Pages

Saturday, March 5, 2011

ವೇದಗಳ ಬಗ್ಗೆ ಒಂದು ಚಿಂತನೆ - ಶ್ರೀ ಸುಧಾಕರ ಶರ್ಮ ಅವರ ಸಂದರ್ಶನ ಕಳೆದ ವರ್ಷ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 19 ರಿಂದ 28 ರವರೆಗೆ ಹಾಸನದ ಶಂಕರ ಮಠದಲ್ಲಿ ನಡೆದ ಉಪನ್ಯಾಸ ಮಾಲೆಯಲ್ಲಿ ವೇದಾಧ್ಯಾಯಿಗಳಾದ ಬೆಂಗಳೂರಿನ ಶ್ರೀ ಸುಧಾಕರ ಶರ್ಮರು  ಸೆ.21 ರಿಂದ 23 ರವರೆಗೆ `ವೇದ- ಎಲ್ಲರಿಗಾಗಿ' ವಿಷಯವಾಗಿ ಪ್ರವಚನ ನೀಡಿದರು. ಈ ಸಂದರ್ಭದಲ್ಲಿ ಹಾಸನದ ಪತ್ರಕರ್ತ ಎಚ್.ಎಸ್. ಪ್ರಭಾಕರ-ಅಂದರೆ ನಾನು ಶ್ರೀ ಸುಧಾಕರ ಶರ್ಮ ಅವರ ಸಂದರ್ಶನ ನಡೆಸಿದೆ. ಅದರ ಸಾರಾಂಶವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ವೇದಗಳು: ಅಲ್ಲಿ ಎಲ್ಲವೂ ಇದೆ; ಎಲ್ಲರಿಗಾಗಿಯೂ ಇದೆ!

ಲೋಕಾ ಸಮಸ್ತಾಃ ಸುಖಿನೋ ಭವಂತು||
ಸರ್ವಃ ಸರ್ವತ್ರ ನಂದತು||
ಮಾ ಕಶ್ಚಿತ್ ದುಃಖಮಾಪ್ನುಯಾತ್||
ಸರ್ವೇ ಜನಾಃ ಸುಖಿನೋ ಭವಂತು||
ಸರ್ವೇ ಭದ್ರಾಣಿ ಪಶ್ಯಂತು||
ಸರ್ವಸ್ತರತು ದುರ್ಗಾಣಿ||
ಸರ್ವೇ ಸಂತು ನಿರಾಮಯಾಃ||

ನಮ್ಮ ತಲೆ ತಲೆಮಾರುಗಳಷ್ಟು ಹಿಂದಿನ ಜನರು ಪ್ರತಿದಿನ ಉಷಾಃ ಕಾಲದಲ್ಲಿ ಉದಯಿಸುತ್ತಿರುವ ಸೂರ್ಯನನ್ನು ನೋಡಿ ಕೈಮುಗಿದುಕೊಂಡು ಋಷಿ ಮುನಿಗಳು ರಚಿಸಿದ ಮೇಲ್ಕಂಡ ವೇದ ಮಂತ್ರಗಳನ್ನು ಪಠಿಸುತ್ತಾ ಪ್ರಾರ್ಥಿಸುತ್ತಿದ್ದರು. ಪಂಚ ಭೂತಗಳೂ ಸುಸ್ಥಿತಿಯಲ್ಲಿರಲಿ; ಸಮಸ್ತ ಲೋಕವೂ ಚೆನ್ನಾಗಿರಲಿ; ಸರ್ವರಿಗೂ ಮಂಗಳವಾಗಲಿ ಎಂಬ ಉದಾತ್ತ ವಿಶಾಲ ಮನೋಭಾವ ಅಂದಿನ ಜನರಿಗಿತ್ತು.
ಆದರೆ ಈಗೇನಾಗಿದೆ? ಹಾಗಾದರೆ ವೇದಗಳು ಅಪ್ರಸ್ತುತವೆ?
ಚತುರ್ವೇದಗಳನ್ನೂ ಅರಗಿಸಿಕೊಂಡಿರುವ ಮಹಾನ್ ಚೇತನ ಶತಾಯುಷಿ ಶ್ರೀ ಸುಧಾಕರ ಚತುರ್ವೇದಿ ಅವರ ಶಿಷ್ಯರೂ ಹಾಗೂ ವೇದಾಧ್ಯಾಯಿಗಳೂ ಆಗಿರುವ ಬೆಂಗಳೂರಿನ ಸುಧಾಕರ ಶರ್ಮ ಅವರ ಪ್ರಕಾರ ವೇದಗಳು ಖಂಡಿತ ಅಪ್ರಸ್ತುತವಲ್ಲ! ಅಜ್ಞಾನಿಗಳೂ, ಜಗತ್ತಿನ ನಿತ್ಯ ಸತ್ಯಗಳನ್ನು ಅರಗಿಸಿಕೊಳ್ಳಲಾಗದವರು; ಅದರಂತೆ ನಡೆಯುವ ಸಾಮಥ್ರ್ಯವಿಲ್ಲದವರು ಈ ಪಲಾಯನ ವಾದ ಮಂಡಿಸುತ್ತಾರಷ್ಟೆ. ಈ ಒಂದೇ ಭೂಮಿಯ ಮೇಲೆ ಮನುಷ್ಯ ಹೇಗೆ ಬದುಕಬೇಕು; ಅವನ ರೀತಿ ನೀತಿಗಳು ಹೇಗಿರಬೇಕು; ಅವನ ಅಂತಿಮ ಗುರಿ ಏನು ಎಂಬುದನ್ನು ತಿಳಿಸಿಕೊಡುವ ವೇದಗಳು ``ಮನು ಕುಲದ ಸಂವಿಧಾನ''ವಾಗಿವೆ ಎಂದು ಅವರು ಪ್ರತಿಪಾದಿಸುತ್ತಾರೆ. ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವಣ ವೇದಗಳ ಜತೆಗೆ 6 ವೇದಾಂಗಗಳಿವೆ. ಅವು- ಛಂದಸ್ಸು, ಶಿಕ್ಷಾ, ವ್ಯಾಕರಣ, ನಿರುಕ್ತಿ, ಜ್ಯೋತಿಷ ಹಾಗೂ ಕಲ್ಪ. ಜತೆಗೆ 6 ದರ್ಶನಗಳಿವೆ- ಅವು ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂರ್ವ ಮೀಮಾಂಸ ಹಾಗೂ ಉತ್ತರ ಮೀಮಾಂಸ. ಇದಲ್ಲದೆ ಆಯುರ್ವೇದ  ಮತ್ತಿತರ ಉಪ ವೇದಗಳೂ ಇವೆ. ಇವೆಲ್ಲವನ್ನೂ ಒಳಗೊಂಡ `ವೇದ ವೇದಾಂಗ ದರ್ಶನಗಳ' ವಿಷಯಗಳೇ ಜಗತ್ತಿನ ನಿತ್ಯ ಸತ್ಯಗಳು. ಉಳಿದಂತೆ ಪುರಾಣಗಳು, ಪುಣ್ಯ ಕಥೆಗಳು, ನಂಬಿಕೆಗಳು, ಆಚರಣೆಗಳು, ಪದ್ಧತಿಗಳು ಇತ್ಯಾದಿ ಅಪಭ್ರಂಶಗಳೆಲ್ಲ ನಾವು ಸೃಷ್ಟಿಸಿಕೊಂಡ ಮಿಥ್ಯಗಳೇ ಆಗಿವೆ. ದುರದೃಷ್ಟವಶಾತ್ ಭಾರತವೂ ಸೇರಿದಂತೆ ಈಗ ಜಗತ್ತು ಇಂತಹ ಮಿಥ್ಯಗಳ ಹಾದಿಯಲ್ಲೇ ನಡೆಯುತ್ತಿದೆ! `ವೈದಿಕ ಸಿದ್ಧಾಂತ ಹಾಗೂ ಮಾನವೀಯ ಧರ್ಮ' ಮುಖ್ಯವೇ ಹೊರತು ಯಾವುದೇ ವ್ಯಕ್ತಿಗಳಲ್ಲ. ಆದರೆ ಇಂದು ಎಲ್ಲವೂ ವ್ಯಕ್ತಿ ಪ್ರಧಾನ್ಯತೆ ಮೇಲೆಯೇ ಸಾಗುತ್ತಿವೆ. ಇದು ಸಲ್ಲದು ಎಂಬ ಪ್ರಖರ ಹಾಗೂ ಕ್ರಾಂತಿಕಾರಿ ಸತ್ಯಗಳನ್ನು ಅವರು ಮುಂದಿಡುತ್ತಾರೆ.
ತಪ್ಪು ಕಲ್ಪನೆಗಳು:
ವೇದಗಳ ಕುರಿತು ಇಂದು ಅನೇಕ ತಪ್ಪು ಕಲ್ಪನೆಗಳಿವೆ. ಈ ನಕಾರಾತ್ಮಕ ಕಲ್ಪನೆಗಳದ್ದೇ ಸಾಮ್ರಾಜ್ಯ. ವೇದ ಎಂದರೆ `ಜ್ಞಾನ' ಎಂಬ ಅರ್ಥವಷ್ಟೆ. ಈ ಜ್ಞಾನ ರಾಶಿ ಜಗತ್ತಿನ ಯಾರ ಸ್ವತ್ತೂ ಅಲ್ಲ; ವೇದಗಳಲ್ಲಿ ಯಾವುದೇ ನಿರ್ದಿಷ್ಟ ಜಾತಿ, ಮತ, ಪಂಥಗಳ ಉಲ್ಲೇಖವಿಲ್ಲ. ವೇದಗಳ ಮೇಲೆ ಯಾರಿಗೂ ಅಧಿಕಾರ ಸ್ಥಾಪಿಸುವ ಹಕ್ಕಿಲ್ಲ. ಈ ಜಗತ್ತಿನೊಂದಿಗೇ ಸೃಷ್ಟಿಯಾದ ವೇದಗಳಲ್ಲಿ ಎಲ್ಲವೂ ಅಡಗಿದೆ ಹಾಗೂ ಅವು ಜಗತ್ತಿನ ಎಲ್ಲರಿಗಾಗಿಯೂ ಇವೆ. ವೇದಗಳು ಪುರೋಹಿತಶಾಹಿಯೂ ಅಲ್ಲ; ಮಂತ್ರ ಹೇಳುವ ಪುರೋಹಿತರಿಗಾಗಿ ಸೃಷ್ಟಿಯಾದದ್ದೂ ಅಲ್ಲ. ಕೇವಲ ಒಂದು ವರ್ಗ ಅಥವಾ ಜಾತಿಗೆ ಸೀಮಿತವಂತೂ ಅಲ್ಲವೇ ಅಲ್ಲ! ಯಾವುದೇ ವೇದದಲ್ಲೂ `ಹಿಂದೂ' ಎಂಬ ಶಬ್ದ ಇಲ್ಲ. `ಆರ್ಯ' ಎಂಬ ಶಬ್ದ ಮಾತ್ರ ಸಿಗುತ್ತದೆ. ಆರ್ಯ ಎಂಬುದು ಇಂಗ್ಲೀಷಿನ `ಜಂಟ್ಲ್ಮನ್ (ಸಂಭಾವಿತ) ಎಂಬ ಪದಕ್ಕೆ ಸಮಾನ ಅರ್ಥ ಹೊಂದಿದೆ. ಈ ಅರ್ಥದಲ್ಲಿ ಇಡೀ ಮನುಕುಲ `ಆರ್ಯ ಕುಲ'ವಾಗಬೇಕೇ ಹೊರತು, `ಆರ್ಯ-ದ್ರಾವಿಡ ಎಂಬ ವಿಚ್ಛಿದ್ರಕಾರಿ ಸುಳ್ಳು ಸುಳ್ಳೇ ತಪ್ಪು ಕಲ್ಪನೆಗಳಿಗೆ ಈಡಾಗಬಾರದು.
`ಪ್ರಗತಿಪರ'ರು, `ಜಾತ್ಯತೀತ'ವಾದಿಗಳೆಂದು ಕರೆಸಿಕೊಳ್ಳುವವರಿಂದ ಈಗೀಗ ಹೆಚ್ಚು ಟೀಕೆಗೆ ಒಳಗಾಗಿರುವ `ಮನು' ಹೇಳಿದನೆಂದು ಉಲ್ಲೇಖಿಸಲಾಗುತ್ತಿರುವ `ನಃ ಸ್ತ್ರೀ  ಸ್ವಾತಂತ್ಯ್ರಮರ್ಹತಿಃ' (ಹೆಣ್ಣಿಗೆ ಸ್ವಾತಂತ್ಯವಿಲ್ಲ) ಎಂಬುದಾಗಲಿ, ಪ್ರಾಣಿ ಬಲಿಯಾಗಲಿ (ಹಿಂಸೆ),  ಜಾತಿಗಳ ಕುರಿತಾಗಲಿ, ಮೇಲು ಕೀಳು ಅಸ್ಪೃಶ್ಯತೆಗಳಾಗಲಿ ಅಥವಾ ಇನ್ಯಾವುದೇ ನಕಾರಾತ್ಮಕ ಅಂಶಗಳಾಗಲಿ ವೇದಗಳಲ್ಲಿ ಇಲ್ಲ. ಪರಂಪರೆ ಸಾಗಿಬಂದಂತೆ ಕಾಲಾನುಕ್ರಮವಾಗಿ ಇವೆಲ್ಲವೂ ಸ್ವಾರ್ಥ ಸಾಧಕರ ಹುನ್ನಾರದಿಂದಾಗಿ ಸಮಾಜದಲ್ಲಿ ಸೇರಿಕೊಂಡ ವಿಕೃತಿಗಳಾಗಿವೆ. ವಾಸ್ತವವಾಗಿ ವೇದಗಳಲ್ಲಿ ಸ್ತ್ರೀಯರಿಗೆ ಸಮಾನತೆ ಸಾರಲಾಗಿದೆ. ಅವರಿಗೂ ಶೋಡಷ ಸಂಸ್ಕಾರಗಳು ಹಾಗೂ ವೇದಾಧ್ಯಯನ ಹಕ್ಕು ಇದೆ. ದುರದೃಷ್ಟವಶಾತ್ ಇಂದಿನ ಯಾವುದೇ ಪೀಠಾಧಿಪತಿಗಳೂ ಸಹ ಇದನ್ನು ನೇರವಾಗಿ ಬಾಯಿಬಿಟ್ಟು ಹೇಳುತ್ತಿಲ್ಲ!
ವೇದಗಳಲ್ಲಿ ಜಾತಿಯ ಬದಲು `ವರ್ಣ'ವಿದೆ. ವರ್ಣ ಎಂದರೆ ವರ್ಗ ಅಷ್ಟೆ. ಇದೊಂದು ಸಾಮಾಜಿಕ ವ್ಯವಸ್ಥೆ. ಇಂದೂ ಸಹ ವೈದ್ಯರ ವರ್ಗ, ವಕೀಲರ ವರ್ಗ, ಇಂಜಿನಿಯರುಗಳ ವರ್ಗ, ಸೇವಾ ವರ್ಗ ಎಂದಿಲ್ಲವೇ ಹಾಗೆಯೇ ಅವರವರು ಕೈಗೊಳ್ಳುವ ವೃತ್ತಿಗಳಿಗೆ ಅನುಗುಣವಾಗಿ ಅವನ್ನು ವಿಂಗಡಿಸಬಹುದು. ಹಿಂದೆ ಅವರವರ ಸ್ವಭಾವ ಇಷ್ಟಾನಿಷ್ಟಗಳಿಗೆ ಅನುಗುಣವಾಗಿ ವೇದಾಧ್ಯಯನ ಹಾಗೂ ವೃತ್ತಿಗಳಲ್ಲಿ ಪರಿಣತಿ ಪಡೆಯಲು ಅವಕಾಶವಿತ್ತು. ಆ ದೃಷ್ಟಿಯಲ್ಲಿ ವರ್ಣ ಎಂಬುದು ಜಗತ್ತಿನ ಎಲ್ಲೆಡೆಯೂ ಇಂದಿಗೂ ಪ್ರಚಲಿತವೇ ಆಗಿದೆ. ಅದರ ಬದಲು ವರ್ಣಗಳನ್ನು ವಿಕೃತಗೊಳಿಸಿ ಜಾತಿಗಳ ಹೆಸರಿನಲ್ಲಿ ಗುಂಪುಗಾರಿಕೆ ಮಾಡಿ ಶೋಷಣೆಗೆ ಒಳಪಡಿಸಿದ್ದರೆ ಅದು ಸ್ವಾರ್ಥಕ್ಕಾಗಿ ಮಾಡಿಕೊಂಡ ಅಮಾನವೀಯ ವ್ಯವಸ್ಥೆಯಷ್ಟೆ.
ಒಟ್ಟು ರಾಶಿಯಾಗಿ ಬಿದ್ದಿದ್ದ ವೇದ ಜ್ಞಾನವನ್ನು ವ್ಯಾಸ ಮಹರ್ಷಿಗಳು ಚತುರ್ವೇದಗಳಾಗುವಂತೆ ವಿಂಗಡಿಸಿದರೆಂಬ ಸಿದ್ಧಾಂತವೂ ಸಹ ತಪ್ಪು ಕಲ್ಪನೆಯಾಗಿದೆ! ವೇದದ ಮೂಲ ಮಂತ್ರವೊಂದರಲ್ಲಿ `ಋಗ್ವೇದ, ಯಜುರ್ವೇದ, ಸಾಮ ವೇದ ಹಾಗೂ ಅಥರ್ವಣ ವೇದ' ಎಂದು ನಾಲ್ಕು ಭಾಗ ಮಾಡಿಯೇ ಹೆಸರಿಸಿರುವ ಉಲ್ಲೇಖವಿದೆ!! ಅಂದ ಮೇಲೆ ನಂತರ ಅವನ್ನು ವಿಂಗಡಿಸಿಡುವ ಮಾತೆಲ್ಲಿ ಬಂತು? ಆದರೆ ವ್ಯಾಸರು ಚತುರ್ವೇದಗಳನ್ನೂ ಆಳವಾಗಿ ಅಧ್ಯಯನ ಮಾಡಿದರು ಎಂಬುದು ಮಾತ್ರ ನಿತ್ಯ ಸತ್ಯ. ಹೀಗಾಗಿಯೇ ಅವರಿಗೆ `ವೇದ ವ್ಯಾಸರು' ಎಂಬ ಹೆಸರಾಗಿದೆ.
ಇನ್ನು, `ವೇದ ಕಾಲ' ಎಂಬುದೂ ಸಹ ಇತಿಹಾಸ ತಿರುಚುವ ಯತ್ನದ ಸುಳ್ಳು ಕಲ್ಪನೆಯಾಗಿದೆ. ವೇದ ಜ್ಞಾನವನ್ನು ನಾಶಪಡಿಸಿ ತಮ್ಮ ಪ್ರಭುತ್ವ ಸ್ಥಾಪಿಸಲು ಬ್ರಿಟೀಷರು ಮಾಡಿದ ಕುತಂತ್ರ ಇದಾಗಿದೆ. ಸರ್ವ ಕಾಲವೂ ವೇದ ಕಾಲವೇ! ನಾವು ಕಲ್ಲಿಗೊಂದು-ಗಲ್ಲಿಗೊಂದು ಸೃಷ್ಟಿಸಿರುವ `ದೇವತೆಗಳು' ಸಹ ತಪ್ಪು ಕಲ್ಪನೆಯೇ ಆಗಿದೆ. ಇತರ ಧರ್ಮಗಳು ಹೇಳುವಂತೆ ವೇದಗಳೂ ಸಹ ಏಕ ದೈವವನ್ನೇ ಪ್ರತಿಪಾದಿಸಿವೆ. ದೇವರು ಒಬ್ಬನೇ; ಅವನು ಸವಾಂತರ್ಯಾಮಿ; ನಿರಾಕಾರ; ನಿರ್ಗುಣ ಎಂದೇ ಸಾರಿವೆ. ಹಾಗಿದ್ದ ಮೇಲೆ ಉಳಿದಂತೆ ಸೃಷ್ಟಿಯಾದ ಪುರಾಣಗಳು, ಪುಣ್ಯ ಕಥೆಗಳು, ಮುಕ್ಕೋಟಿ ದೇವತೆಗಳು, ದಶಾವತಾರಗಳ ಕಲ್ಪನೆ, ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯ, ಈಗಿನ ಜ್ಯೋತಿಷ್ಯ, ವಾಸ್ತು ಇತ್ಯಾದಿಗಳೆಲ್ಲವೂ ಸುಳ್ಳು. ಸ್ವಾರ್ಥಕ್ಕಾಗಿ ಮತ್ತು ಅಜ್ಞಾನದಿಂದ ಸಮಾಜ ಘಾತುಕರು ಕಾಲಾನುಕ್ರಮವಾಗಿ ಇವೆಲ್ಲವನ್ನೂ ಸೃಷ್ಟಿಸಿದ್ದಾರೆ!
ವೇದಗಳಲ್ಲಿ ಜ್ಯೋತಿಷ ಇದೆ ನಿಜ; ಆದರೆ ಅದು ಈಗಿನ ಡೋಂಗಿ ಜ್ಯೋತಿಷಿಗಳು ಹೇಳುವ ಫಲ ಜ್ಯೋತಿಷ್ಯವಲ್ಲ; ಅಲ್ಲಿರುವುದು ಅಪ್ಪಟ ಖಗೋಳ ವಿಜ್ಞಾನ (ಆರ್ಯಭಟನಂತಹ ವಿಜ್ಞಾನಿಗಳು ಅಭ್ಯಸಿಸಿದ ಶಾಸ್ತ್ರ). ಅದು `ಆಸ್ಟ್ರಾನಮಿ'ಯೇ ಹೊರತು ಈಗಿನ `ಆಸ್ಟ್ರಾಲಜಿ' ಅಲ್ಲ! ಈಗಿನವರು ವೇದದಲ್ಲಿನ `ಜ್ಯೋತಿಷ್ಯ' ಎಂಬ ಪದವನ್ನಷ್ಟೇ ಕದ್ದು, ಅದರ ಹೆಸರಲ್ಲಿ ಹೊಟ್ಟೆ ಹೊರೆಯುತ್ತಿದ್ದಾರೆ.
ಅದೇ ರೀತಿ ಈಗ ದೊಡ್ಡ ಪಿಡುಗಾಗಿರುವ, ಅಮಾಯಕರನ್ನು ಹೆದರಿಸಿ ಸುಲಿಗೆ ಮಾಡುತ್ತಿರುವ `ವಾಸ್ತು'ವೂ ಸಹ ವೇದಗಳಲ್ಲಿ ಇಲ್ಲ. ವಾಸ್ತು ಎಂದರೆ ಮನೆಯ ಹೊಸ್ತಿಲು ಎಂದಷ್ಟೇ ಅರ್ಥ. ವೇದಗಳಲ್ಲಿ `ವಾಸ್ತೋಷ್ಪತಿ' ಎಂದು ಕರೆಸಿಕೊಳ್ಳುವ ಆ ಒಬ್ಬನೇ ಭಗವಂತನನ್ನು ಕುರಿತು `ನಾನು ಕಟ್ಟಿಸಿರುವ ಹೊಸ ಮನೆ, ಮಡದಿ, ಮಕ್ಕಳು, ಪಶು ಮತ್ತಿತರ ಸಂಪತ್ತನ್ನು ಕಾಪಾಡು ದೇವಾ' ಎಂದು ಪ್ರಾರ್ಥಿಸುವ ಅನೇಕ ಮಂತ್ರಗಳನ್ನು ಕಾಣಬಹುದು. ಯಥಾಪ್ರಕಾರ `ವಾಸ್ತು' ಎಂಬ ಪದವನ್ನಷ್ಟೆ ಕದ್ದು ಅದರ ದುರುಪಯೋಗದೊಂದಿಗೆ ಅಮಾಯಕರ ಸುಲಿಗೆ ನಡೆದಿದೆ ಎಂದು ಸುಧಾಕರ ಶರ್ಮರು ಹಲವು ವೇದ ಮಂತ್ರಗಳನ್ನು ಉಲ್ಲೇಖಿಸಿ ಪ್ರಸ್ತುತ ಸ್ಥಿತಿಗತಿ ಖಂಡಿಸುತ್ತಾರೆ.

ತಿರುಚುವ ಎಚ್ಚರಿಕೆ:
ಭಗವದ್ಗೀತೆಯೂ ಸಹ ವೇದೋಪನಿಷತ್ತುಗಳ ಸಾರವೇ ಆಗಿದೆ. ಬಹಳ ಹಿಂದಕ್ಕೆ ಹೋದರೆ ರಾಮ ಹಾಗೂ ಕೃಷ್ಣರು ಐತಿಹಾಸಿಕ ವ್ಯಕ್ತಿಗಳೆಂಬುದು ಮಾತ್ರ ನಿಜ; ಉಳಿದವರು ಹಾಗೂ ಉಳಿದದ್ದೆಲ್ಲವೂ ಕಾಲ್ಪನಿಕ ಕಥೆಗಳಷ್ಟೆ. ಬಸವಣ್ಣನವರು ತಮ್ಮ ವಚನಗಳ ಮೂಲಕ ಸರಳ ಕನ್ನಡದಲ್ಲಿ ಹೇಳಿರುವ ಸತ್ಯಗಳೂ ಸಹ ವೇದೋಪನಿಷತ್ತುಗಳ ಸಾರವಾದ ಭಗವದ್ಗೀತೆಯಲ್ಲಿ ಇರುವಂಥವೇ ಆಗಿವೆ.
ಬಸವ ಹಾಗೂ ಬುದ್ಧರು ವೇದಗಳನ್ನು ಎಂದೂ ವಿರೋಧಿಸಲಿಲ್ಲ. ಬದಲಿಗೆ ಅವುಗಳ ಜತೆ ಸಾಗಿ ಬಂದ ಅಪಭ್ರಂಶಗಳನ್ನಷ್ಟೇ ವಿರೋಧಿಸಿದರು. ವೇದಗಳೊಂದಿಗೆ ಸಾಗಿಬಂದ ವಿಕೃತಿ, ವಿರೋಧಾಭಾಸ, ವಿಪರ್ಯಾಸ, ಅಪಾರ್ಥ ಅಪಭ್ರಂಶಗಳೆಲ್ಲ ಮಹಾ ಭಾರತವೆಂಬ `ಜಾಗತಿಕ ಸಮರ' ಹಾಗೂ ನಂತರದ ದುಷ್ಪರಿಣಾಮಗಳಾಗಿವೆ. ವೇದಾಂಗಗಳು ಹಾಗೂ ಅದರಲ್ಲಿನ `ವ್ಯವಸ್ಥೆ'ಯನ್ನು ಕಡೆಗಣಿಸಿ ಕೇವಲ ಊಹೆಗಳು, ಕಲ್ಪನೆಗಳು ಅಥವಾ ಈಗಿನ ಮಾಮೂಲಿ `ಪದ ಕೋಶ' (ಡಿಕ್ಷನರಿ) ಆಧಾರದ ಮೇಲೆ ವೇದಗಳನ್ನು ಸರಳೀಕರಿಸುವ ಪ್ರಕ್ರಿಯೆಗೆ ತೊಡಗಿದರೆ ದಾರಿ ತಪ್ಪುವುದು ಖಚಿತ! ಆಗ ವೇದಗಳ ಗಾಂಭೀರ್ಯ ಹಾಗೂ ನಿಜಾರ್ಥಗಳು ಕಳೆದುಹೋಗಿ ಅಪಾರ್ಥಗಳೊಂದಿಗೆ ತಿರುಚಲ್ಪಡುವ ಅಪಾಯವಿದೆ. ಅದು ಅಸಾಧ್ಯ. ಹಿಂದೆ ನಡೆದ ಅಂತಹ ಪ್ರಯತ್ನಗಳ ಫಲವನ್ನು ಇದೀಗ ಸಮಾಜ ಅನುಭವಿಸುತ್ತಿದೆ. ಈ ಕುರಿತು ತುಂಬಾ ಎಚ್ಚರವಾಗಿರಬೇಕು ಎಂದು ಶರ್ಮರು ಮುನ್ನೆಚ್ಚರಿಕೆ ನೀಡುತ್ತಾರೆ.

`ಸೌಧನ್ವನಾಸಹಃ:
ವೇದಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ವ್ಯಾಪಕವಾದ ವಿವರಗಳು ಇವೆ. ಅದರಂತೆ- 1) `ವಿಶ್ವ ಚೇತನ ದೇವ' ಎಂದರೆ ನಮ್ಮ ಕಣ್ಣಿಗೆ ಕಾಣದ ಒಂದು ಸರ್ವ ಶಕ್ತ ದೈವ. 2) `ಚೈತನ್ಯ ದೇವತಾ' ಎಂದರೆ `ಅರಿವು' ಇರುವ ಜೀವಂತ ಜ್ಞಾನಿಗಳು; ಮಾನವರು ಅಥವಾ ಜೀವಾತ್ಮಗಳು ಮತ್ತು 3) `ಜಡ ದೇವತೆಗಳು' ಎಂದರೆ ಪಂಚ ಭೂತಗಳು (ಆಕಾಶ, ನೀರು, ವಾಯು, ಅಗ್ನಿ ಮತ್ತು ಭೂಗೋಳ). ವೇದದಲ್ಲಿ ಈ ಪಂಚ ಭೂತಗಳನ್ನೂ ಸೇರಿಸಿಯೇ ಈ ಭೂಮಿಯನ್ನು ಇಡಿಯಾಗಿ ಪರಿಗಣಿಸಲಾಗಿದೆ. ಇಲ್ಲಿ `ಸೌಧನ್ವನಾಸಹಃ' ಎಂಬ ಮಾತು ಬರುತ್ತದೆ. `ಸುಧನ್ವ' ಎಂದರೆ `ಒಳ್ಳೆಯ ಭೂಮಿ'. ಸೌಧನ್ವನಾಸಹಃ ಎಂಬ ಶಬ್ದದ ಅರ್ಥ ಬಿಡಿಸಿದಾಗ `ಒಳ್ಳೆಯ ಭೂಮಿಯ ಒಳ್ಳೆಯ ಮಕ್ಕಳು' ಎಂದಾಗುತ್ತದೆ! ಹಾಗೆ ಒಳ್ಳೆಯ ಮಕ್ಕಳಾಗಬೇಕೆಂದರೆ ಈ ಭೂಮಿಗೆ ಸಂಬಂಧಿಸಿದ ಈ ಪಂಚ ಭೂತಗಳ ತಂಟೆಗೆ ಯಾರೂ ಹೋಗಬಾರದು; ಅವು ಏನೇನು ನೀಡುತ್ತವೆಯೋ ಅವನ್ನು ಹಾಗೆಯೇ ಪಡೆದುಕೊಂಡು, ಅವುಗಳ ಜತೆಯಲ್ಲೇ ಹೊಂದಿಕೊಂಡು ಮನುಷ್ಯ ಜೀವಿಸಬೇಕು; ಹಾಗಿದ್ದರೆ ಮಾತ್ರ ನಾವು `ಸೌಧನ್ವನಾಸಹಃ' ಆಗುತ್ತೇವೆ; ಈ ಪರಿಸರ ಚೆನ್ನಾಗಿರುತ್ತದೆ!!
ಈಗ ಯೋಚಿಸಿ: ನಾವು ಹಾಗಿದ್ದೇವೆಯೇ!? ಹಾಗೆ ಇರಬೇಕು ಎಂದು ಸಂಕಲ್ಪಿಸುವುದಾದರೆ ಅದಕ್ಕೆ ಅಗತ್ಯವಾದ 3 ಅರ್ಹತೆಗಳನ್ನು ಮೊದಲು ಹೊಂದಬೇಕಾಗುತ್ತದೆ. 1) `ರೋಗ-ಭೋಗ-ಯೋಗ'- ಈ ಮೂರರ ನಿಜವಾದ ಅರ್ಥ ಏನು ಎಂದು ತಿಳಿಯಬೇಕು; ನಂತರ ಈ ಮೂರನ್ನೂ ಸರಿಯಾಗಿ ಗುರುತಿಸಿಕೊಂಡು ಅದರಂತೆ ನಡೆಯುವ ಸಾಮಥ್ರ್ಯ ಪಡೆಯಬೇಕು. 2) ಪಂಚ ಭೂತಗಳನ್ನೂ ಹಿತ ಮಿತವಾಗಿ-ಸಮರ್ಪಕವಾಗಿ ಬಳಸಿಕೊಳ್ಳುವ ತಿಳಿವಳಿಕೆ ಬೆಳೆಸಿಕೊಳ್ಳಬೇಕು ಮತ್ತು 3) `ಈತ ನಿಜವಾಗಿಯೂ ಯೋಗ್ಯ ವ್ಯಕ್ತಿ' ಎಂದು ನಿಮ್ಮ ಬಗ್ಗೆ ಇನ್ನೊಬ್ಬರು ಮತ್ತೊಬ್ಬರತ್ತ ಬೆಟ್ಟುಮಾಡಿ ತೋರಿಸುವಂತಹ ಉತ್ತಮ ಚಾರಿತ್ರ್ಯ (ಪ್ರಾಮಾಣಿಕತೆ) ರೂಢಿಸಿಕೊಳ್ಳಬೇಕು. ಈ ಅರ್ಹತೆಗಳನ್ನು ಪಡೆದವರು ಮಾತ್ರ ನಿಜವಾದ ಮನುಷ್ಯರಾಗಲು ಸಾಧ್ಯ. ಈ ದೃಷ್ಟಿಯಲ್ಲಿ ನೋಡಿದಾಗ ಪ್ರಸ್ತುತ ಪ್ರಪಂಚದ 600 ಕೋಟಿಗೂ ಹೆಚ್ಚು ಜನ ಸಂಖ್ಯೆಯಲ್ಲಿ ಇಂತಹ ಅರ್ಹ `ಸೌಧನ್ವನಾಸಹಃ' ಬೆರಳೆಣಿಕೆಯಷ್ಟೂ ಸಿಗಲಾರರೇನೋ....!?

ಡೈನಮಿಕ್ ಕಮ್ಯುನಿಸಂ:
ಈಗಿನ `ಕಮ್ಯುನಿಸಂ' (ಸಮತಾ ವಾದ) ಪ್ರಕಾರ `ಜಗತ್ತಿನಲ್ಲಿ ಎಲ್ಲೆಲ್ಲೂ ಸಮಾನತೆ ಬರಬೇಕು'. ಸರಿ! ಸಮಾನತೆ ಬಂತು; ಎಲ್ಲರೂ ಸಮಾನರಾದರು; ಗುರಿ ಸಾಧಿಸಿಯಾಯ್ತು ಎಂದಿಟ್ಟುಕೊಳ್ಳೋಣ. ಮುಂದೇನು? ಈ ಪ್ರಶ್ನೆಗೆ ಕಮ್ಯುನಿಸಂನಲ್ಲಿ ಉತ್ತರವಿಲ್ಲ. ಆದರೆ ವೇದಗಳಲ್ಲಿ ಇದಕ್ಕೆ ಉತ್ತರವಿದೆ- ಹೌದು; ವೇದಗಳಲ್ಲೂ ಕಮ್ಯುನಿಸಂ ಇದೆ! ಅದು ಡೈನಮಿಕ್ ಕಮ್ಯುನಿಸಂ!! ಅಂದರೆ- ನಿನಗಿಂತ ಹಿಂದುಳಿದವರನ್ನು ನಿನ್ನ ಸಮಕ್ಕೆ ಎಳೆದುಕೋ; ಆದರೆ ನಂತರ ನೀನು ಸುಮ್ಮನಿರಬೇಡ; ನಾಲ್ಕು ಹೆಜ್ಜೆ ಮುಂದೆ ಹೋಗು; ಆಗ ಮತ್ತೆ ನಿನ್ನ ಜತೆಯವ ಹಿಂದುಳಿಯುತ್ತಾನೆ; ಪುನಃ ಆತನನ್ನು ನಿನ್ನ ಸಮಕ್ಕೆ ಎಳೆದುಕೋ....! ಇದೇ ಪ್ರಕ್ರಿಯೆ ಮುಂದುವರೆಸಿಕೊಳ್ಳುತ್ತಾ ಸಾಗಿದಾಗ ನೀನು ಮತ್ತು ನಿನ್ನ ಜತೆಯವ ಇಬ್ಬರೂ ಅಂತಿಮ ಗುರಿ ತಲುಪಲು ಸಾಧ್ಯ; ನೀನು ಹೀಗೆ ನಿನ್ನ ಜತೆಯವನನ್ನು ಮೂರ್ನಾಲ್ಕು ಬಾರಿ ನಿನ್ನ ಸಮಕ್ಕೆ ಎಳೆದುಕೊಳ್ಳುವ ವೇಳೆಗೆ ಅವನಿಗೇ ಸ್ವತಃ ನಿನ್ನಷ್ಟೇ ಶಕ್ತಿ ಬಂದಾಗಿರುತ್ತದೆ; ಅವನೇ ನಿನ್ನ ಸಮಕ್ಕೆ ಬರುವ ಸಾಧ್ಯತೆಗಳಿವೆ!!

ಅರಿಷಡ್ವರ್ಗಗಳ ಪಳಗಿಸುವಿಕೆ:
ಈ ಕಲಿಯುಗ ಸಾಗುತ್ತಿರುವ ವಿನಾಶಕಾರಿ ರೀತಿ-ನೀತಿಗಳನ್ನು ಕಂಡರೆ ದಿಗಿಲಾಗುತ್ತದೆ. ಎಲ್ಲೆಲ್ಲೂ ಭ್ರಷ್ಟಾಚಾರ, ಕೊಲೆ, ಸುಲಿಗೆ, ಅತ್ಯಾಚಾರ ಅನಾಚಾರಗಳ ತಾಂಡವ ನಡೆದಿದೆ. ಇದೆಲ್ಲದಕ್ಕೂ ಮೂಲ ಕಾರಣ ಕಾಮ, ಕ್ರೋಧ, ಲೋಭ, ಮೋಹ, ಮದ ಹಾಗೂ ಮಾತ್ಸರ್ಯ ಎಂಬ ಅರಿಷಡ್ವರ್ಗಗಳೇ ಆಗಿವೆ. ಇವನ್ನು ತೊಡೆಯುವುದು ಹೇಗೆ? ಇಲ್ಲ ಬಿಡಿ! ಇವು ಪ್ರಕೃತಿ ಸಹಜವಾಗಿರುವ ಜೀವಾತ್ಮನ ಲಕ್ಷಣಗಳಾಗಿರುವುದರಿಂದ ಇವನ್ನು ನಿವಾರಿಸಿಕೊಳ್ಳಲು ಸಾಧ್ಯವಿಲ್ಲ. ಅವುಗಳ ಜತೆಗೇ ಬದುಕುವುದು ಅನಿವಾರ್ಯ ಕರ್ಮ. ಆದರೆ ಅವುಗಳ ಸಹಜ ಲಕ್ಷಣಗಳೊಂದಿಗೇ ಯಥಾವತ್ತಾಗಿ ಬದುಕಿದರೆ ಅವನು ಮನುಷ್ಯನಾಗಿರಲು ಸಾಧ್ಯವಾಗದೆ ರಾಕ್ಷಸನಾಗುತ್ತಾನಷ್ಟೆ; ಹಾಗಾದರೆ ಉಪಾಯವೇನು? ಇದೆ! ಇವನ್ನು ಪೂರ್ಣ ನಿವಾರಿಸಲು ಸಾಧ್ಯವಾಗದಿದ್ದರೂ, `ನಕಾರಾತ್ಮಕ' ಆಗಿರುವ ಇವನ್ನು `ಸಕಾರಾತ್ಮಕ' ಮಾಡಿಕೊಳ್ಳಬೇಕಷ್ಟೆ!! ಅದು ಹೀಗೆ:

ಕಾಮ: ಅಂದರೆ ಆಸೆ-ಇಚ್ಛೆ. ಇದನ್ನು ವೇದದಲ್ಲಿ ಕೋಕಯ (ನೈಟಿಂಗೇಲ್) ಪಕ್ಷಿಗೆ ಹೋಲಿಸಲಾಗಿದೆ. ಈ ಕಾಮದ ಮುಂದೆ ಜ್ಞಾನವನ್ನು ಹಾಕಿ! ಆಸೆ...ಆಸೆ...ಆಸೆ; ಜಗತ್ತಿನ ಎಲ್ಲ ಜ್ಞಾನವನ್ನೂ ತನ್ನದಾಗಿಸಿಕೊಳ್ಳಬೇಕೆಂಬ ಅತ್ಯಾಸೆ; ಓದು...ಓದು...ಓದುತ್ತಾ ನಿನ್ನ ಆಸೆ ಪೂರೈಸಿಕೋ. ಇಲ್ಲಿ ಆಸೆ ಇದ್ದೇ ಇದೆ. ಆದರೆ ಅದು ಸಕಾರಾತ್ಮಕವಾಗಿ ಬದಲಾವಣೆಗೊಂಡಿದೆ.

ಕ್ರೋಧ: ಇದನ್ನು ವೇದಗಳಲ್ಲಿ ತೋಳಕ್ಕೆ ಹೋಲಿಸಲಾಗಿದೆ. ಕ್ರೋಧವನ್ನು ನಾವು `ಮನ್ಯು'ವಾಗಿಸಬೇಕು. ಅಂದರೆ `ಚಿಂತನಾ ಸಹಿತವಾದ ಕೋಪ' ಇಟ್ಟುಕೊಳ್ಳಬೇಕು. ಉದಾಹರಣೆಗೆ- ಅನ್ಯಾಯ, ಅಕ್ರಮ ಕಂಡಾಗ ಸಿಡಿದು ಬೀಳುವುದು. ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ; ನಾನೂ ಭ್ರಷ್ಟನಾಗುವುದಿಲ್ಲ; ಅನೀತಿ ಕೆಲಸ ಮಾಡುವುದಿಲ್ಲ ಎಂಬಂತಹ ಹಠದ ಕೋಪ ಬೆಳೆಸಿಕೊಳ್ಳುವುದು. ಇಲ್ಲಿ ಕೋಪ ಇದ್ದೇ ಇದೆ. ಆದರೆ ಅದು `ಮನ್ಯು'ವಾಗಿದೆ.

ಲೋಭ: ವೇದಗಳಲ್ಲಿ ಇದನ್ನು ಹದ್ದಿಗೆ ಹೋಲಿಸಲಾಗಿದೆ. ಯಥಾಪ್ರಕಾರ ಇದಕ್ಕೆ ಜ್ಞಾನವನ್ನೇ ಮೇವಾಗಿ ಹಾಕಿದರಾಯಿತು.

ಮೋಹ: ವೇದಗಳಲ್ಲಿ ಇದು ಗೂಬೆಗೆ ಸಮಾನ! ಗೂಬೆ ನಿಶಾಚರಿ. ಕತ್ತಲು ಎಂದರೆ ಅದಕ್ಕೆ ವಿಪರೀತ ಮೋಹ. ಮನುಷ್ಯ ತನ್ನ ಒಂದು ವಸ್ತು ಅಥವಾ ಪ್ರೀತಿ ಪಾತ್ರರ ಮೇಲಿಟ್ಟಿರುವ ಮೋಹವನ್ನು ಜಗತ್ತಿನ ಕಡೆಗೆ ತಿರುಗಿಸಬೇಕು. ಅಂದರೆ ಇಡೀ ಜಗತ್ತಿನಲ್ಲಿರುವವರೆಲ್ಲ ನನ್ನವರೇ ಎಂಬ ವ್ಯಾಪಕ- ವಿಶಾಲ ಹೃದಯದ ಮೋಹವಾಗಿ ಪರಿವತರ್ಿಸಿಕೊಳ್ಳಬೇಕು.

ಮದ: ಇದು ಸುಪರ್ಣ- ಎಂದರೆ ಗರುಡನಿಗೆ ಸಮಾನವೆಂದು ವೇದ ಹೇಳಿದೆ. `ನನ್ನ ಸಮಾನರಾರಿಹರು' ಎಂಬ ಮದ ಗರುಡ ಪಕ್ಷಿಗೆ ಹೆಚ್ಚಾಗಿರುತ್ತದೆ. ಹಾರುವುದಾದರೆ ಬಹು ಎತ್ತರಕ್ಕೇ ಹಾರುತ್ತದೆ; ಇಳಿದಾಗ ಕುಳಿತುಕೊಳ್ಳುವುದೂ ಸಹ ಎತ್ತರದಲ್ಲಿಯೇ! ಮನುಷ್ಯನ ಸ್ವಭಾವವೂ ಅದೇ ಆಗಿದೆ. ಇದನ್ನು ಹೋಗಲಾಡಿಸಲು ಅಂತಹವರು ಯಾವುದಾದರೊಂದು ವ್ರತ ನಿಷ್ಠರಾಗಬೇಕು. `ಸತ್ಯವನ್ನೇ ಹೇಳುತ್ತೇನೆ; ಹೌದು ನಾನಿರುವುದೇ ಹೀಗೆ; ನಾನು ಸತ್ಯವನ್ನಷ್ಟೇ ಹೇಳುವುದು'- ಇದು ಸತ್ಯ ವ್ರತದ ಮದ! ಗಾಂಧೀಜಿ ಕೈಗೊಂಡ ಸತ್ಯ-ಅಹಿಂಸಾ ವ್ರತಗಳು ನಮ್ಮ ಕಣ್ಣ ಮುಂದಿವೆ!

ಮಾತ್ಸರ್ಯ: ಇದು ನಾಯಿಗೆ ಸಮಾನವಾದ್ದು ಎಂದು ವೇದ ಹೇಳುತ್ತದೆ. ಯಾರಾದರೂ ನಮ್ಮ ಕಣ್ಣ ಮುಂದೆಯೇ ಉದ್ಧಾರವಾದರೆ, ಒಳಿತಾದರೆ ಅಥವಾ ಸಿರಿವಂತರಾದರೆ ಅದಕ್ಕೆ ನಾವು ಮಾತ್ಸರ್ಯಪಡುವುದು. ಈ ದುರ್ಗುಣವನ್ನು ಹೋಗಲಾಡಿಸಲು ಸ್ವಲ್ಪ ಮುಂದಾಲೋಚನೆ ಬೇಕಷ್ಟೆ. ಅಂದರೆ `ಫಲವನ್ನು ಕೈಬಿಟ್ಟು ಅದರ ಹಿಂದಿರುವ ಪ್ರಯತ್ನ'ವನ್ನು ಚಿಂತಿಸಬೇಕು. ಯಾರಾದರೂ ಹೊಸ ಮನೆ ಕಟ್ಟಿಸಿದನೆಂದರೆ, `ನ್ಯಾಯವಾಗಿ ಸಂಪಾದಿಸಿದ್ದಂತೂ ಅಲ್ಲ ಬಿಡಿ; ಯಾರ ತಲೆ ಒಡೆದು ಈ ಮನೆ ಕಟ್ಟಿಸಿದನೋ...' ಎಂದು ಮಾತ್ಸರ್ಯಪಡುವ ಬದಲು ಈ ಮನೆ ಕಟ್ಟಲು ಆತ ಎಷ್ಟು ಕಷ್ಟಪಟ್ಟಿರಬಹುದು; ಏನೇನು ಪ್ರಯತ್ನ ಮಾಡಿರಬಹುದು ಎಂದು ಉದಾರವಾಗಿ ಚಿಂತಿಸಿ ಅದನ್ನು ತಿಳಿದುಕೊಳ್ಳಬೇಕು. ಆಗ ಮುಂದೆ ನಾವೂ ಸಹ ಸಮಯ ಬಂದಾಗ ಅಂತಹ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.

ವೇದ ವಿ.ವಿ. ಪಠ್ಯ ಕ್ರಮ:
ಕರ್ನಾಟಕ ಸರ್ಕಾರದ ಉದ್ದೇಶಿತ `ವೇದ-ಸಂಸ್ಕೃತ ವಿ.ವಿ.' ಔಚಿತ್ಯಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಸುಧಾಕರ ಶರ್ಮ ಅವರು ಉತ್ತರಿಸಿ, ವೇದ-ಸಂಸ್ಕೃತ ವಿಶ್ವ ವಿದ್ಯಾಲಯ ಸ್ಥಾಪನೆಗೂ ಮುನ್ನ ಅಲ್ಲಿ ಏನೇನು ಕಲಿಸಲಾಗುತ್ತೆ ಎಂಬ ನಿರ್ದಿಷ್ಟ ಪಠ್ಯ ಕ್ರಮವನ್ನು (ಸಿಲಬಸ್) ಸರ್ಕಾರ ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು!
`ಮನು ಕುಲದ ಸಂವಿಧಾನ' ಎನಿಸಿರುವ ಮೂಲ ಚತುರ್ವೇದಗಳು, 6 ವೇದಾಂಗಳು ಹಾಗೂ 6 ದರ್ಶನಗಳನ್ನು ಒಳಗೊಂಡ `ವೇದ-ವೇದಾಂಗ-ದರ್ಶನಗಳನ್ನು' ಯಥಾವತ್ತಾಗಿ ಕಲಿಸುವುದಾದರೆ ಮಾತ್ರ ವೇದ ವಿ.ವಿ.ಗೆ ನಮ್ಮ ಸ್ವಾಗತವಿದೆ. ಅದು ಬಿಟ್ಟು ಅಮಾಯಕ ಜನರನ್ನು ಸುಲಿಗೆ ಮಾಡುವ ಮತ್ತದೇ `ಡೋಂಗಿ ಜ್ಯೋತಿಷಿ'ಗಳು ಹಾಗೂ ಬಡಾಯಿ ಕೊಚ್ಚುವ `ವಾಸ್ತು ಶಾಸ್ತ್ರಿ'ಗಳನ್ನು ಸೃಷ್ಟಿಸುವುದೇ ಉದ್ದೇಶವಾಗಿದ್ದಲ್ಲಿ ಖಂಡಿತ ಈ ವಿ.ವಿ. ಅಗತ್ಯವಿಲ್ಲ; ಭಾರತೀಯ ಪರಂಪರೆ ಜತೆಗೇ ಮಗ್ಗುಲ ಮುಳ್ಳಾಗಿ ಬೆಳೆದು ಬಂದಿರುವ ಪುರಾಣಗಳು, ಪುಣ್ಯ ಕಥೆಗಳು, ಶೃಂಗಾರ ಸಾಹಿತ್ಯ ಇತ್ಯಾದಿ ಮಾತ್ರ ಹೇಳಿಕೊಡುವುದಾದರೆ ಖಂಡಿತ ಈ ವಿ.ವಿ. ಬೇಕಾಗಿಲ್ಲ. ಹೀಗಾಗಿಯೇ ಮೊದಲು ಈ ಉದ್ದೇಶಿತ ವಿ.ವಿ.ಯಲ್ಲಿ ಏನು ಕಲಿಸಲಾಗುತ್ತದೆ ಎಂಬ ನಿರ್ಧಿಷ್ಟ ಪಠ್ಯ ಕ್ರಮ ಪ್ರಕಟಿಸಲಿ ಎಂದು ಅವರು ಖಡಾಖಂಡಿತವಾಗಿ ಹೇಳುತ್ತಾರೆ. ಆದರೆ ಸರ್ಕಾರವು ಇತ್ತ ಗಮನ ಹರಿಸಿದಂತೇನೂ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಏಕೆಂದರೆ ಕೆಲವು ಸತ್ಯಗಳು ಎಂದೂ ಕಹಿಯಾಗಿಯೇ ಇರುತ್ತವೆ!

ವೇದ ವೇದಾಂಗ ದರ್ಶನಗಳ ಕುರಿತು ಇನ್ನಷ್ಟು ಮಾಹಿತಿ ಹಾಗೂ ಉಪನ್ಯಾಸಗಳಿಗಾಗಿ ಆಸಕ್ತರು ಸುಧಾಕರ ಶರ್ಮರ ದೂರವಾಣಿ 9448842474 ಸಂಖ್ಯೆಗೆ ಸಂಪರ್ಕಿಸಬಹುದು
-ಎಚ್.ಎಸ್. ಪ್ರಭಾಕರ, ಪತ್ರಕರ್ತರು,
ಎಚ್.ಆರ್.ಎಸ್. ಕಾಂಪೌಂಡ್,
6ನೇ ಕ್ರಾಸ್, ಕೆ.ಆರ್. ಪುರಂ,
ಹಾಸನ-573201
ದೂರವಾಣಿ: 9448365816