Pages

Saturday, December 22, 2012

ಗಾರೆಗೋಡೆಯ ಚಿತ್ರ ಸಾಲು ಪರಿಷತ್ತಿನಲಿ

ಚಿತ್ರಋಣ: ಅಂತರ್ಜಾಲ

ತಮ್ಮದೇ ಹಳ್ಳಿಮನೆಯ ಗೋಡೆಯಮೇಲಿನ ಚಿತ್ರಪಟಗಳನ್ನು ನೋಡುತ್ತಾ ಕುಳಿತಿದ್ದ ತನಗೆ ಒಂದು ಫೋಟೋ ನೋಡುತ್ತಿದ್ದಂತೇ ಏಕಾಏಕಿ ಕಣ್ಣುಗಳು ಮಂಜಾದವು, ಮರುಕ್ಷಣದಲ್ಲಿ ಪರಿವೆಯೇ ಇಲ್ಲದೇ ಕಣ್ಣ ಹನಿಗಳು ತೊಟ್ಟಿಕ್ಕತೊಡಗಿದವು. ಕುಟುಂಬದ ಹಿರಿಯರ ಚಿತ್ರಪಟಗಳನ್ನು ಅಣ್ಣ ಅಂದವಾಗಿ ಜೋಡಿಸಿದ್ದ. ಸಂಪ್ರದಾಯಸ್ಥರ ಮನೆಯ ಸೊಸೆಯಾಗಿ ಬಂದ ಸಾಧ್ವಿ ಅತ್ತಿಗೆ ದಿನವೂ ಅವುಗಳನ್ನು ಒರೆಸಿ ಹೂವಿಟ್ಟು ನಮಸ್ಕರಿಸುತ್ತಿದ್ದಳು. ಮುಪ್ಪಡರಿದ ದಿನಗಳಲ್ಲಿ ತೆಗೆಸಿದ ಕಪ್ಪು-ಬಿಳುಪು ಭಾವಚಿತ್ರ ಅದಾಗಿದ್ದರೂ ಆ ಮುಖವನ್ನು ತಾನು ಮರೆಯಲೊಲ್ಲೆ. ಮರೆಯಲಾರದಂತೇ ಮಾಡಿ ಮನದಲ್ಲಿ ಉಳಿದುಹೋದ ಸಾಲುಗಳು ಇಂತಿದ್ದವು:

ಗಾರೆಗೋಡೆಯ ಚಿತ್ರ ಸಾಲು ಪರಿಷತ್ತಿನಲಿ
ಒಬ್ಬೊಬ್ಬರದೂ ಒಂದು ಜೀವ
ನನಗೆ ಎಡೆಯಿರಬಹುದು ಅವರಿರುವ ಸಾಲಿನಲಿ
ಮನವ ತುಂಬಿದ್ದುಂಟು ನಮ್ರಭಾವ

ಅಮ್ಮ ಕಟ್ಟಿಟ್ಟ ಅದೇನೋ ಮಡಿಗಂಟನ್ನು ತಾನು ಬಿಚ್ಚಿದಾಗ ಸಿಕ್ಕಿದ್ದು ಕೆಲವು ಪುಸ್ತಕಗಳು, ಮತ್ತು ಜಪದಸರ. ಓದಿದ ಪುಸ್ತಕದ ಓದಿದಭಾಗದ ಗುರುತುಹಾಕಿಕೊಳ್ಳಲಿಕ್ಕಾಗಿ ಇದ್ದ ಒಂದು ದಪ್ಪನೆಯ ಕಾಗದ ಮತ್ತು ಅದರಮೇಲೆ ಬರೆದಿದ್ದವು ಈ ಮೇಲಿನ ಸಾಲುಗಳು. ನರಸಿಂಹಸ್ವಾಮಿಯವರ ಕವಿತೆಯೊಂದರ ಈ ಭಾಗವನ್ನು ಅಮ್ಮ ಅದೆಷ್ಟು ಮೆಚ್ಚಿರಬೇಕು ಎಂದುಕೊಂಡ; ಅವರ ಹಾಡುಗಳೇ ಹಾಗಲ್ಲವೇ? ಯಾರಾದರೂ ಅತಿ ಸಹಜವಾಗಿ ಮೆಚ್ಚಬಹುದಾದ ಮೃದು-ಮಧುರ ಭಾವಗಳ ಸಾಲುಗಳಿರುತ್ತವೆ ಎಂದುಕೊಂಡ. ಮನದ ತುಂಬ ಹೇಳಲಾಗದ ದುಗುಡ ತುಂಬಿತ್ತು, ವಿಷಾದ ತುಂಬಿತ್ತು. ಭೋ ಎಂದು ಅತ್ತುಬಿಡುವ ಮನಸ್ಸಾಗುತ್ತಿತ್ತು-ಆದರೆ ವಯಸ್ಸಿಗ ತಾನು ಹಾಗೆ ಎಲ್ಲರೆದುರು ಅಳಲಾರ.

ಎಳವೆಯಲ್ಲಿಯೇ ಅಪ್ಪನ ಮುಖ ನೋಡಿರದ ಮಕ್ಕಳನ್ನು ಅಮ್ಮ ಸಲಹಿ ಬೆಳೆಸಿದ್ದಳು. ಯಾವುದೇ ಸರಿಯಾದ ಆದಾಯಮೂಲವಿರದ ಮನೆಯಲ್ಲಿ ಹೇಗೆ ತನ್ನನ್ನೂ, ಅಣ್ಣನನ್ನೂ ಮತ್ತು ಅಕ್ಕನನ್ನೂ ಬೆಳೆಸಿದಳೋ ಎಂಬುದೇ ಆಶ್ಚರ್ಯವಾಗಿತ್ತು. ಹೇಳಿಕೇಳಿ ಪುರೋಹಿತರ ಮನೆ. ನಾಲ್ಕು ಜನರಲ್ಲಿ ಬೇಡುವ ಹಾಗಿಲ್ಲ, ಮರ್ಯಾದೆಗೆಡುಕು ಕೆಲಸ ಮಾಡುವ ಹಾಗಿಲ್ಲ. ಗಂಡಸತ್ತವಳೆಂಬ ’ಬಿರುದು’ ಅದಾಗಲೇ ಪ್ರಾಪ್ತವಾಗಿಬಿಟ್ಟಿತ್ತು. ಮುತ್ತೈದೆಯರು ಧರಿಸುವ ಮಂಗಳ ಚಿನ್ಹೆಗಳನ್ನು ಕಳೆದಾಗಿತ್ತು. ಕೇಶಮುಂಡನವೊಂದನ್ನು ಮಾಡಿರಲಿಲ್ಲ ಯಾಕೆಂದರೆ ಸಮಾಜ ಸ್ವಲ್ಪ ಸುಧಾರಿಸಲ್ಪಟ್ಟಿದ್ದರಿಂದ ಅದು ಅನಿವಾರ್ಯವೆಂದೆನಿಸಲಿಲ್ಲ. ಕೇಶಮುಂಡನ ಮಾಡಿಸದೆಯೂ ಮನದಲ್ಲಿ ಸಂನ್ಯಾಸಿನಿಯಂತೇ ವ್ರತ ನಡೆಸಿದರೆ ದೇವರು ಮೆಚ್ಚುತ್ತಾನೆ ಎಂಬ ಭರವಸೆಯಿತ್ತು. ಅಪ್ಪ ಸತ್ತಾಗ ಹರೆಯದ ಹೆಣ್ಣಾಗಿದ್ದ ತಾಯಿಯ ಬಾಕಿ ಉಳಿದ ಆಸೆಗಳು-ಭರವಸೆಗಳು ಮಣ್ಣುಗೂಡಿಹೋಗಿದ್ದವು. ಜೀವನವೊಂದು ಗಾಳಿಗೋಪುರದಂತೇ ಭಾಸವಾಗುತ್ತಿದ್ದ ಆ ದಿನಗಳಲ್ಲಿ ಹರೆಯದ ಗಂಡಸರು ಬೇಡದ ಮಾತುಗಳನ್ನೇ ಆಡುತ್ತಿದ್ದರಂತೆ. ಆದರೂ ಅಮ್ಮ ತನ್ನತನವನ್ನು ಕಳೆದುಕೊಳ್ಳಲಿಲ್ಲ; ಕಾಮಕ್ಕೆ ಬಲಿಯಾಗಲಿಲ್ಲ. ಪರಪುರುಷರ ನೆಳಲೂ ಸೋಕದಂತೇ ಬದುಕಬೇಕೆಂದರೆ ಊರು ಬಿಟ್ಟು ಎಲ್ಲಾದರೂ ಹೋಗಬೇಕು, ಅದೂ ಹೆಣ್ಣೆಂಬ ಹೆಣ್ಣು ಸಂನ್ಯಾಸಿನಿಯಂತೇ ಇದ್ದರೂ ಪರವೂರುಗಳಲ್ಲೋ ಪರಸ್ಥಳಗಳಲ್ಲೋ ಅಲ್ಲಿನ ಗಂಡಸರು ಹಾಗೆ ಇರಗೊಟ್ಟಾರೆಯೇ?  ತುಂಬಿಹರಿವ ಕಾಮುಕರ ಕಾಮಪ್ರವಾಹದ ವಿರುದ್ಧ ನೈತಿಕ ನಾವೆಯನ್ನು ಮುನ್ನಡೆಸುತ್ತಾ ಸಾಗುವುದು ಸುಲಭದ ಮಾತಾಗಿರಲಿಲ್ಲ. ಇನ್ನೂ ಅರಿಯದ ಮಕ್ಕಳನ್ನು ಕಟ್ಟಿಕೊಂಡು ಹೋಗುವುದಾದರೂ ಎಲ್ಲಿಗೆ? ಮಕ್ಕಳ ಉಳಿವಿಗಾಗಿ ಏಳ್ಗೆಗಾಗಿ ತನಗೆ ತವರಲ್ಲಿ ಅಂದು ಕೊಟ್ಟಿದ್ದ ಬಂಗಾರವನ್ನೆಲ್ಲಾ ಮಾರಿಬಿಟ್ಟಳು ಆಕೆ.

ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬುದು ಅಮ್ಮನಿಗೂ ಗೊತ್ತಿತ್ತು. ಆದರೂ ತಂದೆಯ ವಿಯೋಗದ ದುಃಖ ತುಸುವಾದರೂ ದಮನವಾಗುವವರೆಗೆ ಆಕೆಗೆ ಇನ್ನೇನೂ ದಾರಿಯಿರಲಿಲ್ಲ. ತವರಿನಲ್ಲಿ ಈಗ ಯಾರೂ ಉಳಿದಿರಲಿಲ್ಲ; ಇದ್ದರೂ ಅವರ ಸಹಾಯವನ್ನು ಯಾಚಿಸುವುದು ಧರ್ಮವಲ್ಲ. ವರ್ಷದ ನಂತರ ಯಾವುದೋ ಒಂದು ದಾರಿ ಕಂಡುಬಂತು. ನೆರೆಕೆರೆಯ ಹೆಂಗಸರಿಗೆ ಭಜನೆ-ದೇವರನಾಮಗಳನ್ನೂ ಸಂಕೀರ್ತನೆ-ಸಂಗೀತವನ್ನೂ ಕಲಿಸಿಕೊಡುವುದೆಂದು ನಿರ್ಧರಿಸಿ, ದೇವಸ್ಥಾನದಲ್ಲಿದ್ದ ಅರ್ಚಕರ ಮುಂದೆ ನಿವೇದಿಸಿಕೊಂಡಳು. ತನ್ನ ಪತಿ ಮೊದಲು ಅದೇ ದೇವಸ್ಥಾನದಲ್ಲಿ ಅರ್ಚಕರಾಗಿದ್ದುದರಿಂದ ಈಗಿರುವ ಅರ್ಚಕರಿಗೆ ಕೆಲದಿನ ಪಾಠಗಳನ್ನೂ ಮಾಡಿದ್ದರಿಂದ ಆ ಅರ್ಚಕರು ಮಗನಂತೇ ಇದ್ದರು. ಗ್ರಾಮದ ಕೆಲಮನೆಗಳ ಜನ ಗುಡಿಗೆ ಬಂದಾಗ ಆ ಅರ್ಚಕರು ಹೀಗೆ ಭಜನೆ-ಸಂಕೀರ್ತನೆ-ಸಂಗೀತಗಳನ್ನು ಹೇಳಿಕೊಡುವ ಅಮ್ಮನ ಕುರಿತು ಪ್ರಸ್ತಾವಿಸಿದರು. ಒಂದಷ್ಟು ಹೆಂಗಳೆಯರು ಬಂದು ಕಲಿಯತೊಡಗಿದರು, ಆಧರವೇ ಇಲ್ಲದ ಅಮ್ಮನಿಗೆ ಕಾಸು-ಕವಡೆ ಅಂತ ಅಷ್ಟಿಷ್ಟು ಕೊಡುತ್ತಿದ್ದರು. ಇಂಥಾ ಕಷ್ಟದ ದಿನಗಳಲ್ಲಿ ತಮ್ಮನ್ನು ತಾಯಿ ಪೊರೆದದ್ದನ್ನು ಆತ ಕೇಳಿಬಲ್ಲ. ಆತನ ಮನ ಮತ್ತೆ ಮಡುಗಟ್ಟಿತು; ದುಃಖದ ಕಡಲು ಭುಗಿಲೆದ್ದಿತು.

ಮತ್ತೆ ತನಗೆ ತಾನೇ ಸಮಾಧಾನಿಸಿಕೊಂಡ ಆತನಿಗೆ ಈಗಿನ ತನ್ನಿರವಿಗೆ ಕಾರಣಳಾದ ಅಮ್ಮನ ದಯೆ, ತ್ಯಾಗ, ವಾತ್ಸಲ್ಯ ಇವುಗಳೆಲ್ಲದರ ಬಗ್ಗೆ ಮತ್ತೆ ಮತ್ತೆ ನೆನಪಾಗುತ್ತಲೇ ಇತ್ತು. ತನ್ನ ಬದುಕಿಗೆ ಮಕ್ಕಳು ಆಧಾರವಾಗಬೇಕೆಂದು ಅಮ್ಮ ಎಂದೂ ಬಯಸಿರಲಿಲ್ಲ. ಆದರೆ ಅವಳ ಕರ್ತವ್ಯವನ್ನು ಆಕೆ ನಡೆಸಿದ್ದಳು. ಕಷ್ಟಾರ್ಜಿತದಲ್ಲಿ ಹೊಟ್ಟೆಬಟ್ಟೆ ಕಟ್ಟಿ ತನ್ನನ್ನು ಓದಿಸಿದಳು. ನಿತ್ಯವೂ ಪಂಚತಂತ್ರ, ರಾಮಾಯಣ-ಮಹಾಭಾರತದ ಕಥೆಗಳನ್ನು ಹೇಳಿ ನೀತಿವಂತನಾಗಿ ಬಾಳುವಂತೇ ಬೋಧಿಸುತ್ತಿದ್ದಳು. "ದೇವರು ದಯೆತೋರುತ್ತಾನೆ, ನಿಮ್ಮೆಲ್ಲರನ್ನೂ ಸಲಹುತ್ತಾನೆ ಧೈರ್ಯಗೆಡಬೇಡ ಮಗಾ ನೀನು ಬಹುದೊಡ್ಡ ವ್ಯಕ್ತಿಯಾಗುತ್ತೀಯಾ" ಎಂದು ಹುರಿದುಂಬಿಸುತ್ತಿದ್ದಳು. ಓದಿನಲ್ಲಿ ತರಗತಿಗೆ ಪ್ರಥಮಸ್ಥಾನವನ್ನು ಗಳಿಸುತ್ತಾ ತಾನೇನೋ ಮುಂದೆ ಹೋಗುತ್ತಿದ್ದೆ. ವಿಧಿಲೀಲೆ ಮತ್ತು ಅಮ್ಮನ ಪುಣ್ಯವೆಂಬಂತೇ ಬೋಧನಾ ಶುಲ್ಕ ತೆಗೆದುಕೊಳ್ಳದೇ ಕೆಲವು ಶಾಲೆಗಳಲ್ಲಿ ಬೋಧನೆ ನಡೆಯಿತು; ತಗಲುವ ವೆಚ್ಚವನ್ನು ಶಿಕ್ಷಕರೇ ಭರಿಸಿದರು. ಶಿಕ್ಷಕರೊಬ್ಬರ ಮಾರ್ಗದರ್ಶನದಿಂದ ಹೆಚ್ಚಿನ ಅಂಕ ಪಡೆದಿದ್ದಕ್ಕಾಗಿ ವಿದ್ಯಾರ್ಥಿವೇತನ ದೊರೆಯಿತು. ಬಡವರು ಯಾರೆಲ್ಲಾ ಬಯಸಿದರೂ ಆಗುವುದು ಕಷ್ಟವೋ ಅಂಥಾ ಎಂಜಿನೀಯರಿಂಗ್ ಓದಿ ಅಲ್ಲಿಯೂ ಬಂಗಾರದ ಪದಕ ಪಡೆದೆ. ಕಂಪನಿಯೊಂದು ಕೈಬೀಸಿ ಕರೆದು ಉದ್ಯೋಗ ನೀಡಿತು. ಅಮ್ಮನ ಹರುಷಕ್ಕೆ ಪಾರವೇ ಇರಲಿಲ್ಲ. ಅಣ್ಣ ನನಗಿಂತಾ ಮೊದಲೇ ಓದಿದ್ದು ವೇದಪಾಠಗಳನ್ನು, ಆತ ತಂದೆಯಂತೇ ಅರ್ಚಕನಾಗಿ ಅಮ್ಮನ ಜೊತೆ ಅದೇ ಮನೆಯಲ್ಲಿ ಇದ್ದ. ತಾನುಮಾತ್ರ ಬೆಂಗಳೂರಿನ ದಾರಿ ಹಿಡಿದೆ; ಕಂಪನಿ ಸೇರಿದೆ. 

ಕಂಪನಿಗೆ ಹೊಸದಾಗಿ ಸೇರಿದಾಗ ತನಗೆ ಉದ್ಯೋಗದ ಪರಿಪೂರ್ಣ ಮಾಹಿತಿ ಇರಲಿಲ್ಲ. ಹಿರಿಯ ಸಹೋದ್ಯೋಗಿಗಳ ಕೃಪೆಯಿಂದ ಹಂತಹಂತವಾಗಿ ಕೆಲಸವನ್ನು ಕಲಿತುಕೊಂಡೆ. ವರ್ಷಗಳ ತರುವಾಯ ಕೆಲಸ ಸಲೀಸಾಯ್ತು. ಕೆಲಸ ಪಕ್ಕಾ ಬರುತ್ತದೆ ಎಂದಾದಾಗ ಗಣಕತಜ್ಞನಾದ ತನಗೆ ಟೀಮ್ ಲೀಡರ್ ಆಗಿ ಭಡ್ತಿಯಾಯ್ತು. ಗುಂಪಿನ ಮುಂದಾಳುವಾಗಿ ಕೆಲಸನಡೆಸುತ್ತಿರುವಾಗ ಬಹಳ ಹೊತ್ತು ತೊಡಗಿಕೊಳ್ಳಬೇಕಾಗುತ್ತಿತ್ತು. ಕೆಲಸ ಸಮಯಕ್ಕೆ ಮುಗಿಯದೇ ಇದ್ದರೆ ಮೇಲಧಿಕಾರಿಗಳಿಂದ ಹೇಳಿಸಿಕೊಳ್ಳಬೇಕಾದ ಪ್ರಮೇಯವಿತ್ತು. ಪೂರೈಸಲಾಗದ ಒತ್ತಡದಲ್ಲಿ ಸಹಾಯಕ್ಕೆ ಬಂದವಳು ಸಹೋದ್ಯೋಗಿ ಸುಲತಾ. ತನ್ನ ಕಾರ್ಯಬಾಹುಳ್ಯಗಳನ್ನರಿತು ಪ್ರತೀ ಹಂತದಲ್ಲೂ ತನಗೆ ನೆರವಾಗುತ್ತಿದ್ದಳು. ಅದ್ಯಾಕೋ ಅರಿಯೆ ಆಕೆಯನ್ನು ಕಂಡರೆ ಏಕೋ ಇಷ್ಟವೆನಿಸುತ್ತಿತ್ತು; ಆಕೆಗೂ ಅದೇ ಅನಿಸಿಕೆ ಇತ್ತು ಎಂಬುದು ಆಮೇಲೆ ತಿಳಿದುಬಂದ ವಿಷಯ. ಆಡಲಾಗದೇ ಉಳಿದ ಮಾತು ಒಂದುದಿನ ಆಡಿಯೇಹೋಯ್ತು; ಪರಸ್ಪರ ಇಷ್ಟಪಡುವುದಾಗಿ ತಾವು ಹೇಳಿಕೊಂಡೆವು. ನಂತರದ ದಿನಗಳಲ್ಲಿ ಹತ್ತಿರಹತ್ತಿರವಾಗುತ್ತಾ ನಡೆದದ್ದೇ ಅದೆಲ್ಲಾ....ಇಲ್ಲಿ ಬೇಡಬಿಡಿ. ಆ ಹಂತದಲ್ಲಿ ಅಮ್ಮನನ್ನೂ ಕೇಳದೇ ಮದುವೆಯಾಗಿಬಿಟ್ಟೆ. ಗೊತ್ತಾದಾಗ ಅಮ್ಮ ಅತ್ತಳು. ಆದರೂ ಮಗನನ್ನು ಕಡೆಗಣಿಸಲೊಲ್ಲಳು.

ಅಣ್ಣ ಅರ್ಚಕನಾಗಿ-ಪುರೋಹಿತನಾಗಿ ಕಷ್ಟಾರ್ಜಿತದಲ್ಲಿ ಬದುಕು ಸಾಗಿಸುತ್ತಾ ಅಮ್ಮನನ್ನೂ-ಅಕ್ಕನನ್ನೂ ತನ್ನ ಕುಟುಂಬವನ್ನೂ ಸಲಹುತ್ತಿದ್ದ. ಅಣ್ಣ-ಅಮ್ಮ ಕಷ್ಟದಲ್ಲೇ ಅಂತೂ ಅಕ್ಕನನ್ನು ಮದುವೆಮಾಡಿದರು. ಅಕ್ಕ ಮದುವೆಯಾಗಿ ಒಳ್ಳೆಯ ಮನೆಯನ್ನು ಸೇರಿದ್ದು ಅಮ್ಮನಿಗೆ ಬಹುಪಾಲಿನ ಭಾರವನ್ನು ಕಳೆದುಕೊಂಡ ಹಾಗಿತ್ತು. ಅಕ್ಕನ ಮದುವೆಗೆ ಸಹಾಯಮಾಡಲು ಮುಂದಾದಾಗ ಪೈಸೆಯನ್ನೂ ಬಿಚ್ಚದಂತೇ ಸುಲತಾ ತಡೆದಿದ್ದಳು. ಅಣ್ಣ ಹಣಕಾಸಿನ ಬಗ್ಗೆ ಎಂದೂ ನನ್ನಲ್ಲಿ ಕೈ ಒಡ್ಡಲಿಲ್ಲ. ಜೀವನಪೂರ್ತಿ ನೊಂದ ಅಮ್ಮ ಕೆಲದಿನ ’ಜಸ್ಟ್ ಫಾರ್ ಏ ಚೇಂಜ್’ ಗಾಗಿ ತಮ್ಮ ಜೊತೆಗಿರಲಿ ಎಂದು ಯಾಕೋ ಅನ್ನಿಸಿತು. ಒಮ್ಮೆ ಅಮ್ಮನಿಗೂ-ಅಣ್ಣನಿಗೂ ವಿಷಯ ತಿಳಿಸಿದೆ. ಅಮ್ಮ ಬೆಂಗಳೂರಿಗೆ ಒತ್ತಾಯದಿಂದ ಬಂದಿಳಿದಳು. ಬಸ್ಸಿನಿಂದಿಳಿದ ಅಮ್ಮನನ್ನೂ ಅಣ್ಣನನ್ನೂ ಕಾರಿನಲ್ಲಿ ಕೂರಿಸಿಕೊಂಡಾಗ ಅವರಿಗಾದ ಆನಂದ ಹೇಳತೀರದು! ಬುರ್ರನೆ ಹೊರಟು ಮನೆಸೇರಿಕೊಂಡೆವು. ಅಮ್ಮ-ಅಣ್ಣ ವಿಶಾಲವಾದ ತನ್ನ ಮನೆಯನ್ನು ನೋಡಿದರು. ಅವರಿಗೆ ಸುಲತಾಳನ್ನು ಪರಿಚಯಿಸಿದೆ. ಅಮ್ಮ-ಅಣ್ಣ ಬಂದಿದ್ದು ಸುಲತಾಳಿಗೆ ಹಿಡಿಸಿದ ಹಾಗೆ ಕಾಣಲಿಲ್ಲ; ತೋರಿಕೆಗೆ ನಕ್ಕಹಾಗಿತ್ತು. ಅಣ್ಣ ಒಂದೇ ದಿನ ತಮ್ಮ ಮನೆಯಲ್ಲಿದ್ದು ಮಾರನೇ ದಿನ ಊರಿಗೆ ಪಯಣಿಸಿಬಿಟ್ಟ. ಅಮ್ಮ ಇಲ್ಲೇ ಇದ್ದರು. ಮನೆಯೆಲ್ಲಾ ಓಡಾಡುತ್ತಿದ್ದ ಅಮ್ಮನನ್ನು ಕಂಡರೆ ಕ್ರಮೇಣ ನಾಗಿಣಿಯಂತಾಗುತ್ತಿದ್ದವಳು ಸುಲತಾ. ಸ್ನಾನ, ಶುಚಿತ್ವ, ಮಡಿ, ಕೊಳೆ-ಮುಸುರೆ ಎಲ್ಲದರಲ್ಲೂ ಅಮ್ಮನಿಗೆ ಅವಳ ಅದೇ ರಿವಾಜು. ಊರಿಂದ ಬರುವಾಗ ಚೀಲದಲ್ಲಿ ಅದೇನೋ ಒಂದು ಮಡಿಗಂಟನ್ನು ತಂದಿದ್ದಳು. ಎರಡು ಮಣ್ಣಿನ ಬೋಗುಣಿಗಳನ್ನೂ ಒಡೆಯದಂತೇ ಬಟ್ಟೆಗಳಲ್ಲಿ ಸುತ್ತಿಕೊಂಡು ಜೋಪಾನವಾಗಿ ತಂದಿದ್ದಳು. "ಮಗಾ ಈ ಬೋಗುಣಿಗಳನ್ನು ತಂದಿದೀನಿ ಕಣೋ, ಮಾಡಿದ ಆಸೆಗಳೂ ರುಚಿಕಟ್ಟಾಗಿರುತ್ತವೆ, ಆರೋಗ್ಯಕ್ಕೂ ಒಳ್ಳೇದು, ಬಳಸಲು ಹೇಳು" ಎಂದು ಅಮ್ಮ ಅವುಗಳನ್ನು ಕೈಗೆತ್ತಿಕೊಟ್ಟಾಗ ಮನೆತುಂಬಾ ಟಪ್ಪರ್ ವೇರ್ ಪಾತ್ರೆಗಳನ್ನೂ ಬಾಟಲುಗಳನ್ನೂ ಹೊಂದಿರುವ ಸುಲತಾ ಇದನ್ನು ಸ್ವೀಕರಿಸುತ್ತಾಳೆ ಎಂಬ ಭರವಸೆಯಿರಲಿಲ್ಲ. ಅಂತೂ ಆ ದಿನ ಅಮ್ಮ ಸುಸ್ತಾಗಿದ್ದರೋ ಏನೋ ಮಲಗಿ ನಿದ್ದೆಹೋದರು ಎಂದುಕೊಂಡೆ. ತಾವಿಬ್ಬರೂ ತಮ್ಮ ಕೋಣೆಗೆ ಸೇರಿಕೊಂಡೆವು. ಅಮ್ಮನಿಗೆ ಗೆಸ್ಟ್ ರೂಮಿನಲ್ಲಿ ಹಾಸಿಗೆ ತೋರಿಸಿದೆ. 

ಮಾರನೇ ಬೆಳಿಗ್ಗೆ ಎದ್ದು ಲಿವಿಂಗ್ ರೂಮಿಗೆ ಬಂದರೆ ಅಮ್ಮ ಬೋಗುಣಿಗಳನ್ನು ಇಟ್ಟುಕೊಂಡು ನೀವುತ್ತಿದ್ದಳು. ಹಿಂದೆಯೇ ಎದ್ದುಬಂದ ಸುಲತಾ ಅವುಗಳನ್ನು ನೋಡಿದ್ದೇ ನೋಡಿದ್ದು "ಥೂ ಹಳ್ಳೀ ಗುಗ್ಗುಗಳು ಉಪಯೋಗಿಸುವ ಪಾತ್ರೆಗಳು ನಮಗೇಕೆ? ಎಲ್ಲಾದರೂ ಬಿಸಾಕಿ" ಎಂದುಬಿಟ್ಟಳು. ಅಮ್ಮನ ಮುಖದಲ್ಲಿ ಕಾಣಿಸಿದ ನೋವಿನ ಛಾಯೆಯನ್ನು ಅಕ್ಷರಗಳಲ್ಲಿ ಹೇಗೆ ಹೇಳಲಿ? ಬಚ್ಚಲುಮನೆಯಲ್ಲಿ ನಲ್ಲಿಯನ್ನು ಬಿಗಿಯಾಗಿ ಕಟ್ಟಿದ್ದಕ್ಕೆ ವಾಚಾಮಗೋಚರವಾಗಿ ಅಮ್ಮನನ್ನು ಸುಲತಾ ಬೈದುಕೊಂಡಿದ್ದು ಕೇಳಿಸಿತ್ತು. ತುತ್ತು ಕೊಟ್ಟವಳ ಮತ್ತು ಮುತ್ತುಕೊಟ್ಟವಳ ನಡುವೆ ಸಿಕ್ಕ ತನ್ನ ಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕ ಅಡಕೆಯಂತೇ ಆಗಿತ್ತು. ನಿತ್ಯ ಸ್ನಾನಾನಂತರ ಅಮ್ಮ ಮಡಿಯುಟ್ಟು, ಮಡಿಗಂಟನ್ನು ಬಿಚ್ಚಿ ಅದೇನೋ ಪುಸ್ತಕಗಳನ್ನು ಓದುತ್ತಿದ್ದಳು. ದೇವರ ನಾಮಗಳನ್ನು ಸಣ್ಣಗೆ ಗುನುಗುತ್ತಿದ್ದಳು-ದೊಡ್ಡದಾಗಿ ರಾಗವಾಗಿ ಹಾಡಲು ಪರವಾನಗಿ ದೊರೆಯದೆಂಬ ಅನಿಸಿಕೆ ಅಮ್ಮನಿಗಿದ್ದಿರಬೇಕು. ಹಾಗಂತ ದೇವರಕೋಣೆ ಎಂದೇನೂ ಪ್ರತ್ಯೇಕ ಇರಲಿಲ್ಲ, ಇರುವ ಕೋಣೆಯಲ್ಲೇ ಒಂದು ಕಡೆ ಕೂತು ಆ ಕಾರ್ಯ ನಡೆಸುತ್ತಿದ್ದಳು. ಒಂದೆರಡು ದಿನ ಸುಲತಾ ಈ ಕೆಲಸದಲ್ಲಿದ್ದ ಅಮ್ಮನನ್ನು ಕೆಂಗಣ್ಣಿನಿಂದಲೇ ಕಂಡಳು. ದಿನಗಳೆಯುತ್ತಾ "ವಾಸನೆಬೀರುವ ಮಡಿಗಂಟು, ಮಡಿಗಂಟಂತೆ ಮಡಿಗಂಟು, ಎತ್ತಿ ಎಲ್ಲಾದರೂ ಎಸೀತೀನಿ ಗಬ್ಬುನಾತ" ಎಂದೆಲ್ಲಾ ರಂಪಮಾಡಿದಳು. ಅಮ್ಮನ ಕಣ್ಣುಗಳಲ್ಲಿ ನೀರನ್ನು ಕಂಡೆ; ಕಂಡೂ ಕಂಡೂ ಅಸಹಾಯಕನಾದೆ. ಮಾತಾಡಿದರೆ ಸುಲತಾ ತನ್ನನ್ನೇ ಬಿಟ್ಟುಹೋಗುವಳೆಂಬ ಹೆದರಿಕೆ, ಆಡದಿದ್ದರೆ ಅಮ್ಮನಿಗೆ ಹೇಗನಿಸಿರಬೇಡ ಎಂಬ ಆತಂಕ. ವಾಸ್ತವವಾಗಿ ಮಡಿಗಂಟು ಶ್ರೀಗಂಧ-ಧೂಪ-ಗುಗ್ಗುಳಗಳ ಪರಿಮಳವನ್ನು ಬೀರುತ್ತಿತ್ತು, ಸ್ವಚ್ಛ-ಶುಭ್ರ ರೇಷ್ಮೆಬಟ್ಟೆಯದಾಗಿತ್ತು, ಆದರೂ ಸುಲತಾಳ ಮೂಗಿಗೆ ಮಾತ್ರ ಇಲ್ಲದ ವಾಸನೆ ಬಡಿಯುತ್ತಿತ್ತು! 

ವಾರದಲ್ಲೇ ಅಮ್ಮ ಸಾವರಿಸಿಕೊಂಡ ಗಾಯಾಳುವಿನಂತೇ ಹೊರಟುನಿಂತಳು. ಬೇಡಾ ಎಂದರೂ ಕೇಳಲೇ ಇಲ್ಲ."ಒಮ್ಮೆ  ಹೀಗೆ ಬಾ ಮಗಾ" ಎಂದು ಕರೆದು ಅಪ್ಪಿಕೊಂಡು ತನ್ನಗಂಟಿನಲ್ಲಿದ್ದ ಚಿಲ್ಲರೆ ನಾಣ್ಯ-ನೋಟುಗಳನ್ನೆಲ್ಲಾ ಕೈಗೆ ಹಾಕಿ "ಒಳ್ಳೇದಾಗಿರಿ ಕಂದಾ, ಮಕ್ಕಳು ಮರಿಗಳು ಜನಿಸಿ ಮನೆತುಂಬಿ ನೂರ್ಕಾಲ ಸುಖವಾಗಿರಿ" ಎಂದು ಮನದುಂಬಿ ಹರಸಿ ಕಂಬನಿಗರೆದಳು. ಅಷ್ಟಕ್ಕೂ ಅಮ್ಮನ ಮಡಿಗಂಟಿನಲ್ಲಿದ್ದ ಪುಸ್ತಕಗಳನ್ನು ತಾನು ನೋಡಿರಲಿಲ್ಲ; ನೋಡಬೇಕು ಎನ್ನಿಸಲೂ ಇಲ್ಲ. ಅದೇನೋ ಆ ಹಳೇ ಕಾಲದ್ದು, ಸಾಫ್ಟ್ ವೇರ್ ನವರಾದ ತಮಗೆಲ್ಲಾ ಅದೇನು ಪ್ರಯೋಜನಕ್ಕೆ ಬಂದೀತು ಎಂಬ ಭಾವನೆ ಮನದಲ್ಲಿತ್ತು. ಅಮ್ಮನನ್ನು ಅಷ್ಟು ಶೀಘ್ರ ಊರಿಗೆ ಕಳುಹಿಸಿಕೊಡುವ ಮನಸ್ಸಿರಲಿಲ್ಲ. ಆದರೆ ಅಮ್ಮ ನಿಲ್ಲಬೇಕಲ್ಲಾ? ಹೊರಟುನಿಂತ ಅಮ್ಮನನ್ನು ತಾನೇ ಹೋಗಿ ಊರಿಗೆ ಕಳುಹಿಸಿ ಅದೇ ದಿನ ರಾತ್ರಿ ಮರಳಿ ಬಂದೆ. ಹೃದಯ ಭಾರವಾಗಿತ್ತು, ಮಾತು ಬಾರದಾಗಿತ್ತು. ಮರಳಿದ ತನ್ನನ್ನು ಸುಲತಾ ಬಾಗಿಲಲ್ಲೇ ತಡೆದಳು " ಹಲೋ ಇನ್ಮೇಲೆ ನಿಮ್ಮಮ್ಮನೋ ಅಣ್ಣನೋ ಈ ಕಡೆ ತಲೆಹಾಕಿದ್ರೆ ನಾನಂತೂ ಒಂದು ದಿನ ಇರಲಾರೆ. ನಿಂಗೆ ಬೇಕಾದ್ರೆ ನಂಜೊತೆ ಇರು ಇಲ್ಲವಾದ್ರೆ ಡೈವೋರ್ಸ್ ತಗೊಳ್ಳೋಣ" ಎಂದುಬಿಟ್ಟಳು.

ಅಮ್ಮನ ನೆನಪಿನಲ್ಲಿ ಮುಸುಕು ಮುಚ್ಚಿ ಮಲಗಿದಲ್ಲೇ ಅತ್ತೆ; ತಲೆಕೆಳಗಿನ ದಿಂಬು ನೆನೆದಿದ್ದು ನನಗೆಮಾತ್ರ ತಿಳಿದಿತ್ತು, ಬಿಸಿಯಾದ ತಲೆಯ ಆ ಕಾವಿಗೆ ಒದ್ದೆಯಾದ ದಿಂಬಿನ ಆ ಭಾಗ ಮತ್ತೆ ಒಣಗಿಹೋಗಿತ್ತು. ಮಕ್ಕಳನ್ನು ಹೆತ್ತು ಸುಖವಾಗಿರಿ ಎಂದು ಹರಸಿದ ತಾಯಿಯೇ ಕಣ್ಣೆದುರು ಸದಾ ಕಾಣುತ್ತಿದ್ದಳು. ಯಾರಲ್ಲಿಯೂ ಹೇಳಿಕೊಳ್ಳಲು ತನಗೆ ಯಾರಿದ್ದಾರೆ? ಬಚ್ಚಲುಮನೆಯಲ್ಲಿ, ಕಕ್ಕಸು ಕೋಣೆಯಲ್ಲಿ ನೆನಪಿಸಿಕೊಂಡು ಅಳುತ್ತಿದ್ದೆ, ಹೊರಗೆ ಅತ್ತರೆ ಆಕೆ ನೋಡಿದರೆ ಎಂಬ ಭಯ ಕಾಡುತ್ತಿತ್ತು. ಯಾಕೋ ಮನಸ್ಸು ಬಹಳ ಉದ್ವಿಗ್ನ ಗೊಂಡಿತ್ತು. ಅಮ್ಮ ಬಂದುಹೋದಮೇಲೆ ಸುಲತಾ ಬದಲಾಗಿಹೋಗಿದ್ದಳು. ಸರಿಯಾಗಿ ಮಾತನಾಡುತ್ತಿರಲಿಲ್ಲ,  ಬೇಕು-ಬೇಡಗಳಲ್ಲಿ ಆಸಕ್ತಿ ಕಮ್ಮಿಯಾಗಿತ್ತು. ಮನೆಗೆ ಬರ-ಹೋಗುವ ಸಮಯವೂ ಬದಲಾಗತೊಡಗಿತ್ತು. ಆಡಳಿತ ಮಂಡಳಿಗೆ ಹೇಳಿ ಬೇರೇ ಗುಂಪಿಗೆ ಸೇರಿಕೊಂಡಳು. ಅಲ್ಲಿ ಅದೇನು ನಡೆಯಿತೋ ತಿಳಿಯದು. ರಾಹುಲ್ ಎಂಬ ಆ ಗುಂಪಿನಲ್ಲಿದ್ದೊಬ್ಬಾತ ಸಲುಗೆಯಿಂದಿರುವುದು ಕಾಣಿಸಿತು. ಕೇಳುವ-ಹೇಳುವ ಕಥೆಯೇ ಇಲ್ಲ. ಕೇಳಿದರೆ ಆ ಕ್ಷಣದಲ್ಲೇ ಡೈವೋರ್ಸ್, ಕೇಳದಿದ್ದರೆ ಏನಾಗಬಹುದೆಂದು ಊಹಿಸಲೂ ಆಗಲಿಲ್ಲ. 

ನೊಂದಮನಸ್ಸಿಗೆ ಸಾಂತ್ವನ ಹುಡುಕುತ್ತ, ಶಾಂತಿ ಹುಡುಕುತ್ತಿದ್ದಾಗ ಯಾರೋ ಹೇಳಿದರು-ಅಮೇರಿಕಾದಿಂದ ಯಾರೋ ಬಂದಿದ್ದಾನಂತೆ, ಅವನ ಉಪನ್ಯಾಸಗಳು ತುಂಬಾ ಪರಿಣಾಮಕಾರಿಯಂತೆ. ಜೀವನದ ಜಿಗುಪ್ಸೆಯನ್ನು ಕಳೆಯಲು ಅವು ಸಹಕಾರಿಯಂತೆ ಎಂದುಅ. ಆನ್ ಲೈನ್ ನಲ್ಲಿ ಮಾಹಿತಿಪಡೆದು ಟಿಕೆಟ್ ಖರೀದಿಸಿದೆ. ಉಪನ್ಯಾಸಕ್ಕೂ ಹೋಗಿಬಂದೆ. ಉಪನ್ಯಾಸ ಆಫ್ ಕೋರ್ಸ್ ಆಂಗ್ಲಭಾಷೆಯಲ್ಲಿ ನಡೆಯಿತು. ರಾಬಿನ್ ಮ್ಯಾಥ್ಯೂ ಎಂಬಾತ ಉಪನ್ಯಾಸ ನೀಡಿದ-ಆತ ಜಗತ್ಪ್ರಸಿದ್ಧ, ಆತನ  ಬಗ್ಗೆ ನಿಮಗೂ ತಿಳಿದಿರಲಿಕ್ಕೆ ಸಾಕು. ರಾಬಿನ್ ಮ್ಯಾಥ್ಯೂಗೆ ಭಾರತವೆಂದರೆ ಬಹಳ ಅಚ್ಚುಮೆಚ್ಚಂತೆ. ಆತ ಇಲ್ಲಿನ ರಾಮಾಯಣ-ಮಹಾಭಾರತ ಮತ್ತು ವೇದ-ಉಪನಿಷತ್ತುಗಳು ಅಲ್ಲದೇ ಭಗವದ್ಗೀತೆಯನ್ನೂ ಚೆನ್ನಾಗಿ ಓದಿ ತಿಳಿದುಕೊಂಡಿದ್ದಾನಂತೆ. "ದೆರ್ ಆರ್ ಸಚ್ ಇನ್ ವ್ಯಾಲ್ಯೂಯೇಬಲ್ ಡೈಮಂಡ್ಸ್ ಇನ್ ಇಂಡಿಯಾ" ಅಂದ. ಉಪನ್ಯಾಸಕ್ಕೆ ಸುಮಾರು ೫೦೦ ಜನ ಸೇರಿದ್ದರು. ಎಲ್ಲರಿಗೂ ಒಂದಲ್ಲಾ ಒಂದು ಸಮಸ್ಯೆಯೇ. ಎಲ್ಲರಿಗೂ ಸಾಂಸಾರಿಕ ಅಥವಾ ವ್ಯಾವಹಾರಿಕ ಸಮಸ್ಯೆಗಳೇ. ಕೃಷ್ಣನನ್ನು ಮ್ಯಾನೇಜ್ ಮೆಂಟ್ ಗುರು ಎಂದೂ ಗೀತೆ ಜಗತ್ತಿನಲ್ಲಿಯೇ ತಾನು ನೋಡಿದ ಅತಿಶ್ರೇಷ್ಠ ಗ್ರಂಥವೆಂದೂ ರಾಬಿನ್ ಮ್ಯಾಥ್ಯೂ ಹೇಳಿದ. ಉಪನ್ಯಾಸ ಮುಗಿದು ಹೊರಡುವಾಗ ಆತ ಎಲ್ಲರಿಗೂ ಒಂದು ಪುಸ್ತಕ ಶಿಫಾರಸ್ಸುಮಾಡಿದ. ಅದು ಅದೇ ಭಗವದ್ಗೀತೆ. "ಯು ಕ್ಯಾನ್ ಗೆಟ್ ಇಟ್ ಇನ್ ಯುವರ್ ಓನ್ ಲ್ಯಾಂಗ್ವೇಜ್ ಐ ಹೋಪ್, ಆಲ್ ದಿ ಬೆಸ್ಟ್" ಎಂದು ಎಲ್ಲರನ್ನೂ ಬೀಳ್ಕೊಟ್ಟ.

ನಿಜಕ್ಕೂ ಆತ ಹೇಳಿದ್ದು ಸರಿಯೇ ಎಂಬುದು ಗೀತೆಯನ್ನು ಅಂದಿನಿಂದ ಓದಲು ಆರಂಭಿಸಿದ ತನಗೆ ವೇದ್ಯವಾಯ್ತು. ನೋವಿನಲ್ಲೂ ನಲಿವಿನಲ್ಲೂ, ಸುಖ-ದುಃಖಗಳೆರಡರಲ್ಲೂ ಮನಸ್ಸನ್ನು ನಿರಾಳವಾಗಿ ಇರಿಸಿಕೊಂಡು ನಿರುಮ್ಮಳವಾಗಿರುವುದು ಹೇಗೆ ಎಂಬುದನ್ನು ತಿಳಿಯಲು ಗೀತೆಯನ್ನೋದಬೇಕು. ಗೀತೆ ಒಂದು ಧರ್ಮಗ್ರಂಥವಲ್ಲ, ಅದು ಮಾನವ ಜೀವನಧರ್ಮವನ್ನು ತಿಳಿಸುತ್ತದೆ. ಗೀತೆಯನ್ನು ಓದುತ್ತಾ ಓದುತ್ತಾ ಗೀತೆಯಲ್ಲಿ ಪಳಗಿಬಿಟ್ಟೆ. ಇಡೀ ಗೀತೆ ಕಂಠಪಾಠವಾಗಿ ಗೀತೆಯ ಕುರಿತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ವರ್ಷವೊಂದರ ಹಿಂದೆ ಡೈವೋರ್ಸ ನೋಟೀಸ್ ಕೊಟ್ಟ ಸುಲತಾ ಇನ್ನೂ ಇತ್ಯರ್ಥವಾಗದ್ದರಿಂದ ಬೇರೇ ಮನೆಯಲ್ಲಿದ್ದಳು. ಗೀತೆಯ ಕುರಿತಾದ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನಡೆಸುತ್ತಿದ್ದಾಗ ಕಣ್ಣು ಅಕಸ್ಮಾತ್ ಎದುರಿಗೆ ಕೂತ ವ್ಯಕ್ತಿಯಮೇಲೆ ಹರಿಯಿತು: ಹೌದು ಅವಳೇ ಸುಲತಾ. ಮನಸ್ಸಿಗೆ ನೆಮ್ಮದಿ ಕಳೆದುಕೊಂಡು ಹಾಗೆ ಬಂದಿದ್ದಾಳೆ ಎಂದು ಬೇರೇ ಹೇಳಬೇಕೇ? ಪ್ರವಚನ ಮುಗಿದು ಹೊರಟಾಗ "ರೀ" ಎಂಬ ಕರೆ! ಸುಲತಾ ಬೆಂಬತ್ತಿ ಬಂದಳು. ತಾನಿನ್ನೆಂದೂ ಹಾಗೆ ನಡೆದುಕೊಳ್ಳುವುದಿಲ್ಲವೆಂತಲೂ, ಕೆಲಸ ಒತ್ತಡಗಳು ಮತ್ತು ಮಿಥ್ಯಾ ಲೋಕದ ಬಡಿವಾರದ ಜೀವನದಲ್ಲಿ ತೊಡಗಿಕೊಂಡ ತನಗೆ ಈಗ ನಿಜದ ಅರಿವಾಗಿದೆಯೆಂದೂ ಹೇಳಿದಳು.    

ಅಣ್ಣ ಮನೆಗೆ ಫೋನು ಹಾಕಿಸಿ ವರ್ಷಗಳೇ ಕಳೆದವು. ತನ್ನ ಸ್ವಂತ ದುಡಿಮೆಯಲ್ಲೇ ಅಣ್ಣ ಎಲ್ಲಾ ಖರ್ಚನ್ನೂ ನಿಭಾಯಿಸುತ್ತಾನೆ; ಹಣ ಕಳುಹಿಸಲೇರ್ ಎಂದರೆ ಬೇಡವೆಂಬ ಅಣ್ಣಂದಿರೂ ಇರುತ್ತಾರ್ಯೇ? ಇರುತ್ತಾರೆ ಎಂಬುದು ತನ್ನಣ್ಣನನ್ನು ನೋಡಿದರೆ ತಿಳಿಯುತ್ತದೆ! ಅಣ್ಣ ಕರೆಮಾಡಿದ್ದ. ವರ್ಷದ ಹಿಂದೆ ಅಮ್ಮ ಭಗವಂತನ ಪಾದ ಸೇರ್ರಿಕೊಂಡು ಈಗ ವರ್ಷಾಂತಕ ಕಾರ್ಯ ಬಂದುಬಿಟ್ಟಿದೆ ಎಂಬುದು ನೆನಪಿಗೆ ಬಂದಿದ್ದೇ ಆಗ. ಬೆಳಗಾದರೆ ನಗರದ ಕೆಲಸಗಳ ಒತ್ತಡದಲ್ಲಿ ತಮ್ಮನ್ನೇ ಮರೆತಿರುವಾಗ ಇನ್ನೆಲ್ಲಿಯ ಅಪ್ಪ-ಅಮ್ಮನ ನೆನಪು ಅಲ್ಲವೇ? ಅಮ್ಮ ತೀರಿಕೊಂಡಾಗ ತಾನೊಬ್ಬನೇ ಹೋಗಿದ್ದೆ-ಆಗ ಸುಲತಾ ದೂರವಾಗಿದ್ದಳು. ಅಣ್ಣ-ತಮ್ಮ ಪರಸ್ಪರ ಸಂತೈಸಿಕೊಂಡೆವಾದರೂ ಅಮ್ಮನ ಮಡಿಲಿನ ಆ ಪ್ರೀತಿ ಇನ್ನೆಲ್ಲಿ ಸಿಕ್ಕೀತು, ಇನ್ನೆಲ್ಲಿ ದಕ್ಕೀತು? ಈ ಸರ್ತಿ ತಮ್ಮ ದುಃಖದಲ್ಲಿ ಇನ್ನೊಬ್ಬಳು ಸಹಭಾಗಿ-ಅವಳೇ ಅರ್ಧಾಂಗಿ ಸುಲತಾ. ಜೊತೆಗೆ ಸಮಾಧಾನಿಸಿಕೊಳ್ಳಲು ಭಗವದ್ಗೀತೆಯ ತತ್ವಗಳು, ಕಿರುಹೊತ್ತಗೆಗಳು.

ಅಮ್ಮ ತೀರಿಕೊಂಡ ಗಡಿಬಿಡಿಯಲ್ಲಿ ಆಗ ಅಮ್ಮನ ಮಡಿಗಂಟನ್ನು ಬಿಚ್ಚಿ ನೋಡಿರಲಿಲ್ಲ. ಅಣ್ಣ ಅದನ್ನು ಎಲ್ಲೋ ಹಾಗೇ ಬಿಟ್ಟಿರಬೇಕೆಂದುಕೊಂಡಿದ್ದೆ. ಇಲ್ಲಾ ಇಲ್ಲಾ...ಅದು ಇನ್ನೂ ಮನೆಯಲ್ಲೇ ಇದೆ! ಅದನ್ನು ಅಣ್ಣ ಅಮ್ಮನಂತೇ ನಿತ್ಯವೂ ಬಳಸುವುದು ಈಗಿನ ವಾಡಿಕೆಯಂತೆ. ಅಂದಹಾಗೇ ಆ ಮಡಿಗಂಟನ್ನು ಕುತೂಹಲದಿಂದ ಬಿಚ್ಚಿದೆ. ಅದರಲ್ಲಿ ಪ್ರಥಮವಾಗಿ ಕಂಡ ಪುಸ್ತಕದ ಹೆಸರು "ಭಗವದ್ಗೀತೆ." ಅದರೊಟ್ಟಿಗೆ ಭರ್ತೃಹರಿಯ ನೀತಿ ಶತಕಗಳು, ರಾಮಾಯಣ ಮತ್ತು ಮಹಾಭಾರತಗಳಿವೆ. ಭಗವದ್ಗೀತೆಯ ನಡುವೆ ಆಗ ಹೇಳಿದೆನಲ್ಲಾ ದಪ್ಪನೆಯ ಗುರ್ತಿನ ಕಾಗದವಿದೆ. ಮತ್ತು ಅದರಮೇಲೆ ಹೀಗೆ ಬರೆದಿದೆ:

ಗಾರೆಗೋಡೆಯ ಚಿತ್ರ ಸಾಲು ಪರಿಷತ್ತಿನಲಿ
ಒಬ್ಬೊಬ್ಬರದೂ ಒಂದು ಜೀವ
ನನಗೆ ಎಡೆಯಿರಬಹುದು ಅವರಿರುವ ಸಾಲಿನಲಿ
ಮನವ ತುಂಬಿದ್ದುಂಟು ನಮ್ರಭಾವ

ಹಳ್ಳಿಮನೆಯ ಗೋಡೆಯಮೇಲಿರುವ ತಾನು ಗಮನಿಸುತ್ತಿರುವ ಆ ಚಿತ್ರಪಟದಲ್ಲಿರುವುದು ಅಮ್ಮನ ಭಾವಚಿತ್ರ. ಅಮ್ಮನ ಕಷ್ಟಕಾಲದಲ್ಲಿ ’ಗೀತೆ’ ಅಮ್ಮನಿಗೆ ಅಮ್ಮನಾದಳು, ಅಮ್ಮ ಹೊರಟುಹೋದಳು-ಗೀತೆಯನ್ನೇ ಅಮ್ಮನ ಜಾಗದಲ್ಲಿ ನಮ್ಮ ಹತ್ತಿರಬಿಟ್ಟು ಹೋದಳು. 
                                      --V.R.Bhat