Pages

Monday, October 12, 2015

ವೈದಿಕ ಧರ್ಮಾಭಿಮಾನೀ ಮಿತ್ರರೇ, ನಿಮ್ಮಲ್ಲೊಂದು ಮನವಿ.

ವೈದಿಕ ಧರ್ಮಾಭಿಮಾನೀ  ಮಿತ್ರರೇ,
ನಿಮ್ಮಲ್ಲೊಂದು ಮನವಿ.
ವೈದಿಕ ಧರ್ಮವು ನಿಂತ ನೀರಲ್ಲ. ಅದು ಗಂಗೆ. ಯಾವಾಗಲೂ ಹರಿಯುತ್ತಿದ್ದು ಅದರ ಸಂಪರ್ಕಕ್ಕೆ ಬಂದದ್ದನ್ನೆಲ್ಲಾ ಪಾವನ ಗೊಳಿಸುತ್ತಾ ತನ್ನನ್ನೂ ಕಾಲಕಾಲಕ್ಕೆ ಪವಿತ್ರಗೊಳಿಸಿಕೊಳ್ಳುತ್ತಾ ಸದಾಕಾಲ ಜಗತ್ತಿಗೆ ಹಿತವನ್ನುಂಟುಮಾಡುವುದೇ ವೈದಿಕ ಧರ್ಮದ ವೈಶಿಷ್ಠ್ಯ.
ವೇದವೇ ನಮಗೆ ಆಧಾರ. ಆದರೆ ವೇದಕ್ಕೆ ವಿರುದ್ಧವಾದ ಹಲವು ಆಚರಣೆಗಳೂ ಸಹ ಕಾಲಗತಿಯಲ್ಲಿ ರೂಢಿಯಲ್ಲಿ  ಸೇರಿಹೋಗಿರುವುದು ಸುಳ್ಳಲ್ಲ. ಅವುಗಳಲ್ಲಿ ಕೆಲವು ಯಾರಿಗೂ ಹಾನಿಮಾಡದೆ ಆಚರಿಸುವವನಿಗೆ ನೆಮ್ಮದಿ ಕೊಟ್ಟಿದ್ದರೆ  ಇನ್ನು ಕೆಲವು ಮಾನವೀಯತೆಗೇ ಕೊಡಲಿ ಪೆಟ್ಟು ಕೊಡುವಂತಹ ಆಚರಣೆಗಳು !
ಉದಾಹರಣೆಗೆ ವಿಗ್ರಹಾರಾಧನೆ. ಎಲ್ಲಿಯವರಗೆ ಇದು ವ್ಯಕ್ತಿಯ ನಿತ್ಯಬದುಕಿನಲ್ಲಿ ಮನಸ್ಸಿನ ನೆಮ್ಮದಿಗೆ ಅಗತ್ಯವೆನಿಸಿ ಆಚರಿಸಲ್ಪಡುತ್ತದೋ ಅಲ್ಲಿಯ ವರಗೆ ಈ ಬಗ್ಗೆ ಚರ್ಚೆ ಅನಗತ್ಯ. ಯಾವಾಗ ದೇವಾಲಯಗಳಲ್ಲಿ ವ್ಯಾಪಾರೀ ಮನೋಭಾವವಾಗಿ ಮಾರ್ಪಡುತ್ತದೋ ಆಗ ಅದು ಚರ್ಚೆಯ ವಿಷಯವಾಗುತ್ತದೆ. ಅಲ್ಲದೆ  ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ  ಕೆಲವರಿಗೆ ದೇವಾಲಯ ಪ್ರವೇಷವನ್ನೇ ನಿರ್ಬಂಧಿಸುವ ಪದ್ದತಿಯು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ಕಾರಣ ವಾಗುತ್ತದೆ

ಮೇಲು-ಕೀಳು ಭಾವನೆ :
 ಎಲ್ಲರನ್ನೂ ಸಮಾನವಾಗಿ ಕಾಣುವ ಹಲವು ವೇದ ಮಂತ್ರಗಳಿದ್ದರೂ ಸಮಾಜದಲ್ಲಿ ಮೇಲು-ಕೀಳು ಭಾವನೆ ಪೂರ್ಣವಾಗಿ ಮಾಯವಾಗಿಲ್ಲ.

ವ್ರತ-ಕತೆಗಳು :

ಹಿಂದಿನಿಂದ ನಡೆದುಬಂದಿರುವ ಕೆಲವು ವ್ರತಕತೆಗಳಿವೆ. ಉದಾಹರಣೆಗೆ ವರಮಹಾಲಕ್ಷ್ಮೀ ವ್ರತ, ಗೌರಿ-ಗಣೇಶ ವ್ರತ, ಅನಂತ ಪದ್ಮನಾಭವ್ರತ. ಇವುಗಳನ್ನು ಕೆಲವರು ತಲೆತಲಾಂತರದಿಂದ ಆಚರಿಸಿಕೊಂಡು ಬಂದಿದ್ದಾರೆ. ಅದು ಅವರ ನಂಬಿಕೆ. ಆದರೆ ಇತ್ತೀಚೆಗೆ ಸಂಕಷ್ಟಹರ ಗಣಪತಿ ವ್ರತದಂತಾ ಕೆಲವು ಸಾಮೂಹಿಕ ವ್ರತಗಳು ಆರಂಭವಾಗಿವೆ. ಇವು ಸಹ ಚರ್ಚೆ ಮಾಡಲು ಅರ್ಹವಾಗಿವೆ

ಮಡೆಉರುಳು :
ಇಂತಾ ಅವೈದಿಕ ಆಚರಣೆಯ ಬಗ್ಗೆ ಚರಿಚಿಸಬಾರದೇ?

ಇವಲ್ಲದೆ ಮನುಷ್ಯ-ಮನುಷ್ಯನಲ್ಲಿ ಭೇದಮಾಡುವ ಹಲವು ಆಚರಣೆಗಳು ಇನ್ನೂ ಜೀವಂತವಾಗಿವೆ. ಈ ಬಗ್ಗೆ ಆರೋಗ್ಯಕರವಾದ ಚರ್ಚೆಯಾಗಬಾರದೇ?

ಸಮಾಜದ ಎಲ್ಲಾ ಸಮಸ್ಯೆಗಳಿಗೂ ವೇದವಿರೋಧಿಗಳದ್ದು ಒಂದೇ ಪ್ರಹಾರ " ವೇದವೇ ಶೋಷಣೆಗೆ ಮೂಲ"

ಹೀಗೆ ಹೇಳುವಾಗ ಅವರಿಗೆ ವೇದದ ಸರಿಯಾದ ಅರಿವಿಲ್ಲವೆಂಬುದು ಸತ್ಯವಾದರೂ  ವೇದದ ಹೆಸರಿನಲ್ಲಿ ನಡೆದಿರುವ ಅವೈದಿಕ ಆಚರಣೆಗಳೇ ಅವರಿಗೆ ಆಹಾರವಾಗಿರುವ ಪರಮ ಸತ್ಯ.  ವೇದಕ್ಕೆ ವಿರುದ್ಧವಾಗಿ ಮಾನವೀಯತೆಗೆ ಧಕ್ಕೆ ತರುವ ಆಚರಣೆಗಳನ್ನು "ಮೌಢ್ಯ" ಎಂದರೆ ತಪ್ಪಾಗಲಾರದು. ಇಂತಹ ಮೌಢ್ಯಗಳನ್ನು ವೇದಾಭಿಮಾನಿಗಳೇ ವಿರೋಧಿಸಿ ಶುದ್ಧ ವೈದಿಕಾಚರಣೆಗಳನ್ನು ರೂಢಿಗೆ ತಂದರೆ ವೇದ ವಿರೋಧಿಗಳಿಗೆ ವಿರೋಧಿಸಲು ವಿಷಯವೇ ಸಿಗಲಾರದು, ಜೊತೆಗೆ ಸಮಾಜದಲ್ಲಿ ಸಮರಸದಿಂದ , ನೆಮ್ಮದಿಯಾಗಿ ಬಾಳಲು ದಾರಿ ತೆರೆದುಕೊಳ್ಳುತ್ತದೆ.
ಈ ದಾರಿಯಲ್ಲಿ ಚರ್ಚೆ ಮಾಡಲು ಬರುವಿರಾ?

ಈ ಸಂಧಿಕಾಲದಲ್ಲಿ ನಾವಿಂತಾ ಚರ್ಚೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಇನ್ನೂ ದೊಡ್ದ ಪೆಟ್ಟು ಬೀಳಬಹುದು.
ಹೀಗೆ ಸಾಮಾಜಿಕ ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ "ಚಿಂತನ-ಮಂಥನ " ನಡೆಸಬೇಕೆಂಬ ಇಚ್ಛೆ ನನ್ನದು. ಹತ್ತಾರುಜನರ ಸಹಮತ ಸಿಕ್ಕರೆ ಅದಕ್ಕೆ ಸರಿಯಾದ ರೂಪು ರೇಶ ಕೊಟ್ಟು, ಅದಕ್ಕೊಂದು ಸ್ಥಳ, ದಿನ ಎಲ್ಲವನ್ನೂ ಅಂತಿಮಗೊಳಿಸಿದರಾಯ್ತು.

ನಾಲ್ಕೈದು ಗಂಟೆಗಳ ಕಾರ್ಯಕ್ರಮವಾದರೂ ಆಗಬೇಕು. ಅದನ್ನು ಯಾವ ಬ್ಯಾನರ್ ನಲ್ಲಿ ಮಾಡ ಬೇಕೆಂಬುದನ್ನು ಮುಂದೆ ತೀರ್ಮಾನಿಸಬಹುದು. ಇಂದಿನ ಸಮಾಜಕ್ಕೆ ಒಪ್ಪುವಂತೆ ಮಾರ್ಗದರ್ಶನ ಮಾಡಲು ಯಾರನ್ನಾದರೂ ಸ್ವಾಮೀಜಿಯವರನ್ನೋ, ಸಾಮಾಜಿಕ ಚಿಂತಕರನ್ನೋ ಮಾರ್ಗದರ್ಶನಕ್ಕೆ ಕರೆಸಬಹುದು

  ಹಾಸನದಲ್ಲಿ ಮಾಡಲು ಒಮ್ಮತ ದೊರೆತರೆ        ನೂರು  ಜನ ಅಭಿಮಾನಿಗಳು ಪಾಲ್ಗೊಂಡ ರೂ ಅವರಿಗೆ ಉಚಿತ    ಊಟೋಪಚಾರದ ಭಾಗ ನನಗಿರಲಿ.ಬೆಂಗಳೂರಿನಲ್ಲೂ  ಆಗಬಹುದು. ಅಲ್ಲಿ ಮಾಡಿದರೂ ವ್ಯವಸ್ಥೆಗೆ ನನ್ನ ಪ್ರಯತ್ನ ಇದ್ದೇ ಇರುತ್ತೆ.
ನಿಮ್ಮ ಅಭಿಪ್ರಾಯ ತಿಳಿಸುವಿರಾ?