Pages

Thursday, November 18, 2010

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -8

ಭಗವತ್ ಸ್ವರೂಪ -8
ವೇದಗಳ ಪ್ರಕಾರ ಅವನು (ಪರಮಾತ್ಮನು) ಸಚ್ಚಿದಾನಂದಸ್ವರೂಪನಾಗಿದ್ದಾನೆ. ಸತ್ ಎಂದರೆ ಸತ್ಯಸ್ವರೂಪನು. ಋಗ್ವೇದ ;

ಸೈನಂ ಸಶ್ಚದ್ ದೇವೋ ದೇವಂ ಸತ್ಯಮಿಂದ್ರಂ ಸತ್ಯ ಇಂದುಃ|| (ಋಕ್. ೨.೨೨.೧)


-ಎಂದರೆ, [ಸ ದೇವಃ ಸತ್ಯ ಇಂದುಃ] ಆ ಉದಾರನಾದ ಸತ್ಯನಾದ ಜೀವಾತ್ಮನು [ಏನಂ ದೇವಂ ಸತ್ಯಂ ಇಂದ್ರಂ] ಈ ದೇವನಾದ ಸತ್ಯನಾದ ಸರ್ವಶಕ್ತಿಮಾನ್ ಪ್ರಭುವನ್ನು [ಸಶ್ಚತ್] ಸೇರುತ್ತಾನೆ -


ಎಂದು ವರ್ಣಿಸಿದೆ. ಆ ಪರಮಾತ್ಮನು ಚಿತ್ ಎಂದರೆ ಚೇತನನಾಗಿದ್ದಾನೆ. ಋಗ್ವೇದ,


ಹೋತಾಜನಿಷ್ಟ ಚೇತನಃ ಪಿತಾ ಪಿತೃಭ್ಯ ಊತಯೇ|| (ಋಕ್. ೨.೫.೧.) -


ಎಂದರೆ [ಚೇತನಾ ಹೋತಾ ಪಿತಾ] ಚೇತನನೂ, ಸರ್ವಧಾತೃವೂ, ಎಲ್ಲರ ತಂದೆಯೂ ಆದ ಭಗವಂತನು [ಪಿತೃಭ್ಯ ಊತಯೇ] ಪಾಲಕರಾದ ಲೌಕಿಕ ಪಿತೃಗಳ ರಕ್ಷಣೆಗೆ [ಅಜನಿಷ್ಟ] ಪ್ರಸಿದ್ಧನಾಗಿದ್ದಾನೆ


- ಎಂದು ಸಾರಿದೆ. ಅದೇ ರೀತಿ ಪರಮಾತ್ಮ, ಆನಂದಸ್ವರೂಪನೂ ಆಗಿದ್ದಾನೆ. ನಾವು ಅಥರ್ವವೇದದಲ್ಲಿ -
ಸ್ವರ್ಯಸ್ಯ ಚ ಕೇವಲಂ ತಸ್ಮೈ ಜ್ಯೇಷ್ಟಾಯ ಬ್ರಹ್ಮಣೇ ನಮಃ|| (ಅಥರ್ವ. ೧೦.೮.೧)


ಎಂದರೆ [ಯಸ್ಯ ಸ್ವಃ ಕೇವಲಂ] ಯಾವನ ಆನಂದವು ಪರಿಶುದ್ಧವಾಗಿದೆಯೋ, [ತಸ್ಮೈ ಜ್ಯೇಷ್ಟಾಯ ಬ್ರಹ್ಮಣೇ ನಮಃ] ಆ ಜ್ಯೇಷ್ಟ ಪ್ರಭುವಿಗೆ ನಮಸ್ಕಾರ -


ಎಂದು ಓದುತ್ತೇವೆ.

ನಿತ್ಯ ಸತ್ಯ

 ಆತ್ಮೀಯ ವೇದಸುಧೆಯ ಅಭಿಮಾನಿಗಳೇ ಈ ಒಂದು ಪುಟ್ಟ ಪದ್ಯವು ಬಂಡಾಯ ಕವನದಂತೆ ಮೇಲ್ನೋಟಕ್ಕೆ ಕಂಡುಬಂದು ಚಿಂತನ ಶೀಲರಿಂದ  ಜಿಜ್ಞಾಸೆಗೆ ಕಾರಣವಾಯ್ತು. ಬದುಕಿನ ಜಂಜಾಟದಲ್ಲಿ ಹಲವರಿಗೆ ಉಂಟಾಗಬಹುದಾದ ದ್ವಂದ್ವಗಳಿಗೆ ಕೆಲವಕ್ಕಾದರೂ ಸಮಾಧಾನವು ಈ ಜಿಜ್ಞಾಸೆಯಿಂದ ದೊರೆತಿದೆ ಎಂದು ಭಾವಿಸುತ್ತೇನೆ. ವಿಶೇಷವಾಗಿ ಮಂಥನದಲ್ಲಿ ಪಾಲ್ಗೊಂಡು ಗಟ್ಟಿನೆಲೆಯಿಂದ ವಿವರಣೆ ನೀಡಿದ ಶ್ರೀ ವಿಷ್ಣುಭಟ್ಟರಿಗೆ ಕೃತಜ್ಞನಾಗಿದ್ದೇನೆ.
-ಹರಿಹರಪುರಶ್ರೀಧರ್
----------------------------------------------------------------------
ಎಲ್ಲಿಹುದು ಹೇಗಿಹುದು ನಿತ್ಯವೂ ಹುಡುಕಾಟ|
ತೆಪ್ಪಗಿರಲು ಬೆಪ್ಪಲ್ಲ  ಎಂಬ ಹೊಯ್ದಾಟ|
ಹುಡುಕಿ ಹುಡುಕುತ್ತಾ  ಅಲೆದಾಟ ಪರದಾಟ|
ಕಾಣದಾ  ಗುರಿಯೆಡೆಗೆ  ವ್ಯರ್ಥದಾ ಹೋರಾಟ||

ನಿತ್ಯದಾ ತುತ್ತಿಗೆ ಒತ್ತೆಇಟ್ಟವಗೆ|
ದುಡಿ ದುಡಿದು ಹಣ್ಣಾಗಿ ಮುಪ್ಪು ಬಂದವಗೆ|
ಹುಡುಕಿ ಬರುವುದು ನಿದ್ರೆ  ಕಾಲು ಚಾಚಿದೊಡೆ|
ಹುಡುಕದೇ ಶಿವ ಬರುವ  ಇವನಿದ್ದೆಡೆ||

ಬೇಕು ಬೇಡಗಳು ಕೆಲವರಾ ಸೊತ್ತು
ಬೇಡವೆಂದರು ಬಿಡದು ಆಪತ್ತು ವಿಪತ್ತು|
ಹರಿಯುವುದು ನೀರು ಹಳ್ಳದೆಡೆ ಸತ್ಯ
ಮೈ ಮುರಿದು ದುಡಿದವಗೆ ಅರೆಹೊಟ್ಟೆ ನಿತ್ಯ||

ಹಣೆ ಮೇಲೆ ನಾಮ  ವೀಭೂತಿ  ಫಳಫಳನೆ ಹೊಳೆಯುವುದು|
ದುಡಿ ದುಡಿದು ಸೋತವಗೆ ಬೆವರು ಹರಿಯುವುದು|
ಎಷ್ಟು ತಪಿಸಿದರು ಶಿವನು ಬರಲಿಲ್ಲವೇಕೆ?
ದಂಡಿಸಿದ ದೇಹಕೆ ಶಿವ ಪೂಜೆ ಬೇಕೆ?||