Pages

Sunday, April 17, 2011

ಡಾ|| ದೀಪಕ್ ವೈಯೋಲಿನ್ ಕಛೇರಿ

(Link)

ವೇದಗಳು ಮತ್ತು ಸಿರಿಭೂವಲಯದ ಸ್ಫೋಟಕ ಮಾಹಿತಿ!

ಸಿರಿಭೂವಲಯದ ಬಗ್ಗೆ ಈಗಾಗಲೇ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜ್ ಮತ್ತು ನಾನು ಹಾಸನದ ಶ್ರೀ ಸುಧಾರ್ಥಿಯವರೊಡನೆ ನಡೆಸಿದ ಸಂದರ್ಶನವನ್ನು ವೇದಸುಧೆಯಲ್ಲಿ ಪ್ರಕಟಿಸಲಾಗಿತ್ತು. ಇತ್ತೀಚೆಗೆ ಶ್ರೀ ಸುಧಾರ್ಥಿಯವರ ಒಂದು ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಭಾಗವಹಿಸಿದ ವೇದಸುಧೆ ಬಳಗದ ಸದಸ್ಯರೂ ಪತ್ರಕರ್ತರೂ ಆದ ಶ್ರೀ ಹೆಚ್.ಎಸ್.ಪ್ರಭಾಕರ್ ತಮ್ಮ ವಿಚಾರಗಳನ್ನು ವೇದಸುಧೆಯೊಡನೆ ಹಂಚಿಕೊಂಡಿದ್ದಾರೆ. ಅದನ್ನು ಇಲ್ಲಿ ಪ್ರಕಟಿಸಲಾಗಿದೆ.
-ಹರಿಹರಪುರಶ್ರೀಧರ್
ಸಂಪಾದಕಕವಿ ಕುಮುದೇಂದು ಮುನಿಯ ಅತ್ಯಂತ ಪ್ರಾಚೀನ ಸರ್ವ ಭಾಷಾಮಯೀ ಭಾಷಾ ಸಿರಿಭೂವಲಯ ಎಂಬ ಕನ್ನಡ ಅಂಕ ಕಾವ್ಯದಲ್ಲಿನ ಆಯ್ದ ಸಾಂಗತ್ಯ ಪದ್ಯಗಳ ಸಂಗ್ರಹ ಕೃತಿ ಹಾಸನದಲ್ಲಿ ೨೦೧೧ ಏಪ್ರಿಲ್ ೧೦ ರಂದು ಬಿಡುಗಡೆಯಾಯಿತು. ಈ ಪದ್ಯ ಕೃತಿಯ ಸಂಗ್ರಾಹಕರು ಹಾಸನದ ಹಾಲುವಾಗಿಲು ಗ್ರಾಮದ ಸಾಹಿತಿ ಮತ್ತು ಕೃಷಿಕರೂ ಆದ ಸುಧಾರ್ಥಿಯವರು!

ವೇದಗಳಿಗೂ ಮತ್ತು ಕ್ರಿ.ಶ. ೮೦೦ ರ ಕಾಲದ ಜೈನ ಧರ್ಮ ಮೂಲದ ಸಿರಿಭೂಲಯ ಎಂಬ ಅಂಕ ಕಾವ್ಯಕ್ಕೂ ಏನು ಸಂಬಂಧ ಎಂದು ನೀವು ಪ್ರಶ್ನಿಸಬಹುದು. ಸಂಬಂಧವಿರುವ ಸಾಧ್ಯತೆಗಳು ನನಗೆ ಗೋಚರಿಸಿರುವುದರಿಂದ ಈ ಜಿಜ್ಞಾಸೆಗೆ ತೊಡಗಿದ್ದೇನೆ! ಕನ್ನಡ ವರ್ಣಮಾಲೆಯ ೬೪ ಅಕ್ಷರಗಳನ್ನು ಕನ್ನಡದ ೬೪ ಅಂಕಿಗಳಿಗೆ ಸಂಕೇತಿಸಿ ಅತ್ಯಂತ ನಿಗೂಢ ಹಾಗೂ ಜಟಿಲವಾಗಿ ಇದು ರಚಿಸಲ್ಪಟ್ಟಿದೆ. ಈ ಕಾವ್ಯದಲ್ಲಿನ ಅಂಕಿಗಳನ್ನು ಅಕ್ಷರಗಳಾಗಿ ರೂಪಾಂತರಿಸಿಕೊಂಡು (ಡೀಕೋಡ್ ಮಾಡಿ) ಅದರಲ್ಲಿ ಹುದುಗಿರುವ ಅಗಾಧವಾದ ಜ್ಞಾನ ರಾಶಿಯ ಅಂತರ್ ಸಾಹಿತ್ಯವನ್ನು ಕೆದಕಿ ತೆಗೆಯುವುದು ಅಷ್ಟು ಸುಲಭವಲ್ಲ ಎಂಬ ಕಾರಣಕ್ಕಾಗಿಯೇ ಹಲವು ಕುಂಟು ನೆಪಗಳ ಸಹಿತ ಇದು ಇಂದಿಗೂ ಸಾಹಿತ್ಯ ಲೋಕದಲ್ಲಿ ಅವಗಣನೆಗೆ ಒಳಗಾಗಿದೆ!

ಆದರೂ ಈ ಪ್ರಾಚೀನ ಕನ್ನಡ ಕೃತಿಯ ಕುರಿತು ತಲೆಕೆಡಿಸಿಕೊಂಡು, ಸದ್ಯಕ್ಕೆ ಲಭ್ಯವಿರುವ ಅದರ ಕೆಲವೇ ಅಧ್ಯಾಯಗಳ ಅಂಕ ಚಕ್ರಗಳನ್ನಾದರೂ ಬಿಡಿಸಿ ಎಲ್ಲರೂ ಓದಬಹುದಾದ ಅಕ್ಷರ ರೂಪಕ್ಕೆ ತರಲು ಹಾಗೂ ಅದರ ನಿಖರವಾದ ಮೂಲ ಕೆದಕಲು ಕಳೆದ ೨೫ ವರ್ಷಗಳಿಂದಲೂ ಹರಸಾಹಸ ಮಾಡುತ್ತಿರುವ ಸುಧಾರ್ಥಿಯವರ ಪರಿಶ್ರಮದ ಫಲವೇ ಈ ಆಯ್ದ ಸಾಂಗತ್ಯ ಪದ್ಯಗಳ ಸಂಗ್ರಹವಾಗಿದೆ. ಈ ಮುನ್ನ ಇವರು ಸಿರಿಭೂವಲಯವನ್ನು ಪರಿಚಯಿಸುವ ಸರ್ವ ಭಾಷಾಮಯೀ ಭಾಷಾ ಸಿರಿಭೂವಲಯ ಸಾರ ಎಂಬ ಕೃತಿಯನ್ನೂ ಪ್ರಕಟಿಸಿದ್ದಾರೆ.

ಏ. ೧೦ ರಂದು ಬಿಡುಗಡೆಯಾದ .ಪದ್ಯಗಳ ಸಂಗ್ರಹ ಕೃತಿಯಲ್ಲಿ ಸುಧಾರ್ಥಿಯವರು ಸಿರಿಭೂಲಯದ ಸಂಕ್ಷಿಪ್ತ ಪರಿಚಯ ನೀಡಿದ್ದಾರೆ. ಅದನ್ನು ಓದುತ್ತಾ ಹೋದಂತೆ, ಈಗ ನಾವು ನಂಬಿಕೊಂಡು ಬಂದಿರುವ ಅಥವಾ ನಮಗೆ ಬೋಧಿಸಲ್ಪಟ್ಟಿರುವ ಭಾರತೀಯ ಸಾಂಸ್ಕೃತಿಕ, ಸಾಹಿತ್ಯಿಕ, ಐತಿಹಾಸಿಕವಾದ ಅನೇಕ ಸಂಗತಿಗಳು ಬುಡಮೇಲಾಗುತ್ತವೆ ಹಾಗೂ ಕೆಲವು ವಿಷಯಗಳಂತೂ ನಮ್ಮನ್ನು ಅಲುಗಾಡಿಸುವುದಂತೂ ನಿಜ! ವೇದಗಳ ಕುರಿತಾದ ನಿಜವಾದ ಪರಿಚಯವೂ ಸಹ ಇದೇ ರೀತಿಯ ಕಂಪನಗಳನ್ನು ಉಂಟುಮಾಡುತ್ತವಲ್ಲವೆ!?

ಕನ್ನಡದ ಪ್ರಪ್ರಥಮ ಶಾಸನ-ನಮಗೆ ತಿಳಿದಂತೆ ಹಲ್ಮಿಡಿ ಶಾಸನ. ಊಹು...! ಈ ಕೃತಿಯ ಪ್ರಕಾರ ಅದಲ್ಲವೇ ಅಲ್ಲ! ಅದಕ್ಕಿಂತಲೂ ಪ್ರಾಚೀನವಾದ ಕನ್ನಡ ಶಾಸನಗಳಿವೆ!! ಕನ್ನಡ ಭಾಷೆಗೆ ಸುಮಾರು ೨೦೦೦ ವರ್ಷಗಳ ಇತಿಹಾಸವಿದೆ. ಇದು ಈಗ ನಾವು ನಂಬಿರುವ ಚರಿತ್ರೆ- ಛೆ! ಅಲ್ಲ; ಜೈನರ ಪ್ರಥಮ ತೀರ್ಥಂಕರ ವೃಷಭದೇವನ ಕಾಲದಲ್ಲೇ ಕನ್ನಡ ಭಾಷೆಯಿತ್ತು....!!- ಸಿರಿ ಭೂಲಯದಲ್ಲಿ ಈ ರೀತಿಯ ಅನೇಕ ಪಲ್ಲಟಕಾರಿ ವಿಷಯಗಳು ಇವೆಯಾದರೂ, ಪ್ರಕೃತ ಇಲ್ಲಿ ನಮಗೆ ಅಗತ್ಯವಾದ ಹಾಗೂ ಸಂಬಂಧಪಟ್ಟ ಆಯ್ದ ವಿಷಯಗಳನ್ನು ಮಾತ್ರ ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ:

ಆದಿ ತೀರ್ಥಂಕರ ವೃಷಭದೇವನಿಂದ ಆತನ ಮಗಳು ಸುಂದರಿಗೆ ಬೋಧಿಸಲ್ಪಟ್ಟ ಕೇವಲ ಜ್ಞಾನವನ್ನು ಗ್ರಹಿಸಿದ ಆತನ ೨ನೇ ಮಗ ಬಾಹುಬಲಿಯೇ ಮುಂದೆ ಗೊಮ್ಮಟನೆನಿಸುತ್ತಾನೆ. ಈ ಮಹತ್ವದ ಕೇವಲ ಜ್ಞಾನವೇ ದಿವ್ಯ ಧ್ವನಿ ಎನಿಸಿ, ಪ್ರತಿಯೊಬ್ಬ ತೀರ್ಥಂಕರನ ಗಣಧರರ (ಶಿಷ್ಯರ) ಮೂಲಕ ಮುಂದಿನ ತೀರ್ಥಂಕರರವರೆಗೆ ತಲುಪಿಸಲ್ಪಟ್ಟು ೨೨ನೇ ತೀರ್ಥಂಕರ ನೇಮಿಯ ಕಾಲದವರೆಗೂ ಹರಿದುಬಂತು. ಈ ನೇಮಿಯಿಂದ ಈ ದಿವ್ಯ ವಾಣಿಯು ಶ್ರೀ ಕೃಷ್ಣನಿಗೆ ಉಪದೇಶವಾಯಿತು! ನಂತರ ಶ್ರೀ ಕೃಷ್ಣನು ಅದನ್ನು (ವೇದ) ವ್ಯಾಸ ಮಹರ್ಷಿಗೆ ತಿಳಿಸಿಕೊಟ್ಟ! ವ್ಯಾಸರು ಅದನ್ನೇ ತಮ್ಮ ಜಯ (ಮಹಾಭಾರತ) ಕಾವ್ಯದಲ್ಲಿ ೧೬೩ ಶ್ಲೋಕಗಳ ಭಗವದ್ಗೀತೆಯಾಗಿ ನಿರೂಪಿಸಿದರು. ಯುದ್ಧ ವಿಮುಖನಾಗಲಿದ್ದ ಪಾರ್ಥನಿಗೂ ಶ್ರೀ ಕೃಷ್ಣ ಗೀತೋಪದೇಶ ರೂಪದಲ್ಲಿಈ ದಿವ್ಯ ವಾಣಿಯನ್ನು ಉಪದೇಶಿಸಿದ (ಕ್ರಿ.ಪೂ. ೧೯೫೪)!

ಮುಂದೆ, ೨೩ನೇ ತೀರ್ಥಂಕರ ಪಾರ್ಶ್ವನಾಥನ ಶಿಷ್ಯನಾಗಿದ್ದ ಗೌತಮನು ನಂತರ ಬುದ್ಧನಾಗಿ ಬೌದ್ಧ ಮತ ಸ್ಥಾಪಿಸಿದ (ಸುಮಾರು ಕ್ರಿ.ಪೂ. ೪೫೦). ನಂತರ ೨೪ನೇ ತೀರ್ಥಂಕರ ಮಹಾವೀರನಿಂದ ಈ ದೇವ ವಾಣಿಯು ಅವನ ಗಣಧರ (ಬೇರೆ) ಗೌತಮನಿಗೆ ಉಪದೇಶವಾಯಿತು (ಕ್ರಿ.ಪೂ. ೨೦೧). ಹೀಗೆಯೇ ಒಬ್ಬರಿಂದೊಬ್ಬರಿಗೆ ಹರಿದುಬಂದ ಈ ದಿವ್ಯವಾಣಿ ಕೊನೆಗೆ ಕರ್ನಾಟಕಕ್ಕೆ ಬಂತು! ಚಕ್ರವರ್ತಿ ಅಮೋಘ ವರ್ಷ ನೃಪತುಂಗ ಹಾಗೂ ಗಂಗರಸ ಸೈಗೊಟ್ಟ ಸಿವಮಾರರಿಗೆ ಗುರುವೂ ಆಗಿದ್ದ ಕುಮುದೇಂದು ಮುನಿಯು ಈ ಭಗವದ್ವಾಣಿಯನ್ನು ಕನ್ನಡ ಅಂಕಿಗಳಲ್ಲಿ; ನವಮಾಂಕ ಕ್ರಮದಲ್ಲಿ; ಕನ್ನಡವೂ ಸೇರಿದಂತೆ ಜಗತ್ತಿನ ೭೧೮ ಭಾಷೆಗಳ ಸಮಗ್ರ ಸಾಹಿತ್ಯವೂ ಅಡಕಗೊಂಡಂತೆ,ಸರ್ವ ಭಾಷಾಮಯೀ ಭಾಷಾ ಸಿರಿಭೂವಲಯ ಎಂಬ ಬಹುಭಾಷಾ ಸಾಂಗತ್ಯ ಕಾವ್ಯವಾಗಿ ಅದನ್ನು ಕ್ರಿ.ಶ. ೮೦೦ ರಲ್ಲಿ ರಚಿಸಿದ... ಈ ವಿಷಯಗಳಿಗೆಲ್ಲ ಆಧಾರಗಳೇನು ಎಂದು ಪ್ರಶ್ನಿಸಿದಾಗ, ಸಿರಿಭೂವಲಯ ದಲ್ಲಿನ ಪದ್ಯಗಳಲ್ಲಿನ ಅಂಶಗಳೇ ಆಧಾರ ಎಂದು ಸುಧಾರ್ಥಿಯವರು ಸ್ಪಷ್ಟಪಡಿಸುತ್ತಾರೆ!

ಮುಂದೆ ಅದು ಆಧುನಿಕ ಕಾಲದಲ್ಲಿ ಹೇಗೆ ನಷ್ಟಕ್ಕೆ, ಅವಗಣನೆಗೆ ಒಳಗಾಗಿ, ಯಾರ‍್ಯಾರ ಕೈ ಸೇರಿತು; ಕೊನೆಗೆ ಅದು ಹಾಸನದ ಸುಧಾರ್ಥಿ ಅವರವರೆಗೂ ಹೇಗೆ ಹರಿದುಬಂತು ಹಾಗೂ ಅದರ ಜಟಿಲತೆಯ ಸ್ವರೂಪ ಪರಿಚಯ ಇತ್ಯಾದಿಗಳನ್ನೆಲ್ಲ ಇಲ್ಲಿ ವಿವರಿಸಲು ಸ್ಥಳಾಭಾವವಿದೆ. ಮುಖ್ಯವಾದ ಸಂಗತಿಯನ್ನಷ್ಟೆ ನಾನಿಲ್ಲಿ ಪ್ರಸ್ತಾಪಿಸಿದ್ದೇನೆ. ಸಮಗ್ರ ಮಾಹಿತಿಗಾಗಿ ಆಸಕ್ತರು ಕೆಳಕಂಡ ವಿಳಾಸ ಹಾಗೂ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು:

ಸುಧಾರ್ಥಿ, ಹಾಲುವಾಗಿಲು ಗ್ರಾಮ, ತಟ್ಟೆಕೆರೆ ಅಂಚೆ, ಹಾಸನ-೫೭೩೨೦೧

ದೂರವಾಣಿ: ೦೮೧೭೨ ೨೫೭೧೮೬ ಮೊಬೈಲ್ ೯೪೪೯೯೪೬೨೮೦

ಈಗ ನನ್ನ ಪ್ರಶ್ನೆಗಳು ಇಂತಿವೆ:

೧) ಆದಿ ತೀರ್ಥಂಕರ ವೃಷಭದೇವನ ಕಾಲ (ಈತನ ಕಾಲ ಸ್ಪಷ್ಟವಾಗಿಲ್ಲ; ಒಬ್ಬೊಬ್ಬ ತೀರ್ಥಂಕರರ ನಡುವೆ ಲಕ್ಷಾಂತರ ವರ್ಷಗಳ ಅಂತರವಿದೆ ಎಂಬ ಉತ್ಪ್ರೇಕ್ಷೆಯನ್ನು ನಂಬುವಂತಿಲ್ಲ! ಶ್ರೀ ಕೃಷ್ಣನ ಕಾಲಕ್ಕೂ ಹಿಂದೆ ಅಂದರೆ ಅಂದಾಜು ೪ ರಿಂದ ೫ ಸಾವಿರ ವರ್ಷಗಳಷ್ಟು ಹಿಂದೆ ಎಂದು ಊಹಿಸೋಣ!) ಆತ ತನ್ನ ಮಗಳು ಸುಂದರಿಗೆ ಬೋಧಿಸಿದ ಕೇವಲ ಜ್ಞಾನದ ಮೂಲ ಯಾವುದು? ಏಕೆಂದರೆ ಭಗವದ್ಗೀತೆಯ ಮೂಲ ನಮಗೆ ತಿಳಿದಂತೆ ವೇದೋಪನಿಷತ್ತುಗಳೇ ಅಗಿವೆ!

೨) ವೃಷಭದೇವನ ಕಾಲದಿಂದಲೂ ಜೈನ ಧರ್ಮವು ಅಹಿಂಸೆಯನ್ನು ಪರಮ ಧರ್ಮವಾಗಿ ಪಾಲಿಸುತ್ತಿತ್ತೆ? ಏಕೆಂದರೆ, "ಯಜ್ಞ ಯಾಗಾದಿಗಳಲ್ಲಿ ಪ್ರಾಣಿ ಹಿಂಸೆ ಇದೆ ಎಂದು ವೇದೋಪನಿಷತ್ತುಗಳಲ್ಲಿ ಉಲ್ಲೇಖವಿದೆ "ಎಂಬ ನಂಬಿಕೆಯೇ ಜೈನ ಧರ್ಮೀಯರು ವೇದಗಳನ್ನು ದೂರವಿಟ್ಟರು ವೇದೋಪನಿಷತ್ತುಗಳು ಇವರಿಗೆ ಆಧಾರಗಳಲ್ಲ ಎಂಬುದು ಐತಿಹಾಸಿಕ ಸತ್ಯ. ಹಾಗಾದರೆ ವೃಷಭದೇವನ ಕಾಲಕ್ಕಾಗಲೇ ವೇದಗಳು ಅಪಾರ್ಥಕ್ಕೀಡಾಗಿ ತಿರುಚಲ್ಪಟ್ಟಿದ್ದವೆ?

೩) ಕುಮುದೇಂದು ಮುನಿಯು ಯಾಪನೀಯ ಜೈನ ಪಂಗಡಕ್ಕೆ ಸೇರಿದವನಾಗಿದ್ದ. ಈ ಯಾಪನೀಯರು ವೇದಗಳೂ ಸೇರಿದಂತೆ ಸರ್ವ ಧರ್ಮ ಸಮನ್ವಯ ಸಾಧಕರು. ಇದೇ ಕಾರಣಕ್ಕಾಗಿ ಅಂದಿನ ದಿಗಂಬರ ಜನ ಸಂಪ್ರದಾಯದವರು ಇವರನ್ನು ಜೈನರೆಂದು ಮಾನ್ಯ ಮಾಡಿರಲಿಲ್ಲ! ಈ ಕಾರಣದಿಂದಾಗಿ ಜೈನರಿಗೆ ಪೂಜ್ಯವಾದ ಧವಳಗಳ ವಿಚಾರವೂ ಸಿರಿಭೂಲಯದಲ್ಲಿ ಅಡಕವಾಗಿದ್ದರೂ ಸಹ ಅವರು ಈ ಕಾವ್ಯವನ್ನು ಮಾನ್ಯ ಮಾಡಿರಲಿಲ್ಲ! ಇನ್ನು ಇತ್ತ, ಸನಾತನ ಹಿಂದೂ ಸಂಪ್ರದಾಯಸ್ಥರಂತೂ " ಈ ಜೈನ ಸಂಪ್ರದಾಯದವನಿಗೆ ವೇದಗಳು ಹಾಗೂ ಉಪನಿಷತ್ತುಗಳ ವಿಚಾರವೇನು ತಿಳಿದೀತು?" ಎಂದು ವೇದ ವಿಚಾರಗಳನ್ನೂ ಒಳಗೊಂಡ ಈ ಕಾವ್ಯವನ್ನು ಉಪೇಕ್ಷಿಸಿದರು; ಹೀಗಾಗಿ ಎರಡೂ ಕಡೆಯವರಿಂದ ಇದು ಹೆಚ್ಚು ಪ್ರಚಾರಕ್ಕೆ ಬರಲೇಇಲ್ಲ ಎಂದು ಹೇಳಲಾಗಿದೆ! ವೇದಗಳ ಕುರಿತು ಜೈನ, ಬೌದ್ಧ ಅಥವಾ ಅನ್ಯ ಧರ್ಮೀಯರಿಗೆ ಏಕಿಷ್ಟು ಮತ್ಸರ ಅಥವಾ ತಾತ್ಸಾರ!?

೪) ಬೌದ್ಧರ ಕಾಲದಲ್ಲಂತೂ ಬಹುತೇಕ ನಾಶವೇ ಆಗಿದ್ದ ವೇದಗಳನ್ನು ಮತ್ತೆ ಎತ್ತಿಹಿಡಿಯಲು ಶಂಕರಾಚಾರ್ಯರು ಎಷ್ಟೆಲ್ಲ ಶ್ರಮಪಟ್ಟರು ಎಂಬುದು ಎಲ್ಲರಿಗೂ ಗೊತ್ತಿರುವುದೇ! ಜಗತ್ತಿನ ಯಾವುದೇ ಸಾಹಿತ್ಯ ಅಥವಾ ಧಾರ್ಮಿಕ ಸಂದೇಶಗಳಿಗೂ ವೇದಗಳೇ ಮೂಲಾಧಾರ ಎಂಬುದು ಸತ್ಯ. ಹೀಗಿದ್ದೂ "ಇದನ್ನೆಲ್ಲ ನಾವೇ ಸೃಷ್ಟಿಸಿದ್ದು; ನಮ್ಮದೇ ಶ್ರೇಷ್ಠ...ನಾವು ಪ್ರತ್ಯೇಕ..." ಎಂದು ವಾದಿಸುತ್ತಾ ಜಗತ್ತಿನಾದ್ಯಂತ ಹಲವು ಗುಂಪುಗಳನ್ನಾಗಿ ಏಕೆ ಮಾಡಿಕೊಳ್ಳಲಾಯಿತು ಮತ್ತು ಏಕೆ ಮಾಡಿಕೊಂಡು ಬರಲಾಗುತ್ತಿದೆ!? ಇದನ್ನೆಲ್ಲ ತೊಡೆದುಹಾಕಲು ಇರುವ ಪರಿಹಾರವಾದರೂ ಏನು?
-------------------------------------------------------------------
ಈ ಹಿಂದೆ ಪ್ರಕಟವಾಗಿದ್ದ ಈ ಕೆಳಗಿನ ಭಾಗವನ್ನು ಪುನ: ಇದೇ ವಿಷಯಕ್ಕೆ ಸಂಬಂಧಿಸಿರುವುದರಿಂದ ಪುನ: ಪ್ರಕಟಿಸಲಾಗಿದೆ.
-ಸಂಪಾದಕ
ಮೊನ್ನೆ ನನ್ನ ಮಗ ಸುಬ್ರಹ್ಮಣ್ಯನ ಸ್ನೇಹಿತ ಅನಂತ ನಮ್ಮ ಮನೆಗೆ ಬಂದು " ಅಂಕಲ್, ನಮ್ಮ ಬಂಧುಗಳೊಬ್ಬರು ಸುಧಾರ್ಥಿ ಅಂತಾ ಇದಾರೆ. ಅವರ ಪರಿಚಯ ನಿಮಗೆ ಮಾಡಿಕೊಡಬೇಕು, ಅವರು "ಸಿರಿಭೂವಲಯ" ಅನ್ನೋ ಒಂದು ದೊಡ್ದ ಗ್ರಂಥದ ಬಗ್ಗೆ ೨೫-೩೦ ವರ್ಷಗಳಿಂದ ಸಂಶೋಧನೆ ಮಾಡ್ತಾ ಇದಾರೆ. ಅವರ ಮನೆಗೆ ಹೋಗೋಣ, ಯಾವಾಗ ಫ್ರೀ ಟೈಮ್ ಸಿಗುತ್ತೆ? ಹೇಳಿ "ಅಂದ. ಸರಿ ಮುಂದಿನ ಗುರುವಾರ ಭೇಟಿ ಮಾಡಲು ಫಿಕ್ಸ್ ಆಯ್ತು.ಈಮಧ್ಯೆ ನನ್ನ ಮಿತ್ರರಾದ ಸಾಹಿತ್ಯ ಸಂಶೋಧಕರಾದ ಡಾ|| ಶ್ರೀವತ್ಸ.ಎಸ್.ವಟಿ ಯವರು ನಿನ್ನೆ ಹಾಸನ ಆಕಾಶವಾಣಿಗೆ ರೆಕಾರ್ಡಿಂಗ್ ಗೆ ಬಂದಿದ್ದವರು ನಮ್ಮ ಮನೆಗೆ ಬಂದಿದ್ದರು. ಅವರೊಡನೆ ಅನೌಪಚಾರಿಕ ಮಾತುಕತೆ ನಡೆಸುವಾಗ ಅವರೊಡನೆ "ಸಿರಿಭೂವಲಯ" ದ ಬಗ್ಗೆ ಪ್ರಸ್ಥಾಪಿಸಿದೆ. ಅವರು ಆಗಾಗಲೇ ೪-೫ ವರ್ಷಗಳಲ್ಲೇ ತರಂಗ ಪತ್ರಿಕೆಯಲ್ಲಿ ಈ ಬಗ್ಗೆ ವಿಶೇಷ ಲೇಖನ ಬರೆದಿದ್ದಾರೆ. ಅವರೊಡನೆ ನಡೆದ ಮಾತು ಕತೆ ವೇದಸುಧೆಯ ಅಭಿಮಾನಿಗಳಿಗಾಗಿ ಹಾಕಿರುವೆ. ಗುರುವಾರ ಶ್ರೀ ಸುಧಾರ್ಥಿಯವರೊಡನೆ ನಡೆಯುವ ಮಾತುಕತೆಯನ್ನೂ ಇಲ್ಲಿ ಅಪ್ ಲೋಡ್ ಮಾಡುವೆ. ಈ ಬಗ್ಗೆ ವೇದಸುಧೆಯ ಬಳಗದ ಇನ್ಯಾರಿಗಾದರೂ ಮಾಹಿತಿ ಇದ್ದರೆ ದಯಮಾಡಿ ತಿಳಿಸಿ. ಬಹಳ ಅಪರೂಪವಾದ ಅದ್ಭುತವಾದ ಈ ಗ್ರಂಥದ ಪೀಠಿಕೆಯ ಪರಿಚಯ ಮಾಡುವುದರಲ್ಲೇ ೨೫-೩೦ ವರ್ಷದ ಸಂಶೋಧನೆ ಕಳೆದಿದೆ, ಅಂತಾರೆ, ಶ್ರೀ ವಟಿಯವರು. ಅವರ ಮಾತುಗಳನ್ನೇ ಕೇಳಿ.ತರಂಗ ಪತ್ರಿಕೆಯಲ್ಲಿನ ಅವರ ಬರಹವನ್ನು ತೋರಿಸುತ್ತಾ ವಿವರಣೆ ಕೊಡುತ್ತಿರುವ ಡಾ|| ಶ್ರೀವತ್ಸ.ಎಸ್. ವಟಿ, ಜೊತೆಯಲ್ಲಿ ಹೊಯ್ಸಳ ಟೂರಿಸಮ್ ಪತ್ರಿಕೆಯ ವ್ಯವಸ್ಥಾಪಕರಾದ ಶ್ರೀ ದಾಸೇಗೌಡ.

ಅಂತರ್ಜಾದಲ್ಲೂ ಒಂದಷ್ಟಿದೆ. ನೋಡಿ: http://en.wikipedia.org/wiki/Siribhoovalaya