ಒಂದು ಸಂಜೆ ಅಪರೂಪಕ್ಕೆ ನಮ್ಮ ಮನೆಗೆ ಬಂದ ಮಿತ್ರ ಶ್ಯಾಮ್ ನೊಡನೆ ಹರಟುತ್ತಾ ಕುಳಿತೆ. ಆ ಹರಟೆ ನಿಮ್ಮ ಕಿವಿಗೂ ಬಿದ್ದರೆ ಚೆನ್ನಾ ಅನ್ನಿಸುತ್ತಿದೆ.ನೀವೂ ಸ್ವಲ್ಪ ಕಿವಿಗೊಡಿ. ಶ್ಯಾಮ್ ಮಾತು ಶುರುಮಾಡಿದ………
“ಸುಮಾರು ನಾಲ್ಕು ದಶಕಗಳಿಂದ ಸಮಾಜ-ಸಮಾಜ ಅಂತ ಪ್ರಾಣ ಬಿಡ್ತೀಯಲ್ಲಾ,ಈಗಿನ ಸಾಮಾಜಿಕ ಸಂದರ್ಭ ನಿನಗೆ ಏನನ್ನಿಸುತ್ತಿದೆ?”
ಅವನ ಪ್ರಶ್ನೆಯಲ್ಲಿ ಕಳಕಳಿ ಇತ್ತು. ಹಾಗಾಗಿ ಅವನ ಪ್ರಶ್ನೆ ನನ್ನನ್ನು ಸ್ವಲ್ಪ ಚಿಂತನೆಗೆ ಈಡುಮಾಡಿತು. ತಕ್ಷಣಕ್ಕೆ ಉತ್ತರಕೊಡುವುದು ಕಷ್ಟವೆನಿಸಿತು. ಶ್ಯಾಮ್ ನಲ್ಲಿ ಸಮಾಜದ ಬಗ್ಗೆ ಪ್ರಾಮಾಣಿಕವಾದ ಕಳಕಳಿ ಇದೆ,ಇಂದಿನ ಸ್ಥಿತಿಗತಿಗಳಬಗ್ಗೆ ಅಸಮಾಧಾನವಿದೆ, ದು:ಖವಿದೆ, ಅಂತೆಯೇ ನೋವೂ ಇದೆ. ಅವನೇ ಮಾತು ಮುಂದುಬರೆಸಿದ.
“ ಶ್ರೀಧರ್, ಎಲ್ಲಾ ಬೋಗಸ್, ಯಾರನ್ನೂ ನಂಬಬೇಡ,ಸಮಾಜದ ಹೆಸರು ಹೇಳಿಕೊಂಡು ಮುಗ್ಧರನ್ನು ಹಿಂಡಿ ಹಿಪ್ಪೇಕಾಯಿ ಮಾಡ್ತಾರೆ. ಕೆಲಸವಾಗುವ ತನಕ ನಿಮ್ಮಂತವರನ್ನು ಇಂದ್ರ,ಚಂದ್ರ, ದೇವೇಂದ್ರನೆನ್ನುತ್ತಾರೆ. ಕೆಲಸವಾದಮೇಲೆ “ಹಾಸುಂಡು ಬೀಸಿ ಒಗೆದಂಗ” ಅನ್ನೋ ಮಾತು ಕೇಳಿದೀಯ ತಾನೆ, ಅಷ್ಟೆ.
ಅವನ ನಾಲಿಗೆ ಮಾತನಾಡುತ್ತಿರಲಿಲ್ಲ ಬದಲಿಗೆ ಹೃದಯ ಮಾತನಾಡುತ್ತಿತ್ತು. ಹಾಗಾಗಿ ನಾನು ತಲೆಯಾಡಿಸುತ್ತಲೇ ಇದ್ದೆ. “ ಕೇವಲ ೧೦-೨೦ ವರ್ಷಗಳ ಹಿಂದೆ ಮಂಡಿಯಲ್ಲಿ ಲೆಕ್ಖ ಬರೆಯುತ್ತಿದ್ದವರು ರಾಜಕೀಯ ಪ್ರವೇಶ ಮಾಡಿ ಈಗ ಸಾವಿರಾರು ಕೋಟಿ ಮೌಲ್ಯದ ಆಸ್ತಿಯ ಒಡೆಯರು, ನೂರಾರು ಎಕರೆ ಜಮೀನು,ಹತ್ತಾರು ಬಂಗಲೆಗಳು, ಹತ್ತಾರು ಕಾರ್ಖಾನೆಗಳ ಒಡೆಯರು. ಶಾಸಕರು-ಮಂತ್ರಿಗಳಾಗಿ ಇವರು ಮಾಡಿರುವ ಸಮಾಜಸೇವೆಯ ಪರಿ ಇದು.ಹೇಳು ಶ್ರೀಧರ್, ಇದೆಲ್ಲಾ ಹೇಗೆ ಸಾಧ್ಯ ವಾಯ್ತು? ಅಥವಾ ಇದು ಸುಳ್ಳೇ ?”
ನನ್ನ ಮೌನ ಗಮನಿಸಿದ ಶ್ಯಾಮ್ ಮಾತನಾಡುತ್ತಲೇ ಇದ್ದ. “ಶ್ರೀಧರ್, ಯಾರನ್ನೂ ನಂಬಬೇಡ.ಸಮಾಜದ ಹೆಸರಲ್ಲಿ, ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ, ಸೇವೆಯ ಹೆಸರಲ್ಲಿ, ಮೋಸ ಮಾಡಿ ಮಾಡಿ “ಸಮಾಜ ಸೇವೆ” ಎಂಬ ಪದ ಅದರ ಅರ್ಥವನ್ನೇ ಕಳೆದುಕೊಂಡಿದೆ.”
ಅಬ್ಭಾ! ನನ್ನ ಮಿತ್ರನ ಮುಖ ಕೆಂಪೇರಿತ್ತು, ದು:ಖ, ಕೋಪ ಒಮ್ಮೆಲೇ ಬರುತ್ತಿತ್ತು. ಯಾಕೋ ಎರಡು ನಿಮಿಷ ಸುಮ್ಮನಾದ. ಆಗ ನಾನು ಬಾಯ್ತೆರೆದೆ “ ನೋಡು ಶ್ಯಾಮ್, ನೀನು ಸಮಾಜದ ಒಂದು ವರ್ಗದ ಕೆಟ್ಟ ಮುಖವನ್ನು ನೋಡಿ ಮಾತನಾಡುತ್ತಿರುವೆ. ಆದರೆ ಸಮಾಜವೆಂದರೆ ಕೇವಲ ಭ್ರಷ್ಟ ರಾಜಕಾರಣಿಗಳ ಸ್ವತ್ಥಲ್ಲ.ನಿಜವಾದ ಸಮಾಜಸೇವೆ ಮಾಡುತ್ತಿರುವ ಸಾವಿರಾರು ಮಂದಿ ಇನ್ನೂ ಎಲೆಮರೆಕಾಯಿಯಂತೆ ಸುದ್ಧಿಯಿಲ್ಲದೇ ನಿಜದರ್ಥದ ಸಮಾಜಸೇವೆ ಮಾಡುತ್ತಲೇ ಇದ್ದಾರೆ. ಸಮಾಜಕ್ಕೆ ಇನ್ನೂ ಒಂದು ಮುಖವಿದೆ. ಅಲ್ಲಿ ದೀನ, ದಲಿತ,ದರಿದ್ರರ ಆಕ್ರಂದನ ಬೆಚ್ಚಿ ಬೀಳಿಸುವಂತೆ ಕೇಳುತ್ತದೆ. ಕೇವಲ ಟಿ.ವಿ. ಮಾಧ್ಯಮಗಳಲ್ಲಿ ನೋಡುವ, ಸುದ್ಧಿಪತ್ರಿಕೆಗಳಲ್ಲಿ ಓದುವ ಸುದ್ಧಿಯಷ್ಟೇ ಪ್ರಪಂಚವಲ್ಲ. ಅದರಾಚೆಗೂ ಯಾವ ಮಾಧ್ಯಮಗಳೂ ತಲುಪಲಾರದ ಜಾಗದಲ್ಲಿ ನೆರಳುತ್ತಿರುವವರ ಗೋಳು ಕಿವಿಗೆ ಬೀಳದಿರುವ ಜಾಗದಲ್ಲಿ ಅಂತವರ ಸೇವೆ ಮಾಡುತ್ತಿರುವವರ ಸಂಖ್ಯೆಗೇನೂ ಕಮ್ಮಿಇಲ್ಲ. ಆದೃಶ್ಯಗಳು ಮಾಧ್ಯಮಗಳಲ್ಲಿ ಪ್ರಕಟವಾಗುವುದಿಲ್ಲ. ಕಾರಣ ಆ ಜಾಗವನ್ನು ತಲುಪಲು ರಸ್ತೆಗಳೇ ಇಲ್ಲ, ದೂರವಾಣಿ ಇಲ್ಲ, ವಿದ್ಯುತ್ ಎಂಬುದು ಗೊತ್ತೇ ಇಲ್ಲ. ಮಾನ ಮುಚ್ಚಲು ಬಟ್ಟೆಗೇ ಗತಿಯಿಲ್ಲ. ಮಲಗಲು ಸೂರಿಲ್ಲ. ಹೊರಪ್ರಪಂಚವನ್ನು ಕಂಡೇ ಇಲ್ಲ……
ನನ್ನ ಮಾತು ಮುಗಿದೇ ಇಲ್ಲ, ಮಧ್ಯೆ ಬಾಯಿ ಹಾಕಿದ ಶ್ಯಾಮ್ “ ಹೌದು ಶ್ರೀಧರ್, ಅಂತಹ ನಿರ್ಗತಿಕರ ಸೇವೆಯನ್ನು ಮಾಡುತ್ತಿರುವ ಮಹಾನುಭಾವರಿಲ್ಲವೆಂದು ನಾನು ಹೇಳಲಿಲ್ಲ. ಅಂತವರು ಮಾಡುತ್ತಲೇ ಇದ್ದಾರೆ. ಎಷ್ಟೋ ಜನ ಅಂತವರ ಸೇವೆಮಾಡುತ್ತಲೇ ಕೊನೆಯುಸಿರೆಳದಿರುವ ನಿದರ್ಶನಗಳೂ ನನ್ನ ಗಮನಕ್ಕೆ ಬಂದಿದೆ. ಆದರೆ ಅದಕ್ಕಿಂತ ಘೋರ ಸುದ್ಧಿಯೂ ಕಿವಿಮುಟ್ಟಿದೆ. ಇಂತಹ ದೀನ, ದಲಿತ,ದರಿದ್ರರ ಸೇವೆಯ ಹೆಸರಲ್ಲೂ ಲೂಟಿ ನಡೆಯುತ್ತಿದೆ. ಅಂತವರ ಹೆಸರಲ್ಲಿ ಹಣಸಂಗ್ರಹಿಸಿ ಅದರ ದುರುಪಯೋಗ ಪಡಿಸಿಕೊಂಡಿರುವ ಬೋಗಸ್ ಸಂಸ್ಥೆಗಳ ಬಗ್ಗೆ ನಿನಗಿನ್ನೂ ತಿಳಿದಿಲ್ಲ. ಅದಕ್ಕೇ ನೀನು ಇಷ್ಟು ಮುಗ್ಧನಾಗಿ ಮಾತನಾಡುತ್ತಿರುವೆ.”
“ನೋಡು ಶ್ಯಾಮ್, ನೀನು ಏನೇ ಹೇಳು, ಸಮಾಜಸೇವೆಯ ಶುದ್ಧಮುಖವನ್ನು ಹತ್ತಿರದಿಂದ ಕಂಡಿರುವವನು ನಾನು.ಆ ಮುಖವೇ ನನಗೆ ಸ್ಫೂರ್ತಿ, ಕಾಲೇಜುಗಳಲ್ಲಿ ಉನ್ನತ ಶ್ರೇಣಿಯಲ್ಲಿ ಪದವಿ ಪಡೆದು ವೈದ್ಯರಾಗಿ, ಇಂಜಿನಿಯರುಗಳಾಗಿ ಲಕ್ಷ ಲಕ್ಷ ದುಡಿಯಲು ಸಮರ್ಥರಿದ್ದ ತರುಣರು ಅದನ್ನೆಲ್ಲಾ ಎಡಗಾಲಲ್ಲಿ ಒದ್ದು ,ಮುಂಜಿ-ಮದುವೆ ಗಳಿಲ್ಲದೆ, ಏಕಾಂಗಿಯಾಗಿ ಸಮಾಜಕಾರ್ಯಮಾಡುತ್ತಾ ಅದರಲ್ಲೇ ಕೊನೆಯುಸಿರೆಳೆದಿರುವ ಅನೇಕ ಪುಣ್ಯಾತ್ಮರನ್ನು ಕಂಡಿದ್ದೇನೆ. ಅವರೊಡನೆ ಸಮಾಜಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ನೆನಪುಗಳು ನನ್ನ ಸ್ಮೃತಿಪಟಲದಿಂದ ದೂರವಾಗಲು ಸಾಧ್ಯವೇ ಇಲ್ಲ…….” ನನ್ನ ಮಾತಿನ ನಡುವೆಯೇ ಮಾತಿಗಿಳಿದ ಶ್ಯಾಮ್
“ ಹೌದೌದು ಶ್ರೀಧರ್, ಹೊಟ್ಟೆಗೆ ಹಿಟ್ಟಿಲ್ಲದೇ ಕಡಲೆ ಪುರಿ ತಿಂದು , ಹಳ್ಳಿಗಳ ದೇವಸ್ಥಾನದ ಜಗಲಿಯ ಮೇಲೆ ಮಲಗಿ, ಆಹಳ್ಳೀ ಜನಗಳಿಂದ ಬಾಯ್ತುಂಬ ಬೈಗುಳ ಕೇಳಿದರೂ ಬೇಸರಿಸದೆ ಅವರ ಮನ ಒಲಿಸಿ, ನಾಲ್ಕಾರು ತರುಣರನ್ನು ಕಲೆಹಾಕಿ, ಅವರೊಡನೆ ಗೆಳೆತನ ಬೆಳಸಿ, ದೇಶಭಕ್ತಿಗೀತೆಗಳನ್ನು ಹೇಳಿಕೊಟ್ಟು, ಕಬ್ಬಡ್ಡಿ ಆಡಿಸಿ, ಕೊನೆಯಲ್ಲಿ “ ನಮಸ್ತೇ ಸದಾ ವತ್ಸಲೇ ಮಾತೃ ಭೂಮೇ” ಅಂತಾ ಪ್ರೆಯರ್ ಮಾಡಿಸಿ ಅವರಲ್ಲಿ ದೇಶ ಭಕ್ತಿಯ ಹುಚ್ಚು ಹಿಡಿಸಿದರಲ್ಲಾ! ಆ ಪುಣ್ಯಾತ್ಮರ ಹೆಸರು ಹೇಳಿಕೊಂಡೇ ಬೆಳೆದವರು ಈಗ ದೇಶವನ್ನೇ ಲೂಟಿಮಾಡುತ್ತಿದ್ದಾರಲ್ಲಾ! ಸಂಸ್ಕಾರವಿಲ್ಲದೆ ನೇರವಾಗಿ ರಾಜಕೀಯ ಪ್ರವೇಶಮಾಡಿ ಭ್ರಷ್ಟ ನಾದ ರಾಜಕಾರಣಿಗೂ ಸೋಕಾಲ್ದ್ ಸಂಸ್ಕಾರ ಪಡೆದ ಈ ಮಂದಿಗೂ ಏನಪ್ಪಾ ವೆತ್ಯಾಸ? ಸಾಕು ನಿನ್ನ ಆದರ್ಶಗಳ ಬೊಗಳೆ ಪಾಠ. ಜನರು ಈಗ ರೋಸಿ ಹೋಗಿದ್ದಾರೆ. ದೇಶ ಭಕ್ತಿಯ ಹೆಸರು ಹೇಳಿಕೊಂಡು ಬೆಳೆದವರು ಈಗ ಭ್ರಷ್ಟ ರಾಜಕಾರಣಿಗಳ ರೂಪ ತಳೆದಿರುವುದು ನಿನ್ನ ಕಣ್ಣಿಗೆ ಬೀಳುತ್ತಿಲ್ಲವೇ? ನೀವೆಲ್ಲಾ ಕಣ್ಣಿದ್ದೂ ಕುರುಡರೇ? ಕಿವಿ ಸರಿ ಇದ್ದೂ ಕಿವುಡರೇ? ಅಥವಾ ಜಾಣ ಕಿವುಡೋ? “
ನನ್ನ ಮಿತ್ರನ ಕೋಪ ನೆತ್ತಿಗೇರಿತ್ತು. ನನ್ನ ಮಾತು ಅವನ ಕಿವಿಗೆ ಬೀಳುವ ಸ್ಥಿತಿಯಲ್ಲಿರಲಿಲ್ಲ. ಆದರೂ ನಾನು ಬಾಯ್ದೆರೆದೆ….
“ ಹಾಗಲ್ಲಾ ಶ್ಯಾಮ್, ನಿನಗೆ ಮತ್ತೂ ಸಮಾಜದ ಒಂದೇ ಮುಖ ಕಾಣುತ್ತಿದೆ, ಸಮಾಜದ ಇನ್ನೊಂದು ಮುಖವನ್ನೂ ನೋಡುವ ಮನಸ್ಸು ಮಾಡು, ಈಗಲೂ ಸತ್ಯವಾಗಿ, ಪ್ರಾಮಾಣಿಕವಾಗಿ, ಸಮಾಜಕ್ಕಾಗಿ ಬೆವರು ಸುರಿಸುತ್ತಿರುವವರು ಇಲ್ಲವೇ?”
ನನ್ನ ಮಿತ್ರ ಈಗ ಸ್ವಲ್ಪ ಸಮಾಧಾನದಿಂದ ಮಾತನಾಡಲು ಶುರು ಮಾಡಿದ “ ಸಮಾಜದಲ್ಲಿ ಪ್ರಾಮಾಣಿಕ ವ್ಯಕ್ತಿಗಳೇ ಇಲ್ಲವೆಂದು ನಾನು ಹೇಳಲಿಲ್ಲ. ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಶ್ರೀಮಂತರೂ ಇದ್ದಾರೆ- ಬಡವರೂ ಇದ್ದಾರೆ. ದಾನಿಗಳೂ ಇದ್ದಾರೆ-ಜಿಪುಣರೂ ಇದ್ದಾರೆ. ಸಂಕುಚಿತರೂ ಇದ್ದಾರೆ- ವಿಶಾಲ ಮನೋಭಾವದವರೂ ಇದ್ದಾರೆ. ಧರ್ಮಾಂಧರೂ ಇದ್ದಾರೆ- ಧರ್ಮಿಷ್ಠರೂ ಇದ್ದಾರೆ. ಹಾಗೆಯೇ ಪ್ರಾಮಾಣಿಕರೂ ಇದ್ದಾರೆ, ಆದರೆ ಭ್ರಷ್ಟ ರು ಮೆರೆದಿದ್ದಾರೆ. ಇಲ್ಲಿ ಎಲ್ಲರೂ ಇದ್ದಾರೆ. ಸಮಾಜವೆಂದರೆ ಇವೆಲ್ಲದರ ಮಿಶ್ರಣವೇ ಆಗಿದೆ. ಆದರೆ ಒಂದು ಉತ್ತಮ ಕಾರ್ಯಮಾಡಲು ಹೊರಟ ಸಾಮಾಜಿಕ ಕಾರ್ಯಕರ್ತನು ಭ್ರಷ್ಟ ರಾಜಕಾರಣಿಗಳನ್ನು ಓಲೈಸಲು ಹೊರಟಿದ್ದಾನಲ್ಲಾ! ಸಮಾಜ ಕಾರ್ಯಕ್ಕಾಗಿ ಭ್ರಷ್ಟರ ಹಣವನ್ನು ಅವಲಂಭಿಸುವ ಪರಿಸ್ಥಿತಿ ಬಂದಿದೆಯಲ್ಲಾ! ಅದು ಸುಳ್ಳೇ? ಇಂತಾ ಸಮಾಜ ಕಾರ್ಯ ಬೇಕಾ? ನಿಮ್ಮಂತವರು ಇಂತಹಾ ವಿಷವೃತ್ತದಲ್ಲಿ ಸಿಕ್ಕಿಹಾಕಿಕೊಂಡು ಮಾಡುವ ಸಮಾಜಕಾರ್ಯದ ಅನಿವಾರ್ಯತೆಯಾದರೂ ಏನು? “
ಶ್ಯಾಮ್ ಮಾತನಾಡುತ್ತಾ ಆಡುತ್ತಾ ಭಾವುಕನಾಗಿದ್ದ. ನಿಜವಾಗಿ ನನ್ನ ತಲೆಯಲ್ಲಿ ನೂರಾರು ಹುಳುಗಳನ್ನು ಒಮ್ಮೆಲೇ ಬಿಟ್ಟು ಚಡಪಡಿಸುವಂತೆ ಮಾಡಿದ್ದ. ಅವನೂ ಭಾವುಕನಾಗಿ ಚಡಪಡಿಸುತ್ತಿದ್ದ. ಹೌದು ಶ್ಯಾಮನ ಮಾತಿನಲ್ಲಿ ಸತ್ಯವಿದೆ. ಅಬ್ಭಾ! ಒಂದು ಸಾಮಾಜಿಕ ಕಾರ್ಯ ಮಾಡುವಾಗ ಅಪ್ರಮಾಣಿಕ, ಭ್ರಷ್ಟ ವ್ಯಕ್ತಿಗಳನ್ನು ಅವಲಂಬಿಸಿ ಸಮಾಜಕಾರ್ಯ ಮಾಡುವಂತಹ ಪರಿಸ್ಥಿತಿ ಇದೆಯಲ್ಲಾ! ಇಂತಹಾ ಸಮಾಜಕಾರ್ಯ ಬೇಕೆ? ನನ್ನೊಳಗೇ ಏನೋ ತಳಮಳ! ದ್ವಂದ್ವ ಕಾಡುತ್ತಲಿತ್ತು.ಶ್ಯಾಮನ ಮುಖ ಕೆಂಪೇರಿತ್ತು. ಅವನನ್ನು ದೃಷ್ಟಿಸುವುದೂ ಕಷ್ಟವಾಗಿತ್ತು. ಹೊಟ್ಟೆ ಚುರುಗುಟ್ಟುತ್ತಿತ್ತು. “ ಶ್ಯಾಮ್ ಸಧ್ಯಕ್ಕೆ ಊಟ ಮಾಡಿ ಮಲಗೋಣ. ನನ್ನ ಆತ್ಮ ಒಪ್ಪುವಂತಾ ಕಾರ್ಯದಲ್ಲಿ ನನ್ನನ್ನು ತೊಡಗಿಸಿಕೊಳ್ಳುವೆ. ಆದರೆ ನಿನಗೊಂದು ಭರವಸೆ ನೀಡುವೆ “ಭ್ರಷ್ಟ ವ್ಯಕ್ತಿಗಳಿಂದ ನನಗೇನೂ ಆಗ ಬೇಕಿಲ್ಲ. ಅವರ ಹಂಗು ನನಗೆ ಬೇಡ. ಆದರೆ ಆ ವಿಷ ವರ್ತುಲ ನಾಶವಾಗಲೇ ಬೇಕು.ಆಗುತ್ತದೆ. ಅಂತಹ ಆತ್ಮ ವಿಶ್ವಾಸ ನನಗಿದೆ. ಹೇಗೆ? ಯಾರಿಂದ? ಕೇಳಬೇಡ.ಇದು ಧರ್ಮ ಭೂಮಿ. ಧರ್ಮಕ್ಕೇ ಜಯ. ದುಷ್ಟ ಶಕ್ತಿಗಳು ನಾಶವಾಗಲೇ ಬೇಕು. ಇದು ನಾವು ಚರಿತ್ರೆಯಿಂದ ಕಲಿತಿರುವ ಪಾಠ. ದುಷ್ಟರ ಶಿಕ್ಷೆ-ಶಿಷ್ಟರ ರಕ್ಷಣೆ ಆಗಲೇ ಬೇಕು. ಇದು ವಿಧಿ ಲಿಖಿತ. ಇದನ್ನು ಯಾರೂ ತಪ್ಪಿಸಲಾರರು. ಈಗ ಕಾಣುತ್ತಿರುವುದೆಲ್ಲಾ ಭ್ರಷ್ಟ ತನದ ಪರಾಕಾಷ್ಟೆ. ಇನ್ನು ಮೇಲೇರಲು ಸಾಧ್ಯವಿಲ್ಲ. ಇನ್ನೇನಿದ್ದರೂ ದುಷ್ಟ ಶಕ್ತಿಗಳ ನಾಶ-ಶಿಷ್ಟರ ಉತ್ಥಾನಕ್ಕೆ ಕಾಲ ಪಕ್ವವಾಗುತ್ತಿದೆ. ಇದೇ ಕಣ್ಣುಗಳಿಂದ ಆ ಕಾಲವನ್ನೂ ನೋಡುವಿಯಂತೆ . ಅರವಿಂದರ ಮಾತು ಸುಳ್ಳಾಗಲಾರದು. ಇನ್ನೇನಿದ್ದರೂ ಧರ್ಮದ್ದೇ ಕಾಲ. ಆ ದಿನಗಳು ಹತ್ತಿರ ವಾಗುತ್ತಿದೆ. ಸ್ವಲ್ಪ ತಾಳ್ಮೆ ಬೇಕಷ್ಟೇ……”
ಊಟ ಸೇರಲಿಲ್ಲ. ದುಗುಡ ತುಂಬಿದ ಮನಸ್ಸಲ್ಲೇ ಮಾತನಾಡುತ್ತಲೇ ಮಲಗಿದಾಗ ಯಾವಾಗ ನಿದ್ರಾದೇವಿ ಒಳಿದಳೋ ಬೆಳಿಗ್ಗೆ ಕಣ್ ಬಿಟ್ಟಾಗ ಕಿಟಿಕಿಯ ಸರಳುಗಳನ್ನು ಭೇದಿಸಿಕೊಂಡು ಬಂದ ಸೂರ್ಯನ ಕಿರಣಗಳು ನವೋತ್ಸಾಹ ಮೂಡಿಸಿದ್ದವು.