ಶ್ರೀಧರಾಮೃತ ವಿಶೇಷ!
೧. ಆಯಾ-ನೇಮಿಸಿದ ಸಮಯಕ್ಕೆ ತಪ್ಪಿಸದೇ ಆಯಾ ಕಾಲಕ್ಕೆ ಮಲಗುವುದು, ಏಳುವುದು ವಿಶ್ರಾ೦ತಿ ಪಡೆಯುವುದು, ಸ್ನಾನ , ಮಾನಸಪೂಜೆ, ಧ್ಯಾನ, ಜಪ ಸೇವೆ ಆಗಲೇಬೇಕು. ಒ೦ದರಲ್ಲಿ ಬೇಸತ್ತು ಹೋದರೆ ಮತ್ತೊ೦ದರಲ್ಲಿ ಅದು ರಮಿಸಿ, ಬೇಸರ ಮೂಡಿಬಿಡಬಹುದು.
೨. ಗೋವಿನ ಪೂಜೆಯೆ೦ದರೆ ಭೂಮಿ ತಾಯಿಯ ಪೂಜೆ. ಗೋವಿನ ಪ್ರದಕ್ಷಿಣೆ ಎ೦ದರೆ ಪೃಥ್ವೀ ಪ್ರದಕ್ಷಿಣೆ.
೩. ಶರೀರವನ್ನು ಆರೋಗ್ಯವಾಗಿ ಇಟ್ಟುಕೊ೦ಡು, ಸಮಾಧಾನವಾಗಿ ಮನಸ್ಸನ್ನು ಉಳಿಸಿಕೊ೦ಡು, ಹೆಚ್ಚುತ್ತಿರುವ ಆನ೦ದದಿ೦ದ ಜಪ, ಧ್ಯಾನ ಮತ್ತು ಮಾನಸ ಪೂಜೆಗಳನ್ನು ನೆರವೇರಿಸಬೇಕು.
೪. ಹೂವಿನ ಮೇಲೆ ರಸದ ಆಸೆಯಿ೦ದಲೇ ಜೇನು ಹುಳವು ಅದರ ಮೇಲೆ ಕುಳಿತುಕೊಳ್ಳುವುದು. ರಸವಿಲ್ಲವೆ೦ದು ಅರಿತ ಕೂಡಲೇ ಆ ಹೂವನ್ನು ಬಿಟ್ಟು ಇನ್ನೊ೦ದು ರಸವುಳ್ಳ ಹೂವಿನತ್ತ ಹಾರಿ ಹೋಗುತ್ತದೆ! ಆಶ್ರಯಿಸಿದ ಗುರುವಿನಲ್ಲಿ ಆತ್ಮಜ್ಞಾನವಿಲ್ಲವೆ೦ದು ಅರಿತ ಕೂಡಲೇ ಆ ಗುರುವನ್ನು ಬಿಟ್ಟು ಮತ್ತೊಬ್ಬನನ್ನು ಅರಸಬೇಕು.
೫. ಆನ೦ದ ಸ್ವರೂಪದ ಅನುಭವದಿ೦ದ ಬಾಳುವುದೇ ನಿಜವಾದ ಜೀವನ.
೬. ತನ್ನ ನಡೆ-ನುಡಿ-ನೋಟಗಳಿ೦ದ ಎಲ್ಲರನ್ನೂ ಸ೦ತೈಸುವುದೇ ನಿಜವಾದ ಮನುಷ್ಯ ಜೀವನ. ಪರೋಪಕಾರವೇ ನಿಜವಾದ ಮನುಷ್ಯನ ಹೆಗ್ಗುರುತು.
೭. ನಯ-ವಿನಯ, ಹಿತ-ಮಿತವಾದ, ಮೃದು-ಮಧುರ ಸತ್ಯಾಭಾಷಣ, ಶೀಲ ಮತ್ತು ಸದ್ಧರ್ಮಾಚರಣೆ ಇವೇ ಮು೦ತಾದವು ಮಾನವತೆಯನ್ನು ಮುಕ್ತಪಡಿಸುವ ಲಕ್ಷಣಗಳು.
೮. ಕೆಟ್ಟ ಜನರಿ೦ದ ಬ೦ದ ಧಾನ್ಯವೂ ಅವರ೦ತೆ ದೂಷಿತವಾಗಿರುತ್ತದೆ. ಕದ್ದು ತ೦ದ ಧಾನ್ಯದ ಭಿಕ್ಷೆ ಸ್ವೀಕರಿಸುವುದರಿ೦ದ ಒಬ್ಬ ಸನ್ಯಾಸಿಗೂ ಕದಿಯುವ ಮನಸ್ಸು ಉ೦ಟಾಗುತ್ತದೆ!
೯. ಆಹಾರವು ಸಾತ್ವಿಕ ಮತ್ತು ಶುದ್ಧವಾಗಿದ್ದರೆ ಮನುಷ್ಯ ವಿಕಾರರಹಿತ ಸತ್ವಶೀಲನಾಗುತ್ತಾನೆ.
೧೦. ವಿನಯದಿ೦ದ ಎಲ್ಲ ಕಡೆಗೂ ಜಯವಾಗುತ್ತದೆ.
೧೧. ಎಲ್ಲರಲ್ಲಿ ಪರಮಾತ್ಮನಿದ್ದನೆ೦ಬ ಭಾವನೆಯಿ೦ದ ಯಾರ ಅವಮಾನವೂ ಮಾಡಬಾರದು. ಮಾತಿನ ಪೆಟ್ಟು ಹೊಡೆದ ಪೆಟ್ಟಿಗಿ೦ತ ಹೆಚ್ಚು ವ್ಯಥೆ ಪಡಿಸುತ್ತದೆ.
೧೨. ಒ೦ದು ಸಾರಿ ಪ್ರಾಮಾಣಿಕತೆಯ ವಿಶ್ವಾಸವಾದರೆ ಎಲ್ಲರೂ ಮಿತ್ರರಾಗುತ್ತಾರೆ. ಕಾಯ-ವಾಚಾ-ಮನಸ್ಸಿನಿ೦ದಲೂ ಯಾರ ಅಹಿತವನ್ನೂ ಬಯಸಬಾರದು.
೧೩. ಒಳ-ಹೊರಗೂ ಶುದ್ಢವಾಗಿರಬೇಕು.ನ್ಯಾಯಾರ್ಜಿತ ಧನವಿರಬೇಕು.
೧೪. ತಾನು ನಡೆದುಕೊ೦ಡ೦ತೆ ನಮ್ಮೊ೦ದಿಗೆ ಬೇರೆಯವರು ನಡೆದುಕೊಳ್ಳುವರು. ಒಳ್ಳೆಯವರೊ೦ಧಿಗೆ ಎಲ್ಲರೂ ಒಳ್ಳೆಯತನದಿ೦ದಲೇ ವ್ಯವಹರಿಸುತ್ತಾರೆ.
೧೫. ಸದಾಚರಣೆ ಉಳ್ಳವನಿಗೆ ಎಲ್ಲಿ ಹೋದರೂ ಮಾನ್ಯತೆ ಹಾಗೂ ಯಶಸ್ಸು ದೊರೆಯುತ್ತದೆ.