30.01.2011 ರಂದು ಹಾಸನದಲ್ಲಿ ನಡೆಯಲಿರುವ ವೇದಸುಧೆಯ ವಾರ್ಷಿಕೋತ್ಸವದಲ್ಲಿ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ "ನಿಜವ ತಿಳಿಯೋಣ" ಪ್ರವಚನ ಮಾಲಿಕೆ ಸಿಡಿ ಬಿಡುಗಡೆಯಾಗಲಿದ್ದು ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಅದರ ಪರಿಚಯವನ್ನು ಮಾಡಿಕೊಡಲಿದ್ದಾರೆ. ಅದರ ಒಂದು ಕ್ಲಿಪ್ ವೇದಸುಧೆಯ ಅಭಿಮಾನಿಗಳಿಗಾಗಿ
///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Monday, January 17, 2011
ಸತ್ಯಪಥವ ಹುಡುಕಬೇಕಲ್ಲಾ!
ನಮ್ಮ ಸಮಾಜ ಬಲು ವಿಚಿತ್ರ. ಬೆಳಗಿನಿಂದ ರಾತ್ರಿಯವರೆಗೂ ದುಡಿದು ಸೋತು ಸೊಪ್ಪಾಗಿ ರಾತ್ರಿ ಮನೆಗೆಬಂದು ಹಾಸಿಗೆಯಲ್ಲಿ ಕಾಲು ಚಾಚುವವರು ಕೆಲವರು. ಅವರಿಗೆ ದುಡಿಮೆಯೇ ಜೀವನ.ಇಂತವರು ಯಾವಾಗಲಾದರೊಮ್ಮೆ ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿ ಯಾವುದಾದರೂ ದೇವಾಲಯಗಳಲ್ಲಿ ಸೇವೆ ಮಾಡಿಸಿ ಸಮಾಧಾನ ಪಡುವುದುಂಟು. ಇನ್ನೊಂದು ವರ್ಗವಿದೆ.ಜೀವನದಲ್ಲಿ ನೈತಿಕ ಮೌಲ್ಯಗಳನ್ನುಳನ್ನು ಬಿಟ್ಟು ವಾಮಮಾರ್ಗಗಳಲ್ಲಿ ಹಣ ಸಂಪಾದಿಸುವುದು, ಆದರೆ ಧಾರ್ಮಿಕ ಕೆಲಸಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುವುದು. ಮತ್ತೊಂದು ವರ್ಗವಿದೆ. ಪ್ರಾಮಾಣಿಕವಾಗಿ ದುಡಿದು ನಮ್ಮ ಪರಂಪರೆಯಲ್ಲಿ ಬಂದಿರುವ ಎಲ್ಲಾ ವ್ರತಾಚರಣೆಗಳು, ಹಬ್ಬ ಹರಿದಿನಗಳನ್ನು ಆಚರಿಸುತ್ತಾ ತಾವು ಆಚರಿಸುತ್ತಿರುವ ಯಾವ ಆಚರಣೆಯನ್ನೂ ವೈಜ್ಞಾನಿಕವಾಗಿ ವಿಶ್ಲೇಷಿಸದೆ ಸುಮ್ಮನೆ ಅನುಸರಿಸುವುದು. ಇದು ದೊಡ್ಡ ಸಮೂಹ. ನಮ್ಮ ಹಿಂದಿನವರು ಹೀಗೆ ಮಾಡುತ್ತಿದ್ದರು. ನಾವೂ ಮಾಡುತ್ತೇವೆ. ನಮ್ಮ ಮಕ್ಕಳಿಗೂ ಮಾಡಲು ಕಲಿಸುತ್ತೇವೆ, ಎನ್ನುವ ಈ ವರ್ಗ ಯಾವುದಕ್ಕೂ ತಲೆ ಕೆಡಸಿಕೊಳ್ಳುವುದಿಲ್ಲ. ಭಯದಿಂದ ಧರ್ಮಾಚರಣೆ ಮಾಡುವ ಕೆಲವರು. ಪ್ರತೀ ವರ್ಷವೂ ತಮ್ಮ ಮನೆದೇವರಿಗೆ ಯಾತ್ರೆ ಮಾಡುವ ಕೆಲವರು ಕಾರಣಾಂತರದಿಂದ ಒಂದು ವರ್ಷ ಯಾತ್ರೆ ಮಾಡದಿದ್ದಾಗ ಅವರ ಮನೆಯಲ್ಲಿ ಯಾವುದಾದರೂ ಅಪತ್ತು ಎದುರಾದರೆ ಅದಕ್ಕೆ ಅವರು ಮನೆ ದೇವರ ದರ್ಶನವನ್ನು ಮಾಡದಿದ್ದುದೇ ಕಾರಣವೆಂದು ತಿಳಿದು ತಪ್ಪು ಕಾಣಿಕೆಯನ್ನು ತಮ್ಮ ಮನೆಯೆ ಪೂಜಾಗೃಹದಲ್ಲಿ ದೇವರ ಮುಂದಿಟ್ಟು " ಭಗವಂತಾ, ನನ್ನ ತಪ್ಪು ಕ್ಷಮಿಸಿ ನಮ್ಮ ಮನೆಯನ್ನು ಕಾಪಾಡು, ಮುಂದಿನ ವರ್ಷ ಮನೆಮಂದಿಯೆಲ್ಲಾ ಬಂದು ನಿನ್ನ ಸೇವೆ ಮಾಡಿಸಿ ಕೊಂಡು ಬರುತ್ತೇವೆಂದು" ಮನ: ಪೂರ್ವಕ ದೇವರಲ್ಲಿ ಬೇಡುವ ಒಂದು ಮುಗ್ಧ ವರ್ಗ.
ಭಗವಂತನ ಪೂಜೆಯನ್ನು ನೂರಾರು ರೀತಿಯಲ್ಲಿ ತಮ್ಮದೇ ಸರಿ ಎನ್ನುತ್ತಾ ನಿತ್ಯವೂ ತಮ್ಮದೇ ರೀತಿಯಲ್ಲಿ ಪೂಜೆಮಾಡುವ ಹಲವಾರು ಸಮೂಹ. ಅಷ್ಟೇ ಅಲ್ಲ, ಧರ್ಮದ, ದೇವರ, ಮತದ, ಮಠದ ಹೆಸರಲ್ಲಿ ಬಡಿದಾಡುವ ಗುಂಪುಗಳು.
ನಿತ್ಯವೂ ಪುರಾಣ ಪಠಣ-ಶ್ರವಣ ಮಾಡುತ್ತಾ,ಇದೇ ಸರಿಯಾದ ಮಾರ್ಗವೆಂದು ಭಾವಿಸಿರುವ ಒಂದು ಸಮೂಹ. ಪುರಾಣವೇ ಸುಳ್ಳು, ಅದು ಬರೀ ಕಟ್ಟುಕಥೆ ಎನ್ನುವ ಒಂದು ಗುಂಪು.ಇಷ್ಟೇ ಅಲ್ಲ, ಇನ್ನೂ ಸಾಕಷ್ಟು ಗೊಂದಲಗಳು.ಇವುಗಳ ಮಧ್ಯೆದಲ್ಲೇ ಇದ್ದು ಸತ್ಯಪಥವ ಹುಡುಕಬೇಕಲ್ಲಾ! ಹಿಂದಿನಿಂದ ನಡೆದು ಬಂದಿರುವ ಎಲ್ಲವನ್ನೂ ಸಾರಾಸಗಟಾಗಿ ತಿರಸ್ಕರಿಸದೆ, ಕುರುಡು ಆಚರಣೆ ಎಂದು ಮನವರಿಕೆ ಆದದ್ದನ್ನು ಬಿಡುತ್ತಾ, ಯಾವುದು ಅನೈತಿಕವೆಂದು ನಮ್ಮ ಅಂತರಾತ್ಮ ತಿಳಿಯುತ್ತದೋ ಅದರಿಂದ ದೂರವಿರುತ್ತಾ, ಒಂದು ಸತ್ಯದ ಹಾದಿಯಲ್ಲಿ ಸಾಗುವುದೇ ಒಂದು ಮಹಾನ್ ಯಜ್ಞ. ಅಂತಾ ಒಂದು ಯಾತ್ರೆಯಲ್ಲಿ ಸಾಗುವುದೇ ವೇದಸುಧೆಯ ಉದ್ಧೇಶ. ಹಲವು ಗೊಂದಲಗಳು ಎದುರಾದರೂ ಸತ್ಯದ ಶೋಧನೆಯಲ್ಲಿ ಮುಂದುವರೆಯೋಣ ಬನ್ನಿ.ಇದೊಂದು ಸತ್ಯದ ಹಾದಿಯನ್ನು ಹುಡುಕುವ ವೇದಿಕೆಯಾದ್ದರಿಂದ ಯಾರು ಏನೇ ಅಭಿಪ್ರಾಯ ಹೊರಹಾಕಿದರೂ ಅದರ ಬಗ್ಗೆ ವಿಮರ್ಷೆ ಮಾಡೋಣ. ಯಾವುದನ್ನೂ ವೈಯಕ್ತಿಕನೆಲೆಯಲ್ಲಿ ನೋಡದೆ ವೈಚಾರಿಕ ಹಿನ್ನೆಲೆಯಲ್ಲಿ ಚರ್ಚಿಸಿದಾಗ ಒಂದಲ್ಲಾ ಒಂದು ದಿನ ಋಜುಮಾರ್ಗದಲ್ಲಿ ಸಾಗುವುದು ಯಾರಿಗೂ ಕಷ್ಟವಾಗಲಾರದು.
Subscribe to:
Posts (Atom)