ಗ್ರಂಥದ ಮುಂದುವರಿದ ಭಾಗ:-
साधनान्यत्र चत्वारि कथितानि मनीषिभिः ।
येषु सत्स्वेव सन्निष्ठा यदभावे न सिध्यति ॥१८॥
ಸಾಧನಾನ್ಯತ್ರ ಚತ್ವಾರಿ ಕಥಿತಾನಿ ಮನೀಷಿಭಿಃ |
(= ಆತ್ಮವಿದ್ಯೆಯ ಸಾಧನಗಳು ನಾಲ್ಕು)
ಯೇಷು ಸತ್ಸ್ವೇವ ಸನ್ನಿಷ್ಠಾ ಯದಭಾವೇ ನ ಸಿಧ್ಯತಿ ||೧೮||
(= ಸಾಧನಗಳಿದ್ದರೆ (=ಏವ) ಸಾಧನೆಯು ಸಾಧ್ಯ, ಇಲ್ಲದಿದ್ದರೆ ಇಲ್ಲ)
ವಿಚಾರದಿಂದಲೇ ಜ್ಞಾನ ಎನ್ನುವುದನ್ನು ಈಗಾಗಲೇ ತಿಳಿದಿದ್ದೇವೆ. ಆತ್ಮವಿದ್ಯೆಯ ಸಿದ್ಧಿಗೆ ಇರುವ ಸಾಧನಗಳು ನಾಲ್ಕು . ಹೆಚ್ಚೆಂದರೂ ಇಷ್ಟೆ ಕಡಿಮೆಯೆಂದರೂ ಇಷ್ಟೆ ಎನ್ನುವುದು ಸೂಚಿತ. ನಾಲ್ಕು ಸಾಧನಗಳಿದ್ದರೆ ಆತ್ಮವಿದ್ಯೆಯು ಸಿದ್ಧಿಸುತ್ತದೆ ಮತ್ತು ಇವು ಇಲ್ಲದಿದ್ದರೆ ಸಿದ್ಧಿಯೂ ಇಲ್ಲ ಎಂಬರ್ಥದದಲ್ಲಿ ಹೇಳುತ್ತಾರೆ. ಇದೊಂದು ರೀತಿಯ ವ್ಯಾವರ್ತಕ ನಿಯಮ ಎನ್ನಬಹುದು. ಪಾಯಸಕ್ಕೆ ಮೆಣಸಿನಕಾಯಿ ಒಗ್ಗರಣೆ ಹಾಕುವುದು ಪಾಯಸದ ತಯಾರಿಕೆಯ ಸಾಧನಗಳಲ್ಲಿ ಇಲ್ಲ, ಹಾಗೂ ಒಗ್ಗರಣೆ ಹಾಕಿದರೆ ಪಾಯಸದ ಸಾಂಪ್ರದಾಯಿಕ ರುಚಿಯು ಕೆಡುತ್ತದೆ !. ಇಲ್ಲೂ ಕೂಡ ಇರುವುದು ನಾಲ್ಕೇ ಸಾಧನಗಳು. ಇದೇ ಕನಿಷ್ಠ ಮತ್ತು ಗರಿಷ್ಠ ಎನ್ನುವುದು ಸೂಚಿತ.
’ಮನೀಷಿಭಿಃ’ ಎಂಬಲ್ಲಿ ವೇದಜ್ಞಾನವುಳ್ಳವರು (ಶ್ರುತಿತಾತ್ಪರ್ಯ ಜ್ಞಾನವುಳ್ಳವರು) ಎಂದು ತಿಳಿಯಬೇಕು ಎನ್ನುವುದು ಸದ್ಗುರು ಚಂದ್ರಶೇಖರ ಭಾರತಿಗಳ ಒಕ್ಕಣೆ. ಶ್ರುತಿಯ ಅವಲಂಬನೆಯಿಲ್ಲದೆ ಸಾಧಕರಿಗೆ ನಾಲ್ಕು ಸಾಧನಗಳ ವಿಚಾರವನ್ನು ತಿಳಿಯುವುದು ಮತ್ತು ಅನುಸರಿಸುವುದು ಕಷ್ಟ ಎಂಬರ್ಥದಲ್ಲಿ ಹೇಳಿರುತ್ತಾರೆ.
’ಏವ’ ಎಂದು ಹೇಳುವುದರ ಮೂಲಕ ಯಾರಿಗೆ ಸಾಧನ ಚತುಷ್ಟಯಗಳ ಸಾಧನೆ ಇರುವುದೋ ಆತನೇ ಆತ್ಮಾಭ್ಯಾಸಕ್ಕೆ ಅರ್ಹನು ಎಂದು ತಿಳಿಸುತ್ತಾರೆ. ಸಾಧನಗಳಿಲ್ಲದಿದ್ದರೆ ಸಾಧನೆಯೂ ಇಲ್ಲ ಎಂದು ಅರ್ಥ.
ಮುಂದೆ ಸಾಧನ ಚತುಷ್ಟಯವನ್ನು ನಿರೂಪಿಸುತ್ತಾರೆ
आदौ नित्यानित्यवस्तुविवेकः परिगण्यते ।
इहामुत्रफलभोगविरागस्तदनन्तरम् ।
शमादिषट्कसम्पत्तिः मुमुक्षु्त्वमिति स्फुटम् ॥१९॥
ಆದೌ ನಿತ್ಯಾನಿತ್ಯವಸ್ತುವಿವೇಕಃ ಪರಿಗಣ್ಯತೇ |
(= ಶಾಶ್ವತ (ಉಳಿಯುವ) ಮತ್ತು ಕ್ಷಣಿಕ (ಅಳಿಯುವ) ವಸ್ತುಗಳ ವಿವೇಕವು)
ಇಹಾಮುತ್ರಫಲಭೋಗ ವಿರಾಗಸ್ತದನಂತರಮ್ |
(=ಇಹಪರಗಳಲ್ಲಿನ ಆಸೆಯ ಮೇಲಿನ ಅನಾಸಕ್ತಿ )
ಶಮಾದಿ ಷಟ್ಕ ಸಂಪತ್ತಿರ್ಮುಮುಕ್ಷುತ್ವಮಿತಿ ಸ್ಫುಟಮ್ ||೧೯||
(= ಶಮವೇ ಮೊದಲಾದ ಆರು ಗುಣಗಳು ಮತ್ತು ಮೋಕ್ಷಾಪೇಕ್ಷೆಯು)
ಆತ್ಮಾಭ್ಯಾಸಕ್ಕೆ ಮೊದಲಾಗುವ ಮುನ್ನ ಇರಬೇಕಾದ ಅರ್ಹತೆಗಳನ್ನು ತಿಳಿದುಕೊಂಡೆವು. ಅರ್ಹತೆಯನ್ನು ಸಂಪಾದಿಸಿಕೊಂಡ ನಂತರ ಸಾಧನೆಗೆ ಮೊದಲಾಗುವಾಗ ನಾಲ್ಕು ಸಾಧನಗಳು ಅರಿವು ಇರಬೇಕಾಗುತ್ತದೆ. ಅರಿತುಕೊಂಡ ನಂತರ ಅನುಸರಿಸಬೇಕಾಗುತ್ತದೆ. ಸತತ ಅನುಸರಣೆಯಿಂದ ಆತ್ಮಜ್ಞಾನವು ಸಿದ್ಧಿಸುತ್ತದೆ. ಹೊಲವನ್ನು ಉಳುಮೆ ಮಾಡಲು ನೇಗಿಲು, ಎತ್ತು ಮುಂತಾದ ಸಾಧನಗಳು ಬೇಕಾಗುತ್ತವೆ. ಉತ್ತುವ ಬಗೆಯನ್ನು ತಿಳಿದಿದ್ದೇನೆ ಹಾಗಾಗಿ ಬೆಳೆಯು ತಂತಾನೇ ಹುಲುಸಾಗಿ ಬಂದು ಬಿಡುತ್ತದೆ ಎನ್ನುವುದು ಮೂಳತನವಾಗುತ್ತದೆ. ಬೇಸಾಯಕ್ಕೆ ಬೇಕಾಗುವ ಸಾಮಗ್ರಿಗಳನ್ನು ಹೊಂದಿಸಿಕೊಂಡು ಉತ್ತಿ ಬಿತ್ತಿದಾಗ ಬೆಳೆಯು ಬರುತ್ತದೆ.
ಹಾಗೆ ಇಲ್ಲಿಯೂ ಆತ್ಮಾಭ್ಯಾಸಕ್ಕಾಗಿ ನಾಲ್ಕು ಸಾಧನಗಳನ್ನು ಹೇಳಿರುತ್ತಾರೆ. ಅವು ಹೀಗಿವೆ
೧) ನಿತ್ಯಾನಿತ್ಯವಸ್ತುವಿವೇಕ
೨) ಇಹಾಮುತ್ರಫಲಭೋಗ ವೈರಾಗ್ಯ
೩) ಶಮದಮಾದಿ ಷಟ್ಕ ಸಂಪತ್ತಿ
೪) ಮುಮುಕ್ಷುತ್ವ
ಇಲ್ಲಿಂದ ಮುಂದೆ ಒಂದೊಂದಾಗಿ ಸಾಧನಗಳ ವಿಶಿಷ್ಟತೆಗಳನ್ನು ವಿವರಿಸುತ್ತಾ ಹೋಗುತ್ತಾರೆ. ಮೊದಲಿಗೆ ’ನಿತ್ಯಾನಿತ್ಯವಸ್ತುವಿವೇಕ’.
ब्रह्मसत्यं जगन्मिथ्येत्येवं रूपो विनिश्चयः ।
सोऽयं नित्यानित्यवस्तुविवेकः समुदाहृतः॥२०॥
ಬ್ರಹ್ಮಸತ್ಯಂ ಜಗನ್ಮಿಥ್ಯೇತ್ಯೇವಂ ರೂಪೋವಿನಿಶ್ಚಯಃ।
(=ಬ್ರಹ್ಮವು ಸತ್ಯ ಮತ್ತು ಜಗತ್ತು ಮಿಥ್ಯೆ )
ಸೋಽಯಂ ನಿತ್ಯಾನಿತ್ಯವಸ್ತುವಿವೇಕಃ ಸಮುದಾಹೃತಃ||೨೦||
(= ಇದೇ ನಿತ್ಯಾನಿತ್ಯವಸ್ತುವಿವೇಕವು)
ಆತ್ಮಜ್ಞಾನವೇ (ನಾನು ಮತ್ತು ನನ್ನ ದೈವ ಒಂದೇ ಎನ್ನುವ ಅನುಭವ - ಸುನಾಥ) ’ಬ್ರಹ್ಮ’ ಎಂದು ತಿಳಿದುಕೊಂಡಿದ್ದೇವೆ. ಇಂತಹ ಬ್ರಹ್ಮವೊಂದೇ ಸತ್ಯ, ಇನ್ನುಳಿದ ಜಗತ್ತು ಮಿಥ್ಯೆ (ಸತ್ಯವಲ್ಲದ್ದು) ಎಂಬ ಅದ್ವೈತ ತತ್ವವನ್ನು ಶ್ರೀ ಶಂಕರರು ಈ ಶ್ಲೋಕದಲ್ಲಿ ನಿರೂಪಿಸುತ್ತಾರೆ. ಇಂತಹ ಬ್ರಹ್ಮಭಾವವೇ ನಿತ್ಯಾನಿತ್ಯವಸ್ತುವಿವೇಕ ಎನ್ನುತ್ತಾರೆ.
ಬ್ರಹ್ಮವು ಸತ್ಯ ಮತ್ತು ನಿತ್ಯ (ಹುಟ್ಟು ಸಾವುಗಳ ಗೊಡವೆಯಿಲ್ಲದ್ದು) ಎನ್ನುವುದನ್ನು ದ್ವೈತ ಮತ್ತು ವಿಶಿಷ್ಟಾದ್ವೈತ ತತ್ವಗಳೂ ಮಾನ್ಯಮಾಡುತ್ತವೆ. ಆದರೆ, ಜಗತ್ತು ಅನಿತ್ಯವಲ್ಲ ಅದೂ ಸಹ ಸತ್ಯವಾದುದು ಎಂದು ದ್ವೈತಸಿದ್ಧಾಂತವು ಹೇಳುತ್ತದೆ.
" ಈ ಜಗತ್ತು ಹಿಂದೆ ಯಾವ ಕಾಲದಲ್ಲಿಯೂ ಯಾವ ದೇಶದಲ್ಲಿಯೂ ಯಾರಿಗೂ ಬಾಧಿತವಾಗಲಿಲ್ಲ ಮುಂದೆಯೂ ಆಗಲಾರದು. ಆದುದರಿಂದ ಜಗತ್ತು ನಿತ್ಯವೂ ಅಬಾಧಿತವೂ ಆಗಿದೆ " ಎಂದು ದ್ವೈತ ಸಿದ್ಧಾಂತದಲ್ಲಿ ಶ್ರೀ ಮಧ್ವಾಚಾರ್ಯರು ಭೇದವನ್ನು ಪ್ರತಿಪಾದಿಸುತ್ತಾರೆ. ಒಂದು ಪ್ರಸಿದ್ಧವಾದ ಶ್ಲೋಕದಲ್ಲಿ *(೧) ಮಧ್ವಾಚಾರ್ಯರ ತತ್ವವು ಬಹಳ ಚೆನ್ನಾಗಿ ಹೇಳಲ್ಪಟ್ಟಿದೆ. ರಾಮಾನುಜಾಚಾರ್ಯರ ವಿಶಿಷ್ಟಾದ್ವೈತಕ್ಕೂ ಅದ್ವೈತಕ್ಕೂ ಹೆಚ್ಚೇನೂ ಭಿನ್ನತೆಯಿಲ್ಲದಿದ್ದರೂ
" ವಿಶ್ವಮಾನವರೆಲ್ಲರೂ ಪರಮಾತ್ಮನ ಸ್ವರೂಪರೇ " ಎನ್ನುವ ಅದ್ವೈತವನ್ನು ಬಿಟ್ಟು ಎಲ್ಲವೂ ಶ್ರೀ ಹರಿಯೇ , ಅವನೊಬ್ಬನೇ ಶೇಷಿ ಮಿಕ್ಕದ್ದೆಲ್ಲಾ ಶೇಷ ಎಂದು ಹೇಳುತ್ತಾರೆ. ದ್ವೈತದಲ್ಲಿಯೂ ಸಹ ’ ಹರಿ ಸರ್ವೋತ್ತಮ’ ಎನ್ನುವುದು ಅಂತಿಮ ನಿಶ್ಚಯ. ಬ್ರಹ್ಮವೆಂದರೆ ಬೇರೇನೂ ಅಲ್ಲ, ಜಗತ್ತಿನ ನಿಯಾಮಕನೂ ಸರ್ವಶಕ್ತನೂ ಆದ ಶ್ರೀಹರಿಯೇ ಮತ್ತು ಅವನೊಬ್ಬನೇ ಎಂದು ನಿರೂಪಿಸುತ್ತಾರೆ. ಹರಿಯೊಬ್ಬನೆ ಸ್ವತಂತ್ರ ಸತ್ಯ ಇನ್ನುಳಿದದ್ದೆಲ್ಲಾ ಅಧೀನ ಸತ್ಯ ಎನ್ನುವ ಪ್ರತಿಪಾದನೆಯನ್ನು ಕಾಣಬಹುದಾಗಿರುತ್ತದೆ. ಇಲ್ಲಾದರೂ ಸಹ ನಾವು ಶಂಕರರ ತತ್ವವನ್ನೇ ಕಾಣಬಹುದಾಗಿರುತ್ತದೆ. ಬ್ರಹ್ಮವೊಂದೇ ಸತ್ಯ ಜಗತ್ತು ಮಿಥ್ಯೆ ಎನ್ನುವ ಶಂಕರರ ಅದ್ವೈತಕ್ಕೂ ಹರಿಯೊಬ್ಬನೇ ( ಸಗುಣ ಬ್ರಹ್ಮ) ಸತ್ಯ ಉಳಿದುದೆಲ್ಲವೂ ಅನಿತ್ಯ ಅಥವಾ ಅಧೀನ ಸತ್ಯ (ಅಸ್ವತಂತ್ರ ಸತ್ಯ) ಮತ್ತು ಹರಿಯಿಂದಲೇ ಜಗತ್ತು ನೆಡೆಯುವುದು ಎನ್ನುವಾಗ ’ಜಗತ್ತು’ ಕೂಡಾ ಹರಿಯ ಮಾಯೆಯೇ ಎನ್ನುವುದು ನಿರೂಪಿತವಾಗುತ್ತದೆ ಮತ್ತು ಹೆಚ್ಚು ವ್ಯತ್ಯಾಸವೂ ಕಾಣದಾಗುತ್ತದೆ. ಇದು ನಿತ್ಯ ಅದು ಅನಿತ್ಯ ಎನ್ನುವ ಪೃಥಃಕರಣ ಎನ್ನಬಹುದು. (ಅರ್ಜುನನ ಗುರಿಯು ಪಕ್ಷಿಯ ಅಕ್ಷಿಯೊಂದೇ ಆಗಿದ್ದಾಗ ಉಳಿದ ಅಂಗಗಳೆಲ್ಲಾ ಆತನಿಗೆ ನಿಮಿತ್ತವಾಗಿತ್ತು ಎನ್ನುವುದನ್ನು ನೆನಪಿಸಿಕೊಳ್ಳಬಹುದು).
ಬ್ರಹ್ಮವು ಸತ್ಯ ಎಂದು ಮೊದಲೇ ಹೇಳಿಬಿಡುವುದರಿಂದ ಆತ್ಮಜ್ಞಾನವನ್ನು ಪಡೆಯಬೇಕೆಂಬ ಆಸಕ್ತನ ಆಸಕ್ತಿಯು ಇಮ್ಮಡಿಯಾಗುತ್ತದೆ ಎಂಬ ಸೂಕ್ಷ್ಮ ಸಂವೇದನೆಯನ್ನು ಇಟ್ಟುಕೊಂಡು ಶ್ರೀ ಶಂಕರರು ಸಾಧನ ಚತುಷ್ಟಯದಲ್ಲಿ ನಿತ್ಯಾನಿತ್ಯವಿವೇಕವನ್ನು ಮೊದಲಿಗೆ ಸೇರಿಸಿದ್ದಾರೆ ಎನ್ನಬಹುದು. ’ಪರಿಗಣ್ಯತೇ’ ಎಂದು ವಿಶೇಷವಾಗಿ ಹೇಳಿರುವುದನ್ನು ಗಮನಿಸಬಹುದಾಗಿರುತ್ತದೆ. ಪುಸ್ತಕವೊಂದು ಓದಲು ಚೆನ್ನಾಗಿದೆ ನಾಳೆಯಿಂದ ಓದೋಣ ಎಂದು ಕೊಂಡಿದ್ದವನಿಗೆ ಅವನ ಹತ್ತು ಮಂದಿ ಗೆಳೆಯರು ’ಆ ಪುಸ್ತಕ ತುಂಬಾ ಚೆನ್ನಾಗಿದೆ’ ಎಂದು recommend ಮಾಡಿದರೆ ಆತನು ನಾಳೆ ಬಿಟ್ಟು ಇಂದಿನಿಂದಲೇ ಓದಲು ಮೊದಲಾಗಬಹುದು !.
ಆತ್ಮನೇ ಪರಮಾತ್ಮ ಎನ್ನುವ ಧೃಡನಿಶ್ಚಯವು ಬಂದು ಬಿಟ್ಟರೆ ಮುಂದೆ ಅನುಭವದಿಂದ ತಿಳಿಯಲು ಆಸಕ್ತಿಯೂ ಹೆಚ್ಚುತ್ತದೆ ಅನುಕೂಲವೂ ಆಗುತ್ತದೆ ಎಂಬ ಭಾವವನ್ನು ’ಬ್ರಹ್ಮಸತ್ಯಂ’ ಎನ್ನುವುದರಲ್ಲಿ ಕಾಣಬಹುದು.
ಮುಂದೆ ’ಜಗತ್ತು ಮಿಥ್ಯೆ’ ಎಂದು ಹೇಳುತ್ತಾರೆ. ಜಗತ್ತು ಯಾರಿಗೆ ಬಾಧಿತವಾಗದಿದ್ದರೂ ಸಹ ಅದು ಇದ್ದಂತೆ ಇರುವುದಿಲ್ಲ. ’ಜಗತ್ತು’ ಎನ್ನುವಾಗ ಜಗತ್ತಿನಲ್ಲಿರುವ ಎಲ್ಲಾ ಜೀವ-ಜಡ ವಸ್ತುಗಳನ್ನೂ ಗಣಿಸಬೇಕಾಗುತ್ತದೆ. ಜೀವ-ಜಡವಸ್ತುಗಳಿಂದಲೇ ಜಗತ್ತು ಎನ್ನುವುದು ವಿಜ್ಞಾನವೂ ಆಗಿರುವಾಗ ಒಂದನ್ನು ಬಿಟ್ಟು ಮತ್ತೊಂದು ಇರಲಾರದು ಎನ್ನುವುದು ತಿಳಿಯುತ್ತದೆ. ಆದರೆ, ಅದ್ಯಾವುದೂ ಶಾಶ್ವತವಲ್ಲ ಎನ್ನುವುದು ವಾಸ್ತವ ಮತ್ತು ಸತ್ಯ !. ’ಬದಲಾವಣೆಯೇ ಜಗದ ನಿಯಮ’ ಎಂಬ ಗೀತಾವಾಕ್ಯದಿಂದಲೆ ಜಗತ್ತು ಅನಿತ್ಯ ಎನ್ನುವುದು ನಿಶ್ಚಯವಾಗುತ್ತದೆ. ’ಅನಿತ್ಯ’ ಎನ್ನುವುದೇನೋ ಸರಿ ಆದರೆ, ಮಿಥ್ಯೆ ಎನ್ನುವುದು ಎಷ್ಟು ಸರಿ ? ಎಂಬ ಪ್ರಶ್ನೆಯು ಬರುತ್ತದೆ.
ಆತ್ಮಾಭ್ಯಾಸಿಯು ಅನಿತ್ಯವಾದ ಜಗತ್ತನ್ನು ನೆಚ್ಚಿ ಕುಳಿತರೆ ತನ್ನ ಪರಮಾರ್ಥದ ಉದ್ದೇಶವನ್ನು ನೆರವೇರಿಸಿಕೊಳ್ಳಲು ಸಾಧ್ಯವಾಗದು. ಆತನ ಲಕ್ಷ್ಯವೇನಿದ್ದರೂ ಬ್ರಹ್ಮದೆಡೆಗೆ ಮಾತ್ರ ಇರಬೇಕಾಗುತ್ತದೆ. ಹೀಗೆ ಗಟ್ಟಿಯಾಗುತ್ತಾ ಸಾಗಿದಂತೆ ಮೊಟ್ಟಮೊದಲ ವೈರಾಗ್ಯವು(=ಅನಾಸಕ್ತಿ, ತಟಸ್ಥ ಭಾವ) ಹುಟ್ಟುತ್ತದೆ.
ಒಂದು ರಾಜ್ಯದ ಮುಖ್ಯಮಂತ್ರಿಯಾಗಬೇಕೆನ್ನುವವನು ಅದನ್ನು ವಾಸ್ತವದಲ್ಲಿ ಬಯಸುತ್ತಾನೆಯೇ ಹೊರತು ಕೇವಲ ಕನಸಿನಲ್ಲಿ ಕಂಡು ತೃಪ್ತನಾಗುವುದಿಲ್ಲ !. ಮಿಥ್ಯಾಪ್ರಂಪಚದ ಗೊಡವೆಯಿಂದ ಪರಮಾರ್ಥ ಚಿಂತನೆಯು ಸಾಧ್ಯವಾಗುವುದಿಲ್ಲ ಎಂಬ ಭಾವವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ ಎಂದುಕೊಳ್ಳಬಹುದು.
"ವೈರಾಗ್ಯವು ತಪ್ಪದೆ ಹುಟ್ಟುವುದಕ್ಕಾಗಿ ಬ್ರಹ್ಮವು ನಿತ್ಯ ಜಗತ್ತು ಅನಿತ್ಯ ಎಂದು ಹೇಳದೆ ಬ್ರಹ್ಮವು ಸತ್ಯ ಜಗತ್ತು ಮಿಥ್ಯೆ ಎಂದು ಹೇಳಿದ್ದಾರೆ " ಎಂಬುದು ಸದ್ಗುರು ಚಂದ್ರಶೇಖರ ಭಾರತಿಗಳ ವಿವರಣೆ.
’ವಿನಿಶ್ಚಯಃ’ (=ಸರಿಯಾದ , ವಿಶೇಷವಾದ ತಿಳುವಳಿಕೆ) ಎಂಬ ವಿಶೇಷಣದ ಮೂಲಕ ಆತ್ಮಾಭ್ಯಾಸಿಯು ನಿತ್ಯಾನಿತ್ಯವಿವೇಕವನ್ನು ಧೃಡವಾಗಿ ನಿಶ್ಚಯಿಸಿಕೊಳ್ಳಬೇಕು ಎನ್ನುವುದನ್ನು ಸೂಚಿಸಿರುತ್ತಾರೆ.
ಇಂತಹ ನಿತ್ಯಾನಿತ್ಯವಿವೇಕವೆ ವೈರಾಗ್ಯಕ್ಕೆ ಕಾರಣ ಎಂಬುದನ್ನು ’ಸಮ್-ಉದಾಹೃತಃ’ ಎಂಬಲ್ಲಿ ’ಸಮ್’ ಎಂಬ ಉಪಸರ್ಗದಿಂದ ಸೂಚಿಸಿರುತ್ತಾರೆ.
ವಿವೇಕ ಚೂಡಾಮಣಿಯ ಆಂತರ್ಯವು ನಾವು ಇದೀಗ ತಿಳಿದುಕೊಂಡ ಶ್ಲೋಕದಲ್ಲಿ ಚೆನ್ನಾಗಿ ಒಡಮೂಡಿದೆ ಎನ್ನಬಹುದು. ’ಸರ್ವಕರ್ಮ ಸನ್ಯಾಸ-ವೈರಾಗ್ಯ-ಮುಮುಕ್ಷುತ್ವ-ಬ್ರಹ್ಮಭಾವ’ ಇವುಗಳು ಈ ಗ್ರಂಥದ ಮೂಲೋದ್ದೇಶ ಎನ್ನುವುದು ಇಲ್ಲಿ ಕಂಡುಬರುತ್ತದೆ. ಕೆಲವರು ’ಕೇವಲ ಸನ್ಯಾಸಿಗಳಿಗಾಗಿಯೇ ಈ ಗ್ರಂಥವಿರುವುದು, ಇದರಿಂದ ಬದುಕಿಗೆ ಯಾವ ಪ್ರಯೋಜನವೂ ಇಲ್ಲ’ ಎಂದು ಹೇಳುವುದನ್ನು ಕೇಳಿದ್ದೇನೆ. ಅವರಿಗಾಗಿ ಒಂದು ಮಾತು.
ಬದುಕುವುದಕ್ಕೆ ಜಗತ್ತಿನಲ್ಲಿ ಬೇಕಾದಷ್ಟು ಜಾಗವಿದೆ, ಮಾಡುವುದಕ್ಕೆ ಕೆಲಸವೂ ಇದೆ. ಅಂತಹವರು ಅವರವರ ಕೆಲಸಗಳನ್ನು ಮಾಡಿಕೊಂಡು ಬದುಕು ನೆಡೆಸಿಕೊಳ್ಳಬಹುದು. ಶ್ರೀ ಶಂಕರ ಭಗವತ್ಪಾದರೇನೂ ಎಲ್ಲರಿಗೂ ಮೋಕ್ಷವನ್ನು ಕೊಟ್ಟುಬಿಡುತ್ತೇನೆಂದು ಎಲ್ಲಿಯೂ ಬರೆದುಕೊಟ್ಟಿಲ್ಲ. ಬಂದವರಿಗೆ, ಆಸಕ್ತರಿಗೆ ಮಾತ್ರವೇ ಈ ಗ್ರಂಥದ ಉಪಯೋಗವಿರುವುದು ಎಂದು ಹೇಳಬೇಕಾಗುತ್ತದೆ.
ಒಬ್ಬರು ಬಹಳ ದೊಡ್ಡ ಪಂಡಿತರಿದ್ದರಂತೆ. ಎಲ್ಲವನ್ನು ತಿಳಿದುಕೊಂಡಿದ್ದ ಅವರನ್ನು ಮೀರಿಸುವವರು ಯಾರೂ ಇರಲಿಲ್ಲವಂತೆ. ಆದರೂ, ಕಾಶಿಯ ಪಂಡಿತರೊಡನೆ ಜಯ ಸಾಧಿಸದೆ ಸಾಧನೆಯು ಅಪೂರ್ಣ ಎಂಬ ಮಾತನ್ನು ಕೇಳಿದ ಪಂಡಿತರು ಕಾಶಿಗೆ ಹೋಗಿ ಮತ್ತಷ್ಟು ವಿದ್ಯೆಯನ್ನು ಕಲಿತು ಅಲ್ಲಿಯ ಪಂಡಿತರನ್ನು ಸೋಲಿಸಿ ತಮ್ಮ ಊರಿಗೆ ಮರಳಿದರಂತೆ. ಒಮ್ಮೆ ಊರಿನಲ್ಲಿದ್ದ ಒಬ್ಬ ಸಾಧಾರಣ ಮುದುಕ ಸಂತರೊಬ್ಬರು ಕೇಳಿದ ಪ್ರಶ್ನೆಯೊಂದಕ್ಕೆ ಪಂಡಿತರು ಉತ್ತರಿಸಲಾಗದೆ ಪರಾಭವ ಹೊಂದಿ ನಂತರ ಆ ಪ್ರಶ್ನೆಗೂ ಉತ್ತರ ಪಡೆಯಲೋಸುಗ ಮತ್ತೆ ಕಾಶಿಗೆ ತೆರಳಿದರಂತೆ. ನಾಲ್ಕೈದು ವರುಷಗಳ ಕಾಲ ಕಾಶಿಯಲ್ಲಿ ತಂಗಿದ್ದು ಇನ್ನಷ್ಟು ವಿದ್ಯೆಯನ್ನು ಕಲಿತು ಉತ್ತರವನ್ನು ಕಂಡುಕೊಂಡು ಊರಿಗೆ ಮರಳಿದರಂತೆ. ಅವರು ಬರುವಷ್ಟರಲ್ಲಿ ಪ್ರಶ್ನೆ ಹಾಕಿದ್ದ ಸಂತರು ತೀರಿಕೊಂಡಿದ್ದರಂತೆ !. ಉತ್ತರವನ್ನು ಯಾರಿಗೂ ಹೇಳಲಾಗದೆ ಪಂಡಿತರು ಬೇಸರಪಟ್ಟುಕೊಂಡರಂತೆ. ಆದರೇನು ? ಆ ನೆಪದಲ್ಲಿ ಇನ್ನಷ್ಟು ಕಲಿತುಕೊಂಡಿದ್ದು ಅವರಿಗೆ ಪ್ರಯೋಜನವೇ ಆಯಿತಲ್ಲಾ !. ಇಲ್ಲಿ ಮುಖ್ಯವಾಗಿ ಕಾಣುವುದು commitment ಎನ್ನುವುದು. ವಿರಾಗಿಗಳಾಗುದಕ್ಕೋಸ್ಕರವೇ ತಿಳಿಯಬೇಕೆಂದೇನೂ ಇಲ್ಲ ಅಥವಾ ತಿಳಿದಾಕ್ಷಣ ಯಾರೂ ವಿರಾಗಿಗಳಾಗುವುದೂ ಇಲ್ಲ !. ಜಿಜ್ಞಾಸೆಯು (= ಅರಿತುಕೊಳ್ಳಬೇಕೆಂಬ ಬಯಕೆ) ಎಲ್ಲಕ್ಕಿಂತ ಮುಖ್ಯವಾದುದು ಮತ್ತು ಮಾನ್ಯವಾದುದು ಎಂದು ಹೇಳಬಹುದು.
ಮುಂದಿನ ಕಂತಿನಲ್ಲಿ "ಇಹಾಮುತ್ರಫಲಭೋಗವೈರಾಗ್ಯ"ದ ವಿಚಾರವನ್ನು ತಿಳಿಯೋಣ.
------------------------------------------------------
ಟಿಪ್ಪಣಿ:-
*(೧)
ಮಧ್ವಾಚಾರ್ಯರ ಒಂಬತ್ತು ತತ್ವವಿರುವ ಪ್ರಸಿದ್ಧ ಶ್ಲೋಕ
ಶ್ರೀಮನ್ಮಧ್ವಮತೇ ಹರಿಃ ಪರತರೋ ಸತ್ಯಂ ಜಗತ್ತತ್ವತೋ
ಭೇದೋ ಜೀವಗಣಾ ಹರೇರನುಚರಾಃ ನೀಚೋಚ್ಛಭಾವಂ ಗತಾಃ |
ಮುಕ್ತಿರ್ನೈಜಸುಖಾನುಭೂತಿರಮಲಾ ಭಕ್ತಿಶ್ಚ ತತ್ಸಾಧನಂ
ಹ್ಯಕ್ಷಾದಿತ್ರಿತಯಂ ಪ್ರಮಾಣಮಖಿಲಾಮ್ನಾಯೈಕವೇದ್ಯೋ ಹರಿಃ ||
---------------------------------
ವಂದನೆಗಳೊಂದಿಗೆ....