Pages

Monday, May 23, 2011

ಪಂ.ಸುಧಾಕರಚತುರ್ವೇದಿಯವರ ವಿಚಾರಧಾರೆ-1


ಆತ್ಮೀಯರೇ,
      ಅಪ್ಪಟ ಕನ್ನಡಿಗರಾದ ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರು ತಮ್ಮ ೧೩ನೆಯ ವಯಸ್ಸಿನಲ್ಲಿಯೇ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿ ನಿಜ ಅರ್ಥದಲ್ಲಿ ’ಚತುರ್ವೇದಿ’ಯಾದವರು. ಗಾಂಧೀಜಿಯವರ ಒಡನಾಡಿಯಾಗಿದ್ದವರು. ಸ್ವಾತಂತ್ರ್ಯಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿ ೧೩ ವರ್ಷಗಳಿಗೂ ಹೆಚ್ಚುಕಾಲ ಸೆರೆವಾಸ ಅನುಭವಿಸಿದವರು. ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದವರು, ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತ್ಯೆಯಾದವರ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್‌ಸಿಂಗರ ಗುರುವಾಗಿದ್ದವರು. ಈಗ ೧೧೫ ವರ್ಷಗಳಾಗಿರುವ ಚತುರ್ವೇದಿಯವರ ಜೀವನೋತ್ಸಾಹ ನಿಜಕ್ಕೂ ಬತ್ತದ ಚಿಲುಮೆ. ಇವರು ಬೆಂಗಳೂರಿನ ಜಯನಗರ ೫ನೆಯ ಬ್ಲಾಕಿನ ಶ್ರೀ ಕೃಷ್ಣಸೇವಾಶ್ರಮ ರಸ್ತ್ರೆಯ ಮನೆ ನಂ. ೨೮೬/ಸಿ ಯಲ್ಲಿ ವಾಸವಿದ್ದಾರೆ. ಪ್ರತಿ ಶನಿವಾರ ಸಾಯಂಕಾಲ ೫-೩೦ಕ್ಕೆ ಸರಿಯಾಗಿ ಇವರ ಮನೆಯಲ್ಲಿ ಸತ್ಸಂಗ ನಡೆಯುತ್ತಿದ್ದು ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇದರಲ್ಲಿ ಭಾಗವಹಿಸಲು ಪರಿಚಯವಿರಬೇಕಾದ ಮತ್ತು ಆಹ್ವಾನಿಸಬೇಕಾದ ಅಗತ್ಯವಿಲ್ಲ. ಅವರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಎಲ್ಲವನ್ನೂ ಆಲೋಚಿಸಿ, ವಿಮರ್ಶಿಸಿಯೇ ಒಪ್ಪಬೇಕೆಂಬುದೇ ಅವರ ಆಗ್ರಹ. ನೀವೂ ಈ ಅಪರೂಪದ ಸಾಧಕರನ್ನು ಭೇಟಿ ಮಾಡಬೇಕು ಮತ್ತು ಅವರ ಮಾತುಗಳನ್ನು ಆಲಿಸಬೇಕು ಎಂಬುದು ನನ್ನ ಆಶಯ.
     ಕಳೆದ ೧೪-೦೫-೨೦೧೧ರಂದು ನಡೆದ ಸತ್ಸಂಗದಲ್ಲಿ ಪಂ. ಚತುರ್ವೇದಿಯವರು ಮುಂದಿಟ್ಟ ವಿಚಾರಗಳನ್ನು ಎರಡು ಕಂತುಗಳಲ್ಲಿ ತಮ್ಮ ಮುಂದಿಟ್ಟಿದೆ. ಅವರು ಮಧ್ಯೆ ಮಧ್ಯೆ ವೇದದ ಮಂತ್ರಗಳನ್ನು ಉಲ್ಲೇಖಿಸುತ್ತಿದ್ದು ಅವುಗಳನ್ನು ಪದಬಳಕೆಯಲ್ಲಿ ಎಲ್ಲಿ ತಪ್ಪಾದೀತೋ ಎಂಬ ಭಾವನೆಯಿಂದ ಈ ಲೇಖನದಲ್ಲಿ ಹಾಕಿಲ್ಲ. ಇಲ್ಲಿರುವುದೆಲ್ಲಾ ಅವರದೇ ಮಾತುಗಳು. ಪ್ರತಿಕ್ರಿಯೆಗೆ ಸ್ವಾಗತ.
-ಕ.ವೆಂ.ನಾಗರಾಜ್.
*************


ಬದುಕೋಣ, ಸಾಯದಿರೋಣ

     ಋಗ್ವೇದದ ಒಂದು ಮಂತ್ರದಲ್ಲಿ ನಾವು ಯಾವ ದಾರಿಯನ್ನು ಹಿಡಿದು ನಡೆಯಬೇಕು, ಯಾವ ದಾರಿಯಲ್ಲಿ ಹೋದರೆ ನಮಗೆ ಆತ್ಮವಿಕಾಸ ಉಂಟಾಗುತ್ತದೆ ಎಂದು ವಿವರಿಸಿದೆ. ಇದು ಪ್ರಾರ್ಥನಾ ರೂಪದಲ್ಲಿದೆ. ವೇದಗಳಲ್ಲಿ ಇದೊಂದು ವಿಶೇಷ. ಪ್ರಾರ್ಥನಾ ರೂಪದಲ್ಲೇ ಎಲ್ಲವನ್ನೂ ನಾವು ತಿಳಿದುಕೊಳ್ಳುತ್ತೇವೆ. 'ವಿಶ್ವಾನಿ ದೇವ ಸವಿತರ್. . . . . 'ಎಂಬ ಮಂತ್ರದಲ್ಲಿ ಭಗವಂತ, ಜಗತ್ ಶ್ರೇಯಕ, ಜಗದುತ್ಪಾದಕ, ನೀನು ನಮಗೆ ಯಾವುದು ಒಳ್ಳೆಯದು ಇದೆಯೋ ಅದರ ಕಡೆಗೆ ಮಾತ್ರ ಕರೆದುಕೊಂಡು ಹೋಗು, ಕೆಟ್ಟದರಿಂದ ನಮ್ಮನ್ನು ದೂರ ಇರಿಸು ಎಂದು ಹೇಳಿದೆ. ತಾತ್ಪರ್ಯವೆಂದರೆ ನಮ್ಮ ನಡೆಯಲ್ಲಿ ನಮ್ಮ ನುಡಿಯಲ್ಲಿ ಕೊಂಕು, ಸುತ್ತು ಇರಬಾರದು, ನೇರವಾದ ಮಾತು, ನೇರವಾದ ಯೋಚನೆಗಳು, ನೇರವಾದ ಕಾರ್ಯಗಳು, ಹೀಗಿದ್ದರೆ ಮಾತ್ರ ನಾವು ಧರ್ಮಿಗಳಾಗುತ್ತೇವೆ. ಮನುಷ್ಯ ಜನ್ಮ ಸಿಕ್ಕುವುದೇ ಕಷ್ಟ. ಸಿಕ್ಕಿರುವಾಗ ಅದನ್ನು ವ್ಯರ್ಥವಾಗಿ ಕಳೆಯುವುದು ಯಾರಿಗೂ ಶುಭವಲ್ಲ. ಜ್ಞಾಪಕವಿಟ್ಟುಕೊಳ್ಳಿ, ೮೬ ಲಕ್ಷ ಯೋನಿಗಳಿವೆ ಎನ್ನುತ್ತಾರೆ, ಅದರಲ್ಲಿ ಇದೂ ಒಂದು. ಸ್ವಲ್ಪ ಕಾಲು ಜಾರಿತೆಂದರೆ ಮನುಷ್ಯ ಜನ್ಮದಿಂದ ಕೆಳಗೆ ಬೀಳುತ್ತೇವೆ. ಮತ್ತೆ ಮೇಲಕ್ಕೆ ಬರಬೇಕೆಂದರೆ ಎಷ್ಟು ಜನ್ಮ ಜನ್ಮಾಂತರಗಳು ಬೇಕೋ ಗೊತ್ತಿಲ್ಲ. ಸಿಕ್ಕಿದೆಯಲ್ಲಾ ಮಾನವಜನ್ಮ, ಈ ಜನ್ಮದಲ್ಲಿ ಯಾರು ಚೆನ್ನಾಗಿ ಆಲೋಚಿಸಿ, ಚೆನ್ನಾಗಿ ಯೋಚನೆ ಮಾಡಿಯೇ ಕಾರ್ಯ ಮಾಡುತ್ತಾರೋ ಅವರೇ ಮನುಷ್ಯರು. ನಮ್ಮ ಶರೀರದ ಆಕಾರ ಏನೋ ಮನುಷ್ಯನ ಆಕಾರದಲ್ಲೇ ಇರಬಹುದು, ಆದರೆ ನಡೆ ನುಡಿಯಲ್ಲಿ ಪಶುವೃತ್ತಿ ಇದ್ದರೆ ಏನು ಪ್ರಯೋಜನ? ನಾವು ಒಂದು ವಿಷಯ ಮರೆಯುತ್ತೇವೆ, ೮೬ ಲಕ್ಷ ಹೋಗಲಿ, ಈ ಒಂದು ಜನ್ಮ ಇದೆಯಲ್ಲಾ ಇದು ಸಿಕ್ಕಬೇಕಾದರೆ ನಾವು ಎಷ್ಟು ಸಲ ಈ ಪ್ರಪಂಚಕ್ಕೆ ಬಂದಿರಬಹುದು, ಹೋಗಿರಬಹುದು! ಹಳೆಯ ಜನ್ಮಗಳ ನೆನಪಿಲ್ಲ. ಕೆಲವರು ಹೇಳುತ್ತಾರೆ - 'ಪುನರ್ಜನ್ಮ ಇದ್ದರೆ ನೆನಪಿರಬೇಕಿತ್ತು, ನೆನಪೇಕಿಲ್ಲ?'  ಅದಕ್ಕೆ ನಾವು ಎರಡು ಕಾರಣ ಕೊಡುತ್ತೇವೆ - ಒಂದು, ಹಳೆಯ ಜನ್ಮದ ಒಳ್ಳೆಯ, ಕೆಟ್ಟ ಸಂಗತಿಗಳು ನೆನಪಿದ್ದರೆ, ಒಳ್ಳೆಯ ವಿಷಯಗಳನ್ನೇನೋ ಉತ್ಸಾಹದಿಂದ ಒಪ್ಪಿಕೊಳ್ಳಬಹುದು, ಕೆಟ್ಟ ವಿಷಯಗಳಿದ್ದರೆ ಈ ಜನ್ಮದ ಸುಖ ಎಲ್ಲೋ ಹೊರಟುಹೋಗುತ್ತದೆ. ನಾವು ಹಿಂದಿನ ಜನ್ಮದಲ್ಲಿ ಯಾರದೋ ಮನೆ ಕೊಳ್ಳೆ ಹೊಡೆದಿದ್ದೇವೆಂದು ನೆನಪಿಗೆ ಬಂದರೆ ಈ ಜನ್ಮದಲ್ಲಿ ನಮ್ಮ ಮನೆಯನ್ನು ಇನ್ನು ಯಾರು ಕೊಳ್ಳೆ ಹೊಡೆಯುತ್ತಾರೋ, ಏನು ಮಾಡುತ್ತಾರೋ ಎಂದು ಚಿಂತೆಯಲ್ಲೇ ನೆಮ್ಮದಿ ಕಳೆದುಕೊಳ್ಳುತ್ತೇವೆ. ಹಳೆಯ ಜನ್ಮದ್ದಿರಲಿ, ಈಗಿರುವ ಜನ್ಮದಲ್ಲೇ ನಮಗೆ ಎಲ್ಲಾ ವಿಷಯ ನೆನಪಿನಲ್ಲಿ ಇರುವುದಿಲ್ಲ, ಅದು ಭಗವಂತನ ಕರುಣೆ ಎಂದಿಟ್ಟುಕೊಳ್ಳಿ. ಜ್ಞಾಪಕ ಇದ್ದಿದ್ದರೆ ಕೆಟ್ಟದು ನೆನಪಿಗೆ ಬರುತ್ತಾ ಇದ್ದರೆ ಅದರ ಚಿಂತೆಯಲ್ಲೇ, ಕೊರಗಿನಲ್ಲೇ ಜೀವನ ಕಳೆದುಹೋಗುತ್ತಿತ್ತು. ಭೀಷ್ಮಾಚಾರ್ಯರಿಗೆ, ಅಶ್ವತ್ಥಾಮರಿಗೆ ಇಚ್ಛಾಮರಣಿತ್ವದ ವರ ಇತ್ತೆಂದು ಹೇಳುತ್ತಾರೆ. ಯಾವಾಗ ಸಾಯಬೇಕು ಅನ್ನಿಸುವುದೋ ಆವಾಗ ಸಾಯುವ ಶಕ್ತಿ! ಅದೇನೋ ನನಗೆ ಅರ್ಥವಾಗುವುದಿಲ್ಲ, ಬದುಕಬೇಕಾದರೇನೋ ಕಷ್ಟ ಇದೆ, ಸಾಯುವುದಕ್ಕೇನು? ಬೆಳಿಗ್ಗೆ ಎದ್ದಾಗ ನ್ಯೂಸ್ ಪೇಪರ್ ನೋಡಿದರೆ ಆ ಹುಡುಗ ವಿಷ ತಿಂದು ಸತ್ತ, ಈ ಹುಡುಗಿ ನೇಣು ಹಾಕಿಕೊಂಡು ಸತ್ತಳು, ಅಂತೆಲ್ಲಾ ಓದುತ್ತೀವಿ. ನಮಗೆ ಮೊದಲೇ ಗೊತ್ತಿದ್ದರೆ, ಇಂತಹ ದಿನವೇ ಸಾವು ಬರುತ್ತದೆ ಎಂದು ಗೊತ್ತಿದ್ದರೆ ಬದುಕುವುದಕ್ಕೆ ಉತ್ಸಾಹವೇ ಇರುತ್ತಿರಲಿಲ್ಲ.

     ಸ್ವಲ್ಪ ಯೋಚನೆ ಮಾಡಿ, ಒಂದು ಜೈಲಿನಲ್ಲಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಕುಳಿತಿರಬೇಕಾದರೆ ಎಷ್ಟು ಬೇಸರವಾಗುತ್ತದೆ. ಅಂತಹುದರಲ್ಲಿ ಒಟ್ಟು ೧೩ ವರ್ಷ ಜೈಲಿನಲ್ಲಿ -ಕರಾಚಿಯಿಂದ ಹಿಡಿದು ಬೆಂಗಳೂರು ಸೆಂಟ್ರಲ್ ಜೈಲಿನವರೆಗೆ, ಕೊಚ್ಚಿ, ಆಂಧ್ರ ಸೇರಿ ಹಲವು ಜೈಲುಗಳಲ್ಲಿ -ಕಳೆದಿದ್ದೇನೆ. ಅಲ್ಲಿನ ರೊಟ್ಟಿ, ಅನ್ನ ಎಲ್ಲಾ ತಿಂದಿದ್ದೇನೆ. ಅದೂ ಎಂತಹ ರೊಟ್ಟಿ? ಹಿಟ್ಟಿನಲ್ಲಿ ಬೇಕಂತಲೇ ಮರಳು ಸೇರಿಸಿ ತಿನ್ನಕ್ಕಾಗಬಾರದು ಎಂದು ಮಾಡಿದ್ದ ರೊಟ್ಟಿ. ಸಾರಿನಲ್ಲೂ ಬೇಳೆಕಾಳು ಕಡಿಮೆ, ಮರಳೇ ಜಾಸ್ತಿ. ಅದನ್ನೇ ತಿಂದು ಬದುಕಬೇಕು. ಭಗವಂತನ ದಯೆ ಅಂತ ಕಾಣುತ್ತೆ, ಅಂತಹುದನ್ನು ತಿಂದೂ ಸಹ ಈಗಲೂ ಬದುಕಿದ್ದೀನಿ, ಇನ್ನೂ ಸಾಯುವ ಪ್ಲಾನಿಲ್ಲ. ಏಕೆ ಹೇಳಿದೆನೆಂದರೆ ಬದುಕುವುದು ಕಷ್ಟ, ಸಾಯುವುದು ಸುಲಭ, ಬಹಳ ಸುಲಭ. ಸುಲಭವೆಂದು ಹೇಳಿ ಸಾಯಲು ಹೋಗಬಾರದು. ಪೂರ್ಣವಾಗಿ ಬದುಕಬೇಕು. ವೇದ ಹೇಳುತ್ತೆ, ಸರಿಯಾಗಿ ಬಾಳಿದರೆ ಜಮದಗ್ನಿಗೆ ೩೦೦ ವರ್ಷ ಆಯಸ್ಸು ಅಂತ. ಜಮದಗ್ನಿ ಅಂದರೆ ಋಷಿಯಲ್ಲ, ಅಗ್ನಿಯನ್ನು ತನ್ನ ವಶದಲ್ಲಿಟ್ಟುಕೊಂಡವನು, ಅಗ್ನಿಹೋತ್ರ ಮಾಡುವವನು -ಗೃಹಸ್ಥ/ಗೃಹಿಣಿ - ಜಮದಗ್ನಿ ಎಂದು ಅರ್ಥ. ನಿಜವಾಗಿ ಅರ್ಥ ಇಟ್ಟುಕೊಂಡು ಮಾಡಿದರೆ ಅಂದರೆ ಅಗ್ನಿಯನ್ನು ವಶದಲ್ಲಿಟ್ಟುಕೊಂಡರೆ ೩೦೦ ವರ್ಷ ಬದುಕಬಹುದು. ಅಷ್ಟೊಂದು ಭಗವಂತ ನಮಗೆ ಹೇಳಿರುವಾಗ ನಾವು ಯಾಕೆ ಸಾಯಬೇಕು, ಸಾಯಬೇಕು ಅನ್ನಬೇಕು? ಆ ಸಾವು ಇದೆಯಲ್ಲಾ, ಅದು ನಿರ್ಲಜ್ಜ. ನೀವು ಕರೆದರೂ ಬರುತ್ತೆ, ಕರೆಯದಿದ್ದರೂ ಬರುತ್ತೆ. ಯಾವತ್ತೂ ನೀವು ಸಾಯಬೇಕು ಎಂದು ಆಸೆಪಡಲೇಬೇಡಿ. ಜೀವೇದ ಶರದಶ್ಶತಮ್ ಕನಿಷ್ಠ ಪಕ್ಷ ನೂರು ವರ್ಷ ಆದರೂ ಬದುಕಿರಬೇಕು, ನೂರು ವರ್ಷಕ್ಕಿಂತ ಹೆಚ್ಚುಕಾಲ ಬದುಕೋಣ. ಲೋಕಾರೂಢಿ 'ಶತಾಯುರ್ ವಯ ಪುರುಷಃ' ಅಂತ, ಒಬ್ಬ ಮನುಷ್ಯನ ವಯಸ್ಸು ನೂರು ವರ್ಷ, ನೂರು!  ಆಶ್ಚರ್ಯ ಪಡಬೇಡಿ, ನಾವು ಆಸ್ತಿಕರು, ಭಗವಂತನಲ್ಲಿ ನಂಬಿಕೆ ಇರುವವರು, ಜೀವನವನ್ನು ಪರಿಪಕ್ವವಾಗಿ ಇಟ್ಟುಕೊಳ್ಳಬೇಕು ಅನ್ನುವವರು, ನಾವು ಏಕೆ ಆಸೆ ಕಳೆದುಕೊಳ್ಳಬೇಕು? ರಷ್ಯಾದಲ್ಲಿ ಕೆಲವು ಪ್ರದೇಶಗಳಿವೆ, 'ಡಡ್ ಸೀ' ಅಂತ, ಸತ್ತ ಸಮುದ್ರ, ಅದು ಯಾವ ಕಾಲದಲ್ಲಿ ನೀರಿತ್ತೋ, ಈಗ ನೀರಿಲ್ಲ, ಅದರ ಸುತ್ತಮುತ್ತ ಎಲ್ಲಾ ಸಾವೇ! ಅಂತಹ ಕಡೆ ಕೂಡ ಒಬ್ಬ ಮುದುಕ ೧೯೦ ವರ್ಷ ಬದುಕಿದ್ದನಂತೆ. ತಿನ್ನಬಾರದ್ದೆಲ್ಲಾ ತಿಂದುಕೊಂಡು, ಕುಡಿಯಬಾರದ್ದೆಲ್ಲಾ ಕುಡಿದುಕೊಂಡು, ಮಾಡಬಾರದ್ದೆಲ್ಲಾ ಮಾಡಿಕೊಂಡು ೧೯೦ ವರ್ಷ ಬದುಕಿದ್ದ. ಅಂಥವನೇ ಅಷ್ಟು ಕಾಲ ಬದುಕಿದ್ದಾಗ ಪವಿತ್ರವಾಗಿ ಬಾಳುವ ನಮಗೇಕೆ ಸಾಧ್ಯವಿಲ್ಲ? ನಾವು ಸೋತುಬಿಡುತ್ತೇವೆ, ಅದೇ ಕಷ್ಟ, ಸೋಲಿನ ಮನೋಭಾವ ಇದೆಯಲ್ಲಾ, ನಿರಾಶಾವಾದ ಅದು ತುಂಬಾ ಕೆಟ್ಟದ್ದು. ನಾನು ದುರ್ಯೋಧನನ ಉದಾಹರಣೆ ಕೊಡುತ್ತೇನೆ. ಭೀಷ್ಮ ಹೋದರು, ದ್ರೋಣ ಹೋದರು, ಕರ್ಣನೂ ಹೋದ. ಆದರೆ ಶಲ್ಯ ಇನ್ನೂ ಇದ್ದಾನೆ, ಅವನು ಪಾಂಡವರನ್ನು ಜಯಿಸಿ ನನಗೆ ಗೆಲುವು ತಂದುಕೊಡುತ್ತಾನೆ ಎಂಬ ವಿಶ್ವಾಸ ಅವನಿಗೆ. ಶಲ್ಯನೂ ಹೋದ, ದುರ್ಯೋಧನನೂ ಸತ್ತ, ಅದು ಬೇರೆ ವಿಷಯ. ಬದುಕುವ ಅವನ ಆತ್ಮವಿಶ್ವಾಸ ಮೆಚ್ಚುವಂತಹುದು. ಮುಖ್ಯವಾಗಿ ನನ್ನ ಗುರು ಸ್ವಾಮಿ ಶ್ರದ್ಧಾನಂದಜೀಯವರು ಹೇಳುತ್ತಿದ್ದರು - Optimism is life, Pessimism is death itself!  - ಆಶಾವಾದ ನಿಜವಾದ ಜೀವನ, ನಿರಾಶಾವಾದ ಸಾವು! ಸಾವನ್ನು ಏಕೆ ಬಯಸಬೇಕು? ಅದು ಬಂದೇ ಬರುತ್ತೆ, ಬಂದಾಗ ಹೋಗೋಣ, ಸಾವು ಬಂದಾಗ ಸ್ವಾಗತಿಸೋಣ, ಆಗ ಯಮನಿಗೆ ನಮಸ್ಕರಿಸಿ ಹೊರಡೋಣ. ಯಮ ಅಂದರೆ ಕೋಣನ ಮೇಲೆ ಕುಳಿತುಕೊಂಡು ಜೀವ ತೆಗೆದುಕೊಂಡು ಹೋಗಲು ಬರುತ್ತಾನೆ ಅಂತಾರಲ್ಲ, ಅವನಲ್ಲ, ಸಂಪೂರ್ಣ ಜಗತ್ತನ್ನೇ ತನ್ನ ವಶದಲ್ಲಿಟ್ಟುಕೊಂಡಿದ್ದಾನಲ್ಲಾ, ಜಗನ್ನಿಯಾಮಕ ಭಗವಂತ, ಅವನು ಯಮ! ಅವನು ಅನ್ಯಾಯವಾಗಿ ಯಾರಿಗೂ ಸಾವು ಕೊಡುವುದಿಲ್ಲ, ಯಾವನ ಇಚ್ಛೆಯಿಂದಲೇ ಅಮೃತ ಸಿಕ್ಕುತ್ತೋ, ಯಾವನ ಇಚ್ಛೆಯಿಂದ ಸಾವು ಸಿಗುತ್ತದೋ ಆ ಯಮನಿಗೆ ನಮಸ್ಕಾರ! ಸಾವು, ಬಾಳು ಎರಡೂ ಅವನ ವಶದಲ್ಲೇ ಇದೆ, ಆ ಪರಮಾತ್ಮ ಯಾವ ಜೀವ ಎಷ್ಟು ಬಾಳಬೇಕು, ಬದುಕಬೇಕು ಅದನ್ನು ನಿರ್ಧರಿಸಿರುತ್ತಾನೆ, ಅದು ತೀರುವವರೆಗೂ ಸಾಯುವಹಾಗಿಲ್ಲ, ಬಾವಿಗೆ ಬಿದ್ದು, ನೇಣು ಹಾಕಿಕೊಂಡು ಮುಂಚೆಯೇ ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ, ನಿಜವಾದ ಸಾವಲ್ಲ, ಅಪಮೃತ್ಯು, ಅದು ಯಾರಿಗೂ ಬೇಡ, ಅದಾಗೇ ಸಾವು ಬಂದಾಗ ಬಾ ಮೃತ್ಯು, ಕರೆದುಕೊಂಡು ಹೋಗು ಎಂದು ಹೇಳುವ ಧೈರ್ಯ ನಮಗೆಲ್ಲಿ ಬರಬೇಕು! ಸ್ವಾಮಿ ದಯಾನಂದರಿಗೆ ಸಾವು ಬಂದಾಗ ಅವರು ಅಳುಕಲಿಲ್ಲ, ಭಗವಂತ, ನಿನ್ನ ಇಚ್ಛೆ, ಕರೆದುಕೊಂಡು ಹೋಗು ಎಂದರು. ಅವರಿಗೆ ಸಾಯಬೇಕೆಂದಿರಲಿಲ್ಲ. ಭಗವಂತನ ಇಚ್ಛೆಯಿದ್ದರಿಂದ ಸಾಯಲು ಸಿದ್ಧರಾದರು, ಅಷ್ಟೆ. ಬದುಕುವುದಕ್ಕೆ ಆ ಹಟ ಇರಬೇಕು. ಯಾವತ್ತೂ ಸಾಯಬೇಕೆಂದು ಬಯಸಬೇಡಿ. ಏಕೆಂದರೆ ಆ ಆಸೆ ಇದೆಯಲ್ಲಾ ಅದು ದುರಾಸೆ, ಅದು ನಮ್ಮ ನಿಜವಾದ ನಿಶ್ಚಯ ಶಕ್ತಿಯನ್ನೇ ಹಾಳುಮಾಡಿಬಿಡುತ್ತದೆ.