Pages

Friday, February 14, 2014

ಶುಚೀವೋ ಹವ್ಯಾ ಮರುತ:

||ಶುಚೀವೋ ಹವ್ಯಾ ಮರುತ: ||

ಋಗ್ವೇದದ ೭ ನೇ ಮಂಡಲದ ೫೬ ನೇ ಸೂಕ್ತದ ೧೨ ನೇ ಈ ಮಂತ್ರವು ನಮ್ಮ ಕಣ್ ತೆರಸದಿದ್ದರೆ ನಾವು ಯಾವ ದೇವರಿಗೆ ಎಷ್ಟು ಸೇವೆಮಾಡಿದರೂ ನಿಶ್ಪ್ರಯೋಜಕವೇ. ಈ ಮಂತ್ರವಾದರೂ ಏನು ಹೇಳುತ್ತದೆ? ನಾವು ಭಗವಂತನಿಗೆ ಅರ್ಪಿಸುವ ಹವಿಸ್ಸು ಶುಚಿಯಾಗಿರಲಿ. ಅಂದರೆ ಏನು? ಅದಕ್ಕೆ ಡಿ.ವಿ.ಜಿ ಯವರ ಕಗ್ಗ ನೆನಪಾಗಬೇಕು.

ಅನ್ನವುಣುವಂದು ಕೇಳ್
ಅದನು ಬೇಯಿಸಿದ ನೀರ್
ನಿನ್ನ ದುಡಿತದ ಬೆಮರೋ
ಪರರ ಕಣ್ಣೀರೋ?

ಅಬ್ಭಾ! ಈ ಮಾತನ್ನು ಡಿ.ವಿ.ಜಿ ಯವರು ಹೇಳಬೇಕಾದರೆ ಅವರ ಜೀವನ ಅಷ್ಟು ಪರಿಶುದ್ಧವಾಗಿತ್ತು. ಅಂತಾ ಮೇಧಾವಿಯು ಮನಸ್ಸು ಮಾಡಿದ್ದರೆ ಸುಖಭೋಗಗಳನ್ನು ಅನುಭವಿಸಬಹುದಿತ್ತು. ಆದರೆ ಜೀವನ ಪರ್ಯಂತ ಕಷ್ಟದ ಬದುಕನ್ನೇ ನಡೆಸಿಬಿಟ್ಟರು. ಅವರು ದೈವಾದೀನರಾದ ಮೇಲೆ ಬೆಳಕಿಗೆ ಬಂದ ಒಂದು ಸುದ್ಧಿಯಂತೂ ಅವರನ್ನು ಇನ್ನೂ ಎತ್ತರಕ್ಕೆ ಏರಿಸಿಬಿಡುತ್ತದೆ.

ಅವರು ಕಾಲವಾದ ಕೆಲವಾರು ದಿನಗಳಲ್ಲಿ ಅವರು ಉಪಯೋಗಿಸುತ್ತಿದ್ದ ಟ್ರಂಕ್ ಒಂದರಲ್ಲಿ  ನೂರಾರು ಚೆಕ್ ಗಳು ಕಾಣುತ್ತವೆ. ಅವೆಲ್ಲವೂ ಯಾವುವು ಗೊತ್ತೇ? ಅವರ ಅಭಿಮಾನಿಗಳು ಅವರಿಗೆ ಕಾರ್ಯಕ್ರಮದಲ್ಲಿ ಕೊಟ್ಟಿದ್ದ ಸಂಭಾವನೆಯ ಚೆಕ್ ಗಳು! ಬೇಡವೆಂದರೆ ಅಭಿಮಾನಿಗಳು ಬೇಸರಗೊಂಡಾರೆಂದು ಕೊಟ್ಟಂತಹ  ಚೆಕ್ ಗಳನ್ನು  ತೆಗೆದುಕೊಳ್ಳುತ್ತಿದ್ದರು. ಆದರೆ ಅದನ್ನು   ನಗದು ಮಾಡಿಸಿಕೊಳ್ಳದೆ ಒಂದು ಕಡೆ ಎತ್ತಿಡುತ್ತಿದ್ದರಂತೆ. ಹಾಗೆಯೇ ಅವಧಿಕಳೆದು ನಗದಾಗದ ಚೆಕ್ ಗಳ ಒಟ್ಟು ಮೌಲ್ಯ ಲಕ್ಷಾಂತರ ರೂಗಳು. ಆದರೆ ನಿತ್ಯವೂ ಜೀವನಕ್ಕೆ ಕಷ್ಟಪಡುತ್ತಿದ್ದುದು ಸುಳ್ಳಲ್ಲ.

ಅಬ್ಭಾ! ಡಿ.ವಿ.ಜಿ ಯವರದು ಅಷ್ಟು ಅಪ್ಪಟ ಬದುಕು. ಅನ್ಯರ ಹಣವೆಂದರೆ ಅದು ವಿಷ. ತಾವು ಮಾಡುತ್ತಿದ್ದ ಉಪನ್ಯಾಸಕ್ಕೆ ಸಂಭಾವನೆ ತೆಗೆದುಕೊಳ್ಳುವುದೇ? ಛೇ!!  ಜ್ಞಾನವನ್ನು ಮಾರಿಕೊಳ್ಳಬೇಕೇ? ತಾವು ತಿಳಿದಿದ್ದನ್ನು ಬೇರೆಯವರಿಗೆ ತಿಳಿಸಬೇಕು. ಅಷ್ಟೆ. ಅದಕ್ಕೆ ಸಂಭಾವನೆ ತೆಗೆದುಕೊಳ್ಳುವುದೇ ಅಪರಾಧ!

ಇಂತಹಾ ಉನ್ನತವಾದ  ಆದರ್ಶ ಜೀವನ ಮಾಡುತ್ತಿದ್ದವರು ಮಾತ್ರವೇ  ಇಂತಹ ಸಾಲುಗಳನ್ನು ಬರೆಯಲು ಅರ್ಹರು. ಎಲ್ಲಾ ಕವಿಗಳೂ ಇಂತಹ ಪದ್ಯಗಳನ್ನು ಬರೆಯಲು ಅರ್ಹತೆ ಹೊಂದಿರುವುದಿಲ್ಲ. ಬರೆಯುವುದು ಒಂದು, ಮಾಡುವುದು ಮತ್ತೊಂದು ಇರುವಂತಿಲ್ಲ.

ಡಿ.ವಿ.ಜಿ. ಯವರ ಮಾತು ನೋಡಿ ಎಷ್ಟು ಕಠೋರಸತ್ಯವನ್ನು ಬಿಚ್ಚಿಡುತ್ತದೆ!  ತಾನು ಊಟಮಾಡುವಾಗ ಬಾಯಿಗೆ ತುತ್ತು ಇಡುವ ಮುಂಚೆ ತನ್ನ ಅಂತರಂಗದಲ್ಲಿ ಪ್ರಶ್ನೆ ಹಾಕಿಕೊಳ್ಳಬೇಕಂತೆ " ಈ ತುತ್ತು ತಾನು ಸತ್ಯವಾಗಿ ದುಡಿದು ಸಂಪಾದಿಸಿದ್ದೋ? ಅಥವಾ ಅನ್ಯರಿಗೆ ಕಣ್ಣೀರ ಹಾಕಿಸಿ ಗಿಟ್ಟಿಸಿದ್ದೋ? "
           ಅಬ್ಭಾ! ಇಂತಾ ಪ್ರಶ್ನೆಯನ್ನು ಪ್ರಾಮಾಣಿಕವಾಗಿ ಒಬ್ಬ ಮನುಷ್ಯ ಊಟಕ್ಕೆ ಮುಂಚೆ ತನಗೆ ತಾನು ಹಾಕಿಕೊಂಡು ಬಿಟ್ಟರೆ ಅದು ಸತ್ಯದ ದುಡಿಮೆ ಯಾದರೆ ಮಾತ್ರ ಗಂಟಲಿನಲ್ಲಿ ಇಳಿದೀತು! ಇಲ್ಲವಾದರೆ ಆ ತುತ್ತನ್ನು ತಿನ್ನಲು ಅವನ ಮನಸ್ಸು ಒಪ್ಪುವುದೇ ಇಲ್ಲ.   ಆ ಘಳಿಗೆಯಿಂದ ಅವನ ಚಿಂತನೆಯೇ ಬದಲಾಯಿಸಿ ಬಿಡ  ಬೇಕಾಗುತ್ತದೆ. ಅಸತ್ಯಮಾರ್ಗದ ಗಳಿಕೆಯನ್ನು ಅಂದಿಗೆ ನಿಲ್ಲಿಸಿ ಸತ್ಯವಾದ ಮಾರ್ಗದಲ್ಲಿ ದುಡಿದು ತಿಂದಾಗ ಅವನಿಗೆ ತೃಪ್ತಿಯಾಗುತ್ತದೆ.

ತಾನು ತಿನ್ನುವ ತುತ್ತು ಅನ್ನದ ಬಗ್ಗೆ ಇಷ್ಟು ಕಠೋರವಾದ ಸತ್ಯಮಾರ್ಗವನ್ನು ಡಿ.ವಿ.ಜಿ ಯವರು ಹೇಳುವಾಗ ಇನ್ನು ಭಗವಂತನ ವಿಚಾರ ಬಂದಾಗ!

ವೇದವು ಹೇಳುತ್ತದೆ.....

||ಶುಚೀವೋ ಹವ್ಯಾ ಮರುತ: ||

ತಾನು ಅರ್ಪಿಸುವ ಹವಿಸ್ಸು ಶುಚಿಯಾಗಿರಲಿ. ಅಂದರೆ ಏನು? ತನ್ನ ಸತ್ಯವಾದ ದುಡಿಮೆಯಿಂದ ಮಾತ್ರವೇ ಭಗವಂತನ ಕೆಲಸ ಮಾಡಬೇಕು. ಯಾಗ ಯಜ್ಞಾದಿಗಳನ್ನು ಮಾಡುವಾಗ,ಪೂಜೆ ಪುನಸ್ಕಾರಗಳನ್ನು ಮಾಡುವಾಗ ..ಯಾವ ದುಡಿಮೆಯಿಂದ ಮಾಡಬೇಕೆಂಬುದಕ್ಕೆ ವೇದವು ಹೇಳುತ್ತದೆ " ನೀವು ಅರ್ಪಿಸುವ ಹವಿಸ್ಸು ಶುಚಿಯಾಗಿರಲಿ" ಅಂದರೆ ಸತ್ಯವಾದ ದುಡಿಮೆಯಿಂದ ಗಳಿಸಿದ್ದಾಗಿರಲಿ.
ಆದರೆ ನಾವು ಕಾಣುವುದೇನು?

ಲೋಕ ಕಲ್ಯಾಣದ ಹೆಸರಲ್ಲಿ ಬಹಳ ವಿಜೃಂಬಣೆಯಿಂದ ಯಾಗ ಯಜ್ಞಾದಿಗಳನ್ನು ಮಾಡುವುದು ಸಾಮಾನ್ಯ. ಆದರೆ ಅದಕ್ಕೆ ಬಳಕೆಯಾಗಿರುವ ಹಣದ ಮೂಲ?
ಒಮ್ಮೆ ಈ ಬಗ್ಗೆ ಆಳವಾಗಿ ಚಿಂತಿಸಿದರೆ ನಾವು ಮಾಡುವುದೆಲ್ಲವೂ ವೇದ ವಿರುದ್ಧ ಎನಿಸಿಕೊಳ್ಳದೇ ಇರದು. ಯಾರೋ ದೊಡ್ಡ ಉಧ್ಯಮಿ ಲಕ್ಷಾಂತರ ರೂಪಾಯಿ ದಾನ ಕೊಟ್ಟಿರುತ್ತಾನೆ. ಅದರಲ್ಲಿ  ಲೋಕ ಕಲ್ಯಾಣಕ್ಕಾಗಿ ಯಾಗವನ್ನು ಮಾಡಲಾಗುತ್ತದೆ. ಆದರೆ ಆ ಉಧ್ಯಮಿ ಅವನ ಉಧ್ಯಮದಲ್ಲಿ ಶ್ರಮಿಕರ ಶ್ರಮಕ್ಕೆ ಸೂಕ್ತವಾದ ವೇತನವನ್ನು ನೀಡಿದ್ದಾನೆಯೇ? ಶ್ರಮಿಕರ ಕಣ್ಣೀರು ಹಾಕಿಸಿಲ್ಲವೇ? ಇವೆಲ್ಲವನ್ನೂ ತಿಳಿದು ಅವನ ಗಳಿಕೆ ಧರ್ಮವಾದ ಗಳಿಕೆ ಎಂದು ಖಾತ್ರಿಯಾದಾಗ ಅದು ಸ್ವೀಕಾರಾರ್ಹ. ಆದರೆ ಸತ್ಯವು ಗೊತ್ತಿದ್ದೂ  ಅಧರ್ಮವಾದ ಗಳಿಕೆಯಲ್ಲಿ ಧರ್ಮಕಾರ್ಯಗಳಿಗೆ ದಾನವಾಗಿ ಹಣವನ್ನು ಪಡೆಯುತ್ತಿಲ್ಲವೇ? ಇಂತಹಾ ಕಟು ಸತ್ಯಗಳನ್ನು ನಾವು ನೋಡುತ್ತಲೇ   ಇರುತ್ತೇವೆ.

ಒಬ್ಬ ಮಹನೀಯರಂತೂ ನನಗೆ ಹೇಳಿದರು " ನಾಯಿ ಮಾರಿದ ಹಣ   ಬೊಗಳುತ್ತದೇನು? "
ಅದರರ್ಥ ಹೇಗೆ ಬಂದಿದ್ದರೇನು ಸ್ವಾಮಿ, ನಿಮ್ಮ ಪಾಡಿಗೆ ನೀವು ಇದರ ಸದ್ವಿನಿಯೋಗ ಮಾಡಿಕೊಳ್ಳಿ.

ನಿಜವಾಗಿ  ಅದ್ಧೂರಿಯಾಗಿ ಲಕ್ಷ ಲಕ್ಷ  ರೂಪಾಯಿ ಖರ್ಚುಮಾಡಿ ಲೋಕ ಕಲ್ಯಾಣದ ಹೆಸರಲ್ಲಿ ಯಾಗ ಯಜ್ಞಾದಿಗಳನ್ನು ಮಾಡುವ ಮುಂಚೆ  ಹಣದ ಮೂಲವನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ. ಸರ್ಕಾರಕ್ಕೆ ವಂಚಿಸಿದ, ಶ್ರಮಿಕರಿಗೆ ವಂಚಿಸಿದ, ಹಣದಲ್ಲಿ ಯಾವ ಯಾಗ ಯಜ್ಞಾದಿಗಳನ್ನು  ಮಾಡಿದರೂ ಪ್ರಯೋಜನವಿಲ್ಲ.

ಸತ್ಯಮಾರ್ಗದಲ್ಲಿ ಗಳಿಸಿ ಧರ್ಮಕಾರ್ಯ ಮಾಡುವ ಜನರು ಇಲ್ಲವೆಂದಲ್ಲಾ. ಆದರೆ ಅಪರೂಪ. ನಾನು ಲೋಕಕಲ್ಯಾಣಕ್ಕಾಗಿ ಮಾಡುವ ಕೆಲಸಗಳಿಗೆ ಅಧರ್ಮದ ಹಣವನ್ನು ಸ್ವೀಕರಿಸುವುದಿಲ್ಲ ಎಂದು ಸಂಕಲ್ಪ ಮಾಡುವವರು ವಿರಳ.  ಈ ಸತ್ಯವನ್ನು ಪಾಲಿಸುವ ಎದೆಗಾರಿಕೆ ಬರಲು ವೇದದ ಹಿನ್ನೆಲೆ ಇರಬೇಕು.