Pages

Tuesday, February 21, 2012

ಮಂಕು ತಿಮ್ಮನ ಕಗ್ಗ - ರಸಧಾರೆ (೬)











ಏನು ಜೀವನದರ್ಥ?


   ಒಗಟೆಯೇನೀ ಸೃಷ್ಟಿ? ಬಾಳಿನರ್ಥವೇನು ?

   ಬಗೆದು ಬಿಡಿಸುವರಾರು ಸೋಜಿಗವನಿದನು ?
   ಜಗವ ನಿರವಿಸಿದ ಕೈಯೊಂದಾದೊಡೇಕಿಂತು
   ಬಗೆ ಬಗೆಯ ಜೀವಗತಿ ? - ಮಂಕುತಿಮ್ಮ



ಒಗಟೆಯೇನೀ (ಒಗಟೇ+ ಏನು+ ಈ) ಸೃಷ್ಟಿ? ಬಾಳಿನ ಅರ್ಥವೇನು. ಬಗೆ ಬಿಡಿಸುವವರು ಯಾರು ಸೋಜಿಗವ ಇದನು.

ಜಗವ ನಿರವಿಸಿದ ( ನಿರ್ಮಿಸಿದ) ಕೈ ಒಂದು ಆಡೋದೇ ( ಆದರೆ ) ಏಕೆ ಇಂತು( ಹೀಗೆ)  ಬಗೆ ಬಗೆಯ ಜೀವಗತಿ - ಮಂಕುತಿಮ್ಮ.



ಈ ಸೃಷ್ಟಿಯು ಒಗಟೇ? ಈ ಬಾಳಿಗೆ ಅರ್ಥವೇನು ?. ಆದರೆ ಈ ಒಗಟನ್ನು ಬಿಡಿಸುವವರು ಯಾರು. ಈ ಜಗತ್ತನ್ನು ಸೃಷ್ಟಿಮಾಡಿದ ಕೈ ಒಂದೇ ಆದರೆ , ಸೃಷ್ಟಿಯಲ್ಲಿ ಸಮಾನತೆಯೇಕಿಲ್ಲ  ?

ಬೇರೆ ಬೇರೆಯಾದ ಜೀವಗತಿ ಏಕೆ? ಎನ್ನುವ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳುವ ರೀತಿಯಲ್ಲಿ ಶ್ರೀ ಗುಂಡಪ್ಪನವರು, ನಮ್ಮೆಲ್ಲರ ಮುಂದೆ ಈ ಕಗ್ಗದ ರೂಪದಲ್ಲಿ ಇಟ್ಟಿದ್ದಾರೆ.



ಎಲ್ಲ ಜೀವಿಗಳಲ್ಲೂ  ಇರುವ ಆ ಚೇತನವು ಜ್ಞಾನ ಸ್ವರೂಪ. ಆದರೆ ಕೆಲವರು ಜ್ಞಾನಿಗಳು ಮತ್ತೆ ಕೆಲವರು ಏಕಿಲ್ಲ ಎಂದರೆ, ಕೆಲವರ ಕನ್ನಡಿ ಒರೆಸಿ ಶುದ್ಧವಾಗಿದೆ.

ಕೆಲವರ ಕನ್ನಡಿಯ ಮೇಲೆ ಧೂಳು ಕೂತಿದೆ. ದೂಳನ್ನು ಒರೆಸಿದರೆ ಅದೂ ಸಹ ಪ್ರಕಾಶಿಸುತ್ತಾ, ಶುದ್ಧ ಬಿಂಬವನ್ನು ಪ್ರತಿಫಲಿಸುತ್ತದೆ.



ಆದರೂ ಏನಿದು  ಪ್ರಪಂಚ ಎಂಬ ಪ್ರಶ್ನೆ  ಮತ್ತು ಅರ್ಥವೇ ಆಗುವುದಿಲ್ಲವಲ್ಲ ಅಥವಾ ನಮಗೆ ಅರ್ಥವಾಗಿರುವುದು ಪೂರ್ಣವಲ್ಲ ಎಂಬ ಭಾವ ಎಲ್ಲರಿಗೂ ಬರುತ್ತದೆ. ಇದು ಅರ್ಥವಾಗದ ಗಂಟಾದರೆ ಯಾರಾದರೂ  ಬಿಡಿಸಬಹುದಲ್ಲ ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ.

ಈ ಜಗತ್ತನ್ನು ನಿರ್ಮಿಸದ ಅಥವಾ ಸೃಷ್ಟಿಸಿದ "ಕೈ"  ಒಂದೇ  ಎಂದಾದರೆ, ವಿಧವಿದವಾದ ಅಸಮತೆಯಿಂದ ಏಕೆ ಕೂಡಿದೆ ಎನ್ನುವ ಸಂದೇಹ, ಪ್ರಶ್ನೆ ವಿಚಾರವಂತರಾದ ಎಲ್ಲರ ಮನಸ್ಸಲ್ಲೂ ಉದ್ಭವವಾಗುತ್ತದೆ ಅಲ್ಲವೇ, ಹಾಗೆಯೆ ಇದೆ ಈ ಕಗ್ಗದ ಭಾವ.



ನಾ ಹಿಂದೆಯೇ ಹೇಳಿದಂತೆ, ಈ ಜಗತ್ತಿನ ಗುಟ್ಟನ್ನು ಚೇಧಿಸಲು ಈ ವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ. ಪ್ರಯತ್ನಪಟ್ಟವರಿಗೆಲ್ಲ  ಒಂದೊಂದು  ರೂಪದಲ್ಲಿ ಕಾಣುವ ಈ ಜಗತ್ತಿನ ನಿಜ ರೂಪ ಕಂಡುಕೊಳ್ಳುವಲ್ಲಿ ಯಾರೂ ಪೂರ್ಣ ಸಫಲರಲ್ಲ. ಹಾಗೆಯೇ ಈ ಜಗತ್ತಿನ ಎಲ್ಲ ಜೀವರಾಶಿಗಳಲ್ಲೂ ಹೇರಳವಾದ ವೈವಿಧ್ಯತೆ. ಒಬ್ಬ ಮನುಷ್ಯನಿದ್ದಂತೆ ಇನ್ನೊಬ್ಬನಿಲ್ಲ. ಒಬ್ಬನ ಮನಸ್ಸು ಬುಧ್ಧಿಗಳಿದ್ದಂತೆ  ಮತ್ತೊಬ್ಬರದ್ದಿಲ್ಲ. ಅವರವರ  ಜೀವನ ಅವರವರದ್ದು. ಅವರವರ ಭಾಗ್ಯ ಅವರವರದ್ದು. ಒಬ್ಬರ ನೋವು ಮತ್ತು ಆ ನೋವಿಗೆ ಕಾರಣ ಮತ್ತೊಬ್ಬರ ನೋವು ಮತ್ತು ಅದರ ಕಾರಣದಂತಿಲ್ಲ.



ಒಬ್ಬರ ಸುಖ ಮತ್ತದರ ಕಾರಣ ಇನ್ನೊಬ್ಬರಿಗಿಲ್ಲ. ಒಬ್ಬನ ಸುಖದ ಕಾರಣವು ಮತ್ತೊಬ್ಬರ ದುಃಖಕ್ಕೆ ಕಾರಣವಾಗಬಹುದು.ಇದರ ಗುಟ್ಟನ್ನು ಬಿಡಿಸುವವರಾರು? ಈ ಎಲ್ಲವೂ ಮಾನವನಿಗಷ್ಟೆ ಅಲ್ಲ ಸಕಲ ಪ್ರಾಣಿಗಳಿಗೂ ಅನ್ವಯಿಸಿದ್ದತೆ. ನಮ್ಮ ಮನೆಯ ಬೀದಿಯಲ್ಲಿ ಒಂದು ಮುದಿ ನಾಯಿ ಹೊತ್ತು ಹೊತ್ತಿನ ಊಟಕ್ಕೆ ಹೋರಾಡುವಾಗ, ಹಾಕಿದ್ದ ಯಾವುದನ್ನೂ ತಿನ್ನಲಾಗದೆ ಮುದಿತನ, ಸಾವು, ಬದುಕಗಳ ಮಧ್ಯದಲ್ಲಿನರಳುವಾಗ ,  ಅಥವಾ ಬಹಳ ದಿನಗಳಿಂದ ಬೆಳೆದು ಹೆಮ್ಮರವಾಗಿ ಎಲ್ಲರಿಗೂ ನೆರಳನ್ನೂ ಪ್ರಾಣಿ  ಪಕ್ಷಿಗಳಿಗೆ ಆಹಾರವನ್ನೂ ಆಶ್ರಯವನ್ನೂ ನೀಡಿದ ಒಂದು ಮರವನ್ನು ಯಾವುದೋ ಕಾರಣಕ್ಕೆ ಕಡಿದಾಗಲೂ ಹೇ! ಪರಮಾತ್ಮ ಏನಿದು ಈ ಜೇವಿಯ ಅವಸ್ಥೆ ಎಂದು ನನ್ನ ಮನಸ್ಸು ಕರಗುತ್ತದೆ.ಆದರೆ ಅದರ ಅವಸ್ಥೆಗೆ ಉತ್ತರ ಖಂಡಿತ ನನಗೆ ಸಿಗುವುದಿಲ್ಲ. ಇದು ಎಲ್ಲ ಪ್ರಾಣಿಗಳ ಪರಿಸ್ತಿತಿ.



ಅಷ್ಟೇ ಅಲ್ಲ ಇಂದು ಸುಖ ನಾಳೆ ದುಖ, ಇಂದು ಆರೋಗ್ಯ ನಾಳೆ ಅನಾರೋಗ್ಯ, ಇಂದು ಮಿತ್ರ ನಾಳೆ ಶತ್ರು, ಇಂದು ಸಂತೋಷ ನಾಳೆ ಬೇಸರ ಹೀಗೆ ಇಂದು ನಾಳೆಗಳಲ್ಲಿ ಮತ್ತು ದಿನದಿನಕ್ಕೆ ಬೇರೆಬೇರೆಯೇ ಭಾವಗಳು ಈ ರೀತಿಯ ವೈವಿಧ್ಯಕ್ಕೆ ಕಾರಣರಾರು ಅಥವಾ ಕಾರಣವೇನು? ನಾವೆಷ್ಟು ಕಾರಣ?  ಪರರೆಷ್ಟು ಕಾರಣ? ವಿಧಿಯೆಷ್ಟು ಕಾರಣ?  ವಿಧಾತನೆಷ್ಟು ಕಾರಣ? ಹೇಗೆ ಹತ್ತು ಹಲವಾರು ಪ್ರಶ್ನೆಗಳ ಭಾವವೇ ಈ ಆರನೆಯ ಕಗ್ಗ. ಈ ಕಗ್ಗದಲ್ಲಿ ಬರುವ ಸೂಕ್ತ ಪ್ರಶ್ನೆಗಳು ನಮ್ಮ ನಿಮ್ಮಲ್ಲಿಯೂ ಸಹ ಎಂದಾದರೂ ಉದ್ಭವಿಸಿರಬಹುದು ಉತ್ತರ ಸಿಕ್ಕಿಲ್ಲ ದಿರಬಹುದು

ಮಿತ್ರರೇ  ಬನ್ನಿ ನಾವು ನೀವು ಎಲ್ಲರೂ ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು , ವಿಚಾರ ಮಾಡುವ, ವಿಚಾರ ಮಾಡುತ್ತಾ ಮಾಡುತ್ತಾ ಮುಂದಿನ ಕಗ್ಗಕ್ಕೆ ಹೋಗುವ.

ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.