Pages

Friday, January 9, 2015

ಸಿರಿಭೂವಲಯ ಒಂದು ಖಚಿತವಾದ ಸರಳ ಪರಿಚಯ

 ಒಂದು ಖಚಿತವಾದ ಸರಳ ಪರಿಚಯ
ಗ್ರಂಥದ ಮೂಲ ವಾರಸುದಾರರು: ದೊಡ್ಡಬೆಲೆ ಧರಣೆಂದ್ರ ಪಂಡಿತರು
ಗ್ರಂಥ ಸಂರಕ್ಷಕರು:  ಪಂ. ಯಲ್ಲಪ್ಪ ಶಾಸ್ತ್ರಿ
ಗ್ರಂಥ ಸಂಶೋಧಕರು: ಕರ್ಲಮಂಗಲಂ ಶ್ರೀಕಂಠಯ್ಯ
ಗ್ರಂಥ ಪ್ರಚಾರಕರು: ಕೆ. ಅನಂತಸುಬ್ಬರಾಯ
ಅಕ್ಷರ ಆವೃತಿಯ ಮೊದಲ ಪ್ರಕಾಶಕರು: ಸರ್ವಾರ್ಥಸಿದ್ಧಿಸಂಘ ಬೆಂಗಳೂರು
ನಾಡಿನ ಹೆಸರಾಂತ ವಿದ್ವಾಂಸರ ಸಂಪಾದಕ ಮಂಡಳಿಯ ನೆರವಿನೊಂದಿಗೆ
ಭಾಗಶಃ ಪರಿಷ್ಕೃತ ಮರುಮುದ್ರಣ: ಪುಸ್ತಕಶಕ್ತಿಪ್ರಕಾಶನ ಬೆಂಗಳೂರು.
ಪ್ರಥಮಖಂಡದ ೫೯ ಅಧ್ಯಾಯಗಳ ಸರಳ ಪರಿಚಯಕಾರ: ಸಿರಿಭೂವಲಯದ ಸುಧಾರ್ಥಿ
ಸರಳ ಪರಿಚಯಕೃತಿಗಳ ಪ್ರಕಟಣೆ: ಶ್ರೀಮತಿ ಗಿರಿಜಾಶಂಕರ ಹಾಲುವಾಗಿಲು.
ಸಿರಿಭೂವಲಯಕ್ಕೆ ಸಂಬಂಧಿಸಿದ ಮಾಹಿತಿಗಳಿರುವಜಾಗ:
ಗೂಗಲ್ಸ್, ವಿಕಿಪಿಡಿಯ ಸೇರಿದಂತೆ ಹಲವಾರು ಅಂತರ್ಜಾಲ ತಾಣಗಳು
ಸಿರಿಭೂವಲಯದ ಸಂಶೋಧನೆಯ ಮಾಹಿತಿಗಳಿಗೇ ಮೀಸಲಾದ ತಾಣ:
Siribhuuvalayasaa.blogspot.in
*   *   *
  ಆತ್ಮೀಯ ಕನ್ನಡಾಭಿಮಾನಿಗಳೇ.
  ಜಗತ್ತಿನ ಸಾಹಿತ್ಯಕ್ಷೇತ್ರದಲ್ಲಿ ಕನ್ನಡದವೇದ ಎಂದು ಪರಿಗಣಿಸಬೇಕಾದ ಸಿರಿಭೂವಲಯವನ್ನು ಕುರಿತಂತೆ ಈಗಾಗಲೇ ನಿಮಗೆ ಈ ಅಂತರ್ಜಾಲತಾಣದಲ್ಲಿ ಸಾಕಷ್ಟು ಮಾಹಿತಿಗಳನ್ನು ಒದಗಿಸಲಾಗಿದೆ. ಇದರೊಂದಿಗೆ ವಿವಿಧಮೂಲದಿಂದಲೂ  ನೀವು ಮಾಹಿತಿಗಳನ್ನು ತಿಳಿದಿರುವುದು ಸಹಜ.  ಪ್ರಾರಂಭದಿಂದಲೂ ಈ ಗ್ರಂಥದ ವಿಚಾರವಾಗಿ ಇಲ್ಲದ ಇತಿಹಾಸ ಸೃಷ್ಟಿಸುವ ದಿಸೆಯಲ್ಲಿ ಹಲವಾರು ಅಸಹಜ ಸಂಗತಿಗಳು ಪ್ರಚಾರವಾಗಿರುವುದರ ಕಾರಣ ಸಾಮಾನ್ಯ ಓದುಗರಿರಲೀ; ಈ ಅಚ್ಚರಿಯ ಕೃತಿಯನ್ನು ಕುರಿತು ಮುಂದೆ ಪ್ರಾಮಾಣಿಕವಾಗಿ ಸಂಶೋಧನೆ ಮಾಡಬಯಸುವ ಪ್ರತಿಭಾಶಾಲಿಗಳನ್ನೂ ದಿಕ್ಕುಗೆಡಿಸುವ ಗೊಂದಲದ ಮಾಹಿತಿಗಳು ಅಂತರ್ಜಲತಾಣದಲ್ಲಿ ವ್ಯಾಪಕವಾಗಿ ಬೆಳಕುಕಂಡವು.
   ವಿವೇಕಶಾಲಿಗಳ ಸಮಂಜಸವಾದ ತರ್ಕಕ್ಕೆ ಸಿಲುಕದಂತೆ ಅಂತೆ ಕಂತೆ ಗಳ ಅಡ್ಡಗೋಡೆಯಮೇಲಿನ ದೀಪದಂಥ ಅಲ್ಲಿನ ಮಾಹಿತಿಗಳಿಂದಾಗಿ ಯಾವುದನ್ನು ನಂಬುವುದು; ಯಾವುದನ್ನು ನಿರಾಕರಿಸುವುದು!? ಎಂಬುದೇ ಹಲವರಿಗೆ ಸಮಸ್ಯೆಯಾಗಿ ಪರಿಣಮಿಸಿತ್ತು! ಇದರೊಂದಿಗೆ ಜೈನ ಸಂಪ್ರದಾಯ ಹಾಗೂ ವೈದಿಕ ಸಂಪ್ರದಾಯಗಳ ನಡುವೆ ಬೆಳೆದುಬಂದಿರುವ ಶ್ರೇಷ್ಠತೆಯ ಮೇಲಾಟದಲ್ಲಿ ಈ ಕೃತಿಯು ಬಲಿಪಶುವಾಗಿತ್ತು. ಈ ಎರಡೂ ಸಂಪ್ರದಾಯದ ವಿದ್ವಾಂಸರೂ ತಮ್ಮದೇ ಆದ ಕಾರಣಗಳಿಂದಾಗಿ ಈ ಅಚ್ಚರಿಯ ಅಂಕಕಾವ್ಯವನ್ನು ಆಧುನಿಕ ಕನ್ನಡ ಸಾಹಿತ್ಯ ಪರಿಸರದಲ್ಲಿ ಸುಮಾರು ೬೦ ವರ್ಷಗಳಕಾಲ ಕತ್ತಲಕೋಣೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಸಿರಿಭೂವಲಯ ಎಲ್ಲಿದೆ? ಕುಮುದೇಂದು ಮುನಿಯಾರು? ಸಿರಿಭೂವಲಯದಲ್ಲಿ ಏನಿದೆ ಮಣ್ಣು? ಎಂದು ಪ್ರಶ್ನಿಸುತ್ತಿದ್ದ ವಿದ್ವಾಂಸರು ಈಗ ಪರಿತಪಿಸುವಂತಾಗಿದೆ!
   ಈಗ ಪರಿಸರ ಪೂರ್ಣ ಬದಲಾಗಿದೆ. ಕುಮುದೇಂದುಮುನಿಯ ಸಿರಿಭೂವಲಯಕ್ಕೆ ಸಂಬಂಧಿಸಿದ ಅಧಿಕೃತವಾದ ಖಚಿತ ಮಾಹಿತಿಗಳನ್ನು ಒಳಗೊಂಡಂತೆ ಪ್ರಥಮ ಖಂಡದ ಸರಳ ಪರಿಚಯ ರೂಪದಲ್ಲಿ ನಿರೂಪಿತವಾದ ಒಂಬತ್ತು ಕೃತಿಗಳು ಹಾಗೂ ಇವುಗಳ ಹಿಂದಿ ಹಾಗೂ ಆಂಗ್ಲಾಭಾಷೆಯ ಭಾವಾನುವಾದವು ಮೇಲೆ ಸೂಚಿಸಿದ ದಿಕ್ಕುಗೆಡಿಸುವ ಗೊಂದಲದ ಪರಿಸರವನ್ನು ಯಶಸ್ವಿಯಾಗಿ ಬದಲಿಸಿದೆ. (ಹಿಂದಿ ಭಾವಾನುವಾದ: ಶ್ರೀ ರಾಮಣ್ಣ ಹಾಸನ ; ಆಂಗ್ಲಾಭಾವಾನುವಾದ: ಶ್ರೀ ಕವಿ ಸುರೇಶ್ ಶಿವಮೊಗ್ಗ)  ಕಳೆದ ೩೦ ವರ್ಷಗಳಿಂದ ನಡೆದುಬಂದಿರುವ ನಿರಂತರವಾದ ಅಧ್ಯಯನವು ಈ ಬದಲಾವಣೆಗೆ ಪ್ರಮುಖ ಕಾರಣವಾಗಿದೆ.
 
  ಕುಮುದೇಂದುಮುನಿಯ ಸಿರಿಭೂವಲಯವು ಆಧುನಿಕ ವಿದ್ವಾಂಸರ ದೃಷ್ಟಿಯಲ್ಲಿ ಎಷ್ಟೇ ಅನಾದಣೆಗೆ ಗುರಿಯಾದರೂ ಇದು ಕನ್ನಡಭಾಷೆಯ ಮಾನಸ್ತಂಬ! ಕನ್ನಡಭಾಷೆಯ ಪ್ರಾಚೀನತೆ ಹಾಗೂ ಪ್ರಬುದ್ಧತೆಯನ್ನು ಪ್ರತಿಪಾದಿಸಲು ಇರುವ ಏಕೈಕ ಜೀವಂತ ದಾಖಲೆ!!

   ತನ್ನದೇ ಆದ ತಾಂತ್ರಿಕ ಕಾರಣದಿಂದಾಗಿ ಈ ಗ್ರಂಥವು ಓದುಗರಿಗೆ ಬಹಳ ಕಠಿಣವಾದ ಕಾವ್ಯವೆನಿಸಿದರೂ ಇದೊಂದು ಜಗತ್ತಿನ ಜ್ಞಾನಭಂಡಾರ. ಆಧುನಿಕ ವಿಜ್ಞಾನದ ಎಲ್ಲರೀತಿಯ ತಂತ್ರಜ್ಞಾನದ ಮಾಹಿತಿಯೂ ಇದರಲ್ಲಿ ಅಡಕವಾಗಿವೆ. ಯಾರೊಬ್ಬರೂ ನಾಶಪಡಿಸಲಾಗದ ೩೬೩ ಮತಧರ್ಮಗಳ ವಿವರಗಳು ಇದರಲ್ಲಿ ಸಮಾವೇಶವಾಗಿವೆ. ೧೨೦೦ ವರ್ಷಗಳ ಹಿಂದಿನ ಜಾಗತಿಕ ಪರಿಸರದಲ್ಲಿ ಪ್ರಚಲಿತವಿದ್ದ ೭೧೮ಭಾಷೆಗಳ ಸಾಹಿತ್ಯ ಸಾಗರವು ಈ ಗ್ರಂಥದಲ್ಲಿ ಅಡಕವಾಗಿದೆ. ಇದನ್ನು ಅಲ್ಲಗಳೆಯಲು ಈಗ ಯಾಗಿಗೂ ಸಾಧ್ಯವಿಲ್ಲವಾಗಿದೆ!

  ಸರ್ವಭಾಷಾಮಯೀಭಾಷಾ ಕನ್ನಡ ವರ್ಣಮಾಲೆಯ ೬೪ ಅಕ್ಷರಗಳಿಗೆ ಅನ್ವಯವಾಗುವ ೧ ರಿಂದ ೬೪ ಅಂಕಿಗಳನ್ನು ಉದ್ದಸಾಲು ೨೭ ; ಅಡ್ಡಸಾಲು ೨೭ ರಂತೆ ಒಂಟ್ಟು ೭೨೯ ಚೌಕಗಳಲ್ಲಿ ಸೂತ್ರಬದ್ಧವಾಗಿ ತುಂಬಿಸಿ ರಚಿಸಲಾಗಿರುವ  ಈ ಅಂಕಕಾವ್ಯವನ್ನು ಓದಲು ಸುಮಾರು ೪೦ ಬಂಧಗಳಿವೆ. ೬೦೦೦ ಸೂತ್ರಗಳನ್ನು ಬಳಸಿ ಈ ಅಂಕಕಾವ್ಯವನ್ನು ರಚಿಸಲಾಗಿದೆ. ನೂರುಸಾವಿರ ಲಕ್ಷಕೋಟಿ ಶ್ಲೋಕಗಳ ವ್ಯಾಪ್ತಿಯಲ್ಲಿರುವ  ೭೧೮ ಭಾಷೆಗಳಿಗೆ ಸೇರಿದ ಸಕಲ ಸಾಹಿಯ್ಯವನ್ನೂ ಒಳಗೊಂಡ ಈ ಕಾವ್ಯದ ಮೂಲ ಕನ್ನಡ ಸಾಂಗತ್ಯ ಪದ್ಯಗಳ ಒಟ್ಟು ಸಂಖ್ಯೆ: ಆರುಲಕ್ಷ! ಇದರಲ್ಲಿ ೬೦೦೦ ಪ್ರಶ್ನೆಗಳಿಗೆ ಉತ್ತರವಿದೆಯೆಂದು ಕವಿಯು ಘೋಷಿಸಿದ್ದಾನೆ. ಕಾವ್ಯವು ೯ ಖಂಡಗಳಾಗಿ ವಿಂಗಡಣೆಯಾಗಿದೆ. ಪ್ರತಿಯೊಂದು ಖಂಡದಲ್ಲಿಯೂ ಹಲವಾರು ಅಧ್ಯಾಯಗಳು ಇರುತ್ತವೆ. ಮಂಗಳಪ್ರಾಭೃತವೆಂದು ಹೆಸರಿರುವ ಪ್ರಥಮಖಂಡದಲ್ಲಿ ೫೯ ಅಧ್ಯಾಯಗಳಿವೆ.

  ಸಿರಿಭೂವಲಯದ ಪ್ರಥಮಖಂಡದ ೫೯ ಅಧ್ಯಾಯಗಳಿಗೆ ಸಂಬಂಧಿಸಿದಂತೆ ಸೀಮಿತ ಪರಿಧಿಯಲ್ಲಿ ಸಾಧ್ಯವಿರುವ ಮಾಹಿತಿಗಳನ್ನು ಸಂಗ್ರಹಿಸಿ, ಅಂತರ್ಸಾಹಿತ್ಯವನ್ನು ಬಿಡಿಸಿ; ೭ ಸರಳ ಪರಿಚಯಕೃತಿಗಳ ನಿರೂಪಣೆ ಮಾಡಿದ್ದಾಗಿದೆ. ಈಗ ಇವುಗಳ ಪೈಕಿ ಕೆಲವು ಲಭ್ಯವಿಲ್ಲ. ಇದನ್ನು ಗಮನಿಸಿ ಜನಸಾಮಾನ್ಯ ಓದುಗರ ಅಗತ್ಯಕ್ಕೆ ಬೇಕಾದ ಮಾಹಿತಿಗಳನ್ನು ಒಂದೆಡೆ ಸಂಗ್ರಹಿಸಿ ಜಗತ್ತಿನ ಹತ್ತನೇ ಅಚ್ಚರಿ ಎಂಬ ಪರಿಚಯಕೃತಿಯನ್ನು ರೂಪಿಸಲಾಗಿದೆ. ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಇದೊಂದು ಉಪಯುಕ್ತ ಕೈಪಿಡಿ. ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಸಾಮಾನ್ಯ ಓದುಗರಿಗಾಗಿ ಸಂಕ್ಷಿಪ್ತ ಸಿರಿಭೂವಲಯ ಎಂಬ ಕಿರುಹೊತ್ತಿಗೆಯನ್ನೂ ಹೊರತರಲಾಗಿದೆ.  ಸಿರಿಭೂವಲಯದ ಅಂತರ್ಸಾಹಿತ್ಯದ ಮೂಲಕ ಹೆಚ್ಚಿನ ಸಂಶೋಧನೆ ಮಾಡುವ ಆಸಕ್ತಿ ಹೊಂದಿರುವವರು ಜಗತ್ತಿನ ಹತ್ತನೇ ಅಚ್ಚರಿಯೊಂದಿಗೆ ಸಿರಿಭೂವಲಯಸಾರ, ಸಿರಿಭೂವಲಯಸಾಗರರತ್ನಮಂಜೂಷ, ಸಿರಿಭೂವಲಯ ಸಾಗರರತ್ನಮಂಜೂಷ, ೨. ಇವುಗಳನ್ನು ಪೂರ್ಣವಾಗಿ ಗಮನಿಸುವುದು ಅಗತ್ಯವಾಗಿದೆ.

  ಅಶ್ವಗತಿ ಹಾಗೂ ಸ್ತಂಬಕಾವ್ಯರೂಪದಲ್ಲಿ ದೊರೆತಿರುವ ಪ್ರಾಕೃತ; ಸಂಸ್ಕೃತ; ಕನ್ನಡ ಹಾಗೂ ಇತರ ಹಲವಾರು ಭಾಷೆಗಳ ಅಂತರ್ಸಾಹಿತ್ಯವನ್ನು ಕ್ರಮಬದ್ಧವಾಗಿ ಒಂದೆಡೆ ಸಂಗ್ರಹಿಸಿ; ಅವುಗಳನ್ನು ವಿಶ್ಲೇಷಿಸುವ ಕಾರ್ಯವನ್ನು ಸಂಬಂಧಿಸಿದ ಭಾಷಾ ವಿಶಾರದರು ಆಸಕ್ತಿವಹಿಸಿ ಮಾಡಬೆಕಿದೆ.
 
  ಆತ್ಮೀಯ ಓದುಗರೇ, ಇದುವರೆವಿಗೂ ನೀವು ಈ ಜಗದ ಅಚ್ಚರಿಯೆನಿಸಿರುವ ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯದ ಸರಳ ಪರಿಚಯ ಕೃತಿಗಳಿಗೆ ಸಂಬಂಧಿಸಿದ ಪ್ರಮುಖವಾದ ಮಾಹಿತಿಗಳನ್ನು  ಓದಿ ತಿಳಿದಂತಾಯಿತು. ಈ ಕಾವ್ಯದಲ್ಲಿ ಕವಿಯು ಒಂದೆಡೆ ವಿದ್ಯೆಯನ್ನು ಕಲಿಯಲು ೧೨ ವರ್ಷಗಳಕಾಲ ಏಕೆ? ಇಲ್ಲಿ ಬನ್ನಿ ಒಂದು ಅಂತರ್ಮುಹೂರ್ತದಲ್ಲಿ (ಸುಮಾರು ೪೭ ನಿಮಿಷಗಳ ಅವಧಿ) ಎಲ್ಲವನ್ನೂ ತಿಳಿಸಿಕೊಡುತ್ತೇನೆ! ಎಂದು ಘೋಷಿಸಿರುವುದಿದೆ! ಜಗತ್ತಿನ ಜ್ಞಾನ ಸಾಗರದಲ್ಲಿ ಇದೊಂದು ಸವಾಲಾಗಿದೆ!
 
  ಪಂಡಿತರಿರಲೀ; ಪಾಮರರಿರಲೀ ಯಾರೊಬ್ಬರೂ ಈ ಮಾತನ್ನು ತಕ್ಷಣವೇ ಒಪ್ಪಿಕೊಳ್ಳ್ಳುವುದಿಲ್ಲವೆಂಬುದು ನಿಶ್ಚಯ!! ಈ ಜಗತ್ತಿನಲ್ಲಿ ವ್ಯಕ್ತಿಜೀವನದ ಸೂಕ್ಷ್ಮ ಮರ್ಮವನ್ನು ಅರಿತವರು ಮಾತ್ರ ಇದನ್ನು ಒಪ್ಪಿಕೊಳ್ಳಲು ಸಾಧ್ಯ!! ಸಿರಿ; ಸಂಪತ್ತು; ಸೌಂದರ್ಯ, ಸಾಮರ್ಥ್ಯ, ಅಧಿಕಾರ, ಆರೋಗ್ಯ, ವಿದ್ಯೆ; ಬುದ್ಧಿ, ಮುಂತಾದುವು ಇಲ್ಲದೇ ಇಹಜೀವನದಲ್ಲಿ ಸಾರ್ಥಕತೆ ಸಿಗದೆಂಬುದು ಬಹುಜನರ ಭಾವನೆ! ಈ ಭಾವನೆಯು ಅರೆ ಸತ್ಯ; ಅರೆ ಮಿಥ್ಯ! ಇವುಗಳು ದೇಹಕ್ಕೆ ಬೇಕು; ಆತ್ಮಕ್ಕೆ ಬೇಡ!
 
  ಜಗತ್ತಿನ ಸೃಷ್ಟಿಸ್ಥಿತಿಲಯಗಳ ಸಮರ್ಪಕವಾದ ಜ್ಞಾನವನ್ನು ಹೊಂದುವುದೇ ನಿಜವಾದ ಜೀವನ ಸಾರ್ಥಕತೆಯಾಗಿದೆ. ಈ ಪರಿಚಯಕೃತಿಯನ್ನು ಓದಲು ನೀವು ತೆಗೆದುಕೊಳ್ಳುವ ಸಮಯವು ಎಷ್ಟೇ ಇರಲೀ; ನಿಮ್ಮ ಗ್ರಹಿಕೆಗೆ ಸಿಕ್ಕಿದ ವಿಚಾರಗಳನ್ನು ಕುರಿತು ನೀವು ಕೆಲವು ಸಮಯವಾದರೂ ಯೋಚಿಸಿದರೆ ನಿಮಗೆ ಕೂಡಲೇ ಜಗತ್ತಿನ ಸೃಷ್ಟಿಸ್ಥಿತಿಲಯಗಳ ಸಮರ್ಪಕವಾದ ಜ್ಞಾನವು ಅನುಭವಕ್ಕೆ ಬರುತ್ತದೆ. ಈ ಯೋಚನೆಯ ಅವಧಿಯು ನಿಜಕ್ಕೂ ೪೭ ನಿಮಿಷಗಳನ್ನು ಮೀರುವುದಿಲ್ಲ! ಇದು ನನ್ನ ಸ್ವಾನುಭವ. ಅಲ್ಲಿಗೆ ಕವಿವಾಣಿಯು ಸತ್ಯವೆಂದು ನನಗೆ ಖಚಿತವಾಯಿತು.! ನೀವೂ ಇದನ್ನು ಪರೀಕ್ಷಿಸಲು ಸ್ವತಂತ್ರರಿದ್ದೀರಿ!

  ವೈಯಕ್ತಿಕವಾಗಿ ನನಗೆ ಈ ಸತ್ಯದರ್ಶನವಾಗುವ ದಿಸೆಯಲ್ಲಿ ಕಾರಣವಾದ ಕುಮುದೇಂದು ಸಹಿತವಾದ ಸಕಲ ಪ್ರಾಚೀನ ಋಷಿ ಮುನಿಗಳಿಗೆ; ಸಿರಿಭೂವಲಯಕ್ಕೆ; ನನ್ನನ್ನು ಈ ಸಿರಿಭೂವಲಯದ ಪರಿಧಿಗೆ ಒತ್ತಾಯ ಪೂರ್ವಕವಾಗಿ ಸೇರಿಸಿದ ಹಿರಿಯ ಚೇತನ ದಿ| ಕೆ. ಅನಂತ ಸುಬ್ಬರಾಯರಿಗೆ, ಅಧ್ಯಯನಕ್ಕೆ ನೆರವಾಗಿ; ಈ ಸಂಬಂಧದ ನನ್ನ ಬರಹವನ್ನು ಪ್ರಕಟಿಸುವ ಊಹಾತೀತವಾದ ಕಾರ್ಯಕ್ಕೆ ಕೈಹಾಕಿ ಯಶಸ್ಸುಗಳಿಸಿದ ನನ್ನಾಕೆ ಸೌ|| ಗಿರಿಜೆಗೆ; ಈ ಫಲವನ್ನು ಸಾರ್ಥಕ ಪಡಿಸಿಕೊಳ್ಳ್ಳುವ ಉತ್ಸಾಹ ತೋರಿಸಿರುವ ಅಭಿಮಾನೀ ಓದುಗರಿಗೆ ಸಿರಿಭೂವಲಯದ ಸುಧಾರ್ಥಿಯ ನಮನಗಳು.

   ಸಿರಿಭೂವಲಯವು ಇದುವರೆವಿಗೂ ಕೇವಲ ಕೆಲವೇ ಜನಗಳ ಆಸಕ್ತಿಯ ವಿಚಾರವಾಗಿತ್ತು. ಈಗ ಪಸರಿಸರವು ಸಂಪೂರ್ಣವಾಗಿ ಬದಲಾಗಿದೆ! ವೈದ್ಯಕೀಯ; ವಿದ್ಯುತ್, ಗಣಕಯಂತ್ರಕ್ರಮ; ಗಣಿತಶಾಸ್ತ್ರ ಮುಂತಾದ ಬೇರೆ ಬೇರೆ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯಗಳ ಪದವಿ ಪಡೆದ ಪ್ರತಿಭಾಶಾಲಿ  ಯುವ ಸಮೂಹವು ಈಗ ಈ ಜಗದ ಅಚ್ಚರಿಯತ್ತ ಗಮನಹರಿಸಿ; ಮುಂದಿನ ಸಂಶೋಧನೆಗೆ ಅಗತ್ಯವಾದ ಸಿದ್ಧತೆಗೆ ಮುಂದಾಗಿದೆ! ಈ ಪೈಕಿ ಕಾರ್ಕಳದ ಸಮೀಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಶ್ರೀ ಹೇಮಂತ ಕುಮಾರ್ ಹಾಗೂ ಮಿತ್ರರ ತಂಡವು ವಹಿಸಿರುವ ಆಸಕ್ತಿಯು ಬಹಳ ಸಂತೋಷದಾಯಕವಾದುದು. ಇವರ ಪ್ರಯತ್ನದಿಂದ ಈ ಪ್ರಾಚೀನ ಕನ್ನಡ ಅಂಕ ಕಾವ್ಯದ ಊಹಾತೀತವಾದ ಸಾಮರ್ಥ್ಯದ ಪರಿಚಯವು ಜಗತ್ತಿನಾದ್ಯಂತ ವಿದ್ವಜ್ಜನರ ಗಮನಸೆಳೆದು; ಕವಿ ಕುಮುದೇಂದುವಿನ ಸರ್ವಜ್ಞತ್ವವು ಲೋಕವಿದಿತವಾಗುವುದು ನಿಶ್ಚಿತವೆಂದು ಭಾವಿಸಿದ್ದೇನೆ.  ಸಿರಿಭೂವಲಯದ ವಿಸ್ತ್ರುತ ಪರಿಚಯಕೃತಿ  ಜಗತ್ತಿನ ಹತ್ತನೇ ಅಚ್ಚರಿ ಹಾಗೂ ಸಂಕ್ಷಿಪ್ತ ಸಿರಿಭೂವಲಯವು ಮುಂದಿನ ಸಂಕ್ರಾತಿಯ ವೇಳೆಗೆ ಓದುಗರ ಕೈಸೇರಲಿದೆಯೆಂದು ತಿಳಿಸಲು ಸಂತೋಷಿಸುತ್ತೇನೆ.
                                             ಸಿರಿಭೂವಲಯದ ಸುಧಾರ್ಥಿ.

ಹೆಚ್ಚಿನ ಮಾಹಿತಿಗಳಿಗೆ ಸಂಪರ್ಕಿಸಿರಿ: ೯೪೪೯೯೪೬೨೮೦, ೦೮೧೭೨ ೨೫೭೧೮೬.
ಮಿಂಚಂಚೆ: sudharthyhassan@gmail.com