ವೇದಗಳೆಂದರೆ ಗ್ರಂಥಗಳಲ್ಲ. ಅವು ವಿವಿಧ ಅವಧಿಗಳಲ್ಲಿ ವಿವಿಧ ವ್ಯಕ್ತಿಗಳು ಸಂಗ್ರಹಿಸಿದ ಆಧ್ಯಾತ್ಮಿಕ ನಿಯಮಗಳ ಭಂಡಾರ. ಗುರುತ್ವಾಕರ್ಷಣ ಶಕ್ತಿಯ ನಿಯಮವನ್ನು ಕಂಡು ಹಿಡಿಯುವ ಮೊದಲೇ ಅದು ಹೇಗೆ ಇದ್ದಿತ್ತೋ ಮತ್ತು ಮಾನವ ಜನಾಂಗ ಅದನ್ನು ಮರೆತರೂ ಅದು ಹೇಗೆ ಇರುವುದೋ, ಹಾಗೆಯೇ ಆಧ್ಯಾತ್ಮಿಕ ಪ್ರಪಂಚವನ್ನು ನಿಯಂತ್ರಿಸುವ ಈ ನಿಯಮಗಳೂ ಇರುವುವು.
By the Vedas no books are meant. They mean the accumulated treasury of spiritual laws discovered by different persons in different times. Just as the law of gravitation existed before its discovery, and would exist if all humanity forgot it, so is it with the laws that govern the spiritual world.
-ಸ್ವಾಮಿ ವಿವೇಕಾನಂದ.
ಆಧ್ಯಾತ್ಮಸಾಧನೆಯ ಉತ್ತುಂಗ ಸ್ಥಿತಿ ತಲುಪಿದ್ದ ಶ್ರೀ ರಾಮಕೃಷ್ಣರ ಪೂರ್ಣಾನುಗ್ರಹ ಪಡೆದ ವಿವೇಕಾನಂದರು ಶಾಸ್ತ್ರಾಧ್ಯಯನ ಸಂಪನ್ನರೂ ಆಗಿದ್ದರು. ಸಮಾಜದೊಂದಿಗೆ ಏಕೀಭಾವ ಹೊಂದಿದ್ದ ಅವರು ಆ ವಿಷಯದಲ್ಲಿ ಎಷ್ಟು ತಾದಾತ್ಮ್ಯ ಹೊಂದಿದ್ದರೆಂದರೆ, ಅವರಿಗೆ ಅದು ಕೇವಲ ವೈಚಾರಿಕ ಧೋರಣೆಯಾಗಿರದೆ ವೈಯಕ್ತಿಕ ಶ್ರದ್ಧೆಯ ವಿಷಯವೂ ಆಗಿತ್ತು. ಈ ಕಾರಣದಿಂದಲೇ ಅವರು ಇಹಲೋಕ ತ್ಯಜಿಸಿ ನೂರು ವರ್ಷಗಳ ಮೇಲಾದರೂ ಇಂದಿಗೂ ಅವರ ವಿಚಾರಗಳು ಜೀವಂತವಾಗಿವೆ ಮತ್ತು ಮಾರ್ಗದರ್ಶಿಯಾಗಿವೆ.