೊಂಡು ಅವರ ಬೇಕುಬೇಡಗಳನ್ನು ಒದಗಿಸಿದರೆ ಸಾಕು. ಸತ್ತ ನಂತರ ತಿಥಿ ಮಾಡದಿದ್ದರೂ ಪರವಾಗಿಲ್ಲ." ಎನ್ನುತ್ತಾರೆ. ಮತ್ತೆ ಕೆಲವರು "ನಮ್ಮ ಹಿರಿಯರು ನಡೆಸಿಕೊಂಡು ಬಂದ ಆಚಾರ ವಿಚಾರ, ಸುಮ್ಮನೆ ಮಾಡಿರುವುದಿಲ್ಲ. ಇದನ್ನು ಏಕೆ ತಪ್ಪಿಸಬೇಕು? ಇಂತಹ ಒಂದು ಆಚರಣೆ ಶ್ರಾದ್ಧ .      ಹಿರಿಯರ  ನೆನಪಿನಲ್ಲಿ ಒಂದು ದಿನ ತಿಥಿ ಆಚರಣೆ ಅವಶ್ಯಕ." ಎಂದು ವಾದಿಸುತ್ತಾರೆ.        " ಸಮಾಜದಲ್ಲಿ ಬದುಕಿರುವಾಗ ಕೆಲವು ಆಚರಣೆಗಳು ಅನಿವಾರ್ಯ. ಎಲ್ಲರು ತಿಥಿ ಆಚರಣೆಯನ್ನು ಮಾಡುವಾಗ ನಾವೊಬ್ಬರು ಮಾಡುವುದಿಲ್ಲ ಎನ್ನಲು ಸಾಧ್ಯವೇ? ಆದ್ದರಿಂದ ನಾವು ಮಾಡುತ್ತವೆ." ಎಂದು ಕೆಲವರು ಸಮಜಾಯಿಷಿ ಕೊಡುತ್ತಾರೆ.   ಹೀಗೆ ಹಲವಾರು  ಅಭಿಪ್ರಾಯಗಳು ಇವೆ.
                             ಇನ್ನು ವಾರ್ಷಿಕವಾಗಿ ಮಾಡುವ ತಿಥಿಯ ಸಂದರ್ಭದಲ್ಲಿ ಹಲವಾರು ರೀತಿಯ  ಆಚಾರಗಳು ಇವೆ.  ಕೆಲವಕ್ಕೆ ಅರ್ಥವಿಲ್ಲ, ಕೆಲವು ಅತಿರೇಕ ಮತ್ತೆ ಕೆಲವು  ಸಂಬಂಧವಿಲ್ಲದ ರೀತಿಯಲ್ಲಿ ಇರುತ್ತವೆ.  ಇದಕ್ಕೆ ಯಾವುದೇ ರೀತಿಯ ವಿವರಣೆ ಸ್ಪಷ್ಟವಾಗಿ ಗೊತ್ತಿರುವುದಿಲ್ಲ  ಆದರೂ  ನಮ್ಮ ಹಿರಿಯರು ಮಾಡಿದರು ಎನ್ನುವ ಒಂದೇ ಕಾರಣಕ್ಕೆ ಇವರು ಮಾಡುತ್ತಿರುತ್ತಾರೆ. ಇಂತಹ ವ್ಯಕ್ತಿಗಳಿಗೆ ಮಾಡುವ ಕರ್ಮದಲ್ಲಿ ವಿಶ್ವಾಸ ಮತ್ತು  ಶ್ರದ್ಧೆಗಿಂತ ಭಯ ಜಾಸ್ತಿ ಇರುತ್ತದೆ.  ನಾನು ತಿಥಿ ಮಾಡದಿದ್ದರೆ ಏನೋ ಆಗಿಬಿಡಬಹುದೆಂಬ ಭಯ ಇವರನ್ನು ಕಾಡುತ್ತದೆ. ಒಂದು ಚಿಕ್ಕ ವ್ಯತ್ಯಾಸವನ್ನು ಇವರು ಸಹಿಸುವುದಿಲ್ಲ ಅಥವಾ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಇಂತಹ  ಕರ್ಮಗಳಲ್ಲಿ ಶ್ರದ್ಧೆಗಿಂತ ಹೆಚ್ಚು ಅಂಧ ವಿಶ್ವಾಸ ಜಾಸ್ತಿಯಾಗಿರುತ್ತದೆ. ಇಂತಹ ಹಿರಿಯರ ತಿಥಿಯ ದಿನವನ್ನು ಕೆಲವು ಸಂಪ್ರದಾಯದಲ್ಲಿ ಹಬ್ಬವನ್ನಾಗಿ ಆಚರಿಸುವುದಿಲ್ಲ  . ಉದಾಹರಣೆಗೆ,  ಅಂದು ಮನೆಯ ಮುಂದೆ ರಂಗೋಲಿ ಇಡದೆ, ಮನೆಯ ಹೆಂಗಸರು ಕುಂಕುಮ ಇಡದೆ ಶ್ರಾದ್ಧ  ಕಾರ್ಯ ಮುಗಿಯುವವರೆಗೂ ಕಾಯುತ್ತಾರೆ. ದೇವರಪೂಜ ಸಮಯದಲ್ಲಿ ಘಂಟಾನಾದವನ್ನು ಕೂಡ ಮಾಡುವುದಿಲ್ಲ.       ಇಂತಹ ಕ್ರಿಯೆಗಳಿಗೆ ಕೊಡುವ ಕಾರಣಗಳು ಅಸಂಬದ್ದವಾಗಿರುತ್ತವೆ.    ಇದು ಏನೇ ಇದ್ದರೂ ಹಿರಿಯರ ನೆನಪಿನಲ್ಲಿ ಮಾಡುವ ತಿಥಿ ಅಥವಾ ಶ್ರಾದ್ಧ  ಮಾತ್ರ ಅನಾದಿಕಾಲದಿಂದಲೂ ನಡೆಯುತ್ತಾ ಬಂದಿದೆ.
                            ಬದುಕಿರುವಾಗ ನಮ್ಮ ಹಿರಿಯರಿಗೆ ತೋರಿಸುವ ಗೌರವ, ನೀಡುವ ಸಹಕಾರ, ಮಾಡುವ ಉಪಚಾರ ಮತ್ತು ನಿರ್ವಹಿಸುವ ಕರ್ತವ್ಯ ಇವೆಲ್ಲವೂ ಬೌತಿಕ ಕ್ರಿಯೆಗಳು. ಈ ಕರ್ತವ್ಯದಿಂದ ನಮ್ಮ ಗುಣಗಳನ್ನು ದೃಢ ಗೊಳಿಸಿಕೊಂಡಾಗ  ವ್ಯಕ್ತಿಗತವಾಗಿ ನಮಗೆ ಸಂತೋಷ,ಸಂತೃಪ್ತಿ ಮತ್ತು  ಸಮಾಧಾನ ಸಿಗುತ್ತದೆ. ಆದರೆ, ಆ ವ್ಯಕ್ತಿ ಮೃತರಾದಾಗ ನಮ್ಮ ದುಃಖವನ್ನು ಸಮಾಧಾನ ಮಾಡಿಕೊಳ್ಳಲು, ಮೃತವ್ಯಕ್ತಿಯ ಸ್ಮರಣೆಯಲ್ಲಿ ಕೃತಜ್ಞತೆಯಿಂದ ಸ್ಮರಿಸುವ ಸಂಸ್ಕಾರಕ್ಕೆ ಶ್ರಾದ್ಧ ಎಂದು ಕರೆಯುತ್ತಾರೆ. ಇಂತಹ ಸಂದರ್ಭದಲ್ಲಿ ಮೃತ ವ್ಯಕ್ತಿಯ ಇಷ್ಟ  ಬಂಧು ಮಿತ್ರರನ್ನು , ಆಹ್ವಾನಿಸಿ ಭೋಜನ ಮತ್ತು ಯಥಾನುಶಕ್ತಿ ದಾನವನ್ನು ಮಾಡುತ್ತಾರೆ. ಈ ಸಂಸ್ಕಾರ ಮಾಡಲು ಸತ್ವಶುದ್ದಿ ಮತ್ತು ಚಿತ್ತಶುದ್ದಿ ಎರಡು ಬೇಕಾಗುತ್ತದೆ. ಈ ಎರಡು ಶುದ್ದಿ ಲಭ್ಯವಾಗಲು ರಜಸ್ತಮೂ ಗುಣದಿಂದ ಸಾತ್ವಿಕ ಗುಣದತ್ತ ಮನಸ್ಸು ಕೊಡಬೇಕಾಗುತ್ತದೆ. ಆಗ ಪ್ರೀತಿ,ಪ್ರೇಮ,ಸತ್ಯ, ಗೌರವ, ಕೃತಜ್ಞತಾ ಭಾವಗಳು ಹತ್ತಿರ ಸುಳಿಯುತ್ತವೆ. ಆಗ ಮನಸ್ಸು ಪುಟವಾಗುತ್ತದೆ. ಪುಟವಾದ ಮನಸ್ಸು ವಿಶಾಲವಾಗಿ ಜಗತ್ತನ್ನು ನೋಡುತ್ತದೆ.
                           "ಶ್ರದ್ಧಯಾ ಇದಂ ಕರ್ಮ ಅನುಷ್ಟೀಯತೆ ಇತಿ ಶ್ರಾದ್ಧಂ."  ಅತ್ಯಂತ ಶ್ರದ್ಧೆಯಿಂದ ಆಚರಿಸುವ ಶ್ರಾದ್ಧ ಕರ್ಮವನ್ನು   ಕರ್ತವ್ಯ ಎಂದು ಹೇಳಲಾಗಿದೆ. ನಮ್ಮ ಜನ್ಮಕ್ಕೆ ಕಾರಣರಾದ, ನಮ್ಮ ಸರ್ವತೋಮುಖ ಬೆಳವಣಿಗೆಗೆ ಮತ್ತು ನಮ್ಮ ಪುರೋಭಿವೃದ್ದಿಗೆ ಕಾರಣಕರ್ತರಾದ ನಮ್ಮ ತಂದೆ ತಾಯಿ,ಹಿರಿಯರು, ಗುರುಗಳು,ಕುಟುಂಬದ ಸದಸ್ಯರು, ಬಂಧು ಬಾಂಧವರು ಮತ್ತು ಸ್ನೇಹಿತರು ಇವರುಗಳನ್ನು ಮರೆಯದೆ ಕೃತಜ್ಞತೆಯಿಂದ ನೆನೆಯುತ್ತ ಪ್ರತಿವರ್ಷವು ಆಚರಿಸುವ ಸಾಂಕೇತಿಕ ಕರ್ಮವೆ ಶ್ರಾದ್ಧ  ಅಥವಾ ತಿಥಿ.  ಶ್ರದ್ಧೆ ಮತ್ತು ಅಚಲ ವಿಶ್ವಾಸ ಇಂತಹ  ಕರ್ಮಕ್ಕೆ ಬೇಕಾದ ಎರಡು ಮುಖ್ಯ ಅಂಶಗಳು. ಈ ಎರಡು ಭಾವನೆ  ಕ್ರಿಯೆಯಲ್ಲಿರಬೇಕಾಗುತ್ತದೆ. ನಮ್ಮ ಅಂತಃಕರಣ ಭಾವನೆಗಳಾದ ಭಕ್ತಿ, ಪ್ರೀತಿ, ಗೌರವ ಮತ್ತು ಕೃತಜ್ಞತೆಗಳನ್ನು  ವ್ಯಕ್ತ ಪಡಿಸುವ ಕ್ರಿಯೆಗಳು ಧನ್ಯತಾ ಭಾವದಿಂದ  ನಡೆಸಿದರೆ ಹೆಚ್ಚು ಪ್ರಯೋಜನ. ಈ ಭಾವನೆಗಳು ಹುಟ್ಟಬೇಕಾದರೆ ನಾವು ಮಾಡುವ ಪ್ರತಿ ಕಾರ್ಯಗಳ ಜೊತೆಗೆ ಹೇಳುವ ಮಾತುಗಳು, ಮಂತ್ರಗಳು, ನಡವಳಿಕೆಗಳು, ಆಚಾರಗಳು ಇತ್ಯಾದಿಗಳ ಅರ್ಥ ತಿಳಿದು ಮಾಡಿದರೆ ಹೆಚ್ಚು ಅರ್ಥಪೂರ್ಣವಾಗಿ ಇರುತ್ತದೆ. ಆಗ ನಮ್ಮ ಭಾವನೆಗಳು ಇನ್ನಷ್ಟು ದೃಢಗೊಳ್ಳುತ್ತವೆ. ಧನ್ಯತೆಯು ಪವಿತ್ರ ಭಾವನೆಗಳಾಗಿ ಕರ್ತೃವಿಗೆ ಅಪೂರ್ವವಾದ ದೈವಿಕಾನಂದ ಸಿಗುತ್ತದೆ.
                            "A well performed ritual is work of art by which even a sceptical spectator will get a kick. it will give a enduring and lingering satisfaction to  both"---Aldous Huxley.      
                             ನಾವು ಮಾಡುವ ಕರ್ಮಗಳ ಅರ್ಥ ತಿಳಿದು ಮಾಡೋಣ. ಹಿರಿಯರು ಕಂಡುಕೊಂಡ ಆದರ್ಶ ಮತ್ತು ಇರಿಸಿದ್ದ ವಿಶ್ವಾಸ ಇವೆರಡನ್ನೂ ಕಾಪಾಡುವ ಸಂಕಲ್ಪ ಮಾಡಿ ನಮ್ಮ ಮುಂದಿನ ಪೀಳಿಗೆಗೆ ಇಂತಹ ಉದಾತ್ತ ವಿಚಾರಗಳನ್ನು ಉಳಿಸಿ ಬೆಳೆಸ ಬೇಕಾದ ಗುರುತರವಾದ ಜವಾಬ್ದಾರಿ ಎಲ್ಲರ ಮೇಲೂ ಇದೆ. ಇದು ನಮ್ಮ ಮನೆಯಿಂದಲೇ ಪ್ರಾರಂಭಗೊಳ್ಳಲಿ.
                               ಸಕಲ ಓದುಗರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

ಹೆಚ್.ಏನ್ ಪ್ರಕಾಶ್ 

  1. ಶ್ರಾದ್ಧದ ವಿಚಾರದಲ್ಲಿ ಅಂಧಾನುಕರಣೆಯೇ ಹೆಚ್ಚು. ಶ್ರಾದ್ಧಕ್ಕೆ ತಿಥಿ,ವೈದೀಕ, ಎಂದೆಲ್ಲಾ ಅದು ಹೇಗೆ ಅರ್ಥೈಸಿದರೋ ಆ ದೇವರೇ ಬಲ್ಲ. ಸತ್ತಾಗ ಪಂಚಭೂತಗಳಲ್ಲಿ ಲೀನ ಮಾಡುವುದಕ್ಕೆ ಸುಡುವುದೇ ಹೆಚ್ಚು ಸೂಕ್ತ. ಕೆಲವರು ಭೂಮಿಯಲ್ಲಿ ಹೂಳುತ್ತಾರೆ. ಹೂಳುವುದರಿಂದ ಮೃತಶರೀರವು ಪಂಚಭೂತಗಳಲ್ಲಿ ಲೀನವಾಗಲು ಬಹುಕಾಲ ಹಿಡಿಯಬಹುದು. ಸತ್ತಾಗ ಮಾಡಬೇಕಾದ್ದು ಇಷ್ಟೆ. ಮೃತಶರೀರವನ್ನು ಸರಿಯಾಗಿ ಅಂತ್ಯ ಸಂಸ್ಕಾರ ಮಾಡದಿದ್ದರೆ ಮೃತಶರೀರವನ್ನು ನಾಯಿ ನರಿ ಕಿತ್ತು ತಿನ್ನುವ ದೃಶ್ಯವನ್ನು ಕೊನೆಯ ಕ್ಷಣದವರೆಗೂ ಜೊತೆಯಲ್ಲಿರುವ ಮಕ್ಕಳಿಗೆ ನೋಡಲು ಸಾಧ್ಯವಿಲ್ಲ. ಮೃತದೇಹವು ಅವರ ಕಣ್ಣೆದುರಿಗೆ ಉರಿದು ಬಸ್ಮ ವಾದರೆ ಸತ್ತ ವ್ಯಕ್ತಿಯ ಅಂತಿಮ ಕರ್ತವ್ಯ ನಿರ್ವಹಿಸಿದ ಸಮಾಧಾನ ಮಕ್ಕಳಿಗಿರುತ್ತದೆ. ಅಷ್ಟೆ. ಮುಂದಿನ ಕರ್ಮಗಳೆಲ್ಲಾ ಹಿಂದಿನವರು ಮಾಡಿದರು. ಇಂದಿನವರು ಮಾಡುತ್ತಿದ್ದಾರೆ. ಇದನ್ನು ನೋಡಿ ಮುಂದಿನವರೂ ಮಾಡುತ್ತಾರೆ. ಸತ್ತವರ ಸ್ಮರಣೆಗಾಗಿ ನಾಲ್ಕು ಜನರಿಗೆ ಊಟ ಹಾಕಬಹುದಷ್ಟೆ. ಉಳಿದದ್ದೆಲ್ಲಾ ಇವತ್ತಿನ ಹುಡುಗರ ಮಾತಿನಲ್ಲಿ ಹೇಳಬೇಕೆಂದರೆ ಬರೀ ವೋಳು.

Thursday, January 12, 2012

ವಿವೇಕ ಚೂಡಾಮಣಿ-ಭಾಗ-೧೮मूलम् = ಮೂಲ

स्वामिन्नमस्ते नतलोकबन्धो 
करुण्यसिन्धो पतितं भवाब्धौ ।
मामुद्धरात्मीयकटाक्षदृष्ट्या 
ऋज्व्याऽतिकारुण्यसुधाभिवृष्ट्या ॥೩೬||

ಸ್ವಾಮಿನ್ನಮಸ್ತೇ ನತಲೋಕ ಬಂಧೋ
ಕಾರುಣ್ಯಸಿಂಧೋ ಪತಿತಂ ಭವಾಬ್ಧೌ  |
ಮಾಮುದ್ಧರಾತ್ಮೀಯ-ಕಟಾಕ್ಷದೃಷ್ಟ್ಯಾ
ಋಜ್ವ್ಯಾಽತಿಕಾರುಣ್ಯ-ಸುಧಾಭಿವೃಷ್ಟ್ಯಾ || ೩೬||

ಪ್ರತಿಪದಾರ್ಥ:

(ನತಲೋಕಬಂಧೋ =ನಮಿಸುತ್ತಿರುವ ಜನರ ಬಂಧುವೆ, ಕಾರುಣ್ಯ ಸಿಂಧೋ = ಕರುಣಾಸಾಗರನೆ, ಸ್ವಾಮಿನ್ = ಸ್ವಾಮಿಯೆ-ಗುರುವೆ, ತೇ =ನಿನಗೆ, ನಮಃ= ನಮನಗಳು ;  ಭವಾಬ್ಧೌ =ಸಂಸಾರಸಾಗರದಲ್ಲಿ , ಪತಿತಂ = ಬಿದ್ದಿರುವ-ನೊಂದಿರುವ, ಮಾಂ- ನನ್ನನ್ನು, ಋಜ್ವ್ಯಾ = ಸರಳವಾದ-ಒಳ್ಳೆಯದಾದ, ಅತಿಕಾರುಣ್ಯ -ಸುಧಾಭಿವೃಷ್ಟ್ಯಾ = ಕರುಣೆಯೆಂಬ ಅಮೃತವನ್ನು ಸುರಿಸುತ್ತಿರುವ, ಆತ್ಮೀಯ-ಕಟಾಕ್ಷ-ದೃಷ್ಟ್ಯಾ = ನಿನ್ನ ಅನುಗ್ರಹದ ದೃಷ್ಟಿಯಿಂದ, ಉದ್ಧರ = ಉಧ್ಧಾರಮಾಡು. )

ತಾತ್ಪರ್ಯ :

ನಮಿಸುತ್ತಿರುವ ಜನಗಳ ಬಂಧುವೂ ಕರುಣಾಸಾಗರನೂ ಆದ ಗುರುವೇ ನಿನಗೆ ನಮಸ್ಕಾರವು. ಸಂಸಾರಸಾಗರದಲ್ಲಿ ಬಿದ್ದು ಭ್ರಮೆಗೊಳಗಾಗಿರುವ ನನ್ನನ್ನು ನಿನ್ನ ಕರುಣಾಮೃತವನ್ನು ಸುರಿಸುತ್ತಿರುವ ಕಣ್ಣುಗಳಿಂದ ದಿಟ್ಟಿಸಿ- ಅನುಗ್ರಹಿಸಿ ಉದ್ಧಾರಮಾಡು.

ವಿವರಣೆ:

ಜ್ಞಾನಾರ್ಥಿಯು ಬ್ರಹ್ಮದ ಅರಿವನ್ನು ಪಡೆಯುವ ವಿಷಯವನ್ನು ಮತ್ತು ಪರಿಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಬ್ರಹ್ಮಜ್ಞಾನಿಯಾದ ಗುರುವಿನ ಬಳಿಸಾರಿಬೇಕು ಎಂದು ಆಚಾರ್ಯರು ಹೇಳಿ ಮುಂದೆ ಶಿಷ್ಯನು ಗುರುವಿನ ಮುಂದೆ ತನ್ನ ಅಪೇಕ್ಷೆಯನ್ನು ಹೇಗೆ ನಿವೇದಿಸಿಕೊಳ್ಳಬೇಕು ಎನ್ನುವುದನ್ನು ’ಸ್ವಾಮಿನ್ ನಮಸ್ತೆ..’ ಎಂಬ ಶ್ಲೋಕದಲ್ಲಿ ವಿವರಿಸಿರುತ್ತಾರೆ. ಗುರುವಿನ ಮುಂದೆ ಹೇಳಿಕೊಳ್ಳುವುದೆಂದರೆ ಅದು ಪೂರ್ವಯೋಜಿತವೋ ಮುಖಸ್ತುತಿಯೋ ಆಗಿರದೆ ಸಾಧನ ಚತುಷ್ಟಯ ಸಂಪನ್ನತೆಯಿಂದ ತಾನಾಗೆ ಹೊರಬರುವ ಭಾವವಾಗಿರಬೇಕು ಎನ್ನುವುದು ಬಹುಮುಖ್ಯ ವಿಚಾರ. ವೈರಾಗ್ಯ ಬಂದ ಮಾತ್ರಕ್ಕೆ ಆತ ಜ್ಞಾನಿಯಾಗುವುದಿಲ್ಲ ಅಥವಾ ’ನಾನು ಸರ್ವಗುಣ ಸಂಪನ್ನನಾಗಿದ್ದೇನೆ ಆದುದರಿಂದ ಗುರುವೇ ನನ್ನನ್ನು ಅರಸಿ ಬರುತ್ತಾನೆ’ ಎನ್ನುವ ಭಾವವೂ ಅನುಚಿತವಾದುದಾಗಿರುತ್ತದೆ. ಗುರುವಿನ ಉಪದೇಶ ಮತ್ತು ಅನುಗ್ರಹವಿಲ್ಲದೆ ಜ್ಞಾನವು ಲಭಿಸುವುದಿಲ್ಲ ಅಥವಾ ಗುರುವಿಲ್ಲದ ಜ್ಞಾನಕ್ಕೆ ಬೆಲೆಯಿರುವುದಿಲ್ಲ ಎಂದು ತಿಳಿಯಬಹುದು. ಗುರುವಿನ ಮುಂದೆ ಮಂಡಿಯೂರಿ ಬಾಗಬೇಕಾಗುತ್ತದೆ ಮತ್ತು ಹಾಗೆ ಬಾಗುವುದು ಪೂಜ್ಯರಲ್ಲಿ ತೋರುವ ಅನುರಾಗ , ಮನೋಧರ್ಮ ಎನ್ನಬಹುದು. ಗುರುವಿನಿಂದ ಕಲಿಯಬೇಕಾದರೆ ಇಂತಹ ದೈನ್ಯತೆ ಇರಬೇಕಾಗುತ್ತದೆ. ಗುರುವು ಸುಮ್ಮನೆ ಕಲಿಸಿ ಕೊಡುವುದಿಲ್ಲ. ಯಾವ ಆಮಿಷಕ್ಕೂ ಬಲಿಯಾಗುವುದಿಲ್ಲ.  ’ನಾನಿಷ್ಟು ಫೀಜು ಕಟ್ಟಿದ್ದೇನೆ, ಕ್ಯಾಪಿಟೇಶನ್ ಶುಲ್ಕ ಕೊಟ್ಟಿದ್ದೇನೆ, ದೂಸರಾ ಮಾತನಾಡದೆ ನನಗೆ ಸರ್ಟಿಫಿಕೇಟ್ ಕೊಡಿ’ ಎಂದು ಕೇಳುವಂತಿಲ್ಲ !. ಬ್ರಹ್ಮಜಿಜ್ಞಾಸೆಯು ಗುರುವು ಮನಸು ಮಾಡಿದರೆ ಮಾತ್ರ ಆರಂಭವಾಗುವಂತಹುದು ಮತ್ತು ಸಾಧನ ಚತುಷ್ಟಯ ಸಂಪನ್ನನಾದ ಜ್ಞಾನಾರ್ಥಿಯನ್ನು ತನ್ನ ಶಿಷ್ಯನೆಂದು ಒಪ್ಪಿದರೆ ಮಾತ್ರ ಒಲಿದು ಬರುವಂತಹುದು.
ಒಮ್ಮೆ ಗುರುವು ಬಂದವನನ್ನು ಶಿಷ್ಯನೆಂದು ಸ್ವೀಕರಿಸಿದರೆ ಆತನು ಎಲ್ಲರಿಗಿಂತಲೂ ಹೆಚ್ಚು ಮಾನ್ಯನಾಗುತ್ತಾನೆ. ಗುರುವು ತನ್ನ ಸಾಧನೆಯ ಸಮಸ್ತವನ್ನೂ ಶಿಷ್ಯನಿಗೆ ಧಾರೆ ಎರೆಯುತ್ತಾನೆ. ಅರ್ಜುನನೂ ಸಹ ಕೃಷ್ಣನ ಮುಂದೆ ’ನಾನು ನಿನ್ನ ಶಿಷ್ಯ’ ಎಂದು ಹೇಳುತ್ತಾನೆ. ಶಿಷ್ಯವೃತ್ತಿಯು ಎಷ್ಟು ಮಹತ್ತರವಾದುದು ಎನ್ನುವುದನ್ನು ಅರ್ಜುನನ ಮಾತಿನ ಭಾವದಲ್ಲಿ ತಿಳಿಯಬಹುದು. ’ನತಲೋಕ ಬಂಧೋ’ ಎಂದರೆ  ದೈನ್ಯತೆಯಿಂದ ನಮಿಸಿ ಬರುತ್ತಿರುವ ಜನಗಳ ಆಪ್ತಮಿತ್ರನಂತೆ , ಬಾಂಧವನಂತೆ ಎಂದು ಅರ್ಥ.  ಅರ್ಜುನನು ವಿಷಾದದಲ್ಲಿ ಮುಳುಗಿದ್ದಾಗ ಕೃಷ್ಣನು ’ ಅಳಬೇಡ ಪಾರ್ಥ, ನಾನು ನಿನ್ನ ಗೆಳೆಯ’ ಎಂದು ಸಾಂತ್ವನ ಹೇಳುತ್ತಾನೆ. ಆಪ್ತವಚನದಿಂದ ಸಂತೈಸುವ ಗೆಳೆಯನಂತಹ ಗುಣವು ಗುರುವಿನದು ಎಂದು ತಿಳಿಯಬಹುದು. ಗುರುವು ಕರುಣೆಯ ಸಾಗರದಂತಿರಬೇಕು ಎನ್ನುವುದನ್ನು ಈ ಹಿಂದಿನ ಕಂತುಗಳಲ್ಲಿ ತಿಳಿದಿದ್ದೇವೆ.  ಮುಂದೆ, ’ಪತಿತಂ ಭವಾಬ್ಧೌ’ ಎಂದು ಶಿಷ್ಯನು ಹೇಳಿಕೊಳ್ಳುತ್ತಾನೆ. ಹುಟ್ಟು-ಯೌವನ-ಮುಪ್ಪು-ರೋಗ-ಸಾವು ಮುಂತಾದ ಜಂಜಡಗಳಿಂದ ಅನರ್ಥವಾದ ವಿಷಯಗಳಲ್ಲಿ ಸಿಲುಕಿ ಸಂಸಾರಸಾಗರದಲ್ಲಿ ಬಿದ್ದು ನೊಂದಿರುವ ತನ್ನನ್ನು ಉದ್ಧಾರ ಮಾಡು ಎಂದು ಶಿಷ್ಯನು ಕೇಳಿಕೊಳ್ಳುತ್ತಾನೆ.  ಹೀಗೆ ಬಂದವನು ಶಿಷ್ಯನಾಗಿ ಸ್ವೀಕೃತವಾಗಬೇಕಾದರೆ ಗುರುವಿನ ಕಾರುಣ್ಯಪೂರ್ಣವಾದ ನೋಟವು ಆತನ ಮೇಲೆ ಬೀಳಬೇಕು ಅಥವಾ ಅನುಗ್ರಹವಾಗಬೇಕು ಎನ್ನುವುದನ್ನು ’ ಋಜ್ವ್ಯಾ-ಅತಿಕಾರುಣ್ಯ-ಸುಧಾಭಿವೃಷ್ಟ್ಯಾ-ಆತ್ಮೀಯ ಕಟಾಕ್ಷ-ದೃಷ್ಟ್ಯಾ’ ಎಂಬಲ್ಲಿ ಹೇಳಿರುತ್ತಾರೆ.  ಒಳ್ಳೆಯದಾದ ಸರಳವಾದ ಕರುಣೆಯಿಂದ ತುಂಬಿದ ಗುರುವಿನ ಆಪ್ತವಾದ ನೋಟವು ಶಿಷ್ಯನಾಗುವವನ ಮೇಲೆ ಬಿದ್ದಾಗ ಹಣ್ಣು ಮಾಗಿ ಕೆಳಗೆ ಬಿದ್ದಂತಾಗುತ್ತದೆ. ’ಆತ್ಮೀಯ ಕಟಾಕ್ಷ ದೃಷ್ಟಿ’ ಎನ್ನುವುದು ’ಋಜುಸ್ವಭಾವದ ಅಥವಾ ಸರಳವಾದ ಕರುಣಾಪೂರಿತ ಅನುಗ್ರಹ’ ಎಂದು ಶ್ರೀ ಚಂದ್ರಶೇಖರ ಭಾರತಿಗಳು ತಮ್ಮ ವ್ಯಾಖ್ಯಾನದಲ್ಲಿ ಹೇಳಿರುತ್ತಾರೆ.  ಗುರುವನ್ನು ಕಂಡೊಡನೆಯೆ ಶಿಷ್ಯನಾಗುವವನು ಹೇಗೆ ನಿವೇದಿಸಿಕೊಳ್ಳಬೇಕು ಅನ್ನುವುದನ್ನು ಆಚಾರ್ಯರು ಮೇಲಿನ ಶ್ಲೋಕದಲ್ಲಿ ವಿವರಿಸಿರುತ್ತಾರೆ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ....

-------------------------------------------------------------------

ಕೊ: ಗುರುದೃಷ್ಟಿಯು ಪಾಮರರ ಮೇಲೆ ಬೀಳಬಾರದು ಎನ್ನುವ ಮಾತನ್ನು ಕೇಳಿರುತ್ತೇವೆ.  ಅದಕ್ಕಾಗಿ ಗುರುವಿನ ಆಗಮನವಾದಾಗ ತುಂಬಿದಕೊಡವನ್ನು ಗುರುವಿನ ನೋಟಕ್ಕೆ ತಾಗುವಂತೆ ಹಿಡಿದು ಬರಮಾಡಿಕೊಳ್ಳುವುದು ವಾಡಿಕೆ. ಗುರುದೃಷ್ಟಿಯ ವಿಚಾರವನ್ನು ಇಲ್ಲಿ ಆಚಾರ್ಯರ ನಿರೂಪಣೆಯಲ್ಲಿ ತಿಳಿದಾಗ ಪಾಮರರ ಮೇಲೆ ಗುರುವಿನ ನೋಟವು ಬಿದ್ದರೆ ಏನಾದರೂ ಆಗಲು ಸಾಧ್ಯವೆ ? ಎಂದು ಯೋಚಿಸಬೇಕಾಗುತ್ತದೆ. ಸಾಧನ ಚತುಷ್ಟಯ ಸಂಪನ್ನನಿಗೇ ಗುರುವಿನ ಅನುಗ್ರಹವು ಒಲಿದು ಬರುವುದರಿಂದ ಅನ್ಯರು ಬೆದರುವ ಅಗತ್ಯವಿಲ್ಲವೆನಿಸುತ್ತದೆ. ನೆಮ್ಮದಿಯಿಂದ ಇಹಭೋಗಗಳನ್ನು ಅನುಭವಿಸಬಹುದಲ್ಲವೆ  ? ! :).
ಮಂಗಳಕರ ಮತ್ತು ಶುಭಸೂಚಕವಾಗಿಯೂ ಪೂರ್ಣಕುಂಭವನ್ನು ಹಿಡಿಯುವ ವಾಡಿಕೆ ಇದೆ.

ವಂದನೆಗಳೊಂದಿಗೆ....

Wednesday, January 11, 2012

Tuesday, January 10, 2012

ಭಗವಾನ್ ರಮಣ ಮಹರ್ಷಿಗಳ ಸಂದೇಶJanuary 9, 2012

ಭಗವಾನ್ ರಮಣ ಮಹರ್ಷಿಗಳ ಸಂದೇಶ

                          Photo courtesy: Mountain Path

    ಭಗವಾನ್ ರಮಣ ಮಹರ್ಷಿಗಳ ಸಂದೇಶ


                                 ಭಗವಾನ್ ಶ್ರೀ  ರಮಣ ಮಹರ್ಷಿಗಳು ಕೊಡುತ್ತಿದ್ದ ಸಂದೇಶಗಳು ಮನನೀಯವಾಗಿರುತ್ತಿತ್ತು. ಆದರೆ, ಅವರ ಸಂದೇಶಗಳನ್ನು ಓದಿಕೊಂಡು ಅವರ ದಿನಚರಿಯನ್ನು ಗಮನಿಸಿದರೆ ಮಹರ್ಷಿಗಳೇ ಈ ಜಗತ್ತಿಗೆ ಸಂದೇಶವಾಗಿ ಕಾಣುತ್ತಿದ್ದರು. ಅವರು ಏನು ಹೇಳುತ್ತಿದ್ದರೋ ಅವರು ಅದೇ ಆಗಿರುತ್ತಿದ್ದರು. ಇದು ಅವರ ಜೀವನದುದ್ದಕ್ಕೂ  ಧಾಖಲಾಗಿದೆ.
                               ಒಂದು ಸಂದರ್ಭದಲ್ಲಿ ಭಗವಾನ್ ರಮಣರು ಕೈವಲ್ಯ ನವನೀತಂನ ಎರಡು ಶ್ಲೋಕಗಳನ್ನು ಉದಾಹರಿಸಿ ಆತ್ಮಜ್ಞಾನದ ಬಗ್ಗೆ ತಿಳಿಸಿದರು.  ನವನೀತಂ, ಬೃಹದ್ದಾಕರವಾದ ಆಲದ ಮರದ ಕೆಳಗೆ ನಿಂತು " ನಾನು ಸತ್ಯವನ್ನೇ ಹೇಳುತ್ತೇನೆ, ನೀನೆ ಈ ಜಗತ್ತಿನ ಚೈತನ್ಯ. ಈ ಜಗತ್ತಿನಲ್ಲಿ ಆಗುಹೊಗುತ್ತಿರುವ ಎಲ್ಲವನ್ನು  ಸಾಕ್ಷಿಭೂತವಾಗಿ ನೋಡುತ್ತಿರುವ ನೀನು ಯಾವತ್ತು ಬದಲಾಗದ ಸ್ಥಿತಿಯಲ್ಲಿ ಇದ್ದೀಯ. ನೀನು ಭೂತ, ಭವಿಷ್ಯ ಮತ್ತು ವರ್ತಮಾನದಲ್ಲಿ ಕೊನೆಮೊದಲಿಲ್ಲದ ಸಾಗರದ ಅಲೆಗಳ ಏರಿಳಿತದಂತೆ ಸಕಲವನ್ನು ಸಾಕ್ಷಿಯಾಗಿ  ಸದಾಕಾಲ ನೋಡುತ್ತಿರುವೆ. ನಾನು ಈಗಾಗಲೇ ಲೆಕ್ಕವಿಲ್ಲದಷ್ಟು ಜನ್ಮಗಳನ್ನು ಕಳೆದ್ದಿದ್ದರೂ ದೇಹವನ್ನೇ ಆತ್ಮವೆಂದು ತಪ್ಪಾಗಿ ಗ್ರಹಿಸಿ ಎಲ್ಲಾ ಜನ್ಮಗಳನ್ನು ಹಾಳುಮಾಡಿಕೊಂಡಿದ್ದೇನೆ. ಹೆಚ್ಚು ಕಡಿಮೆ ಎಲ್ಲಾ ಜನ್ಮದಲ್ಲೂ ಮರಳುಗಾಡಿನಲ್ಲಿ ದೂರದಿಂದ ಕಾಣುವ ಜಲದಂತೆ, ಬ್ರಾಂತಿಯಲ್ಲೇ ಮುಳುಗಿ ಜನ್ಮವನ್ನು ವ್ಯರ್ಥ ಮಾಡಿಕೊಂಡಿದ್ದೇನೆ. ಕೊನೆಗೆ 'ನಾನು ಯಾರು?' ಎಂಬುದನ್ನು ಅರಿಯಲು ನೀನು ನನಗೆ ಬುದ್ದಿಕೊಟ್ಟ ಮೇಲೆ ನನ್ನಲ್ಲಿ ಜನ್ಮ ಜನ್ಮಗಳಿಂದ ಇದ್ದ ಎಲ್ಲಾ ಪೊರೆಯು ಕಳಚಿತು. ಈಗ ನಾನು ಮುಕ್ತನಾದೆ. ಈಗ ನನಗೆ ಸತ್ಯದ ಅರಿವಾಯಿತು." ಎಂದು ಹೇಳಿದ್ದನ್ನು ಮಹರ್ಷಿಗಳು ಉದಾಹರಿಸಿದರು.
                                ಇನ್ನೊಂದು  ಸಂದರ್ಭದಲ್ಲಿ ಮಹರ್ಷಿಗಳು ಸತ್ಯ ಮತ್ತು  ಕರ್ಮದ  ಬಗ್ಗೆ ಮಾಡಿದ ಉಪದೇಶ ಹೀಗಿದೆ. " ಸತ್ಯ ಯಾವಾಗಲೂ ಒಂದೇ, ಕೇವಲ ಒಂದೇ. ಈ ಸತ್ಯವನ್ನು ಅನಾದಿಕಾಲದಿಂದ ಒಬ್ಬರು ಇನ್ನೊಬ್ಬರಿಗೆ ವರ್ಗಾಯಿಸುತ್ತಲೇ ಬಂದಿದ್ದಾರೆ. ಉದ್ದಾಲಕ ಮಹರ್ಷಿಯು ಶ್ವೇತಕೆತುವಿಗೆ ವರ್ಗಾಯಿಸಿದರು. ನಂತರ ಯಮಧರ್ಮ ನಚಿಕೇತುವಿಗೆ, ಯಾಜ್ಞವಲ್ಕ್ಯರು ಗಾರ್ಗಿಗೆ, ಮೈತ್ರ್ಯೇಯಿಗೆ ಮತ್ತು ಜನಕನಿಗೆ ವರ್ಗಾಯಿಸಿದರು. ವ್ಯಾಸರು ಶುಕಮುನಿಗೆ, ವಸಿಷ್ಟರು ಶ್ರೀರಾಮನಿಗೆ , ಶ್ರೀರಾಮ ಆಂಜನೇಯನಿಗೆ , ಶ್ರೀಕೃಷ್ಣ ಅರ್ಜುನನನಿಗೆ, ಶ್ರೀ ಶಂಕರರು ಮಂಡನಮಿಶ್ರರಿಗೆ, ಶ್ರೀ ರಾಮಕೃಷ್ಣರು ವಿವೇಕಾನಂದರಿಗೆ ವರ್ಗಾಯಿಸಿದರು. ಹೀಗೆ ಸತ್ಯ ವರ್ಗಾವಣೆ ಆಗುತ್ತಲೇ ಬಂದಿದೆ.ಇವೆಲ್ಲವುಗಳ ಸಾರಸಂಗ್ರಹವೇ ಉಪನಿಷತ್ತು.  ಈ ಜಗತ್ತಿನಲ್ಲಿ ಅದೆಷ್ಟೋ ಸಂತರು ನಮ್ಮ ಮೇಲೆ ಅಪಾರ ಅನುಕಂಪದಿಂದ ಈ ಸತ್ಯದ ವಿಚಾರವನ್ನು ತಿಳಿಸುವ ಕೃಪೆಯ ಅನುಗ್ರಹ ಮಾಡಿದ್ದಾರೆ. ಇವರ ಅನುಗ್ರಹದ ಅನುಕಂಪವನ್ನು ನಾವೆಲ್ಲರೂ ಅರಿಯಬೇಕಾಗಿದೆ. ಮನುಷ್ಯ ಮೊದಲು ತನ್ನ ಆತ್ಮದ   ಅರಿವನ್ನು ತಿಳಿಯಬೇಕಾಗಿದೆ. ಆತನು ದೇಹವಲ್ಲ, ಇಂದ್ರಿಯ ಅಲ್ಲ ಅಥವ ಮನಸ್ಸು ಅಲ್ಲ. ಶುಭ್ರವಾದ ನೀಲಾಕಾಶದಂತೆ ಇರುವ ಈ ಅರಿವು ನಮ್ಮ ದೇಹದೊಳಗೆ ಇದೆಯಾದರೂ, ಕಮಲದ ಎಲೆಗಳಂತೆ ನೀರಿನಲ್ಲಿದ್ದರು, ದುಂಬಿ ಗಳು ಹೂವಿನಮೇಲೆ ಇದ್ದರು, ಯಾವುದು ಯಾವುದಕ್ಕೂ ಅಂಟಿಕೊಳ್ಳದಂತೆ  ಇದೆ.  ಆಕಾಶದಂತೆ ಭೂಮಿ, ನೀರು, ಬೆಂಕಿ, ಗಾಳಿ ಎಲ್ಲೆಡೆ ವ್ಯಾಪಿಸಿದ್ದರು ಯಾವುದು ಯಾವುದಕ್ಕೂ ಅಂಟಿಕೊಂಡಿಲ್ಲ, ಇದೆ ರೀತಿ ದೇಹ ಮತ್ತು ಮನಸ್ಸಿನಲ್ಲೆಲ್ಲ ಈ ಆತ್ಮದ ಅರಿವು ವ್ಯಾಪಿಸಿದ್ದರೂ  ಯಾವುದರಿಂದಲೂ ಇದು ಬಂಧಿತವಾಗಿಲ್ಲ. ಈ ಆತ್ಮಕ್ಕೆ ಹುಟ್ಟು ಇಲ್ಲ ಸಾವು ಇಲ್ಲ ; ಯಾವ ಬಂಧನವು ಇಲ್ಲ ಬಿಡುಗಡೆಯು ಇಲ್ಲ ;ಈ ಆತ್ಮದ ಅರಿವೇ ನಮ್ಮ ನಿಜ ಸ್ವರೂಪ. ಈ ಸತ್ಯವನ್ನು  ಪ್ರತಿಯೊಬ್ಬರೂ ಅರಿಯಬೇಕಾಗಿದೆ.
ಎಲ್ಲಾ ಸಂದರ್ಭದಲ್ಲೂ, ಎಲ್ಲಾ ಸಮಯದಲ್ಲೂ ತನ್ನ ಈ ಸ್ವಸ್ವರೂಪವನ್ನು ಸಾಧಕನು ಅರಿತಾಗ ಈ ಜಗತ್ತಿನ ಎಲ್ಲಾ ಬಂಧನದಿಂದ ಮುಕ್ತನಾಗಿ ಶಾಂತವಾಗಿ ಇರಲು ಸಾಧ್ಯ. ಆಗ  ತಾನು ಮಾಡುವ  ಎಲ್ಲಾ ಕಾರ್ಯಗಳಲ್ಲಿ ಯಾವುದೇ ಅಂಟಿಲ್ಲದೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಂತೃಪ್ತಿಯಿಂದ ನಿರ್ವಹಿಸಲು ಸಾದ್ಯ ಇಂತಹ ಮನೋಸಂಕಲ್ಪ ಸಾಧಕನು ಮಾಡಿದರೆ ಸಾಧನೆಯ ಹಾದಿ ಸುಲಭವಾಗುತ್ತದೆ."
                                 ಇದನ್ನು ಮಹರ್ಷಿಗಳು ಕೇವಲ ಹೇಳದೆ ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡಿದ್ದರು. ಅವರ ದಿನನಿತ್ಯದ ಬದುಕು ಆರಂಭವಾಗುತ್ತಿದ್ದುದೆ ಮುಂಜಾವಿನ ನಾಲ್ಕು ಘಂಟೆಗೆ. ಆಗಿಲಿಂದ ಒಂದು ನಿಮಿಷ ಕೂಡ ಹಾಳುಮಾಡುತ್ತಿರಲಿಲ್ಲ. ಸದಾಕಾಲ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುತ್ತಿದ್ದರು. ಅಡುಗೆಮನೆಯಲ್ಲಿ ರುಬ್ಬುವುದು, ಚಟ್ನಿ ತಯಾರು ಮಾಡುವುದು, ತರಕಾರಿ ಹೆಚ್ಚುವುದು, ಅಡುಗೆ ತಯಾರು ಮಾಡುವುದು, ಮುತ್ತುಗದ ಎಲೆ ಮತ್ತು ದೊನ್ನೆ ತಯಾರು ಮಾಡುವುದು, ನಾಯಿ ಮಂಗಗಳಿಗೆ ಶಿಶ್ರೂಷೆ ಮಾಡುವುದು, ಆಶ್ರಮದ ಇನ್ನಿತರೇ ಕೆಲಸಗಳಲ್ಲಿ ಭಾಗಿಯಾಗುವುದು ಹೀಗೆ ಎಲ್ಲಾ ಕೆಲಸಗಳನ್ನು ಅತ್ಯಂತ ಶ್ರದ್ದೆಯಿಂದ ಮಾಡುತ್ತಿದ್ದರು. ಆಶ್ರಮಕ್ಕೆ ಬರುವ ಪ್ರತಿ ಭಕ್ತರ ಪ್ರಶ್ನೆಗಳಿಗೆ ಸಮಾಧಾನದ ಉತ್ತರ ನೀಡಿ ಸಂತೈಸುತ್ತಿದ್ದರು. ಪ್ರತಿಯೊಂದು ಕೆಲಸವೂ ಭಗವಂತನ ಸೇವೆಯೆಂದು ಮಾಡಿ ಮುಗಿಸಿ ಶಾಂತರಾಗಿರುತ್ತಿದ್ದರು. ಈ ಬಗ್ಗೆ ಯಾರಾದರು ಕೇಳಿದರೆ ಶಾಂತವಾಗಿಯೇ " ನಾನೇನು ಮಾಡಿದೆ? ಆ ಭಗವಂತ ಹೇಗೆ ಮಾಡಿಸಿದನೋ ಹಾಗೆ ಆಗಿದೆ. ಆತನ  ಆದೇಶದಂತೆ  ಕೆಲಸಗಳು  ಎಲ್ಲರ  ಕೈಯಲ್ಲಿ  ನಡೆದಿದೆ ." ಎಂದು ಉತ್ತರಿಸುತ್ತಿದ್ದರು.
                                 ಮಹರ್ಷಿಗಳ ಒಡನಾಟದಲ್ಲಿ ಇದ್ದ ಹಲವಾರು ಮಹನೀಯರು ತಮ್ಮ ಅನುಭವಗಳನ್ನು ಹಂಚಿಕೊಂದಿರುವುದನ್ನು ಓದುವಾಗ ಅವರೆಷ್ಟು ಧನ್ಯರು! ಎನ್ನುವ ಭಾವ ನಮಗೆ ಬಂದರೂ ಈ ವಿಚಾರಗಳನ್ನು ಎಲ್ಲಾ  ಭಕ್ತರಿಗೆ ತಿಳಿಸುವ ಪ್ರಯತ್ನವನ್ನು ರಮಣ ಆಶ್ರಮ ಮಾಡಿ ನಮ್ಮನ್ನು ಧನ್ಯರನ್ನಾಗಿಸಿದ್ದಾರೆ. 

Monday, January 9, 2012

ನೈರುತ್ಯ - ಇದರ ವೇದ ವಿವರಣೆ  ನೈರುತ್ಯ-ಕೇವಲ ದಿಕ್ಕಿನ ಹೆಸರೇ? ಇದರ ವೇದ ವಿವರಣೆ ಕೇಳಿ ಶ್ರೀಸುಧಾಕರ ಶರ್ಮರ ಧ್ವನಿಯಲ್ಲಿ

Saturday, January 7, 2012

ವಿದೇಶೀಯರನ್ನೂ ಆಕರ್ಷಿಸಿದ ವೇದಸುಧೆ
ವೇದಸುಧೆಯನ್ನು ಕನ್ನಡಿಗರಷ್ಟೇ ನೋಡುತ್ತಾರೆಂಬ ಭಾವನೆ ನನ್ನಲ್ಲಿತ್ತು. ಕನ್ನಡವನರಿಯದ ವಿದೇಶೀಯರಿಗೂ ವೇದದ ಹೆಸರಿನ ಮಾತ್ರದಿಂದ ವೇದಸುಧೆಯ ಪರಿಚಯವಾಗಿ ವೇದಸುಧೆಗೆ ಪ್ರೇರರಕರಾದ ಶ್ರೀ ಸುಧಾಕರಶರ್ಮರನ್ನು ಭೇಟಿಮಾಡಬೇಕೆಂದು ಮೂರ್ನಾಲ್ಕು ತಿಂಗಳ ಹಿಂದೆಯೇ ಬಯಸಿದ ಡಾ. ಜೆಸ್ಸೀ ಅವರ ಶಿಷ್ಯೆ ಕ್ರಿಸ್ತಿನಾ ಜೊತೆಗೂಡಿ ದಿನಾಂಕ 7.1.2012  ರಂದು ಬೆಂಗಳೂರಿಗೆ ಬಂದು ಶರ್ಮರನ್ನೂ ಮತ್ತು ಪಂಡಿತ್ ಶ್ರೀ ಸುಧಾಕರಚತುರ್ವೇದಿಯವರನ್ನೂ ಭೇಟಿಮಾಡಿ ವೇದದ ವಿಚಾರದಲ್ಲಿ ಅನೇಕ ಮಾಹಿತಿಯನ್ನು ಪಡೆದರು. ಇಂದಿನಿಂದ ಅದರ ವೀಡಿಯೋಗಳನ್ನು ಇಲ್ಲಿ ಪ್ರಕಟಿಸಲಾಗುವುದು. ವೀಡಿಯೋ ಅಪ್ ಲೋಡ್ ಮಾಡಲು ಸಾಕಷ್ಟು ಸಮಯ ಹಿಡಿಯುವದರಿಂದ ಎಲ್ಲಾ ವೀಡಿಯೋ ಕ್ಲಿಪ್ ಗಳನ್ನೂ ಅಪ್ ಲೋಡ್ ಮಾಡಲು ಒಂದು ತಿಂಗಳು ಕಾಲ ಬೇಕಾಗಲೂ ಬಹುದು.
  ಈ ಸಂದರ್ಭದಲ್ಲಿ ಒಂದು ಮಾತನ್ನು ಹೇಳಲೇ ಬೇಕು. ಶ್ರೀ ಸುಧಾಕರಶರ್ಮರ  ಆರೋಗ್ಯ ಅಷ್ಟು ಉತ್ತಮವಾಗಿಲ್ಲ ವೆಂಬ ವಿಚಾರ ಅನೇಕರಿಗೆ ತಿಳಿಯದಿರಬಹುದು. ಶ್ರೀ ಶರ್ಮರು ಕಳೆದ ಆರು ತಿಂಗಳುಗಳಿಗೂ  ಹೆಚ್ಚು ಕಾಲದಿಂದ ಹಾಸಿಗೆ ಹಿಡಿದಿದ್ದರು. ಈಗಲೂ ಅವರು ಮನೆ ಬಿಟ್ಟು ಹೊರ ಬರುವ ಸ್ಥಿತಿಯಲ್ಲಿಲ್ಲ. ಆದರೂ ಅವರ ಅನಾರೋಗ್ಯಸ್ಥಿತಿಯಲ್ಲೇ ಅವರಿಗೆ ಏನೂ ಆಗಿಲ್ಲವೇನೋ ಎಂಬ ಮಾನಸಿಕ ಸ್ಥಿತಿಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ವೇದದ  ಹಲವು ವಿಚಾರವನ್ನು ವಿವರವಾಗಿ ಸರಳವಾದ ಆಂಗ್ಲ ಭಾಷೆಯಲ್ಲಿ ತಿಳಿಸಿಕೊಟ್ಟರು. ಅವರ ಮನಸ್ಥೈರ್ಯಕ್ಕಾಗಿ ಅವರನ್ನು ಅಭಿನಂದಿಸಲೇ ಬೇಕು. 

Dr.Jessie with Sri SudhakarasharmaMrs. Kristina Student of  Dr.Jessie


With Pandit SudhakarachaturvediWith the Family of Sri Sudhakarasharma
Thursday, January 5, 2012

ಹೊಸವರ್ಷ
ಮಿತ್ರರಾದ ಅನಂತೇಶ್  ಅವರ ಚಿತ್ರಗಳ ಬಗೆಗೆ  ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ. 

-ಹರಿಹರಪುರ ಶ್ರೀಧರ್  

Monday, January 2, 2012

Siribhoovalaya and Predictions

Siribhoovalaya and Religion

ದ್ವೈತ ಮತ್ತು ಅದ್ವೈತಶ್ರೀ ಸುಧಾರ್ಥಿ, ಹಾಸನ ,ಇವರ ವಿವರಣೆ:

ಸಿರಿಭೂವಲಯ ಮತ್ತು ಗಣಿತ 


ಸಿರಿಭೂವಲಯ ಮತ್ತು  ಬಾಹ್ಯಾಕಾಶ ವಿಜ್ಞಾನ
 2012 ರ ಶುಭ ವರ್ಷದ ಶುಭಾಶಯಗಳು

                         ವರ್ಷ ಕಳೆದು ವರ್ಷ ಉರುಳುತ್ತಿದೆ. ಪ್ರತಿ ವರುಷ  ಬಂದಾಗಲೂ ಏನೋ ಒಂದು ನಿರೀಕ್ಷೆ ಸಹಜವಾಗಿ ಮನದಲ್ಲಿ ಮೂಡುತ್ತದೆ. ದಿನಕಳೆದಂತೆ ನಿರೀಕ್ಷೆ ಮಂದವಾಗುತ್ತ ಸಾಗುತ್ತದೆ . ಮತ್ತೆ, ಮುಂದಿನ ಹೊಸ ವರುಷ. ಇದು ಹೀಗೆ ವರ್ಷದಿಂದ ವರ್ಷಕ್ಕೆ ಸಾಗುತ್ತಲೇ ಇದೆ.  ಆದರೂ, ನಮ್ಮ ನಿರೀಕ್ಷೆ ಮಾತ್ರ ಕಡಿಮೆಯಾಗಿಲ್ಲ.  ಈಗ ಮತ್ತೊಂದು ವರ್ಷದ ಉದಯದ ಹೊಸ್ತಿಲಲ್ಲಿ ನಿಂತು ಮತ್ತೆ  ಏನನ್ನೋ ನಿರೀಕ್ಷೆ ಮಾಡುತ್ತಿದ್ದಿವಿ.
                       
                       2012 ರ ಈ ಶುಭ ವರ್ಷದಲ್ಲಿ ನಮ್ಮೆಲ್ಲ ಶುಭ ನಿರೀಕ್ಷೆಗಳು ಸಾಕಾರಗೊಳ್ಳಲಿ . ನಾವೇನು ಬಯಸುತ್ತೇವೋ ಅದೆಲ್ಲವೂ  ನಮ್ಮಿಂದ ಇತರರಿಗೂ ದೊರಕುವಂತಾಗಲಿ. ಸ್ನೇಹ, ಸೌಹಾರ್ದ, ಶಾಂತಿ, ನೆಮ್ಮದಿ, ಸಂತೋಷ ಮತ್ತು ತಾಳ್ಮೆ ನಮ್ಮಲ್ಲಿ ನೆಲೆಗೊಳ್ಳಲಿ. ಆಗ ಈ ಪ್ರಪಂಚ ಸುಂದರ, ಶಾಂತಿ ಮತ್ತು ನೆಮ್ಮದಿಯ ತಾಣ.
                      ಈ ಸದಾಶಯದೊಂದಿಗೆ ಎಲ್ಲಾ ಸದಭಿಲಾಷಿ ಮಿತ್ರರಿಗೆ 2012 ಶುಭವನ್ನು ಕೋರುತ್ತೇನೆ.
ಅಭಿಮಾನಪೂರ್ವಕವಾಗಿ,
ಹೆಚ್ ಏನ್ ಪ್ರಕಾಶ್