Pages

Thursday, August 28, 2014

ಈ ದೇಹವು ಭಗವಂತನು ನಿರ್ಮಿಸಿದ ದೇವಾಲಯ



ಯೋ ವೈ ತಾಂ ಬ್ರಹ್ಮಣೋ ವೇದಾಮೃತೇನಾವೃತಾಂ ಪುರಂ|
ತಸ್ಮೈ ಬ್ರಹ್ಮ ಚ ಬ್ರಹ್ಮಾಶ್ಚ ಚಕ್ಷುಃ ಪ್ರಾಣಂ ಪ್ರಜಾಂ ದದುಃ ||
[ಅಥರ್ವ ೧೦.೨.೨೯]
ಅನ್ವಯ :
ಯಃ = ಯಾವನು
ಅಮೃತೇನ ಆವೃತಾಂ = ಅಮರನಾದ ಭಗವಂತನಿಂದ ಆವೃತವಾಗಿರುವ
ಬ್ರಹ್ಮಣಃ ತಾಂ ಪುರಂ = ಆ ಭಗವಂತನ ಪುರವಾದ ಈ ದೇಹವನ್ನು
ವೈ ವೇದ = ಸರಿಯಾಗಿ ತಿಳಿದು ಉಪಯೋಗಿಸಿಕೊಳ್ಳುತ್ತಾನೋ
ತಸ್ಮೈ = ಅವನಿಗೆ
ಬ್ರಹ್ಮ ಚ = ಪರಮಾತ್ಮನು ಮತ್ತು
ಬ್ರಹ್ಮಾಶ್ಚ = ಪರಮಾತ್ಮನ ಮಕ್ಕಳಾದ ಜೀವಾತ್ಮರು
ಚಕ್ಷು = ಸತ್ಯ ದರ್ಶನ ಶಕ್ತಿಯನ್ನೂ
ಪ್ರಾಣಂ = ಜೀವನ ಶಕ್ತಿಯನ್ನೂ
ಪ್ರಜಾಂ = ಸತ್ ಸಂತತಿಯನ್ನೂ
ದದುಃ = ನೀಡುತ್ತಾರೆ
ಅರ್ಥ :
ಯಾವನು ಅಮರನಾದ ಭಗವಂತನಿಂದ ಆವೃತವಾಗಿರುವ ಆ ಭಗವಂತನ ಪುರವಾದ ಈ ದೇಹವನ್ನು ಸರಿಯಾಗಿ ತಿಳಿದು ಉಪಯೋಗಿಸಿಕೊಳ್ಳುತ್ತಾನೋ ಅವನಿಗೆ ಪರಮಾತ್ಮನು  ಸತ್ಯ ದರ್ಶನ ಶಕ್ತಿಯನ್ನೂ ಜೀವನ ಶಕ್ತಿಯನ್ನೂ ಸತ್ ಸಂತತಿಯನ್ನೂ ನೀಡುತ್ತಾನೆ.
ಅನೇಕ ಪುರೋಹಿತರು ಈ  ಮಂತ್ರವನ್ನು ಆಶೀರ್ವಾದ ರೂಪದಲ್ಲಿ ಪಠಿಸುವುದನ್ನು ನಾನು ಕೇಳಿದ್ದೇನೆ.ಕಿವಿಗೆ ಹಿತವಾಗುತ್ತಿತ್ತು.ಅರ್ಥ ತಿಳಿಯುತ್ತಿರಲಿಲ್ಲ. ಅರ್ಥ ತಿಳಿಯುವ ಪ್ರಯತ್ನ ಮಾಡಿದಾಗ ಸಂತೋಷವಾಯ್ತು. ಈ ಮಂತ್ರದ ಬಗ್ಗೆ ವಿಚಾರ ಮಾಡೋಣ.
ಈ ದೇಹವನ್ನು ಹಲವರು ತಮ್ಮ ವಯಸ್ಸಾದ ಕಾಲದಲ್ಲಿ, ಅಥವಾ ರೋಗಪೀಡಿತವಾದಾಗ ಈ ಪಾಪಿದೇಹ ಎಂದು ಜರಿಯುವುದನ್ನು ಕಂಡಿದ್ದೇವೆ. ಈ ದೇಹವನ್ನು ಪೋಷಿಸಬೇಕಾಗಿದೆಯಲ್ಲಾ! ಎಂದು ತೊಳಲಾಡುವವರಿಗೇನೂ ಕಮ್ಮಿ ಇಲ್ಲ. ಆದರೆ ವೇದವು ಏನು ಹೇಳುತ್ತದೆ? ಈ ದೇಹವು  ಭಗವಂತನಿಂದ ಆವೃತವಾಗಿವಾಗಿದೆ, ಎಂದು ಹೇಳುತ್ತದೆ. ಇಂತಾ ದೇಹವನ್ನು ನಾನು ಹೇಗೆ ಕಾಪಾಡಬೇಕು? ಭಗವಂತನ ಆವಾಸ ಸ್ಥಾನವಾಗಿರುವ ದೇಹವನ್ನು ದೇವಾಲಯವೆಂದು ಭಾವಿಸಿದಾಗ ನಮ್ಮ ಶರೀರದ ಬಗ್ಗೆ ನಮಗೆ ಹೇಗೆನಿಸುತ್ತದೆ?
ಈ ದೇಹವನ್ನು ದೇವಾಲಯವೆಂದು ಭಾವಿಸಿದಾಗ ಅದನ್ನು ಅಡ್ಡಾದಿಡ್ಡಿ ಬೆಳೆಸುತ್ತೇವೆಯೇ? ಸುಂದರವಾಗಿ .ಪವಿತ್ರಭಾವನೆಯಿಂದ ಬೆಳೆಸಬೇಕಾಗುತ್ತದೆ. ನಾವು ಈ ದೇಹಕ್ಕಾಗಿ ಮಾಡುವ ಪ್ರತಿಯೊಂದು ಕರ್ಮವೂ ಯಜ್ಞಭಾವನೆಯಿಂದ ಮಾಡಬೇಕಾಗುತ್ತದೆ.ನಾವು ಈಗ ಸಧ್ಯದ ಪರಿಸ್ಥಿತಿಯಲ್ಲಿ ಹೇಗಿದ್ದೇವೆಂದು ಸ್ವಲ್ಪ ವಿಚಾರ ಮಾಡಿದರೆ ನಮಗೆ ಹೇಗೆನ್ನಿಸೀತು!
ಪ್ರಾತಃಕಾಲದಲ್ಲಿ ಏಳುವಾಗಲೇ ಕಾಫಿ ಕೊಡಮ್ಮಾಎಂದು ಕೇಳುತ್ತಲೇ ಹಾಸಿಗೆಯಿಂದ ಏಳುವ      ಮಗ ಕಾಫಿ ಆಗಿದೆಯಾ? ಎಂದು ಹಾಸಿಗೆಯಿಂದಲೇ ಕೇಳುವ  ಮನೆಯ ಯಜಮಾನ, ಮುಖಕ್ಕೆ ನೀರೆರಚಿ ದರ್ಶಿನಿ ಗೆ ಧಾವಿಸುವ ಜನರು!! ಇದೆಲ್ಲಾ ನಿತ್ಯ ದೃಶ್ಯವಲ್ಲವೇ? ಸಾಮಾನ್ಯವಾಗಿ ನಮ್ಮ ದೇಹವನ್ನು ನಾವು ಯಂತ್ರವೆಂದು ಭಾವಿಸಿಲ್ಲವೇ? ಹಲವರು ಹೇಳುವುದುಂಟು  ಪೆಟ್ರೋಲ್ [ಕಾಫಿ] ಹಾಕದೆ ತಲೆಯೇ ಓಡುವುದಿಲ್ಲ  ಈ ಯಂತ್ರವನ್ನು ಚಾಲನೆಯಲ್ಲಿರಿಸಲು ಇಂಧನ ಬೇಕಾಗಿದೆ, ಅದಕ್ಕಾಗಿ ಸಿಕ್ಕಿದ ಬಂಕ್‌ಗಳಲ್ಲಿ [ಹೊಟೆಲ್] ಇಂಧನ ತುಂಬಿಸಿಕೊಂಡರಾಯ್ತು. ನಮ್ಮ ಜೀವನ ಇಷ್ಟು ಯಾಂತ್ರಿಕವಾಗಿಲ್ಲವೇ?
ಈ ದೇಹದ ಬಗ್ಗೆ ಇನ್ನೂ ಹಲವು ವೇದ ಮಂತ್ರಗಳಲ್ಲಿ ಅದ್ಭುತವಾಗಿ ಬಣ್ಣಿಸಲಾಗಿದೆ. ಇನ್ನೊಂದು ವೇದಮಂತ್ರವನ್ನು ತಿಳಿಯೋಣ.

ಅಷ್ಟಾಚಕ್ರಾ ನವದ್ವಾರಾ ದೇವಾನಾಂ ಪೂರಯೋಧ್ಯಾ|
ತಸ್ಯಾಂ ಹಿರಣ್ಯಃ ಕೋಶಃ ಸ್ವರ್ಗೋ ಜ್ಯೋತಿಷಾವೃತಃ ||
 [ಅಥರ್ವ ೧೦.೨.೩೧]
ಅನ್ವಯ :
ಅಷ್ಟಾಚಕ್ರಾ ನವದ್ವಾರಾ = ಎಂಟು ಚಕ್ರಗಳು ಒಂಬತ್ತು ದ್ವಾರಗಳಿಂದ ಯುಕ್ತವಾದ
ದೇವಾನಾಂ ಅಯೋಧ್ಯಾ = ದೇವತೆಗಳಿಂದ ಜಯಿಸಲಾಗದ
ಪೂಃ = ಪುರ [ಪುರ ಒಂದಿದೆ.ಅದೇ ಶರೀರ]
ತಸ್ಯಾಂ ಹಿರಣ್ಯಃ ಕೋಶಃ = ಅದರಲ್ಲಿರುವ ಕೋಶವು ಹಿತಕರವೂ ರಮಣೀಯವಾದವೂ ಆದ [ಹೃದಯ]
ಸ್ವರ್ಗಃ = ಸುಖಮಯವಾದುದೂ
ಜ್ಯೋತಿಷಾ ಆವೃತಃ = ಪರಮಜ್ಯೋತಿಯಿಂದ ಆವೃತವಾಗಿದೆ.

ಅರ್ಥ :
ಎಂಟು ಚಕ್ರಗಳಿಂದ ನವದ್ವಾರಗಳಿಂದ ಯುಕ್ತವಾದ ಈ ದೇಹವೆಂಬ ನಗರಿಯನ್ನು  ಜಯಿಸಲು ದಿವ್ಯಶಕ್ತಿಗಳಿಂದಲೂ ಸಾಧ್ಯವಿಲ್ಲ. ಈ ನಗರಿಯಲ್ಲಿ ಪರಮ ಚಿನ್ಮಯನಾದ ಆತ್ಮನು ದಿವ್ಯ ಜ್ಯೋತಿಯಿಂದ ಸಮಲಂಕೃತನಾಗಿ ವಾಸಿಸುತ್ತಾನೆ.
ಈಗೊಮ್ಮೆ ನಮ್ಮ ದೇಹದ ವ್ಯವಸ್ಥೆಯನ್ನು ಮನದಲ್ಲಿಯೇ ವೀಕ್ಷಿಸೋಣ.ಎಷ್ಟು ಅದ್ಭುತ! ಎಂಟು ಚಕ್ರಗಳು! ನವದ್ವಾರಗಳು!! ಇವುಗಳ ಬಗ್ಗೆ ನಾನಿಲ್ಲಿ ಚರ್ಚಿಸುವ ಪ್ರಯತ್ನವನ್ನು ಮಾಡುವುದಿಲ್ಲ.ಯೋಗಾಭ್ಯಾಸದಲ್ಲಿ ಇವೆಲ್ಲದರ ಸರಿಯಾದ ಪರಿಚಯವಾಗುತ್ತದೆ. ನಾವು ಕೇವಲ ಹೊರನೋಟದಿಂದಲೇ ಗಮನಿಸಿದರೂ ಅದೆಂತಹ ಅದ್ಭುತ ವ್ಯ್ವಸ್ಥೆಯಲ್ಲವೇ , ಈ ಶರೀರ!! ಆ ಭಗವಂತನ ವ್ಯವಸ್ಥೆಯ ಮುಂದೆ ಮನುಷ್ಯರು ಕಂಡು ಹಿಡಿದಿರುವ ಯಾವುದೇ ಯಂತ್ರವೂ ಸಾಟಿಯಿಲ್ಲ! ಅಲ್ಲವೇ?
ಸ್ವಾಮೀಜಿಯೊಬ್ಬರ ಮಾತು ನೆನಪಾಗುತ್ತದೆ  ನಾನು ಕೋಟ್ಯಾಧಿಪತಿ, ಆದರೆ ನನ್ನ ಕಿಸೆಯಲ್ಲಿ ನೂರು ರೂಪಾಯಿ ಇಲ್ಲ!! ಆದರೆ ನನ್ನೆರಡು ಕೈಗಳು ಎರಡು ಕೋಟಿಗಿಂತ ಹೆಚ್ಚಿನ ಬೆಲೆಯವು! ನನ್ನೆರಡು ಕಾಲುಗಳು ಮತ್ತೆರಡು ಕೋಟಿ! ನನ್ನ ತಲೆಗೆ ಬೆಲೆಯನ್ನು ಕಟ್ಟುವುದಾದರೂ ಹೇಗೆ?
ಯೋಚಿಸಿ ನೋಡಿ ,ಕೈಗಳೇ ಇಲ್ಲದೆ ಹುಟ್ಟಿದ ಹೆಣ್ಣು ಮಗಳೊಬ್ಬಳು ಪಾದದಿಂದಲೇ ಚಿತ್ರ ಬಿಡಿಸುವುದನ್ನು ಕಂಡಿದ್ದೇವೆ. ಕಾಲುಗಳೇ ಇಲ್ಲದೆ ಹುಟ್ಟಿದ ವ್ಯಕ್ತಿಯೊಬ್ಬ ತನ್ನ ಕೈಗಳಿಂದಲೇ ನಡೆದು ಜೀವಿಸುತ್ತಾನೆ ! ಆದರೆ ನಮಗೆಲ್ಲವೂ ಇವೆಯಲ್ಲಾ! ಆದರೂ ನಾವು ಬಡವರು!! - ಈ ಯೋಚನೆಯೇ ನಮ್ಮ ದಾರಿದ್ರ್ಯವಲ್ಲವೇ? ಭಗವಂತನು ಕೊಟ್ಟಿರುವ ಈ ಅದ್ದ್ಭುತ ಶರೀರ ಪಡೆದ ನಾವು ಶ್ರೀಮಂತರಲ್ಲವೇ?
ಈ ಶ್ರೀಮಂತದೇಹವನ್ನು ಸುಂದರವಾಗಿ ಕಾಪಾಡಿಕೊಳ್ಳಬೇಕಾದವರು ನಾವೇ ಅಲ್ಲವೇ? ನಾವು ಈ ದೇಹವನ್ನು ದೇವಾಲಯದಂತ ಪವಿತ್ರಭಾವದಿಂದ ಕಂಡಿದ್ದೇವೆಯೇ? ಒಮ್ಮೊಮ್ಮೆ ನನಗೆ ಅನ್ನಿಸುತ್ತದೆ ಈ ದೇಹವನ್ನು ಲೊಡಾಸ್ ಗಾಡಿಯನ್ನಾಗಿ [ ಕೆಟ್ಟು ನಿಂತಿರುವ ವಾಹನ] ಮಾಡಿ ಅದರ ದುರಸ್ತಿಗಾಗಿ ಅದೆಷ್ಟು ವರ್ಕ್ ಶಾಪ್ ಗಳು! [ಆಸ್ಪತ್ರೆಗಳು! ] ನಮ್ಮ ಶರೀರದ ಬಗ್ಗೆ ಸ್ವಲ್ಪ ಚಿಂತನೆ ಮಾಡಬೇಕಲ್ಲವೇ? ಒಮ್ಮೊಮ್ಮೆ ಹೀಗೂ ಆಗುವುದುಂಟು. ನಮ್ಮ ಶರೀರಕ್ಕೆ ಲಾಲನೆ ಪೋಷಣೆ ಹೆಚ್ಚಾಗಿ ಆಗಲೂ ಯಂತ್ರ ಕೆಡುವ ಅವಕಾಶಗಳು!  ನಮ್ಮ ಶರೀರಕ್ಕೆ ಗಮನ ಕೊಡುವುದೆಂದರೆ ಅದು ಭೋಗ ಭಾವದಿಂದಲ್ಲ. ನಮ್ಮ ಶರೀರವು ಸುಂದರ ದೇವಾಲಯದಂತಿರಬೇಕಾದರೆ ನಮ್ಮ ಪರಂಪರೆಯಂತೆ ನಮ್ಮ ನಿತ್ಯ ಜೀವನ ಶಿಸ್ತು ಬದ್ಧವಾಗಿ ಸಾಗಬೇಕು. ಕಾಲಕಾಲಕ್ಕೆ ಶರೀರಕ್ಕೆ ವ್ಯಾಯಾಮ,     ನಿಯಮಿತವಾಗಿ ಧ್ಯಾನ,ಪ್ರಾಣಾಯಾಮ,ಕಾಲಕಾಲಕ್ಕೆ ಆಹಾರ-ವಿಹಾರ, ಸಚ್ಚಿಂತನೆ, ಸದ್ವ್ಯವಹಾರ, ಸನ್ನಡೆ, ಸತ್ಕರ್ಮಾಚರಣೆ, ಇನ್ನೊಬ್ಬರಿಗೆ ನೋವು ಕೊಡದ ಮಾತು ಎ॒ಲ್ಲವೂ ಗಣನೆಗೆ ಬರುತ್ತದೆ. ನಮ್ಮ ದೇಹವನ್ನು ದೇವಾಲವನ್ನಾಗಿ ಉಳಿಸಿಕೊಳ್ಳುವುದು ನಮ್ಮದೇ ಹೊಣೆ ಅಲ್ಲವೇ?