Pages

Friday, February 25, 2011

ವೇದಸುಧೆಯಲ್ಲಿ ಹಲವಾರು ಆರೋಗ್ಯಪೂರ್ಣ ಚರ್ಚೆಗಳಾಗಿವೆ. ಪುರಾಣಗಳ ವಿಷಯದಲ್ಲಿ ಒಂದೆರಡು ದಿನಗಳಿಂದ ಚರ್ಚೆ ನಡೆದಿದೆ.  "ಜೀವಿಗಳ ಉಗಮದ ಬಗ್ಗೆ ವೇದಗಳಲ್ಲಿ ಉಲ್ಲೇಖವಿದೆಯೆ?" ಎಂದು  ಶ್ರೀ ಪ್ರಸನ್ನರು ಪ್ರಶ್ನೆ ಕೇಳಿದ್ದಾರೆ. ಶ್ರೀ ಶರ್ಮರಿಂದ ಉತ್ತರ ನಿರೀಕ್ಷಿಸಲಾಗಿದೆ.  ಶ್ರೀ ಶರ್ಮರು ಅವರ ಕೆಲಸಗಳ ಒತ್ತಡದ ನಡುವೆಯೂ ವೇದಸುಧೆಯನ್ನು ವಾರಕ್ಕೆ ಒಮ್ಮೆಯಾದರೂ ಅವಲೋಕಿಸಿ ತಮ್ಮ ವಿವರಣೆಯನ್ನು ಕೊಡುವರು. ವೇದಸುಧೆಯ ಅಭಿಮಾನಿಗಳೆಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು "ಅಭಿಮತ" ಪುಟದಲ್ಲಿ ಮುಕ್ತವಾಗಿ ಹಂಚಿಕೊಳ್ಳಲು ವೇದಸುಧೆಯು ವಿನಂತಿಸುತ್ತದೆ.

ಸತ್ಯದ ಹುಡುಕಾಟ?

1] ನಮಸ್ತೆ ಸುಧಾಕರ್ ಜೀ, ಜೀವಿಗಳ ಉಗಮದ ಬಗ್ಗೆ ವೇದಗಳಲ್ಲಿ ಉಲ್ಲೇಖವಿದೆಯೆ? ಏಕೆಂದರೆ, ಜೀವಿಗಳ ಉಗಮದ ಬಗ್ಗೆ ಆಧುನಿಕ ವಿಜ್ಞಾನಿಗಳು ಹೇಳಿರುವುದು(ಹೇಳಿದ್ದರೂ ಇರಬಹುದು) ನನಗೆ ತಿಳಿದಿಲ್ಲ. ಆದರೆ ಡಾರ್ವಿನ್ ನ ಪ್ರಕಾರ ಒಂದರಿಂದ ಮತ್ತೊಂದು ರೂಪಾಂತರ ಹೊಂದಿತೆಂಬುದು ಆತನ ವಾದಸರಣಿ (ದಾಖಲೆ ಸಹಿತವಾಗಿಯಲ್ಲ). ಅದು ಸತ್ಯವೂ ಅಲ್ಲ ಅಥವ ಅದನ್ನು ಸುಳ್ಳೆಂದು ನಿರಾಕರಿಸಲೂ ಆಗುವುದಿಲ್ಲ.
    -ಪ್ರಸನ್ನ

    2] ಸತ್ಯದ ಹುಡುಕಾಟ ತು೦ಬಾ ಒಳ್ಳೆಯದೆ. ಯಾವ ಸತ್ಯವೇ೦ದು ಕೆಳಬಹುದೆ? ಸಾರ್ವಕಲಿಕ ಸತ್ಯವಾದರೆ ಆದು ಪರಬ್ರಹ್ಮ ಒ೦ದೆ ಅಲ್ಲವೇ. ಮಿಕ್ಕಿದ್ದೆಲ್ಲ ಕ್ಷಣಿಕ ಸತ್ಯ ಅಲ್ಲವೇ. ಪ್ರಸನ್ನರವರು ಕೆಳಿದ ಮೂಲ ಪ್ರಶ್ನೆ (ಸತ್ಯ ದ ಹುಡುಕಾಟದಲ್ಲಿ) ಕಳೆದು ಹೋಯಿತೆ? ನಾವು ಇರುವುದು(ಈ ದೇಹದಲ್ಲಿ) ಸತ್ಯ ಅಲ್ಲವೇ? ಆದರೆ ತು೦ಬಾ ಸೂಕ್ಷ್ಮವಾದ, ಅತ್ತ್ಯುತ್ತಮವಾದ ವಿಷಯವನ್ನು ಪ್ರಾರ೦ಭಿಸಿದ್ದಕ್ಕೆ ಧನ್ಯವಾದಗಳು
-ವಿನಾಯಕ ಭಟ್ 

3] ವೇದವೆಂದರೆ ಸಾವಿರಾರು ವರ್ಷಗಳ ಹಿಂದಿನ ಸಂಸ್ಕೃತ ವಾಕ್ಯಗಳು ಮಾತ್ರವೇ? 
-ಮಹೇಶ್
------------------------------------------------------
ನನ್ನ ಅನಿಸಿಕೆ:
ವೇದಗಳು ಪ್ರಪಂಚಕ್ಕೆ ಜ್ಞಾನಭಂಡಾರವೆಂದು ನಂಬುವ ಜನರು ನಾವು. ಆದರೆ ಇಂದು ನೂರಾರು ವರ್ಷಗಳಿಂದ ಪುರಾಣ ಕಥೆಗಳ ಆಧಾರದಮೇಲೆ ನಮ್ಮ ಆಚರಣೆಗಳು ನಡೆದಿದ್ದು  ವೇದವು ಕಳೆದುಹೋಗಿದೆ ಎಂದು ಅನ್ನಿಸುವುದಿಲ್ಲವೇ? ವೇದ ಎಂದರೆ ಒಂದಿಷ್ಟು ಮಂತ್ರಗಳ ಪಠಣೆಯೇ? ಆದರೆ ವೇದಾಧ್ಯಾಯೀ ಸುಧಾಕರ ಶರ್ಮರು ವೇದಮಂತ್ರಗಳ ಅರ್ಥವನ್ನು ವಿವರಿಸುತ್ತಾ ಅವುಗಳು ಮಾನವನ ಜೀವನಕ್ಕೆ ಹೇಗೆ ಅನುಕೂಲಕರವಾಗಿವೆ, ಎಂಬ ವಿವರಣೆ ಕೊಡುತ್ತಿದ್ದಾರೆ.ಅದೇ ಸಮಯದಲ್ಲಿ ನಮ್ಮ ಆಚರಣೆಗಳಲ್ಲಿನ ಕೆಲವು ದೋಷಗಳನ್ನೂ ನಮಗೆ ಮನವರಿಕೆ ಮಾಡುತ್ತಾ ನಾವು ಅದೆಷ್ಟು ಕುರುಡಾಗಿ ಹಲವು ಆಚರಣೆಗಳನ್ನು ಮಾಡುತ್ತಿದ್ದೇವೆಂಬುದನ್ನು ಆಧಾರಸಹಿತವಾಗಿ ಮನವರಿಕೆ ಮಾಡುತ್ತಿದ್ದಾರೆ. ಅವರ ಮಾತುಗಳಲ್ಲಿ ಸತ್ಯ ಕಾಣುತ್ತಿದೆ.ಉಧಾಹರಣೆಗೆ ಅಗ್ನಿಹೋತ್ರ ಕ್ರಿಯೆ. ಎಷ್ಟು ಸರಳ! ಪಕೃತಿಗೆ ಅದೆಷ್ಟು ಪೂರಕ! ಸರಿಯಾಗಿ ಮಾಡಿದ್ದೇ ಆದರೆ ಮನೆಯಲ್ಲಿದ್ದವರಷ್ಟೇ ಅಲ್ಲದೆ ಸುತ್ತಮುತ್ತಲ ಜನರ ಮೇಲೂ ಅದರ ಪ್ರಭಾವವಾಗುವುದರಲ್ಲಿ ಸಂಶಯವಿಲ್ಲ.ಯಾವ ಗೊಂದಲ ಗೋಜಿಲ್ಲ. ಜಾತಿ ಮತದ ಅಡ್ದಗೋಡೆಯಿಲ್ಲ. ಸಸ್ಯಾಹಾರ ಮಾತ್ರ ಕಡ್ಡಾಯ. ಮನುಷ್ಯ ಮನುಷ್ಯನ ನಡುವೆ ಭೇದವಿಲ್ಲದೆ ಯಾರೇ ಆಗಲೀ ಸಸ್ಯಾಹಾರಿ ಯಾಗಿದ್ದುಕೊಂಡು, ಸದ್ವಿಚಾರ ಮಾಡುತ್ತಾ, ಪರಿಶುದ್ಧವಾದ ಜೀವನ ನಡೆಸುತ್ತಾ, ನೂರಾರು ದೇವರುಗಳ ಗೊಂದಲವಿಲ್ಲದೆ ಸರ್ವ ಶಕ್ತನೂ ಸರ್ವವ್ಯಾಪಿಯೂ ಸಾರ್ವಭೌಮನೂ ಆದ ವಿಶ್ವಚೇತನವನ್ನು ಆರಾಧಿಸುತ್ತಾ,ನಿತ್ಯ ಸಂಧ್ಯೋಪಾಸನೆ ಮಾಡುತ್ತಾ , ನಿತ್ಯ ಜೀವನವೇ ಒಂದು ಯಜ್ಞವೆಂದು ಭಾವಿಸುತ್ತಾ ನಡೆಸುವ ಬದುಕಿನಲ್ಲಿ ನಿರಾಳ,ನೆಮ್ಮದಿ ಸಿಗಲಾರದೇ? ಶರೀರ ಮನಸ್ಸು ಆರೋಗ್ಯಕರ ವಾಗಿರಲಾರದೇ? ಇನ್ನೊಬ್ಬರಿಗೆ ದ್ರೋಹವಾಗದಂತೆ ನಡೆಸುವ ಸರಳಜೀವನವು ಸಹಜವಾಗಿ ಹಗುರವಾಗಿರಲಾರದೇ?
ನನ್ನ ದೃಷ್ಟಿಯಲ್ಲಿ ಇದುವೇ ಸತ್ಯದ ಹುಡುಕಾಟ.
-ಹರಿಹರಪುರಶ್ರೀಧರ್

ಪುರಾಣಗಳ ಬಗ್ಗೆ ನೀವೇನು ಹೇಳುವಿರಿ

ಹರಿಹರಪುರ ಶ್ರೀಧರ್ 
ಉದ್ಧರೇದಾತ್ಮನಾತ್ಮಾನಾಮ್ ಆತ್ನಾನಮವಸಾಧಯೇತ್ ಆತ್ಮೈವಹ್ಯಾತ್ಮನೋ ಬಂಧು: ಅತ್ಮೈವರಿಪುರಾತ್ಮನ:|| ಭಗವದ್ಗೀತೆಯಲ್ಲೂ ಇದನ್ನೇ ಹೇಳಿದೆಯಲ್ಲವೇ? ತನ್ನನ್ನು ತಾನೇ ಉದ್ಧಾರಮಾಡಿಕೊಳ್ಳಬೇಕು.ತನಗೆ ತಾನೇ ಬಂಧು ,ತನಗೆ ತಾನೇ ಶತ್ರು.ತನ್ನ ಆತ್ಮೋದ್ಧಾರಕ್ಕೆ ತಾನೇ ದಾರಿಕಂಡುಕೊಳ್ಳಬೇಕು, ಅದರಂತೆ ಸತ್ಕರ್ಮವನ್ನಾಚರಿಸಬೇಕಲ್ಲದೆ ಬೇರೆ ಯಾರಿಂದಲೂ ಮತ್ತೊಬ್ಬರಿಗೆ ಮೋಕ್ಷವಾಗಲೀ, ಸ್ವರ್ಗವಾಗಲೀ ಸಿಗಲು ಸಾಧ್ಯವೇ ಇಲ್ಲ.ವೇದದಲ್ಲಿ ಇದನ್ನು ಸಾರಿ ಸಾರಿ ಹೇಳಿದ್ದರೂ ವೇದದ ಹೆಸರಿನಲ್ಲಿಯೇ ಜೀವನ ನಡೆಸುವವರೂ ಕೂಡ ಸತ್ತವರಿಗೆ ಶ್ರಾದ್ಧದ ಹೆಸರಲ್ಲಿ ಮಾಡುವ ಆಚರಣೆಗಳು, ಓದುವ ಗರುಡಪುರಾಣ ಎಲ್ಲವೂ ನಗೆಪಾಟಲಾಗಿ ಕಾಣುತ್ತವೆ.
ಕವಿ ನಾಗರಾಜ್
ಸತ್ಯ!
prasca
ಜ್ಞಾನದ ಕೊರತೆ ನಿಮಗೆ ನಗೆಪಾಟಲಾಗಿ ಕಾಣಿಸುತ್ತದೆಯೆ ಶ್ರೀಧರ್ ಸಾರ್? ಜ್ಞಾನಿಯ ಕರ್ತವ್ಯ ಅಜ್ಞಾನಿಗೆ ಜ್ಞಾನ ತುಂಬುವುದಾಗಬೇಕಲ್ಲವೆ? ನಿಮ್ಮ ಪ್ರತಿಕ್ರಿಯೆಯ ಕೊನೆಯ ಸಾಲುಗಳು ನಿಮ್ಮ ಸೃಜನಶೀಲತೆಗೆ ತಕ್ಕುದಲ್ಲವೆನೊ? ಯೋಚಿಸಿ ನೋಡಿ.
ಹರಿಹರಪುರ ಶ್ರೀಧರ್
ಶ್ರೀ ಪ್ರಸನ್ನ, ನಿಮ್ಮಿಂದಲ್ಲದಿದ್ದರೂ ಇಂತಹ ಪ್ರತಿಕ್ರಿಯೆ ನಿರೀಕ್ಷಿತವೇ ಎಂದು ನನಗೆ ಗೊತ್ತಿತ್ತು. ಕಾರಣ ಪುರಾಣದ ಕಥೆಗಳು ವೇದದ ಸತ್ಯವನ್ನು ಅದೆಷ್ಟು ಮರೆಮಾಚಿವೆ ಎಂಬುದು ನನಗೆ ಇತ್ತೀಚೆಗೆ ಸ್ವಲ್ಪ ಸ್ವಲ್ಪವೇ ಅರಿವಾಗುತ್ತಿದೆ.ಅಂದಮಾತ್ರಕ್ಕೆ ನಾನು ವೇದವನ್ನು ಆಳವಾಗಿ ಅಧ್ಯಯನ ಮಾಡುತ್ತಿದ್ದೇನೆಂದೇನೂ ಅಲ್ಲ. ಆದರೆ ಶರ್ಮರು ವೇದದ ಹಲವು ಮಂತ್ರಗಳ ಅರ್ಥವನ್ನು ತಿಳಿಸುತ್ತಿರುವ ಶೈಲಿ ನನಗೆ ಆಪ್ಯಾಯಮಾನವಾಗಿ ಕಾಣುತ್ತಿದೆ.ಯಾವುದೋ ಆಪತ್ಕಾಲದಲ್ಲಿ ಧರ್ಮದ ರಕ್ಷಣೆಗಾಗಿಯೇ ಕಟ್ಟಿರಬಹುದಾದ ಪುರಾಣದ ಕೆಲವು ಕಥೆಗಳು ಇವತ್ತಿನ ಕಾಲಕ್ಕೆ ಬಲು ಬಾಲಿಶವಾಗಿ ಕಾಣುತ್ತವೆ.ಜೊತೆ ಜೊತೆಗೇ ವೇದದ ಸರಿಯಾದ ತಿಳುವಳಿಕೆ ಇಲ್ಲದೆ ನನ್ನಂತವರಿಗೆ ಇದುವರೆಗೂ ತಿಳಿಯುವ ಅವಕಾಶ ಸಿಗದೆ ಕೇವಲ ನಾಲ್ಕಾರು ವೇದಮಂತ್ರಗಳನ್ನು ಕಂಠಪಾಠಮಾಡಿ ಅರ್ಥತಿಳಿಯಲಿಲ್ಲವಲ್ಲಾ! ಎಂಬ ವ್ಯಥೆ ಕೂಡ ಇದೆ.ಹಾಗಾಗಿ ನನ್ನ ಮನದ ಮಾತನಾಡುವಾಗ ಉಪಯೋಗಿಸಿರುವ "ನಗೆಪಾಟಲು" ಶಬ್ಧ ಅಳೆದು ಸುರಿದು ಬರೆದಿದ್ದಲ್ಲ.ಅದು ಹಗುರವೆನಿಸಿ ನಿಮ್ಮ ಮನಸ್ಸಿಗೆ ಬೇಸರವಾದರೆ ಕ್ಷಮೆ ಇರಲಿ.
ಕವಿ ನಾಗರಾಜ್
ನನ್ನ ತಂದೆಯವರು ನಿಧನರಾದ ಸಂದರ್ಭದಲ್ಲಿ ನಾನೂ ಗರುಡಪುರಾಣ ಕೇಳಿದ್ದೇನೆ. ಪುರಾಣ, ಪುಣ್ಯಕಥೆಗಳು ಮನುಷ್ಯನನ್ನು ಸನ್ಮಾರ್ಗಕ್ಕೆ ಪ್ರೇರಿಸಿದರೆ ತಪ್ಪಿಲ್ಲ. ಆದರೆ ಆಧಾರರಹಿತವಾದ ಪುರಾಣಕಥೆ, ಸಂಪ್ರದಾಯಗಳಿಂದ ಲಾಭದಷ್ಟೇ ಹಾನಿಯೂ ಇದೆ. ವಿಮರ್ಶೆ ಮಾಡಿ ಅನುಸರಿಸುವ ಗುಣ, ಸತ್ಯ ತಿಳಿಯುವ ತವಕ ಮೂಡುವವರೆಗೆ ಪರಿಸ್ಥಿತಿ ಹೀಗೆಯೇ ಇರುತ್ತದೆ.
ವಿ.ಆರ್.ಭಟ್
ಮಾನ್ಯ ಶ್ರೀಧರರೇ, ಗರುಡ ಪುರಾಣ ಸತ್ಯವೋ ಅಸತ್ಯವೋ ಗೊತ್ತಿಲ್ಲ, ಆದರೆ ಸಮಾಜದಲ್ಲಿ ನೀತಿಬಾಹಿರ ಕೆಲಸಗಳಲ್ಲಿ ತೊಡಗುವ ಜನರಿಗೆ ಸ್ವಲ್ಪ ಮೂಗುದಾರವಾಗಿ ಆ ಪುರಾಣ ಕೆಲಸಮಾಡುತ್ತದೆ ಎಂಬುದು ಬಲ್ಲವರ ಅಂಬೋಣ. ಇದಲ್ಲದೇ ಶ್ರಾದ್ಧಕರ್ಮ ಕೂಡ ಸತ್ತವರಿಗೆ ಮೋಕ್ಷ ಕರುಣಿಸಲಲ್ಲ, ಬದಲಾಗಿ ಅವರನ್ನು ನಮ್ಮ ಕುಟುಂಬದ ಕಕ್ಷೆಯಿಂದ ಮೇಲಿನ ಕಕ್ಷೆಗೆ ಬೀಳ್ಕೊಡುವ ದಾರಿ. ಅದಲ್ಲದೇ ಆ ಆತ್ಮಕ್ಕೆ ಮೋಕ್ಷ ಕರುಣಿಸಲು ಆಗದಿದ್ದರೂ ಗತಿಸಿದ ಆತ್ಮದ ಪರವಾಗಿ ಲೌಕಿಕ ವಾರಸುದಾರರು ಎನಿಸಿದವರು [ಅಪ್ಪ ಮಗನಿಗೆ ಮಗ ಅಪ್ಪನಿಗೆ ಹಣಕಳಿಸಿದಂತೇ ]ದೇವರಲ್ಲಿ ಪ್ರಾರ್ಥಿಸುವ ಒಂದು ವಿಧಾನ. ಇದನ್ನು ಅಲ್ಲಗಳೆಯಲಾಗುವುದಿಲ್ಲ. ಇದಕ್ಕೆ ತಕ್ಕ ಆಧಾರಗಳನ್ನು ತಾವು ರಾಮಾಯಣ/ ಭಾರತ ಕಥೆಗಳಲ್ಲೂ ಪರಿಶೀಲಿಸಬಹುದು. ಹೀಗಾಗಿ ಇವೆರಡನ್ನೂ ಕಂಡು ನಗುವಷ್ಟು ಉನ್ನತ ಹಂತಕ್ಕೆ ನಾವಿನ್ನೂ ಸಾಗಿಲ್ಲ ಎಂಬುದು ನನ್ನ ಅಭಿಪ್ರಾಯ. ಆ ಹಂತ ಬಹಳ ಮೇಲಿದೆ!
prasca .
ಇಷ್ಟು ದಿನ ನಾವು ತಿಳಿದಿಕೊಂಡದ್ದು ಇದನ್ನೆ ಈಗ ನಮ್ಗೆ ಅರಿವಿದೆ ಎಂದು ಅರಿವಿರದವರನ್ನು ನಗೆಪಾಟಲಿಗೀಡು ಮಾಡುವುದು ಸರಿಯಲ್ಲವೆಂದು ತಿಳಿಸಲು ಯತ್ನಿಸಿದೆ ಅಷ್ಟೆ. ಅನ್ಯಥಾ ಭಾವಿಸಬೇಡಿ. ಹೌದು ನೀವು ತಿಳಿಸಿದಂತೆ ಶ್ರೀ ಸುಧಾಕರ ಶರ್ಮ ಅವರಂತೆ ಸರಳವಾಗಿ ವೇದಗಳ ಆಶಯವನ್ನು ತಿಳಿಸುವವರು ಸಿಕ್ಕಾಗಲೇ ವೇದಗಳ ಬೆಳಕು ಎಲ್ಲೆಡೆ ಪಸರಿಸಿ ಸಮಾಜದಲ್ಲಿನ ಅಂಧಕಾರ ತೊಲಗುತ್ತದೆ. "ಸತ್ಯಾರ್ಥ ಪ್ರಕಾಶ" ಪುಸ್ತಕದಲ್ಲಿ ರಾಜಧರ್ಮದ ಬಗ್ಗೆ ತಿಳಿಸುತ್ತಾ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ವರ್ಣಿಸಿದ್ದಾರೆ. ಅದೆಂತಹ ಅದ್ಭುತ ವ್ಯವಸ್ಥೆ ಬಹುಷಃ ಅಂತಹ ವ್ಯವಸ್ಥೆಯೊಂದು ಜಾರಿಯಾದರೆ ಯಾವುದೇ ರಾಷ್ಟ್ರಗಳು ಕಷ್ಟಕ್ಕೆ ಸಿಲುಕುವುದಿಲ್ಲ ಎನಿಸುತ್ತದೆ.
ಹರಿಹರಪುರ ಶ್ರೀಧರ್..
[ನಗುವಷ್ಟು]ಈ ಪದಕ್ಕೆ ಈಗಾಗಲೇ ನನ್ನ ಮನದ ಮಾತು ತಿಳಿಸಿರುವೆ. ಉಳಿದಂತೆ ಇಂದಿನ ಸಂಪಾದಕೀಯದಲ್ಲಿ ಪ್ರಸ್ತಾಪಿಸಿರುವೆ. ಸಂಪಾದಕೀಯ ಬರಹವನ್ನು ಅವಲೋಕಿಸಿ ಒಂದು ಸತ್ಯಪಥದೆಡೆಗೆ ಸಾಗಲು ಅನುಭವಿಗಳ, ವಿದ್ವಾಂಸರ ಅಭಿಮತಕ್ಕಾಗಿ ಸದಾ ನಿರೀಕ್ಷೆಯಲ್ಲೇ ಇದ್ದೇನೆ.
SUDHAKARA SHARMA said...
ನಗೆಪಾಟಲಿಗೆ ಗುರಿಯಾಗಿರುವುದು, ಸೂಕ್ಷ್ಮವಾಗಿ ಗಮನಿಸಿದರೆ, ವ್ಯಕ್ತಿಯಲ್ಲ, ಆಚರಣೆಗಳು ಮತ್ತು ಗರುಡಪುರಾಣಗಳಂತಹ ಸಾಹಿತ್ಯ(?)ಗಳು. ಪ್ರಶ್ನಾರ್ಥಕ ಚಿಹ್ನೆ ಏಕೆಂದರೆ, ಸ + ಹಿತಂ = ಸಾಹಿತ್ಯಂ. ಪುರಾಣಾದಿಗಳಲ್ಲಿ ಅಲ್ಲಲ್ಲಿ ಹಿತನುಡಿಗಳಿದ್ದರೂ, ಅಹಿತವೂ, ಅವೈಜ್ಞಾನಿಕವೂ ಆದ ವಿಚಾರಗಳು ಸಾಕಷ್ಟಿವೆ. ಅವನ್ನು "ವಿಷಮಿಶ್ರಿತ ಅನ್ನ"ದಂತೆ ತ್ಯಜಿಸುವುದೇ ಉತ್ತಮ. ಯೋಚಿಸಿ ನೋಡೋಣ. ಜ್ಞಾನವಿರುವವರ ಕರ್ತವ್ಯ ಜ್ಞಾನವನ್ನು ಹಂಚುವುದು; ಆರೋಗ್ಯಶಾಲಿಗಳ ಕರ್ತವ್ಯ ರೋಗಿಗಳ ಸೇವೆ ಮಾಡುವುದು; ಧನವಂತರ ಕರ್ತವ್ಯ ಇಲ್ಲದವರೊಂದಿಗೆ ಹಂಚಿಕೊಳ್ಳುವುದು ಎಂಬ ಮಾತುಗಳು ಸಂಪೂರ್ಣ ಮಾನವೀಯ. ಸ್ವೀಕರಿಸಲು, ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗ್ಯವಾದವು. ನೀತಿಬಾಹಿರರನ್ನು ನಿಯಂತ್ರಿಸಲು ಬೇಕಾದ್ದು ಯೋಗ್ಯ ವಿಚಾರಗಳೇ ಹೊರತು ಅಯೋಗ್ಯ ವಿಚಾರಗಳನ್ನು ಒಳಗೊಂಡ ಪುರಾಣಗಳಲ್ಲ!! ಎರಡೇ ಉದಾಹರಣೆ :- ಬ್ರಹ್ಮನ ಮಗಳು ಸರಸ್ವತಿ ಮತ್ತು ಅವಳೇ ಅವನ ಪತ್ನಿ!! ಶಿವಪುರಾಣದಲ್ಲಿ ಬರುವ ಅನೇಕ ಪ್ರಸಂಗಗಳು ಯಾವುದೇ ಅಶ್ಲೀಲ ಸಾಹಿತ್ಯಕ್ಕೆ ಕಡಿಮೆಯಿಲ್ಲ!! ಗತಿಸಿದವರ ಪರವಾಗಿ ಯಾರೂ ಏನೂ ಮಾಡಬೇಕಾದ್ದಿಲ್ಲ, ಮಾಡುವುದರಿಂದ ಅವರಿಗೆ ಪ್ರಯೋಜನವೂ ಇಲ್ಲ. ಕಲಬೆರಕೆಗೆ ಪಕ್ಕಾಗಬಹುದಾದ ರಾಮಾಯಣ ಭಾರತಗಳಿಗಿಂತ ಶುದ್ಧವಾದ ವೇದಗಳೇ ಇದಕ್ಕೆಲ್ಲಾ ಪ್ರಮಾಣ. ದಾರಿಯೂ ತಪ್ಪುವುದಿಲ್ಲ, ಸತ್ಯವೂ ದೊರೆಯುತ್ತದೆ.
ಹರಿಹರಪುರ ಶ್ರೀಧರ್
[ವೇದಗಳು ಕಲಿಸುವುದು ಆತ್ಮಾವಲಂಬನೆಯ ಭವ್ಯಪಾಠವನ್ನು. ಪ್ರತಿಯೊಬ್ಬ ಜೀವಾತ್ಮನೂ ತನ್ನ ಪತನ ಅಥವಾ ಉತ್ಥಾನಕ್ಕೆ ತಾನೇ ಕಾರಣ] ವೇದಮಂತ್ರಗಳಿಗೆ ಪಂ|| ಸುಧಾಕರ ಚತುರ್ವೇದಿಯವರು ಕೊಟ್ಟಿರುವ ವಿವರಣೆ ಎಷ್ಟು ಅರ್ಥಪೂರ್ಣವಾಗಿದೆಯಲ್ಲವೇ? ಹೀಗೆ ಒಂದು ವೇದಮಂತ್ರವನ್ನು ಆಧರಿಸಿ ಕೊಟ್ಟ ವಿವರಣೆಯನ್ನು ನಾವು ಸ್ವೀಕರಿಸಲು ನಮ್ಮ ಮನ:ಸ್ಥಿಯನ್ನು ಬದಲಿಸಿಕೊಳ್ಳದಿದ್ದರೆ ಸತ್ಯವು ದೂರವೇ ಉಳಿಯುತ್ತದೆ.

ಸತ್ಯಕ್ಕಾಗಿ ಹುಡುಕಾಟವಿದೆ

ವೇದೋಕ್ತ ಜೀವನ ಪಥ ಆಧಾರಿತ ಶ್ರೀ ಕವಿನಾಗರಾಜರ ಬರಹವನ್ನು ಓದಿದ ಶ್ರೀ ಪ್ರಸನ್ನ, ಶ್ರೀ ವಿ.ಆರ್ ಭಟ್,ಶ್ರೀಸುಧಾಕರಶರ್ಮ-ಇವರುಗಳು ಒಂದು ಆರೋಗ್ಯಪೂರ್ಣ ಚರ್ಚೆಯನ್ನು ಆರಂಭಿಸಿ ವೇದಸುಧೆಗೆ ಶೋಭೆಯನ್ನು ತಂದುಕೊಟ್ಟಿರುತ್ತಾರೆ. ಎಲ್ಲರಿಗೂ ವೇದಸುಧೆಯ ಅಭಿನಂದನೆಗಳನ್ನು ತಿಳಿಸುತ್ತಾ ಯಾರೂ ಚರ್ಚೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೆ ವಿಚಾರ ಮಂಥನದ ದೃಷ್ಟಿಯಿಂದ ಸ್ವೀಕರಿಸಬೇಕೆಂದು ವೇದಸುಧೆಯು ಬಯಸುತ್ತದೆ. ಒಟ್ಟಿನಲ್ಲಿ ಸಿಹಿಲೇಪಿತ ವಿಷವಿದ್ದರೆ ಅದನ್ನು ವರ್ಜಿಸುವುದರಿಂದ ಒಳ್ಳೆಯದಲ್ಲವೇ? ಇನ್ನೊಂದು ವಿಚಾರವನ್ನು ವೇದಸುಧೆಯ ಅಭಿಮಾನಿಗಳೆಲ್ಲರೂ ಗಮನಿಸುವುದು ಅನಿವಾರ್ಯ. ಹಿಂದು ಸಮಾಜದಲ್ಲಿ[ಸಧ್ಯಕ್ಕೆ ಬಹುಪಾಲು ವೇದಸುಧೆಯ ಅಭಿಮಾನಿಗಳು ಹಿಂದುಗಳಿರುವುದರಿಂದ, ಹಿಂದು ಪದದ ಪ್ರಯೋಗ, ಮುಂದೊಂದುದಿನ ಮಾನವಕುಲದಲ್ಲಿ ಎಂಬ ಮಾತು ಕೇಳಿಬರುವಂತಾಗಲೆಂಬುದು ಆಶಾಭಾವ] ನಡೆದುಬಂದಿರುವ ಹಲವಾರು ಆಚರಣೆಗಳನ್ನು ವಿಮರ್ಶೆಮಾಡದೆ ಕೇವಲ ನಂಬಿಕೆಯಿಂದ ಅನುಸರಿಸುತ್ತಾ ಬಂದಿರುವ ಪ್ರತಿಶತ ೯೮ ಭಾಗ ಜನರು ಇಂತಹ ಚರ್ಚೆಗೆ ಬರುವುದಿಲ್ಲ.ಆದ್ದರಿಂದ ಚರ್ಚೆಯಲ್ಲಿ ಪಾಲ್ಗೊಳ್ಳುವ ಹಂಬಲವಿರುವವರ ಹೃದಯದಲ್ಲಿ ಸತ್ಯಕ್ಕಾಗಿ ಹುಡುಕಾಟವಿದೆ ಎಂಬುದು ಸತ್ಯ. ಆದ್ದರಿಂದ ಮುಕ್ತ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುವ ಅಭಿಮಾನಿಗಳ ಸಂಖ್ಯೆ ಹೆಚ್ಚಲಿ, ಎಂಬುದು ವೇದಸುಧೆಯ ಅಪೇಕ್ಷೆ.