Pages

Monday, June 11, 2012


ಪ್ರಳಯ ............................ಒಂದಷ್ಟು ಚಿಂತನೆ.


ಡಿಸೆಂಬರ್ 21, 2012 ರಂದು ಈ ಜಗತ್ತು ಮುಳುಗಲಿದೆ, ಎಲ್ಲಿ ನೋಡಿದರು ನೀರು, ಈ ಜಲಪ್ರಳಯದಲ್ಲಿ ಹಿಮಾಲಯದ ಮೌಂಟ್  ಎವೆರೆಸ್ಟ್ ಮೇಲೆ ಹರಿಯುವಷ್ಟು ಪ್ರಮಾಣದಲ್ಲಿ ನೀರು ಉಕ್ಕುತ್ತದೆ, ಎಂದು ಕೆಲವರ ಅಭಿಪ್ರಾಯ.  ಸೌರಮಂಡಲದಲ್ಲಿ ಭೂಮಿಯ ಗಾತ್ರಕ್ಕಿಂತ ಆರೆಂಟು ಪಟ್ಟು ದೊಡ್ಡದಿರುವ ದೈತ್ಯ ಗ್ರಹವೊಂದು ಭೂಮಿಯ ಮೇಲೆ ಅಪ್ಪಳಿಸಲಿದೆ ; ಭೂಮಿಯ ಗುರುತು ಸಿಗದ ಹಾಗೆ ಕಣ್ಮರೆಯಾಗುತ್ತದೆ ಎಂಬುದು ಕೆಲವರ ಅಭಿಪ್ರಾಯ.   ದೇವರ ಮತ್ತು ಸೈತಾನನ ನಡುವೆ ಕಾಳಗ ಕೊನೆಗೊಳ್ಳಲಿದೆ ಎನ್ನುವುದು ಬೈಬಲ್ ನ ಅಭಿಮತ.  ಭೂಮಿಯು ತನ್ನ ಗುರುತ್ವಾಕರ್ಷಣೆ ಕಳೆದುಕೊಂಡು ಸೂರ್ಯನ ಚಲನೆ ಅಸ್ಥವಸ್ತ ವಾಗಿ  ಭೂಮಿಯ ವಿನಾಶ ಖಂಡಿತ ಎನ್ನುವುದು ಚೀನಿಯ ಸಿದ್ಧಾಂತ.  ಇನ್ನೂ ಹೀಗೆ ಹಲವು ಹದಿನೆಂಟು ರೀತಿಯಲ್ಲಿ ಪ್ರಳಯದ ವಿವರಣೆ ನಡೆಯುತ್ತಿದೆ.

ಈ ವಿಚಾರವನ್ನು ಬಂಡವಾಳ ಮಾಡಿಕೊಂಡು ಹಲವಾರು ಪ್ರಚಾರ ಮಾಧ್ಯಮ ಸಂಸ್ಥೆಗಳು ಪುಸ್ತಕ, ಸಿ ಡಿ, ಡಿ ವಿ ಡಿ ಗಳನ್ನೂ ಬಿಡುಗಡೆ ಮಾಡಿ ಜನರಿಗೆ ಮತ್ತಷ್ಟು ನಡುಕ ಹುಟ್ಟಿಸಿದ್ದಾರೆ.  ವೆಬ್ ಸೈಟ್ ಗಳು ಹಲವಾರು ವಿಚಾರಗಳನ್ನು ಕಲೆಹಾಕಿ ವರ್ಣರಂಜಿತವಾಗಿ ಬಿಂಬಿಸಿದೆ. " 2012 ರ ನಂತರ ಪ್ರಪಂಚದ ಕೊನೆ " ಎಂಬ ಸಿನಿಮಾ ಕೂಡ ಬಿಡುಗಡೆಯಾಗಿದೆ. ಇವೆಲ್ಲವನ್ನೂ ಓದಿ, ನೋಡಿದ ಮೇಲೆ ಯಾರಿಗೆ ಆದರು ಹೆದರಿಕೆ ಆಗುವುದು ಸಹಜ.  ಆದರೂ, ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಇದೆಲ್ಲ ಸತ್ಯವೇ?  ಇದನ್ನು ನಂಬಬಹುದೇ?  ಎಂಬುದು ತಲೆಯಲ್ಲಿ ಸುಳಿಯುತ್ತದೆ.  ಕೆಲವರು ಇಂತಹ ವಿಚಾರ ಬಂದಾಗ " ಇವೆಲ್ಲ ಬರಿ ಡೋಂಗಿ, ಒಂದಿಷ್ಟು ಕಟ್ಟು ಕಥೆ ಕಣ್ರೀ " ಎಂದು ತೇಲಿಸಿ ಬಿಡುತ್ತಾರೆ.  ಆದರೂ,  ಜನಸಾಮಾನ್ಯರಲ್ಲಿ  ಒಂದು ರೀತಿಯ ಭ್ರಾಂತಿ  ಹುಟ್ಟುತ್ತದೆ.

ಇಂತಹ ಒಂದು ಸಂಧರ್ಭದಲ್ಲಿ ಭಾರತೀಯ ಕಾಲ ನಿರ್ಣಯ ಏನು ಹೇಳುತ್ತದೆ? ಸ್ವಲ್ಪ ಗಮನಿಸೋಣ.  ಸೃಷ್ಟಿಯ ಆದಿಯಿಂದ ಅಂತ್ಯದವರೆಗೆ ಕಾಲದ ವಿಸ್ತಾರ.  ಅತ್ಯಂತ ಸೂಕ್ಷ್ಮವಾದ ಅಣುವೆ ಇರಲಿ, ಅತ್ಯಂತ ಮಹತ್ತಾದ ಲೋಕವೇ ಇರಲಿ,  ಇವೆಲ್ಲವೂ ಈ ಕಾಲದ ಗಣನೆಗೆ ಒಳಪಟ್ಟಿವೆ.  ಒಂದು ಕ್ಷಣದಿಂದ ಹಿಡಿದು ಯುಗಯುಗಗಳವರೆಗೆ  ಈ ಗಣನೆ ನಿಖರವಾಗಿದೆ. ನಾವೆಲ್ಲಾ ಬಾಯಿಪಾಟ ಮಾಡಿದ ಮಗ್ಗಿಯಷ್ಟೇ ಸರಳವಾಗಿರುವ ಈ ಕಾಲ ಚಕ್ರ-- ಕ್ಷಣ, ಚುರುಕಾ, ವಿಘಳಿಗೆ, ಘಳಿಗೆ, ದಿನ, ಮಾಸ, ವರ್ಷ,ಸಂವತ್ಸರ ಮತ್ತು ಯುಗ ಹೀಗೆ ಸಾಗುತ್ತದೆ.   ಇದು ಒಂದು ಕಾಲದ ಆವರ್ತನ.   ಈ ಆವರ್ತನಗಳಿಗೆ ಯಾವುದೇ ವಸ್ತು, ವ್ಯಕ್ತಿ, ಅಥವಾ ಶಕ್ತಿ ಸಿಲುಕಿರಲಿ ಅದು ಈ ಕಾಲದೊಂದಿಗೆ ಸುತ್ತಲೇ ಬೇಕು.  ಜನನ- ಜೀವನ-ಮರಣ ಈ ಕ್ರಮಾವರ್ತನೆಗೆ ಒಳಗಾಗಲೇ ಬೇಕು.  ಅತ್ಯಲ್ಪಕಾಲ ಬದುಕುವ ಜೀವವೇ ಆಗಲಿ, ಕೋಟ್ಯಂತರ ವರ್ಷಗಳ ಕಾಲ ಬದುಕುವ ವಸ್ತು ಅಥವಾ ಜೀವವೇ ಆಗಲಿ, ಈ ಆವರ್ತನೆಯಿಂದ ಹೊರತಲ್ಲ.  ಹುಟ್ಟಿದ್ದು ಸಾಯಲೆಬೇಕೆಂಬುದು  ಸೃಷ್ಟಿಯ ನಿಯಮ. ಎಲ್ಲವು ಲಯವಾದಾಗ ಉಳಿಯುವುದು ಶೂನ್ಯ ಮಾತ್ರ- ನಿಶೂನ್ಯ.  ಇದೇ ಬಾಹ್ಯ ಅಂತಃಕರಣಗಳಿಗೆ ನಿಲುಕದ ಅಗೋಚರ ಅದಮ್ಯನಾದ ಪರಮಾತ್ಮ.

ಕೃತಯುಗ, ತ್ರೇತಾಯುಗ, ದ್ವಾಪರಯುಗ, ಮುಗಿಸಿ ಕಲಿಯುಗಕ್ಕೆ ಕಾಲಿರಿಸಿರುವ ನಾವು, ನಾಲ್ಕು ಪಾದವಿರುವ ಕಲಿಯುಗದ ಪ್ರಥಮಪಾದದ ಹತ್ತನೇ ಒಂದು ಭಾಗದಲ್ಲಿ ಇದ್ದೇವೆ.  ಒಂದು ಲೆಕ್ಕಾಚಾರದ ಪ್ರಕಾರ ಕಲಿಯುಗಕ್ಕೆ 4,32,000 ವರ್ಷಗಳು ಎಂದು ನಿರ್ಣಯ ಮಾಡಲಾಗಿದೆ.   ಇನ್ನು ಪ್ರಳಯದ ವಿಚಾರಕ್ಕೆ ಬಂದರೆ,  ಇನ್ನು ಕನಿಷ್ಠ 4,27, 000 ವರ್ಷಗಳು ಈ ಭೂಮಿ ಸುರಕ್ಷಿತವಾಗಿ ಇರುತ್ತದೆ.  ಶತಶತಮಾನಗಳಷ್ಟು ಹಿಂದೆ ಇದ್ದ  ಅಲ್ಲಮಪ್ರಭುಗಳ ಒಂದು ವಚನ ಇಲ್ಲಿ ಪ್ರಸ್ತುತ ವೆನಿಸುತ್ತದೆ.

                  ಹಿಂದೆ ಎಷ್ಟು ಪ್ರಳಯ ಹೋಯಿತೆಂದು ಅರಿಯೆ|
                  ಮುಂದೆ ಎಷ್ಟು ಪ್ರಳಯವಾಗುವುದೆಂದು ಅರಿಯೆ|
                  ತನ್ನ ಸ್ಥಿತಿಯ ತಾನರಿಯದೆಡೆ  ಅದೇ ಪ್ರಳಯವಲಾ|
                  ತನ್ನ ವಚನ ತನಗೆ ಹಗೆಯಾದೆಡೆ ಅದೇ ಪ್ರಳಯವಲಾ|
                  ಇಂತಹ ಪ್ರಳಯ ನಿನ್ನೊಳು ಉಂಟೇ ಗುಹೇಶ್ವರಾ||

ಈ ಹಿಂದೆ ಅದೆಷ್ಟೋ ಪ್ರಳಯಗಳು ಆಗಿಹೊಗಿವೆಯೋ ತಿಳಿಯದು, ಇನ್ನುಮುಂದೆ ಅದೆಷ್ಟು ಪ್ರಳಯ ಆಗಬಹುದು ಎಂಬುದನು ಕಲ್ಪಿಸಲು ಸಾಧ್ಯವಿಲ್ಲ.  ಸಾಧಕನಾದವನು ತನ್ನ ನಿಜವಾದ ಅಮರ ಸ್ವರೂಪವನ್ನು ಅರಿಯದೆ ಹೋದರೆ ಅದೇ ನಿಜವಾದ ಪ್ರಳಯ.   ಪ್ರಕೃತಿಯಿಂದ ಅಥವಾ ಶಕ್ತಿಯ ಮೂಲಕಾರಣದಿಂದ ಹುಟ್ಟುವಂತಹ ಎಲ್ಲವು ಕಾಣುತ್ತದೆ, ರೂಪಗೊಳ್ಳುತ್ತದೆ ಕೊನೆಗೆ ಆ ಪ್ರಕೃತಿಯಲ್ಲೇ ಪ್ರಳಯ ಹೊಂದುತ್ತದೆ.   ಆದರೆ, ಆತ್ಮತತ್ವ ಯಾವ ಕಾರಣದಿಂದಲೂ ಜನ್ಮವಾದುದಲ್ಲ, ಆದ್ದರಿಂದ ಆತ್ಮಕ್ಕ ಯಾವ ಪ್ರಳಯವೂ ಇಲ್ಲ.  ಅನಾತ್ಮವಾದ ದೇಹಾದಿಗಳಲ್ಲಿ  ನಾವುಗಳು ತಾದಾತ್ಮ ಭಾವ ತಳೆದು ಇದನ್ನೇ ನಿಜವಾದ ರೂಪವೆಂದು ಭ್ರಮಿಸುವ ಕಾರಣ ಅನಾತ್ಮನು ಹುಟ್ಟುತ್ತಾನೆ, ನಂತರ ಸಾಯುತ್ತಾನೆ.  ಇದು ಅಜ್ಞಾನ.   ಈ ಅಜ್ಞಾನವೇ ಪ್ರಳಯ.   ಜ್ಞಾನದ ಬೆಳಕಲ್ಲಿ ನಿಲ್ಲಲು, ಅಜ್ನಾನವೆಂಬ ಕತ್ತಲಿನಿಂದ ಹೊರಬರಬೇಕು.  ಆಗ ಅರಿವು ಅಮೃತವಾಗುತ್ತದೆ.  ಅಮೃತಕೆಲ್ಲಿ ಪ್ರಳಯದ ಭೀತಿ?

ಪ್ರಕಾಶ್  ಹೆಚ್ ಏನ್ 

( ನನ್ನ ಈ ಚಿಂತನೆಯು  ದಿನಾಂಕ 3-12-2009 ರಲ್ಲಿಹಾಸನ ಆಕಾಶವಾಣಿಯಲ್ಲಿ  ಬಿತ್ತರಗೊಂಡಿತ್ತು }