Pages

Sunday, September 12, 2010

ಮೂಢ ಉವಾಚ -6

ಅರಿವು
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ

ಕೊಂಬೆ
ರಸಭರಿತ ಫಲಮೂಲ ಕೊಂಬೆ ತಾನಲ್ಲ
ಫಲಸತ್ವ ಸಾಗಿಪ ಮಾರ್ಗ ತಾನಹುದು
ಮಾಡಿದೆನಬೇಡ ನಿನ್ನದೆನೆಬೇಡ
ಜಗವೃಕ್ಷರಸ ಹರಿದ ಕೊಂಬೆ ನೀನು ಮೂಢ

ಯಾರು?
ಕೆಲಸವಿರೆ ಓಲೈಸುವರು ಇಲ್ಲದಿರೆ ಹೀನೈಸುವರು
ಎಲ್ಲರ ಸೇವೆ ಬಯಸುವರು ತಾನಾರಿಗೂ ಆಗರು
ಕಂಡರೂ ಕಾಣದೊಲು ನಟಿಸುವ ಚತುರರಿವರು
ಇವರೊಳು ನೀಯಾರು ನಾಯಾರು ಹೇಳು ಮೂಢ

ಯಾರು?
ಆಪತ್ತಿಗಾಗುವರಿಹರು ತಿರುಗಿ ನೋಡದವರಿಹರು
ಒಳಿತು ಹಾರೈಸುವರಿಹರು ಕೆಡಕು ಬಯಸುವರಿಹರು
ಒಳಿತು ಮಾಡದ ಕೆಡಕು ಎಣಿಸಲರಿಯರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ
*************
-ಕವಿನಾಗರಾಜ್.

ನಿವೃತ್ತಿ - ಪ್ರವೃತ್ತಿ
















ವೃತ್ತಿಯ ನಂತರ ನಿವೃತ್ತಿ. ನಿವೃತ್ತಿಯ ನಂತರ ಪ್ರವೃತ್ತಿ! ಅಂತಹ ಪ್ರವೃತ್ತಿಯಿದ್ದಾಗಲೇ ನಿವೃತ್ತಿ ಆರಾಮದಾಯಕ ಮತ್ತು ಸಂತೋಷದಾಯಕವಾದೀತು. ಹಾಗೆಂದು ನಿವೃತ್ತಿಯಾದ ನಂತರವೇ ಪ್ರವೃತ್ತಿಗೆ ಸ್ಥಾನವೆಂದರ್ಥವಲ್ಲ. ಸಾಧಾರಣವಾಗಿ ಸಾಕಷ್ಟು ಮಂದಿ ತಮ್ಮ ವೃತ್ತಿಯೊಡನೆಯೇ ಪ್ರವೃತ್ತಿಯನ್ನೂ ರೂಢಿಸಿಕೊಂಡಿರುತ್ತಾರೆ. ಅವರಿಗಂತೂ ನಿವೃತ್ತಿಯ ಕಾವು ತಾಕುವುದೇ ಇಲ್ಲ. ಆದರೆ ಬಹುಮಂದಿ ದುಡಿಮೆಯ ಜಂಜಾಟದಲ್ಲಿ ಹವ್ಯಾಸಗಳನ್ನು ಬೆಳೆಸಿಕೊಂಡಿರುವುದಿಲ್ಲ. ಹಾಗೆಂದೇ ಸೇವೆಯಿಂದ ಬಿಡುಗಡೆ ಹೊಂದಿ ಮನೆಗೆ ಬಂದಾಗ "ಕಾಲ ಕಳೆಯುವ" ದೊಡ್ಡ ಪ್ರಶ್ನೆ ಎದುರಾಗುತ್ತದೆ. ಅಧಿಕಾರದ ನಷ್ಟ, ಆದಾಯದಲ್ಲಿ ಕುಂಠಿತ ಎರಡೂ ಸಾಕಷ್ಟು ಮನ:ಕ್ಲೇಷಕ್ಕೂ ಎಡೆ ಮಾಡುತ್ತದೆ.


ಹಾಗಾಗಿ ವಿಶ್ರಾಂತ ಜೀವನಕ್ಕಾಗಿ ಮೊದಲೇ ಸಾಕಷ್ಟು ತಯಾರಿ - ಮಾನಸಿಕ ಮತ್ತು ಆರ್ಥಿಕ - ಅತ್ಯವಶ್ಯ. ಇಲ್ಲದಿದ್ದಲ್ಲಿ 'ಕುರುಡು ನಾಯಿ ಸಂತೆಗೆ ಬಂದಂತೆ' ಎಲ್ಲೆಲ್ಲೋ ಗೊತ್ತು ಗುರಿಯಿಲ್ಲದೇ ಬಾಳಬೇಕಾದ ಸ್ಥಿತಿ ಬಂದೀತು. ಜೀವನಪೂರ್ತಿ ನಡೆಸಿದ ವೃತ್ತಿಯ ನೆರಳಿನಲ್ಲಿಯೇ ಬರುವ ಅನೇಕ ಹವ್ಯಾಸಗಳನ್ನು ನಂತರ ಬಳಸಿಕೊಳ್ಳಬಹುದು. ಶಾಲಾ ಮಾಸ್ತರರಾಗಿದ್ದರೆ ನಂತರ ಕೆಲ ಮಕ್ಕಳಿಗೆ ಪಾಠ (ಉಚಿತ!) ಹೇಳಿಕೊಡಬಹುದು;ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೆ, ನಂತರ ಊರಿನ ದೇವಸ್ಥಾನ, ಗುಡಿ-ಗೋಪುರ ನಿರ್ಮಾಣ ಮುಂತಾದ ಕಾರ್ಯದಲ್ಲಿ ತಮ್ಮ ವೃತ್ತಿ ಕೌಶಲ್ಯವನ್ನು ಬಳಸಿಕೊಳ್ಳಬಹುದು; ಹೆಚ್ಚಿನ ಪಾಲು ಬರವಣಿಗೆಯಲ್ಲಿ ತೊಡಗಿದ್ದವರು ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು. ಹೀಗೆ ದಾರಿಗಳು ಹತ್ತು ಹಲವಾರು. ಇಂತಹ ಪ್ರವೃತ್ತಿಗಳಿಂದ ಆದಾಯ ನಿರೀಕ್ಷಿಸಿದಷ್ಟೂ ಆ ಕೆಲಸದಿಂದ ದೊರೆಯುವ ತೃಪ್ತಿಯಿಂದ ನಾವು ವಂಚಿತರಾಗುತ್ತೇವೆ. ಅನಾಯಾಸವಾಗಿ ಬಂದರೆ ಬರಲಿ. ಆದರೆ ಆಸೆ ಬೇಡ. ಆಗಲೇ ಮಾಡಿದ ಅಂತಹ ಕೆಲಸಗಳು ಮನಸ್ಸಿಗೆ ಹೆಚ್ಚು ಹೆಚ್ಚು ಮುದ, ನೆಮ್ಮದಿ ನೀಡಬಲ್ಲವು. ಸಾಂಸಾರಿಕ ಜಂಜಾಟಗಳಿಂದ ಆದಷ್ಟೂ ದೂರವಿರುವುದೇ ಲೇಸು.

ಕೆಳದಿ ಕವಿ ವಂಶದ ಓರ್ವ ಶ್ರೇಷ್ಠ ಕಲಾವಿದ ಸಾಗರದ ಕವಿ ಲಿಂಗಣ್ಣಯ್ಯ[1879-1943]. ಅವರ ಪುತ್ರರಾದ ಕವಿ ಕೃಷ್ಣಮೂರ್ತಿಯವರು ಒದಗಿಸಿದ ಅವರ ತಂದೆ ದಿನವೂ ಮಾಡುತ್ತಿದ್ದ ಪ್ರಾರ್ಥನೆಯ ಸಾರಾಂಶ ಹೀಗಿದೆ:

"ಓ ಪರಮಾತ್ಮನೇ, ನನಗೆ ವಯಸ್ಸಾಗುತ್ತಿದೆ. ಆದ್ದರಿಂದ ಮಾತು ಕಡಿಮೆ ಮಾಡುವಂತೆ ಮಾಡು. ಪ್ರತಿ ವಿಷಯದಲ್ಲೂ ತಲೆ ಹಾಕದಂತೆ ಮಾಡು. ಎಲ್ಲರ ತಪ್ಪನ್ನೂ ತಿದ್ದುವ ಕಾಳಜಿ ನನಗೆ ಬೇಡ. ಇಂತಹ ಬುದ್ಧಿ ನನಗೆ ಕೊಡು. ಇತರರ ನೋವು ನಲಿವುಗಳ ಬಗ್ಗೆ ನನಗೆ ಅನುಕಂಪ ಬರಲಿ. ಏಕೆಂದರೆ ನನ್ನ ನೋವುಗಳೇ ದಿನೇದಿನೇ ಹೆಚ್ಚಾಗಬಹುದು. ಅದನ್ನು ಇತರರೊಡನೆ ಆದಷ್ಟೂ ಕಡಿಮೆ ಹಂಚಿಕೊಳ್ಳುತ್ತೇನೆ. ಅನೇಕ ವೇಳೆ ನನ್ನ ಅಭಿಪ್ರಾಯಗಳು ತಪ್ಪಾಗಬಹುದೆಂಬ ಅರಿವೂ ನನಗಾಗಲಿ. ಹಸನ್ಮುಖಿಯಾಗಿರಲು ಕರುಣಿಸು. ನಾನೇನೂ ಮಹಾತ್ಮನಲ್ಲ. ಆದರೆ ಸಪ್ಪೆಮುಖದಿಂದ ಖಿನ್ನನಾಗಿ ಬಾಳಲಾರೆ. ನನ್ನನ್ನು ವಿಚಾರವಂತನನ್ನಾಗಿ ಮಾಡು. ಆದರೆ ಭಾವನಾಜೀವಿಯಾಗಿಸಬೇಡ. ಇತರರಿಗೆ ಸಹಾಯಕನಾಗಿ ಬಾಳುತ್ತೇನೆ. ಆದರೆ ಇತರರನ್ನು ಒತ್ತಾಯ ಮಾಡುವುದಿಲ್ಲ. ಸ್ವಾವಲಂಬಿಯಾಗಿರುತ್ತೇನೆ. ಇತರರ ಔದಾರ್ಯಕ್ಕೆ ಋಣಿಯಾಗಿರುತ್ತೇನೆ. ನನಗೆ ವಯಸ್ಸಾಗಿದೆ ಎಂಬ ಕಾರಣದಿಂದ ವಿವೇಕಿ ಎಂಬ ಭಾವನೆ ನನಗೆ ಉಂಟಾಗದಿರಲಿ. ಇತ್ತೀಚಿನ ದಿನಗಳಲ್ಲಿ ಆಗಿರುವ ಬದಲಾವಣೆಗಳು ನನಗೆ ಇಷ್ಟವಾಗಿರದಿದ್ದರೆ ಅದನ್ನು ನಾನು ವ್ಯಕ್ತಪಡಿಸದೆ ಮೌನವಾಗಿರುವಂತೆ ಮಾಡು. ಇನ್ನೆಷ್ಟು ದಿನ ಇರುತ್ತೇನೋ ನಾನರಿಯೆ. ಕಡೆಗಾಲದಲ್ಲಿ ನನಗೆ ಸ್ನೇಹಿತರು ಒಬ್ಬಿಬ್ಬರಾದರೂ ಉಳಿದಿರಲಿ ಎಂಬುದು ನನ್ನ ಆಶಯ."

ಇದಕ್ಕಿಂತ ಹೆಚ್ಚೇನು ಬೇಕು? ನಮ್ಮ ಹವ್ಯಾಸಗಳಲ್ಲಿ ನಾವು ತೊಡಗಿ, ಮಕ್ಕಳಿಗೆ ಸಂಪೂರ್ಣ ಜವಾಬ್ದಾರಿ ನೀಡಿ, ಅವರ ವ್ಯವಹಾರಗಳಲ್ಲಿ ಮೂಗು ತೂರಿಸದೇ, ಆಶೀರ್ವಾದಪೂರ್ವಕವಾಗಿ ನಮ್ಮ ನಡೆಗಳು ಇದ್ದಾಗ ತೊಂದರೆಗೆ, ಮನಸ್ತಾಪಕ್ಕೆ ಎಡೆ ಎಲ್ಲಿ? ನಿವೃತ್ತಾನಂತರ ನಮ್ಮ ಸಬಲ ಆರ್ಥಿಕ ಸ್ಥಿತಿಯಿಂದ ಮಕ್ಕಳ ಮೇಲೆ ನಮ್ಮ ಅಭಿಪ್ರಾಯಗಳನ್ನು ಹೇರುವುದರಿಂದಲೇ ಕುಟುಂಬದಲ್ಲಿ ಅಶಾಂತಿ ಬರುವುದು. ನಿವೃತ್ತಾನಂತರ ವೃದ್ಧಾಶ್ರಮಕ್ಕೆ ಸೇರುವ ಪರಿಸ್ಥಿತಿಗೆ ನಮ್ಮ ಮಕ್ಕಳ ಪಾತ್ರದೊಂದಿಗೆ ನಮ್ಮ ಇಂತಹ ಸ್ವಪ್ರತಿಷ್ಠೆ ನಡವಳಿಕೆಗಳೂ ಅಷ್ಠೇ ಕಾರಣವೆಂಬುದೂ ಸತ್ಯಾಂಶವೇ.

ನನ್ನ೦ತೆ ನನ್ನ ಜಗತ್ತು.... ಇದೇ ನನ್ನ ದರ್ಶನ..

ನಾನು ಕದ ತಟ್ಟಿದಲ್ಲೆಲ್ಲಾ ಬಾಗಿಲು ತೆರೆಯಲಾಗಿದೆ
ನಾನು ಅಲೆದಾಡಿದಲ್ಲೆಲ್ಲಾ ಒ೦ದು ದಾರಿ ಸೃಷ್ಟಿಯಾಗಿದೆ
ನಾನು ಪ್ರೀತಿಸಿದಲ್ಲೆಲ್ಲಾ ಜಗತ್ತು ಮಧುರವಾಗಿ ಕ೦ಡಿದೆ
ನಾನು ದ್ವೇಷಿಸಿದಾಗಲೆಲ್ಲಾ ಪ್ರಪ೦ಚ ಕುರೂಪಿಯಾಗಿ ಕ೦ಡಿದೆ
ನಾನು ನಕ್ಕಾಗಲೆಲ್ಲಾ ಸ್ವರ್ಗ ನನ್ನ ಬಳಿ ಬ೦ದಿದೆ
ನಾನು ಕಣ್ಣೀರಿಟ್ಟಾಗಲೆಲ್ಲ ಒ೦ದು ಸಾ೦ತ್ವನದ ಸ್ಪರ್ಶ ನನ್ನನ್ನು ಹಗುರಾಗಿಸಿದೆ
ನಾನು ಗೊಣಗಿದಾಗ ಈ ಜಗತ್ತು ಕರ್ಕಶವಾಗಿ ಕ೦ಡಿದೆ
ನಾನು ಪೂಜಿಸಿದಾಗ ದೇವರು ನನ್ನೊಳಗೇ ನುಸುಳಿದ್ದಾನೆ..
ನಾನು ಮೌನಕ್ಕೆ ಮೊರೆಹೋದಾಗಲೆಲ್ಲ ಪ್ರಕೃತಿಯ ನಾದ ಕೇಳಿದ್ದೇನೆ..
ನನ್ನ೦ತೆ ನನ್ನ ಜಗತ್ತು.... ಇದೇ ನನ್ನ ದರ್ಶನ..

- ಡಾ|| ಜ್ಞಾನದೇವ್ ಮೊಳಕಾಲ್ಮೂರು