Pages

Thursday, November 11, 2010

ವಿಧಿಲಿಖಿತ

ಹುಟ್ಟು ಸಾವುಗಳೆಲ್ಲ ನಮ್ಮ ಕೈಯೊಳಗಿಲ್ಲ
ಪಟ್ಟ ಪದವಿಯ ಬಯಸಿ ಹೊರಟಿಹೆವು ನಾವು
ಕೊಟ್ಟ ಪಾತ್ರವ ಮಾಡು ಪೋಷಿಸುತ ಚೆನ್ನಾಗಿ
ಮೆಟ್ಟಿ ಮಿಥ್ಯದ ಬಯಕೆ | ಜಗದಮಿತ್ರ

ಹೊರಗೆ ಬಣ್ಣದ ಗೋಡೆ ಒಳಗೆ ಮಣ್ಣಿನಗಚ್ಚು
ನರನಾಡಿಗಳ ರೀತಿ ತಂತಿ ತುಂಬಿಹುದು
ನರನ ನಯನವ ನಲಿಸಿ ಬಣ್ಣ ಬಿರುಕನು ಮುಚ್ಚಿ
ಹರನಮರೆಸುವ ತಂತ್ರ | ಜಗದಮಿತ್ರ

ಇರುವನಕ ಬೇಕೆಮಗೆ ಸಂಪತ್ತು ಧನಕನಕ
ಬರುವಾಗ ತರಲಿಲ್ಲ ಹೋಗುವಾಗಿಲ್ಲ
ಮರೆಯದಲೆ ಉಪಕ್ರಮಿಸು ಪರದ ಸತ್ಯವನರಿತು
ಗುರುತನದಿ ಬಾಳುನೀ | ಜಗದಮಿತ್ರ

ಕರ್ಮಬಂಧನದಿಂದ ಬಂಧಿತವು ಈ ಜೀವ
ಮರ್ಮವರಿಯದ ನಮಗೆ ತರುತಿಹುದು ಕಾವ
ಚರ್ಮವ್ಯಾಧಿಯರೀತಿ ಮರುಹುಟ್ಟು ಮತ್ತಂತ್ಯ
ತೀರ್ಮಾನ ಮನಕಿರಲಿ | ಜಗದಮಿತ್ರ

ಹಳೆಯ ಕಟ್ಟಡದಂತೆ ಸೋರುವುದು ಜೀವಜಗ
ಮಳೆಯ ಅಜ್ಞಾನದಾ ನೀರು ಹನಿಸುತಲಿ
ಕೊಳೆಯ ಎಳೆಯುತ ತಂದು ಸೋಕಿಸುತ ಮೈಮನಕೆ
ಮೆಳೆಯ ಮಾಯೆಯ ಮುಸುಕಿ | ಜಗದಮಿತ್ರ

ನನ್ನಮನೆ ನನ್ನಜನ ನಾನು ನನದೇ ಎಂಬ
ಕನ್ನವಿಕ್ಕುವ ಕೆಲಸ ಕಾರ್ಯಗಳು ಬೇಡ
ಮುನ್ನ ನೀ ಅರ್ಥವಿಸಿ ಚೆನ್ನಾಗಿ ಬ್ರಹ್ಮಾಂಡ
ಕನ್ನಯ್ಯನೊಲುಮೆ ಪಡೆ| ಜಗದಮಿತ್ರ

ಮತ್ತೆ ಹುಟ್ಟುವ ಬಯಕೆ ಗಗನದೆತ್ತರದಾಸೆ
ಮತ್ತುಬರಿಸುತ ಆತ್ಮಕಡರುತಿದೆ ಬಳ್ಳಿ
ಕುತ್ತು ಇದ ತಿಳಿದು ನೀ ಪಥ್ಯಜೀವಿತ ನಡೆಸಿ
ಹತ್ತು ಆ ಪರಮಪದ | ಜಗದಮಿತ್ರ

-ವಿ.ಆರ್ .ಭಟ್

ಇದ್ದರಿರಬೇಕು ನಿನ್ನಂತೆ



ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ|
ನೀನಿರುವ ಕಾಲದಲಿ ಪರಿಮಳವ ಹರಡಿ
ಬಹುಬೇಗ ನೀ ಬಾಡುವೆಯಲ್ಲಾ|
ನಿನ್ನನಾರು ಬಹುಕಾಲ ಇರಬೇಡವೆಂದವರು|
ಇದ್ದರಿರಬೇಕು.......

ನಿನ್ನನೇ ತೇಯುತ್ತಾ ಕರಗಿಹೋಗುವೆ ನೀನು|
ಅಳಿಯುವಾಗಲು ಅಳದೆ ಕೊಡುವೆ ಶ್ರೀಗಂಧವನು|
ನಿನ್ನ ಕೊರಡೆಂದ ನಾ ಕೊನೆಗಾಲದಲ್ಲಿ
ಸುಟ್ಟು ಬೂದಿಯಾಗದಿರೆ ಕೊಳೆತು ನಾರುವೆನಿಲ್ಲಿ|
ಇದ್ದರಿರಬೇಕು.......

ನಿನ್ನನೇ ಉರಿಸುತ್ತಾ ಕೊಡುವೆ ಬೆಳಕನ್ನು|
ನಿನ್ನನರಿಯದೆ ಆದೆ ಬಿರುಗಾಳಿ ನಾನು|
ಭೇದಭಾವ ಅರಿಯದ ಜ್ಯೋತಿ ನೀನು|
ನಿನ್ನ ಬೆಳಕಲಿ ಬದುಕು ಸವೆಸುವವ ನಾನು|
ಇದ್ದರಿರಬೇಕು.......

-----------------------------

ರಚನೆ: ಹರಿಹರಪುರಶ್ರೀಧರ್
ಗಾಯಕಿ: ಶ್ರೀಮತಿ ಲಲಿತಾರಮೇಶ್

ಜ್ಞಾತನಾಗು



ಚಿತ್ರ ಋಣ: ಅಂತರ್ಜಾಲ

ಬದುಕು ಕಲಿಸುವ ಪಾಠ ಬಹಳ ಮೌಲ್ಯದ್ದಹುದು
ಕೆದಕಿ ಬರೆದರು ಹೊತ್ತಗೆಗಳ ಪೂರ್ವಜರು
ಪದಕ ಪದವಿಯ ವಿಶ್ವವಿದ್ಯಾಲಯಕಂ ಮಿಗಿಲು
ಅದಕುಂಟೆ ಸರಿಸಾಟಿ | ಜಗದಮಿತ್ರ

ಓದುತ್ತ ಅರಿ ಮೊದಲು ಮಾಡುತ್ತ ತಿಳಿ ಹಲವು
ಬಾಧಕವೇ ಬೇಡವೆನ್ನುತ ಕೂರಬೇಡ
ಹಾದಿಬೀದಿಯಲೊಮ್ಮೆ ನೋಡುತ್ತ ಕಲಿ ಕೆಲವು
ಆದರಿಸು ಆದರ್ಶ | ಜಗದಮಿತ್ರ

ದೇಹಕ್ಕೆ ಸ್ನಾನವನು ಮಾಳ್ಪ ರೀತಿಯಲೊಮ್ಮೆ
ಸಾಹಸದಿ ಮನಸನ್ನು ಸ್ನಪನಗೊಳಿಸುವೊಲು
ಆಹಾರ-ನಿದ್ದೆ-ಮೈಥುನಗಳಲಿ ಹದವಿರಿಸಿ
ವಿಹರಿಸು ಧ್ಯಾನದಲಿ | ಜಗದಮಿತ್ರ

ಮನವು ಎಲ್ಲಕು ಮೂಲ ಕಾರಣವು ಕಾರ್ಯಕ್ಕೆ
ಅನುಗೊಳಿಸು ಅಭ್ಯಸಿಸಿ ಪ್ರಾಜ್ಞ ಜೀವಿತವ
ಮನುಕುಲದಿ ಸಮಯ ಸದ್ವಿನಿಯೋಗಿಸುತ ನಡೆಸು
ನೆನೆವಂತ ಕೆಲಸಗಳ | ಜಗದಮಿತ್ರ

ಉತ್ತಮದ ಪುಸ್ತಕಗಳೇ ನಮ್ಮ ಆಸ್ತಿಗಳು
ಪತ್ತಿನಲಿ ಮನವನ್ನು ಮುದಗೊಳಿಸುವುದಕೆ
ಹೊತ್ತುಹೊತ್ತಿಗೆ ಅವುಗಳಂ ತೆರೆದು ತುಂಬುತ್ತ
ಎತ್ತು ನಿನ್ನಯ ಮಟ್ಟ | ಜಗದಮಿತ್ರ

ಸುಜ್ಞಾನಿಗಳ ಬದುಕು ಪರರಜ್ಞಾನ ನೀಗಿಸಲು
ವಿಜ್ಞಾನಿಗಳು ಶ್ರಮಿಸಿ ಸಂಶೋಧಿಸುವರು
ಅಜ್ಞಾನಕಿಂತ ಬೇರೊಂದು ದೋಷವದಿಲ್ಲ
ಪ್ರಜ್ಞಾನ ನೀ ಗಳಿಸು | ಜಗದಮಿತ್ರ

-ವಿ.ಆರ್.ಭಟ್

ಅದ್ವೈತ-ದ್ವೈತ-ವಿಶಿಷ್ಟಾದ್ವೈತಗಳಲ್ಲಿನ ಮೂಲ ಆಶಯವೇನು?

ಹಾಸನದ ಶ್ರೀ ಶಂಕರಮಠದಲ್ಲಿ ನಡೆದ ಶ್ರೀ ಶಂಕರಜಯಂತಿ ಸಂದರ್ಭದಲ್ಲಿ ಶ್ರೀ ಸುಧಾಕರಶರ್ಮರು ೧೭.೫.೨೦೧೦ ರಂದು ಮಾಡಿದ ಉಪನ್ಯಾಸ-"ಮಣೀಷಾ ಪಂಚಕ"
ನಮ್ಮ ನಂಬಿಕೆಗಳನ್ನು ಬುಡಮೇಲು ಮಾಡುವಂತಹ ವಿಶ್ಲೇಷಣೆ, ಆದರೆ ಸಮಾಧಾನಕರವಾಗಿ ಮನದಟ್ಟು ಮಾಡುವ ಸರಳಮಾತುಗಳು.
ನಿಮಗೆ ಕೇವಲ ೩೦ ನಿಮಿಷಗಳ ಸಮಯ ಇದೆಯೇ? ಗಡಿ ಬಿಡಿಯಲ್ಲಿ ಕೇಳಬೇಡಿ. ಮಲಗುವಾಗಲಾದರೂ ಅರ್ಧ ಗಂಟೆ ಈಆಡಿಯೋ ಕೇಳಿ. ನಿಮ್ಮ ಮನದಲ್ಲಿ ಮೂಡುವ ಸಂಶಯಗಳನ್ನು ವೇದಸುಧೆಗೆ ಬರೆಯಿರಿ. ಶರ್ಮರಿಂದ ಸಮಾಧಾನಕರ ಉತ್ತರಪಡೆಯಿರಿ.

* ಶೂದ್ರರು ವೇದ ಪಠಣಮಾಡಬಾರದೇ?
* ಸ್ತ್ರೀಯರು ವೇದಪಠಣಮಾಡಬಾರದೆಂದು ಶ್ರೀಶಂಕರರು ಹೇಳಿದರೆ?
* ಅದ್ವೈತ-ದ್ವೈತ-ವಿಶಿಷ್ಟಾದ್ವೈತಗಳಲ್ಲಿನ ಮೂಲ ಆಶಯವೇನು?
* ಶ್ರೀ ಶಂಕರರ ಪರಕಾಯಪ್ರವೇಶ

ಗಾಯತ್ರಿ ಮಂತ್ರ