Pages

Tuesday, October 13, 2015

ದೇವಾಲಯಗಳಲ್ಲಿ ಶುಷ್ಕ ಪೂಜೆಗಳಿಗಿಂತ ಜ್ಞಾನಪ್ರಸರಣ ತುರ್ತಾಗಿ ನಡೆಯಬೇಕಾಗಿದೆ

 ಶರನ್ನವರಾತ್ರಿಯ  ಮೊದಲದಿನವಾದ ಇಂದು ವಿಜಯವಾಣಿಯಲ್ಲಿ ಡಾ.ಕೆ.ಎಸ್.ನಾರಾಯಣಾಚಾರ್ಯರ ಮನದಾಳದ ನೇರ-ದಿಟ್ಟ  ನುಡಿಗಳನ್ನು ಓದಿದ ಮೇಲೆ ದಿಕ್ಕೆಟ್ಟ ಜನರಿಗೆ ಸೂಕ್ತ ಮಾರ್ಗದರ್ಶಕರು ಈ ದೇಶದಲ್ಲಿ  ಇನ್ನೂ  ಇದ್ದಾರೆಂಬ ಭಾವನೆಯಿಂದ ನನ್ನ ಚಟುವಟಿಕೆಗಳಿಗೆ ಇನ್ನಷ್ಟು ವೇಗವನ್ನು ಕೊಡಬೇಕೆಂದು ಮನದಲ್ಲೇ ನಿರ್ಧರಿಸಿಕೊಂಡೆ.
ಈ ದೇಶ ಉದ್ಧಾರವಾಗಬೇಕಾದರೆ..... ಲೇಖನದ ಕೊನೆಯ ಮಾತು ದೇವಾಲಯಗಳಲ್ಲಿ  ಶುಷ್ಕ ಪೂಜೆಗಳಿಗಿಂತ ಜ್ಞಾನಪ್ರಸರಣ ತುರ್ತಾಗಿ ನಡೆಯಬೇಕಾಗಿದೆ ಎಂಬ ಮಾತು ಇಂದಿಗೆ ಅತ್ಯಂತ ಮಹತ್ವವನ್ನು ಪಡೆಯುತ್ತದೆ. ನನಗೆ ಲೇಖನ ಓದುವಾಗ ಹಾಸನದ ಶಂಕರಮಠದಲ್ಲಿ ಈಗ್ಗೆ ಸುಮಾರು ಎಂಟು ಹತ್ತು ವರ್ಷಗಳಲ್ಲಿ ವಿಜಯದಶಮಿ ಸಂದರ್ಭಗಳಲ್ಲಿ ನಾವು ಆಯೋಜಿಸುತ್ತಿದ್ದ  ಜ್ಞಾನಯಜ್ಞದ ನೆನಪಾಗುತ್ತಿದೆ. ಗದಗ್ ಶ್ರೀರಾಮಕೃಷ್ಣಾಶ್ರಮದ ಪೂಜ್ಯ ನಿರ್ಭಯಾನಂದರು, ತುಮಕೂರಿನ ಪೂಜ್ಯ ವೀರೇಶಾನಂದರು, ಬೆಂಗಳೂರು ಭವತಾರಣಿ ಆಶ್ರಮದ ಮಾತಾಜಿ ವಿವೇಕಮಯೀ, ಚಿನ್ಮಯಾಮಿಷನ್ನಿನ ಬ್ರಹ್ಮಚಾರಿ ಸುಧರ್ಮಚೈತನ್ಯರು, ಹುಬ್ಬಳ್ಳಿಯ ಪೂಜ್ಯ ಚಿದ್ರೂಪಾನಂದಸರಸ್ವತೀ, ಬೆಂಗಳೂರಿನ ವೇದಾಧ್ಯಾಯೀ ಶ್ರೀಸುಧಾಕರಶರ್ಮರು. . . . ಇವರೆಲ್ಲಾ ಬಂದು ನಡೆಸಿಕೊಡುತ್ತಿದ್ದ ಉಪನ್ಯಾಸಗಳು! ಅಬ್ಬಾ! ಒಂದೇ ಎರಡೇ!!
ಈಗಲೂ ಹಲವು ಮಿತ್ರರು ನನ್ನನ್ನು ಆಗಿಂದಾಗ್ಗೆ ಕೇಳುತ್ತಾರೆ ಯಾಕೆ ಉಪನ್ಯಾಸಗಳನ್ನು ನಡೆಸುವುದನ್ನು ನಿಲ್ಲಿಸಿ ಬಿಟ್ಟಿರಿ? ನಿಲ್ಲಿಸಿಲ್ಲ. ನನ್ನ ಕಾರ್ಯಚಟುವಟಿಕೆಗಳಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ನಮ್ಮ ಮನೆ ಈಶಾವಾಸ್ಯಮ್ ನಲ್ಲಿ ಪ್ರತೀ ದಿನ ಸತ್ಸಂಗದಲ್ಲಿ ವೇದಭಾರತಿಯು ಇದೇ ಕೆಲಸವನ್ನು ಮಾಡುತ್ತಿದೆ-ಎನ್ನುತ್ತೇನೆ.
ಹೌದು ಶ್ರೀ ನಾರಾಯಣಾಚಾರ್ಯರ ಮಾತು ಎಷ್ಟು ಅರ್ಥಗರ್ಭಿತ! ದೇವಾಲಯಗಳಲ್ಲಿ  ಶುಷ್ಕ ಪೂಜೆಗಳಿಗಿಂತ ಜ್ಞಾನಪ್ರಸರಣ ತುರ್ತಾಗಿ ನಡೆಯಬೇಕಾಗಿದೆ ಇಂದಿನಿಂದ ಬಹುತೇಕ ದೇವಾಲಯಗಳಲ್ಲಿ ದುರ್ಗಾಮಾತೆಗೆ ಪ್ರತೀ ದಿನ ಒಂದೊಂದು ಅಲಂಕಾರ, ಹವನ-ಹೋಮಗಳು, ಪೂಜೆ ಪುನಸ್ಕಾರಗಳು ನಡೆಯುತ್ತವೆ. ಜನರು ಸಾಲುಗಟ್ಟಿ ದುರ್ಗೆಯ ದರ್ಶನ ಪಡೆಯುತ್ತಾರೆ. ಉತ್ತಮ ಕಾರ್ಯವೇ ಆಗಿದೆ. ಆದರೆ ಅಷ್ಟೇ ಸಾಕೇ? ಇವೆಲ್ಲವೂ ನಾವು ನೆಮ್ಮದಿಯಾಗಿರಬೇಕೆಂದು ಮಾಡುವ ದೇವತಾ ಕಾರ್ಯಗಳು ತಾನೇ? ಆದರೆ ನಿಜವಾಗಿ ನಮ್ಮ ಮನೆಗಳಲ್ಲಿ ನೆಮ್ಮದಿ ಇದೆಯೇ? ಸುಖ ಇದೆಯೇ? ಆನಂದಕ್ಕೆ ಆಸ್ಪದ ಇದೆಯೇ? ಮಕ್ಕಳೇ ಮನೆಗೆ ಆಸ್ತಿ ಅಲ್ಲವೇ? ಅವರು ನಿಜವಾಗಿ ಆಸ್ತಿಯಾಗಿದ್ದಾರಾ? ಒಂದು ವೇಳೆ ನಮ್ಮ ನಿರೀಕ್ಷೆಗೆ ತಕ್ಕಂತೆ ಅವರಿಲ್ಲವೆಂದಾದರೆ ತಪ್ಪು ಯಾರದ್ದು? ಮಕ್ಕಳದ್ದೇ? ಅಥವಾ ಪೋಷಕರದ್ದೇ?
ದೇವಾಲಯಗಳಲ್ಲಿ ನೋಡಿ, ಸಾಮಾನ್ಯವಾಗಿ ನಲವತ್ತು ವಯಸ್ಸಿನ ಮೇಲ್ಪಟ್ಟವರಿಂದಲೇ ತುಂಬಿರುತ್ತದೆ! ಉಪನ್ಯಾಸ ಕಾರ್ಯಕ್ರಮಗಳಿಗೆ ಬರುವವರು ಯಾರು? ಕಿವಿ ಮಂದವಾಗಿರುವ             ದೃಷ್ಟಿ ಕಮ್ಮಿಯಾಗಿರುವ! ಅರವತ್ತು ದಾಟಿದ ಎಪ್ಪತ್ತು ಎಂಬತ್ತರ ವೃದ್ಧರಿಗೆ ಉಪನ್ಯಾಸ! ಅವರಿಗೆ ವಿಷಯ ಯಾವುದಿರಬೇಕೋ ಅದಿರುತ್ತದೆ. ಆದರೆ ನಮ್ಮ ಯುವಕರು ಉಪನ್ಯಾಸಗಳಿಗೆ ಬರುತ್ತಾರಾ? ಬರುವುದಿಲ್ಲವಾದರೆ ಕಾgಣ ಏನು? ಅವರನ್ನು ಆಕರ್ಷಿಸುತ್ತಿರುವ ವಿಷಯಗಳು ಯಾವುವು? ಆಕರ್ಷಣೆಗೆ ಒಳಗಾಗುವ ವಿಷಯಗಳ ಪ್ರಭಾವ ಏನು? ಯುವಕರು ನಮ್ಮ ದೇಶದ ಸಂಪತ್ತೆಂಬುದು ನಮ್ಮ ನೆಚ್ಚಿನ ಪ್ರಧಾನಿಯವರ ಆಶಯ. ಆದರೆ ಎಷ್ಟು ಯುವಕರು ನಮ್ಮ ದೇಶಕ್ಕೆ ಆಸ್ತಿಯಾಗಿದ್ದಾರೆ! ಯುವ ಶಕ್ತಿಯ ಎಷ್ಟುಭಾಗ ದೂರದರ್ಶನದ ಮುಂದೆ ಕ್ರಿಕೆಟ್ ಪಂದ್ಯ ನೋಡುತ್ತಲೋ, ಅಂತರ್ಜಾಲದಲ್ಲಿ ಬೆತ್ತಲೆದೃಶ್ಯ ನೋಡುವುದರಲ್ಲೋ ಕಳೆದು ಹೋಗಿದೆ? ನಮ್ಮ ದೇಶದ ಎಷ್ಟು ಯುವಕರಿಗೆ ದೇಶಭಕ್ತಿ ಇದೆ? ದೇಶಕ್ಕಾಗಿ ನನ್ನ ಬದುಕು !! ಎನ್ನುವ ಮನೋಭಾವದ ಯುವಕರೆಷ್ಟು ಜನರಿದ್ದಾರೆ!!
ದೇಶದ ಇಂತಾ ದೊಡ್ದ ಯುವಸಂಪತ್ತಿನ ಉಪಯೋಗ ದೇಶಕ್ಕೆ ಸರಿಯಾಗಿ ಆಗಬೇಡವೇ? ಹಳ್ಳಿಗಳಲ್ಲಂತೂ ಪುಡಾರಿಗಳ ಹಿಂದೆ ಸುತ್ತುವ ಯುವಕರನ್ನು ನೋಡಿದಾಗ ಬಲು ದುಃಖವಾಗುತ್ತದೆ. ಇವರಲ್ಲಿ ಜಾಗೃತಿ ಮಾಡುವುದು ಯಾವಾಗ? ಯಾರು ಜಾಗೃತಿ ಕೆಲಸ ಮಾಡಬೇಕು!
ನಿಜವಾಗಿ ಅಂತಾ ಕೆಲಸ ಕೂಡ ನಡೆಯುತ್ತಿದೆ. ರಾ.ಸ್ವ. ಸಂಘ , ಪತಂಜಲಿ ಯೋಗ ಪೀಠ, ರಾಮಕೃಷ್ಣ ಮಿಷನ್, ಮುಂತಾದ ಸಂಘಟನೆಗಳು ಮಾಡುತ್ತಿವೆ. ಆದರೂ ಸಾಲದು. ನಮ್ಮ ಜನಸಂಖ್ಯೆಗೆ ಹೋಲಿಸಿದಾಗ ಕೆಲಸದ ವೇಗ ಇನ್ನೂ ಹೆಚ್ಚಬೇಕು.
ನಾರಾಯಣಾಚಾರ್ಯರು ತಮ್ಮ ಲೇಖನದಲ್ಲಿ  ದೇಶವನ್ನು ಕಾಡುತ್ತಿರುವ ಹಲಾವಾರು ಸಮಸ್ಯೆಗಳ ಬಗ್ಗೆ ಓದುಗರ ಕಣ್ ತೆರೆಸುವ ಪ್ರಯತ್ನ ಮಾಡಿದ್ದಾರೆ. ಪ್ರತಿಯೊಂದು ವಿಷಯಗಳೂ ಒಂದು ಲೇಖನ ಬರೆಯುವಷ್ಟು ಮಹತ್ವ ಉಳ್ಳ ವಿಷಯಗಳೇ ಆಗಿವೆ. ಕೊನೆಯಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಅವರ ಒಂದು ಸಲಹೆ ಗಮನಾರ್ಹ.  ಸಾಮಾಜಿಕ ಸಾಮರಸ್ಯಕ್ಕಾಗಿ ನಾವು ಹಳಬರ ಮಾರ್ಗದರ್ಶನಕ್ಕೆ ಮೊರೆ ಹೋಗಬೇಕು. ಶ್ರೀರಾಮಕೃಷ್ಣ, ವಿವೇಕಾನಂದ,ನಾರಾಯಣಗುರು, ಫುಲೆ, ಅಮೃತಾನಂದಮಯೀ. ಚಿನ್ಮಯಾನಂದ, ದಯಾನಂದರ ವಿಚಾರಧಾರೆಗಳು ಒಟ್ಟಾಗಿ ಇತ್ತ ಶ್ರಮಿಸಬೇಕು
ಈ ಮೇಲಿನ ಸಲಹೆಯಿಂದ ನನಗೆಷ್ಟು ಸಮಾಧಾನವಾಗಿದೆ ಎಂದರೆ ನಾವೀಗ ವೇದಭಾರತಿ ಮತ್ತು ಪತಂಜಲಿ ಯೋಗ ಪೀಠ ಒಂದು ವೇದಿಕೆಯಲ್ಲಿ ಎಲ್ಲರಿಗಾಗಿ ವೇದ, ಎಲ್ಲರಿಗಾಗಿ ಯೋಗ ಎಂಬ ಉದ್ದೇಶದೊಡನೆ ಚಟುವಟಿಕೆಯನ್ನು ಈ ವರ್ಷ ವಿಶ್ವ ಯೋಗದಿನದಿಂದ ಆರಂಭಿಸಿದ್ದೇವೆ. ಈಗಾಗಲೇ ನೂರಾರು ಜನರಿಗೆ ಯೋಗದ ತರಬೇತಿ, ವೇದದ ಅರಿವು ಮೂಡಿಸುವ ಕೆಲಸ ಸಾಗಿದೆ  ವೇದ-ಯೋಗ ಸಂಗಮದ ಹೆಸರಲ್ಲಿ. ಜನರ ಸಹಕಾರ ಪಡೆದು ನಮ್ಮ ಕಾರ್ಯವೇಗವನ್ನು ಹೆಚ್ಚಿಸಬೇಕೆಂಬ ಉದ್ದೇಶವೂ ಇದೆ.
-ಹರಿಹರಪುರಶ್ರೀಧರ್
ಸಂಯೋಜಕ, ವೇದಭಾರತೀ, ಹಾಸನ

Monday, October 12, 2015

ವೈದಿಕ ಧರ್ಮಾಭಿಮಾನೀ ಮಿತ್ರರೇ, ನಿಮ್ಮಲ್ಲೊಂದು ಮನವಿ.

ವೈದಿಕ ಧರ್ಮಾಭಿಮಾನೀ  ಮಿತ್ರರೇ,
ನಿಮ್ಮಲ್ಲೊಂದು ಮನವಿ.
ವೈದಿಕ ಧರ್ಮವು ನಿಂತ ನೀರಲ್ಲ. ಅದು ಗಂಗೆ. ಯಾವಾಗಲೂ ಹರಿಯುತ್ತಿದ್ದು ಅದರ ಸಂಪರ್ಕಕ್ಕೆ ಬಂದದ್ದನ್ನೆಲ್ಲಾ ಪಾವನ ಗೊಳಿಸುತ್ತಾ ತನ್ನನ್ನೂ ಕಾಲಕಾಲಕ್ಕೆ ಪವಿತ್ರಗೊಳಿಸಿಕೊಳ್ಳುತ್ತಾ ಸದಾಕಾಲ ಜಗತ್ತಿಗೆ ಹಿತವನ್ನುಂಟುಮಾಡುವುದೇ ವೈದಿಕ ಧರ್ಮದ ವೈಶಿಷ್ಠ್ಯ.
ವೇದವೇ ನಮಗೆ ಆಧಾರ. ಆದರೆ ವೇದಕ್ಕೆ ವಿರುದ್ಧವಾದ ಹಲವು ಆಚರಣೆಗಳೂ ಸಹ ಕಾಲಗತಿಯಲ್ಲಿ ರೂಢಿಯಲ್ಲಿ  ಸೇರಿಹೋಗಿರುವುದು ಸುಳ್ಳಲ್ಲ. ಅವುಗಳಲ್ಲಿ ಕೆಲವು ಯಾರಿಗೂ ಹಾನಿಮಾಡದೆ ಆಚರಿಸುವವನಿಗೆ ನೆಮ್ಮದಿ ಕೊಟ್ಟಿದ್ದರೆ  ಇನ್ನು ಕೆಲವು ಮಾನವೀಯತೆಗೇ ಕೊಡಲಿ ಪೆಟ್ಟು ಕೊಡುವಂತಹ ಆಚರಣೆಗಳು !
ಉದಾಹರಣೆಗೆ ವಿಗ್ರಹಾರಾಧನೆ. ಎಲ್ಲಿಯವರಗೆ ಇದು ವ್ಯಕ್ತಿಯ ನಿತ್ಯಬದುಕಿನಲ್ಲಿ ಮನಸ್ಸಿನ ನೆಮ್ಮದಿಗೆ ಅಗತ್ಯವೆನಿಸಿ ಆಚರಿಸಲ್ಪಡುತ್ತದೋ ಅಲ್ಲಿಯ ವರಗೆ ಈ ಬಗ್ಗೆ ಚರ್ಚೆ ಅನಗತ್ಯ. ಯಾವಾಗ ದೇವಾಲಯಗಳಲ್ಲಿ ವ್ಯಾಪಾರೀ ಮನೋಭಾವವಾಗಿ ಮಾರ್ಪಡುತ್ತದೋ ಆಗ ಅದು ಚರ್ಚೆಯ ವಿಷಯವಾಗುತ್ತದೆ. ಅಲ್ಲದೆ  ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ  ಕೆಲವರಿಗೆ ದೇವಾಲಯ ಪ್ರವೇಷವನ್ನೇ ನಿರ್ಬಂಧಿಸುವ ಪದ್ದತಿಯು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ಕಾರಣ ವಾಗುತ್ತದೆ

ಮೇಲು-ಕೀಳು ಭಾವನೆ :
 ಎಲ್ಲರನ್ನೂ ಸಮಾನವಾಗಿ ಕಾಣುವ ಹಲವು ವೇದ ಮಂತ್ರಗಳಿದ್ದರೂ ಸಮಾಜದಲ್ಲಿ ಮೇಲು-ಕೀಳು ಭಾವನೆ ಪೂರ್ಣವಾಗಿ ಮಾಯವಾಗಿಲ್ಲ.

ವ್ರತ-ಕತೆಗಳು :

ಹಿಂದಿನಿಂದ ನಡೆದುಬಂದಿರುವ ಕೆಲವು ವ್ರತಕತೆಗಳಿವೆ. ಉದಾಹರಣೆಗೆ ವರಮಹಾಲಕ್ಷ್ಮೀ ವ್ರತ, ಗೌರಿ-ಗಣೇಶ ವ್ರತ, ಅನಂತ ಪದ್ಮನಾಭವ್ರತ. ಇವುಗಳನ್ನು ಕೆಲವರು ತಲೆತಲಾಂತರದಿಂದ ಆಚರಿಸಿಕೊಂಡು ಬಂದಿದ್ದಾರೆ. ಅದು ಅವರ ನಂಬಿಕೆ. ಆದರೆ ಇತ್ತೀಚೆಗೆ ಸಂಕಷ್ಟಹರ ಗಣಪತಿ ವ್ರತದಂತಾ ಕೆಲವು ಸಾಮೂಹಿಕ ವ್ರತಗಳು ಆರಂಭವಾಗಿವೆ. ಇವು ಸಹ ಚರ್ಚೆ ಮಾಡಲು ಅರ್ಹವಾಗಿವೆ

ಮಡೆಉರುಳು :
ಇಂತಾ ಅವೈದಿಕ ಆಚರಣೆಯ ಬಗ್ಗೆ ಚರಿಚಿಸಬಾರದೇ?

ಇವಲ್ಲದೆ ಮನುಷ್ಯ-ಮನುಷ್ಯನಲ್ಲಿ ಭೇದಮಾಡುವ ಹಲವು ಆಚರಣೆಗಳು ಇನ್ನೂ ಜೀವಂತವಾಗಿವೆ. ಈ ಬಗ್ಗೆ ಆರೋಗ್ಯಕರವಾದ ಚರ್ಚೆಯಾಗಬಾರದೇ?

ಸಮಾಜದ ಎಲ್ಲಾ ಸಮಸ್ಯೆಗಳಿಗೂ ವೇದವಿರೋಧಿಗಳದ್ದು ಒಂದೇ ಪ್ರಹಾರ " ವೇದವೇ ಶೋಷಣೆಗೆ ಮೂಲ"

ಹೀಗೆ ಹೇಳುವಾಗ ಅವರಿಗೆ ವೇದದ ಸರಿಯಾದ ಅರಿವಿಲ್ಲವೆಂಬುದು ಸತ್ಯವಾದರೂ  ವೇದದ ಹೆಸರಿನಲ್ಲಿ ನಡೆದಿರುವ ಅವೈದಿಕ ಆಚರಣೆಗಳೇ ಅವರಿಗೆ ಆಹಾರವಾಗಿರುವ ಪರಮ ಸತ್ಯ.  ವೇದಕ್ಕೆ ವಿರುದ್ಧವಾಗಿ ಮಾನವೀಯತೆಗೆ ಧಕ್ಕೆ ತರುವ ಆಚರಣೆಗಳನ್ನು "ಮೌಢ್ಯ" ಎಂದರೆ ತಪ್ಪಾಗಲಾರದು. ಇಂತಹ ಮೌಢ್ಯಗಳನ್ನು ವೇದಾಭಿಮಾನಿಗಳೇ ವಿರೋಧಿಸಿ ಶುದ್ಧ ವೈದಿಕಾಚರಣೆಗಳನ್ನು ರೂಢಿಗೆ ತಂದರೆ ವೇದ ವಿರೋಧಿಗಳಿಗೆ ವಿರೋಧಿಸಲು ವಿಷಯವೇ ಸಿಗಲಾರದು, ಜೊತೆಗೆ ಸಮಾಜದಲ್ಲಿ ಸಮರಸದಿಂದ , ನೆಮ್ಮದಿಯಾಗಿ ಬಾಳಲು ದಾರಿ ತೆರೆದುಕೊಳ್ಳುತ್ತದೆ.
ಈ ದಾರಿಯಲ್ಲಿ ಚರ್ಚೆ ಮಾಡಲು ಬರುವಿರಾ?

ಈ ಸಂಧಿಕಾಲದಲ್ಲಿ ನಾವಿಂತಾ ಚರ್ಚೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಇನ್ನೂ ದೊಡ್ದ ಪೆಟ್ಟು ಬೀಳಬಹುದು.
ಹೀಗೆ ಸಾಮಾಜಿಕ ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ "ಚಿಂತನ-ಮಂಥನ " ನಡೆಸಬೇಕೆಂಬ ಇಚ್ಛೆ ನನ್ನದು. ಹತ್ತಾರುಜನರ ಸಹಮತ ಸಿಕ್ಕರೆ ಅದಕ್ಕೆ ಸರಿಯಾದ ರೂಪು ರೇಶ ಕೊಟ್ಟು, ಅದಕ್ಕೊಂದು ಸ್ಥಳ, ದಿನ ಎಲ್ಲವನ್ನೂ ಅಂತಿಮಗೊಳಿಸಿದರಾಯ್ತು.

ನಾಲ್ಕೈದು ಗಂಟೆಗಳ ಕಾರ್ಯಕ್ರಮವಾದರೂ ಆಗಬೇಕು. ಅದನ್ನು ಯಾವ ಬ್ಯಾನರ್ ನಲ್ಲಿ ಮಾಡ ಬೇಕೆಂಬುದನ್ನು ಮುಂದೆ ತೀರ್ಮಾನಿಸಬಹುದು. ಇಂದಿನ ಸಮಾಜಕ್ಕೆ ಒಪ್ಪುವಂತೆ ಮಾರ್ಗದರ್ಶನ ಮಾಡಲು ಯಾರನ್ನಾದರೂ ಸ್ವಾಮೀಜಿಯವರನ್ನೋ, ಸಾಮಾಜಿಕ ಚಿಂತಕರನ್ನೋ ಮಾರ್ಗದರ್ಶನಕ್ಕೆ ಕರೆಸಬಹುದು

  ಹಾಸನದಲ್ಲಿ ಮಾಡಲು ಒಮ್ಮತ ದೊರೆತರೆ        ನೂರು  ಜನ ಅಭಿಮಾನಿಗಳು ಪಾಲ್ಗೊಂಡ ರೂ ಅವರಿಗೆ ಉಚಿತ    ಊಟೋಪಚಾರದ ಭಾಗ ನನಗಿರಲಿ.ಬೆಂಗಳೂರಿನಲ್ಲೂ  ಆಗಬಹುದು. ಅಲ್ಲಿ ಮಾಡಿದರೂ ವ್ಯವಸ್ಥೆಗೆ ನನ್ನ ಪ್ರಯತ್ನ ಇದ್ದೇ ಇರುತ್ತೆ.
ನಿಮ್ಮ ಅಭಿಪ್ರಾಯ ತಿಳಿಸುವಿರಾ?

Friday, October 9, 2015

ಶ್ರೀ ಸುಧರ್ಮ ಚೈತನ್ಯರು ಕರೆ ಮಾಡಿದಾಗ.....

ಒಂದೆರಡು ವರ್ಷಗಳಿಂದ ಯಾರಿಗಾಗಿ ಹಂಬಲಿಸುತ್ತಿದ್ದೆನೋ, ಅವರಿಂದಲೇ ದೂರವಾಣಿ ಕರೆ ಬಂದಾಗ ಆದ ಸಂತೋಷಕ್ಕೆ ಪಾರವೇ ಇಲ್ಲ. ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ತಿಪಟೂರಿನ ಚಿನ್ಮಯ ಮಿಷನ್ ಆಶ್ರಮದಿಂದ ಹಾಸನಕ್ಕೆ ಬಂದು ಹಲವಾರು ಉಪನ್ಯಾಸಗಳನ್ನು ಮಾಡಿ ಧರ್ಮಾಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅವರು ನೀಡಿದ ಉಪನ್ಯಾಸ "ಸಾಧನಾ ಪಂಚಕ" ವನ್ನು ಅದೆಷ್ಟು ಜನರಿಗೆ ನನ್ನ ವೆಬ್ ಸೈಟ್ ಮೂಲಕ ಕೇಳಿಸಿದ್ದೀನೋ! ಅವರು ಸಾಧನೆಗಾಗಿ ಹಿಮಾಲಯಕ್ಕೆ ಹೋಗಿರಬಹುದೆಂಬ ಅನುಮಾನವಿತ್ತು. ಆದರೂ ದೃಢ ಪಟ್ಟಿರಲಿಲ್ಲ. ಅವರೀಗ ಹರಿದ್ವಾರಕ್ಕೆ 12 ಕಿಲೋ ಮೀಟರ್ ದೂರದಲ್ಲಿರುವ ಸತ್ಯಂ ಸಾಧನ ಕುಟೀರದಲ್ಲಿದ್ದಾರೆ. ಹೇಗೂ ಬಾಬಾ ರಾಮದೇವ್ ಅವರ ಪತಂಜಲಿ ಆಶ್ರಮಕ್ಕೆ ಹರಿದ್ವಾರಕ್ಕೆ ಹೋಗುವ ಕಾರ್ಯಕ್ರಮವಿದೆ.ಆಗ ಅವರ ದರ್ಶನಭಾಗ್ಯವಿದೆ.

Friday, October 2, 2015

ಹೌದು, ಬಲು ಕಷ್ಟವಾಗುತ್ತೆ, ಹಿಂದಿನಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ಪ್ರಶ್ನೆ ಮಾಡಲು ! ನಾನು ಸಂಪ್ರದಾಯ ವಿರೋಧಿಯಲ್ಲ! ಹಾಗೆ ತಪ್ಪು ತಿಳಿದೀರಿ! ಆದರೆ ಇಲ್ಲಿಯವರಗೆ ಯಾವುದಕ್ಕೂ ಯಾಕೆ? ಎನ್ನುವ ಪ್ರಶ್ನೆ ಮಾಡಬಾರದೆಂಬ  ಸಂಸ್ಕಾರದಲ್ಲಿ ನಾವೆಲ್ಲಾ     ಬೆಳೆದುಬಂದು ಬಿಟ್ಟಿದ್ದೇವೆ. ಯಾಕೆ ಹಾಗೆ ಬೆಳಸಿದರೋ ನಾನರಿಯೆ. ಆದರೆ ವೇದವನ್ನು ಅನುಸರಿಸುವ ನಮಗೆ ವೇದದಲ್ಲಿ ಹೇಳಿರುವ  ಪ್ರಶ್ನೆ ಮಾಡಿ ಅರ್ಥ ಮಾಡಿಕೋ, ಎಂಬುದನ್ನು ಮಾತ್ರ ಹೇಳಿಕೊಟ್ಟಿಲ್ಲ. ಹೀಗಾಗಿ ನಾನು ಸುಮಾರು ಏಳೆಂಟು ವರ್ಷಗಳು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರೊಡನೆ ವಾದ ಮಾಡಿರುವೆ. ಅವರಿಗೆ ನಾನು ಕೇಳುತ್ತಿದ್ದೆ "  ನಮ್ಮ ಪೂರ್ವಜರು ಹಾಗಾದರೆ ದಡ್ದರೇ? ನೀವು ಮಾತ್ರವೇ ಬುದ್ಧಿವಂತರೋ?  

ಅದಕ್ಕೆ ಅವರು ಸ್ವಲ್ಪವೂ ಬೇಸರಿಸದೆ ಹೇಳುತ್ತಿದ್ದರು " ನಾನು ಸತ್ಯ  ಹೇಳಿದರೆ ನಿಮಗೆ ಬೇಸರವಾಗುತ್ತೆ. ನನ್ನ ಮೇಲೆ ಕೋಪವೂ ಬರಬಹುದು"

-ಏನು ಅಂತಾದ್ದು !!!?

- ಹೌದು, ನಮ್ಮ ಪೂರ್ವಜರು ಹಲವು ಸಂದರ್ಭಗಳಲ್ಲಿ  ಮೌಢ್ಯವನ್ನು ಪ್ರಶ್ನೆ ಮಾಡದೆ ತಾವೂ ಆಚರಿಸಿಕೊಂಡು ಬಂದು ಅದನ್ನೇ ಮುಂದುವರೆಯುವಂತೆ ಮಾಡಿದ್ದಾರೆ!!

-ಹೇಗೆ ಹೇಳ್ತೀರಾ? ನಮ್ಮ ಸಂಪ್ರದಾಯ ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸಲು ಜೀವನವನ್ನೇ ಮುಡಿಪಾಗಿಟ್ಟಿರುವ ಸಂಘದ ಸಾವಿರಾರು ಜನ  ಪ್ರಚಾರಕರುಗಳು ಇದ್ದಾರೆ. ಅವರೆಲ್ಲಾ ದಡ್ದರೆಂದು ನಿಮ್ಮ ಕಲ್ಪನೆಯೇ?

- ಮತ್ತೆ ಅದೇ ಪ್ರಶ್ನೆ ಕೇಳ್ತೀರಲ್ಲಾ!

- ನಾನಂತೂ ನಿಮ್ಮ ಮಾತು ಒಪ್ಪುವುದಿಲ್ಲ.

-ನನ್ನ ಮಾತು ಒಪ್ಪದಿದ್ದರೆ ಅದು ನಿಮ್ಮ ಖುಷಿ. ಆದರೆ ಸತ್ಯ ಎಂದಿದ್ದರೂ ಸತ್ಯವೇ. 

...............ಹೀಗೆ ಹಲವಾರು ವರ್ಷ ಶರ್ಮರೊಡನೆ ಗುದ್ದಾಡಿದರೂ ಅವರು ಬೇಸರಿಸಿಕೊಳ್ಳಲೇ ಇಲ್ಲ. ಪಂಡಿತ್  ಸುಧಾಕರಚತುರ್ವೇದಿಗಳ "ವೇದೋಕ್ತ ಜೀವನ ಪಥ" ಎಂಬ ಪುಟ್ಟ ಪುಸ್ತಕವನ್ನು ನನ್ನ ಕೈಗಿತ್ತರು. ಇದನ್ನು ಯಾವ ಪೂರ್ವಾಗ್ರಹವಿಲ್ಲದೆ ಓದಿ-ಎಂದರು.

ಮುಂದೆ ಕನ್ನಡ  ವೇದಭಾಷ್ಯದ ಎಲ್ಲಾ ಸಂಪುಟಗಳೂ ನನ್ನ ಮಿತ್ರ ಅಶೋಕ ರ  ಕೃಪೆಯಿಂದ ನನ್ನ ಕೊಠಡಿ ಸೇರಿದವು.  ಕಣ್ಣಾಡಿಸುತ್ತಾ ಹೋದಂತೆ ಹೊಸಬೆಳಕು ಕಾಣತೊಡಗಿತು. ಮಾನವೀಯ ಮೌಲ್ಯಗಳಿಗೆ ವಿರುದ್ಧವಾದದ್ದನ್ನು ನನ್ನ ಮನಸ್ಸು ಈಗ ಸುತಾರಾಮ್ ಒಪ್ಪುತ್ತಿಲ್ಲ. ಹಾಗಂತಾ ಎಲ್ಲವನ್ನೂ ವಿರೋಧಿಸಲೂ ಆಗ್ತಾ ಇಲ್ಲ. ಅದಕ್ಕೂ ಕಾರಣವಿದೆ. ನಾನು ಒಬ್ಬ ವೇದವಿದ್ವಾಂಸರ  ವೈಯಕ್ತಿಕ ಸಂಪರ್ಕಇಟ್ಟುಕೊಂಡು ಎಂಟು ಹತ್ತು ವರ್ಷ ಕಳೆದರೂ  ವೇದದ ಸತ್ಯ ಸಂದೇಶದಂತೆ ಇನ್ನೂ ನಡೆಯಲು ಸಾಧ್ಯ ಆಗ್ತಾ ಇಲ್ಲ. ಹೀಗಿರುವಾಗ  ನನ್ನ " ಜೀವನ ವೇದ ಪುಸ್ತಕ" ದಿಂದಲೋ ಅಥವಾ ನನ್ನ ಕೆಲವು ಬ್ಲಾಗ್ ಬರಹಗಳಿಂದಲೋ ಏನೋ ಬದಲಾವಣೆ ಆಗುತ್ತದೆಂಬ ಭ್ರಮೆ ನನಗಿಲ್ಲ. ಆದರೂ ಸತ್ಯವೆಂದು ಕಂಡಿದ್ದನ್ನು ನಿರ್ಭಯವಾಗಿ ಬರೆಯ ಬೇಕೆಂಬ ತುಡಿತವಂತೂ ಇದೆ.

ಮೌಢ್ಯದ ಪರಮಾವಧಿ!!!! ನಾಲ್ಕು ವರ್ಷದ ಬಾಲಕನ ಶಿರಚ್ಛೇದನ!!!

ಮೌಢ್ಯದ ಪರಮಾವಧಿ!!!! ನಾಲ್ಕು ವರ್ಷದ ಬಾಲಕನ ಶಿರಚ್ಛೇದನ!!! ಮನೆಯಲ್ಲೆಲ್ಲಾ  ರಕ್ತ ಸಂಪ್ರೋಕ್ಷಣೆ!!!!
ಆಂದ್ರದ ಪ್ರಕಾಶಮ್ ಜಿಲ್ಲೆಯ ಪೋಕೂರಿನಲ್ಲಿ ನಡೆದಿರುವ ಬರ್ಬರ ಕೃತ್ಯ. ಬರ್ಬರವಾಗಿ ಮಗುವನ್ನು ಕೊಂದ ರಾಕ್ಷಸನ ಹೆಸರು ತಿರುಮಲರಾವ್. ಮಂತ್ರವಾದಿಯಂತೆ.
ಕಾಳಿಗೆ ಆಹುತಿಯಂತೆ!!!!

ಈ ರಕ್ಕಸನನ್ನು ಆ ಊರಿನ ಜನರು ಮರಕ್ಕೆ ಕಟ್ಟಿ   ಸೀಮೆ ಎಣ್ಣೆ ಸುರಿದು ಬೆಂಕಿ ಇಟ್ಟರು. ಪೋಲೀಸರು ಬಂದು ಇವನ ಪ್ರಾಣ  ಉಳಿಸಿದರು.
ಗಾಂಧಿ ಜಯಂತಿಯ ಹೆಸರಲ್ಲಿ ಇಂದು ಪ್ರಾಣಿ ವಧೆ ನಿಷೇಧ! ಮನುಷ್ಯಹತ್ಯೆ ನಡೆಯಿತು!!

ಇಂದಿಗೂ "ಅಶ್ವಮೇಧ" ಎಂದರೆ ಯಜ್ಞಕ್ಕೆ ಕುದುರೆಯನ್ನು ಬಲಿ ಕೊಡಲೇ ಬೇಕೆನ್ನುವ ಪಂಡಿತೋತ್ತಮರೆನ್ನುವವರು ಈಗಲೂ ಇದ್ದಾರೆ!! ಹಾಸನದಲ್ಲಿ ನಡೆದ ಅಶ್ವಮೇಧಯಾಗ ನಡೆಸಲು ಬಂದಿದ್ದ    ಐದು ಜನ ಪಂಡಿತರೊಡನೆ ನಾನು ಅಶ್ಚಮೇಧದ ಅಹಿಂಸಾ  ವಿವರಣೆಯನ್ನು ವೇದದ ಆಧಾರದಲ್ಲಿ ವಿವರಿಸಿದಾಗ ಅದನ್ನು ಸ್ವೀಕರಿಸುವ ಮಾನಸಿಕತೆ ಇಲ್ಲದ ಪಂಡಿತೋತ್ತಮರು ವಿತಂಡವಾದಮಾಡಲು ಹೊರಟಾಗ ನಾನು ಅವರಿಗೆ ಕೇಳಿದ್ದು ಒಂದೇ ಪ್ರಶ್ನೆ ....

ಪ್ರಾಣಿ ಕೊಲೆಮಾಡಕೂಡದೆಂಬುದಕ್ಕೆ ನಾನು ನಾಲ್ಕಾರು ವೇದಮಂತ್ರಗಳ ಆಧಾರ ಕೊಟ್ಟಿದ್ದೇನೆ. ಕುದುರೆಯನ್ನಾಗಲೀ, ಹಸುವನ್ನಾಗಲೀ ಕೊಂದು ಅಶ್ವಮೇಧ/ಗೋ ಮೇಧ ಯಾಗಗಳನ್ನು ಮಾಡಲು ಯಾವ ವೇದ ಮಂತ್ರದಲ್ಲಿ ಹೇಳಿದೆ? ಆಧಾರ ಕೊಡಿ- ಎಂದಾಗ ನಾನು ನಿಮಗೆ ಅಂಚೆ ಮೂಲಕ ಕಳಿಸುವೆ ಅಥವಾ ಮೇಲ್ ಮಾಡುವೆ ಎಂದವರು ಇನ್ನೂ ಆ ಕೆಲಸ ಮಾಡಲೇ ಇಲ್ಲ!!!!!

ಮೌಢ್ಯವಿರೋಧೀ ಕಾನೂನು ಮಾಡಬೇಕೆಂದಾಗ ಸಾರಾಸಗಟಾಗಿ ವಿರೋಧಿಸುವ ಬದಲು  ಮೌಢ್ಯವಿರೋಧಿ ಶಾಸನದ ವಿರುದ್ಧ ಮಾತನಾಡುವವರು ಯಾಕೆ  ಯಾವುದು ಮಾನವೀಯತೆಗೆ ವಿರೋಧವಾಗಿದೆ ಅವನ್ನು ನಿಶೇಧಿಸಿ ! ಎಂದು ಪಟ್ಟಿ ಮಾಡಿ ಸಲಹೆ ಕೊಡಬಾರದು?

ಹೌದು, ನಾನೂ ಒಪ್ಪುತ್ತೇನೆ. ಮೌಢ್ಯವಿರೋಧೀ ಶಾಸನಕ್ಕೆ ಬೆಂಬಲ ಕೊಡುವವರು ಹಿಂದು ಧರ್ಮವನ್ನೇ ಸಾರಾಸಗಟಾಗಿ ವಿರೋಧಿಸುವ ಗುಂಪು. ಆದರೆ ಹಿಂದು ಪರ ಸಂಘಟನೆಗಳ ಕರ್ತವ್ಯವೂ ಇದೆಯಲ್ಲವೇ? ಯಾವುದು ಮಾನವ ವಿರೋಧಿ ಎನ್ನಿಸುತ್ತದೆ-ಅದನ್ನು ಮೊದಲು ಹಿಂದು ಪರ ಸಂಘಟನೆಗಳೇ    ವಿರೋಧಿಸಿ ಹಿಂದುಗಳಲ್ಲಿ ಜಾಗೃತಿಯನ್ನೇಕೆ ಉಂಟುಮಾಡಬಾರದು?

ಯಾವುದೋ ತಾತನ ಕಾಲದಲ್ಲಿ  ಯಾವುದನ್ನೋ ಆ ಕಾಲಕ್ಕೆ ತಕ್ಕಂತೆ ಆಚರಣೆಗೆ ತಂದಿರಬಹುದು. ಇಂದಿಗೆ ಅದು ಎಷ್ಟು ಸರಿ! ಎಂಬ  ಚಿಂತನ-ಮಂಥನ ನಡೆಯಬೇಡವೇ?

RSS ನ ಪೂಜ್ಯ ಸರಸಂಘಚಾಲಕರು ಕೊಟ್ಟಿರುವ ಕರೆಯ ಬಗ್ಗೆ ಹಿಂದು ಪರ ಸಂಘಟನೆಗಳು ಚಿಂತನ-ಮಂಥನ ಆರಂಭಿಸಬೇಕಲ್ಲವೇ?

ಈಗ ಕಾಲ ಪಕ್ವವಾಗಿದೆ. ಹಿಂದು ವಿರೋಧಿಗಳ ಬಾಯಿ  ಮುಚ್ಚಿಸಬೇಕಾದರೆ ಅವರಿಗೆ ಮಾತನಾಡಲು ಸರಕು ಸಿಗದಂತೆ ಆಮೂಲಾಗ್ರವಾಗಿ ಶುದ್ಧೀಕರಣ ಕೆಲಸವನ್ನು ಹಿಂದು ಸಂಘಟನೆಗಳೇ ಮಾಡಬೇಕು. ನಮ್ಮ ಋಷಿಮುನಿಗಳ ಚಿಂತನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.ಯಾವುದು ಮಾನವೀಯತೆಗೆ ವಿರುದ್ಧವಾಗಿದೆ ಅದನ್ನು ಬಿಡಲೇ ಬೇಕು.ಮಾನವೀಯತೆಗೆ ಪೂರಕ ವಾಗಿರುವ , ನೈತಿಕ ಮೌಲ್ಯಗಳನ್ನು ಹೆಚ್ಚಿಸುವ , ಮನುಷ್ಯನನ್ನು ಆತ್ಮೋನ್ನತಿಯತ್ತ ಕೊಂಡೊಯ್ಯುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲೇ ಬೇಕು.
ಇದು ಕಾಲದ ಕರೆ.

Thursday, October 1, 2015

ಸತ್ಯವು ಅರ್ಥವಾಗಿ ಅದನ್ನು ಒಪ್ಪಲು ಇನ್ನೂ ಎಷ್ಟು ದಶಕಗಳು ಬೇಕೋ!

ಸತ್ಯವು ಅರ್ಥವಾಗಿ ಅದನ್ನು ಒಪ್ಪಲು ಇನ್ನೂ ಎಷ್ಟು ದಶಕಗಳು ಬೇಕೋ! ಶತಮಾನಗಳು ಎನ್ನುವುದಿಲ್ಲ.ಕಾರಣ ಸತ್ಯ ಗೋಚರ ಆಗುತ್ತಿದೆ.ಆದರೆ ನಿಧಾನವಾಗಿ ಆಗುತ್ತಿದೆ.ಹಲವು ಶತಮಾನಗಳಿಂದ ನಡೆದು ಬಂದಿರುವ ಸಂಪ್ರದಾಯಗಳು ಎಷ್ಟು ಆಳವಾಗಿ ಬೇರು ಬಿಟ್ಟಿವೆ! ಎಂದರೆ ಅದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವುದು ಮಹಾ ಪಾಪ! ಎಂದು ಮನಸ್ಸು ಭಯಭೀತವಾಗುತ್ತದೆ!! ಆದರೆ ವೇದವು ಹೇಳುತ್ತದೆ-ಸತ್ಯವನ್ನು ಆವಿಷ್ಕಾರ ಮಾಡು! ಸತ್ಯವು ಗೋಚರವಾದರೆ ಅದೆಷ್ಟು ನಿರ್ಭೀತರಾಗಿರಬಹುದು!

ಧರ್ಮದ ಆಚರಣೆ ಎಂದರೆ ಯಾವುದು ತಲೆತಲಾಂತರದಿಂದ ನಡೆದು ಬಂದಿದೆ, ಅದನ್ನು ಪ್ರಶ್ನೆ ಮಾಡದೆ ಅನುಸರಿಸುವುದು-ಎಂಬುದು ಸಾಮಾನ್ಯ ಅಭಿಪ್ರಾಯ. ಇದಕ್ಕೆ ವಿದ್ಯಾವಂತ-ಅವಿದ್ಯಾವಂತ ಎಂಬ ಭೇದವಿಲ್ಲ. ಹಾಗೆ ನೋಡಿದರೆ ವಿದ್ಯಾವಂತರೆನಿಸಿಕೊಂಡು ಪದವಿಗಳ ಸರಮಾಲೆಯನ್ನು ಹಾಕಿಕೊಂಡವರೇ ಪ್ರಶ್ನೆ ಮಾಡದೆ ಕುರುಡಾಗಿ ಅನುಸರಿಸುವುದನ್ನು ನಾವು ಸಮಾಜದಲ್ಲಿ ಹೆಚ್ಚು ಕಾಣಬಹುದು.ಇದಕ್ಕೆ ಕಾರಣ ಸ್ಪಷ್ಟ.ಅದುವೇ ಭಯ.
ಹೆಸರಿನ ಮುಂದೆ ಹಲವು ಪದವಿಗಳಿವೆ. ಒಳ್ಳೆಯ ಉದ್ಯೋಗ ಸಿಕ್ಕಿದೆ. ಲಕ್ಷಕ್ಕೆ ಕಮ್ಮಿ ಇಲ್ಲದಂತೆ ದುಡಿಮೆ ಇದೆ. ವಾಸಕ್ಕೆ ಸುಸಜ್ಜಿತ ಮನೆ.ಅದರಲ್ಲಿ ಪತ್ನಿ ಮತ್ತು  ಮುದ್ದಾದ ಮಗುವಿನೊಡನೆ ಹಾಯಾಗಿ ಜೀವನ ಸಾಗಿರುವಾಗ ಯಜಮಾನನಿಗೆ ಅವನಿಗೆ ಅರಿವಿಲ್ಲದಂತೆ ಭಯ,ಅಭದ್ರತೆ ಕಾಡುತ್ತದೆ. ಭಗವಂತ! ಪತ್ನಿ ಮತ್ತು ಮಗುವಿನೊಡನೆ ನನ್ನನ್ನು ಸುಖವಾಗಿ ಕಾಪಾಡೆಂದು ಎಲ್ಲಾ ದೇವರಿಗೂ ಪ್ರಾರ್ಥಿಸಿ ಮನೆ ಮುಂದೆ ಬಂದ ಬುಡುಬುಡುಕೆಯವನ ಬಾಯಲ್ಲಿ ಏನಾದರೂ ಕೆಟ್ಟ ಮಾತು ಬಂದೀತೆಂದು ಮನೆಯಲ್ಲಿದ್ದ ಬಟ್ಟೆಯನ್ನೋ ಹತ್ತಿಪ್ಪತ್ತು ರೂಪಾಯಿ ದುಡ್ದನ್ನೋ ಕೊಟ್ಟು ಅವನು ಹೋದಮೇಲೆ ನಿರಾಳನಾಗುತ್ತಾನೆ.
ಇಂತಾ ಉಧಾಹರಣೆಗಳಿಗೇನೂ ಕೊರತೆ ಇಲ್ಲ. ಜೀವನ ದುಸ್ತರವಾಗಿದ್ದಾಗ ಕಾಡದಿದ್ದ ಅಭದ್ರತೆ ಜೀವನವು ಸುಖವಾಗಿರುವಾಗ ಕಾಡಲಾರಂಭಿಸುವುದೇಕೇ? ಜೀವನದಲ್ಲಿ ಕಷ್ಟವಿದ್ದಾಗ ಇಲ್ಲದಿದ್ದ ಭಯ ಸುಖದಲ್ಲಿ ಕಾಡುವುದಾದರೂ ಏಕೇ? ಸತ್ಯದ ಅರಿವಾಗದಿರುವುದೇ ಜೀವನದಲ್ಲಿ ಭಯಕ್ಕೆ ಕಾರಣ. ಅಭದ್ರತೆಯ ಭಾವನೆಗೆ  ಕಾರಣ.
 
ವೇದದ ಹೆಸರು ಕೇಳಿದೊಡನೆ ಒಂದು ಜಾತಿಗೆ ಸೀಮಿತಗೊಳಿಸಿ ಹರಿಹಾಯುವ ಜನರು ತಾವು ನಿರ್ಭೀತ ಜೀವನ ಮಾಡಬೇಕಾದರೆ ವೇದದ ಮಾರ್ಗದರ್ಶನವನ್ನೇ ಪಡೆಯಬೇಕು. ವೇದವು ಜನರಲ್ಲಿ ಎಂತಹಾ ನಿರ್ಭೀತ ಸ್ಥಿತಿಯನ್ನು ಉಂಟುಮಾಡುತ್ತದೆಂಬುದನ್ನು ತಿಳಿಯಲು ಈ ವೇದಮಂತ್ರದ ಅರ್ಥವನ್ನು ಒಮ್ಮೆ ವಿಚಾರ ಮಾಡೋಣ.

ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ ||
[ಋಕ್-೧.೮೬.೯]

ಸತ್ಯಶವಸಃ = ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ
ಯೂಯಮ್ = ನೀವು
ಮಹಿತ್ವನಾ = ನಿಮ್ಮ ಸ್ವಂತ ಮಹಿಮೆಯಿಂದ
ತತ್ ಆವಿಷ್ಕರ್ತ =ಆ ಸತ್ಯವನ್ನು ಆವಿಷ್ಕರಿಸಿರಿ
ರಕ್ಷಃ = ದುಷ್ಕಾಮನೆಗಳನ್ನು
ವಿದ್ಯುತಾ = ನಿಮ್ಮ ಜ್ಞಾನಜ್ಯೋತಿಯಿಂದ
ವಿಧ್ಯತಾ = ಸೀಳಿಹಾಕಿರಿ
ಭಾವಾರ್ಥ:-
ಓ ಧೀರರೇ, ನಿಮ್ಮ ಸ್ವಂತ ಮಹಿಮೆಯಿಂದ ಸತ್ಯವನ್ನು ಆವಿಷ್ಕರಿಸಿ. ದುಷ್ಕಾಮನೆಗಳನ್ನು ನಿಮ್ಮ ಜ್ಞಾನಜ್ಯೋತಿಯಿಂದ ಸೀಳಿ ಹಾಕಿರಿ.

ಈ ಮಂತ್ರವನ್ನು ಆಳವಾಗಿ ಅರ್ಥೈಸುತ್ತಾ ಹೋದರೆ ನನ್ನ ಕಣ್ಮುಂದೆ ಒಬ್ಬ ಗುರು ತನ್ನ ಯುವ ಶಿಷ್ಯನಿಗೆ ಸಿಡಿಲಿನಂತಹ ಮಾತುಗಳಿಂದ ಉಪದೇಶ ಮಾಡುತ್ತಿದ್ದಾನೇನೋ ಎಂದು ಭಾಸವಾಗುತ್ತದೆ. ಒಬ್ಬ ತಂದೆ ತನ್ನ ಮಗನಿಗೆ, ಗುರು ತನ್ನ ಶಿಷ್ಯನಿಗೆ ಈ ಮಂತ್ರದ ಅರ್ಥವನ್ನು ತಿಳಿಸಿದರೆ ಅವನಲ್ಲಿ ಅದೆಂತಹಾ ಅದ್ಭುತ ಶಕ್ತಿ ಮೂಡೀತು! ಭಯವೆಂಬುದಕ್ಕೆ ಆಸ್ಪದವೇ ಇಲ್ಲ. ಅಭದ್ರತೆಯ ಭಯವು ಕಾಡಲಾರದು. ಸತ್ಯದ ದರುಶನವಾದಾಗ ನಿರ್ಭೀತ ಜೀವನ ನಮ್ಮ ದಾಗುತ್ತದೆ.
ಮಂತ್ರವಾದರೂ ಏನು ಹೇಳುತ್ತದೆ?  ಹೇ ಧೀರರೇ, ನಿಮ್ಮ ಸ್ವಂತ ಸಾಮರ್ಥ್ಯದಿಂದ, ನಿಮ್ಮ ವಿವೇಕದಿಂದ, ನಿಮ್ಮ ಬುದ್ಧಿಯಿಂದ, ಸತ್ಯವನ್ನು ಆವಿಷ್ಕರಿಸಿ.ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ
ಇಲ್ಲಿ ಕುರುಡು ಆಚರಣೆಗೆ ಅವಕಾಶವಿದೆಯೇ? ವೇದವಾದರೂ ಮಂತ್ರದಲ್ಲಿ ಬಳಸಿರುವ ಪದಗಳ ತೀವ್ರತೆಯನ್ನು ಗಮನಿಸಿದಿರಾ? ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ- ಇಂತಹ ವಿಶ್ವಾಸ ತುಂಬುವ ಮಾತುಗಳನ್ನು ವೇದವು  ಮಾತ್ರವೇ ಹೇಳಲು ಸಾಧ್ಯ.

ಅರ್ಥವನ್ನು ಸರಿಯಾಗಿ ತಿಳಿಯದೆ ಆಚರಿಸಿದಾಗ  ಅನರ್ಥಕ್ಕೆ ಕಾರಣವಾಗುತ್ತದೆ                                                                                                        
ಇಂದು ಸಮಾಜದಲ್ಲಿ ಕಾಣುವ ಸಾಮರಸ್ಯದ ಕೊರತೆಗೆ ಧರ್ಮವನ್ನು ಸರಿಯಾಗಿ ತಿಳಿಯದೆ ತಪ್ಪು ತಪ್ಪಾಗಿ ಆಚರಿಸುವ ಕಂದಾಚಾರಗಳೂ ಕೂಡ ಹಲವು ಸಂದರ್ಭಗಳಲ್ಲಿ ಕಾರಣವಾಗುತ್ತವೆ, ಯಜ್ಞ ಯಾಗಾದಿಗಳನ್ನು ಮಾಡುವಾಗ ಪ್ರಾಣಿಬಲಿಗೆ ಅವಕಾಶವೇ ಇಲ್ಲದಿದ್ದರೂ ಅಶ್ವಮೇಧ, ಅಜಮೇಧದಂತಹ ಯಜ್ಞಗಳನ್ನು ಮಾಡುವಾಗ ಕುದುರೆಯನ್ನು /ಮೇಕೆಯನ್ನು ಬಲಿಕೊಡಬೇಕೆನ್ನುವ ಒಂದು ವರ್ಗ ಈಗಲೂ ಇರುವಾಗ ಅದನ್ನು ವಿರೋಧಿಸುವ ಒಂದು ವರ್ಗ ಸಹಜವಾಗಿ ಇರುತ್ತದೆ. ಆಗ ಸಾಮಾಜಿಕ ಸಾಮರಸ್ಯವು ಹಾಳಾಗುವುದಕ್ಕೆ ಧರ್ಮದ ಹೆಸರಿನಲ್ಲಿ ನಡೆಯುವ ಅಧರ್ಮದ ಕ್ರಿಯೆಗಳು ಕಾರಣವಾಗುತ್ತವೆ.
ಯಜ್ಞಕ್ಕೆ ಮತ್ತೊಂದು ಹೆಸರು ಅಧ್ವರ ಎಂದು. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದು ಅರ್ಥ. ಹೀಗೆ ಯಜ್ಞಕ್ಕೆ  ಅಹಿಂಸೆ ಎಂಬ ಅರ್ಥವಿದ್ದರೂ ಕೂಡ ಅಲ್ಲಿ ಪ್ರಾಣಿಬಲಿ ಮಾಡಲೇ  ಬೇಕೆನ್ನುವ ಗುಂಪಿನಿಂದ  ಅದನ್ನು ವಿರೋಧಿಸಿದವರನ್ನು ಧರ್ಮದ್ರೋಹಿಗಳೆಂಬ ಹಣೆ ಪಟ್ಟಿ ಕಟ್ಟುವ ಪ್ರಯತ್ನ ನಡೆಯುತ್ತದೆ.
 ನಾವು ಧರ್ಮದ ಹೆಸರಿನಲ್ಲಿ ಆಚರಿಸುವ ಪ್ರತಿಯೊಂದು ಕೆಲಸವನ್ನೂ ಆಚರಣೆಗೆ ಮುಂಚೆ ಅದರಲ್ಲಿ ಸತ್ಯವನ್ನು ಆವಿಷ್ಕರಿಸುವ ಪ್ರಯತ್ನವನ್ನು ಮಾಡಿದ್ದೇ ಆದರೆ ಯಾವ ಧರ್ಮಕಾರ್ಯವೂ ಮಾನವತೆಯ ವಿರೋಧಿಯಾಗಿರುವುದಿಲ್ಲ. ಆದ್ದರಿಂದ ನಾವು ಮಾಡುವ ಎಲ್ಲಾ ಕಾರ್ಯದಲ್ಲೂ ಸತ್ಯವನ್ನು ಆವಿಷ್ಕರಿಸುವಂತಹ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅಶ್ವಮೇಧಯಾಗದ ನಿಜವಾದ ಅರ್ಥ ತಿಳಿದಾಗ ಅದನ್ನು ವಿರೋಧಿಸುವ ಪ್ರಸಂಗವೇ ಎದುರಾಗುವುದಿಲ್ಲ. ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ........ "ಅಶ್ವಂ ಇತಿ ರಾಷ್ಟ್ರಂ" ಅದರ ವಿವರಣೆ ಹೀಗಿದೆ. ಶ್ವಃ ಅಂದರೆ ನಾಳೆ. ಅಶ್ವಃ ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ. ಯಾವುದು ಶಾಶ್ವತವಲ್ಲವೋ ಅದಕ್ಕೆ ನಿನ್ನೆ ನಾಳೆಗಳಿರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ "ಅಶ್ವಂ ಇತಿ ರಾಷ್ಟ್ರಂ" ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.["ದೇಹ ನಶ್ವರ-ದೇಶ ಶಾಶ್ವತ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ಇಂದು ಇದ್ದು ನಾಳೆ ಇಲ್ಲವಾಗುವವರು ನಾವು ನೀವು.
ಇನ್ನು "ಮೇಧೃ" ಎಂದರೆ " ಸಂಗಮೇ" ಅಂದರೆ ಒಟ್ಟು ಗೂಡಿಸು.ಎಂದಾಗ ರಾಷ್ಟ್ರವನ್ನು ಒಟ್ಟು ಗೂಡಿಸಲು ಮಾಡುವ ಕಾರ್ಯಕ್ರಮಗಳೆಲ್ಲಾ " ಅಶ್ವಮೇಧ ಯಾಗವೇ" ಎಂದಂತಾಯ್ತು. ಎಂತಹಾ ಶ್ರೇಷ್ಠವಾದ ಅರ್ಥ ಇದೆಯಲ್ಲವೇ?. ಸತ್ಯವನ್ನು ಆವಿಷ್ಕಾರ ಮಾಡಿದಾಗ ಮಾತ್ರವೇ ಇಂತಹ ಅದ್ಭುತಗಳು ಗೋಚರವಾಗಲು ಸಾಧ್ಯ.