Pages

Monday, September 2, 2013

ಯಜ್ಞೋಪವೀತ - ಒಂದು ಜಿಜ್ಞಾಸೆ



         ಬ್ರಾಹ್ಮಣ್ಯದ ಸಂಕೇತವೆನ್ನಲಾಗುವ ಯಜ್ಞೋಪವೀತ(ಜನಿವಾರ)ದ ಕುರಿತು ಮನಸ್ಸಿನಲ್ಲಿ ಆಗಾಗ ಏಳುವ ವಿಚಾರತರಂಗಗಳು ವಿಮರ್ಶಾರ್ಹವಾಗಿವೆ. ಪ್ರಸ್ತುತ ಆಚರಣೆಯಲ್ಲಿರುವಂತೆ ಹುಟ್ಟಿನಿಂದ ಬ್ರಾಹ್ಮಣರೆನಿಸುತ್ತಿದ್ದು, ತಂದೆ ಬ್ರಾಹ್ಮಣನಾಗಿದ್ದರೆ ಮಗನೂ ಬ್ರಾಹ್ಮಣನೆನಿಸುತ್ತಾನೆ ಮತ್ತು  ಜನಿವಾರವೆನ್ನುವುದು ಬ್ರಾಹ್ಮಣನಾಗಿರುವ ಸೂಚಕವಾಗಿರುತ್ತದೆ. ಆಚರಣೆಯಲ್ಲಿರುವ ಈ  ನಂಬಿಕೆಗೂ ವಾಸ್ತವ ಸತ್ಯಕ್ಕೂ ಇರುವ ಅಜಗಜಾಂತರ ವ್ಯತ್ಯಾಸ ಪೂರ್ವಾಗ್ರಹರಹಿತರಾಗಿ ವಿಚಾರ ವಿಮರ್ಶೆ ಮಾಡುವ ಮನಸ್ಸುಗಳಿಗೆ ಅರ್ಥವಾಗಬಹುದು. ನಾಲ್ಕೂ ವೇದಗಳಲ್ಲಿ ಈಗ ಲಭ್ಯವಿರುವುದೆಂದು ಹೇಳಲಾಗಿರುವ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಮಂತ್ರಗಳ ಪೈಕಿ ಯಾವುದೇ ಒಂದು ಮಂತ್ರದಲ್ಲೂ ಹುಟ್ಟಿನಿಂದ ಬರುವ ಜಾತಿಪದ್ಧತಿಯನ್ನು ಸಮರ್ಥಿಸುವ ಒಂದು ಮಂತ್ರವೂ ಇಲ್ಲವೆಂದು ಹೇಳುತ್ತಾರೆ. ವೇದಗಳಲ್ಲಿ ಬರುವ ಬ್ರಾಹ್ಮಣ, ವೈಶ್ಯ, ಶೂದ್ರ, ಕ್ಷತ್ರಿಯರ ಕುರಿತು ಉಲ್ಲೇಖಗಳು ವರ್ಣಗಳಾಗಿವೆ. ವರ್ಣ ಪದದ ಅರ್ಥ 'ಆರಿಸಿಕೊಳ್ಳುವುದು' ಎಂಬುದಾಗಿದೆ. ಯಾರೇ ಆಗಲಿ, ತಮ್ಮ ತಮ್ಮ ಗುಣ, ಸಾಮರ್ಥ್ಯ, ಕರ್ಮ, ಸ್ವಭಾವ, ಇತ್ಯಾದಿಗಳಿಗೆ ಹೊಂದುವ ವರ್ಣವನ್ನು ಆರಿಸಿಕೊಳ್ಳಲು ಅವಕಾಶವಿದ್ದು, ಅದರಲ್ಲಿ ಮೇಲು-ಕೀಳುಗಳ ಪ್ರಶ್ನೆಯಿಲ್ಲ. ಹುಟ್ಟಿನಿಂದ ಯಾರೂ ಈ ವರ್ಣಗಳಿಗೆ ಸೇರಿದವರೆಂದು ಪರಿಗಣಿಸಲಾಗದು. ಯಾವುದೋ ಗೊತ್ತಿಲ್ಲದ ಬಹಳ ಹಿಂದಿನ ಕಾಲಘಟ್ಟದಲ್ಲಿ ಮೇಲು-ಕೀಳುಗಳ ಭಾವನೆಯನ್ನು ಸಮಾಜದ್ರೋಹಿಗಳು  ಸೃಷ್ಟಿಸಿರಬಹುದಾಗಿದ್ದು, ವೇದಗಳಲ್ಲಿ ಮೇಲು-ಕೀಳುಗಳ ಭಾವನೆ ಎಲ್ಲೂ ಇರುವುದಿಲ್ಲ. ಈ ವಿಚಾರವೇ ದೀರ್ಘವಾಗಿ ಚರ್ಚಿಸಬಹುದಾದ ಸಂಗತಿಯಾಗಿದೆ.

     ಭಗವಂತನ ಸ್ಟೃಷ್ಟಿಯಲ್ಲಿ ಅನೇಕ ಜೀವವೈವಿಧ್ಯಗಳಿವೆ. ವಿವಿಧ ಜೀವಿಗಳ ವರ್ಗಗಳನ್ನೇ ಜಾತಿಗಳೆನ್ನಬಹುದು. ಯಾವುದೇ ನಾಯಿಯನ್ನು ನೋಡಿದಾಕ್ಷಣ ಅದನ್ನು ನಾಯಿ ಎನ್ನಬಹುದು. ಕತ್ತೆಯ ಹೊಟ್ಟೆಯಲ್ಲಿ ಹುಟ್ಟುವುದು ಕತ್ತೆಯೇ ಹೊರತು ಬೆಕ್ಕಲ್ಲ. ಹಾಗೆಯೇ ಮನುಷ್ಯರಿಂದ ಮನುಷ್ಯರು ಹುಟ್ಟುತ್ತಾರೆಯೇ ಹೊರತು ಬೇರೆ ಅಲ್ಲ. ಹಾಗಾಗಿ ಮನುಷ್ಯರನ್ನು ಮನುಷ್ಯರ ಜಾತಿ ಅನ್ನಬಹುದೇ ಹೊರತು ಬೇರೆ ಹೇಳಲಾಗದು. ಭಗವಂತನ ಸೃಷ್ಟಿಯಲ್ಲಿನ ವೈವಿಧ್ಯ ಒಂದಕ್ಕೊಂದು ಪೂರಕವಾಗಿದ್ದರೆ, ಮಾನವನಿರ್ಮಿತ ವೈವಿಧ್ಯ ಹೆಚ್ಚಿನ ಸಂಗತಿಗಳಲ್ಲಿ ವಿನಾಶಕವಾಗಿವೆ. ಹುಟ್ಟಿನ ಜಾತಿ ಅನ್ನುವುದು ಮಾನವರ ಸೃಷ್ಟಿಯೇ ಹೊರತು ಮತ್ತೇನಲ್ಲ. ಅದು ದೇವರ ಸೃಷ್ಟಿ ಆಗಿದ್ದರೆ ನೋಡಿದ ತಕ್ಷಣ ಇಂತಹ ಜಾತಿ ಎಂದು ಹೇಳಲು ಅವಕಾಶವಿರುತ್ತಿತ್ತು.  ತಂದೆ-ತಾಯಿಯರು ಗೊತ್ತಿಲ್ಲದ ಅನಾಥರದ್ದು ಯಾವ ಜಾತಿ? ಆಗ ತಾನೇ ಹುಟ್ಟಿದ ಏಳೆಂಟು ಮಕ್ಕಳನ್ನು ಒಂದೆಡೆಯಿಟ್ಟು ಯಾವ ಮಗು ಯಾವ ಜಾತಿ ಗುರುತಿಸಿ ಎಂದರೆ ಗುರುತಿಸಲು ಸಾಧ್ಯವಿದೆಯೇ? ಸಾಧ್ಯವಿಲ್ಲ. ಮಾನವನಿರ್ಮಿತ ಜಾತಿಯನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ. ಒಬ್ಬ ಹಿಂದೂ ಮುಸಲ್ಮಾನನಾಗಬಲ್ಲ, ಒಬ್ಬ ಕ್ರಿಶ್ಚಿಯನ್ ಹಿಂದೂ ಆಗಬಲ್ಲ. ಆದರೆ ದೇವರ ಸೃಷ್ಟಿಯಾದ ಒಂದು ಕುದುರೆ ನಾಯಿಯಾಗಬಹುದೇ? ಬೆಕ್ಕು ಇಲಿಯಾಗಲು ಸಾಧ್ಯವೇ? ಹುಟ್ಟಿನಿಂದ ಜಾತಿ ಬರುವುದಿಲ್ಲ ಎಂಬುದಕ್ಕೆ ಇಷ್ಟು ಸಾಕೆನಿಸುತ್ತದೆ. ಮನುಷ್ಯರಲ್ಲಿ ಇರುವುದು ಒಂದೇ ಜಾತಿ, ಅದು ಮನುಷ್ಯ ಜಾತಿ ಅಷ್ಟೆ. 

     ೧೬ ಸಂಸ್ಕಾರಗಳಲ್ಲಿ ಒಂದಾದ ಉಪನಯನ ಸಂಸ್ಕಾರದ ಸಂದರ್ಭದಲ್ಲಿ ಯಜ್ಞೋಪವೀತ (ಜನಿವಾರವನ್ನು) ಹಾಕಿಸಲಾಗುತ್ತದೆ. 'ಉಪ' ಎಂದರೆ ಸಮೀಪಕ್ಕೆ, 'ನಯನ'ವೆಂದರೆ ಕರೆದೊಯ್ಯುವುದು ಎಂಬುದು ಪದಶಃ ಅರ್ಥ. ಹಿಂದೆ ಮಕ್ಕಳಿಗೆ ವೇದಾಭ್ಯಾಸ, ಶಿಕ್ಷಣ ಕೊಡಿಸುವ ಸಲುವಾಗಿ ಸುಯೋಗ್ಯ ಗುರುಕುಲಕ್ಕೆ ಕಳುಹಿಸಿಕೊಡುವಾಗ ಈ ಉಪನಯನ ವಿಧಿಯನ್ನು ಆಚರಿಸಲಾಗುತ್ತಿತ್ತು. ಜಾತಿ ಮತ್ತು ಲಿಂಗ ತಾರತಮ್ಯವಿಲ್ಲದೆ ಗುರುಕುಲಕ್ಕೆ ಹೋಗುವ ಮಕ್ಕಳೆಲ್ಲರೂ ಈ ವಿಧಿಯನ್ನು ಪಾಲಿಸಿ ಯಜ್ಞೋಪವೀತಧಾರಿಗಳಾಗುತ್ತಿದ್ದರು. ಯಜ್ಞೋಪವೀತ ಧರಿಸುವಾಗ 'ನಾನು ಸತ್ಯದ ದಾರಿಯಲ್ಲಿ ನಡೆಯುತ್ತೇನೆ; ವ್ರತಗಳನ್ನು ಪಾಲಿಸುತ್ತೇನೆ; ಶಿಸುಬದ್ದ ಜೀವನ ನಡೆಸುತ್ತೇನೆ' ಎಂದು ಅಗ್ನಿಸಾಕ್ಷಿಯಾಗಿ ಪ್ರತಿಜ್ಞೆ ಮಾಡಿಸುವುದಿದೆ. ಆಗಲೇ ಹೇಳಿರುವಂತೆ ಯಾವುದೋ ಹಿಂದಿನ ಕಾಲಘಟ್ಟದಲ್ಲಿ ಕ್ರಮೇಣ ಅದು ಒಂದು ವರ್ಗಕ್ಕೆ ಮತ್ತು ಪುರುಷರಿಗೆ ಮಾತ್ರ ಸೀಮಿತವಾದ ಕ್ರಿಯೆಯಾಗಿ ಪರಿವರ್ತಿತವಾಗಿಬಿಟ್ಟಿದೆ. ವೇದದ ಬೆಳಕಿನಲ್ಲಿ ಸತ್ಯವನ್ನು ಅರಸುವ ಯಾರಿಗೇ ಆಗಲಿ, ಇದು ಒಂದು ವರ್ಗದವರಿಗೆ ಅಥವ ಪುರುಷರಿಗೆ ಮಾತ್ರ ಸೀಮಿತವಾದ ಸಂಸ್ಕಾರವಲ್ಲವೆಂಬುದು ಗೋಚರವಾಗದಿರದು.

     ಯಜ್ಞೋಪವೀತವೆನ್ನುವುದು ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ತೀರಿಸಲು ಬದ್ಧತೆಯನ್ನು ಜ್ಞಾಪಿಸುವ ಸಾಧನ ಮತ್ತು ಆ ಮೂರು ಋಣಗಳನ್ನು ತೀರಿಸುವ ಸಂಕಲ್ಪ ಮಾಡುವ ಸಂಕೇತವಾಗಿದೆ. ಈ ಮೂರು ಋಣಗಳು ಕೇವಲ ಒಂದು ನಿರ್ದಿಷ್ಟ ವರ್ಗ ಅಥವ ಲಿಂಗಕ್ಕೆ ಸೀಮಿತ ಎಂದರೆ ಹಾಸ್ಯಾಸ್ಪದವೆನಿಸುತ್ತದೆ. ಋಗ್ವೇದದ ಈ ಎರಡು ಮಂತ್ರಗಳು ಯಜ್ಞೋಪವೀತಧಾರಿಯ ಕರ್ತವ್ಯಗಳನ್ನು ಹೇಳುತ್ತವೆ:

ತ್ರಿವಂಧುರೇಣ ತ್ರಿವ್ರತಾ ರಥೇನ ತ್ರಿಚಕ್ರೇಣ ಸುವೃತಾ ಯಾತಮರ್ವಾತ್ |

ಪಿನ್ವತಂ ಗಾ ಜಿನ್ವತಮರ್ವತೋ ನೋ ವರ್ಧಯತಮಶ್ವಿನಾ ವೀರಮಸ್ಯೇ || (ಋಕ್.೧.೧೧೮.೨.)

     ಮೂರು ಉನ್ನತಶೀಲ, ಪ್ರಗತಿಪಥಕ್ಕೊಯ್ಯುವ, ಸತ್ವ ಮತ್ತು ಒಳ್ಳೆಯತನಗಳಿಂದ ಸುತ್ತುವರೆದ, ಮೂರು ಬಂಧನಗಳನ್ನು ಚಕ್ರವಾಗಿ ಹೊಂದಿರುವ ಜೀವನರಥದಲ್ಲಿ ಮುಂದೆ ಸಾಗಿರಿ. ನಿಮ್ಮ ಇಂದ್ರಿಯಗಳು, ವಾಣಿಯನ್ನು ಶಕ್ತಿಯುತವನ್ನಾಗಿಸಿಕೊಳ್ಳಿ, ಜೀವಾತ್ಮ ಚೇತನವನ್ನು ವಿಕಾಸಗೊಳಿಸಿಕೊಳ್ಳಿ ಮತ್ತು ಆತ್ಮನಿಗಾಗಿ ಪ್ರಾಣಶಕ್ತಿ ಹೆಚ್ಚಿಸಿಕೊಳ್ಳಿ ಎಂಬುದು ಇದರ ಅರ್ಥ.

ತ್ರಿವಂಧುರೇಣ ತ್ರಿವ್ರತಾ ಸುವೇಶಸಾ ರಥೇನ ಯಾತಮಶ್ವಿನಾ |

ಕಣ್ವಾಸೋ ವಾಂ ಬ್ರಹ್ಮ ಕೃಣ್ವಂತ್ಯಧ್ವರೇ ತೇಷಾಂ ಸು ಶೃಣುತಂ ಹವಮ್ || (ಋಕ್.೧.೪೭.೨.)

     ಮೂರು ಬಂಧನಗಳ, ಮೂರು ತತ್ವಗಳಿಂದ ಕೂಡಿದ ಸುಶೋಭಿತ ಜೀವನರಥಯಾನ ಮಾಡಿರಿ. ಧ್ಯಾನಶೀಲ ಜ್ಞಾನಿಗಳು ಅಹಿಂಸಾವೃತ್ತಿಯಲ್ಲಿ ತಿಳಿಸಿಕೊಡುವ ವೇದಜ್ಞಾನವನ್ನು ಪಡೆದುಕೊಳ್ಳಿರಿ ಎನ್ನುವ ಮಂತ್ರದ ಅರ್ಥ ಸುಸ್ಪಷ್ಟವಾಗಿದೆ. ಪ್ರತಿ ಜೀವಿಗೆ ಇರುವ ಮೂರು ಋಣಗಳ -ದೇವಋಣ, ಪಿತೃಋಣ ಮತ್ತು ಆಚಾರ್ಯಋಣ- ಬಗ್ಗೆ ಅವನ ಬದ್ಧತೆಯನ್ನು ಜ್ಞಾಪಿಸುವುದೇ ಈ ಮಂತ್ರಗಳ ಉದ್ದೇಶವಾಗಿದೆ.

     ದೇವಋಣವನ್ನು ತೀರಿಸುವುದೆಂದರೆ ಭಗವಂತನ ಸೃಷ್ಟಿಯಾದ ಪಂಚಭೂತಗಳಿಂದ ನಿಹಿತವಾಗಿರುವ ಶರೀರದ ಋಣ ತೀರಿಸುವ ಸಲುವಾಗಿ ಪಂಚಭೂತಗಳಾದ ಜಲ, ನೆಲ, ಆಕಾಶ, ಅಗ್ನಿ, ವಾಯುಗಳ ಸದುಪಯೋಗ ಮಾಡಿಕೊಳ್ಳುವುದರೊಟ್ಟಿಗೆ ಅವುಗಳ ರಕ್ಷಣೆಯ ಹೊಣೆಯನ್ನೂ ಹೊರುವುದು. ಪಿತೃಋಣವನ್ನು ತೀರಿಸುವುದೆಂದರೆ ಭೌತಿಕ ಶರೀರ ಬರಲು ಕಾರಣರಾದ, ಪ್ರೌಢಾವಸ್ಥೆಗೆ ಬರುವವರೆಗೂ ಮತ್ತು ನಂತರದಲ್ಲೂ ಎಲ್ಲಾ ರೀತಿಯ ಸೇವೆ ಮಾಡಿ, ಪಾಲಿಸಿ, ಪೋಷಿಸಿದವರಿಗೆ ಪ್ರತಿಯಾಗಿ ಅವರ ಸೇವೆಯನ್ನು ಮಾಡುತ್ತಾ ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು. ಇಂದಿನ ಪ್ರಗತಿಗೆ, ಉನ್ನತಿಗೆ ಕಾರಣರಾದ, ಸುಯೋಗ್ಯ ಮಾರ್ಗದರ್ಶನ ಮಾಡಿದ ಎಲ್ಲಾ ಆಚಾರ್ಯರುಗಳ ಪ್ರತಿ ಶ್ರದ್ಧಾಗೌರವಗಳನ್ನು ಹೊಂದುವುದು ಮತ್ತು ಮುಖ್ಯವಾಗಿ ನಮಗೆ ತಿಳಿದ ಜ್ಞಾನವನ್ನು ಮುಂದಿನವರಿಗೆ ತಿಳಿಸುವ, ಹಂಚುವ ಕೆಲಸವನ್ನು ಮಾಡುವುದು  ಆಚಾರ್ಯಋಣವನ್ನು ತೀರಿಸುವ ಉತ್ತಮ ರೀತಿಯಾಗಿದೆ. ಮಾನವಧರ್ಮದ ಮೂರು ಬೇರ್ಪಡಿಸಲಾಗದ ಅಂಗಗಳಾದ ಜ್ಞಾನ, ಕರ್ಮ ಮತ್ತು ಉಪಾಸನೆಗಳನ್ನೂ ಸಹ ಯಜ್ಞೋಪವೀತದ ಮೂರು ಎಳೆಗಳು ಸಂಕೇತಿಸುತ್ತವೆ. ಜೀವನದ ಉದ್ದೇಶವಾದ ಸತ್ಯದ ಅನ್ವೇಷಣೆಗೆ ಜ್ಞಾನ ಅಗತ್ಯ. ಕೇವಲ ಜ್ಞಾನದಿಂದ ಪ್ರಯೋಜನವಿಲ್ಲ, ಅದನ್ನು ಅನುಷ್ಠಾನಗೊಳಿಸುವ ಕರ್ಮದಿಂದ ಜ್ಞಾನಕ್ಕೆ ಅರ್ಥ ಬರುತ್ತದೆ. ಜ್ಞಾನ, ಕರ್ಮಗಳನ್ನು ಭಗವಂತನ ಕೃಪೆಯೆಂದು ತಿಳಿದು ಮಾಡುವುದೇ ಉಪಾಸನೆ.

     ಇನ್ನೊಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸಬೇಕೆನ್ನಿಸುತ್ತಿದೆ. ಯಜ್ಞೋಪವೀತವೆನ್ನುವುದು ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ನೆನಪಿಸುವ ಬಾಹ್ಮಣಿಕೆಯ (ಜಾತಿಯಲ್ಲ), ಸಜ್ಜನಿಕೆಯ, ಸಚ್ಚಾರಿತ್ರ್ಯದ ನಡವಳಿಕೆಯನ್ನು ಹೊಂದುವ ಸಂಕಲ್ಪದ ಸಂಕೇತವೇ ಹೊರತು ಮತ್ತೇನೂ ಅಲ್ಲ. ಸಜ್ಜನಿಕೆಯ, ಸಚ್ಚಾರಿತ್ರ್ಯವನ್ನು ಹೊಂದುವುದು ನಿಜವಾದ ಮಾನವಧರ್ಮವಾಗಿದೆ. ಯಜ್ಞೋಪವೀತ ಧರಿಸಿದವರು ಸಚ್ಚಾರಿತ್ರ್ಯವಂತನಾದರೆ ಯಜ್ಞೋಪವೀತಕ್ಕೆ ಬೆಲೆಯಿರುತ್ತದೆ. ನೇರವಾಗಿ ಹೇಳಬೇಕೆಂದರೆ ಯಜ್ಞೋಪವೀತ ಧರಿಸಿದಾಕ್ಷಣ ಒಬ್ಬ ಸಚ್ಚಾರಿತ್ರ್ಯವಂತನಾಗುವುದಿಲ್ಲ ಅಥವ ಈಗಿನ ಬಳಕೆಯಲ್ಲಿ ತಿಳಿದಿರುವಂತೆ ಬ್ರಾಹ್ಮಣ್ಯ ಬರುವುದಿಲ್ಲ. ಯಜ್ಞೋಪವೀತವು ಅದನ್ನು ಧರಿಸಿದವರು ಬ್ರಾಹ್ಮಣ್ಯವನ್ನು(ಜಾತಿಯಲ್ಲ), ಸಚ್ಚಾರಿತ್ರ್ಯವನ್ನು ಗಳಿಸಬೇಕೆಂದು, ಉಳಿಸಿಕೊಳ್ಳಬೇಕೆಂದು ನೆನಪಿಸುವ ಕೇವಲ ಸಾಧನ ಮಾತ್ರವಾಗಿದೆ.
 ಕೇವಲ ಉತ್ತಮ ವಿಚಾರ ಹೊಂದಿದ್ದರೆ ಸಾಲದು, ಅದು ಆಚರಣೆಗೂ ಬರಬೇಕು. ಹಾಗಾದಾಗ ಮಾತ್ರ ವಿಚಾರಕ್ಕೆ ಬೆಲೆ, ಮನ್ನಣೆ ಸಿಗುತ್ತದೆ. ವಿಚಾರ ಮತ್ತು ಆಚಾರದ ಸಮನ್ವಯತೆ ಕಂಡ ಈ ಪ್ರಸಂಗ ಉಲ್ಲೇಖಾರ್ಹವಾಗಿದೆ. ಹಾಸನದ ವೇದಭಾರತೀ ಸಂಸ್ಥೆಯು ಕಳೆದ ಒಂದು ವರ್ಷದಿಂದಲೂ ಜಾತಿ, ಮತ, ಪಂಥ, ಲಿಂಗ ಮತ್ತು ವಯೋತಾರತಮ್ಯವಿಲ್ಲದೆ ಎಲ್ಲರಿಗೂ ವೇದಾಭ್ಯಾಸ ಮಾಡುವ ಅವಕಾಶ ಕಲ್ಪಿಸಿದೆ. ಹಲವಾರು ಚಿಂತಕರುಗಳಿಂದ ಉಪನ್ಯಾಸಗಳು, ಸಂವಾದಗಳನ್ನು ಏರ್ಪಡಿಸಿದೆ. ಮಕ್ಕಳಲ್ಲೂ ವೇದದ ಕಲಿಕೆ ಪ್ರೋತ್ಸಾಹಿಸಲು ಬಾಲಸಂಸ್ಕಾರ ಶಿಬಿರ ನಡೆಸಿದೆ. ಇತ್ತೀಚೆಗೆ ಮೂರು ದಿನಗಳ ವೇದೋಕ್ತ ಜೀವನ ಶಿಬಿರವನ್ನೂ ಹಾಸನದಲ್ಲಿ ನಡೆಸಿದ್ದು, ಮಹಾರಾಷ್ಟ್ರದ ಪುಣೆ, ಕರ್ನಾಟಕದ ಬೆಂಗಳೂರು, ದೊಡ್ಡಬಳ್ಳಾಪುರ, ತುಮಕೂರು, ಭದ್ರಾವತಿ, ಕನಕಪುರ, ಬೆಳ್ತಂಗಡಿ, ಚನ್ನರಾಯಪಟ್ಟಣ, ಬೇಲೂರು ಮತ್ತು ಹಾಸನಗಳಿಂದ ಬಂದಿದ್ದ ಸುಮಾರು ೬೦ ಆಸಕ್ತರು ಭಾಗವಹಿಸಿದ್ದರು. ಶಿಬಿರದ ಕೊನೆಯ ದಿನದಂದು ಏಳು ಶಿಬಿರಾರ್ಥಿಗಳು -ನಾಲ್ವರು ಮಹಿಳೆಯರೂ ಸೇರಿದಂತೆ- 'ಉಪನಯನ' ಸಂಸ್ಕಾರ ಪಡೆದರು. ಶ್ರೀ ಸುಧಾಕರ ಶರ್ಮರವರು ಉಪನಯನದ ನೈಜ ಅರ್ಥವನ್ನು ಮತ್ತು ಉಪನಯನ ವಿಧಿಯ ಪ್ರತಿ ಮಂತ್ರಾರ್ಥವನ್ನು ವಿವರಿಸುತ್ತಿದ್ದರೆ, ಅಲ್ಲಿ ಹಾಜರಿದ್ದ ಪ್ರತಿಯೊಬ್ಬರೂ ತನ್ಮಯತೆಯಿಂದ ಕೇಳಿ ವಿಚಾರಗಳನ್ನು ಸರಿಯೆಂದು ಮನಗಂಡಿದ್ದು ವಿಶೇಷವಾಗಿತ್ತು. ಪತ್ರಿಕಾ ಮತ್ತು ದೃಷ್ಯಮಾಧ್ಯಮಗಳವರೂ ಈ ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ಹಾಜರಿದ್ದು, ಸುದ್ದಿ ಎಲ್ಲೆಡೆಯೂ ಪ್ರಚುರವಾಯಿತು. ಈಗಿನವರ ದೃಷ್ಟಿಯಲ್ಲಿ ಹುಟ್ಟಿನಿಂದ ಬ್ರಾಹ್ಮಣರೆನಿಸದವರೂ ಸಂಸ್ಕಾರ ಪಡೆದ ಈ ಏಳು ಜನರಲ್ಲಿದ್ದರು. ಶ್ರದ್ಧೆಯಿಂದ ವೇದಾಭ್ಯಾಸ ಮಾಡುತ್ತಿರುವ ಅವರು ಈ ಸಂಸ್ಕಾರ ಪಡೆದುದು ಸ್ತುತ್ಯಾರ್ಹವೇ ಆಗಿದೆ. ಅವರು ಯಜ್ಞೋಪವೀತ ಧರಿಸಿ ಈಗಿನ ರೂಢಿಯ ಬ್ರಾಹ್ಮಣರೆನಿಸುವ ಸಲುವಾಗಿ ಜಾತಿ ಬದಲಾಯಿಸಿಕೊಳ್ಳಬೇಕೆಂದುಕೊಂಡವರಲ್ಲ, ಬದಲಾಯಿಸಿಕೊಂಡವರಲ್ಲ, ಆ ಉದ್ದೇಶವೂ ಅವರದಲ್ಲ ಮತ್ತು ಅದರ ಅಗತ್ಯವೂ ಅವರಿಗಿಲ್ಲ. ಮೊದಲೇ ಹೇಳಿದಂತೆ ಹುಟ್ಟಿನ ಜಾತಿಗೆ ಮತ್ತು ಲಿಂಗಭೇದಕ್ಕೆ ವೇದಗಳಲ್ಲಿ ಯಾವುದೇ ಸ್ಥಾನವಿಲ್ಲ. ವೇದಗಳು ಹೇಳುವ ನೈಜ ವಿಚಾರಗಳಿಗೆ ಮನಸೋತು ಸ್ವ ಇಚ್ಛೆಯಿಂದ ಯಜ್ಞೋಪವೀತ ಧರಿಸಿದ ಅವರು ಅಭಿನಂದನಾರ್ಹರು. ಮಹಿಳೆಯರು ವೇದಾಭ್ಯಾಸ ಮಾಡಬಾರದು, ವೇದಗಳು ಒಂದು ವರ್ಗದ ಸ್ವತ್ತು ಎಂಬ ರೂಢಿಗತ ಅಂಧ ನಂಬಿಕೆಗಳನ್ನು ಅಲುಗಾಡಿಸಿ ವೇದ ತೋರಿದ ಸತ್ಯ ಪಥದಲ್ಲಿ ನಡೆದ, ವೇದಾಧ್ಯಯನದಲ್ಲಿ ಆಸಕ್ತಿ ಹೊಂದಿದ, 'ಆಡದೆ ಮಾಡಿದ ರೂಢಿಯೊಳಗುತ್ತಮರ' ಸಾಲಿಗೆ ಸೇರಿದ ಅವರೇ ಧೈರ್ಯವಂತರು. ಏನಾದರೂ ಬದಲಾವಣೆ ಬರುವುದಿದ್ದರೆ ಇಂತಹವರಿಂದಲೇ ಸರಿ!   

-ಕ.ವೆಂ.ನಾಗರಾಜ್.
 ವೇದಸುಧೆಯ ಆತ್ಮೀಯ ಬಂಧುಗಳೇ ,ಅಗತ್ಯವಿದ್ದವರಿಗೆ ಉಚಿತ ವೈದ್ಯಕೀಯ ಸಲಹೆ ನೀಡಲು ತುಮಕೂರಿನ ಡಾ|| ಕಾರ್ನಾಡ್ ಅವರು ಮುಂದೆ ಬಂದಿದ್ದಾರೆ. ಆಸಕ್ತರು ವೇದಸುಧೆಗೆ vedasudhe@gmail.com ಗೆ ಬರೆದರೆ ವೈದ್ಯರ ಸಂಪರ್ಕಕ್ಕೆ ವುಯವಸ್ಥೆ ಮಾಡಲಾಗುವುದು.