ಮರೆಯಲಾಗದ ಮಹಾ ಶಿವರಾತ್ರಿ
ಅಂದು ಮಹಾಶಿವರಾತ್ರಿ. ಮನೆಯಲ್ಲಿ ಒಂದು ರೀತಿಯ ಸಂಭ್ರಮ. ನಾನು ಹೇಳ ಹೊರಟಿರುವುದು ಈಗ್ಗೆ 47 ವರ್ಷಗಳ ಹಿಂದಿನ ಮಾತು. ಆಗೆಲ್ಲ ಪ್ರತಿ ಹಬ್ಬವು ಒಂದು ರೀತಿಯಲ್ಲಿ ಸಡಗರವೆ! ಅದರಲ್ಲೂ ಶಿವರಾತ್ರಿ ಎಂದರೆ ಈಶ್ವರನಿಗೆ ನಾಲ್ಕುಜಾವದ ಪೂಜೆ ನೆರವೇರಿಸುತ್ತ ಅಲ್ಪ ಆಹಾರದೊಂದಿಗೆ ರಾತ್ರಿಯಿಡಿ ಜಾಗರಣೆ ಮಾಡುತ್ತಾ ಶಿವನ ಆರಾಧನೆಯಲ್ಲಿ ತಮ್ಮನ್ನು ತಾವು ಸಂಭ್ರಮದಿಂದ ತೊಡಗಿಸಿಕೊಳ್ಳುವ ವಿಶೇಷ ದಿನ. ಇಂತಹ ವಿಶೇಷ ದಿನದಂದು ನಡೆದ ಒಂದು ಸತ್ಯ ಘಟನೆ.
ಮನೆ ಯಜಮಾನರು ಅಂದು ಬೆಳಗಿನಿಂದಲೇ ಶಿವನ ಪೂಜೆಯ ಕೈಂಕರ್ಯಕ್ಕೆ ತೊಡಗಿಕೊಂಡವರು. ನಿತ್ಯ ಪೂಜೆಯ ಜೊತೆಗೆ ರುದ್ರನಿಗೆ ಅಭಿಷೇಕ ಮುಗಿಸಿ, ಮಕ್ಕಳನ್ನು ಕೂರಿಸಿಕೊಂಡು ಸತ್ಯ ಹರಿಶ್ಚಂದ್ರನ ಕಥೆಯನ್ನು ಹೇಳಿದರು. ಕಾರಣ, ಅಂದು ರಾತ್ರಿ ಮನೆಯ ಎದುರಿನ ಬಯಲಿನಲ್ಲಿ ರಾಜ ಹರಿಶ್ಚಂದ್ರನ ನಾಟಕ ನಡೆಯುವುದ್ದಿತ್ತು. ಹೀಗಾಗಿ ಮಕ್ಕಳು ಈ ಕಥೆ ಗಾಗಿ ಅಪ್ಪನಲ್ಲಿ ಪೀಡಿಸುತ್ತಿದ್ದರು. ಮಕ್ಕಳಿಗೆ ಒಂದು ರೀತಿಯ ಸಂಭ್ರಮ. ಎದುರಿನ ಬಯಲಿನಲ್ಲಿ ನಾಟಕದ ರಂಗಸಜ್ಜಿಕೆ ಕೆಲಸ ನಡೆಯುತ್ತಿತ್ತು. ಅದನ್ನ ನೋಡುವುದೇ ಒಂದು ಖುಷಿ. ನಾಟಕ ಪ್ರಾರಂಭವಾಗುವುದು ರಾತ್ರಿ 10ರ ನಂತರವೇ. ಮಕ್ಕಳು ಕಾಯುತ್ತಾ ಇರುವಾಗ ಮನೆ ಯಜಮಾನರು ಮಕ್ಕಳಿಗೆ " ಈಗ ಮಲಗಿ ನಿದ್ದೆ ಮಾಡಿ, ನಾಟಕ ಪ್ರಾರಂಭ ಆದಕೂಡಲೇ ಎಬ್ಬಿಸುತ್ತೇನೆ, ಅಲ್ಲಿಯವರೆಗೆ ನಿದ್ದೆ ಮಾಡಿ. ಈಗ ಜಾಸ್ತಿ ಹೊತ್ತು ನಿದ್ರೆ ಮಾಡಿದರೆ ಹೆಚ್ಚು ಹೊತ್ತು ನಾಟಕ ನೋಡಬಹುದು " ಎಂದು ಒಪ್ಪಿಸಿ ಮೂರೂ ಮಕ್ಕಳನ್ನು ಮಲಗಿಸಿಯೇ ಬಿಟ್ಟರು.
ಮಾರನೆ ಬೆಳಿಗ್ಗೆ ಮಕ್ಕಳು ಎದ್ದವರೇ " ನಾಟಕ ನೋಡಲು ಎಬ್ಬಿಸಲೇ ಇಲ್ಲ " ಎಂದು ಇಬ್ಬರು ಅಳಲು ಪ್ರಾರಂಭ. ಆದರೆ ಒಂದು ಮಗು ಮಾತ್ರ ಎದ್ದಿರಲೇ ಇಲ್ಲ. ಬಹಳ ಚೂಟಿಯಾಗಿದ್ದ ಮಗು ಯಾಕೆ ಇನ್ನು ಎದ್ದಿಲ್ಲ ಎಂದು ಮನೆ ಯಜಮಾನರು ಅಂದುಕೊಳ್ಳುತ್ತಿರುವಾಗಲೇ " ರಾತ್ರಿ ಮಗು ನಿದ್ದೆ ಮಾಡಿತ್ತೋ ಇಲ್ಲವೋ" ಎಂದು ಮನೆಯೊಡತಿ ಸಮಜಾಯಿಷಿ ನೀಡಿದರೂ ಮಗು ಎಬ್ಬಿಸಲು ಮುಂದಾದರು. " ಏಳಪ್ಪಾ , ಬೆಳಕಾಗಿ ಎಷ್ಟು ಹೊತ್ತಾಯಿತು? ಏಳು," ಎಂದು ಹೊದ್ದಿಕೆ ತೆಗೆದರೆ ಶಾಖ ಹೊರಗೆ ತಟ್ಟುವಷ್ಟು ಬಿಸಿ. ಮಗು ಮೈ ಮುಟ್ಟಿದರೆ ಕಾದ ಕಬ್ಬಿಣ ಮುಟ್ಟಿದ ಅನುಭವ. ಜ್ವರದ ತಾಪದಲ್ಲಿ ಬೆಂದ ಮಗು ಏಳಲು ಇರಲಿ ನರಳಲೂ ಸಾಧ್ಯವಾಗದೆ ನಿಸ್ತೆಜವಾಗಿ ಹಾಸಿಗೆಯ ಮೇಲೆ ಬಿದ್ದುಕೊಂಡಿತ್ತು. ಏನು ಮಾಡಲು ತೋಚದೆ ಮಗುವನ್ನು ಬಾಚಿ ತಬ್ಬಿಕೊಂಡರು. ಅಷ್ಟರಲ್ಲಿ ಬಂದ ಮಗುವಿನ ತಾಯಿಗೆ ಗಾಬರಿ. ಅಳಲು ಪ್ರಾರಂಭ ಮಾಡಿಯೇ ಬಿಟ್ಟರು. 8 ವರ್ಷದ ಗಂಡು ಮಗು ಅಷ್ಟು ಚನ್ನಾಗಿ ಆಟವಾಡಿಕೊಂಡಿದ್ದ ಮಗುವಿಗೆ ಅದೇನು ಶಾಪವೋ ಏನೋ ಈ ರೀತಿಯ ಸ್ಥಿತಿ ತಲುಪಿದೆ ಎಂದು ಕಣ್ಣಿರು ಇಡುತ್ತ ಕೂತರು. " ಏನೂ ಆಗಿಲ್ಲ ಜ್ವರದ ತಾಪಕ್ಕೆ ಮಗು ಸುಸ್ತಾಗಿದೆ, ಅಷ್ಟೇ " ಎಂದು ಹೆಗಲಮೇಲೆ ಮಗುವನ್ನು ಹಾಕಿಕೊಂಡು ಆಸ್ಪತ್ರೆಯ ಕಡೆಗೆ ಧಾವಿಸಿದರು.
ಡಾಕ್ಟರ್ ಪರೀಕ್ಷೆಮಾಡಿ " ಸಧ್ಯಕ್ಕೆ ಔಷದಿ ಕೊಡುತ್ತೇನೆ, ನೀವು ತಕ್ಷಣ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ " ಎಂದು ಸಲಹೆ ಇತ್ತರು. ತಕ್ಷಣ ಟಾಂಗಾ ಗಾಡಿಯಲ್ಲಿ ದೊಡ್ಡ ಆಸ್ಪತ್ರೆಗೆ ಹೋದರು. ಆಸ್ಪತ್ರೆಗೆ ಧಾಖಲು ಮಾಡಿಕೊಂಡ ವೈದ್ಯರು ಎರಡು ಮೂರು ದಿನ ನೀಡಿದ ಔಷದಿಗಳು ಮಗುವಿನ ಜ್ವರವನ್ನು ಕಡಿಮೆಮಾಡಲಿಲ್ಲ. ಮಗುವಿನ ಸ್ಥಿತಿ ಚಿಂತಾಜನಕವಾಯಿತು. ಮಗುವಿಗೆ ಮಗ್ಗುಲು ಬದಲಾಯಿಸಲಾಗದೆ ಸಂಪೂರ್ಣ ನಿತ್ರಾಣವಾಯಿತು. ಕೈ ಕಾಲು ನಿತ್ರಾಣವಾಯಿತು. ರಕ್ತ ಪರೀಕ್ಷೆ ಮಾಡಿಸಿ ಈಗ ಬಂದಿರುವ ಹೊಸ ಖಾಯಿಲೆ ಇರಬಹುದೆಂದು ವೈದ್ಯರು ಹಲವು ಹಿರಿಯ ವೈದ್ಯರೊಂದಿಗೆ ಚರ್ಚಿಸಿ ನಂತರ ಮಗುವಿನ ತಂದೆಯನ್ನು ಕರೆದು " ಈ ಮಗುವಿಗೆ ಪೋಲಿಯೋ ಆಗಿದೆ " ಎಂದರು. ಏನೂ ಅರ್ಥವಾಗದೇ " ಹಾಗೆಂದರೇನು?" ಎಂದು ಬೆರಗಾಗಿ ಕೇಳಿದರು. ವೈದ್ಯರು ಸಮಾಧಾನಚಿತ್ತದಿಂದ " ನೋಡಿ, ಈ ಜ್ವರ ಈಗ ಮಕ್ಕಳಿಗೆ ಕಾಣಿಸಿಕೊಳ್ಳುತ್ತಿದೆ. ವೈರಾಣುಗಳ ಸೋಂಕಿನಿಂದ ಬರುವ ಈ ಜ್ವರ ಮಕ್ಕಳನ್ನು ನಿಸ್ತೇಜವನ್ನಾಗಿ ಮಾಡಿಬಿಡುತ್ತದೆ. ಇಂತಹ ಸಂಧರ್ಭದಲ್ಲಿ ಮಕ್ಕಳ ಕೈ, ಕಾಲು, ಕಣ್ಣು ಹೀಗೆ ಏನಾದರೊಂದು ತನ್ನ ಶಕ್ತಿ ಕಳೆದುಕೊಂಡು ವಿಕಲಾಂಗರಾಗುತ್ತಾರೆ. ದೈರ್ಯ ತಂದುಕೊಳ್ಳಿ. ನಮ್ಮ ಪ್ರಯತ್ನ ಸಂಪೂರ್ಣವಾಗಿ ನಾವು ಮಾಡುತ್ತೇವೆ. ಮಿಕ್ಕದ್ದು ಭಗವಂತನ ಕೈಯಲ್ಲಿದೆ." ಎಂದು ಯಜಮಾನರನ್ನು ಸಂತೈಸಿದರು. ದಂಪತಿಗಳಿಗಿಬ್ಬರಿಗೂ ಭೂಮಿ ಬಾಯಿಬಿಟ್ಟ ಹಾಗೆ ಆಯಿತು. " ಇಷ್ಟು ಚಂದದ ಮಗುವಿಗೆ ಇಷ್ಟೊಂದು ಭೀಕರ ಶಾಪವೇ? " ಎಂದು ಆ ತಾಯಿ ಗೊಳಾಡಲು ಪ್ರಾರಂಭಿಸಿದರು. ಈ ಮಾತು ಕೇಳಿದ ತಂದೆ ಮಾತ್ರ ದಿವ್ಯ ಮೌನಕ್ಕೆ ಶರಣಾದರು. ತಮಗೇ ತಾವು ಸಮಾಧಾನ ಮಾಡಿಕೊಂಡು ಪುನಃ ವೈದ್ಯರಲ್ಲಿ ಹೋಗಿ " ಮುಂದೇನು ಮಾಡಬೇಕು? ಯಾವ ರೀತಿಯಲ್ಲಿ ಚಿಕಿತ್ಸೆ ಕೊಡಿಸಬೇಕು? ಎಷ್ಟು ಹಣ ಖರ್ಚಾಗಬಹುದು? ಎಷ್ಟೇ ಖಚಾದರು ಈ ಮಗುವನ್ನು ಪರಾಧೀನ ಮಾಡಲಾಗದು. ದಯಮಾಡಿ ನನಗೆ ಸಹಾಯ ಮಾಡಿ." ಎಂದು ಅಂಗಲಾಚಿದರು. ಸ್ವಲ್ಪ ಹೊತ್ತು ಸುಮ್ಮನಿದ್ದು ವೈದ್ಯರು " ನೋಡಿ, ಈ ಖಾಯಿಲೆಗೆ ಯಾವ ಔಷಧಿಗಳು ಈಗ ಸಧ್ಯಕ್ಕೆ ದೊರೆಯುತ್ತಿಲ್ಲ. ಪೋಲಿಯೋ ರೋಗವು ಇತ್ತೀಚಿಗೆ ಕಾಣಿಸಿಕೊಂಡಿರುವ ಭೀಕರ ರೋಗ. ಹತ್ತಾರು ಸಂಶೋಧನೆಗಳು ನಡೆಯುತ್ತಾ ಇವೆ. ಈಗಿನ ಪರಿಸ್ಥಿತಿಯಲ್ಲಿ ಈ ಮಗುವಿನ ಜ್ವರ ಇಳಿಸದೆ ಮುಂದಿನ ಕ್ರಮ ತೆಗೆದು ಕೊಳ್ಳುವುದು ಕಷ್ಟ. ಆದರೂ, ನೀವು ಯಾವುದೇ ಕಾರಣಕ್ಕೂ ದೈರ್ಯಗೆಡಬೇಡಿ. ಸಾತ್ವಿಕರಾಗಿ ಕಾಣುವ ನೀವು ಸತ್ಯವನ್ನು ಅರ್ಥ ಮಾಡಿಕೊಳ್ಳಬಲ್ಲಿರಿ. ಈ ಮಗುವಿಗೆ ಏನು ಅಗತ್ಯವಿದೆಯೋ ಅದನ್ನು ಮಾಡೋಣ. ಚಿಂತೆ ಮಾಡಬೇಡಿ" ಎಂದು ತಂದೆಯ ಭುಜವನ್ನು ತಟ್ಟುತ್ತಾ ಸಮಾಧಾನ ಪಡಿಸಿದರು. ತಂದೆಯ ಕಣ್ಣುಗಳಲ್ಲಿ ಧಾರಾಕಾರ ನೀರು ಹರಿಯಿತು. ಸಾವರಿಸಿಕೊಂಡು ಎರಡೂ ಕೈಗಳನ್ನು ಜೋಡಿಸುತ್ತ ದುಃಖದಿಂದ " ಈ ಮಗುವನ್ನು ಉಳಿಸಿಕೊಡಿ . ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಚೈತನ್ಯ ಪೂರ್ಣನನ್ನಾಗಿ ಮಾಡಿಕೊಡಿ. ಎದ್ದು ಓಡಾಡಲು ಸಾಧ್ಯವಾಗದೆ ಇದ್ದರೂ ಪರವಾಗಿಲ್ಲ. ಎದ್ದು ಕೂರಲಿ. ತನ್ನ ಕೆಲಸ ತಾನು ಮಾಡಿಕೊಳ್ಳುವಷ್ಟು ಚೈತನ್ಯ ಭಗವಂತ ದಯಪಾಲಿಸಿದರೆ ಸಾಕು." ಎಂದು ಬೇಡಿದರು.
ವೈದ್ಯರ ಪ್ರಯತ್ನ ಶಕ್ತಿಮೀರಿ ಸಾಗಿತ್ತು. ನಾಲ್ಕಾರು ತಿಂಗಳು ಆಸ್ಪತ್ರೆಯ ಜೀವನದ ನಂತರ ಮಗು ಮನೆಗೆ ವಾಪಸಾಯಿತು.ಎದ್ದು ಕೂರುವ ಸ್ಥಿತಿ ತಲುಪಿತ್ತು. ಎದ್ದು ನಿಲ್ಲಲಾಗಲಿ ಓಡಾಡುವ ಪರಿಸ್ಥಿತಿಯಲ್ಲಿ ಮಗು ಇರಲಿಲ್ಲ. " ಮುದ್ದಾದ ಮಗುವಿಗೆ ಹೀಗಾಯಿತಲ್ಲ " ಎಂದು ತಾಯಿ ಅತ್ತರೆ, " ಭಗವಂತ ಇಷ್ಟಾದರೂ ಮಾಡಿದನಲ್ಲ" ಎಂದು ಸಮಾಧಾನ ಮಾಡುತ್ತಿದ್ದರು. " ಇವನ ಕಾಲ ಮೇಲೆ ಇವನನ್ನು ನಿಲ್ಲಿಸಲು ನಮಗೆ ಸಾಧ್ಯವಾಗದೆ ಇರಬಹುದು, ಆದರೆ ಇವನ ಬುದ್ಧಿ ಬಲದಲ್ಲಿ ಇವನು ಸ್ವತಂತ್ರವಾಗಿ ನಿಲ್ಲುವಂತೆ ಮಾಡುವುದೇ ನಮ್ಮಿಬ್ಬರ ಜೀವನ, ಸಾಧನೆ ಮತ್ತು ಬದುಕು." ಎನ್ನುತ್ತಾ ತಮ್ಮ ಸಂಪೂರ್ಣ ಜೀವನವನ್ನು ಮೀಸಲಿಟ್ಟರು.
ಇಂದಿಗೆ ಈ ಪೋಲಿಯೋ ಪೀಡಿತನಿಗೆ 56 ವರ್ಷಗಳೇ ಆಗಿವೆ. ತಂದೆ ತಾಯಿ ಮಾಡಿದ ಜೀವನ ಸಾಧನೆಯ ಫಲವಾಗಿ ತನ್ನ ಕಾಲಮೇಲೆ ತಾನು ನಿಂತಿದ್ದಾನೆ . ಪ್ರತಿ ಕ್ಷಣದಲ್ಲೂ ಆತ್ಮಸ್ಥೈರ್ಯ ತುಂಬುತ್ತ, ವಿಶ್ವಾಸ ಕರಗದಂತೆ, ಬದುಕಿನ ಪ್ರತಿ ಕ್ಷಣವನ್ನು ಹೇಗೆ ಎದುರಿಸಬೇಕೆಂಬುದನ್ನು ಉದಾಹರಣೆ ಮೂಲಕ ದೈರ್ಯ ತುಂಬುತ್ತ ಬೆಳೆಸಿದರು. ಯಾವುದೇ ಕಾರಣಕ್ಕೂ ತಾನು ನಿಷ್ಪ್ರಯೋಜಕ ಎಂಬ ಭಾವ ಬಾರದ ಹಾಗೆ ರಕ್ಷಿಸಿ ಬೆಳೆಸಿದರು. ತಮ್ಮ ಶಕ್ತಿ ಮತ್ತು ಅವಕಾಶಗಳಿಗೆ ಅನುಸಾರ ವಿದ್ಯೆ ಕೊಡಿಸಿದರು. ಜಗತ್ತಿನಲ್ಲಿ ಹೇಗೆ ಬದುಕಬೇಕೆಂಬ ಬುದ್ಧಿ ಕಲಿಸಿದರು.
ಇಂದಿಗೆ ಆ ತಂದೆ ತಾಯಿಯರು ಇಲ್ಲವಾದರೂ ಅವರ ಸಾಧನೆಯ ಪ್ರತೀಕ ಜೀವಂತವಾಗಿದೆ. ಪ್ರತಿ ಕ್ಷಣ ಆ ಸಾಧಕರನ್ನು ನೆನೆಯುತ್ತ ಅವರ ಆಶೀರ್ವಾದದ ಬಲ ಹಾಗೂ ಕೊಟ್ಟ ಸಂಸ್ಕಾರದ ನೆರಳಲ್ಲಿ ಇಂದು ಯಶಸ್ವಿ ವ್ಯಕ್ತಿಯಾಗಿ ತುಂಬು ಜೀವನ ನಡೆಸುತ್ತಿದ್ದಾನೆ. " ಪ್ರತಿ ಸವಾಲು ಅವಕಾಶವೇ, ಪ್ರತಿ ಅವಕಾಶವು ಸವಾಲೇ " ಎಂಬ ತಂದೆಯ ಮಾತನ್ನು ಅಕ್ಷರಶಃ ಪಾಲಿಸುತ್ತಾ ಜೇವನದಲ್ಲಿ ಸಂತಸ ಮತ್ತು ತೃಪ್ತಿ ಕಂಡುಕೊಂಡ ಪೋಲಿಯೋ ಪೀಡಿತ " ನಾನೇ ". ಇಂತಹ ತಂದೆ ತಾಯಿ ಪಡೆದ ನಾನೇ ಧನ್ಯ. ಅವರ ಬಗ್ಗೆ ಎಷ್ಟು ಹೇಳಿದರು ಅದು ಕಡಿಮೆಯೇ. ಅವರು ಬದುಕಿನಲ್ಲಿ ನನಗೆ ಕಲಿಸಿದ ಪಾಟಗಳು ಇಂದು ನನ್ನನ್ನು ಕಾಪಾಡುತ್ತಿವೆ.
ಪ್ರತಿ ಶಿವರಾತ್ರಿ ಬಂದಾಗಲು ನನ್ನ ತಂದೆ ವಿಸ್ತಾರವಾಗಿ ನನಗೆ ಹೇಳಿದ ಈ ಘಟನೆ ನೆನಪಾಗುತ್ತದೆ. ನನ್ನ ಅರಿವಿರದಂತೆ ಕಣ್ಣಲ್ಲಿ ನೀರು ತುಂಬುತ್ತದೆ. ದುಖದಿಂದಲ್ಲ, ನನ್ನ ತಂದೆ ತಾಯಿಯಲ್ಲಿದ್ದ ಅದಮ್ಯ ವಿಶ್ವಾಸದ ಸಂತೋಷದಿಂದ. ಈಗ ಹೇಳಿ ಹೇಗೆ ಮರೆಯಲಿ ಈ ಮಹಾ ಶಿವರಾತ್ರಿಯನ್ನು?
ಹೆಚ್ ಎನ್ ಪ್ರಕಾಶ್