Pages

Monday, March 31, 2014

ನಿಮ್ಮ ಪ್ರಶ್ಮೆಗೆ ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಉತ್ತರ

ವೇದಧ್ಯಾಯಿ ಶ್ರೀಸುಧಾಕರ ಶರ್ಮ ರವರಿಗೆ ವಂದನೆಗಳು.
ತಮ್ಮ ವೇದೋಕ್ತವಾದ ನುಡಿಗಳಿಂದ ನಮ್ಮೆಲ್ಲರಿಗೂ ವೇದತತ್ವಗಳನ್ನ ಬೋಧಿಸುತ್ತಿದ್ದೀರಿ.  ಅದಕ್ಕಾಗಿ ಅಭಿನಂದನೆಗಳು-ಧನ್ಯವಾದಗಳು.   ಹಾಗುಬ್ಲಾಗ್.ವೇದಸುಧೆ ಗೌರವ ಸಂಪಾದಕರು: ಶ್ರೀ ಕವಿ ನಾಗರಾಜ್|ನಿರ್ವಾಹಕ ಸಂಪಾದಕರು:ಶ್ರೀ ಪ್ರಸನ್ನ.ಎಸ್.ಪಿ|ಸಂಪಾದಕರು:ಹರಿಹರಪುರಶ್ರೀಧರ್ ಇವರಿಗೂ
ಅಭಿನಂದನೆಗಳು-ಧನ್ಯವಾದಗಳು.
ಮಹರ್ಷಿ ದಯಾನಂದ ಸರಸ್ವತಿ ಯವರ ಜೀವನಕಥೆಯನ್ನು ಮತ್ತು ಅವರು ರಚಿಸಿದ  "ಸತ್ಯಾರ್ಥಪ್ರಕಾಶ"ಗ್ರಂಥವನ್ನು ಓದಿದ್ದೇನೆ.   ವೇದಸುಧೆ / ಚಂದನ ಟಿವಿ / ಶಂಕರ ಟಿವಿಮೂಲಕ ಹಲವು ವರ್ಷಗಳಿಂದ ನಿಮ್ಮ ಪ್ರವಚನಗಳನ್ನು ಆಲಿಸಿದ್ದೇನೆ.  ನನ್ನ ಎಲ್ಲಾ ತಳಮಳಗಳಿಗೂ ನಿಮ್ಮ ವೇದೋಕ್ತವಾದ ನುಡಿಗಳಿಂದ ಪರಿಹಾರ ಸಿಕ್ಕಿದೆ.
 
ಆದರೂ ಎರಡು ಪ್ರಶ್ನೆಗಳನ್ನು ಈ ಮೂಲಕ ಕೇಳುತ್ತಿದ್ದೇನೆ. ದಯವಿಟ್ಟು ಉತ್ತರಿಸಿ.
1.   ನಮ್ಮ ಮನೆ ಗುಡ್ಡಗಾಡು ಸ್ಥಳದಲ್ಲಿರುವುದರಿಂದ ವಿಷಜಂತುಗಳು ಸಾಮಾನ್ಯವಾಗಿ ಬರುತ್ತಿರುತ್ತವೆ.  ನಾಗರಹಾವನ್ನು ಬಿಟ್ಟು ಬೇರೆ ವಿಷವುಳ್ಳ ಹಾವುಗಳನ್ನು ನಮ್ಮ ಊರಿನಲ್ಲಿ ಕೊಲ್ಲುವ ಕ್ರಿಯೆ ನಡೆಯುತ್ತದೆ.  ಭಗವಂತನ ಈ ಅದ್ಭುತ ಸೃಷ್ಟಿಯಲ್ಲಿ ಅವುಗಳಿಗೂ ಬದುಕುವ ಹಕ್ಕಿಲ್ಲವೇ? ಎಂದನಿಸುತ್ತಿದೆ.  ತಮ್ಮ ಅಭಿಪ್ರಾಯವೇನು?
2.   ಹೆಣ್ಣು ಮಕ್ಕಳ ತಲೆಗೂದಲು ಬಾಚುವಾಗ, ಹೇನುಗಳು ಸಿಗುತ್ತವೆ ಸಹಜ.  ಸಾಮಾನ್ಯವಾಗಿ ಸಿಕ್ಕಿದ ಹೇನುಗಳನ್ನು ಕೊಲ್ಲುವ ಪದ್ದತ್ತಿಯನ್ನು ರೂಢಿಸಿಕೊಂಡಿದ್ದೇವೆ. ಇದು ಸರಿಯೇ?
ದಯವಿಟ್ಟು ಉತ್ತರಿಸುವಿರಾ?
ಧನ್ಯವಾದಗಳೊಂದಿಗೆ,
ಸುರೇಂದ್ರ ಶೆಟ್ಟಿಗಾರ್

ಕೋಟ್ನಾಕಟ್ಟೆ, ಹಿರಿಯಡಕ, ಉಡುಪಿ.   Mobile: 9483931868

ಶ್ರೀಯುತ ಸುರೇಂದ್ರರೇ!
ನಿಮ್ಮ ಜಿಜ್ಞಾಸೆ ಸಾಧುವಾಗಿದೆ.
ಜೀವಕೊಡಲು ಸಾಧ್ಯವಿಲ್ಲದ ಮೇಲೆ ಜೀವ ತೆಗೆಯಲೂ ಹಕ್ಕಿಲ್ಲ.
ಸಕಲ ಜೀವರಾಶಿಗಳೊಡನೆ ಮೈತ್ರಿಯಿಂದ ಬಾಳಬೇಕೆಂಬುದೇ ಮಾನವೀಯತೆ.ದುಷ್ಟಜಂತುಗಳೊಂದಿಗೆ ಅಲಿಖಿತ  ಒಪ್ಪಂದ ಮಾಡಿಕೊಂಡು, ಗಡುಗಳನ್ನು ಗುರುತಿಸಿಕೊಂಡು ಬಾಳಬಹುದು.  ಕಾಡಿನಲ್ಲಿ ಈ ನಿಯಮವನ್ನು ಪ್ರಾಣಿಗಳು ಪಾಲಿಸುತ್ತವೆ.  ಮನುಷ್ಯನು ಕಾಡನ್ನು ಆಕ್ರಮಿಸಿದಾಗ, ಕಾಡುಪ್ರಾಣಿಗಳು - ಆನೆ ಇತ್ಯಾದಿ - ನಾಡಿಗೆ ನುಗ್ಗುವುದು ಅನಿವಾರ್ಯವಾಗುತ್ತದೆ.  ನಮ್ಮ  ಇರುವಿಕೆಗೆ, ಓಡಾಟಕ್ಕೆ ಸ್ಪಷ್ಟವಾದ ಸ್ಥಳಗಳನ್ನು ಗುರುತಿಸಿಕೊಂಡು, ಅದನ್ನು ದಾಟದೆ ಪಾಲಿಸಿದರೆ ಇತರ ಪ್ರಾಣಿಗಳೊಡನೆ - ಅವು ಕ್ರೂರ, ವಿಷಜಂತುಗಳಾದರೂ ಸಹಿತ - ಬದುಕುವುದು ಸಾಧ್ಯವಾಗುತ್ತದೆ.
ಕೂದಲಿನ ಸ್ವಚ್ಛತೆ ಕಾಪಾಡಿಕೊಂಡಾಗ ಹೇನು ಬರುವ ಸಾಧ್ಯತೆಯೇ ಕಡಿಮೆ.  ಹಾಗೂ ಬಂದರೆ ಅವನ್ನು ತೆಗೆದುಹಾಕುವುದೇ ಸರಿಯೇ ಹೊರತು ಸಾಯಿಸುವುದು ಸರಿಯಲ್ಲ.  
ಇದೇ ಪ್ರಶ್ನೆ ಸೊಳ್ಳೆ, ತಿಗಣೆ, ಜಿರಳೆ ಇತ್ಯಾದಿಗಳ ವಿಚಾರದಲ್ಲೂ ಉಂಟಾಗುತ್ತದೆ.  ಸ್ವಚ್ಛತೆ, ಪದಾರ್ಥಗಳ ಅತ್ಯಂತ ಕಡಿಮೆ ಸಂಗ್ರಹ, ಪದಾರ್ಥಗಳನ್ನು ಬಳಸುತ್ತಿರುವುದು, ಆಗಾಗ್ಗೆ ಶುಚಿಗೊಳಿಸುವುದು ಈ ಕ್ರಮವನ್ನು ಅನುಸರಿಸಿ ಅವುಗಳ ಕಾಟವನ್ನು ತಡೆಗಟ್ಟಬಹುದು.  ಅವುಗಳನ್ನು ಕೊಲ್ಲುವ ಬದಲಿಗೆ, ಅವು ಬಾರದಂತೆ ಹೊಗೆ ಇತ್ಯಾದಿಗಳನ್ನೂ ಬಳಸಬಹುದು.
ಅಹಿಂಸೆಯನ್ನು ಪಾಲಿಸಲೇಬೇಕೆಂಬ ಹಠವಿದ್ದಾಗ ಪರಿಹಾರಗಳನ್ನು ಕಂಡುಹಿಡಿಯಬಹುದು.
ತಮ್ಮವ,
ಸುಧಾಕರ ಶರ್ಮಾ

Monday, March 24, 2014

ಸಾರ್ಥಕ ಪ್ರವಾಸ

ಕಳೆದ ಒಂದು ತಿಂಗಳ ಹಿಂದೆ   ನಮ್ಮ ವೇದ ಸತ್ಸಂಗಕ್ಕೆ ಶ್ರೀಮತೀ ಶುಭಾಶ್ರೀಧರ್ ಎಂಬ ಸಾಧ್ವಿ  ಬರಲು ಶುರುಮಾಡಿದರು.   ಅವರಿಗೆ ವೇದಪಾಠ ಹೊಸದು.ಆದರೆ ಅವರಲ್ಲಿ ಒಂದು ಸಾತ್ವಿಕ ಕಳೆಯನ್ನು ನಾನು ಗಮನಿಸಿದ್ದೆ. ನಮ್ಮ ಸತಸಂಗಕ್ಕೆ ಬಂದ ಒಂದು ವಾರದಲ್ಲೇ "ಶ್ರೀ ಶಕ್ತಿದರ್ಶನ" ಎಂಬ  ಮಾಸಿಕ ಪತ್ರಿಕೆಯ ಕೆಲವು ಪ್ರತಿಗಳನ್ನು ಎಲ್ಲಾ ಸತ್ಸಂಗಿಗಳಿಗೂ ವಿತರಿಸಿದರು. ಆ ಬಗ್ಗೆ ವಿವರಣೆ ಕೊಅಡಲು ಅವರಿಗೆ ತಿಳಿಸಿದೆ. ಆಗ ಅವರಿಂದ ಕಿನ್ನಿಗೋಳಿಯ ಆಶ್ರಮದ ಬಗ್ಗೆ ಪರಿಚಯವಾಯ್ತು. ನಮ್ಮ ಗುರುಗಳನ್ನು ನೀವುಗಳು ಬಂದು ಒಮ್ಮೆ ನೋಡಿದರೆ ಅವರಿಂದ ನೀವು ನಾಕರ್ಶಿತರಾಗದೇ ಇರುವುದಿಲ್ಲ.ಒಮ್ಮೆ ಆಶ್ರಮಕ್ಕೆ ಹೋಗೋಣ ಬನ್ನಿ ಎಂದರು. ಸರಿ ನಿನ್ನೆಗೆ ಮುಹೂರ್ಥ ಫಿಕ್ಸ್ ಆಯ್ತು. ನಾವು  11 ಜನ ಸತ್ಸಂಗಿಗಳು ಒಂದು ಟೆಂಪೋ ಟ್ರಾವೆಲ್ಲರ್ ನಲ್ಲಿ ಹೊರಟೆವು. 4-5 ಗಂಟೆಗಳ ದಾರಿ ಸಾಗುವಾಗ ದಣಿವಾಗಿತ್ತು.ಆಶ್ರಮದ ಮಹಾದ್ವಾರದಲ್ಲೇ ಒಂದು ಒಂದು ವಿಶಿಷ್ಠವಾದ ಗೋವನ್ನು ಕಂದ ಕೂಡಲೇ ನಮ್ಮ ದಣಿವೆಲ್ಲಾ ಮಾಯವಾಯ್ತು. ಆಶ್ರಮದಲ್ಲಿ ಗುರೂಜಿಯವರನ್ನು ಭೇಟಿಯಾದೆವು. ಅವರ ಮಾತುಗಳನ್ನು ಒಂದೆರಡು ದಿನಗಳಲ್ಲಿ ಇಲ್ಲಿ ಹಾಕುವೆ.ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಒಬ್ಬ " ಸಾಧಕ". ಆಶ್ರಮದಲ್ಲಿ  ಧ್ಯಾನದ ತರಬೇತಿ ನೀಡಲಾಗುತ್ತೆ. ಸುಮಾರು 15 ಕಿ.ಮೀ. ದೂರದಲ್ಲಿರುವ ಗೋಶಾಲೆಯಲ್ಲಿ 300 ಕ್ಕೆಂತ ಹೆಚ್ಚು ಗೋವುಗಳಿವೆ. "ಗೋಸಂತತಿ ನಷ್ಟವಾಗುತ್ತಿರುವುದರ ಪರಿಣಾಮ ಮನುಷ್ಯನಲ್ಲಿ ಸಂತಾನೋತ್ಪಾನಾ ಶಕ್ತಿಯೇ ನಷ್ಟವಾಗುತ್ತಿದೆ"ಎಂದು ಅವರು ಹೇಳುವ ಮಾತುಗಳು ಒಮ್ಮೆ ನಮ್ಮಲ್ಲಿ ತಲ್ಲಣವನ್ನುಂಟು ಮಾಡದೇ ಇರದು.  ಧ್ಯಾನ,ಕ್ರಿಯಾಯೋಗ....ಮುಂತಾದ ಚಟುವಟಿಕೆಗಳಲ್ಲಿ ಮೌನ ಸಾಧನೆ ಮಾಡಿರುವ ಗುರೂಜಿ "ಗೋರಕ್ಷಣೆಗಾಗಿ" ಮೌನ ಮುರಿದು ಮಾತನಾಡುತ್ತಾರೆ. ಅವರ ಮಾತುಗಳನ್ನು ಕೇಳುವಾಗ ನಮ್ಮ ದಣಿವೆಲ್ಲಾ ಪೂರ್ಣ ಮಾಯವಾಗಿ ನಮ್ಮೊಳಗೆ ಒಂದು ಚೈತನ್ಯವು ತುಂಬಿತ್ತು. ಪ್ರವಾಸ ಸಾರ್ಥಕವಾಗಿತ್ತು.
ಗುರೂಜಿಯವರ ಮಾತುಗಳನ್ನು   ಕೇಳಲು ಆಡಿಯೋ ಕ್ಲಿಪ್ ಗಾಗಿ ಇಲ್ಲಿ ಕ್ಲಿಕ್ಕಿಸಿ









Saturday, March 22, 2014

ಈಶ್ವರಸ್ತುತಿ ಪ್ರಾರ್ಥನಾ






 ಹಾಸನದ ವೇದಭಾರತಿಯು ನಡೆಸುವ ನಿತ್ಯ ವೇದತರಗತಿಯಲ್ಲಿ ಸಂಜೆ 6.00 ಗಂಟೆಗೆ ಸರಿಯಾಗಿ ಸಾಮೂಹಿಕವಾಗಿ ಪಠಿಸುವ ಮಂತ್ರಗಳು ಇವೆ. ಅದರ ಆಡಿಯೊ/ವೀಡಿಯೊ ಕ್ಲಿಪ್ಪನ್ನು  ಒಂದೆರಡು ದಿನಗಳಲ್ಲಿ ಅಳವಡಿಸಲಾಗುವುದು

Friday, March 14, 2014

ವೇದಮಂತ್ರ ಪಾಠ-1




ಋಗ್ವೇದ 10 ನೇ ಮಂಡಲ 8ನೇ ಅಷ್ಟಕ
3ನೇ ಅಧ್ಯಾಯ 6ನೇ ಅನುವಾಕ
81 ನೇ ಸೂಕ್ತ 16ನೇ ವರ್ಗ 7ನೇ ಮಂತ್ರ
ಋಷಿ: = ವಿಶ್ವಕರ್ಮ ಭೌವನ: 
ದೇವತಾ = ವಿಶ್ವಕರ್ಮ 
ಛಂದ: = ನಿಚೃಪ್ ತ್ರಿಷ್ಟಪ್ 
ಸ್ವರ: = ಧೈವತ: 


   ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಹಾಸನದ ವೇದಭಾರತಿಯ ಆಶ್ರಯದಲ್ಲಿ ನಡೆಯುವ ವೇದತರಗತಿಯಲ್ಲಿ ಪುನ: ಪಾಠವನ್ನು ಆರಂಭಿಸಿದ್ದಾರೆ. ನಮಗೆ ಮಾಡಿದ ಪಾಠದ ಆಡಿಯೋ ಕ್ಲಿಪ್ಪನ್ನು "ವೇದಸುಧೆ ಡಾಟ್ಕಾಮ್ " ನಲ್ಲಿ ಪ್ರಕಟಿಸಲಾಗಿದೆ.ಅದರ ಕೊಂಡಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಹಲವರು ಆನ್ ಲೈನ್ ವೇದಪಾಠದ ಬಗ್ಗೆ ಕೇಳುತ್ತಿದ್ದರು. ಸಧ್ಯಕ್ಕೆ ಈ ಪಾಠವನ್ನು ಅನುಸರಿಸಲು ಸಾಧ್ಯವಾದರೆ ಅನುಸರಿಸಿ ನಿಮ್ಮ ಸಂದೇಹಗಳನ್ನು vedasudhe@gmail.com ಗೆ ಮೇಲ್ ಮಾಡಿ ಪರಿಹರಿಸಿಕೊಳ್ಳಬಹುದು. ಅಥವಾ ಇಲ್ಲೂ ಕಾಮೆಂಟ್ ಮಾಡಬಹುದು.
ವಿ.ಸೂ: ಈ ಕೆಳಗಿರುವ ಮಂತ್ರದ ಇಮೇಜ್ ಮೇಲೆ ರೈಟ್ ಕ್ಲಿಕ್ ಮಾಡಿ ಸೇವ್ ಮಾಡಿಕೊಂಡು ಪ್ರಿಂಟೌಟ್ ತೆಗೆದುಕೊಂಡು ಆಡಿಯೋ ಕೇಳುತ್ತಾ ಸಾಹಿತ್ಯ ನೋಡಿಕೊಂಡು ಕಂಠಪಾಠ ಮಾಡಿಕೊಳ್ಳುವುದು ಸೂಕ್ತ. ಅಥವಾ ಬರೆದುಕೊಳ್ಳಲೂ ಬಹುದು.



ಬೆಳಗಾಗಿ ನಾನೆದ್ದು ದೇವನ ನೆನೆಯುವೆ

ಪ್ರಾತ:ಕಾಲದಲ್ಲಿ ಹೇಳಬೇಕಾದ ವೇದ ಮಂತ್ರದ ಭಾವಾನುವಾದ ಮಾಡಿ ಗೀತೆಯನ್ನು ರಚಿಸಿದ್ದಾರೆ ಶ್ರೀ ಕವಿ ನಾಗರಾಜ್. ಗೀತೆಗೆ ರಾಗ ಸಂಯೋಜಿಸಿ ಶ್ರೀಮತೀ ಕಲಾವತಿಯವರು ಹಾಡಿದ್ದಾರೆ.

ಬೆಳಗಾಗಿ ನಾನೆದ್ದು ದೇವನ ನೆನೆಯುವೆ
ಪರಮಸಂಪದದೊಡೆಯ ತೇಜಸ್ವಿಯ |
ಭೂತಾಯಿಯಂತೆ ಮತ್ತೆ ಆಗಸದಂತೆ
ಎಲ್ಲೆಲ್ಲೂ ಇರುವವಗೆ ಶರಣೆನ್ನುವೆ || ೧ ||

ಬುದ್ಧಿಗೊಡೆಯ ಜಗದೀಶನ ನೆನೆಯುವೆ
ಕರ್ಮಫಲದಾತ ಜ್ಯೋತಿರ್ಮಯನ |
ಮಂಗಳಮಯ ಸಕಲ ಲೋಕಪ್ರಿಯ
ದೇವಾಧಿದೇವನಿಗೆ ಶರಣೆನ್ನುವೆ || ೨ ||

ನಿತ್ಯವಿಜಯಿಯಾದ ಒಡೆಯನ ನೆನೆಯುವೆ 
ಸಕಲ ಲೋಕಾಧಾರ ತೇಜಸ್ವಿಯ |
ಪಾತಕಿಕಂಟಕ ಸತ್‌ಪ್ರಕಾಶ ಈಶ
ಸರ್ವಜ್ಞ ದೇವನಿಗೆ ಶರಣೆನ್ನುವೆ || ೩ ||

ಮನೋಧಿನಾಯಕ ದೇವನ ಬೇಡುವೆ
ಕೊಡು ಮತಿಯ ಕೊಡು ಸಕಲ ಸಂಪತ್ತಿಯ |
ಮಾಡೆನ್ನ ಸತ್ಪ್ರಜೆಯ ಬೆಳೆಸುತಲಿ ಸಜ್ಜನರ
ಸತ್ಯಕ್ಕಾಧೀಶ ದೇವ ಶರಣೆನ್ನುವೆ || ೪ ||

ಪರಮ ಬೆಳಕಿನೊಡೆಯ ದೇವನ ಬೇಡುವೆ
ಕರುಣಿಸು ರಕ್ಷೆ ಮೇಣ್ ಸಕಲಸುಖವ |
ಸಜ್ಜನರ ಸುಮತಿಯ ಪಾಲಿಸುವ ಮನವ
ನೀಡೆಂದು ಬೇಡುತ ಶರಣೆನ್ನುವೆ || ೫ ||

ಜಗದಂತರಾತ್ಮನೆ ವಿದ್ವಜ್ಜನರ ಬೇಡುವೆ
ನಿಮ್ಮಂತೆ ಎಮಗೂ ಸಿಗಲಿ ಸದ್ಬುದ್ಧಿ |
ಸಕಲಜಗವು ನಿನ್ನ ಹಾಡಿ ಹೊಗಳುತಲಿರಲು
ದಾರಿ ತೋರೈ ಪ್ರಭುವೆ ಶರಣೆನ್ನುವೆ || ೬ ||
-ಕ.ವೆಂ.ನಾ.
************** 
ಆಧಾರ:
ಓಂ ಪ್ರಾತರಗ್ನಿಂ ಪ್ರಾತರಿಂದ್ರಂ ಹವಾಮಹೇ ಪ್ರಾತರ್ಮಿತ್ರಾವರುಣಾ ಪ್ರಾತರಶ್ವಿನಾ |
ಪ್ರಾತರ್ಭಗಂ ಪೂಷಣಂ ಬ್ರಹ್ಮಣಸ್ಪತಿಂ ಪ್ರಾತಃ ಸೋಮಮುತ ರುದ್ರಂ ಹುವೇಮ || (ಋಕ್.೭.೪೧.೧.)

ಓಂ ಪ್ರಾತರ್ಜಿತಂ ಭಗಮುಗ್ರಂ ಹುವೇಮ ವಯಂ ಪುತ್ರಮದಿತೇರ್ಯೋ ವಿಧರ್ತಾಃ |
ಆಧ್ರಶ್ಚಿದ್ ಯಂ ಮನ್ಯಮಾನಸ್ತುರಶ್ಚಿದ್ ರಾಜಾ ಚಿದ್ ಯಂ ಭಗಂ ಭಕ್ಷೀತ್ಯಾಹ || (ಋಕ್.೭.೪೧.೨.)

ಓಂ ಭಗ ಪ್ರಣತೇರ್ಭಗ ಸತ್ಯರಾಧೋ ಭಗೇಮಾಂ ಧಿಯಮುದವಾ ದದನ್ನಃ |
ಭಗ ಪ್ರ ಣೋ ಜನಯ ಗೋಭರಶ್ವೈರ್ಭಗ ಪ್ರ ನೃಭಿರ್ನೃವಂತಃ ಸ್ಯಾಮ || (ಋಕ್.೭.೪೧.೩.)

ಓಂ ಉತೇದಾನೀಂ ಭಗವಂತಃ ಸ್ಯಾಮೋತ ಪ್ರಪಿತ್ವ ಉತ ಮಧ್ಯೇ ಅಹ್ನಾಂ |
ಉತೋದಿತಾ ಮಘವನ್ ತ್ಸೂರ್ಯಸ್ಯ ವಯಂ ದೇವಾನಾಂ ಸುಮತೌ ಸ್ಯಾಮ || (ಋಕ್.೭.೪೧.೪.)

ಓಂ ಭಗ ಏವ ಭಗವಾನ್ ಅಸ್ತು ದೇವಸ್ತೇನ ವಯಂ ಭಗವಂತಃ ಸ್ಯಾಮ |
ತಂ ತ್ವಾ ಭಗ ಸರ್ವ ಇಜ್ಜೋಹವೀ ತಿ ಸ ನೋ ಭಗ ಪುರಏತಾ ಭವೇಹಃ || (ಋಕ್.೭.೪೧.೫.)


ಚಿತ್ರ: ಅಂತರ್ಜಾಲದಿಂದ ಹೆಕ್ಕಿದ ರಾಯಲ್ಟಿ ಮುಕ್ತ ಚಿತ್ರ (dreamstine.com)

Thursday, March 13, 2014

ಜೀವನ ವೇದ-೦೮

ಸತ್ಯವನ್ನು ಆವಿಷ್ಕರಿಸಿ-ನಿರ್ಭೀತರಾಗಿ ಜೀವನ ನಡೆಸಿ
ಧರ್ಮದ ಆಚರಣೆ ಎಂದರೆ ಯಾವುದು ತಲೆತಲಾಂತರದಿಂದ ನಡೆದು ಬಂದಿದೆ, ಅದನ್ನು ಪ್ರಶ್ನೆ ಮಾಡದೆ ಅನುಸರಿಸುವುದು-ಎಂಬುದು ಸಾಮಾನ್ಯ ಅಭಿಪ್ರಾಯ. ಇದಕ್ಕೆ ವಿದ್ಯಾವಂತ-ಅವಿದ್ಯಾವಂತ ಎಂಬ ಭೇದವಿಲ್ಲ. ಹಾಗೆ ನೋಡಿದರೆ ವಿದ್ಯಾವಂತರೆನಿಸಿಕೊಂಡು ಪದವಿಗಳ ಸರಮಾಲೆಯನ್ನು ಹಾಕಿಕೊಂಡವರೇ ಪ್ರಶ್ನೆ ಮಾಡದೆ ಕುರುಡಾಗಿ ಅನುಸರಿಸುವುದನ್ನು ನಾವು ಸಮಾಜದಲ್ಲಿ ಹೆಚ್ಚು ಕಾಣಬಹುದು.ಇದಕ್ಕೆ ಕಾರಣ ಸ್ಪಷ್ಟ.ಅದುವೇ ಭಯ.
ಹೆಸರಿನ ಮುಂದೆ ಹಲವು ಪದವಿಗಳಿವೆ. ಒಳ್ಳೆಯ ಉದ್ಯೋಗ ಸಿಕ್ಕಿದೆ. ಲಕ್ಷಕ್ಕೆ ಕಮ್ಮಿ ಇಲ್ಲದಂತೆ ದುಡಿಮೆ ಇದೆ. ವಾಸಕ್ಕೆ ಸುಸಜ್ಜಿತ ಮನೆ.ಅದರಲ್ಲಿ ಪತ್ನಿ ಮತ್ತು  ಮುದ್ದಾದ ಮಗುವಿನೊಡನೆ ಹಾಯಾಗಿ ಜೀವನ ಸಾಗಿರುವಾಗ ಯಜಮಾನನಿಗೆ ಅವನಿಗೆ ಅರಿವಿಲ್ಲದಂತೆ ಭಯ,ಅಭದ್ರತೆ ಕಾಡುತ್ತದೆ. ಭಗವಂತ! ಪತ್ನಿ ಮತ್ತು ಮಗುವಿನೊಡನೆ ನನ್ನನ್ನು ಸುಖವಾಗಿ ಕಾಪಾಡೆಂದು ಎಲ್ಲಾ ದೇವರಿಗೂ ಪ್ರಾರ್ಥಿಸಿ ಮನೆ ಮುಂದೆ ಬಂದ ಬುಡುಬುಡುಕೆಯವನ ಬಾಯಲ್ಲಿ ಏನಾದರೂ ಕೆಟ್ಟ ಮಾತು ಬಂದೀತೆಂದು ಮನೆಯಲ್ಲಿದ್ದ ಬಟ್ಟೆಯನ್ನೋ ಹತ್ತಿಪ್ಪತ್ತು ರೂಪಾಯಿ ದುಡ್ದನ್ನೋ ಕೊಟ್ಟು ಅವನು ಹೋದಮೇಲೆ ನಿರಾಳನಾಗುತ್ತಾನೆ.
ಇಂತಾ ಉಧಾಹರಣೆಗಳಿಗೇನೂ ಕೊರತೆ ಇಲ್ಲ. ಜೀವನ ದುಸ್ತರವಾಗಿದ್ದಾಗ ಕಾಡದಿದ್ದ ಅಭದ್ರತೆ ಜೀವನವು ಸುಖವಾಗಿರುವಾಗ ಕಾಡಲಾರಂಭಿಸುವುದೇಕೇ? ಜೀವನದಲ್ಲಿ ಕಷ್ಟವಿದ್ದಾಗ ಇಲ್ಲದಿದ್ದ ಭಯ ಸುಖದಲ್ಲಿ ಕಾಡುವುದಾದರೂ ಏಕೇ? ಸತ್ಯದ ಅರಿವಾಗದಿರುವುದೇ ಜೀವನದಲ್ಲಿ ಭಯಕ್ಕೆ ಕಾರಣ. ಅಭದ್ರತೆಯ ಭಾವನೆಗೆ  ಕಾರಣ.
    ಧರ್ಮಾಚರಣೆಯ ಹೆಸರಲ್ಲಿ ಮೌಢ್ಯದಿಂದ ವರ್ತಿಸುವ ಹಲವು ಉಧಾಹರಣೆಗಳಿವೆ.ಸಾಮಾನ್ಯವಾಗಿ ಬಳಕೆಯಲ್ಲಿರುವ ಒಂದು ಕಥೆ ಎಲ್ಲರಿಗೂ ತಿಳಿದದ್ದೇ.ಆದರೂ ನೆನಪು ಮಾಡುವೆ.
ಬ್ರಾಹ್ಮಣನೊಬ್ಬನ ಮನೆಯಲ್ಲಿ ಅವನ ತಂದೆಯ ಶ್ರಾದ್ಧದ ದಿನ ಮನೆಯಲ್ಲಿದ್ದ ಬೆಕ್ಕಿನ ಮೇಲೆ  ಕುಕ್ಕೆಯೊಂದನ್ನು ಮುಚ್ಚಿ ನಂತರ ಶ್ರಾದ್ಧ ಮಾಡುತ್ತಿದ್ದ. ಕಾರಣ ಬಲು ಸರಳ. ಮನೆಯಲ್ಲಿ ಬೆಕ್ಕು ಓಡಾಡುತ್ತಿದ್ದರೆ ಶ್ರಾದ್ಧದ ಊಟ ಮಾಡುತ್ತಿದ್ದವರ ಎಲೆಗೆ ಬೆಕ್ಕಿನ ಕೂದಲು ಬಿದ್ದೀತೆಂಬ ಮುನ್ನೆಚ್ಚರಿಕೆ. ಹೀಗೇ ಹಲವು ವರ್ಷಗಳು ನಡೆಯಿತು. ಮನೆಯ ಯಜಮಾನ ಮರಣ  ಹೊಂದಿದ. ಅವನ ಮಗ ಈಗ ಅವನ ಶ್ರಾದ್ಧಮಾಡಬೇಕು. ಶ್ರಾದ್ಧದ ದಿನ ಬಂತು. ತನ್ನ ಅಪ್ಪ ಶ್ರಾದ್ಧ ಮಾಡುವಾಗ ಬೆಕ್ಕಿನ ಮೇಲೆ ಕುಕ್ಕೆ ಮುಚ್ಚಿ ನಂತರ ಶ್ರಾದ್ಧ ಮಾಡುತ್ತಿದ್ದ. ಆದರೆ ಇವನ ಕಾಲಕ್ಕೆ ಮನೆಯಲ್ಲಿ ಬೆಕ್ಕು ಇಲ್ಲದಂತಾಗಿದೆ. ಏನು ಮಾಡುವುದು? ಊರೆಲ್ಲಾ ಸುತ್ತಿ ಒಂದು ಬೆಕ್ಕು ತಂದ. ಅದರ ಮೇಲೆ ಕುಕ್ಕೆ ಮುಚ್ಚಿದ. ಶ್ರಾದ್ಧ ಮಾಡಿದ್ದಾಯ್ತು. ಎಲ್ಲರೂ  ಊಟವನ್ನೂ ಮಾಡಿದರು. ರಾತ್ರಿಯಾಯ್ತು. ಆ ದಿನ ಕಳೆದು ಹೋಯ್ತು. ಬೆಳಿಗ್ಗೆ ಎದ್ದಾಗ ಕುಕ್ಕೆ ಮುಚ್ಚಿದ್ದ ಬೆಕ್ಕಿನ ಬಗ್ಗೆ ನೆನಪಾಯ್ತು. ಕುಕ್ಕೆ ಎತ್ತುತ್ತಾನೆ. ಬೆಕ್ಕು ಉಸಿರಾಡದೆ ಮಲಗಿದೆ. ಗಾಳಿಯೇ ಆಡದ ಪ್ಲಾಸ್ಟಿಕ್ ಕುಕ್ಕೆಯನ್ನು ಮುಚ್ಚಿ ಅದರ ಮೇಲೆ ಅಲುಗಾಡದಂತೆ ತೂಕವನ್ನು ಇಟ್ಟಿದ್ದ ಪರಿಣಾಮ ಉಸಿರಾಡಲೂ ಸಾಧ್ಯವಿಲ್ಲದೆ ಬೆಕ್ಕು ಕೊನೆ ಉಸಿರೆಳೆದಿತ್ತು!! ಇಂತಾ ಘೋರ ಕೃತ್ಯಕ್ಕೆ ಕಾರಣವಾದರೂ ಏನು? ಹಿಂದಿನ ಉದ್ಧೇಶವನ್ನೇ ತಿಳಿಯದೆ ಆಚರಿಸಿದ  ಕುರುಡು ಆಚರಣೆಯಲ್ಲವೇ?  

ವೇದದ ಹೆಸರು ಕೇಳಿದೊಡನೆ ಒಂದು ಜಾತಿಗೆ ಸೀಮಿತಗೊಳಿಸಿ ಹರಿಹಾಯುವ ಜನರು ತಾವು ನಿರ್ಭೀತ ಜೀವನ ಮಾಡಬೇಕಾದರೆ ವೇದದ ಮಾರ್ಗದರ್ಶನವನ್ನೇ ಪಡೆಯಬೇಕು. ವೇದವು ಜನರಲ್ಲಿ ಎಂತಹಾ ನಿರ್ಭೀತ ಸ್ಥಿತಿಯನ್ನು ಉಂಟುಮಾಡುತ್ತದೆಂಬುದನ್ನು ತಿಳಿಯಲು ಈ ವೇದಮಂತ್ರದ ಅರ್ಥವನ್ನು ಒಮ್ಮೆ ವಿಚಾರ ಮಾಡೋಣ.

ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷ: ||
[ಋಕ್-೧.೮೬.೯]

ಸತ್ಯಶವಸ: = ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ
ಯೂಯಮ್ = ನೀವು
ಮಹಿತ್ವನಾ = ನಿಮ್ಮ ಸ್ವಂತ ಮಹಿಮೆಯಿಂದ
ತತ್ ಆವಿಷ್ಕರ್ತ =ಆ ಸತ್ಯವನ್ನು ಆವಿಷ್ಕರಿಸಿರಿ
ರಕ್ಷ: = ದುಷ್ಕಾಮನೆಗಳನ್ನು
ವಿದ್ಯುತಾ = ನಿಮ್ಮ ಜ್ಞಾನಜ್ಯೋತಿಯಿಂದ
ವಿಧ್ಯತಾ = ಸೀಳಿಹಾಕಿರಿ
ಭಾವಾರ್ಥ:-
ಓ ಧೀರರೇ, ನಿಮ್ಮ ಸ್ವಂತ ಮಹಿಮೆಯಿಂದ ಸತ್ಯವನ್ನು ಆವಿಷ್ಕರಿಸಿ. ದುಷ್ಕಾಮನೆಗಳನ್ನು ನಿಮ್ಮ ಜ್ಞಾನಜ್ಯೋತಿಯಿಂದ ಸೀಳಿ ಹಾಕಿರಿ.
ಒಂದೊಮ್ಮೆ ಈ ಮಂತ್ರದ ಅರಿವಿದ್ದಿದ್ದರೆ ಬೆಕ್ಕನ್ನು ಕೊಲ್ಲುವ ಮೌಢ್ಯದ ಕೆಲಸವನ್ನು ಯಾರೂ ಮಾಡುತ್ತಿರಲಿಲ್ಲ. ಬೆಕ್ಕಿನ ಕಥೆಯಲ್ಲಿ ಅತಿರೇಕವಿರ ಬಹುದು. ಆದರೆ ಸತ್ಯವಿಲ್ಲದೆ ಇಲ್ಲ!
ಈ ಮಂತ್ರವನ್ನು ಆಳವಾಗಿ ಅರ್ಥೈಸುತ್ತಾ ಹೋದರೆ ನನ್ನ ಕಣ್ಮುಂದೆ ಒಬ್ಬ ಗುರು ತನ್ನ ಯುವ ಶಿಷ್ಯನಿಗೆ ಸಿಡಿಲಿನಂತಹ ಮಾತುಗಳಿಂದ ಉಪದೇಶ ಮಾಡುತ್ತಿದ್ದಾನೇನೋ ಎಂದು ಭಾಸವಾಗುತ್ತದೆ. ಒಬ್ಬ ತಂದೆ ತನ್ನ ಮಗನಿಗೆ, ಗುರು ತನ್ನ ಶಿಷ್ಯನಿಗೆ ಈ ಮಂತ್ರದ ಅರ್ಥವನ್ನು ತಿಳಿಸಿದರೆ ಅವನಲ್ಲಿ ಅದೆಂತಹಾ ಅದ್ಭುತ ಶಕ್ತಿ ಮೂಡೀತು! ಭಯವೆಂಬುದಕ್ಕೆ ಆಸ್ಪದವೇ ಇಲ್ಲ. ಅಭದ್ರತೆಯ ಭಯವು ಕಾಡಲಾರದು. ಸತ್ಯದ ದರುಶನವಾದಾಗ ನಿರ್ಭೀತ ಜೀವನ ನಮ್ಮ ದಾಗುತ್ತದೆ.
ಮಂತ್ರವಾದರೂ ಏನು ಹೇಳುತ್ತದೆ?  ಹೇ ಧೀರರೇ, ನಿಮ್ಮ ಸ್ವಂತ ಸಾಮರ್ಥ್ಯದಿಂದ, ನಿಮ್ಮ ವಿವೇಕದಿಂದ, ನಿಮ್ಮ ಬುದ್ಧಿಯಿಂದ, ಸತ್ಯವನ್ನು ಆವಿಷ್ಕರಿಸಿ.ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ
ಇಲ್ಲಿ ಕುರುಡು ಆಚರಣೆಗೆ ಅವಕಾಶವಿದೆಯೇ? ವೇದವಾದರೂ ಮಂತ್ರದಲ್ಲಿ ಬಳಸಿರುವ ಪದಗಳ ತೀವ್ರತೆಯನ್ನು ಗಮನಿಸಿದಿರಾ? ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ- ಇಂತಹ ವಿಶ್ವಾಸ ತುಂಬುವ ಮಾತುಗಳನ್ನು ವೇದವು  ಮಾತ್ರವೇ ಹೇಳಲು ಸಾಧ್ಯ.

ಅರ್ಥವನ್ನು ಸರಿಯಾಗಿ ತಿಳಿಯದೆ ಆಚರಿಸಿದಾಗ  ಅನರ್ಥಕ್ಕೆ ಕಾರಣವಾಗುತ್ತದೆ                                                                                                          
ಇಂದು ಸಮಾಜದಲ್ಲಿ ಕಾಣುವ ಸಾಮರಸ್ಯದ ಕೊರತೆಗೆ ಧರ್ಮವನ್ನು ಸರಿಯಾಗಿ ತಿಳಿಯದೆ ತಪ್ಪು ತಪ್ಪಾಗಿ ಆಚರಿಸುವ ಕಂದಾಚಾರಗಳೂ ಕೂಡ ಹಲವು ಸಂದರ್ಭಗಳಲ್ಲಿ ಕಾರಣವಾಗುತ್ತವೆ, ಯಜ್ಞ ಯಾಗಾದಿಗಳನ್ನು ಮಾಡುವಾಗ ಪ್ರಾಣಿಬಲಿಗೆ ಅವಕಾಶವೇ ಇಲ್ಲದಿದ್ದರೂ ಅಶ್ವಮೇಧ, ಅಜಮೇಧದಂತಹ ಯಜ್ಞಗಳನ್ನು ಮಾಡುವಾಗ ಕುದುರೆಯನ್ನು /ಮೇಕೆಯನ್ನು ಬಲಿಕೊಡಬೇಕೆನ್ನುವ ಒಂದು ವರ್ಗ ಈಗಲೂ ಇರುವಾಗ ಅದನ್ನು ವಿರೋಧಿಸುವ ಒಂದು ವರ್ಗ ಸಹಜವಾಗಿ ಇರುತ್ತದೆ. ಆಗ ಸಾಮಾಜಿಕ ಸಾಮರಸ್ಯವು ಹಾಳಾಗುವುದಕ್ಕೆ ಧರ್ಮದ ಹೆಸರಿನಲ್ಲಿ ನಡೆವುವ ಅಧರ್ಮದ ಕ್ರಿಯೆಗಳು ಕಾರಣವಾಗುತ್ತವೆ.
ಯಜ್ಞಕ್ಕೆ ಮತ್ತೊಂದು ಹೆಸರು ಅಧ್ವರ ಎಂದು. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದು ಅರ್ಥ. ಹೀಗೆ ಯಜ್ಞಕ್ಕೆ  ಅಹಿಂಸೆ ಎಂಬ ಅರ್ಥವಿದ್ದರೂ ಕೂಡ ಅಲ್ಲಿ ಪ್ರಾಣಿಬಲಿ ಮಾಡಲೇ  ಬೇಕೆನ್ನುವ ಗುಂಪಿನಿಂದ  ಅದನ್ನು ವಿರೋಧಿಸಿದವರನ್ನು ಧರ್ಮದ್ರೋಹಿಗಳೆಂಬ ಹಣೆ ಪಟ್ಟಿ ಕಟ್ಟುವ ಪ್ರಯತ್ನ ನಡೆಯುತ್ತದೆ.
 ನಾವು ಧರ್ಮದ ಹೆಸರಿನಲ್ಲಿ ಆಚರಿಸುವ ಪ್ರತಿಯೊಂದು ಕೆಲಸವನ್ನೂ ಆಚರಣೆಗೆ ಮುಂಚೆ ಅದರಲ್ಲಿ ಸತ್ಯವನ್ನು ಆವಿಷ್ಕರಿಸುವ ಪ್ರಯತ್ನವನ್ನು ಮಾಡಿದ್ದೇ ಆದರೆ ಯಾವ ಧರ್ಮಕಾರ್ಯವೂ ಮಾನವತೆಯ ವಿರೋಧಿಯಾಗಿರುವುದಿಲ್ಲ. ಆದ್ದರಿಂದ ನಾವು ಮಾಡುವ ಎಲ್ಲಾ ಕಾರ್ಯದಲ್ಲೂ ಸತ್ಯವನ್ನು ಆವಿಷ್ಕರಿಸುವಂತಹ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅಶ್ವಮೇಧ ಯಾಗದ ನಿಜವಾದ ಅರ್ಥ ತಿಳಿದಾಗ ಅದನ್ನು ವಿರೋಧಿಸುವ ಪ್ರಸಂಗವೇ ಎದುರಾಗುವುದಿಲ್ಲ. ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ........ "ಅಶ್ವಂ ಇತಿ ರಾಷ್ಟ್ರಂ" ಅದರ ವಿವರಣೆ ಹೀಗಿದೆ. ಶ್ವ: ಅಂದರೆ ನಾಳೆ. ಅಶ್ವ: ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ. ಯಾವುದು ಶಾಶ್ವತವಲ್ಲವೋ ಅದಕ್ಕೆ ನಿನ್ನೆ ನಾಳೆಗಳಿರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ "ಅಶ್ವಂ ಇತಿ ರಾಷ್ಟ್ರಂ" ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.["ದೇಹ ನಶ್ವರ-ದೇಶ ಶಾಶ್ವತ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ಇಂದು ಇದ್ದು ನಾಳೆ ಇಲ್ಲಾವಾಗುವವರು ನಾವು ನೀವು.
ಇನ್ನು "ಮೇಧ" ಎಂದರೆ " ಸಂಗಮೇ" ಅಂದರೆ ಒಟ್ಟು ಗೂಡಿಸು.ಎಂದಾಗ ರಾಷ್ಟ್ರವನ್ನು ಒಟ್ಟು ಗೂಡಿಸಲು ಮಾಡುವ ಕಾರ್ಯಕ್ರಮಗಳೆಲ್ಲಾ " ಅಶ್ವಮೇಧ ಯಾಗವೇ" ಎಂದಂತಾಯ್ತು. ಎಂತಹಾ ಶ್ರೇಷ್ಠವಾದ ಅರ್ಥ ಇದೆಯಲ್ಲವೇ?. ಸತ್ಯವನ್ನು ಆವಿಷ್ಕಾರ ಮಾಡಿದಾಗ ಮಾತ್ರವೇ ಇಂತಹ ಅದ್ಭುತಗಳು ಗೋಚರವಾಗಲು ಸಾಧ್ಯ.

ಜೀವನವೇದ-೦೭


ಸಂಧ್ಯಾವಂದನೆ ಮತ್ತು ದೇವತಾರ್ಚನೆ ಮಾಡುವಾಗ ಹೇಳುವ ಮಾರ್ಜನ ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ.
ಅಥರ್ವ ವೇದದ ಮೊದಲ ಕಾಂಡದ ಐದನೇ ಸೂಕ್ತ:
ಮಂತ್ರ-೧
ಆಪೋ ಹಿ ಷ್ಠಾ ಮಯೋ ಭುವಸ್ತಾ ನ ಊರ್ಜೇ ದಧಾತನ |
ಮಹೇ ರಣಾಯ ಚಕ್ಷಸೇ ||
ಅರ್ಥ:
ಆಪ: = ಜಲಧಾರೆಗಳೇ
ಮಯೋಭುವ: = ನೀವು ಕಲ್ಯಾಣದಾಯಿನಿಯರು
ಸ್ಥ = ಆಗಿದ್ದೀರಿ
ತಾ: = ಆ ಜಲಧಾರೆಗಳು
ನ: = ನಮ್ಮನ್ನು
ಊರ್ಜೇ = ಬಲಯುತರನ್ನಾಗಿಸಲಿ
ಮಹೇ ರಣಾಯ ಚಕ್ಷಸೇ = ಮಹಾ ರಮಣೀಯವಾದ ದೃಷ್ಟಿಗಾಗಿ
ದಧಾತನ = ಒದಗಲಿ
ಭಾವಾರ್ಥ:-
ಕಲ್ಯಾಣದಾಯಿನಿಯರಾದ ಈ ನದೀನದಾದಿಗಳು ನಮ್ಮನ್ನು  ಸುಂದರರನ್ನಾಗಿಯೂ, ಬಲಶಾಲಿಗಳನ್ನಾಗಿಯೂ ಮಾಡಲಿ. ಸಂಧ್ಯಾವನೆ ಆರಂಭದಲ್ಲಿ  ಉದ್ಧರಣೆಯಲ್ಲಿ ನೀರು ತುಂಬಿ ಬೆರಳುಗಳನ್ನು ಅದರಲ್ಲಿ ಅದ್ದಿ ಈ ಮಂತ್ರವನ್ನು ಹೇಳುತ್ತಾ ದೇಹದ ಅಂಗಾಂಗಗಳಮೇಲೆ ಚುಮುಕಿಸಿಕೊಳ್ಳುತ್ತೇವೆ. ಉಪನಯನ ಸಂಸ್ಕಾರವಾಗುವ ವಟುಗಳಿಗೆ ಸಾಮಾನ್ಯವಾಗಿ ಈ ಮಂತ್ರದ ಲಾಭವನ್ನು ಹೇಳುವಾಗ ಹೀಗೆ ಹೇಳುವುದನ್ನು ಕೇಳಿದ್ದೇನೆ  ನಿಮಗರಿವಿದ್ದೋ ಅಥವಾ ಅರಿವಿಲ್ಲದೆಯೋ ಶಾರೀರಿಕವಾಗಿ ಮಾಡಿದ ಪಾಪವು ಈ ಮಂತ್ರಹೇಳಿ ನೀರನ್ನು ಪ್ರೋಕ್ಷಣೆಮಾಡಿಕೊಳ್ಳುವುದರಿಂದ ನಿವಾರಣೆಯಾಗಿ  ಶರೀರವು ಶುದ್ಧಿಯಾಗುತ್ತದೆ
ವೇದಮಂತ್ರಗಳನ್ನು  ಹೀಗೆ ಅರ್ಥೈಸುವುದು ಎಷ್ಟು ಸರಿ? ಈ ಮಂತ್ರವನ್ನು ಹೇಳುತ್ತಾ  ನೀರನ್ನು ಪ್ರೋಕ್ಷಿಸಿಕೊಳ್ಳುವುದರಿಂದ  ನೀನು ಮಾಡಿದ  ಪಾಪವು ಪರಿಹಾರವಾಗುತ್ತದೆಂದು ಈ ಮಂತ್ರದಲ್ಲಿ ಎಲ್ಲಿ ಹೇಳಿದೆ? ವೇದವಾದರೋ ಪಾಪಕೃತ್ಯವನ್ನು ಮಾಡಲು ಆಸ್ಪದವನ್ನೇ ಕೊಡುವುದಿಲ್ಲ.ಒಂದು ವೇಳೆ ಪಾಪಕೃತ್ಯವನ್ನು ಮಾಡಿದರೆ ಅದರ ಪ್ರತಿಫಲವನ್ನು ಅವನು ಎದುರಿಸಲೇ ಬೇಕಾಗುತ್ತದೆ.
ಹಾಗಾದರೆ ಈ ಮಂತ್ರವು ಏನು ಹೇಳುತ್ತದೆ?
 ಈ ಮಂತ್ರದ ಸರಿಯಾದ  ಅರ್ಥವನ್ನು ತಿಳಿದು ಸಂಧ್ಯಾವಂದನೆ ಮಾಡಿದರೆ! ನೀರನ್ನು ಮೈ ಮೇಲೆ ಪ್ರೋಕ್ಷಣೆ ಮಾಡಿಕೊಳ್ಳುವಾಗ ಅದನ್ನು ನೀಡಿರುವ ಭಗವಂತನನ್ನು ಮನದಲ್ಲಿ ಸ್ಮರಿಸಿಕೊಂಡು “ ಆ  ಭಗವಂತನು ನನಗೆ ಶಕ್ತಿ ಕೊಡಲಿ, ಕಾಂತಿ ಕೊಡಲಿ” ಎಂದು ಪ್ರಾರ್ಥಿಸುತ್ತಾ ಕ್ರಿಯೆಯನ್ನು ಮಾಡಿದರೆ ಮನಸ್ಸಿನಲ್ಲಿ ನಾವು ಏನು ಭಾವಿಸುತ್ತೇವೆಯೋ ಅದರಂತೆಯೇ ಆಗುತ್ತೇವೆ. ಆದ್ದರಿಂದ ನೀರನ್ನು ಪ್ರೋಕ್ಷಿಸಿಕೊಳ್ಳುವುದು ಒಂದು ನೆಪ ಅಷ್ಟೆ. ಆದರೆ ನೀರನ್ನು ಪ್ರೋಕ್ಷಿಸಿಕೊಳ್ಳುವಾಗ ನಮ್ಮಲ್ಲಿ ಈ ಅಂಶಗಳು ಮೂಡಿದರೆ ನಾವು ಆರೋಗ್ಯವಂತರೂ, ರಮಣೀಯರೂ, ಬಲಶಾಲಿಗಳೂ ಆಗುವುದರಲ್ಲಿ ಸಂದೇಹವಿಲ್ಲ. ಆದರೆ ಯಾಂತ್ರಿಕವಾಗಿ ನೀರನ್ನು ಪ್ರೋಕ್ಷಿಸಿಕೊಳ್ಳುತ್ತಾ ಮನದಲ್ಲಿ ಅನ್ಯ ಚಿಂತೆಗಳು ಮೂಡಿದರೆ ನಾವು ಹೇಳುವ ಮಾರ್ಜನ ಮಂತ್ರದ ಪ್ರಭಾವವು ನಮ್ಮ ಶರೀರ ಮನಸ್ಸುಗಳ ಮೇಲೆ ಯಾವ ಪರಿಣಾಮವನ್ನೂ ಬೀರಲಾರದು. ಅಲ್ಲದೆ ಕೇವಲ ನೀರನ್ನು ಪ್ರೋಕ್ಷಿಸಿಕೊಂಡರೆ ಮಾಡಿದ್ದ ಪಾಪವು ಪರಿಹಾರವಾಗಲಾರದು. 

ಮಂತ್ರ-೨
ಯೋ ವ: ಶಿವತಮೋ ರಸಸ್ತಸ್ಯ ಭಾಜಯತೇಹ ನ: |
ಉಶತೀರಿವ ಮಾತರ: ||
ಅರ್ಥ:
ಯ: = ಯಾವ
ವ: = ಆ ಜಲವು
ಶಿವತಮ: ರಸ: = ಅತ್ಯಂತ ಕಲ್ಯಾಣಕಾರವಾದ ರಸವಿದೆಯೋ
ಉಶತೀ: ಮಾತರ: ಇವ = ಮಮತೆಯ ಮಾತೆಯರಂತೆ
ನ: ಇಹ ತಸ್ಯ ಭಾಜಯತೇ = ನಮಗೆ ಅದರ ಭಾಗವು ಲಭಿಸಲಿ
ಭಾವಾರ್ಥ: ತಾಯಂದಿರು ವಾತ್ಸಲ್ಯದಿಂದ ತಮ್ಮ ಮಕ್ಕಳಿಗೆ ನೆಲೆ ನೀಡುವಂತೆ, ಆಸರೆಯಾಗುವಂತೆ ಅಮೃತಮಯ ಜಲಧಾರೆಗಳ ಆಶ್ರಯದಲ್ಲಿ ನಮಗೆ ಬದುಕು ಲಭಿಸಲಿ.
ಈ ಮಂತ್ರದ ಅರ್ಥ ಎಷ್ಟು ಸೊಗಸಾಗಿದೆ!  ಎಂತಹಾ ಅದ್ಭುತ ಹೋಲಿಕೆ! ತಾಯಾಂದಿರು ತಮ್ಮ ಮಕ್ಕಳಿಗೆ ಮಮಕಾರದಿಂದ ಆಶ್ರಯ ಕೊಡುವಂತೆ ನಮಗೆ ಭಗವಂತನು ಸೃಷ್ಟಿಸಿರುವ ಜಲಧಾರೆಗಳು ಆಶ್ರಯ ಕೊಡಲಿ. ಇಲ್ಲಿ ನೀರಿನ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಪ್ರೋಕ್ಷಿಸಿಕೊಳ್ಳುತ್ತಿರುವ ನೀರು ಅಂತಿಂತಾ ನೀರಲ್ಲ. ಅದು ಪವಿತ್ರ ಗಂಗೆ! ಅದು ನನಗೆ ಆಶ್ರಯ ಕೊಡಲಿ, ಎಂದರೆ ನಮ್ಮ ಆರೋಗ್ಯಭಾಗ್ಯ ನಮಗೆ ಲಭಿಸಿರುವುದೇ ಈ ಪವಿತ್ರವಾದ ನೀರಿನಿಂದ. ನೀರಿಲ್ಲದ ಒಂದು ದಿನವನ್ನು ಕಲ್ಪಿಸಿಕೊಳ್ಳಿ. ಮನುಶ್ಯನಿಗೆ ಏನಿಲ್ಲದಿದ್ದರೂ ಗಾಳಿ, ನೀರು ಮಾತ್ರ ಅತ್ಯಗತ್ಯವಾಗಿ ಬೇಕು. ನಮಗೆ ಅದರ ಮಹತ್ವ ಗೊತ್ತಿದೆಯೇ? ಎಲ್ಲವೂ ನಮಗೆ ಯಾವ ಸಮಸ್ಯೆಇಲ್ಲದೆ ದೊರಕುತ್ತಿದ್ದಾಗ ಅದರ ಮಹತ್ವ ಗೊತ್ತಾಗುವುದಿಲ್ಲ. ಆದರೆ ಅದರ ಲಭ್ಯತೆ ಕಷ್ಟವಾದಾಗ ಆ ವಸ್ತುವಿನ ಮಹತ್ವ ಗೊತ್ತಾಗುತ್ತದೆ. ನಮ್ಮ ಆರೋಗ್ಯದ ವಿಚಾರದಲ್ಲೂ ಅಷ್ಟೆ. ಮನುಶ್ಯನು ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಾಗಿದ್ದಾಗ  ಆರೋಗ್ಯದ ಮಹತ್ವ ಗೊತ್ತಾಗುವುದೇ ಇಲ್ಲ. ಆದರೆ ಒಂದುವಾರ ಹಾಸಿಗೆ ಹಿಡಿದು ಮಲಗಿ ಪುನ: ಸುಧಾರಿಸಿಕೊಂಡು ಹಾಸಿಗೆಯಿಂದ ಎದ್ದಾಗ ಮನುಶ್ಯನ ಮಾನಸಿಕತೆ ಹೇಗಿರುತ್ತದೆ? ಮನುಶ್ಯನು ಬಲು ಸಂತಸಗೊಂಡು ಸ್ನೇಹಿತರೊಡನೆಲ್ಲಾ ತನ್ನ ಸಂತಸವನ್ನು ಹಂಚಿಕೊಳ್ಳುತ್ತಾನೆ. ಈಗ ಯೋಚಿಸೋಣ. ಆರೋಗ್ಯ ಕೆಡುವುದಕ್ಕಿಂತ ಒಂದು ದಿನ ಹಿಂದೆ ಇವತ್ತು ಪಡುತ್ತಿರುವ ಸಂತೋಷ ಅನುಭವಿಸಿದ್ದಿರಾ? ಇಲ್ಲ,  ಎನ್ನುವುದಾದರೆ ಯಾಕೇ?  ಏಕೆಂದರೆ ಆರೋಗ್ಯವಂತ ಬದುಕಿನ ಮಹತ್ವ ನಮಗೆ ಗೊತ್ತಿಲ್ಲ. ಯಾವಾಗ ಆರೋಗ್ಯ ಕೆಡುತ್ತದೆಯೋ ಆಗ ಅದರ ಮಹತ್ವದ ಅರಿವಾಗುತ್ತದೆ.
ನೀರಿನ, ಗಾಳಿಯ ವಿಷಯದಲ್ಲೂ ಅಷ್ಟೆ. ನಾವು ನೀರನ್ನು ಅದೆಷ್ಟು ಪೋಲು ಮಾಡುತ್ತೇವೋ! ವಾತಾವರಣವನ್ನು ಅದೆಷ್ಟು ಕಲುಶಿತಗೊಳಿಸುತ್ತೇವೆಯೋ! ಕಾರಣ ಗಾಳಿ ಮತ್ತು ನೀರನ್ನು ಹಣಕೊಟ್ಟು ಕೊಳ್ಳಲಿಲ್ಲವಲ್ಲಾ! [ನಗರಗಳಲ್ಲಿ  ವಾಟರ್ ಟ್ಯಾಕ್ಸ್ ಕಟ್ಟಿದರೂ ಅದು ಬಲು ಕಡಿಮೆ] ರಸ್ತೆಯಲ್ಲಿ ತಿರುಗಾಡುವಾಗ  ನಾಲ್ಕಾರು ಮನೆಗಳಿಂದ ಓವರ್ ಹೆಡ್ ಟ್ಯಾಂಕ್ ತುಂಬಿ ಚಿರಂಡಿಗೆ ಅದೆಷ್ಟು ನೀರು ಹರಿದು ಹೋಗುತ್ತದೋ! ಅಂತೆಯೇ ಗಾಳಿಯನ್ನು ನಾವು ಅದೆಷ್ಟು ಕಲುಶಿತಗೊಳಿಸುತ್ತೇವೆಯೋ!
ಈ ಮಂತ್ರವನ್ನು ಹೇಳುವಾಗ   ನೀರು ಮತ್ತು ಗಾಳಿಯ ಮಹತ್ವವು ನಮಗೆ  ಅರ್ಥವಾಗಬೇಕು. ಮಹತ್ವವರಿತು  ಅದರಂತೆ ನಡೆದರೆ  ನೀರು ನಮಗೆ ಆರೋಗ್ಯವನ್ನೂ , ಜೀವನದಲ್ಲಿ ನೆಮ್ಮದಿ, ಶಾಂತಿಯನ್ನೂ ನೀಡುತ್ತದೆ.
ಮಂತ್ರ-೩     
ತಸ್ಮಾ ಅರಂ ಗಮಾಮ ವೋ ಯಸ್ಯ ಕ್ಷಯಾಯ ಜಿನ್ವಥ|ಆಪೋ ಜನಯಥಾ ಚ ನ: ||
ಅರ್ಥ:
ಯಸ್ಯ ಕ್ಷಯಾಯ ಜಿನ್ವಥ = ಯಾವನನ್ನು ನೆಲೆಗೊಳಿಸಲು ಅವು ಹರಿದುಬರುತ್ತವೋ
ತಸ್ಮೈ = ಅವನಿಗಾಗಿ
ಅರಂ ಗಮಾಮ = ಸೂಕ್ತವಾಗಿ ಬಳಸಿಕೊಳ್ಳುತ್ತೇವೆ [ಅವು]
ನ: = ನಮ್ಮನ್ನು
ಜನಯಥ = ಬಲಪಡಿಸಲಿ
ಭಾವಾರ್ಥ:
ನಮ್ಮ ಕಲ್ಯಾಣಕ್ಕೆಂದೇ ಹರಿಯುವ ಜಲರಾಶಿಯನ್ನು ಸಂಪೂರ್ಣವಾಗಿ ಆಶ್ರಯಿಸುತ್ತೇವೆ. ಅವು ನಮ್ಮ ಬದುಕನ್ನು ನಿರಂತರ ಸಂಮೃದ್ಧಗೊಳಿಸಲಿ.
ಮಂತ್ರ-೪
ಈಶಾನಾ ವಾರ್ಯಾಣಾಂ ಕ್ಷಯಂತೀಶ್ಚರ್ಷಣೀನಾಮ್ |
ಅಪೋ ಯಾಚಾಮಿ ಭೇಷಜಮ್ ||
ಅರ್ಥ:
ವಾರ್ಯಾಣಾಂ = ಅಭಿಲಾಷೆ ಪಟ್ಟ ಇಷ್ಟಾರ್ಥಗಳ
ಈಶಾನಾ ಆಪ: = ಗಂಗಾ ಮಾತೆಯಿಂದ
ಚರ್ಷಣೀನಾಂ = ಜೀವಕೋಟಿಗಳ
ಕ್ಷಯಂತೀ: = ರೋಗಗಳನ್ನು ನಾಶಮಾಡುವ
ಭೇಷಜಂ ಯಾಚಾಮಿ = ಔಷಧಿಯು ದೊರಕಲಿ
ಭಾವಾರ್ಥ:
ಇಷ್ಟಾರ್ಥಗಳನ್ನು ನೀಡುವ ಜಲಧಾರೆಗಳು ನಮಗೆ ದಿವ್ಯ ಔಷಧಿಗಳನ್ನು ನೀಡಲಿ.
ಈ ಎರಡು ಮಂತ್ರಗಳು ನೀರಿನ ವಿಶೇಷ ಗುಣಗಳನ್ನು ವಿವರಿಸುತ್ತಾ ,ಇಂತಾ ಪವಿತ್ರ ನೀರು ನಮ್ಮ ಬದುಕನ್ನು ಸಂಮೃದ್ಧ ಗೊಳಿಸಲೆಂದೂ, ನೀರಿನ ಔಷಧ ಗುಣವು ನಮ್ಮ ಆರೋಗ್ಯವನ್ನು ಚೆನ್ನಾಗಿಟ್ಟಿರಲಿ ಎಂದೂ ಭಗವಂತನನ್ನು ನಾವು  ಈ ಮಂತ್ರದ ಮೂಲಕ ಪ್ರಾರ್ಥಿಸುವಾಗಲೇ ನೀರಿನ ಪಾವಿತ್ರ್ಯವನ್ನು ಹಾಳುಗೆಡವದಂತೆ ನಾನು ಜೀವನ ನಡೆಸುತ್ತೇನೆಂದೂ ಸಹ ಸಂಕಲ್ಪ ಮಾಡಿದಾಗ, ನಮ್ಮ ಸಂಧ್ಯಾವಂದನೆಯು  ನಮ್ಮ ಆರೋಗ್ಯದ ಮೇಲೆ ಸತ್ಪ್ರಭಾವವನ್ನು ಬೀರುವುದಲ್ಲದೆ ನಮ್ಮ ಬದುಕಿನಲ್ಲಿ  ನೆಮ್ಮದಿಯೂ  ಶಾಂತಿಯೂ ನೆಲೆಸುವುದು.

-ಹರಿಹರಪುರಶ್ರೀಧರ್

Wednesday, March 12, 2014

ಶರ್ಮರಿಗೊಂದು ಪತ್ರ


ವೇದಧ್ಯಾಯಿ ಶ್ರೀಸುಧಾಕರ ಶರ್ಮ ರವರಿಗೆ ವಂದನೆಗಳು. 
ತಮ್ಮ ವೇದೋಕ್ತವಾದ ನುಡಿಗಳಿಂದ ನಮ್ಮೆಲ್ಲರಿಗೂ ವೇದತತ್ವಗಳನ್ನ ಬೋಧಿಸುತ್ತಿದ್ದೀರಿ. ಅದಕ್ಕಾಗಿ ಅಭಿನಂದನೆಗಳು-ಧನ್ಯವಾದಗಳು.   ಹಾಗುಬ್ಲಾಗ್.ವೇದಸುಧೆ.ಕೊಂ  ನ  ಗೌರವ ಸಂಪಾದಕರು: ಶ್ರೀ ಕವಿ ನಾಗರಾಜ್|ನಿರ್ವಾಹಕ ಸಂಪಾದಕರು:ಶ್ರೀ ಪ್ರಸನ್ನ.ಎಸ್.ಪಿ|ಸಂಪಾದಕರು:ಹರಿಹರಪುರಶ್ರೀಧರ್ ಇವರಿಗೂ 

ಅಭಿನಂದನೆಗಳು-ಧನ್ಯವಾದಗಳು.

ಮಹರ್ಷಿ ದಯಾನಂದ ಸರಸ್ವತಿ ಯವರ ಜೀವನಕಥೆಯನ್ನು ಮತ್ತು ಅವರು ರಚಿಸಿದ  "ಸತ್ಯಾರ್ಥಪ್ರಕಾಶ" ಗ್ರಂಥವನ್ನು ಓದಿದ್ದೇನೆ.   ವೇದಸುಧೆ / ಚಂದನ ಟಿವಿ / ಶಂಕರ ಟಿವಿ ಮೂಲಕ ಹಲವು ವರ್ಷಗಳಿಂದ ನಿಮ್ಮ ಪ್ರವಚನಗಳನ್ನು ಆಲಿಸಿದ್ದೇನೆ.  ನನ್ನ ಎಲ್ಲಾತಳಮಳಗಳಿಗೂ ನಿಮ್ಮ ವೇದೋಕ್ತವಾದ ನುಡಿಗಳಿಂದ ಪರಿಹಾರ ಸಿಕ್ಕಿದೆ.


ಆದರೂ ಎರಡು ಪ್ರಶ್ನೆಗಳನ್ನು ಈ ಮೂಲಕ ಕೇಳುತ್ತಿದ್ದೇನೆ. ದಯವಿಟ್ಟು ಉತ್ತರಿಸಿ.

1.   ನಮ್ಮ ಮನೆ ಗುಡ್ಡಗಾಡು ಸ್ಥಳದಲ್ಲಿರುವುದರಿಂದ ವಿಷಜಂತುಗಳು ಸಾಮಾನ್ಯವಾಗಿ ಬರುತ್ತಿರುತ್ತವೆ.  ನಾಗರಹಾವನ್ನು ಬಿಟ್ಟು ಬೇರೆ ವಿಷವುಳ್ಳ ಹಾವುಗಳನ್ನು ನಮ್ಮ ಊರಿನಲ್ಲಿ ಕೊಲ್ಲುವ ಕ್ರಿಯೆ ನಡೆಯುತ್ತದೆ.  ಭಗವಂತನ ಈ ಅದ್ಭುತ ಸೃಷ್ಟಿಯಲ್ಲಿ ಅವುಗಳಿಗೂ ಬದುಕುವ ಹಕ್ಕಿಲ್ಲವೇ? ಎಂದನಿಸುತ್ತಿದೆ.  ತಮ್ಮ ಅಭಿಪ್ರಾಯವೇನು?

2.   ಹೆಣ್ಣು ಮಕ್ಕಳ ತಲೆಗೂದಲು ಬಾಚುವಾಗ, ಹೇನುಗಳು ಸಿಗುತ್ತವೆ ಸಹಜ.  ಸಾಮಾನ್ಯವಾಗಿ ಸಿಕ್ಕಿದ ಹೇನುಗಳನ್ನು ಕೊಲ್ಲುವ ಪದ್ದತ್ತಿಯನ್ನು ರೂಢಿಸಿಕೊಂಡಿದ್ದೇವೆ. ಇದು ಸರಿಯೇ?

ದಯವಿಟ್ಟು ಉತ್ತರಿಸುವಿರಾ?

ಧನ್ಯವಾದಗಳೊಂದಿಗೆ,

ಸುರೇಂದ್ರ ಶೆಟ್ಟಿಗಾರ್

ಕೋಟ್ನಾಕಟ್ಟೆ, ಹಿರಿಯಡಕ, ಉಡುಪಿ.   Mobile: 9483931868


----------------------------------------------------------------


ಶ್ರೀಯುತ ಸುರೇಂದ್ರರೇ,

ನಮಸ್ತೆ. ಶ್ರೀ ಶರ್ಮರ ಆರೋಗ್ಯವು ಸ್ವಲ್ಪ ಸುಧಾರಿಸಬೇಕಾಗಿದೆ. ಹಾಗಾಗಿ ಉತ್ತರವು ತಡವಾಗಬಹುದು.

-ಹರಿಹರಪುರಶ್ರೀಧರ್

Tuesday, March 11, 2014

ಗೋಗ್ರಾಸ ನೀಡುವಿರಾ?

     ಮೈಸೂರು ಜಿಲ್ಲೆ ಕೆ.ಆರ್.ನಗರ ತಾ. ಹಂಪಾಪುರದಲ್ಲಿರುವ ಶ್ರೀಮತಿ ಸ್ವರೂಪರಾಣಿ ಮತ್ತು ಶ್ರೀ ಮದುಸೂದನ್ ದಂಪತಿಗಳು ತಮ್ಮ ಮಗನ ಸ್ಮರಣೆಯಲ್ಲಿ  ಸುಭಾಷ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಗೋಶಾಲೆಯಲ್ಲಿ ಸುಮಾರು 35 ಗೋವುಗಳಿವೆ. ಗೋವುಗಳ ಮೇವಿಗಾಗಿ ಪ್ರತಿ ದಿನ ಸುಮಾರು ರೂ. 2500/- ವೆಚ್ಚ ಬರುತ್ತದೆ. ಈ ಗೋಶಾಲೆಯ ನಿರ್ವಹಣೆಗೆ ಗೋಪ್ರೇಮಿಗಳು ಸಹಕರಿಸದಿದ್ದರೆ ಗೋವುಗಳ ನಿರ್ವಹಣೆ ಕಷ್ಟಕರವೆಂಬುದು ಪ್ರತ್ಯಕ್ಷವಾಗಿ ಭೇಟಿ ನೀಡಿರುವ ವೇದಭಾರತಿಯ ಸದಸ್ಯರ ಗಮನಕ್ಕೆ ಬಂದಿದೆ. ಕೆಲವು ದಿನಗಳಿಗಾಗಿವಷ್ಟಾದರೂ ಗೋಗ್ರಾಸಕ್ಕೆ ಆರ್ಥಿಕ ಸಹಕಾರ ನೀಡಬೇಕೆಂಬ ಅನಿಸಿಕೆಗೆ ತಕ್ಷಣ ಸ್ಪಂದಿಸಿ ಇವರುಗಳು ತಲಾ ರೂ. 2500/- ಅನ್ನು ಕೊಟ್ಟಿದ್ದಾರೆ:
ಶ್ರೀಯುತರಾದ: 1. ಕ.ವೆಂ.ನಾಗರಾಜ್, 2. ಹರಿಹರಪುರ ಶ್ರೀಧರ್, 3. ಅಶೋಕ್, 4. ಸಣ್ಣಸ್ವಾಮಿಶೆಟ್ಟಿ.
10-20 ದಿನಗಳಿಗಾಗುವಷ್ಟಾದರೂ ಸಂಗ್ರಹಿಸಿಕೊಡೋಣ. ಆಸಕ್ತರು, ಗೋಪ್ರೇಮಿಗಳು ಕೈಜೋಡಿಸುವಿರಾ?
-ವೇದಭಾರತಿಯ ಸದಸ್ಯರು.




Sunday, March 9, 2014

ದೇವನ ನೆನೆಯುವೆ

ಬೆಳಗಾಗಿ ನಾನೆದ್ದು ದೇವನ ನೆನೆಯುವೆ
ಪರಮಸಂಪದದೊಡೆಯ ತೇಜಸ್ವಿಯ |
ಭೂತಾಯಿಯಂತೆ ಮತ್ತೆ ಆಗಸದಂತೆ
ಎಲ್ಲೆಲ್ಲೂ ಇರುವವಗೆ ಶರಣೆನ್ನುವೆ || ೧ ||

ಬುದ್ಧಿಗೊಡೆಯ ಜಗದೀಶನ ನೆನೆಯುವೆ
ಕರ್ಮಫಲದಾತ ಜ್ಯೋತಿರ್ಮಯನ |
ಮಂಗಳಮಯ ಸಕಲ ಲೋಕಪ್ರಿಯ
ದೇವಾಧಿದೇವನಿಗೆ ಶರಣೆನ್ನುವೆ || ೨ ||

ನಿತ್ಯವಿಜಯಿಯಾದ ಒಡೆಯನ ನೆನೆಯುವೆ 
ಸಕಲ ಲೋಕಾಧಾರ ತೇಜಸ್ವಿಯ |
ಪಾತಕಿಕಂಟಕ ಸತ್‌ಪ್ರಕಾಶ ಈಶ
ಸರ್ವಜ್ಞ ದೇವನಿಗೆ ಶರಣೆನ್ನುವೆ || ೩ ||

ಮನೋಧಿನಾಯಕ ದೇವನ ಬೇಡುವೆ
ಕೊಡು ಮತಿಯ ಕೊಡು ಸಕಲ ಸಂಪತ್ತಿಯ |
ಮಾಡೆನ್ನ ಸತ್ಪ್ರಜೆಯ ಬೆಳೆಸುತಲಿ ಸಜ್ಜನರ
ಸತ್ಯಕ್ಕಾಧೀಶ ದೇವ ಶರಣೆನ್ನುವೆ || ೪ ||

ಪರಮ ಬೆಳಕಿನೊಡೆಯ ದೇವನ ಬೇಡುವೆ
ಕರುಣಿಸು ರಕ್ಷೆ ಮೇಣ್ ಸಕಲಸುಖವ |
ಸಜ್ಜನರ ಸುಮತಿಯ ಪಾಲಿಸುವ ಮನವ
ನೀಡೆಂದು ಬೇಡುತ ಶರಣೆನ್ನುವೆ || ೫ ||

ಜಗದಂತರಾತ್ಮನೆ ವಿದ್ವಜ್ಜನರ ಬೇಡುವೆ
ನಿಮ್ಮಂತೆ ಎಮಗೂ ಸಿಗಲಿ ಸದ್ಬುದ್ಧಿ |
ಸಕಲಜಗವು ನಿನ್ನ ಹಾಡಿ ಹೊಗಳುತಲಿರಲು
ದಾರಿ ತೋರೈ ಪ್ರಭುವೆ ಶರಣೆನ್ನುವೆ || ೬ ||
-ಕ.ವೆಂ.ನಾ.
************** 
ಆಧಾರ:
ಓಂ ಪ್ರಾತರಗ್ನಿಂ ಪ್ರಾತರಿಂದ್ರಂ ಹವಾಮಹೇ ಪ್ರಾತರ್ಮಿತ್ರಾವರುಣಾ ಪ್ರಾತರಶ್ವಿನಾ |
ಪ್ರಾತರ್ಭಗಂ ಪೂಷಣಂ ಬ್ರಹ್ಮಣಸ್ಪತಿಂ ಪ್ರಾತಃ ಸೋಮಮುತ ರುದ್ರಂ ಹುವೇಮ || (ಋಕ್.೭.೪೧.೧.)

ಓಂ ಪ್ರಾತರ್ಜಿತಂ ಭಗಮುಗ್ರಂ ಹುವೇಮ ವಯಂ ಪುತ್ರಮದಿತೇರ್ಯೋ ವಿಧರ್ತಾಃ |
ಆಧ್ರಶ್ಚಿದ್ ಯಂ ಮನ್ಯಮಾನಸ್ತುರಶ್ಚಿದ್ ರಾಜಾ ಚಿದ್ ಯಂ ಭಗಂ ಭಕ್ಷೀತ್ಯಾಹ || (ಋಕ್.೭.೪೧.೨.)

ಓಂ ಭಗ ಪ್ರಣತೇರ್ಭಗ ಸತ್ಯರಾಧೋ ಭಗೇಮಾಂ ಧಿಯಮುದವಾ ದದನ್ನಃ |
ಭಗ ಪ್ರ ಣೋ ಜನಯ ಗೋಭರಶ್ವೈರ್ಭಗ ಪ್ರ ನೃಭಿರ್ನೃವಂತಃ ಸ್ಯಾಮ || (ಋಕ್.೭.೪೧.೩.)

ಓಂ ಉತೇದಾನೀಂ ಭಗವಂತಃ ಸ್ಯಾಮೋತ ಪ್ರಪಿತ್ವ ಉತ ಮಧ್ಯೇ ಅಹ್ನಾಂ |
ಉತೋದಿತಾ ಮಘವನ್ ತ್ಸೂರ್ಯಸ್ಯ ವಯಂ ದೇವಾನಾಂ ಸುಮತೌ ಸ್ಯಾಮ || (ಋಕ್.೭.೪೧.೪.)

ಓಂ ಭಗ ಏವ ಭಗವಾನ್ ಅಸ್ತು ದೇವಸ್ತೇನ ವಯಂ ಭಗವಂತಃ ಸ್ಯಾಮ |
ತಂ ತ್ವಾ ಭಗ ಸರ್ವ ಇಜ್ಜೋಹವೀ ತಿ ಸ ನೋ ಭಗ ಪುರಏತಾ ಭವೇಹಃ || (ಋಕ್.೭.೪೧.೫.)


ಚಿತ್ರ: ಅಂತರ್ಜಾಲದಿಂದ ಹೆಕ್ಕಿದ ರಾಯಲ್ಟಿ ಮುಕ್ತ ಚಿತ್ರ (dreamstine.com)

Friday, March 7, 2014

ಮೌನರಾಗ

ಚರ್ಚೆ...ಚರ್ಚೆ...ಚರ್ಚೆ...ಎಲ್ಲಿಯ ವರಗೆ ?
ಜೇನುನೊಣವು ಹೂವಿನ ಮೇಲೆ ಕುಳಿತು ಅದರ ಮಕರಂದದ ಸವಿಯನ್ನು ತಿಳಿಯುವ ವರಗೆ ಶಬ್ಧವನ್ನು ಮಾಡುತ್ತಿರುತ್ತದೆ.ಮಕರಂದದ ಸವಿಯ ಅನುಭವವಾಗುತ್ತಿದ್ದಂತೆ  ಶಬ್ಧವನ್ನು ನಿಲ್ಲಿಸುತ್ತದೆ. ಮನುಷ್ಯನೂ ಅಷ್ಟೆ  ಅಧ್ಯಾತ್ಮವು ಅರ್ಥವಾಗುವವರೆಗೂ ವಾದ  ಮಾಡುತ್ತಿರುತ್ತಾನೆ. ಒಮ್ಮೆ ಅದರ ಸವಿ ತಿಳಿದರೆ ಅದನ್ನು ಅನುಭವಿಸುತ್ತಾ ಮಾತು ಕಡಿಮೆ ಮಾಡುತ್ತಾನೆ.

           ವೇದವು ಪ್ರಶ್ನೆ ಮಾಡಿ ತಿಳಿದುಕೋ ಎನ್ನುತ್ತ್ತದಲ್ಲಾ! ಹೌದು ತಿಳಿದವರನ್ನು ಕೇಳಿ ನಮಗೆ ಗೊತ್ತಿರದ ವಿಷಯವನ್ನು ತಿಳಿದುಕೊಳ್ಳಬೇಕು. ಆದರೆ ನಮ್ಮ ಅರೆ ಬರೆ ತಿಳುವಳಿಕೆಯಿಂದ ವಾದ ಮಾಡಿ ಗೆಲ್ಲಬೇಕೆಂಬ ವಿಚಾರವಿರಬಾರದು.ವಾದದಲ್ಲಿ ಶಕ್ತಿಯ ಅಪವ್ಯಯವಾಗುತ್ತದೆ. ವಿಚಾರವನ್ನು ಆಲಿಸುವುದರಿಂದ ಶಕ್ತಿಯು ಹೆಚ್ಚುತ್ತದೆ.ನಮ್ಮ ಸಂದೇಹಗಳನ್ನೆಲ್ಲಾ ನಮಗಿಂತ ಹೆಚ್ಚು ತಿಳಿದವರಲ್ಲಿ ಕೇಳಿ ಪರಿಹರಿಸಿಕೊಳ್ಳಬೇಕು. ಆದರೆ ಜೀವನ ಪೂರ್ಣ ಅವರು ಹೇಳುವುದಕ್ಕೆ, ನಾನು ಕೇಳುವುದಕ್ಕೆ ,ಎನ್ನುವಂತಾಗಬಾರದು. ನಾನೂ ಹೇಳುವ ಹಂತಕ್ಕೆ ಬೆಳೆಯಬೇಕು. ಆದರೆ ಬೇರೆಯವರು ಕೇಳುವ ವರೆಗೂ ನಾವಾಗಿಯೇ  ಹೇಳುತ್ತಾ ವಲ್ಲದವರಿಗೆ ಹೇರುವ ದುಸ್ಸಾಹಸ ಮಾಡಬಾರದು.ಕೊನೆಗಾದರೂ ಮೌನದಿಂದಲೇ ಶಕ್ತಿಯ ಸಂಚಯನ, ಆಧ್ಯಾತ್ಮಿಕ ಉನ್ನತಿ ಎಂಬ ಅರಿವಿರಬೇಕು.

Thursday, March 6, 2014

ಸಾಧನಾ ಪಥ

ಹಿಡಿದ ಗುರಿಯನು ಸಾಧಿಸುವವರೆಗೆ
ಮುಂದಿಟ್ಟ ಹೆಜ್ಜೆಯನು  ಹಿಂದಕ್ಕೆ ಇಡದೆ |
ಆವೇಶ ಉತ್ಸಾಹ ನರನಾಡಿಯಲಿರಿಸೆ
ಯಶವರಸಿ ಹರಸದಿಹುದೆ ಮೂಢ || 
     ಹೇಗೋ ಜೀವಿಸಬೇಕೆನ್ನುವವರು ಕಷ್ಟಪಡುವುದಿಲ್ಲ. ಅವರು ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು, ಸರಿ-ತಪ್ಪುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಬಾಳುತ್ತಾರೆ. ಆದರೆ ಹೀಗೆಯೇ ಜೀವಿಸಬೇಕೆಂದುಕೊಂಡವರಿಗೆ ಅಡ್ಡಿ, ಅಡಚಣೆಗಳು, ಕಷ್ಟಗಳ ಸರಮಾಲೆಯೇ ಎದುರಾಗುತ್ತದೆ. ಆದರೆ ಅವರು ಅವೆಲ್ಲವನ್ನೂ ಎದುರಿಸಿ, ಅಗತ್ಯ ಬಿದ್ದರೆ ಪ್ರಾಣವನ್ನೂ ಪಣಕ್ಕಿಟ್ಟು ತಾವಂದುಕೊಂಡಂತೆಯೇ ಬದುಕುತ್ತಾರೆ. ಹಾಗೆ ಯಶಸ್ವಿಯಾಗಿ ಬದುಕುವವರನ್ನು ಸಾಧಕರೆನ್ನುತ್ತಾರೆ. ಅಂತಹ ಸಾಧಕರನ್ನು ಜಗತ್ತು ಗೌರವಿಸುತ್ತದೆ. ಹೇಗೋ ಬದುಕುವವರೂ ಸಹ  ಸಾಧಕರನ್ನು ಮೆಚ್ಚುಗೆಯಿಂದ, ಗೌರವದಿಂದ ಕಾಣುತ್ತಾರೆ. ಸಾಧಕರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವುದೂ ಅಪರೂಪವಲ್ಲ. ಆದರೆ, ಸಾಧಕರ ಸಾಧನೆಯ ಹಿಂದಿನ ದಿವ್ಯ ಸಂದೇಶವನ್ನು ಎಲ್ಲರೂ ಮರೆತುಬಿಡುತ್ತೇವೆ. ಅದೆಂದರೆ, 'ಅಂತಹ ಸಾಧನೆಯನ್ನು ಯಾರು ಬೇಕಾದರೂ ಮಾಡಬಹುದು' ಎಂಬುದೇ! ಸಾಧನೆ ಮಾಡಲು ಹಿಂಜರಿಯುವ ಸಾಮಾನ್ಯರಿಗೆ, 'ಅವರು ದೇವಾಂಶ ಸಂಭೂತರು, ಮಹಾಮಹಿಮರು. ಅವರೆಲ್ಲಿ, ನಾವೆಲ್ಲಿ', 'ಉಂಟೇ, ಉಂಟೇ, ಏನು ಹೇಳುತ್ತಿದ್ದೀರಿ? ಅವರೊಡನೆ ನಮ್ಮನ್ನು ಹೋಲಿಸುವುದೇ!' ಎಂಬಂತಹ ಕುಂಟು ನೆಪಗಳೂ ನೆರವಿಗೆ ಬರುತ್ತದೆ. ಆದರೆ ನಿಜವಾದ ಕಾರಣವೆಂದರೆ, ಅವರಿಗೆ ಕಷ್ಟಪಡುವುದು ಬೇಕಿರುವುದಿಲ್ಲ ಮತ್ತು ಮೌಲ್ಯಗಳು, ನೀತಿ-ನಿಯಮಗಳು ಎಂದುಕೊಂಡು ಬೇಕಿಲ್ಲದ ತೊಂದರೆಗಳನ್ನು ಮೈಮೇಲೆ ಏಕೆ ಎಳೆದುಕೊಳ್ಳಬೇಕು ಎಂಬ ಮನೋಭಾವ. ಹೇಗೋ ಜೀವಿಸುವವರಿಗೆ ಸ್ವಾರ್ಥ ಪ್ರಮುಖವಾಗಿರುತ್ತದೆ. ಅದಕ್ಕಾಗಿ ಸಮಾಜದ ಹಿತ ಅವರಿಗೆ ಗೌಣವೆನಿಸುತ್ತದೆ. ಈ ಮನೋಭಾವವೇ ಸಮಾಜ ಇಂದು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಮೂಲವೆಂಬುದು ಆಳವಾಗಿ ಚಿಂತಿಸಿದರೆ ಅರ್ಥವಾದೀತು. ಒಂದಂತೂ ಸತ್ಯ, ನೀತಿ-ನಿಯಮ, ಮೌಲ್ಯಗಳಿಗೆ ಬೆಲೆ ಕೊಡುವವರ, ಅದಕ್ಕಾಗಿ ಸ್ವಂತದ ಹಿತ ತ್ಯಾಗ ಮಾಡುವ ಸಾಧಕರಿಂದ ಸಮಾಜ ಲಾಭ ಪಡೆಯುತ್ತದೆ. ಈ ಕಾರಣಕ್ಕಾಗಿಯೇ ಸಮಾಜ ಸಾಧಕರನ್ನು ಗೌರವದಿಂದ ಕಾಣುತ್ತದೆ, ಕಾಣಲೇಬೇಕು.
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ |
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ ||
     ಸಾಧಕರು ಇದ್ದಕ್ಕಿದ್ದಂತೆ ಮೂಡಿಬರುವುದಿಲ್ಲ. ಅವಿರತ ಶ್ರಮ ಅವರ ಸಾಧನೆಯ ಬೆನ್ನಿಗಿರುತ್ತದೆ. 'ಸರ್ವಜ್ಞನೆಂಬುವನು ಗರ್ವದಿಂದಾದವನೆ, ಹಲವಂ ಬಲ್ಲವರಿಂದ ಕಲಿತು . . ವಿದ್ಯೆಯ ಪರ್ವತವೆ ಆದ ಸರ್ವಜ್ಞ' ಎಂಬ ತ್ರಿಪದಿ ಸರ್ವಜ್ಞನ ಸಾಧನೆಯ ಹಾದಿಯ ಕಿರುನೋಟ ಬೀರುತ್ತದೆ. ಸಾಧಕರ ಜೀವನವನ್ನು ಅವಲೋಕಿಸಿದರೆ ಕಂಡು ಬರುವ ವಿಚಾರಗಳು ಸಾಧನೆಯ ಹಾದಿಯಲ್ಲಿರುವವರ ಕಣ್ತೆರೆಸುವಂತಹವು. ತನ್ನನ್ನು ತಾನು ಅರಿತುಕೊಳ್ಳುವುದು ಸಾಧನಾಪಥದ ಮೊದಲ ಹೆಜ್ಜೆಯಾದರೆ, ಸತತ ಪರಿಶ್ರಮ, ಬರುವ ಕಷ್ಟಗಳು, ನೋವುಗಳನ್ನು ಸಹಿಸಿಕೊಳ್ಳುವ ಶಕ್ತಿ, ಯಾವುದೇ ಸಂದರ್ಭಗಳಲ್ಲಿ ನಂಬಿದ ತತ್ವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ಸಾಮಾನ್ಯವಾಗಿ ಸಾಧಕರಲ್ಲಿ ಕಂಡು ಬರುವ ಗುಣಗಳು. ಸೋಲುಗಳು, ಎಡರು-ತೊಡರುಗಳು ಅವರ ಧೃತಿಗೆಡಿಸುವ ಬದಲಾಗಿ ಜಗತ್ತನ್ನು ಅರಿಯುವ ಅವರ ಹಸಿವನ್ನು, ಪಟ್ಟು ಬಿಡದೆ ಮತ್ತೆ ಮುಂದುವರೆಯುವ ಛಲವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಸಹಜವೆಂಬಂತೆ ಸಾಧಕ ದುಷ್ಕರ್ಮಗಳಿಂದ ದೂರವಿದ್ದು, ಸತ್ಕರ್ಮಗಳನ್ನು ಮಾಡುತ್ತಾ ಹೋಗುತ್ತಾನೆ. 
ಮೊಂಡುವಾದಗಳಿಲ್ಲ ಗರ್ವ ಮೊದಲೇ ಇಲ್ಲ
ಧನ ಪದವಿ ಕೀರ್ತಿ ಮೆಚ್ಚುಗೆಯು ಬೇಕಿಲ್ಲ |
ಸೋಲು ಗೆಲವುಗಳ ಸಮದಿ ಕಾಣಲುಬಲ್ಲ
ಧೀರನವನೆ ನಿಜನಾಯಕನು ಮೂಢ ||
     'ಅಲ್ಪ ವಿದ್ಯಾವಂತ ಮಹಾಗರ್ವಿ, ಮಹಾವಿದ್ಯಾವಂತ ಘನಪಂಡಿತ' ಎಂಬ ಲೋಕೋಕ್ತಿಗೆ ತಕ್ಕಂತೆ ಸಾಧಕನಿಗೆ ತಾನೇ ದೊಡ್ಡವನು, ಎಲ್ಲವನ್ನೂ ತಿಳಿದವನು ಎಂಬ ದರ್ಪ,  ಅಹಂಕಾರವಿರುವುದಿಲ್ಲ. ತನ್ನ ಮಾತನ್ನು ಇತರರು ಕೇಳದಿದ್ದರೆ, ಅವಗಣಿಸಿದರೆ ಆತನಿಗೆ ಸಿಟ್ಟು ಬರುವುದಿಲ್ಲ. ಮೆಚ್ಚಿ ಹೊಗಳಿದರೂ ಅವನಿಗೆ ಲೆಕ್ಕಕ್ಕಿಲ್ಲ. ಇತರರು ಏನೆಂದುಕೊಂಡಾರೋ ಎಂಬ ಅಳುಕು, ಅಂಜಿಕೆ, ಲಜ್ಜೆಗಳಿಲ್ಲದೆ ನಿರ್ಲಿಪ್ತತೆಯಿಂದ ತನ್ನ ಕಾರ್ಯ ತಾನು ಮಾಡುತ್ತಿರುತ್ತಾನೆ. ಅವನಿಗೆ ಬಿಸಿಲು, ಮಳೆ, ಚಳಿ, ಗಾಳಿ, ಇತ್ಯಾದಿ ವೈಪರೀತ್ಯಗಳು ಅಡ್ಡಿಯೆನಿಸುವುದಿಲ್ಲ. ಕಾರ್ಯಕ್ಕೆ ಬೇಕಾದ ಅವಶ್ಯಕತೆಗಳು ಸಮೃದ್ಧಿಯಾಗಿರಲಿ, ಕೊರತೆಯಿರಲಿ ಬಾಧಕವೆನಿಸದು. ಒಬ್ಬ ಯಶಸ್ವಿ ವ್ಯಕ್ತಿ ತನ್ನ ಸಾಮರ್ಥ್ಯವನ್ನು ಅರಿತು ಕೆಲಸವನ್ನು ಕೈಗೆತ್ತಿಕೊಳ್ಳುತ್ತಾನೆ. ಅದನ್ನು ವ್ಯವಸ್ಥಿತವಾಗಿ ಮಾಡುತ್ತಾನೆ. ಹಾಗೆ ಮಾಡುವಾಗ ಯಾವುದೊಂದನ್ನೂ ಸಣ್ಣದೆಂಬ ಭಾವನೆಯಿಂದ ಕಡೆಗಣಿಸುವುದಿಲ್ಲ. ಮಾಡಬಲ್ಲೆನೆಂಬ ಧೃಢ ವಿಶ್ವಾಸವಿದ್ದು, ಹಿಡಿದ ಕೆಲಸವನ್ನು ಮಧ್ಯೆ ನಿಲ್ಲಿಸುವುದಿಲ್ಲ. ವ್ಯರ್ಥವಾಗಿ ಕಾಲಹರಣ ಮಾಡುವುದಿಲ್ಲ. ಚಂಚಲತೆಯಿಂದ ದೂರವಿದ್ದು, ಕೆಲಸವನ್ನು ವಿಚಲಿತಗೊಳಿಸುವ ಸಂಗತಿಗಳಿಂದ ದೂರವಿದ್ದುಬಿಡುತ್ತಾನೆ. ಸಿಗಲು ಸಾಧ್ಯವಿಲ್ಲವೆಂಬುದನ್ನು ಬಯಸದೆ, ಕಳೆದುಹೋದದ್ದರ ಬಗ್ಗೆ ಚಿಂತಿಸದೆ, ಆತಂಕದ ಸ್ಥಿತಿಯಲ್ಲೂ ಧೃತಿ ಕಳೆದುಕೊಳ್ಳದಿರುವವನು ನಾಯಕನೆನಿಸಿಕೊಳ್ಳುತ್ತಾನೆ.
ಪರರು ನಮಿಪುವ ತೇಜವಿರುವವನು
ಕೆಡುಕ ಸೈರಿಸಿ  ಕ್ಷಮಿಪ ಗುಣದವನು |
ನಾನತ್ವ ದೂರ ನಡೆನುಡಿಯು ನೇರ
ಸಾತ್ವಿಕನು ಸಾಧಕನು ಅವನೆ ಮೂಢ || 
     ಸಾಮಾನ್ಯರಲ್ಲಿ ಕಾಣುವ ಮತ್ಸರ ಸಾಧಕರಿಂದ ದೂರವಿರುತ್ತದೆ. ಈ ಮತ್ಸರ ಸಾಮಾನ್ಯರಿರಲಿ, ಅಪ್ರತಿಮರೆನಿಸಿಕೊಂಡವರನ್ನೂ ಕಾಡುತ್ತದೆ. ರಾಜಕಾರಣಿಗಳಲ್ಲಿ, ಅಧಿಕಾರಿಗಳಲ್ಲಿ, ಸಾಹಿತಿಗಳಲ್ಲಿ, ವೈಚಾರಿಕವಾಗಿ ಪ್ರಬುದ್ಧರೆನಿಸಿದವರಲ್ಲಿ, ಅಷ್ಟೇ ಏಕೆ ಜೀವನದ ಎಲ್ಲಾ ರಂಗಗಳಲ್ಲಿ ತಾನು ಎಲ್ಲರಿಗಿಂತ ಶ್ರೇಷ್ಠರೆನಿಸಬೇಕು, ತನಗಿಂತ ಹೆಚ್ಚು ಗೌರವ ಇತರರಿಗೆ ಸಿಗಬಾರದು ಎನ್ನುವ ಹಪಾಹಪಿತನ ಒಂದಲ್ಲಾ ಒಂದು ಹಂತದಲ್ಲಿ ತನ್ನ ಅವತಾರವನ್ನು ತೋರಿಸಿಬಿಡುತ್ತದೆ. ಕನ್ನಡದ ಉನ್ನತ ಪ್ರಶಸ್ತಿಯನ್ನು ಪಡೆದವರೊಬ್ಬರು ತಾನು ಸದಾ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ತವಕದಿಂದ ವೈಚಾರಿಕ ಪ್ರಜ್ಞೆಯನ್ನೇ ಕಳೆದುಕೊಂಡು ಅಪದ್ಧವಾಗಿ ಮಾತನಾಡುವುದನ್ನು ಕಂಡಿದ್ದೇವೆ. ಆದರೆ ನಿಜವಾದ ಸಾಧಕ ನಾನತ್ವದಿಂದ ದೂರವೇ ಉಳಿದಿರುತ್ತಾನೆ. ಶ್ರೇಷ್ಠ ವಿಚಾರವನ್ನು ಚೆನ್ನಾಗಿ ಮಂಡಿಸುವವರನ್ನು, ಶ್ರೇಯಸ್ಕರವಾದ ಕಾರ್ಯವನ್ನು ಯಾರೇ ಮಾಡಿದರೂ ಕಂಡು ಸಂತೋಷಿಸಿ ಅವರ ಬೆನ್ನು ತಟ್ಟುತ್ತಾನೆಯೇ ಹೊರತು ಕರುಬುವುದಿಲ್ಲ. ಸಾಧಕರಿಗೆ ಸಿಗುವ ಜನಮನ್ನಣೆಯನ್ನು ಕಂಡು ಕರುಬುವವರು ಸಾಧಕರಿಗೆ ಕೇಡು ಬಗೆಯಲು ಪ್ರಯತ್ನಿಸಿದರೂ, ಅದನ್ನು ನಿರ್ಲಕ್ಷಿಸುವ ಅಸಾಮಾನ್ಯ ಗುಣ ಸಾಧಕರಿಗೆ ಮಾತ್ರ ಒಲಿದಿರುತ್ತದೆ.
ನುಡಿದಂತೆ ನಡೆದು ಮಾದರಿಯು ತಾನಾಗೆ
ಪರರ ಮನವರಿತು ನಡೆವ ಕರುಣೆಯಿರಲಾಗೆ |
ಕರಗತವು ತಾನಾಗೆ ಕೆಲಸ ಮಾಡಿಪ ಕಲೆಯು 
ನಾಯಕನು ಉದಯಿಸುವ ಕಾಣು ಮೂಢ ||
     ಈ ಘಟನೆಯ ಬಗ್ಗೆ ನೀವೂ ಕೇಳಿರಬಹುದು ಅಥವ ಓದಿರಬಹುದು. ಒಮ್ಮೆ ರಾಮಕೃಷ್ಣ ಪರಮಹಂಸರ ಹತ್ತಿರ ಒಬ್ಬ ತಾಯಿ ತನ್ನ ಮಗನನ್ನು ಕರೆದುಕೊಂಡು ಬಂದು, "ಪೂಜ್ಯರೇ, ನನ್ನ ಮಗನಿಗೆ ಜಿಲೇಬಿ ತಿನ್ನುವ ಚಪಲ ಜಾಸ್ತಿ. ಎಷ್ಟು ಕೊಟ್ಟರೂ ತಿನ್ನುತ್ತಾನೆ, ಮತ್ತೆ ಮತ್ತೆ ಕೇಳುತ್ತಾನೆ. ಅಷ್ಟೊಂದು ತಿಂದರೆ ಅವನ ಆರೋಗ್ಯ ಏನಾಗಬೇಕು? ನೀವು ಸ್ವಲ್ಪ ಬುದ್ಧಿ ಹೇಳಿ ಪೂಜ್ಯರೇ" ಎಂದು ಕೇಳಿಕೊಳ್ಳುತ್ತಾಳೆ. ರಾಮಕೃಷ್ಣರು ಆ ತಾಯಿಗೆ ಒಂದು ವಾರ ಬಿಟ್ಟು ಬರಲು ಹೇಳುತ್ತಾರೆ. ಒಂದು ವಾರದ ನಂತರದಲ್ಲಿ ಮತ್ತೆ ಕೆಲವು ದಿನಗಳು ಬಿಟ್ಟು ಬರಲು ಹೇಳುತ್ತಾರೆ. ಇದು ನಾಲ್ಕು-ಐದು ಸಲ ಮುಂದುವರೆಯುತ್ತದೆ. ಕೊನೆಗೆ ಒಂದು ದಿನ ರಾಮಕೃಷ್ಣರು ಮಗುವನ್ನು ಹತ್ತಿರ ಕರೆದು ಪ್ರೀತಿಯಿಂದ ತಲೆ ನೇವರಿಸುತ್ತಾ, "ಮಗು ತುಂಬಾ ಜಿಲೇಬಿ ತಿನ್ನುವುದು ಒಳ್ಳೆಯದಲ್ಲ. ಅಪರೂಪಕ್ಕೆ ಸ್ವಲ್ಪ ತಿನ್ನು. ಜಾಸ್ತಿ ತಿನ್ನಬೇಡ" ಎನ್ನುತ್ತಾರೆ. ಮಗುವಿಗೆ ಅವರು ಹೇಳಿದ ರೀತಿ ಒಪ್ಪಿಗೆಯಾಗುತ್ತದೆ. ಅದರಂತೆ ಪಾಲಿಸುತ್ತದೆ ಕೂಡಾ! ಆ ತಾಯಿಗೆ ಆಶ್ಚರ್ಯವಾಗುತ್ತದೆ. ಈ ಮಾತನ್ನು ಅವರು ಮೊದಲ ದಿನವೇ ಹೇಳಬಹುದಿತ್ತಲ್ಲಾ ಎಂದು ಮನಸ್ಸಿನಲ್ಲಿ ಅಂದುಕೊಂಡರೂ ಆಗ  ವಿಚಾರಿಸದೆ ಇನ್ನೊಂದು ದಿನ ತಾನೊಬ್ಬಳೇ ಬಂದಾಗ ಈ ಪ್ರಶ್ನೆ ಕೇಳಿಯೇಬಿಡುತ್ತಾಳೆ. ರಾಮಕೃಷ್ಣರು ನಗುತ್ತಾ ಹೇಳುತ್ತಾರೆ, "ತಾಯಿ, ನನಗೂ ಜಿಲೇಬಿ ಅಂದರೆ ಬಹಳ ಇಷ್ಟ. ಅದನ್ನು ತಿನ್ನಬೇಕೆಂಬ ಚಪಲದಿಂದ ಬಿಡಿಸಿಕೊಳ್ಳಲು ನನಗೆ ಅಷ್ಟು ಸಮಯ ಬೇಕಾಯಿತು." ದೊಡ್ಡವರ ರೀತಿಯೇ ಹಾಗೆ! ಇನ್ನೊಬ್ಬರಿಗೆ ಹೇಳುವ ಮುನ್ನ ಅದನ್ನು ತಾವು ಅನುಸರಿಸಿರಬೇಕು. ಅವರ ಅಂತರಂಗ ಮತ್ತು ಬಹಿರಂಗಗಳಲ್ಲಿ ಭಿನ್ನತೆ ಇಲ್ಲ. ಹೇಳುವುದೊಂದು ಮಾಡುವುದು ಮತ್ತೊಂದು ಅನ್ನುವುದು ಇಲ್ಲವೇ ಇಲ್ಲ. ಅಂತಹವರ ಮಾತಿನಲ್ಲಿ ಶಕ್ತಿ ಇರುತ್ತದೆ. ಆ ಶಕ್ತಿ ಹೊರಗಿನದಲ್ಲ. ಒಳಗಿನಿಂದ ಬಂದುದು. ಆ ಮಾತುಗಳನ್ನು ಕೇಳಿದವರು ಮಂತ್ರಮುಗ್ಧರಂತೆ ಅನುಸರಿಸುವುದಕ್ಕೆ ಇರುವ ವಿಶೇಷ ಕಾರಣವೇ ಇದಾಗಿದೆ. 
ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ |
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸಾಧಕನು ಮೂಢ || 
     ಆದಿ ಶಂಕರಾಚಾರ್ಯ ವಿರಚಿತ ಸಾಧನಾಪಂಚಕ ಒಬ್ಬ ಸಾಧಕ ಹೇಗೆ ಇರಬೇಕೆಂಬುದನ್ನು ತಿಳಿಸುವ ಒಂದು ಅಪೂರ್ವ ರಚನೆ. ನಿತ್ಯ ವೇದಾಧ್ಯಯನ, ಮಾಡುವ ಕೆಲಸಗಳನ್ನು ಭಗವಂತ ಆರಾಧನೆ ಎಂದು ಭಾವಿಸಿ ಮಾಡುವುದು, ಅಂತರಂಗದ ಕೊಳೆಯನ್ನು ತೊಡೆದು ಹಾಕುವುದು, ಮೋಹದ ಸಂಕೋಲೆಯಿಂದ ಹೊರಬರುವುದು, ಜ್ಞಾನಿಗಳ ಸತ್ಸಂಗ, ಯೋಗ್ಯ ಗುರುಗಳ ಆಶ್ರಯ, ವಿತಂಡ ವಾದಗಳಿಂದ ದೂರವಿರುವುದು, ಸಮಚಿತ್ತ ಹೊಂದುವುದು, ಇತ್ಯಾದಿಗಳು ಸಾಧಕನಿಗೆ ಇರಬೇಕೆಂದು ಅದು ಹೇಳುತ್ತದೆ. 
ಹೊರಶುಚಿಯೊಡನೆ ಒಳಶುಚಿಯು ಇರಲು
ಮಾನಾಪಮಾನದಲುದಾಸೀನನಾಗಿರಲು |
ನಿರ್ಭಯತೆ ಮೇಳವಿಸೆನಿಸೆ ಸಮರ್ಥ
ದೇವಪ್ರಿಯನವನಲ್ಲದಿನ್ಯಾರು ಮೂಢ ||
     'ಅಬ್ಬಬ್ಬಾ, ಸಾಧಕರಾಗುವುದು ಇಷ್ಟೊಂದು ಕಷ್ಟವೇ! ಇನ್ನೂ ಏನಾದರೂ ಇದೆಯೋ?' ಎಂಬ ಪ್ರಶ್ನೆ ಮೂಡುತ್ತದೆ. 'ಹೌದು, ಇನ್ನೂ ಇದೆ' ಎಂಬುದು ಸಾಧಕರ ನಡೆ-ನುಡಿಗಳನ್ನು ಕಂಡವರಿಗೆ ಅರಿವಾಗದೇ ಇರದು. ಅವರು 'ತಾನೇ ಸರಿ, ತನ್ನದೇ ಸರಿ' ಅನ್ನುವುದಿಲ್ಲ. ಒಂದು ಪುಟ್ಟ ಮಗುವೂ ಏನನ್ನೋ ಹೇಳುತ್ತಿದ್ದರೂ ಅದನ್ನೂ ಬೆರಗಾಗಿ ಕಣ್ಣರಳಿಸಿ ಕೇಳುವ ಆ ತನ್ಮಯತೆ ಸಾಧಕರಿಗಲ್ಲದೆ ಬೇರೆ ಯಾರಿಗೆ ಬಂದೀತು! ಎಲ್ಲವನ್ನೂ 'ಕೇಳುವ' ಆ ಗುಣ ಅನನ್ಯ. ಅವರು ಮೇಲು, ಇವರು ಕೀಳು, ಅವನು ಬಡವ, ಇವನು ಶ್ರೀಮಂತ, ಇತ್ಯಾದಿ ತಾರತಮ್ಯ ಮಾಡುವುದಿಲ್ಲ. ಎಂತಹ ಸ್ಥಿತಿಯಲ್ಲೂ ಆನಂದ ಕಾಣುವ ಗುಣ, ಆಸೆ, ಆಮಿಷಗಳಿಂದ ಮೈಮರೆತು ದಾರಿ ತಪ್ಪದ ನಡತೆ, ಅಪಾಯವನ್ನೆದುರಿಸುವ ಗಟ್ಟಿತನ, ಹೀನ-ದೀನರ ಸೇವೆಯನ್ನು ದೇವರ ಪೂಜೆಯೆಂದು ಭಾವಿಸುವ ಉದಾತ್ತತೆ, ಸರಳತೆ, ನಿಷ್ಕಾಮ ಕರ್ಮ, ಅಚಲ ವಿಶ್ವಾಸ, ಹೊರಮನದ ಕೋರಿಕೆಗಳನ್ನು ಅಲ್ಲಗಳೆದು ಒಳಮನದ ಕರೆಯನ್ನು ಆಲಿಸಿ ಅದರಂತೆ ಜೀವಿಸುವ ಕಲೆ ಸಾಧಕರ ಅಮೂಲ್ಯ ಸಂಪತ್ತು. ಇಷ್ಟೆಲ್ಲಾ ಇದ್ದ ಮೇಲೆ, ಅವರು ದೇವರೇ ಸರಿ, ಸಾಮಾನ್ಯ ಮನುಷ್ಯರಲ್ಲವೇ ಅಲ್ಲ, ಸಾಮಾನ್ಯರು ಹೀಗಿರಲು ಸಾಧ್ಯವೇ ಇಲ್ಲ ಎಂದು ನಿರ್ಧರಿಸಿ ಅವರನ್ನು ಆರಾಧಿಸಲು ಪ್ರಾರಂಭಿಸಿಬಿಡುತ್ತೇವೆ. ಇಂದು ಅನೇಕ ಸಾಧು-ಸಂತ-ಮಹಾಂತರ ಗುಡಿಗಳನ್ನು ಕಟ್ಟಿ ನಿತ್ಯ ಪೂಜೆ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಹಾಗೆ ಪೂಜಿಸುವವರದೇ ಒಂದು ಪಂಥವಾಗಿ ಬಿಡುತ್ತದೆ. ಹೊಸ ಹೊಸ ರೀತಿ-ನೀತಿಗಳು, ಕಟ್ಟಳೆಗಳು, ಸಂಪ್ರದಾಯಗಳು ರೂಢಿಗೆ ಬಂದುಬಿಡುತ್ತವೆ. ಅವರನ್ನು ಆರಾಧಿಸುವುದು ತಪ್ಪೇ, ಪೂಜಿಸಬಾರದೇ ಎಂದು ಸಿಟ್ಟಾಗದಿರಿ. ನಮಗೆ ಯೋಗ್ಯ ಮಾರ್ಗದರ್ಶನ ಮಾಡಿದವರನ್ನು, ಮಾಡುವವರನ್ನು ಆರಾಧಿಸುವುದು ತಪ್ಪಲ್ಲವೇ ಅಲ್ಲ. ಅದರೆ ಅದರಲ್ಲಿ ಒಂದು ಅಪಾಯವಿದೆ. ಅಂತಹ 'ಪೂಜ್ಯ'ರುಗಳನ್ನು 'ಹೊರಗೆ' ಇಟ್ಟುಬಿಡುವುದೇ ಆ ಅಪಾಯ. ಸಾಷ್ಟಾಂಗ ನಮಸ್ಕಾರ ಮಾಡಿ, ಆರತಿ ಬೆಳಗಿ, ತೀರ್ಥ-ಪ್ರಸಾದಗಳನ್ನು ಪಡೆದು ಕೃತಕೃತ್ಯರಾದೆವೆಂದು ಅಂದುಕೊಂಡುಬಿಡುತ್ತೇವೆ. ವಿಚಾರ ಮಾಡೋಣ. ಹೃದಯ ಮಂದಿರಗಳಲ್ಲಿ ಅವರನ್ನು ಪ್ರತಿಷ್ಠಾಪಿಸಿ ಮಾಡುವ ಪೂಜೆಯೇ ನಿಜವಾದ ಪೂಜೆ. ಅವರು ತೋರಿದ ಹಾದಿಯಲ್ಲಿ ನಡೆಯುವುದೇ ಅವರಿಗೆ ಸಲ್ಲಿಸಬಹುದಾದ ಯೋಗ್ಯ ಗುರುಕಾಣಿಕೆ. ಹಾಗೆ ನಡೆದು ಸಾಧಿಸುವುದೇ ನಮಗೆ ಸಿಗುವ ಪೂಜಾಫಲ ಎಂಬುದನ್ನು ಅರಿಯೋಣ.
-ಕ.ವೆಂ.ನಾಗರಾಜ್.
[ಬಳಸಿರುವ ಚಿತ್ರ ಅಂತರ್ಜಾಲದಿಂದ ಹೆಕ್ಕಿದುದು]
[24-02-2014ರ 'ಜನಮಿತ್ರ' ಪತ್ರಿಕೆಯಲ್ಲಿ ಪ್ರಕಟಿತ 'ಚಿಂತನ']

Wednesday, March 5, 2014

ಜೀವನ ವೇದ - 6

ಮನುಷ್ಯನ ಜೀವನಕ್ಕೆ ಉತ್ಸಾಹ ತುಂಬುವ ಒಂದು ವೇದ ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ.
ಶುಕ್ರೋsಸಿ ಭ್ರಾಜೋsಸಿ ಸ್ವರಸಿ ಜ್ಯೋತಿರಸಿ|
ಆಪ್ನುಹಿ ಶ್ರೇಯಾಂಸಮತಿ ಸಮಂ ಕ್ರಾಮ||
[ಅಥರ್ವ: ೨-೧೧-೫]
ಅರ್ಥ:
ಶುಕ್ರ: ಅಸಿ= ಓ ಮಾನವ ನೀನು ನಿರ್ಮಲ ನಾಗಿದ್ದೀಯೇ
ಭ್ರಾಜ: ಅಸಿ = ನೀನು ತೇಜಸ್ವಿಯಾಗಿದ್ದೀಯೇ
ಸ್ವ: ಅಸಿ = ಸ್ವಸಾಮರ್ಥ್ಯಶಾಲಿಯಾಗಿದ್ದೀಯೇ
ಜ್ಯೋತಿ: ಅಸಿ = ಜ್ಞಾನ ಪ್ರಕಾಶದಿಂದ ಬೆಳಗುವನಾಗಿದ್ದೀಯೇ
ಶ್ರೇಯಾಂಸಂ ಆಪ್ನುಹಿ = ಶ್ರೇಯಸ್ಸನ್ನು ಸಾಧಿಸಿಕೋ
ಸಮಂ ಅತಿಕ್ರಾಮ = ಸಮನಾದವನನ್ನು ಮೀರಿಸಿ ಮುಂದೆ ನಡೆ
ಈ ಮಂತ್ರದ ಹಿರಿಮೆ ನೋಡಿ, ಹೇಗಿದೆ! ಮನುಷ್ಯನನ್ನು “ನೀನು ಪಾಪಿ” ಎನಲಿಲ್ಲ. ಬದಲಿಗೆ ನೀನು ನಿರ್ಮಲನಾಗಿದ್ದೀಯೆ, ನೀನು ಪ್ರಕಾಶಮಾನವಾಗಿದ್ದೀಯೇ, ನೀನು ತೇಜಸ್ವಿಯಾಗಿದ್ದೀಯೇ,ನೀನು ಸ್ವಸಾಮರ್ಥ್ಯಶಾಲಿಯಾಗಿದ್ದೀಯೇ,ನೀನು ಜ್ಞಾನ ಪ್ರಕಾಶದಿಂದ ಬೆಳಗುವನಾಗಿದ್ದೀಯೇ,  ಶ್ರೇಯಸ್ಸನ್ನು ನೀನೇ ಸ್ವತ: ಸಾಧಿಸಿ ಅಧ್ಯಾತ್ಮ ಮಾರ್ಗದಲ್ಲಿ ನಿನ್ನ ಸಮ ಇರುವವರನ್ನು ಮೀರಿಸಿ ಮುಂದೆ ನಡೆ. ವೇದದ ಈ ಮಂತ್ರವನ್ನು ಅರ್ಥಮಾಡಿಕೊಳ್ಳುವಾಗ ಒಮ್ಮೆ ನನ್ನ ಮೈ ಝುಮ್ ಎಂದಿತು. ಮಂತ್ರದ ಅರ್ಥವನ್ನು ಮನಸ್ಸಿಟ್ಟು ಓದಿ ,ನಿಮಗೂ ಹಾಗನ್ನಿಸದೆ ಇರದು.
ಈ ಮಂತ್ರವು ಯಾವುದೋ ಒಂದು ಜಾತಿಗಾಗಿ ಹೇಳಿದೆಯೇ? ವೇದ ಮಂತ್ರಗಳು ಸಕಲ ಮಾನವನ ಅಭ್ಯುದಯಕ್ಕಾಗಿ ಇರುವ  ಮಾರ್ಗದರ್ಶನ. ಒಂದು ವೇಳೆ ಒಬ್ಬ ಮನುಷ್ಯನು ಇನ್ನೊಬ್ಬನಿಗಿಂತ     ಅವನು ಕೆಳಗಿದ್ದೀನಿ, ಎಂದು ಕೀಳರಿಮೆ ಹೊಂದಿದ್ದರೆ, ಅವನಿಗೆ ಎಂತಾ ಆತ್ಮವಿಶ್ವಾಸವನ್ನು ತುಂಬುತ್ತದೆಂದರೆ ನಿನ್ನಲ್ಲಿ ಚೈತನ್ಯವಿದೆ, ನೀನು ಸಾಮರ್ಥ್ಯವನ್ನು ಹೊಂದಿದ್ದೀಯ, ಮುನ್ನಡೆ  ಎಂದು ಹುರಿದುಂಬಿಸುತ್ತದೆ.
ನೀನು ಪಾಪಿ! ನಿನಗೆ ಪುಣ್ಯ  ಸಿಗಬೇಕಾದರೆ ಇಂತಾ ದೇವರನ್ನು ನಂಬು, ಈ ಗ್ರಂಥವನ್ನು ಓದು, ಈ ಪ್ರವಾದಿಯನ್ನು ನಂಬು ಎಂದು ಹೇಳುವ, ಮನುಷ್ಯನನ್ನು ಭೀತಿಯಲ್ಲಿ ತಳ್ಳುವ ಮತಗಳ ಬಗ್ಗೆ ನಮಗೆ ಅರಿವಿದೆ. ಆದರೆ ಹಾಗೆ   ವೇದವು  ಹೇಳಲೇ ಇಲ್ಲ. ವೇದವನ್ನು ನಂಬು ಎಂದೂ ಕೂಡ ವೇದವು ಹೇಳಲಿಲ್ಲ. ಮನುಷ್ಯನು ಯಾವ ಮಾರ್ಗದಲ್ಲಿ ನಡೆಯಬೇಕೆಂಬುದನ್ನು ವೇದಮಂತ್ರ ಒಂದು ಹೇಳುತ್ತದೆ ಯಾವುದು ಪ್ರಾಚೀನದಿಂದ ಬಂದಿದೆಯೋ, ಯಾವುದು ಇಂದಿನ ನವೀನ ಜ್ಞಾನವಿದೆಯೋ, ಯಾವುದು ಶಾಸ್ತ್ರಗಳಲ್ಲಿ ಹೇಳಿದೆಯೋ, ಯಾವುದು ನಿನ್ನ ಅಂತರಂಗದಲ್ಲಿ ಹುಟ್ಟುತ್ತದೋ, ಎಲ್ಲವಕ್ಕೂ ಕಿವಿಗೊಡು, ಆದರೆ ಯಾವುದು ನಿನ್ನನ್ನು  ಕಲ್ಯಾಣಮಾರ್ಗದಲ್ಲಿ ಕರೆದುಕೊಂಡು ಹೋಗಬಲ್ಲದೆಂದು ನಿನ್ನ ವಿವೇಕ ಹೇಳುತ್ತದೆಯೋ, ಆ ಮಾರ್ಗದಲ್ಲಿ ನಿನ್ನ ಜೀವನರಥ ಸಾಗಲಿ ಈ ಮಂತ್ರದ ಬಗ್ಗೆ ಪ್ರತ್ಯೇಕವಾಗಿಯೇ ವಿಚಾರ ಮಾಡೋಣ. ಆದರೆ ಸಧ್ಯಕ್ಕೆ ಇಷ್ಟನ್ನು ನಾವು ಅರ್ಥ ಮಾಡಿಕೊಳ್ಳಬಹುದು. ವೇದದಲ್ಲಿ ನಮ್ಮ ಬದುಕಿಗೆ ಅಗತ್ಯವಾದ ಎಲ್ಲಾ ಮಾರ್ಗದರ್ಶನ ಲಭ್ಯವಿದ್ದರೂ ವೇದವು ತನ್ನನ್ನೇ ನಂಬಿ ಎಂದು ಎಲ್ಲೂ ಹೇಳಿಲ್ಲ.
ಮನುಷ್ಯನಿಗೆ ಉನ್ನತಿಹೊಂದಲು ಇದಕ್ಕಿಂತ ಇನ್ನೇನು ಬೇಕು? ಇಂತಹಾ ಆತ್ಮಸ್ಥೈರ್ಯವನ್ನು ತುಂಬುವಂತಹ ವೇದಮಂತ್ರವನ್ನು ಬದಿಗಿಟ್ಟು ಅದನ್ನು ಪಂಡಿತರ ಮಡಿವಂತ ಪಟ್ಟಿಗೆ ಸೇರಿಸಿ ಅದರಿಂದ ದೂರವಿದ್ದೀವಲ್ಲಾ! ಇದಕ್ಕಿಂತ ದೌರ್ಭಾಗ್ಯ ಮತ್ತೊಂದಿದೆಯೇ?
ಈ ಮಂತ್ರವನ್ನು ಅರ್ಥಮಾಡಿಕೊಳ್ಳುವಾಗ ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ನಮ್ಮ ಟೀಚರ್ ಗಳು ಪಾಠಮಾಡುವ ಚಿತ್ರವು ನನ್ನ  ಕಣ್ಮುಂದೆ ಬಂತು.ಎಲ್ಲರಿಗೂ ಈ ವಿಚಾರ ಗೊತ್ತಿದೆಯಾದರೂ ಈ ಸಂದರ್ಭದಲ್ಲಿ ನಾನು ನನ್ನೆಲ್ಲಾ ಮಿತ್ರರ ಗಮನವನ್ನು ಇತ್ತ ಸೆಳೆಯಲು ಬಯಸುತ್ತೇನೆ.
ನಮ್ಮ ಪ್ರೈಮರಿ ಶಾಲೆಗಳಿಗೆ ಹೋಗಿ ನೋಡಿ[ಕೆಲವು ಶಾಲೆಗಳು ಅಪವಾದ ವಿರಬಹುದು] ಅಲ್ಲಿನ ಟೀಚರ್‌ಗಳ ಬಾಯಲ್ಲಿ ಬರುವ ಮಾತುಗಳನ್ನು ಕೇಳಿ ಇನ್ನು ಹತ್ತು ಜನ್ಮ ಎತ್ತಿ ಬಂದರೂ ನಿನಗೆ ಬುದ್ಧಿ ಬರುಲ್ಲಾ  ಅಂತಾ  ದಡ್ಡಾ ನೀನು. ಅವನನ್ನು ನೋಡು ಎಷ್ಟು ಸೊಗಸಾಗಿ ಇಂಗ್ಳೀಶಲ್ಲಿ ಮಾತನಾಡುತ್ತಾನೆ! ಎಷ್ಟು ಶಿಸ್ತಾಗಿ ಅವರ ಮನೆಯಲ್ಲಿ ಬೆಳೆಸಿದ್ದಾರೆ, ನೋಡು! ನೀನು ಇದೀಯ ಮಂಕು ಮುಂಡೇದು!!
ವೇದವು ಹೇಳುತ್ತಿದೆ  ನೀನು ಸಮರ್ಥ, ನೀನು ತೇಜಸ್ವೀ, ನೀನು ಪರಿಶುದ್ಧ
ಆದರೆ ನಮ್ಮ ಶಾಲೆಯ ಟೀಚರ್ ಗಳು ಹೇಳುತ್ತಾರೆ  ನೀನು ದಡ್ಡ, ನೀನು ಪೆದ್ದ, ನೀನು ನಿಶ್ಪ್ರಯೋಜಕ ನೋಡಿ ಗ್ರಹಚಾರ ಹೇಗಿದೆ? ಟೀಚರ್ ಗಳ ಹತ್ತಿರ ಛೀಮಾರಿ  ಹಾಕಿಸಿಕೊಳ್ಳುವ ವಿದ್ಯಾರ್ಥಿಯ ಮಾತಾ ಪಿತೃಗಳು ಆ ಶಾಲೆಯ ಭವ್ಯವಾದ ಕಟ್ಟಡ, ಫುಲ್‌ಸೂಟ್ ಹಾಕಿರುವ ಪ್ರಿನ್ಸಿಪಾಲ್ [ನಮ್ಮ ಕಾಲದಲ್ಲಿ ಕಾಲೇಜುಗಳಲ್ಲಿ ಮಾತ್ರ ಪ್ರಿನ್ಸಿಪಾಲರಿರುತ್ತಿದ್ದರು. ಹೈಸ್ಕೂಲ್‌ಗಳಿಗೆ ಇರುತ್ತಿದ್ದವರೂ ಹೆಡ್ ಮಾಸ್ಟರ್ ಮಾತ್ರವೇ. ಈಗೆಲ್ಲಾ ಪ್ರೈಮರಿ ಶಾಲೆಗೂ ಪ್ರಿನ್ಸಿಪಾಲರಿರುತ್ತಾರೆ] ಶಾಲೆಯ ಗೇಟ್‌ನಲ್ಲೊಬ್ಬ ಮಿಲಿಟರಿ ಉಡುಪು ಧರಿಸಿರುವ  ಗಾರ್ಡ್,ಇವೆಲ್ಲಾ ಚಿತ್ರಣವನ್ನು ನೋಡಿ ಕೇಳಿದಷ್ಟು ಡೊನೇಶನ್ ಕೊಟ್ಟು ಮಕ್ಕಳನ್ನು ಶಾಲೆಗೆ ಸೇರಿಸಿ ನಂತರ ಟೀಚರ್ ಗಳಿಂದ ಮಕ್ಕಳಿಗೆ ಮಾನಸಿಕ ಹಿಂಸೆ ಕೊಡುವಂತಹ ಕೆಟ್ಟ ಶಿಸ್ತನ್ನು ಹೇರಿಸಿಕೊಳ್ಳುವುದು!! ಇದು  ಬೇಕಿತ್ತಾ? ಯಾವಾಗ ನಮ್ಮ ಪೋಷಕರುಗಳಿಗೆ ಬುದ್ಧಿ ಬರುತ್ತೋ ಗೊತ್ತಿಲ್ಲ.
ಮಕ್ಕಳನ್ನು ಅಯೋಗ್ಯರೆಂದು ಯಾರಾದರೂ ಟೀಚರ್ ಹೇಳಿದರೆ ಅಂತವರು ಈ ಸುಭಾಷಿತವನ್ನು ಮೊದಲು ಅರ್ಥಮಾಡಿಕೊಳ್ಳ  ಬೇಕು.

ಅಮಂತ್ರಂ ಅಕ್ಷರಮ್ ನಾಸ್ತಿ  ನಾಸ್ತಿ ಮೂಲ ಮನೌಷಧಮ್|
ಅಯೋಗ್ಯ: ಪುರುಷೋ ನಾಸ್ತಿ  ಯೋಜಕಸ್ತತ್ರ ದುರ್ಲಭ: ||
ಎಷ್ಟು ಸರಳವಾಗಿದೆ ಅರ್ಥ! ಮಂತ್ರವಾಗದ ಅಕ್ಷರವಿಲ್ಲ. ಔಷಧಿಯಾಗದ ಗಿಡಮೂಲಿಕೆಗಳಿಲ್ಲ.ಯಾವ ವ್ಯಕ್ತಿಯೂ ಅಯೋಗ್ಯನಲ್ಲ. ಆದರೆ ಯೋಜನೆ ಮಾಡುವವರು ವಿರಳ. ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು ಮನುಷ್ಯನ ಜನ್ಮವಾಗುವಾಗ ಭಗವಂತನು ಎಲ್ಲರಲ್ಲಿ ಚೈತನ್ಯದ ಮೂಟಯನ್ನೇ ಇಟ್ಟು ಕಳಿಸಿದ್ದಾನೆ, ಕೆಲವರು ಮೂಟೆಯ ಬಾಯ್ಬಿಚ್ಚಿ ತೆರೆದು ಚೈತನ್ಯವನ್ನು ಜಾಗೃತಗೊಳಿಸಿಕೊಂಡು ಪ್ರಭಾವಶಾಲಿಗಳಾಗುತ್ತಾರೆ. ಕೆಲವರು ಮೂಟೆಯ ಬಾಯನ್ನೇ ತೆರೆಯುವುದಿಲ್ಲ. ಒಳಗಿರುವ ಚೈತನ್ಯದ ಜಾಗೃತಿ ಮಾಡಬೇಕಾದವರು ಯಾರು? ಮನೆಯಲ್ಲಿ ಅಪ್ಪ-ಅಮ್ಮ, ಶಾಲೆಯಲ್ಲಿ ಟೀಚರ್. ಆದರೆ ಮಗುವಿನ ಅಂತ:ಶಕ್ತಿಯನ್ನು ಜಾಗೃತ ಗೊಳಿಸುವ ಕೆಲಸ ಆಗುತ್ತಿದೆಯೇ? ನಮ್ಮ ಕಣ್ಮುಂದಿರುವ ದಾರಿ ಯಾವುದು?
ನಮ್ಮ ಮಕ್ಕಳು ಸಾಫ್ಟ್ ವೇರ್ ಇಂಜಿನಿಯರಾಗಬಾರದೆಂದಲ್ಲ, ವೈದ್ಯರುಗಳಾಗಬಾರದೆಂದಲ್ಲ. ಆದರೆ ಮೊದಲು ಮಾನವೀಯತೆಯ ಶಿಕ್ಷಣ , ನೈತಿಕ ಮೌಲ್ಯಗಳ ಶಿಕ್ಷಣ, ಪ್ರೀತಿ,ಪ್ರೇಮ, ವಾತ್ಸಲ್ಯಗಳಂತಹ ಗುಣಗಳನ್ನು ಅರಳಿಸುವ ಸಂಸ್ಕಾರ ಕೊಡಬೇಡವೇ? ವೇದ ಮಂತ್ರವು ಹೇಳುವಂತೆ   ನೀನು ಪುಣ್ಯವಂತ, ನೀನು ಭಾಗ್ಯಶಾಲಿ, ನೀನು ಶಕ್ತಿವಂತ, ನೀನು ಸಮರ್ಥ. . . . .ಎಂಬ ಮಾತುಗಳನ್ನು ಮಕ್ಕಳ ಮುಂದೆ ಹೇಳುತ್ತಿರಿ, ಅವರು ಸಮರ್ಥರೇ ಆಗುತ್ತಾರೆ. ಆದರೆ ಹೊರಗಿನ ವೇಷಭೂಷಣ, ಹೇರಿಕೆಯ ಶಿಸ್ತು,  ಈ ನೆಲಕ್ಕೆ ಒಗ್ಗದ ನಮ್ಮದಲ್ಲದ ಸಂಸ್ಕೃತಿಯ ಅಂಧಾನುಕರಣೆ, ಇವೆಲ್ಲವೂ ಮಕ್ಕಳ ಆತ್ಮವಿಕಾಸ ಮಾಡಲಾರದು.
ಮಕ್ಕಳು ಕೇವಲ ಬುದ್ಧಿವಂತರಾದರೆ ಸಾಕೇ? ಹೌದೆನ್ನುತ್ತಾರೆ ಇಂದಿನ ಹಲವಾರು ಪೋಷಕರು. ಆದರೆ ಮಕ್ಕಳ ಬುದ್ಧಿವಂತಿಕೆಯ ಜೊತೆಗೇ ಮನಸ್ಸನ್ನುಅರಳಿಸುವ, ಸದ್ಗುಣಗಳನ್ನು  ಬೆಳೆಸುವ ಶಿಕ್ಷಣವು ಇಂದು ಎಲ್ಲಾ ದಿನಗಳಿಗಿಂತಲೂ ಹೆಚ್ಚು ಅನಿವಾರ್ಯವಾಗಿದೆ. ಕಾರಣ ಮೌಲ್ಯಾಧಾರಿತ ಶಿಕ್ಷಣದ ಕೊರತೆಯಿಂದ ಮಕ್ಕಳಲ್ಲಿ ನೈತಿಕ ಮೌಲ್ಯದ ಕೊರತೆ ಎದ್ದು ಕಾಣುತ್ತಿದೆ. ಆತ್ಮ ವಿಶ್ವಾಸದ ಕೊರತೆಯಿಂದ ಹಲವು ಮಕ್ಕಳು ಆತ್ಮಹತ್ಯೆಗೆ ಒಳಗಾಗಿರುವ ಉಧಾಹರಣೆಗಳನ್ನು   ಕಾಣುತ್ತೇವೆ. ನಿಮ್ಮ ಮಕ್ಕಳಿಗೆ ವೇದಮಂತ್ರದಲ್ಲಿ ತಿಳಿಸಿರುವಂತೆ ನೀನು ಸಮರ್ಥನಾಗಿದ್ದೀಯೇ, ನೀನು ಒಳ್ಳೆಯವ, ನೀನು ಶಕ್ತಿಶಾಲಿ,ನೀನು ಮೇಧಾವಂತ, ನೀನು ಗುಣವಂತ  ಎಂದು ಇಂದಿನಿಂದಲೇ ಹೇಳುತ್ತಾ ಬನ್ನಿ, ಅವರು ಹಾಗೆಯೇ ಆಗುತ್ತಾರೆ. ಒಳ್ಳೆಯ ಮಾತಿಗೇಕೇ ದಾರಿದ್ರ್ಯ?

ಜೀವನ ವೇದ - 5


ಸದಾ ಮಿತ್ರರಾಗಿ ಬಾಳೋಣ            
ನಾವು ಸಾಮಾನ್ಯವಾಗಿ ಹೇಳುವ ಒಂದು ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ

ಓಂ ಸಹ ನಾವವತು ಸಹ ನೌ ಭುನಕ್ತು
ಸಹ ವೀರ್ಯಂ ಕರವಾವಹೈ |
ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವಹೈ||
ಓಂ ಶಾಂತಿ: ಶಾಂತಿ: ಶಾಂತಿ: ||

ಅರ್ಥ :
ಸಹನಾ ವವತು = ಎಲ್ಲರೂ ಪರಸ್ಪರ ಒಬ್ಬರು ಇನ್ನೊಬ್ಬರ ರಕ್ಷಣೆಯನ್ನು  ಮಾಡೋಣ
ಸಹ ನೌ ಭುನಕ್ತು = ಎಲ್ಲರೂ ಪರಮ ಪ್ರೀತಿಯಿಂದ ಆನಂದವನ್ನು ಅನುಭವಿಸೋಣ
ಸಹ ವೀರ್ಯಂ ಕರವಾವಹೈ = ನಾವೆಲ್ಲರೂ ಪುರುಷಾರ್ಥದಿಂದ ಎಲ್ಲರ ಸಾಮರ್ಥ್ಯವನ್ನು ವರ್ಧಿಸೋಣ
ತೇಜಸ್ವಿ ನೌ ಅಧೀತಮಸ್ತು = ನಮ್ಮೆಲ್ಲರ ತೇಜಸ್ಸು ವರ್ಧಿಸಲಿ
ಮಾ ವಿದ್ವಿಷಾವಹೈ = ನಾವೆಲ್ಲರೂ ಪರಸ್ಪರ ವಿರೋಧವನ್ನು ಎಂದಿಗೂ ಮಾಡದಂತೆ,
ಮಿತ್ರರಾಗಿ ಸದಾ ಇರುವಂತೆ ಮಾಡು

ಭಾವಾರ್ಥ:

ನಾವೆಲ್ಲರೂ ಪರಸ್ಪರ ರಕ್ಷಣೆ ಮಾಡಿಕೊಳ್ಳೋಣ. ಎಲ್ಲರೂ ಪರಸ್ಪರ ಪ್ರೀತಿಯಿಂದ ಆನಂದವನ್ನು ಅನುಭವಿಸುವಂತಾಗಲಿ. ನಮ್ಮೆಲ್ಲರ ತೇಜಸ್ಸು ವರ್ಧಿಸಲಿ. ನಾವೆಲ್ಲರೂ ಪರಸ್ಪರ ವಿರೋಧವನ್ನು ಎಂದಿಗೂ ಮಾಡದಂತೆ, ಮಿತ್ರರಾಗಿ ಸದಾ ಇರುವಂತಾಗಲಿ.

ಈ ಮಂತ್ರದ ಅರ್ಥವು ಎಷ್ಟು ಸೊಗಸಾಗಿದೆ! ಭಗವಂತಾ, ನನ್ನನ್ನು ಕಾಪಾಡು ಎಂದು ಕೇಳಲಿಲ್ಲ, ಬದಲಿಗೆ ನಮ್ಮನ್ನು ಪರಸ್ಪರ ರಕ್ಷಣೆ ಮಾಡಿಕೊಳ್ಳೋಣವೆಂಬ ಸಂಕಲ್ಪ.ಇಲ್ಲಿ ಸ್ವಾರ್ಥದ ಸುಳಿವೂ ಇಲ್ಲ. ಎಲ್ಲರೂ ಒಟ್ಟಿಗೆ ಆನಂದವನ್ನು ಅನುಭವಿಸೋಣ. ನಮ್ಮೆಲ್ಲರ ತೇಜಸ್ಸು ವರ್ಧಿಸಲಿ. ಅಬ್ಭಾ! ಪ್ರಾರ್ಥನೆಯಲ್ಲಿ ಎಂತಹ ವಿಶಾಲ ಮನೋಭಾವ! ನನ್ನೊಬ್ಬನ ತೇಜಸ್ಸನ್ನು ವರ್ಧಿಸೆಂದು ಕೇಳ  ಲಿಲ್ಲ, ಬದಲಿಗೆ ನಮ್ಮೆಲ್ಲರ ತೇಜಸ್ಸು ವರ್ಧಿಸಲಿ!  ನಮ್ಮ ಮಧ್ಯೆ ವಿರೋಧವು ಎಂದಿಗೂ ಬಾರದಿರಲಿ!ನಾವೆಲ್ಲಾ ಸದಾ ಮಿತ್ರರಾಗಿ ಇರುವಂತೆ ಮಾಡು. ಒಂದೊಂದು ಮಾತೂ ಅದ್ಭುತ!

ಈ ಮಂತ್ರಕ್ಕೂ ಭೋಜನಕ್ಕೂ ಏನೂ ಸಂಬಂಧವಿಲ್ಲ. ಆದರೂ ಊಟಮಾಡುವಾಗ ಹೇಳುವ ಪದ್ದತಿ ಬೆಳೆದು ಬಂದಿದೆ. ತಪ್ಪೇನಿಲ್ಲ. ಊಟದ ಸಮಯದಲ್ಲಿ ಶಾಂತವಾಗಿ ಕುಳಿತಿರುತ್ತಾರೆ, ಆ ಸಮಯದಲ್ಲಿ ಈ ಮಂತ್ರವನ್ನು ಹೇಳುವುದರಿಂದ ಜನರಿಗೆ ಒಳ್ಳೆಯ ಸಂದೇಶ ಕೊಟ್ಟಂತಾಗುತ್ತದೆ ಎಂದು ರೂಢಿಗೆ ಬಂದಿರಬಹುದು. ಆದರೆ ಎಷ್ಟುಜನ ಈ ಮಂತ್ರದ ಅರ್ಥವನ್ನು ತಿಳಿದು ಹೇಳುತ್ತಾರೆ?
ಈ ಮಂತ್ರದ ಅರ್ಥವನ್ನು ತಿಳಿದು ಹೇಳಿದ್ದೇ ಆದರೆ ನಾವು ಅದರಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳುವುದು ಕಷ್ಟವೇನಲ್ಲ. ಅರ್ಥವನ್ನು ತಿಳಿದು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡಿದಾಗ ಮಂತ್ರವು ಸಾರ್ಥಕವಾಗುತ್ತದೆ.

ಅನ್ನದಾತನನ್ನು ರಕ್ಷಿಸು
ಭೋಜನ ಸಮಯಕ್ಕೆಂದೇ ನಮ್ಮ ಋಷಿಮುನಿಗಳು ಮಾಡಿರುವ ಯಜುರ್ವೇದದ ಮಂತ್ರ ಒಂದಿದೆ. ಆ ಮಂತ್ರದ ಬಗ್ಗೆಯೂ ತಿಳಿಯೋಣ.

ಅನ್ನಪತೇನ್ನಸ್ಯ ನೋ ದೇಹ್ಯನಮೀವಸ್ಯ ಶುಷ್ಮಿಣ: |
ಪ್ರಪ್ರ ದಾತಾರಂ ತಾರಿಷಊರ್ಜಂ ನೋ ಧೇಹಿ ದ್ವಿಪದೇ ಚತುಶ್ಪದೇ ||
[ಯಜು-ಅಧ್ಯಾಯ-೧೧ ಮಂತ್ರ-೮೩]

 ಅರ್ಥ:
ಅನ್ನಪತೇ = ಅನ್ನಗಳ ರಕ್ಷಕನಾದ ಯಜಮಾನನೇ
ಅನ್ನಸ್ಯ = ಅನ್ನವನ್ನು
ನ: = ನಮಗೆ
ದೇಹಿ = ಕೊಡು
ಅನಮೀವಸ್ಯ = ರೋಗವನ್ನುಂಟುಮಾಡದಿರುವುದೂ, ಸುಖಕರವೂ ಆದ
ಶುಷ್ಮಿಣ: = ಹೆಚ್ಚು ಬಲಕಾರವೂ ಆದ ಅನ್ನವನ್ನು [ನಮಗೆ ಕೊಡು]
ಪ್ರ ಪ್ರ = ಶ್ರೇಷ್ಠವಾದ [ಅನ್ನವನ್ನು ನಮಗೆ ಕೊಡು]
ದಾತಾರಮ್ = ಅನ್ನದಾತನನ್ನು
ತಾರಿಷ: = ಸಂರಕ್ಷಿಸು
ಊರ್ಜಮ್ = ಪರಾಕ್ರಮವನ್ನು
ನ: = ನಮಗೆ
ಧೇಹಿ = ಉಂಟುಮಾಡಿಕೊಡು
ದ್ವಿಪದೇ = ಎರಡು ಕಾಲಿನ ಪ್ರಾಣಿಗಳಿಗೆ   [ಮನುಷ್ಯರಿಗೆ ಬಲವನ್ನು ಉಂಟುಮಾಡು]
ದ್ವಿಪದೇ = ನಾಲ್ಕು ಕಾಲಿನ ಪ್ರಾಣಿಗಳಿಗೆ [ಬಲವನ್ನು ಉಂಟುಮಾಡು]
ಭಾವಾರ್ಥ:
ಹೇ ಭಗವಂತಾ, ಹೆಚ್ಚು ಬಲಕಾರವೂ, ಸುಖಕರವೂ, ರೋಗವನ್ನುಂಟುಮಾಡದಿರುವ ಶ್ರೇಷ್ಠವಾದ ಅನ್ನವನ್ನು ನಮಗೆ ನೀಡು. ಪ್ರಾಣಿಗಳಿಗೂ, ಮನುಷ್ಯರಿಗೂ ಶ್ರೇಷ್ಠವಾದ ಹಾಗೂ ಪರಾಕ್ರಮವನ್ನು ಉಂಟುಮಾಡುವ  ಅನ್ನವನ್ನು[ಆಹಾರವನ್ನು] ನೀಡುತ್ತಿರುವ ಅನ್ನದಾತನನ್ನು ಸಂರಕ್ಷಿಸು.
ನಿಜವಾಗಿ ನಾವು ಊಟಮಾಡುವಾಗ ನಮ್ಮ ಮನಸ್ಸಿನಲ್ಲಿ ಉದ್ಭವಿಸಬೇಕಾದ ವಿಚಾರಗಳು ಏನೆಂಬುದನ್ನು ಈ ಮಂತ್ರವು ಎಷ್ಟು ಸೊಗಸಾಗಿ ವರ್ಣಿಸಿದೆ ಎಂದರೆ ,ಈ ಮಂತ್ರಗಳ ಶಬ್ಧದಲ್ಲಿ     ಅಡಗಿರುವ  ಅಂತರಾರ್ಥವನ್ನು ಗಮನಿಸ ಬೇಕು. ನಮಗೆ ಎಂತಹ ಆಹಾರಬೇಕೆಂದು ಭಗವಂತನಲ್ಲಿ ನಮ್ಮ ಪ್ರಾರ್ಥನೆ ಇದೆ? ಹೆಚ್ಚು ಬಲಕಾರವೂ, ಸುಖಕರವೂ, ರೋಗವನ್ನುಂಟುಮಾಡದಿರುವ ಶ್ರೇಷ್ಠವಾದ ಅನ್ನವನ್ನು ಕೊಡು, ಎಂಬುದು ಭಗವಂತನಲ್ಲಿ ನಮ್ಮ ಪ್ರಾರ್ಥನೆ. ಭಗವಂತನು ನಮಗೆ ಪರಿಶುದ್ಧವಾದ, ಪುಷ್ಠಿದಾಯಕವಾದ ಆಹಾರವನ್ನೇ ಕೊಟ್ಟಿದ್ದಾನೆ. ರೈತ ಬೆಳೆದಾಗ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಆನಂತರ ನಾವೇನು ಮಾಡುತ್ತೇವೆ? ಅನ್ನವು ಬೆಳ್ಳಗಿರಬೇಕೆಂದು ಹೆಚ್ಚು ಪಾಲೀಶ್ ಮಾಡಿದ ಅಕ್ಕಿಯಲ್ಲಿ ಅನ್ನ ಮಾಡುತ್ತೇವೆ. ಅಕ್ಕಿಯ ಪೌಷ್ಠಿಕಾಂಶವೆಲ್ಲವೂ ಪಾಲೀಶ್ ಮಾಡಿದಾಗ ಹೊಟ್ಟಿನ ಪಾಲಾಗಿರುತ್ತದೆ [ ಅದನ್ನು ಹಸುಗಳಿಗೆ ಆಹಾರವಾಗಿ ಬಳಸಿದರೂ ಪರವಾಗಿಲ್ಲವೆನ್ನಿ] ಇನ್ನು ಅಕ್ಕಿಯಲ್ಲಿ ಉಳಿದದ್ದೇನು? ಅನ್ನ ಮಾತ್ರ ಬೆಳ್ಳಗಿರುತ್ತದೆ ಹೊರತೂ ಅದರಲ್ಲಿ ಪೌಷ್ಟಿಕಾಂಶವಿರುವುದಿಲ್ಲ.
ಕುಕ್ಕರ್ ನಲ್ಲಿ ಬೇಯಿಸಿದ ಅಡುಗೆಯ ಬಗ್ಗೆ ದಿ|| ರಾಜೀವ್ ದೀಕ್ಷಿತ ಅವರ ಮಾತುಗಳನ್ನು ಕೇಳಿ.   ಒಂದು ಮಗುವಿನ ಜನ್ಮ ವಾಗಲು ತಾಯಿಯ ಗರ್ಭದಲ್ಲಿ ಒಂಬತ್ತು ತಿಂಗಳು ಇರಬೇಕಲ್ಲವೇ? ಒಂದು ಬೆಳೆ ಸರಿಯಾಗಿ ಬರಲು ಅದಕ್ಕೆ ಅಗತ್ಯವಾದ ಮೂರ್ನಾಲ್ಕು ತಿಂಗಳು ಬೇಕಲ್ಲವೇ? ಹಾಗೆಯೇ ಒಂದು ಉತ್ತಮವಾದ ಕಾಳು ಬೇಳೆ,ಅಕ್ಕಿ ಬೇಯಲು ಅದಕ್ಕೆ ನಿರ್ಧಿಷ್ಠ ಸಮಯ, ಹಿತವಾದ ಶಾಖ, ಗಾಳಿ, ಬೆಳಕು, ಎಲ್ಲವೂ ಇದ್ದರೆ ಬೇಯಿಸಿದ ಆಹಾರವು ಆರೋಗ್ಯದಾಯಕವಾಗಿರುತ್ತದೆ. ಹಾಗಲ್ಲದೆ ಕುಕ್ಕರ್ ನಲ್ಲಿ ಬೇಯಿಸಿದ ತರಕಾರಿ, ಬೇಳೆ ಕಾಳುಗಳು, ಅಕ್ಕಿ ಕೂಡ ಸಹಜವಾಗಿ ಬೇಯದೆ ಅತ್ಯಂತ ಕಡಿಮೆ ಸಮಯದಲ್ಲಿ ಬೆಂದಂತಾಗಿ ಗಾಳಿ, ಬೆಳಕು ಇಲ್ಲದೆ  ಅದರ ಪೌಷ್ಟಿಕಾಂಶವೆಲ್ಲವೂ ನಾಶವಾಗಿರುತ್ತದೆ. ನಾವು ನಿತ್ಯವೂ ಇದೇ ಆಹಾರವನ್ನು ಸೇವಿಸುತ್ತೇವೆ,ಅಲ್ಲವೇ?
 ಹೀಗಿರುವಾಗ ಭಗವಂತನು ಕರುಣಿಸಿದ ಪುಷ್ಠಿದಾಯಕ ಆಹಾರವನ್ನು ಹಾಳುಗೆಡವಿದವರು ನಾವೇ ಅಲ್ಲವೇ? ಇನ್ನು ನಾವು ತಿನ್ನುವ ತರಕಾರಿ, ಹಣ್ಣು ಹಂಪಲು, ಎಲ್ಲವೂ ವಿಷಯುಕ್ತ. ಮನುಷ್ಯನ ದುರಾಸೆಯ ಫಲವಾಗಿ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸುವುದಲ್ಲದೆ, ಕ್ರಿಮಿಗಳು ಬಾರದಂತೆ ಕ್ರಿಮಿನಾಶಕಗಳ ಸಿಂಪಡಿಸುವುದರಿಂದ ಹಣ್ಣು ತರಕಾರಿಗಳ ಮೂಲಕ ನಾವು ವಿಷವನ್ನೇ ಸೇವಿಸುತ್ತೇವೆ.

 ಇಂದಿನ ಪೀಳಿಗೆಗೆ   ನಾಡ  ಹಸುವಿನ ಹಾಲಿನ ರುಚಿಯೇ ಗೊತ್ತಿಲ್ಲದಿರಬಹುದು. ನಮ್ಮ ದೇಶದಲ್ಲಿ ಗೋವನ್ನು ಪ್ರತ್ಯಕ್ಷ ದೇವತೆಯಂತೆ ಕಾಣುತ್ತಿದ್ದೆವು. ಕಾರಣವೂ ಇತ್ತು. ಮನೆಮಂದಿಗೆಲ್ಲಾ ಹಾಲು, ಮೊಸರು, ಬೆಣ್ಣೆ , ತುಪ್ಪವು ಹಸುವಿನಿಂದ ದೊರಕುತ್ತಿದ್ದರೆ ಎತ್ತು ಕೃಷಿಗೆ ಸಹಕಾರಿ ಯಾಗಿತ್ತು. ದನಗಳ ಸಗಣಿಯೇ ಬೆಳೆಗೆ ಗೊಬ್ಬರವಾಗಿತ್ತು. ಇದೆಲ್ಲಾ ಆ ಭಗವಂತನ ಕೃಪೆಯಲ್ಲವೇ? ಆದರೆ ನಮ್ಮ ದುರಾಸೆಯ ಪರಿಣಾಮವಾಗಿ ನಾಡಹಸುಗಳ ಸಂತತಿ ಕ್ಷೀಣಿಸಲು ನಾವೇ ಕಾರಣರಾದೆವು.ಅಲ್ಲವೇ?

ಮಂತ್ರದಲ್ಲಿ ಹೇಳಿರುವ ಮತ್ತೊಂದು ಅಂಶವೆಂದರೆ ಹೇ ಭಗವಂತಾ, ನಮಗೆ ಆರೋಗ್ಯಯುತವಾದ ಆಹಾರವನ್ನು ನೀಡಿರುವ ಅನ್ನದಾತನನ್ನು ಕಾಪಾಡು. ಅನ್ನದಾತನೆಂದರೆ ಯಾರು? ಭಗವಂತನೇ? ಅವನನ್ನೇ ಅವನು ಕಾಪಾಡಿಕೊಳ್ಳಬೇಕೇ? ಇಲ್ಲ, ಪ್ರತ್ಯಕ್ಷವಾಗಿ ನಮಗೆ ಅನ್ನವನ್ನು ನೀಡುವ ನಿಜವಾದ ಅನ್ನದಾತನೆಂದರೆ ರೈತ. ಆ ರೈತನ ಸ್ಥಿತಿ ಇಂದು ಹೇಗಾಗಿದೆ, ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ರೈತ ಬೆಳೆವ ಬೆಳೆಗೆ ಸೂಕ್ತಬೆಲೆ ಸಿಗದೆ ಆತ್ಮಹತ್ಯೆ    ಮಾಡಿಕೊಳ್ಳುವ ಪರಿಸ್ಥಿತಿ! ಆದರೆ ನಮ್ಮ ಋಷಿಮುನಿಗಳ ಚಿಂತನೆ ಎಂದರೆ ನಮಗೆ ಅನ್ನ ಕೊಡುವ ರೈತನು ಸಂತೋಷವಾಗಿರಬೇಕು. ನಮ್ಮ ಋಷಿಮುನಿಗಳ ಚಿಂತನೆ ನಮ್ಮ ಜನರಿಗೆ ನಮ್ಮನ್ನು ಆಳುವವರಿಗೆ ಅರ್ಥವಾಗಬೇಕಲ್ಲವೇ?

ಜೆವನ ವೇದ -4

ಸತ್ಯವನ್ನು ಆವಿಷ್ಕರಿಸಿ-ನಿರ್ಭೀತರಾಗಿ ಜೀವನ ನಡೆಸಿ
ಧರ್ಮದ ಆಚರಣೆ ಎಂದರೆ ಯಾವುದು ತಲೆತಲಾಂತರದಿಂದ ನಡೆದು ಬಂದಿದೆ, ಅದನ್ನು ಪ್ರಶ್ನೆ ಮಾಡದೆ ಅನುಸರಿಸುವುದು-ಎಂಬುದು ಸಾಮಾನ್ಯ ಅಭಿಪ್ರಾಯ. ಇದಕ್ಕೆ ವಿದ್ಯಾವಂತ-ಅವಿದ್ಯಾವಂತ ಎಂಬ ಭೇದವಿಲ್ಲ. ಹಾಗೆ ನೋಡಿದರೆ ವಿದ್ಯಾವಂತರೆನಿಸಿಕೊಂಡು ಪದವಿಗಳ ಸರಮಾಲೆಯನ್ನು ಹಾಕಿಕೊಂಡವರೇ ಪ್ರಶ್ನೆ ಮಾಡದೆ ಕುರುಡಾಗಿ ಅನುಸರಿಸುವುದನ್ನು ನಾವು ಸಮಾಜದಲ್ಲಿ ಹೆಚ್ಚು ಕಾಣಬಹುದು.ಇದಕ್ಕೆ ಕಾರಣ ಸ್ಪಷ್ಟ.ಅದುವೇ ಭಯ.
ಹೆಸರಿನ ಮುಂದೆ ಹಲವು ಪದವಿಗಳಿವೆ. ಒಳ್ಳೆಯ ಉದ್ಯೋಗ ಸಿಕ್ಕಿದೆ. ಲಕ್ಷಕ್ಕೆ ಕಮ್ಮಿ ಇಲ್ಲದಂತೆ ದುಡಿಮೆ ಇದೆ. ವಾಸಕ್ಕೆ ಸುಸಜ್ಜಿತ ಮನೆ.ಅದರಲ್ಲಿ ಪತ್ನಿ ಮತ್ತು  ಮುದ್ದಾದ ಮಗುವಿನೊಡನೆ ಹಾಯಾಗಿ ಜೀವನ ಸಾಗಿರುವಾಗ ಯಜಮಾನನಿಗೆ ಅವನಿಗೆ ಅರಿವಿಲ್ಲದಂತೆ ಭಯ,ಅಭದ್ರತೆ ಕಾಡುತ್ತದೆ. ಭಗವಂತ! ಪತ್ನಿ ಮತ್ತು ಮಗುವಿನೊಡನೆ ನನ್ನನ್ನು ಸುಖವಾಗಿ ಕಾಪಾಡೆಂದು ಎಲ್ಲಾ ದೇವರಿಗೂ ಪ್ರಾರ್ಥಿಸಿ ಮನೆ ಮುಂದೆ ಬಂದ ಬುಡುಬುಡುಕೆಯವನ ಬಾಯಲ್ಲಿ ಏನಾದರೂ ಕೆಟ್ಟ ಮಾತು ಬಂದೀತೆಂದು ಮನೆಯಲ್ಲಿದ್ದ ಬಟ್ಟೆಯನ್ನೋ ಹತ್ತಿಪ್ಪತ್ತು ರೂಪಾಯಿ ದುಡ್ದನ್ನೋ ಕೊಟ್ಟು ಅವನು ಹೋದಮೇಲೆ ನಿರಾಳನಾಗುತ್ತಾನೆ.
ಇಂತಾ ಉಧಾಹರಣೆಗಳಿಗೇನೂ ಕೊರತೆ ಇಲ್ಲ. ಜೀವನ ದುಸ್ತರವಾಗಿದ್ದಾಗ ಕಾಡದಿದ್ದ ಅಭದ್ರತೆ ಜೀವನವು ಸುಖವಾಗಿರುವಾಗ ಕಾಡಲಾರಂಭಿಸುವುದೇಕೇ? ಜೀವನದಲ್ಲಿ ಕಷ್ಟವಿದ್ದಾಗ ಇಲ್ಲದಿದ್ದ ಭಯ ಸುಖದಲ್ಲಿ ಕಾಡುವುದಾದರೂ ಏಕೇ? ಸತ್ಯದ ಅರಿವಾಗದಿರುವುದೇ ಜೀವನದಲ್ಲಿ ಭಯಕ್ಕೆ ಕಾರಣ. ಅಭದ್ರತೆಯ ಭಾವನೆಗೆ  ಕಾರಣ.
    ಧರ್ಮಾಚರಣೆಯ ಹೆಸರಲ್ಲಿ ಮೌಢ್ಯದಿಂದ ವರ್ತಿಸುವ ಹಲವು ಉಧಾಹರಣೆಗಳಿವೆ.ಸಾಮಾನ್ಯವಾಗಿ ಬಳಕೆಯಲ್ಲಿರುವ ಒಂದು ಕಥೆ ಎಲ್ಲರಿಗೂ ತಿಳಿದದ್ದೇ.ಆದರೂ ನೆನಪು ಮಾಡುವೆ.
ಬ್ರಾಹ್ಮಣನೊಬ್ಬನ ಮನೆಯಲ್ಲಿ ಅವನ ತಂದೆಯ ಶ್ರಾದ್ಧದ ದಿನ ಮನೆಯಲ್ಲಿದ್ದ ಬೆಕ್ಕಿನ ಮೇಲೆ  ಕುಕ್ಕೆಯೊಂದನ್ನು ಮುಚ್ಚಿ ನಂತರ ಶ್ರಾದ್ಧ ಮಾಡುತ್ತಿದ್ದ. ಕಾರಣ ಬಲು ಸರಳ. ಮನೆಯಲ್ಲಿ ಬೆಕ್ಕು ಓಡಾಡುತ್ತಿದ್ದರೆ ಶ್ರಾದ್ಧದ ಊಟ ಮಾಡುತ್ತಿದ್ದವರ ಎಲೆಗೆ ಬೆಕ್ಕಿನ ಕೂದಲು ಬಿದ್ದೀತೆಂಬ ಮುನ್ನೆಚ್ಚರಿಕೆ. ಹೀಗೇ ಹಲವು ವರ್ಷಗಳು ನಡೆಯಿತು. ಮನೆಯ ಯಜಮಾನ ಮರಣ  ಹೊಂದಿದ. ಅವನ ಮಗ ಈಗ ಅವನ ಶ್ರಾದ್ಧಮಾಡಬೇಕು. ಶ್ರಾದ್ಧದ ದಿನ ಬಂತು. ತನ್ನ ಅಪ್ಪ ಶ್ರಾದ್ಧ ಮಾಡುವಾಗ ಬೆಕ್ಕಿನ ಮೇಲೆ ಕುಕ್ಕೆ ಮುಚ್ಚಿ ನಂತರ ಶ್ರಾದ್ಧ ಮಾಡುತ್ತಿದ್ದ. ಆದರೆ ಇವನ ಕಾಲಕ್ಕೆ ಮನೆಯಲ್ಲಿ ಬೆಕ್ಕು ಇಲ್ಲದಂತಾಗಿದೆ. ಏನು ಮಾಡುವುದು? ಊರೆಲ್ಲಾ ಸುತ್ತಿ ಒಂದು ಬೆಕ್ಕು ತಂದ. ಅದರ ಮೇಲೆ ಕುಕ್ಕೆ ಮುಚ್ಚಿದ. ಶ್ರಾದ್ಧ ಮಾಡಿದ್ದಾಯ್ತು. ಎಲ್ಲರೂ  ಊಟವನ್ನೂ ಮಾಡಿದರು. ರಾತ್ರಿಯಾಯ್ತು. ಆ ದಿನ ಕಳೆದು ಹೋಯ್ತು. ಬೆಳಿಗ್ಗೆ ಎದ್ದಾಗ ಕುಕ್ಕೆ ಮುಚ್ಚಿದ್ದ ಬೆಕ್ಕಿನ ಬಗ್ಗೆ ನೆನಪಾಯ್ತು. ಕುಕ್ಕೆ ಎತ್ತುತ್ತಾನೆ. ಬೆಕ್ಕು ಉಸಿರಾಡದೆ ಮಲಗಿದೆ. ಗಾಳಿಯೇ ಆಡದ ಪ್ಲಾಸ್ಟಿಕ್ ಕುಕ್ಕೆಯನ್ನು ಮುಚ್ಚಿ ಅದರ ಮೇಲೆ ಅಲುಗಾಡದಂತೆ ತೂಕವನ್ನು ಇಟ್ಟಿದ್ದ ಪರಿಣಾಮ ಉಸಿರಾಡಲೂ ಸಾಧ್ಯವಿಲ್ಲದೆ ಬೆಕ್ಕು ಕೊನೆ ಉಸಿರೆಳೆದಿತ್ತು!! ಇಂತಾ ಘೋರ ಕೃತ್ಯಕ್ಕೆ ಕಾರಣವಾದರೂ ಏನು? ಹಿಂದಿನ ಉದ್ಧೇಶವನ್ನೇ ತಿಳಿಯದೆ ಆಚರಿಸಿದ  ಕುರುಡು ಆಚರಣೆಯಲ್ಲವೇ?

ವೇದದ ಹೆಸರು ಕೇಳಿದೊಡನೆ ಒಂದು ಜಾತಿಗೆ ಸೀಮಿತಗೊಳಿಸಿ ಹರಿಹಾಯುವ ಜನರು ತಾವು ನಿರ್ಭೀತ ಜೀವನ ಮಾಡಬೇಕಾದರೆ ವೇದದ ಮಾರ್ಗದರ್ಶನವನ್ನೇ ಪಡೆಯಬೇಕು. ವೇದವು ಜನರಲ್ಲಿ ಎಂತಹಾ ನಿರ್ಭೀತ ಸ್ಥಿತಿಯನ್ನು ಉಂಟುಮಾಡುತ್ತದೆಂಬುದನ್ನು ತಿಳಿಯಲು ಈ ವೇದಮಂತ್ರದ ಅರ್ಥವನ್ನು ಒಮ್ಮೆ ವಿಚಾರ ಮಾಡೋಣ.

ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷ: ||
[ಋಕ್-೧.೮೬.೯]

ಸತ್ಯಶವಸ: = ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ
ಯೂಯಮ್ = ನೀವು
ಮಹಿತ್ವನಾ = ನಿಮ್ಮ ಸ್ವಂತ ಮಹಿಮೆಯಿಂದ
ತತ್ ಆವಿಷ್ಕರ್ತ =ಆ ಸತ್ಯವನ್ನು ಆವಿಷ್ಕರಿಸಿರಿ
ರಕ್ಷ: = ದುಷ್ಕಾಮನೆಗಳನ್ನು
ವಿದ್ಯುತಾ = ನಿಮ್ಮ ಜ್ಞಾನಜ್ಯೋತಿಯಿಂದ
ವಿಧ್ಯತಾ = ಸೀಳಿಹಾಕಿರಿ
ಭಾವಾರ್ಥ:-
ಓ ಧೀರರೇ, ನಿಮ್ಮ ಸ್ವಂತ ಮಹಿಮೆಯಿಂದ ಸತ್ಯವನ್ನು ಆವಿಷ್ಕರಿಸಿ. ದುಷ್ಕಾಮನೆಗಳನ್ನು ನಿಮ್ಮ ಜ್ಞಾನಜ್ಯೋತಿಯಿಂದ ಸೀಳಿ ಹಾಕಿರಿ.
ಒಂದೊಮ್ಮೆ ಈ ಮಂತ್ರದ ಅರಿವಿದ್ದಿದ್ದರೆ ಬೆಕ್ಕನ್ನು ಕೊಲ್ಲುವ ಮೌಢ್ಯದ ಕೆಲಸವನ್ನು ಯಾರೂ ಮಾಡುತ್ತಿರಲಿಲ್ಲ. ಬೆಕ್ಕಿನ ಕಥೆಯಲ್ಲಿ ಅತಿರೇಕವಿರ ಬಹುದು. ಆದರೆ ಸತ್ಯವಿಲ್ಲದೆ ಇಲ್ಲ!
ಈ ಮಂತ್ರವನ್ನು ಆಳವಾಗಿ ಅರ್ಥೈಸುತ್ತಾ ಹೋದರೆ ನನ್ನ ಕಣ್ಮುಂದೆ ಒಬ್ಬ ಗುರು ತನ್ನ ಯುವ ಶಿಷ್ಯನಿಗೆ ಸಿಡಿಲಿನಂತಹ ಮಾತುಗಳಿಂದ ಉಪದೇಶ ಮಾಡುತ್ತಿದ್ದಾನೇನೋ ಎಂದು ಭಾಸವಾಗುತ್ತದೆ. ಒಬ್ಬ ತಂದೆ ತನ್ನ ಮಗನಿಗೆ, ಗುರು ತನ್ನ ಶಿಷ್ಯನಿಗೆ ಈ ಮಂತ್ರದ ಅರ್ಥವನ್ನು ತಿಳಿಸಿದರೆ ಅವನಲ್ಲಿ ಅದೆಂತಹಾ ಅದ್ಭುತ ಶಕ್ತಿ ಮೂಡೀತು! ಭಯವೆಂಬುದಕ್ಕೆ ಆಸ್ಪದವೇ ಇಲ್ಲ. ಅಭದ್ರತೆಯ ಭಯವು ಕಾಡಲಾರದು. ಸತ್ಯದ ದರುಶನವಾದಾಗ ನಿರ್ಭೀತ ಜೀವನ ನಮ್ಮ ದಾಗುತ್ತದೆ.
ಮಂತ್ರವಾದರೂ ಏನು ಹೇಳುತ್ತದೆ?  ಹೇ ಧೀರರೇ, ನಿಮ್ಮ ಸ್ವಂತ ಸಾಮರ್ಥ್ಯದಿಂದ, ನಿಮ್ಮ ವಿವೇಕದಿಂದ, ನಿಮ್ಮ ಬುದ್ಧಿಯಿಂದ, ಸತ್ಯವನ್ನು ಆವಿಷ್ಕರಿಸಿ.ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ
ಇಲ್ಲಿ ಕುರುಡು ಆಚರಣೆಗೆ ಅವಕಾಶ ವಿದೆಯೇ? ವೇದವಾದರೂ ಮಂತ್ರದಲ್ಲಿ ಬಳಸಿರುವ ಪದಗಳ ತೀವ್ರತೆಯನ್ನು ಗಮನಿಸಿದಿರಾ? ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ- ಇಂತಹ ವಿಶ್ವಾಸ ತುಂಬುವ ಮಾತುಗಳನ್ನು ವೇದವು  ಮಾತ್ರವೇ ಹೇಳಲು ಸಾಧ್ಯ.

ಅರ್ಥವನ್ನು ಸರಿಯಾಗಿ ತಿಳಿಯದೆ ಆಚರಿಸಿದಾಗ  ಅನರ್ಥಕ್ಕೆ ಕಾರಣವಾಗುತ್ತದೆ                                                                                                        
ಇಂದು ಸಮಾಜದಲ್ಲಿ ಕಾಣುವ ಸಾಮರಸ್ಯದ ಕೊರತೆಗೆ ಧರ್ಮವನ್ನು ಸರಿಯಾಗಿ ತಿಳಿಯದೆ ತಪ್ಪು ತಪ್ಪಾಗಿ ಆಚರಿಸುವ ಕಂದಾಚಾರಗಳೂ ಕೂಡ ಹಲವು ಸಂದರ್ಭಗಳಲ್ಲಿ ಕಾರಣವಾಗುತ್ತವೆ, ಯಜ್ಞ ಯಾಗಾದಿಗಳನ್ನು ಮಾಡುವಾಗ ಪ್ರಾಣಿಬಲಿಗೆ ಅವಕಾಶವೇ ಇಲ್ಲದಿದ್ದರೂ ಅಶ್ವಮೇಧ, ಅಜಮೇಧದಂತಹ ಯಜ್ಞಗಳನ್ನು ಮಾಡುವಾಗ ಕುದುರೆಯನ್ನು /ಮೇಕೆಯನ್ನು ಬಲಿಕೊಡಬೇಕೆನ್ನುವ ಒಂದು ವರ್ಗ ಈಗಲೂ ಇರುವಾಗ ಅದನ್ನು ವಿರೋಧಿಸುವ ಒಂದು ವರ್ಗ ಸಹಜವಾಗಿ ಇರುತ್ತದೆ. ಆಗ ಸಾಮಾಜಿಕ ಸಾಮರಸ್ಯವು ಹಾಳಾಗುವುದಕ್ಕೆ ಧರ್ಮದ ಹೆಸರಿನಲ್ಲಿ ನಡೆವುವ ಅಧರ್ಮದ ಕ್ರಿಯೆಗಳು ಕಾರಣವಾಗುತ್ತವೆ.
ಯಜ್ಞಕ್ಕೆ ಮತ್ತೊಂದು ಹೆಸರು ಅಧ್ವರ ಎಂದು. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದು ಅರ್ಥ. ಹೀಗೆ ಯಜ್ಞಕ್ಕೆ  ಅಹಿಂಸೆ ಎಂಬ ಅರ್ಥವಿದ್ದರೂ ಕೂಡ ಅಲ್ಲಿ ಪ್ರಾಣಿಬಲಿ ಮಾಡಲೇ  ಬೇಕೆನ್ನುವ ಗುಂಪಿನಿಂದ  ಅದನ್ನು ವಿರೋಧಿಸಿದವರನ್ನು ಧರ್ಮದ್ರೋಹಿಗಳೆಂಬ ಹಣೆ ಪಟ್ಟಿ ಕಟ್ಟುವ ಪ್ರಯತ್ನ ನಡೆಯುತ್ತದೆ.
 ನಾವು ಧರ್ಮದ ಹೆಸರಿನಲ್ಲಿ ಆಚರಿಸುವ ಪ್ರತಿಯೊಂದು ಕೆಲಸವನ್ನೂ ಆಚರಣೆಗೆ ಮುಂಚೆ ಅದರಲ್ಲಿ ಸತ್ಯವನ್ನು ಆವಿಷ್ಕರಿಸುವ ಪ್ರಯತ್ನವನ್ನು ಮಾಡಿದ್ದೇ ಆದರೆ ಯಾವ ಧರ್ಮಕಾರ್ಯವೂ ಮಾನವತೆಯ ವಿರೋಧಿಯಾಗಿರುವುದಿಲ್ಲ. ಆದ್ದರಿಂದ ನಾವು ಮಾಡುವ ಎಲ್ಲಾ ಕಾರ್ಯದಲ್ಲೂ ಸತ್ಯವನ್ನು ಆವಿಷ್ಕರಿಸುವಂತಹ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅಶ್ವಮೇಧ ಯಾಗದ ನಿಜವಾದ ಅರ್ಥ ತಿಳಿದಾಗ ಅದನ್ನು ವಿರೋಧಿಸುವ ಪ್ರಸಂಗವೇ ಎದುರಾಗುವುದಿಲ್ಲ. ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ........ "ಅಶ್ವಂ ಇತಿ ರಾಷ್ಟ್ರಂ" ಅದರ ವಿವರಣೆ ಹೀಗಿದೆ. ಶ್ವ: ಅಂದರೆ ನಾಳೆ. ಅಶ್ವ: ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ. ಯಾವುದು ಶಾಶ್ವತವಲ್ಲವೋ ಅದಕ್ಕೆ ನಿನ್ನೆ ನಾಳೆಗಳಿರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ "ಅಶ್ವಂ ಇತಿ ರಾಷ್ಟ್ರಂ" ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.["ದೇಹ ನಶ್ವರ-ದೇಶ ಶಾಶ್ವತ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ಇಂದು ಇದ್ದು ನಾಳೆ ಇಲ್ಲಾವಾಗುವವರು ನಾವು ನೀವು.
ಇನ್ನು "ಮೇಧ" ಎಂದರೆ " ಸಂಗಮೇ" ಅಂದರೆ ಒಟ್ಟು ಗೂಡಿಸು.ಎಂದಾಗ ರಾಷ್ಟ್ರವನ್ನು ಒಟ್ಟು ಗೂಡಿಸಲು ಮಾಡುವ ಕಾರ್ಯಕ್ರಮಗಳೆಲ್ಲಾ " ಅಶ್ವಮೇಧ ಯಾಗವೇ" ಎಂದಂತಾಯ್ತು. ಎಂತಹಾ ಶ್ರೇಷ್ಠವಾದ ಅರ್ಥ ಇದೆಯಲ್ಲವೇ?. ಸತ್ಯವನ್ನು ಆವಿಷ್ಕಾರ ಮಾಡಿದಾಗ ಮಾತ್ರವೇ ಇಂತಹ ಅದ್ಭುತಗಳು ಗೋಚರವಾಗಲು ಸಾಧ್ಯ.

ಜೀವನ ವೇದ -3

ಸಮಾಜಿಕ ಮತ್ತು ಪರಿಸರ ಜಾಗೃತಿ ಮೂಡಿಸುವ ತಂದೆತಾಯಿಯರು ನಾವಾಗೋಣ
ಒಂದು ನೆಮ್ಮದಿಯ ಕುಟುಂಬದಲ್ಲಿನ ಯಜಮಾನನ ಅರ್ಹತೆಗಳ  ಬಗ್ಗೆ ಅಥರ್ವಣ  ವೇದದ ೭ನೇ ಕಾಂಡದ ೬೦ನೇ ಸೂಕ್ತದ ೧ನೇ ಮಂತ್ರದ ಆಧಾರದಲ್ಲಿ  ವಿಚಾರ ಮಾಡುತ್ತಿದ್ದೆವು. ಕಳೆದ ವಾರ ಮೊದಲ ಸಾಲಿನ ಎರಡು  ಶಬ್ಧಗಳ ಬಗ್ಗೆ ಚರ್ಚಿಸಿದ್ದೇವೆ.  ಇಂದು ಮುಂದಿನ ಭಾಗದ ಬಗ್ಗೆ ವಿಚಾರವನ್ನು ಮಾಡೋಣ. ಇಂದು ವಿಮರ್ಶೆಮಾಡಬೇಕಾದ ಮಂತ್ರ ಭಾಗವೆಂದರೆ. . . . . . .
ಸುಮೇಧಾ:
ಮೇಧಾವಂತನಾಗಿರಬೇಕು. ಎಲ್ಲಿ ಮೇಧಾ ಅಂದರೆ ಜ್ಞಾನವಿರುತ್ತದೆಯೋ ಅಲ್ಲಿ ಅಂಧವಿಶ್ವಾಸ ಗಳಿರುವುದಿಲ್ಲ.ಯಾವುದು ಧರ್ಮ ಯಾವುದು ಅಧರ್ಮ, ಎಂಬ ಅರಿವಿರುತ್ತದೆ. ಧರ್ಮಾಧರ್ಮಗಳ ವಿವೇಕವಿದ್ದಾಗ ಜೀವನವು ನಿರ್ಭಯದಿಂದ ಸಾಗುತ್ತದೆ. ಅವನು ಯಾವುದೇ ವ್ಯಾಮೋಹಕ್ಕೆ ಒಳ   ಗಾಗುವುದಿಲ್ಲ. ಮನೆಯ ಸದಸ್ಯರಲ್ಲಿ ವ್ಯಾಮೋಹ ಹೊಂದದೆ ಪ್ರೀತಿ,ವಾತ್ಸಲ್ಯ, ಮಮಕಾರಗಳನ್ನು ಹೊಂದಿರುತ್ತಾನೆ. ಮನೆಯ ಹಿರಿಯನ ಈ ಗುಣಗಳು ಕಿರಿಯರ ಅಭ್ಯುದಯಕ್ಕೆ ಆಸ್ಪದ ನೀಡುತ್ತವೆ.
ಮನೆಯ ಯಜಮಾನನಿಗಿರಬೇಕಾದ ಮತ್ತೊಂದು ಅರ್ಹತೆ ಎಂದರೆ..
ಅಘೋರೇಣ ಚಕ್ಷುಷಾಮಿತ್ರಿಯೇಣ|
ಶಾಂತವಾದ,ಸ್ನೇಹಪೂರ್ವಕ ದೃಷ್ಟಿಕೋನ ಹೊಂದಿದ ನಡೆಯುಳ್ಳವನು, ಎಂದು ಈ ಮಂತ್ರಭಾಗದ ಅರ್ಥ.
ಕೆಲವು ಮಕ್ಕಳು ತಮ್ಮ ಅಹವಾಲನ್ನು ತಾಯಿಯೊಡನೆ ಮಾತ್ರವೇ ಹೇಳಿಕೊಳ್ಳುತ್ತಾರೆ. ಇದಕ್ಕೆ ಕಾರಣ ಅಪ್ಪ ಎಲ್ಲಿ ಬೈದುಬಿಡುತ್ತಾರೋ! ಎಂಬ ಭಯ. ತಂದೆಯ ಬಗ್ಗೆ  ಇಂತಹ ಭಯವು ಸರ್ವತಾ ಇರಕೂಡದು. ಇಲ್ಲಿ ತಪ್ಪು ಮಕ್ಕಳದ್ದಲ್ಲ ತಂದೆಯದು. ವೇದವು ಹೇಳುತ್ತದೆ  ಮಕ್ಕಳನ್ನು ಸ್ನೇಹದಿಂದ ನೋಡು ಎಂದು. ಒಬ್ಬ ತಂದೆ ತನ್ನ ಮಕ್ಕಳನ್ನು ಭಯದಿಂದ ಇಟ್ಟುಕೊಂಡಿದ್ದಾನೆಂದರೆ ಅವನು ವೇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾನೆಂದೇ ಅರ್ಥ. ಮಕ್ಕಳ ಮನಸ್ಸನ್ನು ಪ್ರೀತಿಯಿಂದ ಗೆದ್ದು ವಿಶ್ವಾಸದಿಂದ  ಅವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಬೇಕೇ ಹೊರತೂ ಭಯದಿಂದಲ್ಲ.
ಮನೆಯ ಯಜಮಾನನ ಮತ್ತೊಂದು ಅರ್ಹತೆ ಎಂದರೆ.. . . .
ಸುಮನಾ: -
ಸುಮನಾ ಎಂದರೆ ಉತ್ತಮ ಮನಸ್ಸುಳ್ಳವನು ಎಂದರ್ಥ. ಒಬ್ಬ ಆದರ್ಶ ತಂದೆಯ ಮನಸ್ಸು ಉತ್ತಮವಾಗಿರಬೇಕಾದರೆ ಅವನು ಪವಿತ್ರಕಾಮದಿಂದ ಪೂರ್ಣವಾಗಿರಬೇಕು, ಪಾಪಮಯ ವಾಸನೆಯು ಹತ್ತಿರವೂ ಸುಳಿಯ ಕೂಡದು.ಪಾಪಮಯ ವಾಸನೆಗೆ ಬಲಿಯಾದದ್ದೇ ಆದರೆ ಅವನ ಮನಸ್ಸು ಉತ್ತಮ ಸ್ಥಿತಿಯಲ್ಲಿರಲು ಸಾಧ್ಯವಿಲ್ಲ.
ಯಜಮಾನನಿಗಿರಬೇಕಾದ ಮತ್ತೊಂದು ಅರ್ಹತೆ ಎಂದರೆ. . . . .
ವಂದಮಾನ:- ಎಲ್ಲರಿಂದಲೂ ಗೌರವಕ್ಕೆ ಪಾತ್ರನಾಗಿರಬೇಕು. ಅಂದರೆ ಅವನಲ್ಲಿ ಹುಡುಕಿದರೂ ದೋಷ ಸಿಗಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು.ಯಾರೊಡನೆಯೂ ಅತೀ ಸಲಿಗೆಯೂ ಇರಬಾರದು, ವೈರವೂ ಇರಬಾರದು. ಅನಗತ್ಯವಾದ ವಾದ ವಿವಾದಗಳು ವೈರತ್ವಕ್ಕೆ ಕಾರಣವಾಗುತ್ತದೆ.
ಹಲವು ಭಾರಿ ಬೇಡದ ವಿಷಯಗಳಿಗೆ ಚರ್ಚೆ ಆರಂಭವಾಗಿ ಅದು ಬೇರೆಯದೇ ಹಾದಿ ಹಿಡಿದುಬಿಡುತ್ತದೆ. ಯಾರೊಡನೆಯೂ ಅನಗತ್ಯವಾಗಿ ವಾದ ಮಾಡಬಾರದೆಂದು ತೀರ್ಮಾನಿಸಿದ್ದರೂ ಹಲವು ವೇಳೆ ನಮಗರಿವಿಲ್ಲದಂತೆ ನಮ್ಮ ಸುಮಧುರ ಮಾತುಗಳೂ ಕೂಡ ವಾದದತ್ತ ಹೊರಳಿರುತ್ತದೆ. ನಮಗೆ ಸತ್ಯವೆನಿಸಿದ್ದನ್ನು ನಾವು ಹೇಳುತ್ತಿದ್ದರೂ ಅದು ಎದುರು ಪಕ್ಷದವನಿಗೆ ರುಚಿಸದಾಗ ಮಾತು ವಾದದತ್ತ ನಮಗರಿವಿಲ್ಲದೆ ಹೊರಳುತ್ತದೆ. ಎದುರಾಳಿಯು ವಿತ್ತಂಡವಾದ ಮಾಡಲೆಂದೇ ಬಂದಿದ್ದರಂತೂ ನಮ್ಮ ಕಥೆ ಮುಗಿದಂತೆಯೇ. ಆದ್ದರಿಂದ ನಿಮ್ಮ ಮಾತನ್ನು ಒಪ್ಪದ ವ್ಯಕ್ತಿಯನ್ನು ಒಪ್ಪಿಸುವ ಪ್ರಯತ್ನ ಮಾಡದಿರುವುದೇ ಕ್ಷೇಮ. ಅದರಿಂದ ನಿಮಗೇನೂ ಪ್ರಯೋಜನವಿಲ್ಲ. ಒಂದು ಉತ್ತಮ ವಿಚಾರವನ್ನು ತನ್ನ ವಿತ್ತಂಡವಾದದಿಂದ ಸೋಲಿಸಬೇಕೆಂದು ನಿರ್ಧರಿಸಿರುವ ವ್ಯಕ್ತಿಗೆ ನಷ್ಟವಾಗುತ್ತದೆಯೇ ಹೊರತೂ ನಿಮಗೇನೂ ನಷ್ಟವಿಲ್ಲ. ಅಲ್ಲವೇ? ಆದ್ದರಿಂದ ಎಲ್ಲರ ಪ್ರಶಂಸೆಗೆ ಪಾತ್ರನಾಗಬೇಕೆಂದರೆ ಅನಗತ್ಯ ವಾದ-ವಿವಾದ ಮಾಡಲೇ ಕೂಡದು
ಅಹಂಕಾರವು ಮನುಷ್ಯನ ದೊಡ್ದ ಶತ್ರುವಾಗಿದ್ದು, ಅಹಂಕಾರವು ಇವನ ಎಲ್ಲಾ ಸದ್ಗುಣಗಳನ್ನೂ ಮೆಟ್ಟಿ ಇವನನ್ನು ಅವನತಿಯತ್ತ ತಳ್ಳುತ್ತದೆ. ಆದ್ದರಿಂದ ಅಹಂಕಾರವು ಸುಳಿಯದಂತೆ ಎಚ್ಚರವಹಿಸಬೇಕು. ಹೀಗೆ ಒಬ್ಬ ಆದರ್ಶ ತಂದೆಯಾಗಿರಬೇಕಾದರೆ ಮೇಲಿನ ಆರು ಗುಣಗಳನ್ನು ಹೊಂದಿರಬೇಕು.
ಋಗ್ವೇದದ ಇನ್ನೊಂದು  ಮಂತ್ರವು ತಂದೆ-ತಾಯಿಯ ಕರ್ತವ್ಯದ ಬಗ್ಗೆ ಸೊಗಸಾಗಿ ಹೇಳುತ್ತದೆ.ಆ ಮಂತ್ರದ ಬಗ್ಗೆ ವಿಚಾರ ಮಾಡೋಣ.

ತೇ ಸೂನವ: ಸ್ವಪಸ: ಸುದಂಸಸೋ ಮಹೀ ಜಜ್ಞುರ್ಮಾತರಾ ಪೂರ್ವ ಚಿತ್ತಯೇ |
ಸ್ಥಾತುಶ್ಚ ಸತ್ಯಂ ಜಗತಶ್ಚ ಧರ್ಮಾಣಿ ಪುತ್ರಸ್ಯ ಪಾಥ: ಪದಮದ್ವಯಾವಿನ: || [ಋಗ್ವೇದ ಮಂಡಲ -೧ ಸೂಕ್ತ- ೧೫೯ ಮಂತ್ರ - ೩]
ಪದಾರ್ಥ:-
ಸ್ವಪಸ: = ಉತ್ತಮ ಕರ್ಮಗಳು
ಸುದಂಸಸ: = ಅವುಗಳನ್ನು ಉತ್ತಮ ರೀತಿಯಲ್ಲಿ ಆಚರಣೆಗೆ ತರುವವರು
ಪೂರ್ವ ಚಿತ್ತಯೇ = ಅದಕ್ಕೆ ಅಗತ್ಯವಾದ ಸಿದ್ಧತೆಯನ್ನು ಮುಂಚಿತವಾಗಿ ಯೋಚಿಸುವವರು
ಜಗ್ನ್ಯು: = ಪ್ರಸಿದ್ಧರಾಗಿರುತ್ತಾರೆಯೋ
ತೇ = ಅವರು
ಮಹಿ = ಹಿರಿದಾದ
ಮಾತರ = ತಾಯಿಯನ್ನು
ಸ್ಥಾತು: = ಸ್ಥಿರ ಧರ್ಮವನ್ನಾಚರಿಸುವವನು
ಚ = ಮತ್ತು
ಜಗತ: = ಜಗತ್ತಿಗೆ
ಧರ್ಮಾಣಿ = ಸಾಧಾರಣ ಧರ್ಮಗಳಲ್ಲಿ
ಅದ್ವಯಾವಿನ: = ಏಕರೂಪದಲ್ಲಿರುವ
ಪುತ್ರಸ್ಯ = ಮಗನಿಗೆ
ಸತ್ಯ ಪದಂ = ಸ್ಥಿರವಾದ ಸ್ಥಾನವನ್ನು ಪಡೆಯುವಂತಹ
ಪಾಥ: ಮಾರ್ಗವನ್ನು
ಸೂನವ: = ಅವರ ಸಂತಾನಗಳು ನಿರಂತರ ಕೈಗೊಳ್ಳಬೇಕು
ಭಾವಾರ್ಥ :-
ಭೂಮಿ ಮತ್ತು ಸೂರ್ಯರು ಸ್ಥಿರ ಮತ್ತು ಜಂಗಮರೂಪವಾದ ಎಲ್ಲಾ ಜೀವಿಗಳನ್ನು ಹೇಗೆ ಪಾಲನೆ ಮಾಡುತ್ತಾರೋ, ಎಲ್ಲಾ ಜೀವಿಗಳಿಗೂ ಸಮಾನಧರ್ಮವನ್ನು ಹೇಗೆ ಅನ್ವಯಿಸುವಂತೆ ಮಾಡುತ್ತಾರೋ ಅದನ್ನು ಅರಿಯಬೇಕು. ತಂದೆತಾಯಿಯರು ಈ ವಿಸ್ಮಯ ಜಗತ್ತಿನ ರಹಸ್ಯವನ್ನು ಮಕ್ಕಳಿಗೆ ಹೇಳಿಕೊಟ್ಟು ಅವರೂ ಸಹ ಈ ಜಗತ್ತಿನಲ್ಲಿ ಕೃತಾರ್ಥರಾಗುವಂತೆ ಮಾಡಬೇಕು.

ಈ ಮಂತ್ರದ ಭಾವಾರ್ಥದ ಬಗ್ಗೆ ವಿಚಾರಮಾಡುವಾಗ ಪ್ರಕೃತಿಯ ಚಿತ್ರಣ ನಮ್ಮ ಕಣ್ಮುಂದೆ ಬರಬೇಕು. ಈ ಸೃಷ್ಟಿಯ ರಹಸ್ಯವು ಸಾಮಾನ್ಯರಾದ ನಮಗೆ ಅರ್ಥವಾಗುವುದು ಅಷ್ಟು ಸುಲಭವೇನಲ್ಲ. ಆದರೆ ಭಗವಂತನು ನಮಗೆ ಕೊಟ್ಟಿರುವ ಗಾಳಿ,ಬೆಳಕು,ನೀರಿನ ಬಗ್ಗೆ ನಾವೇನಾದರೂ ಕಿಂಚಿತ್ ಯೋಚಿಸಿದ್ದೇವೆಯೇ? ನಾವು ಬದುಕಲು ಬೇಕಾದ ಇಷ್ಟನ್ನೂ ನಮಗೆ ಭಗವಂತನು ಉಚಿತವಾಗಿ ನೀಡಿದ್ದಾನಲ್ಲಾ! ಅಷ್ಟೇ ಅಲ್ಲ, ಇವನು ಒಳ್ಳೆಯವ, ಇವನು ಕೆಟ್ಟವ, ಇವನು ನಮ್ಮವ, ಇವನು ಬೇರೆಯವನೆಂದು ಭೇದ ಮಾಡಲೇ  ಇಲ್ಲವಲ್ಲಾ!
ಈ ಮಂತ್ರವು ಹೇಳುತ್ತದೆ ಈ ಭೂಮಿ-ಸೂರ್ಯರ ಧರ್ಮವನ್ನು ತಂದೆತಾಯಿಯಾದವರು ತಮ್ಮ ಮಕ್ಕಳಿಗೆ ಹೇಳಿಕೊಡಿ. ಅಬ್ಭಾ! ಒಂದು ವೇಳೆ ಭಗವಂತನ ಈ ಸಮಾನ ಧರ್ಮವನ್ನು ಸರಿಯಾಗಿ ಅರಿತುಕೊಂಡಿದ್ದೇ ಆದರೆ ನಾವು ಪ್ರಕೃತಿಯ ನಾಶಕ್ಕೆ ಕಾರಣ ವಾಗುತ್ತಿರಲಿಲ್ಲ. ನಮ್ಮ ದುರಾಸೆಯ ಪರಿಣಾಮವಾಗಿ ನಾವು ಕಾಡನ್ನೂ ಬಿಡಲಿಲ್ಲ, ಕೆರೆಗಳನ್ನೂ ಬಿಡಲಿಲ್ಲ. ಕಾಡನ್ನು ನಾಶಮಾಡಿ ಕೈಗಾರಿಕೆಗಳನ್ನು ಸ್ಥಾಪಿಸಿದೆವು. ಕೆರೆಗಳನ್ನು ನಾಶಮಾಡಿ ಮನೆ ಕಟ್ಟಿದೆವು! ಪರಿಣಾಮ ಕಾಡಿನಲ್ಲಿರಬೇಕಾದ ಮೃಗಗಳೆಲ್ಲಾ ಆಶ್ರಯವಿಲ್ಲದೆ ನಾಡಿಗೆ ನುಗ್ಗುತ್ತಿವೆ! ಕೆರೆಗಳನ್ನು ನಾಶಮಾಡಿದ ನಾವು ಅಂತರ್ಜಲ ಕುಸಿತವಾಗಿ ನೀರಿಗೆ ಹಾಹಾಕಾರ  ಪಡುವಂತಾಗಿದೆ. ವೇದವಾದರೋ ನಮ್ಮನ್ನು ಸದಾಕಾಲ ಎಚ್ಚರಿಸುತ್ತಲೇ ಇದೆ, ಆದರೆ ವೇದದ ಮಾತು ನಮ್ಮ ಕಿವಿಗೆ ಬೀಳಬೇಕಷ್ಟೆ.
ಕುಟುಂಬದಲ್ಲಿ ತಂದೆಯ ಕರ್ತವ್ಯಗಳಂತೆಯೇ ಉಳಿದ ಸದಸ್ಯರ ಕರ್ತವ್ಯಗಳೂ ಇವೆ.
ನಿಜವಾದ ಮಗನು ಯಾರು?
ಋಗ್ವೇದದ ಒಂದು ಮಂತ್ರವನ್ನು ನೋಡಿ...
ಸ ವಹ್ನಿ: ಪುತ್ರ: ಪಿತ್ರೋ:  ಪವಿತ್ರವಾನ್ ಪುನಾತಿ ಧೀರೋ ಭುವನಾನಿ ಮಾಯಯಾ|
[ಋಗ್ವೇದ ೧ ನೇ ಮಂಡಲ ೧೬೦ ನೇ ಸೂಕ್ತ ೩ನೇ ಮಂತ್ರ]
ಪಿತ್ರೋ: = ಮಾತಾಪಿತೃಗಳ ಸೇವೆಯಿಂದ
ವಹ್ನಿ: = ಎತ್ತಿಹಿಡಿಯುವವನೇ
ಪುತ್ರ: = ನಿಜವಾದ ಪುತ್ರನು
ಸ ಧೀರ: = ಆ ಧೀರನಾದ ಮಗನೇ
ಮಾಯಯಾ = ತನ್ನ ಪ್ರಜ್ಞೆಯಿಂದ
ಪವಿತ್ರವಾನ್ = ಪವಿತ್ರಶಕ್ತಿಯುಕ್ತನಾಗಿ
ಭುವನಾನಿ  ಪುನಾತಿ = ಲೋಕಗಳನ್ನು  ಪವಿತ್ರಗೊಳಿಸುತ್ತಾನೆ

ಈ ಮಂತ್ರದ ಭಾವಾರ್ಥವೆಂದರೆ ಮಾತಾ ಪಿತೃಗಳ ಸೇವೆಯನ್ನು ಮಾಡುವ ಮಗನೇ ನಿಜವಾದ ಮಗನು.ಅವನು ತನ್ನ ಪ್ರಜ್ಞೆಯಿಂದ ಪವಿತ್ರನಾಗಿ ಲೋಕಗಳನ್ನು ಪವಿತ್ರಗೊಳಿಸುತ್ತಾನೆ. ಅಂದರೆ ಮಾತಪಿತೃಗಳ ಸೇವೆ ಮಾಡದ ಮಗ ನಿಜವಾದ ಮಗನಲ್ಲ. ಅವನು ಕೃತಘ್ನ. ಅವನಲ್ಲಿ ಪವಿತ್ರ ಭಾವನೆಗಳು ಉದ್ಭವಿಸುವುದಿಲ್ಲ. ಇನ್ನು ಅವನಿಂದ ಯಾವ ಲೋಕ ಪವಿತ್ರಗೊಳ್ಳಬೇಕು!
ಒಬ್ಬ ಮಗನು ತನ್ನ ಪ್ರಜ್ಞೆಯಿಂದ ಪವಿತ್ರನಾಗಿ ಲೋಕಗಳನ್ನು ಪವಿತ್ರಗೊಳಿಸಬೇಕಾದರೆ ಅವನ ತಂದೆತಾಯಿಯರಿಗೆ ನಿಜವಾದ ಸಾಮಾಜಿಕ ಮತ್ತು ಪರಿಸರ  ಪ್ರಜ್ಞೆ  ಇರಬೇಕು. ಆಗ  ಮಕ್ಕಳಲ್ಲಿಯೂ ಸಾಮಾಜಿಕ ಜಾಗೃತಿ, ಪರಿಸರ ಜಾಗೃತಿ ಮಾಡಿಸಿಯಾರು. ಇಂತಹಾ ಆದರ್ಶ ತಂದೆತಾಯಿಯರು   ನಾವಾಗಬೇಕಲ್ಲವೇ?

ಜೀವನ ವೇದ -2

 ಸಂಮೃದ್ಧ ಮನೆ :
                                                  
ಒಂದು ಸಂಮೃದ್ಧವಾದ ಮನೆ ಅಂದರೆ ಹೇಗಿರಬೇಕು? ಮನೆಯ ಯಜಮಾನ ಹೇಗಿರಬೇಕು? ಎಂಬ ವಿಚಾರವನ್ನು  ಅಥರ್ವಣ ವೇದದಲ್ಲಿನ ಒಂದು ಮಂತ್ರದಲ್ಲಿ ಹೀಗೆ ಹೇಳಿದೆ.

ಇಮೇ ಗೃಹಾ ಮಯೋಭುವ ಊರ್ಜಸ್ವಂತ: ಪಯಸ್ವಂತ:|
ಪೂರ್ಣಾ ವಾಮೇನ ತಿಷ್ಠಂತಸ್ತೇ ನೋ ಜಾನಂತ್ವಾಯತ: ||

[ಅಥರ್ವಣದ ೭ನೇ ಕಾಂಡದ ೬೦ನೇ ಸೂಕ್ತದ ೨ನೇ ಮಂತ್ರ]

 ಈ ಮಂತ್ರದ ಅರ್ಥವೇನೆಂದರೆ ನಮ್ಮ ಮನೆಗಳು ಆಹಾರಧಾನ್ಯಗಳಿಂದಲೂ ಹಾಲು ಮೊಸರಿನಿಂದಲೂ ತುಂಬಿದ್ದು, ಎಲ್ಲರಿಗೂ ಈ ಮನೆಯಲ್ಲಿ ಸುಖಶಾಂತಿ ನೆಮ್ಮದಿ ಸಿಗುವಂತಾಗಲೀ.
ಈ ಮಂತ್ರವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಒಂದು ಗೌರವಯುತ ಗೃಹವೆಂದರೆ ಆ ಮನೆಯಲ್ಲಿ ಆಹಾರಧಾನ್ಯದ ಸಂಗ್ರಹವಿರಬೇಕು. ಆಹಾರಧಾನ್ಯದ ಸಂಗ್ರಹವಿರಬೇಕೆಂದರೆ ಆ ಮನೆಯೊಡೆಯ ಆಹಾರಧಾನ್ಯವನ್ನು ಸಂಮೃದ್ಧವಾಗಿ ಬೆಳೆದಿರಬೇಕು. ಹಾಲು ಮೊಸರು ಸದಾಕಾಲವಿರುವಂತೆ ಹಸುಕರುಗಳನ್ನು ಸಾಕಿಕೊಂಡಿರಬೇಕು. ಮನೆಗೆ ಅತಿಥಿಗಳು ಸಂತೋಷದಿಂದ ಬಂದುಹೋಗುವಂತಿರಬೇಕು. ಮನೆಯಲ್ಲಿ ಸುಖಶಾಂತಿ ನೆಮ್ಮದಿ ನೆಲಸಿರಬೇಕು.
ಇಂದಿನ ಕಾಲಕ್ಕೆ ನಾವು ಈ ವೇದಮಂತ್ರವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಒಂದು ಸಂಮೃದ್ಧವಾದ ಮನೆ ಅಂದರೆ ಮನೆಯ ಯಜಮಾನನು ಸತ್ಯಮಾರ್ಗದಲ್ಲಿ ದುಡಿದು ಸಂಪತ್ತನ್ನು ಗಳಿಸಿರಬೇಕು. ಆ ಸಂಪತ್ತಿನಿಂದ ಮನೆಗೆ ಬಂದ ಅತಿಥಿಗಳ ಸತ್ಕಾರವು ಚೆನ್ನಾಗಿ ನಡೆಯುತ್ತಿರಬೇಕು. ಅದು ಸುಸಂಕೃತ ಮನೆಯಾಗಿದ್ದು  ಮನೆಯಲ್ಲಿ ಯಾವಾಗಲೂ ಸಂತಸದ ವಾತಾವರಣ ನೆಲಸಿರಬೇಕು.
ಮನೆಯ ಯಜಮಾನ ಹೇಗಿರಬೇಕು?

ಊರ್ಜಂ ಬಿಭ್ರದ್ ವಸುವನೀ ಸುಮೇಧಾ ಅಘೋರೇಣ ಚಕ್ಷುಷಾಮಿತ್ರಿಯೇಣ|
ಗೃಹಾನೈಮಿ ಸುಮನಾ ವಂದಮಾನೋ  ರಮಧ್ವಂ ಮಾ ಬಿಭೀತ ಮತ್||
[ಅಥರ್ವಣದ ೭ನೇ ಕಾಂಡದ ೬೦ನೇ ಸೂಕ್ತದ ೧ನೇ ಮಂತ್ರ]

 ಈ ಮಂತ್ರದ ಅರ್ಥ ಹೀಗಿದೆ. ಮನೆಯ ಯಜಮಾನನು ಶಕ್ತಿವಂತನಾಗಿರಬೇಕು, ಧನಾರ್ಜನೆ ಮಾಡುತ್ತಿರಬೇಕು,ಮೇಧಾವಂತನಾಗಿರಬೇಕು,ಮನೆಯಸದಸ್ಯರೊಡನೆ ಕ್ರೋಧರಹಿತನೂ, ಸ್ನೇಹಪೂರ್ಣ ಕಣ್ಣುಗಳಿಂದ ನೋಡುವವನೂ, ಸುಪ್ರಸನ್ನ ಮನಸ್ಸುಳ್ಳವನೂ,ಎಲ್ಲರಿಂದ ಪ್ರಶಂಸಿಸಲ್ಪಡುವವನೂ ಆಗಿದ್ದು ಎಲ್ಲರೊಡನೆ ಆನಂದದಿಂದ ಪ್ರಸನ್ನನಾಗಿರಬೇಕು.

ಈ ಮಂತ್ರದ ಒಂದೊಂದೂ ಶಬ್ಧಗಳೂ ಅತ್ಯಂತ ಮಹತ್ವ ಉಳ್ಳವುಗಳೇ ಆಗಿವೆ. ಈ ಮಂತ್ರದ ಒಂದೊಂದೇ ಶಬ್ಧದ ಬಗ್ಗೆ ವಿಚಾರ ಮಾಡೋಣ. ಮನೆಯ ಯಜಮಾನನಿಗಿರಬೇಕಾದ ಪ್ರಥಮ ಅರ್ಹತೆ ಎಂದರೆ.. . . . . .

ಊರ್ಜನ್ ಬಿಭ್ರತ್
ಊರ್ಜಮ್ ಎಂದರೆ ಪ್ರಾಣಬಲ ಅಥವಾ ಶಕ್ತಿ, ಬಿಭ್ರತ್ ಅಂದರೆ ಧಾರಣೆ ಮಾಡು, ಅಂದರೆ ಮನೆಯ ಯಜಮಾನನು ಶಕ್ತಿಯನ್ನು ಹೊಂದಿದವನಾಗಿರಬೇಕು. ಮನೆಯ ಯಜಮಾನನು ಶಕ್ತಿಶಾಲಿಯಾಗಿದ್ದರೆ ಅವನಲ್ಲಿ ಯಾರ ಬಗ್ಗೆಯೂ ದ್ವೇಷ,ಅಸೂಯೆ, ಮಾತ್ಸರ್ಯ ಭಾವನೆಗಳಿರದೆ ಎಲ್ಲರೊಡನೆ  ಪವಿತ್ರವಾದ ಪ್ರೇಮಭಾವ ಇದ್ದು ಕುಟುಂಬವು ಸಂತಸದಿಂದ ಇರುತ್ತದೆ. ಯಜಮಾನನೇನಾದರೂ ಶಕ್ತಿಹೀನನಾಗಿದ್ದರೆ ಸಣ್ಣ ಸಣ್ಣ ವಿಷಯಗಳಿಗೂ ಎಲ್ಲರ ಮೇಲೆ ಕೋಪ ಮಾಡಿಕೊಂಡು ರೇಗಾಡುತ್ತಾ  ಕುಟುಂಬದ ನೆಮ್ಮದಿಯು ಹಾಳಾಗುತ್ತದೆ. ಆದ್ದರಿಂದ ಗೃಹಸ್ಥನು ತನ್ನ ಶರೀರ ಮತ್ತು  ಇಂದ್ರಿಯಗಳನ್ನು ಶಕ್ತಿಯುತವಾಗಿ ಇಟ್ಟುಕೊಳ್ಳಬೇಕೆಂಬುದು ವೇದದ ಆಶಯ. ಯಜಮಾನನಿಗಿರಬೇಕಾದ ಎರಡನೆಯ ಅರ್ಹತೆ ಎಂದರೆ. . . . .  .
ವಸುವನಿ :
ವಸುವನೀ ಎಂದರೆ ಉತ್ತಮ ಮಾರ್ಗದಲ್ಲಿ ಧರ್ಮದಿಂದ ಧನವನ್ನು ಸಂಪಾದಿಸುವವರು ಎಂದು ಅರ್ಥ. ವಾಮಮಾರ್ಗದಲ್ಲಿ ಎಂದೂ ಹಣವನ್ನು  ಸಂಪಾದಿಸ ಕೂಡದು. ಇದು ವೇದದ ಆದೇಶ.
ಯಜುರ್ವೇದದ ೪೦ನೇ ಅಧ್ಯಾಯದ ೧೬ ನೇ ಮಂತ್ರದಲ್ಲಿ ಸಂಪತ್ತನ್ನು ಯಾವ ಮಾರ್ಗದಲ್ಲಿ ಗಳಿಸಬೇಕೆಂಬುದನ್ನು ತಿಳಿಸುತ್ತದೆ.ಆಮಂತ್ರದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್ |
ಯುಯೋಧ್ಯಸ್ಮಜ್ಜುಹುರಾಣಮೇನೋ ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ||

ಅರ್ಥ
ದೇವ = ದಿವ್ಯ ಸ್ವರೂಪನೇ
ಅಗ್ನೇ = ಪ್ರಕಾಶಮಯ ಭಗವಾನ್
ತೇ = ನಿನಗೆ
ಭೂಯಿಷ್ಠಾಮ್ = ಅತ್ಯಧಿಕವಾಗಿ
ನಮ ಉಕ್ತಿಂ ವಿಧೇಮ = ಸತ್ಕಾರಪೂರ್ವಕವಾಗಿ ನಮಸ್ಕರಿಸುತ್ತೇವೆ.
ವಿದ್ವಾನ್ = ಸರ್ವಜ್ಞನಾದ ನೀನು
ಅಸ್ಮತ್ = ನಮ್ಮಿಂದ
ಜುಹುರಾಣಮ್ = ಕುಟಿಲತೆಯನ್ನು
ಏನ: = ಪಾಪವನ್ನು
ಯುಯೋಧಿ = ಬೇರೆ ಮಾಡು
ಅಸ್ಮಾನ್ = ನಮ್ಮನ್ನು
ರಾಯೇ = ಸುಖಕ್ಕಾಗಿ
ಸುಪಥಾ = ಒಳ್ಳೆಯ ಮಾರ್ಗದಲ್ಲಿ ನಡೆಸು
ವಿಶ್ವಾನಿ ವಯುನಾನಿ = ನಮಗೆ ಸಕಲ ಪ್ರಶಸ್ತ ಜ್ಞಾನಗಳನ್ನು
ನಯ: = ಲಭಿಸುವಂತೆ ಮಾಡು

ಈ ಮಂತ್ರದ ಸಾರವೇನು?
ಜ್ಞಾನದಾತನಾದ ಪ್ರಭುವೇ, ನಮ್ಮಿಂದ ಕುಟಿಲತೆಯನ್ನೂ, ಪಾಪಾಚರಣೆಯನ್ನೂ ದೂರಮಾಡು.ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುತ್ತಾ, ಸನ್ಮಾರ್ಗದಲ್ಲಿ ಸಂಪತ್ತನ್ನು ಗಳಿಸುವಂತೆಮಾಡು. ನಮ್ಮ ಕಲ್ಯಾಣಕ್ಕಾಗಿ ನಿನಗೆ ಅತ್ಯಧಿಕ ನಮಸ್ಕಾರಗಳನ್ನು ಮಾಡುತ್ತೇನೆ.
ಈ ಮಂತ್ರದಲ್ಲಿ ಒಂದು ಶಬ್ಧಪ್ರಯೋಗವಾಗಿದೆ. ಅದು ರಾಯೇ  ಅಂದರೆ ನಮ್ಮ ಸುಖಕ್ಕಾಗಿ ಸಂಪತ್ತನ್ನು ಗಳಿಸಬೇಕೆಂಬುದೇ ವೇದದ ಆಶಯ. ಆದರೆ ಸಂಪತ್ತನ್ನು ಗಳಿಸುವಾಗ ಸನ್ಮಾರ್ಗದಲ್ಲಿ ಗಳಿಸಲು ದಾರಿಮಾಡಿಕೊಡು, ಎಂಬುದು ದೇವರಲ್ಲಿ  ನಮ್ಮ ಪ್ರಾರ್ಥನೆ. ಇದರಿಂದ ಏನು ಅರ್ಥವಾಗುತ್ತದೆ ಎಂದರೆ  ವೇದವು ಕೇವಲ ವೈರಾಗ್ಯವನ್ನು ಹೇಳುವುದಿಲ್ಲ.ಜೀವನದಲ್ಲಿ ಸುಖವಾಗಿರಿ. ಆದರೆ ಸುಖವಾಗಿರಲು ಅಗತ್ಯವಾದ ಹಣವನ್ನು ಸಂಪಾದಿಸಲು ವಾಮ ಮಾರ್ಗಹಿಡಿಯಬೇಡಿ. ಸನ್ಮಾರ್ಗದಲ್ಲಿ ಧನಾರ್ಜನೆ ಮಾಡಿ, ಜೀವನದಲ್ಲಿ ಸುಖವಾಗಿರಿ, ಎಂಬುದು ವೇದದ ಆಶಯ.
ಹಣವನ್ನು ಹೇಗೆ ಸಂಪಾದಿಸಬೇಕು? ಯಾರಿಗೂ ಕಷ್ಟವನ್ನು ಕೊಡದೆ, ದುರ್ಜನರಿಗೆ ತಲೆಬಾಗದೆ, ಸನ್ಮಾರ್ಗವನ್ನು ಬಿಡದೆ, ಸ್ವಲ್ಪ ದುಡಿದರೂ ಅದೇ ಬಹಳವೆಂದು ದುಡಿದ ಸಂಪಾದನೆಯೇ ಶ್ರೇಷ್ಠ ಎನ್ನುತ್ತದೆ ಮತ್ತೊಂದು ಸುಭಾಷಿತ.
ವಸುವನೀ ಪದದ ಬಗ್ಗೆ ವಿಮರ್ಶೆ ಮಾಡುತ್ತಿದ್ದೆವಲ್ಲವೇ? ವಸು ಎಂಬ ಪದಕ್ಕೆ ಯೋಗ್ಯ ಜೀವನವೆಂದೂ ಅರ್ಥವಿದೆ. ನಾವು ಎಷ್ಟು ಹಣ ಸಂಪಾದಿಸುತ್ತೇವೆಂಬುದಕ್ಕಿಂತ ಎಷ್ಟು ಸರಳವಾಗಿ ಕಡಿಮೆ ಖರ್ಚಿನಲ್ಲಿ ಜೀವನ ಮಾಡುತ್ತೇವೆಂಬುದೂ ಗಣನೆಗೆ ಬರುತ್ತದೆ. ಆದ್ದರಿಂದ ನೆಮ್ಮದಿಯ ಜೀವನಕ್ಕೆ ಹೆಚ್ಚು ಸಂಪಾದನೆ ಬೇಕೆಂದೇನೂ ಅಲ್ಲ, ಆದರೆ ದುಡಿಮೆಯನ್ನು ವ್ಯವಸ್ಥಿತವಾಗಿ ಖರ್ಚು ಮಾಡುತ್ತಾ ಸಂಸಾರ ಮಾಡುವವನನ್ನೂ ವಸುವನೀ ಎನ್ನಬಹುದು.
ಇನ್ನೊಂದು ಬಹಳ ಸತ್ಯವಾದ ವಿಚಾರವೆಂದರೆ ಮಿತವಾಗಿ ಹಣವನ್ನು ಬಳಸುವುದರಿಂದ ವಿಲಾಸೀ ಜೀವನಕ್ಕೆ ಅವಕಾಶವೇ ಇರುವುದಿಲ್ಲ. ಆಗ ಸಹಜವಾಗಿ ಯಾವ ರೋಗದ ಭಯ ಇರುವುದಿಲ್ಲ.ನ್ಯಾಯಮಾರ್ಗದಲ್ಲಿ ದುಡಿಯುವವನಿಗೆ ಭೋಗದ ಪ್ರಶ್ನೆಯೇ ಇಲ್ಲ. ಆಗ ರೋಗದ ಭಯವೆಲ್ಲಿ?

ಜೀವನ ವೇದ -1

                                         
ಜೀವನ ಎಂದರೆ ಹಿಡಿಯಷ್ಟು ಸುಖ, ಬೆಟ್ಟದಷ್ಟು ಕಷ್ಟ- ಎಂಬುದು ಸಾಮಾನ್ಯರ ಮಾತು. ಯಾಕೆ ಹೀಗೆ? ಜೀವನದಲ್ಲಿ ನೆಮ್ಮದಿ ಸಿಗುವುದು  ಯಾಕೆ ದುಸ್ತರವಾಗುತ್ತದೆ? ಸುಖೀಕುಟುಂಬ ಎಂಬುದು ಗಗನಕುಸುಮವೇ? ಜೀವನದಲ್ಲಿ ಸುಖವಾಗಿರಲು, ನೆಮ್ಮದಿಯಾಗಿರಲು ನಮ್ಮ ಋಷಿಮುನಿಗಳು ಏನಾದರೂ ಸೂತ್ರಗಳನ್ನು ನೀಡಿದ್ದಾರೆಯೇ? ನಮ್ಮ ಆಧುನಿಕ ವಿಜ್ಞಾನದ ಸಲಕರಣೆಗಳು ಜೀವನಕ್ಕೆ ಎಷ್ಟು ನೆಮ್ಮದಿಯನ್ನು ಕೊಟ್ಟಿದೆ? ಎಷ್ಟು ನೆಮ್ಮದಿ ಹಾಳಾಗಿದೆ? ಹೀಗೆಲ್ಲಾ ಯೋಚಿಸುವಾಗ ಕಟ್ಟ ಕಡೆಗೆ ನಾವು ಆಶ್ರಯಿಸುವುದು ನಮ್ಮ ಋಷಿ ಮುನಿಗಳು ನೀಡಿದ ಮಾರ್ಗವನ್ನು. ಆ ಹೊತ್ತಿಗೆ ನಮ್ಮ ಜೀವನದ ಆಯುಷ್ಯವು ಬಹುಪಾಲು ಮುಗಿದಿರುತ್ತದೆ. ಕಡೆಯ ದಿವಸಗಳನ್ನು ಭಗವಚ್ಚಿಂತನೆಯಲ್ಲಿ ಕಳೆಯುತ್ತಾ ಅ೦ತಿಮ ದಿನಗಳನ್ನು ಎಣಿಸುವಂತಹ ಸ್ಥಿತಿ  ಬರಬೇಕೇ? ಅಧ್ಯಾತ್ಮ ಚಿಂತನೆ  ಎಂದರೆ ವೃದ್ಧಾಪ್ಯದಲ್ಲಿ ಮಾಡಬೇಕಾದ್ದೇ? ನಮ್ಮ ಜೀವನಕ್ಕೆ ನಿಜವಾಗ ಮಾರ್ಗದರ್ಶನ ಎಲ್ಲಿದೆ? ಇನ್ನು ಮುಂದೆ ಚಿಂತನೆ ಮಾಡುತ್ತಾ ಸಾಗೋಣ, ನನ್ನೊಡನೆ ನೀವೂ ಬರುವಿರಾ?
ಸ್ವರ್ಗ ಎಲ್ಲಿದೆ?
ಸತ್ತಮೇಲೆ ಸ್ವರ್ಗ-ನರಕಗಳೋ? ಬದುಕಿದ್ದಾಗಲೋ? ಸ್ವರ್ಗವೆಲ್ಲಿದೆಯೋ ಗೊತ್ತಿಲ್ಲ.ಆದರೆ ಹಲವಾರು ಮನೆಗಳು  ನಿತ್ಯ ನರಕವಾಗಿ  ಇರುವುದಂತೂ ಸತ್ಯ. ಹಾಗಾದರೆ ಮನೆಗಳನ್ನು ಸ್ವರ್ಗವಾಗಿ ಮಾಡಲು ಸಾಧ್ಯವಿಲ್ಲವೇ?ಸಾಧ್ಯ, ಎನ್ನುತ್ತದೆ ವೇದ. ಮನೆಯು ಸ್ವರ್ಗದಂತಿರಬೇಕಾದರೆ ಹೀಗಿರಬೇಕು ಎಂದು ವೇದವು  ಕೆಲವು ಜೀವನ ಸೂತ್ರಗಳನ್ನು  ಹೇಳುತ್ತದೆ. ಅದನ್ನು ಅನುಸರಿಸಿದ್ದೇ ಆದರೆ ಮನೆಯನ್ನು ಸ್ವರ್ಗ ಮಾಡುವುದೇನೂ ಕಷ್ಟಸಾಧ್ಯವಲ್ಲ.
ಹಿಂದುಗಳಲ್ಲಿ ವಿವಾಹ ಸಂದರ್ಭದಲ್ಲಿ ಸಪ್ತಪದೀ ಎಂಬ ಒಂದು ಕಾರ್ಯಕ್ರಮವಿರುತ್ತದೆ. ಪುರೋಹಿತರು ಮಂತ್ರ ಹೇಳುತ್ತಾರೆ. ವಧು-ವರರು ಒಟ್ಟು ಏಳು ಹೆಜ್ಜೆ ಹಾಕುತ್ತಾರೆ. ಆ ಏಳು ಮಂತ್ರಗಳು ಒಂದೊಂದೂ ಉತ್ಕೃಷ್ಟ. ಅದರಲ್ಲಿ ಒಂದು ಮಂತ್ರದ ಅರ್ಥವನ್ನು ಇಲ್ಲಿ ತಿಳಿಯೋಣ.
ಸಖೇ ಸಪ್ತಪದೀ ಭವ
ನೀನು ನನಗೆ ಮಿತ್ರಳಂತೆ ಇರು/ನೀನು ನನಗೆ ಮಿತ್ರನಂತೆ ಇರು ಇದು ವಿವಾಹ ಸಂದರ್ಭದಲ್ಲಿ  ಗಂಡು-ಹೆಣ್ಣು ಪರಸ್ಪರ ಹೇಳಿಕೊಳ್ಳುವ ಮಾತು. ನಾನೂ ನೀನೂ ಪರಸ್ಪರ ಮಿತ್ರರಂತೆ ಇರೋಣ ಎಂಬ ಸಂಕಲ್ಪವನ್ನು ನೂರಾರು ಜನರ ಮುಂದೆ ಮಾಡುವುದೇ ಸಪ್ತಪದೀ. ಎಷ್ಟು ಜನರಿಗೆ ಇದು ಆ ಸಂದರ್ಭದಲ್ಲಿ ಅರ್ಥವಾಗುತ್ತದೋ ಗೊತ್ತಿಲ್ಲ. ಒಂದು ವೇಳೆ ಅರ್ಥವಾಗಿ ಅದರಂತೆ ಜೀವನ ಮಾಡಿದ್ದೇ ಆದರೆ ಅದೇ ಸ್ವರ್ಗ. ಸ್ವರ್ಗ ಇನ್ನೆಲ್ಲೂ ಇಲ್ಲ. ಪತಿ-ಪತ್ನಿಯರು ಪರಸ್ಪರ ಮಿತ್ರರಂತೆ ಇದ್ದರೆ ಆ ದಾಂಪತ್ಯ ಹೇಗಿದ್ದೀತೂ? ದಾಂಪತ್ಯವು ಗಟ್ಟಿಯಾಗಿ ಸದಾಕಾಲ ಸಂತೋಷವಾಗಿರಲೆಂದು ನಮ್ಮ ಹಿರಿಯರು ಕೊಟ್ಟ ಸೂತ್ರ ಸಪ್ತಪದೀ.
ಸಖೇ ಸಪ್ತಪದೀ ಭವ  ಎಂಬ ಮಂತ್ರವನ್ನು ಹೇಳಿ ಮದುವೆಯಾಗಿದ್ದೇನೆ. ಇದಕ್ಕೆ ಮದುವೆಗೆ ಬಂದ    ನೂರಾರು ಜನರು ಸಾಕ್ಷಿಯಾಗಿದ್ದಾರೆ,ಎಂದು ಯಾರಾದರೂ ಮದುವೆಯ ನಂತರ ಯೋಚಿಸಿದ್ದಾರೆಯೇ? ಹಾಗೆ ಒಂದು ವೇಳೆ ಮಂತ್ರದ ಅರ್ಥವನ್ನು ತಿಳಿದು ಮನ: ಪೂರ್ವಕವಾಗಿ ವಧು-ವರರು ಈ ಮಂತ್ರವನ್ನು ಹೇಳಿದ್ದೇ ಆದರೆ ಈಗ ನಡೆಯುತ್ತಿರುವಂತಹ ಡೈವರ್ಸ್ ಗಳು ನಡೆಯಲು ಸಾಧ್ಯವೇ?
         ಡೈವರ್ಸ್ ಗಳ ವಿಚಾರದಲ್ಲಿ ಎಂತಹ ಚರ್ಚೆಗಳನ್ನು ಟಿ.ವಿ. ಮಾಧ್ಯಮಗಳಲ್ಲಿ ಮಾಡುತ್ತಾರೆ! ಗಂಡು-ಹೆಣ್ಣಿಗೆ ಹೊಂದಾಣಿಕೆ ಆಗದಿದ್ದಮೇಲೆ ಜೀವನ ಪರ್ಯಂತ ಹೀಗೆಯೇ ಕಾಲ ಹಾಕಲು ಸಾಧ್ಯವೇ? ಅದಕ್ಕೆ ನನ್ನ ಮಗಳಿಗೆ ಡೈವರ್ಸ್ ಕೊಟ್ಟು ಬಾ ಎಂದು ಹೇಳಿದೆ ಎಂದು ಒಬ್ಬ ತಾಯಿಯು ಹೇಳುತ್ತಾಳೆಂದರೆ,ಎಂತಹ ಸಂದರ್ಭದಲ್ಲಿ ಈ ಸಮಾಜವಿದೆ! ಎಂಬುದನ್ನು ಸ್ವಲ್ಪ ಆಳವಾಗಿ ಚಿಂತನೆ ನಡೆಸಬೇಡವೇ?
ಡೈವರ್ಸ್ ಕೊಡುವ ಪರಿಸ್ಥಿತಿ ಯಾಕೆ ಬಂತು? ಈ ಬಗ್ಗೆ ಪತಿ-ಪತ್ನಿಯರಾಗಲೀ ಅಥವಾ ಅವರ ಅಪ್ಪ-ಅಮ್ಮನಾಗಲೀ ವಿಚಾರ ಮಾಡುತ್ತಾರೆಯೇ? ಮದುವೆಗೆ ಮುಂಚೆ ಹಣಕ್ಕೋ, ಪದವಿಗೋ, ರೂಪಕ್ಕೋ ಬಲಿಯಾಗಿ ಮದುವೆಯಾದಮೇಲೆ ಈಗ ಸಂಸಾರದಲ್ಲಿ ಸುಖವಿಲ್ಲ ಎಂದರೆ ಹೇಗೆ ಸಿಗಲು ಸಾಧ್ಯ? ಆ ಬಗ್ಗೆ ಮದುವೆಗೆ ಮುಂಚೆ ಯೋಚಿಸಬೇಕಿತ್ತು ,ಅಲ್ವಾ?  ಮದುವೆ ಎಂದರೆ ಇದು ಜೀವನ ಪರ್ಯಂತದ ಕುಟುಂಬವ್ಯವಸ್ಥೆ.ಅದು ಸುಭದ್ರವಾಗಿರಬೇಕೆಂದರೆ ಗಂಡು-ಹೆಣ್ಣಿನ ನಡುವೆ ಹೊಂದಾಣಿಕೆಗೆ ನೋಡಬೇಕಾದ ಅಂಶಗಳೇನೆಂಬ ಬಗ್ಗೆ ನಮಗೆ ಅರಿವಿರಬೇಕಲ್ಲವೇ?
ಸಾಮಾನ್ಯವಾಗಿ ಮದುವೆ ಮಾಡುವಾಗ ಹಿಂದು ಸಮಾಜದಲ್ಲಿ ಹೆಚ್ಚು ಮಹತ್ವಕೊಡುವುದು ಗಂಡು-ಹೆಣ್ಣಿನ ಜಾತಕ. ಇಷ್ಟು ಗುಣಗಳಿದ್ದರೆ ಮದುವೆ ಮಾಡಿಕೊಳ್ಳಬಹುದು,ಇಲ್ಲದಿದ್ದರೆ ಇಲ್ಲ. ಮದುವೆಯಾಗಬೇಕಾದ ಹುಡುಗ-ಹುಡುಗಿರ ವಿದ್ಯೆ, ರೂಪ, ಸ್ವಭಾವಗಳ ಹೊಂದಾಣಿಕೆಯಾಗಬೇಕಲ್ಲವೇ? ಹುಡುಗಿ ಅತ್ಯಂತ ಶ್ರೀಮಂತ ಮನೆಯವಳಾಗಿದ್ದು ಹಣದಾಸೆಯಿಂದ ಹುಡುಗನು ಆಕೆಯನ್ನು ಮದುವೆಯಾಗಿದ್ದರೆ ಈ ದಂಪತಿಗಳ ಜೀವನದಲ್ಲಿ ಹೊಂದಾಣಿಕೆ  ಬರಲು ಸಾಧ್ಯವೇ? ಶ್ರೀಮಂತರಾದವರೆಲ್ಲಾ ಕೆಟ್ಟವರಲ್ಲ. ಶ್ರೀಮಂತ ಮನೆಯ ಹುಡುಗ-ಹುಡುಗಿಯರಲ್ಲೂ ಬಡವರನ್ನು ಮದುವೆಯಾಗಬೇಕೆಂದು ಬಯಸುವವರೂ ಇದ್ದಾರೆ. ಅಂತಹ ಸಂದರ್ಭದಲ್ಲಿ ಅವರ ಶ್ರೀಮಂತಿಕೆ-ಬಡತನ ಗಣನೆಗೆ ಬರುವುದಿಲ್ಲ ಬದಲಾಗಿ ಅವರ ಸ್ವಭಾವಗಳು, ಸದ್ಗುಣಗಳು ಗಣನೆಗೆ ಬರುತ್ತವೆ.ಈ ವಿಚಾರಗಳನ್ನು ಗಮನಿಸದೆ ಎಲ್ಲವೂ ಸರಿಯಾಗಿದೆ ಜಾತಕ ಒಂದು ಕೂಡಿಬಂದರೆ ಮದುವೆ ಆದಂತೆಯೇ ಎಂಬ ವಿಚಾರವಿದ್ದರೆ ಅದೇ ಬಲು ಅಪಾಯದ ಅಂಶವೆಂಬುದು ಹಲವರಿಗೆ ಅರ್ಥವಾಗುವುದೇ ಇಲ್ಲ. ಸುಖ ದಾಂಪತ್ಯಕ್ಕೆ ವೇದವು ಏನು ಹೇಳುತ್ತದೆ? ನೋಡೋಣ. ಅಥರ್ವಣ ವೇದದ ಒಂದು ಮಂತ್ರವು ಇನ್ನೂ ಅದ್ಭುತವಾಗಿ ಹೇಳುತ್ತದೆ.
ಇಹೇಮಾವಿಂದ್ರ ಸಂ ನುದ ಚಕ್ರವಾಕೇವ ದಂಪತೀ|
[ಕಾಂಡ ೧೪ ಸೂಕ್ತ ೨ ಮಂತ್ರ ೬೪]
ಅರ್ಥ:-
ಪತಿ ಪತ್ನಿಯರಿಬ್ಬರೂ ಚಕ್ರವಾಕ ಪಕ್ಷಿಗಳಂತೆ ಒಬ್ಬರು ಇನ್ನೊಬ್ಬರನ್ನು ಪ್ರೀತಿಸಲಿ.
ವೇದ ಮಂತ್ರಗಳೆಂದರೆ ಕೇವಲ ಪೂಜೆ ಪುನಸ್ಕಾರಕ್ಕೆ ಇರುವ ಮಂತ್ರಗಳೇ? ಈ ಮೇಲಿನ ಮಂತ್ರದ ಅರ್ಥವನ್ನು ಗ್ರಹಿಸಿದಾಗ ಆಶ್ಚರ್ಯವಾಗದೇ ಇರದು.
ಚಕ್ರವಾಕ ಪಕ್ಷಿಗೆ ಕೋಕ ಪಕ್ಷಿ  ಎಂತಲೂ ಹೇಳುತ್ತಾರೆ. ಗಂಡು ಹೆಣ್ಣು ಸದಾಕಾಲ ಒಟ್ಟೊಟ್ಟಿಗೆ  ಇದ್ದು ಸಾಯುವವರೆಗೂ ಸಂತೋಷ ಅನುಭವಿಸಿಯೇ ಸಾಯುತ್ತವೆ. ಅಂತಹ ಪಕ್ಷಿಗಳಂತೆ ಪತಿ ಪತ್ನಿಯರು ಪರಸ್ಪರ ಪ್ರೀತಿಯಿಂದಿರಬೇಕು-ಎಂಬುದು ವೇದದ ಆಶಯ. ಈಗ ಹೇಳಿ, ವೇದವು ವೈರಾಗ್ಯವನ್ನು ಹೇಳುವುದೇ? ಇಲ್ಲಿ ಕೋಕ ಪಕ್ಷಿಯಂತೆ ಪರಸ್ಪರ ಪ್ರೀತಿಯಿಂದ ಪತಿ ಪತ್ನಿಯರು ಇರಬೇಕೆಂಬುದು  ಸ್ವಲ್ಪ ವಿಪರೀತವೆನಿಸಿದರೂ ಜೀವನದ ಹಲವು ಘಟ್ಟಗಳಲ್ಲಿ ನಾವು  ಹೇಗೆ ಜೀವನವನ್ನು  ನಿರ್ವಹಿಸಬೇಕೆಂಬ ಸರಿಯಾದ ಮಾರ್ಗದರ್ಶನವನ್ನು   ವೇದವು ನಮಗೆ ನೀಡುತ್ತದೆ.

Sunday, March 2, 2014

ನಮ್ಮ ಮನೆಗಳು ಹೇಗಿರಬೇಕು? ಹೇಗಿರಬಾರದು?

ನಮ್ಮ ಮನೆಗಳು  ಹೇಗಿರಬಾರದೆಂಬುದನ್ನು  ಅಥರ್ವ ವೇದದ ಒಂದು ಮಂತ್ರವು ಸೊಗಸಾಗಿ ಹೇಳಿದೆ.
ಅಸೌ ಯೋ ಅಧರಾತ್ ಗೃಹಸ್ತತ್ರ ಸನ್ತ್ವರಾಯ್ಯ: |
ತತ್ರ ಸೇದಿರ್ನುಚ್ಯತು  ಸರ್ವಾಶ್ಚ ಯಾತು ಧಾನ್ಯ: ||
[ಅಥರ್ವ:೨.೧೪.೩]
ಯ: = ಯಾವ
ಗೃಹ:  = ಮನೆಯು
ಅಧರಾದ್ = ಅಂಧಕಾರದಿಂದ ತುಂಬಿ ನಿಮ್ನ ಸ್ಥಿತಿಯಲ್ಲಿರುವುದೋ
ತತ್ರ= ಅಲ್ಲಿ
ಸರ್ವಾ: = ಎಲ್ಲಾ
ಯಾತು ಧಾನ್ಯ: = ಪ್ರಜೆಗಳನ್ನು ಪೀಡಿಸುವ ವಿಪತ್ತುಗಳು, ರೋಗಗಳು
ಅರಾಯ್ಯ: = ಮನುಷ್ಯನ ಧನಸಂಪತ್ತನ್ನು  ಮತ್ತು ಶೋಭೆಯನ್ನು ಹರಣ ಮಾಡುವಂತಹ ಸಂಕಷ್ಟಗಳು
ಸನ್ತು = ಇರುತ್ತವೆ
ತತ್ರ = ಅಲ್ಲಿ
ಸೇದಿ: = ದು:ಖಗಳು
ನಿ ಉಚ್ಯತು = ಯಾವಾಗಲೂ ಇರುತ್ತವೆ
ಹಾಗೆಂದರೇನು?
ಸತ್ಪುರುಷರಿಲ್ಲದ , ಸತ್ ಕಾರ್ಯಗಳು ನಡೆಯದ ,ಸಜ್ಜನರು ಬಾರದ ,ವಿದ್ಯೆ ವಿಜ್ಞಾನಗಳಿಲ್ಲದ ಮನೆಗಳು ಸಕಲ ಅನರ್ಥಗಳಿಗೂ ನಿಲಯಗಳಾಗುತ್ತವೆ. ಅಲ್ಲಿ ದುಷ್ಟರು . ವಿಷಕೀಟಗಳು.ವಿವಿಧವ್ಯಾಧಿಗಳು, ಅನೇಕ ಆಪತ್ತುಗಳು, ದು:ಖಗಳು ನೆಲೆಸಲು ಅವಕಾಶವಾಗುತ್ತದೆ. ಅಲ್ಲಿ ಒಳ್ಳೆಯವರು ಇರಲಾರರು. ಕೆಲವು ಮನೆಗಳಿಗೆ ಹೋದರೆ ಸ್ವಲ್ಪಹೊತ್ತು ಕುಳಿತುಕೊಳ್ಳಲೂ ಸಾಧ್ಯವಾಗದೆ ಅಲ್ಲಿಂದ ಕಾಲ್ಕಿತ್ತರೆ ಸಾಕೆನಿಸುತ್ತದೆ.ಇನ್ನು ಕೆಲವು ಮನೆಗಳಲ್ಲಿ ಇನ್ನೂ ಸ್ವಲ್ಪ ಸಮಯ ಇದ್ದು ಹೋಗೋಣ   ಎನಿಸುತ್ತದೆ. ಇಂತಹ ಅನುಭವ ಸಾಮಾನ್ಯವಾಗಿ ಎಲ್ಲರಿಗೂ ಆಗಿರುತ್ತದೆ.
ಸಾದು ಸತ್ಪುರುಷರ ಸಮಾಗಮ,ಸತ್ಕರ್ಮಗಳು ನಡೆಯುವ ಗೃಹಗಳು ಸುಖದಾಯಕವಾಗಿ ಇರಬಲ್ಲವು. ನಾವು ಹಲವು ಗ್ರಂಥಗಳನ್ನು ಓದಬಹುದು, ಹಲವು ಉಪನ್ಯಾಸಗಳನ್ನು ಕೇಳಬಹುದು, ಮಠ ಮಂದಿರಗಳಿಗೆ ಸುತ್ತಬಹುದು, ತೀರ್ಥಯಾತ್ರೆಗಳನ್ನು ಮಾಡಬಹುದು, ಆದರೆ ನಮ್ಮ ಮನೆ ಹೇಗಿರಬೇಕೆಂದು ಎಂದಾದರೂ ಯೋಚಿಸಿದ್ದೇವೆಯೇ? ನಮ್ಮ ಮನೆಯಲ್ಲಿ ಸಿಗದ ಸುಖ-ನೆಮ್ಮದಿಯನ್ನು ಬೇರೆಲ್ಲೋ ಹುಡುಕಿ ಹೊರಟರೆ ಸಿಕ್ಕೀತೇ?
ನಮ್ಮ ಚಿಕ್ಕವಯಸ್ಸಿನಲ್ಲಿ ಹಿರಿಯರು ನಮಗೆ ಹೇಳುತ್ತಿದ್ದ ಮಾತು ನೆನಪಿಗೆ ಬರುತ್ತದೆ” ಮನೆಯಲ್ಲಿ ಯಾವಾಗಲೂ ಋಣಾತ್ಮಕ ಮಾತುಗಳನ್ನು ಆಡಬೇಡಿ, ಜಗಳ ಮಾಡಬೇಡಿ. ಬೈದಾಡಬೇಡಿ?.ಹೀಗೆ ಮಾಡಿದರೆ ಮನೆಯ ತೊಲೆಯಲ್ಲಿ ಕುಳಿತಿರುವ ವಾಸ್ತು ಪುರುಷ” ಅಸ್ತು” ಎಂದು ಬಿಡುತ್ತಾನೆ. ಆಗ ಕೆಟ್ಟ  ಮಾತುಗಳನ್ನಾಡಿದರೆ ಕೆಟ್ಟ   ಪರಿಣಾಮವೇ ಆಗುತ್ತದೆ. ಅದಕ್ಕಾಗಿ ಒಳ್ಳೆಯ ಮಾತುಗಳನ್ನೇ ಆಡಿ, ಆಗ ಒಳ್ಳೆಯದೇ ಆಗುತ್ತದೆ.
ವಾಸ್ತು ಪುರುಷ ಎಲ್ಲಿರುತ್ತಾನೋ, ಇರುವುದಿಲ್ಲವೋ ಚಿಂತಿಸಬೇಕಾಗಿಲ್ಲ. ಆದರೆ  ನಮ್ಮ ಹಿರಿಯರ ಮಾತಿನ ಸಂದೇಶವನ್ನು ಗಮನಿಸಬೆಕಲ್ಲವೇ? ಒಳ್ಳೆಯ ಮಾತುಗಳು ಕಿವಿಯಮೇಲೆ ಬೀಳುತ್ತಿದ್ದರೆ ಒಳ್ಳೆಯ ಪರಿಣಾಮ ಆಗಲೇಬೇಕು. ಇದು ವೈಜ್ಞಾನಿಕವಾಗಿ ಕೂಡ ಸತ್ಯವೇ ಹೌದು. ವೇದವು ಇನ್ನೂ ಮುಂದೆ ಹೋಗಿ ತಿಳಿಸುತ್ತದೆ” ಸಜ್ಜನರ ಸಾಮೀಪ್ಯವಿರಬೇಕು , ಸತ್ ಕಾರ್ಯಗಳು ನಡೆಯುತ್ತಿರಬೇಕು” ಇಲ್ಲವಾದಲ್ಲಿ  ಅಂತಹ ಮನೆಯಲ್ಲಿ ಜನರ ನೆಮ್ಮದಿ ಹಾಳಾಗುತ್ತದೆ, ಅನಾರೋಗ್ಯ,ಅಸಹನೆ, ದು:ಖ ಎಲ್ಲವೂ ಸುತ್ತಿಕೊಳ್ಳುತ್ತವೆ.

ಹೌದಲ್ಲವೇ? ಇವೆಲ್ಲವೂ ನಮ್ಮ ಅರಿವಿಗೆ ತಿಳಿದಿರುವ ವಿಷಯಗಳೇ ಆಗಿವೆ. ಆದರೂ ನಮ್ಮ ಮನೆಗಳಿಗೆ ಯಾರು ಬಂದು ಹೋಗುತ್ತಾರೇ, ಯಾವ ಮಾತುಕತೆ ನಡೆಯುತ್ತದೆ, ಯಾವುದನ್ನೂ ನಾವು ಗಮನಿಸುವುದೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ  ನಮ್ಮ ಮನೆಯಲ್ಲಿ ಸ್ಥಾನಪಡೆದಿರುವ ಟಿ.ವಿ ಎಂಬ ಪೆಡಂಬೂತ!!
ಟಿ.ವಿಯಲ್ಲಿ ಒಳ್ಳೆಯ ಕಾರ್ಯಕ್ರಮಗಳು ಬಿತ್ತರಿಸುವುದಿಲ್ಲವೆಂದಲ್ಲ, ಆದರೆ ಬಹುಪಾಲು ಮನೆಗಳಲ್ಲಿ ಗಮನಿಸಿ, ದಿನದಲ್ಲಿ ಆರೇಳು ಗಂಟೆಗೂ ಮಿಗಿಲಾಗಿ, ಅಶ್ಲೀಲ ದೃಶ್ಯಗಳು, ರಕ್ತಸಿಕ್ತ ಕೊಲೆ ಸುಲಿಗೆಯ ದೃಷ್ಯಗಳು, ಕಿವಿಯನ್ನು ಕತ್ತರಿಸುವಂತಹ ಕರ್ಕಶ ಹಾಡುಗಳು!!
ರಾತ್ರಿ ಮಲಗುವಾಗಲೂ “ ಕ್ರೈಮ್ ಸ್ಟೋರಿ” ನೋಡಿ ಮಲಗುವ ಎಷ್ಟು ಮನೆಗಳಿಲ್ಲಾ! ಮಲಗುವ ವೇಳೆಯಲ್ಲೂ ಇಂತಹ ಭಯಾನಕ ದೃಷ್ಯಗಳನ್ನು ನೋಡಿ ಮಲಗಿದಾಗ ನಿದ್ರೆಯಲ್ಲಿ ನಮ್ಮ ಮನ:ಸ್ಥಿತಿ ಹೇಗಿದ್ದೀತು? ಸುಖವಾದ ನಿದ್ರೆಯು ಬಯಸಿದರೆ ಸಿಕ್ಕೀತೇ?

ನಮ್ಮ ಆರೋಗ್ಯಕ್ಕೂ ನಮ್ಮ ಜೀವನ ಶೈಲಿಗೂ ನೇರವಾದ ಸಂಬಂಧವಿದೆ ಎಂದು ಮನೋವೈದ್ಯರು ಸಾರುತ್ತಿದ್ದಾರೆ, ಆದರೂ ನಾವು ನಮ್ಮ ಸ್ವಾಸ್ಥ್ಯದ ಬಗ್ಗೆ ಗಮನಕೊಟ್ಟಿದ್ದೇವೆಯೇ? ಇತ್ತೀಚೆಗೆ ವೇದ ವಿದ್ವಾಂಸರೊಬ್ಬರೊಡನೆ ಮಾತನಾಡುತ್ತಿದ್ದೆ”  ವೇದ ಮಂತ್ರ ಗಳನ್ನು ನಿತ್ಯವೂ ಪಠಿಸುವುದರಿಂದ ಏನು ಫಲ ಸಿಗುತ್ತೆ? ನಿಮಗೇನು ಪ್ರಯೋಜನವಾಗಿದೆ? ಎಂದು ಕೇಳಿದಾಗ ಅವರು ಹೇಳಿದರು “ ನೋಡಿ ಏನು ಲಾಭ ಎಂದು ನಾನು ತಲೆಕೆಡಸಿಕೊಳ್ಳಲು ಹೋಗಿಲ್ಲ,  ನನಗೀಗ ಎಪ್ಪತ್ತು ವರ್ಷ ವಯಸ್ಸು, ಆರೋಗ್ಯವಾಗಿದ್ದೇನೆ. ಶುಗರ್, ಬಿ.ಪಿ ಅಥವಾ ಯಾವ ಖಾಯಿಲೆಯೂ ಇಲ್ಲ. ನಿತ್ಯವೂ ನನ್ನ ಎಲ್ಲಾ ಕೆಲಸಗಳನ್ನೂ ಮಾಡಿಕೊಳ್ಳುತ್ತೇನೆ, ಬೆಳಿಗ್ಗೆ ಸಂಜೆ  ಒಂದೊಂದು ಗಂಟೆ ಸಂಧ್ಯಾಕರ್ಮಗಳ ಜೊತೆಯಲ್ಲಿ ಒಂದಿಷ್ಟು ವೇದ ಮಂತ್ರಗಳನ್ನು ಹೇಳಿಕೊಳ್ಳುತ್ತೇನೆ. ರಾತ್ರಿ ಎಂಟರೊಳಗೆ ಸ್ವಲ್ಪ ಉಪಹಾರ ಸ್ವೀಕರಿಸಿ  ಹತ್ತರೊಳಗೆ ಹಾಸಿಗೆ ಮೇಲೆ ಹೋದರೆ ಐದು ನಿಮಿಷಗಳಲ್ಲಿ ನಿದ್ರೆ ಬರುತ್ತೆ, ಎಚ್ಚರವಾಗುವಾಗ ಬೆಲಗಿನ ಜಾವ ಐದು ಗಂಟೆಯಾಗಿರುತ್ತೆ. ಐದಕ್ಕೆ ಎದ್ದರೆ ರಾತ್ರಿ ಹತ್ತರವರೆಗೂ ಒಂದಲ್ಲಾ ಒಂದು ಕೆಲಸ ಮಾಡುತ್ತಿರುತ್ತೇನೆ. ಸುಖವಾಗಿದ್ದೇನೆ. ನನಗೆ ಇನ್ನೇನು ಬೇಕು?

ಹೌದು ನಮ್ಮೆಲ್ಲರ ಮನೆಗೂ ಒಂದು ನೀತಿ ಸಂಹಿತೆ ಇರಬೇಕು. ಅದರಮೇಲೆ ನಮ್ಮ ನಿಗಾ ಇರಬೇಕು. ಸಾದು ಸಜ್ಜನರಿಗೆ, ವಿದ್ವಾಂಸರಿಗೆ ಮನೆಯಲ್ಲಿ ಆಶ್ರಯ ಕೊಡಬೇಕು. ಅವರ ಹಿತವಾದ ಮಾತುಗಳು ನಮ್ಮ ಮನೆಯ ಜನರ ಕಿವಿಯಮೇಲೆ ಬೀಳುತ್ತಿರಬೇಕು. ನಮ್ಮ ಮನೆಯಲ್ಲಿ ಸಮಸ್ಯೆ ಇಟ್ಟುಕೊಂಡು ದೇವಾಲಯಗಳಿಗೆ ಸುತ್ತಿದರೆ ಆ ಭಗವಂತನು ಮೆಚ್ಚಿ ಅವನೇ ಬಂದು ನಮ್ಮ ಮನೆ ಸಮಸ್ಯೆಗಳನ್ನು ನಿವಾರಿಸುವುದಿಲ್ಲ. ನಮ್ಮ ಮನೆಯಲ್ಲಿ ಏನೇ ಸಮಸ್ಯೆಗಳಿದ್ದರೂ ಒಂದು ಕುಟುಂಬದ ನಾವೇ ಅದನ್ನು ಸರಿಪಡಿಸಿಕೊಂಡು  ಸಜ್ಜನರ ಸಹವಾಸವನ್ನಿಟ್ಟುಕೊಂಡು ಸತ್ಕರ್ಮಗಳನ್ನು ಮಾಡುತ್ತಾ ನಮ್ಮ ಮನೆಯನ್ನು  ದೇವಾಲಯವನ್ನಾಗಿಯೂ ಮಾಡಬಹುದು, ಸ್ವರ್ಗವಾಗಿಯೂ ಮಾಡಬಹುದು. ಎಲ್ಲವೂ ನಮ್ಮ ಕೈಲೇ ಇದೆ.