ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯುಷಿ ಪಂಡಿತ ಸುಧಾಕರ ಚತುರ್ವೇದಿಯವರ ಜನ್ಮದಿನವೂ ಆಗಿರುವುದು ವಿಶೇಷವೇ ಸರಿ. ಈ ರಾಮನವಮಿಗೆ (19-04-2013) 116 ವಸಂತಗಳನ್ನು ಕಂಡು 117ನೆಯ ವರ್ಷಕ್ಕೆ ಕಾಲಿರಿಸಿರುವ ಅವರಿಗೆ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸುತ್ತಾ ಈ ಕೆಲವು ಸಾಲುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
ಪಂಡಿತ ಸುಧಾಕರ ಚತುರ್ವೇದಿಯವರ ಪೂರ್ವಿಕರು ತುಮಕೂರಿನ ಕ್ಯಾತ್ಸಂದ್ರದವರಾದರೂ ಇವರು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿಯೇ. ಶಿಕ್ಷಣ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಶ್ರೀ ಟಿ.ವಿ. ಕೃಷ್ಣರಾವ್ ಮತ್ತು ಶ್ರೀಮತಿ ಲಕ್ಷ್ಮಮ್ಮನವರ ಮಗನಾಗಿ 1897ರ ರಾಮನವಮಿಯಂದು ಬಳೇಪೇಟೆಯಲ್ಲಿದ್ದ ಮನೆಯಲ್ಲಿ ಜನಿಸಿದ ಇವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೂ ಅರ್ಥವಿಲ್ಲದ ಕುರುಡು ಸಂಪ್ರದಾಯಗಳನ್ನು ಒಪ್ಪದಿದ್ದವರು, ಸರಿ ಅನ್ನಿಸಿದ್ದನ್ನು ಮಾತ್ರ ಮಾಡಿದವರು. ನಾನು ಹಾಸನದವನೆಂದು ತಿಳಿದಾಗ, ಪಂಡಿತರು ತಮ್ಮ ತಂದೆ ಹಾಸನದ ಶಿಕ್ಷಣ ಇಲಾಖೆಯಲ್ಲೂ ಕೆಲಸ ನಿರ್ವಹಿಸಿದ್ದು ತಾವು 6-7 ವರ್ಷದವರಾಗಿದ್ದಾಗ -ಅಂದರೆ ಸುಮಾರು 110 ವರ್ಷಗಳ ಹಿಂದೆ- ಹಾಸನದ ದೇವಿಗೆರೆ ಸಮೀಪದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕೆಲವು ಸಮಯ ಇದ್ದೆವೆಂದು ನೆನಪಿಸಿಕೊಂಡಿದ್ದರು. ಅಪ್ಪಟ ಕನ್ನಡಿಗರಾದ ಪಂ. ಸುಧಾಕರ ಚತುರ್ವೇದಿಯವರು ತಮ್ಮ 13ನೆಯ ವಯಸ್ಸಿನಲ್ಲಿಯೇ ಉತ್ತರ ಭಾರತದ ಹರಿದ್ವಾರದ ಹತ್ತಿರದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನಗಳು ಸೇರಿದಂತೆ ವೇದಾಧ್ಯಯನ ಮಾಡಿದವರು. ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರಗಳಿಂದ ಪ್ರಭಾವಿತರಾಗಿದ್ದು, ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದವರು. ನಾಲ್ಕೂ ವೇದಗಳನ್ನು ಅಧ್ಯಯಿಸಿದ ಅವರು ನಿಜ ಅರ್ಥದಲ್ಲಿ ಚತುರ್ವೇದಿಯಾಗಿ, 'ಚತುರ್ವೇದಿ' ಎಂಬ ಸಾರ್ಥಕ ಹೆಸರು ಗಳಿಸಿದವರು. ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡವರು. ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು ಮತ್ತು ಅದಕ್ಕಾಗಿ ಬಂದ ವಿರೋಧಗಳನ್ನು ಎದುರಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು, ಮನುಷ್ಯರೆಲ್ಲಾ ಒಂದೇ ಜಾತಿ, ಬೇಕಾದರೆ ಗಂಡು ಜಾತಿ, ಹೆಣ್ಣುಜಾತಿ ಅನ್ನಬಹುದು ಎಂದವರು. ಸಾಹಿತಿಯಾಗಿಯೂ ಸಹ ಅನೇಕ ಕೃತಿಗಳನ್ನು ಜನಹಿತವನ್ನು ಮನದಲ್ಲಿ ಇಟ್ಟುಕೊಂಡೇ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ರಚಿಸಿದವರು.
ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು ಗಾಂಧೀಜಿಯವರ ಒಡನಾಟ ಹೊಂದಿದವರಾಗಿದ್ದರು. ಪಂಡಿತರು ಇದ್ದ ಗುರುಕುಲಕ್ಕೆ ಗಾಂಧೀಜಿಯವರು ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಇವರು ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದಂತೆ, ಗಾಂಧೀಜಿಯವರೂ ಇವರಿಂದ ಪ್ರಭಾವಿತರಾಗಿದ್ದರು. ಗಾಂಧೀಜಿಯವರ ಹತ್ಯೆಯಾಗುವವರೆಗೂ ಇವರಿಬ್ಬರ ಸ್ನೇಹ ಮುಂದುವರೆದಿತ್ತು. ಕುಪ್ರಸಿದ್ಧ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದ ಅವರು ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತರಾಗಿದ್ದವರ ನೂರಾರು ಶವಗಳ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್ ಸಿಂಗರಿಗೆ ಗುರುವೂ ಆಗಿದ್ದವರು. ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಸ್ವಾಮಿ ಶ್ರದ್ಧಾನಂದರ ಪ್ರೋತ್ಸಾಹ ಕಾರಣವಾದರೂ ವೇದದ 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - 'ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ' ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಪ್ರೇರಿಸಿತ್ತು ಎಂದು ಹೇಳುತ್ತಾರೆ. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆಂಗ್ಲರ ನಡವಳಿಕೆ ಇವರ ಮತ್ತು ಇವರಂತಹ ಸಾವಿರಾರು ಜನರ ಸ್ವಾಭಿಮಾನವನ್ನು ಕೆಣಕಿ ಹೋರಾಟ ಕಾವು ಪಡೆದಿತ್ತು. ಹೋರಾಟ ಕಾಲದಲ್ಲಿ ಕೃಶ ಶರೀರದವರಾದರೂ ಇವರ ಮನೋಬಲ ಮತ್ತು ಛಲದಿಂದಾಗಿ ಅನೇಕ ಪ್ರಾಣಾಂತಿಕ ಪೆಟ್ಟುಗಳನ್ನು ಹಲವಾರು ಬಾರಿ ತಿಂದರೂ ಸಹಿಸಿ ಅರಗಿಸಿಕೊಂಡವರು. ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸತ್ಯಾಗ್ರಹಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದವರು. ಸುಮಾರು 15 ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಭಾರತ-ಪಾಕಿಸ್ತಾನದ ವಿಭಜನೆಯ ಕಾಲದ ಭೀಕರ ಮಾರಣಹೋಮವನ್ನು ಕಂಡ ನೆನಪು ಮಾಸದೆ ಇರುವವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇವರು ನಮ್ಮೊಡನಿರುವ ಜೀವಂತ ಇತಿಹಾಸದ ನೈಜ ಪ್ರತಿನಿಧಿ.
ವೇದ ಇವರ ಉಸಿರಾಗಿದೆ. ಸಾರ್ವಕಾಲಿಕ ಮೌಲ್ಯ ಸಾರುವ ವೇದಗಳ ಸಂದೇಶ ಸಾರುವುದೇ ಅವರ ಜೀವನ ಧ್ಯೇಯವಾಗಿದೆಯೆಂದರೆ ತಪ್ಪಿಲ್ಲ. ವೇದದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಆಚರಣೆಗಳು ಅವೈದಿಕವಾಗಿರುವ ಬಗ್ಗೆ ಅಸಮಾಧಾನಿಯಾಗಿರುವ ಅವರು ಅಂತಹ ಆಚರಣೆಗಳನ್ನು ಖಂಡಿಸಿ ತಿಳುವಳಿಕೆ ನೀಡುವ ಕಾಯಕ ಮುಂದುವರೆಸಿದ್ದಾರೆ. 'ವೇದೋಕ್ತ ಜೀವನ ಪಥ'ವೆಂಬ ಕಿರು ಪುಸ್ತಕದಲ್ಲಿ ಜೀವನದ ಮೌಲ್ಯಗಳು, ಜೀವಾತ್ಮ, ಪರಮಾತ್ಮ, ಪ್ರಕೃತಿಗಳ ಸ್ವರೂಪ, ಮಾನವ ಧರ್ಮ, ಚತುರ್ವರ್ಣಗಳು, ಬ್ರಹ್ಮಚರ್ಯಾದಿ ಚತುರಾಶ್ರಮಗಳು, ದೈನಂದಿನ ಕರ್ಮಗಳು, ಷೋಡಶ ಸಂಸ್ಕಾರಗಳು, ರಾಜನೀತಿ, ಸಾಮಾಜಿಕ ಜೀವನ, ಚತುರ್ವಿಧ ಪುರುಷಾರ್ಥಗಳನ್ನು ವೇದದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದು, ಅದರಂತೆ ನಡೆದದ್ದೇ ಆದಲ್ಲಿ ಜೀವನ ಸಾರ್ಥಕವಾಗುವುದು. 'ಅರವತ್ತಕ್ಕೆ ಅರಳು-ಮರಳು' ಎಂಬ ಪ್ರಚಲಿತ ಗಾದೆ ಮಾತಿಗೆ ವಿರುದ್ಧವಾಗಿ ಇಂದಿಗೂ 117 ವರ್ಷಗಳ ಪಂಡಿತರ ವೈಚಾರಿಕ ಪ್ರಖರತೆಯ ಹೊಳಪು ಮಾಸಿಲ್ಲ, ನೆನಪು ಕುಂದಿಲ್ಲ. ಇವರ ಜೀವನೋತ್ಸಾಹ ಬತ್ತದ ಚಿಲುಮೆಯಾಗಿದ್ದು ದೇಹ, ಮನಸ್ಸು, ಬುದ್ಧಿಗಳನ್ನು ಹಿಡಿತದಲ್ಲಿಟ್ಟುಕೊಂಡಿರುವುದೇ ಇದಕ್ಕೆ ಕಾರಣವಿರಬಹುದು. ಪ್ರಶಸ್ತಿ, ಸನ್ಮಾನಗಳಿಗಾಗಿ ಲಾಬಿ ನಡೆಸುವವರೇ ತುಂಬಿರುವ, ಅದಕ್ಕಾಗಿ ತಮ್ಮತನವನ್ನೇ ಮಾರಿಕೊಳ್ಳುವವರಿರುವ ಈ ದೇಶದಲ್ಲಿ ಪ್ರಚಾರದಿಂದ ದೂರವಿರುವ ಇವರು ನಿಜವಾದ ಭಾರತರತ್ನರೆಂದರೆ ತಪ್ಪಿಲ್ಲ. ಕಳೆದ ವರ್ಷದ ಕನ್ನಡ ರಾಜ್ಯೋತ್ಸವದಂದು ರಾಜ್ಯಸರ್ಕಾರ ಇವರನ್ನು ರಾಜ್ಯಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹವರು ನಮ್ಮೊಡನೆ ಇರುವುದೇ ನಮ್ಮ ಸೌಭಾಗ್ಯ, ಪುಣ್ಯವೆನ್ನಬೇಕು. ಬೆಂಗಳೂರಿನ ಜಯನಗರದ 5ನೆಯ ಬ್ಲಾಕಿನ ಶ್ರೀ ಕೃಷ್ಣಸೇವಾಶ್ರಮ ರಸ್ತ್ರೆಯ ಮನೆ ನಂ. 286/ಸಿಯಲ್ಲಿ ವಾಸವಿರುವ ಇವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ 5.30ಕ್ಕೆ ಸರಿಯಾಗಿ ಸತ್ಸಂಗ ನಡೆಯುತ್ತಿದ್ದು, ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಎಲ್ಲವನ್ನೂ ಆಲೋಚಿಸಿ, ವಿಮರ್ಶಿಸಿಯೇ ಒಪ್ಪಬೇಕೆಂಬುದೇ ಅವರ ಆಗ್ರಹ.
ವೇದದ ಬೆಳಕಿನಲ್ಲಿ ಸತ್ಯ ವಿಚಾರಗಳನ್ನು ಪ್ರಸರಿಸುವ ಧ್ಯೇಯದಲ್ಲಿ ಅವಿರತ ತೊಡಗಿರುವ ಮಹಾನ್ ವ್ಯಕ್ತಿಯ ಮಾರ್ಗದರ್ಶನ ಹೀಗೆಯೇ ಮುಂದುವರೆಯುತ್ತಿರಲಿ ಎಂದು ಪ್ರಾರ್ಥಿಸೋಣ. ಕರ್ಮಯೋಗಿ ಸಾಧಕರಿಗೆ ಸಾಷ್ಟಾಂಗ ಪ್ರಣಾಮಗಳು.
-ಕ.ವೆಂ.ನಾಗರಾಜ್.
ಪೂಜ್ಯ ಪಂಡಿತ್ ಸುಧಾಕರಚತುರ್ವೇದಿಗಳನ್ನು ಕಾಣಲು ಅಮೆರಿಕಾದಿಂದ ಬಂದಿದ್ದ ಡಾ.ಜೆಸ್ಸೀ ಯವರೊಡನೆ -ಪಂಡಿತ್ ಜಿ ಮನೆಯಲ್ಲಿ.
ಈ ವಯಸ್ಸಿನಲ್ಲಿ ಪಂಡಿತರ ಅಸಾಧಾರಣ ಸ್ಮರಣ ಶಕ್ತಿ, ಆರೋಗ್ಯ, ಛಲ, ವೇದಪ್ರಸಾರದಲ್ಲಿ ಅವರ ಶ್ರದ್ಧೆ ಎಲ್ಲರಿಗೂ ಮಾದರಿ.ಅವರೊಂದು ಹಿಮಾಲಯ ಪರ್ವತವಿದ್ದಂತೆ. ಹಿಮಾಲಯದ ಹತ್ತಿರ ನಾವೇ ಹೋಗಬೇಕಲ್ಲವೇ?
-ಹರಿಹರಪುರಶ್ರೀಧರ್
ಪೂಜ್ಯ ಪಂಡಿತ್ ಸುಧಾಕರಚತುರ್ವೇದಿಗಳನ್ನು ಕಾಣಲು ಅಮೆರಿಕಾದಿಂದ ಬಂದಿದ್ದ ಡಾ.ಜೆಸ್ಸೀ ಯವರೊಡನೆ -ಪಂಡಿತ್ ಜಿ ಮನೆಯಲ್ಲಿ.
ಈ ವಯಸ್ಸಿನಲ್ಲಿ ಪಂಡಿತರ ಅಸಾಧಾರಣ ಸ್ಮರಣ ಶಕ್ತಿ, ಆರೋಗ್ಯ, ಛಲ, ವೇದಪ್ರಸಾರದಲ್ಲಿ ಅವರ ಶ್ರದ್ಧೆ ಎಲ್ಲರಿಗೂ ಮಾದರಿ.ಅವರೊಂದು ಹಿಮಾಲಯ ಪರ್ವತವಿದ್ದಂತೆ. ಹಿಮಾಲಯದ ಹತ್ತಿರ ನಾವೇ ಹೋಗಬೇಕಲ್ಲವೇ?
-ಹರಿಹರಪುರಶ್ರೀಧರ್