Pages

Sunday, May 15, 2011

ಕಾ ಣ ದ ಕೈ
ಜೀವನವೊಂದು ಅಪೂರ್ವವಾದ, ಅನುಪಮವಾದ ಮತ್ತು ಅನನ್ಯವಾದ ಅನುಭವದ ಪಯಣ. ನಿತ್ಯ ಜೀವನದ ಏಳು-ಬೀಳುಗಳನ್ನು ದಾಟಿ, ನಿಗದಿಪಡಿಸಿಕೊಂಡ ಗುರಿಯತ್ತ ಸಾಗುವಾಗ ಬರುವ ಅಡೆ-ತಡೆಗಳನ್ನು ಎದುರಿಸಿ, ಅಂತಿಮವಾಗಿ ಸಾಫಲ್ಯವನ್ನು ಕಂಡಾಗ-ಸಾರ್ಥಕ್ಯ ಸಿದ್ಧಿಯಾದಾಗ ಅದರ ಅನುಭವವೇ ಅನನ್ಯ; ಅತೀತ. ಆದರೆ ಇಂತಹ ಒಂದು ಅನಿಶ್ಚಿತವಾದ ಜೀವನ ಪಯಣದಲ್ಲಿ ನಾವೆಷ್ಟೋ ಸಾರಿ ಹಲವಾರು ತೊಂದರೆಗಳಿಗೆ ಸಿಲುಕಿಕೊಂಡಿದ್ದೇವೆ; ದಾರಿಯಲ್ಲಿ ಹಲವಾರು ವಿಘ್ನಗಳು ಎದುರಾಗಿವೆ; ಅನರೀಕ್ಷಿತವಾದ ಸಮಸ್ಯೆಗಳನ್ನು ಕೂಡ ಎದುರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಅಂತಹ ಸನ್ನಿವೇಶಗಳಿಂದ ಮನುಷ್ಯ ಪ್ರಯತ್ನದಿಂದ ಪಾರಾದರೂ, ಇನ್ನು ಕೆಲವು ಸಂಕಷ್ಟಗಳು/ಸಮಸ್ಯೆಗಳು ಮಾನವ ಪ್ರಯತಕ್ಕೂ ಮೀರಿದ್ದಾಗಿರುತ್ತವೆ. ಆಗ ನಾವು ಕೈ ಚೆಲ್ಲಿ ಕೂರದೇ ಗತ್ಯಂತರವಿಲ್ಲದಂತಾಗಿರುತ್ತದೆ. ದೇವರಿದ್ದಾನೋ ಇಲ್ಲವೋ ಎಂಬ ಬಗ್ಗೆ ಚರ್ಚಿಸಲು ನಾವೇನೂ (ಕು) ಬುದ್ಧಿಜೀವಿಗಳಲ್ಲ; ಆ ಬಗ್ಗೆ ಚರ್ಚೆ ಇಲ್ಲಿ ಅಪ್ರಸ್ತುತ ಮತ್ತು ಅನಗತ್ಯ ಕೂಡಾ. ಆದರೂ ಬಹಳ ಸಂದರ್ಭಗಳಲ್ಲಿ ಕಾಣದ ಕೈ ಯೊಂದು ಅಸಾಧ್ಯವಾದುದನ್ನು ಸಾಧಿಸಿ ತೋರಿಸಿರುವ ಅನೇಕ ಘಟನೆಗಳು ನನ್ನ ಜೀವನದಲ್ಲಂತೂ ಸಾಕಷ್ಟು ಸಂಭವಿಸಿವೆ. ಇದೇ ರೀತಿ ಅನೇಕರ ಸತ್ಯ ಅನುಭವಗಳನ್ನೂ ನಾನು ಕೇಳಿದ್ದೇನೆ. ಸಾಮಾನ್ಯವಾಗಿ ಹೇಳಬಹುದಾದರೆ, ಬಹುಶ: ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಇಂತಹ ಅನುಭವವನ್ನು - ನಿಗೂಢ ಶಕ್ತಿಯ ಸಹಾಯವನ್ನು - ಅನುಭವಿಸಿಯೇ ಇರುತ್ತಾನೆ. ಆದರೆ ವಿಚಾರವಂತರ(?) ತರ್ಕಕ್ಕೆ ಇಲ್ಲಿ ಸಾಕ್ಷಾಧಾರಗಳು ಸಿಗದಿರಬಹುದು; ವಿವರಣೆ ಇಲ್ಲದಿರಬಹುದು. ಆದರೂ ಆದ ಅನುಭವ ಸುಳ್ಳಲ್ಲವಲ್ಲ! ಅನಿರೀಕ್ಷಿತ ವಲಯದಿಂದ ಬಂದ ಸಹಾಯ ಹುಸಿಯಲ್ಲವಲ್ಲ! ಆ ನಿಗೂಢ ಶಕ್ತಿಯ ಕಲ್ಪನೆ ಮಾತ್ರಾ ಆಯಾ ವ್ಯಕ್ತಿಯ ಸಂಸ್ಕಾರಕ್ಕೆ ಮತ್ತು ವಿವೇಚನೆಗೆ ಬಿಟ್ಟ ವಿಚಾರ. ನನ್ನ ಜೀವನದಲ್ಲಿ ಜರುಗಿದ ಇಂತಹ ಕೆಲವು ಘಟನೆಗಳನ್ನು ಇಲ್ಲಿ ಮುಂದಿಡ ಬಯಸುತ್ತೇನೆ.
ಸುಮಾರು ೨೦ ವರ್ಷಗಳ ಹಿಂದಿನ ಮಾತು. ಚೊಚ್ಚಲ ಹೆರಿಗೆಗಾಗಿ ನನ್ನ ಮಡದಿಯನ್ನು ಸರ್ಕಾರೀ ಆಸ್ಪತ್ರೆಗೆ ದಾಖಲಿಸಿದ್ದೆವು. ಸಿಸೇರಿಯನ್ ಆಪರೇಷನ್ ಆಗಿದ್ದರಿಂದ ಒಂದು ವಾರ ಅಲ್ಲಿಯೇ ಇರಬೇಕಾಯಿತು. ಹೊಲಿಗೆ ಬಿಚ್ಚಿದ ವೈದ್ಯರು ಮನೆಗೆ ಹೋಗಲು ಅನುಮತಿ ಇತ್ತರು. ಆಗ ಸುಮಾರು ಬೆಳಿಗ್ಗೆ ೯ ಗಂಟೆ. ನಾವುಗಳು ೧೦.೩೦ರ ವೇಳೆಗೆ ಮನೆಗೆ ಹೋಗುವುದೆಂದು ತೀರ್ಮಾನಿಸಿದೆವು. ಆದರೆ ಹೊರಡುವ ಸ್ವಲ್ಪ ಮುಂಚೆ ನನ್ನ ಶ್ರೀಮತಿ ಈಗ ಬೇಡ, ಸಂಜೆ ಹೋಗೋಣ ಎಂದಾಗ ನಾನೂ ತಲೆಯಾಡಿಸಿದ್ದೆ. ಆದರೆ ಸ್ವಲ್ಪ ಸಮಯದಲ್ಲಿಯೇ ನನ್ನ ಶ್ರೀಮತಿ ಪುನ: ಮನಸ್ಸು ಬದಲಾಯಿಸಿ ತಕ್ಷಣ ಹೊರಡಲು ಒತ್ತಾಯಿಸಿದಾಗ ನಾವು ಮನೆಗೆ ಹೊರಟೆವು. ನಾವು ಮನೆ ಸೇರಿ ಇನ್ನೂ ೧೦ ನಿಮಿಷ ಕೂಡ ಆಗಿರಲಿಲ್ಲ. ನನ್ನ ಮಡದಿಯನ್ನು ಮತ್ತು ಮಗುವನ್ನು ಉಪಚರಿಸುತ್ತಿದ್ದ ನರ್ಸ್ ಓಡುತ್ತಾ ನಮ್ಮ ಮನೆಗೆ ಬಂದಾಗ ನಮಗೆ ಗಾಭರಿ. ವಿಷಯ ಏನೆಂದರೆ, ಯಾವ ಹಾಸಿಗೆಯ ಮೇಲೆ ನನ್ನ ಶ್ರೀಮತಿ ಮತ್ತು ಮಗು ಒಂದು ವಾರ ಕಳೆದಿದ್ದರೋ ಮತ್ತು ಮಗು ಯಾವ ಸ್ಥಳದಲ್ಲಿ ಮಲಗುತ್ತಿತ್ತೋ ಅದರ ಮೇಲೆ ಹಳೆ ಸರ್ಕಾರೀ ಆಸ್ಪತ್ರೆ ಕಟ್ಟಡದ ಒಳಛಾವಣಿಯ ಗಾರೆಯ ಒಂದು ದೊಡ್ಡ ತುಂಡು ಬಿದ್ದಿತ್ತು! ಸಾಯಂಕಾಲ ಹೊರಡೋಣವೆಂದು ಕೊಂಡಿದ್ದ ವಿಚಾರವನ್ನು ನೆನೆಸಿಕೊಂಡ ನಾವೆಲ್ಲಾ ನಿಜವಾಗಿ ಆಗ ನಡುಗಿಬಿಟ್ಟೆವು. ತಕ್ಷಣ ಹೊರಡಲು ಪ್ರೇರೇಪಿಸಿದ ಆ (ದಿವ್ಯ) ಶಕ್ತಿಗೆ ಶರಣಾದೆವು. ಆ ನನ್ನ ಮಗನೇ ಇಂದು ರಾಜ್ಯ ಮಟ್ಟದ ಓರ್ವ ಪ್ರತಿಭಾನ್ವಿತ ವಯಲಿನ್ ವಾದಕ ಎಂಬುದನ್ನು ಈ ಘಟನೆಯ ಹಿನ್ನೆಲೆಯಲ್ಲಿ ನೆನೆಸಿಕೊಂಡಾಗಲೆಲ್ಲಾ ಮೈ-ಮನಸ್ಸು ಝುಮ್ ಎನ್ನುತ್ತದೆ; ಆ ದಿವ್ಯ ಪ್ರೇರಣೆಗೆ ತಲೆಬಾಗುತ್ತದೆ.

ಮತ್ತೊಂದು ಘಟನೆ. ನನ್ನ ತಂದೆಯವರು ಅನೇಕ ವರ್ಷಗಳಿಂದ ಹೃದಯ ರೋಗ ಪೀಡಿತರು. ಅವರಿಗೆ ಅಪರೇಷನ್ ಕೂಡ ಆಯಿತು. ಆದರೂ ವಯಸ್ಸಿನ ಪ್ರಭಾವದಿಂದ ಆಗಾಗ್ಯೆ ತೊಂದರೆಗಳು ಮರುಕಳಿಸುತ್ತಿದ್ದು, ಪದೇ ಪದೇ ಆಸ್ಪತ್ರೆಗೆ ಹೋಗಬೇಕಾಗಿತ್ತು. ಒಮ್ಮೆ ಆಫೀಸಿನಿಂದ ಮನೆಗೆ ಹೊರಟಿದ್ದೆ. ಆಗಲೇ ಸಾಕಷ್ಟು ತಡವಾಗಿತ್ತು. ಹೊರಡುವ ವೇಳೆ ಆಫೀಸಿನ ಜವಾನ ೧೦೦ ರೂ. ಸಾಲ ಕೇಳಿದ. ಮಾರನೇ ದಿನವೇ ಸಂಬಳದ ದಿನ. ಜೇಬಿನಲ್ಲಿ ಸರಿಯಾಗಿ ೧೦೫ ರೂ ಇತ್ತು. ಹೇಗಿದ್ದರೂ ನಾಳೆ ಸಂಬಳವಾಗುತ್ತದಲ್ಲ ಎಂದೆಣಿಸಿ ಅವನಿಗೆ ೧೦೦ ರೂ. ನೀಡಿ ಮನೆಗೆ ಹೊರಟೆ. ಮನೆಗೆ ಬಂದ ಸ್ವಲ್ಪ ಹೊತ್ತಿನಲ್ಲಿಯೇ ನಮ್ಮ ತಂದೆಯವರಿಗೆ ಹೃದಯದ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಹೊರಡಲೇ ಬೇಕಾಯಿತು,. ಆದರೆ ಜೇಬಿನಲ್ಲಿದ್ದುದು ಐದೇ ರೂಪಾಯಿ ಮಾತ್ರಾ! ದುರದೃಷ್ಟವಶಾತ್ ಸಣ್ಣ ಉಳಿತಾಯ ಏಜೆಂಟ್ ಆಗಿದ್ದ ನನ್ನ ಶ್ರೀಮತಿ ವಸೂಲಾದ ಎಲ್ಲಾ ಹಣವನ್ನೂ ಅಂದೇ ಅಂಚೆ ಕಚೇರಿಗೆ ಜಮಾ ಮಾಡಿ ಬಿಟ್ಟಿದ್ದಳು. ಹಾಗಾಗಿ ಮನೆಯಲ್ಲಿಯೂ ದುಡ್ಡಿರಲಿಲ್ಲ. ಆಸ್ಪತ್ರೆಗೆ ಹೋದರೆ ಇ.ಸಿ.ಜಿ. ವಗೈರೆಗಾಗಿ ಕನಿಷ್ಟ ೫೦೦ ರೂ.ಗಳಾದರೂ ಬೇಕಿತ್ತು. ಹೇಗಾದರಾಗಲಿ ಡಾಕ್ಟರರಿಗೇ ಹೇಳಿ ಮುಂದೆ ಕೊಟ್ಟರಾಯಿತು ಎಂದು ಕೊಂಡು ಹೊರಡಲು ಸಿದ್ಧರಾದೆವು. ಆ ಕ್ಷಣದಲ್ಲಿ ಮನೆಯ ಕಾಲಿಂಗ್ ಬೆಲ್ ಸದ್ದು ಮಾಡಿತು. ನನ್ನ ಮಡದಿಯ ಬಳಿ ಆರ್.ಡಿ. ಖಾತೆ ತೆರೆದಿದ್ದ ನಮ್ಮ ಮೈಸೂರಿನ ನೆಂಟರೊಬ್ಬರು ಒಂದು ವರ್ಷದಿಂದಲೂ ಆ ಬಾಬ್ತು ದುಡ್ಡು ಕೊಟ್ಟಿರಲಿಲ್ಲ. ನಾವೇ ಕಟ್ಟುತ್ತಿದ್ದೆವು. ಆ ಹಣ ನೀಡಲು ಅವರು ಆಗ ಬಂದಿದ್ದರು! ನನ್ನ ಶ್ರೀಮತಿ ಇರುವ ವಿಷಯವನ್ನು ಅವರಿಗೆ ತಿಳಿಸಿ, ಶೀಘ್ರ ಹಣ ಪಡೆದು ನನಗೆ ಕೊಟ್ಟಳು. ಮುಂದಿನದೆಲ್ಲವೂ ಸುಖಾಂತ. ಸುಮಾರು ಒಂದು ವರ್ಷದಿಂದ ಬಾರದ ಆ ವ್ಯಕ್ತಿ, ಯಾವುದೇ ಪೂರ್ವ ಸೂಚನೆಯಿಲ್ಲದೇ ನಮ್ಮ (ಕಷ್ಟದ) ಸಮಯಕ್ಕೆ ಸರಿಯಾಗಿ ಹಾಜರಾಗಿ ನೆರವಾದುದು ವಿಧಿಯ ಕೈವಾಡ (ಪವಾಡ) ವಲ್ಲದೇ ಮತ್ತೇನು?

ಇತ್ತೀಚೆಗೆ ನಡೆದ ಮತ್ತೊಂದು ಘಟನೆಯನ್ನು ನೋಡಿ. ನಾನು ಮತ್ತು ನನ್ನ ಮಗ ಕಾರ್ಯಾರ್ಥವಾಗಿ ಬೆಂಗಳೂರಿಗೆ ಹೋಗಿದ್ದೆವು. ವಾಪಸು ಬರಲು ಬಸ್ ಸ್ಟ್ಯಾಂಡಿಗೆ ಬಂದಾಗ ಸುಮಾರು ಐದು ಗಂಟೆ ಆಗಿತ್ತು. ನಾವು ಬಂದ ಕ್ಷಣದಲ್ಲೇ ಶಿವಮೊಗ್ಗಕ್ಕೆ ಒಂದು ಬಸ್ಸು ಹೊರಟು ನಿಂತಿತ್ತು. ಸಾಕಷ್ಟು ಆಸನಗಳು ಖಾಲಿಯೇ ಇದ್ದವು. ಅದೇ ಕ್ಷಣದಲ್ಲಿ ಇನ್ನು ೧೫ ನಿಮಿಷದ ನಂತರ ಹೊರಡುವ ಮತ್ತೊಂದು ಬಸ್ಸು ಅಲ್ಲಿಗೆ ಬಂದಿತು. ನನ್ನ ಮಗ ಆಗಲೇ ಹೊರಟು ನಿಂತಿದ್ದ ಬಸ್ಸಿಗೇ ಹೊರಡಲು ಒತ್ತಾಯಿಸಿದ. ಆದರೆ ನನಗೇನಸಿತೋ ತಿಳಿಯದು. ಬೇಡ, ಆರಾಮಾಗಿ ಮುಂದಿನ ಬಸ್ಸಿಗೆ ಹೋಗೋಣ ಎಂದು ಹಿಂದೆ ಸರಿದೆ (ನನ್ನ ಮಗನ ಮುಂದುವರೆದ ಒತ್ತಾಯದ ನಡುವೆಯೂ). ನಂತರ ನಮ್ಮ ಪ್ರಯಾಣ ನಂತರದ ಬಸ್ಸಿನಲ್ಲಿ ಸಾಗಿತು. ಸುಮಾರು ರಾತ್ರಿ ೧೦ ಗಂಟೆ ವೇಳೆ ನಾವು ಪಯಣಿಸುತ್ತಿದ್ದ ಬಸ್ಸು ತಕ್ಷಣ ನಿಂತಿತು. ಮುಂದೆ ನೋಡಿದರೆ ಮತ್ತೊಂದು ಬಸ್ಸು ತೀವ್ರವಾದ ಅಪಘಾತಕ್ಕೊಳಗಾಗಿ ಸಾಕಷ್ಟು ಸಾವು-ನೋವುಗಳಾಗಿದ್ದವು. ಹಾಗಾಗಿ ಸಂಚಾರಕ್ಕೆ ಸ್ವಲ್ಪ ಅಡಚಣೆಯಾಯಿತು. ಮುಂದೆ ಸಾಗುವಾಗ ಅಪಘಾತವಾದ ಬಸ್ಸನ್ನು ಸಮೀಪದಿಂದ ನೋಡಿದ ನಮಗಾದ ಆಘಾತ ಅಷ್ಟಿಷ್ಟಲ್ಲ. ಅದು ಬೇರೆ ಯಾವುದೇ ಬಸ್ ಆಗಿರದೆ ನಾವು ಬೆಂಗಳೂರಿನಲ್ಲಿ ಸ್ಟ್ಯಾಂಡ್‌ಗೆ ಬಂದ ಕೂಡಲೇ ಹೊರಡು ರೆಡಿಯಾಗಿದ್ದ ಮೊದಲನೇ ಬಸ್! ಅಂದು ಆ ಸಮಯದಲ್ಲಿ ಪರಮಾತ್ಮ ನನಗೆ ಅಂತಹ ಮನಸ್ಸು ಹೇಗೆ ಕೊಟ್ಟ? ನಾನೇಕೆ ನನ್ನ ಮಗನ ಮಾತಿನಂತೆ ಆ ಬಸ್ಸಿಗೇ ಹತ್ತಲಿಲ್ಲ? ಎಂಬುದನ್ನು ನಾನು ಇಂದಿಗೂ ವಿಚಾರ ಮಾಡುತ್ತಲೇ ಇದ್ದೇನೆ.

ನಾವು ಮನೆ ಕಟ್ಟಲು ಉಪಕ್ರಮಿಸಿದಾಗ ಏನೂ ಅನುಭವವಿಲ್ಲದ ನಾವು ಬಹಳ ಚಿಂತೆಯಲ್ಲಿದ್ದೆವು. ಆಗ ನನ್ನ ಸ್ನೇಹಿತರೊಬ್ಬರ ಗೆಳೆಯರಾದ ಶ್ರೀನಿವಾಸ ಎಂಬುವವರು ಪರಿಚಿತರಾಗಿ, ನಮ್ಮ ಸಂದರ್ಭವನ್ನು ಅರಿತು ಸಹಾಯ ಮಾಡಲು ಮುಂದಾದರು. ಯಾವುದೇ ಪೂರ್ವ ಪರಿಚಯವಿಲ್ಲದಿದ್ದರೂ ಮೊದಲಿಂದ ಕೊನೆಯವರೆಗೆ ನಿರ್ಮಾಣ ಪೂರ್ಣವಾಗುವವರೆಗೆ ಸ್ವತ: ತಾವೇ ನಿಂತು ನಿಗಾ ವಹಿಸಿ ನಮ್ಮೆಲ್ಲ ಜವಾಬ್ದಾರಿಯನ್ನು ಸಾಕಷ್ಟು ತಾವೇ ಹೊತ್ತಿದ್ದರು. ಮನೆ ನಿರ್ಮಾಣವಾದ ಸ್ವಲ್ಪ ಸಮಯದಲ್ಲೇ ಯಾವುದೋ ಕಾರಣಕ್ಕಾಗಿ ನಾವು ಮನೆಯಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಬಹಳ ಚೆನ್ನಾಗಿ ನಡೆಸಿದೆವು. ಅದಾದ ಒಂದೆರಡು ವರ್ಷದಲ್ಲೇ ನಾನು ಸೇವೆಯಿಂದ ಸ್ವಯಂ ನಿವೃತ್ರಿ ಪಡೆದು ಆ ಮನೆಯನ್ನು ಮಾರಿ ಶಿವಮೊಗ್ಗಕ್ಕೆ ಬಂದೆ. ನನ್ನ ನಾದಿನಿಯ ಮೂಲಕ (ಅವರ ಪತಿಯೂ ಶ್ರೀನಿವಾಸನೇ!) ಅಕಸ್ಮಾತ್ ಸಿಕ್ಕ ಮಾಹಿತಿಯನ್ನನುಸರಿಸಿ ಹೊರಟಾಗ ನಾವು ಕೆಳದಿ ಕವಿ ಮನೆತನಕ್ಕೆ ಸೇರಿದ ವಿಷಯ ತಿಳಿಯಿತು. ನಮ್ಮ ಮನೆ ದೇವರು ಕೊಲ್ಲೂರು ಮೂಕಾಂಬಿಕೆ. ಆದರೆ ನಮ್ಮ ವಂಶದ ಬಗ್ಗೆ ತಿಳಿಯುತ್ತಾ ಹೋದಂತೆ ಕೊಲ್ಲೂರು ಮೂಕಾಂಬಿಕೆ ನಮ್ಮ ಆರಾಧ್ಯ ದೈವವೆಂದೂ, ಶ್ರೀ ವೆಂಕಟರಮಣಸ್ವಾಮಿ ನಮ್ಮ ಕುಲದೇವರೆಂಬ ಅಂಶವೂ ಹೊರಬಂದಿತ್ತು. ಶಿವಮೊಗ್ಗೆಯಲ್ಲಿ ಹೊಸದಾಗಿ ಬಂದಾಗ ನಮಗೆ ಆಶ್ರಯ ನೀಡಿದ್ದೂ ಮತ್ತು ಹೊಸ ನಿವೇಶನ ಖರೀದಿಸಲು ಸಹಾಯ ಮಾಡಿದ್ದೂ ಕೂಡ ನನ್ನ ಷಡ್ಡುಕರಾದ ಶ್ರೀನಿವಾಸ ರವರೇ! ಹೊಸ ಗೆಳೆಯನಾಗಿ ಬಂದ ಆ ಶ್ರೀನಿವಾಸ ನೇ ನಮಗೆಲ್ಲಾ ಆ ವೆಂಕಟರಮಣಸ್ವಾಮಿಯ ರೂಪದಲ್ಲಿ ಬಂದು ಮನೆ ನಿರ್ಮಿಸಲು ಸಹಾಯ ಮಾಡಿದ್ದು, ನಂತರ ನಮಗರಿವಿಲ್ಲದೆಯೇ ಆ ಮನೆಯಲ್ಲಿ ಶ್ರೀನಿವಾಸನ ಕಲ್ಯಾಣೋತ್ಸವ
ನಡೆದದ್ದು, ಶಿವಮೊಗ್ಗೆಯಲ್ಲಿ ನೆಲೆಸಲೂ ಪುನ: ಶ್ರೀನಿವಾಸನೇ ನೆರವಾದದ್ದು ಮತ್ತು ನಂತರ ವೆಂಕಟರಮಣಸ್ವಾಮಿಯೇ (ಶ್ರೀನಿವಾಸನೇ) ನಮ್ಮ ಕುಲದೇವರೆಂದು ತಿಳಿದದ್ದು - ಎಲ್ಲಾ ನೆನೆದಾಗ ನಾವು ಶ್ರೀನಿವಾಸ, ಶ್ರೀನಿವಾಸ ಅನ್ನದೇ ಬೇರೆನೆನ್ನಲು ಸಾಧ್ಯ?
ಇಂತಹ ಘಟನೆಗಳು - ಅನುಭವಗಳು ಹತ್ತು ಹಲವಾರು. ಇವುಗಳಿಗೆ ಮೂಲ ಶಕ್ತಿಯನ್ನಾಗಲೀ ಅಥವಾ ಆ ಸಮಯದ ಮನ: ಪ್ರೇರಣೆಗೆ ಕಾರಣವನ್ನಾಗಲೀ ಹುಡುಕುವುದು ಬಹಳ ಕಷ್ಟಕರವಾದ ಕೆಲಸ. ಆದರೆ ಒಂದು ಅಂಶವಂತೂ ಸತ್ಯ. ನಮಗೆ ಕಾಣಿಸದ, ನಮ್ಮನ್ನು ಮೀರಿದ, ನಮಗೆ ಇನ್ನೂ ಅರ್ಥವಾಗದ ಅತೀಂದ್ರಿಯವಾದ ಶಕ್ತಿ ಎಂಬುದೊಂದಿದೆ ಎನ್ನುವುದು. ಆಸ್ಥಿಕರು ಇದನ್ನು ಪರಮಾತ್ಮ/ದೇವರು ಎಂದರೆ (ಕು)ವಿಚಾರವಾದಿಗಳೆನಿಸಿಕೊಂಡವರು ಅದಕ್ಕೆ ಕಾಕತಾಳೀಯ ಇಲ್ಲವೇ ಪವಾಡ ವೆಂಬ ಹಣೆಪಟ್ಟಿ ಕಟ್ಟುವರು. ಆದರೆ ಈ ಇಬ್ಬರೂ ಇಂತಹ ಒಂದು ಅತೀಂದ್ರಿಯ ಶಕ್ತಿಯನ್ನು, ಅದರ ಮೂಲವನ್ನು ಸಂಪೂರ್ಣವಾಗಿ ಬೇಧಿಸುವಲ್ಲಿ ಮಾತ್ರ ಇಂದಿಗೂ ಅಸಮರ್ಥರಾಗಿರುವುದೆಂಬುದಂತೂ ಸತ್ಯ.

ಅದೇ ರೀತಿ ಪ್ರಕೃತಿಯ ಅನೇಕ ವೈಶಿಷ್ಟ್ಯಗಳನ್ನೂ ಗಮನಿಸಿ. ಆಗ ತಾನೇ ಹುಟ್ಟಿದ ಕರು ನಾಲ್ಕೈದು ಬಾರಿ ಎದ್ದು ಕುಳಿತು ನಿಂತುಕೊಂಡ ಮೇಲೆ ಅದು ತಾಯಿ ಹಸುವಿನ ಕೆಚ್ಚಲಿನ ಕಡೆಗೇ ಸಾಗುವುದನ್ನು ಅದಕ್ಕೆ ಕಲಿಸಿದವರಾರು? ಗೂಡಿನಲ್ಲಿ ಇನ್ನೂ ಕಣ್ತೆರೆಯದ ಮರಿಹಕ್ಕಿಗಳು ತಾಯಿಹಕ್ಕಿ ಬಂದೊಡನೆಯೇ ಚೀ ಗುಟ್ಟುತ್ತಾ ಬಾಯಿ ತೆರೆದುಕೊಳ್ಳುವುದೂ ಒಂದು ಆಶ್ಛರ್ಯವೇ. ದೇಶದಿಂದ ದೇಶಕ್ಕೆ ವಲಸೆ ಬಂದು, ಸಂತಾನ ಬೆಳೆಸಿ, ಪುನ: ಸಾವಿರಾರು ಮೈಲು ಕ್ರಮಿಸಿ ಸ್ವದೇಶ ಸೇರುವ ಹಕ್ಕಿಗಳಿಗೆ ದಾರಿದೀಪ ಯಾರು? ನದೀ ಅಥವಾ ಸಮುದ್ರ ತೀರಗಳಲ್ಲಿ ಮೊಟ್ಟೆಯೊಡೆದು ಹೊರ ಬರುವ ಅಸಂಖ್ಯಾತ ಆಮೆ ಮರಿಗಳು ನೇರವಾಗಿ ನದಿ ಇಲ್ಲವೇ ಸಮುದ್ರದೆಡೆಗೇ ಸಾಗಲು ಕಲಿಸಿದವರಾರು? ಯಾವುದೇ ತರಬೇತಿ ಇಲ್ಲದೇ ಈಜುವ ಹಸು, ನಾಯಿ, ಬೆಕ್ಕು, ಹುಲಿ, ಚಿರತೆ ಮುಂತಾದ ಪ್ರಾಣಿ-ಪಕ್ಷಿಗಳಿಗೆ ಈಜಲು ಕಲಿಸಿದವರಾರು? ಇಂತಹ ಪ್ರಕೃತಿಯ ನಿಗೂಢಗಳು ಅಸಂಖ್ಯಾತ ಮತ್ತು ಅಪಾರ.

ಎಲ್ಲವೂ ನನ್ನಿಂದಲೇ - ನನ್ನಿಂದಲೇ ಎಲ್ಲವೂ ಎಂದು ಭಾವಿಸಿರುವ ನಾವುಗಳು ಇಂತಹ ಅನುಭವಗಳನ್ನು ಮತ್ತು ಪ್ರಕೃತಿಯ ಮೇಲಿನಂತಹ ಚಮತ್ಕಾರಗಳನ್ನು ನೋಡಿದಾಗ ನಮ್ಮ ಕುಬ್ಜತನದ ಅರಿವಾದೀತು. ಕಷ್ಟಗಳು, ಸಮಸ್ಯೆಗಳು ಎಲ್ಲರಿಗೂ ಬಂದೇ ಬರುತ್ತದೆ. ಅಂತಹ ಕೈ ಮೀರಿದ ಅನೇಕ ಸಂದರ್ಭಗಳಲ್ಲಿ ನಮಗೆ ಅನಿರೀಕ್ಷಿತವಾದ ಜಾಗದಿಂದ, ಅಪರಿಚಿತ ವ್ಯಕ್ತಿಯಿಂದ ಇಲ್ಲವೇ ಕಾಣದ ಒಂದು ಶಕ್ತಿಯಿಂದ ಸಹಾಯ ಒದಗಿ ಬಂದಿರುತ್ತದೆ. ಅಂತಹ ಸಂದರ್ಭಗಳನ್ನು ನಾವೆಂದೂ ಮರೆಯಬಾರದು. ಆ ಉಪಕಾರ ಸ್ಮರಣೆ ಕಾಣುವ ಮತ್ತು ಕಾಣದಿರುವ ಶಕ್ತಿಗಳಿಗೂ ಸದಾ ನಮ್ಮಿಂದ ಸಲ್ಲಿಕೆಯಾಗಬೇಕು. ತೆಗೆದುಕೊಂಡ ಸಹಾಯವನ್ನು ಮತ್ತು ಉಪಕಾರವನ್ನು ನೆನೆಯದಿರುವವನು ಮಹಾದ್ರೋಹಿಯೇ ಸರಿ. ಇಂತಹ ಅನುಭವಗಳು ನಾವು ಇತರರ ಸಂಕಷ್ಟಗಳಿಗೆ ಸ್ಪಂದಿಸಲು ಸ್ಫೂರ್ತಿದಾಯಕ ಅಂಶಗಳಾಗಬೇಕು. ಆದರೆ ಪರರ ಕಷ್ಟದ ಕಾಲದಲ್ಲಿ ನೀವೇನಾದರೂ ಸಹಾಯ ಮಾಡಿದ್ದರೆ ಅದಕ್ಕಾಗಿ ಹೆಮ್ಮೆ ಪಡಬೇಡಿ; ಸಹಾಯ ಪಡೆದವನ ಮನಸ್ಸಿನಲ್ಲಿ ಅಂತಹ ಒಂದು ಭಾವನೆಗೂ ಎಡೆಮಾಡಬೇಡಿ. ಅಂತಹ ಒಂದು ಸದವಕಾಶ ನಿಮಗೆ ಸಿಕ್ಕಿತಲ್ಲ ಎಂದು ಸಂತಸ ಪಡಿ; ಅದಕ್ಕಾಗಿ ಆ ಶಕ್ತಿಗಳಿಗೆ ಋಣಿಯಾಗಿರಿ. ಏಕೆಂದರೆ ಆ ಭಗವಂತ ಅಥವಾ ಆ ಕಾಣದ ಕೈ ನಿಮ್ಮ ಮೂಲಕ ಆ ಒಳ್ಳೆಯ ಕೆಲಸವನ್ನು ಮಾಡಿಸಿದ್ದಾನಷ್ಟೆ. ಅವನೇ ನಿಜವಾದ ನಿರ್ದೇಶಕ. ನೀವೊಬ್ಬ ಕೇವಲ ನಟ ಅಥವಾ ಸಾಧನ ಮಾತ್ರ. ಪರರಿಗೆ ಸಹಾಯ ಮಾಡುವಾಗ ಮತ್ತು ಪರರಿಂದ ಸಹಾಯ ಪಡೆಯುವಾಗ ಇಂತಹ ಭಾವ ಸದಾ ನಮದಾಗಿರಲಿ. ಅರ್ಥವಾಗದ್ದಕ್ಕೆ, ಅರಗಿಸಿಕೊಳ್ಳಲಾರದ್ದಕ್ಕೆ ಮತ್ತು ವಿವರಣಾತೀತವಾದಂತಹ ಅಂತಹ ಶಕ್ತಿಗಳಿಗೆ ಸದಾ ಶರಣು, ಶರಣು ಎನ್ನಿ.

ಎಲ್ಲವೂ ನೀನೇ, ನಿನ್ನಿಚ್ಛೆಯೇ ನಡೆಯಲಿ ಎಂಬ ಸ್ಥಿತಿಯನ್ನು ಮುಟ್ಟಿದಾಗ ಮಾತ್ರ ಶರಣಾಗತಿ ಪೂರ್ಣವಾದಂತೆ. ನಾನು ನಿನಗೆ ಶರಣು ಎಂದು ಬಾಯಿಮಾತಿನಲ್ಲಿ ಹೇಳಿಬಿಟ್ಟು ಮನ ಬಂದಂತೆ ಮಾಡಬಹುದು, ಶರಣಾಗತಿ ಸುಲಭ ಎಂದು ಭಾವಿಸುವುದು ಉಂಟು. ಆದರೆ ವಸ್ತು ಸಂಗತಿ ಬೇರೆ. ಒಮ್ಮೆ ಶರಣು ಹೋದಮೇಲೆ ನಿಮಗೆ ಇಷ್ಟ-ಅನಿಷ್ಟ ಏನೂ ಇರಲಾರದು. ನಿಮ್ಮ ಸಂಕಲ್ಪ ಪೂರ್ಣವಾಗಿ ಅಳಿಸಿಹೋಗಬೇಕು. ಭಗವಂತನ ಸಂಕಲ್ಪವೇ ಪ್ರಧಾನವಾಗಬೇಕು.


ರಮಣ ಶ್ರೀ
-
* ಕವಿ ವೆಂ ಸುರೇಶ್
ಸೌಪರ್ಣಿಕಾ, ೩ನೇ ಮುಖ್ಯ ರಸ್ತೆ,
೩ನೇ ಅಡ್ಡ ರಸ್ತೆ, ಬಸವೇಶ್ವರನಗರ,
ಶಿವಮೊಗ್ಗ ೨೫.೯.೨೦೦೮