ಇಂದು ಭಗವಾನ್ ಶ್ರೀಧರಸ್ವಾಮಿಗಳ ಜನ್ಮದಿನ. ಸಾಮಾನ್ಯವಾಗಿ ಬೆಳಿಗ್ಗೆ ನನ್ನ ನಿತ್ಯಕರ್ಮಗಳನ್ನು ಮುಗಿಸಿದ ಮೇಲೆ ಕಂಪ್ಯೂಟರ್ ಮುಂದೆ ಕೂರುವ ನಾನು ಇಂದೇಕೋ ನೆಟ್ ತೆರೆಯಬೇಕೆನಿಸಿತು. ತೆರೆದರೆ ವಿ.ಆರ್. ಭಟ್ಟರು ತಮ್ಮ ಬ್ಲಾಗಿನಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಬಗ್ಗೆ ಲೇಖನ ಒಂದನ್ನು ಬರೆದಿರುವ ಬಗ್ಗೆ ನನ್ನ ಬ್ಲಾಗಿನಲ್ಲೇ ಗೊತ್ತಾಯ್ತು. ಕ್ಲಿಕ್ಕಿಸಿದೆ. ಭಗವಾನರ ದರ್ಶನವಾಯ್ತು. ಲೇಖನವನ್ನು ಓದಿ ಭಗವಾನರನ್ನು ಮನದಲ್ಲಿ ತುಂಬಿಕೊಂಡು ಹೋಗಿ ಸ್ನಾನ ಮುಗಿಸಿ ಅಗ್ನಿಹೋತ್ರ ಮಾಡಲು ಕುಳಿತೆ. ಅಗ್ನಿಹೋತ್ರವನ್ನು ಮುಗಿಸಿ ಕಣ್ಮುಚ್ಚಿ ಕುಳಿತೆ. ಮನದಲ್ಲೆಲ್ಲಾ ಭಗವಾನರೇ ತುಂಬಿದ್ದರು. ಅವರ ದರ್ಶನವಾಗಿತ್ತು. ಮನದಲ್ಲಿ ಮೂಡಿಬಂದ ಪದಗಳಿಂದ ಭಗವಾನರನ್ನು ಸ್ತುತಿಸಿದೆ. ತೋಚಿದ ರಾಗದಲ್ಲಿ ಹಾಡಿದ್ದೆ. ಅದನ್ನೇ ರೆಕಾರ್ಡ್ ಮಾಡಿಕೊಂಡು ನಮ್ಮ ಲಲಿತಳ ಧ್ವನಿಯಲ್ಲಿ ರೆಕಾರ್ಡ್ ಮಾಡಿಸಬೇಕೆಂದು ಕೊಂಡೆ, ಅದಾಗಲೇ ಅವಳೂ ಅವಳ ಪತಿಯೊಡನೆ ನಮ್ಮ ಮನೆಗೆ ಹಾಜರ್. ಭಗವಾನರೇ ಕರೆಸಿದ್ದಾರೆ. ಅವಳ ಧ್ವನಿಯಲ್ಲಿ ಇದೀಗ ರೆಕಾರ್ಡ ಮಾಡಿಕೊಂಡು ಪ್ರಕಟಿ ಸಿರುವೆ. ಭಗವಾನರನ್ನು ಕಂಡಾಗ ನನ್ನ ಮನದಲಿ ಮೂಡಿಬಂದ ಭಾವನೆಗಳು ಇಲ್ಲಿವೆ.
ಕಂಡೆನಾ ಗೋವಿಂದನಾ
ನನ್ನೊಳಗೆ ನಾ ಕಂಡೇನಾ ಗೋವಿಂದನಾ||
ಅಲ್ಲಲ್ಲಿ ಸುತ್ತಾಡಿ ಎಲ್ಲೆಲ್ಲೊ ಓಡಾಡಿ
ಎಲ್ಲೂ ಕಾಣದ ಅವನ ಇಲ್ಲೇ ಕಂಡೇ ||
ಗೋವಿಂದನಾ ಕಂಡೆ ಮೃಷ್ಟಾನ್ನ ನಾ ಉಂಡೆ
ಗಂಗಾ ಯಮುನೆಯರ ತೀರ್ಥದಲಿ ನಾ ಮಿಂದೆ||
ಅಗ್ನಿಯ ಶಾಖ ಕಂಡೆ,ಜ್ಯೋತಿಯ ಬೆಳಕ ಕಂಡೆ
ಆಕಾಶದಲ್ಲಿ ನಾ ಹಕ್ಕಿಯಂತೆ ಹಾರಿದಂತೆ||
ನೀರಿನಲ್ಲಿ ಮೀನುಗಳು ಈಜಿದಂತೆ ಕಂಡೆ
ಲತೆಯ ಕಮಲಗಳು ಅರಳಿದಂತೆ ಕಂಡೆ ||
ಅಮ್ಮನ ಮಡಿಲಲ್ಲಿ ಕಂದನು ಮಲಗಿದಂತೆ
ಕರುವು ಹಸುವಿನ ಹಾಲ ಕುಡಿವಂತೆ||