Pages

Tuesday, February 18, 2014

ದೇಶದ ಸಮಸ್ಯೆಗಳಿಗೆ ಸಮಗ್ರವಾದ ಪರಿಹಾರ ?

      ನನ್ನನ್ನು  ಒಬ್ಬ ಯುವಕ ಕೇಳಿದ  "ಸರ್ ಇವತ್ತಿನ ದೇಶದ ಸಮಸ್ಯೆಗಳಿಗೆ ಯಾವ ಸಂಸ್ಥೆ ಸಮಗ್ರವಾದ ಪರಿಹಾರ ನೀಡಬಲ್ಲದು?"  ಅವರ ಪ್ರಶ್ನೆಯಲ್ಲಿ ಕಳಕಳಿ ಇತ್ತು. ಇನ್ನೂ 25 ವರ್ಷದ ತರುಣ. ಈ ಸಮಾಜಕ್ಕಾಗಿ  ಏನಾದರೂ  ಮಾಡಬೇಕೆಂಬ ಆಸಕ್ತಿ ಅವನ  ಮಾತುಗಳಲ್ಲಿ ಎದ್ದು ಕಾಣುತ್ತಿತ್ತು.  ರಾಮಕೃಷ್ಣಾಶ್ರಮ, ಆರ್ಟ್ ಆಫ್ ಲಿವಿಂಗ್, ಬಾಬಾ ರಾಮದೇವ್, ಹೀಗೆ ಹತ್ತು ಹಲವು ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾನೆ. ಎಲ್ಲವೂ ಅವನಿಗೆ ಚೆನ್ನಾಗಿಯೇ ಕಾಣುತ್ತದಂತೆ. ಆದರೆ ಈ ದೇಶದ ಸಮಸ್ಯೆಗೆ ಸಮಗ್ರವಾಗಿ ಪರಿಹಾರ ಎಲ್ಲೂ ಕಾಣುತ್ತಿಲ್ಲವೆಂಬ ನಿರಾಶಭಾವ ಕೂಡ   ಅವನಲ್ಲಿದೆ.
         ಯುವಕನಿಗೆ ನಾನು ಹೇಳಿದೆ. ನೋಡಿ, ನಾನು ಸುಮಾರು 45 ವರ್ಷಗಳಿಂದ RSS ಸಂಪರ್ಕದಲ್ಲಿರುವವನು. ತಾರುಣ್ಯದಲ್ಲಿ RSS ಕೆಲಸ ಮಾಡಿದೆ. ನಂತರ ಧಾರ್ಮಿಕ, ಸಾಮಾಜಿಕ ಸೇವಾಕ್ಷೇತ್ರಗಳಲ್ಲಿ ಸಾಕಷ್ಟು ಚಟುವಟಿಕೆಗಳಲ್ಲಿ ಪಾಲ್ಗೊಂಡೆ. ಐವತ್ತು ವರ್ಷಗಳು ಕಳೆದಮೇಲೆ  ಶ್ರೀ ಸುಧಾಕರಶರ್ಮರ ಮೂಲಕ  ವೇದದ ಸರಳ   ಪರಿಚಯವಾಯ್ತು. ಆಗ ನನಗೆ ಅನ್ನಿಸಲು ಶುರುವಾಯ್ತು. ವೇದದಲ್ಲಿ ಈ ಸಮಾಜದ ಸನಸ್ಯೆಗಳಿಗೆ ಎಲ್ಲದಕ್ಕೂ ಪರಿಹಾರವಿದೆಯಲ್ಲಾ! ನಮ್ಮ ಪ್ರಾಚೀನ ಸಾಹಿತ್ಯವಾದ ವೇದವನ್ನು ಮರೆತು ಯಾಕೆ ದೇಶವು ಹೀಗೆ ದು:ಸ್ಥಿತಿಗೆ ಬಂದಿದೆ? 
          ಹೀಗೆ  ಚಿಂತನೆ ನಡೆಸಿ  ವೇದದ ವಿಚಾರವನ್ನು ಸಾಮಾನ್ಯ ಜನರಿಗೆ ತಿಳಿಸಲು ಸುಧಾಕರಶರ್ಮರ ಉಪನ್ಯಾಸ   ಗಳನ್ನೇ ಪ್ರಧಾನವಾಗಿಟ್ಟುಕೊಂಡು  "ವೇದಸುಧೆ" ಬ್ಲಾಗ್ ಆರಂಭಿಸಿದೆ. ಆರಂಭದಲ್ಲಿ ಅದರಲ್ಲಿ ಬರೆಯಲು 15-20 ಜನರು ಮುಂದೆ ಬಂದರು.ಈಗಲೂ 20ಕ್ಕಿಂತ ಹೆಚ್ಚು ಲೇಖಕರಿಗೆ ವೇದಸುಧೆಯಲ್ಲಿ ಬರೆಯಲು ಅವಕಾಶವಿದ್ದು, ಅವರೆಲ್ಲಾ ಲೇಖಕರ   ಪಟ್ಟಿಯಲ್ಲಿದ್ದಾರೆ. ಆರಂಭದ ಉತ್ಸಾಹ ಹೇಗಿತ್ತೆಂದರೆ ನಮ್ಮ ಸಾಮಾಜಿಕ ಸಮಸ್ಯೆಗಳಿಗೆಲ್ಲಾ ವೇದದಿಂದಲೇ ಪರಿಹಾರ ಒದಗಿಸಲು ಸಾಧ್ಯ! ವೇದವೇ ಸರ್ವಸ್ವ! ವೇದದಿಂದಲೇ ಸಾಮಾಜಿಕ ಬದಲಾವಣೆ ತರಬಹುದೆಂಬ ನಿಶ್ಚಿತ ಭರವಸೆಯಿಂದ ಕೆಲಸ ಮಾಡುತ್ತಾ ಹೋದೆವು. ಸಾಮಾನ್ಯವಾಗಿ ಈಗ ಐದಾರು ವರ್ಷಗಳಿಂದ ಈ ಕೆಲಸ ನಡೆಯುತ್ತಿದೆ. ಆರಂಭದಲ್ಲಿ ಉತ್ಸಾಹದಲ್ಲಿ ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ಬರೆದರು. ಬರುಬರುತ್ತಾ  ಬರೆಯುವವರ ಸಂಖ್ಯೆ  ಕಡಿಮೆಯಾಯ್ತು. ಆದರೆ ನಾವು ಕಟ್ಟಿಕೊಂಡಿರುವ "ವೇದಭಾರತಿಯ" ಚಟುವಟಿಕೆ ಹೆಚ್ಚಾಯ್ತು. 
            ಸಮಾಜದಲ್ಲಿ ಕೆಲಸ ಮಾಡುತ್ತಾ ಮಾಡುತ್ತಾ ನಮ್ಮ ಅರಿವಿಗೆ ಹಲವು ಸಂಗತಿಗಳು ಗೋಚರವಾಗುತ್ತೆ. ಅನುಭವ ಹೆಚ್ಚಿದಂತೆ ಸಮಾಜವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ಬೆಳೆಯುತ್ತದೆ. ಯಾಕೆ ಇಷ್ಟೆಲ್ಲಾ ಬರೆದೆ, ಎಂದರೆ ಯಾವುದೇ ಒಂದು ಸಂಸ್ಥೆಯು ದೇಶದಲ್ಲಿರುವ ಎಲ್ಲಾ ಸಮಸ್ಯೆಗಳಿಗೂ   ಸಮಗ್ರವಾದ ಪರಿಹಾರ ನೀಡಲು ಸಾಧ್ಯವಿಲ್ಲ. ಸಾಮಾಜಿಕ ಸಮಸ್ಯೆಗಳಿಗೆ ಹಲವು   ಮುಖಗಳು. ಹಾಗಾಗಿ ಯಾರ್ಯಾರಿಗೆ ಯಾವ ಸಮಸ್ಯೆಗಳು ಪ್ರಮುಖವಾಗಿ ಕಾಣುತ್ತದೆಯೋ ಆ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಂಸ್ಥೆಗಳ ಜೊತೆಗೆ ಜೋಡಿಸಿಕೊಳ್ಳುತ್ತಾರೆ, ಅಷ್ಟೆ.
          ಉಧಾಹರಣೆಗೆ ದೇಶವನ್ನೇ ತಿನ್ನುತ್ತಿರುವ ಬ್ರಷ್ಟಾಚಾರ! ಬ್ರಷ್ಟಾಚಾರ ತೊಲಗಿದರೆ ಸಾಕೇ? ಇಲ್ಲ. ನಮಗೆ ಅದಕ್ಕಿಂತಲೂ ಭೀಕರವಾಗಿ ಕಾಣುವುದು ಭಯೋತ್ಪಾದನೇ! ಮತಾಂತರದ ಹಾವಳಿ!  ಪಟ್ಟಿಮಾಡುತ್ತಾ ಹೋದರೆ ನಮ್ಮ ಸಾಂಸ್ಕೃತಿಕ ಅಧ:ಪಥನ, ಅನೈತಿಕತೆ, ಅವ್ಯವಹಾರ, ಅಶ್ಲೀಲ ಸಾಹಿತ್ಯ, ಯುವಕರ ಮೇಲೆ ಆಗುತ್ತಿರುವ ಪಾಶ್ಚಿಮಾತ್ಯ ವಿಕೃತಿಗಳು! ದೇಶಭಕ್ತಿಯ ಕೊರತೆ, ಅಶಿಸ್ತು, ಅನಾರೋಗ್ಯ,  ಬಡವ-ಶ್ರೀಮಂತ ಭೇದಗಳು, ಜಾತಿ-ಜಾತಿಗಳ ಮಧ್ಯೆ ಸಾಮರಸ್ಯದ ಕೊರತೆ...
       ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಮಸ್ಯೆಗಳು ಹಲವಾರು. ಒಂದೇ ಸಂಘಟನೆಯಿಂದ ಎಲ್ಲದಕ್ಕೂ ಪರಿಹಾರ ಖಂಡಿತಾ ಸಾಧ್ಯವಿಲ್ಲ. ಆದರೆ ನಮ್ಮ ಮಾನಸಿಕತೆಗೆ ಒಪ್ಪುವ ಕ್ಷೇತ್ರದಲ್ಲಿ ನಾವು ಕೆಲಸ ಮಾಡುತ್ತಾ ಹೋದರೆ ಸಮಾಜದಲ್ಲಿ ಬದಲಾವಣೆ ಆಗುತ್ತದೋ ಇಲ್ಲವೋ, ಆದರೆ ನಮ್ಮಲ್ಲಿ ಬದಲಾವಣೆ ಆಗುವುದು ನಿಶ್ಚಿತ.

        ಹೌದು, ಆ ಯುವಕನ ಕಳಕಳಿಯನ್ನು ಅರ್ಥಮಾಡಿಕೊಳ್ಳಬೇಕು.ನಾನೊಬ್ಬ ಹಿರಿಯನೆಂದು ಅವನು ನನ್ನ ಸಲಹೆ ಕೇಳಿದನೆಂದು ನಾನು ಅವನಿಗೆ ನೀನು ಹೀಗೆಯೇ ಮಾಡೆಂದು ಹೇಳಲಿಲ್ಲ. ಬದಲಿಗೆ ನಿನ್ನ ಮನಸ್ಸಿಗೆ ಒಪ್ಪುವ ಕ್ಷೇತ್ರ ಆಯ್ದು ಕೋ, ಎಂದು ತಿಳಿಸಿದೆ. ಆದರೆ ಜೊತೆಗೆ ಒಂದು ಎಚ್ಚರ ಗಮನಿಸಲು ತಿಳಿಸಿದೆ,  "ಅದೇನೆಂದರೆ ಹಲವು ಸಂಘಟನೆಗಳು ಕೇವಲ ಪ್ರಚಾರಕ್ಕಾಗಿ ಇರುತ್ತವೆ, ಮಾಧ್ಯಮಗಳಲ್ಲಿ ಸುದ್ಧಿ ಮಾಡಲು ಇರುತ್ತವೆ. ಆದರೆ ಎಲೆ ಮರೆ ಕಾಯಿಯಂತೆ ಕೆಲಸಮಾಡುವ ಹಲವಾರು ಸಂಘಟನೆಗಳಿರುತ್ತವೆ. ಸಾಮಾಜಿಕ ಕಳಕಳಿ ಇದ್ದವರಿಗೆ ತಾನೇ ತಾನಾಗಿ ಅಂತಹ ಸಂಘಟನೆಗಳ ಪರಿಚಯವಾಗುತ್ತೆ. ಅಥವಾ ತಾವೇ ತಮ್ಮ ಸಮಾನ ಮಾನಸಿಕರೊಡಗೂಡಿ ಕೆಲಸ ಮಾಡುತ್ತಾ ಹೋಗಬಹುದು"

 ನಿಜವಾಗಿ ಸಾಮಾಜಿಕ ಕಳಕಳಿಯಿರುವ ಹಲವಾರು ತರುಣರು ದೇಶದಲ್ಲಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಇದೆ. ಇಂತಹ ತರುಣರನ್ನು ದುರುಪಯೋಗಪಡಿಸಿಕೊಳ್ಳುವವರೇ ಹೆಚ್ಚು. ತಮ್ಮ ವಿವೇಕವನ್ನು ಉಪಯೋಗಿಸಿ ಕೊಂಡು ಉತ್ತಮರ ಸಹವಾಸ ಮಾಡುವ ಹೊಣೆಯು ಇಂತಹ ಯುವಕರ ಮೇಲೆಯೇ  ಇರುತ್ತದೆ.