Pages

Wednesday, April 1, 2015

ನಮ್ಮ ಹೊಣೆ ಏನು?

ನಿತ್ಯವೂ ಕೆಲವರ ಮಾತು ಕೇಳಿದಂತೆಲ್ಲಾ ಹಲವು ಚಿಂತನೆಗಳು ಕಣ್ಮುಂದೆ ಬರುತ್ತವೆ. ಕೆಲವು ದಿನಗಳ ಮುಂಚೆ ಒಬ್ಬ ಕಿರಿಯ ಸ್ನೇಹಿತೆ ಒಂದು ಗುಡಿಸಲಿನ ಮುಂದೆ ಮುದ್ದಾದ ಮೂರು ಮಕ್ಕಳು ನಿಂತಿರುವ ಚಿತ್ರ ಹಾಕಿದ್ದರು. ಅದನ್ನು ಶೇರ್ ಮಾಡಿದ ನಾನು ಅದರ ವಿವರ ತಿಳಿದು ಪ್ರಕಟಿಸುವುದಾಗಿ ಪೋಸ್ಟ್ ಬರೆದಿದ್ದೆ.ಅಂತೆಯೇ ಅವರನ್ನು ವಿವರ ಕೇಳಿದೆ. ಆಕೆಗೆ ನನ್ನ ಮೇಲೆ ಎಲ್ಲಿಲ್ಲದ ಸಿಟ್ಟು   ಬಂತು. ಇಂತಾ ನೂರಾರು ಕುಟುಂಬಗಳು ಆ ಜಾಗದಲ್ಲಿ ಬಡತನ ಅನುಭವಿಸ್ತಾ ಇದಾರೆ.ಮಾಡುವುದಾದದರೆ ಅಲ್ಲಿ ಹೋಗಿ ಸಹಾಯ ಮಾಡ್ರೀ, ಅಂತಾ ಸಿಟ್ಟಾಗಿಯೇ ಹೇಳಿದ್ದರು. ಆಕೆಯ ಸಿಟ್ಟಿನಿಂದ ನನಗೇನೂ ಬೇಸರವಾಗಲಿಲ್ಲ. ನಾಟಕವಾಡುವ ಜನರನ್ನು ನೋಡಿ ನೋಡಿ ರೋಸಿಹೋಗಿ ಈ ಮಾತು ಹೇಳಿರಬಹುದು.ಇರಲಿ.
                      ಹೀಗೆಯೇ Facebook ನಲ್ಲಿ ಹಲವರು ತಾವು ಕಂಡ ದಾರಿದ್ರ್ಯ ದೃಶ್ಯಗಳನ್ನು ಬರೆಯುತ್ತಾ ಇರುತ್ತಾರೆ.ಹಲವರು ತಮ್ಮ ಮನೆಯ ಮಕ್ಕಳ ಹುಟ್ಟುಹಬ್ಬವನ್ನು ಸ್ಲಮ್ ನಲ್ಲಿ ಆಚರಿಸಿ ಅಲ್ಲಿನ ಮಕ್ಕಳಿಗೆ ಸಿಹಿ ಹಂಚಿ ಬಂದೆವೆಂದು ಬರೆಯುತ್ತಿರುತ್ತಾರೆ.
ಇವೆಲ್ಲವೂ ಸತ್ಯವೇ ಹೌದು. ಆದರೂ ಒಂದು ಚಿಂತೆ ನನ್ನನ್ನು ಕಾಡುತ್ತದೆ. ಸರ್ಕಾರದ " ಭಾಗ್ಯ ಯೋಜನೆ" ಗಳಿವೆಯಲ್ಲಾ ! ಅವು ಯಾರನ್ನು ತಲಪುತ್ತಿವೆ? ಕೆಲವರಿಗೆ 400.00 ರೂ ಕೆಲವರಿಗೆ 1000.00 ರೂ, ಕೆಲವರಿಗೆ ಒಂದು ರೂಪಾಯಿಗೆ ಅಕ್ಕಿ !!

ಈ ಎಲ್ಲದರ ಪ್ರಯೋಜನ ಯಾರು ಪಡೆಯುತ್ತಾರೆ?

ಈ ಎಲ್ಲಾ ಯೋಜನೆಗಳಿಗಿಂತ ಅತ್ಯಂತ ಹಳೆಯ ಯೋಜನೆಯೊಂದಿತ್ತು. ಅದು ಇಂದಿನ ಯುವಕರಿಗೆ ಗೊತ್ತಿರಲಾರದು. ಅದು " ಗರೀಬೀ ಹಾಟಾವ್ " ಯೋಜನೆ. ಇಂದಿರಾಗಾಂಧಿಯವರ ಕನಸು. ಅದರ ಹಿಂದಿನ ಚಿಂತನೆ ಕಾಂಗ್ರೆಸ್ಸರಿಗೇ ಅರ್ಥವಾಗಲಿಲ್ಲ. ವಿರೋಧಪಕ್ಷದವರು " ಅದು ಬಡತನ ನಿರ್ಮೂಲನೆಯಲ್ಲಾ! ಅದು ಬಡವರ ನಿರ್ಮೂಲನೆ!! ಎಂದು ಗೇಲಿ ಮಾಡಿದರು. ಆ ಯೋಜನೆ ಹಾಳಾಗಿ ಹೋಯ್ತು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಈ ಏಳು ದಶಕಗಳು ಬೇಕಾಗಿತ್ತಾ-ಈ ಬಡತನ ಹೋಗಲಾಡಿಸಲು.ದೇಶದ ಸಂಪತ್ತನ್ನು ಲೂಟಿ ಹೊಡೆದಿರುವ ರಾಜಕಾರಣಿಗಳ ಸಂಪತ್ತನ್ನು ಸರ್ಕಾರ ಕಿತ್ತುಕೊಂಡು ಯೋಗ್ಯರಿಗೆ ಹಂಚುವ ದಿಟ್ಟತನ ತೋರಿಸಲಿ. ಆಗ ಇನ್ನೂ ಹತ್ತು ಕೋಟಿ ಜನ ಬಡವರಿಗೆ ಬದುಕಲು ಇಲ್ಲಿಯೇ ಶ್ರೀಮಂತರ ಹತ್ತಿರ ಕೊಳೆಯುತ್ತಿರುವ ಸಂಪತ್ತು ಸಾಕಾಗುತ್ತೆ.

ಇದಕ್ಕೆ ವೇದದ ಆಧಾರ ಇಲ್ಲಿದೆ ನೋಡಿ.........

ಸಾಮಾನ್ಯವಾಗಿ   ಬಳಕೆಯಲ್ಲಿರುವ  ಗಣೇಶ ಸೂಕ್ತದ ಎರಡು ಮಂತ್ರಗಳಲ್ಲಿ ಏನು ಹೇಳುತ್ತೆ ಗೊತ್ತೇ?

ಋಗ್ವೇದ ಮಂಡಲ-೮,ಸೂಕ್ತ-೮೧, ಮಂತ್ರ-೭

ಉಪ ಕ್ರಮಸ್ವಾ ಭರ ಧೃಷತಾ ಧೃಷ್ಣೋ ಜನಾನಾಮ್ |
ಅದಾಶೂಷ್ಟರಸ್ಯ ವೇದಃ ||
 ಅರ್ಥ:-
ಜನಾನಾಮ್ ಧೃಷ್ಣೋ = ಮಾನವರ ವಶೀಕರ್ತನಾದವನೇ
ಧೃಷತಾ = ದಮನಬಲದಿಂದ
ಅದಾಶೂಷ್ಟರಸ್ಯ = ಕೊಡದವನ
ವೇದಃ = ಧನವನ್ನು
ಆಭರ = ತುಂಬಿಸಿಕೊಡು
ಉಪಕ್ರಮಸ್ವ = ಕಾರ್ಯ ನಿರತನಾಗು
ಭಾವಾರ್ಥ:-
ಸ್ವಾರ್ಥಿಗಳ ಐಶ್ವರ್ಯವು ವ್ಯರ್ಥವಾದುದು, ಆ ಹಣವು ಜನರ ಹಿತಕ್ಕಾಗಿ ಬಳಸಲ್ಪಡುವುದಿಲ್ಲ. ಆದ್ದರಿಂದ ಅಂತವರ ಧನವನ್ನು ಶಾಸಕನು ದಮನಶಕ್ತಿಯಿಂದ ಕಿತ್ತುಕೊಂಡು ಉದಾರಾತ್ಮರಿಗೆ ನೀಡಬೇಕು, ಅಂತೆಯೇ ಕ್ರಿಯಾಶೀಲರಾಗಬೇಕು.
ಸಾಮಾನ್ಯವಾಗಿ ವೇದಮಂತ್ರಗಳು ಕೇಳಲು -ಹೇಳಲು ಹಿತವಾಗಿರುತ್ತವೆ, ಹಾಗಾಗಿ ಬಹಳ ಜನರು ವೇದ ಮಂತ್ರವನ್ನು ಇಷ್ಟಪಡುತ್ತಾರೆ. ಆದರೆ ಅದರ ಅರ್ಥ ತಿಳಿದುಕೊಂಡರೆ ನಮಗೆ ಆಶ್ಚರ್ಯವಾಗದೇ ಇರದು. ನಾವು ಹೇಳುವ ಹಲವು ಮಂತ್ರಗಳು ನಮ್ಮ ಜೀವನಕ್ಕೆ ಮಾರ್ಗದರ್ಶೀ ಸೂತ್ರಗಳಷ್ಟೇ ಅಲ್ಲ, ಭಗವಂತನ  ಆದೇಶವಾಗಿರುತ್ತವೆ.
ಈ ಮಂತ್ರವಂತೂ ಗಟ್ಟಿಯ ಧ್ವನಿಯಲ್ಲಿ ಹೇಳುತ್ತದೆ ಸ್ವಾರ್ಥಿಗಳ ಐಶ್ವರ್ಯವು ವ್ಯರ್ಥವಾದುದು, ನಮ್ಮನ್ನಾಳುವ ರಾಜನು ಅಥವಾ ಸರ್ಕಾರ ತನ್ನ  ದಮನಶಕ್ತಿಯಿಂದ ಸ್ವಾರ್ಥಿಗಳ ಐಶ್ವರ್ಯವನ್ನು ಕಿತ್ತುಕೊಂಡು ಉದಾರಾತ್ಮರಿಗೆ ಹಂಚಬೇಕು
  ನಾವು ಈಗ ಹೇಳುತ್ತಿರುವ ಸರ್ವರಿಗೂ ಸಮಪಾಲು, ಸಮ ಬಾಳು ಈ ಎಲ್ಲವನ್ನೂ ವೇದವು ಅದಾಗಲೇ ಸಾವಿರಾರು ವರ್ಷಗಳ ಹಿಂದೆಯೇ ಹೇಳಿಯಾಗಿದೆ. ಈ ಮಂತ್ರವನ್ನು ಅರ್ಥಮಾಡಿಕೊಂಡಾಗ ನಮಗೆ ಅದು ಸ್ಪಷ್ಟವಾಗದೇ ಇರದು. ವೇದಮಂತ್ರವು ಬಳಸಿರುವ ಪದದ ಗಟ್ಟಿತನವು ನಮಗೆ ಅರ್ಥವಾಗಬೇಕು. ಧೃಷತಾ ಎಂಬ ಪದದ ಬಳಕೆಯಾಗಿದೆ ಅಂದರೆ ದಮನಬಲದಿಂದ ಸ್ವಾರ್ಥಿಗಳ ಸಂಪತ್ತನ್ನು ಕಿತ್ತುಕೊಂಡು ಅಗತ್ಯವಿದ್ದ ಜನರಿಗೆ ಹಂಚು-ಎಂಬುದು ವೇದದ ಕರೆ. ಅಂದರೆ ಎಷ್ಟು ಸಮಾಜಮುಖಿಯಾಗಿ ಚಿಂತನೆ ನಡೆದಿದೆ! ಎಂಬುದು ನಮಗೆ ಅರ್ಥವಾಗಬೇಕು.
ಅದಾಶೂಷ್ಟರಸ್ಯ ವೇದಃ ಎಂಬ ಮಂತ್ರಭಾಗಕ್ಕೆ ಕೊಡದವನ ಸಂಪತ್ತನ್ನು ಎಂಬ ವಿವರಣೆಯನ್ನು ನೀಡಿದ್ದಾರೆ. ವೇದದಲ್ಲಿ ಒಂದೊಂದು ಪದಕ್ಕೂ ಸಂದರ್ಭಾನುಸಾರ ಮತ್ತು ಸ್ವರದ ಆಧಾರದಲ್ಲಿ ಹಲವಾರು ಅರ್ಥಗಳು. ಈ ಮಂತ್ರದಲ್ಲಿ ವೇದಃ ಎಂಬ ಪದಕ್ಕೆ ಧನವನ್ನು/ಸಂಪತ್ತನ್ನು ಎಂದು ಅರ್ಥೈಸಲಾಗಿದೆ.
ದೇಶದ ಹಣವನ್ನು ಲೂಟಿಮಾಡಿ ಕಪ್ಪುಹಣವನ್ನು ಹೊಂದಿರುವವರಿಗೆ ಈ ಮಾತು ನೇರವಾಗಿ ಅನ್ವಯವಾಗಲಾರದೆ? ಇಂತವರ ಹಣವನ್ನು ತನ್ನ ರಾಜಬಲದಿಂದ        ವಶಪಡಿಸಿಕೊಂಡು ದೇಶದ ಉತ್ತಮ ಕೆಲಸಗಳಿಗೆ ಸದ್ವಿನಿಯೋಗ ಮಾಡಬೇಕೆಂಬುದೇ ಈ ಮಂತ್ರದ ಕರೆ.
ಈ ಮಂತ್ರವನ್ನು ಬಹುಪಾಲು ಜನರು ನಿತ್ಯವೂ ಪಠಿಸುತ್ತಾರೆ. ಆದರೆ ಈ ಮಂತ್ರದ ಅರ್ಥ ಯಾರ ಕಿವಿಗೆ ಬೀಳಬೇಕೋ ಅವರ ಕಿವಿಗೆ ಬೀಳುತ್ತಿದೆಯೇ? ಇಂತಹ ವೇದದ ಆದೇಶವನ್ನು ಆಡಳಿತಮಾಡುವವರ ಕಿವಿಗೆ ಮುಟ್ಟಿಸುವುದು ವೇದ ವಿದ್ವಾಂಸರ ಕರ್ತವ್ಯವಲ್ಲವೇ?

ಮತ್ತೊಂದು ಮಂತ್ರವು ಇನ್ನೂ ಅದ್ಭುತವಾಗಿ ಇದೇ ವಿಚಾರವನ್ನು ಹೇಳುತ್ತದೆ. . . . . . .
ಋಗ್ವೇದ ಮಂಡಲ-೮,ಸೂಕ್ತ-೮೧, ಮಂತ್ರ-೮

ಇಂದ್ರ ಯ ಉ ನು ತೇ ಅಸ್ತಿ ವಾಜೋ ವಿಪ್ರೇಭಿಃ ಸನಿತ್ವಃ |
ಅಸ್ಮಾಭಿಃ ಸು ತಂ ಸನುಹಿ ||

ಅರ್ಥ:-
ಇಂದ್ರ = ಸರ್ವೇಶ್ವರನೇ
ತೇ = ನಿನ್ನ
ಯಃ = ಯಾವ
ಸನಿvಃ = ಹಂಚಿಕೊಳ್ಳಲರ್ಹವಾದ
ವಾಜಃ ಅಸ್ತಿ = ಸಂಪತ್ತಿದೆಯೋ
ತಮ್ = ಅದನ್ನು
ಅಸ್ಮಾಭಿಃ ವಿಪ್ರೇಭಿಃ =  ಮೇಧಾವಿಗಳಾದ ನಮ್ಮೊಂದಿಗೆ ಸೇರಿ
ಸು ಉ ನು ಸನುಹಿ = ಚೆನ್ನಾಗಿ ನಿಶ್ಚಯವಾಗಿ ಹಂಚಿಕೊಡು

ಭಾವಾರ್ಥ:-
ಜಗತ್ತಿನಲ್ಲಿರುವ ಐಶ್ವರ್ಯವೆಲ್ಲವೂ ಪರಮಾತ್ಮನಿಗೆ ಸೇರಿದ್ದು, ಆ ಸಂಪತ್ತು ದಾನಮಾಡುವುದಕ್ಕಾಗಿಯೇ ಇದೆ ಹೊರತೂ ಸ್ವಾರ್ಥಕ್ಕಾಗಿ ಅಲ್ಲ,  ಆ ಸಂಪತ್ತನ್ನು ಭಗವಂತನ ಪ್ರೇರಣೆಯಿಂದ ಮೇಧಾವಿಗಳು ಪಾತ್ರರಿಗೆ ನೀಡಲಿ.
ನಿಜವಾದ ಕಮ್ಯೂನಿಸ್ಟ್ ವಿಚಾರಧಾರೆಯಲ್ಲವೇ, ಇದು! ಈಗಿನ ಕಮ್ಯೂನಿಸ್ಟ್ ವಿಚಾರವು ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಆದರೆ ವೇದಮಂತ್ರವು ಸಾರುತ್ತದೆ                 ಜಗತ್ತಿನಲ್ಲಿರುವುದೆಲ್ಲವೂ ಪರಮಾತ್ಮನಿಗೆ ಸೇರಿದ್ದು. ಅದರ ಮೇಲೆ ನನ್ನ ಹಕ್ಕು ಏನೂ ಇಲ್ಲ. ನನಗೇನಾದರೂ ಒಂದಿಷ್ಟು ಸಂಪತ್ತು ಇದೆ ಎಂದಾದರೆ ನಾನು ಅದಕ್ಕೆ ಒಬ್ಬ ವಿಶ್ವಸ್ಥನೇ ಹೊರತೂ ಯಜಮಾನನಲ್ಲ.

ಇಂದಿನ ಸರ್ಕಾರದ ನೀತಿಯಲ್ಲೂ ಸಹ ಇಲ್ಲದವನಿಗೆ ಸರಕಾರ ಸವಲತ್ತನ್ನು ಒದಗಿಸುವುದೇ ಆಗಿದೆ. ಆದರೆ ಯಾರು ರಾಜಕಾರಣಿಗಳ ಹಿಂಬಾಲಕರಿರುತ್ತಾರೋ ಅವರಿಗೆ ಸರ್ಕಾರದ ಸವಲತ್ತುಗಳು ಸೇರುತ್ತವೆ. ನಿಜವಾದ ಬಡವನು ಎಲ್ಲಾ ಸೌಕರ್ಯಗಳಿಂದಲೂ ವಂಚಿತನಾಗುತ್ತಾನೆ. ಈ ವಿಚಾರದಲ್ಲಿ ವೇದವು ಸ್ಪಷ್ಟ ಆದೇಶವನ್ನು ಕೊಡುತ್ತದೆ ಮೇಧಾವಿಗಳೊಂದಿಗೆ, ಚಿಂತಕರೊಂದಿಗೆ ಸೇರಿ ಸಮಾಲೋಚನೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಸವಲತ್ತುಗಳನ್ನು ನೀಡಿ
ಆದರೆ ಈಗ ನಡೆದಿರುವುದೇನು? ಎಲ್ಲವೂ ವೇದಕ್ಕೆ ವಿರೋಧವಾಗಿಯೇ. ಅಂದರೆ ಸತ್ಯಕ್ಕೆ ವಿರೋಧವಾಗಿಯೇ. ಅಸತ್ಯ, ಅಧರ್ಮ,ಅನ್ಯಾಯವನ್ನು ಕೇಳುವಷ್ಟು ಗುಂಡಿಗೆ ಜನರಲ್ಲಿಲ್ಲ. ಮತ್ತೊಂದು ಮಂತ್ರದ ಬಗ್ಗೆ ತಿಳಿಯೋಣ

ಸದ್ಯೋಜುವಸ್ತೇ ವಾಜಾ ಅಸ್ಮಭ್ಯಂ ವಿಶ್ವಶ್ಚಂದ್ರಾಃ |
ವಶೈಶ್ಚ ಮಕ್ಷೂ ಜರಂತೇ || [ ಋಗ್ವೇದ ಮಂಡಲ-೮,ಸೂಕ್ತ-೮೧, ಮಂತ್ರ-೯]

ಅರ್ಥ
ಸರ್ವೇಶ್ವರನೇ
ತೇ ವಾಜಾಃ = ನಿನ್ನ ಸಂಪತ್ತು
ವಿಶ್ವಶ್ಚಂದ್ರಾಃ = ಎಲ್ಲರಿಗೂ ಆಹ್ಲಾದವನ್ನು ಕೊಡತಕ್ಕದ್ದು
ಅಸ್ಮಭ್ಯಂ = ನಮಗೆ
ಸದ್ಯೋಜುವಃ = ಬೇಗನೇ ಪ್ರಾಪ್ತವಾಗಲಿ
ವಶೈಃ  ಚ =ಕಾಮನೆಗಳಿಂದ
ಮಕ್ಷೋ = ಬಾರಿಬಾರಿ
ಜರಂತೇ = ಜನರು ಅರ್ಚಿಸುತ್ತಾರೆ

ಭಾವಾರ್ಥ
ಭಗವಂತನ ಐಶ್ವರ್ಯವು ಎಲ್ಲರಿಗೂ ಆಹ್ಲಾದವನ್ನು ಉಂಟುಮಾಡುವಂತಹದಾಗಿದೆ. ಅಂತಹ ಐಶ್ವರ್ಯವು ಎಲ್ಲರಿಗೂ ಶೀಘ್ರವಾಗಿ ದೊರಕಲಿ. ಆಗ ಅನೇಕವಿಧವಾದ ಕಾಮನೆಗಳಿಂದ ಕೂಡಿದ ಜನರು ಭಗವಂತನನ್ನು ಸ್ತುತಿಸುತ್ತಾರೆ.
ಜಗತ್ತಿನಲ್ಲಿರುವ ಐಶ್ವರ್ಯವೆಲ್ಲವೂ ಪರಮಾತ್ಮನಿಗೆ ಸೇರಿದ್ದು ಎಂಬುದನ್ನು ಈ ಹಿಂದಿನ ಮಂತ್ರವು ತಿಳಿಸಿದರೆ ಈ ಮಂತ್ರವಾದರೂ ಅದರ ಉಪಯೋಗ ಮತ್ತು ಹಂಚಿಕೆಯ ಬಗ್ಗೆ ತಿಳಿಸುತ್ತದೆ. ನಮ್ಮನ್ನು ಆಳುವವರಿಗೆ ಸರಿಯಾದ ಮಾರ್ಗದರ್ಶನವಲ್ಲವೇ ಈ ಮಂತ್ರ?  ಜನರಿಗೆ ಹಲವು ಕಾಮನೆಗಳಿರುತ್ತವೆ, ಅಲ್ಲವೇ! ಅದನ್ನು ಭಗವಂತನೇ ನೇರವಾಗಿ ಪೂರೈಸಲು ಸಾಧ್ಯವೇನು? ಪ್ರಜೆಗಳ ಅವಶ್ಯಕತೆಗೆ ಮತ್ತು ಅರ್ಹತೆಗೆ ತಕ್ಕಂತೆ ದೇಶದ ಸಂಪತ್ತು ಅವರಿಗೆ ಪ್ರಾಪ್ತವಾಗುವಂತೆ ಸರ್ಕಾರ ನೋಡಿಕೊಳ್ಳಬೇಕೆಂಬುದು ವೇದದ ಆದೇಶ.
ಗಣೆಶಸೂಕ್ತಗಳನ್ನು ಗಟ್ಟಿಯಾಗಿ ನಮ್ಮ ಸಂತೋಶಕ್ಕೆ ಹೇಳಿದರೆ ಸಾಲದು. ಅದರ ಅರ್ಥವನ್ನು   ತಿಳಿದುಕೊಂಡು ಅದರಂತೆ ನಡೆದಾಗ ಸಾರ್ಥಕವಾಗುತ್ತದೆ.
----------------------------------------------------------------------------------------

ಇದೆಲ್ಲಾ ಓದಿದಮೇಲೆ ಹೇಳಿ " ನಾವು ಸ್ಲಮ್ ಏರಿಯಾ ಗೆ ಹೋಗಿ ನಮ್ಮ ಮಕ್ಕಳ ಹುಟ್ಟುಹಬ್ಬ ಆಚರಿಸಿ ಬಂದೆವೆಂದು "  ಸಂತೋಷ ಪಡ್ತೀವಲ್ಲಾ! ಅದರ ಇನ್ನೊಂದು ಮುಖ ಹೇಳುತ್ತೆ " ಎಷ್ಟೊಂದು ಜನ ಬದುಕಲು ಆಶ್ರಯ ಇಲ್ಲದೆ ನರಳುತ್ತಿದ್ದಾರೆಂದು"ಅಲ್ಲವೇ? ದೇಶದಲ್ಲಿರುವ ಇಂತಾ ಅವಸ್ತೆಯನ್ನು ಉಳಿಸಿಕೊಂಡು ,ಆಗಿಂದಾಗ್ಗೆ  ಅಲ್ಲಿ ಹೋಗಿ ಸಂತೋಷ ಹಂಚಿಕೊಳ್ಳಬೇಕೋ? ಅಥವಾ ಇಂತಾ ಪರಿಸ್ಥಿತಿಯೇ ಇರದಂತಾ ಯೋಜನೆಗಲನ್ನು ರೂಪಿಸಿ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಒತ್ತಾಯ ಮಾಡಬೇಕೋ!  ನಮ್ಮ ಜವಾಬ್ದಾರಿ ಏನು?

ಅದೆಲ್ಲಾ ಸರ್ಕಾರ ಮಾಡುತ್ತೆ. ನಮ್ಮ ಜವಾಬ್ದಾರಿ ಅಲ್ಲಾ,ಅನ್ನೋ ಮಾತೂ ಸರಿ ಇರಬಹುದು. ಸರ್ಕಾರ ಅಂದರೆ ಯಾರು? ನಾವೇ ಆರಿಸಿದ್ದು ತಾನೇ? ನಾವೇ ಅದರ ಮೇಲೆ ಒತ್ತದ ಹಾಕಬೇಕಲ್ಲವೇ?  ಈ ನನ್ನ ಪ್ರಯತ್ನವೂ ಅದರ ಒಂದು ಭಾಗವೇ, ಆಗಿದೆ. ಈ ವಿಚಾರವನ್ನು ನಮ್ಮ ನಮ್ಮ ಶಾಸಕರಿಗೆ ಪತ್ರ ಬರೆದು ಯಾಕೆ ಒಂದು Face book ಮೂಲಕವೇ ಒಂದು ಆಂದೋಲನ ಮಾದಬಾರದು. ಇನ್ನೂ ಒಂದು ದಾರಿ ಈಗ ತೆರೆದಿದೆ. Change.org  ಮೂಲಕ ಕೋರ್ಟ್ ಗೆ ಅರ್ಜಿ ಹಾಕಿ ಸಾವಿರಾರು ಜನರ ಸಹಿ ಪಡೆದು ಒತ್ತಾಯಿಸುವ ಪ್ರಕ್ರಿಯೆ ಒಂದಿದೆ. ಕಾನೂನು ತಜ್ಞರು ಆ ಪ್ರಯತ್ನವನ್ನೂ ಮಾಡಬಹುದು ಅಲ್ಲವೇ?