Pages

Friday, August 27, 2010

ಮನವಿ

ಪ್ರಿಯ ವೇದಸುಧೆಯ ಅಭಿಮಾನಿಗಳೇ,
ವೇದಸುಧೆಯು ಹಲವು ಕಾರಣಗಳಿಂದ ಸಹಸ್ರಾರು ಜನರ ಮೆಚ್ಚಿಗೆ ಪಡೆದಿದೆ. ಓದುಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಥವಾ ಈಗಾಗಲೇ ವೇದಸುಧೆಯ ಹತ್ತಿರ ಬಂದಿರುವವರು ನಿತ್ಯವೂ ನೋಡುತ್ತಿದ್ದಾರೆ. ವೇದಸುಧೆಯ ಪ್ರಮುಖ ಉದ್ಧೇಶ ಈಗಾಗಲೇ ಹಲವಾರು ಭಾರಿ ತಿಳಿಸಿದೆ. "ಸಮಾಜಕ್ಕೆ ಹಿತವೆನಿಸಿದ್ದನ್ನು ಹಂಚುವುದು" ಈ ದಾಟಿಯಲ್ಲಿ ವಿಚಾರಮಾಡುವಾಗ ’ಪ್ರಪಂಚದ ಎಲ್ಲೆಡೆಯಿಂದ ಬರುವ ಸದ್ವಿಚಾರಗಳಿಗೆ ಇಲ್ಲಿ ಸ್ವಾಗತ ಇದ್ದೇ ಇದೆ. ಇಂತಹ ಹಾದಿಯಲ್ಲಿರುವಾಗ ಕೆಲವರಿಗೆ ಕೆಲವು ಆಪ್ಯಾಯಮಾನವಾಗಬಹುದು. ಕೆಲವು ಕಹಿಯಾಗಬಹುದು. ಕೆಲವು ಹಿಡಿಸದಿರಬಹುದು. ಅಂತೂ ಇಲ್ಲಿ ವೇದದ ಚಿಂತನೆ ನಡೆದಿದೆ, ವೇದಮಂತ್ರಗಳ ಆಡಿಯೋಗಳಿವೆ, ಡಾ|| ಗೋಪಾಲಕೃಷ್ಣರಂತಹ ವಿಜ್ಞಾನಿಗಳಿಂದ ನಮ್ಮ ಭಾರತೀಯ ಪರಂಪರೆಯ ಚಿಂತನೆಗಳಿವೆ. ಶ್ರೀ ರಾಮಕೃಷ್ಣಾಶ್ರಮದ ಯತಿಗಳ ಮಾತುಗಳಿವೆ. ವೇದಾಧ್ಯಾಯೀ ಸುಧಾಕರ ಶರ್ಮರ ಹಲವಾರು ಉಪನ್ಯಾಸಗಳ ಆಡಿಯೋ ಗಳಿವೆ. ಪಂಡಿತ ಸುಧಾಕರ ಚತುರ್ವೇದಿಗಳ ಚಿಂತನೆಗಳನ್ನು ಕವಿ ನಾಗರಾಜ್ ಹಂಚಿಕೊಳ್ಳುತ್ತಿದ್ದಾರೆ. ಶ್ರೀ ವಿ.ಆರ್.ಭಟ್, ಶ್ರೀ ರಾಘವೇಂದ್ರ ನಾವಡರು, ಕವಿ ಸುರೇಶ್ ಮುಂತಾದವರು ಚಿಂತನೆಗೆ ಯೋಗ್ಯವಾದ ಬರಹಗಳನ್ನು ನೀಡುತ್ತಿದ್ದಾರೆ. ವೇದಮಂತ್ರಗಳಿಗೆ, ಸುಧಾಕರ ಶರ್ಮರ ಉಪನ್ಯಾಸಗಳಿಗೆ, ವಿವೇಕಾನಂದರ ವಿಚಾರಗಳಿಗಾಗಿ, ಭಾವಗೀತೆಗಳಿಗೆ ಮತ್ತು ವಿಶೇಷ ಬರಹಗಳಿಗೆ ಪ್ರತ್ಯೇಕ ಪುಟಗಳಿವೆ. ಈ ಪುಟಗಳೆಲ್ಲಾ ಮತ್ತೆ ಮತ್ತೆ ಓದಬೇಕಾದ, ಆಡಿಯೋ ಕೇಳಬೇಕಾದ ಪುಟಗಳು. ವೇದಮಂತ್ರಗಳನ್ನು ಆಗಿಂದಾಗ್ಗೆ ಕೇಳಲು ಹಿತವಾಗಿರುತ್ತವೆ, ಅಲ್ಲವೇ? ಎಲ್ಲದರ ಉಪಯೋಗವಾಗಲೆಂಬ ಆಶಯದೊಡನೆ, ನಿಮ್ಮ ಅಮೂಲ್ಯ ಸಲಹೆಗಳನ್ನು ವೇದಸುಧೆಯು ಅಪೇಕ್ಷಿಸುತ್ತದೆ, ಎಂಬ ಮಾತನ್ನು ನೆನಪು ಮಾಡಬಯಸುವೆ. ಸರ್ಕಾರ ಉದ್ಧೇಶಿಸಿರುವ ಅತ್ಯಂತ ಹೇಯವಾದ ಪ್ರಾಣಿಹತ್ಯಾಗೃಹದ ಕೆಟ್ಟ ಯೋಜನೆಗೆ ನಿಮ್ಮ ವಿರೋಧ ವ್ಯಕ್ತಪಡಿಸಲು ಇಂದು ಪ್ರಕಟವಾಗಿರುವ ಲೇಖನದಲ್ಲಿರುವ ಅಂತರ್ಜಾಲ ಕೊಂಡಿಯ ಮೂಲಕ ಪಿಟಿಶನ್ ಗೆ ಸಹಿಮಾಡಲು ವಿನಂತಿಸುವೆ.
ನಿಮ್ಮವನೇ,
ಹರಿಹರಪುರಶ್ರೀಧರ್

ವೇದೋಕ್ತ ಜೀವನ ಪಥ - ಭಗವತ್ ಸ್ವರೂಪ -1

ಸನ್ಮಿತ್ರರೇ,
ಪಂಡಿತ ಸುಧಾಕರ ಚತುರ್ವೇದಿಯವರ ವಿಚಾರಗಳನ್ನು 'ವೇದೋಕ್ತ ಜೀವನ ಪಥ'ದಲ್ಲಿ ನಿಮ್ಮ ಮುಂದಿಡಲಾಗುತ್ತಿರುವುದು ನಿಮ್ಮ ಮೆಚ್ಚುಗೆ ಗಳಿಸಿದೆ.ಅವರು 1897ರ ರಾಮನವಮಿಯಂದು ಬೆಂಗಳೂರಿನ ಬಳೇಪೇಟೆಯಲ್ಲಿ ಜನಿಸಿ, 13ನೆಯ ವಯಸ್ಸಿನಲ್ಲಿ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿ ನಿಜ ಅರ್ಥದಲ್ಲಿ 'ಚತುರ್ವೇದಿ'ಯಾದವರು. ಗಾಂಧೀಜಿಯವರ ಒಡನಾಡಿಯಾಗಿದ್ದವರು. ಸ್ವಾತಂತ್ರ್ಯಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿ 13 ವರ್ಷಗಳಿಗೂ ಹೆಚ್ಚುಕಾಲ ಸೆರೆವಾಸ ಅನುಭವಿಸಿದವರು. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದವರು. ಅವರು 'ವಿಜಯ ಕರ್ನಾಟಕ' ಪತ್ರಿಕೆಗೆ ಸಂದರ್ಶನದಲ್ಲಿ ಹೇಳಿದ್ದು: "ನಾನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೋತ್ಸಾಹ ಸ್ವಾಮಿ ಶ್ರದ್ಧಾನಂದರದಾದರೂ ಆಂತರಿಕವಾಗಿ ವೇದಗಳೇ ಪ್ರೇರಣೆ. 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಕರೆತಂದಿತು. ಭಾರತೀಯರಿಗೆ ಗೌರವ ಕೊಡದೆ ಅವರು ಕೀಳಾಗಿ ಕಾಣುತ್ತಿದ್ದುದು ನಾವೆಲ್ಲಾ ಚಳುವಳಿಗೆ ಧುಮುಕಲು ಪ್ರೇರಣೆಯಾಯಿತು". ಇನ್ನುಮುಂದೆ ಭಗವತ್ ಸ್ವರೂಪ ಕುರಿತು ಈಗ 114 ವರ್ಷಗಳ ಈ ಶತಾಯುಷಿ ಏನು ಹೇಳಿದ್ದಾರೆ ಎಂಬುದನ್ನು ನಿಮ್ಮ ಮುಂದಿಡಲಾಗುವುದು. ಎಂದಿನಂತೆ ನಿಮ್ಮ ಅನಿಸಿಕೆ, ಟೀಕೆ, ಟಿಪ್ಪಣಿಗಳನ್ನು ವ್ಯಕ್ತಪಡಿಸಲು ಕೋರುವೆ.


ಭಗವತ್ ಸ್ವರೂಪ -1
ನಾಸ್ತಿಕರಲ್ಲದ ಸರ್ವ ಮತೀಯರೂ ಒಂದಿಲ್ಲೊಂದು ರೂಪದಲ್ಲಿ ತಮಗಿಂತ ದೊಡ್ಡದಾದ ಯಾವುದೋ ಒಂದು ತತ್ವವಿದೆ, ಅದೇ ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣವಾಗಿದೆ - ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಅಂತಹ ಸಾಂಪ್ರದಾಯಿಕರಲ್ಲಿ ಬಹುಮಂದಿ, ಆ ಶಕ್ತಿಯನ್ನು ವ್ಯಕ್ತಿಯ ರೂಪದಲ್ಲೇ ಭಾವಿಸಿ, ಅದಕ್ಕೆ ಯಾವುದೋ ಕಾಲ್ಪನಿಕ ರೂಪವಿತ್ತು, ಅದಾವುದೋ ಬೇರೆ ಲೋಕದಲ್ಲಿ ವಾಸ ಮಾಡಿಕೊಂಡಿದೆ ಎಂದು ನಂಬುತ್ತಾರೆ. ಒಂದು ಮತದವರು ಆರಾಧಿಸುವ ಆ ಶಕ್ತಿಯನ್ನು ಬೇರೆ ಮತದವರು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಎಷ್ಟು ಸಂಪ್ರದಾಯಗಳಿವೆಯೋ ಅಷ್ಟು ದೇವರುಗಳ ಸೃಷ್ಟಿಯಾಗಿ ಹೋಗಿದೆ. ಅದೇಕೆ, ಒಂದೊಂದು ಸಂಪ್ರದಾಯಕ್ಕೂ ಎಷ್ಟೋ ದೇವರುಗಳಿವೆ!

ಆದರೆ ಈ ದೇವರುಗಳೆಲ್ಲಾ ಕೇವಲ ಕಾಲ್ಪನಿಕ ವ್ಯಕ್ತಿಗಳೇ. ಇಂತಹ ದೇವರುಗಳು ಹಿಂದೆ ಎಂದೂ ಇರಲಿಲ್ಲ; ಈಗ ಇಲ್ಲ; ಮುಂದಕ್ಕೂ ಇರುವುದಿಲ್ಲ. ಒಂದು ವೇಳೆ ಇದ್ದರೆ, ಭೌತಿಕ ವಿಜ್ಞಾನ ಆ ದೇವರುಗಳನ್ನೆಲ್ಲಾ ಶೂನ್ಯ ವಿಲೀನವಾಗಿ ಮಾಡಿಬಿಟ್ಟಿದೆ. ಈ ವಿಷಯದಲ್ಲಿ ವೇದಗಳು ಏನೆನ್ನುತ್ತವೆ? ನಾವು ಹಿಂದೆ ಹೇಳಿರುವಂತೆ ವೇದಗಳು ಮಾನವ ಕಲ್ಪಿತ ಶಾಸ್ತ್ರಗಳಲ್ಲ; ಭಗವಂತನಿಂದಲೇ ಸೃಷ್ಟಿಯ ಆದಿಯಲ್ಲಿ ಸರ್ವರ ಕಲ್ಯಾಣಕ್ಕಾಗಿ ಉಪದೇಶಿಸಲ್ಪಟ್ಟ ಬುದ್ಧಿಸಂಗತವಾದ ಹಾಗೂ ವೈಜ್ಙಾನಿಕವಾದ ಸತ್ಯಶಾಸ್ತ್ರಗಳು. ಅವುಗಳ ಉಪದೇಶ ಪೂರ್ಣತಃ ನಿರ್ದೋಷ ಹಾಗೂ ಬುದ್ಧಿಯುಕ್ತ. ಮಾನವ, ಭಗವಂತನನ್ನು ತನ್ನ ರೂಪದಲ್ಲೇ, ಕೆಲವು ವೇಳೆ ತನಗಿಂತ ಶ್ರೇಷ್ಠ ಎಂದು ತೋರಿಸುವುದಕ್ಕಾಗಿ, ತನಗಿಂತ ಅದ್ಭುತ ರೂಪದಲ್ಲಿ ಊಹಿಸಿಕೊಳ್ಳುತ್ತಾನೆ. ಪ್ರಾಯಶಃ ಆಸ್ತಿಕರೆನ್ನಿಸಿಕೊಳ್ಳುವವರಲ್ಲಿ ಅಧಿಕಾಂಶ ಜನರು ಭಗವಂತನನ್ನು ಸಾಕಾರರೂಪದಲ್ಲಿಯೇ ಅಂಗೀಕರಿಸುತ್ತಾರೆ. ಆದರೆ, ಸರ್ವಪ್ರಥಮ ನೆನಪಿನಲ್ಲಿಡಬೇಕಾದ ಅಂಶವೆಂದರೆ, ಆಕಾರ, ಅದು ಯಾವುದೇ ಆಗಿರಲಿ, ಸಂಯೋಗಜನ್ಯವಾದ ಪ್ರಾಕೃತಿಕ ಅಥವಾ ಭೌತಿಕ ವಸ್ತುಗಳಿಗೆ ಅನ್ವಯಿಸುವುದೇ ಹೊರತು, ಆಧ್ಯಾತ್ಮಿಕ ತತ್ವಗಳಿಗಲ್ಲ ಮತ್ತು ಭೌತಿಕವಾದ ಆಕಾರವನ್ನು ತಾಳುವ ವಸ್ತು ಅದೆಷ್ಟೇ ದೊಡ್ಡದಾಗಿರಲಿ, ಸರ್ವವ್ಯಾಪಕವಾಗಿರದೇ ಪರಿಚ್ಛಿನ್ನವಾಗಿರಬೇಕು. ಭಗವಂತನನ್ನು ಪರಿಚ್ಛಿನ್ನ ಎಂದು ಭಾವಿಸುವುದಾದರೆ, ಅವನನ್ನು ಸರ್ವಜ್ಞ, ಸರ್ವವ್ಯಾಪಕ, ಹಾಗೂ ಸರ್ವಶಕ್ತ ಎಂದು ಭಾವಿಸಲು ಸಾಧ್ಯವಿಲ್ಲ. ಅಂತಹ ಅಲ್ಪಜ್ಞ, ಏಕದೇಶೀಯ ಹಾಗೂ ಹಾಗೂ ಅಲ್ಪಶಕ್ತನಾದವನನ್ನು ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನಾದ ವಿಶ್ವಚೇತನ ಎಂದು ತಿಳಿಯುವುದೇ ತಪ್ಪಾದೀತು. ಎರಡನೆಯದಾಗಿ ಆಕಾರ, ರಿಕ್ತಪ್ರದೇಶದಲ್ಲಿ, ಪರಮಾಣುಗಳ ಸಂಯೋಗದಿಂದಲೇ ಸಂಭವ. ಇಂತಹ ಆಕಾರ ಸಾದಿ ಸಾಂತವಾಗಿರಬಲ್ಲುದೇ ಹೊರತು, ಅನಾದಿ ಅನಂತವಾಗಿರಲಾರದು. ಸಾಲದೆಂದು ಭಗವಂತನಿಗೆ ಆ ಆಕಾರವನ್ನು ರಚಿಸಿಕೊಟ್ಟವರಾರು ಎಂಬ ಬೃಹತ್ಪ್ರಶ್ನೆ ಬೇರೆ ತಲೆಯೆತ್ತುತ್ತದೆ. ಭಗವಂತನೇ ರಚಿಸಿಕೊಂಡನೇ ಎನ್ನುವುದಾದರೆ, ಅದನ್ನು ರಚಿಸಿಕೊಳ್ಳುವ ಮುನ್ನ ಅವನು ನಿರಾಕಾರನೇ ಆಗಿದ್ದನು, ಅದು ಕೆಟ್ಟುಹೋದ ಮೇಲೆ, ಮತ್ತೆ ನಿರಾಕಾರನೇ ಆಗುವನು ಎಂಬ ಪಕ್ಷವನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಈ ಆಗುವಿಕೆ-ಕೆಡುವಿಕೆ ಜನನ-ಮರಣಗಳನ್ನು ಸಂಕೇತಿಸುತ್ತದೆ. ಬೇರೆ ಯಾರಾದರೂ ರಚಿಸಿಕೊಟ್ಟರು ಎನ್ನುವುದಾದರೆ, ಭಗವಂತನಿಗೆ ಆಕಾರವಿತ್ತವರು, ಅವನಿಗಿಂತಲೂ ಶ್ರೇಷ್ಠರೇ ಆಗಿರಬೇಕು. ಇನ್ನು ಭಗವತ್ತತ್ವವೆಲ್ಲಿ ಉಳಿಯಿತು?

ಪಾಶವೀ ಯೋಜನೆ ಧಿಕ್ಕರಿಸಿ
ನನ್ನ ಮಿತ್ರರಾದ ಪ್ರಕಾಶ್ ಯಾಜಿಯವರಿಂದ ನನಗೆ ಒಂದು ಮೇಲ್ ಬಂದಿದೆ. ಅದನ್ನು ಓದಿ.
please visit www.jivdaya.net and sign your petition and oppose ,because the Govt is planning to modernize DEONAR Slaughter house which will be Asia,s largest Slaughter house killing 15000 animals daily.

ಕರುಳು ಹಿಂಡುವ ಕಥೆಯ ಕೇಳಿ. ಅಹಿಂಸಾ ವಾದಿ ಮಹಾವೀರ, ಮಹಾತ್ಮಾಗಾಂಧಿ, ಬಸವಣ್ಣನವರು ಜನಿಸಿದ ಈ ನಾಡಿನಲ್ಲಿ ಸಹಸ್ರಾರು ಪ್ರಾಣಿಗಳನ್ನು ಏಕಕಾಲದಲ್ಲಿ ಹತ್ಯೆ ಮಾಡುವ ಪಾಶವೀ ಯೋಜನೆಗೆ ಸರ್ಕಾರವೇ ಮುಂದಾದರೆ ಅದನ್ನು ಸಹಿಸಬೇಕೆ? ಧಿಕ್ಕರಿಸಿ. ನೀವು ಹೇಗೆ ಧಿಕ್ಕರಿಸಬಹುದು. ಕೆಳಗಿನ ಕೊಂಡಿಗೆ ಭೇಟಿ ನೀಡಿ.
www.jivdaya.net