Pages

Tuesday, February 8, 2011

ಒಂದು ಪುಟ್ಟ ಅನುಭವ

 ವೇದಸುಧೆಯ ಅಭಿಮಾನಿಗಳಲ್ಲಿ ನನ್ನ ಒಂದು ಪುಟ್ಟ ಅನುಭವವನ್ನು ಹಂಚಿಕೊಳ್ಳಬೇಕೆನಿಸುತ್ತಿದೆ. ವೇದಾಧ್ಯಾಯೀ ಸುಧಾಕರಶರ್ಮರ ಪರಿಚಯವು ನನಗೆ ಕಳೆದ ಮೂರು ವರ್ಷಗಳಿಂದೀಚೆಗೆ, ಅಷ್ಟೆ. ಅವರ ಒಡನಾಟ, ಮಾತುಕತೆ , ವೇದಮಂತ್ರಗಳಿಗೆ ಮನ ಮುಟ್ಟುವಂತೆ ಕೊಡುತ್ತಿದ್ದ ವಿವರಣೆ, ಎಲ್ಲಕ್ಕಿಂತ ಹೆಚ್ಚಾಗಿ "ವೇದ ಎಲ್ಲರಿಗಾಗಿ" ಎಂಬ ಅವರ ಸ್ಪಷ್ಟ ನಿಲುವು, ನನ್ನನ್ನು ಹೆಚ್ಚು ಹೆಚ್ಚು ಅವರ ಸಂಪರ್ಕಕ್ಕೆ ಬರುವಂತೆ ಮಾಡಿತು. ಆದರೆ ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿರುವ ಆಚರಣೆಗಳ ಬಗ್ಗೆ ಅವರ ನಿಲುವು ನನಗೆ ಬಹಳ ಅಸಮಾಧಾನಕ್ಕೆ ಕಾರಣ ವಾಗುತ್ತಿತ್ತು. ನಮ್ಮ ಋಷಿಮುನಿಗಳು ಹಾಕಿಕೊಟ್ಟ ಮಾರ್ಗದಲ್ಲಿ ತಾನೇ ನಾವು ನಡೆಯುತ್ತಿರುವುದು, ಆದರೆ ಹಲವು ಆಚರಣೆಗಳನ್ನು ಶರ್ಮರು ಒಪ್ಪುವುದಿಲ್ಲವಲ್ಲ! ದೇವರ ಪೂಜೆಯ ವಿಚಾರದಲ್ಲಿಯೂ ನಮ್ಮ ನಂಬಿಕೆ ಯನ್ನು ಕೆಡಸಿ ಬಿಡುವರಲ್ಲಾ! ಹೀಗೆ ಆಲೋಚಿಸುತ್ತಾ ಅವರು ಕಂಡಾಗಲೆಲ್ಲಾ ವಿಪರೀತ ಚರ್ಚೆ ಮಾಡಲಾರಂಭಿಸಿದೆ. ಎಲ್ಲಕ್ಕೂ ಅವರ ಬಳಿ ನನ್ನ ಸಂದೇಹಗಳಿಗೆ ಸಮಾಧಾನಕೊಡುವ ಉತ್ತರ ವಿದ್ದರೂ  ಈ ವರಗೆ ನಾನು ಆಚರಿಸಿಕೊಂಡು ಬಂದಿದ್ದ ಹಲವಾರು ಆಚರಣೆಗಳನ್ನು ಸಮರ್ಥಿಸಿ ಅವರೊಡನೆ ಜಗಳದ ರೀತಿಯಲ್ಲೇ ಮೊ೦ಡುವಾದ ಮಾಡುತ್ತಿದ್ದೆ.ಆದರೆ ಅವರಾದರೋ ಸತ್ಯವನ್ನು ಬಿಟ್ಟು ಒಂದಿಂಚೂ ಆಚೀಚೆ ಕದಲದಾಗ ಅವರ ಮಾತಿನಲ್ಲಿ ನಂಬಿಕೆ ಬರುತ್ತಾ ಹೋಯ್ತು. ಆದರೆ ಒಂದು ಸಿಟ್ಟು ಕಾಡುತ್ತಿತ್ತು. ನಾನು ದೇವರ ಪೂಜೆ ಮಾಡುವುದರ ಬಗ್ಗೆಯೂ ನನ್ನ ನಂಬಿಕೆ ಸಡಿಲಿಸಿಬಿಟ್ಟರಲ್ಲಾ! ಎಂದು ಅವರೊಡನೆ ಮತ್ತೆ ಮತ್ತೆ ಕಾದಾಡಿದ್ದಾಯ್ತು.  ದೇವರ ಪೂಜೆಯಲ್ಲಿದ್ದ ನನ್ನ ನಂಬಿಕೆಯನ್ನೂ ನೀವು ಕೆಡಸಿ ಬಿಟ್ಟಿರಿ, ನನಗೆ ಪರ್ಯಾಯ ಮಾರ್ಗ ತೋರಿಸಲೂ ಇಲ್ಲವೆಂದು ಸಿಟ್ಟಾದೆ. ಆದರೆ ಶರ್ಮರು ಒಂದು ರಾತ್ರಿ ನಮ್ಮ ಮನೆಯಲ್ಲಿ ಮಲಗ ಬೇಕಾಯ್ತು. ಬೆಳಿಗ್ಗೆ ನಾನು ಆರು ಗಂಟೆಗೆ ಎದ್ದರೆ ಶರ್ಮರು ಆಗಲೇ ಸ್ನಾನ ಮುಗಿಸಿ ಸಂಧ್ಯೋಪಾಸನೆಯಲ್ಲಿ ನಿರತರಾಗಿ ಕಣ್ಮುಚ್ಚಿ ಕುಳಿತಿದ್ದಾರೆ. ಅಂದು ಅವರೆದುರು ನಾನು ಅರ್ಧಗಂಟೆ ಕುಳಿತೆ. ಅವರು ನನ್ನನ್ನುಗಮನಿಸಿರಲಿಲ್ಲ.ಅಂದು ನನಗೆ ಖಾತರಿಯಾಯ್ತು. ಶರ್ಮರು ನನಗೆ  ಒಂದು ಪರ್ಯಾಯ ಮಾರ್ಗವನ್ನು ಕೊಡುತ್ತಾರೆಂಬ ನಂಬಿಕೆ ಬಂತು.ಕಳೆದ ಎರಡುವಾರಗಳ ಹಿಂದೆ ಮತ್ತೊಂದು ಅವಕಾಶವು ದೊರೆಯಿತು. ಹಾಸನಜಿಲ್ಲೆಯ ದೊಡ್ದಮಗ್ಗೆ ಎಂಬ ಹಳ್ಳಿಯಲ್ಲಿ ನಡೆದ ವೇದೋಕ್ತ ಜೀವನ ಪಥ ಕಾರ್ಯಗಾರ. ಅದರಲ್ಲಿ ನಡೆದ ಅಗ್ನಿಹೋತ್ರ. ಅದರಹಿಂದಿನ ರಾತ್ರಿ ಮಿತ್ರರೊಬ್ಬರಿಗೆ ಅನಾರೊಗ್ಯದ ಪರಿಣಾಮವಾಗಿ ಇಡೀರಾತ್ರಿ ನಿದ್ರೆ ಇಲ್ಲದೆ ನಾನೂ ಕೂಡ ಬಳಲಿದ್ದೆ. ವಿಪರೀತವಾದ ತಲೆನೋವಿತ್ತು. ಅಂದು ಅಗ್ನಿಹೋತ್ರಕ್ಕೆ ನನ್ನನ್ನೂ ಕುಳಿತುಕೊಳ್ಳಲು ಶರ್ಮರು ಹೇಳಿದರು. ಅಗ್ನಿಹೋತ್ರ ಮುಗಿಯುವುದರೊಳಗೆ ಪ್ರತಿಶತ ೯೦ ಭಾಗ ತಲೆನೋವು ಮಾಯವಾಗಿತ್ತು. ಮನಸ್ಸೂ ಕೂಡ ಮುದಗೊಂಡಿತ್ತು. ಅಗ್ನಿಹೋತ್ರದ ಸರಳ ಆಚರಣೆ ಬಗ್ಗೆ  ಮತ್ತೊಮ್ಮೆ ಬರೆಯುವೆ. ಆಗ ಅದರ ವೀಡಿಯೋ ನಿಮಗಾಗಿ.

ಲೇಖನವನ್ನು ಓದಲು ಸಮಸ್ಯೆ ಇದೆಯೇ?

ಶ್ರೀ ಕವಿ ಸುರೇಶ್  "ವಿನಾ ದೈನ್ಯೇನ ಜೀವನಂ......." ಲೇಖನವನ್ನು ನಿನ್ನೆ ಪ್ರಕಟಿಸಿದ್ದಾರೆ. ನನ್ನಲ್ಲಿ ನುಡಿ ಮತ್ತು ಬರಹ ಎರಡೂ ಅನುಕೂಲಗಳಿರುವುದರಿಂದ ನಾನು ಈ ಲೇಖನವನ್ನು ಓದಲು ಸಾಧ್ಯವಾಯ್ತು. ನನಗೆ ಯಾವ ತಪ್ಪೂ ಕಾಣಲಿಲ್ಲ. ಆದರೆ ಮಿತ್ರರಾದ ಶ್ರೀ ಜಗದೀಶ್ ಇವರು ಲೇಖನವನ್ನು ಓದಲು ಸಾಧ್ಯವಾಗಿಲ್ಲ. ಕಾರಣ ಬಹುಶ:  ಸುರೇಶ್ ಅವರು ನುಡಿಯಲ್ಲಿ ಬರೆದಿದ್ದಿರಬಹುದು. ಜಗದೀಶ್ ರವರು ನನಗೆ ತಿಳಿಸಿದಮೇಲೆ  ಅದೇ ಬರಹವನ್ನು ಯೂನಿಕೋಡ್ ಗೆ ಕನ್ವರ್ಟ್ ಮಾಡಿ ಹಾಕಿರುವೆ. ಈಗ ಓದಲು ಸಾಧ್ಯವಾಗಬಹುದು. ಈ ರೀತಿಯ ಸಮಸ್ಯೆಯಾದಾಗ ಕೂಡಲೇ ವೇದಸುಧೆಗೆ ಒಂದು ಮೇಲ್ ಕಳಿಸಿದರೆ ನನ್ನ ಗಮನಕ್ಕೆ ಬಂದಕೂಡಲೇ ಸರಿಪಡಿಸುವೆ. ವೇದಸುಧೆಯ ಅಭಿಮಾನಿಗಳು ಸಮಸ್ಯೆಗಳೆದುರಾದರೆ ದಯಮಾಡಿ ವೇದಸುಧೆಯ ಗಮನಕ್ಕೆ ತನ್ನಿ.

ವೇದಸುಧೆಯನ್ನು ವಿಶ್ವದಲ್ಲಿ ಎಲ್ಲೆಲ್ಲಿ ನೋಡುತ್ತಾರೆ?

ಅಂತರ್ಜಾಲವನ್ನು ಜಾಲಾಡುತ್ತಾ ಹೋದಂತೆ ಅನೇಕ ವಿಸ್ಮಯಗಳು ಲಭ್ಯವಾಗುತ್ತವೆ. ಇಂದು ವೇದಸುಧೆಯ ಆಳವನ್ನು ಜಾಲಾಡಿದಾಗ ಅಂತರ್ಜಾಲ ಮಾಹಿತಿಗಳು ಲಭ್ಯವಾಗಿದ್ದು ಹೀಗೆ. ವೇದಸುಧೆಯನ್ನು ವಿಶ್ವದಲ್ಲಿ ಎಲ್ಲೆಲ್ಲಿ ನೋಡುತ್ತಾರೆ?ನೋಡಿ. ಇಲ್ಲೊಂದು ಮಾಹಿತಿ ನಿಮಗಾಗಿ

ರಾಷ್ಟ್ರಗಳ ಪ್ರಕಾರವಾಗಿ ಪುಟದ ವೀಕ್ಷಣೆಗಳು

1. ಭಾರತ  : 16588
2. ಅಮೇರಿಕಾ ಸಂಯುಕ್ತ ಸಂಸ್ಥಾನ: 1301
3. ಸಂಯುಕ್ತ ಅರಬ್ ಎಮಿರೇಟಸ್: 351
4. ಕೆನಡಾ: 131
5. ಸಿಂಗಪುರ: 115
6. ದಕ್ಷಿಣ ಕೋರಿಯಾ:95
7. ರಶಿಯಾ: 93
8. ಬ್ರಿಟನ್/ಇಂಗ್ಲೆಂಡ್: 62   
9.ಮಲೇಶಿಯಾ: 53
10. ನೆದರ್‌ಲ್ಯಾಂಡ್ಸ್: 43
ವಿಶ್ವದ ಹಲವು ದೇಶಗಳಲ್ಲಿ ವೇದಸುಧೆಯನ್ನು ಓದುವ ಕನ್ನಡಿಗರಿದ್ದಾರೆಂದರೆ, ನಮ್ಮ ಜವಾಬ್ದಾರಿ ಹೆಚ್ಚಾಯಿ ತಲ್ಲವೇ?