Pages

Thursday, October 1, 2015

ಸತ್ಯವು ಅರ್ಥವಾಗಿ ಅದನ್ನು ಒಪ್ಪಲು ಇನ್ನೂ ಎಷ್ಟು ದಶಕಗಳು ಬೇಕೋ!

ಸತ್ಯವು ಅರ್ಥವಾಗಿ ಅದನ್ನು ಒಪ್ಪಲು ಇನ್ನೂ ಎಷ್ಟು ದಶಕಗಳು ಬೇಕೋ! ಶತಮಾನಗಳು ಎನ್ನುವುದಿಲ್ಲ.ಕಾರಣ ಸತ್ಯ ಗೋಚರ ಆಗುತ್ತಿದೆ.ಆದರೆ ನಿಧಾನವಾಗಿ ಆಗುತ್ತಿದೆ.ಹಲವು ಶತಮಾನಗಳಿಂದ ನಡೆದು ಬಂದಿರುವ ಸಂಪ್ರದಾಯಗಳು ಎಷ್ಟು ಆಳವಾಗಿ ಬೇರು ಬಿಟ್ಟಿವೆ! ಎಂದರೆ ಅದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವುದು ಮಹಾ ಪಾಪ! ಎಂದು ಮನಸ್ಸು ಭಯಭೀತವಾಗುತ್ತದೆ!! ಆದರೆ ವೇದವು ಹೇಳುತ್ತದೆ-ಸತ್ಯವನ್ನು ಆವಿಷ್ಕಾರ ಮಾಡು! ಸತ್ಯವು ಗೋಚರವಾದರೆ ಅದೆಷ್ಟು ನಿರ್ಭೀತರಾಗಿರಬಹುದು!

ಧರ್ಮದ ಆಚರಣೆ ಎಂದರೆ ಯಾವುದು ತಲೆತಲಾಂತರದಿಂದ ನಡೆದು ಬಂದಿದೆ, ಅದನ್ನು ಪ್ರಶ್ನೆ ಮಾಡದೆ ಅನುಸರಿಸುವುದು-ಎಂಬುದು ಸಾಮಾನ್ಯ ಅಭಿಪ್ರಾಯ. ಇದಕ್ಕೆ ವಿದ್ಯಾವಂತ-ಅವಿದ್ಯಾವಂತ ಎಂಬ ಭೇದವಿಲ್ಲ. ಹಾಗೆ ನೋಡಿದರೆ ವಿದ್ಯಾವಂತರೆನಿಸಿಕೊಂಡು ಪದವಿಗಳ ಸರಮಾಲೆಯನ್ನು ಹಾಕಿಕೊಂಡವರೇ ಪ್ರಶ್ನೆ ಮಾಡದೆ ಕುರುಡಾಗಿ ಅನುಸರಿಸುವುದನ್ನು ನಾವು ಸಮಾಜದಲ್ಲಿ ಹೆಚ್ಚು ಕಾಣಬಹುದು.ಇದಕ್ಕೆ ಕಾರಣ ಸ್ಪಷ್ಟ.ಅದುವೇ ಭಯ.
ಹೆಸರಿನ ಮುಂದೆ ಹಲವು ಪದವಿಗಳಿವೆ. ಒಳ್ಳೆಯ ಉದ್ಯೋಗ ಸಿಕ್ಕಿದೆ. ಲಕ್ಷಕ್ಕೆ ಕಮ್ಮಿ ಇಲ್ಲದಂತೆ ದುಡಿಮೆ ಇದೆ. ವಾಸಕ್ಕೆ ಸುಸಜ್ಜಿತ ಮನೆ.ಅದರಲ್ಲಿ ಪತ್ನಿ ಮತ್ತು  ಮುದ್ದಾದ ಮಗುವಿನೊಡನೆ ಹಾಯಾಗಿ ಜೀವನ ಸಾಗಿರುವಾಗ ಯಜಮಾನನಿಗೆ ಅವನಿಗೆ ಅರಿವಿಲ್ಲದಂತೆ ಭಯ,ಅಭದ್ರತೆ ಕಾಡುತ್ತದೆ. ಭಗವಂತ! ಪತ್ನಿ ಮತ್ತು ಮಗುವಿನೊಡನೆ ನನ್ನನ್ನು ಸುಖವಾಗಿ ಕಾಪಾಡೆಂದು ಎಲ್ಲಾ ದೇವರಿಗೂ ಪ್ರಾರ್ಥಿಸಿ ಮನೆ ಮುಂದೆ ಬಂದ ಬುಡುಬುಡುಕೆಯವನ ಬಾಯಲ್ಲಿ ಏನಾದರೂ ಕೆಟ್ಟ ಮಾತು ಬಂದೀತೆಂದು ಮನೆಯಲ್ಲಿದ್ದ ಬಟ್ಟೆಯನ್ನೋ ಹತ್ತಿಪ್ಪತ್ತು ರೂಪಾಯಿ ದುಡ್ದನ್ನೋ ಕೊಟ್ಟು ಅವನು ಹೋದಮೇಲೆ ನಿರಾಳನಾಗುತ್ತಾನೆ.
ಇಂತಾ ಉಧಾಹರಣೆಗಳಿಗೇನೂ ಕೊರತೆ ಇಲ್ಲ. ಜೀವನ ದುಸ್ತರವಾಗಿದ್ದಾಗ ಕಾಡದಿದ್ದ ಅಭದ್ರತೆ ಜೀವನವು ಸುಖವಾಗಿರುವಾಗ ಕಾಡಲಾರಂಭಿಸುವುದೇಕೇ? ಜೀವನದಲ್ಲಿ ಕಷ್ಟವಿದ್ದಾಗ ಇಲ್ಲದಿದ್ದ ಭಯ ಸುಖದಲ್ಲಿ ಕಾಡುವುದಾದರೂ ಏಕೇ? ಸತ್ಯದ ಅರಿವಾಗದಿರುವುದೇ ಜೀವನದಲ್ಲಿ ಭಯಕ್ಕೆ ಕಾರಣ. ಅಭದ್ರತೆಯ ಭಾವನೆಗೆ  ಕಾರಣ.
 
ವೇದದ ಹೆಸರು ಕೇಳಿದೊಡನೆ ಒಂದು ಜಾತಿಗೆ ಸೀಮಿತಗೊಳಿಸಿ ಹರಿಹಾಯುವ ಜನರು ತಾವು ನಿರ್ಭೀತ ಜೀವನ ಮಾಡಬೇಕಾದರೆ ವೇದದ ಮಾರ್ಗದರ್ಶನವನ್ನೇ ಪಡೆಯಬೇಕು. ವೇದವು ಜನರಲ್ಲಿ ಎಂತಹಾ ನಿರ್ಭೀತ ಸ್ಥಿತಿಯನ್ನು ಉಂಟುಮಾಡುತ್ತದೆಂಬುದನ್ನು ತಿಳಿಯಲು ಈ ವೇದಮಂತ್ರದ ಅರ್ಥವನ್ನು ಒಮ್ಮೆ ವಿಚಾರ ಮಾಡೋಣ.

ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ ||
[ಋಕ್-೧.೮೬.೯]

ಸತ್ಯಶವಸಃ = ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ
ಯೂಯಮ್ = ನೀವು
ಮಹಿತ್ವನಾ = ನಿಮ್ಮ ಸ್ವಂತ ಮಹಿಮೆಯಿಂದ
ತತ್ ಆವಿಷ್ಕರ್ತ =ಆ ಸತ್ಯವನ್ನು ಆವಿಷ್ಕರಿಸಿರಿ
ರಕ್ಷಃ = ದುಷ್ಕಾಮನೆಗಳನ್ನು
ವಿದ್ಯುತಾ = ನಿಮ್ಮ ಜ್ಞಾನಜ್ಯೋತಿಯಿಂದ
ವಿಧ್ಯತಾ = ಸೀಳಿಹಾಕಿರಿ
ಭಾವಾರ್ಥ:-
ಓ ಧೀರರೇ, ನಿಮ್ಮ ಸ್ವಂತ ಮಹಿಮೆಯಿಂದ ಸತ್ಯವನ್ನು ಆವಿಷ್ಕರಿಸಿ. ದುಷ್ಕಾಮನೆಗಳನ್ನು ನಿಮ್ಮ ಜ್ಞಾನಜ್ಯೋತಿಯಿಂದ ಸೀಳಿ ಹಾಕಿರಿ.

ಈ ಮಂತ್ರವನ್ನು ಆಳವಾಗಿ ಅರ್ಥೈಸುತ್ತಾ ಹೋದರೆ ನನ್ನ ಕಣ್ಮುಂದೆ ಒಬ್ಬ ಗುರು ತನ್ನ ಯುವ ಶಿಷ್ಯನಿಗೆ ಸಿಡಿಲಿನಂತಹ ಮಾತುಗಳಿಂದ ಉಪದೇಶ ಮಾಡುತ್ತಿದ್ದಾನೇನೋ ಎಂದು ಭಾಸವಾಗುತ್ತದೆ. ಒಬ್ಬ ತಂದೆ ತನ್ನ ಮಗನಿಗೆ, ಗುರು ತನ್ನ ಶಿಷ್ಯನಿಗೆ ಈ ಮಂತ್ರದ ಅರ್ಥವನ್ನು ತಿಳಿಸಿದರೆ ಅವನಲ್ಲಿ ಅದೆಂತಹಾ ಅದ್ಭುತ ಶಕ್ತಿ ಮೂಡೀತು! ಭಯವೆಂಬುದಕ್ಕೆ ಆಸ್ಪದವೇ ಇಲ್ಲ. ಅಭದ್ರತೆಯ ಭಯವು ಕಾಡಲಾರದು. ಸತ್ಯದ ದರುಶನವಾದಾಗ ನಿರ್ಭೀತ ಜೀವನ ನಮ್ಮ ದಾಗುತ್ತದೆ.
ಮಂತ್ರವಾದರೂ ಏನು ಹೇಳುತ್ತದೆ?  ಹೇ ಧೀರರೇ, ನಿಮ್ಮ ಸ್ವಂತ ಸಾಮರ್ಥ್ಯದಿಂದ, ನಿಮ್ಮ ವಿವೇಕದಿಂದ, ನಿಮ್ಮ ಬುದ್ಧಿಯಿಂದ, ಸತ್ಯವನ್ನು ಆವಿಷ್ಕರಿಸಿ.ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ
ಇಲ್ಲಿ ಕುರುಡು ಆಚರಣೆಗೆ ಅವಕಾಶವಿದೆಯೇ? ವೇದವಾದರೂ ಮಂತ್ರದಲ್ಲಿ ಬಳಸಿರುವ ಪದಗಳ ತೀವ್ರತೆಯನ್ನು ಗಮನಿಸಿದಿರಾ? ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ- ಇಂತಹ ವಿಶ್ವಾಸ ತುಂಬುವ ಮಾತುಗಳನ್ನು ವೇದವು  ಮಾತ್ರವೇ ಹೇಳಲು ಸಾಧ್ಯ.

ಅರ್ಥವನ್ನು ಸರಿಯಾಗಿ ತಿಳಿಯದೆ ಆಚರಿಸಿದಾಗ  ಅನರ್ಥಕ್ಕೆ ಕಾರಣವಾಗುತ್ತದೆ                                                                                                        
ಇಂದು ಸಮಾಜದಲ್ಲಿ ಕಾಣುವ ಸಾಮರಸ್ಯದ ಕೊರತೆಗೆ ಧರ್ಮವನ್ನು ಸರಿಯಾಗಿ ತಿಳಿಯದೆ ತಪ್ಪು ತಪ್ಪಾಗಿ ಆಚರಿಸುವ ಕಂದಾಚಾರಗಳೂ ಕೂಡ ಹಲವು ಸಂದರ್ಭಗಳಲ್ಲಿ ಕಾರಣವಾಗುತ್ತವೆ, ಯಜ್ಞ ಯಾಗಾದಿಗಳನ್ನು ಮಾಡುವಾಗ ಪ್ರಾಣಿಬಲಿಗೆ ಅವಕಾಶವೇ ಇಲ್ಲದಿದ್ದರೂ ಅಶ್ವಮೇಧ, ಅಜಮೇಧದಂತಹ ಯಜ್ಞಗಳನ್ನು ಮಾಡುವಾಗ ಕುದುರೆಯನ್ನು /ಮೇಕೆಯನ್ನು ಬಲಿಕೊಡಬೇಕೆನ್ನುವ ಒಂದು ವರ್ಗ ಈಗಲೂ ಇರುವಾಗ ಅದನ್ನು ವಿರೋಧಿಸುವ ಒಂದು ವರ್ಗ ಸಹಜವಾಗಿ ಇರುತ್ತದೆ. ಆಗ ಸಾಮಾಜಿಕ ಸಾಮರಸ್ಯವು ಹಾಳಾಗುವುದಕ್ಕೆ ಧರ್ಮದ ಹೆಸರಿನಲ್ಲಿ ನಡೆಯುವ ಅಧರ್ಮದ ಕ್ರಿಯೆಗಳು ಕಾರಣವಾಗುತ್ತವೆ.
ಯಜ್ಞಕ್ಕೆ ಮತ್ತೊಂದು ಹೆಸರು ಅಧ್ವರ ಎಂದು. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದು ಅರ್ಥ. ಹೀಗೆ ಯಜ್ಞಕ್ಕೆ  ಅಹಿಂಸೆ ಎಂಬ ಅರ್ಥವಿದ್ದರೂ ಕೂಡ ಅಲ್ಲಿ ಪ್ರಾಣಿಬಲಿ ಮಾಡಲೇ  ಬೇಕೆನ್ನುವ ಗುಂಪಿನಿಂದ  ಅದನ್ನು ವಿರೋಧಿಸಿದವರನ್ನು ಧರ್ಮದ್ರೋಹಿಗಳೆಂಬ ಹಣೆ ಪಟ್ಟಿ ಕಟ್ಟುವ ಪ್ರಯತ್ನ ನಡೆಯುತ್ತದೆ.
 ನಾವು ಧರ್ಮದ ಹೆಸರಿನಲ್ಲಿ ಆಚರಿಸುವ ಪ್ರತಿಯೊಂದು ಕೆಲಸವನ್ನೂ ಆಚರಣೆಗೆ ಮುಂಚೆ ಅದರಲ್ಲಿ ಸತ್ಯವನ್ನು ಆವಿಷ್ಕರಿಸುವ ಪ್ರಯತ್ನವನ್ನು ಮಾಡಿದ್ದೇ ಆದರೆ ಯಾವ ಧರ್ಮಕಾರ್ಯವೂ ಮಾನವತೆಯ ವಿರೋಧಿಯಾಗಿರುವುದಿಲ್ಲ. ಆದ್ದರಿಂದ ನಾವು ಮಾಡುವ ಎಲ್ಲಾ ಕಾರ್ಯದಲ್ಲೂ ಸತ್ಯವನ್ನು ಆವಿಷ್ಕರಿಸುವಂತಹ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅಶ್ವಮೇಧಯಾಗದ ನಿಜವಾದ ಅರ್ಥ ತಿಳಿದಾಗ ಅದನ್ನು ವಿರೋಧಿಸುವ ಪ್ರಸಂಗವೇ ಎದುರಾಗುವುದಿಲ್ಲ. ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ........ "ಅಶ್ವಂ ಇತಿ ರಾಷ್ಟ್ರಂ" ಅದರ ವಿವರಣೆ ಹೀಗಿದೆ. ಶ್ವಃ ಅಂದರೆ ನಾಳೆ. ಅಶ್ವಃ ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ. ಯಾವುದು ಶಾಶ್ವತವಲ್ಲವೋ ಅದಕ್ಕೆ ನಿನ್ನೆ ನಾಳೆಗಳಿರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ "ಅಶ್ವಂ ಇತಿ ರಾಷ್ಟ್ರಂ" ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.["ದೇಹ ನಶ್ವರ-ದೇಶ ಶಾಶ್ವತ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ಇಂದು ಇದ್ದು ನಾಳೆ ಇಲ್ಲವಾಗುವವರು ನಾವು ನೀವು.
ಇನ್ನು "ಮೇಧೃ" ಎಂದರೆ " ಸಂಗಮೇ" ಅಂದರೆ ಒಟ್ಟು ಗೂಡಿಸು.ಎಂದಾಗ ರಾಷ್ಟ್ರವನ್ನು ಒಟ್ಟು ಗೂಡಿಸಲು ಮಾಡುವ ಕಾರ್ಯಕ್ರಮಗಳೆಲ್ಲಾ " ಅಶ್ವಮೇಧ ಯಾಗವೇ" ಎಂದಂತಾಯ್ತು. ಎಂತಹಾ ಶ್ರೇಷ್ಠವಾದ ಅರ್ಥ ಇದೆಯಲ್ಲವೇ?. ಸತ್ಯವನ್ನು ಆವಿಷ್ಕಾರ ಮಾಡಿದಾಗ ಮಾತ್ರವೇ ಇಂತಹ ಅದ್ಭುತಗಳು ಗೋಚರವಾಗಲು ಸಾಧ್ಯ.