Pages

Friday, July 26, 2013

ಗೀತಾ ಜ್ಞಾನಯಜ್ಞ : ಉಪನ್ಯಾಸ-2





“ನಿಜವ ತಿಳಿಯೋಣ” -2

                           
[ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಉಪನ್ಯಾಸದ ನೇರ ಮಾತುಗಳು ]
ಪೀಠಿಕೆ
ವೇದವೆಂದರೆ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನವನ್ನು  ಬೆಸೆದು  ಸಮತ್ವದಲ್ಲಿ ನಡೆಸಿಕೊಂಡು ಹೋಗುವ ಜೀವನವಿಜ್ಞಾನ. ವೇದವನ್ನೇ ಏಕೆ ಅನುಸರಿಸಬೇಕು? ಅದಕ್ಕೆ ಹೊರತಾಗಿ ಬೇಕಾದಷ್ಟು ಜ್ಞಾನಗಳಿಲ್ಲವೇ?, ಅನೇಕ ಮತಗ್ರಂಥಗಳಿವೆ ಅಲ್ಲವೇ? ಎಂಬ ಪ್ರಶ್ನೆ ಸಹಜವಾಗಿ ಮನುಷ್ಯನಲ್ಲಿ ಏಳಬಹುದು. ವೇದವು ಹೇಗೆ ಎಲ್ಲಾ ಮತ ಗ್ರಂಥಗಳಿಗೂ ಭಿನ್ನವಾಗುತ್ತದೆ! ಎಂಬುದನ್ನು ತಿಳಿದುಕೊಂಡಾಗ ವೇದದ ಶ್ರೇಷ್ಠತೆ ನಮಗೆ ಗೊತ್ತಾಗುತ್ತದೆ. ಈ ಬಗ್ಗೆ  ವಿಚಾರಮಾಡುತ್ತಾ ಸಾಗೋಣ.
ವೇದವು ಎಲ್ಲರಿಗಾಗಿ ತೆರೆದಿಟ್ಟ ಜ್ಞಾನಭಂಡಾರವಾಗಿದೆ.ಈ ವಿಚಾರವನ್ನು ದೃಢೀಕರಿಸಲು ಹಲವು ಮಂತ್ರಗಳ ಉಧಾಹರಣೆಯನ್ನು ಮುಂದೆ ನೋಡೋಣ. ಆದರೆ ಮತೀಯ ಗ್ರಂಥವನ್ನು ನೋಡಿದಾಗ. ಅದು ಎಲ್ಲರಿಗಾಗಿ ಅಲ್ಲ. ಯಾರು ಒಂದು ಮತವನ್ನು ನಂಬುತ್ತಾರೋ, ಯಾರು ಆ ಮತದ ಆಚಾರ ವಿಚಾರಗಳನ್ನು ಪಾಲಿಸುತ್ತಾರೋ ಅವರಿಗಾಗಿ ಈ ಮತ ಗ್ರಂಥಗಳು ಬರೆಯಲ್ಪಟ್ಟಿವೆ. ಆದರೆ ಈ ಯಾವ ಕಟ್ಟುಪಾಡುಗಳಿಲ್ಲದೆ ಇಲ್ಲಿರುವ  ವಿಚಾರವು ಸಕಲ ಮಾನವನ ಅಭ್ಯುದಯಕ್ಕಾಗಿ ಎಂಬ ಜ್ಞಾನಒಂದಿದ್ದರೆ ಅದು ವೇದಜ್ಞಾನ ಮಾತ್ರ. ಕಾರಣ ವೇದವನ್ನು ತಿಳಿಯಲು ಜಾತಿ ಕಟ್ಟುಪಾಡುಗಳಿಲ್ಲ, ಧರ್ಮದ ಕಟ್ಟುಪಾಡುಗಳಿಲ್ಲ, ಗಂಡು ಹೆಣ್ಣು ಭೇದವಿಲ್ಲ.ಮನುಷ್ಯ ಮಾತ್ರದ ಎಲ್ಲರಿಗಾಗಿ ತೆರೆದಿಟ್ಟ  ಜ್ಞಾನ ಯಾವುದಾದರೂ ಇದೆ ಎಂದಾದರೆ ಅದು ವೇದಜ್ಞಾನ ಮಾತ್ರ.ಇಷ್ಟು ವಿಶಾಲ ದೃಷ್ಟಿಕೋನದ ವೇದವನ್ನು ಕೆಲವರಿಗೆ ಸೀಮಿತ ಗೊಳಿಸಿಲ್ಲವೇ? ಎಂದರೆ ಹೌದು,ಹಾಗಾಗಿದೆ.  ಅದು ನಮ್ಮ ದೌರ್ಭಾಗ್ಯ.ವೇದವನ್ನು ಹೆಚ್ಚು ಬಲ್ಲವರೇ ಇಂತಾ ವೇದವಿರೋಧಿ ಮಾತುಗಳನ್ನಾಡುತ್ತಾರೆ. ಇದೇ ನಮ್ಮ ದುರಂತ.ನಮ್ಮ ಸಮಾಜದ ದು:ಸ್ಥಿತಿಗೆ ಇದೂ ಒಂದು ಮುಖ್ಯ ಕಾರಣ. ನಾವು ವೇದವನ್ನು ನೇರವಾಗಿ ಅಧ್ಯಯನ ಮಾಡಿದಾಗ ಸಹಜವಾಗಿ ನಮಗೆ ಇದು “ಎಲ್ಲರಿಗಾಗಿ ಇರುವ ಜ್ಞಾನ” ಎಂಬುದು ನಮ್ಮ ಅರಿವಿಗೆ ಬರುತ್ತದೆ. ನಾವೇ ನೇರವಾಗಿ ವೇದದ ಅಧ್ಯಯನ ಮಾಡಬೇಕು. ಯಾರದೋ ವ್ಯಾಖ್ಯೆಯನ್ನು ಓದಿ ಅವರ ಅಭಿಪ್ರಾಯವನ್ನೇ ವೇದದ ತಿರುಳು  ಎಂದು ಭಾವಿಸಿದರೆ   ನಮಗೆ ನಿಜವಾದ  ವೇದ ಜ್ಞಾನದ ಅರಿವು ಸಿಗಲಾರದು. [ಈ ಬರಹವು ಶ್ರೀ ಸುಧಾಕರ ಶರ್ಮರ ಉಪನ್ಯಾಸದ ನೇರ ನುಡಿಗಳು. ನಿಮಗೆ ಈ ಬರಹದಲ್ಲಿನ ಅವರ ಮಾತುಗಳು ಒಪ್ಪಿಗೆ ಯಾಗದಿದ್ದರೆ ಅಂದರೆ ಇದು ಸರಿಯಿಲ್ಲ, ವೇದಕ್ಕೆ ಅನುಗುಣವಾಗಿಲ್ಲ ಎಂದೆನಿಸಿದರೆ ನೀವು vedasudhe@gmail.com ಗೆ ನಿಮ್ಮ  ಸಂದೇಹವನ್ನು ಅಥವಾ ಪ್ರಶ್ನೆಯನ್ನು ತಿಳಿಸಿದರೆ ಶ್ರೀ ಸುಧಾಕರ ಶರ್ಮರಿಂದಲೇ ಉತ್ತರ ಕೊಡಿಸಲಾಗುವುದು]
ಕಣ್ಮುಚ್ಚಿಕೊಂಡು ಯಾವುದನ್ನೂ ನಂಬ ಬೇಡಿ. ಕಾರಣ ಪ್ರಪಂಚದಲ್ಲಿ  ಈ ರೀತಿಯ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಲಭ್ಯವಿರುವ, ಎಲ್ಲದಕ್ಕೂ ತೆರೆದುಕೊಳ್ಳುವ ಯಾವುದಾದರೂ ಗ್ರಂಥವಿದೆ ಎಂದರೆ ಅದು ವೇದ ಮಾತ್ರ.ಹೀಗೆ ಎಲ್ಲರ ಪ್ರಶ್ನೆಗಳಿಗೂ, ಎಲ್ಲರ ಪರೀಕ್ಷೆಗಳಿಗೂ, ಧಾರಾಳವಾಗಿ ತೆರೆದುಕೊಳ್ಳುವ ಜ್ಞಾನ ಭಂಡಾರವೆಂದರೆ ಅದು ವೇದ ಮಾತ್ರ. ಬೇರೆ ಯಾವ ಮತ ಗ್ರಂಥಗಳಿಗೂ ಈ ಸಾಮರ್ಥ್ಯ ಇಲ್ಲ. ಮುಂದಿನ ಉಪನ್ಯಾಸದ ಭಾಗವನ್ನು ಓದಿದ ನಂತರ ನೀವು ವೇದದ ವೈಶಿಷ್ಠ್ಯಗಳ ಪಟ್ಟಿ ಮಾಡಿಕೊಂಡು ಅದನ್ನು ಬೇರೆ ಯಾವ ಮತೀಯ ಗ್ರಂಥಗಳ ವೈಶಿಷ್ಠ್ಯಗಳ ಪಟ್ಟಿಯೊಡನೆ ಹೋಲಿಕೆ ಮಾಡಿ ನೋಡಿದಾಗ ಯಾವ ಜ್ಞಾನ ಎಲ್ಲರಿಗಾಗಿ ತೆರೆದಿದೆ? ಅಂದರೆ ಮನುಕುಲದ ಎಲ್ಲರ ಏಳಿಗಾಗಿ ಇದೆ ಎಂಬುದನ್ನು ವಾಚಕರು ಸುಲಭವಾಗಿ ಗ್ರಹಿಸಬಹುದು. ಆದರೆ ಈ ಉಪನ್ಯಾಸ ಮಾಲೆಯನ್ನು ಪೂರ್ಣ ಓದಿ ಮುಗಿಸುವ ವರೆಗೂ ವಾಚಕರು ಎರಡು ನಿಯಮಗಳನ್ನು ಪಾಲಿಸುವ ಅಗತ್ಯವಿದೆ. ಮೊದಲನೆಯ ನಿಯಮವೆಂದರೆ ಪೂರ್ವಾಗ್ರಹ ಇರಕೂಡದು, ಎರಡ  ನೆಯದು ಮುಕ್ತ ಮನಸ್ಸಿರಬೇಕು.
ಸಾಮಾನ್ಯವಾಗಿ ನಾವೆಲ್ಲಾ ಬೆಳೆದು ಬಂದಿರುವ ಪರಿಸರದಲ್ಲಿ ಹಲವಾರು ಆಚಾರ ವಿಚಾರಗಳನ್ನು ನಾವು ಆಚರಿಸಿಕೊಂಡು ಬಂದಿರುತ್ತೇವೆ. ಹಲವಾರು ಧಾರ್ಮಿಕ ನಂಬಿಕೆಗಳು, ಮತೀಯ ಭಾವನೆಗಳು, ಎಲ್ಲವೂ ನಮ್ಮಲ್ಲಿರುತ್ತವೆ. ಈ ಉಪನ್ಯಾಸವನ್ನು ಕೇಳುವಾಗ [ಬರಹ ಓದುವಾಗ]  ನಮ್ಮ ಧಾರ್ಮಿಕ ಭಾವನೆಗಳು/ನಮ್ಮ ನಂಬಿಕೆಗಳು ಸಹಜವಾಗಿ  ಮಧ್ಯೆ ಅಡ್ಡಿಯುಂಟುಮಾಡದೆ ಇರದು. ಆದರೆ ನನ್ನ [ಶರ್ಮರ] ಮನವಿ ಏನೆಂದರೆ ಈ ಉಪನ್ಯಾಸ ಮಾಲೆ ಮುಗಿಯುವ ವರೆಗೂ ಸ್ವಲ್ಪ ನಮ್ಮ ನಮ್ಮ ನಂಬಿಕೆಗಳು, ಆಚರಣೆಗಳನ್ನುಸ್ವಲ್ಪ ಸಮಯ ಪಕ್ಕಕ್ಕಿಟ್ಟು ಅವು ಮಧ್ಯದಲ್ಲಿ ಅಡ್ಡಿ ಉಂಟುಮಾಡದಂತೆ ಎಚ್ಚರ ವಹಿಸಿದರೆ  ಈ ಉಪನ್ಯಾಸದ ವಿಚಾರವು ಸ್ಪಷ್ಟವಾಗುತ್ತದೆ. ವೇದದ ವಿಚಾರವನ್ನು ನೇರವಾಗಿ ತಿಳಿದುಕೊಳ್ಳಲು ಸಹಾಯವಾಗುತ್ತದೆ.ವೇದವು ಎಲ್ಲರಿಗಾಗಿ ಎಂದು ಆರಂಭದಲ್ಲಿಯೇ ತಿಳಿಸಲಾಗಿದೆ. ಮತ್ತೊಂದು ಮುಖ್ಯ  ವಿಚಾರವೆಂದರೆ  ವೇದಜ್ಞಾನವು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಲು ಸಾಧ್ಯವಾದ ಜ್ಞಾನಭಂಡಾರ. ನಮ್ಮ ನೆಮ್ಮದಿಯ ಜೀವನಕ್ಕಾಗಿ ವೇದದಲ್ಲಿರುವ ವಿಚಾರಗಳನ್ನು ನೂರಕ್ಕೆ ನೂರು ಅಳವಡಿಸಿಕೊಳ್ಳಬಹುದು. ಇದು ಕಥೆಯಲ್ಲ.ಸಾಮಾನ್ಯವಾಗಿ ವೇದ ವೇದಾಂತಗಳ ವಿಚಾರದಲ್ಲಿ ಪ್ರವಚನಗಳನ್ನು ಕೇಳಿದ ಮೇಲೆ ಯಾರನ್ನೇ ಆಗಲೀ ಕೇಳಿದರೆ ಬರುವ ಉತ್ತರ “ಕೇಳಲು ತುಂಬಾ ಚೆನ್ನಾಗಿತ್ತು” ಆದರೆ ಜೀವನಕ್ಕೆ ಅಳವಡಿಸಿಕೊಳ್ಳುವ ವಿಚಾರ ಬಂದಾಗ  ಪ್ರವಚನ ಕೇಳುವ ಮುಂಚೆ ನಮ್ಮ ಜೀವನ ಹೇಗಿತ್ತೋ, ನಂತರವೂ ಹಾಗೇ ಇದೆ.ಬದಲಾವಣೆಯಾಗಲಿಲ್ಲ, ಅಂದರೆ ಪ್ರವಚನದ ವಿಚಾರಕ್ಕೂ ನಮ್ಮ ಜೀವನಕ್ಕೂ ಸಂಬಂಧವಿಲ್ಲದಂತಾಯ್ತು.ಕೇಳುವುದಕ್ಕೆ ಮಾತ್ರ ಚಂದ.ಹೀಗೂ ಹೇಳುವುದುಂಟು” ಈ ಪ್ರವಚನದ ಉಪಯೋಗ ಇವನು ಸತ್ತ ಮೇಲೆ “ಪುಣ್ಯದ ರೂಪದಲ್ಲಿ  ಆಗುತ್ತದೆ” ಆದರೆ ವೇದದ ವಿಚಾರದಲ್ಲಿ ಒಂದು ಗಂಟೆ  ಪ್ರವಚನ ಕೇಳಿದರೆ ಆ ಒಂದು ಗಂಟೆಯ ನಂತರ ಅವನಲ್ಲಿ ಅವನ ಆವರಗಿನ ಜೀವನದಲ್ಲಿ ಸುಧಾರಣೆಯಾಗಿರಬೇಕು, ನಮ್ಮ ಚಿಂತನೆಯಲ್ಲಿ ಒಂದಿಷ್ಟಾದರೂ ಪರಿವರ್ತನೆಯನ್ನು ಕಾಣಬೇಕು. ಸ್ವಲ್ಪವಾದರೂ ನಮ್ಮ ಬುದ್ಧಿ ಚುರುಕಾಗಬೇಕು.ಸ್ವಲ್ಪವಾದರೂ ಸತ್ಯವನ್ನು ಗುರುತಿಸುವ,   ಪ್ರಿಯವನ್ನು ಗುರುತಿಸುವ, ಹಿತವನ್ನು ಗುರುತಿಸುವ ಸಾಮರ್ಥ್ಯ ಹೆಚ್ಚಾಗಬೇಕು. ಈ ವಿಚಾರಗಳನ್ನು ಮನಸ್ಸಿಗೆ ಇಳಿಸಿಕೊಂಡಷ್ಟೂ  ಜೀವನದಲ್ಲಿ ಹೆಚ್ಚು ಹೆಚ್ಚು ಪರಿವರ್ತನೆಯನ್ನು  ಕಾಣಬಹುದು. ವೇದ ಎಂಬುದು ವಿಜ್ಞಾನ. ಇದಕ್ಕೆ ಆಧಾರವಾಗಿ ನಮಗೆ ಸಿಗುವಂತಹದ್ದು ವೇದ ಮಂತ್ರಗಳು.ವೇದವು ಪ್ರಪಂಚದ ಅತ್ಯಂತ ಹಳೆಯ ಜ್ಞಾನ ಭಂಡಾರ. ವೈದಿಕ ಸಾಹಿತ್ಯದ ಅರ್ಥವನ್ನು  ತಿರುಚಿದ   ಮ್ಯಾಕ್ಸ್ ಮುಲ್ಲರ್ ಕೂಡ ಒಂದು ಕಡೆ ಬರೆಯುತ್ತಾನೆ “ ಪ್ರಪಂಚದ ಅತ್ಯಂತ ಹಳೆಯ ಸಾಹಿತ್ಯವೆಂದರೆ ಋಗ್ವೇದ” ಅತ್ಯಂತ ಪ್ರಾಚೀನವಾದ ಜ್ಞಾನದ ಮೂಲ ವೇದಗಳು. ಮಿಕ್ಕೆಲ್ಲವೂ ವೇದದಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉಪಕೃತವಾಗಿರುವ ಸಾಹಿತ್ಯವೇ ಆಗಿವೆ. ಹಾಗಾಗಿ ವೇದವನ್ನು ಪರಮಪ್ರಮಾಣ ವೆಂತಲೂ ಅದರಿಂದ ಉಪಕೃತವಾಗಿರುವ ಗ್ರಂಥಗಳನ್ನು ಪರತ:ಪ್ರಮಾಣವೆಂತಲೂ ಅಳತೆಗೋಲಾಗಿಟ್ಟುಕೊಂಡು ಅರ್ಥಮಾಡಿಕೊಳ್ಳ ಬೇಕಾಗುತ್ತದೆ.
ವೇದ ವಿಜ್ಞಾನ:
ವೇದ ಎಂದೊಡನೆ ನಮ್ಮ ಕಣ್ಮುಂದೆ ಸಹಜವಾಗಿ  ಬರುವ ಅಂಶಗಳೆಂದರೆ ಯಜ್ಞ ಯಾಗಾದಿಗಳನ್ನು ಮಾಡಲು ಅಗತ್ಯವಾದ ಮಂತ್ರಗಳು, ಶ್ರಾದ್ಧ ಕರ್ಮಾದಿಗಳ ಮಂತ್ರಗಳು, ಇತ್ಯಾದಿ…ಇತ್ಯಾದಿ.. ಆದರೆ ವೇದವು ಅಷ್ಟಕ್ಕೇ ಸೀಮಿತವಾಗಿಲ್ಲ. ವೇದದಲ್ಲಿ ಸಮಸ್ತವೂ ಇದೆ. ವೇದ ವಿಜ್ಞಾನದ ಬಗ್ಗೆ ವಿಚಾರ ಮಾಡುತ್ತಾ ಹೋದಾಗ ಹಲವು ಹೊಸ ವಿಷಯಗಳು ನಮ್ಮ ಕಣ್ಮುಂದೆ ಬರುತ್ತವೆ. ಯಾವುದೇ ಸಂಪ್ರದಾಯ-ಆಚರಣೆಗಳಿಂದ ಮುಕ್ತವಾದ ಇವು ನೂರು ಪ್ರತಿಶತ ವೈಜ್ಞಾನಿಕ ಸತ್ಯ ಅಂಶಗಳು. ವಿಜ್ಞಾನವೆಂದರೆ ವಿಶೇಷ ಜ್ಞಾನ. ಈ ಅರ್ಥದಲ್ಲಿ ವಿಚಾರ ಮಾಡುವಾಗ ವೇದ ವಿಜ್ಞಾನದಲ್ಲಿ ಕಾಣಬರುವ ಮೊದಲ ಅಂಶವೆಂದರೆ “ಅಸ್ತಿತ್ವ”.  ಅಸ್ತಿತ್ವ ಎಂದರೆ ಇಂಗ್ಲೀಶ್ ನಲ್ಲಿ ಎಂಟಿಟಿ (ENTITY )ಎನ್ನುತ್ತಾರೆ. ಈ ಪದವನ್ನು ಈಗ ನಿಧಾನವಾಗಿ ಅರ್ಥ ಮಾಡಿಕೊಳ್ಳಬೇಕು. ಯಾವುದು ಅಸ್ತಿತ್ವದಲ್ಲಿದೆಯೋ ಅದು ಯಾವಾಗಲೂ ಅಸ್ತಿತ್ವದಲ್ಲಿರುತ್ತದೆ. ಅದನ್ನು ನಾಶ ಮಾಡಲೂ ಸಾಧ್ಯವಿಲ್ಲ. ಹೊಸ ದ್ರವ್ಯವನ್ನು ಸೃಷ್ಟಿಸಲೂ ಸಾಧ್ಯವಿಲ್ಲ. ಯಾವುದು ಇದೆಯೋ ಅದು ಇರುತ್ತದೆ. ಆದರೆ ಸಂದರ್ಭೋಚಿತವಾಗಿ ಬೇರೆ ಬೇರೆ ರೂಪಗಳನ್ನು ಪಡೆದು ರೂಪಾಂತರವಾಗಬಲ್ಲದು, ಅಷ್ಟೆ. ಆದರೆ ಮೂಲ  ದ್ರವ್ಯ ನಾಶವಾಗಲಾರದು.
 ಅಸ್ತಿತ್ವವನ್ನು ಒಂದು ವಸ್ತು ಎಂದು ತಿಳಿಯೋಣ. ಯಾವ ವಸ್ತುವೇ ಆಗಲಿ ಅದು ಆಗಿರುವುದು ದ್ರವ್ಯದಿಂದ.ಈ ದ್ರವ್ಯಕ್ಕೆ  ಮ್ಯಾಟರ್ ಎನ್ನುತ್ತಾರೆ.ದ್ರವ್ಯದ ಬಗ್ಗೆ  ವಿಜ್ಞಾನ ವಾದರೂ ಹೇಳುವುದೇನು “ದ್ರವ್ಯವನ್ನು ಸೃಷ್ಟಿಸಲೂ ಸಾಧ್ಯವಿಲ್ಲ, ನಾಶಪಡಿಸಲೂ ಸಾಧ್ಯವಿಲ್ಲ”. ಅಸ್ತಿತ್ವ ಎಂಬುದು ಒಂದೇ.ಆದರೆ ಅದರದೇ ರೂಪಾಂತರ ಅನೇಕ. ಉಧಾಹರಣೆಗೆ ಮಂಜಿನ ಗೆಡ್ಡೆ. ಅದು ಬಿಸಿಯಾದಾಗ  ನೀರಾಗುತ್ತದೆ,ಇನ್ನೂ ಹೆಚ್ಚಿನ ಉಷ್ಣತೆಯಲ್ಲಿ ಆವಿಯಾಗಿ ರೂಪಾಂತರವಾಗುತ್ತದೆ. ಮೂಲದಲ್ಲಿ ವಸ್ತು ಒಂದೇ ಅಲ್ಲವೇ? ಯಾವುದು ಇನ್ನೊಂದರ ಸಹಾಯವಿಲ್ಲದೆ ತನ್ನ ಗುಣ ಲಕ್ಷಣದಮೇಲೆ ಇರುತ್ತದೋ , ಅದನ್ನು ವಿಜ್ಞಾನದಲ್ಲಿ ಅಸ್ತಿತ್ವ ಎನ್ನುತ್ತಾರೆ. ವೇದವು  ಈ ಬಗ್ಗೆ ಏನು ಹೇಳುತ್ತದೆ, ಒಂದು ಮಂತ್ರ ನೋಡೋಣ.
ಅದಕ್ಕಿಂತ ಮುಂಚೆ ವೇದ ಮಂತ್ರವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಈ ಬಗ್ಗೆ ಸ್ವಲ್ಪ ವಿಚಾರ ಮಾಡಬೇಕಾಗುತ್ತದೆ. ಅನೇಕರು ಭಾವಿಸಿರುವಂತೆ ವೇದವು ಸಂಸ್ಕೃತದಲ್ಲಿಲ್ಲ. ವೇದವು ವೇದಭಾಷೆಯಲ್ಲಿದೆ, ಎಂದರೆ ಅಚ್ಚರಿಯಾಗಬಹುದು. ವೇದಭಾಷೆ ಎಂದರೇನು? ಪದದ ನಿರ್ಮಾಣ ಹೇಗಾಗುತ್ತದೆ? ಅದರ  ಹಿಂದಿನ ವಿಜ್ಞಾನವನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕು, ಇತ್ಯಾದಿ ವಿಚಾರಗಳ ಬಗ್ಗೆ ಮುಂದಿನ ಭಾನುವಾರ ನೋಡೋಣ
[ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಉಪನ್ಯಾಸದ ಬರಹ ರೂಪ]

-ಹರಿಹರಪುರಶ್ರೀಧರ್