Pages

Tuesday, January 20, 2015

ವೇದಮಂತ್ರಗಳಲ್ಲಡಗಿರುವ ಎಚ್ಚರಿಕೆಯನ್ನು ನಮ್ಮನ್ನಾಳುವವರು ಗಮನಿಸುವರೇ?


ಅಥರ್ವವೇದದ ೫ನೇ ಕಾಂಡದ ೧೮ ನೇ ಸೂಕ್ತವು ಬ್ರಹ್ಮಜ್ಞಾನಿಯ ಮಹತ್ವದ ಬಗ್ಗೆ ಅತ್ಯಂತ ನೇರವಾದ ಮಾತುಗಳನ್ನು ರಾಜನಿಗೆ ಹೇಳುತ್ತದೆ.ಮಂತ್ರದಲ್ಲಿ ಬ್ರಾಹ್ಮಣ ಪದ ಪ್ರಯೋಗವಾಗುವುದರಿಂದ ಇದನ್ನು ಯಾರೋ ಬ್ರಾಹ್ಮಣರು [ಜಾತಿಯಲ್ಲಿ] ಬರೆದುಕೊಂಡಿ ದ್ದಾರೆ, ಎಂದು ಮೂದಲಿಸುವ ಜನರನ್ನು ಇಂದಿನ ಸಮಾಜದಲ್ಲಿ ಕಾಣಬಹುದು. ಆದರೆ ಬ್ರಹ್ಮಜ್ಞಾನಿಗೆ ಇಂದು ರೂಢಿಯಲ್ಲಿರುವ  ಜಾತಿ ಇಲ್ಲವೆಂಬ ವೇದದ ಸ್ಪಷ್ಟ ನುಡಿಗಳನ್ನು ಹಲವಾರು ಮಂತ್ರಗಳಲ್ಲಿ ಕಾಣಬಹುದಾಗಿದೆ. ವೇದದ ಕಾಲದ ವರ್ಣ ವ್ಯವಸ್ಥೆಗೂ ಇಂದಿನ ಜಾತಿಗೂ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸುತ್ತಾ , ಬ್ರಾಹ್ಮಣ ಪದವನ್ನು  ಬ್ರಹ್ಮಜ್ಞಾನವನ್ನು ಪಡೆದ ಒಬ್ಬ ಜ್ಞಾನಿ-ಎಂದು ಅರಿತುಕೊಂಡಾಗ ಮುಂದಿನ ಮಂತ್ರಗಳ ಮಹತ್ವವು ನಮಗೆ ಯಾವ ಪೂರ್ವಾಗ್ರಹವಿಲ್ಲದೆ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.
ನೈತಾಂ ತೇ ದೇವಾ ಅದದುಸ್ತುಭ್ಯಂ ನೃಪತೇ ಅತ್ತವೇ|
ಮಾ ಬ್ರಾಹ್ಮಣಸ್ಯ ರಾಜನ್ಯ ಗಾಂ ಜಿಘತ್ಸೋ ಅನಾಧ್ಯಾಮ್ ||೧||

ಅನ್ವಯ :
ನೃಪತೇ = ಎಲೈ ದೊರೆಯೇ
ತೇ ದೇವಾಃ = ಆ ದೇವತೆಗಳು [ಬ್ರಹ್ಮಜ್ಞಾನಿಗಳು]
ಏತಾಂ ತುಭ್ಯಂ ಅತ್ತವೇ ನ ದದುಃ = ನಿನಗೆ ಆಗೊವನ್ನು ತಿನ್ನಲು ಕೊಟ್ಟಿಲ್ಲ
ರಾಜನ್ಯ = ಹೇ ರಾಜನೇ
ಬ್ರಾಹ್ಮಣಸ್ಯ ಅನಾದ್ಯಾಂ ಗಾಂ ಮಾ ಜಿಘತ್ಸಃ = ಬ್ರಾಹ್ಮಣನ ಆಗೋವನ್ನು ತಿನ್ನಲು ಬಯಸಬೇಡ
ಭಾವಾರ್ಥ : ರಾಜನು ಬ್ರಾಹ್ಮಣನ ಗೋವನ್ನು [ವಾಣಿಯನ್ನು] ಕೊಲ್ಲಬಾರದು
ವೇದಮಂತ್ರಗಳಲ್ಲಿ ಬೀಜದ ರೂಪದಲ್ಲಿ ಒಂದು ವಿಚಾರವೇ ಅಡಗಿರುತ್ತದೆ. ಈ ಮಂತ್ರದಲ್ಲಿ ಬ್ರಾಹ್ಮಣಸ್ಯ ಗಾಂ ಎಂಬ ಪದವನ್ನು ಎರಡು ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು. ಎರಡೂ ಕೂಡ ಸಮಜಕ್ಕೆ ಹಿತವೇ ಆಗಿದೆ. ಮೊದಲನೆಯದು ಗಾಂ ಎಂಬುದಕ್ಕೆ ಗೋವು ಎನ್ನುವ ಅರ್ಥವಿದೆ. ಹೀಗೆ ಅರ್ಥ ಮಾಡಿಕೊಂಡಾಗ ರಾಜನು ಗೋವುಗಳನ್ನು ಕೊಲ್ಲಬಾರದು. ಅದನ್ನು ರಕ್ಷಿಸಬೇಕೆಂದು  ಅರ್ಥ ಮಾಡಿಕೊಳ್ಳಬಹುದು.ಹೀಗೆ ಅರ್ಥ ಮಾಡಿಕೊಂಡಾಗ ಗೋಸಂತತಿಯನ್ನು ರಕ್ಷಿಸುವುದು ರಾಜನ ಕರ್ತವ್ಯವಾಗುತ್ತದೆ. ಗೋಸಂತತಿಯ ರಕ್ಷಣೆಯ ಹಿಂದೆ ಒಂದು ಸಂಸ್ಕೃತಿಯ  ರಕ್ಷಣೆ ಕೂಡ ಇದೆ. ಆ ಬಗ್ಗೆ ವಿವರವಾಗಿ ಹೋದರೆ ಈ ಅಂಕಣವೆಲ್ಲಾ ಅದೇ ವಿಚಾರದಿಂದ ತುಂಬುತ್ತದೆ. ಆದರೆ ನಮಗೆಲ್ಲಾ ಗೋವಿನ ಮಹತ್ವದ ಅರಿವಿರುವುದರಿಂದ ಇಲ್ಲಿ ಆ ಬಗ್ಗೆ ಹೆಚ್ಚು ಬರೆಯುವುದಿಲ್ಲ.
ಇನ್ನು ಗಾಂ ಪದದ ಎರಡನೆಯ ಅರ್ಥ ವಾಣಿ. ಈ ಮಂತ್ರದಲ್ಲಿ ಬ್ರಾಹ್ಮಣನ ವಾಣಿಯ ಬಗ್ಗೆ ಮಹತ್ವವನ್ನು ಕೊಟ್ಟಿದೆ. ಬ್ರಾಹ್ಮಣನ ವಾಣಿಯನ್ನು ಕೊಲ್ಲಬೇಡ[ನಿರಾಕರಿಸಬೇಡ] ಎಂದು ರಾಜನಿಗೆ ವೇದವು ಕರೆಕೊಡುತ್ತದೆ. ಹೀಗೆ ಒಂದು ವೇಳೆ ಬ್ರಾಹ್ಮಣನವಾಣಿಯನ್ನು ಕಡೆಗಣಿಸಿದರೆ ಅದರ ಪರಿಣಾಮ ಏನಾಗುತ್ತದೆಂಬುದನ್ನು ಮುಂದಿನ ಮಂತ್ರಗಳು ವಿವರಿಸುತ್ತವೆ.
ಅಕ್ಷದ್ರುಗ್ಧೋ ರಾಜನ್ಯಃ ಪಾಪ ಆತ್ಮ ಪರಾಜಿತಃ |
ಸ ಬ್ರಾಹ್ಮಣಸ್ಯ ಗಾಮದ್ಯಾದದ್ಯ ಜೀವಾನಿ ಮಾ ಶ್ವಃ ||೨||

ಅನ್ವಯ :
ಹೇ ರಾಜನೇ,
ಅಕ್ಷದ್ರುಗ್ಧಃ ಪಾಪಃ = ತನ್ನ ಇಂದ್ರಿಯ ಭೋಗಾಭಿಲಾಷೆಯಿಂದ ಪ್ರಜೆಗಳಿಗೆ ದ್ರೋಹ ಮಾಡುವ ಪಾಪಿಯಾದ
ರಾಜನ್ಯಃ = ರಾಜನು
ಆತ್ಮ ಪರಾಜಿತಃ = ಸ್ವಯಂ ನಾಶನಾಗಿ
ಸಃ = ಅವನು
ಬ್ರಾಹ್ಮಣಸ್ಯ ಗಾಂ ಅದ್ಯತ್ = ಬ್ರಾಹ್ಮಣನ ಗೋಸಂಪತ್ತನ್ನು ಭೋಗಿಸಿದ್ದೇ ಆದರೆ
ಅದ್ಯ ಜೀವಾನಿ ಮಾ ಶ್ವಃ = ಇವತ್ತು ಇರುತ್ತಾನೆ, ನಾಳೆ ಇರುವುದಿಲ್ಲ
ಭಾವಾರ್ಥ :
ಭೋಗಾಸಕ್ತನಾಗಿ ಆತ್ಮ ಮತ್ತು ಪ್ರಜೆಗಳಿಗೆ ದ್ರೋಹ ಮಾಡುತ್ತಾ ವ್ಯಸನಿಯಾಗಿ ಬಾಳುವ ರಾಜನು ಬ್ರಾಹ್ಮಣನ ಸಂಪತ್ತಿಗೆ ಕೈ ಹಾಕಿದರೆ, ವಾಣಿಯನ್ನು ನಾಶಮಾಡಿದರೆ ಇವತ್ತು ಬದುಕಬಹುದು, ಆದರೆ ನಾಳೆ ಬದುಕಲಾರ.
ಈ ಮಾತುಗಳು ಪ್ರಪಂಚದ ಯಾವ ರಾಜರುಗಳ ಇತಿಹಾಸ ನೋಡಿದರೂ ಸತ್ಯ ಎನಿಸದೆ ಇರದು. ನಮ್ಮ ದೇಶದ ಇತಿಹಾಸವನ್ನೇ ನೋಡಿದರೂ, ಅದರಲ್ಲೂ ಸ್ವಾತಂತ್ರ್ಯಾನಂತರದ ದಿನಗಳ ನಮ್ಮ ಶಾಸಕರ ಜೀವನವನ್ನು ಅವಲೋಕನ ಮಾಡಿದರೂ ನಮಗೆ ಈ ಮಂತ್ರದ ಸತ್ಯದ ಅರಿವಾಗುತ್ತದೆ. ಒಮ್ಮೆ ಶಾಸಕನಾಗಿ ಚುನಾಯಿತನಾದವನು ದೇಶ ಮತ್ತು ಸಮಾಜವನ್ನು ಮರೆತು ಸ್ವಾರ್ಥಪರನಾಗಿ ಭೋಗಜೀವನವನ್ನು ನಡೆಸುತ್ತಾ ಬ್ರಾಹ್ಮಣವಾಣಿಯನ್ನು ಕಡೆಗಣಿಸಿದವನ ಸ್ಥಿತಿ ಏನಾಗಿದೆ, ಎಂಬ ಉಧಾಹರಣೆಗಳೇ ನಮ್ಮ ಕಣ್ಮುಂದಿವೆ. ಇಲ್ಲಿ ಮತ್ತೆ ಮತ್ತೆ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಾಗಿರುವುದೇನೆಂದರೆ ಬ್ರಾಹ್ಮಣ ಪದವನ್ನು  ಇಂದಿನ ಜಾತಿಗೆ ಸಮೀಕರಿಸಬಾರದು. ಇಂದಿನ ಯಾವ ಜಾತಿಗೆ ಸೇರಿದವರೇ ಆಗಲೀ ಅವರು ವೇದವಾಣಿಯನ್ನು ಕಲಿತು ವಿದ್ವಾಂಸನಾಗಿದ್ದು ಸಮಾಜಮುಖಿ ಚಿಂತನೆಯನ್ನು ಮಾಡುತ್ತಾ ಸಮಾಜದ ಸಾಮರಸ್ಯವನ್ನು, ಅಭ್ಯುದಯವನ್ನು ನಿರಂತರ ಬಯಸುತ್ತಿದ್ದರೆ ಅವನಿಗೆ ಶಾಸಕನು ಮನ್ನಣೆ ಕೊಡಬೇಕು. ಮನ್ನಣೆ ಕೊಡದೆ ಅವರ ಮಾತನ್ನು ಕಡೆಗಣಿಸಿ ಸ್ವಾರ್ಥದಲ್ಲಿ ಮುಳುಗಿ ಭೋಗಜೀವದಲ್ಲಿ ಮುಳುಗಿದ್ದರೆ ಅಂತಹ ಶಾಸಕನು ಇಂದು ಶಾಸಕನಾಗಿರಬಹುದು, ಮುಂದೆ ಅವನನ್ನು  ಸಮಾಜವು ಕಡೆಗಾಣಿಸುವುದು ಸತ್ಯ. ವೇದವಾಣಿ-ಎಂದಾಗ ನಾಲ್ಕು ವೇದUಳನ್ನು ಅಧ್ಯಯನ ಮಾಡಿದವನ ಮಾತು ಎಂದು ಭಾವಿಸಬೇಕಾಗಿಲ್ಲ. ವೇದ ಎಂದರೆ ಜ್ಞಾನ, ಎಂದು ಅರ್ಥಮಾಡಿಕೊಂಡರೆ ಸಾಕು.
ಮುಂದಿನ ಮಂತ್ರವು ರಾಜನನ್ನು ಮತ್ತೂ ಎಚ್ಚರಿಸುತ್ತದೆ. . . . . . . . .
ಆವಿಷ್ಟಿತಾಘವಿಷಾ ಪೃದಾಕೂರಿವ ಚರ್ಮಣಾ |
ಸಾ ಬ್ರಾಹ್ಮಣಸ್ಯ ರಾಜನ್ಯ ತೃಷ್ಟೈಷಾ ಗೌರನಾದ್ಯಾ ||೩||
ಅನ್ವಯ :
ರಾಜನ್ಯ = ಹೇ ರಾಜನೇ
ಏಷಾ ಬ್ರಾಹ್ಮಣಸ್ಯ ಗೌಃ ಅನದ್ಯಾ = ಈ ಬ್ರಾಹ್ಮಣನ ಹಸುವು[ವಾಣಿಯು] ಭೋಗ್ಯವಲ್ಲ, ನಿನಗೆ ಉಣ್ಣುವುದಕ್ಕಾಗಿ ಅಲ್ಲ. ಏಕೆಂದರೆ ಅದು
ಸಾ ಚರ್ಮಣಾ ಆವಿಷ್ಟಿತಾ ತೃಷ್ಟಾ ಪೃದಕೂಃ ಇವ = ಆ ಆಕಳು ಚರ್ಮದ ಪೊರೆಯಲ್ಲಿ ಮುಚ್ಚಿದ ಸರ್ಪಿಣಿಯಂತೆ
ಅಘವಿಷಾ = ಭಯಂಕರ ವಿಷದಂತೆ ನಿನಗೆ ಆಪತ್ಕಾರಿಯಾಗುತ್ತದೆ

ಭಾವಾರ್ಥ :
ಭ್ರಾಹ್ಮಣನ ವಾಣಿಯನ್ನು ಕಸಿದುಕೊಂಡು ರಾಜನು ಭೋಗಿಸಬಾರದು.ಅದು ಸರ್ಪದ ವಿಷದಂತೆ ಆತ್ಮಘಾತುಕವಾಗಿ ಪರಿಣಮಿಸುತ್ತದೆ.
ಈ ಮಂತ್ರವನ್ನು ಅರ್ಥಮಾಡಿಕೊಳ್ಳುವಾಗ ಗೌಃ ಪದವನ್ನು ವಾಣಿ ಮತ್ತು ಹಸು ಈ ಎರಡೂ ರೀತಿಯಲ್ಲೂ ಅರ್ಥೈಸಿಕೊಳ್ಳಬಹುದು. ರಾಜನಾದನು ಗೋವನ್ನು ಕೊಂದರೂ ಮತ್ತು ಕೊಲ್ಲಲು ಅವಕಾಶಕೊಟ್ಟರೂ ಗೋಭಕ್ತರ ಅಂತರಂಗದಲ್ಲಡಗಿರುವ ಆಕ್ರೊಶಕ್ಕೆ ಗುರಿಯಾಗಿ ರಾಜನನ್ನು ಇಂದಲ್ಲಾ ನಾಳೆ ಸುಡುವುದು ನಿಶ್ಚಿತ. ಅಂತೆಯೇ ಬ್ರಾಹ್ಮಣನ ವಾಣಿಯನ್ನು ಹತ್ತಿಕ್ಕಿದರೂ ಮುಂದೆ ಅದರ ಪರಿಣಾಮ ಘೋರವಾಗಿರುತ್ತದೆ.
ವೇದಮಂತ್ರಗಳಲ್ಲಡಗಿರುವ ಈ ಎಚ್ಚರಿಕೆಯನ್ನು ನಮ್ಮನ್ನಾಳುವವರು ಗಮನಿಸಿದರೆ ಅವರಿಗೂ ಒಳ್ಳೆಯದು, ದೇಶಕ್ಕೂ ಒಳ್ಳೆಯದು. ಕಡೆಗಣಿಸಿ ಅಧಿಕಾರವಿದೆ ಎಂದು ಬಲಪ್ರಯೋಗದಿಂದ ಸುವಿಚಾರಗಳನ್ನು ಹತ್ತಿಕ್ಕಿದರೆ ಅದರ ಫಲವನ್ನು ಆಡಳಿತ ಮಾಡುವವರು ಅನುಭವಿಸಲೇ ಬೇಕಾಗುತ್ತದೆ. ವೇದವು ಸಾರ್ವಕಾಲಿಕ, ಸಾರ್ವದೇಶಿಕ ಮತ್ತು ಸಾರ್ವಭೌಮವಾದ್ದರಿಂದ ಅದನ್ನು ಗೊಡ್ಡು ಎಂದು ಹೇಳುವವರಿಗೂ ಕೂಡ ಈ ಮಂತ್ರವು ಎಚ್ಚರಿಕೆಯ ಗಂಟೆಯಾಗಿದೆ.
-ಹರಿಹರಪುರಶ್ರೀಧರ್