Pages

Tuesday, April 2, 2013

ನಿಮ್ಮ ಜೀವನದ ಗುರಿ ಏನು?

ವೇದಸುಧೆಯ ಆತ್ಮೀಯ ಬಂಧುಗಳೇ,

                ಹಾಸನದ ಸ್ಥಳೀಯ ಪತ್ರಿಕೆ ಜನಮಿತ್ರದಲ್ಲಿ ಪ್ರಕಟವಾಗುತ್ತಿರುವ ನನ್ನ " ಚಿಂತನ"  ಮತ್ತು "ಎಲ್ಲರಿಗಾಗಿ ವೇದ " ಲೇಖನಗಳನ್ನು ಇಂದಿನಿಂದ ಆರಂಭಿಸಿ ವಾರದಲ್ಲಿ ಎರಡು ಲೇಖನಗಳನ್ನಾದರೂ ಇಲ್ಲಿ ಪ್ರಕಟಿಸಬೇಕೆಂದಿರುವೆ. ಸಾಮಾನ್ಯವಾಗಿ ಪ್ರತೀ ಸೋಮವಾರ ಮತ್ತು ಗುರುವಾರ ಪ್ರಕಟಿಸುವೆ. ವೇದಸುಧೆಯ ಅಭಿಮಾನಿಗಳು ಓದಿ ನಿಮ್ಮ ಅಭಿಪ್ರಾಯಗಳನ್ನು     ತಿಳಿಸಿದರೆ ಮುಂದಿನ ನನ್ನ ಬರವಣಿಗೆಗೆ ಸಹಾಯ ವಾಗುವುದು.  ಸಮಾಜದ ಸ್ವಾಸ್ಥ್ಯದ  ದೃಷ್ಟಿಯಿಂದ ಸೂಕ್ತವಲ್ಲ ವೆನಿಸುವ  ವಿಚಾರಗಳನ್ನು ನೀವು ನನ್ನ ಬರವಣಿಗೆಯಲ್ಲಿ ಗಮನಿಸಿದರೆ ತಿಳಿಸಲು    ಹಿಂಜರಿಕೆ ಬೇಡ. ನನ್ನ ಅಭಿಪ್ರಾಯವೇ ಸರಿ ಎಂಬ ಮೊಂಡುವಾದ ನನಗಿಲ್ಲ.  ತಪ್ಪುಗಳನ್ನು  ತಿದ್ದುವ /ಸಲಹೆ ನೀಡುವ ಅಭಿಮಾನಿಗಳಿಗೆ ಸ್ವಾಗತವಿದೆ. ಸಂಸ್ಕೃತ ಅಥವಾ ಶಾಸ್ತ್ರೋಕ್ತ ವೇದ ಪಾಠವಾಗದ ನಾನು ಕೇವಲ ಉಪನ್ಯಾಸಗಳನ್ನು ಕೇಳಿಕೊಂಡು, ವೇದದಿಂದ ಆಕರ್ಶಿತನಾಗಿ  ವೇದದ ಕುರಿತು  ಬರೆಯುವ ಸಾಹಸ ಮಾಡುತ್ತಿರುವೆ. ಬರವಣಿಗೆಗೆ ಆಧಾರ ಪಂಡಿತ್ ಸುಧಾಕರ ಚತುರ್ವೇದಿಗಳ ಗ್ರಂಥಗಳು ಮತ್ತು  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಉಪನ್ಯಾಸಗಳು. ಅದಕ್ಕೆ ನನ್ನ ಅಭಿಪ್ರಾಯವನ್ನು ಸೇರಿಸಿ ಬರೆಯುತ್ತಿರುವೆ.
ನಮಸ್ಕಾರಗಳು
-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ
------------------------------------------------------------------------------------------------------

ಚಿಂತನ-1                                       13.12.2012
ನೀವೇನಂತೀರಾ?             - ಹರಿಹರಪುರಶ್ರೀಧರ್,ಈಶಾವಾಸ್ಯಮ್,ಹೊಯ್ಸಳನಗರ,ಹಾಸನ

ನಿಮ್ಮ  ಜೀವನದ ಗುರಿ ಏನು?
ಹೀಗೆಂದು ಕಾಲೇಜು ಹುಡುಗರಿಗೆ  ಪ್ರಶ್ನೆ ಹಾಕಿಬಿಟ್ಟರೆ ಅವರು ತಮ್ಮ ತಲೆಯನ್ನೆಲ್ಲಾ ಹೋಳುಮಾಡಿಕೊಂಡು ತಮ್ಮ ಕಣ್ಮುಂದೆ ಬರಬಹುದಾದ ಸರ್ವೋಚ್ಛ ಸ್ಥಿತಿಯನ್ನುಕಲ್ಪಿಸಿಕೊಂಡು ಅವರಿವರನ್ನೆಲ್ಲಾ ಅಂಗಲಾಚಿ ಒಂದಿಷ್ಟು ವಿಷಯ ಸಂಗ್ರಹ ಮಾಡಿ ಐದು ಪುಟದ ಲೇಖನ ಒಂದನ್ನು ಒಂದು ವಾರದ ಅವಧಿಯಲ್ಲಿ ಸಿದ್ಧಪಡಿಸಿಯಾರು!
ಯಾಕೇ? ತನ್ನ ಬರಹಕ್ಕೆ ಇಟ್ಟಿರುವ 25 ಅಂಕಗಳಲ್ಲಿ 15-20 ಆದರೂ ಬಂದು ಅವನ ಪರೀಕ್ಷೆಯಲ್ಲಿ ಪಾಸಾದರೆ ಸಾಕೆಂದು ಅವನ ಯೋಚನೆ. ಬರಹವನ್ನು ಇವ್ಯಾಲ್ಯುಯೇಟ್ ಮಾಡುವವರೂ ಕೂಡ ಬರಹ ಎಷ್ಟು ಉತ್ಕೃಷ್ಟವಾಗಿದೆ! ಎಂದು ಆಲೋಚಿಸುತ್ತಾರೆಯೇ ಹೊರತೂ  ಸಾಮಾನ್ಯಜನರ “ನೆಮ್ಮದಿಯ” ಜೀವನದ ಬಗ್ಗೆ ಯೋಚಿಸುವುದೇ ಇಲ್ಲ. ಯೋಚಿಸುವ ಸಾಮರ್ಥ್ಯ ಕೂಡ  ಕೆಲವರಲ್ಲಿರುವುದಿಲ್ಲ.
ನಮ್ಮ ಮನೆಗೆ ನಮ್ಮ ಸಂಬಂಧಿ ಒಬ್ಬ ನಿವೃತ್ತ ಉಪನ್ಯಾಸಕರು ಬಂದಿದ್ದರು. ನಮ್ಮಮನೆಯಲ್ಲಿ ವೇದಪಾಠ ನಡೆಯುವುದನ್ನು ಮತ್ತು ಮೇಜಿನ ಮೇಲಿರುವ ವೇದ ಸಾಹಿತ್ಯವನ್ನೆಲ್ಲಾ ನೋಡಿ ಹೇಳಿದರು” ಇದೆಲ್ಲಾ ಏನೋ,  ಈಗಾಗಲೇ  ವೃದ್ಧಾಪ್ಯ ಬಂದು ಬಿಡ್ತಾ?-ಕೇಳಿದರು
-“ಯಾಕೆ  ಹೀಗೆ ಕೇಳುತ್ತಿದ್ದೀರಿ?
-ಮತ್ತಿನ್ನೇನು? ವೇದ,ಪುರಾಣ ಎಲ್ಲಾ  ವೃದ್ಧಾಪ್ಯದಲ್ಲಿ ಕಾಲ ಕಳೆಯುವುದಕ್ಕೆ !
-ಈಗ ಏನು ಮಾಡಬೇಕು?
-ನಿಮ್ಮನೆಯಲ್ಲಿ ಟಿ.ವಿ.ಇಲ್ವಾ? ಇಂಟರ್ನೆಟ್ ಇಲ್ವಾ? ಅದೆಷ್ಟು ದಾರಾವಾಹಿಗಳು ಬರುತ್ವೆ! ಅದೆಷ್ಟು  ಸಿನೆಮಾ ನೋಡ್ ಬಹುದು, ಅದೆಲ್ಲಾ ಬಿಟ್ಟು ಇವೆಲ್ಲಾ ಯಾಕೋ?
ಪಾಪ! ಅವರಿಗೆ ನಿವೃತ್ತಿಯಾಗಿ 10-15 ವರ್ಷವೇ ಕಳೆದಿದೆ. ಆರಾಮವಾಗಿ ಟಿ.ವಿ.ನೋಡ್ ಕಂಡು,     ಊರೂರು ಸುತ್ತಿಕೊಂಡು,ಬೇಕಾದ್ದು ತಿನ್ಕೊಂಡು ಆರಾಮವಾಗಿದೀನಿ ಅಂತಾರೆ. ಆದರೆ ಮನುಶ್ಯನಿಗಿರಬಹುದಾದ ಎಲ್ಲಾ ಖಾಯಿಲೆಗಳೂ ಅವರಿಗಿದೆ. ದಿನಕ್ಕೆ  ಒಂದು ಬೊಗಸೆ ಮಾತ್ರೆ ನುಂಗುತ್ತಾರೆ. ನಾನು ಕೇಳಿದೆ ಅವರನ್ನು ನೀವು  ಕಾಲೇಜಿನಲ್ಲಿ ಯಾವ ವಿಷಯ ಪಾಠ ಮಾಡ್ತಾ ಇದ್ರೀ?

- ಪರ್ಸನಾಲಿಟಿ ಡೆವೆಲಪ್ ಮೆಂಟ್  ನನ್ನ ಪೆಟ್ ವಿಷಯ. ನನ್ನಿಂದ ತಯಾರಾದ ಹುಡುಗರು ಎಂತಾ ಭಾಷಣ     ಮಾಡ್ತಾರೆ, ಗೊತ್ತಾ? ಸೊಸೈಟಿಯಲ್ಲಿ ಹೇಗೆ ಬದುಕಬೇಕು, ಅಂತಾ ಸೊಗಸಾಗಿ ಮಾತನಾಡುವ ಹುಡುಗರನ್ನು ತಯಾರು ಮಾಡಿದ್ದೇನೆ- ಅವರು ಬಹಳ ಹೆಮ್ಮೆಯಿಂದ ಹೇಳಿದರು
-ನಿಮ್ಮ ಶಿಷ್ಯರಾಗಿದ್ದವರಲ್ಲಿ ಅನೇಕರು ಡಾಕ್ಟರ್ ಆಗಿರಬಹುದು, ಕೆಲವರು ಸಾಫ್ಟ್ ವೇರ್ ಇಂಜಿನಿಯರ್ ಆಗಿರಬಹುದು ಅಲ್ವೇ?
- ಓಹೋ !  ನೂರಾರು ಜನ ನನ್ನ ಶಿಷ್ಯರು ಡಾಕ್ಟರ್ ಗಳಿದ್ದಾರೆ. ಸಾಫ್ಟ್ ವೇರ್ ಇಂಜಿನಿಯರ್ ಗಳಿದ್ದಾರೆ.
-  ಪ್ರಸಾದ್ ಅಂತಾ ನಿಮ್ಮ ಸ್ಟುಡೆಂಟ್ ಒಬ್ಬ ಮೈಸೂರಲ್ಲಿದ್ದ. ಅವನು ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡ್ತಾಇದ್ದ. ಕಾಲೇಜು ದಿನಗಳಲ್ಲಿ ಅವನನ್ನು ಒಳ್ಳೆಯ ಭಾಷಣಕಾರನನ್ನಾಗಿ ತಯಾರು ಮಾಡಿದ್ದಿರಿ, ಅಲ್ವೇ?
- ಅವನ ಮಾತು ಬೇಡ ಬಿಡು. ಅವನೊನೊಬ್ಬ ರಾಕ್ಷಸನಾಗಿಬಿಟ್ಟ.   ಮದುವೆಯಾದ ಆರು ತಿಂಗಳಲ್ಲಿ ಅವನ ಹೆಂಡ್ತಿ ಆತ್ಮಹತ್ಯೆ ಮಾಡಿಕೊಂಡು ಬಿಟ್ಟಳು.
-ಯಾಕೆ ಹಾಗಾಯ್ತು?
-ಅವನಿಗೆ ಮದುವೆಗೆ ಮುಂಚೆಯೇ ಎರಡು ಮೂರು ಹುಡುಗಿಯರ ಸಂಬಂಧ ಇತ್ತು. ಮದುವೆಯಾದಮೇಲೂ ಒಬ್ಬಳ ಜೊತೆ ಇವನ ಸಂಬಂಧ ಮುಂದುವರೆಯಿತು. ಹೆಂಡತಿ ಜೊತೆ ವಿನಾಕಾರಣ ಜಗಳ ಮಾಡ್ತಾ ಇದ್ದ.ಕೆಲವು ದಿನ ಕಂಪನಿಯಿಂದ ಬರುವಾಗ ರಾತ್ರಿ ಬಲು ತಡವಾಗ್ತಾಇತ್ತಂತೆ. ರಾತ್ರಿ ಹತ್ತು-ಹನ್ನೊಂದರ ಸಮಯದಲ್ಲಿ ಕುಡಿದು ಬರ್ತಾಇದ್ದ. ಹೆಂಡತಿಗೆ ಇವೆಲ್ಲಾ ಗೊತ್ತಾಯ್ತು. ಒಳ್ಳೆ ಹುಡುಗಿ ಆಕೆ. ಮರ್ಯಾದೆಗೆ ಅಂಜಿ ನೇಣಿಗೆ ಶರಣಾದಳು…..
ಕೊನೆಯಮಾತು ಹೇಳುವಾಗ  ಅವರ ಕಣ್ಣಂಚಿನಲ್ಲಿ ನೀರು ಹರಿದಿತ್ತು…………
ನಾನು ಹೇಳಿದೆ-
-ನಿಮ್ಮ ಪ್ರಶ್ನೆಗೆ ಈಗಾಗಲೇ ನಿಮಗೆ ಉತ್ತರ ಸಿಕ್ಕಿರಬಹುದು, ಅನ್ಕೋತೀನಿ. ಅಧ್ಯಾತ್ಮ, ವೇದ ಉಪನಿಷತ್ತುಗಳ ಪರಿಚಯ, ಸತ್ ಸಂಸ್ಕಾರಗಳು  ನನಗೆ ನಿಜವಾಗಲೂ ಬಾಲ್ಯದಲ್ಲೇ ಸಿಗಬೇಕಿತ್ತು. ನಮಗೆ ಆಗ ಲಭ್ಯವಾಗಲಿಲ್ಲ. ಈಗಲಾದರೂ  ವೇದಾಭ್ಯಾಸ ಮಾಡುತ್ತಾ , ಆಸಕ್ತರೆಲ್ಲರಿಗೆ  ವೇದದಲ್ಲಿ ಲಭ್ಯವಿರುವ “ನೆಮ್ಮದಿಯ ಬದುಕಿನ ಸೂತ್ರಗಳ ಅರಿವು ಮೂಡಿಸುವುದಕ್ಕೆ ನನ್ನ ಕೈಲಾದ ಪ್ರಯತ್ನ ಮಾಡಬೇಕೂಂತ  ಇದೆಲ್ಲಾ ವ್ಯವಸ್ಥೆಗಳು. ನಾನೂ ಅದರ ಪ್ರಯೋಜನ ಪಡೀತೀನಿ. ಆಸಕ್ತರು ಯಾರು ಬಂದರೂ ಅವರಿಗೂ ಪಡೆಯಲು ಅವಕಾಶ ಮಾಡಿಕೊಡ್ತೀನಿ. ಇಲ್ಲಿ ಯುವಕರು ಬರ್ತಾರೆ, ಗೃಹಿಣಿಯರು ಬರ್ತಾರೆ, ಉದ್ಯೋಗಿಗಳು ಬರ್ತಾರೆ. ಎಲ್ಲಾ ಒಟ್ಟಿಗೆ  ಒಂದಿಷ್ಟು ವೇದಾಧ್ಯಯನ  ಆರಂಭ ಮಾಡಿದೀವಿ. ಅದರಲ್ಲಿ ಎಲ್ಲರಿಗೂ ಸಂತಸವಿದೆ. ನನಗಂತೂ ನನ್ನ ನಿವೃತ್ತಿಯ ಜೀವನದಲ್ಲಿ ಒಂದು ದಿನವೂ “ಹೇಗೆ ಕಳೆಯಬೇಕಪ್ಪಾ! ಅನ್ನಿಸಲಿಲ್ಲ. ಸಂತೋಷವಾಗಿ ಕಾಲ ಸಾಗಿದೆ. ಆರೋಗ್ಯವಾಗಿ ನೆಮ್ಮದಿಯಾಗಿರುವೆ. ಅದಕ್ಕಾಗಿ ಇವೆಲ್ಲಾ!!
          ಪರ್ಸನಾಲಿಟಿ ಡೆವೆಲಪ್ ಮೆಂಟ್ ಅಥವಾ ವ್ಯಕ್ತಿತ್ವ ವಿಕಸನ ಎಂದರೆ  ಭಾಷಣ ಹೇಗೆ ಮಾಡಬೇಕು? ಅನ್ನೋದನ್ನು ಕಲಿಸೋದಾ? ಅಥವಾ ನೆಮ್ಮದಿಯ ಜೀವನ ಹೇಗೆ ನಡೆಸೋದು ಅನ್ನೋದನ್ನು ಕಲಿಯೋದಾ?
ನೀವೇನಂತೀರಾ?