Pages

Saturday, February 18, 2012

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೬

     ವೇದಗಳು, ಪ್ರತಿಯೊಂದು ವರ್ಣದ ಕರ್ತವ್ಯಗಳನ್ನೂ ಸ್ಫುಟವಾಗಿ ವರ್ಣಿಸುತ್ತವೆ.


ಬ್ರಾಹ್ಮಣಾಸಃ ಸೋಮಿನೋ ವಾಚಮಕೃತ ಬ್ರಹ್ಮ ಕೃಣ್ವಂತಃ ಪರಿವತ್ಸರೀಣಮ್ |
ಅಧ್ವರ್ಯವೋ ಘರ್ಮಿಣಃ ಸಿಷ್ವಿದಾನಾಃ ಆವಿರ್ಭವಂತಿ ಗುಹ್ಯಾ ನ ಕೇ ಚಿತ್ || (ಋಕ್.೭.೧೦೩.೮.)


     [ಸೀಮಿನಃ] ಬ್ರಹ್ಮಾನಂದದ ಸವಿಯನ್ನು ಕಾಣುವವರೂ, [ಅದ್ವರ್ಯವಃ] ಅಹಿಂಸಕರೂ, [ಘರ್ಮಿಣಃ] ತಪಸ್ವಿಗಳೂ [ಸಿಷ್ವಿದಾನಾಃ] ಪರಿಶ್ರಮದಿಂದ ಬೆವರುವವರೂ, [ಬ್ರಾಹ್ಮಣಾಸಃ] ಬ್ರಾಹ್ಮಣರು. ಅವರು, [ಪರಿವತ್ಸರೀಣಂ ಬ್ರಹ್ಮಂ ಕೃಣ್ವಂತಃ]  ಸಮಸ್ತ ವಿಶ್ವದಲ್ಲಿಯೂ ವೇದಜ್ಞಾನವನ್ನು ಪಸರಿಸುತ್ತಾ, [ಕೇಚಿತ್ ಗುಹ್ಯಾಃ ನ] ಕೆಲವರು ಗುಪ್ತವಾಗಿದ್ದವರಂತೆ, [ಆವಿರ್ಭವಂತಿ] ಬೆಳಕಿಗೆ ಬರುತ್ತಾರೆ. 
     ಭಗವದುಪಾಸನೆಯಿಂದ ಆನಂದಪ್ರಾಪ್ತಿ, ಅಹಿಂಸಾತತ್ವ, ತಪಸ್ಸಿನ -  ಆಧ್ಯಾತ್ಮಿಕ ಸಾಧನೆಗಳ - ಅನುಷ್ಠಾನ ಮತ್ತು ಕಷ್ಟ ಸಹಿಷ್ಣುತೆ - ಇವು ಬ್ರಾಹ್ಮಣರ ಲಕ್ಷಣಗಳು. ಅವರು ಸದಾ ಹರಟುತ್ತಾ ತಿರುಗುವುದಿಲ್ಲ. ಗುಪ್ತ ಸಾಧನೆಗೂ ಗಮನವಿತ್ತು, ಆತ್ಮಶಕ್ತಿ ಬೆಲೆಸಿಕೊಂಡು ಸಂಪೂರ್ಣ ವಿಶ್ವದಲ್ಲೇ ಬ್ರಹ್ಮಜ್ಞಾನವನ್ನು ಪ್ರಸರಿಸುತ್ತಾರೆ. 


ಧೃತವ್ರತಾಃ ಕ್ಷತ್ರಿಯಾ ಯಜ್ಞನಿಷ್ಕೃತೋ ಬೃಹದ್ದಿವಾ ಅಧ್ವರಾಣಾಮಭಶ್ರಿಯಃ |
ಅಗ್ನಿಹೋತಾರ ಋತಸಾಪೋ ಅದ್ರುಹೋSಪೋ ಅಸೃಜನ್ನನು ವೃತ್ರತೂರ್ಯೇ || (ಋಕ್.೧೦.೬೬.೮.)   


     [ಧೃತವ್ರತಾಃ] ಸತ್ಯಾಹಿಂಸಾದಿ ವ್ರತಗಳನ್ನು ಧರಿಸುವವರೂ, [ಯಜ್ಞನಿಷ್ಕೃತಃ] ಶುಭಕರ್ಮಗಳಿಂದ ಪವಿತ್ರರಾದವರೂ, [ಬೃಹದ್ದಿವಾಃ] ಮಹಾತೇಜಸ್ವಿಗಳೂ, [ಅಧ್ವರಾನಾಂ ಅಭಿಪ್ರಿಯಃ] ಹಿಂಸಾರಹಿತ ಕರ್ಮಗಳ ಸೌಂದರ್ಯವರ್ಧಕರೂ, [ಅಗ್ನಿಹೋತಾರಃ] ಅಗ್ನಿಹೋತ್ರ ಮಾಡುವವರೂ, [ಋತಸಾಪಃ] ಧರ್ಮವನ್ನು ಕ್ರಿಯಾತ್ಮಕವಾಗಿ ಸ್ತುತಿಸುವವರೂ, [ಅದ್ರುಹಃ] ದ್ರೋಹ ಮಾಡದವರೂ, [ಕ್ಷತ್ರಿಯಾಃ] ಕ್ಷತ್ರಿಯರಾಗಿರುತ್ತಾರೆ. ಅವರು, [ವೃತ್ರತೂರ್ಯೇ] ಮೇಲೆ ಆವರಿಸಿ ಬರುವ ಶತ್ರುಗಳನ್ನು ಭಿನ್ನ ಭಿನ್ನ ಮಾಡುವ ಸಂಗ್ರಾಮದಲ್ಲಿ, [ಅಪಃ ಅಸೃಜನ್] ಸಾಹಸಕರ್ಮಗಳನ್ನು ಮಾಡುತ್ತಾರೆ, ಪ್ರಜಾಪಾಲನೆ ಮಾಡುತ್ತಾರೆ. ಕ್ಷತ್ರಿಯರ ಲಕ್ಷಣ ಅತಿ ಸ್ಫುಟವಾಗಿ ಹೇಳಲ್ಪಟ್ಟಿದೆ. 


ಇಂದ್ರಮಹಂ ವಣಿಜಂ ಚೋದಯಾಮಿ ಸ ನ ಐತು ಪುರಏತಾ ಸೋ ಅಸ್ತು |
ನುದನ್ನರಾತಿಂ ಪರಿಪಂಥಿನಂ ಮೃಗಂ ಸ ಈಶಾನೋ ಧನದಾ ಅಸ್ತು ಮಹ್ಯಮ್ || (ಅಥರ್ವ.೩.೧೫.೧.) 


     [ಅಹಮ್] ನಾನು, [ಇಂದ್ರಂ ವಣಿಜಮ್] ಐಶ್ವರ್ಯಶಾಲಿಯಾದ ವೈಶ್ಯನನ್ನು, [ಚೋದಯಾಮಿ] ಸತ್ಕರ್ಮಕ್ಕೆ ಪ್ರೇರಿಸುತ್ತೇನೆ. [ಸಃ ನಃ ಆ ಏತು] ಅವನು ನಮಗೆ ಪ್ರಾಪ್ತನಾಗಲಿ. [ನಃ ಪುರಃ ಏತಾ ಅಸ್ತು] ನಮ್ಮೆಲ್ಲರನ್ನೂ ಆರ್ಥಿಕದೃಷ್ಟಿಯಿಂದ ಸಮೃದ್ಧಿಯೆಡೆಗೆ ನಡೆಯಿಸಲಿ. [ಅರಾತಿಮ್] ಸ್ವಾರ್ಥಭಾವನೆಯನ್ನೂ, [ಪರಿಪಂಥಿನಂ ಮೃಗಮ್] ದಾರಿಗೆ ಅಡ್ಡ ಬರುವ ಚೌರ್ಯವೃತ್ತಿಯನ್ನೂ, [ನುದನ್] ದೂರ ತಳ್ಳುತ್ತಾ, [ನಃ ಈಶಾನಃ] ಆ ಸಂಪದ್ವಂತನು, [ಮಹ್ಯಮ್] ನನಗೆ [ಧನದಾ ಅಸ್ತು] ಧನದಾನ ಮಾಡುವವನಾಗಲಿ.
     ವೇದ, ಈ ಮಾತುಗಳನ್ನು ಆಚಾರ್ಯನ ಬಾಯಿಯಿಂದ ಹೊರಡಿಸಿದೆ. ಸಂಪದ್ವರ್ಧನ, ಸ್ವಾರ್ಥತ್ಯಾಗ, ಕಳ್ಳತನದ ಬಹಿಷ್ಕಾರ, ಉದಾರ ದಾನಭಾವನೆ - ಇವು ವೈಶ್ಯನ ಲಕ್ಷಣಗಳು.


ತೃದಿಲಾ ಅತೃದಿಲಾಸೋ ಅದ್ರಯೋಶ್ರಮಣಾ ಅಶೃಥಿತಾ ಅಮೃತ್ಯವಃ |
ಅನಾತುರಾ ಅಜರಾಃ ಸ್ಥಾಮವಿಷ್ಣವಃ ಸುಪೀವಸೋ ಅತೃಷಿತಾ ಅತೃಷ್ಣಜಃ || (ಋಕ್.೧೦.೯೪.೧೧.)


     [ತೃದಿಲಾಃ] ಮೋಹಬಂಧರಹಿತರೂ [ಅತೃದಿಲಾಸಃ] ಆದರೂ ಜಗತ್ತಿನಿಂದ ದೂರ ಸರಿಯದವರೂ, [ಆದ್ರಯಃ] ಆದರಣೀಯರೂ, [ಆಶ್ರಮಣಾಃ] ಶ್ರಮಕ್ಕೆ ಹಿಂಜರಿಯದವರೂ [ಅಶೃಥಿತಾಃ] ಸಡಿಲವಾಗದವರೂ, [ಅಮೃತ್ಯವಃ] ಸಾವಿಗೆ ಮಣಿಯದವರೂ [ಅನಾತುರಾಃ] ರೋಗರಹಿತರೂ [ಅಜರಾಃ] ಮುಪ್ಪಿಗೆ ಸೋಲದವರೂ, [ಅಮವಿಷ್ಣವಃ] ರಕ್ಷಣೆಯನ್ನು ಅಪೇಕ್ಷಿಸುವವರೂ, [ಸುಪೀವಸಃ] ಧೃಢಕಾಯರೂ, [ಅತೃಷಿತಾಃ] ಲೋಭರಹಿತರೂ, [ಅತೃಷ್ಣಜಃ] ತಮ್ಮ ನಿರ್ಲೋಭಿತ್ವಕ್ಕೆ ಪ್ರಸಿದ್ಧರೂ ಆದವರು, [ಸ್ಥಃ] ಪರಿಶ್ರಮಿಗಳೂ - ಶೂದ್ರರೂ ಆಗಿರುತ್ತಾರೆ.
     ಸಂಪೂರ್ಣ ಮಂತ್ರದಲ್ಲಿ ಎಲ್ಲಿಯೂ ಅಪಮಾನಕರವಾದ ಶಬ್ದವಿಲ್ಲ. ಶೂದ್ರರು ತುಚ್ಛರು, ಕೀಳು ಎಂಬ ಭಾವನೆ ಬರುವುದಿಲ್ಲ. ಆದರೆ, ಆದ್ರಯಃ ಎಂದರೆ ಆದರಣೀಯರು ಎಂಬ ಉತ್ಕೃಷ್ಟ ಅಭಿವ್ಯಕ್ತಿ ಕೊಡಲ್ಪಟ್ಟಿದೆ. 
     ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಲ್ಲರಿಗೂ ಮಾನವತ್ವ, ಅದೇ ಕಾರಣದಿಂದ ಸಮ್ಮಾನ ಸಾಮಾನ್ಯವಾಗಿದೆ. ವರ್ಣ, ವ್ಯಕ್ತಿ, ವ್ಯಕ್ತಿಯ ಶಕ್ತಿಯ ಮಾತು, ಜಾತಿ, ಕುಲ ಯಾವುದಕ್ಕೂ ಗೌರವವಿಲ್ಲ. ಒಂದೇ ಮನೆಯಲ್ಲಿ ಲಾಯರುಗಳು, ಡಾಕ್ಟರುಗಳು, ಸೈನ್ಯಾಧಿಕಾರಿಗಳು, ಕಾರ್ಖಾನೆಯಲ್ಲಿ ದುಡಿಯುವವರು, ಅಧ್ಯಾಪಕರುಗಳು ಇರಲು ಸಾಧ್ಯವಿರುವಂತೆ. ವರ್ಣಗಳನ್ನು ಹಿಡಿದು ಉಚ್ಛ-ನೀಚ ಭಾವನೆಗಳನ್ನು ಪ್ರಸರಿಸುವುದು ಮಾನವದ್ರೋಹ. ಕರ್ತವ್ಯಕ್ಷೇತ್ರಗಳು ಬೇರೆ ಬೇರೆ ಇರಬಹುದು, ಸೇವಾಪ್ರಣಾಳಿಯೂ ಬೇರೆ ಇರಬಹುದು, ಆದರೆ ಸರ್ವ ವರ್ಣೀಯರೂ ಮಾನವರೇ ಎಂಬ ಮೂಲಭೂತ ಸಿದ್ಧಾಂತವನ್ನು ನಾವಾರೂ ಅರೆಕ್ಷಣಕ್ಕೂ ಮರೆಯುವಂತಿಲ್ಲ.
***************
ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು:5ಕ್ಕೆ ಲಿಂಕ್: http://vedajeevana.blogspot.in/2012/02/blog-post.html

ಸತ್ಯದ ವಿಚಾರಗಳು ಹರಡಲಿ

ಮನವಿ

ಸಾಮಾನ್ಯವಾಗಿ ತುಂಬಾ ಚರ್ಚೆ ಯಾಗುವ ವಿಷಯವೇ "ದೇವರು" 
ವೇದಸುಧೆಯ ಓದುಗರು ಸಾಮಾನ್ಯವಾಗಿ ಎಲ್ಲರೂ ದೇವರ ಅಸ್ಥಿತ್ವವನ್ನು ನಂಬುವವರೇ ಆಗಿದ್ದಾರೆ.ಆದರೂ ಕೆಲವರು ರೂಢಿಯಲ್ಲಿ ಬಂದಿರುವ ವಿಚಾರಕ್ಕೆ ಹೆಚ್ಚು ಮಹತ್ವ ಕೊಟ್ಟರೆ ಕೆಲವರು ವೇದದ ಆಧಾರದ ಮೇಲೆ ದೇವರ ಬಗ್ಗೆ ವಿವರಿಸುತ್ತಾರೆ. ಎಲ್ಲರೂ ವೇದಸುಧೆಯಲ್ಲಿದ್ದಾರೆ. ದೇವರ ಅಸ್ತಿತ್ವವನ್ನು ನಂಬದವರಿಗೂ ವೇದಸುಧೆಯ ಸ್ವಾಗತವಿದೆ. ಒಂದೆ ಒಂದು ಪ್ರಾರ್ಥನೆ ಎಂದರೆ ವಿಷಯವನ್ನು ಹೆಚ್ಚು ಆಳವಾಗಿ ತಿಳಿದುಕೊಳ್ಳುವುದಕ್ಕಾಗಿ ಮಾತ್ರ  ಇಲ್ಲಿ  ಚರ್ಚೆ ಮಾಡುವುದು ಉತ್ತಮ. ನನ್ನದೇ ವಾದ ಗೆಲ್ಲಬೇಕೆಂಬ ನಿಲುವು  ಒಳ್ಳೆಯ ಚರ್ಚೆಗೆ ಆಸ್ಪದ ಕೊಡುವುದಿಲ್ಲ. ಅಲ್ಲದೆ ಒಂದು ವೇಳೆ ನನ್ನ ವಿಚಾರವನ್ನು ಕೆಲವರು ಒಪ್ಪದಿದ್ದರೂ ಚಿಂತೆಯಿಲ್ಲ. ಯಾವತ್ತೋ ಒಂದುದಿನ ಸತ್ಯ ಎಲ್ಲರಿಗೂ ಅರ್ಥವಾಗುವುದರಲ್ಲಿ ಸಂದೇಹವಿಲ್ಲ. ಒಂದು ಉತ್ತಮ ವಾತಾವರಣದಲ್ಲಿ ಚರ್ಚೆಯನ್ನು ಮುಂದುವರೆಸಿಕೊಂಡು ಹೋಗಬೇಕಾಗಿ ಮನವಿ ಮಾಡುವೆ. ಅಷ್ಟೇ ಅಲ್ಲ, ನಮ್ಮ ಹಲವು ಆಚರಣೆಗಳು ಅರ್ಥ ಕಳೆದುಕೊಂಡಿರುವುದು ಸುಳ್ಳಲ್ಲ.  ಅಂಧಾನುಕರಣೆ ಮಾಡುತ್ತಿರುವ ಆಚರಣೆಗಳ ಬಗ್ಗೆಯೂ ಚರ್ಚೆಯಾಗುವುದು ಉತ್ತಮ. ಒಟ್ಟಿನಲ್ಲಿ  ಒಂದು ಉತ್ತಮ ಜೀವನಕ್ಕಾಗಿ , ಆನಂದದ ಜೀವನಕ್ಕಾಗಿ ಬಿಚ್ಚು ಮನಸ್ಸಿನಿಂದ ಇಲ್ಲಿ ಚರ್ಚಿಸೋಣ. ಯಾರೂ ಕೂಡ  ಚರ್ಚೆಯನ್ನು  ತಮ್ಮ ವೈಯಕ್ತಿಕ ಗೆಲುವು ಅಥವಾ ಸೋಲು ಎಂದು ಭಾವಿಸುವುದು ಬೇಡ. ಸತ್ಯದ ವಿಚಾರಗಳು ಹರಡಲಿ. ನಿಜವ ತಿಳಿದುಕೊಳ್ಳುವ ನಮ್ಮ ಹಂಬಲ ಹೆಚ್ಚಲಿ.
-ಹರಿಹರಪುರಶ್ರೀಧರ್
ಸಂಪಾದಕ 

ಮಂಕು ತಿಮ್ಮನ ಕಗ್ಗ - ರಸಧಾರೆ -3


ಈ ಕೆಳಗಿನದು ಮೂರನೆಯ ಕಗ್ಗ. 

ಇಹುದೋ ಇಲ್ಲವೋ ತಿಳಿಯಗೊಡದೊಂದು ವಸ್ತು ನಿಜ I
ಮಹಿಯಿಂ ಜಗವಾಗಿ ಜೀವವೇಷದಲಿ II
ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ I
ಗಹನ ತತ್ತ್ವಕೆ  ಶರಣೋ - ಮಂಕುತಿಮ್ಮ II
ತಿಳಿಯಗೊಡದೊಂದು=ತಿಳಿಯಗೊಡದ ಒಂದು 
ವಿಹರಿಪುದದೊಳ್ಳಿತೆಂಬುದು = ವಿಹರಿಪುದು ( ವಿಹಾರ ಮಾಡುವುದು) +ಅದು+ಒಳ್ಳಿತು = ಒಳ್ಳೆಯದು +ಎಂಬುದು 
ನಿಸದವಾದೊಡಾ = ನಿಸದವಾದೊಡೆ + ಆ 
ವಿಹಾರಮಾಡುವುದು ಎಂದರೆ, ಎಲ್ಲದರಲ್ಲೂ  ವ್ಯಾಪಕವಾಗಿ ಚೈತನ್ಯ ರೂಪದಲ್ಲಿರುವುದು ಎಂದೂ ಅರ್ಥೈಸಬಹುದು. ನಿಸದವಾದೊಡೆ ಎಂದರೆ ನಿಜವಾದರೆ ಎಂದೇ ಅರ್ಥೈಸಬೇಕು. 

ಮಾನವರಲ್ಲಿ ಇದು ಒಂದು ನಿರಂತರ  ಪ್ರಶ್ನೆ.  ಆ ದೇವರೆಂಬ ವಸ್ತು ಇದೆಯೋ ಇಲ್ಲವೋ ಎಂದು. ಇದೆ ಎಂದರೆ, ಅದಕ್ಕೆ ನಾನಾ ಹೆಸರುಗಳು, ರೂಪಗಳು, ಪೂಜೆಗಳು, ಹಲವು ಪೂಜಾ ವಿಧಾನಗಳು, ಆಚಾರಗಳು, ಸಂಪ್ರದಾಯಗಳು ಆ ದೇವರ ರೂಪ ಮತ್ತು ಕಾರ್ಯವೈಖರಿಗೆ ನಾನಾ ಭಾಷ್ಯಗಳು. ಅನಾದಿ ಕಾಲದಲ್ಲೂ ಆ ದೇವರ ಅಸ್ತಿತ್ವವನ್ನು ಪ್ರಶ್ನಿಸುವ " ಚಾರ್ವಾಕ" ರೆಂಬುವರೂ ಇದ್ದರು. ಇಂದಿಗೂ ಆ ದೇವರೆಂಬ  ವಸ್ತುವನ್ನು ನಂಬದಿರುವರು ಇದ್ದಾರೆ. ಕೆಲವರಿಗೆ ಧೃಢವಾದ ನಂಬಿಕೆ. ಇನ್ನೂ ಕೆಲವರಿಗೆ ಅನುಮಾನ. ಮತ್ತೆ ಕೆಲವರಿಗೆ ಅದು ಆಗಾಗ ಬಂದು ಹೋಗುವ ವಿಚಾರ. ಕೆಲವರಿಗೆ ಸಂಕಟ ಬಂದಾಗ ಮಾತ್ರ ದೇವರ ನೆನಪು,  ಕೆಲವರಿಗೆ ಬರೀ ತೋರಿಕೆಗೆ ಭಕ್ತಿ. ಮತ್ತು  ಕೆಲವರಿಗೆ ಹೊರಗೆ ತೋರದಿದ್ದರೂ ಆಂತರ್ಯದಲ್ಲಿ ಶುಧ್ಧ ಭಕ್ತಿ. 

ಇಲ್ಲಿ ಡಿ.ವಿ.ಜಿ ಯವರೂ ಸಹ " ನಿಸದವಾದೊಡೆ" ಎಂದಿದ್ದಾರೆ.  " ಜಗವ ಸೃಜಿಸಿ, ಗತಿ ಸೂತ್ರವನಾಡಿಸಿ" ಎಂದಿದ್ದಾರೆ ದಾಸರು. ಅಂದರೆ ಜಗತ್ತನ್ನು ಸೃಷ್ಟಿಸಿ, ಜಗತ್ತಿನ ಎಲ್ಲ ಜೀವರಾಶಿಗಳನ್ನೂ ತನ್ನ ಇಷ್ಟದಂತೆ ಪರಮಾತ್ಮ ಆಡಿಸುವನೆಂಬ ಅರ್ಥದಲ್ಲಿದೆ  ದಾಸರ ಉಕ್ತಿ.    ಹಾಗೆ ಇಡೀ ವಿಶ್ವವನ್ನು ಸೃಷ್ಟಿಮಾಡಿ, ಎಲ್ಲ ಜಡ ಮತ್ತು  ಜೀವಿಗಳಲ್ಲೂ ತಾನೇ ತಾನಾಗಿ ವ್ಯಾಪಿಸಿರುವ ಆ ಪರಮಾತ್ಮನೆಂಬುವುದು ಒಳ್ಳೆಯದು ಮತ್ತು ಇರುವುದು ಸತ್ಯವಾದರೆ, ಆ ಗಹನಕ್ಕೆ ಅಂದರೆ ಗೂಢವಾದ, ಊಹೆ, ಅರಿವು ಮತ್ತು ತರ್ಕಕ್ಕೆ ನಿಲುಕದ ಆ ಗುಹ್ಯವಾದ ವಸ್ತುವಿಗೆ ಶರಣಾಗು ಎನ್ನುತ್ತಾರೆ ಡಿ.ವಿ.ಜಿ . ಇಲ್ಲಿ ಸತ್ಯವಾದರೆ ಎಂದಿದ್ದಾರೆ. ಅಂದರೆ ಅದು ಅಸತ್ಯವೂ ಆಗಿರಬಹುದೇ?  ಎಂದರೆ, ಅದು ಹಾಗಲ್ಲ. ನಂಬುವವನ ಮನಸ್ಸಿಗೆ, ಮಾತಿಗೆ ಅದು ಸತ್ಯ ಎಂದು ಗೋಚರಿಸಿದರೆ, ಅದನ್ನು ನಂಬು ಮತ್ತು ಶರಣಾಗು ಎಂದು ಹೇಳಿದ್ದಾರೆ. ನಾನು ನಂಬಲ್ಲ ಎಂಬುವವನೂ ಸಹ " ನಾನು ದೇವರನ್ನು ನಂಬುವುದಿಲ್ಲ " ಎನ್ನುತ್ತಾನೆ. ಅಂದರೆ ಅವನು " " ದೇವರು" ಎನ್ನುವ ವಸ್ತುವೊಂದಿದೆ ನಾನು ಅದನ್ನು ನಂಬುವುದಿಲ್ಲ ಎಂದು ಅರ್ಥವಲ್ಲವೇ?

ಹಾಗಾಗಿ ವಾಚಕರೆ ನಿಮಗೆ ಆ ಪರಮಾತ್ಮ ವಸ್ತುವಿನಲ್ಲಿ ನಂಬಿಕೆ ಇದ್ದರೆ, ಶುಧ್ಧವಾಗಿ ನಂಬಿ, ಶರಣಾಗಿ ಎನ್ನುತ್ತಾರೆ ಡಿ.ವಿ.ಜಿ . 

ಇಂದಿನ ದಿನ ಎಲ್ಲರಿಗೂ ಶುಭವಾಗಲಿ. ನಮಸ್ಕಾರ.
---------------------------------------

ಪ್ರತಿಕ್ರಿಯೆಗಳಿಗೆ ಪೂರಕವಾಗಿ ಈ ಕೆಳಗಿನ ಕೊಂಡಿ ನೀಡಿರುವೆ
-ಶ್ರೀಧರ್

http://www.vedasudhe.com/%e0%b2%86%e0%b2%a1%e0%b2%bf%e0%b2%af%e0%b3%8b/533/