Pages

Wednesday, March 7, 2012

ವೇದಸುಧೆಯ ಕೃತಜ್ಞತೆಗಳು

ಕಳೆದ ಮೂರ್ನಾಲ್ಕು ದಿನಗಳಿಂದ ವೇದಸುಧೆ ಮತ್ತು ಫೇಸ್ ಬುಕ್ ನ   "ಸುಮನಸ " ಗುಂಪಿನಲ್ಲಿ  ಹಾಗೂ ಕನ್ನಡ ಬ್ಲಾಗ್ ನಲ್ಲಿ  ಅದ್ಭುತವಾದ  " ಚಿಂತನ -ಮಂಥನ " ನಡೆಯಿತು. ವಿಷಯ:  ಯಜ್ಞದಲ್ಲಿ ಪ್ರಾಣಿಬಲಿಯನ್ನು ವೇದವು ಪ್ರೋತ್ಸಾಹಿಸುತ್ತದೆಯೇ? ಎನ್ನುವುದು.
ಚರ್ಚೆಯಲ್ಲಿ  ಪಾಲ್ಗೊಂಡವರು ಶ್ರೀಯುತರುಗಳಾದ 


1. ಭೀಮಸೇನ್ ಪುರೋಹಿತ್
2. ಗಣೇಶ್ ಖರೆ
3. ಕವಿ ನಾಗರಾಜ್
4. ಮ. ವೆಂ. ರಮೇಶ ಜೋಯಿಸ್,
5 ವಸಂತ್
6. ವಿ.ಆರ್. ಭಟ್ 
7.ಕಡತೋಕೆ ರಾಮ ಭಟ್ ಅಗ್ನಿಹೋತ್ರಿ   , ಮುಂತಾದವರು.


               ಬಲು ಆರೋಗ್ಯಕರವಾದ  ಚಿಂತನ-ಮಂಥನ ನಡೆಯಿತು. ಅದಕ್ಕಾಗಿ ಸಹಕರಿಸಿದ "ಸುಮನಸ" ತಂಡದ ಶ್ರೀ ಸದ್ಯೋಜಾತ ಮತ್ತು  ಜೋಯಿಸ್ ಎಂ.ವಿ.ಆರ್ ಇವರಿಗೆ ವೇದಸುಧೆಯ ಪರವಾಗಿ     ಕೃತಜ್ಞತೆಗಳು. ಈ ಸಂದರ್ಭದಲ್ಲಿ  ವಿಶೇಷವಾಗಿ ಈರ್ವರನ್ನು  ವೇದಸುಧೆಗೆ ಪರಿಚಯಿಸಬೇಕೆನಿಸುತ್ತಿದೆ. 


                  ಒಬ್ಬರು     ಹರಿಹರದ  ಶ್ರೀ ಭೀಮಸೇನ ಪುರೋಹಿತ್ . ಇಪ್ಪತ್ತೊಂದು ವರ್ಷದ  ತರುಣ.      ಇಂಜಿನಿಯರಿಂಗ್  ಓದಿರುವ ಇವರು  ಕನ್ನಡ,ಹಿಂದಿ ಸಂಸ್ಕೃತ ಮತ್ತು ಇಂಗ್ಲೀಶ್    ಭಾಷೆಗಳನ್ನು ಬಲ್ಲರು. ವೇದದ ಮತ್ತು ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ಇವರಿಗಿರುವ  ಅಗಾಧವಾದ  ಶ್ರದ್ಧೆ  ಮತ್ತು ಆಸಕ್ತಿಯನ್ನು ಕಂಡು ಅಚ್ಚರಿಗೊಂಡೆ. ಶ್ರೀಯುತರನ್ನು ವೇದಸುಧೆಯ ಪರವಾಗಿ ಅಭಿನಂದಿಸುತ್ತೇನೆ.


Bhimasen Purohit
ಶ್ರೀ ಭೀಮಸೇನ ಪುರೋಹಿತ್
        ಇನ್ನೊಬ್ಬ ತರುಣ ಶ್ರೀ ಗಣೇಶ್ ಖರೆ. ಇಪ್ಪತ್ತೆರಡು ವರ್ಷದ ತರುಣ. ಮಹಾರಾಷ್ಟ್ರದ ಪುಣೆಯಲ್ಲಿರುವ ಕನ್ನಡಿಗ. ಇವರು  ಕನ್ನಡ,ಹಿಂದಿ ಸಂಸ್ಕೃತ ಮತ್ತು ಇಂಗ್ಲೀಶ್   ಜೊತೆಗೆ  ಮರಾಠಿ       ಭಾಷೆಗಳನ್ನು ಬಲ್ಲರು. ವೇದದ ಮತ್ತು ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ಇವರಿಗಿರುವ  ಅಗಾಧ ವಾದ  ಶ್ರದ್ಧೆ  ಮತ್ತು ಆಸಕ್ತಿಯನ್ನು ಕಂಡು ಅಚ್ಚರಿಗೊಂಡೆ. ಶ್ರೀಯುತರನ್ನು ವೇದಸುಧೆಯ ಪರವಾಗಿ ಅಭಿನಂದಿಸುತ್ತೇನೆ.

ಶ್ರೀ ಗಣೇಶ್ ಖರೆ


ಸಂಸ್ಕೃತ ಸಾಹಿತ್ಯ ಪರ್ವಗಳು

ಆತ್ಮೀಯ ವೇದಾಸಕ್ತರೇ ಪ್ರಸ್ತುತ ಲೇಖನವು ವೇದಗಳ ಬಾಹ್ಯ ಸ್ವರೂಪಕ್ಕೆ ಸಂಬಂದಿಸಿದ್ದು, ವೇದಗಳಲ್ಲಿರುವ ವಿಷಯಗಳೇನು ? ವೇದವು ಏನ್ನನ್ನು ತಿಳಿಸುತ್ತದೆ ? ಎಂಬುದನ್ನು ತಿಳಿಯುವು ವೇದಗಳ ಆಂತರಿಕ ಸ್ವರೂಪ ಜ್ಞಾನವಾದರೇ, ವೇದಗಳು ವಿಭಾಗ, ಒಳವಿಭಾಗ, ಮಂತ್ರಗಳ ಸಂಖ್ಯೆ, ಮಂತ್ರದ್ರಷ್ಟಾರರು, ವೈದಿಕ ದೇವತೆಗಳು, ವೈದಿಕ ಛಂದಸ್ಸು ಮೊದಲಾದವುಗಳ ಬಗ್ಗೆ ತಿಳಿಯುವುದು ವೇದಗಳ ಬಾಹ್ಯ ಸ್ವರೂಪವಾಗಿದೆ, ಇಲ್ಲಿರುವು ವಿಷಯಗಳು ಡಾ. ಅಂನಂತರಂಗಾಚಾರ್ ಅವರಿಂದ ರಚಿತವಾದ ವೈದಿಕ ಸಾಹಿತ್ಯ ಚರಿತ್ರೆಯ ಆಯ್ದ ಭಾಗಗಳಾಗಿವೆ.
ಸಂಸ್ಕೃತ ಸಾಹಿತ್ಯವನ್ನು ಸ್ಥೂಲವಾಗಿ ವೇದಗಳ ಸಂಸ್ಕೃತ ಮತ್ತು ಕಾವ್ಯ ಸಂಸ್ಕೃತ ಎಂದು ಎರಡು ಭಾಗಗಳಾಗಿ ವಿಂಗಡಿಸುತ್ತಾರೆ. ಬಹುಮುಖವಾದ ಮಹತ್ವವನ್ನು ಹೊಂದಿರುವ ಈ ವಿರಾಟ್ ಸಾಹಿತ್ಯದ ಸ್ವರೂಪವನ್ನು ಪರಿಚಯ ಮಾಡಿಕೊಡಲು ಇದನ್ನು ಕಾಲದ ದೃಷ್ಟಿಯಿಂದ ಐದು ಭಾಗಗಳಾಗಿ ವಿಂಗಡಿಸಬಹುದು.

) ಶೃತಿ ಯುಗ ಕ್ರಿ.ಪೂ ೪೫೦೦ ಮತ್ತು ತತ್ಪೂರ್ವ
೨) ಸ್ಮೃತಿ ಯುಗ ಕ್ರಿ.ಪೂ ೫೦೦ ರ ಪೂರ್ವ
೩) ಕಾವ್ಯ ಯುಗ ಕ್ರಿ.ಪೂ ೫೦೦ ರಿಂದ ಕ್ರಿ.ಶ 800
೪) ವ್ಯಾಖ್ಯಾನ ಯುಗ ಕ್ರಿ.ಪೂ ೮೦೦ ರಿಂದ 1400
) ನವೀನ ಕಾಲ ಕ್ರಿ. ೧೪೦೦ ರಿಂದ ಈಚಿನ ಕಾಲ

ಈ ವಿಭಾಗವು ಪ್ರಾಯೋವಿಭಾಗವೆಂಬುದನ್ನು ನಾವು ನೆನಪಿಡಬೇಕು. ಯಾವ ಬಗೆಯ ಕೃತಿಗಳು ಬಹುತರವಾಗಿ ನಿರ್ಮಾಣಗೊಂಡವೋ ಅವುಗಳಿಗನುಸಾರವಾಗಿ ಆ ಕಾಲವನ್ನು ವಿಭಾಗ ಮಾಡಿದೆ. ಒಂದೊಂದು ಕಾಲದಲ್ಲಿಯೂ ಇತರ ಬಗೆಯ ಕೃತಿಗಳೂ ಹುಟ್ಟಿವೆ. ವ್ಯಾಖ್ಯಾನ ಯುಗವೆಂದ ಕಾಲದಲ್ಲಿ ಸ್ವತಂತ್ರ ಕೃತಿಗಳಿರಲೇ ಇಲ್ಲವೆಂದು ಭಾವಿಸಬೇಕಾಗಿಲ್ಲ. ಸ್ವತಂತ್ರವಾದ ಒಂದೊಂದು ಕೃತಿ ಆಗಲೂ ತೋರಿತು. ಹಾಗೆಯೇ ಇತರ ಕಾಲದಲ್ಲಿಯೂ ಬೇರೆಬೇರೆ ಬಗೆಯ ಕೃತಿಗಳು ಬಂದಿರುವುದುಂಟು.


ಶೃತಿಯುಗ ( ಕ್ರಿ.ಪೂ ೪೫೦೦ ಮತ್ತು ಹಿಂದೆ)

ವೇದ ವಾಙ್ಮಯದ ಭಾಷೆ ವೈದಿಕ ಸಂಸ್ಕೃತ. ಪುರಾತನರಾದ ಋಷಿಗಳು ಈ ಭಾಷೆಯನ್ನು ತಮ್ಮ ನಿತ್ಯವ್ಯವಹಾರದಲ್ಲಿ ಬಳಸುತ್ತಿದ್ದರು. ತಾವು ಸಾಕ್ಷಾತ್ಕರಿಸಿಕೊಂಡ ನಿಗೂಢಜ್ಞಾನವನ್ನು ಈ ಮಂತ್ರರಾಶಿಯಲ್ಲಿ ಅಡಗಿಸಿಟ್ಟು ಅವರು ಪರಮೋಪಕಾರ ಮಾಡಿದ್ದಾರೆ. ಈ ವೈದಿಕ ಸಂಸ್ಕೃತ ಕಾಲಕಳೆದಂತೆ ಅನೇಕ ವ್ಯತ್ಯಾಸಗಳನ್ನು ಹೊಂದಿ ಪಾಣಿನಿ ಪತಂಜಲಿಗಳ ಕಾಲಕ್ಕೆ ಸಂಸ್ಕೃತದ ರೂಪವನ್ನು ಹೊಂದಿತು. ಪಾಣಿನಿ ವೇದಸಂಸ್ಕೃತದ ಬಗೆಗೆ ವೈದಿಕ ಪ್ರಕ್ರಿಯೆಯನ್ನು ಪ್ರತ್ಯೇಕವಾಗಿ ರಚಿಸಿದ್ದಾರೆ. ಶ್ರುತಿಗಳ ಸಂಸ್ಕೃತವನ್ನು ಶ್ರುತಿಗಳ ಭಾಷೆ ಅಥವಾ ವೈದಿಕ ಸಂಸ್ಕೃತವೆಂದು ಕರೆಯಲಾಗಿದೆ. ಒಂದೇ ಭಾಷೆ ಬೇರೆಬೇರೆ ಘಟ್ಟಗಳಲ್ಲಿ ಬೇರೆ ಬೇರೆ ರೂಪಗಳನ್ನೂ ವಿಶಿಷ್ಟವಾದ ಲಕ್ಷಣಗಳನ್ನೂ ಪಡೆಯಿತು. ವೇದಭಾಷೆ ವೈದಿಕ ಸಂಸ್ಕೃತವಾಗಿದ್ದು ಪಾಣೀನಿ ಪತಂಜಲಿಗಳ ಕಾಲಕ್ಕೆ ಸಂಸ್ಕೃತವಾಗಿ ಬೆಳೆಯಿತು. ಭಾಷೆಯ ವ್ಯಾಕರಣ ಎಲ್ಲ ಘಟ್ಟಗಳಿಗೂ ಸರಿಸಮಾನವಾಗಿ ಅನ್ವಯಿಸಿ ಭಾಷೆಯ ಏಕರಸತೆಯನ್ನು ನಿರ್ವಿವಾದವಾಗಿ ಸ್ಥಾಪಿಸುತ್ತದೆ. ಶ್ರುತಿಗಳ ಭಾಷೆಯ ವೈಲಕ್ಷಣ್ಯಗಳನ್ನು ಮಾತ್ರ ಪಾಣಿನಿ ತಿಳಿಸಿ 'ಛಂದಸಿ' 'ಭಾಷಾಯಾಂ' ಎಂದು ಅವುಗಳಿಗೆ ಭೇದವನ್ನು ಸೂಚಿಸಿದ್ದಾರೆ. ಅಖಂಡವಾದ ವೇದವಾಙ್ಮಯವೆಲ್ಲಾ ಈ ಶ್ರುತಿಯುಗಕ್ಕೆ ಸೇರುತ್ತವೆ. ನಾಲ್ಕು ವೇದಗಳ ಸಂಹಿತಿಗಳು, ಬ್ರಾಹ್ಮಣಗಳು, ಆರಣ್ಯಕೋಪನಿಷತ್ತುಗಳು ಮಾತ್ರ ಈ ಯುಗಕ್ಕೆ ಸೇರಿದವು.
ಸ್ಮೃತಿ ಯುಗ ಕ್ರಿ.ಪೂ ೫೦೦ ರ ಪೂರ್ವ

ಶ್ರುತಿಗಳ ನಂತರ ಸ್ಮೃತಿಗಳು ಮೂಡಿಬಂದವು ಇವು ಬಹುಮುಖವಾಗಿ ಅನೇಕ ವಿಧವಾದ ಮಹತ್ವವನ್ನು ಹೊಂದಿವೆ. ಸ್ಮೃತಿಯುಗಕ್ಕೆ ವೇದಾಂಗಗಳು. ರಾಮಾಯಣ, ಮಹಾಭಾರತ, ಮೊದಲಾದ ಇತಿಹಾಸಗಳು, ಪ್ರಾಚೀನ ಪುರಾಣಗಳು ಇವು ಸೇರುತ್ತವೆ. ಈ ಕಾಲದಲ್ಲಿನ್ನೂ ಸಂಸ್ಕೃತ ಪ್ರಾಕೃತ ಭೇದಗಳು ಇಷ್ಟು ಗಮನಾರ್ಹವಾಗಿ ತೋರಿರಲಿಲ್ಲವೆಂದು ಕಾಣುತ್ತದೆ. ಆರ್ಯ ಸಂಸ್ಕೃತಿ ಭಾರತದ ಪೂರ್ವ ಹಾಗೂ ದಕ್ಷಿಣ ಭಾಗಗಳಿಗೆ ಈ ಕಾಲದಲ್ಲಿ ಹರಡಿತು. ಅನೇಕ ದಸ್ಯು ಅಥವಾ ದಾಸರು ಈ ಕಾಲದಲ್ಲಿ ಆರ್ಯರ ಗುಂಪಿಗೆ ಸೇರಿಹೋದರು. ಕೆಳಗಿನ ವರ್ಣದ ಸ್ತ್ರೀಯರನ್ನು ಆರ್ಯರು ವರಿಸಿತ್ತಿದ್ದ ಕಾರಣ ಅವರೂ ಸಂಸ್ಕೃತವನ್ನೇ ನುಡಿಯತೊಡಗಿದರು. ತತ್ಪರಿಣಾಮವಾಗಿ ಜನಸಾಮಾನ್ಯರೂ ಮೇಲಿನ ಮೂರು ವರ್ಣಗಳ ಸ್ತ್ರೀಯರೂ ಸಂಸ್ಕೃತ ಭಾಷೆಯಲ್ಲಿನ ಕರ್ಕಶವರ್ಣಗಳನ್ನು ಮೃದುವರ್ಣಗಳನ್ನಾಗಿ ಉಚ್ಛರಿಸತೊಡಗಿದರು. ಹೀಗೆ ಈ ಸಂಧರ್ಭಗಳು ಪ್ರಾಕೃತಗಳ ಉಗಮಕ್ಕೆ ಅನುವು ಮಾಡಿಕೊಟ್ಟವು. ಬೇರೆ ಬೇರೆ ಪ್ರಾಂತಗಳ ಪ್ರಾಕೃಗಳು ಬೇರೆಬೇರೆಯಾಗಿದ್ದ ಕಾರಣ ಆಯಾ ದೇಶಗಳ ರೂಢಿಗನುಸಾರವಾಗಿ ಮಾಗಧಿ, ಶೌರಸೇನಿ, ಮಹಾರಾಷ್ಟ್ರೀ, ಪೈಶಾಚೀ, ಮೊದಲಾದವು ರೂಢಿಗೆ ಬಂದವು. ಈ ಕಾಲದಲ್ಲಿ ಉಚ್ಚವರ್ಗದ ಪುರುಷರ ವ್ಯವಹಾರ ಭಾಷೆ ಸಂಸ್ಕೃತವೇ ಆದಾಗ್ಯೂ ಸ್ತ್ರೀಯರೂ ಕೆಳವರ್ಣದವರೂ ಪ್ರಾಕೃತಗಳನ್ನು ಬಳಸುತ್ತಿದ್ದರು. ಭಗವಾನ್ ಬುದ್ಧನು ತನ್ನ ಮತವನ್ನು ಪಾಳಿಯಲ್ಲಿಯೇ ಬೋದಿಸಿದನು. ಈ ಪ್ರಾಕೃತಗಳು ಸಂಸ್ಕೃತದ ಶಬ್ದಸಂಪತ್ತು ಮತ್ತು ವ್ಯಾಕರಣವನ್ನು ಹೊಂದಿಕ ಸಂಸ್ಕೃತದ ಮೃದ್ವೀಕರಣವೇ ಆಗಿದ್ದವು. ಆಕಾರಣದಿಂದಲೇ ಪುರುಷರು ಸಂಸ್ಕೃತವನ್ನು ಪ್ರಯೋಗಿಸಿದರೆ ಇತರರು ಅದನ್ನು ತಿಳಿಯಬಲ್ಲವರಾಗಿದ್ದರು. ಈ ಸಂಸ್ಕೃತ ವೈಯಾಕರಣರ ಪರಿಶ್ರಮದ ಫಲವಾಗಿ ಪರಿಷ್ಕೃತವಾಗಿ, ನಿರ್ಧರವಾದ ರೂಪವನ್ನು ಪಡೆದು, ಕಾವ್ಯಗಳ ಸಂಸ್ಕೃತವಾಗಿ ಪರಿಣಾಮಗೊಂಡಿತು.

ವೇದವಾಙ್ಮಯದ ವ್ಯಾಪ್ತಿ

ವೇದವಾಙ್ಮಯ ಬಹಳ ವ್ಯಾಪಕವೂ ಮಹತ್ವಪೂರ್ಣವೂ ಆದದು. ಇದರ ಶಾಖೋಪಶಾಖೆಗಳ ಸ್ಥೂಲಪರಿಚಯವನ್ನು ಮೊದಲು ನಾವು ಮಾಡಿಕೊಳ್ಳಬೇಕು.

ವೇದ ಎಂದರೆ ಏನು ಎಂಬುದನ್ನು ಮೊದಲು ತಿಳಿಯೋಣ. ವೇದ ಶಬ್ದದ ಅರ್ಥ ನಿರ್ವಚನವನ್ನು ಪ್ರಾಚೀನರು ಅನೇಕ ರೀತಿಯಾಗಿ ಮಾಡಿದ್ದಾರೆ. ವೇದ ಎಂಬ ಶಬ್ದವು 'ವಿದ್' -ಜ್ಞಾನೇ(ತಿಳಿ) ಎಂಬ ಧಾತುವಿನಿಂದ ಬಂದಿದೆ. ಗೌಣಾರ್ಥದಲ್ಲಿ ಜ್ಞಾನಪ್ರತಿಪಾದಕವಾದ ಗ್ರಂಥಗಳು ಎಂಬ ಅರ್ಥ ಈ ಶಬ್ದಕ್ಕೆ ಬರುತ್ತದೆ. ವೇದದ ಲಕ್ಷಣವನ್ನು ಸರಿಯಾಗಿ ಹೇಳುವುದು ಕಷ್ಟ. ಸಾಯಣಾಚಾರ್ಯರು ತಮ್ಮ ವೇದಭಾಷ್ಯ ಭೂಮಿಕೆಯಲ್ಲಿ ವೇದ ಲಕ್ಷಣವನ್ನು ಸ್ಪಷ್ಟವಾಗಿ ತಿಳಿಸಿವುದು ಕಷ್ಟವೆಂದು ಪೂರ್ವ ಪಕ್ಷ ಮಾಡಿ ಅದಕ್ಕೆ ಉತ್ರರ ರೂಪವಾಗಿ ಮಂತ್ರ ಬ್ರಾಹ್ಮಣಗಳ ಸಮುದಾಯವೇ ವೇದವೆಂಬ ಸಿದ್ದಾಂತಕ್ಕೆ ಬಂದ್ದಿದ್ದಾರೆ. ಶಾಸ್ತ್ರಗಳೆಲ್ಲದರ ಗುರಿಯೂ ಜ್ಞಾನವೇ ಆಗಿರುವಾಗ ವೇದದ ವೈಶಿಷ್ಟ್ಯವೇನು ಎಂಬುದನ್ನು ಮಾಧವಾಚಾರ್ಯರು ವೇದಾರ್ಥ ಪ್ರಕಾಶದಲ್ಲಿ
" ಇಷ್ಟಪ್ರಾಪ್ತ್ಯನಿಷ್ಟಪರಿಹಾರಯೋಃ ಅಲೌಕಿಕಮುಪಾಯಂ ಯೋ ಗ್ರಂಥಃ ವೇದಯತಿ ಸಃ ವೇದಃ | ಅಲೌಕಿಕ ಪದೇನ ಪ್ರತ್ಯಕ್ಷಾನುಮಾನೇ ವ್ಯಾವರ್ತ್ಯತೇ" ಎಂದು ತಿಳಿಸಿದ್ದಾರೆ.

ಸಂಸಾರವೆಂಬ ಜನನ ಮರಣಗಳ ಚಕ್ರಪರಿವರ್ತನೆಯ ಅನಿಷ್ಟವನ್ನು ಪರಿಹರಿಸಿ ಪರಬ್ರಹ್ಮ ಪ್ರಾಪ್ತಿ ಎಂಬ ಇಷ್ಟವನ್ನು ಪಡೆಯಲು ಮಾನವಕೋಟಿ ಅನುಸರಿಸಬೇಕಾದ ವಿಧಾನವನ್ನು ತಿಳಿಸುವುದು ವೇದ. ಆದುದರಿಂದ ವೇದ ಶಬ್ದ ಜ್ಞಾನ ಸಾಮಾನ್ಯಕ್ಕೆ ಅನ್ವಯಿಸದೇ ಬ್ರಹ್ಮ ಜ್ಞಾನಪ್ರತಿಪಾದಕವಾದುದಾಗಿದೆ.
ಭಟ್ಟ ಭಾಸ್ಕರರು "ವಿದ್ಯತೇ ಲಭ್ಯತೇ ಅನೇನ ಇತಿ ವೇದ" ಎಂದು ಹೇಳಿ ಬ್ರಹ್ಮ ಸಾಕ್ಷಾತ್ಕಾರ ಇದರಿಂದ ಉಂಟಾಗುವುದೆಂದಿದ್ದಾರೆ.
"ವಿಂದಂತಿ ಧರ್ಮಾಧಿಕಂ ಅನೇನ ಇತಿ ವೇದಃ" ಧರ್ಮವೇ ಮೊದಲಾದುವನ್ನು ಇದರ ಮೂಲಕ ಅರಿಯುವುದರಿಂದ ಇದು ವೇದ ಎಂದು ಸರ್ವಾನಂದರೂ
"ವಿಂದ್ಯಂತ್ಯನೇನ ಧರ್ಮಂ ವೇದಃ" ಎಂದೂ ಹೇಮಚಂದ್ರರೂ
"ವಿದಂತ್ಯನನ್ಯ ಪ್ರಮಾಣವೇದ್ಯಂ ಧರ್ಮಲಕ್ಷಣಂ ಅಸ್ಮಾತ್ ಇತಿ ವೇದಃ" ಎಂದು ಮೇಧಾತಿಥಿಗಳೂ
"ನಿಶ್ರೇಯಸಕರಾಣಿ ಕರ್ಮಾಣಿ ಆವೇದಯಂತೀತಿ ವೇದಾಃ ಎಂದು ಕಪರ್ದ ಸ್ವಾಮಿಗಳೂ ವೇದ ಶಬ್ದಾರ್ಥವನ್ನು ವಿವರಿಸಿದ್ದಾರೆ.
ದಯಾನಂದ ಸರಸ್ವತಿಯವರೂ " ವಿದಂತಿ, ಜಾನಂತಿ, ವಿದ್ಯಂತೇ, ಭವಂತಿ, ವಿಂದಂತಿ ಅಥವಾ ವಿಂದಂತೇ, ಲಭಂತೇ, ವಿಂದಂತಿ ವಿಚಾರಯಂತಿ ಸರ್ವೇ ಮನುಷ್ಯಾಃ ಸರ್ವಾಃ ಸತ್ಯ ವಿದ್ಯಾಃ ಯೈಃ ಯೇಷು ವಾ ತಥಾ ವಿದ್ವಾಂಸಶ್ಚ ಭವಂತಿ ತೇ ವೇದಾಃ " ಎಲ್ಲಾ ಸತ್ಯ ವಿದ್ಯೆಗಳನ್ನೂ ಯಾವುದರಿಂದ ಪಡೆದುಕೊಳ್ಳುವರೋ ಅದು ವೇದವೆಂದು ವೇದಾರ್ಥ ನಿರೂಪಣೆಮಾಡಿದ್ದಾರೆ.
" ವೇದದಲ್ಲಿ ಗೂಢವಾಗಿ ಬ್ರಹ್ಮಜ್ಞಾನ ಅಡಗಿದೆ" ಎಂಬುದನ್ನು ಸೂಚಿಸಲಾಗಿದೆ.
ಈ ವೇದಗಳು ಶ್ರವಣದ ಮೂಲಕ ಲಭ್ಯವಾದುದರಿಂದ ಶ್ರುತಿಗಳು ಎಂದು ಪ್ರಸಿದ್ಧವಾಗಿವೆ. ಇವುಗಳು ಸ್ವಯಂ ಸಿದ್ಧವಾದುವು. ನಿತ್ಯವಾದುವು, ಅಪೌರುಷೇಯವಾದುವು ಎಂಬುದು ನಮ್ಮ ಸಂಪ್ರದಾಯ.

ಋಷಿಗಳು ತಮ್ಮ ತಮ್ಮ ತಪಶ್ಯಕ್ತಿಯಿಂದ ಇದನ್ನು ತತ್ತದಾನುಪೂರ್ವೀ ವಿಶಿಷ್ಟವಾಗಿಯೇ ಸಾಕ್ಷಾತ್ಕರಿಸಿಕೊಂಡರೆಂದು ಹೇಳಲಾಗಿದೆ.
" ಯುಗಾಂತೇಂತರ್ಹಿತಾನ್ ವೇದಾನ್ ಸೇತಿಹಾಸಾನ್ ಮಹರ್ಷಯಃ |
ಲೇಭಿರೇ ತಪಸಾ ಪೂರ್ವಂ ಅನುಜ್ಞಾತಾ ಸ್ವಯಂಭುವಾ || (ಮಹಾಭಾರತ) "

ಆದುರರಿಂದಲೇ ಅವರುಗಳನ್ನು ಮಂತ್ರ ದ್ರಷ್ಟಾರರೆಂದು ಕರೆದಿದೆ. ಸಾಕ್ಷಾತ್ಕೃತ ಋಷಿಗಳಿಂದ ಶಿಷ್ಯೋಪಾಧ್ಯಾಯಿಕವಾದ ರೀತಿಯಲ್ಲಿ ಇತರರು ಇವುಗಳನ್ನು ಕೇಳಿ ಪಡೆದುಕೊಂಡು ಶ್ರುತರ್ಷಿಗಳಾದರು(ನಿರುಕ್ತ). ಮುಂದಿನ ಜನಾಂಗ ಅಷ್ಟು ಶಕ್ತಿ ಸಾಮರ್ಥಗಳನ್ನು ಹೊಂದಿರದ ಕಾರಣ ಅವರ ಉಪಯೋಗಕ್ಕಾಗಿ ಇವುಗಳನ್ನು ಒಟ್ಟುಗೋಡಿಸಿ ವಿಭಜಿಸಲಾಯಿತು. ವಾಗ್ವ್ಯವಹಾರದಿಂದಲೇ ಜನಾಂಗದಿಂದ ಜನಾಂಗಕ್ಕೆ ಇವು ಧಾರೆ ಎರೆಯಲಾದವು.

ಮೊದಲು ವೇದ ಒಂದೇ ಆಗಿತ್ತೆಂದೂ ಅನಂತರ ಯಾಗದಲ್ಲಿ ಹೋತೃ, ಅದ್ವರ್ಯು, ಉದ್ಗಾತೃ ಮತ್ತು ಬ್ರಹ್ಮ ಎಂಬ ಋತ್ವಿಕ್ಕುಗಳು ಉಪಯೋಗಿಸುವ ಕ್ರಮಕ್ಕನುಗುಣವಾಗಿ ನಾಲ್ಕಾಗಿ ಕವಲೊಡೆಯಿತೆಂದೂ ಹೇಳಲಾಗಿದೆ. ಒಂದಾಗಿದ್ದ ವೇದರಾಶಿಯನ್ನು ನಾಲ್ಕಾಗಿ ವಿಂಗಡಿಸಿದವರು ವೇದವ್ಯಾಸರೆಂದೂ ನಮ್ಮ ಸಂಪ್ರದಾಯಕ್ಕನುಸಾರವಾಗಿ ತಿಳಿಯುತ್ತೇವೆ. ಋಗ್ಯಜುಸ್ಸಾಮಾಥರ್ವವೇದಗಳಲ್ಲಿ ಋಗ್ವೇದಸಂಹಿತೆ ಬಹಳ ಪ್ರಾಚೀನವಾದುದೆಂದು ಆಧುನಿಕ ವಿಮರ್ಶಕರ ಆಬಿಪ್ರಾಯ, ಋಕ್ಸಂಹಿತೆಗೆ ಹೆಚ್ಚಿನ ಪ್ರಾಧಾನ್ಯವನ್ನು ಬಹಳ ಹಿಂದಿನಿಂದಲೂ ನಮ್ಮವರೂ ಕೊಟ್ಟಿದ್ದಾರೆ. ವೇದಗಳನ್ನು ಹೇಳುವಾಗಲ್ಲೆಲ್ಲಾ ಮೊದಲು ಋಗ್ವೇದದ ಉಲ್ಲೇಖ ಬಂದಿದೆ. ಯಜುರ್ವೇದ ಸಾವವೇದಗಳು ತತ್ಪರಿಚರಣಾವಿತರೌ ವೇದೌ ಎಂದು ಹೇಳಿರುವಂತೆ ಕೇವಲ ಯಾಗಗಳಿಗೆ ಸಂಬಂದಿಸಿದ ಮಂತ್ರಗಳನ್ನು ಮಾತ್ರ ಒಳಗೊಂಡಿವೆ. ಆದರೆ ಋಗ್ವೇದ ಸಂಹಿತೆಯಲ್ಲಿ ಯಾಗೋಪಯುಕ್ತವಾದ ಮಂತ್ರರಾಶಿಯೊಡನೆ ಇತರ ವಿಷಯಗಳನ್ನು ಪ್ರತಿಪಾದಿಸುವ ಮಂತ್ರಗಳು ಹೇರಳವಾಗಿವೆ. ಆದುದರಿಂದ ಋಗ್ವೇದ ಸಂಹಿತೆಯನ್ನು ಮೂಲಾಧಾರವಾಗಿಟ್ಟು ಕೊಂಡು ಯಾಗದಲ್ಲಿ ಅಧ್ವರ್ಯು ಬಳಸಬೇಕಾದ ಮಂತ್ರಗಳನ್ನೆಲ್ಲಾ ಕೂಡಿಸಿ ಯಜುರ್ವೇದವನ್ನೂ, ಉದ್ಗಾತೃ ಬಳಸಬೇಕಾದ ಮಂತ್ರಗಳನ್ನೆಲ್ಲಾ ಬೇರೆಯಾಗಿ ಕೂಡಿಸಿ ಸಾಮವೇದವನ್ನೂ ಸಂಗ್ರಹಿಸಲಾಯಿತೆಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ.

ಅಥರ್ವ ವೇದವು ಯಾಗಕ್ಕೆ ನೇರವಾಗಿ ಸಂಭಂದಿಸಿಲ್ಲದ ಕಾರಣ ಅದು ಇತರ ವೇದಗಳಿಹಗಿಂತ ಈಚಿನದೆಂದು ಅಭಿಪ್ರಾಯಪಡಲಾಗಿದೆ. ನಮ್ಮ ಪ್ರಾಚೀನರ ಅಭಿಪ್ರಾಯದಲ್ಲಿ ಈ ನಾಲ್ಕು ವೇದಗಳಿಗೂ ಸಮಾನವಾದ ಸ್ಥಾನವಿದೆ. ಇವೆಲ್ಲವನ್ನೂ ಅವರು ಅಪೌರುಷೇಯ, ನಿತ್ಯ ಮತ್ತು ಸ್ವತಃಸಿದ್ದವೆಂದು ಪ್ರತಿಪಾದಿಸಿದ್ದಾರೆ. ಋಗ್ವೇದ ಸಂಹಿತೆಯಲ್ಲಿ ಹೋತಾ, ಉದ್ಗಾತಾ, ಬ್ರಹ್ಮಾ ಮತ್ತು ಅಧ್ವರ್ಯು ಇವರುಗಳು ಕೆಲಸವನ್ನು ಸೂಚಿಸಲಾಗಿದೆ. ಇಲ್ಲಿಯೂ ಅಥರ್ವವೇದದ ಉಲ್ಲೇಖವಿಲ್ಲದಿರುವುದು ಗಮನಾರ್ಹವಾಗಿದೆ. ಈ ಋತ್ವಿಕ್ಕುಗಳು ಬಳಸುತ್ತಿದ್ದ ವೇದಗಳನ್ನು ಆಪಸ್ತಂಬರು -
" ಋಗ್ವೇದೇನ ಹೋತಾ ಕರೋತಿ | ಯಜುರ್ವೇದೇನಾ ಅಧ್ವರ್ಯುಃ |
ಸಾಮವೇದೇನೋದ್ಗಾತಾ | ಸರ್ವೈಃರ್ಬ್ರಹ್ಮಾ || " ಎಂದು ಹೇಳಿದ್ದಾರೆ.

ಐತರೇಯ ಬ್ರಾಹ್ಮಣದಲ್ಲಿ ಯದೃಚೈವ ಹೋತ್ರಂ ಕ್ರಿಯತೇ, ಯಜುಷಾಧ್ವರ್ಯವಂ, ಸಾಮ್ನೋದ್ಗೀಥಂ ವ್ಯಾರಬ್ಧಾ ತ್ರಯೀ ವಿದ್ಯಾ ಭವತೀ | ಅಥ ಕೇನ ಬ್ರಹ್ಮ ತ್ವಂ ಕ್ರಿಯತೇ ಇತಿ ತ್ರಯಾ ವಿದ್ಯಯಾ ಇತಿ ಬ್ರೂಯಾತ್ | ಎಂದೇ ಉಲ್ಲೇಖವಿದೆ. (ಐ.ಬ್ರಾ ೫-೩೩)

ಸ ಚ ಬ್ರಹ್ಮಾ ವೇದತ್ರಯೋಕ್ತಸರ್ವಕರ್ಮಾಭಿಜ್ಞಃ ಎಂದು ಸಾಯಣರು ತಮ್ಮ ಋಗ್ವೇದ ಭಾಷ್ಯ ಭೂಮಿಕೆಯಲ್ಲಿ ಹೇಳುತ್ತಾರೆ. ಇವುಗಳೆಲ್ಲದರಿಂದ ಅಥರ್ವವೇದವು ನೇರವಾಗಿ ಯಾಗಕ್ಕೆ ಸಂಬಂಧಿಸಿರಲಿಲ್ಲವೆಂಬುದು ಸಿದ್ಧವಾಗುತ್ತದೆ. ಆದುದರಿಂದಲೇ ಈ ವೇದ ಇತರ ವೇದಗಳಿಗಿಂತ ಈಚಿನ ಕಾಲಕ್ಕೆ ಸೇರುದುದೆಂದು ಆಧುನಿಕ ವಿಮರ್ಶಕರು ಅಭಿಪ್ರಾಯಪಡುತ್ತಾರೆ.

ಹೀಗೆ ಅಪಾರವಾದ ವೇದವಾಙ್ಮಯವನ್ನು ಸಂಹಿತೆಗಳು, ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳು ಎಂದು ನಾಲ್ಕು ಸ್ಕಂಧಗಳಾಗಿ ವಿಭಾಗಿಸಿದ್ದಾರೆ. ಒಂದೊಂದು ವೇದಕ್ಕೂ ತನ್ನದೇ ಆದ ಸಂಹಿತೆಗಳು, ಬ್ರಾಹ್ಮಣ ಹಾಗೂ ಅರಣ್ಯಕೋಪನಿಷತ್ತುಗಳಿವೆ. ಕೆಳಗೆ ಸಂಗ್ರಹವಾಗಿ ನಿರೂಪಿಸಲಾಗಿದೆ.

ಸಂಹಿತೆಗಳು

ಬೇರೆ ಬೇರೆ ಋಷಿಗಳಿಂದ ದೃಷ್ಟವಾದ ಮಂತ್ರಗಳನ್ನು ಒಂದೇ ಕಡೆ ಸೇರಿಸಿರುವುದು. ಸಂಹಿತೆ ಎನ್ನಿಸಿಕೊಳ್ಳುವುದು. (ನಿರುಕ್ತ ೭-೧೨ ರಲ್ಲಿ ಇವುಗಳ ನಿರ್ವಚನವನ್ನು ನೋಡಬಹುದು). ಋಗ್ವೇದ ಸಂಹಿತೆಯಲ್ಲಿ ೧೦೨೮ ಸೂಕ್ತಗಳಿವೆ. ೧೦೫೫೨ ಮಂತ್ರಗಳವೆ. ಈ ಮಂತ್ರಗಳೆಲ್ಲಾ ಛಂದೋಬದ್ಧವಾಗಿ ತ್ರಿಷ್ಟುಪ್, ಜಗತೀ, ಅನುಷ್ಟುಪ್, ಗಾಯತ್ರಿ ಮೊದಲಾದ ಛಂದಸ್ಸುಗಳಲ್ಲಿವೆ.

ಯಜುರ್ವೇದ ಸಂಹಿತೆ ನಿಯತವಾಗಿ ಛಂದೋಬದ್ಧವಾಗಿಲ್ಲ(ಅನಿಯತಾಕ್ಷರಾವಸಾನೋ ಯಜುಃ, ಗದ್ಯಾತ್ಮಕೋ ಯಜುಃ, ಎಂದು ಇದನ್ನು ಹೇಳಲಾಗಿದೆ). ಈ ವೇದ ಶುಕ್ಲಯಜುರ್ವೇದ ಮತ್ತು ಕೃಷ್ಣ ಯಜುರ್ವೇದ ಎಂದು ಎರಡು ಬಗೆಯಾಗಿದೆ. ಶುಕ್ಲ ಯಜುಸ್ಸಂಹಿತೆ ಕಾಣ್ವ ಮತ್ತು ಮಾಧ್ಯಂದಿನ ಎಂದು ಎರಡು ಪಾಠಗಳಲ್ಲಿ ಉಪಲಭ್ಧವಾಗಿದೆ. ಶುಕ್ಲಯಜುರ್ವೇದ ಸಂಹಿತೆ ಪೂರ್ಣವಾಗಿ ಛಂದೋಬದ್ಧವಾಗಿದೆ. ಇದರಲ್ಲಿ ಇದರಲ್ಲಿ ೪೦ ಅಧ್ಯಾಯಗಳೂ ೩೦೩ ಅನುವಾಕಗಳೂ ೧೯೦೫ ಮಂತ್ರಗಳೂ ಇವೆ. ಕೃಷ್ಣ ಯಜುರ್ವೇದ ಸಂಹಿತೆ ಗದ್ಯ ಪದ್ಯ ಮಿಶ್ರಿತವಾಗಿದೆ. ಇದು ಕಠ, ಕಪಿಸ್ಥಲ, ಕಾಲಾಪ ಅಥವಾ ಮೈತ್ರಾಯಣೀಯ ಮತ್ತು ತೈತ್ರೀಯ ಎಂಬ ಶಾಖೆಗಳಲ್ಲಿ ಉಪಲಬ್ಘವಾಗಿದೆ. ಮೈತ್ರಾಯಣೀಯ ಸಂಹಿತಯಲ್ಲಿ ನಾಲ್ಕು ಕಾಂಡಗಳೂ ೫೪ ಪ್ರಪಾಠಕಗಳೂ, ಇದ್ದೂ ಕಾಠಕ ಸಂಹಿತೆಗಿಂತ ಸ್ವಲ್ಪ ಭಿನ್ನವಾಗಿದೆ. ತೈತ್ತರೀಯ ಶಾಖೆಯ ಸಂಹಿತೆಯಲ್ಲಿ ೭ ಅಷ್ಟಕಗಳೂ (ಅಥವಾ ಕಾಂಡ) ೪ ಪ್ರಪಾಠಕಗಳೂ ಆಥವಾ ಅಧ್ಯಾಯಗಳೂ ಇವೆ. ಈ ಒಂದೊಂದು ಅಧ್ಯಾಯದಲ್ಲಿಯೂ ಅನೇಕಾನೇಕ ಅನುವಾಕಗಳಿವೆ. ಈ ಅನುವಾಕಗಳ ಕೊನೆಯಲ್ಲಿ ಆಯಾ ಅನುವಾಕಗಳ ಪದಸಂಖ್ಯೆಯನ್ನು ಕೊಟ್ಟಿರುವುದು ಇದರ ವೈಶಿಷ್ಟ್ಯ. ಗದ್ಯ ಗಾಥೆಗಳು ಇದರಲ್ಲಿ ಹೆಚ್ಚಾಗಿರುವುದರಿಂದ ಇದಕ್ಕೆ ಅನುಕ್ರಮಣಿಗೆಗಳನ್ನು ರಚಿಸಿಲ್ಲ. ಈ ಸಂಹಿತೆಯಲ್ಲಿ ಒಟ್ಟು ೬೫೧ ಅವುವಾಕಗಳು ೧೧೦೨೯೬ ಪದಗಳೂ ಇವೆ. ಅಧ್ವರ್ಯುವಿಗೆ ಉಪಯುಕ್ತವಾದ ಮಂತ್ರಗಳನ್ನೆಲ್ಲಾ ಈ ಸಂಹಿತೆಯಲ್ಲಿ ಸೇರೆಸಲಾಗಿದೆ. ಕೃಷ್ಣ ಯಜುರ್ವೇದದಲ್ಲಿ ಮಂತ್ರಗಳನ್ನೂ ಅವುಗಳ ವಿನಿಯೋಗವನ್ನೂ ತಿಳಿಸುವ ಬ್ರಾಹ್ಮಣಗಳನ್ನೂ ಜೊತೆಜೊತೆಯಾಗಿ ಕೊಡಲಾಗಿದೆ.

ಸಾಮವೇದ ಉದ್ಗಾತೃವೇದ, ಸೋಮಯಾಗದಲ್ಲಿ ಸೋಮಾಭಿಷವ ಮಾಡುವಾಗ ಸಾಮಗಳನ್ನು ಹಾಡುತ್ತಿದ್ದರು. ಈ ಸಾಮಗಳನ್ನು ಉದ್ಗಾತೃ ಮಧುರವಾಗಿ ಹಾಡುತ್ತಿದ್ದನು. ಸಾಮವೇದ ಸಂಹಿತೆಯಲ್ಲಿ ಒಟ್ಟು ೧೫೪೯ ಮಂತ್ರಗಳಿವೆ. ಇವುಗಳನ್ನು ಅರ್ಚಿಕಾ ಮತ್ತು ಉತ್ತರ ಅರ್ಚಿಕಾ ಎಂದು ಎರಡು ಭಾಗ ಮಾಡಿದ್ದಾರೆ. ಅರ್ಚಿಕೆಯಲ್ಲಿ ೫೮೫ ಮಂತ್ರಗಳೂ ಉತ್ತರ ಅರ್ಚಿಕೆಯಲ್ಲಿ ೯೬೪ ಮಂತ್ರಗಳೂ ಇವೆ. ಇವುಗಳಲ್ಲಿ ೭೫ ಮಂತ್ರಗಳನ್ನು ಬಿಟ್ಟರೆ ಉಳಿದ ೧೪೭೪ ಮಂತ್ರಗಳೂ ಋಗ್ವೇದದೆಂದಲೇ ಆರಿಸಿಕೊಂಡವಾಗಿವೆ. ಈ ಸಾಮಗಾನ ಸಂಗೀತ ಶಾಸ್ತ್ರದ ಮೂಲವೆಂದು ಹೇಳಬಹುದು.

ಅಥರ್ವಸಂಹಿತೆ ಇತರ ಸಂಹಿತೆಗಳಿಗಿಂತ ವಿಲಕ್ಷಣವಾಗಿದೆ. ಇಲ್ಲಿನ ಅನೇಕ ಮಂತ್ರಗಳು ಋಗ್ವೇದ ಮಂತ್ರಗಳೇ ಆಗಿವೆ. ಇನ್ನೂ ಕೆಲವು ಋಗ್ವೇದ ಮಂತ್ರಗಳಿಗಿಂತ ಪ್ರಾಚೀನವಾದವೂ ಇರಬಹುದು. ಈ ಸಂಹಿತೆಯಲ್ಲಿ ಅಭಿಚಾರಪ್ರಯುಕ್ತವಾಧ ಮಂತ್ರಗಳೇ ಹೆಚ್ಚಾಗಿವೆ. ಯಾಜ್ಞಿಕವಾದ ಸೂಕ್ತಗಳೂ ಹಲವಾರಿವೆ. ಈ ಸಂಹಿತೆಗೆ ಅಥರ್ವಾಂಗೀರಸ, ಭೃಗ್ವಂಗೀರಸ ಎಂಬ ಹೆಸರುಗಳೂ ರೂಢಿಯಲ್ಲಿವೆ. ಈ ಸಂಹಿತೆಯ ಶೌನಕೀಯ ಶಾಖೆಯಲ್ಲಿ ೨೦ ಕಾಂಡಗಳೂ ೭೩೧ ಸೂಕ್ತಗಳೂ ೫೦೩೮ ಮಂತ್ರಗಳೂ ಇವೆ.

ಬ್ರಾಹ್ಮಣಗಳು

ಸಂಹಿತೆಯ ಮಂತ್ರಗಳನ್ನು ಯಜ್ಞಗಳಲ್ಲಿ ಉಪಯೋಗಿಸುವ ವಿಧಾನವನ್ನು ಬ್ರಾಹ್ಮಣ ಗ್ರಂಥಗಳುತ ತಿಳಿಸುವುವು.
( "ವಿಧಾಯಕಂ ವಾಕ್ಯಂ ಬ್ರಾಹ್ಮಣಂ" ಮಂತ್ರವಲ್ಲದ್ದು ಬ್ರಾಹ್ಮಣ ಎಂದು ಜೈಮಿನಿಗಳು ಪೂರ್ವಮೀಮಾಂಸಾ ಸೂತ್ರದಲ್ಲಿ "ಶೇಷೇ ಬ್ರಾಹ್ಮಣ ಶಬ್ದಃ (ಜೈ.ಸೂ ೨-೧-೩೩) ಎಂದು ಹೇಳಿದ್ದಾರೆ.
(ಮಂತ್ರ ವ್ಯತಿರಿಕ್ತಭಾಗೇ ತು ಬ್ರಾಹ್ಮಣಶಬ್ದಸ್ತೈರ್ವ್ಯವಹೃತಃ - ಸಾಯಣ ಭಾಷ್ಯ ಭೂಮಿಕೆ)
ಪ್ರತಿಯೊಂದು ವೇದದ ಶಾಖೆಗೂ ಸಂಬಂಧಿಸಿದಂತೆ ಬ್ರಾಹ್ಮಣ ಗ್ರಂಥಗಳಿವೆ. ಋಗ್ವೇದಕ್ಕೆ ಸಂಬಂಧಪಟ್ಟಂತೆ ಐತರೇಯ ಬ್ರಾಹ್ಮಣ, ಕೌಷೀತಕೀ ಬ್ರಾಹ್ಮಣ ಎಂದು ಎರಡು ಬ್ರಾಹ್ಮಣಗಳಿವೆ. ಐತರೇಯ ಬ್ರಾಹ್ಮಣದಲ್ಲಿ ೪೦ ಅಧ್ಯಾಯಗಳಿವೆ. ಅಗ್ನಿಷ್ಟೋಮ, ಉಕ್ಥ್ಯ, ಷೋಡಶ, ಅತಿರಾತ್ರ, ದರ್ಶ- ಪೌರ್ಣಮಾಸ ಮೊದಲಾದ ಯಾಗಗಳ ವಿಚಾರ ಇಲ್ಲಿದೆ. ಕೌಷೀತಕೀ ಬ್ರಾಹ್ಮಣದಲ್ಲಿ ೩೦ ಅಧ್ಯಾಯಗಳಿವೆ. ದರ್ಶಪೌರ್ಣಮಾಸಾದಿ ಯಾಗಗಳ ಮತ್ತು ಸೋಮಯಾಗದ ವಿಧಾನವನ್ನೂ ಇಲ್ಲಿ ಹೇಳಿದೆ.

ಸಾಮವೇದಕ್ಕೆ ತಾಂಡ್ಯ ಬ್ರಾಹ್ಮಣ, ಷಡ್ವಿಂಶ ಬ್ರಾಹ್ಮಣ, ಜೈಮಿನೀಯ ಅಥವಾ ತಲವಕಾರ ಬ್ರಾಹ್ಮಣ, ಮಂತ್ರ ಬ್ರಾಹ್ಮಣ, ದೈವತ ಬ್ರಾಹ್ಮಣ, ಸಾಮವಿಧಾನ ಬ್ರಾಹ್ಮಣ, ಸಂಹಿತೋಪನಿಷದ್ಬ್ರಾಹ್ಮಣ, ಆರ್ಷಬ್ರಾಹ್ಮಣ, ಮತ್ತು ವಂಶ ಬ್ರಾಹ್ಮಣ ಎಂಬ ಬ್ರಾಹ್ಮಣ ಗ್ರಂಥಗಳು ಸೇರಿವೆ. ತಾಂಡ್ಯ ಬ್ರಾಹ್ಮಣದಲ್ಲಿ ೨೫ ಅಧ್ಯಾಯಗಳಿವೆ. ಷಡ್ವಿಂಶ ಬ್ರಾಹ್ಮಣ ಇದರ ಮಂದಿನ ಭಾಗವಾಗಿದೆ.

ಯಜುರ್ವೇದ ಬ್ರಾಹ್ಮಣಗಳಲ್ಲಿ ಶುಕ್ಲಯಜುರ್ವೇದಕ್ಕೆ ಸೇರಿದ ಶತಪಥ ಬ್ರಾಹ್ಮಣ ವೈದಿಕ ಸಾಹಿತ್ಯದಲ್ಲಿ ಪ್ರಧಾನವಾದುದಾಗಿದೆ. ಇದರಲ್ಲಿ ೧೪ ಕಾಂಡಗಳೂ ೧೦೦ ಅಧ್ಯಾಯಗಳೂ ಇವೆ. ಕೃಷ್ಣ ಯಜುರ್ವೇದಕ್ಕೆ ತೈತ್ತರೀಯ ಬ್ರಾಹ್ಮಣ ಸೇರಿದೆ. ಕಠ ಶಾಖೆ ಮತ್ತು ಮೈತ್ರಾಯಣೀಯ ಶಾಕೆಗೆ ಬೇರೆ ಬ್ರಾಹ್ಮಣ ವಿಭಾಗಗಳಿಲ್ಲ ಸಂಹಿತೆಗೆ ಸೇರಿದ ಗದ್ಯ ಭಾಗಗಳೇ ಈ ಶಾಖೆಗಳ ಬ್ರಾಹ್ಮಣಗಳಾಗಿವೆ.

ಅಥರ್ವವೇದಕ್ಕೆ ಸೇರಿರುವ ಬ್ರಾಹ್ಮಣ ಗೋಪಥಬ್ರಾಹ್ಮಣ, ಈ ಬ್ರಾಹ್ಮಣ ಸಂಹಿತೆಯ ಮಂತ್ರಗಳ ವಿನಿಯೋಗವನ್ನು ಕ್ರಮವಾಗಿ ತಿಳಿಸುವ ಬದಲು ಸೂತ್ರಕ್ಕನುಗುಣವಾಗಿರುವುದು ಇದರ ವೈಶಿಷ್ಟ್ಯ.

         ಹೀಗೆ ಈ ಬ್ರಾಹ್ಮಣ ಗ್ರಂಥಗಳು ಸಂಹಿತೆಗಳಿಗಿಂತ ವಿಲಕ್ಷಣವಾದ ಸ್ವರೂಪವನ್ನು ಪ್ರತಿಬಿಂಬಿಸುತ್ತವೆ. ಭಾರತದ ಅತ್ಯಂತ ಪ್ರಾಚೀನವಾದ ಗದ್ಯಸೈಲಿಯ ಪರಿಚಯ ಇದರಿಂದಾಗುತ್ತದೆ, ಸಂಹಿತೆಗಳಲ್ಲಿನ ಮಂತ್ರಗಳ ವಿನಿಯೋಗವನ್ನು ತಿಳಿಸುವ ಸಂದರ್ಭದಲ್ಲಿ ಇವು ಯಾಗಾದಿಗಳನ್ನು ವಿವರಿಸುದಲ್ಲದೆ ಪ್ರಾಸಂಗಿಕವಾಗಿ ಕೆಲವು ಶಬ್ದಗಳ ನಿರ್ವಚನವನ್ನೂ ಮಾಡಿವೆ. ಅವುಗಳ ಗೂಢಾರ್ಥವಿವರಣೆ ಮಾಡಿ ಯಜ್ಞಗಳಲ್ಲಿ ಅವುಗಳನ್ನು ಪ್ರಯೋಗಿಸಿದ  ಆಖ್ಯಾನಗಳನ್ನು ಹೇಳುತ್ತದೆ. ನಿರುಕ್ತಕಾರ ಯಾಸ್ಕರು ಅನೇಕ ಕಡೆ ನಿರ್ವಚನ ಮಾಡುವಾಗ 'ಇತಿ ಹ ಬ್ರಾಹ್ಮಣಮ್' ಎಂದು ಬ್ರಾಹ್ಮಣ ವಾಕ್ಯಗಳನ್ನು ಉದ್ಧರಿಸಿದ್ದಾರೆ.

     ಬ್ರಾಹ್ಮಣ ಸ್ಕಂಧವಾದ ಮೆಲೆ ಬರುವುದು ಆರಣ್ಯಕೋಪನಿಷತ್ತುಗಳ ಸ್ಕಂಧ. ಅರಣ್ಯದಲ್ಲಿ ಅಧ್ಯಯನ ಮಾಡಬೇಕಾದ ಅಂಶಗಳನ್ನು ಆರಣ್ಯಕಗಳು ವಿವೇಚಿಸುವುವು. ವಾನಪ್ರಸ್ಥರು ಅರಣ್ಯದಲ್ಲಿ ಅನುಸರಿಸಬೇಕಾದ ಗೂಢಾರ್ಥಚಿಂತನೆಗಳ ವಿಚಾರ ಇಲ್ಲಿದೆ. ಇವು ಕೇವಲ ಕರ್ಮವನ್ನು ವಿವೇಚಿಸುವ ಬ್ರಾಹ್ಮಣಗಳಿಗಿಂತ ಬೇರೆಯಾಗಿವೆ. ಈ ಅರಣ್ಯಕಗಳು ಒಂದೊಂದು ಬ್ರಾಹ್ಮಣಕ್ಕೂ ಸೇರಿದಂತೆ ಬೇರೆ ಬೇರೆಯಾಗಿವೆ.

        ಈ ಅರಣ್ಯಕಗಳ ಕೊನೆಯ ಭಾಗಗಳೇ ಉಪನಿಷತ್ತುಗಳು, ವೇದಾಂತಗಳೆಂಬ ಹೆಸರು ಇವಕ್ಕಿದೆ. ಇಂದು ಇವೆ ಹೆಚ್ಚಾಗಿ ಪ್ರಚಾರದಲ್ಲಿರುತ್ತಿವೆ. ವೇದಧರ್ಮದ ಅತ್ಯನ್ನತವಾದ ಆದರ್ಶ ಮತ್ತು ಸಿದ್ಧಿಗಳನ್ನು ಪ್ರತಿಪಾದಿಸಿ ಇವು ಮೋಕ್ಷ ಶಾಸ್ತ್ರಗಳೆನಿಸಿವೆ.  ಪ್ರರಬ್ರಹ್ಮ ವಸ್ತುವಿನ ಸ್ವರೂಪಭಾವವನ್ನು ಇರೂಪಿಸುವ ಈ ಭಾಗಗಳು ವೇದಗಳ ಸಾರಸರ್ವಸ್ವವಾಗಿವೆ. ಎಲ್ಲ  ಶಾಸ್ತ್ರಗಳಿಗೂ ಮೂರ್ಧನ್ಯ ಪ್ರಾಯವಾಗಿವೆ. ಈ ಉಪನಿಷತ್ತುಗಳ ವಿಚಾರಧಾರೆ ಉಳಿದ ಭಾಗಗಳಿಗಿಂತ ಭಿನ್ನವಾಗಿ ಆತ್ಮಜ್ಞಾನ ಮತ್ತು ವಿಶ್ವಾತ್ಮಜ್ಞಾನವನ್ನು ಪ್ರತಿಪಾದಿಸಿ ಭಾರತದ ಸಂಸ್ಲೃತಿಯ ಅತ್ಯುನ್ನತ ಮಟ್ಟವನ್ನು ಪ್ರತಿಬಿಂಬಿಸುತ್ತವೆ. ಉಪನಿಷತ್ತುಗಳು ಬ್ರಾಹ್ಮಣ ಗ್ರಂಥಗಳ ಕೊನೆಯ ಭಾಗಗಳಾದರೂ ಕರ್ಮವಿಚಾರವನ್ನು ಬಿಟ್ಟು ಜ್ಞಾನಪ್ರತಿಪಾದಕಗಳಾಗಿವೆ. ಗುರುವಿನ ಸಮೀಪದಲ್ಲಿ ಕುಳಿತು ಭಕ್ತಿಯಿಂದ ಇವನ್ನು  ಕಲಿಯಬೇಕಾದುದರಿಂದ ಇವು ಉಪನಿಷತ್ತುಗಳೆಂಬ ಹೆಸರನ್ನು ಪಡೆದವು. ಪ್ರತಿ ವೇದ ಶಾಖೆಗೂ ಬೇರೆಬೇರೆ ಉಪನಿಷತ್ತುಗಳೆವೆ. ಋಗ್ವೆದಕ್ಕೆ ಐತರೆಯ ಮತ್ತು ಕೌಷೀತಕೀ ಉಪನಿಷತ್ತುಗಳು ಸೇರಿವೆ. ಸಾಮವೇದಲಕ್ಕೆ ಛಾಂದೋಗ್ಯ ಮತ್ತು ಕೇನೋಪನಿಷತ್ತು ಕೃಷ್ಣಯಜುರ್ವೇದಕ್ಕೆ ಕಠ, ಶ್ವೇತಾಶ್ವತರ, ಮೈತ್ರಾಯಣೀಯ, ತೈತ್ತರೀಯ ಮತ್ತು ಮಹಾನಾರಾಯಣೀಯ ಉಪನಿಷತ್ತುಗಳೂ, ಶುಕ್ಲಯುಜುರ್ವೇದಕ್ಕೆ ಬೃಹದಾರಣ್ಯಕ ಮತ್ತು ಈಶಾವಾಸ್ಯೋಪನಿಷತ್ತುಗಳೂ,ಅಥರ್ವವೇದಕ್ಕೆ ಮುಂಡಕ, ಪ್ರಶ್ನ ಮತ್ತು ಮಾಡೂಕ್ಯೋಪನಿಷತ್ತುಗಳೂ ಸೇರಿವೆ.

          ಈ ಉಪನಿಷತ್ತುಗಳ ವಿಚಾರಧಾರೆ ಅನುಪಮವಾಗಿದೆ. ಈ ಪ್ರಪಂಚವೆಂಬುದೆನು ? ನಾವಾರು ? ಮರಣಾನಂತರ ನಮ್ಮ ಸ್ಥಿತಿ ಏನು ? ಇವೆ ಮೊದಲಾದ ಪ್ರಶ್ನೆಗಳಿಗೆ ನಿರ್ಧಿಷ್ಟವಾದ ಉತ್ತರಗಳು ಇಲ್ಲಿವೆ. ಹಿಂದೂದರ್ಶನಗಳಲ್ಲಿ ಮುಖ್ಯವಾದ ಸಾಂಖ್ಯ, ಯೋಗ, ನ್ಯಾಯ, ವೈಷೇಷಿಕ, ಮತ್ತು ವೇದಾಂತ ದರ್ಶನಗಳು ಈ ಉಪನಿಷತ್ತಿನ ತತ್ತ್ವಜ್ಞಾನವನ್ನೇ ಆಧಾರವಾಗಿ ಹೊಂದಿವೆ ಎಂಬುದು ಗಮನಾರ್ಹವಾಗಿದೆ. ಇವುಗಳಲ್ಲಿ ನಾಸ್ತಿಕ ದರ್ಶನಗಳ ಅಂಕುರಗಳೂ ಅಲ್ಲಲ್ಲಿ ತೋರುವುವು.
         (It is generally believed that the Upanishads teach a system of Pantheism ; but a close examination will show that they teach not one. but various systems of doctrines as regards the nature of God, man and the world the relations between then, The Religio- Philosophical system of modern times which are mutually inconsistent, quote texts from the Upanishads as an authority for their special doctrines,)
                                - Vaishnavism,Shaivism and Minor Religious Systems BY Bhandarkar R.G

                      ಹೀಗೆ ವೇದಸಾಹಿತ್ಯ ಸಂಹಿತಾ, ಬ್ರಾಹ್ಮಣ, ಮತ್ತು ಅರಣ್ಯಕೋಪನಿಷತ್ತುಗಳಲ್ಲಿ ಅಗಾಧವಾದ ಗ್ರಂಥ ಭಾಗಗಳನ್ನು ಒಳಗೊಂಡಿವೆ. ನಮಗೆ ಇಂದು ಉಪಲಬ್ಧವಾರಗಿರುವ ಭಾಗಗಳು ಮೂಲವೇದದ ಸಹಸ್ರಾಂಶವೂ ಆಗಿಲ್ಲವೆಂಬುದನ್ನು ನಾವು ನೆನಪಿನಲ್ಲಿಡಬೇಕು. 'ಅನಂತಾ ವೈ ವೇದಾಃ' ಎಂಬ ನುಡಿ ಇದನ್ನು ಸೂಚಿಸುತ್ತದೆ. ಆಧುನಿಕ ವಿಮರ್ಶಕರ ಅಭಿಪ್ರಾಯವೂ ಇದೇ ಆಗಿದೆ. ಈಗ ವೇದ ಭಾಗಗಳ ವಿಚಾರಗಳನ್ನು ಕೆಳಗಿನ ಪಟ್ಟಿಕೆಯಲ್ಲಿ ಸಂಗ್ರಹಿಸಿದೆ.
        (We have no right to suppose that we have even a hundredth part of the religious and popular poetry that existed during the vedic age. - Six Systems of the Indian Philosophy, Maxmuller, p-41)

         ವೇದ ಪ್ರಾಮಾಣ್ಯ - ಪ್ರಾಚೀನ ಮತ 
                 ವೇದ ಪ್ರಾಮಾಣ್ಯವನ್ನು ಅಂಗೀಕರಿಸುವ ದರ್ಶನಗಳನ್ನು ಆಸ್ತಿಕ ದರ್ಶನಗಳೆಂದೂ ವೇದ ಪ್ರಾಮಾಣ್ಯವನ್ನು ಒಪ್ಪದ ದರ್ಶನಗಳು ನಾಸ್ತಿಕದರ್ಶನಗಳೆಂದೂ ಪ್ರಾಚೀನರು ದರ್ಶನಗಳನ್ನು ವಿಭಾಗಮಾಡಿದ್ದಾರೆ. ಚಾರ್ವಾಕ, ಜೈನ ಮತ್ತು ಬೌದ್ಧ ದರ್ಶನಗಳು ವೇದ ಪ್ರಾಮಾಣ್ಯವನ್ನಂಗೀಕರಿಸುವುದಿಲ್ಲ. ಉಳಿದ ದರ್ಶನಗಳು ಬಹಳ ಹಿಂದಿನಿಂದಲೂ ವೇದಗಳ ಪ್ರಾಮಾಣ್ಯವನ್ನು ಅಂಗೀಕರಿಸಿವೆ. ಷಡ್ದರ್ಶಗಳೆಂದು ಪ್ರಸಿದ್ಧವಾಗಿರುವ ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಪೂರ್ವಮೀಮಾಂಸಾ, ಉತ್ತರಮೀಮಾಂಸಾ ದರ್ಶನಗಳಲ್ಲಿ ಕೊನೆಯ ಎರಡು ದರ್ಶನಗಳು ನೇರವಾಗಿ ವೇದಗಳ ಆಧಾರದಿಂದಲೇ ಮೂಡಿವೆ. ಪೂರ್ವಮೀಮಾಂಸಾ ದರ್ಶನಕ್ಕೆ ಬ್ರಾಹ್ಮಣ ಭಾಗಗಳು ಪರಮಾಧಾರವಾದರೆ ಉತ್ತರ ಮೀಮಾಂಸಾ ದರ್ಶನಕ್ಕೆ ಉಪನಿಷತ್ತುಗಳು ಪರಮಾಧಾರವಾಗಿವೆ. ಈ ದರ್ಶನಗಳೆಲ್ಲವಲೂ ತಮ್ಮದೇ ಆದ ರೀತಿಯಲ್ಲಿ ವೇದಪ್ರಾಮಾಣ್ಯವನ್ನು ಅಂಗೀಕರಿಸಿವೆ.
          
           ಶ್ರೀಮತ್ಸಾಯಣಾಚಾರ್ಯರು ತಮ್ಮ ಋಗ್ವೆದ ಭಾಷ್ಯಭೂಮಿಕೆಯಲ್ಲಿ ವೇದ ಪ್ರಾಮಾಣ್ಯದ ವಿಚಾರವನ್ನು ಚರ್ಚಿಸಿದ್ದಾರೆ. ಪೂರ್ವಮೀಮಾಂಸಾ ದರ್ಶನಕಾರರಾದ ಜೈಮಿನಿಗಳು ತಮ್ಮ ಜೈಮಿನಿಸೂತ್ರಗಳಲ್ಲಿ ವೇದ ಪ್ರಾಮಾಣ್ಯವನ್ನು ಕುರಿತು ವಿವೇಚಿಸಿದ್ದಾರೆ. ಇವರುಗಳ ಅಭಿಪ್ರಾಯದಂತೆ ಮಂತ್ರಬ್ರಾಹ್ಮಣಾತ್ಮಕವಾದ ಶಬ್ದರಾಶಿಯೇ ವೇದ.ಇದು ಸಮಗ್ರವಾಗಿ ಪರಮ ಪ್ರಮಾಣ. ವೇದಪ್ರಾಮಾಣ್ಯವನ್ನು ಒಪ್ಪದವರ ವಾದ ಕೆಳಗೆ ಕಂಡಂತೆ ಇದೆ;
           ಅ) ಯಾವ ಸಾಧನವು ನಮ್ಮ ಅನುಭವಕ್ಕೊಳಪಡುವುದೋ ಅದು ಪ್ರಮಾಣ(ಸಮ್ಯಗನುಭವಸಾಧನಂ ಪ್ರಮಾಣಂ),
                ಮತ್ತೊಂದು ಸಾಧನದಿಂದ ತಿಳಿಯಲಾಗದ ಅರ್ಥಗಳನ್ನು ಯಾವ ಸಾಧನವು ಬೋಧಿಸುವುದೋ ಅದು ಪ್ರಮಾಣ  
                (ಅನಧಿಗತಾರ್ಥಗಂತೃಪ್ರಮಾಣಂ), ಮಂತ್ರಬ್ರಾಹ್ಮಣಾತ್ಮಕವಾದ ವೇದರಾಶಿಯಿಂದ ಇಂಥ ಯಾವ ವಿಧವಾದ 
                ಪ್ರಯೋಜನವೂ ದೊರೆಯದ ಕಾರಣ ಅದು ಪ್ರಮಾಣವಲ್ಲ.
           ಆ) ಯಾವ ಅರ್ಥವನ್ನು ಬೋಧಿಸದ ಮಂತ್ರಗಳು ವೇದದಲ್ಲಿ ಅನೇಕವಿವೆ. 'ಸೃಣ್ಯೇವ ಜರ್ಭರೀ ತುರ್ಫರೀತೂ' 
                ಮೊದಲಾದವು ಇಂಥವು. ಇವುಗಳಿಗೆ ಅರ್ಥವೇ ಇಲ್ಲವೆಂದ ಮೇಲೆ ಯಾವುದನ್ನು ತಾನೆ ಇವು 
                 ಅನುಭವಕ್ಕೊಳಪಡಿಸುವುವು ?
            ಇ) ಕೆಲವು ಮಂತ್ರಗಳಿಗೆ ಸಮೀಚೀನವಾದ ಅರ್ಥವಿಲ್ಲ ; ಕೆಲವಕ್ಕೆ ವಿರುದ್ಧಾರ್ಥವೇ ಉಂಟಾಗುತ್ತದೆ. ಮತ್ತೆ ಕೆಲವು
                 ಮಂತ್ರಗಳ ಅರ್ಥ ಅನುಪಪನ್ನವಾಗುತ್ತದೆ; ಕೆಲವು ಮಂತ್ರಗಳಂತೂ ಸರ್ವಜನವಿಧಿತವಾದ  ಸಾಮಾನ್ಯವಾದ 
                ಅರ್ಥಗಳನ್ನೇ ಹೇಳುತ್ತವೆಯೇ ವಿನಾ ಅಪೂರ್ವವಾದ ಅರ್ಥವನ್ನು ಹೇಳುವುದೇ ಇಲ್ಲ.  ಈ ಎಲ್ಲಾ ಕಾರಣಗಳಿಂದ
                 ಮಂತ್ರಭಾಗಗಳು ಅಪ್ರಮಾಣ ; ಮಂತ್ರಗಳು ಹೇಗೋ ಹಾಗೆ ಬ್ರಾಹ್ಮಣಭಾಗಗಳೂ ಪ್ರಮಾಣವಲ್ಲ. ಬ್ರಾಹ್ಮಣ
                 ಭಾಗಗಳು ಎರಡು ಬಗೆ ವಿಧಿ ಮತ್ತು ಅರ್ಥವಾದ ಎಂಬುದಾಗಿ ಇವೆರಡೂ ಅಪ್ರಮಾಣವೇ.
                 (ಕರ್ಮಚೋದನಾ ಬ್ರಾಹ್ಮಣಾನಿ, ಬ್ರಾಹ್ಮಣಶೇಷೋ ಅರ್ಥವಾದ - ಆಪಸ್ತಂಭ ಪರಿಭಾಷಾ 34-35)
                 ವಿಧಿಗಳು ಅಪ್ರವೃತ್ತಪ್ರವರ್ತನ ಮತ್ತು ಅಜ್ಞಾತಾರ್ಥಜ್ಞಾಪನ ಎಂದು ಎರಡು ಬಗೆ. ಕಾಡಿನಲ್ಲಿ ಬೆಳೆದ 
                 ಎಳ್ಳಿನಿದಾಗಲಿ ಗೋಧಿಯ ಹೊಟ್ಟಿನಿಂದಾಗಲೀ ಹೋಮ ಮಾಡಬಹುದೆಂದು ವಿಧಿಸುವ ವಿಧಿ ಬಂದಿದೆ.
                                   ( 'ಜರ್ತಿಲಯವಾಗ್ವಾ ಜುಹುಯಾತ್ ಗವವೀಧುಕಯವಾಗ್ವಾ')
                ಈ ವಿಧಿ ಸರಿಯಲ್ಲ.ಏಕೆಂದರೆ ಇದು ಪ್ರವೃತ್ತಿಗೆ ಯೋಗ್ಯವಲ್ಲದ ದ್ರವ್ಯವನ್ನು ವಿಧಿಸಿದೆ.  'ಅನಾಹುತಿರ್ವೈ 
                ಜರ್ತಿಲಾಶ್ಚ ಗವೀಧುಕಾಶ್ಚ' ಎಂದು ಅದೇ ವೇದ ಅರಣ್ಯತಿಲಗಳ ಮತ್ತು ಅರಣ್ಯಗೋಧೂಮಗಳ ಹೋಮವವನ್ನು
                ನಿಷೇಧಿಸುತ್ತದೆ. ಇದು ಮೊದಲು ಹೇಳಿದ ವಿಧಿಯನ್ನು ಬಾಧಿಸುತ್ತದೆ. ಇದರಂತೆಯೇ ಅಜ್ಞಾತಜ್ಞಾಪನರೂಪವಾದ
                ವಿಧಿಗಳೂ ಪ್ರಮಾಣವಲ್ಲ. ಒಂದು ಕಡೆ 'ಸವೇದಮಗ್ರ ಆಸೀತ್' ಎಂದೂ ಮತ್ತೊಂದು ಕಡೆ 'ಅಸದ್ವಾ ಇದಮಗ್ರ
                ಆಸೀತ್'' ಎಂದೂ ಬಂದಿದೆ. ಇವುಗಳೆರಡಕ್ಕೂ ವಿರೋಧ ಅಪರಿಹಾರ್ಯ, ವಿಧಿವಾಕ್ಯಗಳು ಹೇಗೆ ಅಪ್ರಮಾಣವೋ
               ಅರ್ಥವಾದ ಭಾಗಗಳೂ ಹಾಗೆಯೇ ಅಪ್ರಮಾಣ. ಅನೇಕ ಅರ್ಥವಾದದ ವಾಕ್ಯಗಳಿಗೆ ವಿವಕ್ಷಿತವಾದ ಅರ್ಥವೇ ಇಲ್ಲ.
               'ಸೋsರೋದೀತ್ ಯದರೋದೀತ್ ತದ್ರುದ್ರಸ್ಯ ರುದ್ರತ್ವಂ'  'ಸ ಆತ್ಮನೋ ವಪಾಮುದಖಿದತ್' ಮೊದಲಾದುವು 
               ಇದಕ್ಕೆ ನಿದರ್ಶನ ಮತ್ತೆ ಕೆಲವು ಅರ್ಥವಾದವಾಕ್ಯಗಳು ಶಾಸ್ತ್ರವಿರೋಧ ಮತ್ತು ದೃಷ್ಟವಿರೋಧವಾಗಳಾಗಿವೆ.
               'ನ ಚೈತದ್ವಿದ್ಮೋ ವಯಂ ಬ್ರಾಹ್ಮಣಾ ವಾಸ್ಮೋ ಬ್ರಾಹ್ಮಣಾ ವಾ' ಎಂಬ ವಾಕ್ಯ ಇಂಥದು. ಆದುದರಿಂದ 
                ಅರ್ಥವಾದ ರೂಪವಾದ ಬ್ರಾಹ್ಮಣ ಭಾಗಗಳೂ ಅಪ್ರಮಾಣವೇ ಸರಿ.

               ಈ ಆಕ್ಷೇಪಗಳಿಗೆ ಜೈಮಿನಿಗಳು ಸಮಾಧಾನವನ್ನು ಹೇಳಿದ್ದಾರೆ. (ಜೈ.ಸೂ 1-2-31 ರಿಂದ 1-2-53) ಮಂತ್ರ ಭಾಗಗಳೂ ಅನರ್ಥಕ, ವಿರುದ್ಧಾರ್ಥಕ, ಅನುಪಪನ್ನಾರ್ಥಕ ಎಂದು ಹೇಳುವ ಆಕ್ಷೇಪ ಸಲ್ಲದು. 'ಜರ್ಭರೀ ತುರ್ಪರೀತೂ' ಮುಂತಾದವಕ್ಕೆ ಯಾಸ್ಕರು ಅರ್ಥನಿರೂಪಣೆ ಮಾಡಿದ್ದಾರೆ. ಆಚಾರ್ಯರುಗಳ ಮೂಲಕ ಜ್ಞಾನಸಾಕ್ಷಾತ್ಕಾರ ಪಡೆದ ಬಹುಶ್ರುತರು ಮಂತ್ರಾರ್ಥ ವಿಜ್ಞಾನಶಾಲಿಗಳಾಗಿ ಎಲ್ಲ ಅರ್ಥಗಳನ್ನೂ ತಿಳಿಯಬಲ್ಲರು. ಆದುದರಿಂದ ಮಂತ್ರಭಾಗದ ಪ್ರಾಮಾಣ್ಯವನ್ನು ಅಲ್ಲಗಳೆಯಲಾಗುವುದಿಲ್ಲ.
     (ಯಾಸ್ಕರೂ ಮಂತ್ರಗಳ ಅರ್ಥವತ್ತ್ವವನ್ನು ಸ್ಥಾಪಿಸಿದ್ದಾರೆ- ನಿರುಕ್ತ 1-16-1 ರಿಂದ 1-016-10)

                                                                                ಮುಂದುವರೆಯುವುದು.......................