ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಮಲಗುಂದದಲ್ಲಿ ಒಂದು ಹೃದಯಸ್ಪರ್ಷಿ ಕಾರ್ಯಕ್ರಮ ಇದೇ ತಿಂಗಳ ೯ ಮತ್ತು ೧೦ರಂದು ನಡೆಯಿತು.೯ನೆಯ ದಿನಾಂಕದಂದು ಶ್ರೀ ದಕ್ಷಿಣಾಮೂರ್ತಿ ಸಹಿತ ಸೋಮೇಶ್ವರ ವಿಗ್ರಹದ ಪ್ರತಿಷ್ಠಾಪನೆ ಮತ್ತು ವರಸಿದ್ಧಿ ವಿನಾಯಕ ದೇವಸ್ಥಾನ ೨೫ ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಪುನರ್ ಪ್ರತಿಷ್ಠಾಪನಾ ಸಹಿತ ಕುಂಭಾಭಿಷೇಕ ದಿವ್ಯ ಯತಿಗಳ ಸನ್ನಿಧಿಯಲ್ಲಿ ಜರುಗಿತು. ಆರ್ಷ ವಿದ್ಯಾನಿಕೇತನದ ವತಿಯಿಂದ ನಡೆದ ಈ ಕಾರ್ಯಕ್ರಮಗಳ ರೂವಾರಿ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರು. ೧೦ನೆಯ ದಿನಾಂಕದಂದು ಮಲಗುಂದದ ಆಶ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿರುವ ೧೦೧ ವರ್ಷಗಳ ಹಿರಿಯ ಸಾಧಕ ಮಾಮಾಜಿಯವರನ್ನು ಗೌರವಿಸುವ ಸೌಭಾಗ್ಯ ಹಿತೈಷಿಗಳೆಲ್ಲದರಾಗಿತ್ತು. ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರು ಹಾಸನದ ವೇದಭಾರತಿಗೆ ಈ ಸಂದರ್ಭದಲ್ಲಿ ಸಾಮೂಹಿಕ ಅಗ್ನಿಹೋತ್ರ ನಡೆಸಿಕೊಡುವ ಹೊಣೆಗಾರಿಕೆ ವಹಿಸಿದ್ದರು. ಕಳೆದ ಎರಡೂವರೆ ವರ್ಷಗಳಿಂದ ಪ್ರತಿನಿತ್ಯ ಸತ್ಸಂಗದಲ್ಲಿ ಅಗ್ನಿಹೋತ್ರವನ್ನು ಸಾಮೂಹಿಕವಾಗಿ ನಡೆಸಿಕೊಂಡು ಬರುತ್ತಿರುವ ವೇದಭಾರತಿಯ ಕಾರ್ಯವನ್ನು ಸ್ವಾಮೀಜಿಯವರು ಮನಸಾರೆ ಮೆಚ್ಚಿ ಆಶೀರ್ವದಿಸಿದ್ದರು. ಇದೇ ಕಾರಣಕ್ಕಾಗಿ ಮಲಗುಂದದಲ್ಲಿ ಸಾಮೂಹಿಕ ಅಗ್ನಿಹೋತ್ರದ ಮೇಲ್ವಿಚಾರಣೆಯ ಹೊಣೆಯನ್ನು ವೇದಭಾರತಿಗೆ ವಹಿಸಿದ್ದರು.
ಮಲಗುಂದದ ಕಾರ್ಯಕ್ರಮದಲ್ಲಿ ಹಾಸನದಿಂದ ವೇದಭಾರತಿಯ ೬೬ ಕಾರ್ಯಕರ್ತರಲ್ಲದೆ, ಅರಸಿಕೆರೆ, ಹಂಪಾಪುರ, ಮೈಸೂರು, ಬೆಂಗಳೂರುಗಳಿಂದ ಸುಮಾರು ೩೫ ವೇದಭಾರತಿಯ ಹಿತೈಷಿಗಳು ಭಾಗವಹಿಸಿದ್ದು ವಿಶೇಷ. ಕಾರ್ಯಕ್ರಮದ ಸ್ಥಳದಲ್ಲಿ ೨೫೦ ಹೋಮಕಂಡಗಳನ್ನು ಸಿದ್ಧಪಡಿಸಿದ್ದು ಒಂದು ಕುಂಡಕ್ಕೆ ಇಬ್ಬರಂತೆ ೫೦೦ ಜನರು ಸಾಮೂಹಿಕ ಅಗ್ನಿಹೋತ್ರ ಕಾರ್ಯದಲ್ಲಿ ಭಾಗವಹಿಸಿದ್ದರು. ಯಾವುದೇ ಜಾತಿ, ಮತ, ಪಂಥ, ಲಿಂಗ, ವಯಸ್ಸು ಇತ್ಯಾದಿ ತಾರತಮ್ಯಗಳಿಲ್ಲದೆ ಎಲ್ಲರಿಗೂ ಈ ಕಾರ್ಯದಲ್ಲಿ ಭಾಗವಹಿಸಲು ಮುಕ್ತ ಅವಕಾಶ ಮಾಡಿಕೊಡಲಾಗಿತ್ತು. ಬಹುಷಃ ಕರ್ನಾಟಕದಲ್ಲಿ ಈ ಪ್ರಮಾಣದಲ್ಲಿ ಸಾಮೂಹಿಕ ಅಗ್ನಿಹೋತ್ರ ಕಾರ್ಯ ನಡೆದಿರುವುದು ಇದೇ ಪ್ರಥಮವಿರಬೇಕು. ಸಾಮಾಜಿಕ ಏಕತೆಗೆ ಒತ್ತು ಕೊಟ್ಟಿದ್ದೂ ಮಹತ್ವದ ಸಂಗತಿಯೇ ಆಗಿದೆ. ಪ್ರತಿ ಮನೆಯಲ್ಲೂ ಪ್ರತಿಯೊಬ್ಬರೂ ಆಚರಿಸಲು ಅನುಕೂಲವಾಗುವಂತೆ ಮಹರ್ಷಿ ದಯಾನಂದ ಸರಸ್ವತಿಯವರು ರೂಪಿಸಿದ್ದ ಸರಳ ಅಗ್ನಿಹೋತ್ರದ ಮಂತ್ರಗಳು, ಕನ್ನಡದಲ್ಲಿ ಅದರ ಅರ್ಥ ಮತ್ತು ಆಚರಿಸುವ ರೀತಿ ಕುರಿತು ವೇದಭಾರತಿ ವತಿಯಿಂದ ಒಂದು ಕಿರುಹೊತ್ತಿಗೆ ಮುದ್ರಿಸಿ ಭಾಗವಹಿಸಿದ ಎಲ್ಲರಿಗೂ ಉಚಿತವಾಗಿ ಕೊಡಲಾಗಿತ್ತು.
ವೇದಿಕೆಯಲ್ಲಿ ಹಲವಾರು ಯತಿವರೇಣ್ಯರುಗಳು ಉಪಸ್ಥಿತರಿದ್ದು, ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ನಾಂದಿ ಹಾಡಲಾಯಿತು. ಅಗ್ನಿಹೋತ್ರ ಆಚರಿಸುವ ರೀತಿ, ಅನುಸರಿಸಬೇಕಾದ ಕ್ರಮಗಳ ಕುರಿತು ವೇದಭಾರತಿಯ ಸಂಚಾಲಕ ಹರಿಹರಪುರ ಶ್ರೀಧರ್ ಪೂರ್ವಭಾವಿ ಸೂಚನೆ ಮತ್ತು ವಿವರಣೆಗಳನ್ನು ಕೊಡುತ್ತಿದ್ದರು. ಎಲ್ಲರಿಗೂ ಅನುಕರಿಸಲು ಅನುಕೂಲವಾಗುವಂತೆ ವೇದಿಕೆಯಲ್ಲಿ ಬೈರಪ್ಪಾಜಿ, ನಾನು, ಸಣ್ಣಸ್ವಾಮಿ ಶೆಟ್ಟರು ಮತ್ತು ಪಾಂಡುರಂಗ ಅಗ್ನಿಹೋತ್ರ ಮಾಡಿದೆವು. ಭಗಿನಿಯರು ಕಲಾವತಿ, ಶುಭಾ, ಕೋಮಲ, ಪ್ರೇಮಾರವರುಗಳು ಮಂತ್ರೋಚ್ಛಾರಣೆ ಮಾಡುತ್ತಿದ್ದರೆ ಎಲ್ಲರೂ ಪುಸ್ತಕ ನೋಡಿಕೊಂಡು ಧ್ವನಿಗೂಡಿಸುತ್ತಿದ್ದರು. ಅಗ್ನಿಹೋತ್ರದಲ್ಲಿ ಭಾಗವಹಿಸಿದವರ ಶ್ರದ್ಧೆ ಮತ್ತು ಆಸಕ್ತಿಗಳು ಹೃದಯ ತುಂಬಿಬರುವಂತಹದಾಗಿತ್ತು. ಶಾಂತಿ ಮಂತ್ರದೊಂದಿಗೆ ಮುಕ್ತಾಯವಾದಾಗ ಎಲ್ಲರ ಮುಖದಲ್ಲೂ ಧನ್ಯತಾಭಾವ ಎದ್ದು ಕಾಣುತ್ತಿತ್ತು. ವೇದಭಾರತಿಯ ಕಾರ್ಯಕರ್ತರಾದ ನಮಗೂ ಸಹ ಏನೋ ಸಾಧಿಸಿದೆವೆಂಬ ಧನ್ಯತೆಯೊಂದಿಗೆ ಮತ್ತಷ್ಟು ಹೆಚ್ಚು ವೇದದ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಹುಮ್ಮಸ್ಸು ಮೂಡಿದ್ದಂತೂ ಸತ್ಯ. ಶ್ರೀಧರ್ ಅಗ್ನಿಹೋತ್ರದ ಮಹತ್ವ ಕುರಿತು ಸಂಕ್ಷಿಪ್ತವಾಗಿಯಾದರೂ ಪರಿಣಾಮಕಾರಿಯಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಬೋಧನ್ ಸಂಸ್ಥೆಯ ಅಖಿಲ ಭಾರತ ಪ್ರಮುಖರಾದ ಸನ್ಮಾನ್ಯ ಶ್ರೀ ಸು. ರಾಮಣ್ಣನವರು ಮಾತನಾಡಿ ಕುಟುಂಬಗಳ ಮಹತ್ವವನ್ನು ಸಾರಿ ಹೇಳಿದರು. ಧರ್ಮವನ್ನು ರಕ್ಷಿಸಿದವರನ್ನು ಧರ್ಮ ರಕ್ಷಿಸುವಂತೆ, ಕುಟುಂಬವನ್ನು ರಕ್ಷಿಸಿದರೆ ಅದು ಸಮಾಜವನ್ನೇ ರಕ್ಷಿಸುತ್ತದೆ ಎಂದರು. ಮನೆ ಮನೆಗಳು ಸಂಸ್ಕಾರ ನೀಡುವ ಕೇಂದ್ರಗಳಾಗಿ ರಾಷ್ಟ್ರದ ಉನ್ನತಿಗೆ ಕೈಗೂಡಿಸಲಿ ಎಂದು ಹಾರೈಸಿದರು.
ಶತಾಯುಷಿ ಮಾಮಾಜಿಯವರನ್ನು ನಂತರ ಆತ್ಮೀಯವಾಗಿ ಗೌರವಿಸಲಾಯಿತು. ಬೆಲ್ಲ, ಅಕ್ಕಿ ಮತ್ತು ಸಕ್ಕರೆಗಳಿಂದ ಪ್ರತ್ಯೇಕವಾಗಿ ಅವರ ತುಲಾಭಾರ ಮಾಡಿ ನೆರೆದಿದ್ದವರು ಸಂಭ್ರಮಿಸಿದರು. ಪ್ರತಿಯೊಬ್ಬರೂ ಅವರನ್ನು ಸಾರಿ ಬಾಗಿ ನಮಸ್ಕರಿಸುತ್ತಿದ್ದುದು ಅವರ ಸಾಧನೆಯ ಜೀವನಕ್ಕೆ ಸಾರ್ಥಕ ಗೌರವ ತೋರಿಸಿದಂತೆ ಆಗಿತ್ತು. ಸಮಾರಂಭದಲ್ಲಿ ಮಾಡಲಾಗಿದ್ದ ಅಚ್ಚುಕಟ್ಟಾದ ವ್ಯವಸ್ಥೆಗಳು ವಿದ್ಯಾನಿಕೇತನಕ್ಕೆ ಸಂಬಂಧಿಸಿದವರೇ ಮಾಡಿದ್ದರು. ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರು ಐದು ಛಾತ್ರಾಲಯಗಳನ್ನು ನಡೆಸುತ್ತಿದ್ದು, ಅದರಲ್ಲಿ ಒಂದು ಮಲಗುಂದದಲ್ಲಿದೆ. ಯಾವುದೇ ಜಾತಿ, ಮತ, ಲಿಂಗ ಭೇದವಿಲ್ಲದೆ ಬಡ ವಿದ್ಯಾರ್ಥಿಗಳಿಗೆ ಸಂಸ್ಕಾರಯುತವಾದ ಶಿಕ್ಷಣ ಅಲ್ಲಿ ನೀಡಲಾಗುತ್ತಿದೆ. ಛಾತ್ರಾಲಯದಲ್ಲಿ ಓದುತ್ತಿರುವ ಮುಸ್ಲಿಮ್ ವಿದ್ಯಾರ್ಥಿಗಳು ಭಗವದ್ಗೀತೆಯನ್ನು ಸರಾಗವಾಗಿ ಹೇಳಬಲ್ಲವರಾಗಿದ್ದಾರೆ. ಸಾಂಸ್ಕೃತಿಕ ವಿನಿಮಯ ಯೋಜನೆಯನ್ವಯ ಮೇಘಾಲಯದಿಂದ ಬಂದು ಓದುತ್ತಿರುವ ಮಕ್ಕಳೂ ಇದ್ದಾರೆ. ಸಾಯಂಕಾಲದ ಸಮಯದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯುನ್ನತ ಮಟ್ಟದ್ದಾಗಿತ್ತು ಎಂದರೆ ಅದರಲ್ಲಿ ವಿಶೇಷವಿಲ್ಲ. ತಯಾರು ಮಾಡಿದವರ ಮತ್ತು ಭಾಗವಹಿಸಿದ ಮಕ್ಕಳ ನೈಪುಣ್ಯತೆ ಕಂಡು ಬೆರಗಾದೆವು. ಹಿಂದೆ ಗುರುಕುಲದಲ್ಲಿ ಓದಿದ್ದು, ಈಗ ವಿದೇಶದಲ್ಲಿರುವ ವಿದ್ಯಾರ್ಥಿಗಳಿಂದ ಭರತನಾಟ್ಯ, ಕೊಳಲು ವಾದನ, ಸಂಗೀತ ಕಾರ್ಯಕ್ರಮ ಸೊಗಸಾಗಿತ್ತು. ಮೇಘಾಲಯದ ವಿದ್ಯಾರ್ಥಿಗಳು ನಡೆಸಿಕೊಟ್ಟ ಮಲೆ ಮಹಾದೇವನ ಹಾಡಿನೊಂದಿಗೆ ಕಂಸಾಳೆ ನೃತ್ಯ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು. ಪ್ರತಿ ಕಾರ್ಯಕ್ರಮ ಮುಗಿದ ಮೇಲೆ ಸಭಿಕರು ಎದ್ದುನಿಂತು ಕರತಾಡನ ಮಾಡಿ ಮೆಚ್ಚುಗೆ ವ್ಯಕ್ತಪಡಿಸುವಷ್ಟು ಉತ್ತಮ ಕಾರ್ಯಕ್ರಮಗಳಿದ್ದವು. ಒಟ್ಟಾರೆಯಾಗಿ ಒಂದು ಸಾರ್ಥಕ ಕಾರ್ಯಕ್ರಮದಲ್ಲಿ ನಾವು ಪಾಲುಗೊಂಡಿದ್ದೆವೆಂಬ ಹೆಮ್ಮೆಯೊಂದಿಗೆ ಹಾಸನಕ್ಕೆ ಮರಳಿದೆವು.
ಮುಂದಿನ ಕಾರ್ಯ: ೨೪.೨.೨೦೧೫ರಂದು ನಡೆಯಲಿರುವ ಹಾಸನ ಜಿಲ್ಲಾ ಸಂಸ್ಕೃತ ಸಮ್ಮೇಳನದ ಯಶಸ್ಸಿಗೆ ವೇದಭಾರತಿ ಕೈಜೋಡಿಸಿ ಶ್ರಮಿಸುತ್ತಿದೆ. ಈ ಸಮ್ಮೇಳನಕ್ಕೆ ಸಹೃದಯರೆಲ್ಲರಿಗೂ ಆತ್ಮೀಯ ಸ್ವಾಗತವಿದೆ.
-ಕ.ವೆಂ.ನಾಗರಾಜ್.