Pages

Tuesday, August 24, 2010

ರಕ್ಷಾಬಂಧನ ಮತ್ತು ಉಪಾಕರ್ಮ

ಶ್ರೀ ಗಾಯತ್ರೀ ದೇವಿ

[ಚಿತ್ರಗಳ ಋಣ : ಅಂತರ್ಜಾಲ ]
ರಕ್ಷಾಬಂಧನ ಮತ್ತು ಉಪಾಕರ್ಮ

ಶ್ರಾವಣ ಶುದ್ಧ ಹುಣ್ಣಿಮೆ ನೂಲು ಹುಣ್ಣಿಮೆ ಎಂದೇ ಜನಜನಿತ. ಸಾಮಾನ್ಯವಾಗಿ ಇಲ್ಲಿಯವರೆಗೆ ಸುರಿವ ಮುಂಗಾರಿನ ಮುಸಲಾಧಾರೆಗೆ ಸಾಥ್ ಕೊಟ್ಟು ಹೆದರಿಸುವ ಸಮುದ್ರರಾಜ ವರುಣನಿಗೆ ಉಳ್ಳವರು ಬಂಗಾರದ ಜನಿವಾರ ಅರ್ಪಿಸಿ ತಮಗೆ ಇನ್ನು ಮುಂದೆ ಒಂದು ಹಂತಕ್ಕೆ ಕೆಲಸಮಾಡಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಸಹಕರಿಸು ಎಂದು ಪ್ರಾರ್ಥಿಸುವ ದಿನ. ನಮ್ಮ ಪಂಚಭೂತಗಳಲ್ಲಿ ಒಂದಾದ ನೀರಿಗೂ ನಮ್ಮ ವರುಣಮಹಾರಾಜರಿಗೂ ಮತ್ತು ಇಂದ್ರಾದಿ ದೇವತೆಗಳಿಗೂ ಒಳಗೊಳಗೆ ಇಂಟರ್ನೆಟ್ ಇದೆ! ಈ ಅತೀ ಬ್ರಾಡ್ಬ್ಯಾಂಡ ನೆಟ್ ಮೂಲಕ ಅವರು ಸದಾಕಾಲ ಸಂಪರ್ಕದಲ್ಲಿರುತ್ತಾರೆ!

ರಕ್ಷಾಬಂಧನ 'ತನ್ನ ಶೀಲವನ್ನು ರಕ್ಷಣೆ ಮಾಡುವ ಅಣ್ಣ ನೀನು' ಎಂದು ತಂಗಿಯಾದವಳು ಅಣ್ಣನಿಗೆ ರಕ್ಷಾದಾರವನ್ನು ಕಟ್ಟುವ ಒಂದುಕ್ರಮವಾದರೆ ಇನ್ನೊಂದೆಡೆ ಹೊಲದಲ್ಲಿ ಬೆಳೆಯುತ್ತಿರುವ ಪೈರಿಗೆ ಕಾಡಿನಿಂದ ಮೊಲ, ನರಿ, ಜಿಂಕೆ, ಕಡವೆ, ಹಂದಿ ಹೀಗೇ ಹಲವು ಹತ್ತು ಪ್ರಾಣಿಗಳು ನಾಡಿಗೆ ಅಥವಾ ಕೃಷಿಕರ ಹೊಲಗದ್ದೆಗಳಿಗೆ ನುಗ್ಗಿ ತಿಂದು ಹಾಳ್ಗೆಡವದಂತೆ ರಕ್ಷೆಗಾಗಿ ಬೆಚ್ಚು ಅಥವಾ ಬೆದರುಬೊಂಬೆಯನ್ನು ಹೊಲಗದ್ದೆಗಳಲ್ಲಿ ನಿಲ್ಲಿಸುವ ಕಾರ್ಯಕ್ರಮಕೂಡ ಈಗ ನಡೆಯುತ್ತದೆ. ಹಾಗೆ ನೆಟ್ಟ ಬೆದರು ಬೊಂಬೆಗೆ ರಾತ್ರಿ ಹೊತ್ತಿನಲ್ಲಿ ಹೆದರಿಕೊಂಡು ಆ ಪ್ರಾಣಿಗಳು ಬರುತ್ತಿರಲಿಲ್ಲವಂತೆ ಎಂಬುದು ಈಗ ಕಥೆ! ಈಗ ಪ್ರಾಣಿಗಳೂ ಇಲ್ಲ, ಇದ್ದ ಪ್ರಾಣಿಗಳಿಗೆ ಕಾಡಿಲ್ಲ ಹಾಗಾಗಿ ಹಗಲಿಡೀ ಸತ್ಯೋ ಇದ್ಯೋ ಎಂದು ಅಲ್ಲಿಲ್ಲಿ ಅಡಗಿ ಬದುಕುವ ಆ ಜೀವಿಗಳು ರಾತ್ರಿ ರೈತರ ಜಮೀನುಗಳಿಗೆ ನುಗ್ಗುತ್ತವೆ, ನುಗ್ಗಿ ನಿಲ್ಲಿಸಿದ ಬೆದರುಬೊಂಬೆಯನ್ನೇ ಕೆಡವುಹಾಕಿ ತಮ್ಮ ಮೇವನ್ನು ಹುಡುಕುತ್ತವೆ! ಇದು ಡಾರ್ವಿನ್ ವಿಕಾಸ ವಾದ.

ಬರುಬರುತ್ತ ಶಾಲೆ-ಕಾಲೇಜುಗಳಲ್ಲಿ ಕ್ಲಾಸ್ ಮೇಟ್ ಹುಡುಗ ಹುಡುಗಿಯರು ಈ ಹಬ್ಬವನ್ನು ಬಹಳ ಉತ್ಸುಕತೆಯಿಂದ ಆಚರಿಸುತ್ತಾರೆ, ಇದಕ್ಕೆ ಕಾರಣ ರಕ್ಷಾಬಂಧನದ ನೆಪದಲ್ಲಾದರೂ ಕೈಕೈ ಸೋಕಿಸಿಕೊಂಡು ಪುಲಕಿತರಾಗುವ ಬಯಕೆ ಎಂಬುದು ನನ್ನ ಅಭಿಪ್ರಾಯ; ಇದಕ್ಕೆ ಪುರಾವೆಯಾಗಿ ನನ್ನೆದುರೇ ಕೆಲವು ಜೋಡಿಗಳು ಹಾಗೆ ರಾಖಿ ಕಟ್ಟಿಕೊಂಡವರು ಈಗ ನಿಜಜೀವನದ ಜೋಡಿಗಳಾಗಿದ್ದಾರೆ, ಇನ್ನು ಕೆಲವರು ಉಪೇಂದ್ರನ ಕೆಟ್ಟ ಉಪದೇಶವನ್ನು ಸಿನಿಮಾದಿಂದ ಪಡೆದು ಪರಸ್ಪರ ದ್ವೇಷಿಕರಾಗಿ ಬದುಕುತ್ತಿದ್ದಾರೆ. ಇರಲಿ. ಇಲ್ಲಿ ರಾಖಿ ಕಟ್ಟುವುದು ಮುಖ್ಯವಲ್ಲ, ಅದರ ಹಿಂದಿನ ಮನೋಭೂಮಿಕೆ ಬಹಳ ಮುಖ್ಯ. ರಾಖಿ ಕಟ್ಟಿದ ತಕ್ಷಣ ಅವರು ಅಣ್ಣ-ತಂಗಿ ಆಗುತ್ತಾರೆಂಬ ಭಾವನೆ ಸುಳ್ಳು, ರಾಖಿ ಕಟ್ಟದಿದ್ದರೆ ಅವರು ಹಾಗೆ ನಡೆಯಲಾಗುವುದಿಲ್ಲ ಎಂಬ ಅನಿಸಿಕೆಯೂ ಅಷ್ಟೇ ಸುಳ್ಳು.


ಕಟ್ಟುವ ರಾಖಿ ಬಹಳ ಆಡಂಬರದ, ಬಹಳ ಅಲಂಕಾರವನ್ನು ಹೊಂದಿದ ಮತ್ತು ಬಹಳ ದುಬಾರಿಯ ದಾರವೇ ಆಗಬೇಕೆಂದೇನಿಲ್ಲ. ಕೇವಲ ಸಾದಾ ರೇಷ್ಮೆ ದಾರ ಕೂಡ ರಾಖಿಯಾಗಿ ಉಪಯೋಗಿಸಲು ಯೋಗ್ಯ. ಮಾರುಕಟ್ಟೆಯಲ್ಲಿ ಈಗ ಬಹಳ ವಿಧದ ರಾಖಿಗಳು ಸಿಗುತ್ತಿವೆ. ಸಂಗೀತ ಹಾಡುವ, ಪರಿಮಳ ಬೀರುವ, ಗಡಿಯಾರ ಹೊಂದಿರುವ, ಛಾಯಾಚಿತ್ರ ಹಚ್ಚಿರುವ ರಾಖಿಗಳೂ ನೋಡಸಿಗುತ್ತವೆ. ಇಲ್ಲಿ ಉದ್ದಿಮೆದಾರರು ತಮ್ಮ ಸೃಜನಶೀಲತೆ ಮೆರೆದು ಒಂದಷ್ಟು ಕಾಸು ಮಾಡಿಕೊಳ್ಳಲು ನೋಡುತ್ತಾರೆ. ಇವೆಲ್ಲದರ ಹಿಂದೆ ನಾವು ಭಾವಿಸಬೇಕಾದ್ದು ಒಂದೇ -ರಾಖಿ ಎಂಬುದು ರಕ್ಷಣೆಯ ದ್ಯೋತಕ.

ಉಪಾಕರ್ಮ ನಡೆಸುತ್ತಿರುವುದು

ಉಪಾಕರ್ಮಕ್ಕೆ ಬರೋಣ. ಇಂದಿನ ಜನಸಾಮಾನ್ಯರಲ್ಲಿ ಬಹಳ ಜನ ತಮಗೆಲ್ಲಾ ಜನಿವಾರ ಇರಲಿ ಎಂದು ಹಾಕಿಕೊಳ್ಳತೊಡಗಿದ್ದಾರೆ. ಇಲ್ಲೂ ಕೂಡ ಅದರ ಆಚರಣೆಗಿಂತ ಅದರ ತತ್ವಾನುಸರಣೆ ಮುಖ್ಯ. ಜನಿವಾರಕ್ಕೆ ಉಪವೀತ, ಯಜ್ಞೋಪವೀತ ಎಂದೂ ಕರೆಯುತ್ತೇವೆ. ಆಂಗ್ಲ ಭಾಷೆಯಲ್ಲಿ ಇದನ್ನು ಬೇರೆ ಹೆಸರು ಕಾಣದೆ ’ಸೇಕ್ರೆಡ್ ಥ್ರೆಡ್ ’ಎಂದು ಕರೆದುಕೊಂಡಿದ್ದೇವೆ --ನಾವೇ, ಯಾಕೆಂದರೆ ಆಂಗ್ಲರಲ್ಲಿ ಇದರ ಬಳಕೆಯಿಲ್ಲ ಅಲ್ಲವೇ ? ಶುದ್ಧ ಹತ್ತಿಯಿಂದ ಕೈಯ್ಯಲ್ಲಿ ತಕಲಿ ಎನ್ನುವ ವಸ್ತುವಿನಿಂದ ತಿರುಗಿಸಿ ದಾರಮಾಡಿ ಮೂರು ಮುಖ್ಯ ದಾರಗಳಲ್ಲಿ ಒಂದೊಂದರಲ್ಲೂ ಇನ್ನೂ ಮೂರು ಮೂರು ಸೇರಿಸಿ ಒಟ್ಟಿಗೆ ೨೭ ದೇವತೆಗಳನ್ನು ಆಹ್ವಾನಿಸಿ ಅದರಲ್ಲಿ ಅರ್ಘ್ಯಪಾದ್ಯಾದಿಗಳಿಂದ ಪೂಜಿಸಿ ಆಮೇಲೆ ಅದನ್ನು ಸೂರ್ಯನ ಅಪ್ಪಣೆ ಪಡೆದು, ಭೂಮಿತಾಯಿಮೇಲೆ ಇರಿಸಿ ನಮಸ್ಕರಿಸಿ, ತಾನು ತತ್ವಾವಲಂಬಿ ಎಂಬುದನ್ನು ಅಗ್ನಿ ಕಾರ್ಯದ ಮೂಲಕ ಅಗ್ನಿಗೆ ತಿಳಿಹೇಳಿ ಆಮೇಲೆ ಧರಿಸಬೇಕಾಗುತ್ತದೆ. ಹೀಗೆ ಧರಿಸಿದ ಮೇಲೆ ಅದಕ್ಕೆ ಪೂರಕವಾದ ಕೆಲವು ಆಚರಣೆಗಳು ಸದಾ ಇರುತ್ತವೆ. ನಾವು ಎಲ್ಲೇ ಇದ್ದರೂ ಅವುಗಳನ್ನು ಬಿಡುವಂತಿಲ್ಲ. ನಮ್ಮ ಮೈಮೇಲೆ ದೇವರನ್ನು ಧರಿಸಿದ್ದೇವೆ ಎಂದೇ ತಿಳಿದು ವರ್ತಿಸಬೇಕಾಗುತ್ತದೆ. ಅದರಲ್ಲಿರುವ ದೇವತೆಗಳು ನಮ್ಮ ಪ್ರತೀ ಕೆಲಸಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾರೆ! ಹೀಗಾಗಿ ಯಾರು ಯಾವಾಗ ಹೇಗೆ ಬೇಕೆಂದರೂ ಧರಿಸಿದ ದಾರ ಜನಿವಾರವಾಗುವುದಿಲ್ಲ. ಅದರಂತೇ ಧರಿಸಿದ ದಾರದ ಮಹತ್ವ ತಿಳಿಯದೇ ಬರೇ ಸುಮ್ಮನೆ ಎಲ್ಲರೂ ಧರಿಸುತ್ತಾರೆ ತನಗೂ ಇರಲಿ ಎಂದು ಧರಿಸಿದರೆ ಅದು ನ್ಯಾಷನಲ್ ವೇಸ್ಟು!

ಅರಿತರದು ಬಲು ಹಗುರ ಈ ದಾರ ಜನಿವಾರ
ಅರಿವಿರದೆ ಧರಿಸಿದರೆ ಅದು ಬಹಳ ಭಾರ
ಪರಹಿತದ ನೆಲೆಯಲ್ಲಿ ಸರಿಯಾಚರಣೆ ನಡೆಸಿ
ಪರಿಪಕ್ವತೆಯ ಪಡೆಯೋ | ಜಗದಮಿತ್ರ

ಜಗದಮಿತ್ರ ಸಾರಿದ- ನೀವು ನೋಡಿದಿರಿ, ಆಸ್ತಿಕನೊಬ್ಬ ದೇವರಲ್ಲಿ ಯಾವ ಭಕ್ತಿ ಶ್ರದ್ಧೆ ಹೊಂದಿರುತ್ತಾನೋ ಅಷ್ಟೇ ಆಸ್ಥೆಯನ್ನು ಈ ಯಜ್ಞೋಪವೀತದ ಮೇಲೂ ಇಡಬೇಕಾಗುತ್ತದೆ. ಯಜ್ಞದಲ್ಲಿ ಅಗ್ನಿಗೆ ನಾವು ವಚನವಿತ್ತು ಧರಿಸುವ ಅತಿ ವಿಶಿಷ್ಟ ದಾರ ಇದಾಗಿರುವುದರಿಂದ ನಾವು ಮಲ-ಮೂತ್ರಾದಿ ವಿಸರ್ಜನಾ ಕಾರ್ಯಗಳಿಗೆ ಹೋದಾಗ ಅದನ್ನು ’ ಸಸ್ಪೆಂಡ್ ಮೋಡ್ ’ ನಲ್ಲಿ ಇಟ್ಟುಕೊಳ್ಳುವ ಗೌರವದ ಕ್ರಮವೂ ಇದೆ! ಇಂತಹ ದಾರವನ್ನು ಧರಿಸಿದ ಮೇಲೆ ಎಂತೆಂತಹ ಆಹಾರವನ್ನು ತಿನ್ನಬೇಕು-ಯಾವ ಆಹಾರ ವರ್ಜ್ಯ ಎಂಬುದೂ ಕೂಡ ವೇದಮಂತ್ರಗಳಲ್ಲೇ ಹೇಳಲ್ಪಟ್ಟಿದೆ. ಇದೂ ಒಂದು ಹಂತದ ಸಾಧನೆಯಾದ್ದರಿಂದ ಎಲ್ಲರಿಗೂ ಇದು ರುಚಿಸುವುದಿಲ್ಲ. ಪ್ರಾಯಶಃ ’ ನೋ ಸ್ಟ್ರಿಂಗ್ಸ್ ಅಟ್ಯಾಚ್ಡ್ ’ ಎಂಬ ಮನೋವೃತ್ತಿಯ ಜನರಿಗೆ ಆ ಆಂಗ್ಲ ಗಾದೆ ಹಿಡಿಸುತ್ತದೆ ಮತ್ತು ಅಂಥವರಿಗೆ ಈ ಜನಿವಾರ ಯೋಗ್ಯವಲ್ಲ.

ಉಪನಯದ ಆದಿಭಾಗ -ಕಲಶ ಸ್ನಾನ

ಜನಿವಾರ ಧರಿಸಿದ ವ್ಯಕ್ತಿ ನಿತ್ಯವೂ ಸ್ನಾನ ಮಾಡಲೇ ಬೇಕು. ಮುಡಿಯಿಂದ-ಅಡಿಯವರೆಗೂ ಸ್ನಾನವಾದರೆ ಒಳ್ಳೆಯದು, ಅದಿಲ್ಲಾ ತಲೆಯೊಂದನ್ನುಳಿದು ಮಿಕ್ಕುಳಿದ ದೇಹವನ್ನು ನೀರಿನಿಂದ ತೊಳೆದುಕೊಳ್ಳಬೇಕು. ನಾವು ಸ್ನಾನಮಾಡುವಾಗ ೨೭ ದೇವತೆಗಳೂ ಸ್ನಾನಮಾಡುತ್ತಾರೆ ಎಂಬ ಕಲ್ಪನೆಯಿರಬೇಕು. ನಮ್ಮ ಪೂರ್ವಜರು ಇದನ್ನೆಲ್ಲಾ ಎಷ್ಟು ಚೆನ್ನಾಗಿ ನಮಗೆ ಹೇಳಿದರು ನೋಡಿ. ಹಲವು ಪವಿತ್ರನದಿಗಳ ನೀರನ್ನು ನಾವು ಸ್ನಾನಮಾಡಿದರೆ ಪುಣ್ಯ ಎಂದರು, ಆದರೆ ದಿನವೂ ಎಲ್ಲಾನದಿಗಳಿಗೂ ಭೇಟಿನೀಡಲು ಸಾಧ್ಯವೇ? ಇಲ್ಲವಲ್ಲ! ಹೀಗಾಗಿ ಅದಕ್ಕೆ ಪರ್ಯಾಯವಾಗಿ ಆ ಪುಣ್ಯನದಿಗಳನ್ನು ನಾವು ಸ್ನಾನಮಾಡುವ ನೀರಿಗೇ ಆಹ್ವಾನಿಸಿ ಅದರಿಂದ ಸ್ನಾತರಾಗಿ ಎಂದರು.

ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು ||

-- ಇದು ಆ ಪುಣ್ಯನದಿಗಳಲ್ಲಿ ಪ್ರಾರ್ಥನೆ. ತಾಯಂದಿರಾದ ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದಾ, ಕಾವೇರಿ ಇನ್ನೂ ಹಲವು ನದಿಗಳೇ ನೀವೆಲ್ಲ ಬಂದು ಈ ನೀರಿನಲ್ಲಿ ಸೇರಿರೆಂದು ನಿಮ್ಮಲ್ಲಿ ವಿಜ್ಞಾಪನೆ. ಎಂತಹ ಸುಮಧುರ ಅನುಭವ. ಬೆಳಗಿನ ಜಾವ ಎದ್ದು, ದೇವರನ್ನು ನೆನೆಸಿ, ಒಳ್ಳೆಯ ಮನಸ್ಸಿನಿಂದ ಈ ಪ್ರಾರ್ಥನೆಯೊಂದಿಗೆ ಶುದ್ಧನೀರಿನಲ್ಲಿ ಸ್ನಾನಮಾಡಿ ಮುಂದಿನ ನಮ್ಮ ನಿತ್ಯನೈಮಿತ್ತಿಕ ದೇವಪೂಜಾದಿ ಕಾರ್ಯಗಳಿಗೆ ಅನುವುಮಾಡಿಕೊಳ್ಳಬೇಕು. ಹೀಗೆ ನಾವು ದೇವ ಪೂಜೆ ಮಾಡಿದ ನಂತರ ಹತ್ತಿರದಲ್ಲಿ ನಮಗೆ ಲಭ್ಯವಿರುವ ಗೋವನ್ನು ಪೂಜಿಸಿ ಅದಕ್ಕೆ ತಿನ್ನಲು ಸ್ವಲ್ಪ ಅಕ್ಕಿಯನ್ನು ನೀಡಬೇಕು. ಇವತ್ತಿಗೆ ಹಲವರಿಗೆ ಅಗ್ನಿಕಾರ್ಯ ಸಾಧ್ಯವಿಲ್ಲವಾಗಿದೆ, ಆದರೆ ಪ್ರತೀ ವ್ಯಕ್ತಿಗೂ ಮಾನಸಪೊಜೆ ಎಂಬುದೊಂದಿದೆಯಲ್ಲ, ಅ ಕ್ರಮದಂತೇ ಅಗ್ನಿಗೆ ಮಾನಸ ಪೂಜೆ ನೇರವೇರಿಸಿ ನಾವು ಮಾಡಲೊಪ್ಪಿದ ಕಾರ್ಯದಲ್ಲಿ ಚ್ಯುತಿಯಾಗಿಲ್ಲದ ಭಾವವನ್ನು ಪಡೆಯಬೇಕಾಗುತ್ತದೆ. ಇಷ್ಟೆಲ್ಲಾ ಹಕ್ಕು-ಬಾಧ್ಯತೆಯಿರುವ ಈ ದಾರದ ನಿಜಸ್ವರೂಪವನ್ನು ಅರಿತ ನೀವೇ ಹೇಳಿ ನಮ್ಮಲ್ಲಿ ಈಗ ಎಷ್ಟು ಜನಸಾಮಾನ್ಯರು ಇದನ್ನು ಧರಿಸಲು ಯೋಗ್ಯರು?


ಉಪನಯನದಲ್ಲಿ ಮೊದಲ ಬಾರಿಗೆ ಜನಿವಾರ ಧಾರಣೆ

ಜನಿವಾರವನ್ನು ಬಹುತೇಕ ೭ ವರ್ಷ ವಯಸ್ಸಿನ ಒಳಗೆ ಹಾಕುವುದಿಲ್ಲ. [ಧರಿಸುವ ಮಗುವಿಗೆ ಮಾತಿನಲ್ಲಿ ಸ್ಪಷ್ಟತೆ ಬರಬೇಕು, ಮಂತ್ರದ ಉಚ್ಚಾರಗಳಲ್ಲಿ ಲೋಪ/ದೋಷ ಉಂಟಾಗಬಾರದು ಎಂಬ ಕಾರಣಕ್ಕಾಗಿ.ವೇದ ಮಂತ್ರಗಳನ್ನು ಮತ್ತು ಯೋಗಾಸನಗಳನ್ನೂ ತಪ್ಪಾಗಿ ಬಳಸಿದರೆ ವ್ಯತಿರಿಕ್ತ ಪರಿಣಾಮ ಕಟ್ಟಿಟ್ಟ ಬುತ್ತಿ ! ] ಮೊದಲಾಗಿ ಅದನ್ನು ಹಾಕುವಾಗ ತಂದೆಯಿಂದ ಮಗನಿಗೆ ಅದು ಬ್ರಹ್ಮೋಪದೇಶ ಸಂಸ್ಕಾರದ ಮೂಲಕ ಲಭ್ಯವಾಗಬೇಕಾಗುತ್ತದೆ. ಆಗ ತಂದೆಯೇ ಮಗನಿಗೆ ಗುರುವಾಗುತ್ತಾನೆ. ಬ್ರಹ್ಮೋಪದೇಶ ಬೋಧಿಸುತ್ತಾನೆ. ಬ್ರಹ್ಮೋಪದೇಶದಲ್ಲಿ ಗಾಯತ್ರೀ ಮಂತ್ರ ಸೇರಿದಂತೆ ಅಷ್ಟಾಕ್ಷರೀ ಮತ್ತು ಪಂಚಾಕ್ಷರೀ ಮಹಾಮಂತ್ರಗಳೂ ಸೇರಿರುತ್ತವೆ. ಇಲ್ಲಿ ಒಂದನ್ನು ನೆನೆಪಿಡಿ- ಈ ಉಪದೇಷ ತಂದೆಯ ಹೊರತು ಬೇರಾರಿಂದಲೂ ಪಡೆಯಲು ಅರ್ಹವಾಗಿರುವುದಿಲ್ಲ. ಈ ಗೌರವವೇನಿದ್ದರೂ ತಂದೆಗೇ ಸಲ್ಲಬೇಕಾಗುತ್ತದೆ. ಒಳ್ಳೆಯ ತಂದೆಯಿಂದ, ಒಳ್ಳೆಯ ಮುಹೂರ್ತದಲ್ಲಿ, ಒಳ್ಳೆಯ ಮಗನಿಗೆ ಉಪದೇಶ-ಯಜ್ಞ ಸಹಿತ ಧರಿಸಲು ಅನುಮೋದಿಸುವ ದಾರವೇ ಜನಿವಾರ. ಮೊದಲಾಗಿ ಒಮ್ಮೆ ಇದರ ಧಾರಣೆಯಾದ ಮೇಲೆ ಜೀವನ ಪೂರ್ತಿ ಅದನ್ನೇ ಹಾಗೇ ಇಟ್ಟುಕೊಳ್ಳಲು ಸಾಧ್ಯವೇ ? ಅದು ಹತ್ತಿಯದಾದ್ದರಿಂದ ಹಳೆಯದಾಗುತ್ತದೆ, ಬಣ್ಣಗೆಡುತ್ತದೆ, ಅದರಲ್ಲಿ ಕೊಳೆಸೇರುತ್ತದೆ ಈ ಎಲ್ಲ ಅನಿವಾರ್ಯ ಸಹಜ ಪ್ರಕ್ರಿಯೆಗಳಿಂದ ಕಳೆಗುಂದುವ ಜನಿವಾರವನ್ನು ಬದಲಾಯಿಸಿ ಮತ್ತೆ ಅಗ್ನಿಕಾರ್ಯದ ಮುಖೇನ ಹೊಸದನ್ನು ಪಡೆಯುವ ಕ್ರಮವೇ ಉಪಾಕರ್ಮ! ಇದನ್ನು ಬಿಟ್ಟು ನಮ್ಮಲ್ಲಿ ನಮ್ಮ ಕುಟುಂಬವರ್ಗದಲ್ಲಿ ಯಾರಾದ್ರೂ ಹಡೆದರೆ ಅಥವಾ ಸತ್ತರೆ ಆಗ ತಗಲಬಹುದಾದ ಆಶೌಚವನ್ನು, ಸೂತಕವನ್ನು ಕಳೆದುಕೊಳ್ಳುವ ದಿನ ಜನಿವಾರವನ್ನು ಬದಲಿಸಬೇಕಾಗುತ್ತದೆ. ಹೀಗೇ ಜನಿವಾರಕ್ಕೆ ಇವೆಲ್ಲಾ ಕಟ್ಟು-ನಿಟ್ಟಿನ ನಿಬಂಧನೆಗಳು ಇರುತ್ತವೆ. ಇದ್ಯಾವುದೂ ಇರದ ದಾರವನ್ನು ಅಲಂಕಾರಕ್ಕಾಗಿ ಧರಿಸಿದರೆ ಆಗ ’ಆ ದಾರ ಜೀವನದಿ ಬಲು ಭಾರ’ ಎಂಬ ಸ್ಥಿತಿ ಉಂಟಾಗುತ್ತದೆ.

ಇವತ್ತಿನ ದಿನಮಾನ ಬದಲಿರುವುದರಿಂದ ಕೆಲವರು ಕೇಳಬಹುದು " ನಮಗೆ ಜನಿವಾರ ಧರಿಸುವ ಯೋಗ್ಯತೆಯಿಲ್ಲವೇ ? " ಇದೆಯಪ್ಪಾ ಎಲ್ಲರಿಗೂ ಇದೆ, ಆದರೆ ಮೇಲೆ ನಾನು ಸ್ವಲ್ಪದರಲ್ಲೇ ಹೇಳಿದೆನಲ್ಲ ಅದನ್ನು ಅನುಸರಿಸುತ್ತೀರಾದರೆ ನೀವು ಜನಿವಾರ ಧರಿಸಲು ಬಹಳಯೋಗ್ಯರಾಗಿರುತ್ತೀರಿ. ಅದಿಲ್ಲಾ ನೀವದನ್ನು ಧರಿಸಿದರೆ ಯಾವ ಪ್ರಯೋಜನಕ್ಕೂ ಬಾರದು. ಸರಿಯಾದ ಆಚರಣೆಯಲ್ಲಿದ್ದು ಉಪನೀತನಾದವನಿಗೆ ಅದು ಅಗೋಚರವಾದ ಶಕ್ತಿಯನ್ನು ಸ್ಪುರಿಸುತ್ತದೆ! ಶರೀರದಲ್ಲಿ ಕಾಸ್ಮಿಕ್ ರೇಡಿಯೇಶನ್ ಆಗುತ್ತದೆ!

ಹಿಂದಕ್ಕೆ ಗುರುಗೋವಿಂದ ಭಟ್ಟರು ಸಂತ ಶಿಶುನಾಳ ರೀಫ ಸಾಹೇಬರಿಗೆ ಉಪನಯನ ಮಾಡಿದ್ದರಂತೆ! ಆ ಕಾಲಕ್ಕೆ ಶರೀಫರ ಬಾಯಿಂದ ಬಂದ ಭಕ್ತಿಪೂರ್ವಕ ಹಾಡು --

ಹಾಕಿದ ಜನಿವಾರವಾ ಸದ್ಗುರುನಾಥ
ಹಾಕಿದ ಜನಿವಾರವಾ

ಹಾಕಿದ ಜನಿವಾರ ನೂಕಿದ ಭವಭಾರ
ಲೋಕದಿ ಬ್ರಹ್ಮಜ್ಞಾನ ನೀ ಪಡೆಯೆಂದೂ

ಹಾಕಿದ ಜನಿವಾರವಾ.......

---ರೀಫರಾದರೇನಾಯ್ತು ಅವರಿಗೆ ಆತ್ಮಾವಲೋಕನದ ಅನುಭವವಾಗಿತ್ತು. ಅವರಿಗೆ ಸಿಕ್ಕ ಗುರುವಿನ ಮಹತ್ತು ಹಾಗಿತ್ತು. ಸಮಾಜವನ್ನೇ ಎದುರುಹಾಕಿಕೊಂಡರೂ ತನ್ನನ್ನು ನಂಬಿದ ಶಿಷ್ಯನನ್ನು ಕೈಬಿಡಲಿಲ್ಲ ಆ ಸದ್ಗುರು! ರೀಫರ ಆತ್ಮಾನುಭೂತಿ ನೋಡಿದ ಗೋವಿಂದ ಭಟ್ಟರು ಅವರಿಗೆ ಉಪನಯನ ಸಂಸ್ಕಾರವನ್ನು ಕೊಡುತ್ತಾರೆ. ರೀಫರ ಬಗ್ಗೆ ತಮಗೆಲ್ಲಾ ಹೊಸದಾಗಿ ಹೇಳಬೇಕೇನು ? ಗೊತ್ತಿರುವ ವಿಷಯ ಅಲ್ಲವೇ? ಅದೇ ರೀತಿ ಇಂದಿಗೂ ಸಹಿತ ಇಂತಹ ಮಂಗಳ ಕಾರ್ಯಕ್ಕೆ ನಮ್ಮಲ್ಲಿ ಗುರುಮುಖಗಳಿವೆ.

ಜನಿವಾರ ಹಾಕಿಸಿಕೊಳ್ಳುವ ವರೆಗೆ ಒಳ್ಳೆಯ ಆಚರಣೆಯಲ್ಲಿದ್ದು ಆಮೇಲೆ ಅದನ್ನು ತೊರೆದರೆ ಜನಿವಾರ ಹಾಕಿದವರಿಗೆ ಅದರ ಲೋಪದೋಷ ತಟ್ಟುತ್ತದೆ. ಇದು ಜಾಮೀನು ವ್ಯವಹಾರದಂತಿರುತ್ತದೆ--ತಿಳಿದಿರಲಿ. ಯಾವ ಮಂತ್ರ-ತಂತ್ರ ಏನೇ ಇದ್ದರೂ ಉಪದೇಶಪಡೆದಾತ ಸರಿಯಾಗಿ ನಡೆಸದಿದ್ದಲ್ಲಿ ಉಪದೇಶ ಕೊಟ್ಟಾತನಿಗೆ ಗ್ರಹಚಾರ ಪ್ರಾರಂಭವಾಗುತ್ತದೆ! ಇದಕ್ಕಾಗಿ ಯಾರಿಗಾದರೂ ಜನ್ಮಪೂರ್ತಿ ತಾನು ಪೂರಕ ಆಚರಣೆಯಲ್ಲಿರುತ್ತೇನೆಂಬ ನಂಬಿಕೆ ’ಒಳಗಿನಿಂದ’ ಬರುತ್ತಿದ್ದರೆ, ಅದು ಅಷ್ಟು ಬಲವಾಗಿದ್ದರೆ ಅಂಥವರು ಜನಿವಾರ ಧರಿಸಿಬಹುದು. ಅದಕ್ಕಾಗಿ ನಮ್ಮ ’ವೇದಸುಧೆ’ ಬಳಗ ಕಾರ್ಯತತ್ಪರವಾಗಿದೆ. [ಇಲ್ಲಿ ಯಾವುದೇ ಜಾತಿ, ಜನಾಂಗ ಇವುಗಳ ವೈಷಮ್ಯ ಇರುವುದಿಲ್ಲ, ಆದರೆ ಮೇಲಿನ ಕೆಲವು ಕಟ್ಟುಪಾಡುಗಳು ನಮ್ಮ ಸಂವಿಧಾನದಂತೇ ನಡೆಸಲೇ ಬೇಕಾದವು!]

ಬ್ರಹ್ಮೋಪದೇಶಕ್ಕೆ ಇನ್ನೊಂದು ಹೆಸರು ಉಪನಯನ. ನಮಗೆ ಹುಟ್ಟುವಾಗ ದೇವರು ನಯನಗಳೆರಡನ್ನು ಕೊಟ್ಟಿಯೇ ಇರುತ್ತಾನೆ. ಜನಿವಾರ ಹಾಕಿದ ಮೇಲೆ ನಮಗೆ ನಮ್ಮ ಅರ್ಹತೆಯ ವ್ಯಾಪ್ತಿ ವೃದ್ಧಿಸುತ್ತದೆ, ಜ್ಞಾನಮಾರ್ಗದಲ್ಲಿ ನಮಗೆ ಕಣ್ಣು ದೊರೆತಂತೇ ಮುಂದಿನ ನಮ್ಮ ಅಧ್ಯಯನ ಅಧ್ಯಾಪನ ಮೊದಲಾದ ಕಾರ್ಯಗಳಿಗೆ, ನಮ್ಮ ಜ್ಞಾನಾರ್ಜನೆಗೆ ಇದು ಇನ್ನೊಂದು ನಯನ [ಚಕ್ಷು, ಕಣ್ಣು] ಎಂಬ ಅರ್ಥದಲ್ಲಿ ಹೊಸದಾಗಿ,ಮೊದಲಾಗಿ ಜನಿವಾರ ಧರಿಸುವ ಈ ಸಮಾರಂಭಕ್ಕೇ ಉಪನಯನ ಎಂದರು!

ಎಲ್ಲರೂ ಮಾಡುತ್ತಾರೆಂದು ತಾವೂ ಮಾಡ ಹೊರಟಿದ್ದಕ್ಕೆ ಒಂದು ಉತ್ತಮ ಉದಾಹರಣೆಯನ್ನು ’ಬಿಸಿಲು ಬೆಳದಿಂಗಳು’ ಅಂಕಣದಲ್ಲಿ ನಮ್ಮ ಆದ್ಯರೂ ಆರಾಧ್ಯರೂ ಆದ ಶ್ರೀ ಶ್ರೀ ತರಳಬಾಳು ಸ್ವಾಮಿಗಳವರು ದಯಪಾಲಿಸಿದ್ದನ್ನು ನಿಮ್ಮ ಮುಂದೆ ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆ-

ಒಮ್ಮೆ ನಮ್ಮ ಸರಕಾರೀ ಸರ್ವೇ ಮತ್ತು ರೆವಿನ್ಯೂ ಡಿಪಾರ್ಟ್ಮೆಂಟಿನ ಜನ ಒಟ್ಟಾಗಿ ಸತ್ಯನಾರಾಯಣ ಪೂಜೆ ಮಾಡಿಸಿದರಂತೆ. ಪೂಜೆಯೆಲ್ಲಾ ಸಾಂಗವಾಗಿ ಇನ್ನೇನು ಮುಗಿಸುವಾಗ ಪುರೋಹಿತರು ಸಹಜವಾಗಿ ಮಂತ್ರ ಹೇಳಿದರು

" ಸರ್ವೇ ಜನಾಃ ಸುಖಿನೋ ಭವಂತು "

ತಕಳಿ ಸಮಸ್ಯೆ ಬಂದಿದ್ದೇ ಅಲ್ಲಿ! ಸಂಸ್ಕೃತದ ಗಂಧಗಾಳಿಯೂ ಇಲ್ಲದ ಅಲ್ಲಿರುವವರಿಗೆ ಅವರು ಏನು ಹೇಳುತ್ತಿದ್ದಾರೆಂಬುದರ ಅರ್ಥವಂತೂ ಆಗುತ್ತಿರಲಿಲ್ಲ, ಆದರೆ ’ ಸರ್ವೇ ಜನಾ ’ ಎಂದಿದ್ದರಲ್ಲ ಹೀಗಾಗಿ ರೆವಿನ್ಯೂ ಜನರ ತಕರಾರು ಪ್ರಾರಂಭವಾಯಿತು. ಅವರು ಪುರೋಹಿತರನ್ನು ಗದರಿಕೊಂಡರು.

" ಇಲ್ಲಿ ಸರ್ವೇ ಮತ್ತು ರೆವಿನ್ಯೂ ಎರಡೂ ಕಡೆಯ ಜನರಿದ್ದೇವೆ, ಆದರೆ ನೀವು ಸರ್ವೇ ಜನರಿಗೆ ಮಾತ್ರ ಅದು ಹೇಗೆ ಸುಖವಾಗಲಿ ಅಂದ್ರಿ "

ಪುರೋಹಿತರಿಗೆ ಒಂದು ಕಡೆ ನಗು ಮತ್ತು ಇನ್ನೊಂದು ಕಡೆ ಬೆವರು ಎರಡೂ ಬಂದವು. ಅಂತೂ ಕೊನೆಗೆ ಇಲ್ಲದ ಮಂತ್ರವನ್ನು ಕಟ್ಟಿ ಹೇಳಬೇಕಾದುದು ಅನಿವಾರ್ಯವಾಗಿ ಅವರು

" ರೆವಿನ್ಯೂ ಜನಾಃ ಸುಖಿನೋ ಭವಂತು " ಅಂತ ಹೇಳಿದರಂತೆ.

ಹೀಗೇ ನೋಡಿ ಎಲ್ಲರೂ ಮಾಡುತ್ತಾರೆಂದು ಅದರ ಮೌಲ್ಯ ತಿಳಿಯದೇ ನಾವೂ ಮಾಡಹೊರಟರೆ ಇಂತಹ ಹಲವಾರು ಹಾಸ್ಯಾಸ್ಪದ ಘಟನೆಗಳು ನಡೆಯುತ್ತಿರುತ್ತವೆ. ಗೊತ್ತಿಲ್ಲದ್ದನ್ನು ತಿಳಿಸಿಕೊಡಲು ಜ್ಞಾನ ದೀವಿಗೆಗಳಾದ ಹಲವು ಪುಸ್ತಕಗಳಿವೆ, ಪ್ರಾಜ್ಞರು ಅನೇಕರು ನಮ್ಮ ನಡುವೆಯೇ ಬದುಕುತ್ತಿರುತ್ತಾರೆ, ಅವರನ್ನು ಕೇಳಿ ತಿಳಿದರೆ ತಪ್ಪೇನಿಲ್ಲವಲ್ಲ ! ಋಜುಮಾರ್ಗದವರಾದ ನಾವು ಎಲ್ಲವನ್ನೂ ಆಚರಿಸುವ ಮೊದಲು ಸರಿಯಾಗಿ ಅರಿಯೋಣ, ಅರ್ಥೈಸೋಣ, ಆಮೇಲೆ ಆಚರಿಸೋಣ -ಸರಿಯಾಗಿ, ಸಮರ್ಪಕವಾಗಿ ಅಲ್ಲವೇ ?


ಎಲ್ಲರಿಗೂ ರಕ್ಷಾಬಂಧನದ ಶುಭಾಶಯಗಳು ಮತ್ತು ಈ ರಕ್ಷಾಬಂಧನ ಎಲ್ಲರಿಗೂ ಪರಸ್ಪರ ರಕ್ಷೆಯನ್ನೀಯಲಿ, ದಿವ್ಯ ಚಕ್ಷುವಿನಂತಹ ’ಉಪನಯನ’ ವನ್ನೀಯಲಿ ಎಂದು ಆಶಿಸುತ್ತೇನೆ. ಜ್ಞಾನಕ್ಕಾಗಿ ಎಲ್ಲರೂ ಓದೋಣ, ಬೆಳೆಯೋಣ- ಬೆಳಗೋಣ ನಮ್ಮ ಮುಂದಿನ ಸಮಾಜವನ್ನು,

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖವಾಗ್ಭವೇತ್ ||

|| ಸರ್ವೇ ಜನಾಃ ಸುಖಿನೋ ಭವಂತು | ಸಮಸ್ತ ಸನ್ ಮಂಗಲಾನಿ ಭವಂತು ||

-----ನಿಮ್ಮೊಡನೆ ವಿ.ಆರ್.ಭಟ್ ವಿಭಾಗದ ' ಹತ್ತಿರದಿಂದ ' ಪ್ರಬಂಧಗಳ ಮಾಲಿಕೆಯಿಂದ