ಇದುವರೆಗೆ ಭಗವತ್ ಸ್ವರೂಪದ ಬಗೆಗೆ ಸಾಕಾದಷ್ಟು ವಿಚಾರ ಮಥನ ಮಾಡಿಯಾಯಿತು. ವ್ಯಕ್ತಿರೂಪನಲ್ಲದ ಮತ್ತು ಕೇವಲ ಶಕ್ತಿರೂಪನಾದ ಭಗವಂತ ಈ ಅದ್ಭುತ ರಚನೆಯ ಕರ್ತೃ, ಧರ್ತೃ ಮತ್ತು ಸಂಹರ್ತೃ ಎಂಬುದನ್ನು ತಿಳಿದೆವು. ಈಗ ಪ್ರಶ್ನೆ ಉದ್ಭವಿಸುತ್ತದೆ - ಈ ವಿಶ್ವ ಬ್ರಹ್ಮಾಂಡದ ರಚನೆಯನ್ನು ಯಾರ ಸಲುವಾಗಿ ಮಾಡುತ್ತಾನೆ? ತನ್ನ ಸಲುವಾಗಿಯಂತೂ ಅಲ್ಲ. ಏಕೆಂದರೆ ಭಗವಂತ ಪರಿಪೂರ್ಣ ಮತ್ತು ಪ್ರಾಪ್ತಸರ್ವಸ್ವ. ಈ ಸೃಷ್ಟಿಯಿಂದ ಅವನಿಗೆ ಆವರೆಗೆ ಸಿಕ್ಕದಿರುವ ಯಾವುದಾದರೂ ಒಂದು ನೂತನ ವಸ್ತುವಾಗಲೀ, ಅದುವರೆಗೆ ಅನುಭವಕ್ಕೆ ಬಾರದಿರುವ ಹೊಸಬಗೆಯ ತೃಪ್ತಿ, ಸಂತೋಷ ಅಥವಾ ಆನಂದವಾಗಲಿ ಅವನಿಗೆ ಲಭಿಸುತ್ತದೆ ಎಂದು ಹೇಳುವುದು ಭಗವಂತ ಅಪೂರ್ಣ ಎಂದು ಹೇಳಿದಂತೆಯೇ ಸರಿ. ಹಾಗಾದರೆ ಯಾರ ಸಲುವಾಗಿ ಈ ರಚನೆ? ಜಡವಾದ ಪ್ರಕೃತಿಯ ಸಲುವಾಗಿಯೇ? ಹಾಗೆ ತೋರುವುದಿಲ್ಲ. ಏಕೆಂದರೆ ಜಡಪ್ರಕೃತಿ ಅಥವಾ ಪರಮಾಣುಗಳ ಸಂಘಾತ ಭೋಗ್ಯವೇ ಹೊರತು ಭೋಕ್ತ್ಯವಲ್ಲ. ಭೋಕ್ತ್ಯಭಾವ ಚೇತನದಲ್ಲಿ ಸಂಘಟಿಸುವುದೇ ಹೊರತು ಜಡದಲ್ಲಿ ಅಲ್ಲ. ಪೂರ್ಣ ತೃಪ್ತ ಹಾಗೂ ಪ್ರಾಪ್ತಸರ್ವಸ್ವನಾದ ಮಹಾನ್ ಭಗವಂತನೂ ಭೋಕ್ತ್ಯವಲ್ಲ, ಜಡ ಪ್ರಕೃತಿಯೂ ಭೋಕ್ತ್ಯವಲ್ಲ. ಹಾಗಾದರೆ, ಸರ್ವಜ್ಞನಾದ ಭಗವಂತನು ಭೋಕ್ತ್ಯವೇ ಅಲ್ಲದಿರುವಾಗ ಭೋಗ್ಯ ಜಗತ್ತನ್ನು ರಚಿಸಿದನಾದರೂ ಏಕೆ? ಭೋಕ್ತ್ಯ ಯಾವನೋ ಇದ್ದೇ ಇದ್ದಾನೆ. ಮಹಾಚೇತನನಾದ ಪರಮಾತ್ಮನೂ ಅಲ್ಲದ, ಚೇತನರಹಿತನಾದ ಜಡಪ್ರಕೃತಿಯೂ ಅಲ್ಲದ ಮತ್ತೊಬ್ಬ ಚೇತನ - ಹಾಗೆಂದರೆ ತಪ್ಪಾದೀತು - ಬಹುಸಂಖ್ಯಾತರಾದ ಅಲ್ಪಚೇತನರು ಅನಾದಿಕಾಲದಿಂದಲೂ ಇದ್ದೇ ಇದ್ದಾರೆ. ಈ ಪರಿಚ್ಛಿನ್ನ ಚೇತನರನ್ನು ಜೀವಾತ್ಮರು ಎನ್ನುತ್ತಾರೆ.
ಕೆಲವು ಮತೀಯರು, ಚೇತನ ಜೀವಾತ್ಮರು ಅನಾದಿಗಳಲ್ಲ, ಪರಮಾತ್ಮನು ಅವರನ್ನು ಸೃಜಿಸಿದನು -ಎಂದು ತಿಳಿದಿದ್ದಾರೆ. ಈ ಬಗೆಯ ತಿಳಿವು, ವೈಜ್ಞಾನಿಕ ವಿಶ್ಲೇಷಣದ ಮುಂದೆ ಅರೆಕ್ಷಣವೂ ನಿಲ್ಲಲಾರದು. ಹಾಗೆ ಪರಮಾತ್ಮನು ಈ ಜೀವಾತ್ಮರನ್ನು ಸೃಜಿಸಿದನೆಂದಾದರೆ, ಎಲ್ಲಕ್ಕಿಂತಲೂ ಮೊದಲು ಏಕೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪ್ರಾಪ್ತಸರ್ವಸ್ವನಾದ ಪರಮಾತ್ಮನಿಗೆ ಬೇಕಾದುದಾದರೂ ಏನು? ಬೇಕು ಎಂಬ ಭಾವನೆ ಯಾವುದೋ ಒಂದು ಅಭಾವದ ಅನುಭವವಾಗದೆ ಉದ್ಭವಿಸಲಾರದು. ಪರಿಪೂರ್ಣನಾದ ಭಗವಂತನಿಗೆ ಯಾವುದರ, ಯಾವುದೇ ಕಾಮ್ಯತತ್ವದ ಅಭಾವವೂ ಇಲ್ಲ. ಆದುದರಿಂದ ಏಕೆ? ಎಂಬ ಪ್ರಶ್ನೆ ಏಕೋ ಹಾಗೆಯೇ ಉಳಿದುಹೋಗುತ್ತದೆ! ಎರಡನೆಯದಾಗಿ, ಅಭಾವದಿಂದ ಭಾವೋತ್ಪತ್ತಿಯಾಗಲಾರದು. ಆದುದರಿಂದ ಏನಾದರೂ ಆಗಿರಲೊಲ್ಲದೇಕೆ, ಭಗವಂತನು ಯಾವುದರಿಂದ ಜೀವಾತ್ಮರನ್ನು ಸೃಜಿಸಿದನು? - ಎಂಬ ಮತ್ತೊಂದು ಜಟಿಲ ಪ್ರಶ್ನೆ ಉದ್ಭವಿಸುತ್ತದೆ. ಪ್ರಕೃತಿಯಿಂದ - ಎನ್ನುವುದಾದರೆ, ಅದರಿಂದ ಜಡ ಶರೀರದ ಸೃಜನ ಸಾಧ್ಯವೇ ಹೊರತು, ಚೇತನನಾದ ಜೀವಾತ್ಮನ ಸೃಜನ ಎಂದೆಂದಿಗೂ ಸಂಭವವಿಲ್ಲ. ಚೇತನನಾದ ತನ್ನಿಂದಲೇ ಎನ್ನುವುದಾದರೆ, ಅಖಂಡನಾದ ಸರ್ವವ್ಯಾಪಕನಾದ ಭಗವಂತ, ಖಂಡ ಖಂಡವಾಗಿ ತನ್ನನ್ನೇ ತುಂಡರಿಸಿಕೊಳ್ಳಲು ಸಾಧ್ಯವೇ? ತನ್ನ ಎಷ್ಟು ಭಾಗವನ್ನು ಜೀವಾತ್ಮರುಗಳ ರಚನೆಗಾಗಿ ವ್ಯಯ ಮಾಡಿದನು? ಅಷ್ಟು ಭಾಗ ನಷ್ಟವಾದ ಮೇಲೂ ಅವನು ಪರಿಪೂರ್ಣನಾಗಿಯೇ ಉಳಿದನೇ? ಈ ಮೊದಲಾದ ಅರುಚಿಕರ ಮತ್ತು ಉತ್ತರ ಕೊಡಲಾಗದ ಕಹಿ ಪ್ರಶ್ನೆಗಳು ತಲೆಯೆತ್ತುತ್ತವೆ. ಏಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ, ಏತರಿಂದ ಎಂಬ ಪ್ರಶ್ನೆಗೂ ಬುದ್ಧಿಸಂಗತವಾದ ಉತ್ತರವಿಲ್ಲ. ಈ ಪರಿಚ್ಛಿನ್ನ ಚೇತನರಾದ ಜೀವಾತ್ಮರೂ ಕೂಡ ಪರಮಾತ್ಮನಂತೆಯೇ ಅನಾದಿಗಳು, ಪರಮಾತ್ಮನ ಶಾಶ್ವತ ಪ್ರಜೆಗಳು ಎಂದೇ ಒಪ್ಪಿಕೊಳ್ಳಬೇಕಾಗುತ್ತದೆ. ಏಕೋ, ಏತರಿಂದಲೋ, ಹೇಗೋ ಪರಮಾತ್ಮ ಜೀವಾತ್ಮರನ್ನು ಸೃಜಿಸಿದನು ಎಂದು ವಾದಿತೋಷನ್ಯಾಯಕ್ಕಾಗಿ ಸ್ವಲ್ಪ ಹೊತ್ತು ಒಪ್ಪಿಕೊಂಡರೂ ಕೂಡ, ಅನಾದಿಗಳಲ್ಲದೇ ಜೀವಾತ್ಮರು ಅನಂತರೂ ಆಗಿರಲಾರರು, ಅವರು ಶೂನ್ಯವಿಲೀನರೂ ಆಗಿಹೋಗುತ್ತಾರೆ. ಈ ಪರಿಸ್ಥಿತಿಯಲ್ಲಿ ಧರ್ಮ, ಮೋಕ್ಷ ಯಾವುದಕ್ಕೂ ಅರ್ಥವೇ ಇರುವುದಿಲ್ಲ. ಅಲ್ಲದೇ ನಿಷ್ಕಾರಣವಾಗಿ ಕೆಲವರನ್ನು ದುಃಖಿಗಳನ್ನಾಗಿಯೂ, ಕೆಲವರನ್ನು ಸುಖಿಗಳನ್ನಾಗಿಯೂ ಸೃಜಿಸಿದ ಪರಮಾತ್ಮ ಪಕ್ಷಪಾತಿ ಹಾಗೂ ನಿಷ್ಕರುಣ - ಎಂದು ಹೇಳಬೇಕಾಗುತ್ತದೆ. ಅಲ್ಲದೆ ಆ ಸ್ಥಿತಿಯಲ್ಲಿ ಜೀವಾತ್ಮರು ಮಾಡುವ ಪಾಪಕ್ಕೂ, ಪುಣ್ಯಕ್ಕೂ ಭಗವಂತನೇ ಹೊಣೆಯಾಗಬೇಕಾಗುತ್ತದೆ. ತಾತ್ವಿಕ ಹಾಗೂ ದಾರ್ಶನಿಕ ದೃಷ್ಟಿಯಿಂದ, ವೈಜ್ಞಾನಿಕವಾದ ಮತ್ತು ಹೇತುಸಹಿತವಾದ ವಿವೇಚನೆಯ ದೃಷ್ಟಿಯಿಂದ, ಇಂತಹ ಅಪಸಿದ್ಧಾಂತಗಳಿಗೆ ಏನೇನೂ ಬೆಲೆ ಸಿಕ್ಕುವುದಿಲ್ಲ.
ಮತ್ತೆ ಕೆಲವರು ಜೀವಾತ್ಮ ಬೇರೆ ಯಾವ ತತ್ವವೂ ಅಲ್ಲ, ಶರೀರದಲ್ಲಿಯೇ ಹುಟ್ಟುವ ಒಂದು ಚೈತನ್ಯ ವಿಶೇಷ ಅದು. ಶರೀರದಿಂದಲೇ ಹುಟ್ಟಿ ಶರೀರದಲ್ಲಿಯೇ ಹುಟ್ಟಿ ನಾಶವಾಗುತ್ತದೆ - ಎಂದು ಭಾವಿಸುವುದೂ ಉಂಟು. ಜೀವಾತ್ಮ ಶರೀರದಲ್ಲಿಯೇ ಹುಟ್ಟುವ ಒಂದು ಶಕ್ತಿಯಾಗಿದ್ದರೆ ಶರೀರವಿರುವವರೆಗೂ ಅದಿರಲೇಬೇಕಾಗಿತ್ತು. ಆದರೆ, ನಾವು ಗಟ್ಟಿಮುಟ್ಟಾದ ಶವಗಳನ್ನೂ ನೋಡುತ್ತೇವಲ್ಲ! ಆ ಶಕ್ತಿ ಶರೀರಗಳಿಗೆ ಶವರೂಪವನ್ನಿತ್ತು ಅಡಗಿಹೋದುದೇಕೆ? ಜಡವಾದ ಶರೀರದಿಂದ ಜಡವಸ್ತುಗಳೇನೋ ಹುಟ್ಟಬಹುದು, ಚೇತನ ಉದ್ಭವಿಸುವುದು ಮೂರು ಕಾಲಕ್ಕೂ ಸಾಧ್ಯವಿಲ್ಲ. ಶರೀರದಲ್ಲಿ ಹುಟ್ಟುವ, ನೀವು ಹೇಳುವ ಆ ಚೈತನ್ಯ, ಆ ಶಕ್ತಿ, ಶರೀರದ ಗುಣವೋ, ಅಥವಾ ಬೇರೊಂದು ದ್ರವ್ಯವೋ? ಶರೀರದ ಗುಣವಾಗಿದ್ದಲ್ಲಿ ಅದು ಶರೀರವನ್ನು ಬಿಟ್ಟು ಹೋಗುವಂತಿಲ್ಲ. ಬೇರೊಂದು ದ್ರವ್ಯವಾಗಿದ್ದಲ್ಲಿ ಅದು ಶರೀರದಿಂದ ಬೇರೆಯೇ ಆದ ತತ್ತ್ವವಾಗಿರಬೇಕು. ಏಕೆಂದರೆ, ಅದು ಶರೀರದಂತೆ ಜಡ ದ್ರವ್ಯವಲ್ಲ, ಜ್ಞಾನಸಮನ್ವಿತವಾದ ಚೇತನ. ಅದು ಶರೀರದಲ್ಲಿ ಹುಟ್ಟಿದುದಲ್ಲ.. ಶರೀರದ ಮೂಲಕ ಪ್ರಕಟವಾದ, ಬೇರೆ ಎಲ್ಲಿಂದಲೋ ದೇಹಕ್ಕೆ ಬಂದು ಸೇರಿದ ಸ್ವತಂತ್ರ ಸತ್ತೆ. ಅದು ದೇಹ ಹುಟ್ಟುವ ಮುನ್ನವೂ ಇದ್ದಿತು, ಶರೀರದಲ್ಲಿ ಬಂದು ಸೇರಿತು, ಶರೀರದಿಂದ ಬೇರೆಯಾಗಿ ಹೋಯಿತು. ಹೀಗೆ ನೋಡಿದರೂ ಆ ಪರಿಚ್ಛಿನ್ನ ಚೇತನ ಅನಾದಿ-ಅನಂತವೆಂದೇ ಸಿದ್ಧವಾಗುತ್ತದೆ.
ಇನ್ನೂ ಕೆಲವರು, ಜೀವಾತ್ಮ ಬೇರೆ ಅಲ್ಲವೇ ಅಲ್ಲ, ಅವನೂ ಬ್ರಹ್ಮವೇ. ಅಜ್ಞಾನಕ್ಕೆ ಸಿಕ್ಕಿ ಜೀವಭಾವ ಪಡೆದಿದೆ ಬ್ರಹ್ಮತತ್ವ. ಜ್ಞಾನೋದಯವಾದ ಮೆಲೆ ಮತ್ತೆ ಬ್ರಹ್ಮಭಾವ ಹೊಂದುತ್ತದೆ - ಎನ್ನುತ್ತಾರೆ. ಇದಕ್ಕಿಂತ ದುರ್ಬಲವಾದ, ತಿರುಳಿಲ್ಲದ ಸಿದ್ಧಾಂತವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಅಜ್ಞಾನ ಯಾರಿಗೆ? ಸ್ವತಃ ಪ್ರಜ್ಞಾನ ಸ್ವರೂಪನಾದ ಬ್ರಹ್ಮಕ್ಕೆ? ಬ್ರಹ್ಮದ ಅಷ್ಟೂ ಭಾಗವು ಅಜ್ಞಾನಕ್ಕೆ ಸಿಕ್ಕಿ ಜೀವಭಾವ ತಳೆಯಿತೋ ಅಥವಾ ಯಾವುದಾದರೂ ಅಲ್ಪ ಭಾಗವೋ? ಸಂಪೂರ್ಣ ಬ್ರಹ್ಮಭಾವವೇ ಜೀವಭಾವ ಪಡೆಯಿತೆಂದಾದರೆ, ಈಗ ಬ್ರಹ್ಮ ಇಲ್ಲವೇ ಇಲ್ಲವೇ? ಯಾವುದಾದರೂ ಸ್ವಲ್ಪ ಭಾಗ ಎಂದರೆ ಬ್ರಹ್ಮದ ಅಖಂಡತ್ವ ಎಲ್ಲಿ ಉಳಿಯಿತು? ನಿಮ್ಮ ಸಿದ್ಧಾಂತದ ಪ್ರಕಾರ ಈವರೆಗೆ ಈ ಸೃಷ್ಟಿ ಉದ್ಭವಿಸಿ ಸುಮಾರು ಇನ್ನೂರು ಕೋಟಿ ವರ್ಷಗಳಾಗಿವೆ. ಯಾರೂ ಬ್ರಹ್ಮಭಾವ ಪಡೆದೇ ಇಲ್ಲವೇ? ಪಡೆದಿದ್ದರೆ, ಯಾವ ಕ್ಷಣದಲ್ಲಿ ಮತ್ತೆ ತಲೆಕೆಟ್ಟು ಜೀವಭಾವ ತಾಳುತ್ತಾರೋ, ಪಾಪ!
ಹೀಗೆ ಆಲೋಚಿಸಿದಾಗ, ಈ ಚೇತನ ಜೀವಾತ್ಮ ಪ್ರಕೃತಿಯ ಪರಿಣಾಮವೂ ಅಲ್ಲ, ಪರಬ್ರಹ್ಮ ಪರಮಾತ್ಮನ ವಿಕೃತ ಪರಿಣಾಮವೂ ಅಲ್ಲ. ಅದೇ ಬೇರೆ ಒಂದು ನಿತ್ಯ ಸತ್ಯವಾದ ಅನಾದಿ ತತ್ವ ಎಂದು ಒಪ್ಪಲೇಬೇಕಾಗುತ್ತದೆ.