Pages

Sunday, November 7, 2010

ವೇದಗಳು ಅಪೌರುಷೇಯವೇ?: ಒಂದು ಜಿಜ್ಞಾಸೆ

                    


ನನ್ನ ಪತ್ನಿಯು ಅವರಮ್ಮನ ಮನೆಗೆ ಹೋಗಿ ದೀಪಾವಳಿ ಹಬ್ಬ ಆಚರಿಸುತ್ತಿದ್ದರೆ ನಮ್ಮ ಮನೆಯಲ್ಲಿ ಮಿತ್ರರುಗಳಾದ ಕವಿ ನಾಗರಾಜ್,ಪತ್ರಕರ್ತರಾದ ಶ್ರೀ ಪ್ರಭಾಕರ್, ಸಂಘದ ಕಾರ್ಯಕರ್ತರಾದ ಶ್ರೀ ಹೊ.ಸು.ರಮೇಶ್-ಇವರುಗಳೊಡನೆ ಒಂದು ಚಿಂತನ-ಮಂಥನ ನಡೆದಿತ್ತು.ಅದೊಂದು ಅನೌಪಚಾರಿಕ ಮಾತುಕತೆ.  ವೇದದ ಬಗ್ಗೆ ಅತ್ಯಂತ ಶ್ರದ್ಧೆಯನ್ನು ಹೊಂದಿರುವ ಎಲ್ಲರಲ್ಲೂ ಒಂದು ಪ್ರಶ್ನೆ ಕಾಡಿತ್ತು. ವೇದವು  ಅಪೌರುಷೇಯ ಹೇಗೆ? ಒಂದೆರಡು ಗಂಟೆಗಳ ಕಾಲ ನಮ್ಮ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ನಂತರ ಇಲ್ಲಿ ನಡೆದ ಅನೌಪಚಾರಿಕ ಚರ್ಚೆಯನ್ನು ವೇದಸುಧೆಯಲ್ಲಿ ಪ್ರಕಟಿಸಿ ಶ್ರೀ ಸುಧಾಕರ ಶರ್ಮರ ಉತ್ತರ ಪಡೆಯಲು ನಿರ್ಧರಿಸಿದೆವು. ವೇದಸುಧೆಯ ಅಭಿಮಾನಿಗಳೇ, ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಿ, ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.
ಶ್ರೀ ಸುಧಾಕರ ಶರ್ಮರಲ್ಲಿ ಮನವಿ:
ಇಲ್ಲಿ ನಾವು ಹಂಚಿಕೊಂಡಿರುವ ಅಂಶಗಳು ವೇದವನ್ನು ತಿಳಿಯದ ಅತಿಸಾಮಾನ್ಯ ವ್ಯಕ್ತಿಗಳಿಂದ, ಆದರೆ ವೇದಗಳ ಬಗ್ಗೆ ಅತ್ಯಂತ ಗೌರವ ಹೊಂದಿರುವ ಮತ್ತು ಜಗತ್ತಿನ ಅಮೂಲ್ಯ ರತ್ನವೆಂಬ ಭಾವನೆ ಇರುವಂತವರಿಂದ ಎಂಬುದನ್ನು ಗಮನಿಸಿ ನಮಗೆ ಅರ್ಥವಾಗುವಂತೆ ಸರಳವಾಗಿ ಸಮಾಧಾನದ ವಿವರಣೆ ಕೊಡಲು ಅತ್ಯಂತ ವಿನಯಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇವೆ.
-ಹರಿಹರಪುರಶ್ರೀಧರ್
-------------------------------------

ಮೊದಲಿಗೆ ಶ್ರೀ ಪ್ರಭಾಕರ್ ಅವರ ವಿಚಾರಗಳನ್ನು ನೋಡೋಣ.

------------------------------------
ಚತುರ್ವೇದಗಳ ಕುರಿತು ನನಗಿದ್ದ ಅತ್ಯಲ್ಪ ಅರಿವು ವಿಸ್ತೃತವಾಗಲು ಮಾನ್ಯ ಸುಧಾಕರ ಶರ್ಮರ ಉಪನ್ಯಾಸಗಳು ಹಾಗೂ ಮೊದಲ ಬಾರಿಗೆ ಅವರನ್ನು ಪರಿಚಯಿಸಿಕೊಟ್ಟ ಮಿತ್ರರೂ ಹಾಗೂ ಹಿತೈಷಿಗಳೂ ಆದ ಹರಿಹರ ಪುರ ಶ್ರೀಧರ್ ಅವರುಗಳೇ ಕಾರಣ. ಮೊದಲು ಇವರಿಬ್ಬರಿಗೆ ನನ್ನ ಧನ್ಯವಾದಗಳು.

ವೇದಗಳು ಅಪೌರುಷೇಯ ಎಂಬ ಮಾತನ್ನು ಆಗಾಗ ಕೇಳುತ್ತಿರುತ್ತೇವೆ. ವೇದಗಳ ಬಗ್ಗೆ ನನಗೆ ಅಪಾರ ಗೌರವ ಹಾಗೂ ಶ್ರದ್ಧೆ ಇದೆ. ಏಕೆಂದರೆ ಅವು ನಿತ್ಯ ಸತ್ಯಗಳು ಹಾಗೂ ಅಹಿಂಸೆಯನ್ನು ಬೋಧಿಸುತ್ತವೆ. ಅವುಗಳ ಬೋಧನೆ ಅನುಸರಿಸುವ ಜೀವಾತ್ಮಗಳು ಮುಕ್ತಿ ಪಡೆಯುವುದು ಖಚಿತ. ಹೀಗಾಗಿ ಅವುಗಳನ್ನು ಮನುಕುಲಕ್ಕೆ ನೀಡಿದ ಆ``ಮಹಾಪುರುಷ''ರಿಗೆ ನನ್ನ ಅನಂತಾನಂತ ಪ್ರಣಾಮಗಳು.
ನನ್ನ ಪ್ರಶ್ನೆ ಇಷ್ಟೆ: ಎಲ್ಲವೂ ಸರಿಯೇ; ಆದರೆ ವೇದಗಳು ಎಷ್ಟೇ ಪ್ರಾಚೀನವಾಗಿದ್ದರೂ ಅವು ಅಪೌರುಷೇಯ ಹೇಗೆ? ಸುಧಾಕರ ಶರ್ಮರೂ ಸೇರಿದಂತೆ ವೇದಾಧ್ಯಯಿಗಳೆಲ್ಲರೂ ಹೇಳುವ ಪ್ರಕಾರ, ಮನುಕುಲದ ಸಂವಿಧಾನವೆನಿಸಿದ ವೇದಗಳನ್ನು `ಯೂಸರ್ ಮ್ಯಾನ್ಯುಯೆಲ್ ' ರೀತಿಯಲ್ಲಿ ಆ ಪರಮಾತ್ಮನೇ ಈ ಸೃಷ್ಟಿಯ ಜತೆಗೇ ನೀಡಿದ್ದಾನೆ!

ವೇದಗಳು ಹಾಗೂ ಪರಮಾತ್ಮ- ಇವೆರಡನ್ನೂ ನಂಬುವ ನಮ್ಮಂಥವರಿಗೇ ಜಿಜ್ಞಾಸೆ ಕಾಡುತ್ತದೆ ಎಂದ ಮೇಲೆ, ಇವೆರಡನ್ನೂ ತಿರಸ್ಕರಿಸುವ ಮಟ್ಟದಲ್ಲಿರುವ ಇಂದಿನ ಆಧುನಿಕ ಪೀಳಿಗೆ ಅಷ್ಟು ಸುಲಭವಾಗಿ ಹಾಗೂ ಸಹಜವಾಗಿ ಈ ಸಮಾಧಾನವನ್ನು ನಂಬುವುದಿಲ್ಲ. ಅಂದ ಮೇಲೆ ಈ ಪ್ರಶ್ನೆ ಹಾಗೂ ಸಮಾಧಾನಕ್ಕೆ ಇನ್ನಷ್ಟು ಸಮರ್ಥನೆ ಅಗತ್ಯ ಎನಿಸಿದೆ.
ನನಗೂ ಈ ಅನುಮಾನ ಪರಿಹಾರವಾಗಿರಲಿಲ್ಲ. ಹೀಗಾಗಿ ಇತ್ತೀಚೆಗೆ ಹಾಸನಕ್ಕೆ ಭೇಟಿ ನೀಡಿ ಉಪನ್ಯಾಸ ನೀಡುತ್ತಿದ್ದ ಸಂದರ್ಭದಲ್ಲಿ ಸನ್ಮಾನ್ಯ ಸುಧಾಕರ ಶರ್ಮರನ್ನು ಈ ಕುರಿತು ಪ್ರಶ್ನಿಸಿದಾಗ ಅವರು ಹೇಳಿದ ಒಟ್ಟಾರೆ ಸಾರಾಂಶವೆಂದರೆ, `...ಮನುಷ್ಯನ ಅಂತರಾತ್ಮದಲ್ಲಿ ಈ ಸತ್ಯಗಳು ಅಂತರ್ಗತವಾದರೆ ಸಾಕು; ಅದು ತಾನಾಗೆ ಹೊರಬರುತ್ತದೆ...'.
ಒಂದು ಅರ್ಥದಲ್ಲಿ ಇದು ಸತ್ಯ. ಏಕೆಂದರೆ ಯಾರು ಏನೇ ಮಾತನಾಡಲು ಅಥವಾ ಬರೆಯಲು ಅದರಲ್ಲಿನ `ಸರಕು', ಸ್ವತಃ ಅವನದಾಗಿರುವುದಿಲ್ಲ; ಬದಲಿಗೆ ಅವನಿಗೆ ಉಂಟಾದ ಭಗವತ್ಪ್ರೇರಣೆಯಿಂದಾಗಿ ಆತ ಮಾತನಾಡಿರುತ್ತಾನೆ; ಅಥವಾ ಬರೆದಿರುತ್ತಾನೆ ಎಂದೇ ಭಾವಿಸೋಣ...

ನನ್ನ ಜಿಜ್ಞಾಸೆ ಏನೆಂದರೆ, ಈ ಸೃಷ್ಟಿಯಾದಾಗ ಆ ಭಗವಂತನು ಅದರ ಜತೆಗೇ `ವೇದ ಭಾಷೆಯಲ್ಲಿ ರಚಿತವಾದ ಈ ವೇದಗಳನ್ನೂ' ಪವಾಡವೆಂಬಂತೆ ಯಾರಿಗೆ ತಾನೇ ನೀಡಿರಲು ಸಾಧ್ಯ? `ಹೌದು; ಈ ಸೃಷ್ಟಿಯಲ್ಲಿದ್ದ ಮನುಷ್ಯರ ಕೈಗೇ ಭಗವಂತೆ ಇದನ್ನು ಹಸ್ತಾಂತರಿಸಿದ' ಎಂಬುದನ್ನು ಒಪ್ಪಿಕೊಂಡಾಗ ಮಾತ್ರ ಅವು ಅಪೌರುಷೇಯವಾಗಲು ಸಾಧ್ಯ! ನಿರ್ವಿಕಾರ, ನಿರ್ಗುಣ, ನಿರಾಮಯವಾದ ಆ ವಿಶ್ವಚೇತನ ಶಕ್ತಿ (ಭಗವಂತ) ವೇದಗಳನ್ನು ರಚಿಸಿ ನೀಡಿರುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.
ಕಾಲ, ದೇಶ, ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಯೋಚಿಸಿದಾಗ, ಎಷ್ಟೇ ಲಕ್ಷಾಂತರ ವರ್ಷಗಳ ಹಿಂದಾಗಲಿ; ಸಾರ್ವಕಾಲಿಕವಾಗಿ ಯಾರಿಗೇ ಆಗಲಿ ಅಂತರ್ಗತವಾಗಿರುವ ಒಂದು ಸಂವೇದನೆ ಅಥವಾ ಒಂದು ಮಾತನ್ನು ಮತ್ತೊಬ್ಬರಿಗೆ ತಲುಪಿಸಲು ಒಂದು ಮಾಧ್ಯಮ; ಅಂದರೆ ಭಾಷೆಯ ಅಥವಾ ಇಂದ್ರಿಯಗಳ ನೆರವು ಅತ್ಯಗತ್ಯ. ಉದಾ: `ಕುಳಿತುಕೊಳ್ಳಿ' ಎಂಬ ಸಂದೇಶವನ್ನು ಎದುರಿಗಿದ್ದವರಿಗೆ ತಲುಪಿಸಬೇಕೆಂದುಕೊಳ್ಳಿ. ಆಗ ಒಂದು ವೇಳೆ ಭಾಷೆ ಬಾರದಿದ್ದರೂ ಮೌನವಾಗಿಯೇ ತಲೆಯಾಡಿಸಿಯೋ ಅಥವಾ ಕೈ ತೋರಿಸಿಯೋ ಆ ಸಂದೇಶವನ್ನು ತಲುಪಿಸುತ್ತೇವೆ. ವೇದಗಳಿಗೂ ಇದು ಅನ್ವಯಿಸುತ್ತದೆ ಎಂಬುದು ನನ್ನ ಅಭಿಪ್ರಾಯ. ಆದರೆ ಶತ ಶತಮಾನಗಳಷ್ಟು ಹಿಂದಿನ ಕಾಲಮಾನದ ತೊಡಕು ಇರುವುದರಿಂದ ಈ ಪ್ರಕ್ರಿಯೆ ಹೇಗೆ ಸಾಗಿ ಬಂದಿರಬಹುದು; ಇದಕ್ಕಾಗಿ ಯಾವ ಮಾಧ್ಯಮ ಬಳಸಿರಬಹುದು ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ.
ಹೀಗೆಯೇ ಮುಂದುವರೆದು ಯೋಚಿಸಿದಾಗ, ಮೊದಲು ವೇದ ಭಾಷೆ ಹುಟ್ಟಿಕೊಂಡ ನಂತರವೇ ವೇದಗಳು ಹಾಗೂ ವೇದಾಂಗಗಳ ರಚನೆಯನ್ನು ಯಾರೋ ಮಹಾತ್ಮರೊಬ್ಬರು ಅಥವಾ ಇಂತಹ ಮಹಾತ್ಮರ ಗುಂಪು ಮಾಡಿರಲೇಬೇಕು. ಹಾಗಿದ್ದ ಮೇಲೆ ಅವು ಅಪೌರುಷೇಯ ಆಗಲು ಹೇಗೆ ಸಾಧ್ಯ? ಇಂತಹ ಮಹಾತ್ಮರು ಅಥವಾ ಋಷಿ ಮುನಿಗಳಿಗೆ ಇಂತಹ ಮಹಾನ್ ಕೃತಿಯನ್ನು ರಚಿಸಲು ಆ ವಿಶ್ವ ಚೇತನ ಶಕ್ತಿಯ ಪ್ರೇರಣೆಯಿತ್ತು ಎನ್ನುವುದಾದರೆ ಅದನ್ನು ನಿರ್ವಿವಾದವಾಗಿ ಒಪ್ಪಿಕೊಳ್ಳಬಹುದು. ಈ ರೀತಿ ಯೋಚಿಸಿದಾಗ ಈ ಜಗತ್ತಿನಲ್ಲಿ ವೇದಗಳು ಎಲ್ಲೆಡೆ ಪ್ರಸಾರಗೊಳ್ಳಲೆಂದು ರೂಪುಗೊಂಡ ಪ್ರಥಮ ಭಾಷೆಯೇ `ವೇದ ಭಾಷೆ' ಎಂದಾಯಿತು. ಈ ಭಾಷೆ ಆರಂಭದಲ್ಲಿ ಮೌಖಿಕವಾಗಿಯೇ ಇದ್ದು, ಕಾಲಾನಂತರ ಲಿಪಿ ರೂಪುಗೊಂಡಿರಲೂಬಹುದು. ಋಷಿ ಮುನಿಗಳ ಬಾಯಿಂದ ಹೊರಟ ವೇದಗಳು ಕಿವಿಯಿಂದ ಕಿವಿಗೆ ಹರಡಿ, ಲಿಪಿ ರೂಪುಗೊಂಡ ಬಳಿಕ ಕಾಲಾನಂತರ ಕೃತಿಗೆ ಇಳಿದಿರಲಿಕ್ಕೂ ಸಾಕು. ನಂತರ ಸನ್ಮಾನ್ಯ ಯಾಸ್ಕರು ರಚಿಸಿದ ನಿರುಕ್ತವೂ ಸೇರಿದಂತೆ ವೇದಾಂಗಗಳು ಹುಟ್ಟಿರಬಹುದು.
ಒಟ್ಟಾರೆ, ಈ ವಿಶ್ವದಲ್ಲಿ ಆ `ವಿಶ್ವ ಚೇತನ ಶಕ್ತಿ' ಕುರಿತಾದ ತಮ್ಮ ತಪಸ್ಸು, ಯೋಗ ಶಕ್ತಿ, ನಡೆ, ನುಡಿ, ಜೀವನ ವಿಧಾನ ಮುಂತಾದ ಮಹಾನ್ ಸಾಧನೆಗಳ ಫಲದಿಂದಾಗಿ ನಮ್ಮ ಋಷಿ ಮುನಿಗಳಿಗೇ ಭಗತ್ಪ್ರೇರಣೆಯಾಗಿ, ಅವರುಗಳೇ ವೇದಗಳನ್ನು ರಚಿಸಿ ಪ್ರಚುರಪಡಿಸಿರಬೇಕೆಂಬುದು ನನ್ನ ಅಭಿಪ್ರಾಯ. ಅಂದ ಮೇಲೆ ವೇದಗಳು `ಪೌರುಷೇಯ'ವೇ ಹೊರತು ಅಪೌರುಷೇಯವಲ್ಲ. ಅನೇಕ ಋಷಿ ಮುನಿಗಳಿಂದ ರಚಿತವಾಗಿ, ಶತ ಶತಮಾನಗಳ ಕಾಲ ನಮ್ಮ ಪರಂಪರೆಯಲ್ಲಿ ಸಾಗಿ ಬಂದ ಈ ಅಪಾರ ಜ್ಞಾನ ರಾಶಿಯನ್ನು ವೇದ ವ್ಯಾಸರು ಪೂರ್ಣ ಅಧ್ಯಯನ ಮಾಡಿ, ಕ್ರೋಢೀಕರಿಸಿ ಕೊಟ್ಟಿರಲೂಬಹುದು. !?- ನೀವೇನಂತೀರಿ?

ಎಚ್.ಎಸ್. ಪ್ರಭಾಕರ,
ಪತ್ರಕರ್ತ, ಹಾಸನ/ದಾವಣಗೆರೆ.
------------------------------------------------------------

ಹರಿಹರಪುರ ಶ್ರೀಧರರ ಅನಿಸಿಕೆ:
ವೇದದ ಮೂಲ ಹುಡುಕಲು ಅಧ್ಯಯನವಂತೂ ಬೇಕಾಗುತ್ತದೆ. ನಾನು  ಅಧ್ಯಯನ ಮಾಡಿಲ್ಲ. ಆದರೆ ವೇದವು ಅಪೌರುಷೇಯವೆನ್ನುವ ಮಾತನ್ನು  ಪೂರ್ಣವಾಗಿ ಒಪ್ಪಲು  ನನ್ನ ಮನ ಹಿಂದೆ ಬೀಳುತ್ತದೆ.  ಒಂದೆರಡು ಪದ್ಯವನ್ನು ಬರೆದು ಅದರಲ್ಲಿ  ಆನಂದವನ್ನು  ಅನುಭವಿಸಿರುವ ನಾನು [ "ಆನಂದ" -ಈ ಪದದ ಮಹತ್ವದ ಅರಿವಿದೆಯಾದರೂ ಸಾಮಾನ್ಯವಾಗಿ ನಾವು   ಆನಂದವಾಯ್ತೆನ್ನುವ ಮಾತನಾಡುತ್ತೇವೆ]  ಸಾಹಿತ್ಯ ವಿದ್ಯಾರ್ಥಿಯಲ್ಲದ, ಯಾವ ಅಧ್ಯಯನವನ್ನೂ  ಮಾಡಿರದ ನನ್ನ ಕೈನಲ್ಲಿ ಈ ಪದ್ಯವನ್ನು ಬರೆಯಲು ಸಾಧ್ಯವಾದ್ದಾದರೂ ಹೇಗೆ!? ಎಂದು ಹಲವು  ಭಾರಿ ಅಂದುಕೊಳ್ಳುತ್ತೇನ.ಆಗ ಸಹಜವಾಗಿ ಅದು ಭಗವದ್ ಪ್ರೇರಣೆಯೇ ಅಲ್ಲದೆ ಮತ್ತೇನೂ ಅಲ್ಲ,  ಎಂಬ ಸಮಾಧಾನ ಉತ್ತರವಾಗುತ್ತದೆ. ಈ ನನ್ನ ಅನುಭವವನ್ನೇ ಆಧಾರವಾಗಿಟ್ಟುಕೊಂಡು ವೇದಗಳಿಗೂ  ಇದನ್ನೇಆನ್ವಯಿಸುತ್ತೇನೆ. ಚಿಕ್ಕ-ಪುಟ್ಟ ಪದ್ಯ ರಚನೆಯೇ ನನ್ನದಲ್ಲವೆಂದಮೇಲೆ ಇಂತಹ  ಅನರ್ಘ್ಯ ರತ್ನವಾದ ವೇದಗಳನ್ನು ಯಾವ ಮನುಷ್ಯನೂ ತನ್ನ ಸ್ವಸಾಮರ್ಥ್ಯದಿಂದ ರಚಿಸಲು  ಸಾಧ್ಯವಿಲ್ಲದ ಮಾತೆಂಬುದನ್ನು ಸಹಜವಾಗಿ ಒಪ್ಪಬಹುದು. ಸೃಷ್ಟಿಯ ಜೊತೆ ಜೊತೆಗೇ ವೇದವನ್ನೂ  ಭಗವಂತನು ಕೊಟ್ಟಿದ್ದಾನೆಂಬುದು ಶೀ ಸುಧಾಕರಶರ್ಮರ ವ್ಯಾಖ್ಯೆ.[ಆದರೆ ಸಧಾಕರಶರ್ಮರು ಇದು   ನನ್ನ ಮಾತಲ್ಲ, ವೇದದಲ್ಲಿಯೇ ಇದನ್ನು ತಿಳಿಸಿದೆ ಎಂದು ಆಧಾರವನ್ನು  ನೀಡುತ್ತಾರೆ] ಈ ಮಾತನ್ನು ಒಪ್ಪಲು ಈ ಕೆಳಕಂಡ ಅಂಶಗಳು ನನಗೆ ಅಡ್ಡಿಯಾಗುತ್ತವೆ.
1.ಸೃಷ್ಟಿಯ ಜೊತೆಗೇ ವೇದವನ್ನು ಭಗವಂತನು ಕರುಣಿಸಿದ್ದರೆ ಅದರ ಭಾಷಾಮಾಧ್ಯಮ ಏನಾಗಿತ್ತು?
2. ಒಬ್ಬ ಋಷಿ ವೇದವನ್ನು ಉಚ್ಛರಿಸಿದರೆ ಜೊತೆಯಲ್ಲಿದ್ದ ಇನ್ನುಳಿದ ಶಿಷ್ಯರು ಅದನ್ನು  ಅನುಸರಿಸಿದರು, ಎಂಬುದು ವೇದಪಾಠ ಕಲಿಕೆಯ ರೀತಿ, ಎಂದು ಕೇಳಿದ್ದೇನೆ. ಅಂದರೆ ಬಾಯಿಂದ  ಕಿವಿಗೆ ವೇದವನ್ನು ಹೇಳುತ್ತಾ ವೇದವನ್ನು ಕಲಿತರೆಂಬ ಮಾತಿದೆ. ಸರಿ, ಆದರೆ ಮೂಲದಲ್ಲಿ  ಒಂದು ಮಂತ್ರದ ರಚನೆ ಹೇಗಾಯ್ತು? ಎಂಬುದು ಗೊತ್ತಾಗುವುದೇ ಇಲ್ಲ.
3.  ಹಲವಾರು ಋಷಿಗಳು ತಮ್ಮ ತಪಸ್ಸಿನ ಬಲದಿಂದ ಲಭ್ಯವಾದ ಭಗವಂತನ ಕೃಪೆಯಿಂದ  ವೇದಮಂತ್ರಗಳನ್ನು ಕಂಡುಕೊಂಡು ಅದಕ್ಕೆ ರೂಪಕೊಟ್ಟರೆಂಬುದು  ನನ್ನ ಅನಿಸಿಕೆ
4. ಅಂದರೆ ವೇದದ ರಚನೆಗೆ ಮುಂಚೆಯೇ ಭಾಷೆಯೊಂದು ಇದ್ದಿರಬೇಕು.

5. ಸುಮ್ಮನೆ ವೇದವು ಅಪೌರುಷೇಯವೆಂದರೆ ಅದು ಮೂಲದಲ್ಲಿ ಮನುಷ್ಯರನ್ನು ತಲುಪಿದ್ದಾದರೂ ಹೇಗೆ? ಎಂಬುದಕ್ಕೆ ಉತ್ತರ ಸಿಗುವುದಿಲ್ಲ.

6. ವೇದವನ್ನು ಜಗತ್ತಿನ ಮೊದಲ ಸಾಹಿತ್ಯವೆಂದು ಹೇಳಬಹುದೇನೋ, ಕಾರಣ, ವೇದವನ್ನು ಯಾರೇ ಒಬ್ಬ ವ್ಯಕ್ತಿ ಯಾವುದೋ ಒಂದು ಕಾಲದಲ್ಲಿ ರಚಿಸಿಲ್ಲ.

7.ವೇದವು  ಇಡೀ ಮಾನವ ಕುಲಕ್ಕೆಕೊಟ್ಟ ಯೂಸರ್ ಮ್ಯಾನ್ಯುಯಲ್ ಎಂಬುದು ಶರ್ಮರಮಾತನ್ನು  ಒಪ್ಪುತ್ತೇನಾದರೂ ಅಂದಿನ ಜಗತ್ತಿನ ವ್ಯಾಪ್ತಿ ಎಷ್ಟಿತ್ತೆಂಬುದು ಗೊತ್ತಾಗುವುದಿಲ್ಲ.  ಪ್ರಾಯಶ: ಜಗತ್ತಿನ ಮೂಲವೂ ಭಾರತವೇ ಆಗಿರಬೇಕು.ಭಾರತಕ್ಕೆ ಹೊಂದಿಕೊಂಡಂತೆ ಇದ್ದಿರಬಹುದಾದ  ಚಿಕ್ಕಪುಟ್ಟ ಪ್ರದೇಶಗಳೇ ಜಗತ್ತೆನಿಸಿರಬೇಕು.ನಮ್ಮ ದೇಶವನ್ನು ಭಾರತವೆನ್ನಿ,  ಆರ್ಯಾವರ್ತವೆನ್ನಿ, ಹಿಂದು ದೇಶವೆನ್ನಿ-ಅದು ಬೇರೆಯಮಾತು.
8.ಇಂತಹ ಒಂದು ಅನರ್ಘ್ಯರತ್ನದ ಸರಿಯಾದ ಉಪಯೋಗ ಆಗಲಿಲ್ಲವೇಕೆ? ಇದ್ದ ಅಡ್ಡಿ ಆತಂಕಗಳೇನು? ಎಂಬುದರಬಗ್ಗೆ ಶ್ರೀ ಶರ್ಮರು ವಿವರಿಸಬೇಕು.
9. ವೇದವನ್ನು ಯಾಸ್ಕರು ರಚಿಸಿದ ನಿರುಕ್ತದ ಸಹಾಯದಿಂದ ಅರ್ಥ ಮಾಡಿಕೊಂಡರೆ ಮಾತ್ರ  ಮಾನವನ ಉನ್ನತಿಗೆ ಅಗತ್ಯವಾದ ಹಲವು ಸೂತ್ರಗಳು ಅಲ್ಲಿ ಸಿಗುತ್ತವೆ. ಹಾಗಾದರೆ ಯಾಸ್ಕರು ನಿರುಕ್ತವನ್ನು ರಚಿಸುವ ಮುಂಚೆ ವೇದವನ್ನು ಹೇಗೆ ಅರ್ಥ ಮಾಡಿಕೊಂಡರು? ನಿರುಕ್ತದ ರಚನೆಯಾದದ್ದು ಅಂದರೆ ಯಾಸ್ಕರ ಕಾಲ ಯಾವಾಗ? ವ್ಯಾಸರು ವೇದಗಳನ್ನು ವಿಂಗಡಿಸಿ ಅದಕ್ಕೊಂದು ರೂಪ ಕೊಟ್ಟರೇ? ವ್ಯಾಸರು ವೇದವನ್ನು ಅರ್ಥ ಮಾಡಿಕೊಂಡಿದ್ದಾದರೂ ಹೇಗೆ? ಅಂದರೆ   ಮೊದಲ ಮನುಷ್ಯನ ಸೃಷ್ಟಿಯಾದಾಗ ಅವನು ವೇದವನ್ನು ಹೇಗೆ ಅರ್ಥ ಮಾಡಿಕೊಂಡ?
ಹೀಗೆ ಹಲವು ಪ್ರಶ್ನೆಗಳಾಗಿಯೇ ಉಳಿಯುತ್ತವೆ. ಶ್ರೀ ಶರ್ಮರು ಎಲ್ಲವನ್ನೂ ವೇದಮಂತ್ರಗಳ ಮೂಲಕವೇ ನಮ್ಮಂತ ಸಾಮಾನ್ಯರಿಗೆ ಸಮಾಧಾನಪಡಿಸುವುದೂ ಕಷ್ಟವೇ. ಆದರೂ ಶರ್ಮರೇ ನಮಗೆ ಸಮಾಧಾನ ಹೇಳಬೇಕು.
----------------------------------------------------------------
 ಕವಿನಾಗರಾಜರ  ಅನಿಸಿಕೆ:


  ನಾನೊಬ್ಬ ಸಾಮಾನ್ಯ. ಹೇಳಬೇಕೆಂದರೆ 'ಪಂಡಿತನು ನಾನಲ್ಲ, ಪಾಂಡಿತ್ಯವೆನಗಿಲ್ಲ; ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ.' ಮನಸ್ಸಿಗೆ ಒಪ್ಪುವ ವಿಚಾರಗಳನ್ನು ಯಾರು ಹೇಳಿದರೂ ಸ್ವೀಕರಿಸುವ ಮನೋಭಾವ ನೀಡಿದ ಭಗವಂತನಿಗೆ ನಾನು ಋಣಿ. ಶ್ರೀಧರ ತಿಳಿಸಿದಂತೆ ಒಂದೆರಡು ಗಂಟೆಗಳು ಉಪಯುಕ್ತ ಚರ್ಚೆ ನಡೆಸಿದ ಸಮಾಧಾನವಿದೆ. ಶ್ರೀಯುತ ಪ್ರಭಾಕರ ಮತ್ತು ಶ್ರೀಧರ್ ಈಗಾಗಲೇ ಎತ್ತಿದ ಅಂಶಗಳಿಗೆ ಪೂರಕವಾಗಿ ನನ್ನ ಸಂದೇಹಗಳನ್ನೂ ಮುಂದಿಡಲು ಪ್ರಯತ್ನಿಸಿರುವೆ. 

1. ವೇದಗಳು ಅಪೌರುಷೇಯ ಎಂಬ ಬಗ್ಗೆ ನನಗೆ ಸಮಾಧಾನಕರ ಮಾಹಿತಿ  ಸಿಗಬೇಕಿದೆ. ಮೂರು ಬಗೆಯ ಅಸ್ತಿತ್ವಗಳ -ಜಡ, ಜೀವಾತ್ಮ(ಅಣುಚೇತನ)
 ಮತ್ತು ಪರಮಾತ್ಮ(ವಿಶ್ವಚೇತನ)- ಬಗ್ಗೆ ಶ್ರೀ ಶರ್ಮರ ಉಪನ್ಯಾಸ ಪ್ರೇರಣಾದಾಯಕವಾಗಿದ್ದು, ಕೆಲವು ಮೂಲಭೂತ ಸಂದೇಹಗಳನ್ನು ದೂರ ಮಾಡಿವೆ. ಈ ಕುರಿತು ಕೆಲ ಸಣ್ಣಪುಟ್ಟ ಸಂದೇಹಗಳಿದ್ದರೂ ಅವು ಈಗಿನ ಚರ್ಚೆಗೆ ಸಂಬಂಧಪಡದುದಾಗಿರುವುದರಿಂದ ಇಲ್ಲಿ ಪ್ರಸ್ತಾಪಿಸುವುದಿಲ್ಲ.
2. ವೇದಗಳು ಅಪೌರುಷೇಯವಾಗಿದ್ದರೆ ಮಾನವನಿಗೆ ತಲುಪಿದ್ದು ಹೇಗೆ ಮತ್ತು ಯಾರಿಂದ?
3. ವೇದಗಳು ಸಾರ್ವಕಾಲಿಕ, ಉತ್ತಮ ಮತ್ತು ಸತ್ಯದ ವಿಚಾರಗಳನ್ನು ಹೊಂದಿರುವುದಾದರೂ ಅವು ಭಗವಂತನ ಸೃಷ್ಟಿಯಾಗಿದ್ದರೆ ಜಗತ್ತಿನ ಹೆಚ್ಚಿನ ಜನರು ಈಗ ಬಳಸುವ ಭಾಷೆಯಲ್ಲಿ ಏಕೆ ಇಲ್ಲ?
4.ಭಗವಂತ ಸರ್ವವ್ಯಾಪಿಯಾಗಿರಬೇಕೆಂದರೆ ನಿರಾಕಾರಿಯಾಗಿರಬೇಕು ಎಂಬುದನ್ನು ಒಪ್ಪಬಹುದು. ಚಲಿಸದೆ ಲಿಸುವ, ನೋಡದೆ ನೋಡುವ, ಮಾಡದೆ ಮಾಡುವ, ಎಲ್ಲಾ ಆಗು ಹೋಗುಗಳಿಗೆ ಸರ್ವಶಕ್ತ ಭಗವಂತನೇ  ಕಾರಣ ಎಂಬ ಅರ್ಥದಲ್ಲಿ ವೇದಗಳು ಆತನ ಸೃಷ್ಟಿ  ಎಂದು ಒಪ್ಪಬಹುದಾದರೂ, ನಿಜ ಅರ್ಥದಲ್ಲಿ ಅವನ ಪ್ರೇರಣೆಯಿಂದ ಋಷಿ-ಮುನಿಗಳು, ವಿದ್ವಾಂಸರುಗಳಿಂದ ರಚಿತವಾಗಿರಬಹುದೆನ್ನಬಹುದೆ? ಅಗಾಧ ವಿಚಾರಗಳು, ವಿಸ್ತಾರತೆ, ವೈವಿಧ್ಯತೆಗಳನ್ನು ಗಮನಿಸಿದರೆ ಭಗವತ್ಪ್ರೇರಣೆಯಿಂದ ರಚಿತವಾದ ವೇದಗಳು ಒಬ್ಬರ ಕೃತಿಯೆಂದು ಹೇಳುವುದು ಕಷ್ಟ.
5. ವೇದಗಳು ಒಬ್ಬರಿಂದ ಮತ್ತೊಬ್ಬರಿಗೆ ತಲುಪುವಾಗ ಅನೇಕ ಕಲ್ಪನೆಗಳು, ತಪ್ಪು ಅಭಿಪ್ರಾಯಗಳು ಮೂಡಿರುವ ಸಾಧ್ಯತೆ ಇದೆ. ಭಗವಂತ ಸಾಕಾರ ಅಥವ ನಿರಾಕಾರನೇ ಎಂಬ ಬಗ್ಗೆ ಸಹ ಇರುವ ವಿವಾದ ಒಂದು ನಿದರ್ಶನ
--------------------------------------------
ಒಳ್ಳೆಯ ಪ್ರಶ್ನೆಗಳು ಶ್ರೀಧರ್ ಅವರೆ. ಇದರ ಬಗ್ಗೆ ನನ್ನದೂ ಕೆಲವು ಅಭಿಪ್ರಾಯಗಳನ್ನು (ತಿಳಿವಿನಿಂದ ಅಲ್ಲ, ಹೀಗಿರಬಹುದೇನೋ ಅನ್ನುವ ಅನುಮಾನದಿಂದ) ಯಾವಾಗಲೊಮ್ಮೆ ಬರೆಯುವೆ)- ಸುಧಾಕರ ಶರ್ಮರ ಉತ್ತರವನ್ನು ನೋಡಲು ನಾನೂ ಕಾತುರನಾಗಿದ್ದೇನೆ.
-ರಾಮಪ್ರಸಾದ್,ಕ್ಯಾಲಿಫೋರ್ನಿಯಾ